Tag: raghavendra hitnal

  • ಕಾಂಗ್ರೆಸ್‌ನಲ್ಲೇ ಒಳ ರಾಜಕಾರಣ| ತಗ್ಗಿದ ಭೀಮಾನಾಯ್ಕ್ ಬಲ- ರಾಘವೇಂದ್ರಗೆ ರಾಬಕೊವಿ ಫಲ

    ಕಾಂಗ್ರೆಸ್‌ನಲ್ಲೇ ಒಳ ರಾಜಕಾರಣ| ತಗ್ಗಿದ ಭೀಮಾನಾಯ್ಕ್ ಬಲ- ರಾಘವೇಂದ್ರಗೆ ರಾಬಕೊವಿ ಫಲ

    – ಅವಿರೋಧವಾಗಿ ಹಿಟ್ನಾಳ್ ಆಯ್ಕೆ
    – ಧಮ್ಮು ತಾಕತ್ತು ಏನೆಂದು ತೋರಿಸಿದ್ದೇನೆ
    – ಹಾಲು ಒಕ್ಕೂಟದ ಕಚೇರಿಗೆ ಬಾರದ ಭೀಮಾನಾಯ್ಕ್‌

    ಬಳ್ಳಾರಿ: ರಾಯಚೂರು, ಬಳ್ಳಾರಿ, ಕೊಪ್ಪಳ ಹಾಗೂ ವಿಜಯನಗರ(ರಾಬಕೊವಿ) ಹಾಲು ಒಕ್ಕೂಟದ ಅಧ್ಯಕ್ಷ ಸ್ಥಾನ ನಿರೀಕ್ಷೆಯಂತೆ ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ್ (Raghavendra Hitnal) ಪಾಲಾಗಿದೆ.

    ಕಳೆದ ಎಂಟು ವರ್ಷಗಳಿಂದ ರಾಬಕೊವಿ ಹಾಗೂ ಐದು ವರ್ಷ ರಾಜ್ಯ ಕೆಎಂಎಫ್ ಅಧ್ಯಕ್ಷ ಸ್ಥಾನವನ್ನು ಹಿಡಿತದಲ್ಲಿಟ್ಟುಕೊಂಡಿದ್ದ ಮಾಜಿ ಶಾಸಕ ಭೀಮಾನಾಯ್ಕ್ (Bheema Naik) ಈ ಬಾರಿಯೂ ಅಧ್ಯಕ್ಷ ಸ್ಥಾನ ಅಲಂಕರಿಸುವ ವಿಶ್ವಾಸದಲ್ಲಿದ್ದರು. ಆದರೆ ಅಧ್ಯಕ್ಷರಾಗಲು ಬೇಕಿರುವ ನಿರ್ದೇಶಕರ ಸಂಖ್ಯಾಬಲ ಇಲ್ಲದ ಕಾರಣ ಕೆಎಂಫ್ ಮೇಲಿನ ಅವರ ಭೀಮಬಲವನ್ನು ಕುಸಿಯುವಂತೆ ಮಾಡಿತು.

    ಕೊನೆಗಳಿಗೆವರೆಗೂ ಕೆಲವು ನಿರ್ದೇಶಕರು ಅವರ ಪರ ಬರಬಹುದು ಎನ್ನುವ ಕಾರಣಕ್ಕೆ ಬಳ್ಳಾರಿವರೆಗೂ ಬಂದಿದ್ದ ಭೀಮಾನಾಯ್ಕ್ ರಾಬಕೊವಿ ಹಾಲು ಒಕ್ಕೂಟದ ಕಚೇರಿವರೆಗೂ ಬರಲಿಲ್ಲ. ಅಲ್ಲದೇ ಬಳ್ಳಾರಿ ಸೇರಿ ಕೊಪ್ಪಳ, ರಾಯಚೂರು ಜಿಲ್ಲೆಯ ಕಾಂಗ್ರೆಸ್ (Congress0 ನಾಯಕರ ಒಳ ರಾಜಕಾರಣ ಭೀಮಾನಾಯ್ಕ್‌ಗೆ ಭಾರೀ ಮುಖಭಂಗವನ್ನುಂಟು ಮಾಡಿತು. ರಾಬಕೊವಿ ಅಧ್ಯಕ್ಷ ಸ್ಥಾನ ಅಲಂಕರಿಸಬೇಕು ಎನ್ನುವ ಲೆಕ್ಕಚಾರವನ್ನೇ ಬುಡಮೇಲು ಮಾಡಿತು. ಇದೇ ಕಾರಣಕ್ಕೆ ಒಕ್ಕೂಟದ ಕಚೇರಿಗೂ ಕಾಲಿಡದ ಭೀಮಾನಾಯ್ಕ್ ಖಾಸಗಿ ಹೋಟೆಲ್‌ನಲ್ಲಿ ಉಳಿದು ವಾಪಸ್‌ ಸ್ವಕ್ಷೇತ್ರಕ್ಕೆ ಮರಳಿದರು. ಇದನ್ನೂ ಓದಿ: ಒಡಿಶಾ | ಅರಣ್ಯ ಅಧಿಕಾರಿ ಮನೆ ಮೇಲೆ ವಿಜಿಲೆನ್ಸ್ ದಾಳಿ – ಸಂಪತ್ತಿನ ಖಜಾನೆ ಪತ್ತೆ!

    8 ಜನರ ಬೆಂಬಲ:
    ರಾಬಕೊವಿ ಹಾಲು ಒಕ್ಕೂಟಕ್ಕೆ ಒಟ್ಟು 12 ನಿರ್ದೇಶಕ ಸ್ಥಾನಗಳಿದ್ದು, 1 ಸರ್ಕಾರಿ ನಾಮ ನಿರ್ದೇಶನ, 5 ಸರ್ಕಾರಿ ಅಧಿಕಾರಿಗಳ ವೋಟ್‌ಗಳಿವೆ. ಆದರೆ ಚುನಾಯಿತ 12 ನಿರ್ದೇಶಕರ ಪೈಕಿ 7 ನಿರ್ದೇಶಕರು, ರಾಘವೇಂದ್ರ ಹಿಟ್ನಾಳ್ ಪರ ಮತ್ತು 5 ನಿರ್ದೇಶಕರು ಭೀಮಾನಾಯ್ಕ್ ಪರ ಇದ್ದರು. ರಾಘವೇಂದ್ರ ಹಿಟ್ನಾಳ್‌ರನ್ನು ನಾಮನಿರ್ದೇಶನ ಸದಸ್ಯರಾಗಿ ಸರ್ಕಾರ ನೇಮಕ ಮಾಡಿದ್ದರಿಂದ ಹಿಟ್ನಾಳ್ ಸದಸ್ಯ ಬಲ 8ಕ್ಕೆ ಏರಿಕೆಯಾಯಿತು. ಹೀಗಾಗಿ ಬಹುಮತ ಇಲ್ಲ ಎನ್ನುವ ಸುಳಿವು ಅರಿತು ಭೀಮಾನಾಯ್ಕ್ ನಾಮಪತ್ರ ಸಲ್ಲಿಸಲು ಆಗಮಿಸಲೇ ಇಲ್ಲ. ಇದೇ ಕಾರಣಕ್ಕೆ ರಾಬಕೊವಿಗೆ ರಾಘವೇಂದ್ರ ಹಿಟ್ನಾಳ್ ಅನಾಯಸವಾಗಿ, ಅವಿರೋಧವಾಗಿ ಅಧ್ಯಕ್ಷರಾಗಿ ಆಯ್ಕೆಯಾದರು.

    ಒಳ ರಾಜಕಾರಣದ ಪೆಟ್ಟು:
    ರಾಘವೇಂದ್ರ ಹಿಟ್ನಾಳ್ ರಾಬಕೊವಿ ಅಧ್ಯಕ್ಷರಾಗಿ ಆಯ್ಕೆಯಾಗುವುದರ ಹಿಂದೆ ನಾಲ್ಕು ಜಿಲ್ಲೆಗಳ ಒಳ ರಾಜಕಾರಣ ಕೆಲಸ ಮಾಡಿದೆ. ವಿಶೇಷವಾಗಿ ಬಳ್ಳಾರಿ, ಕೊಪ್ಪಳದಲ್ಲಿನ ಕೆಲವು ಕಾಂಗ್ರೆಸ್ ಮುಖಂಡರು ಹಾಗೂ ಸ್ವತಃ ಕಾಂಗ್ರೆಸ್‌ನವರೇ ಗುನ್ನಾ ಇಟ್ಟಿದ್ದಾರೆ. ಇತ್ತೀಚೆಗೆ ಭೀಮಾನಾಯ್ಕ್ ಅಖಂಡ ಬಳ್ಳಾರಿ ಜಿಲ್ಲೆಯ ಯಾವ ಶಾಸಕರನ್ನು ವಿಶ್ವಾಸಕ್ಕೆ ಪಡೆಯಲಿಲ್ಲ. ಮಂತ್ರಿಯಂತೆ ವರ್ತಿಸುವ ಸ್ವಭಾವ ಭೀಮಾನಾಯ್ಕ್‌ಗೆ ತಿರುಗುಬಾಣವಾಗಿದೆ. ಇದಕ್ಕೆ ಪುಷ್ಟಿ ಎನ್ನುವಂತೆ ರಾಬಕೊವಿ ಅಧ್ಯಕ್ಷರಾಗಲು ಬಂದ ಕೊಪ್ಪಳ ಶಾಸಕ ಹಿಟ್ನಾಳ್ ಮತ್ತು ಅವರ ಬೆಂಬಲಿಗರಿಗೆ ಬಳ್ಳಾರಿ ಗ್ರಾಮೀಣ ಶಾಸಕ ಬಿ.ನಾಗೇಂದ್ರ ಅವರೇ ಅತಿಥ್ಯ ಕಲ್ಪಿಸಿದ್ದು ಕಂಡು ಬಂತು. ಇದನ್ನೂ ಓದಿ: 15 ವರ್ಷದಿಂದ ನಡೆಯುತ್ತಿದೆ ಬಳ್ಳಾರಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಾಮಗಾರಿ- ತಲೆ ಕೆಡಿಸಿಕೊಳ್ಳದ ಜನಪ್ರತಿನಿಧಿಗಳು

    ಅವಿರೋಧ ಆಯ್ಕೆ:
    ರಾಯಚೂರು, ಬಳ್ಳಾರಿ, ಕೊಪ್ಪಳ ಮತ್ತು ವಿಜಯನಗರ ಹಾಲು ಒಕ್ಕೂಟದ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಶಾಸಕ ರಾಘವೇಂದ್ರ ಹಿಟ್ನಾಳ್, ಉಪಾಧ್ಯಕ್ಷರಾಗಿ ಎನ್.ಸತ್ಯನಾರಾಯಣ ಅವಿರೋಧವಾಗಿ ಆಯ್ಕೆಯಾದರು.

    ಚುನಾವಣೆ ನಿಗದಿಯಂತೆ ಬೆಳಗ್ಗೆ 10 ಗಂಟೆಗೆ ಹಾಲು ಒಕ್ಕೂಟದ ಕಚೇರಿಯಲ್ಲಿ ಚುನಾವಣೆ ಅಧಿಕಾರಿ ಇರುವ ಕೊಠಡಿಗೆ ಆಗಮಿಸಿದ ರಾಘವೇಂದ್ರ ಹಿಟ್ನಾಳ್ ಅಧ್ಯಕ್ಷ ಸ್ಥಾನಕ್ಕೆ, ಎನ್.ಸತ್ಯನಾರಾಯಣ ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದರು. ಎದುರಾಗಿ ಯಾವುದೇ ನಾಮಪತ್ರ ಸಲ್ಲಿಸದೇ ಇರುವುದರಿಂದ 1 ಗಂಟೆಗೆ ಚುನಾವಣೆ ಪ್ರಕ್ರಿಯೆ ಆರಂಭವಾಯಿತು. ಚುನಾವಣೆಗೆ ಬೇಕಿದ್ದ ಬಹುಮತ ಇರುವ ಕಾರಣಕ್ಕೆ ತಲೆಗಳ ಲೆಕ್ಕ ಹಾಕಿ ಎದುರಾಗಿ ಯಾರೂ ನಾಮ ಪತ್ರ ಸಲ್ಲಿಸದೇ ಇರದೇ ಇರುವ ಕಾರಣಕ್ಕೆ ಇಬ್ಬರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣೆ ಅಧಿಕಾರಿ, ಎಸಿ ಪ್ರಮೋದ ಘೋಷಣೆ ಮಾಡಿದರು.

    ವಿಜಯೋತ್ಸವ‌ ಆಚರಣೆ:
    ರಾಬಕೊವಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಅವಿರೋಧ ಆಯ್ಕೆ ಪ್ರಕಟವಾಗುತ್ತಿದ್ದಂತೆಯೇ ಕಚೇರಿ ಮುಂದೆ ಜಮಾಯಿಸಿದ್ದ ನೂರಾರು ಕಾರ್ಯಕರ್ತರು, ಹಿಟ್ನಾಳ್ ಬೆಂಬಲಿಗರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಬಳ್ಳಾರಿ ನಗರ ಶಾಸಕ ಭರತರೆಡ್ಡಿ, ಕಂಪ್ಲಿ ಶಾಸಕ ಜೆಎನ್ ಗಣೇಶ ಸೇರಿ ಬಳ್ಳಾರಿ, ಕೊಪ್ಪಳ, ರಾಯಚೂರು, ವಿಜಯನಗರದ ಹಲವು ಕಾಂಗ್ರೆಸ್ ಮುಖಂಡರು ಆಗಮಿಸಿ ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಅಭಿನಂದಿಸಿದರು.


    ಸವಾಲು ಗೆದ್ದಿದ್ದೇನೆ:
    ತಾಕತ್ತು, ಧಮ್ಮು ತೋರಿಸಲು ಅಧ್ಯಕ್ಷನಾದೆ ಎಂದ ಹಿಟ್ನಾಳ್- ಈ ಹಿಂದಿನ ಅಧ್ಯಕ್ಷರು ರಾಬಕೊವಿ ಹಾಲು ಒಕ್ಕೂಟಕ್ಕೆ ನಾಮಪತ್ರ ಸಲ್ಲಿಸಲು, ಅಧ್ಯಕ್ಷರಾಗಲು ದಮ್ಮು, ತಾಕತ್ತು ಬೇಕು ಎಂದು ಸವಾಲು ಹಾಕಿದ್ದರು. ಇದೇ ಕಾರಣಕ್ಕೆ ಅನಿರೀಕ್ಷಿತವಾಗಿ ನಾನು ಸಹಕಾರ ಕ್ಷೇತ್ರಕ್ಕೆ ಬಂದು ನನ್ನ ದಮ್ಮು, ತಾಕತ್ತು ಪ್ರದರ್ಶನ ಮಾಡಿದ್ದೇನೆ ಎಂದು ಭೀಮಾನಾಯ್ಕ್ ವಿರುದ್ದ ಕೊಪ್ಪಳ ಶಾಸಕ, ರಾಬಕೊವಿ ಒಕ್ಕೂಟದ ಅಧ್ಯಕ್ಷ ರಾಘವೇಂದ್ರ ಹಿಟ್ನಾಳ್ ಆಕ್ರೋಶ ಹೊರ ಹಾಕಿದರು.

    ರಾಬಕೊವಿ ಕಚೇರಿಯಲ್ಲಿ ನಡೆದ ಚುನಾವಣೆಯ ಫಲಿತಾಂಶದ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರಾಘವೇಂದ್ರ ಹಿಟ್ನಾಳ್, ಎಲ್ಲರೂ ಕಾಂಗ್ರೆಸ್ ಪಕ್ಷದವರೇ ಇರುವುದು ನಿಜ. ಆದರೆ ಇಲ್ಲಿನ ಒಕ್ಕೂಟಕ್ಕೆ ಬರಲು ದಮ್ಮು, ತಾಕತ್ತು ಇರಬೇಕು ಎಂದು ಸವಾಲು ಹಾಕಿದ್ದರು. ನಾನು ಈ ಸವಾಲು ಗೆದ್ದಿದ್ದೇನೆ ಮತ್ತು ಇದನ್ನು ಇಷ್ಟಕ್ಕೆ ಬಿಡುತ್ತೇನೆ ಎಂದರು.

    ಇಲ್ಲಿ ಯಾರನ್ನೂ ತುಳಿಯುವ ಮಾತು ಬರುವುದಿಲ್ಲ. ಸಿಎಂ, ಡಿಸಿಎಂ ಹಾಗೂ ನಾಲ್ಕು ಜಿಲ್ಲೆಯ ಸಚಿವರು, ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಇಲ್ಲಿ ಕೆಲಸ ಮಾಡುತ್ತೇನೆ. ರಾಬಕೊವಿದಲ್ಲಿ ಹಲವು ಸಮಸ್ಯೆಗಳಿವೆ. ಇದು ಸಾಲದಲ್ಲಿದ್ದು ಇದೆಲ್ಲವನ್ನೂ ಸರಿಪಡಿಸುತ್ತೇನೆ. ಬಳ್ಳಾರಿಗೆ ಅನ್ಯಾಯವಾಗಿರುವುದನ್ನು ಸರಿಪಡಿಸುವ ಕೆಲಸ ಮಾಡುತ್ತೇನೆ. ರಾಬಕೊವಿಗೆ ಮಂಜೂರಾದ ಮೆಗಾ ಡೈರಿ ಬಳ್ಳಾರಿಯಲ್ಲೇ ಮಾಡುತ್ತೇವೆ. ಸಿಎಂ, ಜಿಲ್ಲಾ ಉಸ್ತುವಾರಿ ಸಚಿವರ ಸಭೆ ಬಳಿಕ ಎಲ್ಲಾ ತೀರ್ಮಾನ ಆಗಿದೆ ಎಂದು ಹೇಳಿದರು.

  • ಪ್ರಿಯಾಂಕಾ ಗಾಂಧಿ ಸ್ಪರ್ಧಿಸಲು ಕೊಪ್ಪಳಕ್ಕೆ ಬಂದರೆ ರೆಡ್ ಕಾರ್ಪೆಟ್ ಸ್ವಾಗತ: ರಾಘವೇಂದ್ರ ಹಿಟ್ನಾಳ್

    ಪ್ರಿಯಾಂಕಾ ಗಾಂಧಿ ಸ್ಪರ್ಧಿಸಲು ಕೊಪ್ಪಳಕ್ಕೆ ಬಂದರೆ ರೆಡ್ ಕಾರ್ಪೆಟ್ ಸ್ವಾಗತ: ರಾಘವೇಂದ್ರ ಹಿಟ್ನಾಳ್

    ಬೆಂಗಳೂರು: ಕೊಪ್ಪಳ (Koppal) ಲೋಕಸಭಾ ಕ್ಷೇತ್ರದಿಂದ ಎಐಸಿಸಿ ನಾಯಕಿ ಪ್ರಿಯಾಂಕಾ ಗಾಂಧಿಯವರು (Priyanka Gandhi) ಸ್ಪರ್ಧೆ ಮಾಡಲು ಮುಂದಾದರೆ ರೆಡ್ ಕಾರ್ಪೆಟ್ ಹಾಕಿ ಸ್ವಾಗತ ಮಾಡುತ್ತೇವೆ ಎಂದು ಶಾಸಕ ರಾಘವೇಂದ್ರ ಹಿಟ್ನಾಳ್ (Raghavendra Hitnal) ಹೇಳಿದ್ದಾರೆ.

    ಪ್ರಿಯಾಂಕಾ ಗಾಂಧಿಯವರು ಕೊಪ್ಪಳದಿಂದ ಸ್ಪರ್ಧೆ ಮಾಡುವ ಸುದ್ದಿ ಬೆನ್ನಲ್ಲೇ ಡಿಸಿಎಂ ಡಿ.ಕೆ ಶಿವಕುಮಾರ್ ಅವರನ್ನು ಸದಾಶಿವನಗರ ನಿವಾಸದಲ್ಲಿ ಅವರು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಿಯಾಂಕಾ ಗಾಂಧಿಯವರು ಕೊಪ್ಪಳಕ್ಕೆ ಬರುವುದಾದರೆ ರೆಡ್ ಕಾರ್ಪೆಟ್ ಹಾಕಿ ಸ್ವಾಗತಿಸುತ್ತೇವೆ. ಇಲ್ಲಿಂದ ಅವರು ಸ್ಪರ್ಧಿಸಿದರೆ ಹೆಚ್ಚು ಅಂತರದಿಂದ ಗೆಲ್ಲಿಸುತ್ತೇವೆ ಎಂದಿದ್ದಾರೆ. ಇದನ್ನೂ ಓದಿ: ಡಿ.ಕೆ ಶಿವಕುಮಾರ್ ಮುಖ್ಯಮಂತ್ರಿ ಆಗಲಿ: ಅಶ್ವಥ್ ನಾರಾಯಣ್

    ಸಹೋದರ ಹಾಗೂ ಕಳೆದ ಬಾರಿ ಕೊಪ್ಪಳ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆಗಿದ್ದ ರಾಜಶೇಖರ್ ಹಿಟ್ನಾಳ್ ಜೊತೆ ಬಂದು ಡಿ.ಕೆ ಶಿವಕುಮಾರ್ ಅವರನ್ನು ಭೇಟಿಯಾಗಿದ್ದಾರೆ. ಈ ಬಾರಿಯೂ ಸಹೋದರ ರಾಜಶೇಖರ್ ಹಿಟ್ನಾಳ್‍ಗೆ ಟಿಕೆಟ್ ನೀಡುವಂತೆ ಮನವಿ ಮಾಡಿದ್ದಾರೆ. ನನ್ನ ಸಹೋದರನಿಗೂ ಟಿಕೆಟ್ ಕೇಳಿದ್ದೇನೆ. ಈ ಬಗ್ಗೆ ಹೈಕಮಾಂಡ್ ತೀರ್ಮಾನದಂತೆ ನಡೆದುಕೊಳ್ಳುತ್ತೇನೆ ಎಂದಿದ್ದಾರೆ.

    ಕೊಪ್ಪಳದಲ್ಲಿ ಪ್ರಿಯಾಂಕಾ ಗಾಂಧಿ ಸ್ಪರ್ಧೆ ಸಂಬಂಧ ಎಐಸಿಸಿ ಸರ್ವೆ ನಡೆಸಿದೆ ಎಂಬ ಎಕ್ಸ್‌ಕ್ಲೂಸಿವ್‌ ಸುದ್ದಿಯನ್ನು ʻಪಬ್ಲಿಕ್ ಟಿವಿʼ ಈ ಹಿಂದೆ ಪ್ರಸಾರ ಮಾಡಿತ್ತು. ಈ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ, ಸರ್ವೆ ವಿಚಾರ ಗೊತ್ತಿಲ್ಲ ಎಂದು ಅವರು ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ: ರಾಮನ ಪ್ರಾಣಪ್ರತಿಷ್ಠೆಗೆ ದಿನಗಣನೆ- ಸೀತಾ ಮಾತೆಯ ರಕ್ಷಣೆಗೆ ಜಟಾಯು ಹೋರಾಡಿದ್ದ ಸ್ಥಳಕ್ಕೆ ಮೋದಿ ಭೇಟಿ

  • ಮತ್ತೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಬೇಕು: ರಾಘವೇಂದ್ರ ಹಿಟ್ನಾಳ್

    ಮತ್ತೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಬೇಕು: ರಾಘವೇಂದ್ರ ಹಿಟ್ನಾಳ್

    ಕೊಪ್ಪಳ: ಆರ್ಥಿಕ ವ್ಯವಸ್ಥೆ ಸರಿ ಹೋಗಬೇಕೆಂದರೆ ಮತ್ತೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಬೇಕು ಎಂದು ಶಾಸಕ ರಾಘವೇಂದ್ರ ಹಿಟ್ನಾಳ್ ಹೇಳಿದ್ದಾರೆ.

    ಕೊಪ್ಪಳದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಅಧಿಕಾರಕ್ಕೆ ಬಂದು ಮತ್ತೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಬೇಕು. ಇದು ಜನರ ಕೂಗು, ಅದರ ಜೊತೆ ನಮ್ಮ ಬೆಂಬಲ ಕೂಡ ಇದೆ. ಸಿದ್ದರಾಮಯ್ಯ ಐದು ವರ್ಷದಲ್ಲಿ 15 ಲಕ್ಷ ಮನೆ ಕೊಟ್ಟಿದ್ದರು. ಆದರೆ ಬಿಜೆಪಿ ಆಡಳಿತದಿಂದ ಜನ ರೋಸಿ ಹೋಗಿದ್ದಾರೆ. ಸಿದ್ದರಾಮಯ್ಯ ಅವಧಿಯಲ್ಲಿ ಅನ್ನ ಭಾಗ್ಯ, ಕ್ಷೀರ ಭಾಗ್ಯ, ಸ್ಕೀಮ್ ಇದ್ದವು ಎಂದಿದ್ದಾರೆ.

    SIDDARAMAIAH

    ಸೀನಿಯರ್ ಅಂದ ಮೇಲೆ ಮುಖ್ಯಮಂತ್ರಿ ಹುದ್ದೆಗೆ ಪೈಪೋಟಿ ಇದ್ದೆ ಇರುತ್ತದೆ. ಅದನ್ನು ಹೈಕಮಾಂಡ್ ತೀರ್ಮಾನ ಮಾಡುತ್ತದೆ ಮತ್ತು ಶಾಸಕರ ಅಭಿಪ್ರಾಯ ತೆಗೆದುಕೊಳ್ಳುತ್ತಾರೆ. ಕಾಂಗ್ರೆಸ್ ಸರ್ಕಾರ ಬರಲು ಮಾಧ್ಯಮದವರು ಕೈ ಜೋಡಿಸಿ. ಬೆಲೆ ಏರಿಕೆ ವಿರುದ್ಧ ನೀವು ಕೈ ಜೋಡಿಸಿ. ಸಿಲಿಂಡರ್ ಬೆಲೆ ನಮಗೂ ಅಷ್ಟೇ, ನಿಮಗೂ ಅಷ್ಟೇ. ರೈತರು, ಮಹಿಳೆಯರು ಕೂಡ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಬೇಕು ಅಂತ ಬಯಸಿದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಸೇತುವೆ ಮುಳುಗಿದರೂ ಲೆಕ್ಕಿಸದೇ ಬಸ್ ದಾಟಿಸಿದ ಚಾಲಕ

    ಕೊಪ್ಪಳದಲ್ಲಿ ಸುರಿದ ಭಾರೀ ಮಳೆಯಿಂದ ರೈತರಿಗೆ ಬೆಳೆ ಹಾನಿಯಾಗಿದ್ದು, ಕೊಪ್ಪಳ ಕ್ಷೇತ್ರದಲ್ಲಿ ಬ್ರಿಡ್ಜ್ ಕಂ ಬ್ಯಾರೇಜ್‍ನಿಂದ ಸಮಸ್ಯೆಯಾಗಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಹಿರೇಹಳ್ಳ ಜಲಾಶಯದಿಂದ ನೀರು ಬಿಡುಗಡೆಯಾಗಿದ್ದರಿಂದ ನೀರು ಹರಿದಿದೆ. ಈಗಾಗಲೇ ನಾವು ಅಧಿಕಾರಿಗಳಿಗೆ ಬ್ರಿಡ್ಜ್ ಕಂ ಬ್ಯಾರೇಜ್ ಗೇಟ್ ತೆರೆಯಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ. ಬ್ರಿಡ್ಜ್ ಕಂ ಬ್ಯಾರೇಜ್ ಕಾಮಗಾರಿ ಕಳಪೆ ಆಗಿಲ್ಲ. ಆದರೆ ನೀರು ಹೋಗತ್ತದೆ ಎನ್ನುವುದಕ್ಕೆ ರೈತರು ಗೇಟ್ ತೆರೆಯಲು ಬಿಡಲ್ಲ. ಬ್ರಿಡ್ಜ್ ಕಂ ಬ್ಯಾರೇಜ್ ಗೇಟ್‍ಗಳು ಜಾಮ್ ಆಗಿವೆ. ಅಧಿಕಾರಿಗಳು ಸರ್ವೆ ಕಾರ್ಯ ಮಾಡುತ್ತಿದ್ದಾರೆ. ಸರ್ಕಾರ ಕೂಡಲೇ ಸರ್ಕಾರ ಪರಿಹಾರ ಕೊಡಬೇಕು ಎಂದು ನಾನು ಮನವಿ ಮಾಡುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: ಮಂಗಳಮುಖಿಯರು ಹೊಡೆದಾಡಿದ್ರೆ ಯಾರನ್ನ ಕಳುಹಿಸಲಿ: ಸಿಎಂ ಇಬ್ರಾಹಿಂ

  • ಸಿದ್ದರಾಮಯ್ಯ ರಾಜ್ಯದ ಯಾವ ಮೂಲೆಯಲ್ಲಿ ಚುನಾವಣೆಗೆ ನಿಂತರೂ ಗೆಲ್ತಾರೆ: ಹಿಟ್ನಾಳ್

    ಸಿದ್ದರಾಮಯ್ಯ ರಾಜ್ಯದ ಯಾವ ಮೂಲೆಯಲ್ಲಿ ಚುನಾವಣೆಗೆ ನಿಂತರೂ ಗೆಲ್ತಾರೆ: ಹಿಟ್ನಾಳ್

    -ಸಿದ್ದರಾಮಯ್ಯ ಅವರೊಂದು ಶಕ್ತಿ

    ರಾಯಚೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಚುನಾವಣೆಗೆ ರಾಜ್ಯದ ಯಾವ ಮೂಲೆಯಲ್ಲಿ ನಿಂತರೂ ಗೆಲ್ಲುತ್ತಾರೆ ಎಂದು ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ್ ಭರವಸೆ ವ್ಯಕ್ತಪಡಿಸಿದ್ದಾರೆ.

    ಸಿದ್ದರಾಮಯ್ಯ ಬದಾಮಿಯಲ್ಲಿ ಸ್ಪರ್ಧೆಗೆ ಚಿಮ್ಮನಕಟ್ಟಿ ವಿರೋಧ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ರಾಜ್ಯದ ಯಾವ ಕ್ಷೇತ್ರದಲ್ಲಿ ಸ್ಪರ್ಧಿಸಿದರೂ ಕೂಡ ಸಿದ್ದರಾಮಯ್ಯ ಗೆಲ್ಲುತ್ತಾರೆ. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ನೀಡಿದ ಆಡಳಿತವೇ ಇದಕ್ಕೆ ಕಾರಣ. ರಾಜ್ಯದ ಕಟ್ಟ ಕಡೆಯ ಪ್ರಜೆಗೂ ಅವರ ಕೆಲಸ ತಲುಪಿದೆ. ಕಳೆದ 2018ರಲ್ಲಿ ಕೊಪ್ಪಳ, ಕುಷ್ಟಗಿಯಲ್ಲಿ ಸ್ಪರ್ಧೆ ಮಾಡುವಂತೆ ನಾನೇ ಕೇಳಿಕೊಂಡಿದ್ದೆ ಅದೇ ಸಮಯಕ್ಕೆ ಇಡೀ ಬದಾಮಿ ಜನರು ಸಿದ್ದರಾಮಯ್ಯ ಸ್ಪರ್ಧೆಗೆ ಒತ್ತಾಯ ಮಾಡಿದ್ದರು. ಹಾಗಾಗಿ ಬಾದಾಮಿಯಲ್ಲಿ ಸಿದ್ದರಾಮಯ್ಯ ಸ್ಪರ್ದಿಸಿದ್ದರು ಎಂದರು. ಇದನ್ನೂ ಓದಿ: ಕಾಂಗ್ರೆಸ್‍ ಸೋಲು ಖಚಿತ: ರಮೇಶ್ ಜಾರಕಿಹೊಳಿ

    ಕೊಪ್ಪಳಕ್ಕೆ ಸಿದ್ದರಾಮಯ್ಯ ಬರುವುದಾದರೆ ಕೊಪ್ಪಳವನ್ನು ಬಿಟ್ಟು ಕೊಡುವುದರ ಜೊತೆಗೆ ಅತ್ಯಂತ ಹೆಚ್ಚು ಅಂತರದಿಂದ ಗೆಲ್ಲಿಸುತ್ತೇವೆ. ನಾನು ಸಂತೋಷದಿಂದ ಕ್ಷೇತ್ರ ಬಿಟ್ಟು ಕೊಡುತ್ತೇನೆ. ಬರೀ ನಾನು ಅಷ್ಟೇ ಅಲ್ಲ. ಬೈರತಿ ಹೆಬ್ಬಾಳಕ್ಕೆ ಬನ್ನಿ ಎಂದಿದ್ದಾರೆ. ಜಮೀರ್ ಅಹಮದ್ ಕೂಡ ಬೇಡಿಕೆ ಇಟ್ಟಿದ್ದಾರೆ ಸಿದ್ದರಾಮಯ್ಯ ಅವರೊಂದು ಶಕ್ತಿ. ಅವರು ಸ್ಪರ್ಧೆ ಮಾಡುವ ಭಾಗದಲ್ಲಿ ಅಭಿವೃದ್ಧಿ ಆಗುತ್ತದೆ. ಸಿದ್ದರಾಮಯ್ಯರಿಗೆ ಕ್ಷೇತ್ರ ಇಲ್ಲ ಎಂಬುದು ಮಾಧ್ಯಮಗಳ ಸೃಷ್ಟಿ ಮಾತ್ರ ಅವರನ್ನು ಎಲ್ಲಿ ನಿಲ್ಲಿಸಬೇಕು ಎಂಬುದರ ಬಗ್ಗೆ ಅವರ ಬೆಂಬಲಿಗರಲ್ಲಿ ಜಟಾಪಟಿ ಇದೆ ಎಂದು ಅಭಿಪ್ರಾಯಪಟ್ಟರು. ಇದನ್ನೂ ಓದಿ: ಸ್ಪರ್ಧಿಸಿದ ಎಲ್ಲಾ ಕ್ಷೇತ್ರಗಳಲ್ಲೂ ಬಿಜೆಪಿ ಗೆಲ್ಲುತ್ತೆ: ಸಿಎಂ ವಿಶ್ವಾಸ

    ಸಿಎಂ ಬದಲಾವಣೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಬಿಜೆಪಿ ಅಧಿಕಾರಕ್ಕೆ ಬಂದಾಗಲೆಲ್ಲ ಇಬ್ಬರು ಮೂವರು ಸಿಎಂ ಆಗಿದ್ದಾರೆ ಬಿಜೆಪಿಯಲ್ಲಿ ಗುಂಪುಗಾರಿಕೆ ಇದೆ. ಸಮಸ್ಯೆ ಇದೆ. ಇವರು ಬದಲಾಗಣೆ ಆಗುವ ನಿರೀಕ್ಷೆ ಕೂಡ ಇದೆ ಎಂದು ಮತ್ತೊಮ್ಮೆ ಸಿಎಂ ಬದಲಾವಣೆ ವಿಚಾರವನ್ನು ಮುನ್ನೆಲೆಗೆ ತಂದರು. ಇದನ್ನೂ ಓದಿ: ನಾನು ಮುಖ್ಯಮಂತ್ರಿಯಾಗುತ್ತೇನೆಂದು ಎಲ್ಲಿಯೂ ಹೇಳಿಲ್ಲ: ಮುರುಗೇಶ್ ನಿರಾಣಿ

  • ಕನಕದಾಸರ ಮೂರ್ತಿ ಪ್ರತಿಷ್ಠಾಪನೆ – ಕೊಪ್ಪಳದಲ್ಲಿ ಈಗ ರಾಜಕೀಯ ಜಿದ್ದಾಜಿದ್ದಿ

    ಕನಕದಾಸರ ಮೂರ್ತಿ ಪ್ರತಿಷ್ಠಾಪನೆ – ಕೊಪ್ಪಳದಲ್ಲಿ ಈಗ ರಾಜಕೀಯ ಜಿದ್ದಾಜಿದ್ದಿ

    ಕೊಪ್ಪಳ: ನಗರದ ಹೃದಯ ಭಾಗದಲ್ಲಿರುವ ಕೇಂದ್ರೀಯ ಬಸ್ ನಿಲ್ದಾಣ ಎದುರುಗಡೆ ಇರುವ ಕನಕದಾಸ ವೃತ್ತದ ಸ್ಥಳ ಇದೀಗ ರಾಜಕೀಯ ಜಿದ್ದಾಜಿದ್ದಿಗೆ ಕಾರಣವಾಗಿದೆ.

    1988ರಲ್ಲಿ ಅಂದಿನ ಸಾರಿಗೆ ಸಚಿವರಾಗಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕನಕದಾಸ ವೃತ್ತವನ್ನು ಉದ್ಘಾಟನೆ ಮಾಡಿದ್ದರು. ಆದರೆ ಇತ್ತೀಚಿಗೆ ಬಹುಕೋಟಿ ವೆಚ್ಚದಲ್ಲಿ ಕನಕದಾಸ ಮೂರ್ತಿಯನ್ನು ಪ್ರತಿಷ್ಠಾಪಿಸಿ, ಅದೇ ಸ್ಥಳದಲ್ಲಿಯೇ ಉದ್ಯಾನವನ ನಿರ್ಮಾಣ ಮಾಡುವ ಯೋಜನೆ ಹಮ್ಮಿಕೊಳ್ಳಲಾಗಿತ್ತು.

    ಅದರಂತೆ ಕನಕದಾಸ ವೃತ್ತದ ಹಿಂಭಾಗದಲ್ಲಿನ ನಗರಸಭೆಗೆ ಸೇರಿದ 20 ವಾಣಿಜ್ಯ ಮಳಿಗೆಗಳನ್ನು ನೆಲಸಮ ಮಾಡಲಾಗಿದೆ. ಜೊತೆಗೆ ವಾಣಿಜ್ಯ ಮಳಿಗೆಗಳ ಜಾಗದಲ್ಲಿ ಕನಕದಾಸ ಮೂರ್ತಿಯನ್ನು ಪ್ರತಿಷ್ಠಾಪಿಸಿ ವೃತ್ತ ನಿರ್ಮಾಣ ಮಾಡಲಾಗುತ್ತಿದೆ. ಈ ಹಿನ್ನಲೆಯಲ್ಲಿ ಇದಕ್ಕೆ ಇದೀಗ ಸಂಸದ ಕರಡಿ ಸಂಗಣ್ಣ ವಿರೋಧ ವ್ಯಕ್ತಪಡಿಸಿದ್ದು, ನಗರಸಭೆಯ ವಾಣಿಜ್ಯ ಮಳಿಗೆಯ ಜಾಗವನ್ನು ಅತಿಕ್ರಮಿಸಿಕೊಂಡು ಕನಕದಾಸ ವೃತ್ತ ನಿರ್ಮಾಣ ಮಾಡಲಾಗುತ್ತಿದ್ದು, ಇದರ ಬಗ್ಗೆ ತನಿಖೆ ನಡೆಸಿ ಎಂದು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಕನಕದಾಸ ವೃತ್ತ ನಿರ್ಮಾಣಕ್ಕೆ ನನ್ನ ವಿರೋಧ ಇಲ್ಲ ಆದರೆ ಸರ್ವಾಧಿಕಾರಿಯಂತೆ ನಿರ್ಧಾರ ತೆಗೆದುಕೊಳ್ಳುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದ್ದಾರೆ.

    ಸಂಸದ ಕರಡಿ ಸಂಗಣ್ಣ ಜಿಲ್ಲಾಧಿಕಾರಿಗಳಿಗೆ ಬರೆದ ಪತ್ರ ಹಿಂದೆ ರಾಜಕೀಯ ಉದ್ದೇಶ ಇರುವುದು ಸಹ ಸ್ಪಷ್ಟ. 2013 ರಲ್ಲಿ ಅವರ ವಿರುದ್ಧ ಸ್ಪರ್ಧಿಸಿ ಗೆದ್ದ ರಾಘವೇಂದ್ರ ಹಿಟ್ನಾಳ್, ಕುರುಬ ಸಮಾಜಕ್ಕೆ ಸೇರಿದವರು. ಜೊತೆಗೆ ಕರಡಿ ಸಂಗಣ್ಣ ಪ್ರಥಮ ಬಾರಿಗೆ ಶಾಸಕರಾದಾಗ ಕನಕದಾಸ ವೃತ್ತದ ಹಿಂಭಾಗದ ಸ್ಥಳದಲ್ಲಿ ವಾಣಿಜ್ಯ ಮಳಿಗೆಗಳನ್ನು ನಿರ್ಮಾಣ ಮಾಡಿಸಿದ್ದರು. ಆದರೆ ಇದೀಗ ಶಾಸಕ ರಾಘವೇಂದ್ರ ಹಿಟ್ನಾಳ್, ಕರಡಿ ಸಂಗಣ್ಣ ಕಟ್ಟಿಸಿದ್ದ ವಾಣಿಜ್ಯ ಮಳಿಗೆಗಳನ್ನು ಯಾವುದೇ ಸೂಚನೆ, ಚರ್ಚೆ ಮಾಡದೇ ನೆಲಸಮ ಮಾಡಿಸಿದ್ದಾರೆ. ಜೊತೆಗೆ ವಾಣಿಜ್ಯ ಮಳಿಗೆ ಇದ್ದ ಜಾಗವನ್ನು ಅತಿಕ್ರಮಿಸಿಕೊಂಡು ಆ ಜಾಗದಲ್ಲಿ ಕನಕದಾಸ ವೃತ್ತವನ್ನು ನಿರ್ಮಾಣ ಮಾಡಲು ಹೊರಟಿದ್ದಾರೆ ಎಂಬ ಆರೋಪ ಬಂದಿದೆ.

    ಕನಕದಾಸ ವೃತ್ತದ ಸ್ಥಳದ ಕುರಿತು ಸಂಸದ ಕರಡಿ ಸಂಗಣ್ಣ ಡಿಸಿಗೆ ಪತ್ರ ಬರೆದಿರುವುದಕ್ಕೆ ಇದೀಗ ಕುರುಬ ಸಮಾಜದವರು ಸಾಕಷ್ಟು ವಿರೋಧ ವ್ಯಕ್ತಪಡಿಸಿದ್ದಾರೆ. ಕನಕದಾಸರ ವಿಚಾರದಲ್ಲಿ ರಾಜಕಾರಣ ಮಾಡಬಾರದು, ಈ ಕೂಡಲೇ ಸಂಸದ ಕರಡಿ ಸಂಗಣ್ಣ ಕುರುಬ ಸಮಾಜದವರ ಕ್ಷಮೆ ಕೋರಬೇಕೆಂದು ಒತ್ತಾಯಿಸಿದ್ದಾರೆ. ಈ ಮುಂಚೆ ಇದ್ದ ಕನಕದಾಸ ವೃತ್ತದಲ್ಲಿ 10 ಲಕ್ಷ ವೆಚ್ಚದಲ್ಲಿ ಕಟ್ಟೆಯೊಂದನ್ನು ಕಟ್ಟಲಾಗಿತ್ತು. ಆದರೆ ಲಾಕ್‍ಡೌನ್ ವೇಳೆಯಲ್ಲಿ ಆ ಕಟ್ಟೆಯನ್ನು ಕೆಡವಲಾಗಿದ್ದು, ಹೊಸದೊಂದು ಕಟ್ಟೆಯನ್ನು ನಿರ್ಮಾಣ ಮಾಡಲಾಗುತ್ತಿದೆ. ಒಟ್ಟಿನಲ್ಲಿ ದಾರ್ಶನಿಕ ಕನಕದಾಸರ ವೃತ್ತ ಇದೀಗ ಕೊಪ್ಪಳದಲ್ಲಿ ರಾಜಕೀಯ ಜಿದ್ದಾಜಿದ್ದಿಗೆ ಕಾರಣವಾಗಿದ್ದು, ಮುಂದಿನ ದಿನಗಳಲ್ಲಿ ಇದು ಯಾವ ತಿರುವು ಪಡೆದುಕೊಳ್ಳಲಿದೆ ಎಂದು ಕಾದು ನೋಡಬೇಕಿದೆ. ಇದನ್ನೂ ಓದಿ: ಸುಮಲತಾರಿಗೆ ರಾಜಕಾರಣದಲ್ಲಿ ಅನುಭವದ ಕೊರತೆ ಇದೆ: ನಿಖಿಲ್

  • ಶಾಸಕ ರಾಘವೇಂದ್ರ ಹಿಟ್ನಾಳ್‍ಗೆ ಕೋವಿಡ್ 19 ದೃಢ

    ಶಾಸಕ ರಾಘವೇಂದ್ರ ಹಿಟ್ನಾಳ್‍ಗೆ ಕೋವಿಡ್ 19 ದೃಢ

    ಕೊಪ್ಪಳ: ಇಲ್ಲಿನ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕನಿಗೆ ಕೊರೊನಾ ಸೋಂಕು ದೃಢಪಟ್ಟಿದೆ.

    ಶಾಸಕರಿಗೆ ಕೊರೊನಾ ದೃಢಪಟ್ಟ ಮಾಹಿತಿಯನ್ನು ಜಿಲ್ಲಾಧಿಕಾರಿ ಸೂರಳ್ಕರ್ ವಿಕಾಸ್ ಕಿಶೋರ್ ಬಹಿರಂಗಪಡಿಸಿದ್ದಾರೆ. ಕಳೆದ ಎರಡು ದಿನಗಳ ಹಿಂದೆಯಷ್ಟೇ ಶಾಸಕ ರಾಘವೇಂದ್ರ ಹಿಟ್ನಾಳ್‍ಗೆ ಕೊರೊನಾ ಸೊಂಕು ತಗಲಿರುವ ಬಗ್ಗೆ ಕ್ಷೇತ್ರದಾದ್ಯಂತ ಹರಿದಾಡಿತ್ತು.

    ಈಗ ಸ್ವತಃ ಜಿಲ್ಲಾಧಿಕಾರಿಗಳೇ ಶಾಸಕರಿಗೆ ಸೋಂಕು ತಗಲಿರುವುದನ್ನು ದೃಢಪಡಿಸಿದ್ದಾರೆ. ಕೆಲದಿನಗಳ ಹಿಂದೇ ಗಂಗಾವತಿ ಶಾಸಕ ಪರಣ್ಣ ಮುನವಳ್ಳಿರವರಿಗೆ ಕೊರೊನಾ ದೃಢಪಟ್ಟಿತ್ತು. ಗಂಗಾವತಿ ಶಾಸಕರ ಪಕ್ಕದಲ್ಲಿಯೇ ಜಿಲ್ಲಾಧಿಕಾರಿಗಳ ಸಭೆಯಲ್ಲಿ ಕುಳಿತಿದ್ದರು. ಅದಕ್ಕಾಗಿ ಹೋಮ್ ಕ್ವಾರಂಟೈನ್ ಗೆ ಒಳಗಾಗಿದ್ದರು. ಇದನ್ನೂ ಓದಿ: ಗಂಗಾವತಿ ಬಿಜೆಪಿ ಶಾಸಕ ಪರಣ್ಣ ಮುನವಳ್ಳಿಗೆ ಕೊರೊನಾ ಸೋಂಕು

    ಹೋಮ್ ಕ್ವಾರಂಟೈನ್ ಮುಗಿಸಿಕೊಂಡು ಎರಡು ದಿನಗಳ ಹಿಂದೆಯಷ್ಟೇ ಕಾಟ್ರಳ್ಳಿ ಗ್ರಾಮದ ಹಾಲು ಘಟಕವನ್ನ ಉದ್ಘಾಟಿಸಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ರು. ಅದಾದ ಬಳಿಕ ಹಿಟ್ನಾಳ್‍ಗೆ ಕೊರೊನಾ ಧೃಡಪಟ್ಟಿದೆ. ಈಗ ಶಾಕಸರ ಒಡನಾಡಿಯಾಗಿದ್ದ ಕಾರ್ಯಕರ್ತರಿಗೂ ಹಾಗೂ ಹಿಂಬಾಲಕರಿಗೂ ಆತಂಕ ಶುರುವಾಗಿದೆ.

  • ಶಾಸಕ ಹಿಟ್ನಾಳ್ ಅಂಧ ದರ್ಬಾರ್- ತಮ್ಮ ಕಚೇರಿಗೆ ಪದೇ ಪದೇ ನವೀಕರಣ

    ಶಾಸಕ ಹಿಟ್ನಾಳ್ ಅಂಧ ದರ್ಬಾರ್- ತಮ್ಮ ಕಚೇರಿಗೆ ಪದೇ ಪದೇ ನವೀಕರಣ

    – ರಿನೋವೇಷನ್ ಹೆಸರಲ್ಲಿ 50 ಲಕ್ಷ ಬಿಲ್

    ಕೊಪ್ಪಳ: ಶಾಸಕ ರಾಘವೇಂದ್ರ ಹಿಟ್ನಾಳ್ ಅಂಧ ದರ್ಬಾರ್ ನಡೆಸುತ್ತಿದ್ದಾರಾ ಅನ್ನೋ ಅನುಮಾನವೊಂದು ಎದ್ದಿದೆ. ಕಳೆದ ಅವಧಿಯಲ್ಲಿ ತಮ್ಮ ಕಚೇರಿಯನ್ನ ನವೀಕರಿಸಿದ್ದ ಶಾಸಕ ರಾಘವೇಂದ್ರ ಹಿಟ್ನಾಳ್, ಇದೀಗ ಮತ್ತೆ 50 ಲಕ್ಷ ವೆಚ್ಚದಲ್ಲಿ ನವೀಕರಣ ಮಾಡಲು ಮುಂದಾಗಿದ್ದಾರೆ.

    ಕೊಪ್ಪಳ ನಗರದ ಹಳೆಯ ಜಿಲ್ಲಾ ಪಂಚಾಯತ್ ಕಟ್ಟಡದ ಆವರಣದಲ್ಲಿರುವ ಶಾಸಕರ ಕಚೇರಿ ಇದೀಗ ಭಾರೀ ವಿವಾದದ ಕೇಂದ್ರಬಿಂದುವಾಗಿದೆ. ಇನ್ನೂ ಏನೂ ಆಗದೆ ಹಾಗೆ ಇರುವ ಸಮ್ಮೇಕ್ ಹಾಗೂ ಪೇಂಟಿಂಗ್ ಒಂದೆಡೆಯಾದರೆ, ಇನ್ನೊಂದಡೆ ಹೊಸದಾದ ಕಟ್ಟಡದ ಮೇಲ್ಛಾವಣಿ ಕೆಡವಿ ಹಾಕಿದ್ದಾರೆ. ಮಗದೊಂದು ಕಡೆ ಕೆಡವಿ ಹಾಕಿರುವ ಕಟ್ಟಡದ ನವೀಕರಣಕ್ಕೆ 50 ಲಕ್ಷ ಅನುದಾನ ಬಿಡುಗಡೆ ಮಾಡಿರುವ ದಾಖಲೆ ಇದೆ.

    ಕಳೆದ 4 ವರ್ಷಗಳ ಹಿಂದೆ ಶಾಸಕ ಕೆ.ರಾಘವೇಂದ್ರ ಹಿಟ್ನಾಳ್ 10 ಲಕ್ಷ ವೆಚ್ಚದಲ್ಲಿ ನವೀಕರಣ ಮಾಡಿಕೊಂಡಿದ್ದರು. ಈ ಕಟ್ಟಡ ಇನ್ನೂ ಚೆನ್ನಾಗಿರುವ ವೇಳೆಯಲ್ಲಿ ಇದೀಗ 50 ಲಕ್ಷ ವೆಚ್ಚದಲ್ಲಿ ಮತ್ತೆ ನವೀಕರಣ ಮಾಡಲು ಶಾಸಕರು ಮುಂದಾಗಿದ್ದಾರೆ. ಶಾಸಕರ ಈ ನಡೆ ಇದೀಗ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.

    ಶಾಸಕ ರಾಘವೇಂದ್ರ ಹಿಟ್ನಾಳ್ ಈ ಹಿಂದೆ ತಮ್ಮ ಕಚೇರಿ ನವೀಕರಣ ಮಾಡಿಕೊಂಡ ವೇಳೆಯಲ್ಲಿ ಪೇಂಟಿಂಗ್, ಹೊಸದಾದ ಎಸಿ, ಐಷಾರಾಮಿ ಫರ್ನಿಚರ್ ಗಳನ್ನು ಖರೀದಿ ಮಾಡಿಕೊಂಡಿದ್ದರು. ಆದರೆ ಇದೀಗ ಆ ವಸ್ತುಗಳೆಲ್ಲವೂ ನಿರುಪಯುಕ್ತವಾಗಲಿವೆ. ಒಟ್ಟಿನಲ್ಲಿ ಕಚೇರಿ ನವೀಕರಣ ನೆಪದಲ್ಲಿ ಅರ್ಧ ಕೋಟಿ ಹಣ ಖರ್ಚು ಮಾಡುವುದು ಅವಶ್ಯಕತೆ ಇತ್ತಾ ಎನ್ನುವುದು ಪ್ರಜ್ಞಾವಂತರ ಪ್ರಶ್ನೆಯಾಗಿದೆ.

  • ಸರ್ಕಾರ ಉಳಿಯುತ್ತೋ ಬಿಡುತ್ತೋ ಗೊತ್ತಿಲ್ಲ ನಾನು ಕಾಂಗ್ರೆಸ್‍ನಲ್ಲಿ ಇರುತ್ತೇನೆ – ರಾಘವೇಂದ್ರ ಹಿಟ್ನಾಳ್

    ಸರ್ಕಾರ ಉಳಿಯುತ್ತೋ ಬಿಡುತ್ತೋ ಗೊತ್ತಿಲ್ಲ ನಾನು ಕಾಂಗ್ರೆಸ್‍ನಲ್ಲಿ ಇರುತ್ತೇನೆ – ರಾಘವೇಂದ್ರ ಹಿಟ್ನಾಳ್

    – ಆಪರೇಷನ್ ಕಮಲಕ್ಕೆ ಸಿದ್ದರಾಮಯ್ಯ ಕಾರಣ ಅಲ್ಲ

    ಕೊಪ್ಪಳ: ಸರ್ಕಾರ ಉಳಿಯುತ್ತೋ ಬಿಡುತ್ತೋ ನನಗೆ ಗೊತ್ತಿಲ್ಲ. ಆದರೆ ನಾನು ಕಾಂಗ್ರೆಸ್‍ನಲ್ಲಿ ಇರುತ್ತೇನೆ ಎಂದು ಕೈ ಶಾಸಕ ರಾಘವೇಂದ್ರ ಹಿಟ್ನಾಳ್ ಹೇಳಿದ್ದಾರೆ.

    ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಹಣದ ಆಮಿಷ, ಅಧಿಕಾರದ ಆಸೆ ತೋರಿಸಿ ನಮ್ಮ ಸರ್ಕಾರವನ್ನು ಅಸ್ಥಿರ ಮಾಡುವ ಕೆಲಸ ಮಾಡುತ್ತಿದೆ ಎಂದು ಬಿಜೆಪಿ ನಾಯಕರ ಮೇಲೆ ಕಿಡಿಕಾರಿದರು.

    ನಾನು ಅಮರೇಗೌಡರು ಸಿದ್ದರಾಮಯ್ಯ ಆಪ್ತರೇ. ಆಪರೇಷನ್ ಕಮಲಕ್ಕೆ ಸಿದ್ದರಾಮಯ್ಯ ಕಾರಣವಾಗಿದರೆ ನಾವು ಹೋಗಬೇಕಿತ್ತು. ಸಿದ್ದರಾಮಯ್ಯ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಹೀಗಾದರೆ ನಮ್ಮನ್ನು ಏಕೆ ಸಿದ್ದರಾಮಯ್ಯ ಬಿಜೆಪಿ ಕಳಿಸಿಲ್ಲ ಎಂದು ರಾಘವೇಂದ್ರ ಹಿಟ್ನಾಳ್ ಪ್ರಶ್ನೆ ಮಾಡಿದರು.

    ನಾನು ಯಾವುದೇ ಕಾರಣಕ್ಕೂ ರಾಜೀನಾಮೆ ಕೊಡುವುದಿಲ್ಲ. ಕಾಂಗ್ರೆಸ್‍ನಲ್ಲಿ ಇರುತ್ತೇನೆ. ಸರ್ಕಾರ ಉಳಿಯುತ್ತೋ ಬಿಡುತ್ತೋ ಗೊತ್ತಿಲ್ಲ. ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಈ ರೀತಿಯ ಘಟನೆಗಳು ನಡೆಯಬಾರದು. ಶಾಸಕರು ಕಾರ್ಯಕರ್ತರನ್ನು ವಿಚಾರಿಸದೇ ರಾಜೀನಾಮೆ ನೀಡಿದ್ದು ಸರಿ ಅಲ್ಲ ಎಂದು ಕಿಡಿಕಾರಿದರು.

  • ಕೊಪ್ಪಳದಲ್ಲಿ ಅಭ್ಯರ್ಥಿಗಳ ಮಧ್ಯೆ ಟಾಕ್ ಫೈಟ್

    ಕೊಪ್ಪಳದಲ್ಲಿ ಅಭ್ಯರ್ಥಿಗಳ ಮಧ್ಯೆ ಟಾಕ್ ಫೈಟ್

    ಕೊಪ್ಪಳ: ಜಿಲ್ಲೆಯಲ್ಲಿ ಲೋಕಸಭಾ ಚುನಾವಣೆ ದಿನದಿಂದ ದಿನಕ್ಕೆ ಕಾವೇರುತ್ತಿದ್ದು, ಎರಡು ಪಕ್ಷದ ನಾಯಕರುಗಳು ಒಬ್ಬೊಬ್ಬರ ಮೇಲೆ ಮಾತನಾಡುವ ಮೂಲಕ ಟಾಕ್ ಫೈಟ್ ನಡೆಸುತ್ತಿದ್ದಾರೆ.

    ಬಿಜೆಪಿ ಅಭ್ಯರ್ಥಿ ಸಂಗಣ್ಣ ಕರಡಿ ಮತ್ತು ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ ಸಹೋದರ ರಾಘವೇಂದ್ರ ಹಿಟ್ನಾಳ್ ನಡುವೆ ಇದೀಗ ಟಾಕ್ ಫೈಟ್ ಎರ್ಪಟ್ಟಿದೆ. ಕೊಪ್ಪಳ ತಾಲೂಕಿನ ಹುಲಿಗಿಯಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಸಂಗಣ್ಣ ಕರಡಿ ತಮ್ಮ ಭಾಷಣದಲ್ಲಿ ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಪ್ರೂಫ್ ಕೇಳುವ ರಾಘವೇಂದ್ರ ಹಿಟ್ನಾಳ್ ಇಲ್ಲಿರುವುದಕ್ಕೆ ಯೋಗ್ಯರಲ್ಲಾ ಅವರು ಪಾಕಿಸ್ತಾನಕ್ಕೆ ಹೋಗಲಿ. ರಾಘವೇಂದ್ರ ಹಿಟ್ನಾಳ್ ಒಬ್ಬ ಅಯೋಗ್ಯ ಎಂದು ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ರಾಘವೇಂದ್ರ ಹಿಟ್ನಾಳ್ ಕರಡಿ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದಾರೆ.

    ಸಂಗಣ್ಣ ಕರಡಿ ಮಾನಸಿಕ ಅಸ್ವಸ್ಥ ಕಳೆದುಕೊಂಡಿದ್ದಾರೆ. ಮೊನ್ನೆ ನಡೆದ ಕಾಂಗ್ರೆಸ್ ಸಮಾವೇಶ ನೋಡಿ ವಿಚಲಿತರಾಗಿದ್ದಾರೆ. ನಮಗೆ ದೇಶಾಭಿಮಾನದ ಬಗ್ಗೆ ಪಾಠ ಮಾಡೋದು ಅವಶ್ಯವಿಲ್ಲ. ಬಿಜೆಪಿಯವರಿಗೆ ಹಿಂದೂತ್ವ, ಹಿಂದೂ ಸಂಪ್ರದಾಯದ ಬಗ್ಗೆ ಗೊತ್ತೆ ಇಲ್ಲ. ಅವರಿಗೆ ಜನರಿಂದ ಸ್ಪಂದನೆ ಸಿಗುತ್ತಿಲ್ಲ, ಹಾಗಾಗಿ ಮಾತನಾಡುತ್ತಿದ್ದಾರೆ. ಈಶ್ವರಪ್ಪ ಜೊತೆಗೆ ಕೂಡಿ ಬಿಜೆಪಿ ಅಭ್ಯರ್ಥಿ ಕರಡಿ ಸಂಗಣ್ಣ ಮಾಡುತ್ತಿದ್ದಾರೆ ಎಂದು ಕರಡಿ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.

    ಮುಂದಿನ ದಿನಗಳಲ್ಲಿ ಇವರಿಗೆ ಜನತೆ ತಕ್ಕ ಪಾಠ ಕಲಿಸುತ್ತಾರೆ. ಯಾರು ಯೋಗ್ಯ ಇದ್ದಾರೆ, ಯಾರು ಯೋಗ್ಯರಿಲ್ಲ ಎನ್ನುವುದನ್ನು ಜನತೆ ನಿರ್ಧರಿಸುತ್ತಾರೆ. ಅವರು ಮಾತನಾಡಿರುವುದನ್ನು ನೋಡಿದರೆ ಅವರು ಮಾನಸಿಕವಾಗಿ ಕುಗ್ಗಿರುವುದು ಸ್ಪಷ್ಟವಾಗುತ್ತದೆ. ಅವರ ಮಾತಿನಲ್ಲಿ ಸೋಲಿನ ಭಯ ಕಾಡುತ್ತಿದೆ. ಹೇಗಾದರೂ ಮಾಡಿ ಜಾತಿ-ಜಾತಿಗಳ ಮದ್ಯೆ ಜಗಳ ಹಚ್ಚಿ ಗೆಲ್ಲಲು ಹೊರಟಿದ್ದಾರೆ. ಇದು ಕೊಪ್ಪಳ ಲೋಕಸಭಾ ವ್ಯಾಪ್ತಿಯಲ್ಲಿ ಸಾಧ್ಯವಿಲ್ಲ ಎಂದು ಸಂಗಣ್ಣ ಕರಡಿ ಹೇಳಿಕೆಗೆ ರಾಘವೇಂದ್ರ ಹಿಟ್ನಾಳ್ ತಿರುಗೇಟು ನೀಡಿದರು.

  • ಸತ್ತ ಉಗ್ರರ ಲೆಕ್ಕ ಬೇಕಾದ್ರೆ ಶಾಸಕರು ಪಾಕಿಸ್ತಾನಕ್ಕೆ ಹೋಗಲಿ: ಹಿಟ್ನಾಳ್‍ಗೆ ಮುನವಳ್ಳಿ ತಿರುಗೇಟು

    ಸತ್ತ ಉಗ್ರರ ಲೆಕ್ಕ ಬೇಕಾದ್ರೆ ಶಾಸಕರು ಪಾಕಿಸ್ತಾನಕ್ಕೆ ಹೋಗಲಿ: ಹಿಟ್ನಾಳ್‍ಗೆ ಮುನವಳ್ಳಿ ತಿರುಗೇಟು

    ಕೊಪ್ಪಳ: ಭಾರತೀಯ ವಾಯುಪಡೆ ನಡೆಸಿದ ಏರ್ ಸ್ಟ್ರೈಕ್‍ನಲ್ಲಿ ಸಾವನ್ನಪ್ಪಿದ ಉಗ್ರರ ಲೆಕ್ಕ ಕೇಳುವ ಶಾಸಕರು ಪಾಕಿಸ್ತಾನಕ್ಕೆ ಹೋಗಲಿ ಎಂದು ಗಂಗಾವತಿ ಬಿಜೆಪಿ ಶಾಸಕ ಪರಣ್ಣ ಮುನವಳ್ಳಿ ಅವರು, ರಾಘವೇಂದ್ರ ಹಿಟ್ನಾಳ್ ಅವರಿಗೆ ತಿರುಗೇಟು ಕೊಟ್ಟಿದ್ದಾರೆ.

    ಜಿಲ್ಲೆಯ ಗಂಗಾವತಿಯಲ್ಲಿ ಮಾತನಾಡಿದ ಶಾಸಕರು, ರಾಘವೇಂದ್ರ ಹಿಟ್ನಾಳ್ ಅವರಿಗೆ ಅನುಮಾನವಿದ್ದರೆ ನೇರವಾಗಿ ಪಾಕಿಸ್ತಾನಕ್ಕೆ ಹೋಗಿ ನೋಡಿ ಬರಲಿ. ಅಲ್ಲಿನ ದೃಶ್ಯವನ್ನು ತಮ್ಮ ಮೊಬೈಲ್‍ನಲ್ಲಿ ಸೆರೆ ಹಿಡಿದುಕೊಂಡು ಬರಲಿ. ಈ ನಿಟ್ಟಿನಲ್ಲಿ ರಾಘವೇಂದ್ರ ಹಿಟ್ನಾಳ್ ಅವರು ಆದಷ್ಟು ಬೇಗ ಪಾಕಿಸ್ತಾನಕ್ಕೆ ಹೋಗಿ ಸಾಕ್ಷಿಗಳನ್ನು ತರಲಿ ಎಂದು ಕಿಡಿಕಾರಿದರು. ಇದನ್ನು ಓದಿ: ಬಾಲಕೋಟ್ ಉಗ್ರರ ಕ್ಯಾಂಪ್‍ನಿಂದ ಸಾಗಿಸಲಾಗಿತ್ತು 35 ಶವ: ಪ್ರತ್ಯಕ್ಷದರ್ಶಿಗಳಿಂದ ಬಯಲಾಯ್ತು ಪಾಕ್ ಬಣ್ಣ

    ಭಾರತೀಯ ಸೇನೆಯ ವಿಚಾರದಲ್ಲಿ ರಾಘವೇಂದ್ರ ಹಿಟ್ನಾಳ್ ಸಣ್ಣತನ ತೋರಿದ್ದಾರೆ. 12 ನಿಮಿಷದಲ್ಲಿ ಯದ್ಧ ಮಾಡೋದಕ್ಕೆ ಸಾಧ್ಯವೇ ಎಂದು ಪ್ರಶ್ನಿಸುವ ಮೂಲಕ ಸೈನಿಕರಿಗೆ ಅವಮಾನ ಮಾಡಿದ್ದಾರೆ. ಅವರ ಹೇಳಿಕೆಯನ್ನ ನಾವು ಖಂಡಿಸುತ್ತೇವೆ ಎಂದು ಗುಡುಗಿದರು. ಇದನ್ನು ಓದಿ: ಏರ್ ಸ್ಟ್ರೈಕ್ ಸಾಕ್ಷಿಯನ್ನ ಯಾರೂ ಕೇಳಿಲ್ಲ: ಎಂ.ಬಿ.ಪಾಟೀಲ್

    ಪಾಕಿಸ್ತಾನದ ನೆಲೆಯಲ್ಲಿರುವ ಉಗ್ರರನ್ನು ಸೆದೆಬಡಿಯಲು ಭಾರತೀಯ ವಾಯು ಪಡೆ ಏರ್ ಸ್ಟ್ರೈಕ್ ನಡೆಸಿದೆ. ಇದನ್ನು ಬಿಟ್ಟರೆ ಬೇರೆ ಯಾವ ಉದ್ದೇಶವೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇರಲಿಲ್ಲ. ಈ ಮೂಲಕ ಪುಲ್ವಾಮಾ ದಾಳಿಯ ಪ್ರತಿಕಾರವನ್ನು ತೀರಿಸಿಕೊಂಡಿದ್ದಾರೆ ಎಂದು ತಿಳಿದರು.

    https://youtu.be/oseIZ5XYm4o

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv