Tag: Rahul Gandh

  • ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ – ಕರ್ಜ್ ಮಾಫಿ, ನ್ಯಾಯ ಯೋಜನೆಗಳ ಘೋಷಣೆ

    ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ – ಕರ್ಜ್ ಮಾಫಿ, ನ್ಯಾಯ ಯೋಜನೆಗಳ ಘೋಷಣೆ

    ನವದೆಹಲಿ: 2019ರ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಅಧ್ಯಕ್ಷ ರಾಹುಲ್ ಗಾಂಧಿ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು. ಪ್ರಣಾಳಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಪಕ್ಷದ ಅಧಿನಾಯಕಿ ಸೋನಿಯಾ ಗಾಂಧಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಸೇರಿದಂತೆ ಹಲವು ಮುಖಂಡರು ಭಾಗಿಯಾಗಿದ್ದರು.

    ಉದ್ಯೋಗ:
    * ಉದ್ಯಮ, ಉದ್ಯೋಗ ಮತ್ತು ಸೇವೆಗಳಿಗೆ ಸಂಬಂಧಿಸಿದಂತೆ ಹೊಸ ಸಚಿವಾಲಯ ಸ್ಥಾಪನೆ ಮೂಲಕ ನಿರುದ್ಯೋಗ ನಿರ್ಮೂಲನೆಗೆ ಕೆಲಸ ಮಾಡುವುದು. 2020 ಮಾರ್ಚ್ ರೊಳಗೆ ಕೇಂದ್ರ, ಸಾರ್ವಜನಿಕ ಸೇವಾ ವಲಯ ಸೇರಿದಂತೆ ಸರ್ಕಾರದಲ್ಲಿರುವ ಖಾಲಿ ಇರುವ 4 ಲಕ್ಷ ಹುದ್ದೆಗಳ ನೇಮಕಾತಿಯನ್ನು ಮಾಡಿಕೊಳ್ಳವುದು. ಇನ್ನುಳಿದಂತೆ ರಾಜ್ಯ ಮತ್ತು ಸ್ಥಳೀಯ ಮಟ್ಟದಲ್ಲಿಯ ಖಾಲಿ ಇರುವ 20 ಲಕ್ಷ ಹುದ್ದೆಗಳಿಗೆ ನೇಮಕಾತಿ.
    * ಸರ್ಕಾರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಭರ್ತಿ ಮಾಡುತ್ತಿರುವ ಶುಲ್ಕ ರದ್ದು. ಸರ್ಕಾರಿ ಹುದ್ದೆಗಳಿಗೆ ಉಚಿತವಾಗಿ ಪರೀಕ್ಷೆ.
    * ಹೊಸ ಉದ್ಯಮ ಸ್ಥಾಪನೆಗೆ ಮೂರು ವರ್ಷಗಳವರೆಗೆ ಉಚಿತ ಪರವಾನಿಗೆ ಮತ್ತು ನವ ಉದ್ಯಮದಾರರಿಗೆ ಬ್ಯಾಂಕ್ ಗಳಿಂದ ಸಾಲ. ಯುವಕ/ ಯುವತಿಯರಿಗೆ ಎಲ್ಲ ವಲಯಗಳಿಗೆ ಸಂಬಂಧಿಸಿದಂತೆ ಕೌಶಲ್ಯ ತರಬೇತಿ

    ಕನಿಷ್ಠ ಆದಾಯ/ನ್ಯಾಯ ಯೋಜನೆ: ಕಾಂಗ್ರೆಸ್ ಪರಿಚಯಿಸುತ್ತಿರುವ ನ್ಯಾಯಂತಮ ಅಯ ಯೋಜನೆ (ನ್ಯಾಯ)ಅಡಿಯಲ್ಲಿ ದೇಶದ ಶೇ.20ರಷ್ಟಿರುವ ಬಡವರಿಗೆ ಮಾಸಿಕ 6 ಸಾವಿರ ರೂ.ಗಳಂತೆ ವಾರ್ಷಿಕ 72 ಸಾವಿರ ರೂ. ಹಣ ನೀಡುವುದು.

    ಕೃಷಿ: ಎಲ್ಲ ರೈತರ ಸಾಲಮನ್ನಾ ಮಾಡುವ ಮೂಲಕ ‘ಕರ್ಜ್ ಮಾಫಿ’ ಅಥವಾ ಕರ್ಜ್ ಮುಕ್ತಿ ಯೋಜನೆಯನ್ನು ಜಾರಿಗೆ ತರುವುದು. ಪ್ರತಿ ವರ್ಷ ಪ್ರತ್ಯೇಕ ‘ರೈತ ಬಜೆಟ್’ ಮಂಡನೆ. ಕೃಷಿ ಅಭಿವೃದ್ಧಿ ಮತ್ತು ಯೋಜನೆಗಾಗಿ ಪ್ರತ್ಯೇಕ ರಾಷ್ಟ್ರೀಯ ಆಯೋಗದ ರಚನೆ.

    ಆರೋಗ್ಯ: ಆರೋಗ್ಯ ರಕ್ಷಣೆ ಕಾಯ್ದೆ ಅಡಿ ಎಲ್ಲ ನಾಗರಿಕರಿಗೆ ಉಚಿತ ಡಯೋಗ್ನಿಸ್ಟಿಕ್, ಹೊರ ರೋಗಿಗಳಿಗೆ ಆರೈಕೆ, ಉಚಿತ ಚಿಕಿತ್ಸೆ ಜೊತೆಗೆ ಔಷಧಿ ನೀಡಲಾಗುವುದು. ಸಾರ್ವಜನಿಕ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿಯೂ ಉಚಿತ ಚಿಕಿತ್ಸೆ.

    ಜಿಎಸ್‍ಟಿ 2.0: ಜಿಎಸ್‍ಟಿ ತೆರಿಗೆಯಲ್ಲಿ ಸರಳೀಕರಣ ಮಾಡುವ ಮೂಲಕ ಏಕರೂಪ ತೆರಿಗೆಯನ್ನು ಜಾರಿಗೊಳಿಸುವುದು. ಅವಶ್ಯಕ ಸರಕು ಮತ್ತು ಸೇವೆಗಳ ರಫ್ತು ಮಾಡುವುದಕ್ಕೆ ತೆರಿಗೆ ವಿನಾಯಿತಿ. ಪಂಚಾಯತ್ ಮತ್ತು ನಗರಸಭೆಗಳಿಗೆ ಜಿಎಸ್‍ಟಿ ಆದಾಯ ಪಾಲು ಮೀಸಲು.

    ರಕ್ಷಣೆ ಮತ್ತು ಭದ್ರತೆ: ರಕ್ಷಣಾ ಇಲಾಖೆಗೆ ಹೆಚ್ಚಿನ ಅನುದಾನದ ಮೀಸಲು. ಸೇನೆಗೆ ಆಧುನಿಕ ಶಸ್ತ್ರಾಸ್ತ್ರಗಳ ಪೂರೈಕೆ. ಸೇನೆಯ ಸಿಬ್ಬಂದಿಯ ಕುಟುಂಬ, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಮತ್ತು ಆರೋಗ್ಯಕ್ಕೆ ಸಂಬಂಧಿಸಿದ ಸೌಲಭ್ಯಗಳು.

    ಗುಣಮಟ್ಟದ ಶಿಕ್ಷಣ: ದೇಶದ ಪ್ರತಿ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ದೊರೆಯುವಂತೆ ಕೆಲಸ ಮಾಡುವುದು. ಒಂದರಿಂದ ಹನ್ನೆರಡನೇ ವರ್ಗದವರಿಗೂ ಉಚಿತ ಹಾಗೂ ಕಡ್ಡಾಯ ಶಿಕ್ಷಣ. ಉತ್ತಮ ಗುಣಮಟ್ಟದ ಮೂಲಸೌಕರ್ಯ, ಶಿಕ್ಷಕರ ನೇಮಕ. 2023-24 ಜಿಡಿಪಿಯ ಶೇ.6ರಷ್ಟು ಹಣ ಶಿಕ್ಷಣಕ್ಕೆ ಮೀಸಲು.