Tag: Raaga

  • 3,000 ಕೋಟಿ ಸಾಲ ವಂಚನೆ ಕೇಸ್‌ – ಅನಿಲ್‌ ಅಂಬಾನಿಗೆ ಸೇರಿದ 50 ಕಂಪನಿಗಳ ಮೇಲೆ ED ದಾಳಿ

    3,000 ಕೋಟಿ ಸಾಲ ವಂಚನೆ ಕೇಸ್‌ – ಅನಿಲ್‌ ಅಂಬಾನಿಗೆ ಸೇರಿದ 50 ಕಂಪನಿಗಳ ಮೇಲೆ ED ದಾಳಿ

    – 35ಕ್ಕೂ ಹೆಚ್ಚು ಸ್ಥಳಗಳಲ್ಲಿ ತೀವ್ರ ಶೋಧ

    ಮುಂಬೈ: ಯೆಸ್ ಬ್ಯಾಂಕ್‌ಗೆ 3,000 ಕೋಟಿ ಸಾಲ ವಂಚನೆ ಪ್ರಕರಣಕ್ಕೆ (Yes Bank fraud probe) ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯವು ಉದ್ಯಮಿ ಅನಿಲ್ ಅಂಬಾನಿ (Anil Ambani) ಮಾಲೀಕತ್ವದ ರಿಲಯನ್ಸ್ ಗ್ರೂಪ್​ಗೆ ಸೇರಿದ ಹಲವು ಕಂಪನಿಗಳ ಮೇಲೆ ದಾಳಿ ಮಾಡಿದೆ.

    ಸುಮಾರು 35ಕ್ಕೂ ಹೆಚ್ಚು ಸ್ಥಳಗಳು, ರಿಲಯನ್ಸ್ ಅನಿಲ್ ಅಂಬಾನಿ ಗ್ರೂಪ್ (RAAGA)ನ 50 ಕಂಪನಿಗಳ ಮೇಲೆ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ ಅಡಿಯಲ್ಲಿ ಇಡಿ ದಾಳಿ ನಡೆಸಿರುವುದಾಗಿ ರೆಡ್‌ಬಾಕ್ಸ್ ಗ್ಲೋಬಲ್ ಇಂಡಿಯಾ X ನಲ್ಲಿ ಪೋಸ್ಟ್ ಹಂಚಿಕೊಂಡಿದೆ. ಇದನ್ನೂ ಓದಿ: ED ಭರ್ಜರಿ ಬೇಟೆ – ಟಿಎಂಸಿ ಮಾಜಿ ಸಂಸದನ ಪುತ್ರನಿಗೆ ಸೇರಿದ 127 ಕೋಟಿ ಮೌಲ್ಯದ ಷೇರು ಜಪ್ತಿ

    ಯೆಸ್‌ ಬ್ಯಾಂಕ್‌ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ತನಿಖಾ ದಳ (ಸಿಬಿಐ) ದಾಖಲಿಸಿದ್ದ 2 ಎಫ್‌ಐಆರ್‌ಗಳನ್ನು ಆಧರಿಸಿ ಹಾಗೂ ಬ್ಯಾಂಕ್ ಆಫ್ ಬರೋಡಾ, ನ್ಯಾಷನಲ್ ಹೌಸಿಂಗ್ ಬ್ಯಾಂಕ್ ಮತ್ತಿತರ ಏಜೆನ್ಸಿಗಳಿಂದ ದೊರೆತ ಮಾಹಿತಿ ಆಧಾರದ ಮೇಲೆ ತೀವ್ರ ಶೋಧ ನಡೆಸುತ್ತಿದೆ. 25ಕ್ಕೂ ಹೆಚ್ಚು ಮಂದಿಯನ್ನೂ ವಿಚಾರಣೆಗೆ ಒಳಪಡಿಸಲಾಗಿದೆ.

    2017 ಮತ್ತು 2019ರ ನಡುವೆ ರಿಲಯನ್ಸ್ ಅನಿಲ್ ಅಂಬಾನಿ ಗ್ರೂಪ್ ಅಡಿಯಲ್ಲಿರುವ ಸಂಸ್ಥೆಗಳಿಗೆ ಯೆಸ್‌ ಬ್ಯಾಂಕ್‌ 3,000 ಕೋಟಿ ರೂ. ಸಾಲ ನೀಡಿತ್ತು. ಆದ್ರೆ ಈ ಸಾಲದ ಹಣವನ್ನ ಗ್ರೂಪ್‌ನ ಇತರ ಶೆಲ್‌ ಕಂಪನಿಗಳಿಗೆ (ಬೇನಾಮಿ ಕಂಪನಿ) ಅಕ್ರಮವಾಗಿ ವರ್ಗಾವಣೆ ಮಾಡಲಾಗಿತ್ತು. ಈ ಮೂಲಕ ಬ್ಯಾಂಕ್‌ಗಳು, ಷೇರುದಾರರು, ಹೂಡಿಕೆದಾರರು ಮತ್ತು ಇತರ ಸಾರ್ವಜನಿಕ ಸಂಸ್ಥೆಗಳನ್ನ ವಂಚಿಸುವ ಮೂಲಕ ಸಾರ್ವಜನಿಕ ಹಣವನ್ನು ದುರ್ಬಳಕೆ ಮಾಡಿಕೊಂಡಿರುವುದಾಗಿ ಇಡಿ ಪತ್ತೆಹಚ್ಚಿದೆ. ಪ್ರಾಥಮಿಕ ತನಿಖೆಯಲ್ಲಿ ಇದಕ್ಕೆ ಸಾಕ್ಷ್ಯಾಧಾರಗಳೂ ಸಿಕ್ಕಿವೆ ಅಂತ ಇಡಿ ಹೇಳಿದೆ. ಇದನ್ನೂ ಓದಿ: ಬಿಜೆಪಿಯಿಂದ ಮುಂದಿನ ಉಪರಾಷ್ಟ್ರಪತಿ ಆಯ್ಕೆ – ಮೋದಿ ವಿದೇಶಿ ಪ್ರವಾಸದ ಬಳಿಕ ಅಂತಿಮ ನಿರ್ಧಾರ

    ಸಾಲ ಅನುಮೋದನೆ ವಿಚಾರದಲ್ಲಿ ಯೆಸ್ ಬ್ಯಾಂಕ್ ಪ್ರಕ್ರಿಯೆ ಅನುಮಾನಾಸ್ಪದವಾಗಿದೆ. ಸರಿಯಾದ ಹಣಕಾಸು ಸ್ಥಿತಿ ಇಲ್ಲದ ಕಂಪನಿಗಳು, ಸಾಮಾನ್ಯ ನಿರ್ದೇಶಕರಿರುವ ಕಂಪನಿಗಳಿಗೆ ಸಾಲ ಮಂಜೂರು ಮಾಡಲಾಗಿದೆ. ಸರಿಯಾಗಿ ಅವಲೋಕನ ಮಾಡುವ ಪ್ರಯತ್ನ ಆಗಿಲ್ಲ. ಸಾಲಕ್ಕೆ ಅನುಮೋದನೆ ಆಗುವ ಮುನ್ನವೇ ಅಥವಾ ಅದೇ ದಿನವೇ ಸಾಲದ ಹಣ ಬಿಡುಗಡೆ ಮಾಡಲಾಗಿದೆ ಎಂದು ಯೆಸ್ ಬ್ಯಾಂಕ್​ನ ವ್ಯವಸ್ಥೆಯಲ್ಲಿರುವ ಲೋಪಗಳನ್ನು ಇಡಿ ಎತ್ತಿ ತೋರಿಸಿದೆ. ಇಡಿ ನೀಡಿರುವ ಮಾಹಿತಿ ಪ್ರಕಾರ ರಿಲಯನ್ಸ್ ಗ್ರೂಪ್​ಗೆ ಸೇರಿದ 50 ಕಂಪನಿಗಳ ಮೇಲೆ ಇಡಿ ದಾಳಿ ನಡೆಸಿದ್ದು ಶೋಧ ಆರಂಭಿಸಿದೆ.

    ಇಡಿ ಆರೋಪದ ಮುಖ್ಯಾಂಶಗಳು
    * 3,000 ಕೋಟಿ ಸಾಲ ಮಂಜೂರು ಮಾಡಲು ಯೆಸ್‌ ಬ್ಯಾಂಕ್‌ನ ಸಿಇಓ ಹಾಗೂ ಇತರರು ಭಾಗಿಯಾಗಿದ್ದಾರೆ. ದೊಡ್ಡ ಮಟ್ಟದ ಸಾಲ ಮಂಜೂರು ಮಾಡಿಸಲು ಕೆಲ ಬ್ಯಾಂಕ್‌ ಅಧಿಕಾರಿಗಳು ಲಂಚ ಪಡೆದಿರಬಹುದು ಎಂದು ಇಡಿ ಶಂಕಿಸಿದೆ.
    * ಈ ಬೆನ್ನಲ್ಲೇ ರಿಲಯನ್ಸ್ ಹೋಮ್ ಫೈನಾನ್ಸ್ ಲಿಮಿಟೆಡ್ (RHFL) ನಲ್ಲಿ ಭಾರೀ ಅಕ್ರಮ ನಡೆದಿರುವ ಬಗ್ಗೆ ಷೇರು ಪೇಟೆ ಮಂಡಳಿ SEBI (ಸೆಬಿ) ವರದಿಯೊಂದನ್ನ ಸಲ್ಲಿದೆ. ವರದಿಯ ಪ್ರಕಾರ, ಸಂಸ್ಥೆಯ ಕಾರ್ಪೊರೇಟ್ ಸಾಲ ಬಂಡವಾಳವು 2017-18ನೇ ಹಣಕಾಸು ವರ್ಷದಲ್ಲಿ 3,742 ಕೋಟಿ ರೂ.ಗಳಷ್ಟಿತ್ತು. ಆದ್ರೆ 2018-19ನೇ ಹಣಕಾಸು ವರ್ಷದಲ್ಲಿ ಇದರ ಪ್ರಮಾಣ 8,670 ಕೋಟಿ ರೂ.ಗಳಿಗೆ ಏರಿಕೆಯಾಗಿದೆ ಎಂದು ಸೆಬಿ ತನ್ನ ವರದಿಯಲ್ಲಿ ಹೇಳಿದೆ.  ಇದನ್ನೂ ಓದಿ: ಬ್ರಿಟನ್‌ನಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ – ಇಂದೇ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಸಾಧ್ಯತೆ

  • ಬೀದಿಯಲ್ಲಿ ಅಲ್ಲ, ಕನ್ನಡ ಸಿನಿಮಾಗಳಿಗೆ ಥಿಯೇಟರ್‍ನಲ್ಲಿ ಹೋರಾಟ ಮಾಡ್ಬೇಕು: ಮಿತ್ರ ಬೇಸರ

    ಬೀದಿಯಲ್ಲಿ ಅಲ್ಲ, ಕನ್ನಡ ಸಿನಿಮಾಗಳಿಗೆ ಥಿಯೇಟರ್‍ನಲ್ಲಿ ಹೋರಾಟ ಮಾಡ್ಬೇಕು: ಮಿತ್ರ ಬೇಸರ

    ಬೆಂಗಳೂರು: ಕನ್ನಡ ಸಿನಿಮಾಗಳಿಗೆ ಹೋರಾಟದ ಮಾಡಬೇಕಾಗಿರುವುದು ಬೀದಿಯಲ್ಲಿ ಅಲ್ಲ. ಥಿಯೇಟರ್ ಗಳಲ್ಲಿ ಹೋರಾಟ ಮಾಡಬೇಕಿದೆ ಎಂದು ರಾಗಾ ಸಿನಿಮಾದ ನಟ ಮಿತ್ರ ಹೇಳಿದ್ದಾರೆ.

    ಥಿಯೇಟರ್ ಗಳಲ್ಲಿ ರಾಗಾ ಸಿನಿಮಾವನ್ನು ಎತ್ತಂಗಡಿ ಮಾಡಿದ್ದಕ್ಕೆ ಪಬ್ಲಿಕ್ ಟಿವಿಯಲ್ಲಿ ಬೆಳಗ್ಗೆ ನಡೆದ ವಿಶೇಷ ಜಿಂದಗಿ ಕಾರ್ಯಕ್ರಮದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ನಾವು ನೂರಾರು ಸ್ಕ್ರೀನ್ ಗಳನ್ನು ಕೇಳುತ್ತಿಲ್ಲ. ಕನ್ನಡಿಗರ ಸ್ವಾಭಿಮಾನ ಏನು ಎನ್ನುವುದೇ ಗೊತ್ತಿಲ್ಲ. ಒಂದು ವೇಳೆ ಚಿತ್ರ ಕಳಪೆಯಾಗಿದ್ದರೆ ನಾವು ಕೇಳುತ್ತಿರಲಿಲ್ಲ. ಅದು ನಮ್ಮ ಸ್ವಯಂಕೃತ ಅಪರಾಧವಾಗುತಿತ್ತು. ಆದರೆ ಚಿತ್ರ ನೋಡಿದವರು ಚೆನ್ನಾಗಿದೆ ಎಂದು ಹೇಳಿದ್ದಾರೆ. ಉತ್ತಮವಾಗಿ ಪ್ರದರ್ಶನ ನೀಡುತ್ತಿರುವಾಗಲೇ ಚಿತ್ರವನ್ನು ಎತ್ತಂಗಡಿ ಮಾಡಿದ್ದು ಎಷ್ಟು ಸರಿ ಎಂದು ಅವು ಪ್ರಶ್ನಿಸಿದ್ದಾರೆ.

    ಕಲಾವಿದನಿಗೆ ಭಾಷೆಯ ಮಿತಿ ಇಲ್ಲ. ನಾನು ಬಾಹುಬಲಿಯ ವಿರೋಧಿ ಅಲ್ಲ. ಆದ್ರೆ ರಾಗಾ ಚಿತ್ರ ತಮಿಳಿನಲ್ಲಿ ಬರುತ್ತಿದ್ದರೆ ಜನ್ರು ಕ್ಯೂನಲ್ಲಿ ನಿಂತುಕೊಂಡು ಥಿಯೇಟರ್‍ಗೆ ಬರುತ್ತಿದ್ದರು ಎಂದು ಬೇಸರ ವ್ಯಕ್ತಪಡಿಸಿದರು.

    ಇದೇ ವೇಳೆ ಕರ್ನಾಟಕ ಸರ್ಕಾರ ಬಜೆಟ್ ನಲ್ಲಿ ಘೋಷಣೆ ಮಾಡಿರುವಂತೆ ಟಿಕೆಟ್ ಗಳಿಗೆ 200 ರೂ. ಗರಿಷ್ಟ ದರವನ್ನು ನಿಗದಿ ಮಾಡಿದ್ದಾರೆ. ಹೀಗಾಗಿ ಥಿಯೇಟರ್‍ಗಳಲ್ಲಿ ಬಾಹುಬಲಿಗೆ ಎಷ್ಟು ಕಲೆಕ್ಷನ್ ಆಗುತ್ತದೋ ಅಷ್ಟೇ ಕಲೆಕ್ಷನ್ ನಿಮ್ಮ ಚಿತ್ರದಿಂದಲೂ ಆಗುತ್ತದೆ ಆದರೂ ಯಾಕೆ ಹೀಗೆ ಎಂದು ಪ್ರಶ್ನಿಸಿದ್ದಕ್ಕೆ, ಈ ಪ್ರಶ್ನೆಯನ್ನು ಬಾಹುಬಲಿ ಬಿಡುಗಡೆಗೆ ವಿರೋಧಿಸಿದ ಕನ್ನಡಪರ ಹೋರಾಟಗಾರರಲ್ಲಿ ಕೇಳಬೇಕು. ಈ ಪ್ರಶ್ನೆಗೆ ಉತ್ತರ ಹೇಳಲು ಕಷ್ಟವಾಗುತ್ತದೆ ಎಂದು ತಿಳಿಸಿದರು.

    ರಾಗ ಸಿನಿಮಾ ಥಿಯೇಟರ್ ನಿಂದ ಎತ್ತಂಗಡಿ ವಿಚಾರಕ್ಕೆ ಸಂಬಂಧಿಸಿದಂತೆ ಫಿಲ್ಮ್ ಚೇಂಬರ್ ಗೆ ನಟ ನಿರ್ಮಾಪಕ ಮಿತ್ರ ಹಾಗೂ ನಿರ್ದೇಶಕ ಪಿ ಸಿ ಶೇಕರ್ ದೂರು ನೀಡಿದ್ದು, ಈಗ ಕೆಲ ಚಿತ್ರಗಳಲ್ಲಿ ಈ ಚಿತ್ರ ಪ್ರದರ್ಶನ ನಡೆಸಲು ಒಪ್ಪಿಗೆ ಸಿಕ್ಕಿದೆ.

    ದೂರು ನೀಡಿದ ಬಳಿಕ ಪ್ರತಿಕ್ರಿಯಿಸಿದ ಮಿತ್ರ ಅವರು, ನಾನು ಅಳಲನ್ನು ತೋಡಿಕೊಂಡೆ. ಹೀಗಾಗಿ ಈ ಕುರಿತು ನಮಗೆ ಸಾ ರಾ ಗೋವಿಂದು ಸಹಾಯ ಮಾಡಿದ್ದಾರೆ. 4 ಕಡೆಗಳಲ್ಲಿ ಶೋಗಳಿಗೆ ಅವಕಾಶ ಮಾಡಿ ಕೊಟ್ಟಿದ್ದಾರೆ. ಮಾಧ್ಯಮದವರಿಗೆ, ಸಾರಾ ಗೋವಿಂದು ಅವರಿಗೆ ನನ್ನ ಧನ್ಯವಾದಗಳು. ನಾನು ಅವರಿಗೆ ಚಿರಋಣಿ ಎಂದು ತಿಳಿಸಿದರು.

    ರಾಗ ಒಂದು ಒಳ್ಳೆ ಸಿನಿಮಾ ಇದು. ಗೋಪಾಲನ್, ಐನಾಕ್ಸ್, ಮಂತ್ರಿ ಮಾಲ್ ಗಳಲ್ಲಿ ಚಿತ್ರ ಪ್ರದರ್ಶನಕ್ಕೆ ಒಪ್ಪಿಗೆ ಸಿಕ್ಕಿದೆ. ನನಗೆ ನಂಬಿಕೆ ಇದೆ ಖಂಡಿತ ಕನ್ನಡಿಗರು ನನ್ನ ಸಿನಿಮಾ ಉಳಿಸುತ್ತಾರೆ. ಸಿಂಗಲ್ ಸ್ಕ್ರೀನ್ ಗಳಲ್ಲಿ ಚಿತ್ರ ಪ್ರದರ್ಶನಕ್ಕೆ ನಾನು ಜಯಣ್ಣ ಅವರ ಜೊತೆ ಮಾತನಾಡುತ್ತೇನೆ ಎಂದು ಮಿತ್ರ ಹೇಳಿದರು.

    ಒಬ್ಬ ನಿರ್ದೇಶಕನಿಗೆ ಚಿತ್ರ ದೊಡ್ಡ ಕನಸು. ರಾಗ ಚಿತ್ರ ಈ ರೀತಿ ಆಗಿರುವುದು ಬೇಸರ ತಂದಿದೆ. ಮಾತುಕಥೆಯ ನಂತ್ರ ಚಿತ್ರ ಪ್ರದರ್ಶಿಸಲು ಒಪ್ಪಿಗೆ ಸಿಕ್ಕಿದೆ. ಸಿಂಗಲ್ ಸ್ಕ್ರೀನ್ ಪ್ರದರ್ಶನದ ಬಗ್ಗೆ ಮಾತುಕಥೆ ನಡೆಯುತ್ತಿದೆ ಎಂದು ನಿರ್ದೇಶಕ ಪಿ ಸಿ ಶೇಖರ್ ತಿಳಿಸಿದರು.

    ಫಿಲಂ ಚೇಂಬರ್ ಅಧ್ಯಕ್ಷ ಸಾರಾ ಗೋವಿಂದ್ ಮಾತನಾಡಿ, ನಾನು ಯಾವತ್ತೂ ಹಿಂದೆ ಮುಂದೆ ಮಾತನಾಡುವವನಲ್ಲ. ಮಿತ್ರನ ಪ್ರಥಮ ಚಿತ್ರ ಬಹಳ ಚೆನ್ನಾಗಿ ಮೂಡಿಬಂದಿದೆ. ಪರಭಾಷಾ ವ್ಯಾಮೊಹವೋ ಅಥವಾ ಕನ್ನಡ ಅಭಿಮಾನದ ಕೊರತೆಯೊ ಗೊತ್ತಿಲ್ಲ. ಒಳ್ಳೆಯ ಕನ್ನಡ ಚಿತ್ರಕ್ಕೆ ಪ್ರೇಕ್ಷಕರು ಬರುತ್ತಿಲ್ಲ. ನಾನು ಈ ಕುರಿತು ಮಲ್ಟಿಪ್ಲೆಕ್ಸ್ ಗಳಲ್ಲಿ ಮಾತನಾಡುವಾಗ ಕಲೆಕ್ಷನ್ ಇಲ್ಲ ಎನ್ನುವ ಮಾತುಗಳು ಕೇಳಿ ಬಂದಿದೆ. ಹೀಗಾಗಿ ನಾನು ನಗರದ ಎಲ್ಲ ಮಲ್ಟಿಪ್ಲೆಕ್ಸ್‍ಗಳಲ್ಲಿ ಮನವಿ ಮಾಡಿಕೊಂಡಿದ್ದೇನೆ. ಎಲ್ಲರೂ ಈ ಮನವಿಗೆ ಒಂದೊಂದು ಶೋ ಪ್ರದರ್ಶಿಸಲು ಒಪ್ಪಿದ್ದಾರೆ ಎಂದು ಹೇಳಿದರು.

    ಬಜೆಟ್‍ನಲ್ಲಿ ಘೋಷಣೆಯಾಗಿರುವ ಮಲ್ಟಿಪ್ಲೆಕ್ಸ್ ಥಿಯೇಟರ್ ಗರಿಷ್ಟ ಟಿಕೆಟ್ ದರ 200 ರೂ. ಯಾವಾಗ ಜಾರಿಯಾಗಲಿದೆ ಎನ್ನುವ ಪ್ರಶ್ನೆಗೆ, ಇಂದು ಅಥವಾ ನಾಳೆ ಯಾವುದೇ ಕ್ಷಣದಲ್ಲಿ ಈ ಅದೇಶ ಜಾರಿಯಾಗಬಹುದು ಎಂದು ಸಾರಾ ಗೋವಿಂದು ತಿಳಿಸಿದರು.

    ಇದನ್ನೂ ಓದಿ: ಮಲ್ಟಿಪ್ಲೆಕ್ಸ್ ಗಳಲ್ಲಿ ಗರಿಷ್ಟ ಟಿಕೆಟ್ ದರ 200 ರೂ. ಆಗಲು ಕಾರಣ ಏನು?

    https://www.youtube.com/watch?v=SScXGMbFhws

    https://www.youtube.com/watch?v=WboEqfigkRA