Tag: Ragi

  • ವಿಭಿನ್ನವಾಗಿ ಮಾಡಿ ರಾಗಿ ಒತ್ತು ಶ್ಯಾವಿಗೆ ಇಡ್ಲಿ

    ವಿಭಿನ್ನವಾಗಿ ಮಾಡಿ ರಾಗಿ ಒತ್ತು ಶ್ಯಾವಿಗೆ ಇಡ್ಲಿ

    ರಾಗಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ರಾಗಿ ಮುದ್ದೆ, ರಾಗಿ ದೋಸೆ, ರಾಗಿ ರೊಟ್ಟಿ ಸೇರಿದಂತೆ ವಿಭಿನ್ನವಾದ ತಿಂಡಿಗಳನ್ನು ತಯಾರಿಸುತ್ತಾರೆ. ಅದೇ ರೀತಿ ವಿಭಿನ್ನವಾಗಿ ರಾಗಿ ಒತ್ತು ಶ್ಯಾವಿಗೆ ಮಾಡಿ ಸವಿಯಿರಿ.

    ಸಾಮಾನ್ಯವಾಗಿ ಇದನ್ನು ರಾಗಿ ಮುದ್ದೆ ಮಾಡಿದ ಹಾಗೆಯೇ ಮಾಡಲಾಗುತ್ತದೆ. ಮೊದಲಿಗೆ ರಾಗಿಯನ್ನು ಚೆನ್ನಾಗಿ ಹುರಿದುಕೊಳ್ಳಬೇಕು. ಬಳಿಕ ಅದಕ್ಕೆ ಸ್ವಲ್ಪ ಸ್ವಲ್ಪ ನೀರು ಹಾಕಿ ಗಂಟು ಆಗದಂತೆ ಕಲಸಿಕೊಳ್ಳಬೇಕು. ಬಳಿಕ ಇಡ್ಲಿ ಪಾತ್ರೆಗೆ ನೀರು ಹಾಕಿ ಕುದಿಯಲು ಬಿಡಬೇಕು. ಶ್ಯಾವಿಗೆ ಮಣೆಗೆ ಕಲಸಿದ ರಾಗಿ ಹಾಕಿ ಒತ್ತಬೇಕು. ಶ್ಯಾವಿಗೆಯನ್ನು ನೇರವಾಗಿ ಕಾದ ಇಡ್ಲಿ ಹಂಚಿಗೆ ಹಾಕಬೇಕು. ಮುಚ್ಚಳ ಮುಚ್ಚಿ ಸ್ವಲ್ಪ ಹೊತ್ತು ಬಿಡಬೇಕು. ಆಗ ರಾಗಿ ಒತ್ತು ಶ್ಯಾವಿಗೆ ತಯಾರಾಗುತ್ತದೆ.

    ಅದನ್ನು ಚಟ್ನಿ ಅಥವಾ ಸಾಂಬಾರ್ ಜೊತೆಗೆ ಸವಿಯಬೇಕು.

    ರಾಗಿ ಒಂದು ಪೌಷ್ಟಿಕಾಂಶಭರಿತ ಆಹಾರವಾಗಿದ್ದು, ಆರೋಗ್ಯಕ್ಕೆ ಹಲವಾರು ಪ್ರಯೋಜನಗಳನ್ನು ನೀಡುತ್ತದೆ. ಇದರಲ್ಲಿ ಕ್ಯಾಲ್ಸಿಯಂ, ಕಬ್ಬಿಣ ಮತ್ತು ನಾರಿನಾಂಶ ಹೇರಳವಾಗಿದ್ದು, ಮೂಳೆಗಳನ್ನು ಬಲಪಡಿಸಲು, ಮಧುಮೇಹವನ್ನು ನಿಯಂತ್ರಿಸಲು ಮತ್ತು ತೂಕ ಇಳಿಕೆಗೆ ಸಹಾಯ ಮಾಡುತ್ತದೆ. 

  • ಪಡಿತರದಲ್ಲಿ ರಾಗಿ, ಜೋಳ – ಕೇಂದ್ರ ಸಚಿವರ ಜೊತೆ ಉಮೇಶ್ ಕತ್ತಿ ಚರ್ಚೆ

    ಪಡಿತರದಲ್ಲಿ ರಾಗಿ, ಜೋಳ – ಕೇಂದ್ರ ಸಚಿವರ ಜೊತೆ ಉಮೇಶ್ ಕತ್ತಿ ಚರ್ಚೆ

    ನವದೆಹಲಿ: ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಉಮೇಶ್ ಕತ್ತಿ ಅವರು ನವದೆಹಲಿಯಲ್ಲಿಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ರಾಜ್ಯ ಸಚಿವ ರಾವ್ ಸಾಹೇಬ್ ದಾನ್ವೆ ಅವರನ್ನು ಭೇಟಿಯಾಗಿ ರಾಜ್ಯದ ಪಡಿತರ ವ್ಯವಸ್ಥೆಯ ಸ್ಥಿತಿಗತಿ ಬಗ್ಗೆ ಹಾಗೂ ಪಡಿತರ ವ್ಯವಸ್ಥೆಯಲ್ಲಿ ರಾಗಿ ಮತ್ತು ಜೋಳ ವಿತರಣೆ ಬಗ್ಗೆ ಚರ್ಚಿಸಿದರು.

    ಪ್ರಸ್ತುತ ಪಡಿತರ ಸರಬರಾಜು ವ್ಯವಸ್ಥೆಯಲ್ಲಿ ಅಕ್ಕಿ ಮತ್ತು ಗೋಧಿಯನ್ನು ವಿತರಣೆ ಮಾಡಲಾಗುತ್ತಿದೆ. ಅಕ್ಕಿ ಮತ್ತು ಗೋಧಿ ವಿತರಣೆಯನ್ನು ಕಡಿತಗೊಳಿಸಿ, ಕಡಿತಗೊಳಿಸಿದ ಪ್ರಮಾಣಕ್ಕೆ ಪರ್ಯಾಯವಾಗಿ ರಾಗಿ-ಜೋಳ ಸ್ಥಳೀಯ ಧಾನ್ಯಗಳನ್ನು ವಿತರಿಸಲು ಅವಕಾಶ ಮಾಡಿಕೊಡಬೇಕೆಂಬ ಪ್ರಮುಖ ಬೇಡಿಕೆಯ ಮನವಿ ಪತ್ರವನ್ನು ಸಲ್ಲಿಸಲಾಯಿತು.

    ಭೌಗೋಳಿಕವಾಗಿ ಸ್ಥಳೀಯ ಜನರ ಆಹಾರ ಪದ್ಧತಿಗೆ ಅನುಸಾರವಾಗಿ ಪಡಿತರ ವ್ಯವಸ್ಥೆಯನ್ನು ವಿತರಣೆ ಮಾಡಬೇಕಾಗುತ್ತದೆ. ಪ್ರಸ್ತುತ ಅಕ್ಕಿ ಮತ್ತು ಗೋಧಿಯನ್ನು ಮಾತ್ರ ಸರಬರಾಜು ಮಾಡಲಾಗುತ್ತಿದೆ. ಭೌಗೋಳಿಕ ಆಹಾರ ಪದ್ಧತಿಗೆ ವಿರುದ್ಧವಾಗಿ ಒಂದೇ ವಿಧದ ಆಹಾರ ಸೇವನೆಯಿಂದ ಜನರ ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿದೆ ಹಾಗೂ ಒಂದು ಪ್ರದೇಶದ ರೈತರಿಗೆ ಮಾತ್ರ ಲಾಭವಾಗುತ್ತಿದ್ದು, ಸ್ಥಳೀಯ ರೈತರು ಬೆಳೆದ ಬೆಳೆಗಳಿಗೆ ಸರಿಯಾದ ಬೆಲೆ ಲಭಿಸುತ್ತಿಲ್ಲ, ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಅಕ್ಕಿ, ಗೋಧಿ ಪ್ರಮಾಣವನ್ನು ಕಡಿತಗೊಳಿಸಿ, ಕಡಿತಗೊಳಿಸಿದ ಪ್ರಮಾಣದ ಸಬ್ಸಿಡಿ ದರವನ್ನು ಕರ್ನಾಟಕದ ಆಹಾರ ಪದ್ದತಿಯಲ್ಲಿ ಬಳಸುವ ರಾಗಿ, ಜೋಳ, ಸ್ಥಳೀಯ ಧಾನ್ಯಗಳ ಖರೀದಿಗೆ ಅವಕಾಶ ನೀಡಬೇಕೆಂದು ಮನವಿ ಮಾಡಲಾಯಿತು.

    ಮನವಿ ಕುರಿತು ಸಕಾರಾತ್ಮಕವಾಗಿ ಸ್ಪಂದಿಸಿದ ಕೇಂದ್ರ ಸಚಿವ ರಾವ್ ಸಾಹೇಬ್ ದಾನ್ವೆ, ಕರ್ನಾಟಕ ಆಹಾರ ಇಲಾಖೆಯ ಅಲೋಚನೆ ಜನರ ಹಿತದೃಷ್ಟಿಯಿಂದ ಅತ್ಯುತ್ತಮವಾದದ್ದು, ಇದರ ಅನುಷ್ಠಾನಕ್ಕೆ ಚಾಲ್ತಿಯಲ್ಲಿರುವ ನೀತಿಯನ್ನು ಬದಲಾವಣೆ ಮಾಡಬೇಕು. ಈ ಬಗ್ಗೆ ಉನ್ನತ ಮಟ್ಟದ ಸಭೆಯಲ್ಲಿ ಚರ್ಚಿಸಿ ಹೊಸ ಪಾಲಿಸಿ ಅನುಷ್ಠಾನಕ್ಕೆ ಕ್ರಮವಹಿಸಲಾಗುವುದೆಂದು ತಿಳಿಸಿದರು.

    ಈ ವೇಳೆ ಸಂಸದ ಅಣ್ಣಾ ಸಾಹೇಬ್ ಜೊಲ್ಲೆ, ಇಲಾಖೆಯ ಕಾರ್ಯದರ್ಶಿ ಬಿ.ಹೆಚ್. ಅನಿಲ್ ಕುಮಾರ್, ಕೇಂದ್ರದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

  • ಪಡಿತರದಲ್ಲಿ ಜೋಳ, ರಾಗಿ, ಕಡಲೆ, ಹೆಸರು ಸೇರಿ ಸ್ಥಳೀಯ ಆಹಾರ ವಿತರಣೆ: ಸಚಿವ ಕತ್ತಿ

    ಪಡಿತರದಲ್ಲಿ ಜೋಳ, ರಾಗಿ, ಕಡಲೆ, ಹೆಸರು ಸೇರಿ ಸ್ಥಳೀಯ ಆಹಾರ ವಿತರಣೆ: ಸಚಿವ ಕತ್ತಿ

    ಬೆಳಗಾವಿ: ಆಹಾರ ಭದ್ರತೆ ಯೋಜನೆಯಡಿ ಪಡಿತರದಲ್ಲಿ ಸ್ಥಳೀಯ ಆಹಾರ ವಿತರಣೆಗೆ ಆದ್ಯತೆ ನೀಡಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಉಮೇಶ್ ಕತ್ತಿ ತಿಳಿಸಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉತ್ತರ ಕರ್ನಾಟಕದಲ್ಲಿ ಅಕ್ಕಿ ಜೊತೆಗೆ ಜೋಳ, ಕಡಲೆ, ಹೆಸರು ಬೇಳೆ ವಿತರಿಸಲಾಗುವುದು. ದಕ್ಷಿಣ ಕರ್ನಾಟಕದಲ್ಲಿ ಅಕ್ಕಿ, ರಾಗಿ, ಕಡಲೆ, ಹೆಸರು ಬೇಳೆ ವಿತರಿಸಲಾಗುವುದು. ಎಪ್ರಿಲ್ ಒಂದರಿಂದ ಈ ಯೋಜನೆ ಜಾರಿಗೆ ತರಲು ಯೋಜಿಸಲಾಗಿದೆ. ಇದರಿಂದ ಕಾಳಸಂತೆಗೆ ಅಕ್ಕಿ ಸರಬರಾಜು ಆಗುವುದು ತಪ್ಪಲಿದೆ ಎಂದು ತಿಳಿಸಿದರು.

    ಪ್ರತಿವರ್ಷ ಪಂಜಾಬ್ ನಿಂದ ರಾಜ್ಯಕ್ಕೆ ಅಕ್ಕಿ ಸರಬರಾಜು ಆಗುತ್ತಿತ್ತು. ಕರ್ನಾಟಕದಲ್ಲೇ ಸಾಕಷ್ಟು ಭತ್ತ ಬೆಳೆಯುತ್ತಿದ್ದು, ಇಲ್ಲೇ ಖರೀದಿಸುವ ಯೋಜನೆ ಇದೆ. ಕೇಂದ್ರದ ಆಹಾರ ನಾಗರಿಕ ಸರಬರಾಜು ಸಚಿವರ ಜೊತೆಗೆ ಚರ್ಚಿಸಿ ಈ ಕುರಿತು ನಿರ್ಧರಿಸಲಾಗುವುದು. ಇದರಿಂದ ಅನ್ನಭಾಗ್ಯ ಅಕ್ಕಿ ಕಾಳಸಂತೆಗೆ ಹೋಗುವುದನ್ನು ತಡೆಯಬಹುದಾಗಿದೆ. ಕಾಳಸಂತೆಗೆ ಅಕ್ಕಿ ಸಾಗಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

    ರಾಜ್ಯದಲ್ಲಿ ಅನಧಿಕೃತ ಪಡಿತರ ಚೀಟಿ ರದ್ಧತಿಗೆ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದ್ದು, ಪಡಿತರ ರದ್ಧತಿ ಸಂಬಂಧ ಬೆಳಗಾವಿ ಜಿಲ್ಲೆಯಲ್ಲಿ ಸಮೀಕ್ಷೆ ನಡೆಸುವಂತೆ ಸೂಚಿಸಲಾಗಿದೆ. ತಹಶಿಲ್ದಾರ್, ಪಿಡಿಒ ಒಳಗೊಂಡ ಸಮಿತಿ ರಚಿಸಿ ಸರ್ವೆ ಮಾಡಲಾಗುವುದು. ಮಾರ್ಚ್ 31 ರೊಳಗೆ ಅನಧಿಕೃತ ಕಾರ್ಡ್‍ಗಳ ವರದಿ ಕೈ ಸೇರಲಿದೆ. ಬಳಿಕ ಅನಧಿಕೃತ ಪಡಿತರ ಚೀಟಿ ರದ್ದುಗೊಳಿಸಲಾಗುವುದು. ಅನಧಿಕೃತ ಪಡಿತರ ಪತ್ತೆ ಸಮರ್ಪಕವಾಗದಿದ್ದರೆ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.

  • ಚುಚ್ತೀನಿ ಅಂದು ವ್ಯಕ್ತಿಯ ಹಿಂಬದಿಗೆ ಚುಚ್ಚಿಯೇಬಿಟ್ಟ!

    ಚುಚ್ತೀನಿ ಅಂದು ವ್ಯಕ್ತಿಯ ಹಿಂಬದಿಗೆ ಚುಚ್ಚಿಯೇಬಿಟ್ಟ!

    ಚಿಕ್ಕಬಳ್ಳಾಪುರ: ಜಮೀನು ಹಾಗೂ ರಾಗಿ ಫಸಲಿಗಾಗಿ ನಡೆದ ಕಾದಾಟದಲ್ಲಿ ಗ್ರಾಮಪಂಚಾಯ್ತಿ ಸದಸ್ಯೆಯ ಪತಿಗೆ ಗ್ರಾಮಸ್ಥನೊರ್ವ ಚಾಕುವಿನಿಂದ ಇರಿದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಜರಬಂಡಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ವೆಂಕಟರೋಣ, ಕೃಷ್ಣ ಎಂಬಾತನಿಗೆ ಚಾಕುವಿನಿಂದ ಇರಿದಿದ್ದಾನೆ. ಆರೋಪಿ ವೆಂಕಟರೋಣನನ್ನ ಮಂಚೇನಹಳ್ಳಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಚಾಕು ಇರಿತಕ್ಕೊಳಗಾದ ಕೃಷ್ಣ ಮಂಚೇನಹಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾನೆ.

    ಸರ್ಕಾರಿ ಕರಾಬು ಜಾಗದಲ್ಲಿ ವೆಂಕಟರೋಣ ಹಾಗೂ ಗ್ರಾಮದ ಮತ್ತೋರ್ವ ಮಹಿಳೆ ಭದ್ರಮ್ಮ ಎಂಬವರು ಅಕ್ಕಪಕ್ಕದಲ್ಲೇ ಉಳುಮೆ ಮಾಡಿ ರಾಗಿ ಬೆಳೆ ಬೆಳೆದಿದ್ದರು. ಆದರೆ ವೆಂಕಟರೋಣ ತಾನು ಬೆಳೆದ ರಾಗಿ ಫಸಲಿನ ಜೊತೆ ಭದ್ರಮ್ಮ ಬೆಳೆದ ರಾಗಿ ಬೆಳೆಯನ್ನೂ ಕಟಾವು ಮಾಡಿಕೊಂಡಿದ್ದಾನಂತೆ. ಹೀಗಾಗಿ ಗ್ರಾಮಪಂಚಾಯ್ತಿ ಸದಸ್ಯೆ ಪತಿ ಕೃಷ್ಣ ಬಳಿ ಭದ್ರಮ್ಮ ಆಳಲು ತೋಡಿಕೊಂಡಿದ್ದಾರೆ. ಈ ವೇಳೆ ಗುಂಪು ಕಟ್ಟಿಕೊಂಡ ಹೋದ ಕೃಷ್ಣ ತನ್ನದೇ ಟ್ರ್ಯಾಕ್ಟರ್ ಮೂಲಕ ವೆಂಕಟರೋಣ ಕಟಾವು ಮಾಡಿದ್ದ ರಾಗಿತೆನೆ ತುಂಬಿಕೊಂಡು ಬಂದಿದ್ದಾನೆ.

    ಇದರಿಂದ ಕುಪಿತಗೊಂಡ ವೆಂಕಟರೋಣ ಟ್ರ್ಯಾಕ್ಟರ್ ಅಡ್ಡಗಟ್ಡಿ ಕೃಷ್ಣನ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ. ಈ ವೇಳೆ ಇಬ್ಬರ ನಡುವೆ ವಾಗ್ವಾದವೇ ನಡೆದು ಹೋಗಿ ಏಕಾಏಕಿ ಕೃಷ್ಣ ಹಿಂಬದಿಗೆ ವೆಂಕಟರೋಣ ಚಾಕುವಿನಿಂದ ಇರಿದೇ ಬಿಟ್ಟಿದ್ದಾನೆ.

  • ಪೈಲ್ವಾನ್ ಚಾಲೆಂಜ್ ಆಯ್ತು, ಫಿಟ್‍ನೆಸ್ ಚಾಲೆಂಜ್ ಆಯ್ತು ಈಗ ಮುದ್ದೆ ತಿನ್ನೋ ಚಾಲೆಂಜ್!

    ಪೈಲ್ವಾನ್ ಚಾಲೆಂಜ್ ಆಯ್ತು, ಫಿಟ್‍ನೆಸ್ ಚಾಲೆಂಜ್ ಆಯ್ತು ಈಗ ಮುದ್ದೆ ತಿನ್ನೋ ಚಾಲೆಂಜ್!

    ಬೆಂಗಳೂರು: ಸಿಎಂ ಕುಮಾರಸ್ವಾಮಿ ಹಾಗೂ ಆಹಾರ ಸಚಿವ ಜಮೀರ್ ಅವರಿಗೆ ಮುದ್ದೆ ತಿನ್ನುವ ಚಾಲೆಂಜ್ ಅನ್ನು ಬೆಂಗಳೂರಿನ ಕುರುಬರಹಳ್ಳಿ ಜನ ಹಾಕಿದ್ದಾರೆ.

    ಪಡಿತರ ಚೀಟಿಯಲ್ಲಿ ವಿತರಿಸುವ ರಾಗಿಯಲ್ಲಿ ಬರೀ ಟೊಳ್ಳು ರಾಗಿ, ಕಲ್ಲು, ಮಣ್ಣು ತುಂಬಿದ್ದು, ಮನುಷ್ಯರು ತಿನ್ನಲು ಸಾಧ್ಯವಾಗದ ರೀತಿಯಲ್ಲಿ ಈ ಕಳಪೆ ಗುಣಮಟ್ಟದ ರಾಗಿಯನ್ನು ವಿತರಣೆ ಮಾಡಲಾಗಿದೆ. ಇದರಿಂದ ಸಿಟ್ಟಿಗೆದ್ದ ಜನ ಈ ಕಳಪೆ ರಾಗಿಯನ್ನು ಸಿಎಂ ಕುಮಾರಸ್ವಾಮಿ ಹಾಗೂ ಜಮೀರ್ ಅವರ ವಿಳಾಸಕ್ಕೆ ಕಳುಹಿಸಿ ನೀವು ಮುದ್ದೆ ಮಾಡ್ಕೊಂಡು ತಿನ್ನಿ, ನೀವು ತಿಂದ ಮೇಲೆ ನಾವು ತಿನ್ನುತ್ತೆವೆ ಎಂದು ಚಾಲೆಂಜ್ ಮಾಡಿದ್ದಾರೆ.

    ಈ ಕುರಿತು ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿ ಪರಮೇಶ್ ಎಂಬವರು ಪಡಿತರ ವ್ಯವಸ್ಥೆಯಲ್ಲಿ ಹೆಚ್ಚಿನ ಗೋಲ್ ಮಾಲ್ ನಡೆಯುತ್ತಿದ್ದು, ಕಳಪೆ ಆಹಾರ ವಿತರಣೆ ಮಾಡುತ್ತಿದ್ದಾರೆ. ಅದ್ದರಿಂದ ಮುಖ್ಯಮಂತ್ರಿಗಳು ಹಾಗೂ ಆಹಾರ ಸಚಿವರು ಸಹ ಈ ಕುರಿತು ಗಮನ ಹರಿಸಬೇಕಿದೆ. ನ್ಯಾಯ ಬೆಲೆ ಅಂಗಡಿಯಲ್ಲಿ ಈ ಕುರಿತು ಪ್ರಶ್ನೆ ಮಾಡಿದರೆ ಅಗತ್ಯವಿದ್ದರೆ ತೆಗೆದುಕೊಂಡು ಹೋಗಿ ಇಲ್ಲವಾದರೆ ಬಿಡಿ ಎಂದು ಬೇಜಾವಾಬ್ದಾರಿ ಉತ್ತರ ನೀಡುತ್ತಾರೆ. ಅದ್ದರಿಂದ ಈ ಆಹಾರವನ್ನು ಸಿಎಂ ಕುಮಾರಸ್ವಾಮಿ ಹಾಗೂ ಸಚಿವ ಜಮೀರ್ ಅವರಿಗೆ ಕಳುಹಿಸಿ ಕೊಡುತ್ತಿದ್ದೇವೆ. ಅವರು ಈ ರಾಗಿಯಿಂದ ಮುದ್ದೆ ಮಾಡಿ ತಿಂದು ತೋರಿಸಲಿ, ಬಳಿಕ ನಾವು ಸೇವಿಸುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

  • ಬೇಳೆ, ಬೆಲ್ಲ, ಅಕ್ಕಿ ಬೆಲೆ ಗಗನಕ್ಕೆ: ಏರಿಕೆಯಾಗಿದ್ದು ಯಾಕೆ?

    ಬೇಳೆ, ಬೆಲ್ಲ, ಅಕ್ಕಿ ಬೆಲೆ ಗಗನಕ್ಕೆ: ಏರಿಕೆಯಾಗಿದ್ದು ಯಾಕೆ?

    ಬೆಂಗಳೂರು: ಜಿಎಸ್‍ಟಿ ಬಳಿಕ ಕೊಂಚ ಕಡಿಮೆಯಾಗಿದ್ದ ಬೇಳೆ ಕಾಳು, ಬೆಲ್ಲ, ರಾಗಿ ಬೆಲೆ ಏರಿಕೆಯಾಗಿದೆ.

    ಬೇಳೆ ಕಾಳು ಈಗ ಕೆಜಿಗೆ ನೂರರ ಗಡಿ ದಾಟಿದೆ. ಬಹುತೇಕ ಎಲ್ಲಾ ಬೇಳೆ ಕಾಳುಗಳ ಬೆಲೆ ಹತ್ತು ರೂಪಾಯಿಗೆ ಏರಿಕೆಯಾಗಿದ್ದು, ದಿನಸಿ ಬೆಲೆಯಲ್ಲಿ ಭಾರೀ ಏರಿಕೆಯಾಗಿದೆ.

    ಬೆಲ್ಲ ಕೆಜಿಗೆ ಬರೋಬ್ಬರಿ ಇಪ್ಪತ್ತು ರೂ ಏರಿಕೆಯಾಗಿದ್ದು, ರಾಗಿ ಹಿಟ್ಟು ದರವೂ ಕೆಜಿಗೆ ಐದರಿಂದ ಆರರಿಂದ ಏಳು ರೂಪಾಯಿಗೆ ಏರಿಕೆಯಾಗಿದೆ. ಮೈದಾ, ರವೆ, ಗೋಧಿ ಹಿಟ್ಟು ಅಕ್ಕಿ ದರವೂ ಏರಿಕೆಯಾಗಿದೆ.

    ಮಳೆ ಅಭಾವದ ಜೊತೆ ಕೃತಕ ಅಭಾವ ಸೃಷ್ಟಿಯಾಗಿರುವ ಕಾರಣ ಈ ಸಮಸ್ಯೆ ಸೃಷ್ಟಿಯಾಗಿದೆ ಎಂದು ಮಾರಾಟಗಾರರು ಹೇಳಿದ್ದಾರೆ.

  • ಭತ್ತ ಬೆಳೆಯೋಕೆ ಸಿದ್ಧರಾದ ರೈತರಿಗೆ ರಾಗಿ ಬೆಳೆಯಿರಿ ಎಂದ ಸರ್ಕಾರ

    ಭತ್ತ ಬೆಳೆಯೋಕೆ ಸಿದ್ಧರಾದ ರೈತರಿಗೆ ರಾಗಿ ಬೆಳೆಯಿರಿ ಎಂದ ಸರ್ಕಾರ

    ಮೈಸೂರು: ಭತ್ತ ಬೆಳಯೋಕೆ ಸಿದ್ಧವಾಗಿದ್ದವರಿಗೆ ಸರ್ಕಾರ ರಾಗಿ ಬೆಳೆಯಿರಿ ಎಂದು ಹೇಳಿದ್ದರಿಂದ ರೈತರು ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ.

    ಜಿಲ್ಲೆಯ ಕೆ.ಆರ್. ನಗರ ತಾಲೂಕು ಭತ್ತದ ಕಣಜ. ಇಲ್ಲಿ ಬರೋಬ್ಬರಿ 17 ಸಾವಿರ ಹೆಕ್ಟೇರ್‍ನಲ್ಲಿ ರೈತರು ಭತ್ತ ಬೆಳೆಯುತ್ತಾರೆ. ಭತ್ತದ ಕೃಷಿಗಾಗಿ ರೈತರು ಭೂಮಿಯನ್ನು ಹದ ಮಾಡಿದ್ದಾರೆ. ಇಂತಹ ಸಂದರ್ಭದಲ್ಲಿ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ದಿಢೀರನೆ ರೈತರಿಗೆ ಈ ಬಾರಿ ಭತ್ತ ಬೆಳೆಯಬೇಡಿ ಬದಲಾಗಿ ರಾಗಿ ದ್ವಿಧಳ ಧಾನ್ಯಗಳನ್ನು ಬೆಳೆಯಿರಿ ಎಂದು ಆದೇಶ ನೀಡಿದೆ.

    ಒಂದು ವೇಳೆ ಭತ್ತ ಬೆಳೆದು ನೀರಿನ ಅಭಾವದಿಂದ ಬೆಳೆ ನಷ್ಟವಾದರೆ ಯಾವುದೇ ಪರಿಹಾರ ನೀಡುವುದಿಲ್ಲ ಎಂದು ಎಚ್ಚರಿಸಿದ್ದಾರೆ. ವಾಸ್ತವಾವಾಗಿ ಅಣೆಕಟ್ಟು ಸಮೀಪ ಇರುವ ಜಮೀನಿನಲ್ಲಿ ತೇವಾಂಶದ ಕಾರಣ ರಾಗಿ ಮತ್ತು ದ್ವಿದಳ ಧಾನ್ಯಗಳನ್ನು ಬೆಳೆಯಲು ಆಗದು. ಹಾಗಂತ ಭತ್ತ ಬೆಳೆದು ಅದು ನಷ್ಟವಾದರೆ ಪರಿಹಾರ ಕೊಡುವುದಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ಅಧಿಕಾರಿಗಳ ಈ ಹೇಳಿಕೆಯಿಂದ ರೈತರು ಏನು ಮಾಡಬೇಕು ಎಂದು ತಿಳಿಯದೇ ಸಂಕಷ್ಟಕ್ಕೆ ಸಿಲುಕಿದ್ದಾರೆ.

    ಇದನ್ನೂ ಓದಿ: ರೈತರೇ ಈಗಲೇ ಬಿತ್ತನೆ ಮಾಡಿ ಇಲ್ಲವಾದ್ರೆ ಸೂಕ್ತ ಕ್ರಮ: ಚಾಮರಾಜನಗರ ಡಿಸಿ ಆದೇಶ

     

  • ರೈತನಿಗೆ ಕಳಪೆ ಬಿತ್ತನೆ ಬೀಜ ನೀಡಿದ ಜಿಕೆವಿಕೆ – 3 ತಿಂಗಳಾದ್ರೂ ರಾಗಿ ತೆನೆ ಕಾಳು ಕಟ್ಟಲೇ ಇಲ್ಲ

    ರೈತನಿಗೆ ಕಳಪೆ ಬಿತ್ತನೆ ಬೀಜ ನೀಡಿದ ಜಿಕೆವಿಕೆ – 3 ತಿಂಗಳಾದ್ರೂ ರಾಗಿ ತೆನೆ ಕಾಳು ಕಟ್ಟಲೇ ಇಲ್ಲ

    – ಕೇಳಲು ಹೋದ ರೈತನಿಗೆ ನಿನ್ನ ಹಣೆ ಬರಹ ಅಂತ ಹಾರಿಕೆ ಉತ್ತರ

    ಚಿಕ್ಕಬಳ್ಳಾಪುರ: ಕಡಿಮೆ ಅವಧಿಯಲ್ಲೇ ಅತ್ಯಧಿಕ ಇಳುವರಿ ಅಂತ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಸಂಶೋಧಕರ ಸಲಹೆಯಂತೆ ಖರೀದಿಸಿದ ರಾಗಿ ಬಿತ್ತನೆ ಬೀಜಗಳಿಂದ ನಾಟಿ ಮಾಡಿದ ಪೈರಿನ ತೆನೆಯಲ್ಲಿ ರಾಗಿ ಕಾಳು ಕಟ್ಟದೆ ರೈತರೊಬ್ಬರು ಕಣ್ಣೀರುಡುತ್ತಿದ್ದಾರೆ.

    ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಕೊಯಿರಾ ಹೊಸೂರು ಗ್ರಾಮದ ರೈತ ಮುನಿ ಆಂಜಿನಪ್ಪ ಪ್ರತಷ್ಠಿತ ಕೃಷಿ ವಿಶ್ವವಿದ್ಯಾನಿಲಯದ ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಕೆಎಂಆರ್ 31305 ಅನ್ನೋ ತಳಿಯ ರಾಗಿ ಬಿತ್ತನೆ ಬೀಜ ಖರೀದಿಸಿ ನಾಟಿ ಮಾಡಿದ್ದರು. ಆದ್ರೆ ಈ ರಾಗಿ ಪೈರು ಬೆಳೆದು 3 ತಿಂಗಳಾದ್ರೂ ರಾಗಿ ತೆನೆ ಕಾಳು ಕಟ್ಟಲೇ ಇಲ್ಲ. ಈ ಬಗ್ಗೆ ಕೇಳಿದ್ರೆ ಜಿಕೆವಿಕೆ ಯವರು “ನಿನ್ನ ಹಣೆಬರಹ, ನಾವು ಏನೂ ಮಾಡಲಾಗುವುದಿಲ್ಲ ಎನ್ನುವ ಹಾರಿಕೆ ಉತ್ತರ ನೀಡಿದ್ದಾರೆ ಎಂದು ಅಂಜಿನಪ್ಪ ಹೇಳಿದ್ದಾರೆ.

    ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಕೆಜಿಗೆ 35 ರೂಪಾಯಿಯಂತೆ ಬರೋಬ್ಬರಿ 15 ಕಜಿ ರಾಗಿ ಖರೀದಿ ಮಾಡಿ ಎರಡು ಎಕರೆಯಲ್ಲಿ ರಾಗಿ ಬಿತ್ತನೆ ಮಾಡಿದ್ದಾರೆ. ಒಂದು ಕಡೆ ಬರಗಾಲ ಮತ್ತೊಂದೆಡೆ ವಿದ್ಯುತ್ ಗೆ ಬರ. ಈ ನಡುವೆ ಪಾತಾಳಕ್ಕೆ ಕುಸಿದಿರುವ ಅಂರ್ತಜಲದ ನಡುವೆ ಕೊಳವೆ ಬಾವಿಯ ನೀರು ಬಳಸಿ ಎರಡು ಎಕರೆಯಲ್ಲಿ ರಾಗಿ ಬೆಳೆಯಲಾಗಿದೆ. ಎರಡು ಎಕರೆ ರಾಗಿ ಬೆಳೆಯಲು ಬಿತ್ತನೆ ಬೀಜ, ಸಾವಯುವ ಗೊಬ್ಬರ, ಸೇರಿದಂತೆ ಅಂದಾಜು 50 ಸಾವಿರ ರೂ. ಹಣ ಖರ್ಚು ಮಾಡಿ 3 ತಿಂಗಳು ಕಾದಿದ್ದಾರೆ. ಆದ್ರೆ ರಾಗಿ ಪೈರು 3 ರಿಂದ ಮೂರೂವರೆ ಅಡಿ ಎತ್ತರಕ್ಕೆ ಸೊಂಪಾಗಿ ಬೆಳೆದಿದ್ರೂ ರಾಗಿ ತೆನೆಯಲ್ಲಿ ಮಾತ್ರ ರಾಗಿ ಕಾಳುಗಳೇ ಇಲ್ಲ.

    ಪ್ರತಿ ಎಕರೆಗೆ 35 ಕ್ವಿಂಟಾಲ್ ಇಳುವರಿ ಬರುತ್ತೆ ಅಂತ ಹೇಳಿದ ಜಿಕೆವಿಕೆ ಸಂಶೋಧಕರು ಈಗ ಕನಿಷ್ಠ ಬೆಳೆ ನೋಡಲು ಬರುತ್ತಿಲ್ಲ. ಸ್ಥಳೀಯ ಕೃಷಿ ಅಧಿಕಾರಿ ಕೂಡ ರಾಗಿ ತೆನೆ ಕಾಳು ಕಟ್ಟದಿರುವ ಬಗ್ಗೆ ಧೃಡೀಕರಣ ಮಾಡಿದ್ದಾರೆ. ಸಂಶೋಧನೆ ಮಾಡಿ ಹೊಚ್ಚ ಹೊಸ ಅತ್ಯುತ್ತಮ ಗುಣಮಟ್ಟದ ಬಿತ್ತನೆ ಬೀಜಗಳನ್ನ ಅಭಿವೃದ್ಧಿಪಡಿಸೋ ಜಿಕೆವಿಕೆ ನವರು ಕೊಟ್ಟ ಬಿತ್ತನೆ ಬೀಜಗಳೇ ಈ ಪರಿಯಾದ್ರೇ ಮತ್ಯಾರನ್ನ ನಂಬೋದು ಸ್ವಾಮಿ ಅಂತಿದ್ದಾರೆ ನೊಂದ ರೈತ.