Tag: Rafale

  • ರಾಹುಲ್ ಗಾಂಧಿ ರಫೇಲ್ ಅಂದ್ರೆ ಮೂರು ಚಕ್ರದ ಸೈಕಲ್ ಅಂದುಕೊಂಡಿದ್ದಾರೆ: ಸಚಿವ ಹೆಗ್ಡೆ

    ರಾಹುಲ್ ಗಾಂಧಿ ರಫೇಲ್ ಅಂದ್ರೆ ಮೂರು ಚಕ್ರದ ಸೈಕಲ್ ಅಂದುಕೊಂಡಿದ್ದಾರೆ: ಸಚಿವ ಹೆಗ್ಡೆ

    ಕಾರವಾರ: ರಾಹುಲ್ ಗಾಂಧಿ ರಫೇಲ್ ಯುದ್ಧ ವಿಮಾನವನ್ನು ಮೂರು ಚಕ್ರದ ಸೈಕಲ್ ಎಂದು ಕೊಂಡಿದ್ದಾರೆ ಎಂದು ಕೇಂದ್ರ ಸಚಿವ ಅನಂತ್ ಕುಮಾರ್ ಹೆಗ್ಡೆ ವ್ಯಂಗ್ಯವಾಡಿದ್ದಾರೆ.

    ಇಂದು ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಕಿನ್ನರ ಗ್ರಾಮದಲ್ಲಿ ಬಿಜೆಪಿ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ನಂತರ ಮಾಧ್ಯಮದೊಂದಿಗೆ ಮಾತನಾಡಿದ ಅನಂತ್ ಕುಮಾರ್ ಹೆಗಡೆ, “ರಾಹುಲ್ ಪಾಂಡಿತ್ಯದ ಬಗ್ಗೆ ತಾನು ಚರ್ಚೆ ಮಾಡಲು ಬರುವುದಿಲ್ಲ. ಈ ಬಾರಿ ಚುನಾವಣೆಯಲ್ಲಿ ನಾವು ಅಭಿವೃದ್ಧಿ ಮತ್ತು ದೇಶ ರಕ್ಷಣೆ ವಿಚಾರವನ್ನು ಇಟ್ಟುಕೊಂಡು ಜನರ ಮುಂದೆ ಹೋಗುತ್ತೇವೆ” ಎಂದು ತಿಳಿಸಿದರು.

    ತಮ್ಮ ಪಕ್ಷ ಸೈನ್ಯವನ್ನು ಇಟ್ಟುಕೊಂಡು ಚುನಾವಣೆ ಎದುರಿಸುತ್ತಿಲ್ಲ. ದೇಶದ ಸೈನ್ಯವನ್ನು ಪ್ರಶ್ನೆ ಮಾಡುವ ನೈತಿಕತೆ ಯಾರಿಗೂ ಇಲ್ಲ. ರಾಜಕೀಯ ಇಟ್ಟುಕೊಂಡು ಯಾರೇ ಚರ್ಚೆ ಮಾಡಿ, ಸೈನ್ಯಕ್ಕೆ ಬಿಜೆಪಿ ನೇತೃತ್ವದ ಸರ್ಕಾರ ಸಂಪೂರ್ಣ ಅಧಿಕಾರವನ್ನು ಕೊಟ್ಟಿದೆ ಎಂದು ಅನಂತ್ ಕುಮಾರ್ ಹೆಗಡೆ ಹೇಳಿದರು.

    ಉತ್ತರ ಕನ್ನಡ ಜಿಲ್ಲೆಯ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ತನ್ನ ವಿರುದ್ಧ ಸಮರ್ಥ ಅಭ್ಯರ್ಥಿಯನ್ನು ನಿಲ್ಲಿಸುತ್ತಾರೆ ಎನ್ನುವ ವಿಶ್ವಾಸ ತನಗಿದೆ ಎಂದರು. ಇದಲ್ಲದೇ ಸಾಮಾಜಿಕ ಜಾಲತಾಣದಲ್ಲಿ ತನ್ನ ವಿರುದ್ಧ ಟೀಕೆ ಮಾಡುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅನಂತ್ ಎಲ್ಲರಿಗೂ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವ ಸ್ವಾತಂತ್ರ್ಯವಿದೆ. ಆದರೆ ಚುನಾವಣೆ ಆಯೋಗ ಎಲ್ಲವನ್ನು ವೀಕ್ಷಿಸುತ್ತಿದೆ ಎಂದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಪಾಕ್ ಎಫ್ 16 ವಿರುದ್ಧ ಹೋರಾಡಲು ಬೇಕೇಬೇಕು – ರಕ್ಷಣಾ ಸಚಿವಾಲಯದಿಂದ ರಫೇಲ್ ರಹಸ್ಯ ದಾಖಲೆ ಕಳ್ಳತನ: ಕೇಂದ್ರ

    ಪಾಕ್ ಎಫ್ 16 ವಿರುದ್ಧ ಹೋರಾಡಲು ಬೇಕೇಬೇಕು – ರಕ್ಷಣಾ ಸಚಿವಾಲಯದಿಂದ ರಫೇಲ್ ರಹಸ್ಯ ದಾಖಲೆ ಕಳ್ಳತನ: ಕೇಂದ್ರ

    ನವದೆಹಲಿ: ಪಾಕಿಸ್ತಾನದ ಎಫ್ 16 ವಿಮಾನಕ್ಕೆ ತಡೆ ಒಡ್ಡಬೇಕಾದರೆ ಭಾರತಕ್ಕೆ ರಫೇಲ್ ಯುದ್ಧ ವಿಮನ ಅಗತ್ಯವಿದೆ ಎಂದು ಹೇಳಿ, ರಫೇಲ್ ಖರೀದಿ ಒಪ್ಪಂದಕ್ಕೆ ಸಂಬಂಧಿಸಿದ ರಹಸ್ಯ ದಾಖಲೆಗಳು ರಕ್ಷಣಾ ಸಚಿವಾಲಯದಿಂದ ಕಳ್ಳತನವಾಗಿದೆ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟಿಗೆ ತಿಳಿಸಿದೆ.

    ರಫೇಲ್ ತೀರ್ಪಿನ ಮರುಪರಿಶೀಲನಾ ಅರ್ಜಿ ವಿಚಾರಣೆ ಇಂದು ಮುಖ್ಯ ನ್ಯಾ. ರಂಜನ್ ಗೊಗೋಯ್, ನ್ಯಾ. ಸಂಜೀವ್ ಕಿಶನ್ ಕೌಲ್, ನ್ಯಾ. ಕೆಎಂ ಜೋಸೆಫ್ ಅವರಿದ್ದ ತ್ರಿಸದಸ್ಯ ಪೀಠದಲ್ಲಿ ನಡೆಯಿತು. ಈ ವೇಳೆ ಅರ್ಜಿದಾರರಾದ ಪ್ರಶಾಂತ್ ಭೂಷಣ್ ಮಾಧ್ಯಮವೊಂದರಲ್ಲಿ ಪ್ರಕಟವಾದ ವರದಿಯನ್ನು ಉಲ್ಲೇಖಿಸಿಸಿದರು. ಈ ಸಂದರ್ಭದಲ್ಲಿ ಕೋರ್ಟ್ ಈ ಅರ್ಜಿಗೆ ಸಂಬಂಧಿಸಿದಂತೆ ನಾವು ಯಾವುದೇ ಹೊಸ ದಾಖಲೆಗಳನ್ನು ಪರಿಗಣಿಸುವುದಿಲ್ಲ ಎಂದು ಹೇಳಿತು.

    ನ್ಯಾಯಾಲಯದಿಂದ ಈ ಅಭಿಪ್ರಾಯ ಬಂದ ಕೂಡಲೇ, ಈ ದಾಖಲೆಗಳು ಸೂಕ್ಷವಾಗಿದ್ದು, ರಕ್ಷಣಾ ಸಚಿವಾಲಯದ ಮೂಲಗಳಿಂದ ನಾನು ಪಡೆದಿದ್ದೇನೆ ಪ್ರಶಾಂತ್ ಭೂಷಣ್ ತಿಳಿಸಿದರು. ಈ ಸಂದರ್ಭದಲ್ಲಿ ಅಟಾರ್ನಿ ಜನರಲ್ ಕೆಸಿ ವೇಣುಗೋಪಾಲ್, ರಕ್ಷಣಾ ಸಚಿವಾಲಯದಿಂದ ಕಳ್ಳತನವಾಗಿರುವ ಮಾಹಿತಿಯನ್ನು ಆಧಾರವಾಗಿ ಇಟ್ಟುಕೊಂಡು ಉಲ್ಲೇಖಿಸಿ ವರದಿಯನ್ನು  ಪ್ರಶಾಂತ್ ಭೂಷಣ್ ಹೇಳುತ್ತಿದ್ದಾರೆ. ರಕ್ಷಣಾ ಇಲಾಖೆಯ ಮಾಜಿ ಅಥವಾ ಹಾಲಿ ಉದ್ಯೋಗಿಗಳು ದಾಖಲೆಗಳನ್ನು ಕದ್ದಿದ್ದಾರೆ ಎಂದು ನ್ಯಾಯಾಲಯದ ಗಮನಕ್ಕೆ ತಂದರು.

    ಈ ವೇಳೆ ಮಧ್ಯಪ್ರವೇಶಿಸಿದ ಮುಖ್ಯ ನ್ಯಾ. ರಂಜನ್ ಗೊಗೋಯ್ ಈ ಸಂಬಂಧ ಸರ್ಕಾರ ಏನು ಕ್ರಮವನ್ನು ತೆಗೆದುಕೊಂಡಿದೆ ಎಂದು ಪ್ರಶ್ನಿಸಿದರು. ಈ ಪ್ರಶ್ನೆಗೆ ತನಿಖೆ ನಡೆಯುತ್ತಿದೆ ಎಂದು ಎಜೆ ಉತ್ತರಿಸಿದರು.

    ರಫೇಲ್ ಸುದ್ದಿ ಪ್ರಕಟಿಸಿ ವಿಚಾರಣೆ ವೇಳೆ ಪ್ರಭಾವ ಮೂಡಿಸುವ ಯತ್ನ ನಡೆಯುತ್ತಿದೆ. ಈ ಕಾರಣಕ್ಕಾಗಿ ಮಂಗಳವಾರ ಒಂದು ಸುದ್ದಿ ಪ್ರಕಟವಾಗಿದ್ದರೆ ಇಂದು ಇನ್ನೊಂದು ಸುದ್ದಿ ಪ್ರಕಟವಾಗಿದೆ. ಈ ಸುದ್ದಿಯನ್ನು ಆಧಾರವಾಗಿಟ್ಟುಕೊಂಡು ಅರ್ಜಿದಾರರು ವಾದಿಸುತ್ತಿದ್ದಾರೆ. ಅರ್ಜಿದಾರರು ಉಲ್ಲೇಖಿಸಿದ ಮಾಹಿತಿ ಅಧಿಕೃತ ರಹಸ್ಯ ಕಾಯ್ದೆಯ ಅಡಿಯಲ್ಲಿ ಬರುತ್ತದೆ ಮತ್ತು ನ್ಯಾಯಾಂಗದ ಉಲ್ಲಂಘನೆಯಾಗಿದೆ. ಈ ಮಾಹಿತಿಗಳು ಸಾರ್ವಜನಿಕವಾಗಿ ಲಭ್ಯವಾಗಬಾರದು. ಹೀಗಾಗಿ ಇದು ಅಧಿಕೃತ ರಹಸ್ಯ ಕಾಯ್ದೆಯ ಉಲ್ಲಂಘನೆ. ಈ ದಾಖಲೆಗಳನ್ನು ಯಾವುದೇ ಕಾರಣಕ್ಕೆ ಅರ್ಜಿಯ ಜೊತೆ ಪರಿಗಣಿಸಬಾರದು ಎಂದು ವಾದಿಸಿದರು.

    ರಫೇಲ್ ಖರೀದಿ ಪ್ರಕ್ರಿಯೆ ನ್ಯಾಯಾಂಗದ ಪರಾಮರ್ಶೆಯ ವ್ಯಾಪ್ತಿಗೆ ಬರುವುದಿಲ್ಲ. ಹೀಗಾಗಿ ತೀರ್ಪು ಮರುಪರಿಶೀಲನೆ ನಡೆಸಬೇಕೆಂದು ಸಲ್ಲಿಕೆಯಾದ ಎಲ್ಲ ಅರ್ಜಿಗಳನ್ನು ವಜಾಗೊಳಿಸಬೇಕೆಂದು ಎಜಿ ಮನವಿ ಮಾಡಿದರು.

    ಏರ್ ಸರ್ಜಿಕಲ್ ಸ್ಟ್ರೈಕ್ ನಡೆದ ಬಳಿಕ ಪಾಕ್ ಸೇನೆಯ ದಾಳಿಯನ್ನು ಪ್ರಸ್ತಾಪಿಸಿದ ಎಜೆ, ಒಂದು ವೇಳೆ ಎಫ್ 16 ವಿಮಾನಗಳಿಗೆ ತಡೆ ಒಡ್ಡಬೇಕಾದರೆ ರಫೇಲ್ ದೇಶಕ್ಕೆ ಅಗತ್ಯವಿದೆ. ಈಗಾಗಲೇ ತರಬೇತಿಗಾಗಿ ನಮ್ಮ ಪೈಲಟ್ ಗಳು ಪ್ಯಾರಿಸ್ ಗೆ ತೆರಳಿದ್ದಾರೆ. ಇದೇ ಸೆಪ್ಟೆಂಬರ್ ನಲ್ಲಿ ಹಾರಲು ಸಿದ್ಧವಾಗಿರುವ ಸ್ಥಿತಿಯಲ್ಲಿರುವ ರಫೇಲ್ ವಿಮಾನ ವಾಯುಸೇನೆಗೆ ಸೇರ್ಪಡೆಯಾಗಲಿದೆ ಎಂದು ಹೇಳಿ ಸರ್ಕಾರದ ನಡೆಯನ್ನು ಸಮರ್ಥಿಸಿಕೊಂಡರು.

    ವಿಚಾರಣೆಯ ಸಂದರ್ಭದಲ್ಲಿ ರಾಷ್ಟ್ರೀಯ ಭದ್ರತಾ ವಿಚಾರವನ್ನು ಉಲ್ಲಂಘಿಸಿ ಸರ್ಕಾರಿ ದಾಖಲೆಯನ್ನು ಪ್ರಕಟಿಸಿದ್ದಕ್ಕಾಗಿ ಎರಡು ಮಾಧ್ಯಮಗಳ ವಿರುದ್ಧ ಸರ್ಕಾರ ಕ್ರಮಗಳನ್ನು ತೆಗೆದುಕೊಳ್ಳಲಿದೆ ಎಂದು ಎಜೆ ನ್ಯಾಯಾಲಯಕ್ಕೆ ತಿಳಿಸಿದರು.

    ದೀರ್ಘವಾಗಿ ವಾದ, ಪ್ರತಿವಾದವನ್ನು ಆಲಿಸಿದ ಕೋರ್ಟ್ ಮುಂದಿನ ವಿಚಾರಣೆಯನ್ನು ಮಾರ್ಚ್ 14ರ ಮಧ್ಯಾಹ್ನ 3 ಗಂಟೆಗೆ ಮುಂದೂಡಿತು.

    ರಫೇಲ್ ಒಪ್ಪಂದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ತಪ್ಪು ಮಾಹಿತಿ ನೀಡಿದ ಕೇಂದ್ರದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಪ್ರಶಾಂತ್ ಭೂಷಣ್ ಅರ್ಜಿ ಸಲ್ಲಿಸಿದ್ದಾರೆ. ಇದರ ಜೊತೆಯಲ್ಲೇ ಕೇಂದ್ರ ಸರ್ಕಾರ ತೀರ್ಪಿನ ಉಲ್ಲೇಖ ಇರುವ ವಾಕ್ಯದಲ್ಲಿ ಕೆಲವು ತಿದ್ದುಪಡಿಗಳಾಗಬೇಕಿದೆ ಎಂದು ಅಫಿಡವಿಟ್ ಮನವಿ ಸಲ್ಲಿಸಿತ್ತು. ಮಹಾಲೇಖಪಾಲರ ವರದಿ(ಸಿಎಜಿ) ಹಾಗೂ ಪಿಎಸಿಗೆ ಸಂಬಂಧಿಸಿದ ದಾಖಲೆಗಳನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಲಾಗಿತ್ತು. ಈ ದಾಖಲೆಗಳ ವಿಷಯವನ್ನು ತಪ್ಪಾಗಿ ವ್ಯಾಖ್ಯಾನ ಮಾಡಲಾದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಕೋರ್ಟ್ ಮೊರೆ ಹೋಗಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ರಫೇಲ್ ಬಗ್ಗೆ ಮಾತನಾಡುವಾಗ ಕಾಮನ್ ಸೆನ್ಸ್ ಬಳಸಿ: ಮೋದಿ

    ರಫೇಲ್ ಬಗ್ಗೆ ಮಾತನಾಡುವಾಗ ಕಾಮನ್ ಸೆನ್ಸ್ ಬಳಸಿ: ಮೋದಿ

    ನವದೆಹಲಿ: ರಫೇಲ್ ಒಪ್ಪಂದದ ಬಗ್ಗೆ ಪ್ರತಿಪಕ್ಷ ನಾಯಕರು ಮಾತನಾಡುವ ಮುನ್ನ ಕಾಮನ್ ಸೆನ್ಸ್ ಬಳಸಿ. ಸುಮ್ಮನೆ ಮನಬಂದಂತೆ ಮಾತನಾಡಬೇಡಿ ಅಂತ ಪ್ರಧಾನಿ ನರೇಂದ್ರ ಮೋದಿ ಅವರು ವಿಪಕ್ಷ ನಾಯಕರಿಗೆ ತಿರುಗೇಟು ಕೊಟ್ಟಿದ್ದಾರೆ.

    ನಾನು ಹೇಳಿದ್ದು ನಮ್ಮ ವಾಯುಪಡೆ ಬಳಿ ರಫೇಲ್ ಜೆಟ್ ಇದ್ದಿದ್ದರೇ, ಶತ್ರುಗಳ ಮೇಲೆ ನಡೆಸಿದ ದಾಳಿಯಲ್ಲಿ ನಾವು ಯಾವ ಜೆಟ್‍ಗಳನ್ನು ಕಳೆದುಕೊಳ್ಳುತ್ತಿರಲಿಲ್ಲ. ಹಾಗೆಯೇ ಉಗ್ರರು ಉಳಿಯಲು ಬಿಡುತ್ತಿರಲಿಲ್ಲ ಅಂತ. ಆದ್ರೆ ವಿರೋಧ ಪಕ್ಷಗಳು ನನ್ನ ಹೇಳಿಕೆಯನ್ನು ಅಪಾರ್ಥ ಮಾಡಿಕೊಂಡು ಸುಮ್ಮನೆ ಇಲ್ಲಸಲ್ಲದ ಹೇಳಿಕೆ ನೀಡುತ್ತಿದ್ದಾರೆ. ಇನ್ಮುಂದೆ ರಫೇಲ್ ಬಗ್ಗೆ ಮಾತನಾಡುವ ಮುನ್ನ ದಯವಿಟ್ಟು ಸ್ವಲ್ಪ ಕಾಮನ್ ಸೆನ್ಸ್ ಬಳಸಿ ಎಂದು ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ:ನಾಚಿಕೆಯಾಗಲ್ವೇ, ರಫೇಲ್ ಖರೀದಿ ವಿಳಂಬಕ್ಕೆ ನೀವೇ ನೇರ ಹೊಣೆ: ಪ್ರಧಾನಿ ವಿರುದ್ಧ ರಾಹುಲ್ ಕಿಡಿ

    ನಾವು ಸೇನೆಯನ್ನು ನಂಬಿ ಅದರ ಬಗ್ಗೆ ಹೆಮ್ಮೆ ಪಡುವುದು ಸಹಜ. ಆದ್ರೆ ಸೇನೆಯ ಮೇಲೆಯೇ ಯಾಕೆ ಕೆಲವರು ಶಂಕಿಸುತ್ತಿದ್ದಾರೆ ಅಂತ ಗೊತ್ತಾಗುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ. ಹಾಗೆಯೆ ಉಗ್ರರು ಹಾಗೂ ಭಯೋತ್ಪಾದನೆಯನ್ನು ಮಟ್ಟಹಾಕಲು ಭಾರತ ಪ್ರಯತ್ನಿಸುತ್ತಿದೆ. ಅದನ್ನು ಹೇಗೆ ಮಾಡಬೇಕು ಅಂತ ಯೋಚಿಸುತ್ತಿದೆ. ಭಯೋತ್ಪಾದನೆ ವಿಚಾರದಲ್ಲಿ ಭಾರತ ಸುಮ್ಮನೆ ಕೂರಲ್ಲ. ಭಯೋತ್ಪಾದನೆಯನ್ನು ಬುಡದಿಂದ ಕಿತ್ತೆಸೆಯುವ ಕೆಲಸ ನಾವು ಮಾಡುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಈ ಪರಿಸ್ಥಿತಿಯಲ್ಲಿ ರಫೇಲ್ ಇದ್ದಿದ್ರೆ ಕಥೆಯೇ ಬೇರೆ ಇರ್ತಿತ್ತು: ಪ್ರಧಾನಿ ಮೋದಿ

    ಈ ಪರಿಸ್ಥಿತಿಯಲ್ಲಿ ರಫೇಲ್ ಇದ್ದಿದ್ರೆ ಕಥೆಯೇ ಬೇರೆ ಇರ್ತಿತ್ತು: ಪ್ರಧಾನಿ ಮೋದಿ

    – ಮೋದಿಯನ್ನು ನೀವು ತೆಗಳಿ, ಸೈನ್ಯವನ್ನು ತೆಗಳಬೇಡಿ
    – ಸೈನ್ಯವನ್ನು ತೆಗಳಿ ಉಗ್ರರಿಗೆ ಸಹಾಯಮಾಡಬೇಡಿ

    ನವದೆಹಲಿ: ಪಾಕಿಸ್ತಾನ ಮತ್ತು ಭಾರತದ ನಡುವೆ ಯುದ್ಧದ ಮೋಡ ಕವಿದಿರುವಾಗಲೇ ಪ್ರಧಾನಿ ನರೇಂದ್ರ ಮೋದಿ ಅಚ್ಚರಿ ಹೇಳಿಕೆ ನೀಡಿದ್ದಾರೆ. ಮಾಧ್ಯಮವೊಂದರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ಸನ್ನಿವೇಶದಲ್ಲಿ ರಫೇಲ್ ಯುದ್ಧ ವಿಮಾನ ಇರುತ್ತಿದ್ದರೆ ಪರಿಸ್ಥಿತಿಯೇ ಬೇರೆಯಾಗಿರುತ್ತಿತ್ತು ಎಂದು ಹೇಳಿದ್ದಾರೆ.

    ದೇಶ ರಫೇಲ್ ಫೈಟರ್ ಜೆಟ್ ಅನುಪಸ್ಥಿತಿಯಲ್ಲಿದೆ. ರಫೆಲ್ ಒಪ್ಪಂದದ ರಾಜಕೀಯ ಕಾರಣದಿಂದಾಗಿ ನಾವು ಈಗಲೂ ಬಳಲುತ್ತಿದ್ದೇವೆ. ಸ್ವಾಭಿಮಾನದ ಆಸಕ್ತಿಗಳು ಮತ್ತು ರಾಜಕೀಯವು ರಾಷ್ಟ್ರದ ಹಿತಾಸಕ್ತಿಗೆ ಹೆಚ್ಚಿನ ಹಾನಿ ತಂದಿದೆ. ರಾಷ್ಟ್ರದ ಭದ್ರತೆಗೆ ಸಂಬಂಧಿಸಿದ ವಿಷಯಗಳಿಗೆ ವಿರೋಧಿಸಬಾರದು ಎಂದು ಹೇಳಿ ವಿಪಕ್ಷಗಳ ವಿರುದ್ಧ ಕಿಡಿಕಾರಿದ್ದಾರೆ.

    ಭಯೋತ್ಪಾದನೆ ವಿರುದ್ಧದ ಹೋರಾಡುತ್ತಿರುವ ಭಾರತದ ಹಿಂದೆ ವಿಶ್ವದ ಅನೇಕ ದೇಶಗಳು ನಿಂತಿವೆ. ಆದರೆ ದೇಶದ ಕೆಲವು ಪಕ್ಷಗಳು ಭಾರತದ ಹೋರಾಟವನ್ನೇ ಪ್ರಶ್ನಿಸುತ್ತಿವೆ. ದೇಶಕ್ಕೆ ಎದುರಾಗಿರುವ ಸವಾಲುಗಳಲ್ಲಿ ಕೆಲವರು ತಮ್ಮದೇ ದೇಶ ವಿರೋಧಿ ಹೇಳಿಕೆ ನೀಡುತ್ತಿದ್ದಾರೆ. ದೇಶದ ಪ್ರತಿಯೊಬ್ಬರು ಭಾರತೀಯ ಸೇನೆಯ ನಿಂತಿದ್ದಾರೆ. ಕೆಲವು ಪಕ್ಷಗಳು ಅವರ ಯೋಧರ ಸಾಧನೆ, ಕಾರ್ಯದ ಮೇಲೆ ಅನುಮಾನ ವ್ಯಕ್ತಪಡಿಸುತ್ತಿವೆ ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ಕಾಂಗ್ರೆಸ್ ನಾಯಕರಿಗೆ ಪ್ರಧಾನಿ ಮೋದಿ ಟಾಂಗ್ ಕೊಟ್ಟರು.

    ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಹಾಗೂ ನೀತಿಗಳನ್ನು ಟೀಕಿಸಲು ಎಲ್ಲರಿಗೂ ಮುಕ್ತ ಅವಕಾಶವಿದೆ. ಆದರೆ ಮೋದಿ ವಿರೋಧಿ ಟೀಕೆಗಳು ಜೈಶ್-ಇ-ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಜರ್ ಮತ್ತು ಜೆಯುಡಿ ಮುಖ್ಯಸ್ಥ ಹಫೀಜ್ ಸಯೀರ್ ರಂತ ಭಯೋತ್ಪಾದಕರಿಗೆ ಸಹಾಯವಾಗಬಾರದು. ಮೋದಿ ವಿರೋಧಿಸುವ ನಿಮ್ಮ ಮೊಂಡುತನದ ಬಯಕೆಯಲ್ಲಿ, ನೀವು ಭಯೋತ್ಪಾದಕರನ್ನು ಬಲಪಡಿಸುವುದನ್ನು ಕೊನೆಗೊಳಿಸಬೇಡಿ ಎಂದರು.

    ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಯನ್ನು ವಿಪಕ್ಷಗಳಿಂದ ವ್ಯಾಪಕ ಟೀಕಿಗಳು ವ್ಯಕ್ತವಾಗಿವೆ. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಟ್ವೀಟ್ ಮೂಲಕ ವಾಗ್ದಾಳಿ ನಡೆಸಿದ್ದಾರೆ. 30 ಸಾವಿರ ಕೋಟಿ ರೂ.ಗಳನ್ನು ಕದ್ದು ನಿಮ್ಮ ಸ್ನೇಹಿತ, ಉದ್ಯಮಿ ಅನಿಲ್ ಅಂಬಾನಿಗೆ ನೀಡಿದ್ದೀರಿ. ರಫೇಲ್ ಜೆಟ್ ಆಗಮನದ ವಿಳಂಬಕ್ಕೆ ನೀವು ಸಂಪೂರ್ಣ ಜವಾಬ್ದಾರರಾಗಿರುತ್ತೀರಿ ಎಂದು ಆರೋಪಿಸಿದ್ದಾರೆ.

    ರಫೇಲ್ ಯುದ್ಧ ವಿಮಾನ ಖರೀದಿಯ ಪ್ರಕರಣದ ತೀರ್ಪು ಮರು ಪರಿಶೀಲನೆ ಸಂಬಂಧ ವಿವಿಧ ಅರ್ಜಿಗಳು ಬಂದಿದ್ದು, ಅವುಗಳನ್ನು ಆಲಿಸಲು ಪ್ರತ್ಯೇಕ ಪೀಠಗಳನ್ನು ರಚಿಸಲಾಗುತ್ತದೆ. ಅರ್ಜಿಗಳನ್ನು ಪರೀಕ್ಷಿಸಬೇಕಿದೆ. ಮುಂದೆ ಏನಾಗುತ್ತದೆ ಎನ್ನುವುದು ನೋಡಬೇಕು ಎಂದು ಸುಪ್ರೀಂ ಕೋರ್ಟ್ ಮುಖ್ಯನಾಯಮೂರ್ತಿ ರಂಜನ್ ಗೋಗಯ್, ಅಭಿಪ್ರಾಯ ವ್ಯಕ್ತಪಡಿಸಿದ್ದರು. ಹೀಗಾಗಿ ತೀರ್ಪು ಮರುಪರಿಶೀಲನಾ ಅರ್ಜಿಯ ವಿಚಾರಣೆ ಮಾರ್ಚ್ 6 ರಂದು ನ್ಯಾಯಾಲಯದಲ್ಲಿ ನಡೆಯಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬೆಂಗಳೂರಿಗೆ ಬಂದಿಳಿಯಿತು ರಫೇಲ್ ವಿಮಾನಗಳು – ವಿಶೇಷತೆ ಏನು? ವಿಡಿಯೋ ನೋಡಿ

    ಬೆಂಗಳೂರಿಗೆ ಬಂದಿಳಿಯಿತು ರಫೇಲ್ ವಿಮಾನಗಳು – ವಿಶೇಷತೆ ಏನು? ವಿಡಿಯೋ ನೋಡಿ

    ಬೆಂಗಳೂರು: ಸದ್ಯ ದೇಶದ ರಾಜಕೀಯ ವಲಯದಲ್ಲಿ ಭಾರೀ ಸದ್ದು ಮಾಡುತ್ತಿರುವ ರಫೇಲ್ ವಿಮಾನ ಭಾರತದಲ್ಲಿ ಲ್ಯಾಂಡ್ ಆಗಿದೆ. ಏರೋ ಇಂಡಿಯಾ ವೈಮಾನಿಕ ಪ್ರದರ್ಶನಕ್ಕೆ ಫ್ರಾನ್ಸಿನ ಡಸಾಲ್ಟ್ ಕಂಪನಿಯ 3 ರಫೇಲ್ ವಿಮಾನಗಳು ಯಲಹಂಕ ವಾಯುನೆಲೆಗೆ ಆಗಮಿಸಿವೆ.

    ಮೂರು ವಿಮಾನಗಳ ಪೈಕಿ 2 ವಿಮಾನಗಳು ವೈಮಾನಿಕ ಪ್ರದರ್ಶನ ನೀಡಿದರೆ ಒಂದು ವೀಕ್ಷಣೆಗೆ ಇರಿಸಲಾಗುತ್ತದೆ. ಹಾರಾಟ ಪ್ರದರ್ಶನ ನೀಡಲಿರುವ ವಿಮಾನಗಳ ಅಧಿಕೃತ ಪೂರ್ವಸಿದ್ಧತೆಯ ಹಾರಾಟ ಗುರುವಾರದಿಂದ ಆರಂಭವಾಗಲಿದೆ. 12ನೇ ಆವೃತ್ತಿಯ ಏರೋ ಇಂಡಿಯಾ ವೈಮಾನ ನಿಕ ಪ್ರದರ್ಶನ ಫೆ.20 ರಿಂದ ಫೆ.24ರವರೆಗೆ ನಡೆಯಲಿದೆ. ಇದನ್ನೂ ಓದಿ: ರಫೇಲ್ ಡೀಲ್ – ಯಾವುದು ಅಗ್ಗ? ಯಾವುದು ದುಬಾರಿ?

    ಇದುವರೆಗೆ ದೇಶ- ವಿದೇಶಗಳ 365 ಕಂಪನಿಗಳು ಪ್ರದರ್ಶನದಲ್ಲಿ ಭಾಗವಹಿಸಲು ನೋಂದಣಿ ಮಾಡಿಕೊಂಡಿದ್ದು, ಆಕಾಶದಲ್ಲಿ ಪ್ರದರ್ಶನ ನೀಡಲು 31 ವಿಮಾನಗಳು ಒಪ್ಪಿಗೆ ನೀಡಿವೆ. 22 ವಿಮಾನಗಳನ್ನು ಪ್ರದರ್ಶನಕ್ಕಿಡಲಾಗುತ್ತಿದ್ದು, ದೇಶೀಯ ಸಾರಂಗ್, ಸೂರ್ಯಕಿರಣ್ ವಿಮಾನಗಳು ಭಾಗವಹಿಸಲಿವೆ.

    ರಫೇಲ್ ವಿಶೇಷತೆ ಏನು?
    ಎರಡು ಎಂಜಿನ್, ಎರಡು ಸೀಟ್ ಗಳನ್ನು ಹೊಂದಿರುವ ವಿಮಾನ ಗಂಟೆಗೆ ಗರಿಷ್ಟ 2 ಸಾವಿರ ಕಿ.ಮೀ ವೇಗದಲ್ಲಿ ಹಾರಾಟ ನಡೆಸಬಲ್ಲದು. 9,500 ಕೆಜಿ ತೂಕದ ಈ ವಿಮಾನ 9,500 ಕೆಜಿ ತೂಕದ ಶಸ್ರ್ತಾಸ್ತ್ರಗಳನ್ನು ಹೊತ್ತುಕೊಂಡು ಹೋಗುವ ಸಾಮರ್ಥ್ಯವನ್ನು ಹೊಂದಿದೆ. ಈ ವಿಮಾನ ಇಳಿಯಲು ಮತ್ತು ಹಾರಾಟಕ್ಕೆ 400 ಮೀಟರ್ ಉದ್ದದ ರನ್‍ವೇ ಅಗತ್ಯವಿಲ್ಲ.

    ವೈರಿಗಳನ್ನು ಗುರುತಿಸಲು ರಫೇಲ್ ವಿಮಾನದಲ್ಲಿ ಸ್ಪೆಕ್ಟ್ರಾ ಸಿಸ್ಟಂ ಇದೆ. ಥೇಲ್ಸ್ ಗ್ರೂಪ್ ಈ ಸ್ಪೆಕ್ಟ್ರಾ ಸಿಸ್ಟಂ ಅನ್ನು ಅಭಿವೃದ್ಧಿ ಪಡಿಸಿದೆ. ರೇಡಿಯೋ ಫಿಕ್ವೆನ್ಸಿ, ರೇಡಾರ್ ವಾರ್ನಿಂಗ್ ರಿಸೀವರ್, ಲೇಸರ್ ವಾರ್ನಿಂಗ್, ಮಿಸೈಲ್ ವಾರ್ನಿಂಗ್, ರೇಡಾರ್ ಜಾಮರ್ ಗಳನ್ನು ಸ್ಪೆಕ್ಟ್ರಾ ಸಿಸ್ಟಂ ನಲ್ಲಿರುವ ಸೆನ್ಸರ್ ಗಳು ಗ್ರಹಿಸುತ್ತವೆ. 1800 ಕಿ.ಮಿ ವ್ಯಾಪ್ತಿ ವಿರೋಧಿಗಳ ಕಾರ್ಯ ಚಟುವಟಿಕೆಯನ್ನು ಗ್ರಹಿಸುವ ಸಾಮರ್ಥ್ಯ ಹೊಂದಿದೆ. ಈ ಕಾರಣಕ್ಕಾಗಿಯೇ ರಫೇಲ್ ವಿಮಾನ ಬೇರೆ ಯುದ್ಧ ವಿಮಾನಗಳಿಗಿಂತ ಭಿನ್ನವಾಗಿ ಗುರುತಿಸಿಕೊಂಡಿದೆ.

    ಡಸಾಲ್ಟ್ ಕಂಪನಿ 1986ರಲ್ಲಿ ಮೊದಲ ರಫೇಲ್ ವಿಮಾನವನ್ನು ನಿರ್ಮಿಸಿದ್ದು, ಭಾರತ ಅಲ್ಲದೇ ಈಜಿಪ್ಟ್, ಕತಾರ್ ದೇಶಗಳು ರಫೇಲ್ ಖರೀದಿ ಸಂಬಂಧ ಡಸಾಲ್ಟ್ ಕಂಪನಿಯ ಜೊತೆ ಮಾತುಕತೆ ನಡೆಸಿವೆ. ಇದನ್ನೂ ಓದಿ: ಪ್ರಧಾನಿ ಮೋದಿಗೆ ಅತಿ ದೊಡ್ಡ ಗೆಲುವು: ಸುಪ್ರೀಂ ತೀರ್ಪಿನಲ್ಲಿರುವ ಪ್ರಮುಖ ಅಂಶಗಳು ಏನು?

    ಯಾವ ದೇಶ ಏನು ಬೇಡಿಕೆ ಇಡುತ್ತದೋ ಆ ಬೇಡಿಕೆಗೆ ಅನುಗುಣವಾಗಿ ಡಸಾಲ್ಟ್ ಕಂಪನಿ ರಫೇಲ್ ವಿಮಾನವನ್ನು ಅಭಿವೃದ್ಧಿ ಪಡಿಸುತ್ತದೆ. ಲೋ ಬ್ಯಾಂಡ್ ಜಾಮರ್, 10 ಗಂಟೆಗಳ ಹಾರಾಟ ಮಾಹಿತಿ ಸಂಗ್ರಹ, ಇಸ್ರೇಲಿ ಹೆಲ್ಮೆಟ್ ಮೌಂಟೆಡ್ ಡಿಸ್ಪ್ಲೇ, ರೆಡಾರ್ ವಾರ್ನಿಂಗ್ ಇನ್ಫ್ರಾರೆಡ್ ಶೋಧ ಮತ್ತು ಟ್ರ್ಯಾಕಿಂಗ್ ಸೇರಿದಂತೆ ಹಲವು ಅತ್ಯಾಧುನಿಕ ಉಪಕರಣಗಳ ಹಾಗೂ ಸೌಲಭ್ಯಗಳನ್ನು  ಅಳವಡಿಸಬೇಕೆಂದು ಭಾರತ ಬೇಡಿಕೆ ಇಟ್ಟಿದ್ದು, ಈ ಬೇಡಿಕೆಗೆ ಅನುಗುಣವಾಗಿ ರಫೇಲ್ ವಿಮಾನ ತಯಾರಾಗುತ್ತಿದೆ.

  • ರಫೇಲ್ ಡೀಲ್ – ಯಾವುದು ಅಗ್ಗ? ಯಾವುದು ದುಬಾರಿ?

    ರಫೇಲ್ ಡೀಲ್ – ಯಾವುದು ಅಗ್ಗ? ಯಾವುದು ದುಬಾರಿ?

    ನವದೆಹಲಿ: ಯುಪಿಎ ರಫೇಲ್ ಡೀಲ್ ಗೆ ಹೋಲಿಕೆ ಮಾಡಿಕೊಂಡರೆ ಎನ್‍ಡಿಎ ಸರ್ಕಾರ ಮಾಡಿಕೊಂಡಿರುವ ಒಪ್ಪಂದ ಶೇ.2.8 ರಷ್ಟು ಅಗ್ಗ ಎಂದು ಮಹಾಲೇಖಪಾಲರ(ಸಿಎಜಿ) ವರದಿ ಹೇಳಿದೆ. ಈ ಮೂಲಕ ರಫೇಲ್ ಖರೀದಿ ವಿಚಾರದಲ್ಲಿ ಅಕ್ರಮ ನಡೆದಿದೆ ಎನ್ನುವ ವಿಪಕ್ಷಗಳ ಆರೋಪದಿಂದ ಕೇಂದ್ರ ಸರ್ಕಾರ ಪಾರಾಗಿದೆ.

    ರಫೇಲ್ ಜೆಟ್ ಖರೀದಿಯ ಒಡಂಬಡಿಕೆ ಬಗ್ಗೆ 141 ಪುಟಗಳ ವರದಿ ಇಂದು ಮಂಡನೆಯಾಗಿದೆ. 2007ರಲ್ಲಿ ಯುಪಿಎ ಪ್ರಸ್ತಾಪಿಸಿದ್ದ 126 ರಫೇಲ್ ವಿಮಾನ ಖರೀದಿಗೆ ಹೋಲಿಸಿದರೆ ಎನ್‍ಡಿಎ ಸರ್ಕಾರ 2016ರಲ್ಲಿ 36 ವಿಮಾನ ಖರೀದಿ ಸಂಬಂಧ ಮಾಡಿಕೊಂಡಿರುವ ಒಪ್ಪಂದ ಶೇ.2.8 ರಷ್ಟು ಅಗ್ಗವಾಗಿದೆ. ಅಷ್ಟೇ ಅಲ್ಲದೇ ಈ ಹೊಸ ಒಪ್ಪಂದದಿಂದಾಗಿ ಭಾರತಕ್ಕೆ ಶೇ.17.08 ರಷ್ಟು ಹಣ ಉಳಿತಾಯವಾಗಿದೆ ಎನ್ನುವ ಅಂಶ ಈ ವರದಿಯಲ್ಲಿದೆ.

    ವರದಿಯಲ್ಲಿ ಏನಿದೆ?
    2007 ರಲ್ಲಿ ಯುಪಿಎ ಪ್ರಸ್ತಾಪಿಸಿದ್ದ ಖರೀದಿ ಒಪ್ಪಂದಕ್ಕಿಂತ ಎನ್‍ಡಿಎ ಸರ್ಕಾರದ ಒಪ್ಪಂದದಲ್ಲಿ ಶೇ.2.86 ಅಗ್ಗದ ಬೆಲೆಯಲ್ಲಿ ವಿಮಾನ ದೊರೆಯಲಿದೆ. 2007ರ ಗುತ್ತಿಗೆಗೆ ಹೋಲಿಕೆ ಮಾಡಿದರೆ ಎನ್‍ಡಿಎ ಸರ್ಕಾರ ಶೇ.9 ರಷ್ಟು ಅಗ್ಗದ ಬೆಲೆಯಲ್ಲಿ ವಿಮಾನ ಸಿಗಲಿದೆ ಎಂದು ವಾದಿಸಿತ್ತು. ಆದರೆ ಈ ವಾದವನ್ನು ಸಿಎಜಿ ತಿರಸ್ಕರಿಸಿದೆ. ಖರೀದಿ ವೇಳೆ ವಿಮಾನದ 14 ಭಾಗಗಳಿಗೆ ಸಂಬಂಧಿಸಿದಂತೆ ಸರ್ಕಾರ ಮೊದಲೇ ಮೂಲಬೆಲೆಯನ್ನು ಅಂದಾಜಿಸಿತ್ತು. ಈ 14 ಭಾಗಗಳ ಪೈಕಿ 7ರ ಬೆಲೆ ಸರ್ಕಾರ ಅಂದಾಜಿಸಿದ ಬೆಲೆಗಿಂತ ಜಾಸ್ತಿಯಾಗಿದ್ದರೆ, ಮೂಲ ವಿಮಾನ ದರ ಸೇರಿದಂತೆ ಮೂರು ಭಾಗಗಳ ಬೆಲೆ ಸರ್ಕಾರ ಅಂದಾಜಿಸಿದ ದರದಲ್ಲೇ ಇದೆ. 4 ಭಾಗಗಳನ್ನು ಸರ್ಕಾರ ಅಂದಾಜಿಸಿದ ಬೆಲೆಗಿಂತಲೂ ಕಡಿಮೆ ದರದಲ್ಲಿ ಖರೀದಿಸಲಾಗಿದೆ.

    ಕಾನೂನು ಸಚಿವಾಲಯದ ಸಲಹೆಯ ಮೇರೆಗೆ ರಕ್ಷಣಾ ಸಚಿವಾಲಯ ಈ ವಿಮಾನಕ್ಕೆ ಸಂಬಂಧಿಸಿದಂತೆ ಸಂಪೂರ್ಣ ಗ್ಯಾರಂಟಿ ನೀಡಬೇಕೆಂಬ ಅಪೇಕ್ಷೆಯನ್ನು ಫ್ರಾನ್ಸ್ ಸರ್ಕಾರದ ಮುಂದಿಟ್ಟಿತ್ತು. ಈ ಬೇಡಿಕೆಗೆ ಫ್ರಾನ್ಸ್ ಸರ್ಕಾರ ಪತ್ರದ ಮೂಲಕ ಒಪ್ಪಿಗೆ ನೀಡಿದೆ.

    ಯುಪಿಎ ಆಫರ್ ಪ್ರಕಾರ ಒಪ್ಪಂದಕ್ಕೆ ಸಹಿ ಬಿದ್ದ 50 ತಿಂಗಳ ಒಳಗಡೆ 18 ವಿಮಾನಗಳು ಭಾರತಕ್ಕೆ ಹಸ್ತಾಂತರವಾಗಬೇಕಿತ್ತು. ಉಳಿದ 18 ವಿಮಾನಗಳನ್ನು ಎಚ್‍ಎಎಲ್ ಉತ್ಪಾದಿಸಬೇಕಿತ್ತು. ಗುತ್ತಿಗೆಗೆ ಸಹಿ ಹಾಕಿದ 49 ರಿಂದ 72 ತಿಂಗಳ ಒಳಗಡೆ ಈ 18 ವಿಮಾನಗಳನ್ನು ನೀಡಬೇಕಿತ್ತು. 2016ರ ಗುತ್ತಿಗೆಯ ಪ್ರಕಾರ ಮೊದಲ 18 ವಿಮಾನಗಳು 36 ರಿಂದ 53 ತಿಂಗಳ ಒಳಗಡೆ ಭಾರತಕ್ಕೆ ನೀಡಬೇಕು. ಉಳಿದ 18 ವಿಮಾನಗಳು 67 ತಿಂಗಳ ಒಳಗಡೆ ಹಸ್ತಾಂತರವಾಗಬೇಕು ಎನ್ನುವ ಷರತ್ತನ್ನು ವಿಧಿಸಲಾಗಿದೆ ಎನ್ನುವ ಅಂಶ ಸಿಎಜಿ ವರದಿಯಲ್ಲಿ ಉಲ್ಲೇಖವಾಗಿದೆ.

    ಅಂದಾಜಿಸಿದ ಬೆಲೆ ಲೆಕ್ಕಾಚಾರ ಹೀಗಿದೆ:
    1. ಹಾರಾಟ ಸ್ಥಿತಿಯಲ್ಲಿರುವ ವಿಮಾನ ಬೆಲೆ : ಯಾವುದೇ ಬದಲಾವಣೆ ಇಲ್ಲ
    2. ಸೇವೆ, ಉತ್ಪನ್ನ, ಆಪರೇಷನ್ ಸಪೋರ್ಟ್ ಇಕ್ವಿಪ್‍ಮೆಂಟ್(ಒಎಸ್‍ಇ), ಟೆಕ್ನಿಕಲ್ ಸಹಾಯ, ದಾಖಲೀಕರಣ, ಪ್ರೋಗ್ರಾಂ ಮ್ಯಾನೇಜ್‍ಮೆಂಟ್ – ಶೇ.4.77 ಅಗ್ಗ
    3. ತಯಾರಿಕೆಯ ಮಾನದಂಡ – ಯಾವುದೇ ಬದಲಾವಣೆ ಇಲ್ಲ
    4. ಎಂಜಿನಿಯರಿಂಗ್ ಸಪೋರ್ಟ್ ಪ್ಯಾಕೇಜ್ – ಶೇ.6.54 ದುಬಾರಿ
    5. ಲಾಜಿಸ್ಟಿಕ್ಸ್ ಪರ್ಫಾಮೆನ್ಸ್ – ಶೇ.6.54 ದುಬಾರಿ
    6. ಟೂಲ್ಸ್, ಟೆಸ್ಟರ್ ಮತ್ತು ಗ್ರೌಂಡ್ ಇಕ್ವಿಪ್‍ಮೆಂಟ್ – ಶೇ.0.15 ದುಬಾರಿ
    7. ಆಯುಧಗಳ ಪ್ಯಾಕೇಜ್ – ಶೇ.1.05 ಅಗ್ಗ
    8. ಸಲಕರಣೆಗಳು- ಯಾವುದೇ ಬದಲಾವಣೆ ಇಲ್ಲ
    9. ಸಿಮ್ಯೂಲೇಟರ್, ವಾರ್ಷಿಕ ನಿರ್ವಹಣೆ- ಯಾವುದೇ ಬದಲಾವಣೆ ಇಲ್ಲ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಯುಪಿಎಗೆ ಹೋಲಿಸಿದರೆ ಎನ್‍ಡಿಎ ರಫೇಲ್ ಡೀಲ್ ಶೇ.2.8 ರಷ್ಟು ಅಗ್ಗ: ಸಿಎಜಿ

    ಯುಪಿಎಗೆ ಹೋಲಿಸಿದರೆ ಎನ್‍ಡಿಎ ರಫೇಲ್ ಡೀಲ್ ಶೇ.2.8 ರಷ್ಟು ಅಗ್ಗ: ಸಿಎಜಿ

    ನವದೆಹಲಿ: ಯುಪಿಎ ಮಾಡಿಕೊಂಡಿದ್ದ ರಫೇಲ್ ಖರೀದಿ ಒಪ್ಪಂದಕ್ಕೆ ಹೋಲಿಕೆ ಮಾಡಿದರೆ ಎನ್‍ಡಿಎ ಮಾಡಿಕೊಂಡಿರುವ ಒಪ್ಪಂದ ಶೇ.2.8 ಎಷ್ಟು ಅಗ್ಗ ಎಂದು ಮಹಾಲೇಖಪಾಲರ ವರದಿ(ಸಿಎಜಿ) ಹೇಳಿದೆ.

    ಮೋದಿ ಸರ್ಕಾರದ ಅತಿ ದೊಡ್ಡ ಹಗರಣ ಎಂದು ಕಾಂಗ್ರೆಸ್ ಆರೋಪಿಸುತ್ತಿರುವ ರಫೇಲ್ ಒಪ್ಪಂದಕ್ಕೆ ಸಂಬಂಧಿಸಿದ ಸಿಎಜಿ ವರದಿ ಇಂದು ರಾಜ್ಯಸಭೆಯಲ್ಲಿ ಮಂಡನೆಯಾಗಿದೆ. 2007ರಲ್ಲಿ ಯುಪಿಎ ಪ್ರಸ್ತಾಪಿಸಿದ್ದ 126 ರಫೇಲ್ ವಿಮಾನ ಖರೀದಿಗೆ ಹೋಲಿಸಿದರೆ ಎನ್‍ಡಿಎ ಸರ್ಕಾರ 2016ರಲ್ಲಿ 36 ವಿಮಾನ ಖರೀದಿ ಸಂಬಂಧ ಮಾಡಿಕೊಂಡಿರುವ ಒಪ್ಪಂದ ಶೇ.2.8 ರಷ್ಟು ಅಗ್ಗವಾಗಿದೆ. ಅಷ್ಟೇ ಅಲ್ಲದೇ ಈ ಹೊಸ ಒಪ್ಪಂದದಿಂದಾಗಿ ಭಾರತಕ್ಕೆ ಶೇ.17.08 ರಷ್ಟು ಹಣ ಉಳಿತಾಯವಾಗಿದೆ ಎನ್ನುವ ಅಂಶ ಈ ವರದಿಯಲ್ಲಿದೆ. ಈ ವರದಿ ಮಂಡನೆಯಾಗುತ್ತಿದ್ದಂತೆ ವಿರೋಧ ಪಕ್ಷಗಳು ರಾಜ್ಯಸಭೆಯಲ್ಲಿ ಗದ್ದಲ ಎಬ್ಬಿಸಿವೆ.

     

    ಮಹಾಲೇಖಪಾಲ ರಾಜೀವ್ ಮಹರ್ಷಿ ಅವರು ರಫೇಲ್ ಖರೀದಿ ಒಪ್ಪಂದ ನಡೆಸುವಾಗ ಅವರು ಹಣಕಾಸು ಕಾರ್ಯದರ್ಶಿಯಾಗಿದ್ದರು. ಇವರ ಅವಧಿಯಲ್ಲಿ ಯುಪಿಎ ಒಪ್ಪಂದ ರದ್ದಾಗಿ 36 ವಿಮಾನ ಖರೀದಿಯ ವ್ಯವಹಾರ ನಡೆದಿತ್ತು. ರಫೇಲ್ ಮಾತುಕತೆಯಲ್ಲಿ ಮಹರ್ಷಿ ಅವರು ಭಾಗಿಯಾಗಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.

    ಕಾಂಗ್ರೆಸ್ ಟೀಕೆಗೆ ಅರುಣ್ ಜೇಟ್ಲಿ ತಿರುಗೇಟು ನೀಡಿದ್ದು, ಸುಪ್ರೀಂ ಕೋರ್ಟ್ ತಪ್ಪು, ಸಿಎಜಿ ವರದಿಯೂ ತಪ್ಪು. ಅವರಿಗೆ ರಾಜವಂಶ ಮಾತ್ರ ಸರಿ, ಸತ್ಯಮೇವ ಜಯತೇ, ಕೊನೆಗೂ ಸತ್ಯವೇ ಗೆದ್ದಿದೆ. ನಮ್ಮ ರಫೇಲ್ ಒಪ್ಪಂದ ಕಡಿಮೆ ಬೆಲೆ, ವೇಗವಾಗಿ ವಿತರಣೆ, ಉತ್ತಮ ನಿರ್ವಹಣೆ ಎಂದು ಟ್ವೀಟ್ ಮಾಡಿದ್ದಾರೆ.  ಇದನ್ನೂ ಓದಿ:  18 ವರ್ಷ ಕಳೆದರೂ ಸಿತಾರಾ ವಿಮಾನ ಪೂರೈಸದ ಎಚ್‍ಎಎಲ್

    ಸುಪ್ರೀಂ ತೀರ್ಪಿನಲ್ಲಿ ಏನಿತ್ತು?
    ರಫೇಲ್ ಖರೀದಿ ಒಪ್ಪಂದದಲ್ಲಿ ಸಂದೇಹ ಪಡುವ ಅಗತ್ಯವಿಲ್ಲ. ಖರೀದಿಯಲ್ಲಿ ಅವ್ಯವಹಾರ ನಡೆದಿದೆ ಎನ್ನುವುದಕ್ಕೆ ಯಾವುದಕ್ಕೆ ಸಾಕ್ಷ್ಯಗಳು ಸಿಕ್ಕಿಲ್ಲ. ಗುಣಮಟ್ಟದ ವಿಮಾನ ಖರೀದಿ ವಿಚಾರಕ್ಕೆ ಸಂಬಂಧಿಸಿದಂತೆ ಎದ್ದಿರುವ ಖರೀದಿ ಒಪ್ಪಂದ ಬೆಲೆಯ ಪರಾಮರ್ಶೆ ಮಾಡುವುದು ಕೋರ್ಟ್ ಕೆಲಸವಲ್ಲ. 126 ಜೆಟ್ ಬದಲು 36 ಜೆಟ್ ಖರೀದಿ ಒಪ್ಪಂದ ಮಾಡಿಕೊಂಡಿರುವ ಭಾರತ ಸರ್ಕಾರದ ಈ ನಿರ್ಧಾರವನ್ನು ಬದಲಾಯಿಸಿ ಎಂದು ನಾವು ಹೇಳಲು ಸಾಧ್ಯವಿಲ್ಲ. 2016ರ ಸಪ್ಟೆಂಬರ್ ತಿಂಗಳಿನಲ್ಲಿ ಈ ಡೀಲ್ ನಡೆದಾಗ ಯಾರು ಪ್ರಶ್ನೆ ಕೇಳಿರಲಿಲ್ಲ.

    ನಾಲ್ಕು ಮತ್ತು ಐದನೇಯ ತಲೆಮಾರಿನ ಫೈಟರ್ ಜೆಟ್ ಭಾರತೀಯ ವಾಯುಸೇನೆಗೆ ನಿಯೋಜಿಸುವ ಅಗತ್ಯವಿದೆ. ಖರೀದಿ, ಬೆಲೆ ನಿರ್ಣಯ, ದೇಶಿ ಪಾಲುದಾರ ಆಯ್ಕೆ ವಿಚಾರದಲ್ಲಿ ಮಧ್ಯಪ್ರವೇಶಿಸುವ ಅಗತ್ಯ ಕಂಡು ಬರುವುದಿಲ್ಲ. ಒಪ್ಪಂದದಲ್ಲಿ ಭಾಗಿಯಾದ ಎಲ್ಲರೂ ಖರೀದಿ ಹೇಗೆ ನಡೆಯಿತು ಎನ್ನುವ ವಿಚಾರವನ್ನು ಸ್ಪಷ್ಟಪಡಿಸಿದ್ದಾರೆ. ತುಲನಾತ್ಮಕ ಬೆಲೆ ವಿವರವನ್ನು ನೀಡಿ ವಿಮಾನಗಳನ್ನು ಖರೀದಿಸಿ ಎಂದು ಹೇಳುವುದು ಕೋರ್ಟ್ ಕೆಲಸವಲ್ಲ. ನಾವು ಕೇಳಿದ ಪ್ರಶ್ನೆಗಳಿಗೆ ಸಿಕ್ಕಿದ ಉತ್ತರಿಂದ ನಮ್ಮ ಸಂಶಯ ಪರಿಹಾರವಾಗಿದ್ದು ತೃಪ್ತಿಯಾಗಿದೆ. ರಕ್ಷಣೆಯಂತಹ ಸೂಕ್ಷ್ಮ ವಿಚಾರದಲ್ಲಿ ತನಿಖೆಗೆ ಆದೇಶ ನೀಡುವುದು ಸರಿಯಲ್ಲ. ದೇಶಿ ಪಾಲುದಾರನ ಆಯ್ಕೆ ಮಾಡುವುದು ಕಂಪನಿಗೆ ಬಿಟ್ಟ ವಿಚಾರ. ಈ ವಿಚಾರದಲ್ಲಿ ನಾವು ಮಧ್ಯಪ್ರವೇಶಿಸುವುದಿಲ್ಲ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು. ಇದನ್ನೂ ಓದಿ:ಒಂದೇ ಯುದ್ಧ ವಿಮಾನ ನಿರ್ಮಿಸದ ರಿಲಯನ್ಸ್ ಕಂಪನಿ ಜೊತೆ ಒಪ್ಪಂದ ಮಾಡಿದ್ದು ಯಾಕೆ: ಪ್ರಶ್ನೆಗೆ ಡಸಾಲ್ಟ್ ಸಿಇಒ ಉತ್ತರ ನೀಡಿದ್ದು ಹೀಗೆ

    ರಫೇಲ್ ಯುದ್ದ ವಿಮಾನ ಖರೀದಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ ವಕೀಲ ಎಂ.ಎಲ್ ಶರ್ಮಾ, ವಿನೀತಾ ದಾಂಡ, ಆಪ್ ನಾಯಕ ಸಂಜಯ್ ಸಿಂಗ್ ಮಾಜಿ ಕೇಂದ್ರ ಸಚಿವ ಯಶವಂತ ಸಿನ್ಹಾ, ಅರುಣ್ ಶೌರಿ ಹಾಗೂ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಅರ್ಜಿ ಸಲ್ಲಿಸಿದ್ದರು. ರಫೇಲ್ ಒಪ್ಪಂದವನ್ನು ರದ್ದುಗೊಳಿಸಿ ಸುಪ್ರೀಂಕೋರ್ಟ್ ಮೇಲುಸ್ತುವಾರಿಯಲ್ಲಿ ಸಿಬಿಐ ತನಿಖೆ ನಡೆಸಬೇಕು ಎಂದು ವಕೀಲರು ಆಗ್ರಹಿಸಿದ್ದರು. ಈ ಅರ್ಜಿಗಳನ್ನು ಒಟ್ಟಾಗಿಸಿದ್ದ ಮುಖ್ಯ.ನ್ಯಾ ರಂಜನ್ ಗೋಗಯ್ ನೇತೃತ್ವದ ನ್ಯಾ. ಎಸ್‍ಕೆ ಕೌಲ್, ನ್ಯಾ. ಕೆಎಂ ಜೋಸೆಫ್ ಅವರಿದ್ದ ತ್ರಿಸದಸ್ಯ ಪೀಠ ಸುದೀರ್ಘ ವಿಚಾರಣೆ ನಡೆಸಿತ್ತು. ನವೆಂಬರ್ 14 ರಂದು ವಿಚಾರಣೆ ಅಂತ್ಯಗೊಳಿಸಿದ್ದ ಸುಪ್ರೀಂಕೋರ್ಟ್ ಡಿಸೆಂಬರ್ 14 ರಂದು ತೀರ್ಪು ಪ್ರಕಟಿಸಿ ಎಲ್ಲ ಅರ್ಜಿಗಳನ್ನು ವಜಾಗೊಳಿಸಿತ್ತು. ಇದನ್ನೂ ಓದಿ:ಎಚ್‍ಎಎಲ್ ಜೊತೆ ರಫೇಲ್ ಯೋಜನೆ ಕೈಬಿಟ್ಟಿದ್ದೇಕೆ: ಸ್ಪಷ್ಟನೆ ನೀಡಿದ ರಕ್ಷಣಾ ಸಚಿವೆ

  • ಮದ್ವೆ ಕರೆಯೋಲೆಯಲ್ಲಿ ರಫೇಲ್ ವಿವರಣೆ – ಪ್ರಧಾನಿಯಿಂದ ಸಿಕ್ತು ಮೆಚ್ಚುಗೆ

    ಮದ್ವೆ ಕರೆಯೋಲೆಯಲ್ಲಿ ರಫೇಲ್ ವಿವರಣೆ – ಪ್ರಧಾನಿಯಿಂದ ಸಿಕ್ತು ಮೆಚ್ಚುಗೆ

    ಗಾಂಧಿನಗರ: ಚಳಿಗಾಲದ ಅಧಿವೇಶನದಲ್ಲಿ ಕಾಂಗ್ರೆಸ್ ರಫೇಲ್ ಎಂಬ ಅಸ್ತ್ರವನ್ನು ಬಳಸಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿತ್ತು. ರಫೇಲ್ ವಿಮಾನಗಳ ಖರೀದಿಯಲ್ಲಿ ಪ್ರಧಾನಿ ಮೋದಿ ಅವರು ಭ್ರಷ್ಟಾಚಾರ ಎಸಗಿದ್ದಾರೆಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅರೋಪಿಸುತ್ತಾ ಬಂದಿದ್ದಾರೆ. ಇದೀಗ ಮೋದಿ ಅಭಿಮಾನಿಯೊಬ್ಬರು ತಮ್ಮ ಮದುವೆಯ ಆಮಂತ್ರಣ ಪತ್ರಿಕೆಯಲ್ಲಿ ರಫೇಲ್ ವಿಮಾನ ಖರೀದಿಗೆ ಸಂಬಂಧಿಸಿದ ಮಾಹಿತಿಗಳನ್ನು ಮುದ್ರಿಸಿದ್ದಾರೆ.

    ಗುಜರಾತ್ ರಾಜ್ಯದ ಯುವರಾಜ್ ಪೋಖರನಾ ಅವರ ಮದುವೆ ಕಾರ್ಡ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇಂದು ಯುವರಾಜ್ ಮತ್ತು ಸಾಕ್ಷಿ ಸತಿ-ಪತಿಗಳಾಗಿದ್ದಾರೆ. ನಮ್ಮ ಆಮಂತ್ರಣ ಪತ್ರಿಕೆಯನ್ನು ಪ್ರಧಾನಿಗಳು ಸಹ ನೋಡಿದ್ದು, ಮೆಚ್ಚುಗೆ ಸೂಚಿಸಿದ್ದಾರೆ ಎಂದು ಯುವರಾಜ್ ಹೇಳುತ್ತಾರೆ.

    ಪ್ರಧಾನಿ ಬರೆದ ಪತ್ರದಲ್ಲೇನಿದೆ?
    ಯುವರಾಜ್ ಮತ್ತು ಸಾಕ್ಷಿ ಮದುವೆಗೆ ಪೋಖರನಾ ಕುಟುಂಬಕ್ಕೆ ನನ್ನ ಶುಭಾಶಯಗಳು. ಅತಿಥಿಗಳು ಕಳುಹಿಸಿರುವ ಕರೆಯೋಲೆಯಲ್ಲಿ ಈ ವಿಭಿನ್ನ ಪತ್ರ ನನ್ನನ್ನು ಸೆಳೆಯಿತು. ಪತ್ರದಲ್ಲಿ ನಿಮ್ಮ ಸರಳತೆ, ರಾಷ್ಟ್ರದ ಬಗ್ಗೆ ನಿಮ್ಮ ಕಾಳಜಿ ಹಾಗು ನಿಮ್ಮ ದೇಶ ಭಕ್ತಿಯನ್ನು ತೋರಿಸುತ್ತಿತ್ತು. ಈ ಕರೆಯೋಲೆ ನನಗೆ ದೇಶಕ್ಕಾಗಿ ಕೆಲಸ ಮಾಡುವಂತೆ ಪ್ರೇರಣೆ ನೀಡುತ್ತಿದೆ. ಹೊಸ ಜೀವನಕ್ಕೆ ಕಾಲಿಡುತ್ತಿರುವ ಯುವರಾಜ್ ಮತ್ತು ಸಾಕ್ಷಿ ಅವರಿಗೆ ಮದುವೆ ಶುಭಾಶಯಗಳು ಎಂದು ಪ್ರಧಾನಿಗಳು ಕಳಹಿಸಿದ ಪತ್ರದಲ್ಲಿ ಬರೆಯಲಾಗಿದೆ ಎಂದು ಸ್ಥಳೀಯ ಪತ್ರಿಕೆಗಳು ಪ್ರಕಟಿಸಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ರಫೇಲ್ ತೀರ್ಪಿನಲ್ಲಿ ಸಿಎಜಿ ಉಲ್ಲೇಖ: ತಿದ್ದುಪಡಿಗಾಗಿ ಕೇಂದ್ರದಿಂದ ಅಫಿಡವಿಟ್

    ರಫೇಲ್ ತೀರ್ಪಿನಲ್ಲಿ ಸಿಎಜಿ ಉಲ್ಲೇಖ: ತಿದ್ದುಪಡಿಗಾಗಿ ಕೇಂದ್ರದಿಂದ ಅಫಿಡವಿಟ್

    ನವದೆಹಲಿ: ಸಿಎಜಿ ವರದಿಯನ್ನು ಆಧಾರಿಸಿ ಸುಪ್ರೀಂ ಕೋರ್ಟ್ ಉಲ್ಲೇಖಿಸಿದ್ದ ರಫೇಲ್ ತೀರ್ಪಿನಲ್ಲಿ ಕೆಲ ತಿದ್ದುಪಡಿಯಾಗಬೇಕೆಂದು ಹೇಳಿ ಕೇಂದ್ರ ಸರ್ಕಾರ ಅಫಿಡವಿಟ್ ಸಲ್ಲಿಸಿದೆ.

    ಶುಕ್ರವಾರ ಕೇಂದ್ರ ಸರ್ಕಾರಕ್ಕೆ ಕ್ಲೀನ್ ಚಿಟ್ ನೀಡಿದ ತೀರ್ಪಿನ 25 ಪ್ಯಾರಾದಲ್ಲಿ ಮಹಾಲೆಕ್ಕಪಾಲರ(ಸಿಎಜಿ) ವರದಿಯನ್ನು ಸಾರ್ವಜನಿಕ ಲೆಕ್ಕ ಸಮಿತಿಯ(ಪಿಎಸಿ) ಮುಂದೆ ಇಡಲಾಗಿದೆ. ಅಷ್ಟೇ ಅಲ್ಲದೇ ಇದು ಸಾರ್ವಜನಿಕವಾಗಿ ಲಭ್ಯವಿದೆ ಎಂದು ಉಲ್ಲೇಖಿಸಿತ್ತು. ಕೇಂದ್ರ ಸರ್ಕಾರ ಮುಚ್ಚಿದ ಲಕೋಟೆಯಲ್ಲಿ ನೀಡಿದ ಈ ವಿಚಾರಗಳನ್ನು ಸುಪ್ರೀಂ ಕೋರ್ಟ್ ತನ್ನ ಆದೇಶದಲ್ಲಿ ಉಲ್ಲೇಖಿಸಿತ್ತು. ಇದನ್ನೂ ಓದಿ : ಪ್ರಧಾನಿ ಮೋದಿಗೆ ಅತಿ ದೊಡ್ಡ ಗೆಲುವು: ಸುಪ್ರೀಂ ತೀರ್ಪಿನಲ್ಲಿರುವ ಪ್ರಮುಖ ಅಂಶಗಳು ಏನು?

    ಸುಪ್ರೀಂ ಕೋರ್ಟ್ ಈ ವಿಚಾರವನ್ನು ಉಲ್ಲೇಖಿಸಿದ ಬೆನ್ನಲ್ಲೇ ಪಿಐಎಲ್ ಸಲ್ಲಿಸಿದ ಪ್ರಮುಖ ವ್ಯಕ್ತಿಗಳಾದ ಪ್ರಶಾಂತ್ ಭೂಷಣ್, ಸಾರ್ವಜನಿಕ ಲೆಕ್ಕ ಸಮಿತಿಯ ಮುಂದೆ ಸಿಎಜಿ ವರದಿ ಸಲ್ಲಿಕೆಯಾಗಿಲ್ಲ. ಸಾರ್ವಜನಿಕವಾಗಿಯೂ ಈ ವರದಿ ಲಭ್ಯವಿಲ್ಲ. ಮೋದಿ ಸರ್ಕಾರ ನ್ಯಾಯಾಲಯಕ್ಕೆ ಸುಳ್ಳು ಮಾಹಿತಿಯನ್ನು ನೀಡಿದೆ ಎಂದು ಹೇಳಿ ಕಿಡಿಕಾರಿದ್ದರು.

    ತೀರ್ಪು ಪ್ರಕಟವಾದ ಬೆನ್ನಲ್ಲೇ ಎಚ್ಚೆತ್ತ ಕೇಂದ್ರ ಸರ್ಕಾರ ಶನಿವಾರ, ಈ ಉಲ್ಲೇಖ ಇರುವ ವಾಕ್ಯದಲ್ಲಿ ಕೆಲವು ತಿದ್ದುಪಡಿಗಳಾಗಬೇಕಿದೆ ಎಂದು ಮನವಿ ಸಲ್ಲಿಸಿ ಅಫಿಡವಿಟ್ ಸಲ್ಲಿಸಿದೆ.ಇದನ್ನೂ ಓದಿ:ಎಚ್‍ಎಎಲ್ ಜೊತೆ ರಫೇಲ್ ಯೋಜನೆ ಕೈಬಿಟ್ಟಿದ್ದೇಕೆ: ಸ್ಪಷ್ಟನೆ ನೀಡಿದ ರಕ್ಷಣಾ ಸಚಿವೆ

    ಕಾನೂನು ಇಲಾಖೆ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿ, ಸಿಎಜಿ ಹಾಗೂ ಪಿಎಸಿ ಗೆ ಸಂಬಂಧಿಸಿದ ದಾಖಲೆಗಳನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಲಾಗಿತ್ತು. ಈ ದಾಖಲೆಗಳ ವಿಷಯವನ್ನು ತಪ್ಪಾಗಿ ವ್ಯಾಖ್ಯಾನ ಮಾಡಲಾದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಅರ್ಜಿ ಸಲ್ಲಿಸಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ:ಒಂದೇ ಯುದ್ಧ ವಿಮಾನ ನಿರ್ಮಿಸದ ರಿಲಯನ್ಸ್ ಕಂಪನಿ ಜೊತೆ ಒಪ್ಪಂದ ಮಾಡಿದ್ದು ಯಾಕೆ: ಪ್ರಶ್ನೆಗೆ ಡಸಾಲ್ಟ್ ಸಿಇಒ ಉತ್ತರ ನೀಡಿದ್ದು ಹೀಗೆ

     

     

  • ಒಂದೇ ಯುದ್ಧ ವಿಮಾನ ನಿರ್ಮಿಸದ ರಿಲಯನ್ಸ್ ಕಂಪನಿ ಜೊತೆ ಒಪ್ಪಂದ ಮಾಡಿದ್ದು ಯಾಕೆ: ಪ್ರಶ್ನೆಗೆ ಡಸಾಲ್ಟ್ ಸಿಇಒ ಉತ್ತರ ನೀಡಿದ್ದು ಹೀಗೆ

    ಒಂದೇ ಯುದ್ಧ ವಿಮಾನ ನಿರ್ಮಿಸದ ರಿಲಯನ್ಸ್ ಕಂಪನಿ ಜೊತೆ ಒಪ್ಪಂದ ಮಾಡಿದ್ದು ಯಾಕೆ: ಪ್ರಶ್ನೆಗೆ ಡಸಾಲ್ಟ್ ಸಿಇಒ ಉತ್ತರ ನೀಡಿದ್ದು ಹೀಗೆ

    ನವದೆಹಲಿ: ನಾವು ಸುಳ್ಳು ಹೇಳುತ್ತಿಲ್ಲ. ಈ ಹಿಂದೆ ನಾವು ಬಿಡುಗಡೆ ಮಾಡಿದ ಹೇಳಿಕೆಗಳು ಎಲ್ಲವೂ ಸತ್ಯವಾಗಿದೆ ಎಂದು ಡಸಾಲ್ಟ್ ಕಂಪನಿಯ ಸಿಇಒ ಎರಿಕ್ ಟ್ರಾಪ್ಪಿಯರ್ ಹೇಳಿದ್ದಾರೆ.

    ರಫೇಲ್ ವಿಮಾನ ಖರೀದಿಯಲ್ಲಿ ಭಾರೀ ಭ್ರಷ್ಟಾಚಾರ ನಡೆದಿದೆ ಎನ್ನುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ಆರೋಪಕ್ಕೆ ಸಂಬಂಧಿಸಿದಂತೆ ಸುದ್ದಿ ಸಂಸ್ಥೆಗೆ ಸಂದರ್ಶನ ನೀಡಿದ ಅವರು ಎಲ್ಲ ಆರೋಪವನ್ನು ತಳ್ಳಿ ಹಾಕಿದ್ದಾರೆ. ನಾನು ಸುಳ್ಳು ಹೇಳುತ್ತಿಲ್ಲ. ನನಗೆ ಸುಳ್ಳು ಹೇಳುವ ಅಗತ್ಯವಿಲ್ಲ. ನಾನು ಸಿಇಒ ಆಗಿರುವಾಗ ಸುಳ್ಳು ಹೇಳಲೇಬಾರದು ಎಂದು ತಿಳಿಸಿದರು.

    ಈ ಸಮಯದಲ್ಲಿ ಕಾಂಗ್ರೆಸ್ ಸರ್ಕಾರದ ಜೊತೆಗಿನ ಈ ಹಿಂದಿನ ಒಪ್ಪಂದವನ್ನು ವಿವರಿಸಿದ ಅವರು,  ಕಾಂಗ್ರೆಸ್ ಪಕ್ಷದ ಜೊತೆ ನಮಗೆ ದೀರ್ಘ ಅನುಭವವಿದೆ. 1953 ರರಲ್ಲಿ ನೆಹರು ಪ್ರಧಾನಿಯಾಗಿದ್ದಾಗ ನಮ್ಮ ಜೊತೆ ಒಪ್ಪಂದ ನಡೆದಿತ್ತು. ನಾವು ಸರ್ಕಾರದ ಜೊತೆ ಮಾತ್ರ ವ್ಯವಹರಿಸುತ್ತೇವೆ ಹೊರತು ಪಕ್ಷದ ಜೊತೆ ಅಲ್ಲ ಎಂದರು.

    ಎಚ್‍ಎಎಲ್ ಜೊತೆಗಿನ ವ್ಯವಹಾರ ರದ್ದಾಗಿದ್ದು ಯಾಕೆ ಎನ್ನುವ ಪ್ರಶ್ನೆಗೆ, ಭಾರತ ಸರ್ಕಾರ 126 ವಿಮಾನದ ಬದಲು ತುರ್ತಾಗಿ ಹಾರಲು ಸಿದ್ಧವಾಗಿರುವ 36 ವಿಮಾನ ಬೇಡಿಕೆಯನ್ನು ಇಟ್ಟಿತ್ತು. ಎಚ್‍ಎಎಲ್ ನಮ್ಮ ಜೊತೆ ಪಾಲುದಾರಿಕೆಯಾಗಲು ಹಿಂದೇಟು ಹಾಕಿತ್ತು. ಹೀಗಾಗಿ ನಾವು ರಿಲಯನ್ಸ್ ಕಂಪನಿ ಜೊತೆ ವ್ಯವಹಾರ ಮುಂದುವರಿಸಲು ತೀರ್ಮಾನಿಸಿದೆವು ಎಂದು ಉತ್ತರಿಸಿದರು.

    ಈ ವೇಳೆ ಯಾವುದೇ ವಿಮಾನವನ್ನು ಉತ್ಪಾದಿಸಿದ ರಿಲಯನ್ಸ್ ಕಂಪನಿಯ ಜೊತೆ ನೀವು ವ್ಯವಹಾರ ನಡೆಸಲು ಒಪ್ಪಿದ್ದು ಹೇಗೆ ಎಂದು ಕೇಳಿದ್ದಕ್ಕೆ, ಈ ಯೋಜನೆಗೆ ಹೂಡಿಕೆ ಮಾಡಿದ ಹಣ ನೇರವಾಗಿ ರಿಲಯನ್ಸ್ ಕಂಪನಿಗೆ ಹೋಗುವುದಿಲ್ಲ. ರಿಲಯನ್ಸ್- ಡಸಾಲ್ಟ್ ಜಂಟಿ ಉದ್ಯಮವಾಗಿದ್ದು ಅವರು ರಫೇಲ್ ಜೆಟ್ ಖರೀದಿಯಲ್ಲಿ ನಮ್ಮ ಪಾಲುದಾರರು ಅಷ್ಟೇ. ಈಗಾಗಲೇ ನಾವು ಭಾರತದ 30ಕ್ಕೂ ಹೆಚ್ಚು ಕಂಪನಿಗಳ ಜೊತೆ ಒಪ್ಪಂದ ಮಾಡಿಕೊಂಡಿದ್ದೇವೆ. ರಿಲಯನ್ಸ್ ಪಾಲುದಾರಿಕೆಯಾಗುವ ಮೊದಲು 2011 ರಲ್ಲಿ ಟಾಟಾ ಕಂಪನಿ ಸೇರಿದಂತೆ ಇತರೇ ವಿಮಾನ ಕಂಪನಿಗಳ ಜೊತೆಗೂ ಮಾತುಕತೆ ನಡೆಸಿದ್ದೇವೆ. ಕೊನೆಗೆ ದೊಡ್ಡ ಎಂಜಿನಿಯರಿಂಗ್ ಸೌಲಭ್ಯ ವಿಚಾರದಲ್ಲಿ ರಿಲಯನ್ಸ್ ಕಂಪನಿಗೆ ಅನುಭವ ಇರುವ ಹಿನ್ನೆಲೆಯಲ್ಲಿ ಅವರ ಜೊತೆ ಒಪ್ಪಂದ ಮಾಡಿಕೊಂಡಿದ್ದೇವೆ ಎಂದು ವಿವರಿಸಿದರು.

    ಕೈಗಾರಿಕಾ ಬೆಳವಣಿಗೆಯಲ್ಲಿ ಈ ಒಪ್ಪಂದ ಮಹತ್ವವಾಗಿದ್ದು, ನಮ್ಮ ಎಂಜಿನಿಯರ್ ಮತ್ತು ಕೆಲಸಗಾರರು ಮುಖ್ಯ ಪಾತ್ರವನ್ನು ವಹಿಸಿ ವಿಮಾನವನ್ನು ತಯಾರಿಸುತ್ತಾರೆ. ಈ ವೇಳೆ ನಮ್ಮ ಎಂಜಿನಿಯರ್ ಭಾರತೀಯರಿಗೆ ವಿಮಾನ ತಯಾರಿಸುವ ಕೌಶಲ್ಯವನ್ನು ತಿಳಿಸಿಕೊಡುತ್ತಾರೆ. ಈ ಮೂಲಕ ರಿಲಯನ್ಸ್ ಜಂಟಿ ಉದ್ಯಮಕ್ಕೆ ಬಂಡವಾಳ ಹಾಕಿ ಭಾರತದ ಅಭಿವೃದ್ಧಿಗೂ ಸಹಾಯ ಮಾಡುತ್ತದೆ. ಭಾರತ ಸರ್ಕಾರದ ನಿಯಮಗಳ ಪ್ರಕಾರ ರಿಲಯನ್ಸ್- ಡಸಾಲ್ಟ್ ಜಂಟಿ ಉದ್ಯಮದಲ್ಲಿ ಶೇ.51 ಶೇರುಗಳು ರಿಲಯನ್ಸ್ ಹೊಂದಿದ್ದರೆ, ಶೇ.49 ರಷ್ಟು ಶೇರುಗಳು ಡಸಾಲ್ಟ್ ಕಂಪನಿ ಹೊಂದಿರಲಿದೆ ಎಂದು ವಿವರಿಸಿದರು.

    126 ವಿಮಾನ ಮತ್ತು ಹಾರಲು ಸಿದ್ಧವಾಗಿರುವ 36 ವಿಮಾನದ ದರಕ್ಕೆ ಹೋಲಿಸಿದರೆ ಶೇ.9 ರಷ್ಟು ಕಡಿಮೆ ದರದಲ್ಲಿ ವಿಮಾನ ಉತ್ಪಾದನೆಯಾಗಲಿದೆ ಎಂದು ಈ ವೇಳೆ ಎರಿಕ್ ಟ್ರಾಪ್ಪಿಯರ್ ಹೇಳಿದರು.

     

     

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews