Tag: rae bareli

  • ನಾನು ಶೀಘ್ರದಲ್ಲಿಯೇ ಮದುವೆ ಆಗಬೇಕಾಗಿದೆ: ರಾಹುಲ್‌ ಗಾಂಧಿ

    ನಾನು ಶೀಘ್ರದಲ್ಲಿಯೇ ಮದುವೆ ಆಗಬೇಕಾಗಿದೆ: ರಾಹುಲ್‌ ಗಾಂಧಿ

    ಲಕ್ನೋ: ರಾಯ್‌ ಬರೇಲಿಯಲ್ಲಿ ನಡೆದ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ರಾಹುಲ್‌ ಗಾಂಧಿ (Rahul Gandhi) ತಮ್ಮ ಮದುವೆಯ ಬಗ್ಗೆ ಪ್ರಸ್ತಾಪ ಮಾಡಿದರು.

    2024 ರ ಲೋಕಸಭೆ ಚುನಾವಣೆಯಲ್ಲಿ ರಾಯ್ ಬರೇಲಿಯಿಂದ (Rae Bareli) ಸ್ಪರ್ಧಿಸುತ್ತಿರುವ ಕಾಂಗ್ರೆಸ್ ಅಭ್ಯರ್ಥಿ ರಾಹುಲ್ ಗಾಂಧಿ ಅವರು ಇಂದು ಉತ್ತರ ಪ್ರದೇಶ ಕ್ಷೇತ್ರದಲ್ಲಿ ನಡೆದ ರ್‍ಯಾಲಿಯಲ್ಲಿ ಭಾವನಾತ್ಮಕ ಭಾಷಣ ಮಾಡಿದರು. ಈ ವೇಳೆ ಕೆಲವೊಂದು ವಿಚಾರದ ಬಗ್ಗೆ ಗಂಭೀರವಾಗಿ ಧ್ವನಿಯೆತ್ತಿದರೆ, ಕೊನೆಗೆ ಹಾಸ್ಯಮಯ ಪ್ರಸಂಗ ಕೂಡ ನಡೆಯಿತು.

    ರಾಹುಲ್‌ ಗಾಂಧಿಯವರ ಭಾಷಣದ ಕೊನೆಗೆ ಸಾರ್ವಜನಿಕರು ಅವರ ವೈವಾಹಿಕ ಜೀವನದ ಬಗ್ಗೆ ಕೇಳಿದ್ದಾರೆ. ನೀವು ಯಾವಾಗ ಮದುವೆಯಾಗುತ್ತೀರಿ ಎಂದು ನೆರೆದಿದ್ದ ಜನ ಕೇಳಿದ್ದಾರೆ. ಇದಕ್ಕೆ ನಗುತ್ತಲೇ ಪ್ರತಿಕ್ರಿಯಸಿದ ರಾಗಾ, ಈಗ ನಾನು ಶೀಘ್ರದಲ್ಲೇ ಮದುವೆಯಾಗಬೇಕಾಗಿದೆ ಎಂದು ಹೇಳಿ ವೇದಿಕೆಯಿಂದ ತೆರಳಿದರು. ಇದನ್ನೂ ಓದಿ: 400 ಸ್ಥಾನಗಳನ್ನು ಗೆಲ್ಲುವ ಗುರಿ ಕೇವಲ ಘೋಷಣೆಯಲ್ಲ, ವಾಸ್ತವದಲ್ಲೂ ಅದು ನಿಜವಾಗುತ್ತೆ: ಮೋದಿ

    ರಾಹುಲ್‌ ಗಾಂಧಿಯವರು ಈ ಹಿಂದೆಯೂ ತಮ್ಮ ಮದುವೆ ವಿಚಾರವಾಗಿ ಸಾಕಷ್ಟು ಸುದ್ದಿಯಾಗಿದ್ದರು. ನನ್ನ ಬಾಳ ಸಂಗಾತಿಯಾಗುವವರಿಗೆ ತಾಯಿ ಸೋನಿಯಾ ಗಾಂಧಿ (Sonia Gandhi) ಮತ್ತು ಅಜ್ಜಿ ಇಂದಿರಾ ಗಾಂಧಿ (Indira Gandhi) ಇಬ್ಬರ ಗುಣಗಳು ಇರಬೇಕು. ಅಂತಹ ಸಂಗಾತಿಯೊಂದಿಗೆ ಜೀವನ ನಡೆಸಲು ನಾನು ಬಯಸುತ್ತೇನೆ ಎಂದು ಕಾಂಗ್ರೆಸ್ (Congress) ನಾಯಕ ರಾಹುಲ್ ಗಾಂಧಿ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.

    ರಾಯ್ ಬರೇಲಿಯಲ್ಲಿ ನಡೆದ ರ್‍ಯಾಲಿಯಲ್ಲಿ ಸಹೋದರಿ ಮತ್ತು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಕೂಡ ಉಪಸ್ಥಿತರಿದ್ದರು . ಮೇ 3 ರಂದು ರಾಯ್ ಬರೇಲಿಯಿಂದ ರಾಹುಲ್ ಗಾಂಧಿ ಮತ್ತು ಅಮೇಥಿಯಿಂದ ಕೆಎಲ್ ಶರ್ಮಾ ಅಭ್ಯರ್ಥಿ ಎಂದು ಕಾಂಗ್ರೆಸ್‌ ಘೋಷಣೆ ಮಾಡಿತ್ತು. ಈ ಮೂಲಕ ಪ್ರಿಯಾಂಕಾ ಗಾಂಧಿ ಮತ್ತು ರಾಬರ್ಟ್ ವಾದ್ರಾ ಅವರನ್ನು ಪಕ್ಷ ಚುನಾವಣಾ ಸ್ಪರ್ಧೆಯಿಂದ ದೂರವಿಟ್ಟಿತು.

  • ಸಂಸದರ ನಿಧಿಯನ್ನ ಸೋನಿಯಾ ಗಾಂಧಿ ಅಲ್ಪಸಂಖ್ಯಾತರಿಗಾಗಿ ಬಳಕೆ ಮಾಡಿದ್ದಾರೆ: ಅಮಿತ್ ಶಾ

    ಸಂಸದರ ನಿಧಿಯನ್ನ ಸೋನಿಯಾ ಗಾಂಧಿ ಅಲ್ಪಸಂಖ್ಯಾತರಿಗಾಗಿ ಬಳಕೆ ಮಾಡಿದ್ದಾರೆ: ಅಮಿತ್ ಶಾ

    – 75% ಅನುದಾನವನ್ನ ವೋಟ್ ಬ್ಯಾಂಕ್‍ಗೆ ನೀಡಿದ್ದಾರೆಂದು ಆರೋಪ

    ಲಕ್ನೋ: ಸೋನಿಯಾ ಗಾಂಧಿಯವರು (Sonia Gandhi) ಸಂಸದರಿಗೆ ನೀಡಲಾಗುವ ನಿಧಿಯಲ್ಲಿ (MP Funds) 70% ಗಿಂತಲೂ ಹೆಚ್ಚಿನ ಹಣವನ್ನು ಅಲ್ಪಸಂಖ್ಯಾತರಿಗೆ ವ್ಯಯಿಸಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

    ರಾಯ್ ಬರೇಲಿಯಲ್ಲಿ (Rae Bareli) ಚುನಾವಣಾ ರ‍್ಯಾಲಿಯಲ್ಲಿ ಮಾತನಾಡಿದ ಅವರು, ಈ ಕ್ಷೇತ್ರದಿಂದ ಗಾಂಧಿ ಕುಟುಂಬಕ್ಕೆ ಹಲವು ವರ್ಷಗಳಿಂದ ಮತ ನೀಡಿದ್ದೀರಿ. ಇಲ್ಲಿ ಯಾವುದೇ ಅಭಿವೃದ್ಧಿಯಾಗಿಲ್ಲ. ನಿಮ್ಮ ಸುಖ-ದುಃಖದಲ್ಲಿ ಕಾಂಗ್ರೆಸ್ ಭಾಗಿಯಾಗುವುದಿಲ್ಲ. ನಾವು ಈ ಕ್ಷೇತ್ರವನ್ನು ಪ್ರಧಾನಿ ಮೋದಿಯವರ (Narendra Modi) ಅಭಿವೃದ್ಧಿಯ ಪಟ್ಟಿಗೆ ಸೇರಿಸುತ್ತೇವೆ ಎಂದಿದ್ದಾರೆ. ಇದೇ ವೇಳೆ ಬಿಜೆಪಿ ಅಭ್ಯರ್ಥಿ ದಿನೇಶ್ ಪ್ರತಾಪ್ ಸಿಂಗ್ ಅವರಿಗೆ ಮತ ನೀಡುವಂತೆ ಮನವಿ ಮಾಡಿದರು. ಇದನ್ನೂ ಓದಿ: ಭಾರತವನ್ನು ಅಭಿವೃದ್ಧಿಪಡಿಸಬೇಕಾದರೆ, ಪೂರ್ವ ಭಾರತವನ್ನು ಅಭಿವೃದ್ಧಿಪಡಿಸಬೇಕು – ಮೋದಿ

    ಕಾಂಗ್ರೆಸ್‍ನ (Congress) ರಾಜಕುಮಾರ (ರಾಹುಲ್ ಗಾಂಧಿ) ಮತ ಕೇಳಲು ಇಲ್ಲಿಗೆ ಬರುತ್ತಾರೆ. ಹಲವು ವರ್ಷಗಳಿಂದ ನೀವು ಗಾಂಧಿ ಕುಟುಂಬಕ್ಕೆ ಮತ ಹಾಕುತ್ತಿದ್ದೀರಿ. ಸಂಸದರ ನಿಧಿಯಿಂದ ಏನಾದರೂ ಪಡೆದಿದ್ದೀರಾ? ನೀವು ಏನನ್ನೂ ಪಡೆದಿಲ್ಲ ಎಂದಾದರೆ ಅದು ಎಲ್ಲಿಗೆ ಹೋಗಿದೆ? ಅದು ಅವರ ವೋಟ್ ಬ್ಯಾಂಕ್‍ಗೆ ಹೋಗಿದೆ. ಸಂಸದರ ನಿಧಿಯನ್ನು ಸೋನಿಯಾ ಗಾಂಧಿಯವರು ಅಲ್ಪಸಂಖ್ಯಾತರಿಗಾಗಿ ಬಳಕೆ ಮಾಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

    ಗಾಂಧಿ ಕುಟುಂಬದವರು ಸುಳ್ಳು ಹೇಳುವುದರಲ್ಲಿ ನಿಸ್ಸಿಮರು, ಈಗ ಪ್ರತಿ ಮಹಿಳೆಗೆ ವರ್ಷಕ್ಕೆ 1 ಲಕ್ಷ ರೂ. ಹಣ ನೀಡುವುದಾಗಿ ಘೋಷಿಸಿದ್ದಾರೆ. ತೆಲಂಗಾಣ ವಿಧಾನಸಭೆ ಚುನಾವಣೆ ವೇಳೆ ಪ್ರತಿ ಮಹಿಳೆಗೆ 15,000 ರೂ. ಹಣ ನೀಡುವುದಾಗಿ ಭರವಸೆ ನೀಡಿದ್ದರು. ಈಗ ಚುನಾವಣೆ ಮುಗಿದು ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. 1,500 ರೂ. ಹಣವನ್ನು ಅವರು ನೀಡಿಲ್ಲ ಎಂದು ಕುಟುಕಿದ್ದಾರೆ.

    ರಾಯ್ ಬರೇಲಿ ಲೋಕಸಭಾ ಕ್ಷೇತ್ರದಿಂದ ಈ ಬಾರಿ ಸೋನಿಯಾ ಗಾಂಧಿಯವರ ಬದಲು ರಾಹುಲ್ ಗಾಂಧಿ ಕಣಕ್ಕಿಳಿದಿದ್ದಾರೆ. ಮೇ 20ರಂದು ಚುನಾವಣೆ ಐದನೇ ಹಂತದಲ್ಲಿ ಇಲ್ಲಿ ನಡೆಯಲಿದೆ. ಇದನ್ನೂ ಓದಿ: 2 ಗಂಟೆ ಅಂತರದಲ್ಲಿ ಮೂರು ಕಡೆ ಬಾಂಬ್‌ ಬೆದರಿಕೆ – ದೆಹಲಿ ಪೊಲೀಸರು ಹೈ‌ ಅಲರ್ಟ್‌

  • ರಾಯ್ ಬರೇಲಿ, ಅಮೇಥಿಯಿಂದ ಸ್ಪರ್ಧಿಸಲು ಗಾಂಧಿ ಕುಟುಂಬ ನಿರಾಸಕ್ತಿ?

    ರಾಯ್ ಬರೇಲಿ, ಅಮೇಥಿಯಿಂದ ಸ್ಪರ್ಧಿಸಲು ಗಾಂಧಿ ಕುಟುಂಬ ನಿರಾಸಕ್ತಿ?

    ನವದೆಹಲಿ: ಉತ್ತರ ಪ್ರದೇಶದಲ್ಲಿ (Uttar Pradesh) ಸ್ಪರ್ಧಿಸಲಿರುವ 17 ಕ್ಷೇತ್ರಗಳ ಪೈಕಿ 15 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಘೋಷಣೆಯಾಗಿದ್ದು, ಬಾಕಿ ಉಳಿದಿರುವ ರಾಯ್ ಬರೇಲಿ (Rae bareli) ಮತ್ತು ಅಮೇಥಿ (Amethi) ಕ್ಷೇತ್ರಕ್ಕೆ ಏಪ್ರಿಲ್ ಅಂತ್ಯದಲ್ಲಿ ಕಾಂಗ್ರೆಸ್ (Congress) ಅಭ್ಯರ್ಥಿಗಳನ್ನು ಘೋಷಿಸಲಿದೆ ಎಂದು ಮೂಲಗಳು ಹೇಳಿವೆ.

    ಐದನೇ ಹಂತದ ಮತದಾನದಲ್ಲಿ ಬರುವ ಈ ಕ್ಷೇತ್ರಗಳಿಗೆ ಏಪ್ರಿಲ್ 26 ರಿಂದ ಚುನಾವಣಾ ಅಧಿಸೂಚನೆ ಜಾರಿಗೆ ಬರಲಿದೆ. ಈ ಹಿನ್ನಲೆ ಹೈಕಮಾಂಡ್ ಈ ನಿರ್ಧಾರಕ್ಕೆ ಬಂದಿದೆ ಎನ್ನಲಾಗಿದೆ. ಮೂಲಗಳ ಪ್ರಕಾರ ರಾಯ್ ಬರೇಲಿ ಮತ್ತು ಅಮೇಥಿ ಸ್ಥಾನಗಳಿಗೆ ಅಭ್ಯರ್ಥಿಗಳ ಬಗ್ಗೆ ಚರ್ಚೆಗಳು ನಡೆದಿವೆ. ಆದರೆ ಯಾವುದೇ ಅಭ್ಯರ್ಥಿಯ ಹೆಸರನ್ನು ಅಂತಿಮಗೊಳಿಸಲಾಗಿಲ್ಲ. ಉತ್ತರ ಪ್ರದೇಶದ ಅಭ್ಯರ್ಥಿಗಳ ಪಟ್ಟಿಯನ್ನು ಬುಧವಾರ ಪ್ರಕಟಿಸುವಾಗ ಐದನೇ ಹಂತದ ಮತದಾನದ ಕಾರಣ ರಾಯ್ ಬರೇಲಿ ಮತ್ತು ಅಮೇಥಿಯ ಅಭ್ಯರ್ಥಿಗಳ ಪಟ್ಟಿಯನ್ನು ತಡೆಹಿಡಿಯಲಾಗಿದೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ಕಾಂಗ್ರೆಸ್‌ ತೆರಿಗೆ ಮೌಲ್ಯಮಾಪನ ಕೇಸ್‌ – ಹೈಕೋರ್ಟ್‌ನಲ್ಲೂ ಹಿನ್ನಡೆ ಅರ್ಜಿ ವಜಾ

    ಸೋನಿಯಾ ಗಾಂಧಿ (Sonia Gandhi) ಅನುಪಸ್ಥಿತಿಯಲ್ಲಿ ರಾಯ್ ಬರೇಲಿಯಲ್ಲಿ ಗಾಂಧಿ ಕುಟುಂಬದ ಸದಸ್ಯರೊಬ್ಬರು ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ಚರ್ಚೆಗಳು ನಡೆದಿವೆ. ಮೂಲಗಳ ಪ್ರಕಾರ ಈ ಎರಡು ಸ್ಥಾನಗಳಿಂದ ಚುನಾವಣೆಗೆ ಸ್ಪರ್ಧಿಸಲು ಗಾಂಧಿ ಕುಟುಂಬದಿಂದ ಯಾರೂ ಮುಂದೆ ಬಂದಿಲ್ಲ. ಆದರೆ ರಾಯ್ ಬರೇಲಿ ಕ್ಷೇತ್ರದಲ್ಲಿ ಮೂರು ಬಾರಿ ಸಮೀಕ್ಷೆ ನಡೆಸಲಾಗಿದೆ. ಇದರಲ್ಲಿ ವೈಯಕ್ತಿಕವಾಗಿ ದೂರವಾಣಿ ಮೂಲಕವೂ ಹೆಚ್ಚಿನ ಸಂಖ್ಯೆಯಲ್ಲಿ ಸಮೀಕ್ಷೆ ನಡೆಸಲಾಗಿದೆ. ಸೋನಿಯಾ ಗಾಂಧಿ ಅನುಪಸ್ಥಿತಿಯಲ್ಲಿ ಗಾಂಧಿ ಕುಟುಂಬಕ್ಕೆ ಈ ಸ್ಥಾನ ಎಷ್ಟು ಪ್ರಬಲವಾಗಿದೆ ಎಂಬುದನ್ನು ಸಮೀಕ್ಷೆಯಲ್ಲೂ ಪರಿಶೀಲಿಸಿದೆ. ಇದನ್ನೂ ಓದಿ: 70 ಲಕ್ಷದ ಆಸ್ತಿ ಘೋಷಿಸಿದ ದಕ್ಷಿಣ ಕನ್ನಡದ ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ

    ರಾಯ್ ಬರೇಲಿ ಮತ್ತು ಅಮೇಥಿಯಲ್ಲಿ ಅಭ್ಯರ್ಥಿಗಳ ಆಯ್ಕೆಯಲ್ಲಿ ಹಿಂದೆಂದೂ ಇಷ್ಟೊಂದು ವಿಳಂಬ ಆಗಿರಲಿಲ್ಲ. ಈ ಬಾರಿ ಸೋನಿಯಾ ಗಾಂಧಿ ಅವರು ರಾಯ್ ಬರೇಲಿಯಿಂದ ಚುನಾವಣೆಗೆ ಸ್ಪರ್ಧಿಸಲು ನಿರಾಕರಿಸಿ ಪತ್ರ ಬರೆದ ಕೂಡಲೇ ಗಾಂಧಿ ಕುಟುಂಬದಿಂದ ಅಭ್ಯರ್ಥಿ ಯಾರಾಗುತ್ತಾರೆ ಎಂಬ ಊಹಾಪೋಹ ಶುರುವಾಗಿದೆ. ಇದಲ್ಲದೆ ರಾಹುಲ್ ಗಾಂಧಿ ಚುನಾವಣೆಯಲ್ಲಿ ಸೋತ ನಂತರ ಅಮೇಥಿಯಲ್ಲಿ ರಾಹುಲ್ ಮತ್ತೆ ಸ್ಪರ್ಧಿಸುತ್ತಾರೋ ಇಲ್ಲವೋ ಎಂಬ ಊಹಾಪೋಹಗಳಿವೆ. ಇದನ್ನೂ ಓದಿ: 40.94 ಕೋಟಿ ರೂ. ಆಸ್ತಿಗೆ ಒಡೆಯ ಹಾಸನದ ಮೈತ್ರಿ ಅಭ್ಯರ್ಥಿ

    ಉತ್ತರಪ್ರದೇಶದಲ್ಲಿ ಮೈತ್ರಿಕೂಟದ ಭಾಗವಾಗಿರುವ ಕಾಂಗ್ರೆಸ್ ಸ್ಥಾನಗಳನ್ನು ಈಗ ನಿರ್ಧರಿಸಲಾಗಿದ್ದು, ಕಾಂಗ್ರೆಸ್ ಈಗಾಗಲೇ 17 ಸ್ಥಾನಗಳಲ್ಲಿ ಚುನಾವಣೆಗೆ ಸ್ಪರ್ಧಿಸುತ್ತಿದೆ. ಉತ್ತರ ಪ್ರದೇಶದಲ್ಲಿ ಗಾಂಧಿ ಕುಟುಂಬದಿಂದ ಯಾರೂ ಚುನಾವಣೆಗೆ ಸ್ಪರ್ಧಿಸದಿದ್ದರೆ ಅದು ಕಾರ್ಯಕರ್ತರ ನೈತಿಕತೆಯ ಮೇಲೆ ಪರಿಣಾಮ ಬೀರುವುದು ಖಚಿತ. ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರಲ್ಲಿ ಒಬ್ಬರು ಅಥವಾ ಇಬ್ಬರೂ ಉತ್ತರ ಪ್ರದೇಶದಲ್ಲಿ ಚುನಾವಣೆಗೆ ಸ್ಪರ್ಧಿಸಬೇಕು ಎಂದು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರೊಬ್ಬರು ಒತ್ತಾಯಿಸುತ್ತಿದ್ದಾರೆ ಎನ್ನಲಾಗಿದೆ. ಗೆಲುವು ಅಥವಾ ಸೋಲು ತನ್ನದೇ ಆದ ಸ್ಥಾನವನ್ನು ಹೊಂದಬಹುದು. ಆದರೆ ಚುನಾವಣಾ ಕಣಕ್ಕೆ ಪ್ರವೇಶಿಸುವ ಮೂಲಕ, ಸಕಾರಾತ್ಮಕ ಸಂದೇಶವು ಖಂಡಿತವಾಗಿಯೂ ಕಾರ್ಯಕರ್ತರನ್ನು ತಲುಪುತ್ತದೆ ಎಂದು ಮನವೊಲಿಸುವ ಕೆಲಸ ಮಾಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಸಿನಿಮಾದಲ್ಲಿ ರೀಲ್ ಬಿಟ್ಟಂತೆ ರಾಜಕೀಯದಲ್ಲೂ ರೀಲ್ ಬಿಟ್ಟರೇ ಜನ ಒಪ್ಪಲ್ಲ: ಡಿಕೆ ಸುರೇಶ್

  • ಪತ್ನಿ, ಇಬ್ಬರು ಮಕ್ಕಳನ್ನು ಕೊಂದು ತಾನೂ ಆತ್ಮಹತ್ಯೆಗೆ ಶರಣಾದ ವೈದ್ಯ

    ಪತ್ನಿ, ಇಬ್ಬರು ಮಕ್ಕಳನ್ನು ಕೊಂದು ತಾನೂ ಆತ್ಮಹತ್ಯೆಗೆ ಶರಣಾದ ವೈದ್ಯ

    ಲಕ್ನೋ: ವೈದ್ಯನೊಬ್ಬ (Doctor) ತನ್ನ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಕೊಂದು ತಾನು ಕೂಡಾ ಆತ್ಮಹತ್ಯೆಗೆ (Suicide) ಶರಣಾಗಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ (Uttar Pradesh) ರಾಯ್‌ಬರೇಲಿಯಲ್ಲಿ (Rae Bareli) ನಡೆದಿದೆ.

    ಮಂಗಳವಾರ ತಡರಾತ್ರಿ ಈ ಘಟನೆ ವರದಿಯಾಗಿದೆ. ಆತ್ಮಹತ್ಯೆ ಮಾಡಿಕೊಂಡ ವೈದ್ಯನನ್ನು ಅರುಣ್ ಕುಮಾರ್ ಸಿಂಗ್ (45) ಎಂದು ಗುರುತಿಸಲಾಗಿದೆ. ಮಾಡರ್ನ್ ರೈಲ್ ಕೋಚ್ ಫ್ಯಾಕ್ಟರಿ ಆಸ್ಪತ್ರೆಯ ನೇತ್ರ ತಜ್ಞನಾಗಿದ್ದ ಸಿಂಗ್‌ಗೆ ತನ್ನ ಕುಟುಂಬದವರು ಹಾಗೂ ಸಹೋದ್ಯೋಗಿಗಳು ಕರೆ ಮಾಡಿದ್ದರು. ಕರೆಯನ್ನು ಸ್ವೀಕರಿಸದೇ ಹೋದಾಗ ಆಸ್ಪತ್ರೆಯ ಸಂಕೀರ್ಣದ ಒಳಗೆಯೇ ಇರುವ ಮನೆಯನ್ನು ಪರಿಶೀಲಿಸಿದ್ದಾರೆ. ಈ ವೇಳೆ ಘಟನೆ ಬೆಳಕಿಗೆ ಬಂದಿದೆ.

    ಮನೆಯ ಬಾಗಿಲನ್ನು ತೆರೆದಾಗ ಅರುಣ್ ಪತ್ನಿ ಅರ್ಚನಾ (40) ಮಕ್ಕಳಾದ ಅರಿಬಾ (12) ಹಾಗೂ ಆರವ್ (4) ಶವವಾಗಿ ಪತ್ತೆಯಾಗಿದ್ದಾರೆ. ಸಿಂಗ್ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಸಿಂಗ್ ಮಕ್ಕಳಿಗೆ ಚುಚ್ಚು ಮದ್ದು ನೀಡಿ, ಅವರನ್ನು ಪ್ರಜ್ಞಾಹೀನರನ್ನಾಗಿ ಮಾಡಿ ಬಳಿಕ ಕೊಂದಿದ್ದಾನೆ. ಅವರಿಬ್ಬರ ತಲೆಯಲ್ಲಿ ಬಲವಾಗಿ ಹೊಡೆದಿರುವ ಗಾಯಗಳಾಗಿವೆ. ನಂತರ ಆತ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬುದು ಮೇಲ್ನೋಟಕ್ಕೆ ತಿಳಿದುಬಂದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಚಂಡಮಾರುತಕ್ಕೆ ಬಾಲಿವುಡ್ ನಟ ಆಮೀರ್ ಸಿಲುಕಿದ್ದು ಹೇಗೆ?

    ವೈದ್ಯ ಖಿನ್ನತೆಯಿಂದ ಬಳಲುತ್ತಿದ್ದು, ಈ ಹಿನ್ನೆಲೆ ತನ್ನ ಪತ್ನಿ, ಮಕ್ಕಳನ್ನು ಕೊಂದು ಬಳಿಕ ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದ್ದಾಗಿ ಹೇಳಿದ್ದಾರೆ. ಸಿಂಗ್‌ನ ನೆರೆಹೊರೆಯವರ ಪ್ರಕಾರ ಆತನ ಕುಟುಂಬದವರು 2 ದಿನಗಳ ಹಿಂದೆ ಭಾನುವಾರ ಕೊನೆಯದಾಗಿ ಕಾಣಿಸಿಕೊಂಡಿದ್ದರು ಎಂದು ತಿಳಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಸುತ್ತಿರುವುದಾಗಿ ಪೊಲೀಸರು ಹೇಳಿದ್ದಾರೆ. ಇದನ್ನೂ ಓದಿ: ಬಿಜೆಪಿಯ 10 ಸಂಸದರಿಂದ ಸಂಸತ್ ಸ್ಥಾನಕ್ಕೆ ರಾಜೀನಾಮೆ

  • ದೇಶಕ್ಕೆ ಕಾಂಗ್ರೆಸ್‌ ಮಾರಕ, ಇದು ಭ್ರಷ್ಟಾಚಾರದ ಬೇರು: ಯೋಗಿ ಆದಿತ್ಯನಾಥ್‌

    ದೇಶಕ್ಕೆ ಕಾಂಗ್ರೆಸ್‌ ಮಾರಕ, ಇದು ಭ್ರಷ್ಟಾಚಾರದ ಬೇರು: ಯೋಗಿ ಆದಿತ್ಯನಾಥ್‌

    ಲಕ್ನೋ: ಸೋನಿಯಾ ಗಾಂಧಿ ಅವರ ನೇತೃತ್ವದ ಕಾಂಗ್ರೆಸ್‌ ಪಕ್ಷವು ದೇಶಕ್ಕೆ ಮಾರಕ. ಭ್ರಷ್ಟಾಚಾರದ ಬೇರು ಎಂದು ಕಾಂಗ್ರೆಸ್‌ ವಿರುದ್ಧ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಹರಿಹಾಯ್ದಿದ್ದಾರೆ.

    ಉತ್ತರ ಪ್ರದೇಶ ಚುನಾವಣೆ ಹಿನ್ನೆಲೆಯಲ್ಲಿ ರಾಯ್‌ ಬರೇಲಿಯಲ್ಲಿ ಬಿಜೆಪಿ ಶುಕ್ರವಾರ ಆಯೋಜಿಸಿದ್ದ ಜನ ವಿಶ್ವಾಸ ಯಾತ್ರೆ ಸಮಾರಂಭದಲ್ಲಿ ಯೋಗಿ ಆದಿತ್ಯನಾಥ್‌, ಕಾಂಗ್ರೆಸ್‌ ಹಾಗೂ ಸಮಾಜವಾದಿ ಪಕ್ಷ (ಎಸ್‌ಪಿ) ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಸಮಾಜವಾದಿ ಪಕ್ಷ ಆಡಳಿತದಲ್ಲಿದ್ದಾಗ ಗೂಂಡಾಗಿರಿ ನಡೆಯುತ್ತಿತ್ತು: ಅಮಿತ್ ಶಾ

    ರಾಯ್‌ ಬರೇಲಿಯ ಕಾಂಗ್ರೆಸ್‌ನ ಸಾರ್ವಜನಿಕ ಮುಖಂಡರು ಬಿಜೆಪಿಗೆ ಸೇರುತ್ತಿದ್ದು, ಕಾಂಗ್ರೆಸ್‌ ನೆಲಕಚ್ಚಲಿದೆ. ಕಾಂಗ್ರೆಸ್‌ ದೇಶಕ್ಕೆ ಸಮಸ್ಯೆಯಾಗಿದೆ. ರಾಯ್‌ ಬರೇಲಿ ಎಂದಿಗೂ ವಿದೇಶಿ ಆಡಳಿತವನ್ನು ಒಪ್ಪಲ್ಲ. ಭಾರತದಲ್ಲಿ ಭಯೋತ್ಪಾದನೆ, ಅರಾಜಕತೆ ಮತ್ತು ಭ್ರಷ್ಟಾಚಾರದ ಮೂಲ ಕಾಂಗ್ರೆಸ್.‌ ದೇಶದಲ್ಲಿ ಜಾತೀಯತೆ, ಭಾಷಾಭೇದವನ್ನು ಹರಡುವ ಕೆಲಸವನ್ನು ಕಾಂಗ್ರೆಸ್‌ ಮಾಡುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

    Akhilesh Yadav

    ರಾಜ್ಯಕ್ಕೆ ಎಸ್‌ಪಿ ಮತ್ತು ಬಿಎಸ್‌ಪಿ ಕೂಡ ಮಾರಕವಾಗಿವೆ. ಸಮಾಜವಾದಿ ಪಕ್ಷದ ಚಿಹ್ನೆಯಾಗಿರುವ ಸೈಕಲ್‌ ಹಿಂದೆ ಗೂಂಡಾಗಳು ಕೂತಿರುತ್ತಾರೆ ಎಂಬುದು ರಾಜ್ಯದ ಜನತೆಗೆ ಗೊತ್ತಿದೆ. ನಮ್ಮ ಸರ್ಕಾರ ಜನರಿಗಾಗಿ ಕೆಲಸ ಮಾಡುತ್ತಿದೆ. ಜನತೆಯ ನಂಬಿಕೆಗಳನ್ನು ಗೌರವಿಸುತ್ತದೆ. ಇದನ್ನು ಕಾಂಗ್ರೆಸ್‌, ಎಸ್‌ಪಿ, ಬಿಎಸ್‌ಪಿ ಮಾಡಲು ಸಾಧ್ಯವೇ? ರಾಮ ಮತ್ತು ಕೃಷ್ಣ ಕಾಲ್ಪನಿಕ ಎಂದು ಹೇಳುವವರು ಮಂದಿರ ಕಟ್ಟಲು ಸಾಧ್ಯವೇ? ರಾಮನ ಭಕ್ತರ ಮೇಲೆ ಗುಂಡು ಹಾರಿಸುವವರು ಮಂದಿರ ಕಟ್ಟಬಹುದೇ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಭಾರೀ ಮಳೆ ಮುನ್ಸೂಚನೆ ನೀಡಲು ಹವಾಮಾನ ಇಲಾಖೆಯಿಂದ ಸಾಧ್ಯವಾಗಿಲ್ಲ: ಎಂ.ಕೆ.ಸ್ಟಾಲಿನ್

    ಈ ಮೂರು ಪಕ್ಷಗಳು ಭ್ರಷ್ಟಾಚಾರದ ಗುಹೆಗಳು ಎಂದು ಟೀಕಾಪ್ರಹಾರ ನಡೆಸಿದ್ದಾರೆ. ಸೋನಿಯಾ ಗಾಂಧಿ ಪ್ರತಿನಿಧಿಸುವ ಲೋಕಸಭಾ ಕ್ಷೇತ್ರ ರಾಯ್‌ ಬರೇಲಿ. ಈ ಕ್ಷೇತ್ರದಲ್ಲಿ 834 ಕೋಟಿ ರೂ. ಮೊತ್ತದ 381 ಯೋಜನೆಗಳಿಗೆ ಯೋಗಿ ಆದಿತ್ಯನಾಥ್‌ ಶಿಲಾನ್ಯಾಸ ನೆರವೇರಿಸಿದ್ದಾರೆ.