Tag: Rachita Ram

  • ಬಾಟಲ್ ಕ್ಯಾಪ್ ಚಾಲೆಂಜ್ ಗೆದ್ದ ರಚಿತಾ – ವಿಡಿಯೋ ನೋಡಿ

    ಬಾಟಲ್ ಕ್ಯಾಪ್ ಚಾಲೆಂಜ್ ಗೆದ್ದ ರಚಿತಾ – ವಿಡಿಯೋ ನೋಡಿ

    ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಒಂದಿಲ್ಲೊಂದು ಚಾಲೆಂಜ್ ಹುಟ್ಟಿಕೊಳ್ಳುತ್ತಿರುತ್ತವೆ. ಅದರಂತೆಯೇ ಇತ್ತೀಚೆಗಷ್ಟೆ ಬಾಟಲ್ ಕ್ಯಾಪ್ ಚಾಲೆಂಜ್ ಎನ್ನುವ ಹೊಸ ಚಾಲೆಂಜ್ ಸದ್ದು ಮಾಡುತ್ತಿದೆ. ಇದೀಗ ಸ್ಯಾಂಡಲ್‍ವುಡ್ ನಟಿ ರಚಿತಾ ರಾಮ್ ಕೂಡ ಈ ಚಾಲೆಂಜ್ ಸ್ವೀಕರಿಸಿದ್ದಾರೆ.

    ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರು ಮೊದಲಿಗೆ ಈ ಬಾಟಲ್ ಕ್ಯಾಪ್ ಚಾಲೆಂಜ್ ಪ್ರಾರಂಭಿಸಿದ್ದರು. ಇದೀಗ ಸ್ಯಾಂಡಲ್‍ವುಡ್‍ಗೂ ಈ ಚಾಲೆಂಜ್ ಲಗ್ಗೆ ಇಟ್ಟಿದ್ದು, ನಟ ಅರ್ಜುನ್ ಸರ್ಜಾ ಮತ್ತು ಗೋಲ್ಡನ್ ಸ್ಟಾರ್ ಗಣೇಶ್ ಕೂಡ ಈ ಚಾಲೆಂಜ್ ಸ್ವೀಕರಿಸಿ ಗೆದ್ದಿದ್ದರು. ಇದೀಗ ನಟಿ ರಚಿತಾ ರಾಮ್ ಕೂಡ ಬಾಟಲ್ ಕ್ಯಾಪ್ ಚಾಲೆಂಜ್‍ನಲ್ಲಿ ಗೆದ್ದಿದ್ದಾರೆ.

    ನಟಿ ರಚಿತಾ ರಾಮ್ ಅವರು ಸದ್ಯಕ್ಕೆ ಜಿಮ್‍ನಲ್ಲಿ ಸಖತ್ ವರ್ಕೌಟ್ ಮಾಡುತ್ತಿದ್ದಾರೆ. ಈ ಮಧ್ಯೆ ಬಾಟಲ್ ಕ್ಯಾಪ್ ಚಾಲೆಂಜ್ ಸ್ವೀಕರಿಸಿ ಜಿಮ್‍ನಲ್ಲೇ ಒಂದು ಟೇಬಲ್ ಮೇಲೆ ಬಾಟಲ್ ಇಟ್ಟು ಸ್ವಲ್ಪ ದೂರ ಹೋಗಿ ಒಂದು ಸುತ್ತು ಸುತ್ತಿ ಬಳಿಕ ನಿಧಾನವಾಗಿ ಬಾಟಲ್‍ನ ಕ್ಯಾಪನ್ನು ಕಾಲಿನಿಂದ ಒದ್ದು ಬೀಳಿಸಿದ್ದಾರೆ.

    ಈ ಬಾಟಲ್ ಚಾಲೆಂಜ್ ಮಾಡಿದ ದೃಶ್ಯವನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದಾರೆ. ಜೊತೆಗೆ ಹ್ಯಾಶ್ ಟ್ಯಾಗ್ ಹಾಕಿ ಬಾಟಲ್ ಕ್ಯಾಪ್ ಚಾಲೆಂಜ್ (#bottlecapchallenge) ಎಂದು ಹಾಕಿ ವಿಡಿಯೋ ಪೋಸ್ಟ್ ಮಾಡಿದ್ದಾರೆ.

    ಬಾಟಲ್ ಕ್ಯಾಪ್ ಚಾಲೆಂಜ್ ಏನು?
    ಒಂದು ಟೇಬಲ್ ಮೇಲೆ ಒಂದು ಬಾಟಲಿ ಇಡಬೇಕು. ಅದರ ಮುಚ್ಚಳವನ್ನು ಬಾಟಲ್ ಮೇಲೆ ಸಡಿಲವಾಗಿ ತಿರುಗಿ ಇಡಬೇಕು. ನಂತರ ಚಾಲೆಂಜ್ ಸ್ವೀಕರಿಸಿದವರು ಸ್ವಲ್ಪ ದೂರದಲ್ಲಿ ನಿಂತು ಒಂದು ಸುತ್ತು ತಿರುಗಿ ಕಾಲಿನಿಂದ ಬಾಟಲಿ ಕ್ಯಾಪನ್ನು ಒದಿಯಬೇಕು. ಈ ಪ್ರಕ್ರಿಯೆಯಲ್ಲಿ ಬಾಟಲಿ ಕೆಳಗೆ ಬೀಳಬಾರದು. ಹೀಗೆ ಬಾಟಲ್ ಬೀಳದಂತೆ ಕ್ಯಾಪ್ ಮಾತ್ರ ಕೆಳಗೆ ಬೀಳಿಸಿದರೆ ಈ ಚಾಲೆಂಜ್ ಗೆದ್ದಂತೆ.

  • ಫ್ಯಾಮಿಲಿ ಆಡಿಯನ್ಸ್ ‘ಐ ಲವ್ ಯೂ’ ಅಂದ ಅಚ್ಚರಿ!

    ಫ್ಯಾಮಿಲಿ ಆಡಿಯನ್ಸ್ ‘ಐ ಲವ್ ಯೂ’ ಅಂದ ಅಚ್ಚರಿ!

    ಬೆಂಗಳೂರು: ಆರ್ ಚಂದ್ರು ಅಂದರೆ ಕುಟುಂಬ ಸಮೇತರಾಗಿ ಕೂತು ನೋಡುವಂಥಾ ಚೆಂದದ ಕಥೆಗಳಿಗೆ ದೃಶ್ಯ ರೂಪ ನೀಡೋ ನಿರ್ದೇಶಕ ಎಂಬ ಇಮೇಜ್ ಇದೆ. ಆದರೆ ಐ ಲವ್ ಯೂ ಚಿತ್ರ ಸದ್ದು ಮಾಡಿದ್ದ ರೀತಿ, ಅದರಲ್ಲಿ ಕಾಣಿಸಿದ್ದ ಬದಲಾವಣೆಯ ಕುರುಹುಗಳೆಲ್ಲ ಚಂದ್ರು ಕೂಡಾ ಕೊಂಚ ಬೇರೆ ಹಾದಿಯಲ್ಲಿ ಹೆಜ್ಜೆಯಿಟ್ಟಿದ್ದಾರಾ ಎಂಬ ಸಂಶಯ ಕಾಡುವಂತಿದ್ದವು. ಆದರೆ, ಇದು ಕುಟುಂಬ ಸಮೇತರಾಗಿ ನೋಡಲೇ ಬೇಕಾದ ಚಿತ್ರ ಎಂಬ ಸ್ಲೋಗನ್ ಮೂಲಕವೇ ಮತ್ತೊಂದು ಸುತ್ತಿನ ಅಚ್ಚರಿಗೆ ಕಾರಣವಾಗಿದ್ದ ಆರ್ ಚಂದ್ರು ಇದೀಗ ಅಕ್ಷರಶಃ ಕಮಾಲ್ ಸೃಷ್ಟಿಸಿ ಬಿಟ್ಟಿದ್ದಾರೆ.

    ರಿಯಲ್ ಸ್ಟಾರ್ ಉಪೇಂದ್ರ ಅವರ ಪ್ರೀತಿಯ ಫಿಲಾಸಫಿ, ರಚಿತಾ ರಾಮ್ ಕಾಣಿಸಿಕೊಂಡಿದ್ದ ಹಾಟ್ ಸನ್ನಿವೇಶಗಳೆಲ್ಲವೂ ಐ ಲವ್ ಯೂ ಬಗ್ಗೆ ಸೃಷ್ಟಿಸಿದ್ದ ಕ್ರೇಜ್ ಸಣ್ಣ ಮಟ್ಟದ್ದಲ್ಲ. ಆದರೆ ಈ ಬಾರಿ ಚಂದ್ರು ಫ್ಯಾಮಿಲಿ ಪ್ರೇಕ್ಷಕರನ್ನು ಹೇಗೆ ಹಿಡಿದಿಡುತ್ತಾರೆಂಬ ಸಂದೇಹ ಎಲ್ಲರನ್ನೂ ಕಾಡಿತ್ತು. ಆದರೆ ಇದೀಗ ಫ್ಯಾಮಿಲಿ ಆಡಿಯನ್ಸ್ ಐ ಲವ್ ಯೂಗೆ ಮನಸೋತಿರುವ ವಾತಾವರಣ ಕಂಡು ಅಂಥಾ ಸಂದೇಹಗಳೆಲ್ಲವೂ ಅಚ್ಚರಿಯಾಗಿ ರೂಪಾಂತರಗೊಂಡಿವೆ.

    ಇದಕ್ಕೆ ಕಾರಣವಾಗಿರೋದು ಆರ್ ಚಂದ್ರು ಅವರು ಕಥೆಯಲ್ಲಿಯೇ ಬೆರೆಸಿರೋ ಕಲಾತ್ಮಕ ಜಾಣ್ಮೆ. ಈ ಮೂಲಕ ಎಲ್ಲ ವರ್ಗದ ಪ್ರೇಕ್ಷಕರನ್ನೂ ಸಂತೃಪ್ತಗೊಳಿಸಬೇಕೆಂಬ ಇರಾದೆಯಿಂದಲೇ ಅವರ ಐ ಲವ್ ಯೂ ಚಿತ್ರವನ್ನು ರೂಪಿಸಿದ್ದಾರೆ. ಬರೀ ಪ್ರೀತಿ ಪ್ರೇಮಗಳ ಸುತ್ತ ಮಾತ್ರ ಸುತ್ತಿದ್ದರೆ ಇಂಥಾದ್ದೊಂದು ಗೆಲುವು ದಾಖಲಿಸೋದು ಕಷ್ಟವಾಗುತ್ತಿತ್ತೇನೋ. ಆದರೆ ಚಂದ್ರು ಪ್ರೀತಿಯ ಭಾವಗಳ ಜೊತೆಗೆ ಬದುಕಿನ ವಾಸ್ತವವನ್ನು ಮುಖಾಮುಖಿಯಾಗುವಂತೆ ಮಾಡಿದ್ದಾರೆ. ಈ ಮೂಲಕವೇ ಎಲ್ಲರ ಬದುಕಿಗೂ ಅನ್ವಯವಾಗುವಂಥಾ ಸಂದೇಶವನ್ನೂ ರವಾನಿಸಿದ್ದಾರೆ. ಇದರ ಫಲವಾಗಿ ಫ್ಯಾಮಿಲಿ ಸಮೇತ ಸಿನಿಮಾ ನೋಡಿದ ಪ್ರೇಕ್ಷಕರೆಲ್ಲ ಖುಷಿಗೊಂಡಿದ್ದಾರೆ.

  • ಐ ಲವ್ ಯೂ: ಅವಳು ಧಾರ್ಮಿಕ, ಅವನು ಮಾರ್ಮಿಕ, ಮೋಹ ರೋಚಕ!

    ಐ ಲವ್ ಯೂ: ಅವಳು ಧಾರ್ಮಿಕ, ಅವನು ಮಾರ್ಮಿಕ, ಮೋಹ ರೋಚಕ!

    ಪ್ರೀತಿ ಪ್ರೇಮವೆಲ್ಲ ಪುಸ್ತಕದ ಬದನೇಕಾಯಿ ಅನ್ನುತ್ತಲೇ ಪ್ರೀತಿಗೆ ತಮ್ಮದೇ ಆದ ವ್ಯಾಖ್ಯಾನ ನೀಡಿದ್ದವರು ರಿಯಲ್ ಸ್ಟಾರ್ ಉಪೇಂದ್ರ. ಅದೇ ಪ್ರೀತಿಯ ನವಿರು ಭಾವಗಳ ಬ್ರಹ್ಮಾಂಡವನ್ನೇ ಪ್ರೇಕ್ಷಕರ ಬೊಗಸೆಗಿಟ್ಟು ಪುಳಕಗೊಳ್ಳುವಂತೆ ಮಾಡಿರುವವರು ನಿರ್ದೇಶಕ ಆರ್. ಚಂದ್ರು. ಪ್ರೀತಿಯನ್ನು ಬೇರೆಯದ್ದೇ ರೀತಿಯಲ್ಲಿ ಪರಿಭಾವಿಸುವ ಇವರಿಬ್ಬರ ಕಾಂಬಿನೇಷನ್ನಿನಲ್ಲಿ ಪಕ್ಕಾ ಲವ್ ಸಬ್ಜೆಕ್ಟ್ ಹೊಂದಿರುವ ‘ಐ ಲವ್ ಯೂ’ ಚಿತ್ರ ಮೂಡಿ ಬಂದಿದೆ ಅಂದರೆ ಅದರತ್ತ ಗಾಢವಾದ ಕುತೂಹಲ ಹುಟ್ಟಿಕೊಳ್ಳೋದು ಸಹಜ. ಈ ಚಿತ್ರವೀಗ ಬಿಡುಗಡೆಯಾಗಿದೆ. ಈವರೆಗೂ ಅದೆಂಥಾ ತೀವ್ರವಾದ ಕುತೂಹಲವನ್ನ ತನ್ನತ್ತ ಈ ಚಿತ್ರ ಕೇಂದ್ರೀಕರಿಸಿಕೊಂಡಿತ್ತೋ, ಅದಕ್ಕೆ ಸರಿಸಾಟಿಯಾದ ರೀತಿಯಲ್ಲಿಯೇ ಈ ಚಿತ್ರ ಮೂಡಿ ಬಂದಿದೆ.

    ಕ್ಷಣ ಕ್ಷಣವೂ ಕಾತರಿಸುತ್ತಾ ಬಿಡುಗಡೆಯಾದಾಕ್ಷಣವೇ ಐ ಲವ್ ಯೂ ನೋಡಿದ ಪ್ರತೀ ಪ್ರೇಕ್ಷಕರಲ್ಲಿಯೂ ತೃಪ್ತ ಭಾವ ಮೂಡುವಂತೆ ಆರ್. ಚಂದ್ರು ಈ ಚಿತ್ರವನ್ನು ಅಣಿಗೊಳಿಸಿದ್ದಾರೆ. ಮಾತು ಕೊಟ್ಟಂತೆಯೇ ಫ್ಯಾಮಿಲಿ ಸಮೇತರಾಗಿ ಕೂತು ನೋಡುವಂಥಾ ಭರ್ಜರಿ ಎಂಟರ್‍ಟೈನ್ಮೆಂಟ್ ಪ್ಯಾಕೇಜನ್ನು ಪ್ರೇಕ್ಷಕರ ಮುಂದಿಟ್ಟಿದ್ದಾರೆ.

    ನಿರೀಕ್ಷೆಯಂತೆಯೇ ಇಡೀ ಕಥೆಯಲ್ಲಿಯೇ ಉಪ್ಪಿ ಮತ್ತು ಚಂದ್ರು ಅವರ ಶೈಲಿ ಮಿಳಿತವಾಗಿದೆ. ಅದು ಪ್ರೇಕ್ಷಕರನ್ನು ನೇರವಾಗಿಯೇ ತಾಕಿ ಪುಳಕಕ್ಕೊಡ್ಡುವಷ್ಟು ಶಕ್ತವೂ ಆಗಿದೆ. ಐ ಲವ್ ಯೂ ಎಂಬ ಶೀರ್ಷಿಕೆಗೆ ತಕ್ಕುದಾಗಿಯೇ ಗಾಢ ಪ್ರೇಮದ ಹಿನ್ನೆಲೆಯಲ್ಲಿಯೇ ಕಥೆ ಬಿಚ್ಚಿಕೊಳ್ಳುತ್ತದೆ. ಮಾಮೂಲು ಫಾರ್ಮುಲಾಕ್ಕಿಂತ ತುಸು ಭಿನ್ನವಾಗಿಯೇ ನಾಯಕ ಮತ್ತು ನಾಯಕಿಯ ಮುಖಾಮುಖಿಯೂ ಸಂಭವಿಸುತ್ತದೆ. ಉಪೇಂದ್ರ ಇಲ್ಲಿ ಸಂತೋಷ್ ಎಂಬ ಪಾತ್ರಕ್ಕೆ ಜೀವತುಂಬಿದರೆ, ರಚಿತಾ ರಾಮ್ ಧಾರ್ಮಿಕ ಎಂಬ ವಿಶಿಷ್ಟವಾದ ಹೆಸರಿನ ಪಾತ್ರದಲ್ಲಿ ನಟಿಸಿದ್ದಾರೆ.

    ನಾಯಕ ನಾಯಕಿಯರಿಬ್ಬರೂ ಒಂದೇ ಕಾಲೇಜಿನಲ್ಲಿ ಓದುತ್ತಿರುತ್ತಾರೆ. ನಾಯಕಿಯದ್ದು ಬದುಕಿನ ರಥದ ಗಾಲಿಗಳು ಕದಲುತ್ತಿರೋದೇ ಭಾವನೆಗಳಿಂದ ಅನ್ನುವಷ್ಟು ಸೆನ್ಸಿಟಿವ್ ವ್ಯಕ್ತಿತ್ವ. ಪ್ರೀತಿಯ ಬಗ್ಗೆಯೂ ಕೂಡಾ ಅದೇ ಭಾವನೆಯಿಂದಲೇ ಆಕೆ ಜೀವಿಸುತ್ತಿರುತ್ತಾಳೆ. ಧಾರ್ಮಿಕ ವಿಚಾರದಲ್ಲಿಯೇ ಪಿಎಚ್‍ಡಿ ಸಂಶೋಧನೆಯನ್ನೂ ನಡೆಸುತ್ತಿರುತ್ತಾಳೆ. ಅದೇ ಕಾಲೇಜಿನ ವಿದ್ಯಾರ್ಥಿಯಾಗಿರೋ ನಾಯಕನದ್ದು ತದ್ವಿರುದ್ಧ ಕ್ಯಾರೆಕ್ಟರ್. ಆತನ ಪ್ರಕಾರ ಈ ಪ್ರೀತಿ ಪ್ರೇಮ, ನವಿರು ಭಾವಗಳೆಲ್ಲ ಭ್ರಾಂತು. ಪ್ರೀತಿ ಅನ್ನೋದು ಕಾಮದ ಮೊದಲ ಹೆಜ್ಜೆ ಅನ್ನೋದು ಆತನ ಗಾಢವಾದ ನಂಬಿಕೆ.

    ಇಂಥಾ ಎರಡು ಕ್ಯಾರೆಕ್ಟರುಗಳು ಎರಡು ಧ್ರುವಗಳಿದ್ದಂತೆ. ಆದರೆ ಭಾವನೆಗಳಿಗೆ ಬೆಲೆ ಕೊಡೋ ನಾಯಕಿಯ ಮೇಲೆ ನಾಯಕನಿಗೆ ಲವ್ವಾದರೆ ಅದು ಎರಡು ಧ್ರುವಗಳು ಡಿಕ್ಕಿ ಹೊಡೆದಂಥಾದ್ದೇ ಅನಾಹುತ. ಅಂಥಾದ್ದು ಚಿತ್ರದುದ್ದಕ್ಕೂ ಸಂಭವಿಸುತ್ತೆ. ಆದರೆ ಕಾಲೇಜು ಜೀವನದಲ್ಲಿ ಹಾಗೆಲ್ಲ ಭೋಳೇ ಮನಸ್ಥಿತಿ ಹೊಂದಿದ್ದ ನಾಯಕನಿಗೂ ಒಂದು ಫ್ಯಾಮಿಲಿ ಇರುತ್ತೆ. ಅಪ್ಪನ ಮಾತಿಗೆ ಕಟ್ಟು ಬಿದ್ದು ದೊಡ್ಡ ಉದ್ಯಮಿಯಾಗಿ ಬದಲಾಗೋ ಆತ ಅಪ್ಪನ ಮಾತಿನಂತೆಯೇ ಮದುವೆಯಾಗುತ್ತಾನೆ. ಮುದ್ದಾದ ಮಗುವೂ ಆಗುತ್ತೆ. ಆದರೆ ಅಷ್ಟೆಲ್ಲ ದೂರ ಕ್ರಮಿಸಿದರೂ ಕಾಲೇಜು ದಿನಗಳ ಧಾರ್ಮಿಕಳ ಮೇಲಿನ ಮೋಹ ಮಾತ್ರ ಮಾಸಿರೋದಿಲ್ಲ. ಅದು ಎಂತೆಂಥಾ ತಿರುವುಗಳನ್ನು ಪಡೆಯುತ್ತೆ ಅನ್ನೋದರ ಸುತ್ತಾ ಇಡೀ ಚಿತ್ರ ಸಾಗುತ್ತದೆ. ಇದರಲ್ಲಿಯೇ ಎಲ್ಲ ಭಾವಗಳನ್ನೂ ಕಟ್ಟಿಕೊಡುವ ಜಾಣ್ಮೆಯ ಮೂಲಕ ಇಡೀ ಚಿತ್ರವನ್ನು ರಸವತ್ತಾಗಿ ರೂಪಿಸುವಲ್ಲಿ ಆರ್ ಚಂದ್ರು ಮತ್ತೊಮ್ಮೆ ತಮ್ಮ ಪ್ರತಿಭೆಯನ್ನು ಸಾಬೀತುಪಡಿಸಿದ್ದಾರೆ.

    ಇಡೀ ಚಿತ್ರದಲ್ಲಿ ಕಥೆ, ಸನ್ನಿವೇಶ ಮತ್ತು ಪಾತ್ರ ಪೋಷಣೆ ಕಣ್ಣಿಗೆ ಕಟ್ಟುತ್ತದೆ. ಉಪೇಂದ್ರ, ರಚಿತಾ ರಾಮ್ ಮತ್ತು ಸೋನು ಗೌಡ ಪೈಪೋಟಿಗೆ ಬಿದ್ದು ನಟಿಸಿದ್ದಾರೆ. ತೆಲುಗು ನಟ ಬ್ರಹ್ಮಾನಂದ್ ಪಾತ್ರವೂ ಪ್ರೇಕ್ಷಕರ ಮನಸಿನಲ್ಲುಳಿಯುವಂತಿದೆ. ಇದೆಲ್ಲದರ ಜೊತೆ ಜೊತೆಗೇ ಈ ದಿನಮಾನದಲ್ಲಿ ಸಂಬಂಧಗಳೇ ಸವಕಲಾಗುತ್ತಿರೋ ದುರಂತದತ್ತಲೂ ಬೆಳಕು ಚೆಲ್ಲಿ ಅದರ ಮಹತ್ವ ಸಾರುವ ಪ್ರಯತ್ನವನ್ನೂ ಆರ್.ಚಂದ್ರು ಮಾಡಿದ್ದಾರೆ. ನಿಖರವಾಗಿ ಹೇಳಬೇಕೆಂದರೆ, ಆರ್ ಚಂದ್ರು ಮತ್ತು ಉಪೇಂದ್ರ ಕಾಂಬಿನೇಷನ್ ಪಕ್ಕಾ ಗೆದ್ದಿದೆ. ಈ ಮೂಲಕವೇ ಉಪ್ಪಿ ಫಿಲಾಸಫಿ ಮತ್ತೆ ಲಕಲಕಿಸಿದೆ. ಆರ್ ಚಂದ್ರು ಫ್ಲೇವರ್‍ಗೆ ಮತ್ತಷ್ಟು ರುಚಿ ಬಂದಿದೆ.

    ಇದೆಲ್ಲದರಾಚೆಗೆ ರಚಿತಾ ರಾಮ್ ಬೋಲ್ಡ್ ಪಾತ್ರದಲ್ಲಿ ಹೇಗೆ ನಟಿಸಿದ್ದಾರೆ, ಅದಕ್ಕಿರೋ ಕಾರಣವೇನು ಎಂಬೆಲ್ಲ ಪ್ರಶ್ನೆಗಳಿಗೆ ಈ ಚಿತ್ರದಲ್ಲಿ ಮಜವಾದ ಉತ್ತರವಿದೆ. ಬಹು ಕಾಲದ ನಂತರ ಫ್ಯಾಮಿಲಿ ಸಮೇತರಾಗಿ ಕೂತು ನೋಡುವಂಥಾ, ಎಲ್ಲ ವಯೋಮಾನದವರೂ ಎಂಜಾಯ್ ಮಾಡಬಹುದಾದ ಚಿತ್ರವಾಗಿ ಐ ಲವ್ ಯೂ ಮೂಡಿ ಬಂದಿದೆ. ಖಂಡಿತಾ ಎಲ್ಲರೂ ಮಿಸ್ ಮಾಡದೇ ನೋಡಿ ಅಂತ ಶಿಫಾರಸು ಮಾಡುವಂತೆ ಈ ಚಿತ್ರ ಮೂಡಿ ಬಂದಿದೆ.

    ರೇಟಿಂಗ್: 4/5

  • ಐ ಲವ್ ಯೂ: ಕೆಜಿಎಫ್ ನಂತರ ಪರಭಾಷೆಯಲ್ಲೂ ಕನ್ನಡದ ಅಬ್ಬರ!

    ಐ ಲವ್ ಯೂ: ಕೆಜಿಎಫ್ ನಂತರ ಪರಭಾಷೆಯಲ್ಲೂ ಕನ್ನಡದ ಅಬ್ಬರ!

    ಬೆಂಗಳೂರು: ಯಶ್ ಅಭಿನಯದ ಕೆಜಿಎಫ್ ಚಿತ್ರ ಪರಭಾಷಾ ಚಿತ್ರರಂಗದ ಮಂದಿಯೂ ಕನ್ನಡ ಚಿತ್ರರಂಗದತ್ತ ಬೆರಗಿನಿಂದ ನೋಡುವಂತೆ ಮಾಡಿದೆ. ಹೀಗೆ ಪರಭಾಷೆಗಳಲ್ಲಿಯೂ ಹರಡಿಕೊಂಡಿರೋ ಕನ್ನಡ ಚಿತ್ರರಂಗದ ಘನತೆಯನ್ನು ಮುಂದುವರೆಸೋ ಇರಾದೆಯೊಂದಿಗೆ ಐ ಲವ್ ಯೂ ಚಿತ್ರ ಬಿಡುಗಡೆಗೆ ರೆಡಿಯಾಗಿದೆ. ಆರ್ ಚಂದ್ರು ಈ ದಿಸೆಯಲ್ಲಿ ಮಹತ್ವದ ಹೆಜ್ಜೆಯಿಟ್ಟಿದ್ದಾರೆ.

    ಯಾವುದೇ ಚಿತ್ರ ಒಂದು ಭಾಷೆಯಲ್ಲಿ ರೆಡಿಯಾಗೋದೇ ಕಷ್ಟ. ಅಂಥಾದ್ದರಲ್ಲಿ ಎರಡೆರಡು ಭಾಷೆಗಳಲ್ಲಿ ಕನ್ನಡ ಚಿತ್ರವನ್ನು ರೂಪುಗೊಳ್ಳುವಂತೆ ಮಾಡೋದು ನಿಜಕ್ಕೂ ಸಾಹಸ. ಅಂಥಾ ಸಾಹಸವನ್ನು ದೊಡ್ಡ ಮಟ್ಟದ ರಿಸ್ಕನ್ನು ಮೈ ಮೇಲೆಳೆದುಕೊಂಡೇ ಆರ್ ಚಂದ್ರು ಮಾಡಿ ಮುಗಿಸಿದ್ದಾರೆ. ಹೇಳಿ ಕೇಳಿ ಈ ಲವ್ ಯೂ ಚಿತ್ರಕ್ಕೆ ನಿರ್ಮಾಪಕರೂ ಅವರೇ. ಆದರೆ ಈ ಎರಡು ಜವಾಬ್ದಾರಿಗಳ ನಡುವೆಯೂ ಈ ಚಿತ್ರವನ್ನವರು ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಸಿದ್ಧಗೊಳಿಸಿದ್ದಾರೆ.

    https://www.youtube.com/watch?v=G8-2fTzXIbs

     

    ಈಗಾಗಲೇ ಈ ಚಿತ್ರ ತೆಲುಗಿನಲ್ಲಿಯೂ ಟಾಕ್ ಕ್ರಿಯೇಟ್ ಮಾಡಿದೆ. ಜೂನ್ 8ರಂದು ಐ ಲವ್ ಯೂ ಚಿತ್ರದ ತೆಲುಗು ಅವತರಣಿಕೆಯ ಆಡಿಯೋ ರಿಲೀಸ್ ಆಗಿದೆ. ವಿಶಾಖಪಟ್ಟಣಂನಲ್ಲಿ ನಡೆದ ಈ ಸಮಾರಂಭದಲ್ಲಿ ತೆಲುಗು ಮಾಧ್ಯಮ ಮಂದಿ ದೊಡ್ಡ ಸಂಖ್ಯೆಯಲ್ಲಿ ಹಾಜರಿದ್ದರು.

    ಒಟ್ಟಾರೆಯಾಗಿ ಕನ್ನಡ ಚಿತ್ರವೊಂದು ತೆಲುಗು ಭಾಷೆಯಲ್ಲಿಯೂ ಬಿಡುಗಡೆಯಾಗುತ್ತಿರೋದು ಮತ್ತು ಆ ಚಿತ್ರದ ಬಗ್ಗೆ ಪರಭಾಷಾ ಪ್ರೇಕ್ಷಕರೂ ಆಕರ್ಷಿತರಾಗಿರೋದು ನಿಜಕ್ಕೂ ಸಕಾರಾತ್ಮಕ ಬೆಳವಣಿಗೆ. ತೆಲುಗು ನಾಡಿನಲ್ಲಿ ಐ ಲವ್ ಯೂ ಬಗ್ಗೆ ಹುಟ್ಟಿಕೊಂಡಿರೋ ಹವಾ ನೋಡಿದರೆ ಅಲ್ಲಿಯೂ ಚಂದ್ರು ಮತ್ತು ಉಪ್ಪಿ ಜೋಡಿ ಜಯಭೇರಿ ಭಾರಿಸುವ ಲಕ್ಷಣಗಳೇ ದಟ್ಟವಾಗಿವೆ.

  • ಆರ್. ಚಂದ್ರು ಅದೆಷ್ಟು ಶ್ರದ್ಧೆಯಿಂದ ಐ ಲವ್ ಯೂ ಅಂದಿದ್ದಾರೆ ಗೊತ್ತಾ?

    ಆರ್. ಚಂದ್ರು ಅದೆಷ್ಟು ಶ್ರದ್ಧೆಯಿಂದ ಐ ಲವ್ ಯೂ ಅಂದಿದ್ದಾರೆ ಗೊತ್ತಾ?

    ಬೆಂಗಳೂರು: ತಾಜ್‍ಮಹಲ್, ಚಾರ್ ಮಿನಾರ್ ನಂಥಾ ಸದಾ ಕಾಡುವ ಪ್ರೇಮಕಾವ್ಯಗಳನ್ನು ಕಟ್ಟಿ ಕೊಟ್ಟವರು ನಿರ್ದೇಶಕ ಆರ್ ಚಂದ್ರು. ಇದೀಗ ಅವರು ನಿರ್ದೇಶನ ಮಾಡಿರೋ ಐ ಲವ್ ಯೂ ಚಿತ್ರ ತೆರೆ ಕಾಣಲು ರೆಡಿಯಾಗಿದೆ. ಈಗಾಗಲೇ ಭಾರೀ ನಿರೀಕ್ಷೆಗೆ ಕಾರಣವಾಗಿರೋ ಐ ಲವ್ ಯೂ ಜೂನ್ 14ರಂದು ತೆರೆ ಕಾಣುತ್ತಿದೆ. ಯಾವುದೇ ಚಿತ್ರಗಳನ್ನು ಮಾಡುವಾಗಲೂ ಅಚ್ಚುಕಟ್ಟಾದ ಪೂರ್ವ ತಯಾರಿ, ಒಂದೇ ಒಂದು ತೊಡಕೂ ಸಂಭವಿಸದಂತೆ ಮುಂದಡಿಯಿಡೋ ಎಚ್ಚರ ಮತ್ತು ಕಥೆಯನ್ನು ಕಣ್ಣಲ್ಲಿ ಕಣ್ಣಿಟ್ಟು ರೂಪಿಸೋ ಕಲಾವಂತಿಕೆ ಚಂದ್ರು ಅವರ ಟ್ರೇಡ್ ಮಾರ್ಕುಗಳಿದ್ದಂತೆ. ಬಿಡುಗಡೆಯ ಪೂರ್ವದಲ್ಲಿಯೇ ಐ ಲವ್ ಯೂ ಇಂಥಾದ್ದೊಂದು ಕ್ರೇಜ್ ಹುಟ್ಟು ಹಾಕಿರೋದರ ಹಿಂದೆಯೂ ಅಂಥಾದ್ದೇ ಪರಿಶ್ರಮಗಳ ಕಥೆಯಿದೆ!

    ಆರ್. ಚಂದ್ರು ವರ್ಷಕ್ಕೊಂದು ಅಚ್ಚುಕಟ್ಟಾದ ಚಿತ್ರ ಮಾಡೋ ಪರಿಪಾಠವನ್ನು ರೂಢಿಸಿಕೊಂಡು ಬಂದಿದ್ದಾರೆ. ತಮ್ಮ ಪ್ರೇಕ್ಷಕರು ಏನನ್ನು ನಿರೀಕ್ಷಿಸುತ್ತಾರೆಂಬ ನಾಡಿಮಿಡಿತವನ್ನು ಅರ್ಥೈಸಿಕೊಂಡಿರೋ ಅವರು ಕಾಡುವಂಥಾ ಕಥೆಗೊಂದು ಅಂತಿಮ ಸ್ಪರ್ಶ ನೀಡಿಯಾದ ಮೇಲಷ್ಟೇ ಹೀರೋ, ನಾಯಕಿ, ತಾರಾಗಣ ಮುಂತಾದವುಗಳ ಬಗ್ಗೆ ಗಮನ ಹರಿಸುತ್ತಾರೆ. ಹೀಗೆಯೇ ನಿರ್ದೇಶಕರಾಗಿ ಸಾಗಿ ಬಂದಿರೋ ಚಂದ್ರು ಅವರ ಪಾಲಿಗೇ ಐ ಲವ್ ಯೂ ಚಿತ್ರ ಸ್ಪೆಷಲ್ ಅನ್ನಿಸಲು ಹಲವಾರು ಕಾರಣಗಳಿವೆ.

    ಈ ಚಿತ್ರದ ವಿಚಾರದಲ್ಲಿ ನಿರ್ದೇಶಕನಾಗಿ, ನಿರ್ಮಾಪಕರಾಗಿಯೂ ಚಂದ್ರು ಜವಾಬ್ದಾರಿ ಹೊತ್ತುಕೊಂಡಿರೋದು ಗೊತ್ತೇ ಇದೆ. ಹೀಗೆ ಎರಡೆರಡು ಭಾರವಿದ್ದರೂ ಕೂಡಾ ಈ ಸಿನಿಮಾವನ್ನು ಅವರು ಏಕ ಕಾಲದಲ್ಲಿಯೇ ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ರೂಪಿಸಿರೋದೊಂದು ಸಾಹಸ. ಚಂದ್ರು ಈ ಹಿಂದೆಯೂ ತೆಲುಗಿನಲ್ಲೊಂದು ಚಿತ್ರವನ್ನ ನಿರ್ದೇಶನ ಮಾಡಿದ್ದರು. ಆದ್ದರಿಂದಲೇ ಅವರಲ್ಲಿನ ಪ್ರೇಕ್ಷಕ ವರ್ಗಕ್ಕೆ ಚಿರಪರಿಚಿತರು. ಉಪೇಂದ್ರ ಕೂಡಾ ತೆಲುಗು ಪ್ರೇಕ್ಷಕರ ಮನ ಗೆದ್ದಿದ್ದಾರೆ. ಈ ದಿಸೆಯಲ್ಲಿ ಐ ಲವ್ ಯೂ ಚಿತ್ರವನ್ನು ತೆಲುಗಿನಲ್ಲಿಯೂ ರೂಪಿಸುವ ನಿರ್ಧಾರಕ್ಕೆ ಬಂದು ಚಂದ್ರು ಅದರಲ್ಲಿಯೂ ಯಶ ಕಂಡಿದ್ದಾರೆ.

    ಈ ಚಿತ್ರದ ವಿಶೇಷತೆ ಏನು ಎಂಬ ಪ್ರಶ್ನೆ ಎದುರಾದರೆ ಚಂದ್ರು ಅವರು ಥಟ್ಟನೆ ಗಟ್ಟಿಯಾದ ಕಥೆ ಮತ್ತು ಯಾವ ಆಲೋಚನೆಗಳ ನಿಲುಕಿಗೂ ಸಿಗದ ಗಟ್ಟಿಯಾದ ಕಥೆ ಅನ್ನುತ್ತಾರೆ. ಅವರ ಈ ಹಿಂದಿನ ಚಿತ್ರಗಳ ಜೀವಾಳವೂ ಗಟ್ಟಿ ಕಥೆಯೇ. ಆದರೆ ಐ ಲವ್ ಯೂ ವಿಚಾರದಲ್ಲದು ಮತ್ತಷ್ಟು ಗಟ್ಟಿಯಾಗಿದೆಯಂತೆ. ಐ ಲವ್ ಯೂ ಅಂದರೆ ಪ್ರೇಮದ ಮೊದಲ ಪುಳಕಗಳು ಸಾಲುಗಟ್ಟಿ ನಿಲ್ಲುತ್ತವೆ. ಹಾಗೆಂದ ಮೇಲೆ ಇದೊಂದು ಅದ್ಭುತ ಪ್ರೇಮ ಕಥಾನಕ ಅನ್ನೋದರಲ್ಲಿ ಯಾವ ಡೌಟೂ ಇಲ್ಲ. ಆದರೆ ಅದರಾಚೆಗೂ ಕಥೆಯ ವಿಚಾರಗಳಲ್ಲಿ ಅಚ್ಚರಿಗಳು ಪ್ರೇಕ್ಷಕರಿಗಾಗಿ ಕಾದು ಕೂತಿವೆ. ಅದೇನೆಂಬುದೇ ಪ್ರಧಾನವಾದ ಸರ್ಪ್ರೈಸ್!

    ಐ ಲವ್ ಯೂ ಫ್ಯಾಮಿಲಿ ಸಮೇತ ಕೂತು ನೋಡಿ ಎಂಜಾಯ್ ಮಾಡುವಂಥಾ ಸಿನಿಮಾ ಮಾತ್ರವಲ್ಲ; ಫ್ಯಾಮಿಲಿ ಸಮೇತ ನೋಡಲೇ ಬೇಕಾದ ಚಿತ್ರ ಅನ್ನೋದು ಚಂದ್ರು ಅವರ ಭರವಸೆ. ಯಾಕೆಂದರೆ ಪ್ರೀತಿ ಪ್ರೇಮಗಳಾಚೆಗೂ ಇಲ್ಲಿ ಮೌಲ್ಯಯುತವಾದೊಂದು ಸಂದೇಶವಿದೆ. ಕ್ಲೈಮ್ಯಾಕ್ಸಿನಲ್ಲಿಯೂ ವಿಶೇಷತೆಗಳಿವೆ. ಇದೆಲ್ಲವೂ ಇದೇ ಜೂನ್ 14ರಂದು ಸ್ಪಷ್ಟವಾಗಿ ಪ್ರೇಕ್ಷಕರ ಮುಂದೆ ತೆರೆದುಕೊಳ್ಳಲಿದೆ.

  • ಐ ಲವ್ ಯೂ: ಬಿಡುಗಡೆಯಾಯ್ತು ಮತ್ತೊಂದು ಡ್ಯುಯೆಟ್ ವೀಡಿಯೋ ಸಾಂಗ್!

    ಐ ಲವ್ ಯೂ: ಬಿಡುಗಡೆಯಾಯ್ತು ಮತ್ತೊಂದು ಡ್ಯುಯೆಟ್ ವೀಡಿಯೋ ಸಾಂಗ್!

    ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಐ ಲವ್ ಯೂ ಚಿತ್ರದ ಹಾಡುಗಳ ಭರಾಟೆ ಅಡೆತಡೆಯಿಲ್ಲದೆ ಮುಂದುವೆರೆಯುತ್ತಿದೆ. ಇತ್ತೀಚೆಗೆ ಬಿಡುಗಡೆಯಾಗಿದ್ದ ಹಾಡುಗಳು ಜನಮನ ಗೆಲ್ಲುತ್ತಿದ್ದಂತೆಯೇ ಚಂದ್ರು ಚೆಂದದ ಹಾಡುಗಳ ಲಿರಿಕಲ್ ವೀಡಿಯೋಗಳನ್ನು ಲಾಂಚ್ ಮಾಡುತ್ತಾ ಸಾಗುತ್ತಿದ್ದಾರೆ. ಇದೀಗ ಐ ಲವ್ ಯೂ ಚಿತ್ರದ ಮತ್ತೊಂದು ಮನಮೋಹಕ ಡ್ಯುಯೆಟ್ ಸಾಂಗ್ ಬಿಡುಗಡೆಯಾಗಿದೆ.

    ಒಂದಾನೊಂದು ಕಾಲದಿಂದ ಹಿಂದೆ ಬಂದೆ ಅಂದಿನಿಂದ… ಎಂಬ ಈ ರೊಮ್ಯಾಂಟಿಕ್ ಸಾಂಗ್ ಲಹರಿ ಆಡಿಯೋ ಸಂಸ್ಥೆಯ ಯೂಟ್ಯೂಬ್ ಚಾನೆಲ್ ಮೂಲಕ ಬಿಡುಗಡೆಯಾಗಿದೆ. ಆರ್ಯ ದಕ್ಷಿಣ್ ಸಂಗೀತ ಸಂಯೋಜನೆ ಮಾಡಿರೋ ಈ ಹಾಡನ್ನು ಸುಚಿತ್ ಸುರೇಶ್ ಹಾಡಿದ್ದಾರೆ. ಇದಕ್ಕೆ ಧನಂಜಯ್ ಸಾಹಿತ್ಯ ನೀಡಿದ್ದಾರೆ. ಯುವ ಸಮೂಹಕ್ಕೆ ಒಂದೇ ಸಲಕ್ಕೆ ಹಿಡಿಸುವಂತಿರೋ ಈ ಹಾಡೂ ಕೂಡಾ ಹಿಟ್ ಆಗೋ ಸೂಚನೆ ಬಿಡುಗಡೆಯಾಗಿ ಕ್ಷಣದೊಪ್ಪತ್ತಿನಲ್ಲಿಯೇ ಸಿಕ್ಕಿದೆ. ಯಾಕೆಂದರೆ, ಈ ಹಾಡೀಗ ಲಕ್ಷ ವೀಕ್ಷಣೆಯತ್ತ ದಾಪುಗಾಲಿಡುತ್ತಿದೆ.

    ಟ್ರೈಲರ್ ಮೂಲಕ ರಚಿತಾ ರಾಮ್ ಮತ್ತು ಉಪೇಂದ್ರ ಅವರ ಒಂದು ಮಜಲಿನ ಕೆಮಿಸ್ಟ್ರಿ ಅನಾವರಣಗೊಂಡಿತ್ತು. ಇದೀಗ ಈ ಡ್ಯುಯೆಟ್ ಸಾಂಗಿನ ಮೂಲಕ ಅದರ ಮತ್ತೊಂದು ರೊಮ್ಯಾಂಟಿಕ್ ಆಯಾಮವೂ ಜಾಹೀರಾಗಿದೆ. ಈ ಹಾಡಿನಲ್ಲಿ ಮುದ್ದಾಗಿ ನಟಿಸಿರೋ ರಚಿತಾ ರಾಮ್ ಮತ್ತು ಉಪೇಂದ್ರರನ್ನು ಕಂಡು ಅಭಿಮಾನಿಗಳೆಲ್ಲ ಹುಚ್ಚೆದ್ದಿದ್ದಾರೆ.

    ಆರ್ ಚಂದ್ರು ಈ ಹಿಂದಿನ ಚಿತ್ರಗಳಲ್ಲಿಯೂ ಹಾಡುಗಳಿಗೆ ಪ್ರಾಶಸ್ತ್ಯ ಕೊಟ್ಟಿದ್ದರು. ಆದ್ದರಿಂದಲೇ ಅವರು ನಿರ್ದೇಶನ ಮಾಡಿದ ಅಷ್ಟೂ ಚಿತ್ರದ ಹಾಡುಗಳೂ ಎವರ್ ಗ್ರೀನ್ ಅನ್ನಿಸಿಕೊಂಡಿದ್ದವು. ಇದೀಗ ಬಿಡುಗಡೆಯ ಹೊಸ್ತಿಲಲ್ಲಿರುವ ಐ ಲವ್ ಯೂ ಚಿತ್ರವೂ ಕೂಡಾ ಆ ಸಾಲಿಗೆ ಸೇರ್ಪಡೆಗೊಂಡಿದೆ.

  • ಹಾಟ್ ಸೀನ್ ಒಪ್ಪಿಕೊಂಡಿದ್ದು ಯಾಕೆ – ರಿವೀಲ್ ಮಾಡಿದ್ರು ರಚಿತಾ ರಾಮ್

    ಹಾಟ್ ಸೀನ್ ಒಪ್ಪಿಕೊಂಡಿದ್ದು ಯಾಕೆ – ರಿವೀಲ್ ಮಾಡಿದ್ರು ರಚಿತಾ ರಾಮ್

    ಬೆಂಗಳೂರು: ನಟ ಉಪೇಂದ್ರ ಮತ್ತು ರಚಿತಾ ರಾಮ್ ಅಭಿನಯ ‘ಐ ಲವ್ ಯೂ’ ಸಿನಿಮಾದ ಟ್ರೇಲರ್ ಕಳೆದ ದಿನ ಬಿಡುಗಡೆಯಾಗಿದೆ. ಇದರಲ್ಲಿ ರಚಿತಾ ಅವರು ಮೊದಲ ಬಾರಿಗೆ ತುಂಬಾ ಹಾಟ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಬಗ್ಗೆ ಸ್ವತಃ ರಚಿತಾ ರಾಮ್ ಮಾತನಾಡಿದ್ದಾರೆ.

    ರಚಿತಾ ಅವರು ‘ಐ ಲವ್ ಯೂ’ ಸಿನಿಮಾದಲ್ಲಿ ಉಪೇಂದ್ರ ಅವರ ಜೊತೆ ಸಖತ್ ಹಾಟ್ ಆಗಿ ಅಭಿನಯಸಿದ್ದಾರೆ. ಆ ದೃಶ್ಯವನ್ನು ಚಿತ್ರೀಕರಣ ಮಾಡುವಾಗ ನಡೆದ ಸಂಪೂರ್ಣ ಘಟನೆಯನ್ನು ಟ್ರೇಲರ್ ಲಾಂಚ್ ವೇಳೆ ಹಂಚಿಕೊಂಡಿದ್ದಾರೆ.

    ನಾನು ಟ್ರೇಲರ್ ನಲ್ಲಿ ಆ ದೃಶ್ಯವನ್ನು ನೋಡಿದಾಗ ಭಯಪಟ್ಟೆ. ಸಿನಿಮಾಗಾಗಿ ಚಿತ್ರೀಕರಣ ಮಾಡುವಾಗ ನಾನು ಸಾಮಾನ್ಯದ ಪಾತ್ರವೆಂದುಕೊಂಡು ಅಭಿನಯಸಿದ್ದೆ. ಆದರೆ ಈಗ ಅದನ್ನು ದೊಡ್ಡ ಪರದೆಯ ಮೇಲೆ ನೋಡಿದಾಗ ನಾನು ಏನು ಮಾಡಿದ್ದೇನೆಂದು ತಿಳಿಯುತ್ತದೆ ಎಂದರು.

    ಇದೊಂದು ಹೊಸ ಪ್ರಯತ್ನವಾಗಿದೆ. ಇದರಲ್ಲಿ ನಾನು ತುಂಬಾ ಬೋಲ್ಡ್ ಪಾತ್ರದಲ್ಲಿ ಅಭಿನಯಿಸಿದ್ದೇನೆ. ಒಂದು ಹೊಸ ಪ್ರಯತ್ನ ಮಾಡಲು ಸವಾಲಾಗಿ ಈ ಸಿನಿಮಾವನ್ನು ಒಪ್ಪಿಕೊಂಡಿದ್ದೆ. ಅದರಲ್ಲೂ ಹಾಟ್ ದೃಶ್ಯದ ಚಿತ್ರೀಕರಣದ ಸಮಯದಲ್ಲಿ, ನಾನು ಚಿತ್ರೀಕರಣ ಸ್ಥಳದಿಂದ ನಿರ್ದೇಶಕ ಮತ್ತು ಛಾಯಾಗ್ರಾಹಕರನ್ನು ಹೋಗುವಂತೆ ಪ್ರತಿಯೊಬ್ಬರನ್ನು ಕೇಳಿಕೊಂಡಿದ್ದೆ ಎಂದು ರಚಿತಾ ಹೇಳಿದ್ದಾರೆ.

    ನಾನು ಮೊದಲು ಚಿನ್ನಿ ಪ್ರಕಾಶ್ ಮಾಸ್ಟರ್ (ಮಾತಾನಡಿ ಮಾಯಾವಾದೆ.. ಹಾಡಿನ ನೃತ್ಯ ಸಂಯೋಜಕ) ಜೊತೆ ಕೆಲಸ ಮಾಡಿದ್ದೇನೆ. ಆದರೆ ಈ ರೀತಿಯ ಪಾತ್ರವನ್ನು ಮಾಡಿಲ್ಲ. ಈ ಹಾಡನ್ನು ನಾವು ಚಿತ್ರೀಕರಿಸಿದ ನಂತರ ಅವರು ರೊಮ್ಯಾಂಟಿಕ್ ಹಾಡುಗಳಿಗೆ ಪ್ರಸಿದ್ಧರಾಗಿದ್ದಾರೆ ಎಂದು ತಿಳಿದುಕೊಂಡೆ ಎಂದಿದ್ದಾರೆ.

  • ಆ ಕಾಲದ ಉಪ್ಪಿ ಎದ್ದು ಬಂದು ‘ಐ ಲವ್ ಯೂ’ ಅಂದಂತೆ!

    ಆ ಕಾಲದ ಉಪ್ಪಿ ಎದ್ದು ಬಂದು ‘ಐ ಲವ್ ಯೂ’ ಅಂದಂತೆ!

    ರ್.ಚಂದ್ರು ನಿರ್ದೇಶನದ ಐ ಲವ್ ಯೂ ಚಿತ್ರದ ಟ್ರೈಲರ್ ಹೊರಬಂದಿದೆ. ಕಿಚ್ಚ ಸುದೀಪ್ ಬಿಡುಗಡೆಗೊಳಿಸಿರೋ ಈ ಟ್ರೈಲರ್ ಮೂಲಕ ದಶಕದ ಹಿಂದೆ ಹುಚ್ಚೆಬ್ಬಿಸಿದ್ದ ಉಪ್ಪಿ ಮತ್ತೆ ಹೊಸ ರೂಪದಲ್ಲಿ ಎದ್ದುಬಂದಂಥಾ ಅನುಭವವಾಗಿ ಸಮಸ್ತ ಅಭಿಮಾನಿಗಳೂ ಥ್ರಿಲ್ ಆಗಿದ್ದಾರೆ. ಈ ಟ್ರೈಲರಿನಲ್ಲಿ ಉಪೇಂದ್ರ ಕಾಣಿಸಿಕೊಂಡಿರೋ ಗೆಟಪ್, ಪ್ರೀತಿ ಪ್ರೇಮಗಳ ಬಗೆಗಿನ ಬಿಡಬೀಸಾದ ಡೈಲಾಗುಗಳೆಲ್ಲವೂ ಆ ಕಾಲದ ಉಪ್ಪಿ ಎದ್ದು ಬಂದು ಐ ಲವ್ ಯೂ ಅಂದಂತೆ ಭಾಸವಾದರೆ ಯಾವ ಅಚ್ಚರಿಯೂ ಇಲ್ಲ!

    ಕಿಚ್ಚ ಸುದೀಪ್ ಉಪೇಂದ್ರ ಹಾಗೂ ನಿರ್ದೇಶಕ ಆರ್ ಚಂದ್ರು ಅವರೆಡೆಗಿನ ಪ್ರೀತಿಯಿಂದಲೇ ಐ ಲವ್ ಯೂ ಚಿತ್ರದ ಟ್ರೈಲರ್ ಬಿಡುಗಡೆಗೊಳಿಸಿದ್ದಾರೆ. ಉಪ್ಪಿ ಹಾಗೂ ಚಂದ್ರು ಕಾಂಬಿನೇಷನ್ನಿಗೆ ಮತ್ತೊಂದು ಮಹಾ ಗೆಲುವು ಸಿಗಲೆಂಬ ಆಶಯದ ಮಾತುಗಳನ್ನೂ ಆಡಿದ್ದಾರೆ. ಹೀಗೆ ಸುದೀಪ್ ಅವರು ಬಿಡುಗಡೆಗೊಳಿಸಿದ ಈ ಟ್ರೈಲರ್ ಗಂಟೆಗಳು ಕಳೆಯೋದರೊಳಗಾಗಿ ಯೂಟ್ಯೂಬ್‍ನಲ್ಲಿ ವ್ಯಾಪಕ ವೀಕ್ಷಣೆ ಹಾಗೂ ಮೆಚ್ಚುಗೆ ಪಡೆದುಕೊಂಡಿದೆ. ಉಪ್ಪಿ ಅಭಿಮಾನಿಗಳ ಪಾಲಿಗಂತೂ ಈ ಟ್ರೈಲರ್ ಹಬ್ಬದಂತಾಗಿ ಬಿಟ್ಟಿದೆ.

    ಅಷ್ಟರ ಮಟ್ಟಿಗೆ ಆರ್ ಚಂದ್ರು ಅವರ ಪರಿಶ್ರಮ ಮತ್ತು ಕನಸಿಗೆ ಆರಂಭಕವಾಗಿಯೇ ಯಶ ಸಿಕ್ಕಂತಾಗಿದೆ. ನವಿರಾದ ಪ್ರೇಮ ಕಥಾನಕಗಳನ್ನು ದೃಶ್ಯ ರೂಪಕ್ಕಿಳಿಸುತ್ತಲೇ ಪ್ರೇಕ್ಷಕರನ್ನು ಆವರಿಸಿಕೊಂಡು ಗೆದ್ದಿರುವವರು ಆರ್.ಚಂದ್ರು. ಅವರಿಗೆ ಪ್ರೇಮವೆಂಬ ಅಯಸ್ಕಾಂತವನ್ನು ಯಾವ್ಯಾವ ಆಂಗಲ್ಲುಗಳಲ್ಲಿ ಬಳಸಬಹುದೆಂಬ ಕಲೆಗಾರಿಕೆ ಬೇಷರತ್ತಾಗಿಯೇ ಒಲಿದಿದೆ. ಐ ಲವ್ ಯೂ ಚಿತ್ರದಲ್ಲಿಯಂತೂ ಚಂದ್ರು ಅವರು ಉಪ್ಪಿ ಹಳೇ ಇಮೇಜಿಗೆ ತಕ್ಕಂಥಾದ್ದೇ ಕಥೆಯೊಂದನ್ನು ದೃಷ್ಯೀಕರಿಸಿರೋ ಸೂಚನೆ ಈ ಟ್ರೈಲರ್ ಮೂಲಕವೇ ಸಿಕ್ಕಿದೆ.

    ಪ್ರೀತಿ ಪ್ರೇಮಗಳಾಚೆಗೆ ಮನಮಿಡಿಯುವಂಥಾ ಸೆಂಟಿಮೆಂಟ್ ಸ್ಟೋರಿಯನ್ನೂ ಕೂಡಾ ಐ ಲವ್ ಯೂ ಚಿತ್ರ ಒಳಗೊಂಡಿರೋದರ ಝಲಕ್ಕುಗಳೂ ಕೂಡಾ ಈ ಟ್ರೈಲರ್ ಮೂಲಕವೇ ಅನಾವರಣಗೊಂಡಿದೆ. ಒಟ್ಟಾರೆಯಾಗಿ ಈ ಟ್ರೈಲರ್ ಬಿಡುಗಡೆಯಾಗಿ ಘಂಟೆಗಳು ಕಳೆಯೋದರೊಳಗಾಗಿಯೇ ಜನರನ್ನು ಸೆಳೆದಿದೆ. ಬೇಗನೆ ಇದರ ವೀಕ್ಷಣೆ ಲಕ್ಷದ ಗಡಿ ದಾಟಿ ಯೂಟ್ಯೂಬ್ ಟ್ರೆಂಡಿಂಗ್‍ನತ್ತ ದಾಪುಗಾಲಿಡುತ್ತಿದೆ. ಇದು ಚಿತ್ರತಂಡಕ್ಕೂ ಹೊಸಾ ಖುಷಿ, ಹುಮ್ಮಸ್ಸು ತುಂಬಿದೆ.

    ರಚಿತಾ ರಾಮ್ ಮತ್ತು ಸೋನು ಗೌಡ ಉಪೇಂದ್ರರಿಗೆ ನಾಯಕಿಯರಾಗಿ ನಟಿಸಿರೋ ಈ ಚಿತ್ರ ಜೂನ್ 14ರಂದು ರಾಜ್ಯಾದ್ಯಂತ ತೆರೆ ಕಾಣಲಿದೆ. ಈ ಚಿತ್ರವನ್ನು ಆರ್ ಚಂದ್ರು ನಿರ್ದೇಶನ ಮಾಡಿರೋದು ಮಾತ್ರವಲ್ಲದೇ ನಿರ್ಮಾಣದ ಜವಾಬ್ದಾರಿಯನ್ನೂ ಹೊತ್ತುಕೊಂಡಿದ್ದಾರೆ. ಸುಜ್ಞಾನ್ ಛಾಯಾಗ್ರಹಣ, ದೀಪು ಎಸ್ ಕುಮಾರ್ ಸಂಕಲನ, ಮೋಹನ್ ಬಿ ಕೆರೆ ಕಲಾ ನಿರ್ದೇಶನ, ಗಣೇಶ್, ವಿನೋದ್ ಮತ್ತು ಕೆ ರವಿವರ್ಮಾ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.

  • ಜೂ. ದರ್ಶನ್ ನೋಡಿ ನಟಿ ರಚಿತಾ ರಾಮ್ ಅಚ್ಚರಿ..!

    ಜೂ. ದರ್ಶನ್ ನೋಡಿ ನಟಿ ರಚಿತಾ ರಾಮ್ ಅಚ್ಚರಿ..!

    ಬೆಂಗಳೂರು: ಪ್ರತಿಯೊಬ್ಬ ಸ್ಟಾರ್ ನಟರಂತೆ ಕಾಣುವ ಒಬ್ಬೊಬ್ಬ ಜೂನಿಯರ್ ನಟ ಇರುತ್ತಾರೆ. ಅಭಿಮಾನಿಗಳು ತಮ್ಮ ನೆಚ್ಚಿನ ನಟರ ಹಾವ-ಭಾವ ನೋಡಿ ಅವರಂತಯೇ ಮಾತನಾಡುವುದು, ಲುಕ್ ಹಾಗೂ ವಾಕಿಂಗ್ ಸ್ಟೈಲ್ ಅನ್ನು ಅನುಸರಿಸುತ್ತಾರೆ. ಈಗ ಅದೇ ರೀತಿ ಜೂನಿಯರ್ ದರ್ಶನ್ ನೋಡಿ ನಟಿ ರಚಿತಾ ರಾಮ್ ಶಾಕ್ ಆಗಿದ್ದರು.

    ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಒಂದು ಕಾಮಿಡಿ ಕಾರ್ಯಕ್ರಮದಲ್ಲಿ ನಟ ದರ್ಶನ್ ಅವರಂತೆಯೇ ಕಾಣುವ ಜೂನಿಯರ್ ದರ್ಶನ್ ಬಂದಿದ್ದರು. ಅಲ್ಲಿ ಅವರನ್ನು ನೋಡಿ ರಚಿತಾ ರಾಮ್ ಶಾಕ್ ಆಗಿದ್ದರು. ಅವಿನಾಶ್ ಮೂಲತಃ ಚಿಕ್ಕಮಗಳೂರಿನವರಾಗಿದ್ದು, ವೃತ್ತಿಯಲ್ಲಿ ಆಟೋ ಡ್ರೈವರ್ ಕೆಲಸ ಮಾಡುತ್ತಿದ್ದಾರೆ. ಇವರು ನೋಡಲು ದರ್ಶನ್ ಥರನೇ ಕಾಣುತ್ತಾರೆ.

    ಅವಿನಾಶ್ ನಟ ದರ್ಶನ್ ಅಭಿಮಾನಿಯಾಗಿದ್ದು, ಅವರ ಮಾತು, ವಾಕಿಂಗ್ ಸ್ಟೈಲ್ ಮತ್ತು ಲುಕ್ ಇತ್ಯಾದಿ ಎಲ್ಲವನ್ನು ಅನುಸರಿಸಿ ಅವರಂತೆಯೇ ಇರುತ್ತಾರೆ. ಆದ್ದರಿಂದ ಜೂನಿಯರ್ ದರ್ಶನ್ ಥರ ಕಾಣುತ್ತಾರೆ. ಅವಿನಾಶ್ ಕಾರ್ಯಕ್ರಮಕ್ಕೆ ದರ್ಶನ್ ರೀತಿ ನಡೆದುಕೊಂಡು ಬಂದು ಅವರ ಸಿನಿಮಾದ ಡೈಲಾಗ್ ಹೇಳುತ್ತಾರೆ. ಇದನ್ನು ನೋಡಿದ ರಚಿತಾ ರಾಮ್ ಒಂದು ಕ್ಷಣ ಆಶ್ಚರ್ಯ ಪಟ್ಟಿದ್ದರು.

    ನಟಿ ರಚಿತಾ ಅವರು,  ಮಾತನಾಡಿ ಎಂದು ಅವಿನಾಶ್ ಬಳಿ ಕೇಳಿಕೊಂಡಿದ್ದು, ಬಳಿಕ ಅವಿನಾಶ್ ಅವರ ದನಿಯಲ್ಲಿ ಮಾತನಾಡಿದರು. ಆನಂತರ ರಚಿತ್ ರಾಮ್ ಫುಲ್ ಖುಷಿಯಾಗಿದ್ದರು. ನಟಿ ರಚಿತಾ ರಾಮ್ ಜೊತೆ ಅವಿಶಾನ್ ಸ್ಟೇಜ್ ಮೇಲೆ ಡ್ಯಾನ್ಸ್ ಮಾಡಿದ್ದಾರೆ. ಆಗ ರಚಿತಾ ಅವರು, ನಿಮ್ಮ ದರ್ಶನ್ ಸ್ಟೈಲ್ ಚೇಂಜ್ ಮಾಡಿಕೊಳ್ಳಿ, ನಿಮ್ಮತರ ಇರಿ ಎಂದು ಖುಷಿಯಿಂದ ಹೇಳಿದ್ದಾರೆ.

    ಅವಿನಾಶ್ ನೋಡಿ ತುಂಬಾ ಖುಷಿಯಾಯಿತು. ದರ್ಶನ್ ಥರನೇ ಕಾಣುತ್ತಾರೆ. ನೀವು ಜೀವನದಲ್ಲಿ ದರ್ಶನ್ ಅವರ ರೀತಿ ಸಾಧನೆ ಮಾಡಿ ಎಂದು ವಿಶ್ ಮಾಡಿದ್ದಾರೆ. ಅವಿನಾಶ್ ಕಾರ್ಯಕ್ರಮದಲ್ಲಿ ಸ್ಪರ್ಧಿಯಾಗಿ ಬಂದಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv