Tag: raghavendra kini

  • ಜ್ಞಾನ ದೀವಿಗೆಗೆ ಗೌರವ ಧನದ  ಜೊತೆ 2 ಟ್ಯಾಬ್ ಕೊಟ್ಟ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ

    ಜ್ಞಾನ ದೀವಿಗೆಗೆ ಗೌರವ ಧನದ ಜೊತೆ 2 ಟ್ಯಾಬ್ ಕೊಟ್ಟ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ

    ಉಡುಪಿ: ಪಬ್ಲಿಕ್ ಟಿವಿ ರಾಜ್ಯದಲ್ಲೇ ಒಂದು ಕ್ರಾಂತಿಕಾರಿ ಹೆಜ್ಜೆಯನ್ನಿಟ್ಟಿದೆ. ಸರ್ಕಾರಿ ಶಾಲೆ ಎಸ್‍ಎಸ್‍ಎಲ್‍ಸಿ ಮಕ್ಕಳಿಗೆ ಉಚಿತ ಟ್ಯಾಬ್ ವಿತರಣೆ ಒಂದು ಹೋರಾಟದ ಯೋಜನೆ. ನನ್ನಂತಹ ಸಾವಿರಾರು ಜನರಿಗೆ ಕಣ್ಣು ತೆರೆಸುವ ಯೋಜನೆಯಿದೆ. ನನ್ನ ಒಂದು ತಿಂಗಳ ಗೌರವಧನ ಮತ್ತು ಎರಡು ಟ್ಯಾಬ್ ನೀಡುವುದಾಗಿ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ರಾಘವೇಂದ್ರ ಕಿಣಿ ಹೇಳಿದರು.

    ಇದು ಮಕ್ಕಳ ಭವಿಷ್ಯ ನಿರ್ಣಯವಾಗುವ ವರ್ಷ. ಸರ್ಕಾರದಿಂದ ನನಗೆ ಪ್ರತಿ ತಿಂಗಳು ಗೌರವಧನ ಬರುತ್ತದೆ. ಈ ತಿಂಗಳ ನನ್ನ ಸಂಬಳವನ್ನು ಜ್ಞಾನದೀವಿಗೆ ಕಾರ್ಯಕ್ರಮಕ್ಕೆ ನೀಡುತ್ತೇನೆ. ಇದರ ಜೊತೆಗೆ ಎರಡು ಟ್ಯಾಬ್ ನನ್ನ ವೈಯಕ್ತಿಕ ನೆಲೆಯಲ್ಲಿ ಮೂಲಕ ಸರ್ಕಾರಿ ಶಾಲೆಯ ಮಕ್ಕಳಿಗೆ ಕೊಡುತ್ತೇನೆ.

    ಇಂತಹ ಜನಪರ ಯೋಜನೆ ಮಾಧ್ಯಮದ ಮೂಲಕ ಆರಂಭವಾಗಿ ಸಮಾಜಕ್ಕೆ ಹೋದರೆ ಇದೊಂದು ಕ್ರಾಂತಿ ಆಗುತ್ತದೆ. ಸರ್ಕಾರಿ ಶಾಲೆಯ ಮಕ್ಕಳಿಗೆ ಸದುಪಯೋಗವಾಗುವ ಎಷ್ಟು ಯೋಜನೆಗಳು ಬಂದರೂ ಅದಕ್ಕೆ ಖಂಡಿತವಾಗಿ ಜನ ಬೆಂಬಲ ಕೊಡಲೇಬೇಕು. ಈ ಜನಪರ ಯೋಜನೆ ಕರ್ನಾಟಕಕ್ಕೆ ಮಾತ್ರ ಸೀಮಿತವಾಗದೆ ಇಡೀ ದೇಶದಲ್ಲಿ ಒಂದು ಸಂಚಲನ ಮೂಡಿಸುವ ಯೋಜನೆಯಾಗಲಿ. ಆಯಾಯ ರಾಜ್ಯದ ಮಾಧ್ಯಮಗಳು, ಸಂಸ್ಥೆಗಳು ಸರ್ಕಾರಗಳು ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಿ ಎಂದರು.

    ಶಾಲೆ ಆರಂಭ ಆಗುವ ಬಗ್ಗೆ ಸಾಕಷ್ಟು ಗೊಂದಲ ಪೋಷಕರಲ್ಲಿ ಮಕ್ಕಳಲ್ಲಿ ಸರ್ಕಾರದಲ್ಲಿ ಇದೆ. ಇಂತಹ ಸಂದರ್ಭದಲ್ಲಿ ಶಾಲೆಗಳನ್ನು ತೆರೆಯುವುದು ಬಹಳ ಕಷ್ಟ. ವಿದ್ಯಾಭ್ಯಾಸ ವಿಚಾರದಲ್ಲಿ ಮಕ್ಕಳ ಭವಿಷ್ಯ ಬಹಳ ಮುಖ್ಯ. ಶಾಲೆ ಆರಂಭವಾಗದಿದ್ದರೆ ಅವರ ಮುಂದಿನ ಭವಿಷ್ಯಕ್ಕೆ ಸಾಕಷ್ಟು ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ. ಇಡೀ ವರ್ಷ ಶೂನ್ಯ ವರ್ಷ ಆಗುವ ಸಾಧ್ಯತೆ ಇದೆ.

    ಶ್ರೀಮಂತರ ಮಕ್ಕಳು ಈಗಾಗಲೇ ಅತ್ಯಾಧುನಿಕ ತಂತ್ರಜ್ಞಾನಕ್ಕೆ ತೆರೆದುಕೊಂಡಿದ್ದಾರೆ. ಮಧ್ಯಮ ವರ್ಗದ ಮಕ್ಕಳು ಸಾಲ ಮಾಡಿಯಾದರು ಮಕ್ಕಳಿಗೆ ಲ್ಯಾಪ್ಟಾಪ್ ಟ್ಯಾಬ್ ಮೊಬೈಲ್ ಕೊಡಿಸಿದ್ದಾರೆ. ಆದರೆ ಸರ್ಕಾರಿ ಶಾಲೆಗೆ ಹೋಗುವ ಕಡುಬಡ ಮಕ್ಕಳು ಎಲ್ಲಾ ಶಿಕ್ಷಣದಿಂದ ವಂಚಿತರಾಗಿದ್ದಾರೆ. ಈಗ ಕೊರೊನಾ ಸಂಕಷ್ಟ ಇದೆ. ಎಲ್ಲರನ್ನೂ ಆರ್ಥಿಕ ಸಂಕಷ್ಟ ಇದೆ. ಈ ನಡುವೆಯೂ ಸಹಾಯ ಮಾಡುವ ದೊಡ್ಡ ಮನಸ್ಸು ಮಾಡಬೇಕು.

    ಎಲ್ಲವನ್ನು ಸರ್ಕಾರನೇ ಕೊಡಬೇಕು ಎಂದು ಒತ್ತಡ ಹಾಕಲು ಸಾಧ್ಯವಿಲ್ಲ. ಸಿರಿವಂತರು ಧನವಂತರು ತಮ್ಮ ಬಳಿ ಹೆಚ್ಚುವರಿ ಹಣ ಇದ್ದವರು ತಮ್ಮ ಕೈಲಾದ ಸಹಾಯವನ್ನು ಬಡಮಕ್ಕಳಿಗೆ ಸಹಾಯ ಮಾಡಿ. ಆರಂಭವಾದ ಯೋಜನೆಯನ್ನು ಸರಕಾರ ಮುಂದೆ ಕೈಗೆತ್ತುಕೊಂಡು ಪ್ರತಿಯೊಬ್ಬರಿಗೂ ಕೂಡ ಜ್ಞಾನ ದೀವಿಗೆ ಟ್ಯಾಬ್ ಯೋಜನೆ ತಲುಪಬೇಕು. ಯೋಜನೆಗೆ ದಾರಿ ಗೊತ್ತಾಗಿದೆ ಆ ದಾರಿಯ ಮೂಲಕ ಮುನ್ನಡೆಯಬೇಕಾಗಿದೆ ಎಂದರು.