Tag: ragi ball

  • ಮುದ್ದೆಯಲ್ಲಿ ವಿಷ ಹಾಕಿದ ಬಾಲಕಿ – ತಂದೆ, ತಾಯಿ ಸೇರಿ ನಾಲ್ವರ ಹತ್ಯೆ

    ಮುದ್ದೆಯಲ್ಲಿ ವಿಷ ಹಾಕಿದ ಬಾಲಕಿ – ತಂದೆ, ತಾಯಿ ಸೇರಿ ನಾಲ್ವರ ಹತ್ಯೆ

    ಚಿತ್ರದುರ್ಗ: 17 ವರ್ಷದ ಬಾಲಕಿಯೊಬ್ಬಳು ಪೋಷಕರ ಬೈಗುಳ, ಕೂಲಿಗೆ ಕಳಿಸುವುದು, ತಿರಸ್ಕಾರ ಭಾವದಿಂದ ನೊಂದು ಇಡೀ ಕುಟುಂಬಕ್ಕೆ ಮುದ್ದೆಯಲ್ಲಿ ವಿಷ ಬೆರೆಸಿ ಹತ್ಯೆಗೈದಿರುವ ಆಘಾತಕಾರಿ ಪ್ರಕರಣ ಜಿಲ್ಲೆಯಲ್ಲಿ ನಡೆದಿದೆ.

    Chitradurga Girl

    ಜಿಲ್ಲೆಯ ಇಸಾಮುದ್ರ ಗ್ರಾಮದಲ್ಲಿ ಜುಲೈ 12 ರಂದು ಈ ಘಟನೆ ನಡೆದಿದ್ದು, ವಿಧಿ ವಿಜ್ಞಾನ ಪ್ರಯೋಗಾಲಯದ(ಎಫ್‍ಎಸ್‍ಎಲ್) ವರದಿ ಮೂಲಕ ಮುದ್ದೆಯಲ್ಲಿ ವಿಷ ಬೆರಸಿರುವ ಸತ್ಯ ಬಯಲಾಗಿದೆ. ಇದನ್ನೂ ಓದಿ:  ಮಹಾಮಳೆಯ ಭೂಕುಸಿತಕ್ಕೆ ತತ್ತರಿಸಿದ ದೇವರ ನಾಡು – ಅವಶೇಷಗಳಡಿ 26 ಶವ ಪತ್ತೆ

    Chitradurga Girl

    ಪೋಷಕರ ಬೈಗುಳ, ಕೂಲಿಗೆ ಕಳಿಸುವುದು, ತಿರಸ್ಕಾರ ಭಾವದಿಂದ ನೊಂದ ಬಾಲಕಿ, ಹೆತ್ತವರು, ಒಡಹುಟ್ಟಿದವರಿಗೆ ಮುದ್ದೆಯಲ್ಲಿ ಕ್ರಿಮಿನಾಶಕ ಬೆರೆಸಿಕೊಂದಿದ್ದಾಳೆ. ರಾತ್ರಿ ಮುದ್ದೆ ಹಾಗೂ ಹೆಸರುಕಾಳು ಸಾಂಬರ್ ಸೇವಿಸಿದ ತಂದೆ ತಿಪ್ಪಾನಾಯ್ಕ್(46), ತಾಯಿ ಸುಧಾಬಾಯಿ(43), ಸಹೋದರಿ ರಮ್ಯ(16),  ವೃದ್ಧೆ ಗುಂಡಿಬಾಯಿ(75) ಸಾವಿಗೀಡಾಗಿದ್ದಾರೆ. ಇದನ್ನೂ ಓದಿ: ಒಂದೇ ಕೈಯಲ್ಲಿ ರಾಧಾ ಯಾದವ್ ಸ್ಟನ್ನಿಂಗ್ ಕ್ಯಾಚ್

    ಮತ್ತೋರ್ವ ಪುತ್ರ ರಾಹುಲ್(18) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದು, ಬಾಲಕಿ ಮಾತ್ರ ಸುರಕ್ಷಿತವಾಗಿದ್ದಾಳೆ. ಹೊಟ್ಟೆ ನೋವಿನ ಕಾರಣ ಅನ್ನ, ಸಾರು ಮಾತ್ರ ಸೇವಿಸಿರುವುದಾಗಿ ಬಾಲಕಿ ತಿಳಿಸಿದ್ದರಿಂದ ಅನುಮಾನಗೊಂಡ ಪೊಲೀಸರು ಈ ಕುರಿತಂತೆ ವಿಚಾರಣೆ ನಡೆಸಿದಾಗ, ಬಾಲಕಿಯೇ ವಿಷಬೆರೆಸಿ ನಾಲ್ವರನ್ನು ಹತ್ಯೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾಳೆ. ಹೀಗಾಗಿ ಬಾಲಕಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಭರಮಸಾಗರ ಪೊಲೀಸರು ತಿಳಿಸಿದ್ದಾರೆ.

  • ವಿಷಯುಕ್ತ ಆಹಾರ ಸೇವಿಸಿ ಒಂದೇ ಕುಟುಂಬದ ಮೂವರ ಸಾವು – ಇಬ್ಬರು ಮಕ್ಕಳ ಸ್ಥಿತಿ ಗಂಭೀರ

    ವಿಷಯುಕ್ತ ಆಹಾರ ಸೇವಿಸಿ ಒಂದೇ ಕುಟುಂಬದ ಮೂವರ ಸಾವು – ಇಬ್ಬರು ಮಕ್ಕಳ ಸ್ಥಿತಿ ಗಂಭೀರ

    ಚಿತ್ರದುರ್ಗ: ವಿಷಯಕ್ತ ಆಹಾರ ಸೇವಿಸಿ ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ್ದು, ಇಬ್ಬರು ಮಕ್ಕಳ ಸ್ಥಿತಿ ಗಂಭೀರವಾಗಿರುವ ಘಟನೆ ಚಿತ್ರದುರ್ಗ ತಾಲ್ಲೂಕಿನ ಇಸಾಮುದ್ರ ಲಂಬಾಣಿಹಟ್ಟಿ ಗ್ರಾಮದಲ್ಲಿ ನಡೆದಿದೆ.

    ಸೋಮವಾರ ರಾತ್ರಿ 10 ಗಂಟೆಯ ಸಮಯದಲ್ಲಿ ಮುದ್ದೆ ಸೇವಿಸಿರುವ ತಿಪ್ಪನಾಯ್ಕ (45), ಗುಂಡಿಬಾಯಿ (80) ಸುಧಾಬಾಯಿ (40) ಮೃತಪಟ್ಟಿದ್ದು, ರಾಹುಲ್ (19) ಮತ್ತು ರಮ್ಯಾ (16)ರವರ ಸ್ಥಿತಿ ಗಂಭೀರವಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಕುಟುಂಬದ ಸದಸ್ಯರೆಲ್ಲರೂ ಊಟ ಮಾಡಿ ಮಲಗಿದ ಬಳಿಕ ರಾತ್ರಿ ಸುಮಾರು 11:30ಕ್ಕೆ ವಾಂತಿ ಮಾಡಿಕೊಂಡಿದ್ದಾರೆ. ನೆರೆಹೊರೆಯವರು ತಕ್ಷಣ ಇವರನ್ನು ಭರಮಸಾಗರ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಮಾರ್ಗ ಮಧ್ಯದಲ್ಲಿ ಗುಂಡಿಬಾಯಿ ಮತ್ತು ಸುಧಾಬಾಯಿ ಮೃತಪಟ್ಟಿದ್ದಾರೆ. ತಿಪ್ಪನಾಯ್ಕ ದಾವಣಗೆರೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

    ಮನೆಯಲ್ಲಿ ಮುದ್ದೆ ಸೇವಿಸಿದವರಲ್ಲಿ ಮೂವರು ಸಾವನ್ನಪ್ಪಿದ್ದು, ಇಬ್ಬರು ಸ್ಥಿತಿ ಗಂಭಿರವಾಗಿದೆ. ಆದರೆ ಅದೃಷ್ಟವಶಾತ್ ಮುದ್ದೆ ಸೇವಿಸದ ರಕ್ಷಿತಾ (17) ಅನ್ನವನ್ನು ಊಟ ಮಾಡಿದ ಪರಿಣಾಮ ಯಾವುದೇ ಸಮಸ್ಯೆ ಆಗಿಲ್ಲ. ಹೀಗಾಗಿ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸ್ ಎಸ್‍ಪಿ ಜಿ.ರಾಧಿಕಾ ಅವರು ಬಾಲಕಿಯಿಂದ ಮಾಹಿತಿ ಸಂಗ್ರಹಿಸಿದರು. ಅಲ್ಲದೇ ಜಿಲ್ಲಾ ಆರೋಗ್ಯಧಿಕಾರಿ ಡಾ.ರಂಗನಾಥ್ ಸ್ಥಳಕ್ಕೆ ಭೇಟಿ ನೀಡಿ, ಮೃತರು ಸೇವಿಸಿರುವ ಆಹಾರ ಪದಾರ್ಥಗಳ ಸ್ಯಾಂಪಲ್ ಪಡೆದು ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ.

    ಈ ವೇಳೆ ಸ್ಥಳ ಪರಿಶೀಲನೆ ನಡೆಸಿದ ಬಳಿಕ ಪ್ರತಿಕ್ರಿಯಿಸಿರುವ ಎಸ್‍ಪಿ ರಾಧಿಕಾ ಅವರು ದಿಢೀರ್ ಅಂತ ಒಂದೇ ಮನೆಯಲ್ಲಿ ಈ ರೀತಿ ಆಕಸ್ಮಿಕವಾಗಿ ಮೂವರು ಸಾವಿಗೀಡಾಗಿದ್ದು, ನಿಖರ ಕಾರಣ ತಿಳಿದು ಬಂದಿಲ್ಲ. ವಿಷಾಹಾರ ಸೇವನೆಯೇ ಸಾವಿಗೆ ಕಾರಣ ಎಂದು ಅನುಮಾನಿಸಲಾಗಿದೆ ಎಂದು ತಿಳಿಸಿದ್ದಾರೆ. ಅಲ್ಲದೇ ಕಳೆದ ವರ್ಷ ಸಹ ಇದೇ ವೇಳೆ ಇವರ ಮನೆಯಲ್ಲಿ ಮೀನು ಸಾಂಬರಿಗೆ ಯಾರೋ ಕಿಡಿಗೇಡಿಗಳು ವಿಷ ಹಾಕಿದ್ದರು ಎಂಬ ಮಾಹಿತಿಯನ್ನು ಅಲ್ಲಿನ ಗ್ರಾಮಸ್ಥರು ತಿಳಿಸಿದ್ದು, ಪ್ರಕರಣದ ಸುತ್ತ ಅನುಮಾನ ಮೂಡಿದೆ. ಈ ಸಂಬಂಧ ಭರಮಸಾಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಈ ಬಗ್ಗೆ ಯಾವುದೇ ಸೂಕ್ತ ಮಾಹಿತಿ ಇಲ್ಲ. ಇಂತಹ ಪ್ರಕರಣ ಈ ಹಿಂದೆಯೂ ಹಿರಿಯೂರು ತಾಲೂಕಿನ ಹುಲಿತೊಟ್ಲು ಗ್ರಾಮದಲ್ಲಿ ನಡೆದಿತ್ತು. ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ್ದರು. ಆಗ ಅವರ ಸಾವಿಗೆ ಗೋಧಿ ಹಾಗೂ ರಾಗಿಯಲ್ಲಿ ರಾಸಾಯನಿಕ ಗೊಬ್ಬರ ಮಿಶ್ರಣವಾದ ಹಿನ್ನಲೆಯಲ್ಲಿ ಘಟನೆ ನಡೆದಿರುವ ಬಗ್ಗೆ ತಿಳಿದುಬಂದಿತ್ತು. ಹೀಗಾಗಿ ಪ್ರಯೋಗಾಲದ ವರದಿ ಬಂದ ಬಳಿಕ ಸೂಕ್ತ ತನಿಖೆ ಕೈಗೊಳ್ಳಲಾಗುವುದು ಎಂದಿದ್ದಾರೆ. ಸ್ಥಳಕ್ಕೆ ಎಸ್‍ಪಿ ರಾಧಿಕಾ ಅವರೊಂದಿಗೆ ಹೆಚ್ಚುವರಿ ವರಿಷ್ಠಾಧಿಕಾರಿ ಮಹಾನಿಂಗ ನಂದಗಾವಿ, ಡಿವೈಎಸ್‍ಪಿ ಪಾಂಡುರಂಗಪ್ಪ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಇದನ್ನೂ ಓದಿ:ಮುಂದುವರಿದ ಶಶಿಕಲಾ ಜೊಲ್ಲೆಯವರ ಮರಾಠಿ ಭಾಷಾ ಪ್ರೇಮ – ಕನ್ನಡಿಗರು ಆಕ್ರೋಶ