Tag: RAF

  • ಮಣಿಪುರದಲ್ಲಿ ಮುಂದುವರೆದ ಹಿಂಸಾಚಾರ – ಪೊಲೀಸರ ಮೇಲೆಯೇ ಗುಂಡಿನ ದಾಳಿ, ಶಸ್ತ್ರಾಸ್ತ್ರ ಧ್ವಂಸ

    ಮಣಿಪುರದಲ್ಲಿ ಮುಂದುವರೆದ ಹಿಂಸಾಚಾರ – ಪೊಲೀಸರ ಮೇಲೆಯೇ ಗುಂಡಿನ ದಾಳಿ, ಶಸ್ತ್ರಾಸ್ತ್ರ ಧ್ವಂಸ

    ಇಂಪಾಲ: ಸಂಘರ್ಷ ಪೀಡಿತ ಪ್ರದೇಶವಾದ ಮಣಿಪುರದಲ್ಲಿ (Manipur) ಶುಕ್ರವಾರ ರಾತ್ರಿ ಶಸ್ತ್ರಾಸ್ತ್ರಗಳನ್ನು ಬಳಸಿಕೊಂಡು ಪೊಲೀಸ್ (Police) ಪಡೆಯ ಮೇಲೆ ಗುಂಡಿನ ದಾಳಿ ನಡೆಸಿದ್ದು, ಶನಿವಾರ ಮುಂಜಾನೆಯವರೆಗೂ ಗುಂಡಿನ ದಾಳಿ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಮಣಿಪುರದ ಬಿಷ್ಣುಪುರ್ ಜಿಲ್ಲೆಯ ಕ್ವಾಕ್ಟಾ ಮತ್ತು ಚುರಾಚಂದ್‌ಪುರ್ ಜಿಲ್ಲೆಯ ಕಾಂಗ್ವಾಯ್‌ನಲ್ಲಿ ಗುಂಡಿನ ದಾಳಿ ನಡೆಸಿದ್ದು, ಗುಂಪು ಗುಂಪಾಗಿ ಸೇರಿಕೊಂಡು ಅಲ್ಲಲ್ಲಿ ಬೆಂಕಿ ಹಚ್ಚುವ ವಿದ್ವಂಸಕ ಕೃತ್ಯಗಳು ನಡೆದಿವೆ. ಭಾರತೀಯ ಸಶಸ್ತ್ರ ಪಡೆ, ಅಸ್ಸಾಂ ರೈಫಲ್ಸ್, ರ‍್ಯಾಪಿಡ್ ಆ್ಯಕ್ಷನ್ ಫೋರ್ಸ್ (RAF) ಮತ್ತು ರಾಜ್ಯ ಪೊಲೀಸರ ಜಂಟಿ ಪಡೆಗಳು ಇಂಪಾಲದ ಪೂರ್ವ ಜಿಲ್ಲೆಯಲ್ಲಿ ಮಧ್ಯರಾತ್ರಿಯವರೆಗೆ ಧ್ವಜ ಮೆರವಣಿಗೆ (Flag March) ಕೈಗೊಂಡಿದ್ದ ಸಂದರ್ಭ ಅಡ್ವಾನ್ಸ್ ಆಸ್ಪತ್ರೆ ಬಳಿಯ ಅರಮನೆ ಕಾಂಪೌಂಡ್‌ನಲ್ಲಿ ಬೆಂಕಿ ಹಚ್ಚುವ ಪ್ರಯತ್ನ ನಡೆದಿದೆ. ಇದನ್ನೂ ಓದಿ: Biparjoy ಸೈಕ್ಲೋನ್‌ನಿಂದ ತೊಂದರೆಗೆ ಸಿಲುಕಿದ್ದ ಮಗುವನ್ನು ಸಿಮೆಂಟ್ ಚೀಲದಲ್ಲಿ ಸಾಗಿಸಿದ ಸಿಬ್ಬಂದಿ

    ಶುಕ್ರವಾರ ಸಂಜೆ ಸುಮಾರು 1,000 ಜನರ ಗುಂಪು ಸೇರಿಕೊಂಡು ಈ ದುಷ್ಕೃತ್ಯ ಎಸಗಿದ್ದಾರೆ. ಈ ಗುಂಪನ್ನು ಚದುರಿಸುವ ಸಲುವಾಗಿ ಆರ್‌ಎಎಫ್ ಆಶ್ರವಾಯು ಮತ್ತು ರಬ್ಬರ್ ಗುಂಡುಗಳನ್ನು ಹಾರಿಸಿದ್ದಾರೆ. ಈ ಗುಂಡಿನ ದಾಳಿಯಲ್ಲಿ ಇಬ್ಬರು ನಾಗರಿಕರು ಗಾಯಗೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ವಿಸ್ಕಿ ಬಾಟ್ಲಿಯಲ್ಲಿ 13 ಕೋಟಿ ರೂ. ಮೌಲ್ಯದ ಕೊಕೇನ್- ಕೀನ್ಯಾ ಮಹಿಳೆ ಅರೆಸ್ಟ್

    ಮಣಿಪುರ ವಿಶ್ವವಿದ್ಯಾನಿಲಯದ ಬಳಿ ಗುಂಪೊಂದು ನಿರ್ಮಾಣವಾಗಿದ್ದು, ರಾತ್ರಿ 10:40ರ ಸುಮಾರಿಗೆ 200ರಿಂದ 300 ಮಂದಿ ಸೇರಿಕೊಂಡು ಶಾಸಕರ ಮನೆಗೆ ಬೆಂಕಿ ಹಚ್ಚುವ ಪ್ರಯತ್ನ ಮಾಡಿದ್ದಾರೆ. ಆರ್‌ಎಎಫ್ ತಂಡವು ಈ ಗುಂಪನ್ನು ಚದುರಿಸುವಲ್ಲಿ ಯಶಸ್ವಿಯಾಗಿದೆ. ಅದೇ ರಾತ್ರಿ ಮತ್ತೊಂದು ಗುಂಪು ಇಂಪಾಲದ ಪಶ್ಚಿಮ ಜಿಲ್ಲೆಯ ಇರಿಂಗ್‌ಬಾಮ್ (Iringbam) ಪೊಲೀಸ್ ಠಾಣೆಯ ಶಸ್ತ್ರಾಸ್ತ್ರಗಳನ್ನು ಧ್ವಂಸಗೊಳಿಸಲು ಪ್ರಯತ್ನಿಸಿದೆ. ಸುಮಾರು 300ರಿಂದ 400 ಮಂದಿ ಪೊಲೀಸ್ ಠಾಣೆಯ ಒಳಗೆ ನುಗ್ಗಿದ್ದು, ಆರ್‌ಎಎಫ್ ತಂಡ ಗುಂಪನ್ನು ಚದುರಿಸಿದೆ. ಅಲ್ಲದೇ 200ರಿಂದ 300 ಜನರ ಗುಂಪೊಂದು ಬಿಜೆಪಿ ಕಚೇರಿಗೆ ಸುತ್ತುವರೆದಿದ್ದು, ಸೇನಾ ಪಡೆಯು ಅದನ್ನು ಚದುರಿಸಿದೆ ಎಂದು ಸೇನಾ ಮೂಲಗಳು ತಿಳಿಸಿದೆ. ಇದನ್ನೂ ಓದಿ: Cyclone Biparjoy: ಗುಜರಾತ್‍ನಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಸಿದ ಸೈಕ್ಲೋನ್

    ಪಶ್ಚಿಮ ಇಂಪಾಲದಲ್ಲಿರುವ ಬಿಜೆಪಿ ಅಧ್ಯಕ್ಷ ಅಧಿಕಾರಿಮಯುಮ್ ಶಾರದಾ ದೇವಿಯವರ ನಿವಾಸವನ್ನೂ ಧ್ವಂಸಗೊಳಿಸಲು ಪ್ರಯತ್ನ ಪಟ್ಟಿದ್ದು, ಅದನ್ನು ಸೇನೆ ಮತ್ತು ಆರ್‌ಎಎಫ್ ತಡೆದಿದೆ. 1,200 ಜನರ ಗುಂಪೊಂದು ಕೇಂದ್ರ ಸಚಿವ ಆರ್‌ಕೆ ರಂಜನ್ ಸಿಂಗ್ (R.K.Ranjan Singh) ಅವರ ಮನೆಯನ್ನು ಸುಟ್ಟುಹಾಕಿದ ಬಳಿಕ ಈ ಘಟನೆ ನಡೆದಿದೆ. ಇದನ್ನೂ ಓದಿ: ಟ್ಯೂಷನ್ ಮುಗಿಸಿ ಬರುತ್ತಿದ್ದಾಗ 10ನೇ ಕ್ಲಾಸ್ ವಿದ್ಯಾರ್ಥಿ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ರು

    ಕಳೆದ ಕೆಲವು ದಿನಗಳಿಂದ ಮಣಿಪುರ ಕೋಮು ಸಂಘರ್ಷವು ತೀವ್ರ ಸ್ವರೂಪವನ್ನು ಪಡೆದುಕೊಂಡಿದ್ದು, ರಾಜಕಾರಣಿಗಳ ಮನೆ ಹಾಗೂ ಆಸ್ತಿಪಾಸ್ತಿಗಳನ್ನು ಧ್ವಂಸ ಮಾಡುವ ಗುರಿಯನ್ನು ಕೆಲ ಗುಂಪುಗಳು ಹೊಂದಿವೆ. ಈ ಹಿನ್ನೆಲೆ ಅಲ್ಲಲ್ಲಿ ಬೆಂಕಿ ಹಚ್ಚುವ ಕಾರ್ಯಗಳು ನಡೆಯುತ್ತಿದ್ದು, ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಸಲುವಾಗಿ ಕೇಂದ್ರ ಸರ್ಕಾರ ಶ್ರಮಿಸಬೇಕಿದೆ. ಇದನ್ನೂ ಓದಿ: ವರದಕ್ಷಿಣೆ ಕೇಳಿದ್ದಕ್ಕೆ ವರನನ್ನೇ ಮರಕ್ಕೆ ಕಟ್ಟಿ ಹಾಕಿದ ವಧುವಿನ ಕಡೆಯವ್ರು

  • ಆರ್‌ಎಎಫ್ ಘಟಕ ಸ್ಥಾಪನೆಯಿಂದ ನಕ್ಸಲ್ ಚಟುವಟಿಕೆ ನಿಗ್ರಹ, ದಕ್ಷಿಣ ಭಾರತದಲ್ಲಿ ಶಾಂತಿ ನೆಲೆಸಲಿದೆ: ಅಮಿತ್ ಶಾ

    ಆರ್‌ಎಎಫ್ ಘಟಕ ಸ್ಥಾಪನೆಯಿಂದ ನಕ್ಸಲ್ ಚಟುವಟಿಕೆ ನಿಗ್ರಹ, ದಕ್ಷಿಣ ಭಾರತದಲ್ಲಿ ಶಾಂತಿ ನೆಲೆಸಲಿದೆ: ಅಮಿತ್ ಶಾ

    ಶಿವಮೊಗ್ಗ: ಭದ್ರಾವತಿಯಲ್ಲಿ ಆರ್‌ಎಎಫ್(ರ್ಯಾಪಿಡ್ ಆಕ್ಷನ್ ಫೋರ್ಸ್) ಘಟಕ ಸ್ಥಾಪನೆಯಿಂದಾಗಿ ನಕ್ಸಲ್ ಚಟುವಟಿಕೆ ನಿಗ್ರಹ, ರಕ್ಷಣಾ ಕಾರ್ಯ ಸೇರಿದಂತೆ ದಕ್ಷಿಣ ಭಾರತದಲ್ಲಿ ಶಾಂತಿ ನೆಲೆಸಲಿದೆ ಎಂದು ಗೃಹ ಸಚಿವ ಅಮಿತ್ ಶಾ ತಿಳಿಸಿದರು.

    ಜಿಲ್ಲೆಯ ಭದ್ರಾವತಿ ತಾಲೂಕಿನ ಬುಳ್ಳಾಪುರದ ಡಿಎಆರ್ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಆರ್‍ಎಎಫ್ ಘಟಕದ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಭದ್ರಾವತಿಯಲ್ಲಿ ಆರ್‌ಎಎಫ್ ಘಟಕ ಸ್ಥಾಪನೆಯಿಂದ ಇಡೀ ದಕ್ಷಿಣ ಭಾರತದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಅನುಕೂಲವಾಗುತ್ತದೆ. ತರಬೇತಿ ಕೇಂದ್ರ ಸ್ಥಾಪನೆ ಮಾಡಲು ಭೂಮಿ ನೀಡಿದ ರಾಜ್ಯ ಸರ್ಕಾರಕ್ಕೆ ನಾನು ಅಭಾರಿಯಾಗಿದ್ದೇನೆ ಎಂದು ತಿಳಿಸಿದರು.

    ಸಿಆರ್‍ಪಿಎಫ್ ವಿಶೇಷ ಭಾಗವಾಗಿರುವ ಆರ್‌ಎಎಫ್ ಅವಘಡ, ದಂಗೆ ನಿಗ್ರಹಕ್ಕೆ ಆರ್‌ಎಎಫ್ ಸಹಕಾರಿಯಾಗಲಿದೆ. ಅಲ್ಲದೆ ಯಾವುದೇ ಬೃಹತ್ ಸಮಾರಂಭಗಳು ನಡೆದರೂ ಆರ್‌ಎಎಫ್ ಸಿಬ್ಬಂದಿ ತಯಾರಿರುತ್ತಾರೆ. ಹೀಗಾಗಿ ಸಂಪೂರ್ಣ ಭದ್ರತೆ ಸಿಗಲಿದೆ. ಕೇವಲ ಭದ್ರತೆ ಮಾತ್ರವಲ್ಲ ಚಂಡಮಾರುತ, ಅತೀವೃಷ್ಟಿ ಸೇರಿದಂತೆ ಯಾವುದೇ ನೈಸರ್ಗಿಕ ವಿಕೋಪಗಳು ಸಂಭವಿಸಿದಲ್ಲಿ ರಕ್ಷಣಾ ಕಾರ್ಯ ನಡೆಸಲಿದೆ. ಹೀಗಾಗಿ ಆರ್‍ಎಎಫ್ ನಮ್ಮ ಅತೀ ದೊಡ್ಡ ಬಲವಾಗಿದೆ. ಸರ್ದಾರ್ ವಲ್ಲಭಾಯ್ ಪಟೇಲ್ ಅವರು ಇದನ್ನು ಸ್ಥಾಪಿಸಿದ್ದಾರೆ ಎಂದು ಮಾಹಿತಿ ನೀಡಿದರು.

    ಸ್ವಾತಂತ್ರ್ಯದ ಬಳಿಕ ಇಂದಿನ ವರೆಗೆ ದೇಶದ ಯಾವುದೇ ಭಾಗದಲ್ಲಿ ಗಲಭೆ, ನಕ್ಸಲರು, ಮಾವೋವಾದಿಗಳು ಹಾಗೂ ಅಹಿತಕರ ಘಟನೆಗಳು ನಡೆದರೂ ಸುರಕ್ಷತೆ ನೀಡಲು ಈ ಯೋಧರು ಶ್ರಮಿಸುತ್ತಾರೆ. ಚಂಡಮಾರುತ ಹಾಗೂ ಇತರೆ ಯಾವುದೇ ಪ್ರಕೃತಿ ವಿಕೋಪಗಳ ಸಂದರ್ಭದಲ್ಲಿ ರಕ್ಷಣಾ ಕಾರ್ಯವನ್ನು ಸಹ ಯೋಧರು ಮಾಡುತ್ತಿದ್ದಾರೆ. ಹೀಗೆ ಎಲ್ಲ ರೀತಿಯ ಭದ್ರತೆ, ಸುರಕ್ಷತೆ ಹಾಗೂ ರಕ್ಷಣೆಯನ್ನು ನೀಡುತ್ತಿದ್ದಾರೆ ಎಂದರು.

    ಭದ್ರಾವತಿಯಲ್ಲಿ ಸ್ಥಾಪಿತವಾಗಿರುವ ಆರ್‌ಎಎಫ್ ಘಟಕದ ಮೂಲಕ ಸಹ ಕೇವಲ ರಕ್ಷಣೆ, ಕಾನೂನು ಸುವ್ಯವಸ್ಥೆ ಕಾಪಾಡುವುದು ಮಾತ್ರವಲ್ಲ ಜನರನ್ನು ಜೋಡಿಸುವ ಕೆಲಸವನ್ನು ಸಹ ಮಾಡುತ್ತಾರೆ. ಯುವಕರಿಗೆ ವಿಶೇಷ ತರಬೇತಿ ಜೀಡಲು ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯ ಸ್ಥಾಪಿಸಲಾಗುತ್ತಿದೆ. ಕರ್ನಾಟಕದಲ್ಲಿ ಸಹ ಇದರ ಅಫೀಲಿಯೆಟೆಡ್ ಕಾಲೇಜನ್ನು ತೆರೆಯಲು ಚಿಂತಿಸಲಾಗುತ್ತಿದೆ. ಈ ಮೂಲಕ ಕರ್ನಾಟಕದ ವಿದ್ಯಾರ್ಥಿಗಳಿಗೂ ಫೋರೆನ್ಸಿಕ್ ಸೈನ್ಸ್ ಹಾಗೂ ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯದ ಅಡಿ ತರಬೇತಿ ನೀಡಲಾಗುತ್ತದೆ ಎಂದು ತಿಳಿಸಿದರು.

    ಕೊರೊನಾ ವಿರುದ್ಧ ಭಾರತ ಅತೀ ಹೆಚ್ಚು ಹೋರಾಟ ನಡೆಸಿದೆ. ಕೊರೊನಾ ಆರಂಭದಲ್ಲಿ ನಮ್ಮಲ್ಲಿ ಕೇವಲ ಒಂದೇ ಪ್ರಯೋಗಾಲಯವಿತ್ತು. ಕೊರೊನಾ ನಿಭಾಯಿಸಲು ಹೆಚ್ಚು ಮೂಲಭೂತ ಸೌಕರ್ಯಗಳು ಇರಲಿಲ್ಲ. ಆದರೂ ಸಮರ್ಥವಾಗಿ ಕೆಲಸ ಮಾಡಲಾಗಿದೆ. ಇದೀಗ ಅತೀ ಹೆಚ್ಚಿನ ಪ್ರಯೋಗಾಲಯಗಳನ್ನು ಇಂದು ನಮ್ಮ ದೇಶ ಹೊಂದಿದೆ. ಕೊರೊನಾ ವಿರುದ್ಧ ಜಗತ್ತಿನ ಎಲ್ಲ ದೇಶದ ಸರ್ಕಾರಗಳು ಹೋರಾಡಿವೆ. ಆದರೆ ನಮ್ಮ ದೇಶದದಲ್ಲಿ ಸರ್ಕಾರ ಜೊತೆ ಜನರು ಸಹ ಕೈ ಜೋಡಿಸಿ ಹೋರಾಟ ನಡೆಸಿದರು ಎಂದರು.

    ಕೊರೊನಾ ವಿರುದ್ಧ ಹೋರಾಡಿದ ಆರೋಗ್ಯ ಸಿಬ್ಬಂದಿ ತ್ಯಾಗ ದೊಡ್ಡದು. ಹೀಗಾಗಿ ಆರಂಭದಲ್ಲಿ ಕೊರೊನಾ ವಾರಿಯರ್ಸ್ ಗಳಿಗೆ, ಆರೋಗ್ಯ ಸಿಬ್ಬಂದಿಗೆ ಲಸಿಕೆ ನೀಡಲು ನಿರ್ಧರಿಸಿದೆವು. ಇಷ್ಟಾದರೂ ಕೊರೊನಾ ನಿರ್ವಹಣೆ ಬಗ್ಗೆ ಹಾಗೂ ನಮ್ಮ ಈ ನಿರ್ಧಾರಕ್ಕೆ ಕೆಲವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಅದು ಅವರ ಮನಸ್ಥಿತಿಯನ್ನು ತೋರಿಸುತ್ತದೆ. ಅದರೆ ನಮಗೆ ಹೆಮ್ಮೆಯಿದೆ, ಇಂದು ಎರಡು ಲಸಿಕೆಗಳನ್ನು ಪಡೆಯುವಲ್ಲಿ ನಾವು ಇದೀಗ ಯಶಸ್ವಿಯಾಗಿದ್ದೇವೆ. ಇಂದಿನಿಂದ ಲಸಿಕೆ ವಿತರಣೆ ಆರಂಭವಾಗಿದೆ. ಕೊರೊನಾ ಗೆಲ್ಲುವ ಭರವಸೆ ಇನ್ನೂ ಹೆಚ್ಚಿದೆ ಎಂದು ತಿಳಿಸಿದರು.

  • ಮಂಗ್ಳೂರಲ್ಲಿ ಕ್ಷಿಪ್ರ ಕಾರ್ಯಪಡೆ ಘಟಕ ಸ್ಥಾಪನೆ : ಏನಿದು ಆರ್‌ಎಎಫ್? ಎಲ್ಲಿ ಸ್ಥಾಪನೆಯಾಗುತ್ತೆ?

    ಮಂಗ್ಳೂರಲ್ಲಿ ಕ್ಷಿಪ್ರ ಕಾರ್ಯಪಡೆ ಘಟಕ ಸ್ಥಾಪನೆ : ಏನಿದು ಆರ್‌ಎಎಫ್? ಎಲ್ಲಿ ಸ್ಥಾಪನೆಯಾಗುತ್ತೆ?

    ನವದೆಹಲಿ: ಗಲಭೆ ಹಾಗೂ ದೊಂಬಿಯಂತಹ ಸಮಯದಲ್ಲಿ ತುರ್ತು ಪರಿಸ್ಥಿತಿ ನಿರ್ವಹಣೆಗೆಂದೇ ಇರುವ ಕ್ಷಿಪ್ರ ಕಾರ್ಯಪಡೆ(ಆರ್‌ಎಎಫ್) ತುಕಡಿಯನ್ನು ಮಂಗಳೂರಿನಲ್ಲಿ ಪ್ರಾರಂಭಿಸಲು ಕೇಂದ್ರ ಸರ್ಕಾರ ಮುಂದಾಗಿದೆ.

    ಸದ್ಯ ದೇಶದಲ್ಲಿರುವ ಒಟ್ಟು 10 ಆರ್‌ಎಎಫ್ ತುಕಡಿಗಳ ಪೈಕಿ, 5 ಹೊಸ ತುಕಡಿಗಳನ್ನು ಆಯೋಜಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಕಳೆದ ಜನವರಿಯಲ್ಲೇ 5 ಆರ್‌ಎಎಫ್ ಘಟಕವನ್ನು ಆರಂಭಿಸಲು ಕೇಂದ್ರ ಸರ್ಕಾರ ಅನುಮೋದನೆ ನೀಡಿತ್ತು. ಆದರೆ ಈಗ ಎಲ್ಲಿ ಸ್ಥಾಪನೆಯಾಗಲಿದೆ ಎನ್ನುವ ವಿವರವನ್ನು ಪ್ರಕಟಿಸಿದೆ.

    ಕರ್ನಾಟಕದ ಮಂಗಳೂರು, ಪ್ರಧಾನಿ ನರೇಂದ್ರ ಮೋದಿ ಪ್ರತಿನಿಧಿಸುವ ಉತ್ತರಪ್ರದೇಶದ ವಾರಾಣಸಿ, ರಾಜಸ್ಥಾನದ ಜೈಪುರ, ಬಿಹಾರ ಹಾಜಿಪುರ ಮತ್ತು ಹರಿಯಾಣದ ನುಹ್ ಜಿಲ್ಲೆಗಳಲ್ಲಿ ಹೊಸ ಆರ್‌ಎಎಫ್ ಘಟಕ ಪ್ರಾರಂಭವಾಗಲಿದೆ.

    ಘಟಕ ಸ್ಥಾಪನೆ ಸಂಬಂಧ ಪಟ್ಟಂತೆ ಅಗತ್ಯವಾದ ಜಾಗ ಖರೀದಿ ಪ್ರಕ್ರಿಯೆ ನಡೆಯುತ್ತಿದ್ದು, ಈಗಾಗಲೇ ಕಾರ್ಯಚರಣೆ ನಡೆಸುತ್ತಿರುವ ಆರ್‌ಎಎಫ್ ಸಿಬ್ಬಂದಿಗಳು ಶೀಘ್ರವೇ ಹೊಸ ನೆಲೆಗಳಿಗೆ ವರ್ಗಾವಣೆಗೊಳ್ಳಲಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ. ಈಗಾಗಲೇ ದೇಶದ ಹೈದರಾಬಾದ್, ಅಹಮದಾಬಾದ್, ಅಲಹಾಬಾದ್, ಮುಂಬೈ, ದೆಹಲಿ, ಆಲಿಘರ್, ಕೊಯಮತ್ತೂರ್, ಜಮ್ಶೆಡ್‍ಪುರ್, ಭೋಪಾಲ್ ಹಾಗೂ ಮೀರತ್ ಪ್ರದೇಶಗಳಲ್ಲಿ ಆರ್‌ಎಎಫ್ ಪಡೆ ಕಾರ್ಯಾಚರಣೆ ನಡೆಸುತ್ತಿವೆ.

    ಏನಿದು ಆರ್‌ಎಎಫ್?
    ರ‍್ಯಾಪಿಡ್ ಆ್ಯಕ್ಷನ್ ಫೋರ್ಸ್ ಅರ್ಥಾತ್ ಕ್ಷಿಪ್ರ ಕಾರ್ಯಾಚರಣೆ ಪಡೆ. ದೊಂಬಿ, ಗಲಭೆ ಸೇರಿದಂತೆ ಮತ್ತಿತರ ತುರ್ತು ಪರಿಸ್ಥಿತಿಯನ್ನು ನಿರ್ವಹಿಸಲು ವಿಶೇಷ ತರಬೇತಿ ಹೊಂದಿದ ಅರೆಸೇನಾಪಡೆ ಘಟಕ. ಇಲ್ಲಿಯವರೆಗೂ ದೇಶದಲ್ಲಿ ಒಟ್ಟು 10 ಆರ್‌ಎಎಫ್ ತುಕಡಿಗಳಿವೆ. ಪ್ರತಿ ತುಕಡಿಯಲ್ಲಿ 1,000 ಸಿಬ್ಬಂದಿಗಳಿದ್ದು, ಅವರು ಅತ್ಯಾಧುನಿಕ ತಾಂತ್ರಿಕ ಉಪಕರಣಗಳು, ಮಾರಕವಲ್ಲದ ಶಸ್ತ್ರಾಸ್ತ್ರಗಳು, ಹೊಗೆಸೂಸುವ ಗ್ರೆನೇಡ್‍ಗಳು ಹಾಗೂ ಇನ್ನೂ ಮುಂತಾದ ತುರ್ತು ಶಸ್ತ್ರಾಸ್ತ್ರಗಳನ್ನು ಹೊಂದಿರುತ್ತಾರೆ.

    ಮಂಗಳೂರಿನಲ್ಲಿ ಏಲ್ಲಿ?
    ಮಂಗಳೂರಿನಲ್ಲಿ ಎಲ್ಲಿ ಎನ್ನುವುದು ಅಧಿಕೃತವಾಗಿ ಘೋಷಣೆಯಾಗಿಲ್ಲ. ಆರ್‌ಎಎಫ್ ಸ್ಥಾಪನೆ ಸಂಬಂಧ ಈ ಹಿಂದೆ ಬಜಪೆ ಮತ್ತು ಪರವೂರಿನಲ್ಲಿ ಜಾಗ ಗುರುತಿಸಿ 2 ವರ್ಷದ ಹಿಂದೆ ಸರ್ಕಾರ ಪ್ರಸ್ತಾವನೆ ಕಳುಹಿಸಲಾಗಿದೆ. ಈ ವಿಚಾರದ ಬಗ್ಗೆ ಮಾತುಕತೆ ನಡೆಯುತ್ತಿದೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಸುರೇಶ್ ಕುಮಾರ್ ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv