Tag: R Shankar

  • ನಂಗೆ ಮಂತ್ರಿ ಸ್ಥಾನ ಕೊಡ್ಲೇಬೇಕು, ಕೊಟ್ಟೇ ಕೊಡ್ತಾರೆ: ವಿಶ್ವನಾಥ್ ಗುಡುಗು

    ನಂಗೆ ಮಂತ್ರಿ ಸ್ಥಾನ ಕೊಡ್ಲೇಬೇಕು, ಕೊಟ್ಟೇ ಕೊಡ್ತಾರೆ: ವಿಶ್ವನಾಥ್ ಗುಡುಗು

    ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆ ಬಳಿಕ ಮಿತ್ರಮಂಡಳಿ ಸಚಿವರು ಸೈಲೆಂಟಾಗಿದ್ದಾರೆ. ಆದರೆ ಸೋತವರ ಅಸಮಾಧಾನ ಹಾಗೆಯೇ ಮುಂದುವರಿದಿದೆ. ಮಾಜಿ ಸಚಿವ ಎಚ್. ವಿಶ್ವನಾಥ್, ಅನರ್ಹ ಶಾಸಕ ಆರ್. ಶಂಕರ್ ಮತ್ತು ಮಾಜಿ ಸಚಿವ ಎಂಟಿಬಿ ನಾಗರಾಜ್ ತಮ್ಮ ಬೇಗುದಿ ಮುಂದುವರಿಸಿದ್ದಾರೆ. ಆಗಾಗ ಸಿಎಂ ಯಡಿಯೂರಪ್ಪ ಭೇಟಿ ಮಾಡುವ ಮೂಲಕ ಸಚಿವ ಸ್ಥಾನಕ್ಕೆ ಈ ಮೂವರೂ ಒತ್ತಡ ತಂತ್ರ ಮುಂದುವರಿಸಿದ್ದಾರೆ.

    ಇಂದೂ ಸಹ ಎಚ್. ವಿಶ್ವನಾಥ್ ಮತ್ತು ಆರ್. ಶಂಕರ್ ಅವರು ಬೆಂಗಳೂರಿನ ಧವಳಗಿರಿ ನಿವಾಸದಲ್ಲಿ ಸಿಎಂ ಯಡಿಯೂರಪ್ಪ ಭೇಟಿ ಮಾಡಿ ರಾಜಕೀಯ ವಿಚಾರ ಚರ್ಚೆ ಮಾಡಿದರು. ಎಚ್. ವಿಶ್ವನಾಥ್ ಸಚಿವ ಸ್ಥಾನದ ಪಟ್ಟು ಮುಂದುವರಿಸಿದ್ದು, ಸಿಎಂ ಬಳಿ ಇಂದು ಸಹ ಈ ಸಂಬಂಧ ಚರ್ಚೆ ನಡೆಸಿದರು ಎನ್ನಲಾಗಿದೆ.

    ಸಿಎಂ ಭೇಟಿ ಬಳಿಕ ಮಾಧ್ಯಮಗಳ ಜೊತೆ ಮಾತಾಡಿದ ಎಚ್. ವಿಶ್ವನಾಥ್, ನಾನು ಸಿಎಂ ಬಳಿ ಮಂತ್ರಿ ವಿಚಾರ ಆಗಲಿ, ರಾಜಕೀಯ ವಿಚಾರ ಆಗಲಿ ಚರ್ಚೆ ಮಾಡಲ್ಲ. ಮಂತ್ರಿ ಸ್ಥಾನ ಯಾವಾಗ ಬರುತ್ತೆ, ಅದಾಗಿಯೇ ಬರುತ್ತೆ. ಸಚಿವ ಸ್ಥಾನ ಕೊಡಿ ಅಂತ ನಾನು ಪದೇ ಪದೇ ಕೇಳಲ್ಲ. ನನಗೆ ಸಚಿವ ಸ್ಥಾನ ಕೊಡಲೇಬೇಕು, ಕೊಟ್ಟೆ ಕೊಡ್ತಾರೆ ಎಂದು ಗುಡುಗಿದರು.

    ಸಚಿವ ಸ್ಥಾನ ಕೊಟ್ರೆ ಕೆಲಸ ಮಾಡ್ತೀನಿ. ಆದರೆ ನಾನು ಸಚಿವ ಸ್ಥಾನಕ್ಕಾಗಿ ಯಾವತ್ತೂ ಅಂಗಲಾಚಿಲ್ಲ. ನಾನು ಈ ಹಿಂದೆ ಸಚಿವನಾಗಿದ್ದಾಗ ಕೊಟ್ಟ ಕಾರ್ಯಕ್ರಮಗಳು ಇನ್ನೂ ಚಾಲ್ತಿಯಲ್ಲಿವೆ ಅಂತ ಇದೇ ವೇಳೆ ವಿಶ್ವನಾಥ್ ಹೇಳಿದರು. ನಂದಗಢದಲ್ಲಿ ಸಂಗೊಳ್ಳಿ ರಾಯಣ್ಣ ಪ್ರಾಧಿಕಾರಕ್ಕೆ ಹಣ ಬಿಡುಗಡೆ ಮಾಡುವಂತೆ ಕೇಳಲು ಬಂದಿದ್ವಿ. ಹಣ ಬಿಡುಗಡೆಗೆ ಸಿಎಂ ಒಪ್ಪಿದ್ದಾರೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.

    ಅನರ್ಹ ಶಾಸಕ ಆರ್. ಶಂಕರ್ ಸಹ ವಿಶ್ವನಾಥ್ ಜೊತೆಗೇ ಸಿಎಂ ಭೇಟಿ ಮಾಡಿದರು. ಮಾಧ್ಯಮಗಳ ಜೊತೆ ಮಾತಾಡಿದ ಆರ್. ಶಂಕರ್, ನನಗೂ ಸಚಿವ ಸ್ಥಾನ ಸಿಗುವ ಭರವಸೆಯಿದೆ. ಮುಂದೆ ಎಂಎಲ್‍ಸಿ ಮಾಡಿ ಸಚಿವ ಸ್ಥಾನ ಕೊಡಲಿದ್ದಾರೆ ಎಂದರು.

  • ಮತ್ತೊಮ್ಮೆ ಸಂಪುಟ ವಿಸ್ತರಣೆಗೆ ಬಿಎಸ್‍ವೈ ಷರತ್ತಿನ ವ್ಯೂಹ!

    ಮತ್ತೊಮ್ಮೆ ಸಂಪುಟ ವಿಸ್ತರಣೆಗೆ ಬಿಎಸ್‍ವೈ ಷರತ್ತಿನ ವ್ಯೂಹ!

    ಬೆಂಗಳೂರು: ನನ್ನ ಕಂಡೀಷನ್‍ಗೆ ಮಾತ್ರ ನಾನು ಓಕೆ..! ಇದನ್ನ ಹೇಳಿರೋರು ಬೇರೆ ಯಾರೂ ಅಲ್ಲ. ಅವರೇ ಸಿಎಂ ಯಡಿಯೂರಪ್ಪ ಅವರು. 6 ಸಚಿವ ಸ್ಥಾನ ತುಂಬುವ ಸೂತ್ರಕ್ಕೆ ಹೈಕಮಾಂಡ್‍ಗೆ ಚಕ್ರವ್ಯೂಹ ಹೆಣೆದಿದ್ದಾರೆ. ರಾಜಾಹುಲಿಯ ಚಾಣಕ್ಯ ನಡೆಯಿಂದ ಯಾರಿಗೇ ಎಷ್ಟು ಲಾಭ-ನಷ್ಟ ಅನ್ನೋ ಕುತೂಹಲ ಗರಿಗೆದರಿದೆ. ನಿಮ್ ಸೂತ್ರಕ್ಕೆ ನನ್ ಕಂಡೀಶನ್ ಅಸಲಿ ಇನ್ ಸೈಡ್ ಸ್ಟೋರಿ ಬಗ್ಗೆಯೇ ಈಗ ದೊಡ್ಡ ಚರ್ಚೆ.

    ಅಂದಹಾಗೆ ಬಜೆಟ್‍ಗೂ ಮುನ್ನ ಸಂಪುಟ ವಿಸ್ತರಣೆಗೆ ಹೈಕಮಾಂಡ್ ಸಲಹೆ ನೀಡಿದ್ದಾರೆ ಎನ್ನಲಾಗಿದೆ. ಆದ್ರೆ ಹೈಕಮಾಂಡ್ ಸಲಹೆಗೆ ಸಿಎಂ ಯಡಿಯೂರಪ್ಪ ಅವರು ಬತ್ತಳಿಕೆಯಿಂದ ಕಂಡೀಶನ್ ಅಸ್ತ್ರ ಪ್ರಯೋಗವಾಗಿದೆ ಅನ್ನೋದು ಲೇಟೆಸ್ಟ್ ಸುದ್ದಿ. ವಲಸಿಗ ಹಕ್ಕಿಗಳಿಗೆ ಸರಿಯಾದ ಗೂಡು ಭದ್ರವಾದರೆ ಮಾತ್ರ 6 ಸ್ಥಾನಗಳನ್ನು ತುಂಬಲು ಯಡಿಯೂರಪ್ಪ ಒಪ್ಪಿಗೆ ಸೂಚಿಸುತ್ತಾರೆ ಅಂತಾ ಆಪ್ತ ವಲಯ ಹೇಳಿದೆ. ಹಾಗಾಗಿಯೇ ಸೋತಿರುವ ಹೆಎಚ್.ವಿಶ್ವನಾಥ್, ಎಂಟಿಬಿ ನಾಗರಾಜ್ ಅವರಿಗೆ ಸೂಕ್ತ ಸ್ಥಾನಮಾನ ಕಲ್ಪಿಸುವ ಭರವಸೆ ಕೊಡಬೇಕು.


    ಮುನಿರತ್ನ, ಪ್ರತಾಪಗೌಡ ಪಾಟೀಲ್, ಆರ್.ಶಂಕರ್ ಅವರಿಗೂ ಸಚಿವ ಸ್ಥಾನ ಭದ್ರಪಡಿಸಬೇಕು. ಯಾರೂ ಏನೇ ಅನ್ನಲಿ ಜೂನ್ ಬಳಿಕ ಈ ಐದು ಜನರಿಗೆ ಸ್ಥಾನಮಾನ ಕಲ್ಪಿಸಬೇಕು. ಹಾಗಾದ್ರೆ ಮಾತ್ರ ಬಜೆಟ್‍ಗೂ ಮುನ್ನ ಮತ್ತೊಮ್ಮೆ ಸಂಪುಟ ವಿಸ್ತರಣೆ ಮಾಡಿಬಿಡ್ತೀನಿ. ನೀವು ಹೇಳಿದಂತೆ 6 ಸಚಿವ ಸ್ಥಾನಗಳನ್ನು ತುಂಬಿಬಿಡ್ತೀನಿ ಅಂತಾ ಬಿಜೆಪಿ ಹೈಕಮಾಂಡ್‍ಗೆ ಸಿಎಂ ಯಡಿಯೂರಪ್ಪ ತಮ್ಮ ಅಭಿಪ್ರಾಯ ತಿಳಿಸಿದ್ದಾರಂತೆ.

    ಇನ್ನೊಂದೆಡೆ ಜೂನ್ ಬಳಿಕ ಪುನಾರಚನೆ ಪಕ್ಕಾ ಆಗ್ಬೇಕು ಅನ್ನೋದು ಯಡಿಯೂರಪ್ಪ ಅವರ ವಾದ ಎನ್ನಲಾಗಿದೆ. ಪುನಾರಚನೆಯ ಸಂದರ್ಭದಲ್ಲಿ ಮೊದಲ ಹಂತದಲ್ಲಿ ಕ್ಯಾಬಿನೆಟ್‍ಗೆ ಸೇರಿದವರ ಕಾರ್ಯವೈಖರಿ ಮೌಲ್ಯಮಾಪನ ಮಾಡಬೇಕು. ಮೌಲ್ಯಮಾಪನದಲ್ಲಿ ಪಾಸ್ ಆದವರನ್ನ ಸಂಪುಟದಲ್ಲಿ ಇರಿಸಿಕೊಳ್ಳಿ, ಫೇಲ್ ಆದವರನ್ನ ಸಂಪುಟದಿಂದ ಕೈ ಬಿಡಬಹುದು. ಹೈಕಮಾಂಡ್ ಇದಕ್ಕೆ ಬದ್ಧವಾದ್ರೆ ನನ್ನದೇನೂ ತಕರಾರಿಲ್ಲ ಎಂದು ಪರೋಕ್ಷವಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಸಂದೇಶ ರವಾನಿಸಿದ್ದಾರೆ ಎನ್ನಲಾಗಿದೆ.

  • ಬೇರೆಯವ್ರ ವಿಷ್ಯ ನಂಗೊತ್ತಿಲ್ಲ, ನನ್ನ ಮಾತ್ರ ಮಿನಿಸ್ಟರ್ ಮಾಡಿ: ಶಂಕರ್

    ಬೇರೆಯವ್ರ ವಿಷ್ಯ ನಂಗೊತ್ತಿಲ್ಲ, ನನ್ನ ಮಾತ್ರ ಮಿನಿಸ್ಟರ್ ಮಾಡಿ: ಶಂಕರ್

    ಬೆಂಗಳೂರು: ಬೇರೆಯವರ ವಿಷಯ ನನಗೆ ಗೊತ್ತಿಲ್ಲ. ನನ್ನನ್ನು ಮಾತ್ರ ಸಚಿವರನ್ನಾಗಿ ಮಾಡಲೇಬೇಕು ಎಂದು ಮಾಜಿ ಸಚಿವ ಶಂಕರ್ ತಿಳಿಸಿದ್ದಾರೆ. ಸಿಎಂ ಯಡಿಯೂರಪ್ಪ ಶೀಘ್ರವಾಗಿ ಸಚಿವ ಸಂಪುಟ ವಿಸ್ತರಣೆ ಮಾಡುವ ಭರವಸೆ ನೀಡುತ್ತಿದ್ದಂತೆ ಶಂಕರ್, ಕೊಟ್ಟ ಮಾತಿನಂತೆ ನನ್ನನ್ನ ಸಚಿವರನ್ನಾಗಿ ಮಾಡಿ ಎಂದು ಪಟ್ಟು ಹಿಡಿದಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಬೇರೆಯವರ ವಿಷಯ ನನಗೆ ಗೊತ್ತಿಲ್ಲ. ಸರ್ಕಾರಕ್ಕಾಗಿ ತ್ಯಾಗ ಮಾಡಿದ್ದೇನೆ. ಸೋತಿರುವ ಲಕ್ಷ್ಮಣ ಸವದಿಯವರಿಗೆ ಅವಕಾಶ ಮಾಡಿಕೊಟ್ಟಿದ್ದಾರೆ. ತ್ಯಾಗ ಮಾಡಿರುವ ನನಗೆ ಅವಕಾಶ ಮಾಡಿಕೊಡಬೇಕು. ರಿಜ್ವಾನ್‍ರಿಂದ ತೆರವಾಗಿರುವ ವಿಧಾನ ಪರಿಷತ್ ಸ್ಥಾನಕ್ಕೆ ನನ್ನನ್ನು ನೇಮಕ ಮಾಡಿ ನನ್ನನ್ನ ಸಚಿವರನ್ನಾಗಿ ಮಾಡಲಿ ಎಂದು ಹೇಳಿದ್ದಾರೆ.

    ಸರ್ಕಾರಕ್ಕಾಗಿ ನನ್ನ ಕ್ಷೇತ್ರವನ್ನ ಶಾಸಕ ಸ್ಥಾನವನ್ನ ಎಲ್ಲವನ್ನೂ ಕಳೆದುಕೊಂಡಿದ್ದೇನೆ. ನನಗೆ ನ್ಯಾಯ ಸಿಗಬೇಕು. ಯಾವುದೂ ಕಷ್ಟವಲ್ಲ. ಇರುವ ಪರಿಷತ್ ಸದಸ್ಯರ ರಾಜೀನಾಮೆ ಪಡೆದು ಉಳಿದವರಿಗೆ ಅವಕಾಶ ಮಾಡಿಕೊಡಲಿ ಎಂದಿದ್ದಾರೆ.

    ಲಕ್ಷ್ಮಣ ಸವದಿಯವರು ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಮರುದಿನ ಮತ್ತೆ ಪ್ರಮಾಣ ವಚನ ಸ್ವೀಕರಿಸಲಿ. ಆಗ ಮತ್ತೆ 6 ತಿಂಗಳು ಅವಕಾಶ ಇರುತ್ತೆ. ಈಗ ಕಾಲಿ ಇರುವ ಒಂದು ಸ್ಥಾನಕ್ಕೆ ನನಗೆ ಅವಕಾಶ ಕಲ್ಪಿಸಿ ಕೊಡಲಿ. ನನಗೆ ಮುಖ್ಯಮಂತ್ರಿ ಯಡಿಯೂರಪ್ಪ ಮಾತು ಕೊಟ್ಟಿದ್ದಾರೆ. ನನಗೆ ಅವರ ಮೇಲೆ ಸಂಪೂರ್ಣ ನಂಬಿಕೆ ಇದೆ. ನನಗೆ ಅವಕಾಶ ಮಾಡಿ ಕೊಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

  • ಗೆದ್ದವರಿಗೆ ಸೋತವರ ಗುದ್ದು!

    ಗೆದ್ದವರಿಗೆ ಸೋತವರ ಗುದ್ದು!

    ಬೆಂಗಳೂರು: ಉಪಚುನಾವಣೆಯಲ್ಲಿ ಗೆದ್ದ ಬಿಜೆಪಿಯ ನೂತನ ಶಾಸಕರಿಗೆ ಸೋತವರು ಗುದ್ದು ನೀಡಿದ್ದಾರೆ.

    ಸೋತವರು ಸದ್ಯಕ್ಕೆ ಸಚಿವರಾಗುವಂತಿಲ್ಲ ಎಂಬ ಸಿಎಂ ಹೇಳಿಕೆ ಬೆನ್ನಲ್ಲೇ ಸೋತ ಹೆಚ್.ವಿಶ್ವನಾಥ್, ಎಂಟಿಬಿ ನಾಗರಾಜ್ ಮತ್ತು ಸ್ಪರ್ಧೆಯಿಂದ ಹಿಂದೆ ಸರಿದಿದ್ದ ಆರ್.ಶಂಕರ್ ಮಿತ್ರಮಂಡಳಿಯ ಇತರರ ಮೇಲೆ ಕೋಪಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಗೆಲುವಿನ ಬಳಿಕ ನೀವ್ಯಾರು ನಮಗೆ ಸಚಿವ ಸ್ಥಾನ ಕೊಡುವಂತೆ ಹೇಳುತ್ತಿಲ್ಲ. ನಿಮಗೆ ಮಾತ್ರ ಸಚಿವ ಸ್ಥಾನ ಬೇಕೆಂದು ಮಾತ್ರ ಹೇಳಿದ್ರೆ ಹೇಗೆ? ನಮ್ಮೆಲ್ಲರ ನಡುವೆ ಮೊದಲಿನಂತೆ ಒಗ್ಗಟ್ಟಿಲ್ಲ. ನಿಮ್ಮ ಜೊತೆಗೆ ಬಿಜೆಪಿಗೆ ಬಂದ ನಾವು ಈಗ ಬೇರೆಯಾಗಿ ಬಿಟ್ಟವಾ ಎಂದು ಪ್ರಶ್ನಿಸಿ ಎಂಟಿಬಿ, ವಿಶ್ವನಾಥ್, ಆರ್. ಶಂಕರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

    ಇತ್ತ ಸಿಎಂ ಹೇಳಿಕೆಗೆ ಪರೋಕ್ಷವಾಗಿ ಅಸಮಾಧಾನ ಹೊರ ಹಾಕಿರುವ ಹಳ್ಳಿ ಹಕ್ಕಿ, ಸೋತವರ ಬಿಟ್ಟು ಸಚಿವ ಸಂಪುಟ ವಿಸ್ತರಣೆ ಹೇಗೆ ಸಾಧ್ಯ? ಸಿಎಂ ಅವರ ಮಾತನ್ನು ನೆನಪಿಸ್ತೇವೆ. ನಮ್ಮದು ಸಾಮಾನ್ಯ ಸೋಲಲ್ಲ. ಬಿಜೆಪಿ ಇಲ್ಲದ ಕಡೆ ಚುನಾವಣೆಗೆ ನಿಂತು ದೊಡ್ಡ ಮಟ್ಟದಲ್ಲಿ ಮತ ಪಡೆದಿದ್ದೇವೆ. ಸಿಎಂ ಹಾಗೂ ಬಿಜೆಪಿ ಇದನ್ನು ಪರಿಗಣಿಸಬೇಕು. ಶೀಘ್ರ ದಲ್ಲೆ ಎಲ್ಲಾ 17 ಶಾಸಕರು ಸಭೆ ಮಾಡಿ ಸಿಎಂ ಭೇಟಿ ಮಾಡುತ್ತೇವೆ ಎಂದಿದ್ದಾರೆ.

    ಹೊಸಕೋಟೆಯಲ್ಲಿ ಸಿಎಂ ಹೇಳಿಕೆಗೆ ಪ್ರತಿಕ್ರಿಯಿಸಿರುವ ಎಂಟಿಬಿ, ಮುಖ್ಯಮಂತ್ರಿಗಳು ಕೊಟ್ಟ ಮಾತು ತಪ್ಪಲ್ಲ ಅನ್ನೋ ವಿಶ್ವಾಸ ಇದೆ. ನಾವು 17 ಜನ ಸಭೆ ಸೇರಿ ತೀರ್ಮಾನ ಮಾಡುತ್ತೇವೆ ಎಂದು ಹೇಳಿದ್ದಾರೆ.

    ಸಿಎಂ ಯಡಿಯೂರಪ್ಪ ಚುನಾವಣೆ ಗೆದ್ದ 24 ಗಂಟೆಯಲ್ಲಿ ಮಂತ್ರಿ ಮಾಡ್ತೀವಿ ಅಂದಿದ್ದರು. 24 ಗಂಟೆಯಲ್ಲ, 24 ದಿನ ಕಳೆದರೂ ಮಂತ್ರಿನೂ ಇಲ್ಲ, ಕ್ಯಾರೇಯೂ ಅಂತಿಲ್ಲ. ದಾರಿ ತಪ್ಪಿದ ಮಕ್ಕಳಾದಂತೆ ಆದ ಮಿತ್ರಮಂಡಳಿ ಸದಸ್ಯರ ಗೋಳಾಟದ ಬಗ್ಗೆ ಸಿಎಂ ಮಾತ್ರ ಮಾತನಾಡುತ್ತಾರೆ. ಆದರೆ ಯಾವುದೇ ಬಿಜೆಪಿ ನಾಯಕರು ಈ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ಉಪ ಚುನಾವಣೆ ಗೆದ್ದ ಬಳಿಕ ಮೌನಕ್ಕೆ ಶರಣಾಗಿರುವ ಬೆಳಗಾವಿ ಸಾಹುಕಾರ ರಮೇಶ್ ಜಾರಕಿಹೊಳಿ, ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಒಳಗೊಳಗೆ ಅಸಮಾಧಾನ ಹೊಂದಿದ್ದಾರೆ. ಇತ್ತ ಎಸ್.ಟಿ.ಸೋಮಶೇಖರ್, ಬಿ.ಸಿ.ಪಾಟೀಲ್, ವಿಶ್ವನಾಥ್, ಎಂ.ಟಿ.ಬಿ ಬೆಂಕಿಯುಂಡೆಯಾಗಿದ್ದಾರೆ ಎಂಬ ಮಾತುಗಳು ಬಿಜೆಪಿ ಪಡಸಾಲೆಯಲ್ಲಿ ಕೇಳಿ ಬರುತ್ತಿವೆ.

  • ಅರ್ಜುನನಾಗಿ ಯುದ್ಧಕ್ಕೆ ಬರಬೇಕಿತ್ತು, ಕೃಷ್ಣನಂತೆ ಸಾರಥಿಯಾಗಿ ಕ್ಷೇತ್ರಕ್ಕೆ ಬರಬೇಕಾಗಿದೆ- ಆರ್.ಶಂಕರ್

    ಅರ್ಜುನನಾಗಿ ಯುದ್ಧಕ್ಕೆ ಬರಬೇಕಿತ್ತು, ಕೃಷ್ಣನಂತೆ ಸಾರಥಿಯಾಗಿ ಕ್ಷೇತ್ರಕ್ಕೆ ಬರಬೇಕಾಗಿದೆ- ಆರ್.ಶಂಕರ್

    ಹಾವೇರಿ: ನಾನು ಅರ್ಜುನನಾಗಿ ಯುದ್ಧಕ್ಕೆ ಬರಬೇಕಿತ್ತು. ಅದರೆ ಕೃಷ್ಣನಂತೆ ಸಾರಥಿಯಾಗಿ ಕ್ಷೇತ್ರಕ್ಕೆ ಬಂದಿದ್ದೇನೆ ಎಂದು ಅನರ್ಹ ಶಾಸಕ ಆರ್.ಶಂಕರ್ ಭಾವುಕರಾಗಿದ್ದಾರೆ.

    ಜಿಲ್ಲೆಯ ರಾಣೆಬೆನ್ನೂರಿನ ತಮ್ಮ ನಿವಾಸದ ಬಳಿ ಮಾತನಾಡಿದ ಅವರು, ಅರ್ಜುನನಾಗಿ ಯುದ್ಧಕ್ಕೆ ಬರಬೇಕಿತ್ತು. ಅದರೆ ಕೃಷ್ಣನಂತೆ ಸಾರಥಿಯಾಗಿ ಕ್ಷೇತ್ರಕ್ಕೆ ಬಂದಿದ್ದೇನೆ. ಆದರೆ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುತ್ತೇನೆ ಎಂದು ಭರವಸೆ ವ್ಯಕ್ತಪಡಿಸಿದರು.

    ಸುಪ್ರೀಂಕೋರ್ಟ್ ತೀರ್ಮಾನ ಏಕೆ ಹೀಗಾಯಿತು ಎಂಬ ಆತಂಕ ಅನರ್ಹ ಶಾಸಕರು ಹಾಗೂ ಸಿಎಂ ಮಧ್ಯೆ ಇದೆ. ಎಲ್ಲರೂ ತಮ್ಮ ಕ್ಷೇತ್ರಕ್ಕೆ ಚುನಾವಣೆ ಆಗುವುದಿಲ್ಲ ಎಂದಿದ್ದರು. ಆದರೆ ಸುಪ್ರೀಂಕೋರ್ಟ್ ತೀರ್ಪಿನಿಂದ ಆಘಾತವಾಗಿದೆ ಎಂದರು.

    ನಾನು ಚುನಾವಣೆಗೆ ಹೆದರಿ ಹಿಂದೆ ಸರಿದಿಲ್ಲ. ಬದಲಿಗೆ ನನ್ನನ್ನು ವಿಧಾನ ಪರಿಷತ್ ಸದಸ್ಯನನ್ನಾಗಿ ಮಾಡಿ, ಸಚಿವನನ್ನಾಗಿ ಮಾಡುತ್ತೇವೆ ಎಂದು ಭರವಸೆ ನೀಡಿದರು. ಸಿಎಂ ಹಾಗೂ ಬಿಜೆಪಿ ಹೈಕಮಾಂದ್ ಹೇಳಿದ್ದರಿಂದ ಮೊಂಡುತನ ಮಾಡಬಾರದು ಎಂದು ಹಿಂದೆಕ್ಕೆ ಸರಿದಿದ್ದೇನೆ ಎಂದು ಸ್ಪಷ್ಟಪಡಿಸಿದರು.

    ಕೋಳಿವಾಡ ಅವರನ್ನು ಸೋಲಿಸುವುದು ನನಗೆ ಹೊಸದಲ್ಲ. ಪ್ರಾರಂಭದಲ್ಲಿಯೇ ಮಣ್ಣು ಮುಕ್ಕಿಸಿದ್ದೆ, ಅವರನ್ನು ಸೋಲಿಸೋದು ದೊಡ್ಡ ಕೆಲಸವಲ್ಲ. ಬಿಜೆಪಿ ಪಕ್ಷದ ತತ್ವ ಸಿದ್ಧಾಂತದ ಅಡಿಯಲ್ಲಿ ಕೆಲಸ ಮಾಡಬೇಕಿದೆ. ಒಂದು ತಪ್ಪಾಗಿರುವುದಕ್ಕೆ ನಾನು ತಾಲೂಕಿನ ಜನತೆಯ ಕ್ಷಮೆ ಕೇಳುತ್ತೆನೆ. ಹಿತ ಶತೃಗಳು ಪಾಪದ ಫಲ ಉಣ್ಣುತ್ತಾರೆ. ಸರ್ಕಾರ ಬರಲು ನಾವು ಕಾರಣೀಕರ್ತರಾಗಿದ್ದೇವೆ. ಮುಖ್ಯಮಂತ್ರಿಗಳು ಹೆಚ್ಚಿನ ಅನುದಾನ ಕೊಡುತ್ತಾರೆ. ಪಕ್ಷ ಅರುಣ್ ಕುಮಾರ್ ಪೂಜಾರ್ ಅವರನ್ನು ಅಭ್ಯರ್ಥಿಯಾಗಿ ಘೋಷಿಸಿದೆ, ಬಿಜೆಪಿ ಅಭ್ಯರ್ಥಿ ಗೆಲ್ಲಿಸಲು ಶ್ರಮಿಸುತ್ತೇನೆ ಎಂದರು.

  • ಬಿಜೆಪಿ ಟಿಕೆಟ್ ಇಲ್ಲ, ಸ್ಪರ್ಧೆಗೆ ಅವಕಾಶನೂ ಇಲ್ಲ- ರಾಜಕೀಯ ಭವಿಷ್ಯ ಹಾಳು ಮಾಡ್ಕೊಂಡ್ರಾ ಶಂಕರ್?

    ಬಿಜೆಪಿ ಟಿಕೆಟ್ ಇಲ್ಲ, ಸ್ಪರ್ಧೆಗೆ ಅವಕಾಶನೂ ಇಲ್ಲ- ರಾಜಕೀಯ ಭವಿಷ್ಯ ಹಾಳು ಮಾಡ್ಕೊಂಡ್ರಾ ಶಂಕರ್?

    ಹಾವೇರಿ: ರಾಣೇಬೆನ್ನೂರು ಅನರ್ಹ ಶಾಸಕ ಆರ್.ಶಂಕರ್ ಮೈತ್ರಿ ಸರ್ಕಾರ ರಚನೆ ಹಾಗೂ ಮೈತ್ರಿ ಸರ್ಕಾರ ಪತನಗೊಳ್ಳಲು ಮುಖ್ಯ ಪಾತ್ರವಹಿಸಿದ್ದರು. ಈಗ ಬಿಜೆಪಿ ಸರ್ಕಾರ ರಚನೆ ಆಗುವಲ್ಲಿ ಅತೃಪ್ತರ ಗುಂಪು ಸೇರಿ ಬಿಜೆಪಿ ಪಕ್ಷಕ್ಕೆ ಜೈ ಎಂದರು. ಸರ್ಕಾರ ರಚನೆಯಲ್ಲಿ ಮತ್ತು ಪತನಕ್ಕೆ ಕಾರಣವಾದ ಪಕ್ಷೇತರ ಶಾಸಕ ಆರ್.ಶಂಕರ್ ಅನರ್ಹ ಶಾಸಕನಾಗಿದ್ದು, ಇತ್ತ ಬಿಜೆಪಿ ಪಕ್ಷದ ಟಿಕೆಟ್ ಇಲ್ಲದೆ ಏಕಾಂಗಿಯಾಗಿದ್ದಾರೆ.

    ರಾಣೆಬೆನ್ನೂರು ಕ್ಷೇತ್ರದ ಶಾಸಕ ಆರ್.ಶಂಕರ್ ಅನರ್ಹಗೊಂಡು ಉಪಚುನಾವಣೆ ಘೋಷಣೆ ಆಗಿದೆ. ಆರ್.ಶಂಕರ್ ಬೆಂಗಳೂರಿನಿಂದ 2013ರಲ್ಲಿ ಕ್ಷೇತ್ರಕ್ಕೆ ಆಗಮಿಸಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದರು. ನಂತರ 2018ಕ್ಕೆ ಮತ್ತೆ ರಾಣೇಬೆನ್ನೂರು ಕ್ಷೇತ್ರದಿಂದ ಕೆ.ಪಿ.ಜೆ.ಪಿ ಪಕ್ಷದಿಂದ ಸ್ಪರ್ಧೆ ಮಾಡಿ ಸುಮಾರು 3 ಸಾವಿರ ಮತಗಳಿಂದ ಗೆದ್ದು ಶಾಸಕರಾಗಿ ಆಯ್ಕೆಯಾಗಿದ್ದರು. ಗೆದ್ದ ಮೇಲೆ ಅವರಿಗೆ ಜಾಕ್‍ಪಾಟ್ ಹೊಡೆಯಿತು. ಮೈತ್ರಿ ಸರ್ಕಾರ ರಚನೆ ಮಾಡುವಲ್ಲಿ ಆರ್.ಶಂಕರ್ ಪ್ರಮುಖ ಪಾತ್ರವಹಿಸಿ ಅರಣ್ಯ ಸಚಿವರಾಗಿ ಕ್ಷೇತ್ರಕ್ಕೆ ಆಗಮಿಸಿದರು. ರಾಜಕೀಯ ಆಟದಲ್ಲಿ ಒಂದು ಕಡೆ ನಿಲ್ಲದ ಅವರು ಒಂದು ಬಾರಿ ಮೈತ್ರಿ ಸರ್ಕಾರಕ್ಕೆ ಬೆಂಬಲ ನೀಡಿದರೆ, ಮತ್ತೊಂದು ಕಡೆ ಕಾಂಗ್ರೆಸ್ ಹಾರಿದರು. ಇದು ಕ್ಷೇತ್ರದ ಜನರ ಸಿಟ್ಟಿಗೆ ಕಾರಣವಾಗಿದ್ದು, ಶಾಸಕರ ನಡೆಗೆ ಬೇಸತ್ತು ಹೋಗಿದ್ದಾರೆ.

    ಕಾಂಗ್ರೆಸ್ ಕೋಟಾದಲ್ಲಿ ಪೌರಾಡಳಿತ ಸಚಿವರಾಗಿ ಅಧಿಕಾರ ಸ್ವೀಕರಿಸಿದರು. ಮತ್ತೆ ಆಪರೇಷನ್ ಕಮಲಕ್ಕೆ ಒಳಗಾಗಿ ಮುಂಬೈಗೆ ಹಾರಿ ಕಾಂಗ್ರೆಸ್ ಪಕ್ಷ ಅನರ್ಹಗೊಳಿಸಿತು. ಈಗ ಸುಪ್ರೀಂಕೋರ್ಟ್ ಚುನಾವಣೆ ಸ್ವರ್ಧೆ ಮಾಡಬಹುದು ಅಂತ ತೀರ್ಪು ನೀಡಿದೆ. ಆದರೆ ರಾಣೇಬೆನ್ನೂರಲ್ಲಿ ಶಂಕರ್ ಗೆಲ್ಲಲ್ಲ. ಅವರಿಗೆ ಟಿಕೆಟ್ ಬೇಡ ಅಂತ ಬೇರೊಬ್ಬರಿಗೆ ಬಿಜೆಪಿ ಟಿಕೆಟ್ ಕೊಟ್ಟಿದೆ. ಹೀಗಾಗಿ, ಶಂಕರ್ ತಮ್ಮ ರಾಜಕೀಯ ಭವಿಷ್ಯ ಸಮಾಧಿ ಮಾಡಿಕೊಂಡಿದ್ದಾರೆ ಎಂದು ಜನರು ಹೇಳುತ್ತಿದ್ದಾರೆ.

    ಒಟ್ಟಿನಲ್ಲಿ ಕಳೆದ 10 ವರ್ಷಗಳ ಹಿಂದೆ ರಾಣೇಬೆನ್ನೂರು ಕ್ಷೇತ್ರಕ್ಕೆ ಆಗಮಿಸಿದ್ದ ಶಂಕರ್ ಪಕ್ಷೇತರನಾಗಿ ಗೆದ್ದಿದ್ದೇ ದಾಖಲೆಯಾಗಿದೆ. ಅಂಥದ್ದರಲ್ಲಿ ಜಂಪಿಂಗ್ ಸ್ಟಾರ್ ಆಗಿ ಈಗ ತ್ರಿಶಂಕು ಸ್ಥಿತಿಗೆ ತಲುಪಿರೋದು ವಿಪರ್ಯಾಸವಾಗಿದೆ.

  • ಅರುಣ್ ಕುಮಾರ್ ಪೂಜಾರ್ ರಾಣೆಬೆನ್ನೂರು ಬಿಜೆಪಿ ಅಭ್ಯರ್ಥಿ

    ಅರುಣ್ ಕುಮಾರ್ ಪೂಜಾರ್ ರಾಣೆಬೆನ್ನೂರು ಬಿಜೆಪಿ ಅಭ್ಯರ್ಥಿ

    ಹಾವೇರಿ: ರಾಣೆಬೆನ್ನೂರು ಕ್ಷೇತ್ರದ ಬಿಜೆಪಿ ಟಿಕೆಟ್ ಅರುಣ್ ಕುಮಾರ್ ಪೂಜಾರ್ ಅವರಿಗೆ ನೀಡಲಾಗಿದೆ. ಅನರ್ಹ ಶಾಸಕ ಆರ್.ಶಂಕರ್ ಬಿಜೆಪಿ ಸೇರಿದ್ರೂ ಪಕ್ಷ ಟಿಕೆಟ್ ನೀಡಿರಲಿಲ್ಲ. ಬದಲಾಗಿ ಎಂ.ಎಲ್.ಸಿ ಮಾಡಿ ಸಚಿವರನ್ನಾಗಿ ಮಾಡಲು ಬಿಜೆಪಿ ಪ್ಲಾನ್ ಮಾಡಿಕೊಂಡಿದೆ.

    ಗುರುವಾರ 13 ಕ್ಷೇತ್ರಗಳಿಗೆ ಮಾತ್ರ ಬಿಜೆಪಿ ಟಿಕೆಟ್ ಘೋಷಣೆ ಮಾಡಿತ್ತು. ಈ ಹಿನ್ನೆಲೆಯಲ್ಲಿ ರಾಣೆಬೆನ್ನೂರು ಕ್ಷೇತ್ರದ ಬಿಜೆಪಿ ಟಿಕೆಟ್‍ಗಾಗಿ ಆಕಾಂಕ್ಷಿಗಳು ಬೆಂಗಳೂರಿನಲ್ಲಿಯೇ ವಾಸ್ತವ್ಯ ಹೂಡಿದ್ದರು. ಮುಖ್ಯಮಂತ್ರಿ ಯಡಿಯೂರಪ್ಪ ಆರ್. ಶಂಕರ್ ಅವರನ್ನ ಎಂ.ಎಲ್.ಸಿ ಮಾಡಿ ಸಚಿವರನ್ನಾಗಿ ಮಾಡುತ್ತೇವೆ ಎಂದು ಹೇಳಿದ ಬೆನ್ನಲ್ಲೇ ಕ್ಷೇತ್ರದ ಕಮಲ ನಾಯಕರು ಟಿಕೆಟ್‍ಗಾಗಿ ಜೋರು ಲಾಬಿ ನಡೆಸಿದ್ದರು. ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ್ ಸಜ್ಜನ, ಡಾ. ಬಸವರಾಜ್ ಕೇಲಗಾರ, ಸಚಿವ ಈಶ್ವರಪ್ಪ ಪುತ್ರ ಕಾಂತೇಶ್, ಪ್ರಕಾಶ್ ಬುರಡೀಕಟ್ಟಿ ಸೇರಿ ಹಲವರು ಟಿಕೆಟ್ ರೇಸ್‍ನಲ್ಲಿದ್ದರು.

    ಆರ್‌ಎಸ್‌ಎಸ್‌ ಲಿಸ್ಟ್ ನಲ್ಲಿ ಜಿಲ್ಲಾ ಪಂಚಾಯ್ತಿ ಸದಸ್ಯ ಸಿದ್ದರಾಜ್ ಕಲಕೋಟಿ ಹೆಸರು ಕೇಳಿ ಬಂದಿತ್ತು. ಸಚಿವ ಕೆ.ಎಸ್.ಈಶ್ವರಪ್ಪ ಪುತ್ರ ಕಾಂತೇಶ್ ಅವರೇ ಅಭ್ಯರ್ಥಿಯಾಗುತ್ತಾರೆ ಎಂಬ ಮಾತುಗಳು ಬಲವಾಗಿ ಕೇಳಿ ಬಂದಿದ್ದವು. ಅಂತಿಮವಾಗಿ ಅರುಣ್ ಕುಮಾರ್ ಪೂಜಾರ್ ಅವರಿಗೆ ಬಿಜೆಪಿ ಟಿಕೆಟ್ ನೀಡಿದೆ.

  • ಕಾಂಗ್ರೆಸ್ ಜೊತೆ ಕೆಪಿಜೆಪಿ ವಿಲೀನವಾಗಿದ್ದಕ್ಕೆ ಶಂಕರ್ ಮೇಲೆ ಕ್ರಮ – ಸಿಬಲ್ ವಾದ ಹೀಗಿತ್ತು

    ಕಾಂಗ್ರೆಸ್ ಜೊತೆ ಕೆಪಿಜೆಪಿ ವಿಲೀನವಾಗಿದ್ದಕ್ಕೆ ಶಂಕರ್ ಮೇಲೆ ಕ್ರಮ – ಸಿಬಲ್ ವಾದ ಹೀಗಿತ್ತು

    ನವದೆಹಲಿ: ಕೆಪಿಸಿಸಿ ಪರ ವಕೀಲ ಕಪಿಲ್ ಸಿಬಲ್ ಅವರು ಇಂದು ದೀರ್ಘವಾಗಿ ಒಂದೊಂದೇ ವಿಚಾರವನ್ನು ಎತ್ತಿ ಕೋರ್ಟ್ ಮುಂದೆ ಇಡುತ್ತಿದ್ದರು.

    ಅನರ್ಹ ಶಾಸಕರ ವಿರುದ್ಧ ಸ್ಪೀಕರ್ ಕೈಗೊಂಡ ನಿರ್ಧಾರವನ್ನು ಆರಂಭದಲ್ಲಿ ಸಮರ್ಥಿಸಿಕೊಂಡ ಅವರು ನಂತರ ಶಂಕರ್ ಅವರನ್ನು ಅನರ್ಹತೆ ಮಾಡುವಲ್ಲೂ ರಮೇಶ್ ಕುಮಾರ್ ಸರಿಯಾದ ನಿರ್ಧಾರ ಕೈಗೊಂಡಿದ್ದಾರೆ ಎಂದು ಕೋರ್ಟ್ ಗಮನಕ್ಕೆ ತಂದರು.

    ಕೆಪಿಜೆಪಿ ಕಾಂಗ್ರೆಸ್‍ನೊಂದಿಗೆ ವಿಲೀನ ಆಗಿದೆ. ವೀಲಿನದ ಬಳಿಕ ಕಾಂಗ್ರೆಸ್ ಪಕ್ಷದಿಂದ ಶಂಕರ್ ಸಚಿವರಾಗಿದ್ದರು. ಬಳಿಕ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಕಾಂಗ್ರೆಸ್‍ನೊಂದಿಗೆ ವಿಲೀನ ಆದ ಹಿನ್ನೆಲೆ ಅನರ್ಹ ಮಾಡಬಹುದು. ವಿಲೀನದ ಬಗ್ಗೆ ಸ್ಪೀಕರ್ ಕಚೇರಿಗೆ ಮಾಹಿತಿ ನೀಡಿತ್ತು. ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಆರ್.ಶಂಕರ್ ಪತ್ರ ನೀಡಿದ್ದರು. ಆದರೆ ನ್ಯಾಯಾಲಯಕ್ಕೆ ಯಾವುದೇ ದಾಖಲೆ ಸಲ್ಲಿಸಿಲ್ಲ ಅಂತ ಹೇಳುತ್ತಿದ್ದಾರೆ ಎಂದು ಸಿಬಲ್ ವಾದಿಸಿದರು. ತಮ್ಮ ಕೇಸ್ ಬರುದ್ದಂತೆ ಆರ್.ಶಂಕರ್ ಎದ್ದು ನಿಂತು ವಾದ ಆಲಿಸುತ್ತಿದ್ದರು.

    ಶಂಕರ್ ಯಾರಿಗೆ ಪತ್ರ ನೀಡಿದ್ದರು ಎಂದು ನ್ಯಾ.ಸಂಜಯ್ ಖನ್ನಾ ಪ್ರಶ್ನಿಸಿದರು. ಬಳಿಕ ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್ ಗೆ ಪತ್ರ ನೀಡಿದ್ದರು. ಈ ಪತ್ರದ ಆಧಾರದ ಮೇಲೆ ಸ್ಪೀಕರ್ ಅನರ್ಹ ಮಾಡುವಂತೆ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ. ಕಾಂಗ್ರೆಸ್‍ಗೆ ಕೆಪಿಜೆಪಿ ವಿಲೀನವಾದ ಪ್ರಕ್ರಿಯೆಗಳ ವಿವರಣೆ, ಕುಮಾರಸ್ವಾಮಿ ಸರ್ಕಾರಕ್ಕೆ ಕಾಂಗ್ರೆಸ್ ಪ್ರತಿನಿಧಿಯಾಗಿ ಬೆಂಬಲ ನೀಡಿದ್ದರು. ಸಚಿವರೂ ಕೂಡ ಆಗಿದ್ದರು, ದಾಖಲೆಗಳನ್ನು ಸಲ್ಲಿಸುತ್ತೇವೆ ಎಂದು ತಿಳಿಸಿದರು.

    ಬುಧವಾರ ಸ್ಪೀಕರ್ ಪರ ವಕೀಲರು ವಿಲೀನದ ಯಾವುದೇ ದಾಖಲೆಗಳಿಲ್ಲ ಎಂದಿದ್ದರು ಅಲ್ವಾ ಎಂದು ನ್ಯಾಯಪೀಠವು ಪ್ರಶ್ನಿಸಿತು. ಈ ವೇಳೆ ಫೋಟೋ ಪ್ರದರ್ಶನ ಮಾಡಿದ ಸಿಬಲ್, ಆರ್.ಶಂಕರ್ ಕಾಂಗ್ರೆಸ್ ಸೇರಿದ ಹಲವು ದಾಖಲೆಗಳಿವೆ ಎಂದರು. ಆಗ ಸಿಬಲ್ ವಾದಕ್ಕೆ ಪ್ರತಿವಾದ ಮಂಡಿಸಿದ ಶಂಕರ್ ಪರ ವಕೀಲರು, ಕಾಂಗ್ರೆಸ್ ಗೆ ಬೆಂಬಲ ನೀಡಿದ್ದರು. ಕೆಪಿಜೆಪಿಯಲ್ಲಿ ಉಳಿದಿದ್ದರು. ಕಾಂಗ್ರೆಸ್ ಕೆಪಿಜೆಪಿ ವಿಲೀನ ಆಗಿರಲಿಲ್ಲ. ಸ್ಪೀಕರ್ ಕಚೇರಿ ಕೂಡ ಯಾವುದೇ ಧೃಢಿಕರಣ ನೀಡಿಲ್ಲ. ಕಾಂಗ್ರೆಸ್ ಪಕ್ಷದಿಂದ ಸಚಿವರಾಗಿಲ್ಲ, ಕೆಪಿಜೆಪಿಯಿಂದಲೇ ಸಚಿವರಾಗಿದ್ದು, ಪಕ್ಷದ ಅಧ್ಯಕ್ಷರು ವಿಲೀನಕ್ಕೆ ಪತ್ರ ನೀಡಬೇಕು ಎಂದು ಹೇಳಿದರು.

    ಡಾ.ಸುಧಾಕರ್ ರಾಜೀನಾಮೆ ಕೊಟ್ಟ ಬಳಿಕ ಸ್ಪೀಕರ್ ಕಚೇರಿಯಿಂದ ತೆರಳಿದ್ದೇ ಬಿಜೆಪಿ ನಾಯಕರ ಜೊತೆಗೆ. ಅವರು ರಾಜೀನಾಮೆ ನೀಡುವಾಗ ಸ್ಪೀಕರ್ ಕಚೇರಿ ಎದುರು ಗದ್ದಲವಾಗುತ್ತಿತ್ತು. ಆಗಲೂ ಅವರು ಗುರುತಿಸಿಕೊಂಡಿದ್ದು ಬಿಜೆಪಿ ನಾಯಕರ ಜೊತೆಗೆ. ಇವು ಪಕ್ಷಾಂತರ ಕಾಯಿದೆ ವ್ಯಾಪ್ತಿಗೆ ಬರುತ್ತವೆ. ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೂ ಗೈರಾಗಿದ್ದರು ಸಿಬಲ್ ವಾದಿಸಿದರು.

  • ನನ್ನ ಕ್ಷೇತ್ರಕ್ಕೆ ಚುನಾವಣೆ ನಡೆಯಲ್ಲ ಅಂತ ಮೊದಲೇ ಹೇಳಿದ್ದೆ: ಆರ್ ಶಂಕರ್

    ನನ್ನ ಕ್ಷೇತ್ರಕ್ಕೆ ಚುನಾವಣೆ ನಡೆಯಲ್ಲ ಅಂತ ಮೊದಲೇ ಹೇಳಿದ್ದೆ: ಆರ್ ಶಂಕರ್

    ನವದೆಹಲಿ: ನಾನು ಕೆಪಿಜೆಪಿ ಪಕ್ಷದಿಂದ ಆಯ್ಕೆಯಾಗಿದ್ದು, ನನ್ನ ಪಕ್ಷವನ್ನು ಕಾಂಗ್ರೆಸ್‍ನೊಂದಿಗೆ ವಿಲೀನ ಮಾಡಲು ತೀರ್ಮಾನಿಸಿದ್ದು ನಿಜ. ಆದರೆ ಅಂದು ನನ್ನ ಅರ್ಜಿಯನ್ನು ತಿರಸ್ಕರಿಸಿದ್ದ ಸ್ಪೀಕರ್ ಅವರು ನಿಯಮಗಳ ಪ್ರಕಾರ ಸಲ್ಲಿಸಕೆ ಮಾಡಲು ಸೂಚನೆ ನೀಡಿದ್ದರು. ಆದ್ದರಿಂದ ನಾನು ಗೆದ್ದ ಪಕ್ಷ ಸ್ವತಂತ್ರವಾಗಿದೆ ಎಂದು ಅನರ್ಹ ಶಾಸಕ ಆರ್ ಶಂಕರ್ ಹೇಳಿದ್ದಾರೆ.

    ಕೋರ್ಟ್ ಮಧ್ಯಂತರ ಆದೇಶ ಬಳಿಕ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಅವರು, ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ಬಾಕಿ ಇದೆ. ನಾನು ಮೊದಲೇ ನನ್ನ ಕ್ಷೇತ್ರ ರಾಣೆಬೆನ್ನೂರಿನಲ್ಲಿ ಚುನಾವಣೆ ನಡೆಯಲ್ಲ ಎಂದು ಹೇಳಿದ್ದೆ. ನ್ಯಾಯಾಲಯ ಸತ್ಯವನ್ನು ಎತ್ತಿ ಹಿಡಿಯುವ ಕೆಲಸ ಮಾಡಿದೆ. ಸದ್ಯ ಮುಂದಿನ ವಿಚಾರಣೆ ಬಾಕಿ ಉಳಿದ ಹಿನ್ನೆಲೆಯಲ್ಲಿ ಎಲ್ಲರಿಗೂ ರಿಲೀಫ್ ಸಿಕ್ಕಿದೆ ಎಂದರು.

    ಸದ್ಯ ನಮ್ಮ ಸ್ಥಿತಿ ಅತಂತ್ರವೋ, ಅನರ್ಹವೋ ಎಂದು ಕೋರ್ಟ್ ನಿರ್ಧರಿಸುತ್ತದೆ. ನ್ಯಾಯಾಲಯದ ಮೆಟ್ಟಿಲೇರಿದ ಮೇಲೆ ತೀರ್ಪು ಬರುವವರೆಗೂ ಕಾಯಲೇಬೇಕು. ಈ ಸಂದರ್ಭದಲ್ಲಿ ಪ್ರಕರಣದ ಬಗ್ಗೆ ಯಾವುದೇ ಹೇಳಿಕೆ ನೀಡುವುದು ಸರಿಯಲ್ಲ. ಪ್ರಕರಣದಲ್ಲಿ ನಮ್ಮ ಪರವಾಗಿ ತೀರ್ಪು ಬರಲಿದೆ ಎಂಬ ವಿಶ್ವಾಸವಿದೆ ಎಂದರು.

  • ನನ್ನನ್ನು ಅನರ್ಹಗೊಳಿಸಿರುವುದು ಸರಿಯಲ್ಲ- ಆರ್. ಶಂಕರ್

    ನನ್ನನ್ನು ಅನರ್ಹಗೊಳಿಸಿರುವುದು ಸರಿಯಲ್ಲ- ಆರ್. ಶಂಕರ್

    ನವದೆಹಲಿ: ನನ್ನನ್ನು ಅನರ್ಹಗೊಳಿಸಿರುವುದು ಸರಿಯಲ್ಲ. ಆದುದರಿಂದ ಸುಪ್ರೀಂ ಕೋರ್ಟಿನಲ್ಲಿ ನನ್ನ ಪರ ತೀರ್ಪು ಬರುತ್ತದೆ ಎಂದು ಆರ್ ಶಂಕರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಸುಪ್ರೀಂಕೋರ್ಟಿನಲ್ಲಿ ಇಂದು ಅನರ್ಹ ಶಾಸಕರ ಅರ್ಜಿ ಹಿನ್ನೆಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೂರಕ್ಕೆ ನೂರು ಅನರ್ಹರ ಪರವಾದ ತೀರ್ಪು ಬರುತ್ತದೆ. ನಾನು ನೇರವಾಗಿ ಸ್ಪೀಕರ್‍ಗೆ ಪತ್ರ ಬರೆದಿರಲಿಲ್ಲ. ನಾನು ಸ್ಪೀಕರ್‍ಗೆ ಕೊಟ್ಟಿದ್ದು ಸಿದ್ದರಾಮಯ್ಯ ಬರೆದಿದ್ದ ಪತ್ರವಾಗಿದೆ. ಇದಾದ ಮೇಲೆ ನನಗೆ ಸ್ಪೀಕರ್ ಪತ್ರ ಬರೆದು ಪ್ರತಿಕ್ರಿಯೆ ಕೇಳಿದ್ದರು. ಅದು ಇಂಗ್ಲೀಷ್ ನಲ್ಲಿದೆ, ನಿಮ್ಮ ಪ್ರತಿಕ್ರಿಯೆ ಏನು ಎಂದು ಕೇಳಿದ್ದರು. ದಾಖಲೆ ಇದ್ದರೆ ಕೊಡು ಅಂತನೂ ಕೇಳಿದ್ದರು. ಆಮೇಲೆ ನಾನು ಸ್ಪೀಕರ್ ಗೆ ಯಾವುದೇ ಪತ್ರ ಬರೆದಿಲ್ಲ. ಅಲ್ಲದೆ ಸ್ಪೀಕರ್ ಭೇಟಿಯಾಗಿ ಕೂಡ ಏನನ್ನೂ ತಿಳಿಸಿಲ್ಲ. ಹಾಗಾಗಿ ನಾನು ಕಾಂಗ್ರೆಸ್ ಸೇರುವ ಪ್ರಕ್ರಿಯೆಯೇ ಪೂರ್ಣ ಆಗಿಲ್ಲ ಎಂದರು.

    ನನ್ನನ್ನು ಅನರ್ಹಗೋಳಿಸಿರುವುದು ಸರಿಯಲ್ಲ. ಆದ್ದರಿಂದ ಸುಪ್ರೀಂ ಕೋರ್ಟಿನಲ್ಲಿ ನನ್ನ ಪರ ತೀರ್ಪು ಬರುತ್ತದೆ. ನನ್ನ ಪ್ರಕರಣದ ವಾದಕ್ಕೆ ಪ್ರತ್ಯೇಕ ವಕೀಲರನ್ನು ನಿಯೋಜಿಸಿದ್ದೇವೆ. ನನ್ನ ಕ್ಷೇತ್ರದಲ್ಲಿ ಚುನಾವಣೆ ಬರಲ್ಲ ಎಂಬುದು ನನ್ನ ವಾದ. ಆದುದರಿಂದ ಟಿಕೆಟ್ ಕೊಡುವುದು ಬಿಡುವುದು ಮುಂದಿನ ವಿಚಾರವಾಗಿದೆ. ಬಿಜೆಪಿಯಲ್ಲಿ ಪೈಪೋಟಿ ಇದೆ. ಆಕಾಂಕ್ಷಿಗಳಿರುತ್ತಾರೆ ಅದಕ್ಕೆ ಏನೂ ಮಾಡೋಕಾಗಲ್ಲ ಎಂದು ತಿಳಿಸಿದ್ದಾರೆ.

    ಇಂದು ಕೇಸ್ ಇದ್ದರೂ ನಿನ್ನೆಯೇ ಎಸ್.ಟಿ ಸೋಮಶೇಖರ್, ಬೈರತಿ ಬಸವರಾಜ್, ಶಿವರಾಂ ಹೆಬ್ಬಾರ್, ಪ್ರತಾಪಗೌಡ ಪಾಟೀಲ್, ರಮೇಶ್ ಜಾರಕಿಹೊಳಿ ಬೆಂಗಳೂರಿಗೆ ಬಂದಿದ್ದಾರೆ. ಏರ್‍ಪೋರ್ಟಿನಲ್ಲಿ ಮಾತನಾಡಿದ ಬೈರತಿ ಬಸವರಾಜ್, ನಾವೇನೂ ತಪ್ಪು ಮಾಡಿಲ್ಲ. ಚುನಾವಣೆಗೆ ನಿಲ್ಲುತ್ತೇವೆ. ತೀರ್ಪು ನಮ್ಮ ಪರವಾಗಿಯೇ ಬರಲಿದೆ. ಬಿಜೆಪಿಯವರು ಟಿಕೆಟ್ ಕೊಡಲ್ಲ ಅಂತ ಹೇಳಿಲ್ಲ ಅಂದರು. ಇತ್ತ ಎಲೆಕ್ಷನ್‍ಗೆ ಹೋಗುವುದೇ ನಮ್ಮ ನಡೆ ಅಂತ ಪ್ರತಾಪಗೌಡ ಪಾಟೀಲ್ ಹೇಳಿದ್ದಾರೆ. ಈ ಮಧ್ಯೆ, ನಾವು ಕಳೆದುಕೊಂಡಿದ್ದು ಏನೂ ಇಲ್ಲ. ಪಡೆದದ್ದೂ ಏನೂ ಇಲ್ಲ. ಹಿರೇಕೆರೂರಿಗೆ 270 ಕೋಟಿ ಅಭಿವೃದ್ಧಿ ಹಣ ಬಂದಿದೆ. ನಮ್ಮ ತ್ಯಾಗ ಸಾರ್ಥಕ ಆಗಿದೆ ಅಂತ ಅನರ್ಹ ಶಾಸಕ ಬಿ.ಸಿ ಪಾಟೀಲ್ ಹೇಳಿದ್ದಾರೆ.

    ಇಂದು ಸ್ಪೀಕರ್ ಆದೇಶ ಪ್ರಶ್ನಿಸಿ 17 ಮಂದಿ ಅನರ್ಹ ಶಾಸಕರು ಸುಪ್ರೀಂಕೋರ್ಟ್ ಸಲ್ಲಿಸಿದ್ದ ಅರ್ಜಿ ಇಂದು ಸುಧೀರ್ಘ ವಿಚಾರಣೆಗೆ ಬರಲಿದೆ. ನ್ಯಾ. ಎನ್.ವಿ ರಮಣ, ನ್ಯಾ. ಸಂಜೀವ್ ಖನ್ನಾ, ನ್ಯಾ ಕೃಷ್ಣ ಮುರಾರಿ ನೇತೃತ್ವದ ತ್ರಿ ಸದಸ್ಯ ಪೀಠ ವಿಚಾರಣೆ ನಡೆಸಲಿದೆ. ಅನರ್ಹ ಶಾಸಕರ ಪರ ಘಟಾನುಘಟಿ ವಕೀಲರಾದ ಮುಕುಲ್ ರೊಹ್ಟಗಿ, ಹರೀಶ್ ಸಾಳ್ವೆ, ಗಿರಿ ಸೇರಿದಂತೆ ಮೂರ್ನಾಲ್ಕು ಮಂದಿ ವಕೀಲರು ವಾದ ಮಂಡಿಸಲಿದ್ದಾರೆ. ಸೋಮವಾರ ನಡೆದ ವಿಚಾರಣೆಗೆ ವೇಳೆ ರೋಹಟಗಿ ವಾದ ಆಲಿಸಿದ್ದ ಕೋರ್ಟ್ ಸುದೀರ್ಘ ವಿಚಾರಣೆಗಾಗಿ ಇಂದಿಗೆ ಮುಂದೂಡಿದೆ. ಇಂದು ಕೇವಲ ಅನರ್ಹ ಶಾಸಕರ ಪರ ವಕೀಲರು ವಾದ ಮಾಡಲಿದ್ದು, ಅನರ್ಹರ ಮನವಿಯನ್ನಷ್ಟೇ ಸುಪ್ರೀಂಕೋರ್ಟ್ ಆಲಿಸಲಿದೆ.