Tag: Rafale deal

  • ಸುಳ್ಳು ಹೇಳೋ ಮಂದಿಯ ಕೆನ್ನೆಗೆ ಬಾರಿಸಿದಂತಿದೆ ರಫೇಲ್ ತೀರ್ಪು: ಕೈ ವಿರುದ್ಧ ಶಾ ಕಿಡಿ

    ಸುಳ್ಳು ಹೇಳೋ ಮಂದಿಯ ಕೆನ್ನೆಗೆ ಬಾರಿಸಿದಂತಿದೆ ರಫೇಲ್ ತೀರ್ಪು: ಕೈ ವಿರುದ್ಧ ಶಾ ಕಿಡಿ

    ನವದೆಹಲಿ: ಎಐಸಿಸಿ ರಾಹುಲ್ ಗಾಂಧಿಯವರು ಯಾವ ಆಧಾರದ ಮೇಲೆ ನಮ್ಮ ಮೇಲೆ ರಫೇಲ್ ಒಪ್ಪಂದ ಕುರಿತು ದೊಡ್ಡದಾದ ಆರೋಪವನ್ನು ಮಾಡಿದ್ದಾರೆಂದು ಪ್ರಶ್ನಿಸಿ, ಕೂಡಲೇ ಕ್ಷಮೆಯಾಚಿಸುವಂತೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಆಗ್ರಹಿಸಿದ್ದಾರೆ.

    ರಫೇಲ್ ಒಪ್ಪಂದದ ಕುರಿತು ಸುಪ್ರೀಂ ಕೋರ್ಟ್ ತೀರ್ಪು ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸುಳ್ಳು ಹೇಳುವವರ ಕೆನ್ನೆಗೆ ಬಾರಿಸಿದಂತೆ ಸುಪ್ರೀಂ ತೀರ್ಪು ಪ್ರಕಟವಾಗಿದೆ. ಈ ಆದೇಶದಿಂದಾಗಿ ರಫೇಲ್ ಒಪ್ಪಂದದಲ್ಲಿ ಯಾವುದೇ ರೀತಿಯ ಭ್ರಷ್ಟಾಚಾರ ನಡೆದಿಲ್ಲ ಎನ್ನುವುದು ಸಾಬೀತಾಗಿದೆ. ರಾಹುಲ್ ಗಾಂಧಿ ಮಕ್ಕಳ ರೀತಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ರಫೇಲ್ ಒಪ್ಪಂದದಲ್ಲಿ ಡೀಲ್ ನಡೆದಿದೆಂದು ಗಂಭೀರ ಆರೋಪ ಮಾಡಿದ್ದರು. ಕೂಡಲೇ ಅವರು ಈ ಬಗ್ಗೆ ಕ್ಷಮೆಯಾಚಿಸಬೇಕು. ಅಲ್ಲದೇ ಯಾವ ಆಧಾರದಲ್ಲಿ ನಮ್ಮ ಮೇಲೆ ಈ ರೀತಿಯ ದೊಡ್ಡ ಆರೋಪ ಮಾಡಿದ್ದಾರೆ ಎನ್ನುವುದನ್ನು ಬಹಿರಂಗಪಡಿಸಲಿ ಎಂದು ಸವಾಲು ಹಾಕಿದ್ದಾರೆ.

    ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸುತ್ತಿದ್ದ ಕಾಂಗ್ರೆಸ್ಸಿನವರು ತಮ್ಮ ಬಳಿ ಆಧಾರ ಇದ್ದರೆ ಅವರು ಸುಪ್ರೀಂ ಕೋರ್ಟ್ ಮೊರೆ ಹೋಗಬಹುದಿತ್ತು. ಆದರೆ ಕಾಗ್ರೆಸ್ಸಿನವರು ಹೋಗದೇ ಅವರ ಬಿ ಟೀಂ ಹೋಗಿದೆ. ಜಂಟಿ ಸಂಸದೀಯ ತನಿಖೆ ನಡೆಯುವ ಮೊದಲು ವಿಚಾರ ಸಂಸತ್ತಿನಲ್ಲಿ ಚರ್ಚೆಯಾಗಬೇಕು. ಅವರು ಚರ್ಚೆಗೆ ಬರಲಿ ಎಂದು ಅಮಿತ್ ಶಾ ಸವಾಲು ಎಸೆದರು.

    ನ್ಯಾಯಾಲಯದ ಆದೇಶದ ಪ್ರಕಾರ ರಫೇಲ್ ಒಪ್ಪಂದಲ್ಲಿ ಯಾವುದೇ ರೀತಿಯ ಭ್ರಷ್ಟಾಚಾರ ನಡೆದಿಲ್ಲ. ಸತ್ಯಕ್ಕೆ ಎಂದಿಗೂ ಜಯವಿದೆ. ಕಾಂಗ್ರೆಸ್ ಅಧ್ಯಕ್ಷರು ಇದನ್ನು ರಾಜಕೀಯ ಲಾಭಕ್ಕಾಗಿ ಪ್ರಧಾನಿ ವಿರುದ್ಧ ಸುಳ್ಳು ಆರೋಪ ಮಾಡಿದ್ದರು. ಆದರೆ ಈಗ ಅವರ ಆರೋಪಕ್ಕೆ ತಕ್ಕ ಉತ್ತರ ಸಿಕ್ಕಿದೆ. ಒಪ್ಪಂದದಲ್ಲಿ ಯಾವುದೇ ರೀತಿಯ ತಪ್ಪುಗಳಾಗಿಲ್ಲವೆಂಬುದು ನ್ಯಾಯಾಲಯಕ್ಕೆ ತಿಳಿದಿದೆ ಎಂದು ಹೇಳಿದರು. ಇದನ್ನೂ ಓದಿ : ಪ್ರಧಾನಿ ಮೋದಿಗೆ ಅತಿ ದೊಡ್ಡ ಗೆಲುವು: ಸುಪ್ರೀಂ ತೀರ್ಪಿನಲ್ಲಿರುವ ಪ್ರಮುಖ ಅಂಶಗಳು ಏನು?

    ಕೇವಲ ವಾಣಿಜ್ಯ ಲಾಭಕ್ಕಾಗಿ ಕೇಂದ್ರ ಸರ್ಕಾರ ರಫೇಲ್ ಒಪ್ಪಂದ ಮಾಡಿಕೊಂಡಿಲ್ಲ. ಭ್ರಷ್ಟಾಚಾರದ ಇತಿಹಾಸವನ್ನು ಹೊಂದಿರುವ ಕಾಂಗ್ರೆಸ್ಸಿಗೆ ಒಪ್ಪಂದವನ್ನು ಪ್ರಶ್ನಿಸುವ ಹಾಗೂ ಆರೋಪ ಮಾಡುವ ಹಕ್ಕಿದೆ. ಏಕೆಂದರೆ ಹಲವು ಸಮಯದಿಂದಲೂ ಕಾಂಗ್ರೆಸ್ ನಾಯಕರು ದೇಶವನ್ನು ಕಾಯುತ್ತಿರುವ ನಾಯಕ ಕಳ್ಳನೆಂದು ಹೇಳುತ್ತಲೇ ಇದ್ದಾರೆ. ಆದರೆ ಈಗ ಇದರ ಸತ್ಯಾಸತ್ಯತೆ ಬೆಳಕಿಗೆ ಬಂದಿದೆ ಎಂದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನಟಿ ರಮ್ಯಾ ವಿರುದ್ಧ ಎಫ್‍ಐಆರ್ ದಾಖಲು!

    ನಟಿ ರಮ್ಯಾ ವಿರುದ್ಧ ಎಫ್‍ಐಆರ್ ದಾಖಲು!

    ಲಕ್ನೋ: ರಫೇಲ್ ಒಪ್ಪಂದಕ್ಕೆ ಸಂಬಂಧಪಟ್ಟಂತೆ ಮಂಡ್ಯ ಮಾಜಿ ಸಂಸದೆ ರಮ್ಯಾ, ಪ್ರಧಾನಿ ಮೋದಿ ಅವರನ್ನು ಟೀಕಿಸಿ ಅಪೇಕ್ಷರ್ಹ ಫೋಟೋವನ್ನು ಟ್ವೀಟ್ ಮಾಡಿದ್ದಕ್ಕೆ ಉತ್ತರ ಪ್ರದೇಶದ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ.

    ಲಕ್ನೋ ಮೂಲ ವಕೀಲರಾದ ಸೈಯದ್ ರಿಜ್ವಾನ್ ಅಹ್ಮದ್ ಮಂಗಳವಾರ ಗೌಮತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ಸದ್ಯ ರಮ್ಯಾ ಅವರ ವಿರುದ್ಧ ಐಪಿಸಿ ಸೆಕ್ಷನ್ 67 (ಮಾಹಿತಿ ತಂತ್ರಜ್ಞಾನದ ಕಾಯ್ದೆ), 2008 ಮತ್ತು ಸೆಕ್ಷನ್ 124ಎ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

    ರಫೇಲ್ ಒಪ್ಪಂದ ಕುರಿತು ರಮ್ಯಾ ಸೆಪ್ಟೆಂಬರ್ 24 ರಂದು ಮೋದಿ ಅವರ ಮೇಣದ ಪ್ರತಿಮೆಯ ಫೋಟೋ ಟ್ವೀಟ್ ಮಾಡಿದ್ದರು. ಈ ಫೋಟೋದಲ್ಲಿ ಮೋದಿ ಸ್ವತಃ ತಮ್ಮ ಪ್ರತಿಮೆ ಮೇಲೆ ಕಳ್ಳ ಎಂದು ಬರೆಯುವಂತೆ ಚಿತ್ರಿಸಲಾಗಿದೆ. ಈ ಫೋಟೋಗೆ ಕಳ್ಳ ಪ್ರಧಾನಿ ಸುಮ್ಮನಿದ್ದಾರೆ (#ChorPMChupHai) ಎಂಬ ಹ್ಯಾಷ್ ಟ್ಯಾಗನ್ನು ರಮ್ಯಾ ಬಳಸಿ ಟ್ವೀಟ್ ಮಾಡಿದ್ದರು.

    ರಮ್ಯಾ ಮಾಡಿದ ಟ್ವಿಟ್ ನಲ್ಲಿ ನರೇಂದ್ರ ಮೋದಿ ವಿರುದ್ಧ ದ್ವೇಷ ಕಾರುವ ಅಂಶವಿದೆ ಹೀಗಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ರಿಜ್ವಾನ್ ಅಹ್ಮದ್ ದೂರು ನೀಡಿದ್ದರು.

    ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಕೂಡ ರಫೇಲ್ ಒಪ್ಪಂದ ಕುರಿತು ಮೋದಿ ಸರ್ಕಾರದ ವಿರುದ್ಧ ಅರೋಪಗಳ ಸುರಿಮಳೆ ಮಾಡಿದ್ದರು. ಯುಪಿಎ ಸರ್ಕಾರದ ಅವಧಿಯಲ್ಲಿ 2012ರಲ್ಲಿ ಫ್ರಾನ್ಸ್’ನ ಡಸಾಲ್ಟ್ ಏವಿಯೇಶನ್ ಸಂಸ್ಥೆಯೊಂದಿಗೆ 126 ಮಧ್ಯಮ ಶ್ರೇಣಿಯ ಬಹುಮುಖಿ ಯುದ್ಧ ವಿಮಾನಗಳ (ಎಂಎಂಆರ್’ಸಿಎ-ಮೀಡಿಯಂ ಮಲ್ಟಿ ರೋಲ್ ಕಾಂಬಾಟ್ ಏರ್’ಕ್ರಾಫ್ಟ್) ಖರೀದಿಗೆ ಒಪ್ಪಂದ ಮಾಡಿಕೊಟ್ಟಿತ್ತು. ಮಾತುಕತೆಯ ನಿಯಮಗಳ ಪ್ರಕಾರ ಡಸಾಲ್ಟ್ ಏವಿಯೇಶನ್ ಸಂಸ್ಥೆಯು 18 ರಫೇಲ್ ಜೆಟ್‍ಗಳನ್ನು ಹಾರಾಡಲು ಸನ್ನದ್ಧವಾಗಿರುವ ಸ್ಥಿತಿಯಲ್ಲಿ ಭಾರತಕ್ಕೆ ಪೂರೈಸಬೇಕು ಹಾಗೂ ಭಾರತದ ಎಚ್‍ಎಎಲ್‍ನೊಂದಿಗೆ ಉಳಿದ 108 ಯುದ್ಧ ವಿಮಾನಗಳನ್ನು ಭಾರತದಲ್ಲಿಯೇ ತಯಾರಿಸಬೇಕೆನ್ನುವ ಷರತ್ತನ್ನು ಹಾಕಿತ್ತು ಎಂದು ರಾಹುಲ್ ಆರೋಪಿಸಿದ್ದಾರೆ.

    ಕಾಂಗ್ರೆಸ್ ಆರೋಪಗಳನ್ನು ಅಲ್ಲಗೆಳೆದಿದ್ದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್, ಕಾಂಗ್ರೆಸ್ ಪಕ್ಷಕ್ಕೆ ಬಿಜೆಪಿ ನೇತೃತ್ವದ ಸರ್ಕಾರದ ವಿರುದ್ಧ ಮಾತನಾಡಲು ಯಾವುದೇ ವಿಷಯಗಳು ಸಿಗಲಿಲ್ಲ. ಹೀಗಾಗಿ ಅವರು ರಫೇಲ್ ಒಪ್ಪಂದದಲ್ಲಿ ಬಹುಕೋಟಿ ಹಗರಣ ನಡೆದಿದೆ ಎಂದು ಹೇಳಲು ಮುಂದಾಗಿದೆ. ಆದರೆ ನಮ್ಮದು ದೇಶಕಂಡ ಅತ್ಯಂತ ಸ್ವಚ್ಛ ಹಾಗೂ ಭ್ರಷ್ಟಾಚಾರ ಮುಕ್ತ ಸರ್ಕಾರ ಎಂಬುದು ಜನರಿಗೆ ಗೊತ್ತಿದೆ. ಹತಾಶಾ ಮನೋಭಾವನೆಗೆ ತಲುಪಿರುವ ಕಾಂಗ್ರೆಸ್ ನಮ್ಮ ಸರ್ಕಾರದಿಂದ ಕಲಿಯಬೇಕಾದ ಪಾಠಗಳು ಸಾಕಷ್ಟು ಇವೆ ಎಂದು ಹೇಳಿದ್ದರು.

    ಎಚ್‍ಎಎಲ್ ಸಂಸ್ಥೆಗೆ ರಫೇಲ್ ಯುದ್ಧ ವಿಮಾನಗಳನ್ನು ನಿರ್ಮಿಸುವ ಸಾಮಥ್ರ್ಯವಿಲ್ಲವೆಂಬುದೇ ಪ್ರಮುಖ ಕಾರಣ. ಅಲ್ಲದೇ ಎಚ್‍ಎಎಲ್‍ನಲ್ಲಿ ಉತ್ಪಾದನೆಯಾಗುವ ವಿಮಾನಗಳ ವೆಚ್ಚವು ಫ್ರಾನ್ಸ್ ನಲ್ಲಿ ತಯಾರಾಗುವ ವಿಮಾನಗಳ ವೆಚ್ಚಕ್ಕಿಂತ ದುಬಾರಿಯಾಗಿತ್ತು. ಸಂಸ್ಥೆಗೆ ವಿಮಾನಗಳ ಉತ್ಪಾದನೆಗೆ ಬೇಕಾಗುವ ಸಂಪನ್ಮೂಲಗಳ ಬಗ್ಗೆ ಅಂದಿನ ಕೇಂದ್ರ ಸರ್ಕಾರ ತಲೆ ಕೆಡಿಸಿಕೊಂಡಿರಲಿಲ್ಲ. ಇದಲ್ಲದೇ 2013ರ ರಕ್ಷಣಾ ಸಚಿವ ಎ.ಕೆ.ಆಂಟನಿಯವರು ಪದೇ ಪದೇ ಯುದ್ಧ ವಿಮಾನಗಳ ಖರೀದಿ ಮಾತುಕತೆಯಲ್ಲಿ ಮಧ್ಯ ಪ್ರವೇಶಿಸುತ್ತಿದ್ದರಿಂದ ಫ್ರಾನ್ಸ್ ಕಂಪೆನಿಯು ಜಂಟಿ ತಯಾರಿಕೆಗೆ ಹಿಂದೇಟು ಹಾಕಿತು ಎಂದು ನಿರ್ಮಲಾ ಸೀತಾರಾಮನ್ ಸ್ಪಷ್ಟನೆ ನೀಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಅಮಿತ್ ಶಾ ಒಂದು ಹೇಳಿಕೆಯಿಂದ ಮೋದಿ ವಿರುದ್ಧದ ನನ್ನ ಧ್ವನಿ ಜೋರಾಯಿತು: ಯಶ್‍ವಂತ್ ಸಿನ್ಹಾ

    ಅಮಿತ್ ಶಾ ಒಂದು ಹೇಳಿಕೆಯಿಂದ ಮೋದಿ ವಿರುದ್ಧದ ನನ್ನ ಧ್ವನಿ ಜೋರಾಯಿತು: ಯಶ್‍ವಂತ್ ಸಿನ್ಹಾ

    ಬೆಂಗಳೂರು: ಮಾಜಿ ವಿದೇಶಾಂಗ ಸಚಿವ ಯಶ್‍ವಂತ ಸಿನ್ಹಾ ಅವರು ರಫೇಲ್ ಒಪ್ಪಂದ, ಮೇಕ್ ಇನ್ ಇಂಡಿಯಾ ವಿಚಾರವನ್ನು ಇಟ್ಟುಕೊಂಡು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ಖಾಸಗಿ ಹೋಟೆಲ್‍ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾನು ಮೋದಿ ವಿರೋಧಿ ಅಲ್ಲ. 2014ರಲ್ಲಿ ಸಕ್ರಿಯ ರಾಜಕಾರಣಕ್ಕೆ ನಾನು ಗುಡ್ ಬೈ ಹೇಳಿದ್ದೇನೆ. ಲೋಕಸಭಾ ಚುನಾವಣೆಗೆ ನಿಲ್ಲುವುದಿಲ್ಲ ಅಂತಾ ನಿರ್ಧಾರ ತೆಗೆದುಕೊಂಡಿದ್ದು, ಅದಕ್ಕೆ ಈಗಲೂ ಬದ್ಧನಾಗಿದ್ದೇನೆ. ಉದ್ಯೋಗ ಇಲ್ಲದವರು ಮೋದಿ ಅವರನ್ನು ಟೀಕೆ ಮಾಡುವುದನ್ನು ಉದ್ಯೋಗ ಮಾಡಿಕೊಂಡಿದ್ದಾರೆಂದು ಹೇಳಿ ಅಮಿತ್ ಶಾ ವ್ಯಂಗ್ಯವಾಡಿದ್ದರು. ಹೀಗಾಗಿ ನನ್ನ ಧ್ವನಿ ಜೋರಾಯಿತು ಎಂದು ತಿಳಿಸಿದರು.

    ರಫೇಲ್ ವಿಚಾರವನ್ನು ಪ್ರಸ್ತಾಪ ಮಾಡಿದ ಅವರು, ಎಚ್‍ಎಎಲ್ ಜೊತೆ ಮಾಡಿಕೊಂಡ ಒಪ್ಪಂದವನ್ನು ರದ್ದು ಮಾಡಿದ್ದು ಯಾಕೆ? ಫ್ರಾನ್ಸ್ ಪ್ರವಾಸದ ಸಮಯದಲ್ಲಿ ಏಕಾಏಕಿ ರದ್ದಾಗಿದ್ದು ಏಕೆ? ಕ್ಯಾಬಿನೆಟ್ ಗಮನಕ್ಕೂ ತಂದು ಈ ಡೀಲ್ ನಡೆದಿಲ್ಲ ಯಾಕೆ ಎಂದು ಸಿನ್ಹಾ ಪ್ರಶ್ನಿಸಿದರು.

    ಮೇಕ್ ಇನ್ ಇಂಡಿಯಾ ಅಂತಾ ಹೇಳುವವರು ವಿದೇಶದೊಂದಿಗೆ ಇಂತಹ ಒಪ್ಪಂದ ಮಾಡಿಕೊಂಡಿದ್ದು ಯಾಕೆ? ಆ ಕಂಪೆನಿ ವಿರುದ್ಧ ನಾನು ಮಾತನಾಡಲಾರೆ ಯಾಕೆಂದರೆ 500 ಕೋಟಿ ರೂ. ಮಾನಹಾನಿ ಪ್ರಕರಣ ದಾಖಲು ಮಾಡಬಹುದು. ರಫೇಲ್ ಒಪ್ಪಂದದಿಂದಾಗಿ ಎಚ್‍ಎಎಲ್ ಕಂಪೆನಿಗೆ ತುಂಬಾ ನಷ್ಟವಾಗಿದೆ. ಹೊಸ ಒಡಂಬಡಿಕೆ ಮಾಡಿಕೊಳ್ಳುವವರು ಒಂದೇ ಕಂಪೆನಿಗೆ ಅಹ್ವಾನ ಕೊಟ್ಟಿದ್ದು ಯಾಕೆ? ಈ ಆರೋಪದಲ್ಲಿ ಪ್ರಧಾನಿ ಮೋದಿ ಒಬ್ಬರೇ ಭಾಗಿಯಾಗಿದ್ದಾರೆ. ಮೋದಿ ಮತ್ತು ಫ್ರಾನ್ಸ್ ಅಧ್ಯಕ್ಷರ ನಡುವೆ ಈ ಡೀಲ್ ನಡೆದಿದೆ ಅಂತಾ ಮಾಜಿ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಹೇಳಿದ್ದರು. ಈ ಎಲ್ಲ ಕಾರಣಗಳಿಗಾಗಿ ಪಿಎಂ ಮೋದಿ ವೈಯುಕ್ತಿಕವಾಗಿ ಇದಕ್ಕೆ ಜವಾಬ್ದಾರಿ ಆಗುತ್ತಾರೆ ಎಂದು ದೂರಿದರು.

    ಈ ವ್ಯವಹಾರ ಹೇಗೆ ನಡೆದಿದೆ ಎಂಬುದು ದೇಶದ ಜನತೆಗೆ ಗೊತ್ತಾಗಬೇಕು. ಇದಕ್ಕೆ ಪ್ರಧಾನಿ ಮೋದಿ ಉತ್ತರ ನೀಡಬೇಕು. 20 ದಿನಗಳ ಹಿಂದೆ ನೋಂದಣಿ ಆದ ಕಂಪೆನಿಗೆ ಕೊಟ್ಟಿದ್ದು ಹೇಗೆ? ಆ ಕಂಪೆನಿಗೆ ಯುದ್ದ ವಿಮಾನ ತಯಾರಿಕೆಯ ಅನುಭವವೇ ಇಲ್ಲ. ಇಂತಹ ಕಂಪನಿಗೆ ಡೀಲ್ ಕೊಟ್ಟಿದ್ದು ಹೇಗೆ ಎಂದು ಪ್ರಶ್ನಿಸಿದರು.

    ಜಂಟೀ ಸಂಸದೀಯ ಸಮಿತಿಯಲ್ಲಿ ಇದರ ರಫೇಲ್ ಡೀಲ್ ಬಗ್ಗೆ ಚರ್ಚೆಯಾಗಬೇಕು. ಅಲ್ಲಿ ನಿರ್ಧಾರ ಮಾಡಿ ಲೋಕಸಭಾ ಮತ್ತು ರಾಜ್ಯಸಭೆಯಲ್ಲಿ ಅದಕ್ಕೆ ಒಪ್ಪಿಗೆ ಸೂಚಿಸಬೇಕು. ಆಡಳಿತ ಪಕ್ಷದವರೇ ಸಮಿತಿಯಲ್ಲಿ ಅಧ್ಯಕ್ಷರಾಗಿರುವುದರಿಂದ ಯಾವುದೇ ಅನುಕೂಲ ಆಗುವುದಿಲ್ಲ. ಆದರೆ ಫಲಿತಾಂಶ ಏನು ಬರುತ್ತೆ ಎನ್ನುವುದನ್ನು ತಿಳಿದುಕೊಳ್ಳಬಹುದು. ನಾನು ಕೂಡ 2ಜಿ ಹಗರಣದ ಸಮಿತಿಯಲ್ಲಿ ಇದ್ದು, ಏನಾಯಿತು ಎನುವುದನ್ನು ತಿಳಿದಿಕೊಂಡೆ ಎಂದರು.

    ದೇಶವನ್ನು ಅಭಿವೃದ್ಧಿ ಮಾದರಿಯಲ್ಲಿ ನಡೆಸಿದರೆ ತನ್ನಷ್ಟಕ್ಕೆ ತಾನೇ ಮೇಕ್ ಇನ್ ಇಂಡಿಯಾ ಆಗುತ್ತದೆ. ಅದನ್ನು ಬಿಟ್ಟು ಭಾಷಣದಿಂದ ಮೇಕ್ ಇನ್ ಇಂಡಿಯಾ ಆಗಲ್ಲ ಎಂದು ಪ್ರಧಾನಿಗೆ ಟಾಂಗ್ ಕೊಟ್ಟ ಅವರು, ಪ್ರಜಾತಂತ್ರದ ಮೇಲೆ, ಪ್ರಜಾತಂತ್ರದ ಸಂಸ್ಥೆಗಳ ಮೇಲೆ ದಾಳಿ ಆದ ಕಾರಣ ನಾನು ಬಿಜೆಪಿ ತೊರೆದೆ. ನಾನು 2 ವರ್ಷ ವಿದೇಶಾಂಗ ಸಚಿವನಾಗಿದ್ದಾಗ ಅಂದಿನ ಪ್ರಧಾನಿ ವಾಜಪೇಯಿ ನನಗೆ ಸಂಪೂರ್ಣ ಸ್ವತಂತ್ರ ನೀಡಿದ್ದರು. ಆದರೆ ಪ್ರಧಾನಿ ಮೋದಿ ಕಳೆದ ನಾಲ್ಕು ವರ್ಷದಲ್ಲಿ ಯಾವತ್ತಾದರೂ ವಿದೇಶಾಂಗ ಸಚಿವೆಯನ್ನು ವಿದೇಶಕ್ಕೆ ಕರೆದೊಯ್ದೊದ್ದಿರಾ? ವಿದೇಶಾಂಗ ಖಾತೆ ಸಚಿವೆ ಸುಷ್ಮಾ ಸ್ವರಾಜ್ ಟ್ವಿಟ್ಟರ್ ಹಾಗೂ ಖಾತೆಯ ಹೆಸರಿಗೆ ಸೀಮಿತ ಎಂದು ಕಾಲೆಳೆದರು.

    ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಇದೆ. ಮಾಧ್ಯಮ ಸೇರಿದಂತೆ ಪ್ರಜಾಪ್ರಭುತ್ವದ ಎಲ್ಲಾ ಅಂಗಗಳು ಒಂದೇ ಕಡೆ ಇವೆ. ಹಿಂದೆಂದೂ ಪ್ರಜಾಪ್ರಭುತ್ವದ ಅಂಗಗಳು ಇಷ್ಟು ದುರ್ಬಲವಾಗಿರುವುದನ್ನು ನಾನು ಕಂಡಿಲ್ಲ ಎಂದು ಕೇಂದ್ರ ಸರ್ಕಾರದ ವಿರುದ್ಧ ಯಶ್‍ವಂತ್ ಸಿನ್ಹಾ ವಾಗ್ದಾಳಿ ನಡೆಸಿದರು.

    ಯಶವಂತ್ ಸಿನ್ಹಾ ಸಹಿತ ಹಲವು ಹಿರಿಯ ಬಿಜೆಪಿ ನಾಯಕರನ್ನು ಮೂಲೆ ಗುಂಪು ಮಾಡಿ `ಮಾರ್ಗದರ್ಶಕ ಮಂಡಳಿ’ಯ ಸದಸ್ಯರನ್ನಾಗಿ ನೇಮಿಸಿದ್ದಾರೆ ಎನ್ನುವ ಆರೋಪ ಮೋದಿ ಮೇಲಿದೆ. ಸಿನ್ಹಾ ಅವರು ಮಾರ್ಗದರ್ಶಕ ಮಂಡಳಿಯನ್ನು ಆನೇಕ ಬಾರಿ ಲೇವಡಿ ಮಾಡಿ ಮಾತನಾಡಿದ್ದರು. ಈ ಹಿಂದೆ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಲು 1 ವರ್ಷದ ಹಿಂದೆಯೇ ನಾನು ಸಮಯವನ್ನು ಕೇಳಿದ್ದೆ, ಆದರೆ ಇದೂವರೆಗೂ ನನಗೆ ಭೇಟಿಯಾಗಲು ಸಮಯವನ್ನು ನೀಡಿಲ್ಲ ಎಂದು ಯಶವಂತ್ ಸಿನ್ಹಾ ವಾಗ್ದಾಳಿ ನಡೆಸಿದ್ದರು. ಈ ವರ್ಷದ ಏಪ್ರಿಲ್ ನಲ್ಲಿ ಬಿಜೆಪಿಯನ್ನು ಯಶ್‍ವಂತ್ ಸಿನ್ಹಾ ತೊರೆದಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv