Tag: Rafale Jet

  • ಲಡಾಖ್ ಗಡಿಯಲ್ಲಿ ಫೈಟರ್‌ ಜೆಟ್‌ ರಫೇಲ್‌ ನಿಯೋಜಿಸಲು ಚಿಂತನೆ

    ಲಡಾಖ್ ಗಡಿಯಲ್ಲಿ ಫೈಟರ್‌ ಜೆಟ್‌ ರಫೇಲ್‌ ನಿಯೋಜಿಸಲು ಚಿಂತನೆ

    ನವದೆಹಲಿ: ಗಲ್ವಾನ್‌ ಘರ್ಷಣೆಯ ಬಳಿಕ ಲಡಾಖ್‌ ಗಡಿಯಲ್ಲಿ ಭಾರತೀಯ ವಾಯುಸೇನೆಯ ಯುದ್ಧ ವಿಮಾನಗಳು, ಹೆಲಿಕಾಪ್ಟರ್‌ಗಳು ಈಗಾಗಲೇ ಹಾರಾಟ ನಡೆಸುತ್ತಿವೆ. ಈಗ ಇವುಗಳ ಜೊತೆ ರಫೇಲ್‌ ಯುದ್ಧ ವಿಮಾನಗಳನ್ನು ನಿಯೋಜಿಸಲು ವಾಯುಸೇನೆ ಚಿಂತನೆ ನಡೆಸಿದೆ.

    ಭಾರತ ಚೀನಾ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣ ಹಿನ್ನೆಲೆಯಲ್ಲಿ ವಾಯು ಸೇನೆ ಮುಖ್ಯಸ್ಥ ಆರ್.ಕೆ.ಎಸ್ ಭದೌರಿಯಾ ನೇತೃತ್ವದ ಉನ್ನತ ವಾಯುಪಡೆಯ ಕಮಾಂಡರ್ ಗಳ ತಂಡ ಎರಡು ದಿನಗಳ ಕಾಲ ಲಡಾಕ್‍ಗೆ ಭೇಟಿ ನೀಡಲಿದೆ.

    ಭೂ ಸೇನಾ ಮುಖ್ಯಸ್ಥ ಎಂ.ಎಂ ನರವಾಣೆ ಭೇಟಿ ಬಳಿಕ ವಾಯು ಸೇನೆ ತಂಡ ಭೇಟಿ ನೀಡುತ್ತಿದ್ದು, ಲಡಾಕ್‍ನಲ್ಲಿರುವ ಚೀನಾ ಭಾರತದ ವಾಸ್ತವ ನಿಯಂತ್ರಣ ರೇಖೆ(ಎಲ್‌ಎಸಿ) ಪ್ರದೇಶ ಹಾಗೂ ಆ ಭಾಗದಲ್ಲಿ ನಡೆಯುತ್ತಿರುವ ಮೂಲ ಸೌಕರ್ಯಗಳ ಅಭಿವೃದ್ಧಿ ಪರಿಸ್ಥಿತಿಯ ಪರಿಶೀಲನೆ ನಡೆಸಲಿದೆ.

    ಎರಡು ದಿನದ ಭೇಟಿಯಲ್ಲಿ ಈ ಪ್ರದೇಶದಲ್ಲಿ ವಾಯುಪಡೆ ಅವಳಿ-ಎಂಜಿನ್ ಫೈಟರ್ ಜೆಟ್ ಹಾಗೂ ಜುಲೈ ಅಂತ್ಯದ ವೇಳೆಗೆ ಭಾರತಕ್ಕೆ ಬರಲಿರುವ ರಫೇಲ್ ಫೈಟರ್ ಜೆಟ್‍ಗಳು ನಿಯೋಜಿಸುವ ಬಗ್ಗೆ ಮುಖ್ಯವಾಗಿ ಚರ್ಚೆಯಾಗಲಿದೆ. ಸುಖೋಯ್-30 ಎಂಕೆಐ ಮತ್ತು ಮಿರಾಜ್-2000 ಸೇರಿದಂತೆ ಇತರ ಫೈಟರ್ ಜೆಟ್‍ಗಳ ಸಮನ್ವಯದೊಂದಿಗೆ ಉತ್ತರದ ಗಡಿಗಳಲ್ಲಿ ರಫೇಲ್ ಫೈಟರ್ ಜೆಟ್‍ಗಳನ್ನು ಶೀಘ್ರವಾಗಿ ನಿಯೋಜಿಸುವ ಬಗ್ಗೆ ವಾಯುಪಡೆ ಗಮನ ಹರಿಸಿದ್ದು, ಈ ಬಗ್ಗೆ ಯೋಜನೆಗಳನ್ನು ರೂಪಿಸಲಿದೆ.

    ಪೂರ್ವ ಲಡಾಕ್‍ನಿಂದ ಅರುಣಾಚಲ ಪ್ರದೇಶದವರೆಗಿನ ಗಡಿ ಪ್ರದೇಶ, ಎಲ್‍ಎಸಿ ಉದ್ದಕ್ಕೂ ವಾಯುಪಡೆಯು ತನ್ನ ಫೈಟರ್ ಜೆಟ್‍ಗಳನ್ನು ಸಕ್ರಿಯವಾಗಿ ನಿಯೋಜಿಸಲು ತೀರ್ಮಾನಿಸಿದೆ. ಐಎಎಫ್‍ನ ಹಿರಿಯ ಅಧಿಕಾರಿಗಳು ಎರಡು ದಿನದ ಭೇಟಿಯಲ್ಲಿ ಚೀನಾದ ಮಿಲಿಟರಿ ರಚನೆಯನ್ನು ಆಧರಿಸಿ ಭಾರತದ ಪ್ರತಿರೋಧದ ಶಕ್ತಿಯನ್ನು ನಿಯೋಜಿಸಲಿದ್ದಾರೆ.

    ಜೂನ್ 2ರಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್, ಫ್ರೆಂಚ್ ರಕ್ಷಣಾ ಸಚಿವ ಫ್ಲಾರೆನ್ಸ್ ಪಾರ್ಲೆ ಜೊತೆ ದೂರವಾಣಿ ಸಂಭಾಷಣೆ ನಡೆಸಿದ್ದರು. ಈ ವೇಳೆ ಫ್ರಾನ್ಸ್‌ನಲ್ಲಿ ಕೋವಿಡ್‌ 19 ಇದ್ದರೂ ನಿಗದಿಯಂತೆ ಜುಲೈ 27ರ ಒಳಗಡೆ ಭಾರತಕ್ಕೆ ಯುದ್ಧ ವಿಮಾನಗಳನ್ನು ತಲುಪಿಸಲಾಗುವುದು ಎಂದು ಅವರು ತಿಳಿಸಿದ್ದಾರೆ ಎಂದು ವರದಿಯಾಗಿತ್ತು.

    58 ಸಾವಿರ ಕೋಟಿ ರೂ.ವೆಚ್ಚದಲ್ಲಿ 36 ರಫೇಲ್ ಯುದ್ಧ ವಿಮಾನಗಳನ್ನು ಖರೀದಿಸಲು ಭಾರತ 2016 ರ ಸೆಪ್ಟೆಂಬರ್‌ನಲ್ಲಿ ಫ್ರಾನ್ಸ್‌ ಜೊತೆ ಒಪ್ಪಂದಕ್ಕೆ ಸಹಿ ಹಾಕಿತ್ತು. ಐಎಎಫ್‌ನ ಅತ್ಯಂತ ಪ್ರಮುಖ ನೆಲೆಗಳಲ್ಲಿ ಒಂದಾಗಿರುವ ಹರ್ಯಾಣದ ಅಂಬಾಲ ವಾಯನೆಲೆಯಲ್ಲಿ ಮೊದಲ ಸ್ಕ್ವಾಡ್ರನ್ಅನ್ನು ಇರಿಸಲಾಗಿತ್ತದೆ.

  • ಐಎಎಫ್‍ನ ಮೊದಲ ‘ರಫೇಲ್’ಗೆ ರಾಜನಾಥ್ ಸಿಂಗ್ ಆಯುಧ ಪೂಜೆ

    ಐಎಎಫ್‍ನ ಮೊದಲ ‘ರಫೇಲ್’ಗೆ ರಾಜನಾಥ್ ಸಿಂಗ್ ಆಯುಧ ಪೂಜೆ

    ನವದೆಹಲಿ: ಮೂರು ದಿನದ ಫ್ರಾನ್ಸ್ ಪ್ರವಾಸದಲ್ಲಿರುವ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಇಂದು ಪ್ಯಾರಿಸ್‍ನಲ್ಲಿ ಭಾರತೀಯ ವಾಯು ಪಡೆಯ(ಐಎಎಫ್) ಮೊದಲ ರಫೇಲ್ ಯುದ್ಧ ವಿಮಾನಕ್ಕೆ ಆಯುಧ ಪೂಜೆ ನೆರವೇರಿಸಿ, ಭಾರತಕ್ಕೆ ಹಸ್ತಾಂತರಿಸಿಕೊಳ್ಳಲ್ಲಿದ್ದಾರೆ.

    36 ರಫೇಲ್ ಜೆಟ್ ಯುದ್ಧ ವಿಮಾನಗಳು ಫ್ರಾನ್ಸ್ ನ ಬಂದರು ನಗರಿ ಬೋರ್ಡೆಕ್ಸ್ ನಲ್ಲಿ ತಯಾರಾಗುತ್ತಿದ್ದು, ಅವುಗಳ ಪೈಕಿ ಮೊದಲನೆ ಯುದ್ಧ ವಿಮಾನ ಇಂದು ಭಾರತಕ್ಕೆ ಅಧಿಕೃತವಾಗಿ ಹಸ್ತಾಂತರವಾಗಲಿದೆ. ಆ ಬಳಿಕ, ರಾಜನಾಥ್ ಸಿಂಗ್ ವಿಜಯದಶಮಿಯ ಶುಭ ಸಂದರ್ಭದಲ್ಲಿ ಶಸ್ತ್ರಾಸ್ತ್ರಗಳ ಪೂಜೆ ಮಾಡಲಿದ್ದಾರೆ. ನಂತರ ರಫೇಲ್ ಯುದ್ಧ ವಿಮಾನದಲ್ಲಿ ಪ್ಯಾರಿಸ್ ವಾಯುನೆಲೆಯಿಂದ ಮೊದಲ ಹಾರಾಟದ ಅನುಭವ ಪಡೆಯಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಭಾರತ ಒಟ್ಟು 36 ರಫೇಲ್ ಯುದ್ಧ ವಿಮಾನಗಳನ್ನು ಖರೀದಿಸಿದೆ. ಸದ್ಯ ಅವುಗಳಲ್ಲಿ ಒಂದು ರಫೇಲ್ ಯುದ್ಧ ವಿಮಾನ ಮಾತ್ರ ಇಂದು ಫ್ರಾನ್ಸ್ ಭಾರತಕ್ಕೆ ಹಸ್ತಾಂತರಿಸಲಿದೆ. ಹಾಗೆಯೇ ಮೊದಲ ಹಂತದಲ್ಲಿ ನೀಡಲಾಗುವ ನಾಲ್ಕು ವಿಮಾನಗಳು 2020ರ ಮೇ ತಿಂಗಳಿನಲ್ಲಿ ಭಾರತೀಯ ವಾಯು ಪಡೆಯನ್ನು ಸೇರಲಿದೆ ಎನ್ನಲಾಗಿದೆ.

    ದಸರಾ ಸಂದರ್ಭದಲ್ಲಿ ಭಾರತೀಯ ವಾಯುಪಡೆಯ ಸಂಸ್ಥಾಪನಾ ದಿನವನ್ನೂ ಆಚರಿಸಲಾಗುತ್ತಿದ್ದು, ಇದೇ ವೇಳೆ ರಾಜನಾಥ್ ಸಿಂಗ್ ಅವರು ಮೊದಲು ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರನ್ ರನ್ನು ಭೇಟಿ ಮಾಡಿ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದು, ಬಳಿಕ ಫ್ರೆಂಚ್ ಸಶಸ್ತ್ರ ಪಡೆಗಳ ಸಚಿವ ಫ್ಲಾರೆನ್ಸ್ ಪಾರ್ಲಿ ಅವರೊಂದಿಗೆ ವಾರ್ಷಿಕ ರಕ್ಷಣಾ ಸಂವಾದವನ್ನು ನಡೆಸಲಿದ್ದಾರೆ.

    ಹಲವು ವರ್ಷದಿಂದ ರಾಜ್‍ನಾಥ್ ಸಿಂಗ್ ಅವರು ದಸರಾ ವೇಳೆ ಶಸ್ತ್ರ ಪೂಜೆ ಮಾಡುವ ಸಂಪ್ರದಾಯ ರೂಢಿಯಲ್ಲಿಟ್ಟುಕೊಂಡು ಬಂದಿದ್ದಾರೆ. ಈ ಹಿಂದೆ ಎನ್‍ಡಿಎ ಸರ್ಕಾರದ ಅವಧಿಯಲ್ಲಿ ಗೃಹ ಸಚಿವರಾಗಿದ್ದಾಗಲೂ ರಾಜ್‍ನಾಥ್ ಸಿಂಗ್ ಶಸ್ತ್ರ ಪೂಜೆ ನೆರವೇರಿಸಿದ್ದರು ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.