Tag: ragging

  • ಮೆಡಿಕಲ್ ಕಾಲೇಜಿನಲ್ಲಿ ರ‍್ಯಾಗಿಂಗ್ – 7 ಜನ ವಿದ್ಯಾರ್ಥಿಗಳು ಹಾಸ್ಟೆಲ್‍ನಿಂದ ಹೊರಕ್ಕೆ

    ಮೆಡಿಕಲ್ ಕಾಲೇಜಿನಲ್ಲಿ ರ‍್ಯಾಗಿಂಗ್ – 7 ಜನ ವಿದ್ಯಾರ್ಥಿಗಳು ಹಾಸ್ಟೆಲ್‍ನಿಂದ ಹೊರಕ್ಕೆ

    ಚಾಮರಾಜನಗರ: ಜಿಲ್ಲೆಯ ಸರ್ಕಾರಿ ಮೆಡಿಕಲ್ ಕಾಲೇಜಿನಲ್ಲಿ ನಡೆದಿರುವ ರ‍್ಯಾಗಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ರ‍್ಯಾಗಿಂಗ್ ನಡೆಸಿದ ವಿದ್ಯಾರ್ಥಿಗಳಿಗೆ ಎಚ್ಚರಿಕೆ ಕೊಟ್ಟು ಪ್ರಕರಣಕ್ಕೆ ತೆರೆ ಎಳೆಯಲು ಆಡಳಿತ ಮಂಡಳಿ ನಿರ್ಧರಿಸಿದೆ.

    ರ‍್ಯಾಗಿಂಗ್ ನಡೆದಿರುವ ಪ್ರಕರಣ ಬೆಳಕಿಗೆ ಬಂದ ನಂತರ ಚಾಮರಾಜನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿವ್ಯಾಸಾರ ಥಾಮಸ್, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನಿತಾ ಹದ್ದಣ್ಣನವರ್, ಡಿವೈಎಸ್ಪಿ ಪ್ರಿಯದರ್ಶಿನಿ ಸಾಣೆಕೊಪ್ಪ ಕಾಲೇಜಿಗೆ ಭೇಟಿ ನೀಡಿ ರ್ಯಾಗಿಂಗ್ ಪ್ರಕರಣದ ಬಗ್ಗೆ ಸರ್ಕಾರಿ ಕಾಲೇಜಿನ ಡೀನ್ ಡಾ.ಸಂಜೀವ್ ಹಾಗೂ ರ‍್ಯಾಗಿಂಗ್ ವಿರೋಧಿ ಸಮಿತಿಯ ಸದಸ್ಯರೊಡನೆ ಸಭೆ ನಡೆಸಿದರು.

    ಈ ನಡುವೆ ರ‍್ಯಾಗಿಂಗ್ ಗೆ ಒಳಗಾದ ತುಮಕೂರು ಮೂಲದ ವಿದ್ಯಾರ್ಥಿಯ ಪೋಷಕರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಪತ್ರವೊಂದನ್ನು ಇ -ಮೇಲ್ ಮಾಡಿ ರ‍್ಯಾಗಿಂಗ್ ಮಾಡಿರುವ ವಿದ್ಯಾರ್ಥಿಗಳು ನಮ್ಮೂರಿನವರೇ ಆಗಿದ್ದು, ಯಾವುದೇ ಕ್ರಮ ಕೈಗೊಳ್ಳುವುದು ಬೇಡ, ಈ ಪ್ರಕರಣವನ್ನು ಇಲ್ಲಿಗೆ ಕೊನೆಗೊಳಿಸಿ ಎಂದು ಮನವಿ ಮಾಡಿದ್ದಾರೆ. ಹಾಗಾಗಿ ಸಂಬಂಧಪಟ್ಟ ವಿದ್ಯಾರ್ಥಿಗಳಿಗೆ ಎಚ್ಚರಿಕೆ ನೀಡಿ ಪ್ರಕರಣವನ್ನು ಇಲ್ಲಿಗೆ ಮುಗಿಸಲಾಗುವುದು ಎಂದು ಸರ್ಕಾರಿ ಮೆಡಿಕಲ್ ಕಾಲೇಜಿನ ಡೀನ್ ಡಾ.ಸಂಜೀವ್ ತಿಳಿಸಿದ್ದಾರೆ.

    ನಮ್ಮ ಕಾಲೇಜಿನಲ್ಲಿ ಎಂಬಿಬಿಎಸ್, ಬಿಎಸ್‍ಸಿ ನರ್ಸಿಂಗ್ ಹಾಗೂ ಅಲೈಡ್ ಸೈನ್ಸ್ ಸೇರಿದಂತೆ ಒಟ್ಟು 1,100ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದಾರೆ. ಇವರಿಗೆಲ್ಲ ರ‍್ಯಾಗಿಂಗ್ ಪಿಡುಗಿನ ಆಗು-ಹೋಗುಗಳ ಬಗ್ಗೆ ಜಾಗೃತಿ ಮೂಡಿಸಲು ಹಾಗೂ ರ‍್ಯಾಗಿಂಗ್ ಕಾಯ್ದೆ ಬಗ್ಗೆ ವಿಶೇಷ ತರಗತಿಗಳ ಮೂಲಕ ತಿಳುವಳಿಕೆ ನೀಡಲು ನಿರ್ಧರಿಸಲಾಗಿದೆ. ಪ್ರತಿ ದಿನ ಒಂದು ಗಂಟೆಯಂತೆ ದಿನ ಬಿಟ್ಟು ದಿನ ಈ ವಿಶೇಷ ತರಗತಿಗಳನ್ನು ನಡೆಸಲಾಗುವುದು ಎಂದು ಹೇಳಿದ್ದಾರೆ.

    ರ‍್ಯಾಗಿಂಗ್ ನಡೆಸಿರುವ ವಿದ್ಯಾರ್ಥಿಗಳನ್ನು ಸಸ್ಪೆಂಡ್ ಮಾಡಿಲ್ಲ. ಆದರೆ ಈ ಪ್ರಕರಣದ ಬಗ್ಗೆ ಅಂತಿಮ ತೀರ್ಮಾನವಾಗುವವರೆಗೆ ರ‍್ಯಾಗಿಂಗ್ ನಡೆಸಿದ ವಿದ್ಯಾರ್ಥಿಗಳು ಹಾಸ್ಟೆಲ್ ಕಟ್ಟಡದಿಂದ ಹೊರಗಿರಬೇಕು ಸೂಚಿಸಲಾಗಿದೆ.

  • ಸೀನಿಯರ್‌ಗಳ ಕಿರುಕುಳಕ್ಕೆ ಬೇಸತ್ತು ವಿದ್ಯಾರ್ಥಿ ಆತ್ಮಹತ್ಯೆ

    ಸೀನಿಯರ್‌ಗಳ ಕಿರುಕುಳಕ್ಕೆ ಬೇಸತ್ತು ವಿದ್ಯಾರ್ಥಿ ಆತ್ಮಹತ್ಯೆ

    ಬೆಂಗಳೂರು: ಸೀನಿಯರ್‌ಗಳ ಕಿರುಕುಳಕ್ಕೆ ಬೇಸತ್ತು ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

    ಗೌರಿಬಿದನೂರು ಮೂಲದ ಗಗನ್ ಕಳೆದ ಮೂರು ತಿಂಗಳ ಹಿಂದೆಯಷ್ಟೇ ಬೆಂಗಳೂರಿನ ಯಲಹಂಕ ಬಳಿಯ ಖಾಸಗಿ ಕ್ಯಾಂಪಸ್‍ನಲ್ಲಿ ಬಿಎಸ್ಸಿ ಆಗ್ರಿಕಲ್ಚರಲ್ ಕೋರ್ಸ್ ಗೆ ಸೇರಿಕೊಂಡಿದ್ದನು. ಕ್ಯಾಂಪಸ್‍ನಲ್ಲೇ ಹಾಸ್ಟೆಲ್ ವ್ಯವಸ್ಥೆ ಇರುವ ಕಾರಣ, ಗಗನ್ ಅಲ್ಲಿಯೇ ಉಳಿದುಕೊಂಡಿದ್ದನು. ಪ್ರಾರಂಭದ ದಿನದಿಂದಲೂ ಅಲ್ಲಿನ ಸೀನಿಯರ್ಸ್‍ ಗಳಿಗೆ ಗಗನ್‍ ಸ್ನಾನಕ್ಕೆ ನೀರು ರೆಡಿ ಮಾಡುವುದು, ಸೀನಿಯರ್‌ಗಳು ಕಂಡ ತಕ್ಷಣ ಎದ್ದು ಕೈಕಟ್ಟಿ ನಿಲ್ಲುವುದು, ಅವರಿಗೆ ತಿಂಡಿ, ಸಿಗರೇಟು ತರುವುದು ಸೇರಿದಂತೆ ಪ್ರತಿನಿತ್ಯ ಮಾನಸಿಕ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ.

    ಇದರಿಂದ ಬೇಸತ್ತ ವಿದ್ಯಾರ್ಥಿ ಗಗನ್ ನನಗೆ ಕಾಲೇಜು ಬೇಡ, ನಾನು ವಾಪಾಸ್ ಹೋಗುತ್ತೇನೆ ಎಂದು ಕಣ್ಣೀರು ಹಾಕಿದ್ದನು. ಪೋಷಕರು ಈ ಸಂಬಂಧ ಕಾಲೇಜು ಆಡಳಿತ ಮಂಡಳಿಯಲ್ಲಿ ಬಳಿ ಮಾತನಾಡೋಣ ಎಂದರೆ ಗಗನ್ ಬೇಡ ಎಂದು ಹೇಳುತ್ತಿದ್ದನು. ಮಂಗಳವಾರ ಸಂಜೆ ಕ್ಲಾಸ್ ಮುಗಿಸಿ ಹೊರ ಬಂದ ಗಗನ್ ರಾತ್ರಿಯಾದರೂ ವಾಪಸ್ ಬಂದಿರಲಿಲ್ಲ. ತಡರಾತ್ರಿವರೆಗೂ ಹುಡುಕಾಟ ನಡೆಸಿದ ಪೋಷಕರು ಕೊನೆಗೆ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಇದರ ಬೆನ್ನೆಲ್ಲೇ ಕ್ಯಾಂಪಸ್‍ನಲ್ಲಿ ಹಾದು ಹೋಗುವ ರೈಲ್ವೇ ಹಳಿ ಮೇಲೆ ಗಗನ್ ಆತ್ಮಹತ್ಯೆ ಮಾಡಿಕೊಂಡಿದ್ದನು.

    ಗಗನ್ ಸಾವಿಗೆ ಸೀನಿಯರ್‌ಗಳ ಕಿರುಕುಳವೇ ಕಾರಣ ಎಂದು ಪೋಷಕರು ಆರೋಪಿಸುತ್ತಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಅಮೃತಹಳ್ಳಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

  • 150 ವೈದ್ಯಕೀಯ ವಿದ್ಯಾರ್ಥಿಗಳ ತಲೆ ಬೋಳಿಸಿ ರ‍್ಯಾಗಿಂಗ್‌

    150 ವೈದ್ಯಕೀಯ ವಿದ್ಯಾರ್ಥಿಗಳ ತಲೆ ಬೋಳಿಸಿ ರ‍್ಯಾಗಿಂಗ್‌

    ಲಕ್ನೋ: 150 ವೈದ್ಯಕೀಯ ಕಿರಿಯ ವಿದ್ಯಾರ್ಥಿಗಳನ್ನು ಕಾಲೇಜಿನ ಹಿರಿಯ ವಿದ್ಯಾರ್ಥಿಗಳು ತಲೆ ಬೋಳಿಸಿ ರ‍್ಯಾಗಿಂಗ್‌ ಮಾಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

    ಈ ಘಟನೆ ಉತ್ತರ ಪ್ರದೇಶದ ಸೈಫೈ ಎಂಬ ನಗರದಲ್ಲಿರುವ ವೈದ್ಯಕೀಯ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ ನಡೆದಿದ್ದು, 150ಕ್ಕೂ ಹೆಚು ವಿದ್ಯಾರ್ಥಿಗಳು ತಲೆ ಬೋಳಿಸಿ ಬಿಳಿ ಬಣ್ಣದ ಬಟ್ಟೆ ತೊಟ್ಟು ಹಿರಿಯ ವಿದ್ಯಾರ್ಥಿಗಳಿಗೆ ನಮಸ್ಕಾರ ಮಾಡುತ್ತಿರುವುದನ್ನು ವಿಡಿಯೋ ಮಾಡಲಾಗಿದೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಈ ಘಟನೆ ಮಂಗಳವಾರ ನಡೆದಿದ್ದು, ಒಟ್ಟು ಮೂರು ವಿಡಿಯೋಗಳು ವೈರಲ್ ಆಗಿವೆ. ಮೊದಲನೇ ವಿಡಿಯೋದಲ್ಲಿ ವಿದ್ಯಾರ್ಥಿಗಳು ತಲೆ ಬೋಳಿಸಿಕೊಂಡು ಬಿಳಿ ಬಟ್ಟೆ ಧರಿಸಿ ಒಂದೇ ಸಾಲಿನಲ್ಲಿ ಓಡುತ್ತಿರುತ್ತಾರೆ. ನಂತರ ಎರಡನೇ ವಿಡಿಯೋದಲ್ಲಿ ಅವರು ಹಿರಿಯ ವಿದ್ಯಾರ್ಥಿಗಳಿಗೆ ತಲೆ ಭಾಗಿ ನಮಸ್ಕಾರ ಮಾಡುತ್ತಿರುವುದು ಕಂಡು ಬಂದಿದೆ. ಕೊನೆಯ ವಿಡಿಯೋದಲ್ಲಿ ಇದನ್ನು ಗಮನಿಸಿದ ಸಂಸ್ಥೆಯ ಸೆಕ್ಯುರಿಟಿ ಗಾರ್ಡ್ ಕೂಡ ಇದನ್ನು ನೋಡಿಕೊಂಡು ಏನೂ ಮಾಡದೇ ಸುಮ್ಮನೆ ನಿಂತಿರುವುದು ಕಂಡು ಬಂದಿದೆ.

    ಈ ವಿಚಾರದ ಬಗ್ಗೆ ಮಾತನಾಡಿರುವ ವಿಶ್ವವಿದ್ಯಾನಿಲಯದ ಉಪಕುಲಪತಿ ಡಾ.ರಾಜ್ ಕುಮಾರ್, ಸಂಸ್ಥೆಯು ರ‍್ಯಾಗಿಂಗ್‌  ತಡೆಯಲು ವಿಶೇಷ ತಂಡಗಳನ್ನು ರಚನೆ ಮಾಡಲಾಗಿದೆ. ಯಾರಾದರು ರ್‍ಯಾಂಗ್ ಮಾಡಿದರೆ ವಿದ್ಯಾರ್ಥಿಗಳು ಅದರ ಬಗ್ಗೆ ವಿರೋಧಿ ಸಮಿತಿಗೆ ಅಥವಾ ಅವರ ವಾರ್ಡನ್ ಗಳಿಗೆ ದೂರು ನೀಡಬಹುದು. ಈ ಹಿಂದೆ ಇದೇ ರೀತಿಯ ಮಾಡಿದಕ್ಕೆ ಕೆಲ ವಿದ್ಯಾರ್ಥಿಗಳನ್ನು ಅಮಾನತುಗೊಳಿಸಲಾಗಿದೆ ಎಂದು ಹೇಳಿದ್ದಾರೆ.

    ಈ ವಿಚಾರದಲ್ಲೂ ನಾವು ಕಠಿಣ ಕ್ರಮ ಕೈಗೊಳ್ಳುತ್ತೇವೆ. ಈ ರ‍್ಯಾಗಿಂಗ್‌ನಲ್ಲಿ ಭಾಗಿಯಾದ ಕೆಲ ವಿದ್ಯಾರ್ಥಿಗಳನ್ನು ಆಗಲೇ ಅಮಾನತು ಮಾಡಿದ್ದೇವೆ. ಜೂನಿಯರ್ ವಿದ್ಯಾರ್ಥಿಗಳು ಇದರ ಬಗ್ಗೆ ಅತಂಕ ಪಡಬೇಕಿಲ್ಲ ಎಂದು ಭರವಸೆ ನೀಡಿದ್ದಾರೆ. ಸೈಫೈ ಗ್ರಾಮವು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರ ತವರು ಗ್ರಾಮವಾಗಿದೆ.

    ಕಳೆದ ತಿಂಗಳು 14 ವರ್ಷದ ಹೈದರಾಬಾದ್ ಬಾಲಕನೊಬ್ಬ ತನ್ನ ಸಹಪಾಠಿಗಳು ರ್‍ಯಾಂಗ್ ಮಾಡಿದರು ಎಂಬ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದ. ಇದೇ ರೀತಿ ಕಳೆದ ಮಾರ್ಚ್ ನಲ್ಲಿ ತಮಿಳುನಾಡಿನ ಇಬ್ಬರು ಕಾಲೇಜು ವಿದ್ಯಾರ್ಥಿಗಳು ತಮ್ಮ ಸಿನಿಯರ್ಸ್ ರ್‍ಯಾಂಗ್ ಮಾಡಿದರು ಎಂಬ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದರು. ಭಾರತದಾದ್ಯಂತ ವಿದ್ಯಾರ್ಥಿಗಳು ಮತ್ತು ಸಂಸ್ಥೆಗಳು ನೀಡಿದ ರ್‍ಯಾಗಿಂಗ್ ದೂರುಗಳ ಸಂಖ್ಯೆ 2015 ರಲ್ಲಿ 423 ಇತ್ತು ಆದರೆ ಎರಡು ವರ್ಷಗಳ ನಂತರ 901 ಕ್ಕೆ ಏರಿದೆ ಎಂದು ಕಳೆದ ವರ್ಷ ಸಂಸತ್ತಿನಲ್ಲಿ ಅಂದಿನ ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವಡೇಕರ್ ಬಿಡುಗಡೆ ಮಾಡಿದ ಅಂಕಿ ಅಂಶಗಳು ತಿಳಿಸಿವೆ.

  • ಕುಡಿದ ಮತ್ತಿನಲ್ಲಿ ತಲೆಕೂದಲು ಕತ್ತರಿಸಿ, ಬಟ್ಟೆ ಬಿಚ್ಚಿಸಿ MBBS ವಿದ್ಯಾರ್ಥಿ ಮೇಲೆ ರ‍್ಯಾಗಿಂಗ್

    ಕುಡಿದ ಮತ್ತಿನಲ್ಲಿ ತಲೆಕೂದಲು ಕತ್ತರಿಸಿ, ಬಟ್ಟೆ ಬಿಚ್ಚಿಸಿ MBBS ವಿದ್ಯಾರ್ಥಿ ಮೇಲೆ ರ‍್ಯಾಗಿಂಗ್

    ಬೆಂಗಳೂರು: ಕುಡಿದ ಮತ್ತಿನಲ್ಲಿ ತಲೆಕೂದಲು ಕತ್ತರಿಸಿ ಬಟ್ಟೆ ಬಿಚ್ಚಿಸಿ ಹಿರಿಯ ವಿದ್ಯಾರ್ಥಿಗಳು ಎಂಬಿಬಿಎಸ್ ವಿದ್ಯಾರ್ಥಿಯ ಮೇಲೆ ರ‍್ಯಾಗಿಂಗ್ ಮಾಡಿದ ಪ್ರಕರಣವೊಂದು ಬೆಂಗಳೂರಿನಲ್ಲಿ ಡಿಸೆಂಬರ್ 24ರ ರಾತ್ರಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    ಕಿರಣ್ ಶರ್ಮ, ಇಂದ್ರಜಿತ್, ರಾಹುಲ್ ಜಾ, ಶುಭವ್ ಹಾಗು ಗೌತಮ್ ಈ ಕೃತ್ಯವನ್ನು ಎಸಗಿದ್ದಾರೆ. ನಾಲ್ವರು ಉತ್ತರ ಭಾರತ ಮೂಲದವರಾಗಿದ್ದು, ಬೆಂಗಳೂರು ರಾಜಾಜಿನಗರದ ಇಎಸ್‍ಐ ವೈದ್ಯಕೀಯ ಕಾಲೇಜಿನಲ್ಲಿ ಅಂತಿಮ ವರ್ಷದ ವೈದ್ಯಕೀಯ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಕುಡಿದ ಮತ್ತಿನಲ್ಲಿ ವಿದ್ಯಾರ್ಥಿಗೆ ಥಳಿಸಿ ಟೆರೆಸ್ ಮೇಲೆ ಕರದುಕೊಂಡು ಹೋಗಿ ತಲೆಕೂದಲು ಕತ್ತರಿಸಿ ಬಳಿಕ ಎಲ್ಲರ ಮುಂದೆ ಬಟ್ಟೆ ಬಿಚ್ಚಿಸಿ ರ‍್ಯಾಗಿಂಗ್ ಮಾಡಿದ್ದಾರೆ.

    ದೂರಿನಲ್ಲಿ ಏನಿದೆ?
    ರಾಜಾಜಿನಗರದಲ್ಲಿರುವ ಇಎಸ್‍ಐ ಆಸ್ಪತ್ರೆಯ ಆವರಣದಲ್ಲಿರುವ ಇಎಸ್‍ಐಸಿಎಂಸಿ ಹಾಗೂ ಪಿಜಿಐಎಂಎಸ್‍ಆರ್ ಮೆಡಿಕಲ್ ಕಾಲೇಜಿನಲ್ಲಿ ಮೊದಲನೇ ವರ್ಷದ ಎಂಬಿಬಿಎಸ್ ವ್ಯಾಸಾಂಗ ಮಾಡುತ್ತಿದ್ದೇನೆ. ಇಎಸ್‍ಐ ಆಸ್ಪತ್ರೆಯ ಆವರಣದಲ್ಲಿರುವ ಇಎಸ್‍ಐಸಿ ಬಾಯ್ಸ್ ಹಾಸ್ಟೆಲ್‍ನಲ್ಲಿ ವಾಸಿಸುತ್ತಿದ್ದೇನೆ. ಅದೇ ಹಾಸ್ಟೆಲ್‍ನಲ್ಲಿರುವ ಮೆಡಿಕಲ್ ಕಾಲೇಜ್ ವಿದ್ಯಾರ್ಥಿಗಳಾದ ಕಿರಣ್ ಶರ್ಮಾ, ಇಂದ್ರಜಿತ್, ರಾಹುಲ್ ಜಹ, ಶಭವ್, ಗೌತಮ್ ಹಾಗೂ ಇತರೇ ಮೂರು ಜನ ರೂಮ್‍ಮೇಟ್ಸ್ ಸೇರಿಕೊಂಡು ರ‍್ಯಾಗಿಂಗ್ ಮಾಡಿದ್ದಾರೆ.

    ಡಿ. 24ರಂದು ರಾತ್ರಿ ಸುಮಾರು 10 ಗಂಟೆಗೆ ಕುಡಿದ ಮತ್ತಿನಲ್ಲಿ ಬಂದು ನಿದ್ದೆ ಮಾಡುತ್ತಿದ್ದ ನನಗೆ ಕಪಾಳಕ್ಕೆ ಹೊಡೆದು, ಬೆಡ್‍ನಿಂದ ಕೆಳೆಗೆ ಎಸೆದಿದ್ದಾರೆ. ಬಳಿಕ ನನಗೆ ಅವಾಚ್ಯ ಶಬ್ಧದಿಂದ ನಿಂದಿಸಿ ಟೆರೆಸ್ ಮೇಲೆ ಕರೆದುಕೊಂಡು ಹೋಗಿ ರ‍್ಯಾಗಿಂಗ್ ಮಾಡಿದರು. ಈ ವೇಳೆ ಅವರು ನನ್ನ ತಂದೆ, ತಾಯಿ, ತಂಗಿಗೆ ಅವಾಚ್ಯ ಶಬ್ಧಗಳಲ್ಲಿ ನಿಂದಿಸಿ ನೀನು ಕೀಳು ಜಾತಿಯವನು, ನೀನು ಎಂಬಿಬಿಎಸ್ ವ್ಯಾಸಂಗ ಮಾಡಲು ಯೋಗ್ಯತೆ ಇಲ್ಲದ ಜಾತಿಯವರನು ಎಂದು ನಿಂದಿಸಿ ಜಾತಿ ನಿಂದನೆ ಮಾಡಿದ್ದಾರೆ.

    ನನ್ನ ತಲೆ ಹಿಂಭಾಗದ ಕೂದಲನ್ನು ಕಟ್ ಮಾಡಿ ಅವಮಾನಿಸಿ ಎಲ್ಲಾ ಬಟ್ಟೆಗಳನ್ನು ತೆಗೆದು ನಮ್ಮ ಮುಂದೆ ನಿಲ್ಲು ಎಂದು ರ‍್ಯಾಗಿಂಗ್ ಮಾಡಿದ್ದಾರೆ. ಅಲ್ಲದೇ ಡಿ. 25ರಂದು ಮಧ್ಯಾಹ್ನ 12 ಗಂಟೆಗೆ ನನ್ನನ್ನು ಅಡ್ಡಗಟ್ಟಿ ಅವಾಚ್ಯ ಶಬ್ಧಗಳನ್ನು ನಿಂದಿಸಿ ಪ್ರಾಣ ಬೆದರಿಕೆ ಹಾಕಿದ್ದಾರೆ. ಹಾಗಾಗಿ ಆರೋಪಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಿ ಎಂದು ವಿದ್ಯಾರ್ಥಿ ದೂರಿನಲ್ಲಿ ಮನವಿ ಮಾಡಿಕೊಂಡಿದ್ದಾನೆ.

    ವಿದ್ಯಾರ್ಥಿಯ ದೂರು ದಾಖಲಿಸಿಕೊಂಡ ರಾಜಾಜಿನಗರ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳ ವಿರುದ್ಧ ಶಿಕ್ಷಣ ಕಾಯ್ದೆ, ಜಾತಿನಿಂಧನೆ, ಜೀವ ಬೆದರಿಕೆ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ರ‍್ಯಾಗಿಂಗ್ ಆಯ್ತು ಇದೀಗ ವಿದ್ಯಾರ್ಥಿನಿಯರ ಪ್ರೈವೇಟ್ ಪಾರ್ಟ್ ಮುಟ್ಟಿ ಲೈಂಗಿಕ ಕಿರುಕುಳ

    ರ‍್ಯಾಗಿಂಗ್ ಆಯ್ತು ಇದೀಗ ವಿದ್ಯಾರ್ಥಿನಿಯರ ಪ್ರೈವೇಟ್ ಪಾರ್ಟ್ ಮುಟ್ಟಿ ಲೈಂಗಿಕ ಕಿರುಕುಳ

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ವೈಮಾನಿಕ ತರಬೇತಿ ಕೇಂದ್ರದ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ರ‍್ಯಾಗಿಂಗ್ ಆದ ಮೇಲೆ ಇದೀಗ ವಿದ್ಯಾರ್ಥಿನಿಯರಿಗೆ ವಿಮಾನದಲ್ಲಿಯೇ ಅವರ ಪ್ರೈವೇಟ್ ಪಾರ್ಟ್ ಮುಟ್ಟಿ ಲೈಂಗಿಕ ಕಿರುಕುಳ ನೀಡಲಾಗುತ್ತಿದೆ.

    ಮುಖ್ಯ ತರಬೇತುದಾರ ಅಮರ್ ಜೀತ್ ಸಿಂಗ್ ಡಾಂಗೆ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಕೇಳಿಬರುತ್ತಿದೆ. ಮುಖ್ಯ ತರಬೇತುದಾರನಿಂದಲ್ಲೇ ಲೈಂಗಿಕ ಕಿರುಕುಳ ನೀಡುತ್ತಿದ್ದು, ವಿಮಾನದಲ್ಲಿ ಟ್ರೈನಿಂಗ್ ನೀಡುವಾಗ ಅಮರ್ ಜೀತ್ ಸಿಂಗ್ ಡಾಂಗೆ ವಿದ್ಯಾರ್ಥಿನಿಯರ ಪ್ರೈವೇಟ್ ಪಾರ್ಟ್ ಗೆ ಹೊಡಿತಾನೆ ಎಂಬ ಆರೋಪ ಕೇಳಿ ಬಂದಿದೆ.

    ವಿದ್ಯಾರ್ಥಿನಿ ತನಗೆ ಆಗಿರುವ ಅನ್ಯಾಯವನ್ನು ತನ್ನ ಸ್ನೇಹಿತೆ ಜೊತೆ ಫೋನಿನಲ್ಲಿ ಶೇರ್ ಮಾಡಿಕೊಳ್ಳುತ್ತಿರುವ ಆಡಿಯೋ ಪಬ್ಲಿಕ್ ಟವಿಗೆ ಲಭ್ಯವಾಗಿದೆ. ಇದನ್ನು ಯಾರಿಗೂ ಹೇಳದಂತೆ ಬೆದರಿಕೆ ಹಾಕುತ್ತಾನೆ. ಒಂದು ವೇಳೆ ಹೇಳಿದ್ರೆ ಪೈಲೆಟ್ ಟ್ರೈನಿಂಗ್‍ನಲ್ಲಿ ಫೇಲ್ ಮಾಡಿಸುತ್ತೀನಿ. ಹಾಗೇ ವಿದ್ಯಾರ್ಥಿ ವೇತನ ಸಿಗದಂತೆ ನೋಡಕೊಳ್ಳತ್ತೀನಿ ಎಂದು ಅಮರ್ ಬೆದರಿಕೆ ಹಾಕುತ್ತಿದ್ದಾನೆ ಎನ್ನಲಾಗಿದೆ.

    ಸದ್ಯ ಅಮರ್ ಜೀತ್ ಸಿಂಗ್ ಡಾಂಗೆ ವಿರುದ್ಧ ಕ್ಯಾಪ್ಟನ್ ಅಮಿತ್ ಸೊಬೆ ದೂರು ನೀಡಿದ್ದಾರೆ. ಬೆಂಗಳೂರು ಪೊಲೀಸ್ ಆಯುಕ್ತರು ಸೇರಿದಂತೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರಿಗೂ ದೂರು ಸಲ್ಲಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ರ‍್ಯಾಗಿಂಗ್‌ ತಪ್ಪಿಸಿಕೊಂಡಿದ್ದಕ್ಕೆ ಟೆಕ್ ವಿದ್ಯಾರ್ಥಿಗೆ ಶಿಕ್ಷೆ – ಮೈದಾನದಲ್ಲೇ ಮೂರು ಗಂಟೆ ಥಳಿಸಿದ ಹಿರಿಯ ವಿದ್ಯಾರ್ಥಿಗಳು!

    ರ‍್ಯಾಗಿಂಗ್‌ ತಪ್ಪಿಸಿಕೊಂಡಿದ್ದಕ್ಕೆ ಟೆಕ್ ವಿದ್ಯಾರ್ಥಿಗೆ ಶಿಕ್ಷೆ – ಮೈದಾನದಲ್ಲೇ ಮೂರು ಗಂಟೆ ಥಳಿಸಿದ ಹಿರಿಯ ವಿದ್ಯಾರ್ಥಿಗಳು!

    ತಿರುವನಂತಪುರ: ಪ್ರಥಮ ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬನಿಗೆ ರ‍್ಯಾಗಿಂಗ್‌ಗಾಗಿ ಹಿರಿಯ ವಿದ್ಯಾರ್ಥಿಗಳು ಅಮಾನವೀಯವಾಗಿ ಥಳಿಸಿ ಘಟನೆ ಕೇರಳದಲ್ಲಿ ನಡೆದಿದ್ದು, ವಿದ್ಯಾರ್ಥಿ ಈಗ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾನೆ.

    ಕೇರಳದ ಇಡುಕ್ಕಿ ಜಿಲ್ಲೆಯ ಡಿಸಿ ಸ್ಕೂಲ್ ಆಫ್ ಮ್ಯಾನೆಜ್‍ಮೆಂಟ್ ಅಂಡ್ ಟೆಕ್ನಾಲಜಿ ಕಾಲೇಜಿನಲ್ಲಿ ರ‍್ಯಾಗಿಂಗ್‌ ನಡೆದಿದ್ದು, ವಿದ್ಯಾರ್ಥಿಯ ಕಾಲು ಹಾಗೂ ತೊಡೆಯ ಭಾಗದಲ್ಲಿ ಬಾಸುಂಡೆ ಕಾಣಿಸಿಕೊಂಡಿದೆ.

    ಕಾಲೇಜಿನ ಹಿರಿಯ ವಿದ್ಯಾರ್ಥಿಗಳು ಕ್ಯಾಂಪಸ್‍ನಿಂದ ನನ್ನನ್ನು ಹೊರಗಡೆ ಕರೆದುಕೊಂಡು ಹೋಗಿದ್ದರು. ನನಗೆ ರಾಡ್ ಹಾಗೂ ಮೊಬೈಲ್ ನೀಡಿ ಒಂದೇ ಕೈಯಲ್ಲಿ ಹಿಡಿಯುವಂತೆ ಹೇಳಿದ್ದರು. ಯಾವುದಾದರು ಒಂದು ಕೆಳಗೆ ಬಿದ್ದರೂ ಥಳಿಸಿಸುವುದಾಗಿ ಸೂಚಿಸಿದ್ದರು. ಆದರೆ ನಾನು ಫೋನ್ ಬೀಳಿಸಿದೆ, ತಕ್ಷಣವೇ ಗುಂಪಿನಿಂದ ಮೂರು ಜನ ನನ್ನ ಮೇಲೆ ಹಲ್ಲೆ ಮಾಡಿದರು. ಬಳಿಕ ಸ್ಟಿಕ್‍ನಿಂದ ನಿರಂತರವಾಗಿ ಮೂರು ಗಂಟೆಗಳ ಕಾಲ ನನ್ನನ್ನು ಥಳಿಸಿದರು ಎಂದು ವಿದ್ಯಾರ್ಥಿ ಆರೋಪಿಸಿದ್ದಾನೆ. ಇದನ್ನು ಓದಿ: ರ‍್ಯಾಗಿಂಗ್‌ ಮಾಡ್ಬೇಡ ಅಂದಿದ್ದಕ್ಕೆ ಶಿವಮೊಗ್ಗದ್ದಲ್ಲಿ ಸೀನಿಯರ್‌ಗೆ ಚೂರಿ ಹಾಕ್ದ ಜೂನಿಯರ್!

    ಹಲ್ಲೆಗೆ ಒಳಗಾದ ವಿದ್ಯಾರ್ಥಿಯು ಜೂನ್ 22 ರಂದು ಕಾಲೇಜಿಗೆ ಸೇರಿದ್ದು, ರ‍್ಯಾಗಿಂಗ್‌ನಿಂದ ತಪ್ಪಿಸಿಕೊಂಡಿದ್ದನು. ಆದರೆ ಈ ಬಾರಿ ಸಿಕ್ಕಿಹಾಕಿಕೊಂಡಿದ್ದ. ಈ ಕುರಿತು 5 ಜನ ಹಿರಿಯ ವಿದ್ಯಾರ್ಥಿಗಳ ಮೇಲೆ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

    ರ‍್ಯಾಗಿಂಗ್‌ ಕಾರಣದಿಂದಾಗಿ ಕಾಲೇಜಿನ ಅನೇಕ ವಿದ್ಯಾರ್ಥಿಗಳು ಹಾಸ್ಟೆಲ್‍ನಲ್ಲಿ ಇರಲು ಹಿಂದೆಟು ಹಾಕಿದ್ದಾರೆ ಎನ್ನಲಾಗಿದೆ. ‘ಕಲಿಯಲು ನಾವು ಶಾಲೆಗೆ ಶುಲ್ಕ ಪಾವತಿಸಿದ್ದೇವೆಯೇ ಹೊರತು ರ‍್ಯಾಗಿಂಗ್‌ಗಾಗಿ ಅಲ್ಲ. ಈ ಕುರಿತು ಅನೇಕ ಬಾರಿ ಆ್ಯಂಟಿ ರ‍್ಯಾಗಿಂಗ್‌ ಕೇಂದ್ರಕ್ಕೆ ದೂರು ಸಲ್ಲಿಸಿದ್ದೇವು. ಆದರೆ ಕೆಲವು ಒತ್ತಡಕ್ಕೆ ಮಣಿದು ದೂರನ್ನು ಹಿಂದಕ್ಕೆ ಪಡೆಯಬೇಕಾಯಿತು ಎಂದು ಕಾಲೇಜಿನ ವಿದ್ಯಾರ್ಥಿಗಳು ಅಳಲು ತೋಡಿಕೊಂಡಿದ್ದಾರೆ ಎಂದು ವರದಿಯಾಗಿದೆ.

    ಈ ಕುರಿತು ಕಾಲೇಜು ಆಡಳಿತ ಮಂಡಳಿ ಹಾಗೂ ಪ್ರಾಚಾರ್ಯರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ವರದಿಯಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ರ‍್ಯಾಗಿಂಗ್‌ ಮಾಡ್ಬೇಡ ಅಂದಿದ್ದಕ್ಕೆ ಶಿವಮೊಗ್ಗದ್ದಲ್ಲಿ ಸೀನಿಯರ್‌ಗೆ ಚೂರಿ ಹಾಕ್ದ ಜೂನಿಯರ್!

    ರ‍್ಯಾಗಿಂಗ್‌ ಮಾಡ್ಬೇಡ ಅಂದಿದ್ದಕ್ಕೆ ಶಿವಮೊಗ್ಗದ್ದಲ್ಲಿ ಸೀನಿಯರ್‌ಗೆ ಚೂರಿ ಹಾಕ್ದ ಜೂನಿಯರ್!

    ಶಿವಮೊಗ್ಗ: ರ‍್ಯಾಗಿಂಗ್‌ ಮಾಡಬೇಡ ಎಂದು ಬುದ್ಧಿವಾದ ಹೇಳಿದ ಹಿರಿಯ ವಿದ್ಯಾರ್ಥಿಗೆ, ಕಿರಿಯ ವಿದ್ಯಾರ್ಥಿ ಚೂರಿ ಹಾಕಿದ ಘಟನೆ ಶಿವಮೊಗ್ಗದ ಸಹ್ಯಾದ್ರಿ ಕಾಲೇಜು ಕ್ಯಾಂಪಸ್ ನಲ್ಲಿ ನಡೆದಿದೆ.

    ಕ್ಯಾಂಪಸ್ ನಲ್ಲಿ ಇರುವ ಜ್ಯೂಬಿಲಿ ಬಿಲ್ಡಿಂಗ್ ನಲ್ಲಿ ಈ ಘಟನೆ ನಡೆದಿದ್ದು, ದ್ವಿತೀಯ ವರ್ಷದ ವಿದ್ಯಾರ್ಥಿಯೊಬ್ಬ ಗೆಳೆಯರ ಜೊತೆ ಸೇರಿಕೊಂಡು ಕೆಲ ದಿನಗಳ ಹಿಂದೆ ಕಾಲೇಜಿನ ವಿದ್ಯಾರ್ಥಿನಿಯರನ್ನು ಚುಡಾಯಿಸುತ್ತಿದ್ದ. ಇದನ್ನ ಗಮನಿಸಿದ ಅಂತಿಮ ವರ್ಷದ ವಿದ್ಯಾರ್ಥಿಗಳು ಇವನಿಗೆ ಉಪನ್ಯಾಸಕರ ಎದುರೇ ಕರೆದು ಒಂದೆರಡು ಹೊಡೆತ ಕೊಟ್ಟು ಬುದ್ಧಿವಾದ ಹೇಳಿ ಕಳಿಸಿದ್ದರು. ಈ ಘಟನೆಯಿಂದ ಆಕ್ರೋಶಗೊಂಡ ವಿದ್ಯಾರ್ಥಿ ಇಂದು ಹೊರಗಿನ ಗೆಳೆಯರ ಜೊತೆ ಬಂದು ಹಿರಿಯ ವಿದ್ಯಾರ್ಥಿಗೆ ಚೂರಿ ಹಾಕಿ ಪರಾರಿ ಆಗಿದ್ದಾನೆ. ಘಟನೆಯಿಂದ ಸಹ್ಯಾದ್ರಿ ಕಾಲೇಜು ಕ್ಯಾಂಪಸ್ ನಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

    ಸದ್ಯಕ್ಕೆ ಗಾಯಗೊಂಡಿರುವ ವಿದ್ಯಾರ್ಥಿ ಮೆಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಘಟನೆ ಕುರಿತು ಕೋಟೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಪರಾರಿಯಾಗಿರುವ ವಿದ್ಯಾರ್ಥಿಗಾಗಿ ಬಲೆ ಬೀಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಚುಡಾಯಿಸಿದವನಿಗೆ ನಡುರಸ್ತೆಯಲ್ಲೇ ಹಿಗ್ಗಾಮುಗ್ಗಾ ಥಳಿಸಿದ ಯುವತಿ: ವಿಡಿಯೋ ನೋಡಿ

    ಚುಡಾಯಿಸಿದವನಿಗೆ ನಡುರಸ್ತೆಯಲ್ಲೇ ಹಿಗ್ಗಾಮುಗ್ಗಾ ಥಳಿಸಿದ ಯುವತಿ: ವಿಡಿಯೋ ನೋಡಿ

    ನವದೆಹಲಿ: ಮಾರ್ಕೆಟ್ ನಲ್ಲಿ ಯುವಕರ ಗುಂಪೊಂದು ಯುವತಿಗೆ ಚುಡಾಯಿಸಿದ್ದಕ್ಕೆ ಗುಂಪಿನಲ್ಲಿದ್ದ ವ್ಯಕ್ತಿಗೆ ಯುವತಿ ನಡುರಸ್ತೆಯಲ್ಲೇ ಹಿಗ್ಗಾಮುಗ್ಗಾ ಥಳಿಸಿದ ಘಟನೆ ಭಾನುವಾರ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನಡೆದಿದೆ.

    ಯುವತಿ ತನ್ನ ಸ್ನೇಹಿತೆ ಜೊತೆ ಕರೋಲ್ ಬಾಗ್‍ನಲ್ಲಿರುವ ಗಫತರ್ ಮಾರ್ಕೆಟ್‍ಗೆ ಹೋಗುತ್ತಿದ್ದಳು. ಆಗ 4-5 ಯುವಕರ ಗುಂಪೊಂದು ಕೆಟ್ಟ ಸನ್ನೆ ಮಾಡುವ ಮೂಲಕ ಯುವತಿಗೆ ಚುಡಾಯಿಸಿದ್ದಾರೆ. ಯುವಕರ ಈ ವರ್ತನೆ ಕಂಡು ಯುವತಿ ಹಾಗೂ ಆಕೆಯ ಸ್ನೇಹಿತೆ ಆಟೋ ಹತ್ತಿ ಅಲ್ಲಿಂದ ಹೊರಟಿದ್ದಾರೆ.

    ಯುವತಿಯರು ಆಟೋ ಹತ್ತಿ ಹೋಗಿದ ಕೂಡಲೇ ಈ ಯುವಕರ ಗುಂಪು ಕೂಡ ಆಟೋವನ್ನು ಫಾಲೋ ಮಾಡಿದ್ದಾರೆ. ಫಾಲೋ ಮಾಡುತ್ತಿರುವಾಗ ಕೆಟ್ಟ ಕಮೆಂಟ್ಸ್ ಗಳನ್ನು ಕೊಟ್ಟಿದ್ದಾರೆ. ಆಗ ಯುವತಿ ತಕ್ಷಣ ಆಟೋದಿಂದ ಇಳಿದು ಯುವಕರಿಗೆ ತರಾಟೆಗೆ ತೆಗೆದುಕೊಂಡಿದ್ದಾಳೆ. ಯುವಕನ ಶರ್ಟ್ ಕಾಲರ್ ಹಿಡಿದು ಹಿಗ್ಗಾಮುಗ್ಗಾ ಥಳಿಸಿದ್ದಾಳೆ.

    ಯುವತಿ ಆ ಯುವಕನನ್ನು ಥಳಿಸುತ್ತಿರುವಾಗ ಜನರು ಜಮಾಯಿಸಿದ್ದಾರೆ. ಜನರ ಗುಂಪು ಸೇರುತ್ತಿದ್ದಂತೆ ಯುವಕ ಯುವತಿಯ ಹತ್ತಿರ ಕ್ಷೇಮ ಕೇಳಿದ್ದಾನೆ. ನಂತರ ಯುವತಿಯ ರೌದ್ರ ರೂಪ ನೋಡಿ ತಕ್ಷಣ ಆತ ‘ಅಕ್ಕ ಕ್ಷಮಿಸಿ ಬಿಡಿ’ ಎಂದು ಹೇಳಿದ್ದಾನೆ.

    ಯುವಕ ಆಕೆಗೆ ಅಕ್ಕ ಎಂದು ಹೇಳುತ್ತಿದ್ದಂತೆ ಆಕೆ ಇಷ್ಟು ಹೊತ್ತು ನೀನು ನಿನ್ನ ಸ್ನೇಹಿತರ ಜೊತೆ ಸೇರಿ ನನ್ನನ್ನು ಚುಡಾಯಿಸುತ್ತಿದ್ದೆ. ಅಷ್ಟು ಬೇಗ ನಾನು ನಿನಗೆ ಅಕ್ಕ ಆಗಿದ್ದೀನಾ ಎಂದು ಪ್ರಶ್ನಿಸಿ ಯುವತಿ ತರಾಟೆಗೆ ತೆಗೆದುಕೊಂಡಿದ್ದಾಳೆ. ಸದ್ಯ ಈ ಘಟನೆಯನ್ನು ಸ್ಥಳೀಯರು ವಿಡಿಯೋ ಮಾಡಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ.

    ವರದಿಗಳ ಪ್ರಕಾರ ಯುವತಿ ಆತನ ಶರ್ಟ್ ಕಾಲರ್ ಹಿಡಿದು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ದೂರು ದಾಖಲಿಸಿದ್ದಾರೆ. ಮನೀಶ್ ಹಾಗೂ ಅಭಿಷೇಕ್ ಹೆಸರಿನ ಇಬ್ಬರೂ ಯುವಕರನ್ನು ಪೊಲೀಸರು ಬಂಧಿಸಿದ್ದು, ಈ ಇಬ್ಬರೂ ಆರೋಪಿಗಳು ದೆಹಲಿಯಿಂದ 100ಕಿ.ಮೀ ದೂರದಲ್ಲಿರುವ ಹರಿಯಾಣದ ಚರಕಿ ದಾದರಿಯುವರು ಎಂಬುದು ತಿಳಿದುಬಂದಿದೆ.

  • ಮದ್ವೆಯಲ್ಲಿ ವರನಿಗೆ ಟೊಮೆಟೋ, ಮೊಟ್ಟೆ, ಸಗಣಿ ನೀರು, ಹಾಕಿ ಸ್ನಾನ ಮಾಡಿಸಿದ ಸ್ನೇಹಿತರು

    ಮದ್ವೆಯಲ್ಲಿ ವರನಿಗೆ ಟೊಮೆಟೋ, ಮೊಟ್ಟೆ, ಸಗಣಿ ನೀರು, ಹಾಕಿ ಸ್ನಾನ ಮಾಡಿಸಿದ ಸ್ನೇಹಿತರು

    ಮಂಗಳೂರು: ಮದುವೆಯ ದಿನ ಮಧುಮಗನಿಗೆ ಕೀಟಲೆ ಮಾಡೋದು ಮಾಮೂಲಿ. ಆದರೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ರಾಯಿ ಎಂಬಲ್ಲಿ ನಡೆದ ಮದುವೆ ಮಾತ್ರ ತುಂಬನೇ ಡಿಫರೆಂಟ್ ಆಗಿತ್ತು. ಇತರ ಸ್ನೇಹಿತರಿಗೆ ಮದುವೆಯ ದಿನ ಕೀಟಲೆ ಕೊಡುತ್ತಿದ್ದ ಆತನಿಗೆ ಆತನ ಸ್ನೇಹಿತರು ಸಖತ್ ಆಗಿಯೇ ಶಾಕ್ ಕೊಟ್ಟಿದ್ದಾರೆ.

    ಹೌದು. ಬಂಟ್ವಾಳದ ರಾಯಿ ನಿವಾಸಿ ಮಂಗಳೂರಿನ ಖಾಸಗಿ ಕಂಪನಿಯಲ್ಲಿ ಉದ್ಯೋಗದಲ್ಲಿರುವ ರಾಕೇಶ್‍ಗೆ ಕಳೆದ ಫೆಬ್ರವರಿ 19 ರಂದು ಮೆಹಂದಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಮಧುಮಗ ರಾಕೇಶ್ ಶಾಸ್ತ್ರೋಕ್ತವಾಗಿ ಮೆಹೆಂದಿ ಕಾರ್ಯಕ್ರಮಕ್ಕೆ ತಯಾರಾಗುತ್ತಿದ್ದರೆ ಇತ್ತ ರಾಕೇಶ್ ಸ್ನೇಹಿತರು ಮಾತ್ರ ಕುಚೇಷ್ಠೆಗೆ ತಯಾರಾಗಿದ್ದರು.

    ಮಧುಮಗನಿಗೆ ಮನೆಯವರು ಹಾಲು ಸುರಿಯುತ್ತಿದ್ದಂತೆ ಬಂದ ಸ್ನೇಹಿತರು ರಾಕೇಶ್ ಮೇಲೆ ಹಳಸಿದ ಟೊಮೆಟೋ, ಮೊಟ್ಟೆ, ಸಗಣಿ ನೀರು ಸುರಿದಿದ್ದಾರೆ. ಅಷ್ಟೇ ಅಲ್ಲದೇ ಮದುವೆ ದಿನಾನೂ ಮಧುಮಗನನ್ನು ಬಿಡದ ಸ್ನೇಹಿತರು, ವಿವಿಧ ತರಕಾರಿಗಳ ಮಾಲೆಯನ್ನು ಮಾಡಿ ಹೊರೆಕಾಣಿಕೆ ರೂಪದಲ್ಲಿ ಮದುವೆ ಮಂಟಪಕ್ಕೆ ತಂದಿದ್ರು. ಎಲ್ಲಾ ಸ್ನೇಹಿತರು ಒಂದೇ ರೀತಿಯ ಪಂಚೆ ಹಾಗೂ ಅಂಗಿ ಧರಿಸಿದ್ದು, ಎಲ್ಲರ ಗಮನ ಸೆಳೆದಿತ್ತು.

    ಅಲ್ಲದೆ “ರಾಪಾಟದ ರಾಕೇಶ್‍ನ ಮದುವೆ” ಎಂದು ಬ್ಯಾನರ್ ಕೂಡಾ ಊರು ತುಂಬಾ ಹಾಕಿದ್ದಾರೆ. ಅದರಲ್ಲಿ ಮದುವೆಯ ಕುರಿತು ಡಿಫರೆಂಟ್ ಡೈಲಾಗ್‍ಗಳನ್ನು ಹಾಕಿದ್ದು ಊರಿನವರ ಗಮನ ಸೆಳೆದಿತ್ತು. ಬೇರೆ ಸ್ನೇಹಿತರ ಮದುವೆಯಲ್ಲಿ ಮಧುಮಕ್ಕಳಿಗೆ ರೇಗಿಸುತ್ತಿದ್ದ ರಾಕೇಶ್ ಗೆ ಈ ಬಾರಿ ಸ್ನೇಹಿತರೂ ರೇಗಿಸಿ ಸಖತ್ ಮಜಾ ತೆಗೆದುಕೊಂಡರು.

    ಸದ್ಯ ಮಧುಮಗನಿಗೆ ಯುವಕರ ಕೀಟಲೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಜನ ಸಖತ್ ಎಂಜಾಯ್ ಮಾಡುತ್ತಿದ್ದಾರೆ.

    https://www.youtube.com/watch?v=_zP21lk-DnI

  • ಕಣ್ಣು ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದ ಮೇಘನಾ ಪೋಷಕರು

    ಕಣ್ಣು ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದ ಮೇಘನಾ ಪೋಷಕರು

    ಬೆಂಗಳೂರು: ರ‍್ಯಾಗಿಂಗ್ ಮಾಡಿದ್ದಕ್ಕೆ ಮನನೊಂದು ಆತ್ಮಹತ್ಯೆಗೆ ಶರಣಾದ ಮೇಘನಾಳ ಕಣ್ಣನ್ನು ಪೋಷಕರು ದಾನ ಮಾಡಿದ್ದಾರೆ.

    ಕುಮಾರಸ್ವಾಮಿ ಲೇಔಟ್‍ನ ದಯಾನಂದಸಾಗರ ಕಾಲೇಜಿನಲ್ಲಿ 2ನೇ ಸೆಮಿಸ್ಟರ್ ಸಿವಿಲ್ ಎಂಜಿನಿಯರಿಂಗ್ ವಿದ್ಯಾರ್ಥಿನಿಯಾಗಿದ್ದ ಮೇಘನಾ(18) ರಾಜರಾಜೇಶ್ವರಿ ನಗರದ ಚನ್ನಸಂದ್ರದ ಶಬರಿ ಅಪಾರ್ಟ್ ಮೆಂಟ್ ನಲ್ಲಿ ಇಂದು ಬೆಳಗ್ಗೆ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಳು.

    ಮೇಘನಾ ತಂದೆ ಚಂದ್ರಶೇಖರ್ ಅಂಧರಾಗಿದ್ದು, ಅವರ ಪತ್ನಿ ಲತಾ ಪತಿಯನ್ನ ಕೆಲಸಕ್ಕೆ ಬಿಡಲು ಹೋಗಿದ್ದ ವೇಳೆ ಮೇಘನಾ ಆತ್ಮಹತ್ಯೆಗೆ ಶರಣಾಗಿದ್ದಳು. ಈ ವೇಳೆ ಮೇಘನಾ ಪೋಷಕರು ಮೇಘನಾ ಕಣ್ಣನ್ನು ದಾನ ಮಾಡಿ, ನೋವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ಆರ್‍ಆರ್ ನಗರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

    ಮೇಘನಾ ಕ್ಲಾಸ್ ರೆಪ್ರೆಸೆಂಟೇಟಿವ್ ಎಲೆಕ್ಷನ್‍ನಲ್ಲಿ ಸೋತಿದ್ದ ಹಿನ್ನೆಲೆ ತರಗತಿಯಲ್ಲಿ ಬೇರೆ ವಿದ್ಯಾರ್ಥಿಗಳು ರ‍್ಯಾಗ್ ಮಾಡುತ್ತಿದ್ದರು. ನೀನು ಬ್ಯಾಡ್ ಗರ್ಲ್ ಎಂದು ಪದೇ-ಪದೇ ಹೇಳುತ್ತಿದ್ದರಂತೆ. ಅದಕ್ಕೆ ಮನನೊಂದ ಮೇಘನಾ ರಾಜರಾಜೇಶ್ವರಿ ನಗರದ ಚನ್ನಸಂದ್ರದ ಶಬರಿ ಅಪಾರ್ಟ್ ಮೆಂಟ್ ಮನೆಯಲ್ಲಿ ಯಾರೂ ಇಲ್ಲದ ವೇಳೆ ಆತ್ಮಹತ್ಯೆಗೆ ಶರಣಾಗಿದ್ದಾಳೆ. ರೇಗಿಸುತ್ತಿದ್ದ ವಿದ್ಯಾರ್ಥಿಗಳಿಗೆ ಹೆಚ್‍ಒಡಿ ರಾಜಕುಮಾರ ಬೆಂಬಲ ನೀಡುತ್ತಿದ್ದರು ಎಂದು ಪೋಷಕರು ಆರೋಪಿಸಿದ್ದಾರೆ.