ಕನ್ನಡ ಖ್ಯಾತ ಸಂಗೀತ ನಿರ್ದೇಶಕ, ಗಾಯಕ ರಘು ದೀಕ್ಷಿತ್ ಅವರ ತಾಯಿ ನಿಧನರಾಗಿದ್ದಾರೆ. ಕೆಲ ತಿಂಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ. ಇದನ್ನೂ ಓದಿ : ಶಿವರಾಜ್ ಕುಮಾರ್ ಭೇಟಿಯಾದ ಜಗ್ಗೇಶ್
ಇತ್ತ ತಾಯಿ ನಿಧನರಾಗಿದ್ದರೆ, ಅತ್ತ ರಘು ದೀಕ್ಷಿತ್ ಕಾರ್ಯಕ್ರಮ ನೀಡಲು ದುಬೈಗೆ ತೆರೆಳಿದ್ದರು. ಸುದ್ದಿ ತಿಳಿಯುತ್ತಿದ್ದಂತೆಯೇ ನಿಗದಿಯಾಗಿದ್ದ ಕಾರ್ಯಕ್ರಮವನ್ನು ಮೊಟಕುಗೊಳಿಸಿ ಭಾರತದತ್ತ ಆಗಮಿಸುತ್ತಿದ್ದಾರೆ. ಬೆಂಗಳೂರಿನಲ್ಲಿಯೇ ಇರುವ ರಘು ಅವರ ಸಹೋದರ, ಗಾಯಕ ವಾಸು ದೀಕ್ಷಿತ್ ಮತ್ತು ವಾಸು ಪತ್ನಿ ಬಿಂದು ಮಾಲಿನ ರಘು ಅವರ ನಿವಾಸದತ್ತ ಹೊರಟಿದ್ದಾರೆ.
ಒಂದೊಂದೇ ಹಾಡುಗಳ ಮೂಲಕ ಎಲ್ಲರ ಮನಸ್ಸಿಗೂ ಹತ್ತಿರವಾಗುತ್ತಿರುವ ಬಹು ನಿರೀಕ್ಷಿತ ಚಿತ್ರ ‘ನಿನ್ನ ಸನಿಹಕೆ’. ಇದೀಗ ಚಿತ್ರತಂಡ ಮತ್ತೊಂದು ಮೆಲೋಡಿ ಹಾಡನ್ನು ಬಿಡುಗಡೆ ಮಾಡಿ ಕೇಳುಗ ಪ್ರಿಯರ ಮನಸೂರೆ ಮಾಡಿದೆ. ಚಿತ್ರದ ನಿನ್ನ ಸನಿಹಕೆ ಟೈಟಲ್ ವಿಡಿಯೋ ಹಾಡು ಬಿಡುಗಡೆಯಾಗಿ ಎಲ್ಲರ ಮನಸೂರೆಗೊಳ್ಳುತ್ತಿದೆ.
ರಘು ದೀಕ್ಷಿತ್ ಮ್ಯೂಸಿಕ್ ಮ್ಯಾಜಿಕ್‍ನಲ್ಲಿ ಅರಳಿರೋ ನಿನ್ನ ಸನಿಹಕೆ ಟೈಟಲ್ ಟ್ರ್ಯಾಕ್ ಕೇಳುಗರ ಮನಸ್ಸಿಗೆ ಬಹಳ ಹತ್ತಿರವಾಗಿದ್ದು, ಸಿನಿಮಾಟೋಗ್ರಾಫರ್ ಅಭಿಲಾಶ್ ಕಲತಿ ಅಷ್ಟೇ ಸುಂದರವಾಗಿ ಹಾಡನ್ನು ಸೆರೆ ಹಿಡಿದಿದ್ದಾರೆ. ವಾಸುಕಿ ವೈಭವ್ ಸಾಹಿತ್ಯ ಕೃಷಿಯಲ್ಲಿ ಅರಳಿರುವ ಈ ಹಾಡಿಗೆ ಸಂಜಿತ್ ಹೆಗ್ಡೆ, ಶೃತಿ.ವಿ.ಎಸ್ ದನಿಯಾಗಿದ್ದಾರೆ.
ಈಗಾಗಲೇ ಬಿಡುಗಡೆಯಾಗಿರುವ ಈ ಚಿತ್ರದ ಎರಡೂ ಹಾಡುಗಳು ಸೂಪರ್ ಹಿಟ್ ಆಗಿದ್ದು, ಟೈಟಲ್ ಟ್ರ್ಯಾಕ್ ಕೂಡ ಎಲ್ಲರ ಗಮನ ಸೆಳೆಯುತ್ತಿದೆ. ಲವ್ ಮಾಕ್ಟೇಲ್ ಚಿತ್ರದಲ್ಲಿ ಒಂದಕ್ಕಿಂತ ಒಂದು ಹಿಟ್ ಸಾಂಗ್ ನೀಡಿ ಕಮಾಲ್ ಮಾಡಿದ್ದ ಸಂಗೀತ ನಿರ್ದೇಶಕ ರಘು ದೀಕ್ಷಿತ್ ನಿನ್ನ ಸನಿಹಕೆ ಚಿತ್ರದ ಮೂಲಕ ಮತ್ತೊಂದು ಸೂಪರ್ ಡೂಪರ್ ಆಲ್ಬಂ ನೀಡೋದ್ರಲ್ಲಿ ಡೌಟೇ ಇಲ್ಲ ಎನ್ನುವಷ್ಟರ ಮಟ್ಟಿಗೆ ಹಾಡುಗಳು ಸೊಗಸಾಗಿ ಮೂಡಿ ಬರುತ್ತಿವೆ.
‘ನಿನ್ನ ಸನಿಹಕೆ’ ರೋಮ್ಯಾಂಟಿಕ್ ಕಾಮಿಡಿ ಸಿನಿಮಾವಾಗಿದ್ದು, ಈ ಚಿತ್ರದ ಮೂಲಕ ನಟ ಸೂರಜ್ ಗೌಡ ನಟನೆ ಜೊತೆ ಸಿನಿಮಾ ನಿರ್ದೇಶಕನಾಗಿಯೂ ಬಡ್ತಿಪಡೆಯುತ್ತಿದ್ದಾರೆ. ಸೂರಜ್ ಗೌಡ ಜೋಡಿಯಾಗಿ ಧನ್ಯ ರಾಮ್‍ಕುಮಾರ್ ಸ್ಕ್ರೀನ್ ಶೇರ್ ಮಾಡಿದ್ದಾರೆ.
ವೈಟ್ ಅಂಡ್ ಗ್ರೇ ಪಿಕ್ಷರ್ಸ್ ಬ್ಯಾನರ್‍ನಡಿ ಅಕ್ಷಯ್ ರಾಜ್ ಶೇಖರ್, ರಂಗನಾಥ್ ಕುಡ್ಲಿ ‘ನಿನ್ನ ಸನಿಹಕೆ’ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.
ಬೆಂಗಳೂರು: ಕನ್ನಡದ ಖ್ಯಾತ ಗಾಯಕ ರಘು ದೀಕ್ಷಿತ್ ಆತ್ಮಹತ್ಯೆ ಎಂಬ ಸುಳ್ಳುಸುದ್ದಿ ವೈರಲ್ ಆಗುತ್ತಿದ್ದಂತೆ ನಾನಿನ್ನೂ ಜೀವಂತವಾಗಿದ್ದೇನೆಂದು ರಘು ದೀಕ್ಷಿತ್ ಸಾಮಾಜಿಕ ಜಾಲತಾಣದಲ್ಲಿ ಹೇಳಿದ್ದಾರೆ.
“ಖ್ಯಾತ ಗಾಯಕ ರಘು ದೀಕ್ಷಿತ್ ಆತ್ಮಹತ್ಯೆ! ಕಣ್ಣೀರಿನಲ್ಲಿ ಕನ್ನಡ ಚಿತ್ರರಂಗಕ್ಕೆ ಏನಾಯ್ತು?” ಹೆಡ್‍ಲೈನ್ ಹಾಕಿ ಯೂಟ್ಯೂಬ್‍ನಲ್ಲಿ ಒಂದು ವಿಡಿಯೋ ಅಪ್ಲೋಡ್ ಆಗಿತ್ತು.
ಈ ವಿಡಿಯೋ ನೋಡಿದ ರಘು ದೀಕ್ಷಿತ್ ಸ್ವತಃ ತಾವೇ ದಂಗಾಗಿ ಆ ಸುದ್ದಿಯ ಸ್ಕ್ರೀನ್ ಶಾಟ್ ತೆಗದು ಹೀಗೂ ಉಂಟೇ!!! ನಾನೂ ಅನೇಕ ಕೆಟ್ಟ ಘಟನೆಗಳನ್ನು ಜೀವನದಲ್ಲಿ ಅನುಭವಿಸಿ ಅದನ್ನು ದಾಟಿ ಮುಂದೆ ಬಂದಿದ್ದೇನೆ, ಅದರೊಂದಿಗೆ ಇದನ್ನು ಕೂಡ ಕೇಕ್‍ನ ಒಂದು ಭಾಗವನ್ನು ತಿಂದಂತೆ ಸ್ವೀಕರಿಸಿದ್ದೇನೆ. ನಾನಿನ್ನೂ ಜೀವಂತವಾಗಿದ್ದೇನೆ ಎಂದು ಹೇಳಿದ್ದಾರೆ.
ಇನ್‍ಸ್ಟಾದಲ್ಲಿ ಸ್ಟೋರಿ ಅಪ್ಲೋಡ್ ಮಾಡಿದ ಅವರು ಈ ಯೂಟ್ಯೂಬ್ ಖಾತೆಯನ್ನು ರಿಪೋರ್ಟ್ ಮಾಡಿ ಎಂದು ಕೇಳಿಕೊಂಡಿದ್ದಾರೆ.
ಕನ್ನಡ, ಹಿಂದಿ, ಮಲೆಯಾಳಂ ತಮಿಳು ಭಾಷೆಗಳಲ್ಲಿ 15 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿರುವ ರಘು ದೀಕ್ಷಿತ್ ಅವರಲ್ಲಿ ಅಭಿಮಾನಿಗಳು ಕೂಡಲೇ ನೀವು ಯೂಟ್ಯೂಬ್‍ಗೆ ಹೇಳಿ ಆ ಖಾತೆಯನ್ನು ಡಿಲೀಟ್ ಮಾಡಿಸಿ ಎಂದು ಸಲಹೆ ನೀಡಿದ್ದಾರೆ.
ಖ್ಯಾತ ಗಾಯಕ ಹಾಗೂ ಸಂಗೀತ ನಿರ್ದೇಶಕ ರಘು ದೀಕ್ಷಿತ್ ತಮ್ಮ ಹೊಸ ಪ್ರಾಜೆಕ್ಟ್ ಬಗ್ಗೆ ಹಾಗೂ ಲಾಕ್ಡೌನ್ನಿಂದ ಎದುರಿಸಿದ ಸಮಸ್ಯೆಗಳ ಬಗ್ಗೆ ನಮ್ಮೊಂದಿಗೆ ಮಾತನಾಡಿದ್ದಾರೆ. ಏನು ಹೇಳಿದ್ದಾರೆ ನೋಡೋಣ ಬನ್ನಿ.
1.ಹಾಯ್ ಸರ್ ಹೇಗಿದ್ದೀರಾ..! ಲಾಕ್ ಡೌನ್ ಸಮಯವನ್ನ ಹೇಗೆ ಕಳೆದ್ರಿ.?
ತುಂಬಾ ಚೆನ್ನಾಗಿದ್ದೀನಿ..ಲಾಕ್ ಡೌನ್ ಸಮಯದಲ್ಲಿ ಫುಲ್ ಬ್ಯುಸಿ ಇದ್ದೆ. ಒಂದಿಷ್ಟು ಸಾಂಗ್ ಕಂಪೋಸ್ ಮಾಡ್ದೆ. ಹೊಸ ಹೊಸ ಐಡಿಯಾ ಹೊಳೆಯಿತು ಅದನೆಲ್ಲ ಇಂಪ್ರೂವೈಸ್ ಮಾಡ್ತಾ ಇದ್ದೆ. ಜೊತೆಗೆ ಆನ್ಲೈನ್ ಪಿಯಾನೋ ಕ್ಲಾಸ್ಗೆ ಸೇರಿಕೊಂಡಿದ್ದೇನೆ. ಫ್ರೀ ಆಗಿರೋಕಂತು ಟೈಂ ಸಿಗಲಿಲ್ಲ ಫುಲ್ ಬ್ಯುಸಿ ಆಗಿದ್ದೆ ನಾನು.
2.ಸುನಾಮಿ ವಿಡಿಯೋ ಸಾಂಗ್ ತುಂಬಾ ವೈರಲ್ ಆಗಿದೆ. ಈ ಹಾಡಿನ ವಿಶೇಷತೆ ಬಗ್ಗೆ ಹೇಳಿ.
ಲಾಕ್ಡೌನ್ ಸಮಯದಲ್ಲಿ ಲವ್ ಕಾನ್ಸೆಪ್ಟ್ ಇಟ್ಟುಕೊಂಡು ಏಳು ಹಾಡುಗಳನ್ನು ಬರೆದಿದ್ದೇನೆ..ಅದರಲ್ಲಿ ಒಂದು ಈ ಸುನಾಮಿ ವಿಡಿಯೋ ಸಾಂಗ್..ಲವ್ ಅಂದ್ರೆ ಬರೀ ಹುಡುಗ- ಹುಡುಗಿ ಪ್ರೀತಿ ಮಾತ್ರ ಅಲ್ಲ ಸಾಕು ಪ್ರಾಣಿಗಳ ಮೇಲೆ, ನೇಚರ್, ಟ್ರಾವೆಲ್ ಇವುಗಳನ್ನು ಪ್ರೀತಿಸುವುದು ಕೂಡ ಪ್ರೀತಿನೆ. ಈ ಕಾನ್ಸೆಪ್ಟ್ ಇಟ್ಟುಕೊಂಡು ಸುನಾಮಿ ಅನ್ನೋ ಆಲ್ಬಂ ಸಾಂಗ್ ಮಾಡಿದ್ದೀನಿ. ಅದರಲ್ಲಿ ಮೊದಲನೇ ಆಲ್ಬಂ ಸಾಂಗ್ ಸುನಾಮಿಯನ್ನು ನನ್ನ ಯೂಟ್ಯೂಬ್ ಚಾನೆಲ್ನಲ್ಲಿ ಬಿಡುಗಡೆ ಮಾಡಿದ್ದೇನೆ, ಜನವರಿಯಲ್ಲಿ ನನ್ನ ಸಾಕು ನಾಯಿ ತುಂಟಿ ಮನೆಬಿಟ್ಟು ಹೋಯ್ತು ಮತ್ತೆ ಬರಲೇ ಇಲ್ಲ. ಅದ್ರ ಮೇಲಿರೋ ಪ್ರೀತಿ ಇಟ್ಟುಕೊಂಡು ಈ ಹಾಡು ಬರೆದೆಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಕಾನ್ಸೆಪ್ಟ್ ಮೆಚ್ಚಿಕೊಂಡಿದ್ದಾರೆ. ಉಳಿದ ಆರು ಹಾಡುಗಳನ್ನು ಒಂದೊಂದಾಗಿಯೇ ನನ್ನ ಯೂಟ್ಯೂಬ್ ಚಾನೆಲ್ನಲ್ಲಿ ರಿಲೀಸ್ ಮಾಡುತ್ತೇನೆ. ಕನ್ನಡ ಮತ್ತು ಹಿಂದಿ ಎರಡೂ ಭಾಷೆಯಲ್ಲಿ ಸುನಾಮಿ ಆಲ್ಬಂ ಸಾಂಗ್ ಬಿಡುಗಡೆಯಾಗುತ್ತಿದೆ.
3.ಸುನಾಮಿ ವಿಡಿಯೋ ಎಲ್ಲರಿಗೂ ಕನೆಕ್ಟ್ ಆಗುತ್ತೆ ಈ ಕಾನ್ಸೆಪ್ಟ್ ಹೊಳೆದದ್ದು ಹೇಗೆ. ?
ಇದರ ಎಲ್ಲ ಕ್ರೆಡಿಟ್ ನಟಿ ಸಂಯುಕ್ತ ಹೊರನಾಡ್ಗೆ ಹೋಗಬೇಕು. ಆಕೆ ಪ್ರಾಣಿ ಪ್ರೇಮಿ. ಸೋಶಿಯಲ್ ಮೀಡಿಯಾದಲ್ಲಿ ಅವರ ಪೋಸ್ಟ್ಗಳನ್ನ ನೋಡ್ತಿದ್ದೆ. ಅವರಿಗೆ ಈ ವಿಡಿಯೋನಲ್ಲಿ ಹಾಡ್ತೀರಾ ಅಂದಾಗ ಒಪ್ಪಿಕೊಂಡ್ರು.ಸುನಾಮಿ ವಿಡಿಯೋಗಾಗಿ ಮೊದಲ ಬಾರಿ ಹಿನ್ನೆಲೆ ಗಾಯಕಿಯಾಗಿ ಅವರು ಹಾಡಿದ್ದಾರೆ. ಜೊತೆಗೆ ವಿಡಿಯೋ ಆ ರೀತಿ ಬರೋದಕ್ಕೆ ಮೂಲ ಕಾರಣ ಅವರೇ. ಸೆಲೆಬ್ರೆಟಿಗಳು, ಸ್ನೇಹಿತರು, ಫ್ಯಾನ್ಸ್ ಕಾಂಟ್ಯಾಕ್ಟ್ ಮಾಡಿ ಸಾಕು ಪ್ರಾಣಿಗಳ ಜೊತೆ ಇರೋ ಪೋಟೋ ಕಲೆಕ್ಟ್ ಮಾಡಿ ಹಾಡಿಗೆ ತಕ್ಕ ಹಾಗೆ ಅದನ್ನು ಎಡಿಟ್ ಮಾಡಿಸಿದ್ದಾರೆ. ಅವರಿಗೆ ಸಿನಿಮಾ ಬಗ್ಗೆ ಗೊತ್ತಿರೋದ್ರಿಂದ ಇಡೀ ಕಾನ್ಸೆಪ್ಟ್ ಅವರೇ ಸಿದ್ದ ಮಾಡಿದ್ರು.ನಾನು ಸಾಹಿತ್ಯ ಮತ್ತು ಸಂಗೀತ ಕೆಲಸ ಮಾಡಿದೆ. ಈಗ ಈ ಹಾಡಿಗೆ ಸಿಕ್ತಿರೋ ಮೆಚ್ಚುಗೆ ಕಂಡು ತುಂಬಾ ಖುಷಿಯಾಗ್ತಿದೆ. ನಮ್ಮ ಪ್ರಯತ್ನಕ್ಕೆ ಒಳ್ಳೆಯ ಪ್ರತಿಕ್ರಿಯೆ ಪ್ರೀತಿ ಸಿಕ್ಕಿದೆ ಎಂಬ ತೃಪ್ತಿ ಇದೆ.
4.ಕೋವಿಡ್-19 ನಿಂದ ಸಿನಿಮಾಗಳು ನಿಂತು ಹೋಗಿದೆ ಆರ್ಥಿಕಸಮಸ್ಯೆ ಎದುರಾಯಿತಾ..?
ಇದೊಂದು ವೈರಸ್ ಎಲ್ಲಿಂದ ಬಂತೋ ಬೇಗ ತೊಲಗಿದರೆ ಸಾಕಾಗಿದೆ. ನನಗೆ ಆರ್ಥಿಕವಾಗಿ ತುಂಬಾ ಸಂಕಷ್ಟ ಎದುರಾಯಿತು. ನಾನು ನನ್ನ ಮೋಟರ್ ಸೈಕಲ್ ಮಾರಬೇಕಾದ ಅನಿವಾರ್ಯತೆ ಎದುರಾಯಿತು. ನಾವು ಈ ಮಾತು ಹೇಳಿದ್ರೆ ಯಾರೂ ನಂಬೋದಿಲ್ಲ, ನಿಜವಾಗಿಯೂ ಇದು ಸತ್ಯ. ಬೇರೆ ದಾರಿಯಿಲ್ಲದೆ ಮೋಟರ್ ಸೈಕಲ್ ಮಾರಿದೆ. ಇದೆಲ್ಲ ಬೇಗ ಸುಧಾರಿಸಿ ಎಲ್ಲ ಮೊದಲಿನ ಸ್ಥಿತಿಗೆ ಬರಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ.
5.ಸಂಗೀತ ನಿರ್ದೇಶಕನಾಗಿ ಹಾಡುಗಾರನಾಗಿ ಇಷ್ಟು ವರ್ಷದ ಪಯಣದ ಬಗ್ಗೆ ಹೇಳಿ.
ತುಂಬಾ ಅದೃಷ್ಟ ಮಾಡಿದ್ದೇನೆ. ನಾನು ಶಾಸ್ತ್ರೋಕ್ತವಾಗಿ ಸಂಗೀತವನ್ನು ಕಲಿತು ಬಂದವನಲ್ಲ. ಈಗ ಕಲಿಯುವ ಪ್ರಯತ್ನ ಮಾಡುತ್ತಿದ್ದೇನೆ. ನನ್ನ ಹಾಡುಗಳನ್ನ ಮೆಚ್ಚಿ ಆಶೀರ್ವದಿಸಿ ಇಲ್ಲಿವರೆಗೂ ಜನ ನನ್ನನ್ನು ಕರೆದುಕೊಂಡು ಬಂದಿದ್ದಾರೆ ಈ ಪ್ರೀತಿ ಅಭಿಮಾನಕ್ಕೆ ನಾನು ಎಂದಿಗೂ ಆಭಾರಿ. ಎಲ್ಲಾ ಆ ಭಗವಂತನ ಕೃಪೆ. ಎಷ್ಟೇ ಏಳು ಬೀಳುಗಳನ್ನ ಕಂಡರೂ ನನ್ನ ಅಭಿಮಾನಿಗಳು ಯಾವತ್ತೂ ನನ್ನ ಕೈ ಬಿಡಲಿಲ್ಲ. ನನ್ನನ್ನು ಇಲ್ಲಿಯವರೆಗೆ ಕರೆದುಕೊಂಡು ಬಂದಿದ್ದಾರೆ ಅಂದ್ರೆ ಒಮ್ಮೊಮ್ಮೆ ನಂಬೋಕೆ ಅಸಾಧ್ಯ ಅನ್ನಿಸುತ್ತೆ.
6.ಲಾಕ್ಡೌನ್ ಅವಧಿಯಲ್ಲಿ ಹೊಸ ಹಾಡುಗಳನ್ನ ಕಂಪೋಸ್ ಮಾಡಿದ್ರಿ ಅಂತ ಹೇಳಿದ್ರಿ.
ಹೌದು, ಲಾಕ್ಡೌನ್ ಸಮಯವನ್ನು ಸಂಪೂರ್ಣ ಮ್ಯೂಸಿಕ್ಗಾಗಿ ಮೀಸಲಿಟ್ಟಿದ್ದೆ. ಹತ್ತು ಹಾಡುಗಳನ್ನು ನಾಲ್ಕು ಭಾಷೆಯಲ್ಲಿ ಕಂಪೋಸ್ ಮಾಡಿದ್ದೇನೆ. ನಾನೇ ಲಿರಿಕ್ಸ್ ಬರೆದು ಮ್ಯೂಸಿಕ್ ಕಂಪೋಸ್ ಮಾಡಿದ್ದೇನೆ. ಇನ್ನೊಂದಿಷ್ಟು ಕೆಲಸಗಳು ಬಾಕಿ ಇದೆ. ಅದಾದ ನಂತರ ಅವುಗಳನ್ನು ಬಿಡುಗಡೆ ಮಾಡುತ್ತೇನೆ.ಈ ಹಾಡುಗಳು ಕನ್ನಡ, ಹಿಂದಿ, ತೆಲುಗು. ತಮಿಳು ನಾಲ್ಕು ಭಾಷೆಯಲ್ಲಿ ಬಿಡುಗಡೆಯಾಗ್ತಿದೆ. ಸುನಾಮಿ ಆಲ್ಬಂ ಕೂಡ ಕನ್ನಡ ಮತ್ತು ಹಿಂದಿ ಎರಡೂ ಭಾಷೆಯಲ್ಲಿ ಬಿಡುಗಡೆಯಾಗುತ್ತಿದೆ. ಇದ್ರ ಜೊತೆಗೆ ಏಳು ಹಾಡುಗಳಿರುವ ಸುನಾಮಿ ಎಂಬ ಆಲ್ಬಂ ಸಾಂಗ್ ಮಾಡಿದ್ದೇನೆ. ಅದನ್ನು ಒಂದೊಂದಾಗಿ ನನ್ನ ಯುಟ್ಯೂಬ್ ಚಾನೆಲ್ನಲ್ಲಿ ಬಿಡುಗಡೆ ಮಾಡುತ್ತೇನೆ. ಈಗಾಗಲೇ ಒಂದು ಹಾಡನ್ನು ಬಿಡುಗಡೆ ಮಾಡಿದ್ದೇನೆ. ತುಂಬಾ ಮೆಚ್ಚುಗೆ ಪಡೆದುಕೊಂಡಿದೆ.
7.ಯಾವ, ಯಾವ ಸಿನಿಮಾಗಳಿಗೆ ಸಂಗೀತ ನಿರ್ದೇಶನ ಮಾಡ್ತಿದ್ದೀರಾ.?
ಸೂರಜ್ ಅಭಿನಯದ ನಿನ್ನ ಸನಿಹಕೆ, ಗರುಡ, ಆರ್ಕೆಸ್ಟ್ರಾ ಸಿನಿಮಾಗಳಿಗೆ ಬ್ಯಾಗ್ರೌಂಡ್ ಸ್ಕೋರ್ ಕೆಲಸ ನಡೆಯುತ್ತಿದೆ. ಇದ್ರ ಜೊತೆಗೆ ನನ್ನ ಬ್ಯಾಂಡ್ನಲ್ಲಿ ಹತ್ತು ಸಾಂಗ್ ರೆಡಿಯಾಗಿದೆ, ಅವುಗಳ ಕೆಲಸ ಕೂಡ ನಡೆಯುತ್ತಿದೆ.
8.ಕೊರೊನಾಯಿಂದ ಸ್ಟೇಜ್ ಪರ್ಫಾಮೆನ್ಸ್ ನಿಂತು ಹೋಗಿದೆ ಎಷ್ಟು ಮಿಸ್ ಮಾಡಿಕೊಂಡ್ರಿ.?
ಅಯ್ಯೋ ತುಂಬಾ ಕಷ್ಟ ಆಯ್ತು. ನನಗೆ ಲೈವ್ ಬ್ಯಾಂಡ್ ಪರ್ಫಾಮೆನ್ಸ್ ಇಲ್ಲದೆ ಮೈ ಪರಚಿಕೊಳ್ಳುವ ಹಾಗಾಗಿತ್ತು. ತುಂಬಾ ಮಿಸ್ ಮಾಡಿಕೊಂಡೆ. ಜೊತೆಗೆ ಸಂಪಾದನೆ ನಿಂತು ಹೋಗಿದೆ. ನಮಗೆ ತಿಂಗಳ ಸಂಬಳಇಲ್ಲ, ಕೆಲಸ ಇದ್ರೆ ಮಾತ್ರ ಸಂಬಳ ಹೀಗಾಗಿ ತುಂಬಾ ಕಷ್ಟ ಆಗಿದೆ. ನಾನು ನನ್ನ ಮೋಟರ್ ಬೈಕ್ ಇಎಂಐ ಕಟ್ಟೋಕೆ ಆಗದೇ ಮಾರಿ ಬಿಟ್ಟೆ. ನನ್ನ ಟೀಂನವರ ಜೀವನ ತುಂಬಾ ಕಷ್ಟ ಆಗಿದೆ. ಹೇಗೋ ಜೀವನ ಸಾಗಿಸಿಕೊಂಡು ಹೋಗ್ತಿದ್ದಾರೆ.ಆರಂಭದಲ್ಲಿ ನಾವೇ ಸಂಕಷ್ಟದಲ್ಲಿರುವವರಿಗೆ ಫಂಡ್ ರೈಸ್ ಮಾಡ್ತಾ ಇದ್ವಿ ಆದ್ರೀಗ ನಮ್ಮ ಪರಿಸ್ಥಿತಿ ಕೂಡ ಫಂಡ್ ರೈಸ್ ಮಾಡಿಕೊಟ್ಟರೆ ಬದುಕೋ ಹಂತಕ್ಕೆ ಬಂದಿದೆ. ನಮ್ಮ ಜೀವನ ನಿಂತಿರೋದೇ ಲೈವ್ ಕನ್ಸರ್ಟ್ ಮೇಲೆ. ಏಳು ತಿಂಗಳಿನಿಂದ ಯಾವುದೇ ಲೈವ್ ಬ್ಯಾಂಡ್ ನಡೆದಿಲ್ಲ.ಸಂಪಾದನೆ ನಿಂತು ಹೋಗಿದೆ.
9.ನಿಮಗೆ ತುಂಬಾ ಇಷ್ಟ ಆಗುವ ಹಾಗೂ ತುಂಬಾ ಕಾಡುವ ಹಾಡು ಯಾವುದು.?
ಖಂಡಿತ ಇದೆ. ನನ್ನದೇ ಹಿಂದಿ ಹಾಡು ಒಂದಿದೆ ಅಂಬರ್ ಅಂತ ಆ ಹಾಡು ನನಗೆ ತುಂಬಾ ಇಷ್ಟ. ಅದು ಬಿಟ್ರೆ ಕನ್ನಡಲ್ಲಿ ಶಿಶುನಾಳ ಶರೀಫರ ಮೋಹದ ಹೆಂಡತಿ ಸಾಂಗ್ ಬಹಳ ಇಷ್ಟ. ಈ ಎರಡೂ ಹಾಡುಗಳನ್ನು ನಾನು ಯಾವಾಗಲು ಗುನುಗುತ್ತಿರುತ್ತೇನೆ.
10.ಸಿನಿಮಾದಲ್ಲಿ ನಟಿಸೋ ಆಸಕ್ತಿ ಇದೆಯಾ..?
ಈಗಾಗಲೇ ಮೂರು ಸಿನಿಮಾಗಳನ್ನ ಒಪ್ಪಿಕೊಂಡಿದ್ದೇನೆ. ವಿನಯ್ ಶಾಸ್ತ್ರಿ ನಿರ್ದೇಶನದ ಓಬೀರಾಯನ ಕಥೆ ಚಿತ್ರದಲ್ಲಿ ಸ್ನೇಹಿತನ ಪಾತ್ರ ಮಾಡುತ್ತಿದ್ದೇನೆ. ಆರ್ ಜೆ ಪ್ರದೀಪ್ ಅವರ ವೆಬ್ ಸಿರೀಸ್ ಒಂದರಲ್ಲಿ ಮುಖ್ಯ ಪಾತ್ರ ಹಾಗೂ ಸಂಗೀತ ನಿರ್ದೇಶನ ಎರಡೂ ನಾನೇ ನಿರ್ವಹಿಸುತ್ತಿದ್ದೇನೆ.ಇದಲ್ಲದೇ ಇನ್ನೊಂದು ಸಿನಿಮಾ ಮಾತುಕತೆಯಾಗಿದ್ದು ಅದರಲ್ಲಿ ಲೀಡ್ ರೋಲ್ನಲ್ಲಿ ನಟಿಸುತ್ತಿದ್ದೇನೆ. ಅದ್ರ ಬಗ್ಗೆ ಸದ್ಯದಲ್ಲೇ ಮಾಹಿತಿ ನೀಡುತ್ತೇನೆ. ಮೂರೂ ಸಿನಿಮಾಗಳ ಶೂಟಿಂಗ್ ಇನ್ನು ಆರಂಭವಾಗಿಲ್ಲ.
11.ತುಂಬಾ ಸಣ್ಣ ಆಗಿದ್ದೀರಾಡಯೆಟ್ ಮಾಡ್ತಾ ಇದಿರಾ..?
ಹೌದು, ಸಣ್ಣ ಆಗಿದ್ದೀನಿ. ಮೊದಲೆಲ್ಲ ಫಿಟ್ನೆಸ್ ಬಗ್ಗೆ ಅಷ್ಟು ಗಮನ ಕೊಡ್ತಾ ಇರ್ಲಿಲ್ಲ. ಇತ್ತೀಚೆಗೆ ಆರೋಗ್ಯದ ಬಗ್ಗೆ ಕಾಳಜಿ ಜಾಸ್ತಿ ಆಗಿದೆ. ಪ್ರತಿದಿನ ಪ್ರಾಣಯಾಮ, ಯೋಗ ಮಾಡುತ್ತಿದ್ದೇನೆ. ಫುಡ್ ಡಯೆಟ್ ಕೂಡ ಮಾಡ್ತಾ ಇದ್ದೀನಿ. ಇದೆಲ್ಲದರಿಂದ ಆರೋಗ್ಯ ಸ್ವಲ್ಪ ಸುಧಾರಿಸಿದೆ. ನಮ್ಮ ಆರೋಗ್ಯ ನಾವೇ ನೋಡಿಕೊಳ್ಳಬೇಕಲ್ವಾ ಹಾಗಾಗಿ ಫಿಟ್ನೆಸ್ ಕಡೆ ಗಮನ ನೀಡುತ್ತಿದ್ದೇನೆ.
ಬೆಂಗಳೂರು: ಗಾಯಕ ಮತ್ತು ಸಂಗೀತ ನಿರ್ದೇಶಕ ರಘು ದೀಕ್ಷಿತ್ ಸಾರ್ವಜನಿಕವಾಗಿ ತಮ್ಮ ನೋವನ್ನು ತೋಡಿಕೊಂಡಿದ್ದಾರೆ.
ಹೀಗೆ ಸಾರ್ವಜನಿಕವಾಗಿ ರಘು ದೀಕ್ಷಿತ್ ತಮ್ಮ ನೋವನ್ನು ತೋಡಿಕೊಳ್ಳಲು ಕಾರಣ, ಅವರು ಇತ್ತೀಚೆಗೆ ಸಂಗೀತ ನಿರ್ದೇಶನ ಮಾಡಿದ್ದ ಲವ್ ಮಾಕ್ಟೇಲ್ ಚಿತ್ರ. ಹೌದು ಡಾರ್ಲಿಂಗ್ ಕೃಷ್ಣ ಮತ್ತು ಮಿಲನ ನಾಗರಾಜ್ ಅಭಿನಯದ ಲವ್ ಮಾಕ್ಟೇಲ್ ಚಿತ್ರವನ್ನು ಕೆಲ ಚಿತ್ರಮಂದಿರಗಳಿಂದ ತೆಗೆದು ಹಾಕಿರುವುದಕ್ಕೆ ಬೇಸರಗೊಂಡ ರಘು ದೀಕ್ಷಿತ್ ವಿಡಿಯೋ ಮಾಡುವ ಮೂಲಕ ತಮ್ಮ ನೋವನ್ನು ಹೊರ ಹಾಕಿದ್ದಾರೆ.
ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿರುವ ಈ ವಿಡಿಯೋದಲ್ಲಿ ಮಾತನಾಡಿರುವ ರಘು ಅವರು, ನಾನು ಸಾರ್ವಜನಿಕವಾಗಿ ಯಾವತ್ತು ತನ್ನ ನೋವನ್ನು ಹಂಚಿಕೊಂಡಿರಲಿಲ್ಲ. ಆದರೆ ಅನಿರ್ವಾಯ ಕಾರಣದಿಂದ ಇಂದು ಈ ವಿಡಿಯೋ ಮಾಡಿ ತನ್ನ ನೋವನ್ನು ಹಂಚಿಕೊಳ್ಳುತ್ತಿದ್ದೇನೆ. ಇದಕ್ಕೆ ಕಾರಣ ಕಳೆದ ಶುಕ್ರವಾರ 150 ಚಿತ್ರಮಂದಿರದಲ್ಲಿ ತೆರೆಕಂಡ ಲವ್ ಮಾಕ್ಟೇಲ್ ಚಿತ್ರ ಇಂದು ಕೇವಲ ಬೆಂಗಳೂರಿನ ಶಾರದಾ ಥೀಯೇಟರ್‍ನಲ್ಲಿ ಮಾತ್ರ ಪ್ರದರ್ಶನ ಕಾಣುತ್ತಿದೆ. ಇದನ್ನು ಓದಿ: ಕಿಚ್ಚನ ಮನಸ್ಸಿಗೂ ಹಿಡಿಸಿದ ‘ಲವ್ ಮಾಕ್ಟೇಲ್’!
https://www.instagram.com/p/B8QI93VgrB0/
ಬುಕ್ ಮೈ ಶೋನಲ್ಲಿ 90% ವೋಟ್ ಕಂಡು ಜನ ಮತ್ತು ಮೀಡಿಯಾದಿಂದ ಒಳ್ಳೆ ಪ್ರತಿಕ್ರಿಯೆ ಬಂದರೂ ಚಿತ್ರಮಂದಿರ ತುಂಬಲಿಲ್ಲ. ನಿಧಾನಕ್ಕೆ ಜನ ಚಿತ್ರಮಂದಿರಕ್ಕೆ ಬರುತ್ತಿದ್ದರು. ಆದರೆ ಇಂದು ಕೇವಲ ಒಂದೇ ಒಂದು ಥೀಯೇಟರ್‍ನಲ್ಲಿ ಲವ್ ಮಾಕ್ಟೇಲ್ ಪ್ರದರ್ಶನಗೊಳ್ಳುತ್ತಿದೆ. ಬಹಳ ಒಳ್ಳೆಯ ಚಿತ್ರ ನಾನು ವೈಯಕ್ತಿಕ ಗ್ಯಾರೆಂಟಿ ಕೊಡುತ್ತೇನೆ. ಆ ಚಿತ್ರ ಇಷ್ಟವಾಗಿಲ್ಲ ಎಂದರೆ ಆ ದುಡ್ಡನ್ನು ನಾನು ವಾಪಸ್ ನೀಡುತ್ತೇನೆ ಎಂದು ವಿಡಿಯೋದಲ್ಲಿ ರಘು ತಮ್ಮ ನೋವನ್ನು ತೋಡಿಕೊಂಡಿದ್ದಾರೆ. ಇದನ್ನು ಓದಿ: ಹೃದಯ ತಟ್ಟುವ ಚಿತ್ರ ‘ಲವ್ ಮಾಕ್ಟೇಲ್’
ನಾನು ನಿಮ್ಮ ದೊಡ್ಡ ಅಭಿಮಾನಿ ಎಂದು ಹೇಳುವವರು, ನಿಜವಾಗಿಯೂ ನೀವು ನಮ್ಮ ಅಭಿಮಾನಿಗಳಾದರೆ ಚಿತ್ರಮಂದಿರಕ್ಕೆ ಬಂದು ಚಿತ್ರನೋಡಿ. ಒಂದು ಒಳ್ಳೆಯ ಸಿನಿಮಾ ಮಾಡಿದ್ದೇವೆ ಒಳ್ಳೆ ಸಂಗೀತ ನೀಡಿದ್ದೇನೆ. ಈ ಚಿತ್ರವನ್ನು ನೀವು ಕುಟುಂಬ ಸಮೇತ ಮತ್ತು ಗೆಳೆಯರ ಸಮೇತ ಹೋಗಿ ನೋಡಿ. ಈ ಚಿತ್ರವನ್ನು ಗೆಲ್ಲಿಸಬೇಕು ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.
ಶಾರದಾ ಥೀಯೇಟರ್ ಅನ್ನು ನಾವೇಲ್ಲ ಸೇರಿ ತುಂಬಿಸಬೇಕು. ಟಿಕೆಟ್ ಸಿಗದ ರೀತಿ ಮಾಡಬೇಕು. ಆಗ ನಮಗೆ ಇನ್ನೊಂದು ಚಿತ್ರಮಂದಿರ ಸಿಗಬಹುದು. ದಯಮಾಡಿ ಕನ್ನಡ ಚಿತ್ರಗಳನ್ನು ಉಳಿಸಿ. ಈ ಚಿತ್ರಕ್ಕಿಂತ ಒಳ್ಳೆಯ ಸಿನಿಮಾ ಮಾಡಬೇಕು ಎಂದರೆ ನೀವು ನಮ್ಮನ್ನು ಗೆಲ್ಲಿಸಬೇಕು. ನೀವು ನಮ್ಮನ್ನು ಅನಾಥರನ್ನಾಗಿ ಮಾಡಿದರೆ ನಿಜವಾಗಿಯೂ ಕನ್ನಡ ಚಿತ್ರಗಳನ್ನು ಮಾಡಬಾರದು ಎನಿಸುತ್ತದೆ ಎಂದು ರಘು ದೀಕ್ಷಿತ್ ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನು ಓದಿ: ‘ಲವ್ ಮಾಕ್ಟೇಲ್’ 4-5 ಪ್ರೀತಿಗಳ ಮಿಶ್ರಣ
ಬೇರೆ ಭಾಷೆಯಲ್ಲಿ ಚಿತ್ರ ಬಂದರೆ ಜನ ಹೋಗಿ ನೋಡುತ್ತಾರೆ. ಆ ಚಿತ್ರಗಳು ಮೂರು ನಾಲ್ಕು ವಾರ ಪ್ರದರ್ಶನ ಕಾಣುತ್ತವೆ. ಇದೇ ಚಿತ್ರ ತೆಲುಗು ಮತ್ತು ತಮಿಳಿನಲ್ಲಿ ಬಂದಿದ್ದರೆ ನಾಲ್ಕು ಐದು ವಾರ ಹೌಸ್ ಫುಲ್ ಪ್ರದರ್ಶನ ಕಾಣುತ್ತಿತ್ತು. ಆದರೆ ಕನ್ನಡದಲ್ಲಿ ರಿಲೀಸ್ ಆದರೆ ಜನ ನೋಡುವುದಿಲ್ಲ ಕನ್ನಡ ಚಿತ್ರ ಎಂದು ನಿರ್ಲಕ್ಷ್ಯ ಮಾಡುತ್ತಾರೆ. ಈ ಚಿತ್ರ ಗೆಲ್ಲಬೇಕು ಅದಕ್ಕೆ ನೀವು ಸಹಾಯ ಮಾಡಬೇಕು ಎಂದು ರಘು ದೀಕ್ಷಿತ್ ಕೇಳಿಕೊಂಡಿದ್ದಾರೆ.
ಬೆಂಗಳೂರು: ಕಳೆದ ಮೂರು ವರ್ಷಗಳಿಂದ ಸತತವಾಗಿ ಸಿದ್ಧಗೊಳ್ಳುತ್ತಿದ್ದ, ಸಿದ್ಧಾರ್ಥ್ ಮಹೇಶ್, ಶ್ರೀನಗರ ಕಿಟ್ಟಿ ಪ್ರಧಾನ ಪಾತ್ರದಲ್ಲಿ ನಟಿಸಿರುವ ‘ಗರುಡ’ ಚಿತ್ರದ ಟ್ರೇಲರ್ ರಿಲೀಸ್ ಆಗಿದೆ. ಈ ಚಿತ್ರದ ಟ್ರೇಲರ್ ನೋಡಿದವರಿಗೆ ಯಾಕೆ ಮೂರು ವರ್ಷ ಕಾಲಾವಧಿಯನ್ನು ಈ ಸಿನಿಮಾ ಪಡೆದುಕೊಂಡಿತು ಅನ್ನೋದರ ಸ್ಪಷ್ಟ ಚಿತ್ರಣ ಸಿಗುತ್ತದೆ. ಗರುಡ ಚಿತ್ರದ ಟ್ರೇಲರ್ ನೋಡಿದವರಿಗೆ ‘ಇದೇನಿದು ಹಾಲಿವುಡ್ ರೇಂಜಿಗೆ ರೂಪಿಸಿದ್ದಾರಲ್ಲಾ?’ ಎನ್ನುವ ಭಾವನೆ ಮೂಡುತ್ತದೆ. ಅಷ್ಟೊಂದು ದೃಶ್ಯ ಶ್ರೀಮಂತಿಕೆ ಹೊಂದಿರುವ ಈ ಚಿತ್ರ ದೊಡ್ಡ ಬಜೆಟ್ಟು, ಹಿರಿದಾದ ಕಲಾವಿದ, ತಂತ್ರಜ್ಞರನ್ನು ಒಳಗೊಂಡು ತಯಾರಾಗಿದೆ. ಆರೆಂಜ್ ಪಿಕ್ಸಲ್ಸ್ ಲಾಂಛನದಲ್ಲಿ, ಕಿಶೋರ್ ಎ ಅರ್ಪಿಸಿ, ಬಿ.ಕೆ. ರಾಜಾರೆಡ್ಡಿ ಮತ್ತು ಪ್ರಸಾದ್ ರೆಡ್ಡಿ ಎಸ್ ಅವರು ನಿರ್ಮಿಸುತ್ತಿರುವ ಚಿತ್ರ ‘ಗರುಡ’. ಈ ಹಿಂದೆ ‘ಸಿಪಾಯಿ’ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದ ಸಿದ್ಧಾರ್ಥ್ ಮಹೇಶ್ ಅವರ ಎರಡನೇ ಚಿತ್ರ ಇದಾಗಿದೆ.
ಈ ಚಿತ್ರದ ಟ್ರೇಲರ್ ಅನ್ನು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಬಿಡುಗಡೆಗೊಳಿಸಿದ್ದಾರೆ. ಜೊತೆಗೆ ಈ ಚಿತ್ರತಂಡ ಶ್ರಮವನ್ನು ಕಂಡು ಬೆರಗಾಗಿದ್ದಾರೆ. ಟ್ರೇಲರನ್ನು ಅಪಾರವಾಗಿ ಮೆಚ್ಚಿರುವ ಶಿವಣ್ಣ ಸಿದ್ಧಾರ್ಥ್ ಮಹೇಶ್ ಸೇರಿದಂತೆ ಗರುಡ ಚಿತ್ರಕ್ಕೆ ಶುಭಾಶಯ ತಿಳಿಸಿದ್ದಾರೆ.
ಕುಟುಂಬದಲ್ಲಿ ಒಂದು ಘಟನೆ ನಡೆಯುತ್ತದೆ. ಅದು ನಾಯಕನ ಜವಾಬ್ದಾರಿಯನ್ನು ಹೆಚ್ಚಿಸುತ್ತದೆ. ಕೌಟುಂಬಿಕವಾಗಿ ಶುರುವಾಗುವ ಚಿತ್ರ ಎಲ್ಲೆಲ್ಲಿ ಸಾಗುತ್ತದೆ ಅನ್ನೋದು ಗರುಡ ಚಿತ್ರದ ಪ್ರಧಾನ ಅಂಶ. ಸಿದ್ಧಾಥ್ ಮಹೇಶ್ ಈ ಚಿತ್ರದಲ್ಲಿ ಆ ಕುಟುಂಬದ ಹುಡುಗನಾಗಿ ನಟಿಸಿದ್ದಾರೆ. ನಟ ಶ್ರೀನಗರ ಕಿಟ್ಟಿ ಈ ವರೆಗೆ ಬೇರೆ ಬೇರೆ ರೀತಿಯ ಪಾತ್ರಗಳನ್ನು ನಿರ್ವಹಿಸುತ್ತಾ ಬಂದಿದ್ದಾರೆ. ಆದರೆ, ಗರುಡ ಅವರ ವೃತ್ತಿ ಬದುಕಿಗೆ ಕಮರ್ಷಿಯಲ್ ಕಲರ್ ನೀಡಿ ನನ್ನ ಕೆರಿಯರ್‍ಗೆ ಬೇರೆ ದಾರಿ ನೀಡುತ್ತದೆ ಎನ್ನುವ ನಂಬಿಕೆ ಸ್ವತಃ ಕಿಟ್ಟಿ ಅವರದ್ದು. ಕಿಟ್ಟಿ ಮತ್ತು ರಂಗಾಯಣ ರಘು ಕಾಂಬಿನೇಷನ್ ಸಾಕಷ್ಟು ಸಿನಿಮಾಗಳಲ್ಲಿ ವರ್ಕೌಟ್ ಆಗಿದೆ. ಈ ಚಿತ್ರದಲ್ಲೂ ಅದು ಮುಂದುವರೆಯಲಿದೆ. ಈ ಚಿತ್ರದಲ್ಲಿ ಕಿಟ್ಟಿ ಪೊಲೀಸ್ ಅಧಿಕಾರಿಯ ಪಾತ್ರ ನಿರ್ವಹಿಸಿದ್ದಾರೆ. ನಾಯಕನಟಿ ಆಶಿಕಾ ರಂಗನಾಥ್ ಅವರದ್ದು ಈ ಸಿನಿಮಾದಲ್ಲಿ ನನ್ನದು ಕಾಲೇಜ್ ಹುಡುಗಿ ಪಾತ್ರ. ಮನಸಲ್ಲಿ ಉಳಿಯೋ ಕ್ಯಾರೆಕ್ಟರ್ ಅಂತೆ. ಐಂದ್ರಿತಾ ರೇ ದೊಡ್ಡ ಗ್ಯಾಪ್ ನಂತ ನಬಟಿಸಿದ ಸಿನಿಮಾ ಗರುಡ. ಈ ಚಿತ್ರದ ಶೂಟಿಂಗ್ ಗೋವಾದಲ್ಲಿ ನಡೆಯುತ್ತಿದ್ದಾಗ ಐಂದ್ರಿತಾ ತಮ್ಮ ಮದುವೆಯ ವಿಚಾರವನ್ನು ಅನೌನ್ಸ್ ಮಾಡಿದ್ದರು. ಗರುಡ ಚಿತ್ರದಿಂದ ಐಂದ್ರಿತಾ-ದಿಗಂತ್ ಮದುವೆ ಓಡಾಟಗಳಿಗೆ ಸ್ವಲ್ಪ ಅಡೆತಡೆಯಾಗಿತ್ತಂತೆ ಆದರೆ ಗರುಡ ಸಿನಿಮಾಗೆ ಮೊದಲ ಆದ್ಯತೆ ನೀಡಿದ್ದರಂತೆ!
ನಟ ಆದಿ ಲೋಕೇಶ್ ಅವರಿಗಿದು ಪರ್ಸನಲ್ಲಾಗಿ, ಮನಸ್ಸಿಗೆ ತುಂಬಾ ಹತ್ರಿತವಾದ ಸಿನಿಮಾವಂತೆ. “ರಿಲೀಸ್ ಆದ ಮೇಲೆ ಹೆಣ್ಮಕ್ಕಳು ನನ್ನನ್ನು ನೋಡಿದರೆ ಚಪ್ಪಲಿ ತಗೊಂಡು ಹೊಡೀತಾರೆ” ಎಂದು ಸ್ವತಃ ಅವರೇ ಹೇಳಿಕೊಳ್ಳುವ ಮಟ್ಟಿಗೆ ಈ ಚಿತ್ರದ ಕಾಳಿಂಗನ ಪಾತ್ರ ಕ್ರೂರವಾಗಿದೆಯಂತೆ. ಗಾಯಕ ರಘು ದೀಕ್ಷಿತ್ ಈ ಚಿತ್ರದಲ್ಲಿ ಸಂಗೀತ ನಿರ್ದೇಶನದ ಜೊತೆಗೆ ನಟನೆಯನ್ನೂ ಮಾಡಿರೋದು ವಿಶೇಷ.
ಕಳೆದ ಹನ್ನೆರಡು ವರ್ಷಗಳಿಂದ ಸ್ವತಂತ್ರ ನೃತ್ಯನಿರ್ದೇಶಕರಾಗಿ ಕೆಲಸ ನಿರ್ವಹಿಸುತ್ತಿರುವ ಧನಕುಮಾರ್ ‘ಗರುಡ’ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಗರುಡ ಚಿತ್ರದ ಟ್ರೇಲರ್ ಅನ್ನು ರಘು ದೀಕ್ಷಿತ್ ಅವರ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದ್ದು, ಸದ್ಯದಲ್ಲೇ ಗರುಡ ತೆರೆಗೆ ಬರುವ ಎಲ್ಲ ಯೋಜನೆ ರೂಪಿಸಿಕೊಂಡಿದೆ. ಧನಕುಮಾರ್ ನಿರ್ದೇಶನದ ಗರುಡ ಚಿತ್ರಕ್ಕೆ ರಘುದೀಕ್ಷಿತ್ ಸಂಗೀತ, ಜೈ ಆನಂದ್ ಛಾಯಾಗ್ರಹಣ, ದೀಪು ಎಸ್‍ಕುಮಾರ್ ಸಂಕಲನ, ರವಿವರ್ಮ ಸಾಹಸ ನಿರ್ದೇಶನದ ಈ ಚಿತ್ರದಲ್ಲಿಸಿದ್ಧಾರ್ಥ್ ಮಹೇಶ್, ಶ್ರೀನಗರ ಕಿಟ್ಟಿ, ಐಂದ್ರಿತಾ ರೇ, ಆಶಿಕಾ ರಂಗನಾಥ್, ಕಾಮ್ನಾ ಜೇಟ್ಮಲಾನಿ, ರಂಗಾಯಣ ರಘು, ಆದಿಲೋಕೇಶ್, ರಾಜೇಶ್‍ನಟರಂಗ, ರವಿಶಂಕರ್ ಗೌಡ, ರಘುದೀಕ್ಷಿತ್ ಮುಂತಾದವರ ತಾರಾಬಳಗವಿದೆ.
ಬೆಂಗಳೂರು: ಖ್ಯಾತ ಗಾಯಕ ರಘು ದೀಕ್ಷಿತ್ ಹಾಗೂ ಡ್ಯಾನ್ಸರ್ ಮಯೂರಿ ಪರಸ್ಪರ ಒಪ್ಪಿಗೆಯ ಮೇರೆಗೆ ವಿಚ್ಛೇದನ ಪಡೆಯುವುದಕ್ಕೆ ನಿರ್ಧರಿಸಿದ್ದಾರೆ.
ಕಳೆದ ಒಂದು ವರ್ಷದಿಂದ ರಘು ಮತ್ತು ಮಯೂರಿ ಬೇರೆ ಬೇರೆಯಾಗಿ ವಾಸಿಸುತ್ತಿದ್ದು, ಇದೀಗ ಕೌಟುಂಬಿಕ ಕಲಹ ನ್ಯಾಯಾಲಯಕ್ಕೆ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಕಳೆದ ಕೆಲ ತಿಂಗಳ ಹಿಂದೆ ರಘು ದೀಕ್ಷಿತ್ ಮೇಲೆ ಮೀಟೂ ಆರೋಪ ಕೇಳಿ ಬಂದಾಗಲೇ ದಂಪತಿಯ ಮಧ್ಯೆ ಇದ್ದ ಮನಸ್ತಾಪ ಬಯಲಾಗಿತ್ತು. ಇದೀಗ ಜೋಡಿ ಬೇರೆಯಾಗಿರೋದು ಖಚಿತವಾಗಿದೆ.
ಸದ್ಯಕ್ಕೆ ನ್ಯಾಯಾಲಯ ದಂಪತಿಗೆ 6 ತಿಂಗಳ ಗಡುವು ನೀಡಿದ್ದು, ಡಿಸೆಂಬರ್ ನಲ್ಲಿ ವಿಚಾರಣೆ ನಡೆಸುವುದಾಗಿ ಹೇಳಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಮೀಟೂ ಆರೋಪ:
ಗಾಯಕಿ ಚಿನ್ಮಯಿ ಶ್ರೀಪಾದ ಅವರು ರಘು ದೀಕ್ಷಿತ್ ವಿರುದ್ಧ ಮೀಟೂ ಆರೋಪ ಮಾಡಿದ್ದರು. ಚಿನ್ಮಯ್ ತನ್ನ ಸ್ನೇಹಿತರಿಗೆ ಆದ ಅನುಭವಗಳನ್ನು 2 ಪತ್ರಗಳ ಮೂಲಕ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದರು.
ಈ ಆರೋಪ ಕೇಳಿಬರುತ್ತಿದ್ದಂತೆಯೇ ಪ್ರತಿಕ್ರಿಯಿಸಿದ್ದ ಗಾಯಕ ರಘು ದೀಕ್ಷಿತ್, ಚಿನ್ಮಯಿ ಶ್ರೀಪಾದ್ ಕಾರ್ಯವನ್ನು ಶ್ಲಾಘಿಸಿದ್ದರು. ಆದರೆ ಅವರು ಹೇಳಿದ್ದರಲ್ಲಿ ಕೆಲ ಭಾಗ ನಿಜವಿದ್ದರೂ, ಎಲ್ಲವೂ ನಿಜವಲ್ಲ ಎಂದು ತಮ್ಮ ಟ್ವಿಟ್ಟರಿನಲ್ಲಿ ಪ್ರಕಟಿಸಿದ್ದರು. ನಾನು ಆಕೆಯನ್ನ ಹಗ್ ಮಾಡಿ ಕಿಸ್ ಮಾಡುವುದಕ್ಕೆ ಪ್ರಯತ್ನಿಸಿದ್ದು ನಿಜ, ಆದರೆ ಅದಕ್ಕೆ ನಾನು ಕ್ಷಮೆ ಕೂಡ ಕೇಳಿದ್ದೇನೆ. ಈಗಲೂ ಕ್ಷಮೆ ಕೇಳುತ್ತೇನೆ ಅಂದಿದ್ದರು.
ರಘು ದೀಕ್ಷಿತ್ ಬಗ್ಗೆ ಆರೋಪ ಬರುತ್ತಿದ್ದಂತೆಯೇ ಪತ್ನಿ ಮಯೂರಿ ಕೂಡ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪ್ರತಿಕ್ರಿಯೆ ನೀಡಿದ್ದರು. “ಲೈಂಗಿಕ ಕಿರುಕುಳಕ್ಕೆ ಬಲಿಪಶುಗಳಾದ ಪರವಾಗಿ ನಾನು ಸದಾ ನಿಲ್ಲುತ್ತೇನೆ. ಅಲ್ಲದೆ ಸದಾ ನನ್ನ ಬೆಂಬಲವಿದೆ. ಇಂತಹ ಕಿರುಕುಳ ಆದಾಗ ಕಾನೂನು ಹೋರಾಟ ಮಾಡೋದು ಸೂಕ್ತ ಎನಿಸಿಸುತ್ತದೆ. ಯಾಕೆಂದರೆ ಆಗ ಇತರೆ ಮಹಿಳೆಯರ ಘನತೆಗೆ ಚ್ಯುತಿ ತರುವ ಧೈರ್ಯ ಪುರುಷರಿಗೆ ಬರಲ್ಲವೆಂದು ಅಂದುಕೊಂಡಿದ್ದೇನೆ” ಎಂದು ಹೇಳಿದ್ದರು.
ಬೆಂಗಳೂರು: ಶಿಶುನಾಳ ಶರೀಫರ ಗೀತೆಗಳ ಮೂಲಕವೇ ಜನಪ್ರಿಯರಾಗಿ ಸಿನಿಮಾ ಗಾಯಕ, ಸಂಗೀತ ನಿರ್ದೇಶಕನಾಗಿಯೂ ಎತ್ತರದ ಸ್ಥಾನ ಗಿಟ್ಟಿಸಿಕೊಂಡಿರುವವರು ರಘು ದೀಕ್ಷಿತ್. ಬಾಲಿವುಡ್ ವರೆಗೂ ಗಾಯಕರಾಗಿ ಹೆಜ್ಜೆ ಗುರುತು ಮೂಡಿಸಿರುವ ಅವರೀಗ ನಟನಾಗಿಯೂ ಬಣ್ಣ ಹಚ್ಚಿದ್ದಾರೆ. ಯಾರಿಗಾದರೂ ಅಚ್ಚರಿಯಾಗುವಂಥಾದ್ದೊಂದು ಪಾತ್ರಕ್ಕೆ ಜೀವ ತುಂಬಲು ರೆಡಿಯಾಗಿದ್ದಾರೆ.
ಈ ಹಿಂದೆ ಸಿಪಾಯಿ ಅಂತೊಂದು ಚಿತ್ರದಲ್ಲಿ ನಟಿಸಿದ್ದ ಸಿದ್ಧಾರ್ಥ್ ಮಹೇಶ್ ಗರುಡ ಎಂಬ ಚಿತ್ರದ ಮೂಲಕ ನಾಯಕರಾಗಿದ್ದಾರೆ. ರಗಡ್ ಕಥೆ ಹೊಂದಿರೋ ಈ ಚಿತ್ರದಲ್ಲಿ ಗುಪ್ತಚರ ಅಧಿಕಾರಿಯ ಪಾತ್ರವೊಂದು ಮಹತ್ವದ್ದಾಗಿತ್ತು. ಇದನ್ನು ವಿಶೇಷವಾಗಿಯೇ ಕಟ್ಟಿ ಕೊಡಬೇಕೆಂಬ ಹಂಬಲ ಹೊಂದಿದ್ದ ಚಿತ್ರತಂಡ ಅದಕ್ಕಾಗಿ ಕಲಾವಿದರ ಹುಡುಕಾಟದಲ್ಲಿತ್ತು. ಕಡೆಗೂ ಅದಕ್ಕೆ ರಘು ದೀಕ್ಷಿತ್ ನಿಕ್ಕಿಯಾಗಿದ್ದಾರೆ.
ಈ ಪಾತ್ರವೇನೂ ಕಡಿಮೆಯದ್ದಲ್ಲ. ಇಂಡಿಯನ್ ಜೇಮ್ಸ್ ಬಾಂಡ್ ಎಂದೇ ಹೆಸರಾಗಿರೋ ಬೇಹುಗಾರಿಕಾ ಅಧಿಕಾರಿ, ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರರೂ ಆಗಿರುವ ಅಜಿತ್ ಧೋವಲ್ ಅವರನ್ನು ಈ ಪಾತ್ರ ಹೋಲುತ್ತದೆಯಂತೆ. ಧನಕುಮಾರ್ ನಿರ್ದೇಶನದ ಈ ಚಿತ್ರದಲ್ಲಿ ರಘು ದೀಕ್ಷಿತ್ ನಟಿಸುತ್ತಿರೋದು ಪಕ್ಕಾ. ಯಾಕೆಂದರೆ ಚಿತ್ರ ತಂಡವೇ ಈ ಫೋಟೋಗಳನ್ನು ಜಾಹೀರು ಮಾಡಿದೆ. ಆದರೆ ಈ ಪಾತ್ರದ ವಿಶೇಷತೆಗಳೇನೆಂಬುದು ಚಿತ್ರತಂಡದ ಕಡೆಯಿಂದಲೇ ಗೊತ್ತಾಗಬೇಕಿದೆ.