Tag: rabies

  • 2030ಕ್ಕೆ  ರೇಬೀಸ್‌ ನಿರ್ಮೂಲನೆ – ಪಣ ತೊಟ್ಟ ಕೇಂದ್ರದ ಮುಂದಿರೋ ಸವಾಲುಗಳೇನು? 

    2030ಕ್ಕೆ  ರೇಬೀಸ್‌ ನಿರ್ಮೂಲನೆ – ಪಣ ತೊಟ್ಟ ಕೇಂದ್ರದ ಮುಂದಿರೋ ಸವಾಲುಗಳೇನು? 

    ನಾಯಿ ಕಚ್ಚಿದ್ರೆ (Dog Bite Case) ನಿರ್ಲಕ್ಷ್ಯ ಮಾಡ್ತೀರಾ? ಒಂದೇ ಹಲ್ಲು ತಾಗಿದೆ, ಕಚ್ಚಿದ ಜಾಗದಲ್ಲಿ ಗಾಯ ಆಗಿಲ್ಲ, ರಕ್ತ ಬಂದಿಲ್ಲ ಅಂತೆಲ್ಲ ನಿಮಗೆ ನೀವೇ ಸಮಾಧಾನ ಮಾಡ್ಕೋಳ್ತೀರಾ? ಇನ್ಮುಂದೆ ಹಾಗೆಲ್ಲ ಮಾಡ್ಬೇಡಿ. ಯಾಕಂದ್ರೆ ಭಾರತದಲ್ಲಿ (India) ರೇಬೀಸ್‌ನಿಂದ (Rabies) ಸಾಯುವವರ ಸಂಖ್ಯೆ ಹೆಚ್ಚಳವಾಗಿದೆ. ಇದಕ್ಕೆ ಮೂಲ ಕಾರಣ ಚಿಕಿತ್ಸೆ ಪಡೆಯದೇ ಇರುವುದೇ ಆಗಿದೆ.   

    2030ರ ವೇಳೆಗೆ ಭಾರತದಲ್ಲಿ ರೇಬೀಸ್ ನಿರ್ಮೂಲನೆಗೆ ಪಣ
    ಭಾರತದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರ (NCDC) 2030ರ ವೇಳೆಗೆ ಭಾರತದಲ್ಲಿ ರೇಬೀಸ್ ನಿರ್ಮೂಲನೆಗೆ ಪಣತೊಟ್ಟಿದೆ. ಇದಕ್ಕಾಗಿ ಅಗತ್ಯವಿರುವ ಎಲ್ಲಾ ಕ್ರಮಗಳನ್ನುಕೈಗೊಳ್ಳಲು ಇಲಾಖೆ ಮುಂದಾಗಿದೆ. ಇತ್ತೀಚೆಗೆ ಸುಪ್ರೀಂ ಕೋರ್ಟ್‌ (Supreme Court) ಸಹ ದೆಹಲಿಯಲ್ಲಿ ಬೀದಿ ನಾಯಿಗಳ ದಾಳಿ ಬಗ್ಗೆ ಪ್ರತಿಕ್ರಿಯಿಸಿತ್ತು. ಈ ವೇಳೆ ಒಂದು ಮಗು ಕೂಡ ರೇಬೀಸ್‌ನಿಂದ ಸಾವನ್ನಪ್ಪಬಾರದು ಎಂದಿತ್ತು.

    2024 ರಲ್ಲಿ ನಾಯಿ ಕಡಿತ ಪ್ರಕರಣ ಎಷ್ಟಿತ್ತು?
    2024 ರಲ್ಲಿ ಭಾರತದಲ್ಲಿ ನಾಯಿ ಕಡಿತ ಪ್ರಕರಣ ತೀವ್ರ ಏರಿಕೆಯಾಗಿತ್ತು. ದೇಶದಾದ್ಯಂತ 30.7 ಲಕ್ಷ ನಾಯಿ ಕಡಿತ ಪ್ರಕರಣ ದಾಖಲಾಗಿದ್ದವು. ನಾಯಿ ಕಡಿತಕ್ಕೊಳಗಾದವರಲ್ಲಿ 15 ವರ್ಷದೊಳಗಿನ ಮಕ್ಕಳ ಸಂಖ್ಯೆ 40% ಕ್ಕಿಂತ ಹೆಚ್ಚಾಗಿತ್ತು. ಇನ್ನೂ 2023ರಲ್ಲಿ 30.43 ಲಕ್ಷ ನಾಯಿ ಕಡಿತ ಪ್ರಕರಣ ದಾಖಲಾಗಿದ್ದವು. 

    ಪ್ರತಿ ವರ್ಷ 5,700 ಮಂದಿ ರೇಬಿಸ್‌ಗೆ ಬಲಿ!
    ಪ್ರತಿ ವರ್ಷ ಸುಮಾರು 5,700 ಜನ ಈ ತಡೆಗಟ್ಟಬಹುದಾದ ರೇಬಿಸ್ ಕಾಯಿಲೆಯಿಂದ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ‌ ನಾಯಿ ಕಚ್ಚಿದವರಲ್ಲಿ ಕೇವಲ 40% ಜನರು ಮಾತ್ರ ರೇಬೀಸ್ ಲಸಿಕೆ ಪಡೆಯುತ್ತಿದ್ದಾರೆ. ಇದು ರೇಬಿಸ್‌ ಹೆಚ್ಚಳಕ್ಕೆ ಮುಖ್ಯ ಕಾರಣವಾಗಿದೆ. ಈಗ ಕೇಂದ್ರ ಸರ್ಕಾರ  ಭಾರತದಲ್ಲಿ 2030ರ ವೇಳೆಗೆ  ರೇಬಿಸ್‌ನ್ನು ತೊಡೆದುಹಾಕಲು ನಿರ್ಧರಿಸಿದೆ. ಅದಕ್ಕಾಗಿ ದೇಶಾದ್ಯಂತ ವಿವಿಧ ಕಾರ್ಯಕ್ರಮಗಳು, ಮಾಹಿತಿ ನೀಡುವುದು ಸೇರಿದಂತೆ ಅಗತ್ಯ ಔಷಧಿಗಳನ್ನು ಒದಗಿಸಲು ಕ್ರಮಕೈಗೊಳ್ಳಲಾಗಿದೆ. 

    ರೇಬಿಸ್‌ ನಿರ್ಮೂಲನೆಗೆ ಕೈಗೊಂಡ ಕ್ರಮಗಳೇನು?
    ಸಾಮೂಹಿಕವಾಗಿ ನಾಯಿಗಳಿಗೆ ಲಸಿಕೆ ಹಾಕುವುದು. ನಾಯಿಗಳ ಸಂಖ್ಯೆ ನಿಯಂತ್ರಣಕ್ಕೆ ಸಂತಾನ ಹರಣ ಶಸ್ತ್ರ ಚಿಕಿತ್ಸೆ ಮಾಡುವುದು ಸೇರಿದಂತೆ ಅನೇಕ ಕ್ರಮಗಳನ್ನು ತೆಗೆದುಕೊಳ್ಳಲು ಸರ್ಕಾರ ನಿರ್ಧರಿಸಿದೆ. 

    ರಾಜ್ಯಗಳಿಗೆ ಬಜೆಟ್ ಬೆಂಬಲ
    ರಾಷ್ಟ್ರೀಯ ಆರೋಗ್ಯ ಮಿಷನ್ ​​(NHM) ಅಡಿಯಲ್ಲಿ, ಆರೋಗ್ಯ ರಕ್ಷಣಾ ಸಿಬ್ಬಂದಿ ಹೆಚ್ಚಿಸುವುದು. ರೇಬೀಸ್ ಲಸಿಕೆಗಳ ಸಂಗ್ರಹಣೆ. ರೇಬೀಸ್ ಮತ್ತು ನಾಯಿ ಕಡಿತ ತಡೆಗಟ್ಟುವಿಕೆ ದತ್ತಾಂಶ ಕಲೆಹಾಕಿ, ಪರಿಶೀಲನಾ ಸಭೆ ನಡೆಸಿ ಅಗತ್ಯ ಕ್ರಮಕೈಗೊಳ್ಳುವುದು. ಅಲ್ಲದೇ ಆಸ್ಪತ್ರೆ ಸ್ಥಾಪನೆ, ಅಗತ್ಯ ಔಷಧಿಗಳಿಗಾಗಿ ಹಣ ಒದಗಿಸುವ ಮೂಲಕ ರಾಜ್ಯಗಳಿಗೆ ಬೆಂಬಲ ನೀಡಲಾಗುತ್ತಿದೆ.

    ರಾಷ್ಟ್ರೀಯ ಆರೋಗ್ಯ ಮಿಷನ್‌ನ ಉಚಿತ ಔಷಧ ಉಪಕ್ರಮದಡಿಯಲ್ಲಿ ಸರ್ಕಾರಿ ಆಸ್ಪತ್ರೆಗಳು ಮತ್ತು ಆರೋಗ್ಯ ಕೇಂದ್ರಗಳಲ್ಲಿ ಆಂಟಿ-ರೇಬೀಸ್ ಲಸಿಕೆ (ARV) ಮತ್ತು ಆಂಟಿ-ರೇಬೀಸ್ ಸೀರಮ್ (ARS)/ರೇಬೀಸ್ ಇಮ್ಯುನೊಗ್ಲಾಬ್ಯುಲಿನ್ (RIG) ನಂತಹ ಜೀವರಕ್ಷಕ ಔಷಧಿಗಳನ್ನು ಒದಗಿಸಲಾಗುತ್ತಿದೆ. ಈ ಔಷಧಿಗಳನ್ನು ರಾಜ್ಯಗಳ ಅಗತ್ಯ ಔಷಧ ಪಟ್ಟಿಯಲ್ಲಿಯೂ ಸೇರಿಸಲಾಗಿದೆ.

    ರೇಬೀಸ್ ಪರೀಕ್ಷೆಗೆ ಪ್ರಯೋಗಾಲಯಗಳು: ದೇಶಾದ್ಯಂತ ರೇಬೀಸ್‌ ಪರೀಕ್ಷೆಗೆ 14 ಪ್ರಯೋಗಾಲಯಗಳನ್ನು ಆಯ್ದ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ಅಭಿವೃದ್ಧಿಪಡಿಸಲು ನಿರ್ಧರಿಸಲಾಗಿದೆ. 

    ಬೆಂಗ್ಳೂರಲ್ಲಿ ನಾಯಿಗಳ ನಿಯಂತ್ರಣ
    ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಬೀದಿ ನಾಯಿಗಳ ಸಂಖ್ಯೆಯನ್ನು ನಿಯಂತ್ರಿಸುವಲ್ಲಿ ಅಗತ್ಯ ಕ್ರಮಗಳನ್ನು ಕೈಗೊಂಡಿದೆ.  ಬೆಂಗಳೂರಲ್ಲಿ 2023 ರಲ್ಲಿ ಬೀದಿ ನಾಯಿಗಳ ಸಂಖ್ಯೆಯಲ್ಲಿ 10% ಇಳಿಕೆ ಕಂಡುಬಂದಿದೆ.  

    ವಿಶ್ವ ರೇಬೀಸ್‌ ದಿನ
    ವಿಶ್ವ ರೇಬೀಸ್ ದಿನವನ್ನು ಪ್ರತಿವರ್ಷ ಸೆ.28ರಂದು ಸೂಕ್ಷ್ಮಜೀವಿಶಾಸ್ತ್ರದ ಪಿತಾಮಹ ಹಾಗೂ ರೇಬಿಸ್ ಲಸಿಕೆಯನ್ನು ಕಂಡುಹಿಡಿದ ಖ್ಯಾತ ವಿಜ್ಞಾನಿ ಲೂಯೀಸ್ ಪಾಶ್ಚರ್ (28-09-1895) ಅವರ ಮರಣದ ಶತಮಾನೋತ್ಸವದ ಅಂಗವಾಗಿ ವಿಶ್ವದಾದ್ಯಂತ 15 ವರ್ಷಗಳಿಂದ ಆಚರಿಸಲಾಗುತ್ತಿದೆ.

    ಮೊದಲ ಬಾರಿಗೆ 1881ರಲ್ಲಿ ಹುಚ್ಚುನಾಯಿ ಕಡಿತಕ್ಕೊಳಗಾದ ಮಗುವಿಗೆ ಲಸಿಕೆ ಹಾಕಿ ಶುಶೂಷೆ ಮಾಡಿ ಗುಣಪಡಿಸಲಾಯಿತು. ಅಂದಿನಿಂದ ಸಂಶೋಧನೆಗಳು ನಡೆದು, ಈಗ ಪರಿಣಾಮಕಾರಿಯಾದ ಮತ್ತು ಒಳ್ಳೆಯ ಗುಣಮಟ್ಟದ ಲಸಿಕೆ ಮಾರುಕಟ್ಟೆಯಲ್ಲಿ ಲಭ್ಯವಿದೆ.

    ರೇಬೀಸ್ ಬಗ್ಗೆ ಸುಪ್ರೀಂ ಕೋರ್ಟ್‌ ಹೇಳಿದ್ದೇನು?
    ಹೆಚ್ಚುತ್ತಿರು ಬೀದಿ ನಾಯಿಗಳ ದಾಳಿ ಹಾಗೂ ರೇಬಿಸ್‌ ವಿಚಾರವಾಗಿ ಇತ್ತೀಚೆಗೆ ಸುಪ್ರೀಂ ಕೋರ್ಟ್‌ ಸಹ ದೆಹಲಿ ಸರ್ಕಾರಕ್ಕೆ ಕ್ರಮ ಕೈಗೊಳ್ಳುವಂತೆ ಸೂಚಿಸಿತ್ತು. ರೇಬಿಸ್‌ನಿಂದ ಒಂದು ಮಗುವು ಸಾಯಬಾರದು. ನಾಯಿಗಳನ್ನು ಆಶ್ರಯ ತಾಣಕ್ಕೆ ಸೇರಿಸುವಂತೆ ಆದೇಶಿಸಿತ್ತು. ಬಳಿಕ ಶ್ವಾನ ಪ್ರಿಯರು ಈ ತೀರ್ಪಿಗೆ ವಿರೋಧ ವ್ಯಕ್ತಪಡಿಸಿದ್ದರು. ಬಳಿಕ ತೀರ್ಪನ್ನು ಮರುಪರಿಶೀಲಿಸಿ, ನಾಯಿಗಳಿಗೆ ಸಂತಾನಹರಣ ಚಿಕಿತ್ಸೆ ನೀಡಿ ಅವು ಇದ್ದಲ್ಲೇ ಮತ್ತೆ ಬಿಡುವಂತೆ‌ ಕೋರ್ಟ್ ಆದೇಶಿಸಲಾಗಿತ್ತು. 

    ರೇಬಿಸ್‌ ನಿಯಂತ್ರಣಕ್ಕಿರೋ ಸವಾಲುಗಳೇನು?
    ಇನ್ನೂ ನಾಯಿಗಳ ನಿಯಂತ್ರಣ ಹಾಗೂ ರೇಬೀಸ್ ತಡೆಗೆ ಭಾರತದಲ್ಲಿ ಅನೇಕ ಸವಾಲುಗಳು ಇವೆ. ಅವು ಏನೆಂದರೆ, ಕೆಲವರು ನಾಯಿ ಕಚ್ಚಿದರೆ ನಿರ್ಲಕ್ಷ್ಯ ತೋರುತ್ತಾರೆ. ಕಚ್ಚಿದ ನಾಯಿ ಆರೋಗ್ಯವಾಗಿತ್ತು. ಏನೂ ಸಮಸ್ಯೆ ಇಲ್ಲ ಎಂದು ಚಿಕಿತ್ಸೆಯಿಂದ ದೂರ ಉಳಿಯುತ್ತಾರೆ. ಇಲ್ಲವೇ ಕಚ್ಚಿದ ಜಾಗವನ್ನು ತೊಳೆದು ಸುಮ್ಮನಾಗ್ತಾರೆ. ಇನ್ನೂ ಕೆಲವರು ನಕಲಿ ವೈದ್ಯರ ಬಳಿ, ನಾಟಿ ಔಷಧಿ ತೆಗೆದುಕೊಂಡು ತಮ್ಮಪಾಡಿಗೆ ಇರುತ್ತಾರೆ. ಈ ಬಗ್ಗೆ ಜನರಿಗೆ ಸರಿಯಾದ ಮಾರ್ಗದರ್ಶನ ನೀಡಿ ಚಿಕಿತ್ಸೆಯ ಮಹತ್ವ ತಿಳಿಸಬೇಕು. ಆಗ ಮಾತ್ರ ರೇಬಿಸ್‌ ಮುಕ್ತ ಭಾರತ ಸಾಧ್ಯ. 

    ನಾಯಿ ಕಚ್ಚಿದ್ದಕ್ಕೆ 11, 3 ಹಾಗೂ 5 ಇಂಜೆಕ್ಷನ್‌ ತೆಗೆದುಕೊಳ್ಳಬೇಕಾಗುತ್ತಾದೆ. ಈ ಚುಚ್ಚುಮದ್ದು ದುಬಾರಿಯಾಗಿದೆ. ಈ ಇಂಜೆಕ್ಷನ್‌ ತೆಗೆದುಕೊಳ್ಳಲು  ವೈದ್ಯರು ವೇಳಾಪಟ್ಟಿಯನ್ನು ಕೊಟ್ಟಿರುತ್ತಾರೆ. ಆ ಸಮಯದಲ್ಲಿ ಎಷ್ಟೋ ಜನಕ್ಕೆ ತೆರಳಲು ಸಾಧ್ಯವಾಗದೇ, ಮತ್ತು ದುಬಾರಿ ಎಂಬ ಕಾರಣಕ್ಕೂ ಚಿಕಿತ್ಸೆಯನ್ನು ಮಾಡಿಸುವುದಿಲ್ಲ. ಸರ್ಕಾರಿ ಆಸ್ಪತ್ರೆಯಲ್ಲಿ ಈ ಚುಚ್ಚುಮದ್ದು ಉಚಿತವಾಗಿ ಲಭ್ಯವಿದೆ. 

  • ಬೀದಿ ನಾಯಿಗಳನ್ನ ಹಿಡಿಯಿರಿ, ಸಂತಾನಹರಣ ಶಸ್ತ್ರಚಿಕಿತ್ಸೆ ಬಳಿಕ ಬಿಟ್ಟುಬಿಡಿ: ಸುಪ್ರೀಂ ತೀರ್ಪಿನಲ್ಲಿ ಮಹತ್ವದ ತಿದ್ದುಪಡಿ

    ಬೀದಿ ನಾಯಿಗಳನ್ನ ಹಿಡಿಯಿರಿ, ಸಂತಾನಹರಣ ಶಸ್ತ್ರಚಿಕಿತ್ಸೆ ಬಳಿಕ ಬಿಟ್ಟುಬಿಡಿ: ಸುಪ್ರೀಂ ತೀರ್ಪಿನಲ್ಲಿ ಮಹತ್ವದ ತಿದ್ದುಪಡಿ

    – ಆಕ್ರಮಣಕಾರಿ, ಅನಾರೋಗ್ಯ ನಾಯಿಗಳನ್ನ ಮಾತ್ರ ಸ್ಥಳಾಂತರಿಸಿ
    – ಸಾರ್ವಜನಿಕವಾಗಿ ಆಹಾರ ಕೊಟ್ರೆ ಕಟ್ಟುನಿಟ್ಟಿನ ಕ್ರಮ

    ನವದೆಹಲಿ: ದೆಹಲಿ ಮತ್ತು‌ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೀದಿ ನಾಯಿಗಳನ್ನು ಶಾಶ್ವತವಾಗಿ‌ ಆಶ್ರಯ ತಾಣಗಳಿಗೆ ಸ್ಥಳಾಂತರಿಸಬೇಕೆಂ ತನ್ನದೇ ಸುಪ್ರೀಂ ಕೋರ್ಟ್‌ (Supreme Court) ತಿದ್ದುಪಡಿ ತಂದಿದೆ. ಬೀದಿ ನಾಯಿಗಳನ್ನು (Stray Dogs) ಹಿಡಿದು, ಸಂತಾನಹರಣ ಶಸ್ತ್ರಚಿಕಿತ್ಸೆ ಬಳಿಕ ಅವುಗಳನ್ನು ಬಿಡುಗಡೆ ಮಾಡಿ, ಆಕ್ರಮಣಕಾರಿ, ಅನಾರೋಗ್ಯ ಇರುವ ನಾಯಿಗಳನ್ನು ಮಾತ್ರ ಶೆಡ್‌ಗಳಿಗೆ ಸ್ಥಳಾಂತರಿಸುವಂತೆ ಕೋರ್ಟ್‌ ನಿರ್ದೇಶನ ನೀಡಿದೆ. ಈ ಸಂಬಂಧ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚನೆ ನೀಡಿದೆ.

    ನ್ಯಾ. ವಿಕ್ರಮ್ ನಾಥ್, ನ್ಯಾ. ಸಂದೀಪ್ ಮೆಹ್ತಾ ಮತ್ತು ನ್ಯಾ. ಎನ್‌.ವಿ ಅಂಜಾರಿಯಾ ನೇತೃತ್ವದ ತ್ರಿಸದಸ್ಯ ಪೀಠವು ಈ ಆದೇಶ ಪ್ರಕಟಿಸಿದ್ದು, ಆಗಸ್ಟ್‌ 11ರಂದು ಹೊರಡಿಸಿದ್ದ ತೀರ್ಪಿನಲ್ಲಿ ತಿದ್ದುಪಡಿ ಮಾಡಿದೆ. ನ್ಯಾ. ಪಾರ್ದಿವಾಲಾ ಪೀಠದ ಆದೇಶಕ್ಕೆ ಶ್ವಾನಪ್ರಿಯರಿಂದ ಅಸಮಾಧಾನ ವ್ಯಕ್ತವಾದ ಹಿನ್ನೆಲೆ ಪ್ರಕರಣ ವಿಚಾರಣೆಯನ್ನ ತ್ರಿಸದಸ್ಯ ಪೀಠಕ್ಕೆ ವರ್ಗಾಯಿಸಲಾಗಿತ್ತು. ಇದನ್ನೂ ಓದಿ: ಜಮ್ಮು & ಕಾಶ್ಮೀರ | ಕಾನ್ಸ್‌ಟೇಬಲ್‌ಗೆ ಕಸ್ಟಡಿಯಲ್ಲಿ ಚಿತ್ರಹಿಂಸೆ ನೀಡಿದ್ದ 6 ಪೊಲೀಸರು ಅರೆಸ್ಟ್‌

    ಈ ಮೊದಲು ಬೀದಿ ನಾಯಿಗಳನ್ನು ಶಾಶ್ವತವಾಗಿ ಆಶ್ರಯ ತಾಣಗಳಿಗೆ (ಶೆಡ್‌) ಸ್ಥಳಾಂತರಿಸಬೇಕು ಎಂದು ಹೇಳಿದ್ದ ಸುಪ್ರೀಂ ಈಗ, ಅನಾರೋಗ್ಯ ಮತ್ತು ಆಕ್ರಮಣಕಾರಿ ಬೀದಿ ನಾಯಿಗಳನ್ನು ಮಾತ್ರ ಆಶ್ರಯ ತಾಣಗಳಲ್ಲಿ ಇರಿಸುವಂತೆ ಸೂಚಿಸಿದೆ. ಉಳಿದ ನಾಯಿಗಳನ್ನು ಹಿಡಿದು, ಸಂತಾನಹರಣ ಚಿಕಿತ್ಸೆ, ಜಂತುಹುಳು ನಿವಾರಣಾ ಲಸಿಕೆ ಹಾಕಿದ ಬಳಿಕ ಅವುಗಳನ್ನು ಹಿಡಿದ ಪ್ರದೇಶದಲ್ಲೇ ಬಿಡುವಂತೆ ತಿಳಿಸಿದೆ.  ಇದನ್ನೂ ಓದಿ: ಮತಗಳವು ಆರೋಪ – ಸುಪ್ರೀಂ ಕೋರ್ಟ್‌ಗೆ ಪಿಐಎಲ್ ಸಲ್ಲಿಕೆ

    ಮುಂದುವರಿದು… ರೇಬೀಸ್ ಅಥವಾ ಅನಾರೋಗ್ಯವುಳ್ಳ ನಾಯಿಗಳು ಹಾಗೂ ಆಕ್ರಮಣಕಾರಿ ನಾಯಿಗಳನ್ನ ಮಾತ್ರ ಲಸಿಕೆ ಹಾಕಿ ಪ್ರತ್ಯೇಕ ಆಶ್ರಯತಾಣಗಳಲ್ಲಿ ಇರಿಸಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ತಾಕೀತು ಮಾಡಿದೆ. ಇದನ್ನೂ ಓದಿ: ಐದೇ ನಿಮಿಷದಲ್ಲಿ ಆಟೋ, ಇಲ್ಲವಾದಲ್ಲಿ 50 ರೂ. ಆಫರ್ ನೀಡಿ ವಂಚನೆ – ರಾಪಿಡೋಗೆ 10 ಲಕ್ಷ ದಂಡ

    ಸಾರ್ವಜನಿಕವಾಗಿ ಆಹಾರ ನೀಡುವಂತಿಲ್ಲ
    ಮುಂದುವರಿದು… ಬೀದಿ ನಾಯಿಗಳಿಗೆ ಸಾರ್ವಜನಿಕವಾಗಿ ಆಹಾರ ನೀಡುವುದಕ್ಕೆ ಸುಪ್ರೀಂ ನಿಷೇಧ ಹೇರಿದೆ. ನಿಮಯ ಉಲ್ಲಂಘಿಸುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿಯೂ ಎಚ್ಚರಿಕೆ ನೀಡಿದೆ. ಸಾರ್ವಜನಿಕವಾಗಿ ಅವುಗಳಿಗೆ ಆಹಾರ ನೀಡುವುದಕ್ಕೆ ಅನುಮತಿಯಿಲ್ಲ, ಪ್ರತ್ಯೇಕ ಮೀಸಲಾದ ಆಹಾರ ಸ್ಥಳಗಳನ್ನ ರಚಿಸಲಾಗುವುದು, ಅಲ್ಲಿ ಮಾತ್ರ ಆಹಾರ ನೀಡಬೇಕು ಎಂದು ಕೋರ್ಟ್‌ ಹೇಳಿದೆ.

    ಇನ್ನೂ ಪ್ರಾಣಿ ಪ್ರಿಯರು ನಾಯಿಗಳನ್ನು ದತ್ತು ಪಡೆಯಲು ಅರ್ಜಿ ಸಲ್ಲಿಸಲು ಅವಕಾಶ ನೀಡಿರುವ ಕೋರ್ಟ್‌, ದತ್ತು ಪಡೆದ ನಾಯಿಗಳನ್ನು ಮರಳಿ ಬೀದಿಗಳಿಗೆ ಹಿಂತಿರುಗಿಸದಂತೆ ನೋಡಿಕೊಳ್ಳುವುದು ಅವರ ಜವಾಬ್ದಾರಿ. ಅದಕ್ಕಾಗಿ ಪ್ರತಿ ಅರ್ಜಿದಾರ 25,000 ರೂ. ಮತ್ತು ಎನ್‌ಜಿಒಗಳು 2 ಲಕ್ಷ ರೂ. ಠೇವಣಿ ಇಡಬೇಕು ಎಂದು ನಿರ್ದೇಶಿಸಿತು. ಮುಖ್ಯವಾಗಿ ಈ ಕುರಿತು ರಾಷ್ಟ್ರೀಯ ನೀತಿ ರೂಪಿಸಲು ಸೂಚಿಸಿತು. ಇದನ್ನೂ ಓದಿ: ಅಡಿಕೆ ಬೆಳೆ GST ವ್ಯಾಪ್ತಿಯಿಂದ ಹೊರಗಿಡಿ, ಹಳದಿ ಎಲೆ ರೋಗ ಬಿದ್ದ ಭೂಮಿಗೆ ಪರಿಹಾರ ನೀಡಿ – ರಾಜ್ಯ ಸಂಸದರ ನಿಯೋಗ ಮನವಿ

  • ದಾವಣಗೆರೆ| ಬೀದಿ ನಾಯಿ ದಾಳಿಯಿಂದ ರೇಬಿಸ್; 4 ತಿಂಗಳಿಂದ ಆಸ್ಪತ್ರೆಯಲ್ಲಿದ್ದ ಬಾಲಕಿ ಸಾವು

    ದಾವಣಗೆರೆ| ಬೀದಿ ನಾಯಿ ದಾಳಿಯಿಂದ ರೇಬಿಸ್; 4 ತಿಂಗಳಿಂದ ಆಸ್ಪತ್ರೆಯಲ್ಲಿದ್ದ ಬಾಲಕಿ ಸಾವು

    ದಾವಣಗೆರೆ: ಬೀದಿ ನಾಯಿ ದಾಳಿಗೆ ಒಳಗಾಗಿ ರೇಬಿಸ್ (Rabies) ಕಾಯಿಲೆಯಿಂದ 4 ತಿಂಗಳಿಂದ ಆಸ್ಪತ್ರೆಯಲ್ಲಿದ್ದ ಬಾಲಕಿ ಚಿಕಿತ್ಸೆ ಫಲಿಸದೇ ಮೃತಪಟ್ಟಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ.

    ದಾವಣಗೆರೆ (Davanagere) ನಗರದ ಶಾಸ್ತ್ರಿ ಲೇಔಟ್‌ನ ನಿವಾಸಿ ಮೊಹಮ್ಮದ್ ಶಾಕೀರ್ ಆಲಿ, ಅತೀಹಾ ಖಾನಂ ದಂಪತಿಯ ಮಗಳು ಖದೀರಾ ಬಾನು (4) ಮೃತ ಬಾಲಕಿ.

    ಈಕೆ ಮೇಲೆ ಬೀದಿ ನಾಯಿಗಳ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದಳು. ಆಗ ಪೋಷಕರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದರು. ಹೆಚ್ಚಿನ ಚಿಕಿತ್ಸೆಯನ್ನು ದಾವಣಗೆರೆಯ ಖಾಸಗಿ ಆಸ್ಪತ್ರೆಯಲ್ಲಿ ಕೊಡಿಸಿ ಮನೆಗೆ ಕರೆತಂದಿದ್ದರು. ಆದರೆ ಒಂದು ತಿಂಗಳ ಹಿಂದೆ ಬಾಲಕಿ ವಾಂತಿ ಮಾಡಿಕೊಂಡು ಅಸ್ವಸ್ಥಳಾಗಿದ್ದಳು. ಗಾಬರಿಗೊಂಡ ಪೋಷಕರು ಬೆಂಗಳೂರಿನ ರಾಜೀವ್ ಗಾಂಧಿ ಆಸ್ಪತ್ರೆಗೆ ದಾಖಲು ಮಾಡಿದ್ದು, ತಪಾಸಣೆ ನಡೆಸಿದ ವೈದ್ಯರು ಮಗುವಿಗೆ ರೇಬಿಸ್ ತಗಲಿರುವುದು ಪತ್ತೆಯಾಗಿದೆ. ಇದನ್ನೂ ಓದಿ: ಈ ದೇಶಗಳಲ್ಲಿ ಬೀದಿ ನಾಯಿಗಳಿಗೆ ಗ್ಯಾಸ್‌ ಚೇಂಬರ್‌, ದಯಾಮರಣ ಶಿಕ್ಷೆ – ಯಾವ ದೇಶದಲ್ಲಿ ಏನು ಕಾನೂನು?

    ಕೂಡಲೇ ಐಸಿಯುನಲ್ಲಿ ಚಿಕಿತ್ಸೆ ನೀಡಿದ್ದು, ಚಿಕಿತ್ಸೆ ಫಲಕಾರಿಯಾಗದೇ ಬಾಲಕಿ ಮೃತಪಟ್ಟಿದ್ದಾಳೆ. ಪೋಷಕರು ಅಘಾತಕ್ಕೆ ಒಳಗಾಗಿದ್ದಾರೆ. ಇದ್ದ ಒಬ್ಬ ಮಗಳು ಈಗ ಬೀದಿ ನಾಯಿಗಳ ಹಾವಳಿಗೆ ಸಾವನ್ನಪ್ಪಿದ್ದಾಳೆಂದು ಕಣ್ಣೀರಿಟ್ಟಿದ್ದಾರೆ.

    ಹಲವು ವರ್ಷಗಳಿಂದ ದಾವಣಗೆರೆಯಲ್ಲಿ ಬೀದಿ ನಾಯಿಗಳ ಹಾವಳಿಯನ್ನು ತಡೆಗಟ್ಟಲು ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಮತ್ತೊಂದು ಮಗುವಿಗೆ ಈ ರೀತಿ ಆಗುವ ಮೊದಲೇ ಮುನ್ನೆಚ್ಚರಿಕೆ ವಹಿಸಿ ಎಂದು ಮೃತ ಮಗುವಿನ ತಂದೆ ಪಾಲಿಕೆ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

    ದಾವಣಗೆರೆಯಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಮಕ್ಕಳನ್ನು ಆಟವಾಡಲು ಹೊರಗೆ ಬಿಡಲು ಪೋಷಕರು ಭಯ ಪಡುವಂತಾಗಿದೆ. ರಾತ್ರಿ ಮನೆಯಿಂದ ಹೊರಬರಲು ಕಷ್ಟ ಎನ್ನುವಂತಹ ಪರಿಸ್ಥಿತಿ ಜಿಲ್ಲೆಯ ಅನೇಕ ಭಾಗಗಳಲ್ಲಿದೆ. ಇದನ್ನೂ ಓದಿ: ದೆಹಲಿಯಲ್ಲಿ ಬೀದಿ ನಾಯಿಗಳ ಹಾವಳಿ ಕೇಸ್‌ – ಹೊಸ ತ್ರಿಸದಸ್ಯ ಪೀಠ ರಚಿಸಿದ ಸಿಜೆಐ ಗವಾಯಿ

  • 2 ತಿಂಗಳಲ್ಲಿ ಇಡೀ ದೆಹಲಿಯನ್ನ ಬೀದಿನಾಯಿಗಳಿಂದ ಮುಕ್ತಗೊಳಿಸಬೇಕು – ಸುಪ್ರೀಂ ಆದೇಶ

    2 ತಿಂಗಳಲ್ಲಿ ಇಡೀ ದೆಹಲಿಯನ್ನ ಬೀದಿನಾಯಿಗಳಿಂದ ಮುಕ್ತಗೊಳಿಸಬೇಕು – ಸುಪ್ರೀಂ ಆದೇಶ

    – ರೇಬಿಸ್‌ಗೆ ಬಲಿಯಾದವರನ್ನ ಮರಳಿ ಕರೆತರುತ್ತಾರಾ? – ಪ್ರಾಣಿ ಸಂಘಟನೆಗಳಿಗೆ ಎಚ್ಚರಿಕೆ

    ನವದೆಹಲಿ: ಇನ್ನು 8 ವಾರಗಳಲ್ಲಿ ಇಡೀ ದೆಹಲಿಯನ್ನು ಬೀದಿನಾಯಿಗಳಿಂದ ಮುಕ್ತಗೊಳಿಸುವಂತೆ ದೆಹಲಿ ಸರ್ಕಾರ, ದೆಹಲಿ ಮಹಾನಗರ ಪಾಲಿಕೆ (MCD) ಹಾಗೂ ನವದೆಹಲಿ ಮಹಾನಗರ ಪಾಲಿಕೆಗಳಿಗೆ (NDMC) ಸುಪ್ರೀಂ ಕೋರ್ಟ್‌ (Supreme Court) ಆದೇಶಿಸಿದೆ.

    ದೆಹಲಿಯ ಎಲ್ಲಾ ಪ್ರದೇಶಗಳನ್ನು ಬೀದಿನಾಯಿ (Stray Dogs) ಮುಕ್ತ ಮಾಡಬೇಕು, ಈ ವಿಚಾರದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವಂತಿಲ್ಲ ಎಂದು ನ್ಯಾಯಮೂರ್ತಿಗಳಾದ ಜೆ.ಬಿ ಪಾರ್ದಿವಾಲಾ ಮತ್ತು ಆರ್. ಮಹಾದೇವನ್ ಅವರಿದ್ದ ದ್ವಿಸದಸ್ಯ ಪೀಠ ಹೇಳಿದೆ. ಇದನ್ನೂ ಓದಿ: ಸೇನೆ ಸೇರಲು ಸ್ವದೇಶಿ ನಿರ್ಮಿತ ಉದಯಗಿರಿ, ಹಿಮಗಿರಿ ಯುದ್ಧ ನೌಕೆಗಳು ಸಿದ್ಧ; ನೌಕಾಪಡೆಗೆ ಇನ್ನಷ್ಟು ಬಲ

    8 ವಾರಗಳ ಒಳಗೆ ಎಲ್ಲಾ ಬೀದಿ ನಾಯಿಗಳನ್ನು ವಸತಿ ಪ್ರದೇಶಗಳಿಂದ ಆಶ್ರಯ ಕೇಂದ್ರಗಳಿಗೆ ಸ್ಥಳಾಂತರಿಸಬೇಕು. ಇದಕ್ಕಾಗಿ ಒಂದು ಕಾರ್ಯಪಡೆ ರಚಿಸುವ ಅಗತ್ಯವಿದ್ದರೇ ಕೂಡಲೇ ಆ ಕೆಲಸ ಮಾಡಿ. ಈ ಪ್ರಕ್ರಿಯೆಯನ್ನು ತಡೆಯುವ ಯಾವುದೇ ಸಂಘಟನೆಯ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದೂ ಸಹ ವಾರ್ನಿಂಗ್‌ ಕೊಟ್ಟಿದೆ. ಇದನ್ನೂ ಓದಿ: ನಾಗ್ಪುರ | ಅಪಘಾತದಲ್ಲಿ ಮೃತಪಟ್ಟ ಪತ್ನಿಯ ಮೃತದೇಹವನ್ನ ಬೈಕ್‌ನಲ್ಲೇ ಸಾಗಿಸಿದ ಪತಿ

    ರಾಷ್ಟ್ರ ರಾಜಧಾನಿ ಪ್ರದೇಶದ ಎಲ್ಲ ಸ್ಥಳಗಳಿಂದ ಬೀದಿ ನಾಯಿಗಳನ್ನ ತೆರವು ಮಾಡಬೇಕು. ಈ ಕಾರ್ಯಕ್ಕೆ ಅಡ್ಡಿಪಡಿಸುವ ಪ್ರಾಣಿ ದಯಾ ಹೋರಾಟಗಾರರ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮ ಕೈಗೊಳ್ಳಲಾಗುವುದು. ದೆಹಲಿ ಸರ್ಕಾರ, ಎಂಸಿಡಿ, ಎನ್‌ಡಿಎಂಸಿಗಳು 8 ವಾರಗಳಲ್ಲಿ ಶ್ವಾನ ಆಶ್ರಯ ಕೇಂದ್ರಗಳನ್ನು ರಚಿಸಬೇಕು. ಈ ಕೇಂದ್ರಗಳನ್ನು ಸಿಸಿಟಿವಿ ಮೂಲಕ ಮೇಲ್ವಿಚಾರಣೆ ಮಾಡಬೇಕು ಎಂದು ಕೋರ್ಟ್‌ ಹೇಳಿದೆ. ಇದನ್ನೂ ಓದಿ:  ಕಾಶ್ಮೀರದಲ್ಲಿ 11ನೇ ದಿನಕ್ಕೆ ಕಾಲಿಟ್ಟ ಸೇನಾ ಕಾರ್ಯಾಚರಣೆ – ಉಗ್ರರ ಗುಹೆಗಳು ಉಡೀಸ್‌

    ಅಲ್ಲದೇ ಸೆರೆಹಿಡಿಯಲಾದ ಬೀದಿ ನಾಯಿಗಳ ದೈನಂದಿನ ದಾಖಲೆಗಳನ್ನು ನಿರ್ವಹಿಸಬೇಕು. ಒಂದೇ ಒಂದು ಬೀದಿ ನಾಯಿಯನ್ನೂ ಬಿಡಬಾರದು. ನಾಯಿ ಕಡಿತ ಪ್ರಕರಣಗಳನ್ನು ವರದಿ ಮಾಡಲು ವಾರದೊಳಗೆ ಸಹಾಯವಾಣಿಗೆ ವ್ಯವಸ್ಥೆ ಮಾಡಬೇಕು. ರೇಬಿಸ್‌ ಲಸಿಕೆ ದೊರೆಯುವ ಸ್ಥಳಗಳ ಕುರಿತು ವರದಿ ಪ್ರಕಟಿಸಬೇಕು ಎಂದು ನ್ಯಾಯಾಲಯ ತಾಕೀತು ಸಹ ಮಾಡಿದೆ.

    ರೇಬಿಸ್‌ಗೆ ಬಲಿಯಾದವರನ್ನ ಮರಳಿ ಕರೆತರುತ್ತಾರಾ?
    ಇದೇ ವೇಳೆ ಬೀದಿ ನಾಯಿಗಳ ತೆರವಿಗೆ ಪ್ರಾಣಿಪ್ರಿಯ ಹೋರಾಟಗಾರರು ಅಡ್ಡಿಪಡಿಸುತ್ತಿರುವುದನ್ನು ಗಮನಿಸಿದ ಕೋರ್ಟ್‌, ಇಷ್ಟೆಲ್ಲಾ ಪ್ರಾಣಿ ದಯಾ ಹೋರಾಟಗಾರರಿಗೆ ರೇಬಿಸ್‌ ರೋಗಕ್ಕೆ ಬಲಿಯಾದವರನ್ನು ಮರಳಿ ಕರೆತರಲು ಸಾಧ್ಯವಿದೆಯೇ? ಸಾರ್ವಜನಿಕ ಹಿತಾಸಕ್ತಿಗಾಗಿ ಈ ಆದೇಶ ನೀಡಲಾಗುತ್ತಿದೆ. ನಾಯಿಗಳನ್ನು ದೂರದ ಸ್ಥಳಗಳಿಗೆ ಸ್ಥಳಾಂತರಿಸಬೇಕು ಎಂದು ಹೇಳಿದೆ. ಇದರಲ್ಲಿ ಯಾವುದೇ ರೀತಿಯ ಭಾವನೆಗಳಿಗೆ ಆಸ್ಪದವಿಲ್ಲ ಎಂದು ಕೋರ್ಟ್‌ ಹೇಳಿದೆ.

  • ದೆಹಲಿ | ಯಾವುದೇ ಕಾರಣಕ್ಕೂ ಚಿಕ್ಕ ಮಕ್ಕಳು ರೇಬಿಸ್‌ನಿಂದ ಸಾಯಬಾರದು: ಸುಪ್ರೀಂ ಕೋರ್ಟ್‌

    ದೆಹಲಿ | ಯಾವುದೇ ಕಾರಣಕ್ಕೂ ಚಿಕ್ಕ ಮಕ್ಕಳು ರೇಬಿಸ್‌ನಿಂದ ಸಾಯಬಾರದು: ಸುಪ್ರೀಂ ಕೋರ್ಟ್‌

    ನವದೆಹಲಿ: ದೆಹಲಿಯಲ್ಲಿ (Delhi) ಹೆಚ್ಚುತ್ತಿರುವ ಬೀದಿ ನಾಯಿಗಳ ದಾಳಿಯ (Stray Dogs) ಬಗ್ಗೆ ಸುಪ್ರೀಂ ಕೋರ್ಟ್‌ (Supreme Court) ಕಳವಳ ವ್ಯಕ್ತಪಡಿಸಿದ್ದು, ಬೀದಿ ನಾಯಿಗಳನ್ನು 2 ತಿಂಗಳಲ್ಲಿ ಆಶ್ರಯತಾಣಗಳಿಗೆ ಸೇರಿಸುವಂತೆ ನ್ಯಾಯಾಲಯ ಆದೇಶಿಸಿದೆ. ಇದೇ ವೇಳೆ, ಯಾವುದೇ ಕಾರಣಕ್ಕೂ ಚಿಕ್ಕ ಮಕ್ಕಳು ರೇಬಿಸ್‌ನಿಂದ ಸಾಯಬಾರದು ಎಂದು ಕೋರ್ಟ್‌ ಖಡಕ್‌ ಎಚ್ಚರಿಕೆ ನೀಡಿದೆ.

    ಬೀದಿ ನಾಯಿಗಳ ದಾಳಿಯ ಬಳಿಕ ಹೆಚ್ಚುತ್ತಿರುವ ರೇಬೀಸ್ (Rabies) ಹಾಗೂ ಸಾವಿನ ಕುರಿತಾದ ವರದಿಯನ್ನು ಗಮನಿಸಿದ ನಂತರ ನ್ಯಾಯಮೂರ್ತಿ ಜೆ.ಬಿ. ಪಾರ್ದಿವಾಲಾ ಮತ್ತು ನ್ಯಾಯಮೂರ್ತಿ ಆರ್. ಮಹಾದೇವನ್ ಅವರಿದ್ದ ದ್ವಿಸದಸ್ಯ ಪೀಠ ಈ ಪ್ರಕರಣದ ವಿಚಾರಣೆ ನಡೆಸಿತು. ವಿಚಾರಣೆ ವೇಳೆ, ನಗರದಲ್ಲಿ ನಡೆಯುತ್ತಿರುವ ಬೀದಿ ನಾಯಿಗಳ ದಾಳಿಯನ್ನು ʻಅತ್ಯಂತ ಭೀಕರʼ ಎಂದು ಪೀಠ ಹೇಳಿದೆ. ಅಲ್ಲದೇ ನಾಯಿಗಳನ್ನು ಆಶ್ರಯ ತಾಣಗಳಿಗೆ ಸೇರಿಸುವಾಗ ಸಂಬಂಧಪಟ್ಟ ಸಿಬ್ಬಂದಿಯನ್ನು ತಡೆಯಲು ಯತ್ನಿಸಿದರೆ ಅಂತಹ ವ್ಯಕ್ತಿ ಅಥವಾ ಸಂಸ್ಥೆಗಳ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆಯನ್ನು ಕೋರ್ಟ್‌ ನೀಡಿದೆ. ಇದನ್ನೂ ಓದಿ: ಧರ್ಮಸ್ಥಳ ಕೇಸ್‌ | ಮಾನಹಾನಿಕರ ವರದಿ ಪ್ರಸಾರ ತಡೆ ಕೋರಿ ಅರ್ಜಿ – ರಾಜ್ಯದ ವಿಚಾರಣಾ ನ್ಯಾಯಾಲಯಕ್ಕೆ ವರ್ಗಾಯಿಸಿದ ಸುಪ್ರೀಂ

    ತೀರ್ಪಿನ ವೇಳೆ ಸುಪ್ರೀಂ ಕೋರ್ಟ್ ಹೇಳಿದ್ದೇನು?
    ಮಕ್ಕಳು ಮತ್ತು ವೃದ್ಧರ ಸುರಕ್ಷತೆಗಾಗಿ ಬೀದಿ ನಾಯಿ ಮುಕ್ತ ಪ್ರದೇಶ ಮಾಡಲು ಕ್ರಮಕೈಗೊಳ್ಳಬೇಕು. ಈ ವಿಚಾರವಾಗಿ ಪ್ರಾಣಿ ಪ್ರಿಯರು ಸುಮ್ಮನೇ ಏನೋ ಮಾತಾಡಬಾರು. ಅವರಿಗೆ ಬೀದಿ ನಾಯಿಗಳ ದಾಳಿಯಲ್ಲಿ ಮೃತಪಟ್ಟ ಮಕ್ಕಳನ್ನು ವಾಪಸ್‌ ಕೊಡಲು ಸಾಧ್ಯವೇ? ಎಂದು ಪ್ರಶ್ನಿಸಿದೆ.

    ದೆಹಲಿ NCR ಪ್ರದೇಶದ ಅಧಿಕಾರಿಗಳು 2 ತಿಂಗಳಲ್ಲಿ ನಾಯಿಗಳ ಆಶ್ರಯ ನಿರ್ಮಿಸಿ ಮೂಲಸೌಕರ್ಯಗಳ ನಿರ್ಮಿಸಿದ ಬಗ್ಗೆ ವರದಿ ನೀಡಬೇಕು. ಅಲ್ಲಿ ನಾಯಿಗಳಿಗಾಗಿ ಸಾಕಷ್ಟು ಸಿಬ್ಬಂದಿಯನ್ನು ಇರಿಸಬೇಕು. ಅಲ್ಲಿಂದ ಯಾವುದೇ ನಾಯಿಗಳನ್ನು ಹೊರಗೆ ಕರೆದೊಯ್ಯದಂತೆ ಸಿಸಿಟಿವಿ ಮೂಲಕ ಮೇಲ್ವಿಚಾರಣೆ ಮಾಡಬೇಕು ಎಂದು ಆದೇಶದ ವೇಳೆ ಕೋರ್ಟ್‌ ಹೇಳಿದೆ.

    ಚಿಕ್ಕ ಮಕ್ಕಳು ಯಾವುದೇ ಕಾರಣಕ್ಕೂ ರೇಬೀಸ್‌ಗೆ ಬಲಿಯಾಗಬಾರದು. ಬೀದಿ ನಾಯಿಗಳಿಂದ ಕಚ್ಚಲ್ಪಡುವ ಭಯವಿಲ್ಲದೆ ಅವರು ಮುಕ್ತವಾಗಿ ಓಡಾಡಬಹುದು ಎಂಬ ವಿಶ್ವಾಸ ಈ ಕ್ರಮದಿಂದ ಬರಬೇಕು. ಇನ್ನೂ, ನಾಯಿ ಕಡಿತ ಮತ್ತು ರೇಬೀಸ್‌ನ ಎಲ್ಲಾ ಪ್ರಕರಣಗಳ ಮಾಹಿತಿ ಪಡೆಯಲು 1 ವಾರದೊಳಗೆ ಸಹಾಯವಾಣಿಯನ್ನು ರಚಿಸಬೇಕು. ಸಹಾಯವಾಣಿಗೆ ಬರುವ ದೂರು ಸ್ವೀಕರಿಸಿದ ನಂತರ ನಾಯಿಯನ್ನು ಹಿಡಿಯಲು 4 ಗಂಟೆಗಳ ಒಳಗೆ ಕ್ರಮ ಕೈಗೊಳ್ಳಬೇಕು. ಇದಕ್ಕೆ ಅಡ್ಡ ಬರುವ ಯಾವುದೇ ವ್ಯಕ್ತಿ ಅಥವಾ ಸಂಘಟನೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಸಲಾಗಿದೆ.

    ಆಶ್ರಯ ತಾಣಗಳಲ್ಲಿ ನಾಯಿಗಳಿಗೆ ಸಂತನೋತ್ಪತಿ ತಡೆಗೆ ಚಿಕಿತ್ಸೆ ನೀಡಲಾಗುತ್ತದೆ. ಆದರೆ ಅವುಗಳನ್ನು ಬಿಡುಗಡೆ ಮಾಡಲಾಗುವುದಿಲ್ಲ ಎಂದು ಆದೇಶದ ವೇಳೆ ಕೋರ್ಟ್‌ ಹೇಳಿದೆ. ಇದನ್ನೂ ಓದಿ: ಈ ವರ್ಷ ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ಸ್ಥಾಪನೆ ಇಲ್ಲ: ಹೈಕೋರ್ಟ್‌ಗೆ ಎಜಿ ಶಶಿಕಿರಣ್‌ ಶೆಟ್ಟಿ ಸ್ಪಷ್ಟನೆ

  • ರೇಬೀಸ್‌ ಲಸಿಕೆ ಪಡೆದರೂ ಬದುಕಲಿಲ್ಲ 7 ವರ್ಷದ ಬಾಲಕಿ

    ರೇಬೀಸ್‌ ಲಸಿಕೆ ಪಡೆದರೂ ಬದುಕಲಿಲ್ಲ 7 ವರ್ಷದ ಬಾಲಕಿ

    ತಿರುವನಂತಪುರಂ: ರೇಬೀಸ್ (Rabies) ಲಸಿಕೆ ಪಡೆದರೂ ಚಿಕಿತ್ಸೆ ಪಡೆಯುತ್ತಿದ್ದ ಏಳು ವರ್ಷದ ಬಾಲಕಿ ಸಾವನ್ನಪ್ಪಿದ ಘಟನೆ ಕೇರಳದಲ್ಲಿ  (Kerala) ನಡೆದಿದೆ.

    ಕೊಲ್ಲಂನ ಕುನ್ನಿಕೋಡ್‌ನ ನಿಯಾ ಫೈಸಲ್‌ ಮೃತ ಬಾಲಕಿ. ರೇಬೀಸ್‌ ಪತ್ತೆಯಾದ ಬಳಿಕ ಆಕೆಯನ್ನು ವೆಂಟಿಲೇಟರ್‌ನಲ್ಲಿ ಇಟ್ಟು ಚಿಕಿತ್ಸೆ ನೀಡಲಾಗುತ್ತಿತ್ತು. ಈ ಸಾವಿನೊಂದಿಗೆ ಕಳೆದ ಒಂದು ತಿಂಗಳೊಳಗೆ ಕೇರಳದಲ್ಲಿ ರೇಬೀಸ್ ಸೋಂಕಿನಿಂದ ಸಾವನ್ನಪ್ಪಿದ ಮಕ್ಕಳ ಸಂಖ್ಯೆ ಮೂರಕ್ಕೆ ಏರಿದೆ.

    ಏಪ್ರಿಲ್ 8 ರಂದು ಬಾಲಕಿ ಅಂಗಳದಲ್ಲಿ ಆಟವಾಡುತ್ತಿದ್ದಾಗ ಬೀದಿ ನಾಯಿ ಕಚ್ಚಿತ್ತು. ಅಂಗಳದಲ್ಲಿದ್ದ ಬಾತುಕೋಳಿ ಮೇಲೆ ದಾಳಿ ಮಾಡಲು ಮುಂದಾಗಿದ್ದಾಗ ಬಾಲಕಿ ರಕ್ಷಿಸಲು ಹೋಗಿದ್ದಳು. ಈ ವೇಳೆ ನಾಯಿ ಬಾಲಕಿಯ ಮೊಣಕೈಗೆ ಕಚ್ಚಿತ್ತು. ಇದನ್ನೂ ಓದಿ: ಆರ್ಮಿಗೆ ಸೇರೋಕಾಗಿಲ್ಲ ಅಂತ 30ಕ್ಕೂ ಹೆಚ್ಚು ಶ್ವಾನಗಳನ್ನು ದೇಶ ಸೇವೆಗೆ ನೀಡಿದ ಅಧಿಕಾರಿ!

     

    ಬಾಲಕಿಯನ್ನು ಕೂಡಲೇ ವಿಲಕ್ಕುಡಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ರೇಬೀಸ್ ಲಸಿಕೆಯ (Vaccine) ಮೊದಲ ಡೋಸ್ ನೀಡಲಾಯಿತು. ನಂತರ ಏ.11 ಮತ್ತು 15 ರಂದು ಕ್ರಮವಾಗಿ ಎರಡನೇ ಮತ್ತು ಮೂರನೇ ಡೋಸ್ ನೀಡಲಾಯಿತು. ಅಂತಿಮ ಡೋಸ್ ಅನ್ನು ಮೇ 6 ರಂದು ನೀಡಲು ನಿಗದಿಪಡಿಸಲಾಗಿತ್ತು. ಇದನ್ನೂ ಓದಿ: ಉಗ್ರರಿಗೆ ಆಹಾರ, ಆಶ್ರಯ ನೀಡಿದ್ದ ವ್ಯಕ್ತಿ ನದಿಗೆ ಹಾರಿ ನೀರಿನಲ್ಲಿ ಮುಳುಗಿ ಸಾವು

    ಎರಡನೇ ಡೋಸ್‌ ಪಡೆದ ಕೆಲ ದಿನಗಳಲ್ಲಿ ಆಕೆಗೆ ಜ್ವರ ಬಂದಿದೆ. ನಾಯಿ ಕಚ್ಚಿದ ಮೊಣಕೈಯಲ್ಲಿ ನೋವು ಅನುಭವಿಸಲು ಪ್ರಾರಂಭಿಸಿದಳು. ನಂತರ ಆಕೆಯನ್ನು ಪುನಲೂರು ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಯಿತು ಮತ್ತು ನಂತರ ವಿಶೇಷ ಆರೈಕೆಗಾಗಿ SAT ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು.

    ಬಾಲಕಿಯನ್ನು ಕಚ್ಚಿದ್ದ ನಾಯಿಯನ್ನು ಸ್ಥಳೀಯ ನಿವಾಸಿಗಳು ಓಡಿಸಿದ್ದರೂ ಮರುದಿನ ಹತ್ತಿರದ ಹೊಲದಲ್ಲಿ ಅದು ಶವವಾಗಿ ಪತ್ತೆಯಾಗಿತ್ತು.

     

  • ಕೆಲಸಕ್ಕೆ ಹೋಗಿದ್ದಾಗ ಕಚ್ಚಿತು ನಾಯಿಮರಿ – ರೇಬಿಸ್‌ಗೆ ಸುಳ್ಯದ ಸಂಪಾಜೆಯ ಮಹಿಳೆ ಬಲಿ

    ಕೆಲಸಕ್ಕೆ ಹೋಗಿದ್ದಾಗ ಕಚ್ಚಿತು ನಾಯಿಮರಿ – ರೇಬಿಸ್‌ಗೆ ಸುಳ್ಯದ ಸಂಪಾಜೆಯ ಮಹಿಳೆ ಬಲಿ

    ಮಂಗಳೂರು: ರೇಬಿಸ್ (Rabies) ರೋಗಕ್ಕೆ ಸುಳ್ಯ ತಾಲೂಕಿನ (Sullia) ಸಂಪಾಜೆಯ ಮಹಿಳೆಯೊಬ್ಬರು ಮಂಗಳೂರಿನಲ್ಲಿ ಮೃತಪಟ್ಟಿದ್ದಾರೆ.

    ಸಂಪಾಜೆಯ (Sampaje) ಕಲ್ಲುಗುಂಡಿ ಬಳಿಯ 42 ವರ್ಷದ ಮಹಿಳೆ ಮಾ.7 ರಂದು ಅರಂತೋಡಿಗೆ ತೋಟದ ಕೆಲಸಕ್ಕೆ ತೆರಳಿದ್ದರು. ಈ ಸಂದರ್ಭದಲ್ಲಿ ಬೀದಿಯಲ್ಲಿದ್ದ ನಾಯಿಮರಿ ಕಚ್ಚಿದೆ. ನಾಯಿ ಮರಿ ಕಚ್ಚಿದ್ದರೂ ಮಹಿಳೆ ಯಾರಿಗೆ ತಿಳಿಸದೇ, ಚಿಕಿತ್ಸೆ ಪಡೆಯದೇ ನಿರ್ಲಕ್ಷ್ಯ ವಹಿಸಿದ್ದರು.

    ಮಾ.17(ಸೋಮವಾರ) ಮಹಿಳೆಗೆ ತೀವ್ರ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಅನಾರೋಗ್ಯದ ಹಿನ್ನೆಲೆಯಲ್ಲಿ ಮಹಿಳೆ ಚಿಕಿತ್ಸೆಗಾಗಿ ಸುಳ್ಯದ ಸರ್ಕಾರಿ ಆಸ್ಪತ್ರೆಗೆ ಬಂದಿದ್ದಾರೆ. ಈ ವೇಳೆ ನೀರನ್ನು ನೋಡಿ ಕಿರುಚಾಡಲು ಆರಂಭಿಸಿದ್ದಾರೆ.  ಇದನ್ನೂ ಓದಿ: ಒಂದೇ ಒಂದು ಇಂಚು ಬೇರೆಯವರ ಜಾಗಕ್ಕೆ ನಾವು ಬೇಲಿ ಹಾಕಿಲ್ಲ: ನಿಖಿಲ್ ಕುಮಾರಸ್ವಾಮಿ

     

    ವಿಚಿತ್ರ ವರ್ತನೆ ತೋರುತ್ತಿದ್ದ ಹಿನ್ನೆಲೆಯಲ್ಲಿ ಮಹಿಳೆ ಬಳಿ ಮತ್ತಷ್ಟು ಪ್ರಶ್ನೆ ಕೇಳಿದಾಗ ನಾಯಿ ಕಚ್ಚಿದ್ದನ್ನು ತಿಳಿಸಿದ್ದಾರೆ. ಪರಿಸ್ಥಿತಿ ಗಂಭೀರವಾಗಿದ್ದ ಕಾರಣ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ವೆನ್ಲಾಕ್‌ ಆಸ್ಪತ್ರೆಗೆ (mangaluru Wenlock Hospital) ದಾಖಲಾಗುವಂತೆ ಸೂಚಿಸಿದ್ದಾರೆ.

    ಸುಳ್ಯ ವೈದ್ಯರ ಶಿಫಾರಸಿನಂತೆ ಮಹಿಳೆಯನ್ನು ವೆನ್ಲಾಕ್‌ ಆಸ್ಪತ್ರಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು (ಮಾ.22) ಬೆಳಗ್ಗೆ ಮಹಿಳೆ ಮೃತಪಟ್ಟಿದ್ದಾರೆ.

    ವೈದ್ಯಕೀಯ ವರದಿಗಳು ಮಹಿಳೆಗೆ ರೇಬಿಸ್ ಸೋಂಕು ತಗುಲಿದ್ದನ್ನು ದೃಢಪಡಿಸಿದೆ. ಮುನ್ನೆಚ್ಚರಿಕೆಯಾಗಿ ಅಧಿಕಾರಿಗಳು ಅವರು ನೆಲೆಸಿದ್ದ ಪ್ರದೇಶ ಮತ್ತು ಕುಟುಂಬದ ಹಲವಾರು ಜನರಿಗೆ ರೇಬಿಸ್ ವಿರೋಧಿ ಲಸಿಕೆಗಳನ್ನು ನೀಡಿದ್ದಾರೆ ಎಂದು ತಾಲೂಕು ಆರೋಗ್ಯ ಅಧಿಕಾರಿ ಡಾ. ನಂದಕುಮಾರ್ ತಿಳಿಸಿದ್ದಾರೆ.

    ಅರಂತೋಡಿನಲ್ಲಿ ಆ ನಾಯಿಮರಿ ಇತರರನ್ನು ಕಚ್ಚಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ನಾಯಿ ಕಚ್ಚಿದವರು ಕೂಡಲೇ ಲಸಿಕೆ ಪಡೆಯುವಂತೆ ಆರೋಗ್ಯ ಅಧಿಕಾರಿಗಳು ಮನವಿ ಮಾಡಿದ್ದಾರೆ.

  • ರೇಬಿಸ್ ರೋಗಕ್ಕೆ ಆರಂಭದಲ್ಲಿಯೇ ಚಿಕಿತ್ಸೆ ಪಡೆದರೆ ಗುಣಪಡಿಸಬಹುದು : ಮಂಜುನಾಥ ಸಾವಂತ

    ರೇಬಿಸ್ ರೋಗಕ್ಕೆ ಆರಂಭದಲ್ಲಿಯೇ ಚಿಕಿತ್ಸೆ ಪಡೆದರೆ ಗುಣಪಡಿಸಬಹುದು : ಮಂಜುನಾಥ ಸಾವಂತ

    ವಿಜಯಪುರ: ರೇಬಿಸ್ (Rabies) ರೋಗಕ್ಕೆ ಆರಂಭದಲ್ಲಿಯೇ ಚಿಕಿತ್ಸೆ ಪಡೆದರೆ ಗುಣಪಡಿಸಬಹುದಾಗಿದೆ. ಇಲ್ಲದಿದ್ದರೆ ಅದು ನೇರವಾಗಿ ನರಮಂಡಲದ ಮೇಲೆ ಪರಿಣಾಮ ಬೀರಿ ಮಾರಣಾಂತಿಕವಾಗಬಹುದು ಎಂದು ಶ್ರೀ ಬಿ. ಎಂ.ಪಾಟೀಲ ವೈದ್ಯಕೀಯ ಕಾಲೇಜಿನ (Shri B. M. Patil Medical College) ಶಸ್ತ್ರಚಿಕಿತ್ಸೆ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಮಂಜುನಾಥ ಸಾವಂತ ಹೇಳಿದ್ದಾರೆ.

    ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಉಕ್ಕಲಿಯ ಬಿ.ಎಲ್.ಡಿ.ಇ (BLDE) ಪಿಯು ಕಾಲೇಜಿನಲ್ಲಿ ಶ್ರೀ ಬಿ.ಎಂ.ಪಾಟೀಲ ವೈದ್ಯಕೀಯ ಮಹಾವಿದ್ಯಾಲಯದ ಸಮುದಾಯ ವೈದ್ಯಕೀಯ ವಿಭಾಗ ಹಾಗೂ ಶಸ್ತ್ರ ಚಿಕಿತ್ಸೆ ವಿಭಾಗಗಳ ಸಂಯುಕ್ತ ಆಶ್ರಯದಲ್ಲಿ ನಡೆದ ವಿಶ್ವ ರೇಬಿಸ್ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.ಇದನ್ನೂ ಓದಿ: ವಿರೋಧದ ನಡ್ವೆ ಮೈಸೂರಲ್ಲಿ ಮಹಿಷ ದಸರಾ ಆಚರಣೆ – ಜಿಲ್ಲಾಡಳಿತ, ಪೊಲೀಸರ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ

    ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರೇಬಿಸ್ ಸಸ್ತನಿಗಳಲ್ಲಿ ವೈರಾಣುವಿನಿಂದ ಹರಡುವ ಕಾಯಿಲೆಯಾಗಿದೆ. ಈ ರೋಗ ಹರಡಲು ಲಿಸ್ಸಾವೈರಸ್ ಮುಖ್ಯ ಕಾರಣವಾಗಿದೆ. ನಾಯಿ, ಬೆಕ್ಕುಗಳ ಕಡಿತ ಅಥವಾ ಲಾಲಾರಸದ ಸಂಪರ್ಕದಿಂದ ಹಾಗೂ ಸಸ್ತನಿಗಳು ಅದರಲ್ಲೂ ವಿಶೇಷವಾಗಿ ಕಾಡುಪ್ರಾಣಿಗಳ ಮೂಲಕ ಈ ಸೋಂಕು ಹರಡುತ್ತದೆ. ರೇಬಿಸ್ ಕಾಯಿಲೆಯ ಹರಡುವಿಕೆ, ಅದನ್ನು ತಡೆಗಟ್ಟುವ ವಿಧಾನ, ಪ್ರಾಣಿ ಹಾಗೂ ಮನುಷ್ಯರಿಗೆ ಲಭ್ಯವಿರುವ ರೇಬೀಸ್ ಲಸಿಕೆಯ ಬಗ್ಗೆ ಮಾಹಿತಿ ನೀಡಿದರು.

    ಸಮುದಾಯ ವೈದ್ಯಕೀಯ ಕಾರ್ಯಕರ್ತ ಸಂಜೀವ ಖಾನಗೌಡ್ರ ಮಾತನಾಡಿ, ರೇಬಿಸ್ ರೋಗ ಬಂದ ನಂತರ ಪರದಾಡುವುದಕ್ಕಿಂತ, ರೋಗ ಬರದಂತೆ ಮುನ್ನೆಚ್ಚರಿಕೆ ವಹಿಸುವುದು ಅತೀ ಮುಖ್ಯವಾಗಿದೆ. ಇದರ ಭಾಗವಾಗಿ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವುದು ಈ ವಿಶ್ವ ರೆಬಿಸ್ ದಿನಾಚರಣೆಯ ಮುಖ್ಯ ಉದ್ದೇಶವಾಗಿದೆ. ಈ ರೋಗದ ಕುರಿತು ಸಮುದಾಯದ ಜನರಲ್ಲಿ ಜನಜಾಗೃತಿ ಮೂಡಿಸುವುದು ಅಗತ್ಯವಾಗಿದೆ ಎಂದು ಹೇಳಿದರು.

    ಕಾರ್ಯಕ್ರಮದಲ್ಲಿ ಬಿ.ಎಲ್. ಡಿ. ಇ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯ ಎ. ಎಸ್. ನಾವಿ, ಸಹಾಯಕ ಪ್ರಾಧ್ಯಾಪಕಿ ಡಾ. ಪೂಜಾ ತೊದಲಬಾಗಿ, ವೈದ್ಯಕೀಯ ಸ್ನಾತಕೋತರ ವಿದ್ಯಾರ್ಥಿಗಳಾದ ಡಾ. ಈಶ್ವರ, ಡಾ. ಸ್ಮಿತ್, ಡಾ. ಶಮಿನ್, ಜಿ. ಬಿ. ಮನಗೂಳಿ, ಡಿ. ಬಿ ಚೆಣೆಗಾಂವ, ಡಿ. ಐ. ಮಠಪತಿ ಮುಂತಾದವರು ಉಪಸ್ಥಿತರಿದ್ದರು.ಇದನ್ನೂ ಓದಿ: ವೈಯಾಲಿಕಾವಲ್ ಮಹಾಲಕ್ಷ್ಮಿ ಕೊಲೆ ಪ್ರಕರಣ – ಹತ್ಯೆ ಬಳಿಕ ಪಶ್ಚಾತ್ತಾಪ ಪಟ್ಟಿದ್ದ ಹಂತಕ

  • ಪ್ರಾಣಿ ಕಡಿತಕ್ಕೆ ಒಳಗಾದವರಿಗೆ ಉಚಿತ ಚಿಕಿತ್ಸೆ ನೀಡಿ: ಆಸ್ಪತ್ರೆಗಳಿಗೆ ಆರೋಗ್ಯ ಇಲಾಖೆ ಸೂಚನೆ

    ಪ್ರಾಣಿ ಕಡಿತಕ್ಕೆ ಒಳಗಾದವರಿಗೆ ಉಚಿತ ಚಿಕಿತ್ಸೆ ನೀಡಿ: ಆಸ್ಪತ್ರೆಗಳಿಗೆ ಆರೋಗ್ಯ ಇಲಾಖೆ ಸೂಚನೆ

    ಬೆಂಗಳೂರು: ನಾಯಿ ಹಾಗೂ ಪ್ರಾಣಿಗಳ ಕಡಿತಕ್ಕೆ ಒಳಗಾದವರಿಗೆ ಚಿಕಿತ್ಸೆ ನಿರಾಕರಣೆ ಮಾಡದಂತೆ ವೈದ್ಯರಿಗೆ ಆರೋಗ್ಯ ಇಲಾಖೆ (Health Department) ಸೂಚಿಸಿದೆ. ಅಲ್ಲದೇ ಪ್ರಾಣಿಗಳ ಕಡಿತಕ್ಕೆ ಬಳಕೆಯಾಗುವ ಅಗತ್ಯ ಔಷಧಗಳನ್ನು ಸರ್ಕಾರಿ ಆಸ್ಪತ್ರೆಯಲ್ಲಿ ಲಭ್ಯವಿರುವಂತೆ ನೋಡಿಕೊಳ್ಳಲು ಆದೇಶದಲ್ಲಿ ತಿಳಿಸಿದೆ. ಎಪಿಎಲ್ ಹಾಗೂ ಬಿಪಿಎಲ್ ಕಾರ್ಡ್ ಎಂದು ಪರಿಗಣಿಸದೆ ಎಲ್ಲರಿಗೂ ಉಚಿತ ಚಿಕಿತ್ಸೆ ನೀಡುವಂತೆ ಆದೇಶದಲ್ಲಿ ಸೂಚಿಸಲಾಗಿದೆ.

    ರೇಬಿಸ್ (Rabies) ಒಂದು ಮಾರಣಾಂತಿಕ ಕಾಯಿಲೆಯಾಗಿದೆ. ಆದರೆ ಸೂಕ್ತ ಸಮಯದಲ್ಲಿ ಅಗತ್ಯ ಚಿಕಿತ್ಸೆ ನೀಡಿದರೆ ರೋಗಿಯ ಪ್ರಾಣವನ್ನು ಉಳಿಸಬಹುದು. 2030ರ ವೇಳೆಗೆ ನಾಯಿ ಕಡಿತದಿಂದ ಬರುವ ರೇಬೀಸ್‍ನ ನಿರ್ಮೂಲನೆ ಮಾಡುವುದು ರಾಷ್ಟ್ರೀಯ ರೇಬಿಸ್ ನಿಯಂತ್ರಣ ಕಾರ್ಯಕ್ರಮದ ಗುರಿಯಾಗಿದೆ. ಇದನ್ನೂ ಓದಿ: ಗರ್ಭಿಣಿ ಸಾವಿಗೆ ವೈದ್ಯರ ನಿರ್ಲಕ್ಷ್ಯ ಸಾಬೀತು – 11 ಲಕ್ಷ ದಂಡ

    ಕರ್ನಾಟಕದಲ್ಲಿ (Karnataka) ರೇಬಿಸ್ ಕಾಯಿಲೆ ಮುಕ್ತ ಎಂದು ಈಗಾಗಲೇ ಘೋಷಿಸಲಾಗಿದೆ. ಈ ನಿಟ್ಟಿನಲ್ಲಿ ರೇಬಿಸ್ ಕಾಯಿಲೆಯಿಂದ ಜೀವ ರಕ್ಷಿಸಬಲ್ಲ ಔಷಧಿಯಾದ ರೇಬಿಸ್ ನಿರೋಧಕ ಲಸಿಕೆ (ARV) ಮತ್ತು ರೇಬಿಸ್ ಇಮೂನೂಗ್ಲಾಬಿಲಿನ್‍ಗಳನ್ನು ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಸಾಕಷ್ಟು ದಾಸ್ತಾನು ಲಭ್ಯವಿರುವಂತೆ ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ.

    ಪ್ರಾಣಿಗಳ ಕಡಿತದಿಂದ ತೊಂದರೆಗೊಳಗಾದವರಿಗೆ ಚಿಕಿತ್ಸೆಯನ್ನು ನಿರಾಕರಿಸದೇ ಎಲ್ಲರಿಗೂ ಉಚಿತ ಲಸಿಕೆ ಒದಗಿಸಲು ತಿಳಿಸಲಾಗಿದೆ. ಈ ಔಷಧಿಗಳನ್ನು ವಿವೇಚನೆಯಿಂದ ಬಳಸಲು ರೇಬೀಸ್ ರೋಗನಿರೋಧಕ ಮಾರ್ಗಸೂಚಿಗಳನ್ನು ಇಲಾಖೆ ಹೊರಡಿಸಿದೆ. ಇದನ್ನೂ ಓದಿ: ಸಿಕ್ಕಿಂ ಹಠಾತ್ ಪ್ರವಾಹಕ್ಕೆ ಬಲಿಯಾದವರ ಸಂಖ್ಯೆ 53ಕ್ಕೆ ಏರಿಕೆ – 140 ಮಂದಿ ಕಣ್ಮರೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನಾಯಿ ಕಚ್ಚಿದ ವಿಚಾರ ಪೋಷಕರಿಂದ ಮುಚ್ಚಿಟ್ಟ- ತಿಂಗಳ ಬಳಿಕ ರೇಬಿಸ್‍ನಿಂದ ಬಾಲಕ ಸಾವು

    ನಾಯಿ ಕಚ್ಚಿದ ವಿಚಾರ ಪೋಷಕರಿಂದ ಮುಚ್ಚಿಟ್ಟ- ತಿಂಗಳ ಬಳಿಕ ರೇಬಿಸ್‍ನಿಂದ ಬಾಲಕ ಸಾವು

    ಗಾಜಿಯಾಬಾದ್: ಒಂದು ತಿಂಗಳ ಹಿಂದೆ ನಾಯಿ (Dog) ಕಚ್ಚಿದ ಘಟನೆಯನ್ನು ಪೋಷಕರಿಗೆ ಮುಚ್ಚಿಟ್ಟಿದ್ದ 14 ವರ್ಷದ ಬಾಲಕ ರೇಬಿಸ್‍ನಿಂದ (Rabies) ಮೃತಪಟ್ಟಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ.

    8ನೇ ತರಗತಿಯ ವಿದ್ಯಾರ್ಥಿ ಶಹವಾಜ್‍ನನ್ನು ಆರೋಗ್ಯ ಹದಗೆಟ್ಟ ಪರಿಣಾಮ ಸೋಮವಾರ ಸಂಜೆ ಪೋಷಕರು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಅಂತೆಯೇ ಅಲ್ಲಿ ಚಿಕಿತ್ಸೆ ಪಡೆದು ಬುಲಂದ್‍ಶಹರ್‍ನಿಂದ ಗಾಜಿಯಾಬಾದ್‍ಗೆ ಮರಳಿ ಕರೆತರುತ್ತಿದ್ದಾಗ ಮೃತಪಟ್ಟಿದ್ದಾನೆ. ಇದನ್ನೂ ಓದಿ: ಇಂಗ್ಲೆಂಡ್‍ನ ಅತೀ ದೊಡ್ಡ ನಗರಕ್ಕೆ ಆರ್ಥಿಕ ಸಂಕಷ್ಟ – ತುರ್ತು ಪರಿಸ್ಥಿತಿ ಘೋಷಣೆ

    ವಿಜಯ್ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಚರಣ್ ಸಿಂಗ್ ಕಾಲೋನಿ ನಿವಾಸಿ ಶಹವಾಜ್‍ಗೆ ಒಂದೂವರೆ ತಿಂಗಳ ಹಿಂದೆ ನೆರೆಮನೆಯ ನಾಯಿ ಕಚ್ಚಿತ್ತು. ಆದರೆ ಈತ ಭಯದಿಂದ ಅದನ್ನು ಪೋಷಕರಿಂದ ಮುಚ್ಚಿಟ್ಟಿದ್ದನು. ಕ್ರಮೇಣ ಈತನ ಆರೋಗ್ಯದಲ್ಲಿ ವ್ಯತ್ಯಾಸಗಳಾಗಲು ಶುರುವಾಯಿತು. ಅಲ್ಲದೆ ಸೆಪ್ಟೆಂಬರ್ 1 ರಿಂದ ಊಟ ಮಾಡುವುದುನ್ನು ಕೂಡ ನಿಲ್ಲಿಸಿದ್ದಾನೆ. ಮಗನ ವರ್ತನೆಯಿಂದ ಬೇಸತ್ತ ಪೋಷಕರು ಏನಾಯ್ತು ಎಂದು ಕೇಳಿದ್ದಾರೆ. ಈ ವೇಳೆ ಆತ ತನಗೆ ತಿಂಗಳ ಹಿಂದೆ ಪಕ್ಕದ ಮನೆಯ ನಾಯಿ ಕಚ್ಚಿರುವ ವಿಚಾರವನ್ನು ತಿಳಿಸಿದ್ದಾನೆ.

    ಕೂಡಲೇ ಶಹವಾಜ್‍ನನ್ನು ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಅಲ್ಲಿ ಆತನನ್ನು ವೈದ್ಯರು ದಾಖಲಿಸಿಕೊಳ್ಳದೆ ಔಷಧಿ ಕೊಟ್ಟು ಕಳುಹಿಸಿದ್ದಾರೆ. ಆ ಬಳಿಕ ಕಳೆದ ವಾರ ಆಯುರ್ವೇದಿಕ್ ಔಷಧಿಯ ಮೊರೆ ಹೋಗಿರುವುದಾಗಿ ಪೊಲೀಸರ ಬಳಿ ಪೋಷಕರು ತಿಳಿಸಿದ್ದಾರೆ.

    ಅಂಬುಲೆನ್ಸ್‍ನಲ್ಲಿ ಗಾಜಿಯಾಬಾದ್‍ಗೆ ವಾಪಸ್ ಕರೆತರುವಾಗ ಬಾಲಕ ಮೃತಪಟ್ಟಿದ್ದಾನೆ. ಈ ಸಂಬಂಧ ದೂರು ದಾಖಲಾಗಿದ್ದು, ನಾಯಿ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಕೊತ್ವಾಲಿ ವಲಯದ ಸಹಾಯಕ ಪೊಲೀಸ್ ಆಯುಕ್ತ ನಿಮಿಷ್ ಪಾಟೀಲ್ ತಿಳಿಸಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]