Tag: Rahul Tewatia

  • ಸಿಕ್ಸರ್‌ ಬೌಂಡರಿ ಆಟದಲ್ಲಿ ಪಂಜಾಬ್‌ಗೆ 3 ವಿಕೆಟ್‌ಗಳ ರೋಚಕ ಜಯ – ತವರಿನಲ್ಲೇ ಟೈಟಾನ್ಸ್‌ಗೆ ಸೋಲು!

    ಸಿಕ್ಸರ್‌ ಬೌಂಡರಿ ಆಟದಲ್ಲಿ ಪಂಜಾಬ್‌ಗೆ 3 ವಿಕೆಟ್‌ಗಳ ರೋಚಕ ಜಯ – ತವರಿನಲ್ಲೇ ಟೈಟಾನ್ಸ್‌ಗೆ ಸೋಲು!

    – ಕೊನೇ 17 ಎಸೆತಗಳಲ್ಲಿ 41 ರನ್‌ ಚಚ್ಚಿದ ಪಂಜಾಬ್‌ – ಗಿಲ್‌ ನಾಯಕನ ಆಟ ವ್ಯರ್ಥ,

    ಅಹಮದಾಬಾದ್‌: ಡೆತ್‌ ಓವರ್‌ನಲ್ಲಿ ಅಶುತೋಷ್ ಶರ್ಮಾ ಹಾಗೂ ಶಶಾಂಕ್‌ ಸಿಂಗ್‌ ಅವರ ಸ್ಫೋಟಕ ಬ್ಯಾಟಿಂಗ್‌ ಪ್ರದರ್ಶನದಿಂದ ಪಂಜಾಬ್‌ ಕಿಂಗ್ಸ್‌ ತಂಡವು ಗುಜರಾತ್‌ ಟೈಟಾನ್ಸ್‌ ವಿರುದ್ಧ 3 ವಿಕೆಟ್‌ಗಳ ರೋಚಕ ಜಯ ಸಾಧಿಸಿದೆ.

    ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಶುಭಮನ್‌ ಗಿಲ್‌ ನಾಯಕತ್ವದ ಗುಜರಾತ್‌ ಟೈಟಾನ್ಸ್‌ ತಂಡವು 20 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 199 ರನ್‌ ಗಳಿಸಿತ್ತು. ಬೃಹತ್‌ ಮೊತ್ತದ ಗುರಿ ಬೆನ್ನತ್ತಿದ ಪಂಜಾಬ್‌ ಕಿಂಗ್ಸ್‌ ತಂಡವು 19.5 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 200 ರನ್‌ ಪೂರೈಸಿ ಗೆಲುವು ಸಾಧಿಸಿತು. ಇದರೊಂದಿಗೆ ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಿದ ಪಂಜಾಬ್‌, ಐಪಿಎಲ್‌ನಲ್ಲಿ ಹೆಚ್ಚುಬಾರಿ 200 ರನ್‌ ಗುರಿ ಬೆನ್ನಟ್ಟಿದ ಯಶಸ್ವಿ ತಂಡ ಎಂಬ ಹೆಗ್ಗಳಿಕೆಯನ್ನೂ ಪಡೆದುಕೊಂಡಿತು.

    ಕೊನೇ ಓವರ್‌ ರೋಚಕತೆ ಹೇಗಿತ್ತು?
    ಕೊನೇ ಓವರ್‌ನಲ್ಲಿ ಪಂಜಾಬ್‌ ಗೆಲುವಿಗೆ 7 ರನ್‌ಗಳ ಅಗತ್ಯವಿತ್ತು. ದರ್ಶನ್‌ ನಾಲ್ಕಂಡೆ ಬೌಲಿಂಗ್‌ನಲ್ಲಿದ್ದರು. ನಾಲ್ಕಂಡೆ ಬೌಲಿಂಗ್‌ನ ಮೊದಲ ಎಸೆತದಲ್ಲೇ ಸಿಕ್ಸರ್‌ ಪ್ರಯತ್ನಿಸಿದ ಅಶುತೋಷ್‌ ಬೌಂಡರಿ ಲಾಂಗ್‌ಆನ್‌ನಲ್ಲಿ ಕ್ಯಾಚ್‌ ನೀಡಿ ಔಟಾದರು. 2ನೇ ಎಸೆತದಲ್ಲಿ ವೈಡ್‌ ಎಸೆದ ನಾಲ್ಕಂಡೆ 3ನೇ ಎಸೆತವನ್ನು ಬೀಟ್‌ ಮಾಡಿದ್ದರು. ಇದರಿಂದ ಪಂದ್ಯ ರೋಚಕತೆಗೆ ತಿರುಗಿತ್ತು. ಆದ್ರೆ ಕ್ರೀಸ್‌ನಲ್ಲಿದ್ದ ಹರ್ಪ್ರೀತ್‌ ಬ್ರಾರ್‌ 4ನೇ ಎಸೆತದಲ್ಲಿ 1 ರನ್‌ ತಂದುಕೊಡುತ್ತಿದ್ದಂತೆ ಬೌಂಡರಿ ಚಚ್ಚಿದ ಶಶಾಂಕ್‌ ಸಿಂಗ್‌ ಗೆಲುವನ್ನು ಪಂಜಾಬ್‌ ತಂಡದತ್ತ ವಾಲಿಸಿದರು. 5ನೇ ಎಸೆತ ಎದುರಿಸುವಲ್ಲಿ ಶಶಾಂಕ್‌ ವಿಫಲವಾದರೂ ಲೆಗ್‌ಬೈಸ್‌ ರನ್‌ ಕದಿಯುವಲ್ಲಿ ಯಶಸ್ವಿಯಾದರು. ಪರಿಣಾಮ ಪಂಜಾಬ್‌ ಕಿಂಗ್ಸ್‌ 3 ವಿಕೆಟ್‌ಗಳ ರೋಚಕ ಗೆಲುವು ಸಾಧಿಸಿತು.

    ಡೆತ್‌ ಓವರ್‌ನಲ್ಲಿ ರನ್‌ ಹೊಳೆ:
    200 ರನ್‌ಗಳ ಗುರಿ ಬೆನ್ನಟ್ಟಿದ್ದ ಪಂಜಾಬ್‌ ಕಿಂಗ್ಸ್‌ 15 ಓವರ್‌ಗಳಲ್ಲಿ 153 ರನ್‌ಗಳಿಗೆ ಪ್ರಮುಖ 6 ವಿಕೆಟ್‌ ಕಳೆದುಕೊಂಡಿತ್ತು. ಆದ್ರೆ ಡೆತ್‌ ಓವರ್‌ನಲ್ಲಿ ಜೊತೆಗೂಡಿದ ಅಶುತೋಷ್‌ ಶರ್ಮಾ ಹಾಗೂ ಶಶಾಂಕ್‌ ಸಿಂಗ್‌ ಜೋಡಿ ರನ್‌ ಹೊಳೆ ಹರಿಸಿತು. ಕೊನೇ 5 ಓವರ್‌ಗಳಲ್ಲಿ ಕ್ರಮವಾಗಿ 15, 6, 16, 18, 7 ರನ್‌ ತಂಡಕ್ಕೆ ಸೇರ್ಪಡೆಯಾದ ಪರಿಣಾಮ ಪಂಜಾಬ್‌ ಗೆಲುವು ಸಾಧಿಸಿತು.

    ಪಂಜಾಬ್‌ ಕಿಂಗ್ಸ್‌ ಪರ ಶಶಾಂಕ್‌ ಸಿಂಗ್‌ ಅಜೇಯ 61 ರನ್‌ (29 ಎಸೆತ, 4 ಸಿಕ್ಸರ್‌, 6 ಬೌಂಡರಿ), ಅಶುತೋಷ್‌ ಶರ್ಮಾ 31 ರನ್‌ (17 ಎಸೆತ, 1 ಸಿಕ್ಸರ್‌, 3 ಬೌಂಡರಿ), ಪ್ರಭ್‌ಸಿಮ್ರಾನ್‌ ಸಿಂಗ್‌ 35 ರನ್‌, ಶಿಖರ್‌ ಧವನ್‌ 1, ಜಾನಿ ಬೈರ್‌ಸ್ಟೋವ್‌ 22 ರನ್‌, ಸ್ಯಾಮ್‌ ಕರ್ರನ್‌ 5 ರನ್‌, ಸಿಖಂದರ್‌ ರಾಜಾ 15 ರನ್‌, ಜಿತೇಶ್‌ ಶರ್ಮಾ 16 ರನ್‌ ಗಳಿಸಿದ್ರೆ, ಹರ್ಪ್ರೀತ್‌ ಬ್ರಾರ್‌ 1 ರನ್‌ ಕದ್ದರು.

    ಗುಜರಾತ್‌ ಟೈಟಾನ್ಸ್‌ ಪರ ವೃದ್ಧಿಮಾನ್‌ ಸಾಹಾ 11 ರನ್‌, ಶುಭಮನ್‌ ಗಿಲ್‌ 89 ರನ್‌ (48 ಎಸೆತ, 6 ಬೌಂಡರಿ, 4 ಸಿಕ್ಸರ್‌, ಕೇನ್‌ ವಿಲಿಯಮ್ಸನ್‌ 26 ರನ್‌, ಸಾಯಿ ಸುದರ್ಶನ್‌ 33 ರನ್‌, ವಿಜಯ್‌ ಶಂಕರ್‌ 8 ರನ್‌, ರಾವುಲ್‌ ತೆವಾಟಿಯಾ 23 ರನ್‌ (8 ಎಸೆತ, 3 ಬೌಂಡರಿ, 1 ಸಿಕ್ಸರ್‌) ಗಳಿಸಿದರು.

  • ಧೋನಿ ಬಳಿಕ ಬ್ಯಾಕ್ ಟು ಬ್ಯಾಕ್ ಸಿಕ್ಸ್ ಸಿಡಿಸಿ ಮ್ಯಾಚ್ ಫಿನಿಶರ್ ಎನಿಸಿಕೊಂಡ ತೆವಾಟಿಯಾ

    ಧೋನಿ ಬಳಿಕ ಬ್ಯಾಕ್ ಟು ಬ್ಯಾಕ್ ಸಿಕ್ಸ್ ಸಿಡಿಸಿ ಮ್ಯಾಚ್ ಫಿನಿಶರ್ ಎನಿಸಿಕೊಂಡ ತೆವಾಟಿಯಾ

    ಮುಂಬೈ: ಐಪಿಎಲ್‍ನಲ್ಲಿ ಸತತ ಎರಡು ಬಾಲ್‍ಗಳಿಗೆ ಎರಡು ಸಿಕ್ಸ್ ಸಿಡಿಸಿ ಚೆನ್ನೈ ತಂಡದ ಆಟಗಾರ ಮಹೇಂದ್ರ ಸಿಂಗ್ ಧೋನಿ ಬಳಿಕ ಗುಜರಾತ್ ತಂಡದ ಆಟಗಾರ ರಾಹುಲ್ ತೆವಾಟಿಯಾ ಮ್ಯಾಚ್ ಫಿನಿಶರ್ ಎನಿಸಿಕೊಂಡಿದ್ದಾರೆ.

    15ನೇ ಆವೃತ್ತಿ ಐಪಿಎಲ್‍ನ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ತೆವಾಟಿಯ ಕಡೆಯ 2 ಎಸೆತಗಳನ್ನು ಬ್ಯಾಕ್ ಟು ಬ್ಯಾಕ್ ಸಿಕ್ಸರ್ ಸಿಡಿಸಿ ಮ್ಯಾಚ್ ಫಿನಿಶ್ ಮಾಡಿದ್ದರು. ಈ ಹಿಂದೆ 2016ರಲ್ಲಿ ಧೋನಿ ಕೊನೆಯ 2 ಎಸೆತಗಳಲ್ಲಿ 2 ಸಿಕ್ಸ್ ಸಿಡಿಸಿ ಪುಣೆ ಸೂಪರ್‌ ಜೈಂಟ್ಸ್ ತಂಡಕ್ಕೆ ಜಯ ತಂದುಕೊಟ್ಟಿದ್ದರು. ಅದಾದ ಬಳಿಕ 2022ರ ಐಪಿಎಲ್‍ನಲ್ಲಿ ತೆವಾಟಿಯ ಸತತ ಎರಡು ಸಿಕ್ಸ್ ಸಿಡಿಸಿ ಮ್ಯಾಚ್ ಫಿನಿಶ್ ಮಾಡಿ ಮಿಂಚಿದ್ದಾರೆ. ಇದನ್ನೂ ಓದಿ: ಪಂಜಾಬ್‍ಗೆ ಪಂಚ್ ನೀಡಿದ ರಾಹುಲ್ ತೆವಾಟಿಯಾ – ಗುಜರಾತ್‍ಗೆ ರೋಚಕ ಜಯ

    ಪಂಜಾಬ್ ವಿರುದ್ಧ ಗುಜರಾತ್ ಗೆದ್ದಿದ್ದು ಹೇಗೆ:
    ಕೊನೆಯ 12 ಎಸೆತಗಳಲ್ಲಿ ಗುಜರಾತ್ ಗೆಲುವಿಗೆ 32 ರನ್ ಬೇಕಾಗಿತ್ತು 18ನೇ ಓವರ್‍ನಲ್ಲಿ 13 ರನ್ ಬಂತು. 6 ಎಸೆತಗಳಲ್ಲಿ 19 ರನ್ ಬೇಕಿತ್ತು. ಕೊನೆಯ ಓವರ್ ಎಸೆದ ಓಡನ್ ಸ್ಮಿತ್ ಅವರ ಮೊದಲ ಎಸೆತದಲ್ಲಿ 1 ರನ್ ಬಂತು. ಎರಡನೇ ಎಸೆತದಲ್ಲಿ ಹಾರ್ದಿಕ್ ಪಾಂಡ್ಯ ಔಟ್ ಆದರು. ಮೂರನೇ ಎಸೆತದಲ್ಲಿ 4 ರನ್, 4ನೇ ಎಸೆತದಲ್ಲಿ 1 ರನ್ ಬಂತು. ಕೊನೆಯ 2 ಎಸೆತಗಳಲ್ಲಿ ಗುಜರಾತ್ ಗೆಲುವಿಗೆ 12 ರನ್ ಬೇಕಿತ್ತು. ರಾಹುಲ್ ತೆವಾಟಿಯಾ ಕೊನೆಯ 2 ಎಸೆತಗಳನ್ನು ಸಿಕ್ಸರ್‌ಗಟ್ಟಿ ಗುಜರಾತ್‍ಗೆ 6 ವಿಕೆಟ್‍ಗಳ ಜಯ ತಂದುಕೊಟ್ಟರು. ಇದನ್ನೂ ಓದಿ: ಐಪಿಎಲ್‍ನಲ್ಲಿ ವೇಗದ ಅರ್ಧಶತಕ ಸಿಡಿಸಿ ಕನ್ನಡಿಗನೊಂದಿಗೆ ದಾಖಲೆ ಪಟ್ಟಿ ಸೇರಿಕೊಂಡ ಪ್ಯಾಟ್ ಕಮ್ಮಿನ್ಸ್

     

  • ಐಪಿಎಲ್ ಹೀರೋಗಳಿಗೆ ತೆರೆದುಕೊಂಡ ರಾಷ್ಟ್ರೀಯ ತಂಡದ ಬಾಗಿಲು

    ಐಪಿಎಲ್ ಹೀರೋಗಳಿಗೆ ತೆರೆದುಕೊಂಡ ರಾಷ್ಟ್ರೀಯ ತಂಡದ ಬಾಗಿಲು

    ಮುಂಬೈ: ಯುಎಇಯಲ್ಲಿ ನಡೆದ 13 ನೇ ಆವೃತ್ತಿಯ ಐಪಿಎಲ್‍ನಲ್ಲಿ ಮಿಂಚು ಹರಿಸಿದ್ದ ನಾಲ್ಕು ಪ್ರಮುಖ ಆಟಗಾರರಿಗೆ ಈ ಬಾರಿ ರಾಷ್ಟ್ರೀಯ ತಂಡದ ಬಾಗಿಲು ತೆರೆದುಕೊಂಡಿದೆ. ಮುಂಬರುವ ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟಿ20 ಸರಣಿಗೆ ಭಾರತ ತಂಡದಲ್ಲಿ ಇದೇ ಮೊದಲ ಬಾರಿಗೆ ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ರಾಹುಲ್ ತೆವಾಟಿಯಾ ಹಾಗೂ ವರುಣ್ ಚಕ್ರವರ್ತಿ ಆಯ್ಕೆಯಾಗಿದ್ದಾರೆ.

    ಈ ನಾಲ್ಕು ಜನ ಆಟಗಾರರೂ ದೇಶೀಯ ಕ್ರಿಕೆಟ್ ಹಾಗೂ ಹಿಂದಿನ ಆವೃತ್ತಿಯ ಐಪಿಎಲ್ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ತೋರಿದ್ದರೂ ರಾಷ್ಟ್ರೀಯ ತಂಡದಲ್ಲಿ ಆಡುವ ಅವಕಾಶ ಸಿಕ್ಕಿರಲಿಲ್ಲ. ಇದೀಗ ಮುಂಬರುವ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟಿ20 ಸರಣಿಗೆ ಆಯ್ಕೆಯಾಗಿದ್ದಾರೆ. ಇದರಿಂದಾಗಿ ಭಾರತ ತಂಡ ಮತ್ತಷ್ಟೂ ಬಲಿಷ್ಟವಾಗಿ ಗೋಚರಿಸುತ್ತಿದೆ.

    ಐಪಿಎಲ್ ಮತ್ತು ದೇಶಿಯ ಕ್ರಿಕೆಟ್‍ನಲ್ಲಿ ತನ್ನ ಹೊಡಿಬಡಿ ಆಟದಿಂದಾಗಿ ಹೆಚ್ಚು ಹೆಸರುವಾಸಿಯಾದವರು ಜಾರ್ಖಂಡ್ ನ ಇಶಾನ್ ಕಿಶನ್. ಕಳೆದ 13ನೇ ಆವೃತ್ತಿಯ ಐಪಿಎಲ್ ನಲ್ಲಿ 13 ಪಂದ್ಯಗಳನ್ನು ಆಡಿರುವ ಯುವ ಆಟಗಾರ 145.7ರ ಸ್ಟ್ರೈಕ್‍ರೇಟ್‍ನಲ್ಲಿ ಬ್ಯಾಟ್ ಬೀಸಿ 516 ರನ್ ಗಳಿಸಿದ್ದಾರೆ. ಹಾಗೆ ದೇಶಿ ಟೂರ್ನಿ ವಿಜಯ್ ಹಜಾರೆಯಲ್ಲಿ ಜಾರ್ಖಂಡ್ ತಂಡದ ನಾಯಕನಾಗಿ ಮಧ್ಯಪ್ರದೇಶ ವಿರುದ್ಧದ ಪಂದ್ಯದಲ್ಲಿ 19 ಬೌಂಡರಿ, 11 ಸಿಕ್ಸರ್ ಸಹಿತ 173 ರನ್(94 ಎಸೆತ) ಸಿಡಿಸಿ ಮಿಂಚಿದ್ದರು.

    ಇಶಾನ್ ಕಿಶನ್‍ನಂತೆ ದೇಶಿ ಟೂರ್ನಿ ಮತ್ತು ಐಪಿಎಲ್‍ನಲ್ಲಿ ಮುಂಬೈ ಪರ ಬ್ಯಾಟ್ ಬೀಸುವ ಅನುಭವಿ ಆಟಗಾರ ಸೂರ್ಯಕುಮಾರ್ ಯಾದವ್ ಅವರಿಗೂ ಭಾರತ ತಂಡದಲ್ಲಿ ಆಡುವ ಅವಕಾಶ ಮೊದಲ ಬಾರಿಗೆ ಒಳಿದು ಬಂದಿದೆ. ಸೂರ್ಯಕುಮಾರ್ ಯಾದವ್ 13ನೇ ಆವೃತ್ತಿಯ ಐಪಿಎಲ್‍ನಲ್ಲಿ ಮುಂಬೈ ಪರ 15 ಪಂದ್ಯಗಳನ್ನು ಆಡಿ 145.01ರ ಸ್ಟ್ರೈಕ್‍ರೇಟ್‍ನಲ್ಲಿ 480 ರನ್ ಸಿಡಿಸಿ ಮುಂಬೈ 13ನೇ ಆವೃತ್ತಿಯ ಐಪಿಎಲ್ ಚಾಂಪಿಯನ್ ಆಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

    ರಾಷ್ಟ್ರೀಯ ತಂಡಕ್ಕೆ ಮೊದಲ ಬಾರಿಗೆ ಹೆಜ್ಜೆ ಇಡುತ್ತಿರುವ ಇನ್ನೋರ್ವ ಹೊಡಿಬಡಿ ಆಟಗಾರ ಹರಿಯಾಣದ ಆಲ್‍ರೌಂಡರ್ ರಾಹುಲ್ ತೆವಾಟಿಯಾ. ಕಳೆದ ಬಾರಿಯ ಐಪಿಎಲ್‍ನಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಸ್ಫೋಟಕ ಆಟದಿಂದ ಭರವಸೆ ಮೂಡಿಸಿದ್ದ ಆಟಗಾರ. ಕಳೆದ ಬಾರಿ 14 ಪಂದ್ಯಗಳನ್ನು ಆಡಿ 139.34ರ ಸ್ಟ್ರೈಕ್‍ರೇಟ್‍ನಲ್ಲಿ ಬಿಗ್ ಶಾಟ್‍ಗಳನ್ನು ಹೊಡೆದು 255 ರನ್‍ಗಳೊಂದಿಗೆ ಬೌಲಿಂಗ್‍ನಲ್ಲೂ ತನ್ನ ಕರಾಮತ್ತನ್ನು ಪ್ರದರ್ಶಿಸಿ 46 ಓವರ್ ಎಸೆದು 10 ವಿಕೆಟ್ ಕಬಳಿಸಿ ಯಶಸ್ವಿ ಆಲ್‍ರೌಂಡರ್ ಆಗಿ ಗುರುತಿಸಿಕೊಂಡಿದ್ದರು.

    ಮೇಲಿನ ಮೂವರಂತೆ ರಾಷ್ಟ್ರೀಯ ತಂಡದಲ್ಲಿ ಅವಕಾಶ ಗಿಟ್ಟಿಸಿರುವ ಮತ್ತೊಬ್ಬ ಪ್ರತಿಭಾನ್ವಿತ ಆಟಗಾರ ತಮಿಳು ನಾಡಿನ ಸ್ಪಿನ್ನರ್ ವರುಣ್ ಚಕ್ರವರ್ತಿ. 13ನೇ ಸೀಸನ್ ಐಪಿಎಲ್‍ನಲ್ಲಿ ಕೋಲ್ಕತ್ತಾ ಪರ 13 ಪಂದ್ಯಗಳನ್ನು ಆಡಿ 52 ಓವರ್ ಎಸೆದು 6.84ರ ಎಕಾನಮಿಯಲ್ಲಿ ಬೌಲಿಂಗ್ ಮಾಡಿ 13 ವಿಕೆಟ್ ಪಡೆದು ಎಲ್ಲರ ಗಮನ ಸೆಳೆದಿದ್ದರು.

    ಇದೀಗ 4 ಜನ ಐಪಿಎಲ್ ಹೀರೋಗಳಿಗೂ ರಾಷ್ಟ್ರೀಯ ತಂಡದಿಂದ ಕರೆಬಂದಿದ್ದು, ಮಾರ್ಚ್ 12ರಿಂದ ಆರಂಭವಾಗುವ ಟಿ20 ಸರಣಿಯಲ್ಲಿ ಟೀ ಇಂಡಿಯಾ ಪರ ಕಾಣಿಸಿಕೊಳ್ಳಲಿದ್ದಾರೆ.

  • 28 ಬಾಲಿಗೆ 45 ಹೊಡೆದು ಮೋಡಿ ಮಾಡಿದ ತೆವಾಟಿಯಾ – ರಾಜಸ್ಥಾನ್‍ಗೆ ರೋಚಕ ಜಯ

    28 ಬಾಲಿಗೆ 45 ಹೊಡೆದು ಮೋಡಿ ಮಾಡಿದ ತೆವಾಟಿಯಾ – ರಾಜಸ್ಥಾನ್‍ಗೆ ರೋಚಕ ಜಯ

    – ಆರನೇ ವಿಕೆಟ್‍ಗೆ ಮುರಿಯದ 78 ರನ್‍ಗಳ ಜೊತೆಯಾಟ

    ದುಬೈ: ಇಂದು ನಡೆದ 26ನೇ ಪಂದ್ಯದಲ್ಲಿ ಸನ್‍ರೈಸರ್ಸ್ ಹೈದರಾಬಾದ್ ವಿರುದ್ಧ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ 5 ವಿಕೆಟ್‍ಗಳ ರೋಚಕ ಜಯಗಳಿಸಿದೆ.

    ದುಬೈ ಸ್ಟೇಡಿಯಂನಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಸನ್‍ರೈಸರ್ಸ್ ಹೈದರಾಬಾದ್ ತಂಡ ಮನೀಷ್ ಪಾಂಡೆ ಅವರ ಅರ್ಧಶತಕದ ನೆರವಿನಿಂದ ನಿಗದಿತ 20 ಓವರಿನಲ್ಲಿ 158 ರನ್ ಸಿಡಿಸಿತು. ಈ ಗುರಿಯನ್ನು ಬೆನ್ನಟ್ಟಿದ ರಾಜಸ್ಥಾನ್ ರಾಯಲ್ಸ್ ತಂಡ ಆರಂಭದಲ್ಲೇ ಮೂರು ವಿಕೆಟ್ ಕಳೆದುಕೊಂಡರೂ ಕೊನೆಯಲ್ಲಿ ರಿಯಾನ್ ಪರಾಗ್ ಮತ್ತು ರಾಹುಲ್ ತೆವಾಟಿಯಾ ಅವರ ಭರ್ಜರಿ ಬ್ಯಾಟಿಂಗ್‍ನಿಂದ 19.5 ಓವರ್ ಗೆ ತನ್ನ ಗುರಿಯನ್ನು ಮುಟ್ಟಿ ಜಯಗಳಿಸಿದೆ.

    ಪರಾಗ್, ತೆವಾಟಿಯಾ ಸ್ಫೋಟಕ ಆಟ
    12ನೇ ಓವರ್ ಮುಕ್ತಾಯಕ್ಕೆ ರಾಜಸ್ಥಾನ್ ತಂಡ 85 ರನ್ ಗಳಿಸಿ ತಂಡ ಪ್ರಮುಖ ಐದು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ಒಂದಾದ ರಿಯಾನ್ ಪರಾಗ್ ಮತ್ತು ರಾಹುಲ್ ತೆವಾಟಿಯಾ ಭರ್ಜರಿಯಾಗಿ ಬ್ಯಾಟ್ ಬೀಸಿದರು. ಆರನೇ ವಿಕೆಟ್‍ಗೆ ಈ ಜೋಡಿ ಬರೋಬ್ಬರಿ 78 ರನ್‍ಗಳ ಜೊತೆಯಾಟವಾಡಿತು. ಸ್ಫೋಟಕವಾಗಿ ಆಟವಾಡಿದ ತೆವಾಟಿಯಾ 28 ಬಾಲಿಗೆ ಎರಡು ಸಿಕ್ಸರ್ ಮತ್ತು ನಾಲ್ಕು ಫೋರ್ ಸಮೇತ 45 ರನ್ ಸೇರಿಸಿದರು. ಇವರಿಗೆ ಉತ್ತಮ ಸಾಥ್ ನೀಡಿದ ಪರಾಗ್ 26 ಎಸೆತದಲ್ಲಿ ಎರಡು ಬೌಂಡರಿ ಮತ್ತು ಎರಡು ಸಿಕ್ಸರ್ ಸಮೇತ 42 ರನ್ ಸಿಡಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

    ಇಂದು ರಾಜಸ್ಥಾನ್ ರಾಯಲ್ಸ್ ತಂಡ ಆರಂಭಿಕ ಜೋಡಿಯಲ್ಲಿ ಬದಲಾವಣೆ ಮಾಡಿತ್ತು. ಇಂದು ತನ್ನ ಮೊದಲ ಪಂದ್ಯದಲ್ಲೇ ಜೋಸ್ ಬಟ್ಲರ್ ಅವರ ಜೊತೆ ಬೆನ್ ಸ್ಟೋಕ್ಸ್ ಅವರು ಓಪನರ್ ಆಗಿ ಬಂದಿದ್ದರು. ಆದರೆ ಸ್ಟೋಕ್ಸ್ ಅವರಿಗೆ ಆಘಾತ ನೀಡಿದ ಖಲೀಲ್ ಅಹ್ಮದ್ ಅವರು ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು. ನಂತರ ಬಂದ ನಾಯಕ ಸ್ಟೀವ್ ಸ್ಮಿತ್ ಅವರು ಐದು ರನ್ ಗಳಿಸಿ ಇಲ್ಲದ ರನ್ ಕದಿಯಲು ಹೋಗಿ ರನೌಟ್ ಆದರು.

    4ನೇ ಓವರ್ ಮೊದಲ ಬಾಲಿನಲ್ಲೇ 13 ಬಾಲಿಗೆ 16 ರನ್ ಹೊಡೆದು ಆಡುತ್ತಿದ್ದ ಜೋಸ್ ಬಟ್ಲರ್ ಅವರು ಕೀಪರ್ ಕ್ಯಾಚ್ ನೀಡಿ ಖಲೀಲ್ ಅಹ್ಮದ್ ಅವರಿಗೆ ವಿಕೆಟ್ ಒಪ್ಪಿಸಿದರು. ಪರಿಣಾಮ ರಾಜಸ್ಥಾನ್ ತಂಡ ಪವರ್ ಪ್ಲೇ ಮುಕ್ತಾಯಕ್ಕೆ ಮೂರು ವಿಕೆಟ್ ಕಳೆದುಕೊಂಡು 36 ರನ್ ಸೇರಿಸಿತು. ನಂತರ 9ನೇ ಓವರಿನಲ್ಲಿ 15 ಬಾಲಿಗೆ 18 ರನ್ ಗಳಿಸಿ ಆಡುತ್ತಿದ್ದ ರಾಬಿನ್ ಉತ್ತಪ್ಪ ಅವರು ರಶೀದ್ ಖಾನ್ ಅವರಿಗೆ ಕ್ಲೀನ್ ಬೌಲ್ಡ್ ಆದರು.

    25 ಬಾಲಿಗೆ 26 ರನ್‍ಗಳಿಸಿ ತಾಳ್ಮೆಯ ಆಟವಾಡುತ್ತಿದ್ದ ಸಂಜು ಸ್ಯಾಮ್ಸನ್ ಅವರು 11ನೇ ಓವರಿನ ಕೊನೆ ಬಾಲಿನಲ್ಲಿ ರಶೀದ್ ಖಾನ್ ಅವರು ಬೌಲಿಂಗ್ ಮೋಡಿಗೆ ಬಲಿಯಾದರು. ನಂತರ ಒಂದಾಗಿ ಭರ್ಜರಿ ಜೊತೆಯಾವಾಡಿದ ಪರಾಗ್ ಹಾಗೂ ತೆವಾಟಿಯಾ ರಾಜಸ್ಥಾನ್ ತಂಡವನ್ನು ಗೆಲುವಿನ ದಡ ಸೇರಿಸಿದರು.