Tag: Rafale deal

  • Rafale Deal: 90,000 ಕೋಟಿ ವೆಚ್ಚ, 26 ರಫೇಲ್‌ ಖರೀದಿಸಲು ಭಾರತ ಸರ್ಕಾರ ಮೆಗಾ ಪ್ಲ್ಯಾನ್‌!

    Rafale Deal: 90,000 ಕೋಟಿ ವೆಚ್ಚ, 26 ರಫೇಲ್‌ ಖರೀದಿಸಲು ಭಾರತ ಸರ್ಕಾರ ಮೆಗಾ ಪ್ಲ್ಯಾನ್‌!

    ನವದೆಹಲಿ/ಪ್ಯಾರಿಸ್‌: ಈ ಹಿಂದೆ ಫ್ರಾನ್ಸ್‌ನಿಂದ (France) 36 ರಫೇಲ್‌ ಯುದ್ಧ ವಿಮಾನಗಳನ್ನ (Rafale Fighter Jet) ಖರೀದಿ ಮಾಡಿದ್ದ ಭಾರತ ಸರ್ಕಾರ ಇದೀಗ, ಇನ್ನೂ 26 ಯುದ್ಧ ವಿಮಾನಗಳನ್ನು ಖರೀದಿಸಲು ಚಿಂತನೆ ನಡೆಸಿದೆ.

    ಭಾರತೀಯ ರಕ್ಷಣಾ ಪಡೆಗಳು ಸಚಿವಾಲಯದ ಮುಂದೆ ರಫೇಲ್‌ ಖರೀದಿಸುವ ಪ್ರಸ್ತಾವನೆಯನ್ನಿಟ್ಟಿವೆ. ಈ ವಾರ ಪ್ರಧಾನಿ ನರೇಂದ್ರ ಮೋದಿ (Narendra Modi) ಫ್ರಾನ್ಸ್‌ಗೆ ಭೇಟಿ ನೀಡಲಿದ್ದಾರೆ. ಈ ವೇಳೆ ಭಾರತ ಸರ್ಕಾರವು 26 ರಫೇಲ್ ಯುದ್ಧ ವಿಮಾನಗಳ ಖರೀದಿಗೆ ಸಂಬಂಧಿಸಿದಂತೆ ಒಪ್ಪಂದ ಮಾಡಿಕೊಳ್ಳುವ ಸಾಧ್ಯತೆ ಇದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ. ಇದನ್ನೂ ಓದಿ: ರಫೇಲ್‌ ಡೀಲ್‌ – ಆಫ್‌ಸೆಟ್‌ ನಿಯಮವನ್ನೇ ಕೈಬಿಟ್ಟ ಸರ್ಕಾರ

    ರಫೇಲ್ ಯುದ್ಧ ವಿಮಾನಗಳ ಜೊತೆಗೆ ಭಾರತವು ಫ್ರಾನ್ಸ್‌ನಿಂದ 3 ಸ್ಕಾರ್ಪೀನ್ ವರ್ಗದ ಸಾಂಪ್ರದಾಯಿಕ ಜಲಾಂತರ್ಗಾಮಿ (Submarines) ನೌಕೆಗಳನ್ನೂ ಖರೀದಿಸಲಿದೆ. 26 ರಫೇಲ್ ಮತ್ತು ಸ್ಕಾರ್ಪೀನ್ ವರ್ಗದ 3 ಸಬ್‌ಮರೀನ್‌ಗಳ ಖರೀದಿಗೆ ಭಾರತವು ಸುಮಾರು 90 ಸಾವಿರ ಕೋಟಿ ರೂ. ವೆಚ್ಚ ಮಾಡಲಿದೆ ಎಂದು ಹೇಳಲಾಗುತ್ತಿದೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ರಫೆಲ್ ಯುದ್ಧ ವಿಮಾನ ಖರೀದಿ – ಸುಸೇನ್ ಗುಪ್ತಾ ಮೇಲೆ ಲಂಚ ಸ್ವೀಕಾರ ಆರೋಪ

    ಮೂಲಗಳ ಪ್ರಕಾರ, ಭಾರತೀಯ ನೌಕಾ ಪಡೆಯು ನಾಲ್ಕು ಟ್ರೈನರ್ ಏರ್‌ಕ್ರಾಫ್ಟ್‌ಗಳ ಸಹಿತ 22 ಸಿಂಗಲ್ ಸೀಟೆಡ್ (ಏಕ ಆಸನಗಳನ್ನು ಒಳಗೊಂಡ) ರಫೇಲ್ ಯುದ್ಧ ವಿಮಾನಗಳನ್ನು ಹೊಂದಲಿದೆ. ದೇಶಾದ್ಯಂತ ಭದ್ರತಾ ಸವಾಲುಗಳ ದೃಷ್ಟಿಯಿಂದ ಭಾರತೀಯ ನೌಕಾಪಡೆಯು ಕೊರತೆ ಎದುರಿಸುತ್ತಿರುವ ಕಾರಣ ಈ ಯುದ್ಧ ವಿಮಾನಗಳು ಮತ್ತು ಜಲಾಂತರ್ಗಾಮಿ ನೌಕೆಗಳ ಖರೀದಿಗೆ ಸರ್ಕಾರದ ಮೇಲೆ ರಕ್ಷಣಾಪಡೆಗಳು ಒತ್ತಡ ಹೇರುತ್ತಿದೆ ಎಂದು ತಿಳಿದುಬಂದಿದೆ.

    ವಿಮಾನಗಳನ್ನು ಹೊತ್ತೊಯ್ಯುವ ಐಎನ್‌ಎಸ್ ವಿಕ್ರಮಾದಿತ್ಯ ಮತ್ತು ವಿಕ್ರಾಂತ್ (INS Vikrant), ಮಿಗ್-19 ಫೈಟರ್‌ಜೆಟ್‌ಗಳನ್ನು ನಿರ್ವಹಣೆ ಮಾಡುತ್ತಿದೆ. ಈ ಎರಡೂ ಯುದ್ಧ ಹಡಗುಗಗಳಿಗೆ ರಫೇಲ್ ಯುದ್ಧವಿಮಾನಗಳ ಅಗತ್ಯವಿದೆ. ಈ ಮಧ್ಯೆ, ಸ್ಕಾರ್ಪೀನ್ ಕ್ಲಾಸ್ ಸಬ್‌ಮರೀನ್‌ಗಳನ್ನು ಪಡೆದುಕೊಳ್ಳುವ ಸಾಧ್ಯತೆಗಳಿವೆ. ಪ್ರಾಜೆಕ್ಟ್-75ರ ಭಾಗವಾಗಿ ನೌಕಾಪಡೆಯು ಈ ಜಲಾಂತರ್ಗಾಮಿಗಳನ್ನ ಮುಂಬೈನ ಮಜಗಾಂವ್ ಡಾಕ್‌ಯಾರ್ಡ್‌ನಲ್ಲಿ ನಿರ್ಮಾಣಗೊಳ್ಳಲಿವೆ.

    26 ರಫೇಲ್ ಮತ್ತು ಸ್ಕಾರ್ಪೀನ್ ವರ್ಗದ 3 ಸಬ್‌ಮರೀನ್‌ಗಳ ಖರೀದಿಗೆ ಭಾರತವು ಸುಮಾರು 90 ಸಾವಿರ ಕೋಟಿ ರೂ. ವೆಚ್ಚ ಮಾಡಲಿದೆ ಎಂದು ಹೇಳಲಾಗುತ್ತಿದೆ. ಆದ್ರೆ ಪೂರ್ಣ ಮಾತುಕತೆ ಒಪ್ಪಂದ ಮುಕ್ತಾಯಗೊಂಡ ನಂತರ ಅಂತಿಮ ವೆಚ್ಚ ಸ್ಪಷ್ಟವಾಗಲಿದೆ. ಈ ನಡುವೆ ಭಾರತವು ಈ ಒಪ್ಪಂದಲ್ಲಿ ರಿಯಾಯಿತಿ ಪಡೆದುಕೊಳ್ಳುವ ಸಾಧ್ಯತೆಗಳಿವೆ ಎಂದೂ ಹೇಳಲಾಗಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಫ್ರಾನ್ಸ್ ನಲ್ಲಿ ರಫೇಲ್ ಡೀಲ್ ತನಿಖೆ – ಕಳ್ಳನ ದಾಡಿ ಅಂದ್ರು ರಾಹುಲ್ ಗಾಂಧಿ

    ಫ್ರಾನ್ಸ್ ನಲ್ಲಿ ರಫೇಲ್ ಡೀಲ್ ತನಿಖೆ – ಕಳ್ಳನ ದಾಡಿ ಅಂದ್ರು ರಾಹುಲ್ ಗಾಂಧಿ

    ನವದೆಹಲಿ: ರಫೇಲ್ ಫೈಟರ್ ಪ್ಲೇನ್ ವಿಚಾರ ಮತ್ತೆ ಮುನ್ನಲೆಗೆ ಬಂದಿದೆ. ರಫೇಲ್ ಡೀಲ್ ಸಂಬಂಧ ಫ್ರಾನ್ಸ್ ನಲ್ಲಿ ತನಿಖೆಗೆ ಆದೇಶಿಸಲಾಗಿದೆ. ಈ ಬೆನ್ನಲ್ಲೇ ದೇಶದಲ್ಲಿ ರಾಜಕೀಯದಲ್ಲಿ ಹಲ್-ಚಲ್ ಉಂಟಾಗಿದೆ.

    ಫ್ರಾನ್ಸ್ ನಲ್ಲಿ ತನಿಖೆಗೆ ಆದೇಶವಾಗುತ್ತಲೇ, ಭಾರತದಲ್ಲಿಯೂ ರಫೇಲ್ ಡೀಲ್ ಕುರಿತು ಜಂಟಿ ಸಂಸದೀಯ ಸಮಿತಿ ರಚಿಸಿ ತನಿಖೆ ಮಾಡಿಸಬೇಕೆಂದು ಕಾಂಗ್ರೆಸ್ ಒತ್ತಾಯಿಸಿದೆ. ಇತ್ತ ಕಾಂಗ್ರೆಸ್ ಮಾಜಿ ಅಧ್ಯಕ್ಷ, ಸಂಸದ ರಾಹುಲ್ ಗಾಂಧಿ, ಕಳ್ಳನ ದಾಡಿ ಎಂದು ಬರೆದು ಟ್ವೀಟ್ ಮಾಡಿದ್ದಾರೆ.

    ಇನ್ನು ಈ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್ ವಕ್ತಾರ ರಣ್‍ದೀಪ್ ಸುರ್ಜೇವಾಲಾ, ಫ್ರಾನ್ಸ್ ನಲ್ಲಿ ರಫೇಲ್ ಡೀಲ್ ಬಗ್ಗೆ ನ್ಯಾಯಾಂಗ ತನಿಖೆಗೆ ಆದೇಶ ನೀಡಿರೋದನ್ನು ಗಮನಿಸಿದ್ರೆ ರಾಹುಲ್ ಗಾಂಧಿ ಆರೋಪಗಳು ಸತ್ಯ ಅನ್ನೋದು ಗೊತ್ತಾಗುತ್ತೆ. ಫ್ರಾನ್ಸ್ ಸರ್ಕಾರ ದ ಹಾಗೆ ನಮ್ಮಲ್ಲಿಯ ಜಂಟಿ ಸಂಸದೀಯ ಸಮಿತಿ ನೇತೃತ್ವದಲ್ಲಿ ರಫೇಲ್ ಡೀಲ್ ಬಗ್ಗೆ ತನಿಖೆ ನಡೆಸಬೇಕಿದೆ ಎಂದು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

    ರಫೇಲ್ ಹಗರಣದ ಭೀಕರ ಸತ್ಯ:
    ಇದೊಂದು ದೊಡ್ಡ ಭ್ರಷ್ಟಾಚಾರ, ದೇಶದ್ರೋಹ ಮತ್ತು ದೇಶದ ಬೊಕ್ಕಸದ ನಷ್ಟ ರಫೇಲ್ ಹಗರಣದಲ್ಲಿ ಅಡಗಿದೆ. ರಫೇಲ್ ಹಗರಣದ ಭೀಕರ ಸತ್ಯ ಕೊನೆಗೂ ಅನಾವರಣಗೊಂಡಿದೆ. ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿ ಸರಿ ಎಂಬುವುದು ಸಾಬೀತಾಗಿದೆ ಎಂದು ಬಿಜೆಪಿ ಸರ್ಕಾರದ ವಿರುದ್ಧ ಸುರ್ಜೇವಾಲಾ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಭಾರತದ ಸೈನ್ಯ ಸೇರಿದ 5ನೇ ಬ್ಯಾಚ್ ರಫೇಲ್ ಯುದ್ಧ ವಿಮಾನ

    ಕಾಂಗ್ರೆಸ್ ಆರೋಪಕ್ಕೆ ಬಿಜೆಪಿ ಉತ್ತರ:
    ಕಾಂಗ್ರೆಸ್ ಆರೋಪಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ, ಕಾಂಗ್ರೆಸ್ ಸುಳ್ಳು ಕಥೆಗಳಿಗೆ ಪರ್ಯಾಯ ಪದ. ಇಂದು ಮತ್ತೊಮ್ಮೆ ರಫೇಲ್ ಖರೀದಿ ವಿಚಾರದಲ್ಲಿ ಸುಳ್ಳು ಹೇಳುತ್ತಿದೆ. ಒಂದು ದೇಶದ ಎನ್‍ಜಿಓ ಯಾವುದೇ ವಿಷಯದ ಬಗ್ಗೆ ಆರೋಪಿಸಿದ್ದು, ಅಲ್ಲಿ ತನಿಖೆಗೆ ಆದೇಶ ನೀಡಲಾಗಿದೆ. ಆದ್ರೆ ಇದನ್ನು ಭ್ರಷ್ಟಾಚಾರ ರೂಪದಲ್ಲಿ ನೋಡಬಾರದು ಎಂದು ಹೇಳಿದ್ದಾರೆ. ಇದನ್ನೂ ಓದಿ: 60 ಸಾವಿರ ಕೋಟಿ ರಫೇಲ್ ಡೀಲ್‍ನಲ್ಲಿ ಕೋಟಿ ಕೋಟಿ ಗಿಫ್ಟ್ ಸಿಕ್ಕಿದ್ಯಾರಿಗೆ – ಕಾಂಗ್ರೆಸ್ ಪ್ರಶ್ನೆ

  • ರಾಹುಲ್‍ಗೆ ಎಚ್ಚರಿಕೆ ನೀಡಿ ನ್ಯಾಯಾಂಗ ನಿಂದನೆ ಅರ್ಜಿ ಇತ್ಯರ್ಥಗೊಳಿಸಿದ ಸುಪ್ರೀಂ

    ರಾಹುಲ್‍ಗೆ ಎಚ್ಚರಿಕೆ ನೀಡಿ ನ್ಯಾಯಾಂಗ ನಿಂದನೆ ಅರ್ಜಿ ಇತ್ಯರ್ಥಗೊಳಿಸಿದ ಸುಪ್ರೀಂ

    ನವದೆಹಲಿ: ರಾಹುಲ್ ಗಾಂಧಿ ವಿರುದ್ಧ ದಾಖಲಾಗಿದ್ದ ನ್ಯಾಯಾಂಗ ನಿಂದನೆ ಅರ್ಜಿಯನ್ನು ಸುಪ್ರೀಂ ಕೋರ್ಟ್ ಇತ್ಯರ್ಥಗೊಳಿಸಿದೆ.

    ರಫೇಲ್ ಡೀಲ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕಳ್ಳತನ ಎಸಗಿದ್ದಾರೆ ಎಂಬುದಾಗಿ ಸುಪ್ರೀಂ ಕೋರ್ಟ್ ಹೇಳಿದೆ ಎಂದು ರಾಹುಲ್ ಗಾಂಧಿ ಪ್ರಚಾರ ಭಾಷಣದಲ್ಲಿ ಹೇಳಿದ್ದರು. ಈ ಸಂಬಂಧ ರಾಹುಲ್ ಗಾಂಧಿ  ಕ್ಷಮೆ ಕೇಳಿದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಈ ಅರ್ಜಿಯನ್ನು ಇತ್ಯರ್ಥಗೊಳಿಸಿದೆ.

    ಸುಪ್ರೀಂ ಕೋರ್ಟ್ ನೀಡಿದ ಆದೇಶವನ್ನು ಉಲ್ಲೇಖಿಸುವಾಗ ಬಹಳ ಜಾಗೃತೆ ವಹಿಸಬೇಕು. ರಾಜಕೀಯ ಲಾಭಕ್ಕಾಗಿ ಕೋರ್ಟ್ ಆದೇಶವನ್ನು ಎಳೆದು ತರಬಾರದು ಎಂದು ಮುಖ್ಯ ನ್ಯಾ. ರಂಜನ್ ಗೊಗೋಯ್, ನ್ಯಾ. ಎಸ್‍ಕೆ ಕೌಲ್, ನ್ಯಾ. ಕೆ.ಎಂ ಜೋಸೆಫ್ ಅವರಿದ್ದ ಪೀಠ ರಾಹುಲ್ ಗಾಂಧಿಗೆ ಎಚ್ಚರಿಕೆ ನೀಡಿದೆ.

    ಏನಿದು ಪ್ರಕರಣ?
    ರಫೇಲ್ ತೀರ್ಪಿಗೆ ಸಂಬಂಧಿಸಿದಂತೆ ಸಲ್ಲಿಸಲಾದ ಮರುಪರಿಶೀಲನಾ ಅರ್ಜಿಯನ್ನು ಪುರಸ್ಕರಿಸಬಾರದು ಎಂದು ಕೇಂದ್ರದ ವಾದವನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿತ್ತು. ಈ ಆದೇಶ ಬಂದ ನಂತರ ಚೌಕಿದಾರ್(ಪ್ರಧಾನಿ ಮೋದಿ) ಚೋರ್ ಹೈ ಎಂಬುದಾಗಿ ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ ಎಂದು ರಾಹುಲ್ ಗಾಂಧಿ ಅವರು ತಮ್ಮ ಪ್ರಚಾರ ಭಾಷಣದಲ್ಲಿ ಹೇಳಿದ್ದರು. ಇದನ್ನೂ ಓದಿ: ಆಧಾರವಿಲ್ಲದೆ ಊಹಿಸಿದ ಮಾತ್ರಕ್ಕೆ ತನಿಖೆಗೆ ಆದೇಶಿಸಲ್ಲ – ಮೋದಿ ಸರ್ಕಾರಕ್ಕೆ ಬಿಗ್ ರಿಲೀಫ್

    ರಾಹುಲ್ ಗಾಂಧಿ ಅವರು, ರಫೇಲ್ ಡೀಲ್ ಪ್ರಕರಣದ ಆದೇಶದಲ್ಲಿ ಇಲ್ಲದೆ ಇರುವ ಅಂಶಗಳನ್ನು ಉಲ್ಲೇಖಿಸಿ ಮೋದಿ ಅವರನ್ನು ಟೀಕೆ ಮಾಡಿದ ಹಿನ್ನೆಲೆಯಲ್ಲಿ ಬಿಜೆಪಿ ಸಂಸದೆ ಮೀನಾಕ್ಷಿ ಲೇಖಿ ಅವರು ಸುಪ್ರೀಂ ಕೋರ್ಟಿನಲ್ಲಿ ರಾಹುಲ್ ವಿರುದ್ಧ ನ್ಯಾಯಾಂಗ ನಿಂದನೆ ದೂರು ನೀಡಿದ್ದರು. ಮೀನಾಕ್ಷಿ ಲೇಖಿ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯವು ರಾಹುಲ್ ಗಾಂಧಿ ಅವರಿಗೆ ನೋಟಿಸ್ ಜಾರಿ ಮಾಡಿ ಸ್ಪಷ್ಟನೆ ನೀಡಬೇಕೆಂದು ಸೂಚಿಸಿತ್ತು. ಈ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿಯೂ ರಾಹುಲ್ ಗಾಂಧಿ ವಿರುದ್ಧ ಚುನಾವಣಾ ಆಯೋಗಕ್ಕೂ ದೂರು ನೀಡಿತ್ತು.

    ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಪ್ರಕರಣ ರಾಜಕೀಯವಾಗಿ ತೀವ್ರತೆ ಪಡೆಯುತ್ತಿದ್ದಂತೆ ಅಫಿಡವಿಟ್ ಸಲ್ಲಿಸಿದ್ದ ರಾಹುಲ್ ಗಾಂಧಿ, ಚೌಕಿದಾರ್ ಚೋರ್ ಹೈ ಎಂದು ಸುಪ್ರೀಂ ಹೇಳಿದೆ ಎನ್ನಲಾದ ಹೇಳಿಕೆ ಉದ್ದೇಶಪೂರ್ವಕವಲ್ಲದ ಅಜಾಗರೂಕತೆಯಿಂದ ಕೂಡಿದ ಹೇಳಿಕೆಯಾಗಿದೆ. ಈ ಹೇಳಿಕೆ ನೀಡಿದ್ದಕ್ಕೆ ನಾನು ಸುಪ್ರೀಂ ಕೋರ್ಟ್ ನಲ್ಲಿ ಕ್ಷಮೆ ಕೇಳುತ್ತೇನೆ ಎಂದು ತಿಳಿಸಿದ್ದರು.

    ಕ್ಷಮೆ ಕೇಳುವುದಕ್ಕೆ ಮೊದಲು ನಡೆದ ವಿಚಾರಣೆ ವೇಳೆ ರಾಹುಲ್ ಪರ ಹಾಜರಿದ್ದ ವಕೀಲ ಅಭಿಷೇಕ್ ಸಿಂಘ್ವಿ, ಅಫಿಡವಿಟ್‍ಗಳಲ್ಲಿ `ಕ್ಷಮೆ’ (ಅಪಾಲಜಿ) ಎನ್ನುವ ಪದ ಇಲ್ಲದೇ ಇರುವುದು ದೋಷ. ಡಿಕ್ಷನರಿಯನ್ನು ಚೆಕ್ ಮಾಡಿದ್ದೇನೆ. ವಿಷಾದ (ರಿಗ್ರೆಟ್) ಅಂದರೆ ಕ್ಷಮಾಪಣೆ (ಸಿವಿಲ್ ಅಪಾಲಜಿ) ಎಂದೇ ಅರ್ಥ ಬರುತ್ತದೆ ಎಂದು ಸಮಜಾಯಿಷಿ ನೀಡಿದ್ದರು. ಇದಕ್ಕೆ ಮುಖ್ಯ ನ್ಯಾಯಮೂರ್ತಿಗಳು ನಿಮ್ಮ ಕಕ್ಷಿದಾರರು ಏನು ಹೇಳಿದ್ದಾರೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಲು ಕಷ್ಟ ಪಟ್ಟಿದ್ದೇವೆ ಎಂದಾಗ ರಾಜಕೀಯ ಸನ್ನಿವೇಶದಲ್ಲಿ ಚೌಕಿದಾರ್ ಚೋರ್ ಅನ್ನೋ ಪದ ಬಳಸಿದ್ದಾರೆ ಎಂದು ಉತ್ತರ ನೀಡಿದ್ದರು.

    ಈ ಉತ್ತರಕ್ಕೆ ಗರಂ ಆಗಿದ್ದ ಸಿಜೆಐ, ನಿಮ್ಮ ರಾಜಕೀಯ ನಿಲುವುಗಳ ನಮಗೆ ಬೇಕಿಲ್ಲ. ನಿಮ್ಮ ರಾಜಕೀಯವನ್ನು ನಿಮ್ಮ ಬಳಿಯೇ ಇಟ್ಟುಕೊಳ್ಳಿ ಎಂದು ಹೇಳಿ ಚಾಟಿ ಬೀಸಿದ್ದರು. ಈ ವೇಳೆ ಮುಕುಲ್ ರೊಹ್ಟಗಿ ಕೋರ್ಟ್ ಮೋದಿ ಸುಳ್ಳು ಹೇಳಿದ್ದಾರೆ ಎಂದು ರಾಹುಲ್ ಗಾಂಧಿ ಉದ್ದೇಶಪೂರ್ವಕವಾಗಿ ಹೇಳಿದ್ದಾರೆ. ಬ್ರಾಕೆಟ್‍ನಲ್ಲಿ ವಿಷಾದ ಅಂದ್ರೇನು ಅರ್ಥ? ಸುಪ್ರೀಂಕೋರ್ಟ್ ಪ್ರಧಾನಿಯನ್ನು ಕಳ್ಳ ಅಂತ ಹೇಳಿದೆ ಎಂದು ದೇಶದ ಹಾದಿ ತಪ್ಪಿಸೋ ಯತ್ನವಲ್ಲದೆ ಬೇರೇನೂ ಅಲ್ಲ ಎಂದು ಹೇಳಿ ಸಿಂಘ್ವಿ ವಾದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು.

    ಈ ಆಕ್ಷೇಪಕ್ಕೆ ಸಿಜೆಐ, ನಿಮ್ಮ ಕಕ್ಷಿದಾರ ಸ್ಪಷ್ಟವಾಗಿ ಕ್ಷಮೆ ಕೋರಬೇಕು. ಇಲ್ಲವಾದಲ್ಲಿ ಕ್ರಿಮಿನಲ್ ನಿಂದನೆ ಎದುರಿಸಬೇಕಾಗುತ್ತದೆ ಎಂದಾಗ ಸಿಂಘ್ವಿ, ತಪ್ಪನ್ನು ತಿದ್ದಿಕೊಂಡು `ಕ್ಷಮೆ ಕೋರಿ’ ಹೊಸ ಅಫಿಡವಿಟ್ ಸಲ್ಲಿಸುತ್ತೇವೆ ಎಂದು ತಿಳಿಸಿದ್ದರು. ಅದರಂತೆ ರಾಹುಲ್ ಗಾಂಧಿ ಬೇಷರತ್ ಕ್ಷಮೆ ಕೇಳಿದ್ದು ಈಗ ಪ್ರಕರಣ ಇತ್ಯರ್ಥಗೊಂಡಿದೆ.

  • ಆಧಾರವಿಲ್ಲದೆ ಊಹಿಸಿದ ಮಾತ್ರಕ್ಕೆ ತನಿಖೆಗೆ ಆದೇಶಿಸಲ್ಲ – ಮೋದಿ ಸರ್ಕಾರಕ್ಕೆ ಬಿಗ್ ರಿಲೀಫ್

    ಆಧಾರವಿಲ್ಲದೆ ಊಹಿಸಿದ ಮಾತ್ರಕ್ಕೆ ತನಿಖೆಗೆ ಆದೇಶಿಸಲ್ಲ – ಮೋದಿ ಸರ್ಕಾರಕ್ಕೆ ಬಿಗ್ ರಿಲೀಫ್

    – ರಫೇಲ್ ತೀರ್ಪು ಮರು ಪರಿಶೀಲನಾ ಅರ್ಜಿ ವಜಾ
    – ಮೋದಿ ಸರ್ಕಾರಕ್ಕೆ ಮತ್ತೆ ಸುಪ್ರೀಂನಿಂದ ಕ್ಲೀನ್ ಚಿಟ್

    ನವದೆಹಲಿ: ರಫೇಲ್ ಯುದ್ಧ ವಿಮಾನ ಖರೀದಿಯ ಪ್ರಕರಣದಲ್ಲಿ ಕೇಂದ್ರ ಸರ್ಕಾರಕ್ಕೆ ಕ್ಲೀನ್ ಚಿಟ್ ನೀಡಿದ್ದ ತೀರ್ಪನ್ನು ಮರುಪರಿಶೀಲನೆ ನಡೆಸುವ ಅಗತ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ಪ್ರಕಟಿಸಿದೆ. ಈ ಮೂಲಕ ರಫೇಲ್ ಒಪ್ಪಂದದಲ್ಲಿ ಹಗರಣ ನಡೆದಿದೆ ಎನ್ನುವ ಆರೋಪಕ್ಕೆ ಗುರಿಯಾಗಿದ್ದ ಮೋದಿ ಸರ್ಕಾರಕ್ಕೆ ಬಿಗ್ ರಿಲೀಫ್ ಸಿಕ್ಕಿದೆ.

    ಯಾವುದೇ ಆಧಾರವಿಲ್ಲದೆ ಅಕ್ರಮ ನಡೆದಿದೆ ಎಂದು ವ್ಯಕ್ತಿಗಳು ಊಹಿಸಿದ ಮಾತ್ರಕ್ಕೆ ಎಫ್‍ಐಆರ್ ದಾಖಲಿಸುವಂತೆ ಆದೇಶ ನೀಡಲು ಸಾಧ್ಯವಿಲ್ಲ. ಈ ಅರ್ಜಿಗಳು ಮರುಪರಿಶೀಲನೆಗೆ ಯೋಗ್ಯವಲ್ಲ ಎಂದು ಹೇಳಿ ಮುಖ್ಯ.ನ್ಯಾ ರಂಜನ್ ಗೊಗೋಯ್ ನೇತೃತ್ವದ ನ್ಯಾ. ಎಸ್‍ಕೆ ಕೌಲ್, ನ್ಯಾ. ಕೆಎಂ ಜೋಸೆಫ್ ಅವರಿದ್ದ ತ್ರಿಸದಸ್ಯ ಪೀಠ ಎಲ್ಲ  ಮರುಪರಿಶೀಲನಾ ಅರ್ಜಿಗಳನ್ನು ವಜಾಗೊಳಿಸಿದೆ.

    ಏನಿದು ಪ್ರಕರಣ?
    ರಫೇಲ್ ಯುದ್ಧ ವಿಮಾನ ಖರೀದಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ ವಕೀಲ ಎಂ.ಎಲ್ ಶರ್ಮಾ, ವಿನೀತಾ ದಾಂಡ, ಆಪ್ ನಾಯಕ ಸಂಜಯ್ ಸಿಂಗ್ ಮಾಜಿ ಕೇಂದ್ರ ಸಚಿವ ಯಶವಂತ ಸಿನ್ಹಾ, ಅರುಣ್ ಶೌರಿ ಹಾಗೂ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಸಾರ್ವಜನಿಕಾ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ರಫೇಲ್ ಒಪ್ಪಂದವನ್ನು ರದ್ದುಗೊಳಿಸಿ ಸುಪ್ರೀಂಕೋರ್ಟ್ ಮೇಲುಸ್ತುವಾರಿಯಲ್ಲಿ ಸಿಬಿಐ ತನಿಖೆ ನಡೆಸಬೇಕು ಎಂದು ವಕೀಲರು ಅರ್ಜಿಯಲ್ಲಿ ಮನವಿ ಮಾಡಿಕೊಂಡಿದ್ದರು. ಈ ಅರ್ಜಿಗಳನ್ನು ಒಟ್ಟಾಗಿಸಿದ್ದ ಮುಖ್ಯ.ನ್ಯಾ ರಂಜನ್ ಗೊಗೋಯ್ ನೇತೃತ್ವದ ನ್ಯಾ. ಎಸ್‍ಕೆ ಕೌಲ್, ನ್ಯಾ. ಕೆಎಂ ಜೋಸೆಫ್ ಅವರಿದ್ದ ತ್ರಿಸದಸ್ಯ ಪೀಠ ಸುದೀರ್ಘ ವಿಚಾರಣೆ ನಡೆಸಿತ್ತು. 2018ರ ನವೆಂಬರ್ 14 ರಂದು ವಿಚಾರಣೆ ಅಂತ್ಯಗೊಳಿಸಿದ್ದ ಸುಪ್ರೀಂಕೋರ್ಟ್ ಡಿಸೆಂಬರ್ 14ರಂದು ತೀರ್ಪು ಪ್ರಕಟಿಸಿ ಎಲ್ಲ ಅರ್ಜಿಗಳನ್ನು ವಜಾಗೊಳಿಸಿತ್ತು. ಇದನ್ನೂ ಓದಿ: ಬೆಂಗಳೂರಿಗೆ ಬಂದಿಳಿಯಿತು ರಫೇಲ್ ವಿಮಾನಗಳು – ವಿಶೇಷತೆ ಏನು? ವಿಡಿಯೋ ನೋಡಿ

    ಮರು ಪರಿಶೀಲನಾ ಅರ್ಜಿ ಸಲ್ಲಿಸಿದ್ದು ಯಾಕೆ?
    ನಿಯಮಗಳ ಪ್ರಕಾರ ಸಿಎಜಿ ವರದಿಯನ್ನು ಮೊದಲು ಸಂಸತ್‍ನಲ್ಲಿ ಮಂಡಿಸಿ ನಂತರ ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಪರಿಶೀಲನೆಗೆ ಕಳಿಸಬೇಕು. ಸಿಎಜಿ ವರದಿ ಸಂಸತ್ತಿಗೆ ಮಂಡನೆಯಾಗದೇ ಕೋರ್ಟ್ ತೀರ್ಪಿನಲ್ಲಿ ಉಲ್ಲೇಖವಾಗಿದ್ದು ಹೇಗೆ ಎನ್ನುವ ಪ್ರಶ್ನೆಯನ್ನು ಕಾಂಗ್ರೆಸ್ ಕೇಳಿತ್ತು. ಸುಪ್ರೀಂ ಕೋರ್ಟ್ ಈ ವಿಚಾರವನ್ನು ಉಲ್ಲೇಖಿಸಿದ ಬೆನ್ನಲ್ಲೇ ಪಿಐಎಲ್ ಸಲ್ಲಿಸಿದ್ದ ಪ್ರಮುಖ ವ್ಯಕ್ತಿಗಳಾದ ಪ್ರಶಾಂತ್ ಭೂಷಣ್, ಸಾರ್ವಜನಿಕ ಲೆಕ್ಕ ಸಮಿತಿಯ ಮುಂದೆ ಸಿಎಜಿ ವರದಿ ಸಲ್ಲಿಕೆಯಾಗಿಲ್ಲ. ಸಾರ್ವಜನಿಕವಾಗಿಯೂ ಈ ವರದಿ ಲಭ್ಯವಿಲ್ಲ. ಮೋದಿ ಸರ್ಕಾರ ನ್ಯಾಯಾಲಯಕ್ಕೆ ಸುಳ್ಳು ಮಾಹಿತಿಯನ್ನು ನೀಡಿದೆ ಎಂದು ಹೇಳಿ ಕಿಡಿಕಾರಿದ್ದರು. ಇದನ್ನೂ ಓದಿ:ಒಂದೇ ಯುದ್ಧ ವಿಮಾನ ನಿರ್ಮಿಸದ ರಿಲಯನ್ಸ್ ಕಂಪನಿ ಜೊತೆ ಒಪ್ಪಂದ ಮಾಡಿದ್ದು ಯಾಕೆ: ಪ್ರಶ್ನೆಗೆ ಡಸಾಲ್ಟ್ ಸಿಇಒ ಉತ್ತರ ನೀಡಿದ್ದು ಹೀಗೆ

    ಕೋರ್ಟ್ ಗೆ ತಪ್ಪು ಮಾಹಿತಿ ನೀಡಿದ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಅರ್ಜಿ ಸಲ್ಲಿಸಿದ್ದರೆ, ಇದರ ಜೊತೆಗೆ ಆಮ್ ಆದ್ಮಿ ಪಕ್ಷದ ಮುಖಂ ಸಂಜಯ್ ಸಿಂಗ್ ಅವರು ಕೂಡ ತೀರ್ಪು ಮರುಪರಿಶೀಲನೆಯಾಗಬೇಕು ಎಂದು ಅರ್ಜಿ ಸಲ್ಲಿಸಿದ್ದರು.

    2018 ಡಿಸೆಂಬರ್ 14ರಂದು ತೀರ್ಪು ಪ್ರಕಟವಾದ ಬೆನ್ನಲ್ಲೇ ಎಚ್ಚೆತ್ತ ಕೇಂದ್ರ ಸರ್ಕಾರ, ತೀರ್ಪಿನ ಉಲ್ಲೇಖ ಇರುವ ವಾಕ್ಯದಲ್ಲಿ ಕೆಲವು ತಿದ್ದುಪಡಿಗಳಾಗಬೇಕಿದೆ ಎಂದು ಅಫಿಡವಿಟ್ ಮನವಿ ಸಲ್ಲಿಸಿತ್ತು. ಮಹಾಲೇಖಪಾಲರ ವರದಿ(ಸಿಎಜಿ) ಹಾಗೂ ಸಾರ್ವಜನಿಕ ಲೆಕ್ಕ ಸಮಿತಿಯ(ಪಿಎಸಿ) ಸಂಬಂಧಿಸಿದ ದಾಖಲೆಗಳನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಲಾಗಿತ್ತು. ಈ ದಾಖಲೆಗಳ ವಿಷಯವನ್ನು ತಪ್ಪಾಗಿ ವ್ಯಾಖ್ಯಾನ ಮಾಡಲಾದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಕೋರ್ಟ್ ಮೊರೆ ಹೊಗಿತ್ತು.  ಇದನ್ನೂ ಓದಿ:ಎಚ್‍ಎಎಲ್ ಜೊತೆ ರಫೇಲ್ ಯೋಜನೆ ಕೈಬಿಟ್ಟಿದ್ದೇಕೆ: ಸ್ಪಷ್ಟನೆ ನೀಡಿದ ರಕ್ಷಣಾ ಸಚಿವೆ

     

    ಕೇಂದ್ರ ಅರ್ಜಿ ಸಲ್ಲಿಸಿದ್ದು ಯಾಕೆ?
    ರಫೇಲ್ ಒಪ್ಪಂದ ಕುರಿತಂತೆ ಸಿಎಜಿ ವರದಿಯನ್ನು ಸಂಸತ್ತಿನ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಪರಿಶೀಲನೆಗೆ ಒಳಪಡಿಸಿದೆ ಎಂದು ಸುಪ್ರೀಂಕೋರ್ಟ್ ಡಿಸೆಂಬರ್ 14 ರಂದು ನೀಡಿದ ತೀರ್ಪಿನಲ್ಲಿ ಉಲ್ಲೇಖಿಸಿತ್ತು. ತೀರ್ಪಿನ 25 ಪ್ಯಾರಾದಲ್ಲಿ ಸಿಎಜಿ ವರದಿಯನ್ನು ಸಾರ್ವಜನಿಕ ಲೆಕ್ಕ ಸಮಿತಿಯ(ಪಿಎಸಿ) ಮುಂದೆ ಇಡಲಾಗಿದೆ. ಅಷ್ಟೇ ಅಲ್ಲದೇ ಇದು ಸಾರ್ವಜನಿಕವಾಗಿ ಲಭ್ಯವಿದೆ ಎಂದು ಉಲ್ಲೇಖಿಸಿತ್ತು. ಕೇಂದ್ರ ಸರ್ಕಾರ ಮುಚ್ಚಿದ ಲಕೋಟೆಯಲ್ಲಿ ನೀಡಿದ ಈ ವಿಚಾರಗಳನ್ನು ಸುಪ್ರೀಂ ಕೋರ್ಟ್ ತನ್ನ ಆದೇಶದಲ್ಲಿ ಉಲ್ಲೇಖಿಸಿತ್ತು.

    ಫೆಬ್ರವರಿ 13 ರಂದು ಸಿಎಜಿ ವರದಿ ಸಂಸತ್ತಿನಲ್ಲಿ ಮಂಡನೆಯಾಗಿದ್ದು, ಯುಪಿಎ ಮಾಡಿಕೊಂಡಿದ್ದ ರಫೇಲ್ ಖರೀದಿ ಒಪ್ಪಂದಕ್ಕೆ ಹೋಲಿಕೆ ಮಾಡಿದರೆ ಎನ್‍ಡಿಎ ಮಾಡಿಕೊಂಡಿರುವ ಒಪ್ಪಂದ ಶೇ.2.8 ಎಷ್ಟು ಅಗ್ಗ ಎಂದು ಹೇಳಿತ್ತು. ಇದನ್ನೂ ಓದಿ: ರಫೇಲ್ ಡೀಲ್ ? ಯಾವುದು ಅಗ್ಗ? ಯಾವುದು ದುಬಾರಿ?

    ಡಿ.14ರ ಸುಪ್ರೀಂ ತೀರ್ಪಿನಲ್ಲಿ ಏನಿತ್ತು?:
    ರಫೇಲ್ ಖರೀದಿ ಒಪ್ಪಂದದಲ್ಲಿ ಸಂದೇಹ ಪಡುವ ಅಗತ್ಯವಿಲ್ಲ. ಖರೀದಿಯಲ್ಲಿ ಅವ್ಯವಹಾರ ನಡೆದಿದೆ ಎನ್ನುವುದಕ್ಕೆ ಯಾವುದಕ್ಕೆ ಸಾಕ್ಷ್ಯಗಳು ಸಿಕ್ಕಿಲ್ಲ. ಗುಣಮಟ್ಟದ ವಿಮಾನ ಖರೀದಿ ವಿಚಾರಕ್ಕೆ ಸಂಬಂಧಿಸಿದಂತೆ ಎದ್ದಿರುವ ಖರೀದಿ ಒಪ್ಪಂದ ಬೆಲೆಯ ಪರಾಮರ್ಶೆ ಮಾಡುವುದು ಕೋರ್ಟ್ ಕೆಲಸವಲ್ಲ. ದೇಶಕ್ಕೆ ನಾಲ್ಕು ಮತ್ತು ಐದನೇಯ ತಲೆಮಾರಿನ ಫೈಟರ್ ಜೆಟ್ ಭಾರತೀಯ ವಾಯುಸೇನೆಗೆ ನಿಯೋಜಿಸುವ ಅಗತ್ಯವಿದೆ. ಖರೀದಿ, ಬೆಲೆ ನಿರ್ಣಯ, ದೇಶಿ ಪಾಲುದಾರ ಆಯ್ಕೆ ವಿಚಾರದಲ್ಲಿ ಮಧ್ಯಪ್ರವೇಶಿಸುವ ಅಗತ್ಯ ಕಂಡು ಬರುವುದಿಲ್ಲ. ಒಪ್ಪಂದದಲ್ಲಿ ಭಾಗಿಯಾದ ಎಲ್ಲರೂ ಖರೀದಿ ಹೇಗೆ ನಡೆಯಿತು ಎನ್ನುವ ವಿಚಾರವನ್ನು ಸ್ಪಷ್ಟಪಡಿಸಿದ್ದಾರೆ. ತುಲಾತ್ಮಕ ಬೆಲೆ ವಿವರವನ್ನು ನೀಡಿ ವಿಮಾನಗಳನ್ನು ಖರೀದಿಸಿ ಎಂದು ಹೇಳುವುದು ಕೋರ್ಟ್ ಕೆಲಸವಲ್ಲ. ನಾವು ಕೇಳಿದ ಪ್ರಶ್ನೆಗಳಿಗೆ ಸಿಕ್ಕಿದ ಉತ್ತರಿಂದ ನಮ್ಮ ಸಂಶಯ ಪರಿಹಾರವಾಗಿದ್ದು ತೃಪ್ತಿಯಾಗಿದೆ. ರಕ್ಷಣೆಯಂತಹ ಸೂಕ್ಷ್ಮ ವಿಚಾರದಲ್ಲಿ ತನಿಖೆಗೆ ಆದೇಶ ನೀಡುವುದು ಸರಿಯಲ್ಲ. ದೇಶಿ ಪಾಲುದಾರನ ಆಯ್ಕೆ ಮಾಡುವುದು ಕಂಪನಿಗೆ ಬಿಟ್ಟ ವಿಚಾರ. ಈ ವಿಚಾರದಲ್ಲಿ ನಾವು ಮಧ್ಯಪ್ರವೇಶಿಸುವುದಿಲ್ಲ ಎಂದು ಹೇಳಿತ್ತು.

  • ರಫೇಲ್ ಪ್ರಕರಣದಲ್ಲಿ ಕೇಂದ್ರಕ್ಕೆ ಹಿನ್ನಡೆ – ಪತ್ರಿಕಾ ದಾಖಲೆಗಳು ಸಾಕ್ಷ್ಯ: ಸುಪ್ರೀಂ

    ರಫೇಲ್ ಪ್ರಕರಣದಲ್ಲಿ ಕೇಂದ್ರಕ್ಕೆ ಹಿನ್ನಡೆ – ಪತ್ರಿಕಾ ದಾಖಲೆಗಳು ಸಾಕ್ಷ್ಯ: ಸುಪ್ರೀಂ

    ನವದೆಹಲಿ: ರಫೇಲ್ ಯುದ್ಧ ವಿಮಾನ ಖರೀದಿಗೆ ಸಂಬಂಧಿಸಿದಂತೆ ಕ್ಲೀನ್ ಚಿಟ್ ನೀಡಿದ್ದನ್ನು ಪ್ರಶ್ನಿಸಿ ಸಲ್ಲಿಸಲಾದ ಮರು ಪರಿಶೀಲನಾ ಅರ್ಜಿಗಳನ್ನು ವಜಾಗೊಳಿಸಬೇಕೆಂದು ಕೇಂದ್ರ ಸರ್ಕಾರ ಸಲ್ಲಿಸಿದ್ದ ಆಕ್ಷೇಪಣಾ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.

    ಕೇಂದ್ರ ಸರ್ಕಾರದ ಆಕ್ಷೇಪಣಾ ಅರ್ಜಿಯನ್ನು ಸುಪ್ರೀಂ ಕೋರ್ಟ್ ಮುಖ್ಯ ಮುಖ್ಯ ನ್ಯಾ. ರಂಜನ್ ಗೊಗೋಯ್, ನ್ಯಾ. ಸಂಜೀವ್ ಕಿಶನ್ ಕೌಲ್, ನ್ಯಾ. ಕೆಎಂ ಜೋಸೆಫ್ ಅವರನ್ನೊಳಗೊಂಡ ನ್ಯಾಯಪೀಠ ತಿರಸ್ಕರಿಸಿದೆ.

    ಪತ್ರಿಕೆಯೊಂದು ರಫೇಲ್ ಖರೀದಿ ಸಂಬಂಧ ಹಲವು ದಾಖಲೆಗಳನ್ನು ಪ್ರಕಟಿಸಿತ್ತು. ಈ ದಾಖಲೆಗಳನ್ನು ರಕ್ಷಣಾ ಇಲಾಖೆಯಿಂದ ಕದ್ದು ಪ್ರಕಟಿಸಿದೆ ಎಂದು ಸರ್ಕಾರ ವಾದವನ್ನು ಮಂಡಿಸಿತ್ತು. ಸುಪ್ರೀಂ ಕೋರ್ಟ್ ಈಗ ಈ ದಾಖಲೆಗಳನ್ನು ವಿಚಾರಣೆಯ ಸಮಯದಲ್ಲಿ ಸಾಕ್ಷ್ಯವನ್ನಾಗಿ ಪರಿಗಣಿಸಬಹುದು ಎಂದು ಹೇಳಿದೆ.

    ಕಳೆದ ಡಿಸೆಂಬರ್ 14ರಂದು ನೀಡಿದ್ದ ತೀರ್ಪಿಗೆ ವಿರುದ್ಧವಾಗಿ ಮರುಪರಿಶೀಲನಾ ಅರ್ಜಿಗಳನ್ನು ಅರ್ಹತೆಗಳ ಆಧಾರದ ಮೇಲೆ ನಿರ್ಧರಿಸಲಾಗುವುದು. ಪುನರ್ ಪರಿಶೀಲನಾ ಅರ್ಜಿಗಳ ವಿಚಾರಣೆಗೆ ದಿನಾಂಕ ನಿಗದಿಪಡಿಸಲಾಗುವುದು ಎಂದು ಸುಪ್ರೀಂ ಕೋರ್ಟ್ ಇಂದು ತಿಳಿಸಿದೆ.

    ರಫೇಲ್ ತೀರ್ಪಿನ ಮರುಪರಿಶೀಲನಾ ಅರ್ಜಿ ವಿಚಾರಣೆಯ ಸಂದರ್ಭದಲ್ಲಿ ಅರ್ಜಿದಾರರಾದ ಪ್ರಶಾಂತ್ ಭೂಷಣ್ ಮಾಧ್ಯಮವೊಂದರಲ್ಲಿ ಪ್ರಕಟವಾದ ವರದಿಯನ್ನು ಉಲ್ಲೇಖಿಸಿದ್ದರು. ಈ ದಾಖಲೆಗಳು ಸೂಕ್ಷ್ಮವಾಗಿದ್ದು ರಕ್ಷಣಾ ಸಚಿವಾಲಯದ ಮೂಲಗಳಿಂದ ನಾನು ಪಡೆದಿದ್ದೇನೆ ಪ್ರಶಾಂತ್ ಭೂಷಣ್ ತಿಳಿಸಿದ್ದರು. ಈ ಸಂದರ್ಭದಲ್ಲಿ ಅಟಾರ್ನಿ ಜನರಲ್ ಕೆಸಿ ವೇಣುಗೋಪಾಲ್, ರಕ್ಷಣಾ ಸಚಿವಾಲಯದಿಂದ ಕಳ್ಳತನವಾಗಿರುವ ಮಾಹಿತಿಯನ್ನು ಆಧಾರವಾಗಿ ಇಟ್ಟುಕೊಂಡು ಉಲ್ಲೇಖಿಸಿ ವರದಿಯನ್ನು ಪ್ರಶಾಂತ್ ಭೂಷಣ್ ಹೇಳುತ್ತಿದ್ದಾರೆ. ರಕ್ಷಣಾ ಇಲಾಖೆಯ ಮಾಜಿ ಅಥವಾ ಹಾಲಿ ಉದ್ಯೋಗಿಗಳು ದಾಖಲೆಗಳನ್ನು ಕದ್ದಿದ್ದಾರೆ ಎಂದು ನ್ಯಾಯಾಲಯದ ಗಮನಕ್ಕೆ ತಂದಿದ್ದರು.

    ವೇಣುಗೋಪಾಲ್ ಈ ಅಭಿಪ್ರಾಯವನ್ನು ಮಂಡಿಸಿದ ಕೂಡಲೇ ರಕ್ಷಣಾ ಇಲಾಖೆಯ ಮಾಹಿತಿಯನ್ನು ಕಾಪಾಡಲು ಸಾಧ್ಯವಿಲ್ಲವೇ ಎನ್ನುವ ಪ್ರಶ್ನೆಯನ್ನು ಮುಂದಿಟ್ಟುಕೊಂಡು ವಿರೋಧ ಪಕ್ಷಗಳು ವಾಗ್ದಾಳಿ ನಡೆಸಿದ್ದವು. ನಂತರದ ಕೋರ್ಟ್ ವಿಚಾರಣೆಯಲ್ಲಿ ವೇಣುಗೋಪಾಲ್ ದಾಖಲೆಗಳು ಕಳುವಾಗಿದೆ ಎಂದರೆ ಕಳ್ಳತನವಲ್ಲ. ಅಲ್ಲಿ ಪ್ರಸ್ತಾಪಗೊಂಡ ಮೂಲ ದಾಖಲೆಯ ನಕಲು ಪ್ರತಿಗಳು ಎಂದು ನ್ಯಾಯಾಲಯಕ್ಕೆ ತಿಳಿಸಿದ್ದರು.

    ರಫೇಲ್ ಸುದ್ದಿ ಪ್ರಕಟಿಸಿ ವಿಚಾರಣೆ ವೇಳೆ ಪ್ರಭಾವ ಮೂಡಿಸುವ ಯತ್ನ ನಡೆಯುತ್ತಿದೆ. ಈ ಸುದ್ದಿಯನ್ನು ಆಧಾರವಾಗಿಟ್ಟುಕೊಂಡು ಅರ್ಜಿದಾರರು ವಾದಿಸುತ್ತಿದ್ದಾರೆ. ಅರ್ಜಿದಾರರು ಉಲ್ಲೇಖಿಸಿದ ಮಾಹಿತಿ ಅಧಿಕೃತ ರಹಸ್ಯ ಕಾಯ್ದೆಯ ಅಡಿಯಲ್ಲಿ ಬರುತ್ತದೆ ಮತ್ತು ನ್ಯಾಯಾಂಗದ ಉಲ್ಲಂಘನೆಯಾಗಿದೆ. ಈ ಮಾಹಿತಿಗಳು ಸಾರ್ವಜನಿಕವಾಗಿ ಲಭ್ಯವಾಗಬಾರದು. ಹೀಗಾಗಿ ಇದು ಅಧಿಕೃತ ರಹಸ್ಯ ಕಾಯ್ದೆಯ ಉಲ್ಲಂಘನೆ. ಈ ದಾಖಲೆಗಳನ್ನು ಯಾವುದೇ ಕಾರಣಕ್ಕೆ ಅರ್ಜಿಯ ಜೊತೆ ಪರಿಗಣಿಸಬಾರದು ಎಂದು ಕೇಂದ್ರ ಸರ್ಕಾರ ವಾದಿಸಿತ್ತು. ಈಗ ಸುಪ್ರೀಂ ಕೋರ್ಟ್ ಮಾಧ್ಯಮದಲ್ಲಿ ಪ್ರಕಟವಾದ ದಾಖಲೆಯನ್ನು ಸಾಕ್ಷ್ಯವನ್ನಾಗಿ ಪರಿಗಣಿಸಬಹುದು ಎಂದು ತಿಳಿಸಿದೆ.

  • ರಫೇಲ್ ಒಪ್ಪಂದದಲ್ಲಿ 30 ಸಾವಿರ ಕೋಟಿ ಕಳ್ಳತನ: ರಾಹುಲ್ ಗಾಂಧಿ

    ರಫೇಲ್ ಒಪ್ಪಂದದಲ್ಲಿ 30 ಸಾವಿರ ಕೋಟಿ ಕಳ್ಳತನ: ರಾಹುಲ್ ಗಾಂಧಿ

    – ನಾನು ಬಡಬಡಿಸುತ್ತಿದ್ದೇನೆ ಅಂತ ನಿಮಗೆ ಅನಿಸುತ್ತಿದೆಯೇ?
    – ಮೋದಿ ವಿರುದ್ಧ ಮತ್ತೆ ಕಿಡಿಕಾರಿದ ರಾಹುಲ್ ಗಾಂಧಿ

    ನವದೆಹಲಿ: ರಫೇಲ್ ಡಿಲ್‍ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು 30 ಸಾವಿರ ಕೋಟಿ ರೂ. ಕಳ್ಳತನ ಮಾಡಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದಾರೆ.

    ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಫೇಲ್ ಹಗರಣದಲ್ಲಿ ಪ್ರಧಾನಿ ಮೋದಿ ಮತ್ತು ಪ್ರಧಾನ ಮಂತ್ರಿ ಕಚೇರಿ ಭಾಗಿಯಾಗಿದೆ ಎಂಬ ಮಾಧ್ಯಮವೊಂದರ ತನಿಖಾ ವರದಿಯನ್ನು ಇಟ್ಟುಕೊಂಡು ಆರೋಪಿಸಿದ್ದಾರೆ. ಇದನ್ನು ಓದಿ: ಸೈನಿಕರಿಗೆ ಬುಲೆಟ್ ಪ್ರೂಫ್ ಜಾಕೆಟ್ ನೀಡಲು ಆಗದವರು ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಮಾತನಾಡುತ್ತಾರೆ: ಮೋದಿ 

    ರಫೇಲ್ ಯುದ್ಧ ವಿಮಾನ ಖರೀದಿಯಲ್ಲಿ ಹಗರಣ ನಡೆದಿದೆ ಅಂತ ಸುಮಾರು ದಿನಗಳಿಂದ ಆರೋಪ ಮಾಡುತ್ತಾ ಬಂದಿದ್ದೇವೆ. ಮಾಧ್ಯಮದ ವರದಿಯ ಪ್ರಕಾರ ಪ್ರಧಾನಿ ಮೋದಿ ವಂಚನೆ ಮಾಡಿರುವುದು ಸ್ಪಷ್ಟವಾಗುತ್ತದೆ. ಅದನ್ನು ಉದ್ಯಮಿ ಅನಿಲ್ ಅಂಬಾನಿ ಅವರಿಗೆ ನೀಡಿದ್ದಾರೆ. ಈ ಒಪ್ಪಂದಲ್ಲಿ ಪ್ರಧಾನಿ ಮೋದಿ ಏಕೆ ಭಾಗಿಯಾಗಿದ್ದಾರೆ. ಉದ್ಯಮಿ ಅನಿಲ್ ಅಂಬಾನಿ ಅವರಿಗಾಗಿಯೇ ಭಾಗಿಯಾಗಿದ್ದಾರೇ ಹೊರತು, ದೇಶದ ಜನತೆ, ಸೈನಿಕರಿಗಾಗಿ ಅಲ್ಲ. ಈ ಮೂಲಕ ಚೌಕಿದಾರ ಒಬ್ಬ ಕಳ್ಳ ಎನ್ನುವುದು ಸಾಬೀತಾಗುತ್ತದೆ. ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಪ್ರಧಾನಿ ಮೋದಿ ಅವರು ಸುಳ್ಳು ಹೇಳುತ್ತಲೇ ಇದ್ದಾರೆ ಎಂದು ಕುಟುಕಿದರು.

    ಪ್ರಧಾನಿ ಮೋದಿ ಅವರು ಫ್ರಾನ್ಸ್ ಜೊತೆಗೆ ಮಾತುಕತೆ ನಡೆಸಿದ್ದಾರೆ. ಆದರೆ ನಮ್ಮ ದೇಶದ ವಾಯು ಪಡೆಯ ಅಧಿಕಾರಿಗಳ ಜೊತೆಗೆ ಮಾತುಕತೆ ನಡೆಸಿಲ್ಲ. ಅನಿಲ್ ಅಂಬಾನಿ ಅವರಿಗೆ ಗುತ್ತಿಗೆ ಸಿಗಬೇಕು ಅಂತ ಹೇಳಿದ್ದಾರೆ ಎಂದು ಫ್ರಾನ್ಸ್ ನ ಮಾಜಿ ಅಧ್ಯಕ್ಷರು ಬಹಿರಂಗಪಡಿಸಿದ್ದಾರೆ ಎಂದು ರಾಹುಲ್ ಗಾಂಧಿ ಅಂತಾ ಹೇಳಿದರು.

    ಎನ್‍ಡಿಎ ಅಧಿಕಾರ ಅವಧಿಯಲ್ಲಿ ಒಂದೇ ಒಂದು ರಕ್ಷಣಾ ಒಪ್ಪಂದ ಪ್ರಾಮಾಣಿಕವಾಗಿ ನಡೆದಿಲ್ಲ. ಗೋವಾ ಸಿಎಂ ಮನೋಹರ್ ಪರೀಕರ್ ಭೇಟಿ ಮಾಡಿದಾಗ ರಫೆಲ್ ಒಪ್ಪಂದದ ಬಗ್ಗೆ ಪ್ರಸ್ತಾಪ ಮಾಡಲಿಲ್ಲ. ಅವರ ಆರೋಗ್ಯ ವಿಚಾರಿಸಿ ಬಂದೆ. ನಾನು ಬಡಬಡಿಸುತ್ತಿದ್ದೇನೆ ಅಂತ ನಿಮಗೆ ಅನಿಸುತ್ತಿದೆಯೇ? ನನ್ನಲ್ಲಿರುವ ಗುಣಗಳನ್ನು ಹಾಗೂ ಪ್ರಧಾನಿ ಮೋದಿ ಅವರ ಗುಣಗಳನ್ನು ನೋಡಿ. ಯಾರು ಬಡಬಡಿಸುತ್ತಿದ್ದಾರೆ ಎನ್ನುವುದು ಅರ್ಥವಾಗುತ್ತದೆ ಎಂದು ತಿರುಗೇಟು ನೀಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಲೋಕಸಭೆಯಲ್ಲಿ ಪರಿಕ್ಕರ್ ಆಡಿಯೋ ಗದ್ದಲ-ಮೋದಿ ಸರ್ಕಾರವನ್ನ ಬೆನ್ನತ್ತಿದ್ದ ರಫೇಲ್ ಹಗರಣ!

    ಲೋಕಸಭೆಯಲ್ಲಿ ಪರಿಕ್ಕರ್ ಆಡಿಯೋ ಗದ್ದಲ-ಮೋದಿ ಸರ್ಕಾರವನ್ನ ಬೆನ್ನತ್ತಿದ್ದ ರಫೇಲ್ ಹಗರಣ!

    -ಕಾಂಗ್ರೆಸ್ ಕೈಯಲ್ಲಿ ಹೊಸ ಅಸ್ತ್ರ!

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸರ್ಕಾರವನ್ನ ರಫೇಲ್ ಹಗರಣ ಭೂತ ಬೆನ್ನತ್ತಿದ್ದಂತೆ ಕಾಣುತ್ತಿದೆ. ಗೋವಾ ಸಿಎಂ ಮನೋಹರ್ ತಮ್ಮ ಸಂಪುಟದ ಸಹೋದ್ಯೋಗಿ ವಿಶ್ವಜಿತ್ ರಾಣೆ ಜೊತೆ ಆಡಿದ್ದಾರೆ ಎನ್ನಲಾದ ಮಾತುಗಳು ಕಾಂಗ್ರೆಸ್ ದೊಡ್ಡ ಅಸ್ತ್ರವನ್ನೇ ಒದಗಿಸಿವೆ.

    ರಫೇಲ್ ವಿಮಾನ ಖರೀದಿ ಕುರಿತ ಗೌಪ್ಯ ಮಾಹಿತಿಗಳು ನನ್ನ ಫ್ಲ್ಯಾಟ್‍ನ ಬೆಡ್‍ರೂಮ್ ನಲ್ಲಿದೆ. ಹೀಗಾಗಿ ನನ್ನನ್ನು ಅಧಿಕಾರದಿಂದ ಕೆಳಗಿಳಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಮನೋಹರ್ ಪರಿಕ್ಕರ್, ಸಚಿವ ವಿಶ್ವಜಿತ್ ರಾಣೆ ಬಳಿ ಹೇಳಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ವಿಶ್ವಜಿತ್ ರಾಣೆ, ಮೂರನೇ ವ್ಯಕ್ತಿಯೊಂದಿಗೆ ಮೊಬೈಲ್‍ನಲ್ಲಿ ಮಾತನಾಡಿದ್ದಾರೆ ಎನ್ನಲಾದ ಆಡಿಯೋವನ್ನು ಕಾಂಗ್ರೆಸ್ ರಿಲೀಸ್ ಮಾಡಿದೆ. ಈ ಕುರಿತಂತೆ ಮಾತನಾಡಿದ ಎಐಸಿಸಿ ವಕ್ತಾರ ರಂದೀಪ್ ಸುರ್ಜೇವಾಲಾ, ಈ ಪ್ರಕರಣದಲ್ಲಿ ಸತ್ಯ ಏನೆಂಬುದು ಜನರಿಗೆ ಗೊತ್ತಾಗಬೇಕು. ಪ್ರಧಾನಿ ಈ ಬಗ್ಗೆ ಮಾತನಾಡ್ಬೇಕು ಎಂದು ಆಗ್ರಹಿಸಿದ್ದಾರೆ.

    ಇದು ಸುಳ್ಳು ಸುದ್ದಿ.. ಕಾಂಗ್ರೆಸ್‍ನವರು ಸುಳ್ಳನ್ನು ಸತ್ಯ ಮಾಡಲು ಹೊರಟಿದ್ದಾರೆ ಎಂದು ಗೋವಾ ಸಿಎಂ ಮನೋಹರ್ ಪರಿಕ್ಕರ್ ಮತ್ತು ವಿಶ್ವಜಿತ್ ರಾಣೆ ಹೇಳಿದ್ದಾರೆ. ಹಾಗಾದರೆ ಲೀಕ್ ಆಡಿಯೋ ಸಂಭಾಷಣೆ ಹೀಗಿದೆ.
    ವಿಶ್ವಜಿತ್ ರಾಣೆ – ರಫೇಲ್ ವಿವಾದ ಕುರಿತಂತೆ ನನ್ನ ಬೆಡ್‍ರೂಮ್‍ನಲ್ಲಿ ಎಲ್ಲಾ ಮಾಹಿತಿಗಳಿವೆ ಎಂದು ಮನೋಹರ್ ಪರಿಕ್ಕರ್ ನನ್ನ ಬಳಿ ಹೇಳಿದ್ದಾರೆ.
    ಅಪರಿಚಿತ ವ್ಯಕ್ತಿ – ಏನನ್ನು ಹೇಳುತ್ತಿದ್ದೀರಾ ನೀವು..?
    ವಿಶ್ವಜಿತ್ ರಾಣೆ – ಹೌದು.. ನಾನು ಹೇಳ್ತಿರೋದು ನಿಜ.
    ಅಪರಿಚಿತ ವ್ಯಕ್ತಿ – ಓ.. ಮೈ ಗಾಡ್..!
    ವಿಶ್ವಜಿತ್ ರಾಣೆ – ನಿಮಗೆ ಇದರ ಬಗ್ಗೆ ಸ್ಟೋರಿ ಮಾಡ್ಬೇಕು ಅಂತಾ ಇದ್ಯಾ..? ನಿನಗೆ ನನ್ನ ನಂಬಿಕೆ ಇಲ್ಲ ಅಂದ್ರೆ ಸಂಪುಟದಲ್ಲಿ ನಿನಗೆ ಆಪ್ತರಾಗಿದ್ದವರನ್ನು ಈ ಬಗ್ಗೆ ಕೇಳಿ ನೋಡು?

    ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಆಡಿದ್ದಾರೆನ್ನಲಾದ ಆಡಿಯೋ ಬಿಡುಗಡೆಗೆ ಲೋಕಸಭೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕೋರಿದರು. ಸ್ಪೀಕರ್ ಸುಮಿತ್ರಾ ಮಹಜನ್ ನಿರಾಕರಿಸಿದ್ರು. ಪ್ರಧಾನಿ ಮೋದಿಗೆ ಸಂಸತ್ತಿಗೆ ಬಂದು ಎದುರಿಸೋ ತಾಕತ್ತಿಲ್ಲ. ಅವರು ಕೋಣೆಯಲ್ಲಿ ಅಡಗಿಕೊಂಡಿದ್ದಾರೆ. ರಕ್ಷಣಾ ಸಚಿವರು ಅಣ್ಣಾ ಡಿಎಂಕೆ ಸಂಸದರ ಹಿಂದೆ ಅಡಗಿಕೊಂಡಿದ್ದಾರೆ ಅಂತ ರಾಹುಲ್ ವಾಗ್ದಾಳಿ ನಡೆಸಿದರು.

    ರಫೇಲ್ ಡೀಲ್ ಬಗ್ಗೆ ಜೆಪಿಸಿ (Joint Parliamentary Committee) ತನಿಖೆ ಮಾಡಿಸಬೇಕು ಎಂದು ರಾಹುಲ್ ಗಾಂಧಿ ಆಗ್ರಹಿಸಿದರು. ಈ ವೇಳೆ ಮಧ್ಯಪ್ರವೇಶಿಸಿದ ವಿತ್ತ ಸಚಿವ ಅರುಣ್ ಜೇಟ್ಲಿ, ಕಾಂಗ್ರೆಸ್ ಅಧ್ಯಕ್ಷರು ಚರ್ಚೆಯ ದಾರಿ ತಪ್ಪಿಸಲು ಯತ್ನಿಸುತ್ತಿದ್ದಾರೆ. ಈ ಹಿಂದೆಯೂ, ಫ್ರಾನ್ಸ್ ಅಧ್ಯಕ್ಷರು ತಮಗೆ ಮಾಹಿತಿ ನೀಡಿದ್ದು, ರಫೇಲ್ ಡೀಲ್‍ನಲ್ಲಿ ಅವ್ಯವಹಾರ ನಡೆದಿರುವುದಾಗಿ ಖುದ್ದಾಗಿ ತಿಳಿಸಿದ್ದರು ಎಂದು ರಾಹುಲ್ ದೇಶದ ದಿಕ್ಕು ತಪ್ಪಿಸಿದ್ದರು ಎಂದು ಜೇಟ್ಲಿ ತಿರುಗೇಟು ನೀಡಿದರು. ಈ ನಡುವೆ ರಫೇಲ್ ಡೀಲ್ ಕುರಿತ ತೀರ್ಪನ್ನು ಮರುಪರಿಶೀಲಿಸುವಂತೆ ಕೋರಿ ಯಶವಂತ ಸಿನ್ಹಾ, ಅರುಣ್ ಶೌರಿ, ಪ್ರಶಾಂತ್ ಭೂಷಣ್ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ.

    ಸಂಸತ್ತಿನ ಉಭಯ ಸದನಗಳಲ್ಲಿಯೂ ಮೇಕೆದಾಟು ಡ್ಯಾಂ ವಿರೋಧಿಸಿ ಎಐಎಡಿಎಂಕೆ ಸಂಸದರು ಗದ್ದಲ ಎಬ್ಬಿಸಿದರು. ಲೋಕಸಭೆಯಲ್ಲಂತೂ ಪೇಪರ್‍ಗಳನ್ನು ಪೀಸ್ ಪೀಸ್ ಮಾಡಿ ಸ್ಪೀಕರ್ ಚೇರ್ ನತ್ತ ಎಸೆದ್ರು. ಇದನ್ನು ಗಂಭೀರವಾಗಿ ಪರಿಗಣಿಸಿದ ಸ್ಪೀಕರ್, 24 ಸಂಸದರನ್ನು 5 ದಿನಗಳ ಕಾಲ ಕಲಾಪದಿಂದ ಅಮಾನತು ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ರಫೇಲ್ ಚರ್ಚೆಗೆ ಹೆದರಿ ಪ್ರಧಾನಿ ಮನೆಯಲ್ಲಿದ್ದಾರೆ: ರಾಹುಲ್ ಗಾಂಧಿ

    ರಫೇಲ್ ಚರ್ಚೆಗೆ ಹೆದರಿ ಪ್ರಧಾನಿ ಮನೆಯಲ್ಲಿದ್ದಾರೆ: ರಾಹುಲ್ ಗಾಂಧಿ

    ನವದೆಹಲಿ: ಇಂದು ಲೋಕಸಭೆಯಲ್ಲಿ ರಫೇಲ್ ಒಪ್ಪಂದದ ಕುರಿತಾಗಿ ಚರ್ಚೆ ನಡೆಸಲಾಯ್ತು. ಲೋಕಸಭೆಯಲ್ಲಿ ಮಾತನಾಡಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಹೊಸ ವರ್ಷದಂದು ಪ್ರಧಾನಿ ಮೋದಿಯವರು ನೀಡಿದ ಸಂದರ್ಶನದಲ್ಲಿ ಸಿದ್ಧಪಡಿಸಲಾಗಿತ್ತು. ಅದೊಂದು ಸ್ಕ್ರಿಪ್ಟ್ ಸಂದರ್ಶನವಾಗಿದ್ದು, ಅಲ್ಲಿ ರಫೇಲ್ ವಿಚಾರವಾಗಿ ಕೇಳಲ್ಪಟ್ಟ ಪ್ರಶ್ನೆಗಳಿಗೆ ಮೋದಿಯವರು ಉತ್ತರಿಸಿಲ್ಲ. ಲೋಕಸಭೆಯಲ್ಲಿ ನಮ್ಮನ್ನು ಎದುರಿಸುವ ಸಾಮರ್ಥ್ಯ ಅವರಿಗಿಲ್ಲ. ಹಾಗಾಗಿ ಮನೆಯ ಕೋಣೆಯೊಂದರಲ್ಲಿ ಅವಿತುಕೊಂಡು ಕುಳಿತಿದ್ದಾರೆ ಎಂದು ವ್ಯಂಗ್ಯವಾಡಿದರು.

    ಇಂದು ಲೋಕಸಭೆಯ ಸದನದಲ್ಲಿಯೂ ಪ್ರಧಾನಿಗಳು ಭಾಗಿಯಾಗಿಲ್ಲ. ಇತ್ತ ರಾಹುಲ್ ಗಾಂಧಿ ಮಾತನಾಡುತ್ತಿರುವ ವೇಳೆ ಕಾಂಗ್ರೆಸ್ ಸೇರಿದಂತೆ ಇತರೆ ವಿಪಕ್ಷ ನಾಯಕರು ಕಾಗದದಿಂದ ಮಾಡಿದ ವಿಮಾನಗಳು ಬಿಜೆಪಿಯತ್ತ ಹಾರಿಸುವ ಮೂಲಕ ಆಕ್ರೋಶ ಹೊರಹಾಕಿದರು. ಕಾಗದದ ವಿಮಾನ ಹಾರಿಸಿದ್ದರಿಂದ ಗರಂ ಆದ ಸ್ಪೀಕರ್ ಸುಮಿತ್ರಾ ಮಹಾಜನ್, ಚಿಕ್ಕವರಿದ್ದಾಗ ನೀವು ವಿಮಾನ ಹಾರಿಸಿಲ್ವಾ? ಈ ರೀತಿ ಮಾಡಕೂಡದು ಎಂದು ಎಚ್ಚರಿಕೆ ನೀಡಿದರು.

    ರಾಹುಲ್ ಗಾಂಧಿ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ಸಚಿವ ಅರುಣ್ ಜೇಟ್ಲಿ, ರಫೇಲ್ ಒಪ್ಪಂದದ ಮೊತ್ತ ಯುಪಿಎ ಸರ್ಕಾರಕ್ಕಿಂತ ಕಡಿಮೆ ಇದೆ. ಈಗಾಗಲೇ ಆಗಸ್ಟ್ ವೆಸ್ಟಲ್ಯಾಂಡ್ ಹಗರಣದಲ್ಲಿ ನಿಮ್ಮ ಬಣ್ಣ ಬಯಲಾಗಿದೆ ಎಂದು ತಿರುಗೇಟು ನೀಡಿದರು.

    ಸರ್ಕಾರದ ಆಡಳಿತದ ಮೇಲೆ ಪ್ರಶ್ನೆ ಮಾಡೋದು ನನ್ನ ಕೆಲಸ. ಮೋದಿಯವರು ಸುಮಾರು ಒಂದೂವರೆ ಗಂಟೆಗಳ ಕಾಲದ ಸಂದರ್ಶನದಲ್ಲಿ ಹಲವು ವಿಚಾರಗಳನ್ನು ಮಾತಾಡಿದ್ದಾರೆ. ಎಲ್ಲಿಯೂ ರಫೇಲ್ ವಿಚಾರವಾಗಿ ಪ್ರಶ್ನೆಗಳನ್ನು ಕೇಳಲಿಲ್ಲ. ಇಡೀ ದೇಶವೇ ರಫೇಲ್ ಬಗ್ಗೆ ಪ್ರಶ್ನೆ ಕೇಳುತ್ತಿದೆ. ಇದೂವರೆಗೂ ಮಾತ್ರ ಪ್ರಧಾನಿಗಳು ಉತ್ತರ ನೀಡುತ್ತಿಲ್ಲ ಎಂದು ರಾಹುಲ್ ಗಾಂಧಿ ಪ್ರಶ್ನೆ ಮಾಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ರೌಂಡಪ್ 2018- ಸುಪ್ರೀಂನಿಂದ ಸರಣಿ ತೀರ್ಪು, ಮಿಶ್ರಾ ವಿರುದ್ಧವೇ ತಿರುಗಿಬಿದ್ದಿದ್ದ ಜಡ್ಜ್‌ಗಳು

    ರೌಂಡಪ್ 2018- ಸುಪ್ರೀಂನಿಂದ ಸರಣಿ ತೀರ್ಪು, ಮಿಶ್ರಾ ವಿರುದ್ಧವೇ ತಿರುಗಿಬಿದ್ದಿದ್ದ ಜಡ್ಜ್‌ಗಳು

    ಈ ವರ್ಷದ ಆರಂಭದಲ್ಲೇ ನಿವೃತ್ತ ಮುಖ್ಯ ನ್ಯಾ. ಮಿಶ್ರಾ ವಿರುದ್ಧ ಜಡ್ಜ್ ಗಳೇ ಬಂಡಾಯ ಎದ್ದ ಪರಿಣಾಮ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ಮಧ್ಯೆ ಎಲ್ಲವೂ ಸರಿ ಇಲ್ಲ ಎನ್ನುವ ದೃಢಪಟ್ಟಿತ್ತು. ವೃತ್ತಿ ಜೀವನದ ಕೊನೆಯಲ್ಲಿ ದೀಪಕ್ ಮಿಶ್ರಾ ಅವರಿದ್ದ ಪೀಠ ಹಲವು ಐತಿಹಾಸಿಕ ತೀರ್ಪುಗಳನ್ನು ಪ್ರಕಟಿಸುವ ಮೂಲಕ ಸುದ್ದಿಯಲ್ಲಿತ್ತು.

    ಸಲಿಂಗಕಾಮ ಅಪರಾಧವಲ್ಲ:
    ಸಲಿಂಗಕಾಮ ಅಪರಾಧವಲ್ಲ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಐದು ಜನ ನ್ಯಾಯಾಧೀಶರ ಪೀಠವು ಸೆಪ್ಟೆಂಬರ್ 6ರಂದು ತೀರ್ಪು ನೀಡಿತು. ಈ ತೀರ್ಪಿನಿಂದಾಗಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 377ರ ರದ್ದುಗೊಳಿಸಲಾಗಿದೆ. ಐಪಿಸಿ ಸೆಕ್ಷನ್ 377ರ ಪ್ರಕಾರ ಯಾವುದೇ ವ್ಯಕ್ತಿ, ಮಹಿಳೆ ಅಥವಾ ಪ್ರಾಣಿಗಳೊಂದಿಗೆ ನಿಸರ್ಗಕ್ಕೆ ವಿರುದ್ಧವಾಗಿ ಲೈಂಗಿಕ ಕ್ರಿಯೆ ನಡೆಸಿದರೆ ಅದು ಅಪರಾಧವಾಗಿತ್ತು. ಇಂತಹ ಅಪರಾಧಕ್ಕೆ ಜೀವಾವಧಿ ಶಿಕ್ಷೆ ಅಥವಾ 10 ವರ್ಷ ಜೈಲು ಹಾಗೂ ದಂಡ ವಿಧಿಸಬಹುದಾಗಿತ್ತು.

    ಕಾಲದ ಜೊತೆ ಕಾನೂನು ಕೂಡ ಬದಲಾಗಬೇಕು ಎಂದು ಹೇಳಿ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ನ್ಯಾಯಮೂರ್ತಿಗಳಾದ ಆರ್. ಫಾಲಿ ನಾರಿಮನ್, ಎ.ಎಂ.ಖಾನ್‍ವಿಲ್ಕರ್, ಡಿ.ವೈ.ಚಂದ್ರಚೂಡ್ ಮತ್ತು ಇಂದೂ ಮಲ್ಹೋತ್ರ ಅವರನ್ನು ಒಳಗೊಂಡ ಈ ಪೀಠವು ಐಪಿಸಿ 377 ಅನ್ನು ಅಸಿಂಧುಗೊಳಿಸಿ ಆದೇಶವನ್ನು ಪ್ರಕಟಿಸಿತ್ತು. ಈ ಮೂಲಕ 156 ವರ್ಷದ ಹಿಂದಿನ ಬ್ರಿಟಿಷ್ ಕಾನೂನು ರದ್ದಾಗಿದೆ.

    ಅಕ್ರಮ ಸಂಬಂಧ ಅಪರಾಧವಲ್ಲ:
    ವಿವಾಹಿತ ಪುರುಷ ಬೇರೊಬ್ಬ ಮಹಿಳೆಯೊಂದಿಗೆ ಸಂಬಂಧ ಹೊಂದಿರುವುದು ಅಪರಾಧವಲ್ಲ ಎಂದು ಸುಪ್ರೀಂ ಕೋರ್ಟ್‍ನ ಸಂವಿಧಾನಿಕ ಪೀಠ ಮಹತ್ವದ ತೀರ್ಪುನ್ನು ಸೆಪ್ಟೆಂಬರ್ 27ರಂದು ನೀಡಿತು. ಐಪಿಸಿ ಸೆಕ್ಷನ್ 497ರ ಪ್ರಕಾರ ವಿವಾಹಿತ ಪುರುಷ ಅನೈತಿಕ ಸಂಬಂಧ ಹೊಂದಿದ್ದರೆ ಅಪರಾಧವಾಗಿತ್ತು. ಸಂವಿಧಾನದ 14ನೇ ವಿಧಿಯ (ಕಾನೂನಿನ ಮುಂದೆ ಎಲ್ಲರೂ ಸಮಾನರು) ಹಿನ್ನಲೆಯಲ್ಲಿ ಸೆಕ್ಷನ್ 497 ಅನ್ನು ರದ್ದುಪಡಿಸಲಾಗಿದೆ. ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ನ್ಯಾಯಮೂರ್ತಿಗಳಾದ ರೊಹಿಂಗ್ಟನ್ ಫಾಲಿ ನಾರಿಮನ್, ಎ.ಎಂ.ಖಾನ್‍ವಿಲ್ಕರ್, ಡಿ.ವೈ.ಚಂದ್ರಚೂಡ್ ಮತ್ತು ಇಂದೂ ಮಲ್ಹೋತ್ರ ಅವರನ್ನು ಒಳಗೊಂಡ ಈ ಪೀಠ ಈ ಆದೇಶವನ್ನು ನೀಡಿತ್ತು.

    ಶಬರಿಮಲೆಗೆ ಮಹಿಳೆಯರ ಪ್ರವೇಶ:
    10 ರಿಂದ 50 ವರ್ಷದ ಒಳಗಿನ ಮಹಿಳೆಯರು ಕೂಡ ಶಬರಿಮಲೆ ದೇಗುಲ ಪ್ರವೇಶ ಮಾಡಬಹುದು ಎಂದು ಸೆಪ್ಟೆಂಬರ್ 28ರಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿತ್ತು. ಇದಕ್ಕೆ ಬಲಪಂಥೀಯ ಸಂಘಟನೆಗಳು ಭಾರೀ ವಿರೋಧ ವ್ಯಕ್ತಪಡಿಸುತ್ತಿವೆ. ವಿಶೇಷ ಪೂಜೆ ನಿಮಿತ್ತ ಅಕ್ಟೋಬರ್ ನಲ್ಲಿ ದೇವಾಲಯದ ಬಾಗಿಲು ತೆರೆಯಲಾಗಿತ್ತು. ಈ ವೇಳೆ ಸಾಮಾಜಿಕ ಕಾರ್ಯಕರ್ತೆ ರೆಹನಾ ಫಾತಿಮಾ ಹಾಗೂ ಆಂಧ್ರ ಪ್ರದೇಶದ ಪತ್ರಕರ್ತೆ ಕವಿತಾ ಜಕ್ಕಾಲ್ ಅಯ್ಯಪ್ಪನ ದೇಗುಲ ಪ್ರವೇಶಕ್ಕೆ ಮುಂದಾಗಿದ್ದರು. ಆದರೆ ದೇವಸ್ಥಾನ ಸಮೀಸುತ್ತಿದ್ದಂತೆ ಪ್ರತಿಭಟನಾಕಾರರು ಇದಕ್ಕೆ ಅವಕಾಶ ನೀಡಲಿಲ್ಲ. ಈಗಲೂ ಶಬರಿಮಲೆಗೆ ಮಹಿಳೆಯರ ಪ್ರವೇಶ ವಿವಾದವೇ ಆಗಿ ಉಳಿದುಕೊಂಡಿದೆ. ಇದಕ್ಕೆ ಅನೇಕ ನಾಯಕರು ವಿರೋಧ ವ್ಯಕ್ತಪಡಿಸಿದ್ದಾರೆ. ಕೇರಳ ಸಿಎಂ ಪಿಣರಾಯಿ ವಿಜಯನ್ ಸುಪ್ರೀಂ ಕೋರ್ಟ್ ತೀರ್ಪು ಸ್ವಾಗತಿಸುತ್ತೇನೆ ಎಂದು ಹೇಳಿದ್ದರು.

    ಅಯೋಧ್ಯೆಯಲ್ಲಿ ರಾಮ ಮಂದಿರಕ್ಕೆ ಪಟ್ಟು!
    ಮಸೀದಿಯು ಇಸ್ಲಾಂನ ಅವಿಭಾಜ್ಯ ಅಂಗವಲ್ಲವೆಂದು 1994ರಲ್ಲಿ ನ್ಯಾ. ಇಸ್ಮಾಯಿಲ್ ಫಾರೂಕಿ ನೇತೃತ್ವದ ಪೀಠವು ತೀರ್ಪು ನೀಡಿತ್ತು. ಈ ತೀರ್ಪಿನ ಪರಿಶೀಲನೆಗಾಗಿ ಪ್ರಕರಣವನ್ನು ದೊಡ್ಡ ಸಂವಿಧಾನಿಕ ಪೀಠಕ್ಕೆ ಹಸ್ತಾಂತರಿಸಬೇಕು ಎಂದು ಅರ್ಜಿ ಸಲ್ಲಿಕೆಯಾಗಿತ್ತು. ಈ ಅರ್ಜಿಯ ವಿಚಾರಣೆ ನಡೆಸಿದ್ದ ಕೋರ್ಟ್ ಸೆಪ್ಟಂಬರ್ 27ರಂದು ನಮಾಜ್ ಮಾಡಲು ಮಸೀದಿ ಬೇಕಾಗಿಲ್ಲ ಎಂದು ಹೇಳಿ ಫಾರೂಕಿ ತೀರ್ಪನ್ನು ಎತ್ತಿಹಿಡಿಯಿತು. ಈ ತೀರ್ಪು ರಾಮ ಮಂದಿರ ನಿರ್ಮಾಣಕ್ಕೆ ಪೂರಕವಾಗಿದ್ದರಿಂದ ಅಕ್ಟೋಬರ್ 29ರಿಂದ ಅಯೋಧ್ಯೆ ಅರ್ಜಿಯ ಅಂತಿಮ ವಿಚಾರಣೆ ನಡೆಸಲಾಗುತ್ತದೆ ಎಂದು ಕೋರ್ಟ್ ಹೇಳಿತ್ತು. ಹೀಗಾಗಿ ರಾಮ ಮಂದಿರ ನಿರ್ಮಾಣಕ್ಕೆ ಒತ್ತಡ ಮತ್ತಷ್ಟು ಹಚ್ಚಾಯಿತು. ಈ ಅರ್ಜಿಯ ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರಿದ್ದ ಪೀಠ ಅಯೋಧ್ಯೆ ತೀರ್ಪು ಮಾತ್ರವೇ ನಮಗೆ ಮುಖ್ಯವಲ್ಲ. ನಮಗೆ ನಮ್ಮದೇ ಆದ ಆಧ್ಯತೆಗಳಿವೆ ಎಂದು ಹೇಳಿ ಆದೇಶ ಪ್ರಕಟಿಸಿತು. ಈ ಆದೇಶದಿಂದ ಹಿಂದೂ ಸಂತರು ಮತ್ತು ಸಂಘಟನೆಗಳು ಮೋದಿ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿ ರಾಮ ಮಂದಿರ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿವೆ.

    ಆಧಾರ್‌ಗೆ ಬಲ:
    ಸರ್ಕಾರಿ ಸೌಲಭ್ಯಗಳ ಪಡೆಯಲು `ಆಧಾರ್’ ಬೇಕೋ ಅಥವಾ ಬೇಡವೋ ಎಂಬ ಗೊಂದಲಗಳಿಗೆ ಸೆಪ್ಟೆಂಬರ್ 26ರಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿ ಆಧಾರ್‍ಗೆ ಸಾಂವಿಧಾನಿಕ ಮಾನ್ಯತೆಯನ್ನು ಎತ್ತಿ ಹಿಡಿಯಿತು. ಭಾರತದ ಪ್ರತಿಯೊಬ್ಬ ನಾಗಕರಿಕನಿಗೂ ವಿಶಿಷ್ಟ ಗುರುತಿನ ಚೀಟಿ, ಸಂಖ್ಯೆ ನೀಡುವ ಉದ್ದೇಶದಿಂದ ಯುಪಿಎ ಸರ್ಕಾರವು, 2009ರಲ್ಲಿ ಯುಪಿಎ ಸರ್ಕಾರ ಆಧಾರ್ ಪ್ರಾಧಿಕಾರ ಸ್ಥಾಪನೆ ಮಾಡಿ ಆಧಾರ್ ಕಾರ್ಡ್ ನೀಡಲು ಆರಂಭಿಸಿತ್ತು. ಕರ್ನಾಟಕ ಹೈ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಕೆ.ಎಸ್.ಪುಟ್ಟಸ್ವಾಮಿ ಎಂಬವರು 2012ರಲ್ಲಿ `ಆಧಾರ್’ನ ಸಂವಿಧಾನಿಕ ಮಾನ್ಯತೆ ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದರು.

    ರಫೇಲ್ ಹಗರಣ:
    ರಫೇಲ್ ಯುದ್ಧ ವಿಮಾನ ಖರೀದಿಯಲ್ಲಿ ಬಹುಕೋಟಿ ಹಗರಣ ನಡೆದಿದೆ. ಹೀಗಾಗಿ ಈ ಒಪ್ಪಂದವನ್ನು ರದ್ದುಗೊಳಿಸಿ ಸುಪ್ರೀಂಕೋರ್ಟ್ ಮೇಲುಸ್ತುವಾರಿಯಲ್ಲಿ ಸಿಬಿಐ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ಹಲವು ಅರ್ಜಿಗಳು ಸಲ್ಲಿಕೆಯಾಗಿತ್ತು. ಎಲ್ಲ ಅರ್ಜಿಗಳನ್ನು ಕ್ರೋಢಿಕರಿಸಿ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್, ರಫೇಲ್ ಹಗರಣ ಸಂಬಂಧ ತನಿಖೆಗೆ ಆದೇಶ ನೀಡಲ್ಲ ಎಂದು ಡಿಸೆಂಬರ್ 14ರಂದು ಮಹತ್ವದ ತೀರ್ಪು ನೀಡಿತ್ತು. ಈ ಆದೇಶದಿಂದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಿಗ್ ರಿಲೀಫ್ ಸಿಕ್ಕಿತು. ನ್ಯಾಯಾಲಯಕ್ಕೆ ಕೇಂದ್ರ ತಪ್ಪು ಮಾಹಿತಿ ನೀಡಿದೆ. ಹೀಗಾಗಿ ನ್ಯಾಯಾಲಯದಿಂದ ಈ ತೀರ್ಪು ಪ್ರಕಟವಾಗಿದೆ ಎಂದು ಹೇಳಿ ಕಾಂಗ್ರೆಸ್ ನಾಯಕರು ಈಗ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ.

    ಮಿಶ್ರಾ ವಿರುದ್ಧ ಸುದ್ದಿಗೋಷ್ಠಿ:
    ಭಾರತದ ಇತಿಹಾಸದಲ್ಲಿದೇ ಇದೇ ಮೊದಲ ಬಾರಿಗೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು ಸುದ್ದಿಗೋಷ್ಠಿಯನ್ನು ನಡೆಸಿ ನ್ಯಾಯಾಂಗ ವ್ಯವಸ್ಥೆ ಕುರಿತು ಅಸಮಾಧಾನವನ್ನು ಹೊರಹಾಕಿದ್ದರು. ಜನವರಿಯಲ್ಲಿ ನ್ಯಾಯಮೂರ್ತಿಗಳಾದ ಚೆಲ್ಮೇಶ್ವರ್, ರಂಜನ್ ಗೊಗೋಯಿ, ಮದನ್ ಲೋಕೂರ್ ಹಾಗೂ ಕುರಿಯನ್ ಜೋಸೆಫ್ ಅವರು ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದರು. ಈ ವೇಳೆ ನ್ಯಾ. ಚೆಲ್ಮೇಶ್ವರ್ ಅವರು ನ್ಯಾಯಾಂಗ ವ್ಯವಸ್ಥೆ ಕುರಿತು ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ದೇಶದ ಜನತೆಯ ದಾರಿತಪ್ಪಿಸಿದ ರಾಹುಲ್‍ಗೆ ಮುಖಭಂಗ: ಆರ್. ಅಶೋಕ್

    ದೇಶದ ಜನತೆಯ ದಾರಿತಪ್ಪಿಸಿದ ರಾಹುಲ್‍ಗೆ ಮುಖಭಂಗ: ಆರ್. ಅಶೋಕ್

    ಹುಬ್ಬಳ್ಳಿ: ರಫೇಲ್ ಯುದ್ಧ ವಿಮಾನ ಖರೀದಿ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿರುವ ಆದೇಶ ಸ್ವಗತಾರ್ಹವಾದುದು. ಈ ವಿಚಾರದಲ್ಲಿ ರಾಹುಲ್ ಗಾಂಧಿ ದೇಶದ ಜನತೆಯ ದಾರಿ ತಪ್ಪಿಸುವ ಕೆಲಸಕ್ಕೆ ಕೈ ಹಾಕಿದ್ದರು. ಆದರೆ ಈಗ ಕಾಂಗ್ರೆಸ್ ಹಾಗೂ ರಾಹುಲ್ ಗಾಂಧಿಗೆ ದೊಡ್ಡ ಮುಖಭಂಗವಾಗಿದೆ ಎಂದು ಮಾಜಿ ಡಿಸಿಎಂ ಆರ್. ಅಶೋಕ್ ಹೇಳಿದ್ದಾರೆ.

    ನಗರದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿಯವರ ಮೇಲೆ ಇದುವರೆಗೂ ಯಾವುದೇ ಕಪ್ಪು ಚುಕ್ಕೆ ಇಲ್ಲ. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಅವರ ವರ್ಚಸ್ಸು ಕುಂದಿಸುವ ಯತ್ನ ಮಾಡಿದ್ದರು. ಆದರೆ ಸುಪ್ರೀಂ ಕೋರ್ಟ್ ಆದೇಶದಿಂದ ಕಾಂಗ್ರೆಸ್ ಗೆ ಅವಮಾನವಾಗಿದೆ. ಇನ್ನು ಮುಂದಾದರೂ ಸೈನಿಕರು ಹಾಗೂ ದೇಶದ ಭದ್ರತೆ ಬಗ್ಗೆ ಮಾತನಾಡುವಾಗ ಎಚ್ಚರಿಕೆ ವಹಿಸಬೇಕು. ರಫೆಲ್ ಯುದ್ಧ ವಿಮಾನ ಖರೀದಿ ವಿಚಾರದಲ್ಲಿ ಯಾವುದೇ ಸಂಶಯ ವಿಚಾರಗಳಿಲ್ಲವೆಂದು ಸುಪ್ರೀಂ ಸ್ಪಷ್ಟಪಡಿಸಿದೆ ಎಂದು ತಿಳಿಸಿದ್ದಾರೆ.  ಇದನ್ನೂ ಓದಿ : ಪ್ರಧಾನಿ ಮೋದಿಗೆ ಅತಿ ದೊಡ್ಡ ಗೆಲುವು: ಸುಪ್ರೀಂ ತೀರ್ಪಿನಲ್ಲಿರುವ ಪ್ರಮುಖ ಅಂಶಗಳು ಏನು?

    ದೇಶದ ಬಗ್ಗೆ ದೇಶದ ರಕ್ಷಣಾ ವ್ಯವಸ್ಥೆ ಬಗ್ಗೆ ರಾಹುಲ್ ಗಾಂಧಿಯವರು ಹಗುರವಾಗಿ ಮಾತನಾಡುವುದನ್ನು ಮೊದಲು ನಿಲ್ಲಿಸಲಿ. ರಾಹುಲ್ ಗಾಂಧಿ ದೇಶದ ಜನರು ಹಾಗೂ ಸೈನಿಕರ ಬಳಿ ಕ್ಷಮಾಪಣೆ ಕೇಳಬೇಕು. ಇದನ್ನೇ ಹಗರಣ ಎಂಬಂತೆ ಕಾಂಗ್ರೆಸ್ಸಿನವರು ಬಿಂಬಿಸಿದ್ದರು. ಮೋದಿಯವರ ವ್ಯಕ್ತಿತ್ವಕ್ಕೆ ಕಪ್ಪುಚುಕ್ಕೆ ತರಲು ಪ್ರಯತ್ನಿಸುತ್ತಿದ್ದಾರೆ. ಇನ್ನಾದರೂ ಕಾಂಗ್ರೆಸ್ಸಿನವರು ದೇಶದ ಭದ್ರತೆ ಹಾಗೂ ದೇಶದ ಹಿತರಕ್ಷಣೆಗೆ ಗೌರವ ನೀಡಬೇಕು. ರಾಫೆಲ್ ಡೀಲ್ ನಲ್ಲಿ ಕಾಂಗ್ರೆಸ್ ಆಡಿದ ನಾಟಕಕ್ಕೆ ಇಂದು ತೆರೆ ಬಿದ್ದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ : ಸುಳ್ಳು ಹೇಳೋ ಮಂದಿಯ ಕೆನ್ನೆಗೆ ಬಾರಿಸಿದಂತಿದೆ ರಫೇಲ್ ತೀರ್ಪು: ಕೈ ವಿರುದ್ಧ ಶಾ ಕಿಡಿ

    ಮಂತ್ರಿ ಮಂಡಲ ರಚನೆ ವಿಚಾರಕ್ಕೆ ಪ್ರತಿಕ್ರಯಿಸಿ, ಪದೇ ಪದೇ ಮಂತ್ರಿ ಮಂಡಲ ರಚನೆ ಮಾಡುತ್ತೇವೆಂದು ಹೇಳುತ್ತಿದ್ದಾರೆ. ನಿಮ್ಮ ಸರ್ಕಾರ ಎಷ್ಟು ಗಟ್ಟಿಯಾಗಿದೆ ಎಂಬುದನ್ನು ರಾಜ್ಯದ ಜನ ನೋಡುತ್ತಿದ್ದಾರೆ. ಮಂತ್ರಿ ಮಂಡಲ ರಚನೆ ಮಾಡಿದ ದಿನವೇ ಈ ಸರ್ಕಾರದ ನಟ್ಟು ಬೋಲ್ಟು ಕಳಚಿ ಬೀಳುತ್ತವೆ. ಜಾರಕಿಹೊಳಿ ಹಾಗೂ ಅವರ ತಂಡ ಬಿಜೆಪಿಗೆ ಬರುವುದಾದರೆ ಬರಲಿ. ನಮ್ಮ ಪಕ್ಷದ ನಿಲುವುಗಳನ್ನು ಒಪ್ಪುವುದಾದರೆ ಬಿಜೆಪಿಗೆ ಬರಲಿ ಎಂದು ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv