Tag: R V Deshpande

  • 7 ನಿಗಮ ಮುಚ್ಚಲು, 9 ನಿಗಮ ವಿಲೀನ ಮಾಡಲು ಕರ್ನಾಟಕ ಆಡಳಿತ ಸುಧಾರಣಾ ಆಯೋಗದಿಂದ ಸರ್ಕಾರಕ್ಕೆ ಶಿಫಾರಸು

    7 ನಿಗಮ ಮುಚ್ಚಲು, 9 ನಿಗಮ ವಿಲೀನ ಮಾಡಲು ಕರ್ನಾಟಕ ಆಡಳಿತ ಸುಧಾರಣಾ ಆಯೋಗದಿಂದ ಸರ್ಕಾರಕ್ಕೆ ಶಿಫಾರಸು

    ಬೆಂಗಳೂರು: ಕರ್ನಾಟಕ ಆಡಳಿತ ಸುಧಾರಣಾ ಆಯೋಗ ತನ್ನ 9ನೇ ವರದಿಯನ್ನ ಸಿಎಂ ಸಿದ್ದರಾಮಯ್ಯಗೆ ಸಲ್ಲಿಕೆ ಮಾಡಿದೆ. ವಿಧಾನಸೌಧದ ಸಿಎಂ ಕಚೇರಿಯಲ್ಲಿ ಆಯೋಗದ ಅಧ್ಯಕ್ಷ ಆರ್.ವಿ.ದೇಶಪಾಂಡೆ (R.V.Deshapande) ವರದಿಯನ್ನ ಸಿಎಂಗೆ ಸಲ್ಲಿಕೆ ಮಾಡಿದ್ದಾರೆ.

    9ನೇ ವರದಿಯಲ್ಲಿ 449 ಹೊಸ ಶಿಫಾರಸುಗಳನ್ನು ಮಾಡಲಾಗಿದೆ. 3 ಪ್ರಮುಖ ವಿಷಯಗಳನ್ನು ಇಟ್ಟುಕೊಂಡು ಈ ವರದಿ ನೀಡಲಾಗಿದೆ ಅಂತ ದೇಶಪಾಂಡೆ ತಿಳಿಸಿದರು. ಪ್ರಮುಖವಾಗಿ ಈ ವರದಿಯಲ್ಲಿ 7 ಬೋರ್ಡ್, ಕಾರ್ಪೊರೇಷನ್‌ಗಳನ್ನು ಮುಚ್ಚಲು ಸಲಹೆ ನೀಡಲಾಗಿದೆ. ಅಲ್ಲದೇ, 9 ಬೋರ್ಡ್ ಕಾರ್ಪೊರೇಷನ್‌ಗಳನ್ನ ವಿಲೀನ ಮಾಡಲು ಶಿಫಾರಸು ‌ಮಾಡಲಾಗಿದೆ. ಇದನ್ನೂ ಓದಿ: ರಾಜ್ಯ ಮಾಹಿತಿ ಆಯುಕ್ತರಾಗಿ ಮೂವರು ಪ್ರಮಾಣ ವಚನ ಸ್ವೀಕಾರ

    ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ದೇಶಪಾಂಡೆ, ಬೋರ್ಡ್, ಕಾರ್ಪೊರೇಷನ್‌ಗಳಿಗೆ ಈಗಾಗಲೇ ಅಧ್ಯಕ್ಷರನ್ನ ನೇಮಕ ಮಾಡಿದ್ರೆ ನನಗೆ ಗೊತ್ತಿಲ್ಲ. ಜನರ ಹಣ ಇದು. ಆ ಹಣದ ಉಪಯೋಗ ಜನರಿಗೆ ಆಗಬೇಕು. ಇವತ್ತಿನ ಕಾಲದಲ್ಲಿ ಅವಶ್ಯಕತೆ ಇಲ್ಲದ ಬೋರ್ಡ್ ಮುಚ್ಚಲು ಹೇಳಿದ್ದೇವೆ. ನನ್ನ ಜವಾಬ್ದಾರಿ ನಾನು ಮಾಡಿದ್ದೇನೆ. ಸಿಎಂ ಅಂಗೀಕಾರ ಮಾಡೋದಾಗಿ ಹೇಳಿದ್ದಾರೆ. ನೋಡೋಣ ಏನ್ ಮಾಡ್ತಾರೆ ಎಂದು ತಿಳಿಸಿದರು.

    84 ಬೋರ್ಡ್, ಕಾರ್ಪೊರೇಷನ್‌ಗಳ ರಿವ್ಯೂ ಮಾಡಿದ್ದೇವೆ. ಆ ಬೋರ್ಡ್‌ಗಳ A-Z ಮಾಹಿತಿ ನಮ್ಮ ಬಳಿ ಇದೆ. ಇದರಲ್ಲಿ 7 ಮುಚ್ಚಲು, 9 ಮರ್ಜ್ ಮಾಡಲು ಶಿಫಾರಸು ಮಾಡಿದ್ದೇವೆ. ನಮ್ಮ ಜವಾಬ್ದಾರಿ ಮಾಡಿದ್ದೇವೆ. ಮಿಕ್ಕಿದ್ದು ಸರ್ಕಾರ ಮಾಡಬೇಕು. ಮುಚ್ಚಲು ಹೇಳಿರೋ ಬೋರ್ಡ್‌ನಲ್ಲಿ ಕೆಲಸವೇ ಇಲ್ಲ. ಕೆಲವು ಬೋರ್ಡ್‌ಗೆ ಹಣವೇ ಇಲ್ಲ. ಹೀಗಾಗಿ, ಮುಚ್ಚಲು ಶಿಫಾರಸು ಮಾಡಿದ್ದೇವೆ. ಉಳಿದ ಬೋರ್ಡ್, ಕಾರ್ಪೊರೇಷನ್ ಅಭಿವೃದ್ಧಿ, ಸುಧಾರಣೆ ಹೇಗೆ ಮಾಡಬೇಕು ಅಂತ 379 ಶಿಫಾರಸು ಮಾಡಿದ್ದೇವೆ. 15 ಶಿಫಾರಸು ಭೂಸ್ವಾಧೀನ ಮಾಡಿದ್ದೇವೆ. ಸಾಮಾನ್ಯ ಆಡಳಿತಾತ್ಮಕ-ಇ ಸುಧಾರಣೆಗೆ 55 ಶಿಫಾರಸು ಮಾಡಿದ್ದೇವೆ ಎಂದು ಅಧ್ಯಕ್ಷರು ಮಾಹಿತಿ ನೀಡಿದರು. ಇದನ್ನೂ ಓದಿ: ದೀಪಾವಳಿ ಕೊಡುಗೆ ನೆಪದಲ್ಲಿ ಜನಕ್ಕೆ ದೋಖಾ, ಎ-ಖಾತಾ ಸೋಗಿನಲ್ಲಿ 15,000 ಕೋಟಿ ಸುಲಿಗೆ: ಹೆಚ್‌ಡಿಕೆ ಬಾಂಬ್‌

    ವಿಲೀನ ಮಾಡಲು ಸೂಚಿಸಿರೋ ನಿಗಮಗಳು

    1.ಕರ್ನಾಟಕ ರಾಜ್ಯ ಏಡ್ಸ್ ತಡೆಗಟ್ಟುವ ಸೊಸೈಟಿ
    (ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯೋಂದಿಗೆ ವೀಲಿನ)

    2.ಕರ್ನಾಟಕ ರೇಷ್ಮೆ ಕೈಗಾರಿಕೆ ನಿಗಮ ನಿಯಮಿತ
    (ಕರ್ನಾಟಕ ರೇಷ್ಮೆ ಮಾರುಕಟ್ಟೆ ಮಂಡಳಿ ಲಿಮಿಟೆಡ್ ವಿಲೀನ ಮಾಡಬೇಕು)

    3.ಆಹಾರ ಕರ್ನಾಟಕ ಲಿಮಿಟೆಡ್
    (ಕರ್ನಾಟಕ ರಾಜ್ಯ ಕೃಷಿ ಉತ್ಪನ್ನ, ಸಂಸ್ಕರಣೆ ಮತ್ತು ರಫ್ತು ನಿಗಮ ನಿಯಮಿತದಲ್ಲಿ ವಿಲೀನ)

    4.ಬೆಂಗಳೂರು ಸಬ್ ಅರ್ಬನ್ ರೈಲ್ವೆ ಕಂಪನಿ ಲಿಮಿಟೆಡ್ (ಬಿ-ರೈಡ್)
    (ರೈಲು ಮೂಲಸೌಕರ್ಯ ಅಭಿವೃದ್ಧಿ ಕಂಪನಿ (ಕರ್ನಾಟಕ) ಲಿಮಿಟೆಡ್ (ಕೆ-ರೈಡ್))

    5.ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ ನಿಯಮಿತ
    (ಜವಳಿ ಮೂಲಸೌಕರ್ಯ ಅಭಿವೃದ್ಧಿ ನಿಗಮ)

    6.ಮೈಸೂರು ಕ್ರೋಮ್ ಟ್ಯಾನಿಂಗ್ ಕಂಪನಿ ಲಿಮಿಟೆಡ್
    (ಮೈಸೂರು ಸೇಲ್ಸ್ ಇಂಟರ್ನ್ಯಾಷನಲ್ ಲಿಮಿಟೆಡ್‌ನಲ್ಲಿ ವಿಲೀನ)

    7.ಕರ್ನಾಟಕ ಗೇರು ಅಭಿವೃದ್ಧಿ ನಿಗಮ ನಿಯಮಿತ
    (ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕೆ ನಿಗಮ ನಿಯಮಿತ)

    8.ಕರ್ನಾಟಕ ರಾಜ್ಯ ರೇಷ್ಮೆ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಕೃಷಿ ವಿಜ್ಞಾನ ವಿಶ್ವವಿದ್ಯಾಲಯ (ಜಿಕೆವಿಕೆ)

    9.ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ (ಸಿಎಡಿಎ)
    (ಸಂಬಂಧಿಸಿದ ನೀರಾವರಿ ನಿಗಮಗಳು)

    ಮುಚ್ಚಲು ಶಿಫಾರಸು ಮಾಡಲಾದ 7 ಬೋರ್ಡ್ ಕಾರ್ಪೋರೇಷನ್‌ಗಳು!?

    1.ಕರ್ನಾಟಕ ರಾಜ್ಯ ಸಮಾಜಕಲ್ಯಾಣ ಮಂಡಳಿ
    2.ಕರ್ನಾಟಕ ರಾಜ್ಯ ಸಂಯಮ ಮಂಡಳಿ
    3.ಕರ್ನಾಟಕ ಸಹಕಾರಿ ಕೋಳಿ ಸಾಕಾಣಿಕೆ ಒಕ್ಕೂಟ
    4.ಕರ್ನಾಟಕ ವುಲ್ಪ್ ವುಡ್ ಲಿಮಿಟೆಡ್
    5.ಕರ್ನಾಟಕ ರಾಜ್ಯ ಅಗ್ರೋ-ಕಾರ್ನ್ ಪ್ರಾಡಕ್ಟ್ ಲಿಮಿಟೆಡ್
    6.ಮೈಸೂರು ಲ್ಯಾಂಪ್ ವರ್ಕ್ಸ್ ಲಿಮಿಟೆಡ್
    7.ಕರ್ನಾಟಕ ಆಗ್ರೋ ಇಂಡಸ್ಟ್ರೀಸ್ ಕಾರ್ಪೋರೇಷನ್ ಲಿಮಿಟೆಡ್

  • ಮಲ್ಲಿಕಾರ್ಜುನ ಖರ್ಗೆಗೆ ಸಿಎಂ ಆಗೋ ಅರ್ಹತೆ ಇತ್ತು: ಆರ್.ವಿ.ದೇಶಪಾಂಡೆ

    ಮಲ್ಲಿಕಾರ್ಜುನ ಖರ್ಗೆಗೆ ಸಿಎಂ ಆಗೋ ಅರ್ಹತೆ ಇತ್ತು: ಆರ್.ವಿ.ದೇಶಪಾಂಡೆ

    – ರಾಜ್ಯದಲ್ಲಿ ಸಿಎಂ ಬದಲಾವಣೆ ಇಲ್ಲ; ಸಿದ್ದರಾಮಯ್ಯ 5 ವರ್ಷ ಸಿಎಂ ಆಗಿ ಇರುತ್ತಾರೆ

    ಬೆಂಗಳೂರು: ಮಲ್ಲಿಕಾರ್ಜುನ ಖರ್ಗೆಗೆ (Mallikarjun Kharge) ಸಿಎಂ ಆಗೋ ಅರ್ಹತೆ ಇತ್ತು. ಆದರೆ ಆಗಲಿಲ್ಲ. ಆದ್ರೀಗ ಸಿಎಂ ಸ್ಥಾನಕ್ಕಿಂತ ದೊಡ್ಡ ಸ್ಥಾನವಾದ ಎಐಸಿಸಿ ಅಧ್ಯಕ್ಷ ಸ್ಥಾನದಲ್ಲಿ ಇದ್ದಾರೆ ಎಂದು ಮಾಜಿ ಸಚಿವ ಆರ್.ವಿ.ದೇಶಪಾಂಡೆ (R V Deshpande) ತಿಳಿಸಿದ್ದಾರೆ.

    ಸಿಎಂ ಸ್ಥಾನದ ತಪ್ಪಿದ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ವಿಚಾರಕ್ಕೆ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಮಲ್ಲಿಕಾರ್ಜುನ ಖರ್ಗೆ ಜೊತೆ ನಾವು ಕೆಲಸ ಮಾಡಿದ್ದೇವೆ. ಧರ್ಮಸಿಂಗ್ ಹಾಗೂ ಎಸ್.ಎಂ ಕೃಷ್ಣ (S.M Krishna) ಸರ್ಕಾರದಲ್ಲಿ ಖರ್ಗೆ ಅವರು ಸಚಿವರಿದ್ರು. ಖರ್ಗೆಯವರಿಗೆ ಸಿಎಂ ಆಗುವ ಎಲ್ಲಾ ಅರ್ಹತೆ ಇತ್ತು. ಆ ಸಮಯದಲ್ಲಿ ಹೈಕಮಾಂಡ್ ನಿರ್ಧಾರ ಮಾಡಿ ಎಸ್.ಎಂ ಕೃಷ್ಣ ಅವರನ್ನ ಸಿಎಂ ಮಾಡಿತ್ತು. ಅದನ್ನ ನಾವೆಲ್ಲಾ ಒಪ್ಪಿಕೊಂಡಿದ್ದೆವು ಎಂದಿದ್ದಾರೆ. ಇದನ್ನೂ ಓದಿ: ಡಿ-ಬಾಸ್ ಫ್ಯಾನ್ಸ್‌ನಿಂದ ಅಶ್ಲೀಲ ಮೆಸೇಜ್ – ನಟಿ ರಮ್ಯಾ ಬೆಂಬಲಕ್ಕೆ ನಿಂತ ದೊಡ್ಮನೆ ಕುಟುಂಬ

    ಖರ್ಗೆ ಅವರು ಇವತ್ತು ನಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಿದ್ದಾರೆ. ಸಿಎಂ ಆಗುವ ಎಲ್ಲಾ ಅರ್ಹತೆ ಅವರಿಗೆ ಇದೆ. ಅವರಿಗೆ ಅದಕ್ಕಿಂತ ಹೆಚ್ಚಿನ ಸ್ಥಾನ ಸಿಕ್ಕಿದೆ. ಅದಕ್ಕೆ ನಮಗೆಲ್ಲಾ ಹಾಗೂ ನಾಡಿಗೂ ಅಭಿಮಾನ ಇದೆ. ನಮ್ಮ ದೃಷ್ಟಿಯಲ್ಲಿ ರಾಷ್ಟ್ರ ಅಧ್ಯಕ್ಷ ಎಂದರೆ ಸಿಎಂಗಿಂತ ದೊಡ್ಡ ಸ್ಥಾನ. ಅವರ ಮಾತನ್ನ ನಮ್ಮ ಸಿಎಂ ಕೇಳಬೇಕು. ತೆಲಂಗಾಣ ಸಿಎಂ ಕೂಡಾ ಕೇಳಬೇಕಾಗುತ್ತದೆ. ಅವರಿಗೆ ಅಂತಹ ಗೌರವ ಸ್ಥಾನ ಇದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: Operation Sindoor Debate | ಹೋರಾಡಿದ್ದು ಸೇನೆ, ಕ್ರೆಡಿಟ್‌ ಬಯಸುತ್ತಿರೋದು ಮೋದಿ – ಪ್ರಿಯಾಂಕಾ ಗಾಂಧಿ ಕಿಡಿ

    ಖರ್ಗೆ ಅವರು ಎಲ್ಲಿಯೂ ಕೂಡ ಸಿಎಂ ಆಗ್ತೀನಿ ಎಂದು ಹೇಳಿಲ್ಲ. ಅವರಿಗೆ ಅವಕಾಶ ಮಾತ್ರ ಇರಲಿಲ್ಲ. ನನಗೂ ಸಿಎಂ ಆಗುವ ಅರ್ಹತೆ ಇತ್ತು. ಆದರೆ ಅವಕಾಶ ಸಿಕ್ಕಿಲ್ಲ. ಏನು ಮಾಡೋದು ಈಗ ಅಂತ ಹೇಳಿದ್ದಾರೆ. ಅವರಿಗೆ ಅವಕಾಶ ಇದ್ದಿದ್ದು ನಿಜ, ಅರ್ಹತೆ ಇದ್ದಿದ್ದು ನಿಜ. ಆದರೆ ಅವರು ಅಧಿಕಾರದ ಹಿಂದೆ ಬಿದ್ದವರಲ್ಲ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ರಾಜ್ಯದಲ್ಲಿ ಸಿಎಂ ಬದಲಾವಣೆ ಚರ್ಚೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರ ಮಾಧ್ಯಮಗಳ ಸೃಷ್ಟಿ. ಯಾವ ಬದಲಾವಣೆಯು ಇಲ್ಲ. ಸಿಎಂ ಆಗಿ ಸಿದ್ದರಾಮಯ್ಯ ಇದ್ದಾರೆ. ಮುಂದೆಯೂ ಇರ್ತಾರೆ. ಕಾಂಗ್ರೆಸ್ ಹೈಕಮಾಂಡ್, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಸೋನಿಯಾ ಗಾಂಧಿಯವರ ಸಂಪೂರ್ಣ ಆಶೀರ್ವಾದ ಸಿದ್ದರಾಮಯ್ಯ ಅವರಿಗೆ ಇದೆ ಎಂದಿದ್ದಾರೆ. ಇದನ್ನೂ ಓದಿ: ಪಹಲ್ಗಾಮ್‌ ಪಾತಕಿಗಳನ್ನ ಕೊಂದಿದ್ದೇವೆ – ʻಸಿಂಧೂರʼ ಚರ್ಚೆ ವೇಳೆ ಅಬ್ಬರಿಸಿದ ಅಮಿತ್‌ ಶಾ

    ಸಿಎಂ ಬದಲಾವಣೆ ಬಗ್ಗೆ ಹೈಕಮಾಂಡ್ ಸ್ಪಷ್ಟ ನಿಲುವು ನೀಡದ ವಿಚಾರವಾಗಿ ಮಾತನಾಡಿದ ಅವರು, ಹೈಕಮಾಂಡ್ ಈಗಾಗಲೇ ಹೇಳಿದೆ. ಕಾಂಗ್ರೆಸ್ ಪಕ್ಷ ಸಭೆ ಮಾಡಿ ಸಿದ್ದರಾಮಯ್ಯ ಅವರನ್ನ ಸಿಎಂ ಆಗಿ ಅಯ್ಕೆ ಮಾಡಿದೆ. ಇದು ಒಂದು ವರ್ಷಕ್ಕೆ ಮಾತ್ರ ಅಲ್ಲ. ಐದು ವರ್ಷಕ್ಕೆ ಆಯ್ಕೆ ಮಾಡಿದೆ. ಬದಲಾವಣೆ ಮಾಡುವ ಅಧಿಕಾರ ಹೈಕಮಾಂಡ್‌ಗೆ ಇದೆ, ಇಲ್ಲ ಅಂತ ನಾನು ಹೇಳಲ್ಲ. ಸಿಎಂ ಬದಲಾವಣೆ ಆಗುವ ರೀತಿ ಪರಿಸ್ಥಿತಿ ರಾಜ್ಯದಲ್ಲಿ ನಿರ್ಮಾಣ ಆಗಿಲ್ಲ. ಎಲ್ಲರು ಒಂದಾಗಿ ಕೆಲಸ ಮಾಡ್ತಿದ್ದೇವೆ. ಸರ್ಕಾರ ಒಳ್ಳೆಯ ಕೆಲಸ ಮಾಡ್ತಿದೆ. ಸಿಎಂ ಬದಲಾವಣೆ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

  • ಈಗಿನ ರಾಜಕೀಯದಲ್ಲಿ ಸಿದ್ಧಾಂತ ಎಂಬುದು ಉಳಿದಿಲ್ಲ: ದೇಶಪಾಂಡೆ ಬೇಸರ

    ಈಗಿನ ರಾಜಕೀಯದಲ್ಲಿ ಸಿದ್ಧಾಂತ ಎಂಬುದು ಉಳಿದಿಲ್ಲ: ದೇಶಪಾಂಡೆ ಬೇಸರ

    ಕಾರವಾರ: ಇಂದು ರಾಜಕೀಯದಲ್ಲಿ ಸಿದ್ಧಾಂತ ಎಂಬುದು ಉಳಿದಿಲ್ಲ. ಕೇವಲ ಅಧಿಕಾರ ಮತ್ತು ಹಣ ಮಾಡುವುದೇ ಇವತ್ತಿನ ಸಿದ್ಧಾಂತವಾಗಿದೆ ಎಂದು ಹಳಿಯಾಳ ಶಾಸಕ ಆರ್‌.ವಿ.ದೇಶಪಾಂಡೆ (R.V.Deshpande) ಬೇಸರ ವ್ಯಕ್ತಪಡಿಸಿದರು.

    ಶಿರಸಿಯಲ್ಲಿ (Sirsi) ಮಾತನಾಡಿದ ಅವರು, ಯಾರು ಯಾವಾಗ ಬೇಕಾದಾಗ ಯಾವ ಪಕ್ಷಕ್ಕೆ ಬೇಕಾದ್ರೂ ಹೋಗಬಹುದಾಗಿದೆ. ಚಾರಿತ್ರ್ಯ, ಸಿದ್ಧಾಂತ ಹಾಗೂ ತತ್ವದ ಬಗ್ಗೆ ಮಾತನಾಡೋಕೆ ಹೋಗಬೇಡಿ ಎಂದರು.

    ಬಿಜೆಪಿ ರೆಬಲ್ ಶಾಸಕ ಶಿವರಾಮ್ ಹೆಬ್ಬಾರ್ ಕುರಿತು ಮಾತನಾಡಿ, ನನ್ನ ಜೊತೆಗೂ ಹೆಬ್ಬಾರ್ ಚೆನ್ನಾಗಿದ್ದಾರೆ. ನಾವು ಸಿಕ್ಕಾಗ ಪರಸ್ಪರ ಮಾತನಾಡುತ್ತೇವೆ. ನನ್ನ ಜೊತೆಗೆ ಶಾಸಕನಾಗಿ ಸಾಕಷ್ಟು ಬಾರಿ ಆಯ್ಕೆ ಆಗಿದ್ದಾರೆ. ಶಾಸಕನಾಗಿ ಒಳ್ಳೆಯ ಅಭಿವೃದ್ಧಿ ಮಾಡಿದ್ದಾರೆ. ಒಳ್ಳೆಯ ವರ್ಕರ್, ನನ್ನ ಜೊತೆಗೆ ಬಿಜೆಪಿ ಸಂಸದ ಕಾಗೇರಿ ಕೂಡ ಚೆನ್ನಾಗಿ, ಜೊತೆಗಿದ್ದಾರೆ. ಹಾಗಂತ ಪಕ್ಷ ಬಿಟ್ಟು ನಮ್ಮ ಜೊತೆ ಬರ್ತಾರೆ ಅಂತ ಹೇಳೋಕೆ ಬರಲ್ಲ ಎಂದು ಸ್ಪಷ್ಟಪಡಿಸಿದರು.

    ಹೆಬ್ಬಾರ್‌ ಕಾಂಗ್ರೆಸ್ ಸೇರ್ಪಡೆ ಆಗಬೇಕೆಂದು ಎಲ್ಲಿಯೂ ಅರ್ಜಿ ಹಾಕಿಲ್ಲ. ಹೆಬ್ಬಾರ್‌ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳವುದು ಕಾಂಗ್ರೆಸ್ ಪಕ್ಷಕ್ಕೆ ಬಿಟ್ಟ ವಿಚಾರ. ಪಕ್ಷ ನನ್ನ ಅಭಿಪ್ರಾಯ ಕೇಳಿದಾಗ ಏನು ಹೇಳಬೇಕೊ ಅದನ್ನ ಹೇಳುತ್ತೇನೆ. ನಾನು 1983 ರಿಂದ ಶಾಸಕನಾಗಿದ್ದೇನೆ. ಕೂದಲು ಹಣ್ಣಾಗಿ ಬಿಟ್ಟಿದೆ. ಎಲ್ಲವನ್ನೂ ನೋಡಿದ್ದೇನೆ ಎಂದರು.

  • ಅರ್ಥಶಾಸ್ತ್ರದ ಬಗ್ಗೆ ಗೊತ್ತಿರೋರು ಬೆಲೆ ಏರಿಕೆ ವಿರೋಧ ಮಾಡಲ್ಲ: ಆರ್.ವಿ.ದೇಶಪಾಂಡೆ

    ಅರ್ಥಶಾಸ್ತ್ರದ ಬಗ್ಗೆ ಗೊತ್ತಿರೋರು ಬೆಲೆ ಏರಿಕೆ ವಿರೋಧ ಮಾಡಲ್ಲ: ಆರ್.ವಿ.ದೇಶಪಾಂಡೆ

    ಬೆಂಗಳೂರು: ಅರ್ಥಶಾಸ್ತ್ರದ(Economics) ಬಗ್ಗೆ ಗೊತ್ತಿರುವ ಯಾರೂ ಬೆಲೆ ಏರಿಕೆ ವಿರೋಧ ಮಾತನಾಡುವುದಿಲ್ಲ ಎಂದು ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಸಚಿವ ದೇಶಪಾಂಡೆ(R V Deshpande) ಅವರು ರಾಜ್ಯ ಸರ್ಕಾರದ ಬೆಲೆ ಏರಿಕೆಯನ್ನು ಸಮರ್ಥನೆ ಮಾಡಿಕೊಂಡರು.

    ಬೆಲೆ ಏರಿಕೆ ಖಂಡಿಸಿ ಬಿಜೆಪಿಯಿಂದ ಅಹೋರಾತ್ರಿ ಧರಣಿ ಮಾಡುತ್ತಿರುವ ವಿಚಾರಕ್ಕೆ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಬೆಲೆ ಏರಿಕೆ ವಿರೋಧಿಸಿ ಬಿಜೆಪಿ(BJP) ಅಹೋರಾತ್ರಿ ಧರಣಿ ಮಾಡುವುದು ಅವರ ಇಷ್ಟ. ಆದರೆ, ಅದರಲ್ಲಿ ಯಶಸ್ಸು ಆಗುವುದಿಲ್ಲ. ಬಿಜೆಪಿ ಅಧಿಕಾರದಲ್ಲಿ ಬೆಲೆ ಏರಿಕೆ ಮಾಡಿರಲಿಲ್ವಾ? ಬೆಲೆ ಏರಿಕೆಗೆ ಕೇಂದ್ರ ಸರ್ಕಾರದ ನೀತಿಗಳೇ ಪ್ರಮುಖ ಕಾರಣ ಎಂದು ಆರೋಪ ಮಾಡಿದರು. ಇದನ್ನೂ ಓದಿ: ಕಾಂಗ್ರೆಸ್‌ನವರು ವಕ್ಫ್ ಆಸ್ತಿ ಕಬಳಿಕೆ ಮುಚ್ಚಿ ಹಾಕಲು ತಿದ್ದುಪಡಿಗೆ ವಿರೋಧ ಮಾಡ್ತಿದ್ದಾರೆ: ಬೊಮ್ಮಾಯಿ

    ರಾಜ್ಯ ಸರ್ಕಾರ ಹಾಲಿನ ದರ ಏರಿಕೆ(Milk Rate Hike) ಮಾಡಿದೆ. ಇದಕ್ಕೆ ಕಾರಣ ಮೇವಿನ ಬೆಲೆ ಜಾಸ್ತಿ ಆಗಿರುವುದು. ಬೆಲೆ ಏರಿಕೆ ಆದಾಗ ಸ್ವಲ್ಪ ಅಡ್ಜೆಸ್ಟ್ ಮಾಡಿಕೊಳ್ಳಬೇಕು. ಹಣ ಎಲ್ಲಿಂದ ತರಲು ಆಗುತ್ತದೆ. ಸರ್ಕಾರ ಸ್ವಲ್ಪ ಬೆಲೆ ಏರಿಕೆ ಮಾಡಿದೆ ನಿಜ. ಹಾಗಂತ ಜನರನ್ನ ಲೂಟಿ ಮಾಡಲು ಮಾಡಿದೆ ಎಂದು ಹೇಳುವುದು ಸರಿಯಲ್ಲ. ಪೆಟ್ರೋಲ್, ಡೀಸೆಲ್ ದರ ಕಂಟ್ರೋಲ್ ಮಾಡುವುದು ಕೇಂದ್ರ ಸರ್ಕಾರ. ಕೆಲವೊಮ್ಮೆ ದರ ಹೆಚ್ಚಳ ಅನಿವಾರ್ಯವಾಗಿರುತ್ತದೆ. ಅರ್ಥಶಾಸ್ತ್ರದ ಬಗ್ಗೆ ಗೊತ್ತಿರುವವರು ಯಾರು ಬೆಲೆ ಏರಿಕೆ ವಿರೋಧಿಸಲ್ಲ ಇದು ರಿಯಾಲಿಟಿ. ಇದನ್ನ ಎಲ್ಲರೂ ಅರ್ಥ ಮಾಡಿಕೊಳ್ಳಬೇಕು ಎಂದು ನೀತಿ ಪಾಠ ಬೋಧನೆ ಮಾಡಿದರು. ಇದನ್ನೂ ಓದಿ: ಬದುಕು ಕೊಟ್ಟ ರೆಸ್ಟೋರೆಂಟ್‌ಗೆ ಶೈನ್ ಶೆಟ್ಟಿ ಗುಡ್ ಬೈ- ಫ್ಯಾನ್ಸ್‌ಗೆ ಬಹಿರಂಗ ಪತ್ರ ಬರೆದ ನಟ

    ಜನರಿಗೆ ತೊಂದರೆ ಆಗಲು ಬೆಲೆ ಏರಿಕೆ ಮಾಡಿಲ್ಲ. ಕಾಂಗ್ರೆಸ್ ಏನೇ ಮಾಡಿದರೂ ನ್ಯಾಯ ಬದ್ಧವಾಗಿ ಮಾಡುತ್ತದೆ. ಅನೇಕ ಯೋಜನೆಯನ್ನು ಜನರಿಗಾಗಿಯೇ ತರುತ್ತಿದ್ದೇವೆ. ಅದರ ಲಾಭ ಎಲ್ಲರಿಗೂ ಹೋಗುತ್ತಿದೆ. ಗ್ಯಾರಂಟಿ ಯೋಜನೆಯಿಂದ ಎಲ್ಲಾ ಜನರಿಗೆ ಅನುಕೂಲ ಆಗಿದೆ ಎಂದು ಸಮರ್ಥಿಸಿಕೊಂಡರು.

  • ಸರ್ಕಾರ ಯಾವುದನ್ನೂ ಉಚಿತವಾಗಿ ನೀಡಬಾರದು, ಉಚಿತ ಎನ್ನುವುದೇ ಅಪಾಯಕಾರಿ: ಆರ್.ವಿ.ದೇಶಪಾಂಡೆ

    ಸರ್ಕಾರ ಯಾವುದನ್ನೂ ಉಚಿತವಾಗಿ ನೀಡಬಾರದು, ಉಚಿತ ಎನ್ನುವುದೇ ಅಪಾಯಕಾರಿ: ಆರ್.ವಿ.ದೇಶಪಾಂಡೆ

    ಕಾರವಾರ: ಸರ್ಕಾರವು ಯಾವುದನ್ನೂ ಉಚಿತವಾಗಿ ನೀಡಬಾರದು. ಏನೇ ನೀಡಿದರೂ ಅದಕ್ಕೆ ಹಣ ನಿಗದಿಯಾಗಬೇಕು. ಉಚಿತ ಎನ್ನುವುದೇ ಅಪಾಯಕಾರಿ ಎಂದು ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಹಳಿಯಾಳ (Haliyala) ಶಾಸಕ ಆರ್.ವಿ.ದೇಶಪಾಂಡೆ (R V Deshpande) ಹೇಳಿದರು.

    ದಾಂಡೇಲಿಯಲ್ಲಿ (Dandeli) ಪ್ರಾದೇಶಿಕ ಸಾರಿಗೆ ಇಲಾಖೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಶಕ್ತಿ ಯೋಜನೆಯಿಂದ ಲಕ್ಷಾಂತರ ಮಹಿಳೆಯರು ಅದರ ಲಾಭ ಪಡೆದುಕೊಂಡಿದ್ದಾರೆ. ಮಹಿಳೆಯರಿಗೆ ಉಚಿತ ಬಸ್ (Free Bus) ಸೇವೆ ನೀಡಿದಂತೆ ಪುರುಷರಿಗೂ ಉಚಿತ ಪ್ರಯಾಣಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಬೇಡಿಕೆ ಇಡುತ್ತಿದ್ದಾರೆ ಎಂದರು. ಇದನ್ನೂ ಓದಿ: ಕಾಂಗ್ರೆಸ್‌ನಲ್ಲಿ ಏನೇ ಆದರೂ ಹೈಕಮಾಂಡ್ ತೀರ್ಮಾನವೆ ಅಂತಿಮ: ಹೆಚ್.ಸಿ ಮಹದೇವಪ್ಪ

    ಎಲ್ಲರಿಗೂ ಉಚಿತವಾಗಿ ನೀಡುತ್ತಾ ಹೋದರೆ ಸಾರಿಗೆ ಸಂಸ್ಥೆ ನಡೆಸುವುದು ಕಷ್ಟವಾಗಬಹುದು. ಮುಂದೆ ಉಚಿತ ಯೋಜನೆ ಅಪಾಯಕಾರಿಯಾಗಬಹುದು. ಉಚಿತ ಯೋಜನೆಗಳನ್ನ ಉಳ್ಳವರು ಬಳಸಬಾರದು ಎಂದು ಹೇಳಿದರು.

  • ಸಿದ್ದರಾಮಯ್ಯ ಪವರ್‌ಫುಲ್ ಲೀಡರ್ ಎಂಬುದು ಮೋದಿಗೂ ಗೊತ್ತು: ಆರ್.ವಿ ದೇಶಪಾಂಡೆ

    ಸಿದ್ದರಾಮಯ್ಯ ಪವರ್‌ಫುಲ್ ಲೀಡರ್ ಎಂಬುದು ಮೋದಿಗೂ ಗೊತ್ತು: ಆರ್.ವಿ ದೇಶಪಾಂಡೆ

    – 5 ವರ್ಷ ಅವರೇ ಸಿಎಂ ಸ್ಥಾನದಲ್ಲಿ ಮುಂದುವರಿಯಲಿದ್ದಾರೆ

    ಬೆಂಗಳೂರು: ಸಿಎಂ ಸ್ಥಾನದಲ್ಲಿ ಸಿದ್ದರಾಮಯ್ಯ (Siddaramaiah) ಅವರೇ 5 ವರ್ಷಗಳ ಕಾಲ ಮುಂದುವರಿಯಲಿದ್ದಾರೆ. ಅವರ ವಿರುದ್ಧ ಕೋರ್ಟ್‍ನಲ್ಲಿ ಆದೇಶ ಬಂದಾಗಿನಿಂದ ರಾಜ್ಯದಲ್ಲಿ ಸಾಕಷ್ಟು ಅನಾವಶ್ಯಕ ಚರ್ಚೆ ನಡೆಯುತ್ತಿದೆ ಎಂದು ಹಿರಿಯ ಕಾಂಗ್ರೆಸ್ ಶಾಸಕ ಆರ್.ವಿ ದೇಶಪಾಂಡೆ (R.V Deshpande) ಹೇಳಿದ್ದಾರೆ.

    ತಮ್ಮ ನಿವಾಸದಲ್ಲಿ ಅವರು ತುರ್ತು ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ನನ್ನ ಮತ್ತು ಸಿದ್ದರಾಮಯ್ಯ ನಡುವೆ 40 ವರ್ಷಗಳ ಅನುಬಂಧವಿದೆ. ಸಿದ್ದರಾಮಯ್ಯ ಅವರಾಗಲಿ, ಅವರ ಪತ್ನಿಯಾಗಲಿ ಮುಡಾ ಸೈಟ್ ಕೇಳಿಲ್ಲ. ಈಗ ಇದರ ಬಗ್ಗೆ ಚರ್ಚೆ ನಡೆಯುತ್ತಿದೆ. ಇಷ್ಟು ವರ್ಷಗಳಿಂದ ಇಲ್ಲದ ಆರೋಪಗಳು ಈಗ ಯಾಕೆ? ಸಿದ್ದರಾಮಯ್ಯ ಮತ್ತು ಅವರ ಪತ್ನಿ ಯಾವುದೇ ಕಾನೂನು ಉಲ್ಲಂಘನೆ ಮಾಡಿಲ್ಲ. ಅವರು ಸಿಎಂ ಆಗಿರುವುದನ್ನು ಸಹಿಸೋದಕ್ಕೆ ಆಗದೇ ಇರುವವರು ಮಾಡಿದ ಕುತಂತ್ರ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಲೋಕಾಯುಕ್ತದಿಂದ ನಿಷ್ಪಕ್ಷಪಾತ ತನಿಖೆ ಅಸಾಧ್ಯ: ದೂರುದಾರ ಸ್ನೇಹಮಯಿ ಕೃಷ್ಣ

    ಸಿಎಂ ಆಗಿ ಸಿದ್ದರಾಮಯ್ಯ ಉತ್ತಮ ಕೆಲಸ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಉತ್ತಮ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಈಗ ಮುಡಾ ಸೈಟ್ ವಿಚಾರವಾಗಿ, ವಿಪಕ್ಷಗಳು ಪ್ರತಿಭಟನೆ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಅವರಿಗೆ ಹೈಕಮಾಂಡ್ ಹಾಗೂ ಎಲ್ಲರ ಬೆಂಬಲವಿದೆ. ಅವರೇ 5 ವರ್ಷ ಸಿಎಂ ಆಗಿರಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಸಿದ್ದರಾಮಯ್ಯ ಕಾನೂನಿನ ಹೋರಾಟ ಮಾಡುತ್ತಾರೆ. ಹೈಕೋರ್ಟ್‍ನಲ್ಲೇ ಮೇಲ್ಮನವಿ ಸಲ್ಲಿಸಬಹದು. ಏಫ್‍ಐಆರ್ ದಾಖಲಾದ ಮೇಲೆ ಏನು ಕಾನೂನಿನ ಕ್ರಮ ತೆಗೆದುಕೊಳ್ಳಬಹುದು ನೋಡಬೇಕಿದೆ ಎಂದಿದ್ದಾರೆ.

    ಕಾಂಗ್ರೆಸ್‍ನಲ್ಲಿ (Congress) ಕೆಲವರು ಸಿಎಂ ಸ್ಥಾನದ ಅಕಾಂಕ್ಷೆ ಹೊಂದಿದ್ದಾರೆ. ಅದರಲ್ಲಿ ಯಾವುದೇ ತಪ್ಪಿಲ್ಲ, ಸದ್ಯಕ್ಕೆ ಸಿಎಂ ಸ್ಥಾನ ಖಾಲಿ ಇಲ್ಲ. ನಾನು ಹಿರಿಯನಾಗಿರಬಹುದು, ನಾನು ಸಿಎಂ ಅಕಾಂಕ್ಷಿ ಅಲ್ಲ. ಡಿಕೆಶಿ ಕ್ರೀಯಾಶೀಲ ವ್ಯಕ್ತಿ, ಅವರು ಡಿಸಿಎಂ ಆಗಿ ಉತ್ತಮ ಕೆಲಸ ಮಾಡ್ತಿದ್ದಾರೆ. ಚುನಾವಣಾ ಭಾಷಣದ ವೇಳೆ ಪ್ರಧಾನಿ ಮೋದಿಯವರು (Narendra Modi) ಸಿದ್ದರಾಮಯ್ಯ ಅವರನ್ನ ಪ್ರಸ್ತಾಪಿಸಿದ್ದಾರೆ. ಮೋದಿಯವರಿಗೆ ಸಿದ್ದರಾಮಯ್ಯ ಬೆಳೆಯೋದನ್ನ ಸಹಿಸೋದಕ್ಕೆ ಆಗ್ತಿಲ್ಲ. ಸಿದ್ದರಾಮಯ್ಯ ಪವರಫುಲ್ ಲೀಡರ್, ಅದು ಅವರಿಗೂ ಗೊತ್ತಿದೆ. ಬೆಳವಣಿಕೆ ಸಹಿಸೋದಕ್ಕೆ ಆಗದೇ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

    ಕುಮಾರಸ್ವಾಮಿ ಹೇಳಿಕೆ ವಿಚಾರವಾಗಿ, ನೈತಿಕತೆ ಆಧಾರದ ಮೇಲೆ ಸಿಎಂ ರಾಜೀನಾಮೆ ನೀಡಬೇಕು ಎನ್ನುತ್ತಾರೆ. ಯಾವ ನೈತಿಕತೆಯಲ್ಲಿ ಕುಮಾರಸ್ವಾಮಿ ಹೀಗೆ ಹೇಳ್ತಾರೆ? ಬಿಜೆಪಿಗೆ ಮತ್ತು ಜೆಡಿಎಸ್‍ಗೆ ಸಿದ್ದರಾಮಯ್ಯ ಸಿಎಂ ಆಗಿರುವುದನ್ನು ಸಹಿಸಲು ಆಗ್ತಿಲ್ಲ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಮುಡಾ ಹಗರಣ ಸಂಕಷ್ಟ; ಹೈಕಮಾಂಡ್‌ಗೆ ವರದಿ ನೀಡಿದ ಸಿಎಂ ಸಿದ್ದರಾಮಯ್ಯ

  • ಹುದ್ದೆ ಸದ್ಯ ಖಾಲಿ ಇಲ್ಲ, ಈಗ ಸಿದ್ದರಾಮಯ್ಯ ಸಿಎಂ ಆಗಿದ್ದಾರೆ: ಡಿಕೆಶಿ

    ಹುದ್ದೆ ಸದ್ಯ ಖಾಲಿ ಇಲ್ಲ, ಈಗ ಸಿದ್ದರಾಮಯ್ಯ ಸಿಎಂ ಆಗಿದ್ದಾರೆ: ಡಿಕೆಶಿ

    ಬೆಂಗಳೂರು: ಮುಖ್ಯಮಂತ್ರಿ ಹುದ್ದೆ ಸದ್ಯ ಖಾಲಿ ಇಲ್ಲ. ದೇಶಪಾಂಡೆ ಹಿರಿಯರು, ಅವರ ಅಭಿಪ್ರಾಯ ಗೌರವಿಸುತ್ತೇವೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ (D K Dhivakumar) ಹೇಳಿದ್ದಾರೆ.ಇದನ್ನೂ ಓದಿ: ಕಿಚ್ಚೋತ್ಸವ: ‘ಬಿಲ್ಲ ರಂಗ ಬಾಷಾ’ ಟೈಟಲ್, ಕಾನ್ಸೆಪ್ಟ್ ವಿಡಿಯೋ ಗಿಫ್ಟ್

    ನಗರದಲ್ಲಿ ಮಾತನಾಡಿದ ಅವರು, ಈಗ ಸಿದ್ದರಾಮಯ್ಯನವರು (Siddaramaiah) ಮುಖ್ಯಮಂತ್ರಿಯಾಗಿದ್ದಾರೆ. ಅವರೇ ಮುಂದುವರಿಯುತ್ತಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.

    ಇದೇ ವೇಳೆ ಡಾ.ಕೆ. ಸುಧಾಕರ್ (Dr. K Sudhakar) ಅವರ ಕಾಂಗ್ರೆಸ್ ಅವರು ಏನು ಸತ್ಯ ಹರಿಶ್ಚಂದ್ರರಾ? ಎಂಬ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಪಾಪ ಅವರು ಮಾತಾಡ್ತಾರೆ, ಮಾತಾಡಲಿ. ಅವರು ಕಾಂಗ್ರೆಸ್‌ನಲ್ಲಿ ಇದ್ದವರಲ್ಲವಾ? ಅವರೇ ಕಾಂಗ್ರೆಸ್ ಬಗ್ಗೆ ಸರ್ಟಿಫಿಕೇಟ್ ಕೊಡಲಿ. ಕೋವಿಡ್ ಅಕ್ರಮ ಆರೋಪ ತನಿಖಾ ವರದಿಯಲ್ಲಿ ಏನಿದೆ ನನಗೇನು ಗೊತ್ತಿಲ್ವಾ ಎಂದು ತಿರುಗೇಟು ಕೊಟ್ಟಿದ್ದಾರೆ.ಇದನ್ನೂ ಓದಿ: ಕಂದಹಾರ್ ವಿಮಾನ ಅಪಹರಣ ಸೀರಿಸ್‌ನಲ್ಲಿ ಹಿಂದೂಗಳಿಗೆ ಅವಮಾನ – ನೆಟ್‌ಫ್ಲಿಕ್ಸ್‌ಗೆ ಸಮನ್ಸ್

  • ಮತ್ತೆ ಗೆಲ್ತಾರಾ ದೇಶಪಾಂಡೆ – ಹಳಿಯಾಳದಲ್ಲಿ ಹೇಗಿದೆ ಚುನಾವಣೆ ಕಾವು?

    ಮತ್ತೆ ಗೆಲ್ತಾರಾ ದೇಶಪಾಂಡೆ – ಹಳಿಯಾಳದಲ್ಲಿ ಹೇಗಿದೆ ಚುನಾವಣೆ ಕಾವು?

    ಕಾರವಾರ: ಉತ್ತರ ಕನ್ನಡ (Uttara Kannada) ಜಿಲ್ಲೆಯ 6 ವಿಧಾನಸಭಾ ಕ್ಷೇತ್ರಗಳಲ್ಲಿ ಹಿಂದುತ್ವ, ಮೋದಿ ಅಲೆ, ಜಾತಿ, ಧರ್ಮ ದಂಗಲ್ ನಡುವೆ ಯಾವುದೇ ಪ್ರಭಾವವೂ ಇಲ್ಲದೇ 2018ರ ಚುನಾವಣೆಯಲ್ಲಿ ಹಳಿಯಾಳ (Haliyal) ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಆರ್.ವಿ ದೇಶಪಾಂಡೆ (RV Deshpande) 8ನೇ ಬಾರಿ ವಿಧಾನಸಭೆಗೆ ಆಯ್ಕೆಯಾಗಿದ್ದರು. 25 ವರ್ಷಗಳ ಕಾಲ ಸಚಿವರಾಗಿ ರಾಜ್ಯ ಸರ್ಕಾರದಲ್ಲಿ ಸೇವೆ ಸಲ್ಲಿಸಿದ ಮಾಜಿ ಸಚಿವ ಆರ್.ವಿ ದೇಶಪಾಂಡೆ ಪ್ರತಿನಿಧಿಸುವ ಕ್ಷೇತ್ರ ಸಾಕಷ್ಟು ಕುತೂಹಲ, ಜಿದ್ದಾಜಿದ್ದಿಗೆ ಈ ಬಾರಿ ಸಾಕ್ಷಿಯಾಗಲಿದೆ.

    ಅತ್ಯುತ್ತಮ ಶಾಸಕ ಪ್ರಶಸ್ತಿ ಗರಿ: ಆರ್.ವಿ.ದೇಶಪಾಂಡೆ 1983 ರಿಂದ ಸತತವಾಗಿ ಶಾಸಕರಾಗಿದ್ದಾರೆ. ಮೊದಲ ವರ್ಷದಲ್ಲೇ ಸಚಿವರೂ ಆಗಿದ್ದು ವಿಶೇಷ. 1994 ರವರೆಗೆ 4 ಬಾರಿ ಜನತಾ ಪರಿವಾರದಿಂದ ಗೆಲುವು ಸಾಧಿಸಿದ್ದ ಅವರು 1999ರಲ್ಲಿ ಕಾಂಗ್ರೆಸ್ (Congress) ಸೇರಿದರು. ಅಲ್ಲಿಂದ ಹಳಿಯಾಳ ಕ್ಷೇತ್ರವನ್ನು ಕಾಂಗ್ರೆಸ್‌ಮಯ ಮಾಡಿದ್ದಾರೆ. ಸ್ಥಳೀಯ ಸಂಸ್ಥೆಗಳಲ್ಲಿ ತಮ್ಮ ಬೆಂಬಲಿಗರ ಹಿಡಿತ ಸಾಧಿಸಿದ್ದಾರೆ. 2004, 2013 ಹಾಗೂ 2018 ರಲ್ಲಿಯೂ ಅವರು ಕಾಂಗ್ರೆಸ್‌ನಿಂದ ಗೆಲುವು ಸಾಧಿಸಿದರು.

    ಕಳೆದ 2 ಅವಧಿಯಲ್ಲಿ ಅವರು ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡಿ ಹೆಸರಾದರು. ಸರ್ಕಾರದ ಅನುದಾನ ಮಾತ್ರವಲ್ಲದೇ ವಿವಿಧ ಕಂಪನಿಗಳ ಸಾಮಾಜಿಕ ಜವಾಬ್ದಾರಿ ನಿರ್ವಹಣೆಯಲ್ಲಿ ಹಳಿಯಾಳದ ಕೆರೆಗಳ ಹೂಳೆತ್ತುವ ಕಾಮಗಾರಿ ನಡೆಸಿದರು. ಅಂಗನವಾಡಿಗಳಿಗೆ ಆಟದ ಸಾಮಗ್ರಿ ಪೂರೈಸಿದರು. ರೈತರಿಗೆ ವಿದೇಶಿ ತರಕಾರಿ ಬೀಜ, ಮಹಿಳೆಯರಿಗೆ ಹೊಲಿಗೆ ಯಂತ್ರ ಹೀಗೆ ಹಲವು ಸೌಲಭ್ಯಗಳನ್ನು ಒದಗಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕ್ಷೇತ್ರದಲ್ಲಿ ಹಲವು ಸೇತುವೆಗಳನ್ನು ತಂದಿದ್ದಾರೆ. ಜಿ ಪ್ಲಸ್ 2 ಮನೆಗಳ ನಿರ್ಮಾಣ, ಕ್ರೀಡಾ ವಸತಿ ಶಾಲೆ ಮೇಲ್ದರ್ಜೆಗೆ, ಖೇಲೋ ಇಂಡಿಯಾ ಸೌಲಭ್ಯ ಹೀಗೆ ವಿವಿಧ ಮೂಲಗಳಿಂದ ಅನುದಾನ ತಂದಿದ್ದಾರೆ. ಶಾಸಕರ ನಿಧಿಯನ್ನು ಸಮರ್ಪಕವಾಗಿ ಬಳಸುವಲ್ಲಿ ಅವರ ಹೆಸರು ಮೇಲಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲೂ ಅವರು ಅತ್ಯುತ್ತಮ ಶಾಸಕ ಎಂದು ವಿಧಾನಸಭೆಯಿಂದ ಪ್ರಶಸ್ತಿ ಪಡೆಯುವ ಮೂಲಕ ತಮ್ಮ ಸಾಧನೆಗೆ ಮತ್ತೊಂದು ಗರಿ ಸಿಕ್ಕಿಸಿಕೊಂಡಿದ್ದಾರೆ.

    ಹಳಿಯಾಳ ಕ್ಷೇತ್ರ ಹೇಗಿದೆ?: ಎಂಟು ಬಾರಿ ಗೆಲುವು ಸಾಧಿಸಿ ಕರ್ನಾಟಕ ವಿಧಾನಸಭೆಯ ಅತಿ ಹಿರಿಯ ಶಾಸಕ ಎನಿಸಿಕೊಂಡಿರುವ ಆರ್.ವಿ.ದೇಶಪಾಂಡೆ ಮಣಿಸಲು ಅವರ ಶಿಷ್ಯರೇ ಪೈಪೋಟಿಗಿಳಿದಿದ್ದಾರೆ. ಇದುವರೆಗೆ ಹಳಿಯಾಳ ವಿಧಾನಸಭಾ ಕ್ಷೇತ್ರ ಸುನೀಲ್ ಹೆಗಡೆ- ದೇಶಪಾಂಡೆ ನಡುವಿನ ಜಂಗಿ ಕುಸ್ತಿಗೆ ಹೆಸರಾಗಿತ್ತು. ಜಿಲ್ಲೆಯಲ್ಲಿ ಅತಿ ಹೆಚ್ಚಿನ ರಾಜಕೀಯ ಕೆಸರೆರಚಾಟ ನಡೆಯುವ ಕ್ಷೇತ್ರ ಎಂದು ಪ್ರಸಿದ್ಧವಾಗಿತ್ತು. ಈಗ ಅವರ ಜತೆ ಮಾಜಿ ಎಂಎಲ್‌ಸಿ ಶ್ರೀಕಾಂತ ಘೋಟ್ನೇಕರ್ ಎಂಎಲ್‌ಎ ಸ್ಥಾನದ ಕಾಳಗಕ್ಕೆ ಕೈ ಹಾಕಿದ್ದಾರೆ. ಸದ್ಯ ಕಾಂಗ್ರೆಸ್‌ನಿಂದ ಅಧಿಕೃತವಾಗಿ ಕಾಲು ಹೊರಗಿಟ್ಟು ಘೋಟ್ನೇಕರ್ ಬಿಜೆಪಿ ಸೇರಲು ಪ್ರಯತ್ನ ನಡಸಿ ಸೋತ ನಂತರ ಇದೀಗ ಜೆಡಿಎಸ್ ಪಕ್ಷಕ್ಕೆ ಸೇರಿದ್ದು, ಈ ಬಾರಿ ವಿಧಾನಸಭಾ ಚುನಾವಣೆಗೆ ಸ್ಪರ್ಧೆ ಮಾಡಲಿದ್ದಾರೆ.

    ಘೋಟ್ನೇಕರ್ ಮರಾಠ ಸಮುದಾಯದ ನಾಯಕ. ದೇಶಪಾಂಡೆ ಗರಡಿಯಲ್ಲಿ ಬೆಳೆದ ಅವರು ಎರಡು ಅವಧಿಗೆ ಉತ್ತರ ಕನ್ನಡ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ವಿಧಾನ ಪರಿಷತ್ ಸದಸ್ಯರಾಗಿದ್ದರು. ಈ ಬಾರಿ ವಿಧಾನಸಭೆ ಗುರಿಯಾಗಿಸಿಕೊಂಡು ಕಾಂಗ್ರೆಸ್‌ನಿಂದ ಟಿಕೆಟ್ ಬಯಸಿದ್ದ ಅವರು ಪರಿಷತ್ ಚುನಾವಣೆಯಿಂದ ಹಿಂದೆ ಸರಿದಿದ್ದರು. ದೇಶಪಾಂಡೆ ಅವರಿಗೆ ಕಾಂಗ್ರೆಸ್ ಟಿಕೆಟ್ ತಪ್ಪಿಸುವುದು ಅಸಾಧ್ಯ ಎಂದರಿತ ಅವರು ತಿಂಗಳ ಹಿಂದೆ ಪಕ್ಷದಿಂದ ಹೊರನಡೆದು ಜೆಡಿಎಸ್ ಸೇರ್ಪಡೆಗೊಂಡಿದ್ದಾರೆ.

    ಹಳಿಯಾಳ ಕ್ಷೇತ್ರದಲ್ಲಿ ಮರಾಠರು ದೊಡ್ಡ ಸಂಖ್ಯೆಯಲ್ಲಿದ್ದಾರೆ. ತಮ್ಮ ಸಮುದಾಯದ ಅಜೆಂಡಾವನ್ನೇ ಮುಂದಿಟ್ಟುಕೊಂಡು ಅವರು ವಿಧಾನಸಭೆ ರಾಜಕೀಯಕ್ಕೆ ಕೈಹಾಕಿದ್ದಾರೆ. ಎದುರಾಳಿ ಇಬ್ಬರೂ ಅಭ್ಯರ್ಥಿಗಳು ಅತ್ಯಂತ ಸಣ್ಣ ಸಮುದಾಯಕ್ಕೆ ಸೇರಿದ್ದ, ಮರಾಠರಿಗೆ ಹಲವು ವರ್ಷಗಳಿಂದ ಪ್ರಾತಿನಿಧ್ಯ ಸಿಕ್ಕಿಲ್ಲ ಎಂಬ ವಾದ ಅವರದ್ದು.

    ದೇಶಪಾಂಡೆಗೆ ಸೋಲುಣಿಸಿದ್ದ ಶಿಷ್ಯ ಸುನಿಲ್ ಹೆಗಡೆ: ಪಕ್ಷ ಬದಲಿಸಿದರೂ ನಿರಂತರವಾಗಿ ಗೆದ್ದು ಸೋಲಿಲ್ಲದ ಸರದಾರ ಎನಿಸಿಕೊಂಡಿದ್ದ ದೇಶಪಾಂಡೆ ಅವರಿಗೆ ಸೋಲಿನ ರುಚಿ ತೋರಿಸಿದವರು ಶಿಷ್ಯ ಸುನೀಲ್‌ ಹೆಗಡೆ. 2008ರಲ್ಲಿ ಸುನೀಲ್‌ ಹೆಗಡೆ ಜೆಡಿಎಸ್‌ನಿಂದ ಸ್ಪರ್ಧಿಸಿ 46,031 ಮತ ಪಡೆದು ಕಾಂಗ್ರೆಸ್ ಮಣಿಸಿದ್ದರು. 2013ರಲ್ಲೂ ಅವರು ಜೆಡಿಎಸ್‌ನಿಂದ ಸ್ಪರ್ಧೆಗಿಳಿದು ದೇಶಪಾಂಡೆ ಅವರಿಗೆ ಪ್ರಬಲ ಪೈಪೋಟಿ ನೀಡಿದರು. 2018ರಲ್ಲಿ ಬಿಜೆಪಿ ಸೇರಿ ಸ್ಪರ್ಧಿಸಿದ ಹೆಗಡೆ ಸೋಲು ಕಂಡರು. ಆದರೂ ಕ್ಷೇತ್ರದಲ್ಲಿ ಹೆಸರಿಗೆ ಮಾತ್ರವಿದ್ದ ಬಿಜೆಪಿ ಪ್ರಾಬಲ್ಯವನ್ನು ದ್ವಿಗುಣಗೊಳಿಸಿದರು. ಕಳೆದ ಐದು ವರ್ಷಗಳಿಂದ ಹಳಿಯಾಳ, ಜೊಯಿಡಾ, ದಾಂಡೇಲಿಯಲ್ಲಿ ನಿರಂತರ ಸಂಘಟನೆಯ ಮೂಲಕ ಸುನೀಲ್‌ ಹೆಗಡೆ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಸದ್ಯಕ್ಕೆ ಪಕ್ಷದಲ್ಲಿ ಅವರನ್ನು ಹಿಂದಿಕ್ಕಬಲ್ಲ ಯಾವುದೇ ಅಧಿಕೃತ ಆಕಾಂಕ್ಷಿಗಳಿಲ್ಲ. ಹೀಗಾಗಿ ಈ ಬಾರಿ ಬಿಜೆಪಿಯಿಂದ ಸುನೀಲ್ ಹೆಗಡೆ ಸ್ಪರ್ಧೆ ಬಹುತೇಕ ಅಂತಿಮ ಎನ್ನಲಾಗುತ್ತಿದೆ.

    ಇಬ್ಬರು ಶಿಷ್ಯರ ಎದುರು ದೇಶಪಾಂಡೆ ಕುಸ್ತಿ: ದೇಶಪಾಂಡೆ ಮೂಲತಃ ಗೌಡ ಸಾರಸ್ವತ ಬ್ರಾಹ್ಮಣ ಸಮುದಾಯಕ್ಕೆ ಸೇರಿದ್ದು, ಬಿಜೆಪಿಯ ಸುನಿಲ್ ಹೆಗಡೆ ಕೂಡ ಅದೇ ಸಮುದಾಯವನ್ನು ಪ್ರತಿನಿಧಿಸುತ್ತಿದ್ದಾರೆ. ಎಸ್.ಎಲ್ ಘೋಟ್ನೇಕರ್ (ಶ್ರೀಕಾಂತ್ ಲಕ್ಷ್ಮಣ್ ಘೋಟ್ನೆಕರ್) ಪ್ರಬಲ ಮರಾಠ ಜನಾಂಗದವರಾಗಿದ್ದಾರೆ. ಬಿಜೆಪಿಯ ಸುನಿಲ್ ಹೆಗಡೆ, ಜೆಡಿಎಸ್‌ನ ಘೋಟ್ನೇಕರ್ ಆರ್.ವಿ ದೇಶಪಾಂಡೆ ಗರಡಿಯಲ್ಲಿ ಪಳಗಿದವರಾಗಿದ್ದಾರೆ. ಹೀಗಾಗಿ ಈ ಕ್ಷೇತ್ರದಲ್ಲಿ ಗುರು ಶಿಷ್ಯರ ಕಾಳಗಕ್ಕೆ ಸಾಕ್ಷಿಯಾಗಲಿದೆ.

    ಕ್ಷೇತ್ರದಲ್ಲಿ ಗೌಡ ಸಾರಸ್ವತ ಬ್ರಾಹ್ಮಣರ ಸಂಖ್ಯೆ ಮೂರು ಸಾವಿರದಷ್ಟಿದೆ. ಮರಾಠ ಸಮುದಾಯದವರ ಸಂಖ್ಯೆ ಸರಿ ಸುಮಾರು ಒಂದು ಲಕ್ಷಕ್ಕೂ ಹೆಚ್ಚಿದೆ. ಮುಸ್ಲಿಮರು 38 ಸಾವಿರದಷ್ಟು ಇದ್ದು, ಕ್ಷೇತ್ರದಲ್ಲಿ ಮರಾಠ ಹಾಗೂ ಮುಸ್ಲಿಂ ಸಮುದಾಯದ ಮತವೇ ನಿರ್ಣಾಯಕ. ಹೀಗಿರುವಾಗಲೂ ಅಲ್ಪ ಜನರಿರುವ ಗೌಡ ಸಾರಸ್ವತ (GSB) ಬ್ರಾಹ್ಮಣ ಸಮುದಾಯದಿಂದ ಆರ್.ವಿ ದೇಶಪಾಂಡೆ ಪ್ರತಿನಿಧಿಸುತ್ತಿದ್ದು 8 ಬಾರಿ ವಿಧಾನಸಭೆಗೆ ಆಯ್ಕೆಯಾಗಿ 25 ವರ್ಷಗಳ ಕಾಲ ಸಚಿವರಾಗಿ ಅಧಿಕಾರ ಅನುಭವಿಸಿದ್ದರು.

    ಸತತ ಗೆಲುವಿನ ಮೂಲಕ 25 ವರ್ಷ ಸಚಿವರಾದ ಆರ್.ವಿ ದೇಶಪಾಂಡೆ ರಾಜ್ಯ ಕಾಂಗ್ರೆಸ್‌ನ ಅಧ್ಯಕ್ಷರಾಗಿದ್ದವರು. ಎಂಟಕ್ಕೂ ಹೆಚ್ಚು ವಿವಿಧ ಖಾತೆ ನಿರ್ವಹಣೆ ಮಾಡಿದ ಖ್ಯಾತಿ ಜೊತೆ ಎಲ್ಲಾ ನಾಯಕರೊಂದಿಗೆ ಉತ್ತಮ ಸಂಪರ್ಕ ಹೊಂದಿದ್ದರು. ಹೀಗಾಗಿ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗುವ ಅವಧಿಗೂ ಮುಂಚೆ ಆರ್.ವಿ ದೇಶಪಾಂಡೆಯವರನ್ನು ಮುಖ್ಯಮಂತ್ರಿ ಮಾಡಬೇಕು ಎಂಬ ಪ್ರಬಲ ಒತ್ತಾಯ ಕೇಳಿಬಂದಿತ್ತು. ಆದರೆ ಇದನ್ನು ಸಾರಾಸಗಟಾಗಿ ತಿರಸ್ಕರಿಸಿದ್ದರು ಆರ್.ವಿ ದೇಶಪಾಂಡೆ.

    ಪ್ರಭಾವಿ ಖಾತೆಗೆ ಆಸೆ ಪಡದೇ ಹೆಚ್ಚಾಗಿ ಪ್ರವಾಸೋದ್ಯಮ, ಕೈಗಾರಿಕೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ಯ, ಉನ್ನತ ಶಿಕ್ಷಣ ಖಾತೆಗಳಿಗೆ ಸೀಮಿತವಾದರು. ಆದರೆ ಈವರೆಗೂ ತಾನೂ ಎಂದೂ ಕೂಡ ಮುಖ್ಯಮಂತ್ರಿ ಸ್ಥಾನ ಆಕಾಂಕ್ಷಿ ಎಂದು ಹೇಳದೇ ಕ್ಷೇತ್ರದಲ್ಲಿ ತಮಗೆ ದೊರೆತ ಸ್ಥಾನವನ್ನು ಅಚ್ಚುಕಟ್ಟಾಗಿ ನಿರ್ವಹಣೆ ಮಾಡುವ ಜೊತೆ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಬೆಳೆಯಲು ಕಾರಣೀಕರ್ತರಾಗಿದ್ದಾರೆ.

    ಮಾಜಿ ಮುಖ್ಯಮಂತ್ರಿ ದಿ. ರಾಮಕೃಷ್ಣ ಹೆಗಡೆ ಗೆದ್ದ ಕ್ಷೇತ್ರ: ಮಾಜಿ ಮುಖ್ಯಮಂತ್ರಿ ದಿ.ರಾಮಕೃಷ್ಣ ಹೆಗಡೆ 1967ರಲ್ಲಿ ರಾಷ್ಟ್ರೀಯ ಕಾಂಗ್ರೆಸ್‌ನಿಂದ ಹಳಿಯಾಳ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದಿದ್ದರು. ನಂತರದ ಎರಡು ಚುನಾವಣೆಗಳಲ್ಲಿ ವಿರೂಪಾಕ್ಷಪ್ಪ ಮಲ್ಲಪ್ಪ ವಾಡಿ ಶಾಸಕರಾದರು. 2008ರವರೆಗೆ ಕ್ಷೇತ್ರವು ಹಳಿಯಾಳ, ಯಲ್ಲಾಪುರ, ಮುಂಡಗೋಡ ವ್ಯಾಪ್ತಿಯನ್ನು ಹೊಂದಿತ್ತು. ಕ್ಷೇತ್ರ ಪುನರ್ ವಿಂಗಡನೆಯ ನಂತರ ಹಳಿಯಾಳ, ಜೊಯಿಡಾ ತಾಲೂಕುಗಳು ಕ್ಷೇತ್ರದ ವ್ಯಾಪ್ತಿಗೆ ಸೇರಿವೆ. ಈಗ ದಾಂಡೇಲಿ ಹೊಸ ತಾಲೂಕು ರಚನೆಯಾಗಿದೆ. ಪುರುಷರು 89,503 ಮಹಿಳೆಯರು 88,008 ಸೇರಿ 1,77,511 ಮತದಾರರಿದ್ದಾರೆ. ಮರಾಠರು, ಕುಣಬಿಗಳು, ಮುಸ್ಲಿಮರು ಇಲ್ಲಿನ ಬಹುಸಂಖ್ಯಾತ ನಿರ್ಣಾಯಕ ಮತದಾರರು.

    2018ರಲ್ಲಿ ಯಾರಿಗೆ ಎಷ್ಟು ಮತ?
    ಆರ್.ವಿ.ದೇಶಪಾಂಡೆ ಕಾಂಗ್ರೆಸ್- 61,577
    ಸುನೀಲ್‌ ಹೆಗಡೆ ಬಿಜೆಪಿ- 56,437
    ಕೆ.ಆರ್.ರಮೇಶ್‌ ಜೆಡಿಎಸ್- 72,09

    ರಂಗೇರಿದ ಚುನಾವಣೆ ಕಣ: ಎಂಟು ಬಾರಿ ಗೆದ್ದ ಆರ್.ವಿ ದೇಶಪಾಂಡೆ ಇದು ನನ್ನ ಕೊನೆಯ ಚುನಾವಣೆ ಎಂದು ಕ್ಷೇತ್ರದ ಜನರಿಗೆ ಹೇಳುತಿದ್ದಾರೆ. ಇತ್ತ ಬಿಜೆಪಿಯ ಸುನೀಲ್ ಹೆಗಡೆ ಹಿಂದುತ್ವಕ್ಕೆ ಮತ ನೀಡಿ ಎನ್ನುತ್ತಿದ್ದರೆ ಜೆಡಿಎಸ್‌ನ ಘೋಟ್ನೇಕರ್ ಈವರೆಗೂ ಪ್ರಬಲ ಮರಾಠ ಸಮುದಾಯಕ್ಕೆ ಪ್ರಾಧಾನ್ಯತೆ ದೊರೆತಿಲ್ಲ. ಹೀಗಾಗಿ ಮರಾಠ ಮುಖಂಡನಾದ ನನಗೆ ಮತ ನೀಡಬೇಕು ಎಂದು ಜನತೆಯ ಮುಂದೆ ಹೋಗುತ್ತಿದ್ದಾರೆ.

    ಈ ಹಿಂದೆ ದೇಶಪಾಂಡೆಯವರನ್ನು ಬೆಳೆಸಿದ್ದ ಜನತಾದಳ ಅವರನ್ನು ಸೋಲಿಸಲು ಸಹ ಕಾರಣವಾಗಿತ್ತು. ಇದೀಗ ಮತ್ತೆ ಜೆಡಿಎಸ್ ಇವರನ್ನು ಸೋಲಿಸಲು ಸಿದ್ಧತೆ ಮಾಡಿಕೊಂಡಿದೆ‌. ಒಟ್ಟಿನಲ್ಲಿ ಹಳಿಯಾಳ ವಿಧಾನಸಭಾ ಕ್ಷೇತ್ರದಲ್ಲಿ ಧರ್ಮ, ಜಾತಿ, ಜ್ಯಾತ್ಯಾತೀತತೆ ಎನ್ನುವ ಮಾನದಂಡದಡಿ ಗುರುಶಿಷ್ಯರು ಸೆಣಸಾಟದಲ್ಲಿ ನಿಂತಿದ್ದು, ಸೋಲು ಕಾಣದ ಸರದಾರ ಆರ್.ವಿ ದೇಶಪಾಂಡೆ ತಮ್ಮ 76ನೇ ಇಳಿ ವಯಸ್ಸಿನಲ್ಲಿ ಮತ್ತೊಮ್ಮೆ ಅಗ್ನಿ ಪರೀಕ್ಷೆಗೆ ನಿಂತಿದ್ದಾರೆ. ಒಂದು ವೇಳೆ ಮತ್ತೊಮ್ಮೆ ಗೆದ್ದರೆ ರಾಜ್ಯದಲ್ಲೇ ಅತೀ ಹೆಚ್ಚು ಬಾರಿ ಗೆದ್ದ ರಾಜಕಾರಣಿ ಜೊತೆ ಹಿರಿಯ ರಾಜಕಾರಣಿ ಎಂಬ ಹೆಗ್ಗಳಿಕೆ ಸಹ ಇವರದ್ದಾಗಲಿದೆ.

  • ಧಾರವಾಡ ಐಐಟಿ ಆಗಲು ಕಾಂಗ್ರೆಸ್ ಕಾರಣ: ಮಾಜಿ ಸಚಿವ ವಿನಯ್ ಕುಲಕರ್ಣಿ

    ಧಾರವಾಡ ಐಐಟಿ ಆಗಲು ಕಾಂಗ್ರೆಸ್ ಕಾರಣ: ಮಾಜಿ ಸಚಿವ ವಿನಯ್ ಕುಲಕರ್ಣಿ

    ಧಾರವಾಡ: ಧಾರವಾಡದಲ್ಲಿ ಐಐಟಿ (IIT) ಆಗಲು ಕಾರಣವೇ ಕಾಂಗ್ರೆಸ್ (Congress) ಎಂದು ಮಾಜಿ ಸಚಿವ ವಿನಯ್ ಕುಲಕರ್ಣಿ (Vinay Kulkarni) ವೀಡಿಯೋ ಮೂಲಕ ಹೇಳಿದ್ದಾರೆ.

    ಧಾರವಾಡದಲ್ಲಿ (Dharwad) ಐಐಟಿ ಉದ್ಘಾಟನೆ ಆಗುತ್ತಿರುವುದು ಖುಷಿ ತಂದಿದೆ. ಯಾಕೆಂದರೆ ಧಾರವಾಡ ವಿದ್ಯಾಕಾಶಿ ಎಂದೇ ಖ್ಯಾತಿಯಾಗಿದೆ. ಹಿಂದಿನಿಂದಲೂ ಧಾರವಾಡ ಎಂದರೆ ವಿದ್ಯಾರ್ಥಿಗಳ ಶಿಕ್ಷಣದ ಕೇಂದ್ರ. ಇದು ಉದ್ಘಾಟನೆ ಆಗುತ್ತಿರುವ ಹಿಂದೆ ಕಾಂಗ್ರೆಸ್ ಹಾಗೂ ಸಿದ್ದರಾಮಯ್ಯನವರ (Siddaramaiah) ದೊಡ್ಡ ಪಾತ್ರವಿದೆ. ಕರ್ನಾಟಕದಲ್ಲಿ ಐಐಟಿ ಸ್ಥಾಪನೆ ವೇಳೆ ರಾಯಚೂರಿಗೆ (Raichur) ಹೋಗಬೇಕು ಎಂದು ಸರ್ಕಾರ ನಿರ್ಧಾರ ಮಾಡಿತ್ತು. ಆಗ ನಾವೆಲ್ಲಾ ಮುಖಂಡರು ಹೋಗಿ ಧಾರವಾಡಕ್ಕೆ ಐಐಟಿ ಬರಬೇಕೆಂದು ಸಿದ್ದರಾಮಯ್ಯನವರ ಬಳಿ ಮನವಿ ಮಾಡಿದಾಗ ಸಿದ್ದರಾಮಯ್ಯನವರು ಅದನ್ನು ಮೈಸೂರಿಗೆ (Mysuru) ಶಿಫ್ಟ್ ಮಾಡಿದರು. ಅದನ್ನು ಮೈಸೂರಿನಿಂದ ಧಾರವಾಡಕ್ಕೆ ಬರುವಂತೆ ಮಾಡಲು ನಾವು ಬಹಳ ದೊಡ್ಡ ಹೋರಾಟ ಮಾಡಬೇಕಾಯಿತು. ಈ ಹೋರಾಟದ ಪ್ರತಿಫಲ ಧಾರವಾಡದಲ್ಲಿ ಐಐಟಿ ಉದ್ಘಾಟನೆಗೊಳ್ಳಲಿದೆ. ಇದು ನಮಗೆಲ್ಲರಿಗೂ ಸಂತಸವನ್ನು ತಂದಿದೆ ಎಂದರು. ಇದನ್ನೂ ಓದಿ: ವಧುದಕ್ಷಿಣೆ ಕಡಿಮೆ ಆಯ್ತು ಅಂತಾ ಮದುವೆ ಬೇಡವೆಂದ ಯುವತಿ – ಪ್ರಕರಣ ದಾಖಲಿಸದ ಪೊಲೀಸರು

    ನಂತರ ಅದರ ಸ್ಥಾಪನೆಗಾಗಿ ಐದೂವರೆ ಎಕರೆ ಜಮೀನನ್ನು ಕೇಳಿದರು. ಇದಕ್ಕಾಗಿ ನಾವು ಅವತ್ತಿನ ಕೈಗಾರಿಕಾ ಸಚಿವರಾದ ಆರ್.ವಿ.ದೇಶಪಾಂಡೆ (R.V.Deshpande) ಬಳಿ ಹೋದೆವು. ಅವರ ಜೊತೆಗೆ ಸಿದ್ದರಾಮಯ್ಯನವರು ಕೂಡಾ ನಮ್ಮ ಜೊತೆ ಬೆಂಬಲವಾಗಿ ನಿಂತರು. ಐದೂವರೆ ಎಕರೆ ಜಮೀನನ್ನು ಸಿದ್ದರಾಮಯ್ಯನವರ ನೇತೃತ್ವದಲ್ಲಿ ಕಾಂಗ್ರೆಸ್ ಸರ್ಕಾರ ನಮಗೆ ನೀಡಿತು. ನಂತರದ ದಿನಗಳಲ್ಲಿ ಉನ್ನತ ಶಿಕ್ಷಣ ಸಚಿವರಾದ ಬಸವರಾಜ್ ರಾಯರೆಡ್ಡಿ (Basavaraj Rayareddy) ಅವರು ಕೂಡಾ ಪ್ರಮುಖ ಪಾತ್ರ ವಹಿಸಿದ್ದಾರೆ. ಅಲ್ಲದೇ ಇದರಲ್ಲಿ ಹಲವಾರು ಬಿಜೆಪಿ (BJP) ನಾಯಕರು ಕೂಡಾ ಕೈಜೋಡಿಸಿದ್ದರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಇದನ್ನೂ ಓದಿ: ಖ್ಯಾತ ನಟ ಸತೀಶ್ ಕೌಶಿಕ್ ಸಾವು: ತನಿಖೆ ಕೈಗೊಂಡ ಪೊಲೀಸ್

    ವಿನಯ್ ಕುಲಕರ್ಣಿ

    ಈ ಐಐಟಿ ಫೌಂಡೇಶನ್ ವೇಳೆ ಇದರಲ್ಲಿ ಶೇ.25ರಷ್ಟು ಕರ್ನಾಟಕದ ವಿದ್ಯಾರ್ಥಿಗಳಿಗೆ ನೀಡಬೇಕು ಎಂದು ಬೇಡಿಕೆಯನ್ನು ಇಟ್ಟಿದ್ದೆವು. ಅಷ್ಟೇ ಅಲ್ಲದೇ ಐದೂವರೆ ಎಕರೆ ಭೂಮಿ ನೀಡಿದ ರೈತರ ಮಕ್ಕಳಿಗೆ ಇದರಲ್ಲಿ ಉದ್ಯೋಗ ನೀಡಬೇಕಾಗಿ ಕೇಳಿದ್ದೆವು. ಇವೆರಡೂ ಕೂಡಾ ಯಶಸ್ವಿಯಾಗಲಿಲ್ಲ. ನಾಳೆ ನಡೆಯುವ ಉದ್ಘಾಟನೆ ವೇಳೆ ಇದನ್ನು ಘೋಷಿಸಿ ತಾವು ನೀಡಿದ ವಚನವನ್ನು ಉಳಿಸಿಕೊಳ್ಳಬೇಕು. ಭೂಮಿ ಕಳೆದುಕೊಂಡ ರೈತರ ಮಕ್ಕಳಿಗೆ ಡಿ ದರ್ಜೆಯ ಶಾಶ್ವತ ಕೆಲಸವನ್ನು ಮಾಡಿಕೊಡಬೇಕು ಎಂದು ಎಲ್ಲಾ ಮುಖಂಡರಲ್ಲಿ ವಿನಂತಿ ಮಾಡಿಕೊಂಡರು. ಇದನ್ನೂ ಓದಿ: ಮಿಥುನ್ ರೈ ವಿವಾದ : ಬಕೆಟ್ ಅಲ್ಲ, ಟ್ಯಾಂಕ್ ಹಿಡೀತಿನಿ ಎಂದ ರಕ್ಷಿತ್ ಶೆಟ್ಟಿ

  • ಮುಂದೆ ಯಾರು ಇಂತಹ ಹೇಳಿಕೆ ಕೊಡಬಾರದು ಅಂತಹ ಕ್ರಮ ಆಗಬೇಕು: ದೇಶಪಾಂಡೆ

    ಮುಂದೆ ಯಾರು ಇಂತಹ ಹೇಳಿಕೆ ಕೊಡಬಾರದು ಅಂತಹ ಕ್ರಮ ಆಗಬೇಕು: ದೇಶಪಾಂಡೆ

    ಬೆಂಗಳೂರು: ಗಾಂಧೀಜಿ ವಿರುದ್ಧ ಅವಹೇಳನಕಾರಿ ಹೇಳಿಕೆ ಕೊಟ್ಟ ಅನಂತ್ ಕುಮಾರ್ ಹೆಗ್ಡೆ ಬೇಷರತ್ ದೇಶದ ಜನರ ಕ್ಷಮೆ ಕೇಳಬೇಕು. ಹೆಗ್ಡೆ ವಿರುದ್ಧ ಲೋಕಸಭಾ ಸ್ಪೀಕರ್ ಕ್ರಮ ತಗೆದುಕೊಳ್ಳಬೇಕು. ಕ್ರಮ ಹೇಗಿರಬೇಕು ಎಂದರೆ ಮುಂದೆ ಯಾರು ಇಂತಹ ಮಾತಬಾಡಬಾರದು ಅಂತಹ ಕ್ರಮ ತಗೆದುಕೊಳ್ಳಬೇಕು ಎಂದು ಮಾಜಿ ಸಚಿವ ಆರ್.ವಿ.ದೇಶಪಾಂಡೆ ಆಗ್ರಹಿಸಿದ್ದಾರೆ.

    ಸಂಸದ ಅನಂತ್ ಕುಮಾರ್ ಹೆಗ್ಡೆ ರಾಷ್ಟ್ರಪಿತ ಮಹಾತ್ಮ ಗಾಂಧಿಜೀಗೆ ಅವಮಾನ ಮಾಡಿದ್ದಾರೆ. ಇದು ಬರೀ ಗಾಂಧೀಜಿ ಅವರಿಗೆ ಮಾಡಿದ ಅವಮಾನ ಅಲ್ಲ. ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ಎಲ್ಲರಿಗೂ ಮಾಡಿದ ಅವಮಾನ. ಸಂವಿಧಾನಕ್ಕೂ ಅಪಚಾರ ಮಾಡಿದ್ದಾರೆ. ಹೆಗ್ಡೆ ಇಡೀ ದೇಶದ ಜನ, ಸ್ವಾತಂತ್ರ್ಯ ಹೋರಾಟಗಾರರಿಗೆ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.

    ಇಂತಹ ಬೇಜವಬ್ದಾರಿ ಹೇಳಿಕೆಗಳನ್ನು ಯಾವ ಭಾರತೀಯನು ಸಹಿಸಲು ಸಾಧ್ಯವಿಲ್ಲ. ಬಿಜೆಪಿ ನಾಯಕರು ಹೆಗ್ಡೆ ವಿರುದ್ಧ ಕ್ರಮ ಕೈಗೊಳ್ಳಬೇಕು. ಹೆಗಡೆ ಹೇಳಿಕೆಯನ್ನ ನಾನು ಖಂಡಿಸುತ್ತೇನೆ. ಸ್ವಾತಂತ್ರ್ಯ ತಂದುಕೊಟ್ಟವರನ್ನ ಅವಮಾನಿಸಿದ್ದಾರೆ. ಅವರು ಉತ್ತರ ಕನ್ನಡದಿಂದ ಸಂಸದರಾಗಿದ್ದಾರೆ. ಅಂಕೋಲಾ, ಶಿರಸಿ, ಸಿದ್ದಾಪುರ ಜನ ಸ್ವಾತಂತ್ರ್ಯ ಹೋರಾಟದಲ್ಲಿ ಗುರುತಿಸಿಕೊಂಡಿದ್ದರು ಎಂದರು.

    ಮೊದಲು ರಾಷ್ಟ್ರದ ಜನರ ಕ್ಷಮೆಯಾಚಿಸಬೇಕು. ಬಿಜೆಪಿ ರಾಷ್ಟ್ರೀಯ ನಾಯಕರು ಕ್ರಮ ತೆಗೆದುಕೊಳ್ಳಬೇಕು. ಆರು ಬಾರಿ ಸಂಸದರಾಗಿ ಆರಿಸಿ ಬಂದಿದ್ದಾರೆ. ಬೇಜವಾಬ್ದಾರಿಯುತವಾಗಿ ವರ್ತಿಸಿದ್ದಾರೆ. ನಾನೊಬ್ಬ ಶಾಸಕ ನಾನು ತಪ್ಪು ಮಾಡಿದರೆ ನನ್ನ ಮೇಲೂ ನಮ್ಮ ಸ್ಪೀಕರ್ ಕ್ರಮ ತೆಗೆದುಕೊಳ್ಳಬಹುದು. ಹಾಗೆಯೇ ಹೆಗ್ಡೆ ವಿರುದ್ಧ ಗಂಭೀರ ಆರೋಪವಿದೆ ಸ್ಪೀಕರ್ ಕ್ರಮ ತಗೆದುಕೊಳ್ಳಬೇಕು ಎಂದು ದೇಶಪಾಂಡೆ ಆಗ್ರಹಿಸಿದರು.