Tag: r ashok

  • ಕಾಲ್ತುಳಿತ ಸರ್ಕಾರದ ಪ್ರಾಯೋಜಿತ ಅಮಾಯಕರ ಹತ್ಯಾಕಾಂಡ: ಅಶೋಕ್ ಕಿಡಿ

    ಕಾಲ್ತುಳಿತ ಸರ್ಕಾರದ ಪ್ರಾಯೋಜಿತ ಅಮಾಯಕರ ಹತ್ಯಾಕಾಂಡ: ಅಶೋಕ್ ಕಿಡಿ

    ಬೆಂಗಳೂರು: ಕಾಲ್ತುಳಿತ (Chinnaswamy Stampede) ಸರ್ಕಾರದ ಪ್ರಾಯೋಜಿತ ಅಮಾಯಕರ ಹತ್ಯಾಕಾಂಡ ಎಂದು ವಿಪಕ್ಷ ನಾಯಕ ಆರ್ ಅಶೋಕ್ (R Ashok) ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

    ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕಾಲ್ತುಳಿತಕ್ಕೊಳಗಾಗಿ 11 ಮಂದಿ ಮೃತಪಟ್ಟ ಕುರಿತು ಬಿಜೆಪಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಪ್ಪು ನಮ್ಮದು ಸರಿ, ಆದರೆ ತಪ್ಪು ಯಾರದ್ದೆಂದು ಜನರು ಕೇಳುತ್ತಿದ್ದಾರೆ. ಕೂಗಳತೆ ಅಂತರದಲ್ಲೇ ಎರಡೆರಡು ಕಾರ್ಯಕ್ರಮಗಳು. ಈ ಕಾರ್ಯಕ್ರಮದ ಬಗ್ಗೆ ಐಪಿಎಲ್ ಚೇರ್‌ಮ್ಯಾನ್ ಗೊತ್ತೇ ಇಲ್ಲ ಎಂದಿದ್ದಾರೆ. ಸರ್ಕಾರ ಕೇಳಿದ್ದಕ್ಕೆ ಗ್ರೌಂಡ್ ಕೊಟ್ಟಿದ್ದೇನೆ ಎಂದು ಕೆಎಸ್‌ಸಿಎ ಹೇಳಿದೆ. ಇದರಲ್ಲಿ ಕೆಎಸ್‌ಸಿಎ ಅವರದ್ದು ತಪ್ಪಿಲ್ಲ. ಆರ್‌ಸಿಬಿಯವರು ಎರಡು ಕಿ.ಮೀ ಮೆರವಣಿಗೆಗೆ ಕೇಳಿದ್ದರು. ಆದರೆ ಅವರನ್ನು ವಿಧಾನಸೌಧಕ್ಕೆ ಕರೆದುಕೊಂಡು ಬಂದಿದ್ದು ಯಾರು ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಕಾಲ್ತುಳಿತ ಕೇಸ್‌ – ಪೊಲೀಸರನ್ನ ಸಂಪರ್ಕಿಸದೇ ವಿಕ್ಟರಿ ಪೆರೇಡ್‌ ಘೋಷಿಸಿದ್ದ RCB ಫ್ರಾಂಚೈಸಿ

    ಪಂದ್ಯ ಮುಗಿದ ಮೇಲೆ ನಮ್ಮ ಪೊಲೀಸರು ಬೆಳಗ್ಗೆ 3 ಗಂಟೆವರೆಗೂ ಕೆಲಸ ಮಾಡಿದ್ದಾರೆ. ಪಾಪ ನಮ್ಮ ಪೊಲೀಸರಿಗೆ ರಾತ್ರಿ ಎಲ್ಲಾ ನಿದ್ದೆನೇ ಇರಲಿಲ್ಲ. ಆದರೆ ನಮ್ಮ ಸರ್ಕಾರಕ್ಕೆ ಕಾಮನ್ ಸೆನ್ಸ್ ಇಲ್ಲ. ಅದೇ ಪೊಲೀಸರನ್ನು ನಿಯೋಜನೆ ಮಾಡಿದರೆ ಅವರು ಹೇಗೆ ಕೆಲಸ ಮಾಡಲು ಆಗುತ್ತದೆ? ಪೊಲೀಸರು ಈ ಕಾರ್ಯಕ್ರಮಕ್ಕೆ ನಿರಾಕರಣೆ ಮಾಡಿದ್ದಾರೆ. ಆದರೆ ಬಲತ್ಕಾರದಿಂದ ಸರ್ಕಾರದಲ್ಲಿರುವುದು ನಾನಾ ನೀನಾ ಎಂದು ಪ್ರಶ್ನೆ ಕೇಳಿದೆ. ವಿಧಾನ ಸೌಧದ ಮುಂದೆ ಡ್ರೋನ್ ಎಲ್ಲಾ ಬಳಕೆ ಮಾಡಿದ್ದಾರೆ. ಹೈಕೋರ್ಟ್ ನಿರ್ಬಂಧಿತ ಸ್ಥಳ, ಎಂತಹ ಮುಠ್ಠಾಳ ಕೆಲಸ ಮಾಡಿದೆ. ಇವತ್ತು ಕೋರ್ಟ್ ಕೂಡ ಸುಮೊಟೋ ಕೇಸ್ ದಾಖಲಿಸಿಕೊಂಡಿದೆ. ಇಷ್ಟಾದರೂ ಕೂಡ ಮುಖ್ಯಮಂತ್ರಿಗಳು, ಇಷ್ಟು ಜನ ಸೇರುತ್ತಾರೆ ಎಂದು ನಾವು ಅಂದಾಜಿಸಿಲ್ಲ ಅಂದಿದ್ದಾರೆ. ಎಲ್ಲೆಲ್ಲಿ ಎಷ್ಟೆಷ್ಟು ಜನರು ಸೇರುತ್ತಾರೆ ಎಂದು ಸರ್ಕಾರಕ್ಕೆ ಸಾಮಾನ್ಯ ಜ್ಞಾನವೂ ಇಲ್ಲವೇ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಎಂಟ್ರಿ ಫ್ರೀ ಅಂತಾ ಹೇಳಿ ಸ್ಟೇಡಿಯಂ ಗೇಟ್ ಓಪನ್ ಮಾಡಿಲ್ಲ ಯಾಕೆ? – ದಿವ್ಯಾಂಶಿ ತಾಯಿ ಪ್ರಶ್ನೆ

  • ಕಲ್ಲಡ್ಕ ಪ್ರಭಾಕರ್ ಭಟ್ ಸೇರಿ 15 ಜನರ ವಿರುದ್ಧ ಎಫ್‌ಐಆರ್; ಕೇಸ್ ವಾಪಸ್ ಪಡೆಯಲು ಬಿಜೆಪಿ ಒತ್ತಾಯ

    ಕಲ್ಲಡ್ಕ ಪ್ರಭಾಕರ್ ಭಟ್ ಸೇರಿ 15 ಜನರ ವಿರುದ್ಧ ಎಫ್‌ಐಆರ್; ಕೇಸ್ ವಾಪಸ್ ಪಡೆಯಲು ಬಿಜೆಪಿ ಒತ್ತಾಯ

    – ಸರ್ಕಾರಕ್ಕೆ ಉಗ್ರ ಹೋರಾಟದ ಎಚ್ಚರಿಕೆ

    ಬೆಂಗಳೂರು: ಕಲ್ಲಡ್ಕ ಪ್ರಭಾಕರ ಭಟ್ (Kalladka Prabhakr Bhat) ವಿರುದ್ಧ ಎಫ್‌ಐಆರ್ ದಾಖಲಿಸಿರುವುದು ಬಿಜೆಪಿ ನಾಯಕರನ್ನು ಕೆರಳಿಸಿದೆ. ಪ್ರಭಾಕರ್ ಭಟ್ ಹಾಗೂ ಹಿಂದೂ ಮುಖಂಡರ ಮೇಲಿನ ಕೇಸ್‌ಗಳನ್ನು ಕೂಡಲೇ ಹಿಂಪಡೆಯಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಸರ್ಕಾರಕ್ಕೆ ಬಿಜೆಪಿ (BJP) ನಾಯಕರು ಎಚ್ಚರಿಸಿದರು.

    ಬೆಂಗಳೂರಿನಲ್ಲಿ (Bengaluru) ಮಾತನಾಡಿದ ವಿಪಕ್ಷ ನಾಯಕ ಆರ್ ಅಶೋಕ್ (R Ashok), ಹಿಂದೂಗಳನ್ನ ಟಾರ್ಗೆಟ್ ಮಾಡಲು, ಮುಸ್ಲಿಮರನ್ನು ಓಲೈಸಲು ಸರ್ಕಾರ ಟಾಸ್ಕ್ ಫೋರ್ಸ್ ರಚಿಸಿದೆ. ಕಲ್ಕಡ್ಕ ಪ್ರಭಾಕರ್ ಭಟ್ ಅವರ ಮೇಲಿನ ಎಫ್‌ಐಆರ್ ಹಾಗೂ ಹಿಂದೂ ಕಾರ್ಯಕರ್ತರ ಬಂಧನ ಖಂಡನೀಯ. ಈ ಕೇಸ್‌ಗಳನ್ನು ವಾಪಸ್ ಪಡೆಯಿರಿ. ಇಲ್ಲದಿದ್ರೆ ಬಿಜೆಪಿ ಬೀದಿಗಿಳಿದು ಸರ್ಕಾರದ ವಿರುದ್ಧ ಹೋರಾಟ ಮಾಡಲಿದೆ. ನಮ್ಮ ಕಾರ್ಯಕರ್ತರ ವಿರುದ್ಧ ಕೇಸ್ ಹಾಕೋದನ್ನು ನಾವು ಸಹಿಸಲ್ಲ ಎಂದು ಗುಡುಗಿದರು. ಇದನ್ನೂ ಓದಿ: ಭಾರೀ ಗಾಳಿ ಮಳೆಗೆ ಚಾರ್ಮಾಡಿಯಲ್ಲಿ ಧರೆಗುರುಳಿದ ಬೃಹತ್ ಮರ – 3 ಕಿಮೀ ಟ್ರಾಫಿಕ್ ಜಾಮ್!

    ಸುಳ್ಳು ಕೇಸ್‌ಗಳನ್ನು ದಾಖಲಿಸಿ ಜೈಲಿಗೆ ದೂಡುವ ಪಿತೂರಿ:
    ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ (B Y Vijayendra) ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದು, ಪೊಲೀಸ್ ವ್ಯವಸ್ಥೆ ಹಿಂದೂ ಸಂಘಟಕರಿಗೆ ನಿರಂತರ ಕಿರುಕುಳ ನೀಡುತ್ತಾ, ಸುಳ್ಳು ಕೇಸ್‌ಗಳನ್ನು ದಾಖಲಿಸುತ್ತಿದೆ. ಮುಸ್ಲಿಂ ಸಮುದಾಯದ ಒತ್ತಾಯಕ್ಕೆ ಬೆದರಿ ದಿಢೀರನೇ ಮಂಗಳೂರು ಪೊಲೀಸ್ ಆಯುಕ್ತರು ಹಾಗೂ ಜಿಲ್ಲಾ ವರಿಷ್ಠಾಧಿಕಾರಿಯನ್ನು ಸರ್ಕಾರ 24 ಗಂಟೆಯೊಳಗೆ ವರ್ಗಾವಣೆ ಮಾಡಿತ್ತು. ಇದರ ಬೆನ್ನಲ್ಲೇ ಹಿಂದೂ ಸಮಾಜದ ಮುಖ್ಯಸ್ಥರ ವಿರುದ್ಧ ಸುಳ್ಳು ಕೇಸ್‌ಗಳನ್ನು ದಾಖಲಿಸಿ ಜೈಲಿಗೆ ದೂಡುವ ಪಿತೂರಿ ನಡೆಯುತ್ತಿದೆ ಎಂದು ಕಿಡಿಕಾರಿದರು. ಇದನ್ನೂ ಓದಿ: ನಿರ್ಮಾಪಕರಿಗೆ ಕತೆ ಹೇಳಿ ವಾಪಸ್ ಆಗುತ್ತಿದ್ದಾಗ ಹೃದಯಾಘಾತ – ತಮಿಳು ನಿರ್ದೇಶಕ ವಿಕ್ರಂ ಸುಗುಮಾರನ್ ನಿಧನ

    ಹಿಂದೂ ಕಾರ್ಯಕರ್ತರು ಹಾಗೂ ಬಿಜೆಪಿ ಕಾರ್ಯಕರ್ತರ ಮನೆ, ಮನೆಗಳನ್ನು ಶೋಧಿಸಿ ಆತಂಕದ ವಾತಾವರಣ ಸೃಷ್ಟಿಸುತ್ತಿರುವುದು ಅತ್ಯಂತ ಖಂಡನೀಯ. ಕರಾವಳಿ ಪ್ರದೇಶದ ಸಾಮಾಜಿಕ ಸ್ವಾಸ್ಥ್ಯವನ್ನು ಹಾಳು ಮಾಡಿ ದಕ್ಷಿಣ ಕನ್ನಡ (Dakshina Kannada) ಹಾಗೂ ಉಡುಪಿಯನ್ನು ಭಯ ಪೀಡಿತ ಜಿಲ್ಲೆಗಳನ್ನಾಗಿಸಲು ರಾಜ್ಯ ಸರ್ಕಾರ ಹೊರಟಿದೆ. ಈ ಕೂಡಲೇ ಕಲ್ಲಡ್ಕ ಪ್ರಭಾಕರ್ ಭಟ್ ಅವರೂ ಸೇರಿದಂತೆ 15ಕ್ಕೂ ಹೆಚ್ಚು ಹಿಂದೂ ಸಂಘಟನೆಗಳ ಪ್ರಮುಖರ ಮೇಲೆ ದಾಖಲಿಸಿರುವ ಎಫ್‌ಐಆರ್ ರದ್ದುಪಡಿಸಿ ಗಡೀಪಾರು ಆದೇಶ ಹಿಂಪಡೆಯಲಿ. ಇಲ್ಲವಾದರೆ ಮುಂದಿನ ಪರಿಣಾಮಗಳಿಗೆ ಸರ್ಕಾರವೇ ಜವಾಬ್ದಾರಿಯಾಗಬೇಕಾದೀತು ಎಂದು ಎಚ್ಚರಿಸಿದರು. ಇದನ್ನೂ ಓದಿ: ರಾಮನಗರ-ತುಮಕೂರು ಮಧ್ಯೆ ಹೇಮಾವತಿ ಕಲಹ – ಸರ್ವಪಕ್ಷ ಸಭೆ ಕರೆಯಲು ಬಿಜೆಪಿ ಆಗ್ರಹ

    ಇನ್ನು ವಿಧಾನ ಪರಿಷತ್ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತಾಡಿ, ಕರಾವಳಿಯ ಮುಸ್ಲಿಂ ಮುಖಂಡರ ಬ್ಲಾಕ್‌ಮೇಲ್‌ಗೆ ಹೆದರಿ ಹಿಂದೂ, ಬಿಜೆಪಿ ನಾಯಕರನ್ನು ಗಡೀಪಾರು ಮಾಡೋದು, ಎಫ್‌ಐಆರ್ ಹಾಕುವ ಕೆಲಸ ಸರ್ಕಾರ ಮಾಡ್ತಿದೆ. ಸುಹಾಸ್ ಶೆಟ್ಟಿ ಅಂತಿಮ ಸಂಸ್ಕಾರದಲ್ಲಿ ಭಾಗವಹಿಸಿದವರನ್ನು ಹುಡುಕಿ ಎಫ್‌ಐಆರ್ ಹಾಕ್ತಿದ್ದಾರೆ. ಹಿಂದುತ್ವದ ಹೆಸರಿನಲ್ಲಿ ಹಿಂದೂ ನಾಯಕರನ್ನು, ಕಾರ್ಯಕರ್ತರನ್ನು ಮುಟ್ಟಿದರೆ ನಾವು ಸರ್ಕಾರವನ್ನೇ ಮುಟ್ಟಬೇಕಾಗುತ್ತದೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಹಿಂದೂ ಕಾರ್ಯಕರ್ತರನ್ನು ಟಾರ್ಗೆಟ್ ಮಾಡಿದರೆ ಸುಮ್ಮನಿರಲ್ಲ – ವಿಜಯೇಂದ್ರ ಸಿಡಿಮಿಡಿ

    ಜಿಲ್ಲೆಯಲ್ಲಿ ಪೊಲೀಸ್ ರಾಜ್ ವ್ಯವಸ್ಥೆ:
    ಈ ಕುರಿತು ಶಾಸಕ ಸುನೀಲ್ ಕುಮಾರ್ (Sunil Kumar) ಎಕ್ಸ್‌ನಲ್ಲಿ ಪೋಸ್ಟ್ ಮಾಡಿ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ರಾಜ್ಯ ಸರ್ಕಾರ ಪೊಲೀಸ್ ರಾಜ್ ವ್ಯವಸ್ಥೆಯನ್ನು ಜಾರಿಗೆ ತರಲು ಹೊರಟಿದೆ. ಅಷ್ಟಕ್ಕೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದ್ವೇಷ ಹಾಗೂ ಹಿಂಸೆಗೆ ಪ್ರೇರಣೆ ನೀಡಿದವರು ಯಾರು? ತಲ್ವಾರ್, ಕತ್ತಿ ಝಳಪಿಸಿ ಹತ್ಯೆಯ ಮಾತುಗಳನ್ನು ಆಡಿದವರನ್ನು ಪೊಲೀಸರು ಏಕೆ ಮುಟ್ಟುತ್ತಿಲ್ಲ? ಪೊಲೀಸ್ ದೌರ್ಜನ್ಯದ ವಿರುದ್ಧ ಪ್ರತಿಭಟನೆ ನಡೆಸಿದವರಿಗೆ, ಸೋಶಿಯಲ್ ಮೀಡಿಯಾದಲ್ಲಿ ಸಂದೇಶ ರವಾನಿಸಿದವರ ಮೇಲೆ ಮಾತ್ರ ನಿಮ್ಮ ಕಾನೂನು ಕ್ರಮವೇ? ಪೊಲೀಸರ ಈ ಕ್ರಮ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತಷ್ಟು ಪ್ರಕ್ಷುಬ್ಧತೆ ಮೂಡಿಸುವುದಕ್ಕೆ ಕಾರಣವಾಗುತ್ತದೆ ಎಂದು ಆಕ್ರೋಶ ಹೊರಹಾಕಿದರು.

  • 2 ಜಿಲ್ಲೆಗಳ ರೈತರ ಸಭೆ ಕರೆದು ಚರ್ಚಿಸಿ, ಪ್ರಕರಣ ವಾಪಸ್ ಪಡೆಯಿರಿ: ಆರ್ ಅಶೋಕ್ ಆಗ್ರಹ

    2 ಜಿಲ್ಲೆಗಳ ರೈತರ ಸಭೆ ಕರೆದು ಚರ್ಚಿಸಿ, ಪ್ರಕರಣ ವಾಪಸ್ ಪಡೆಯಿರಿ: ಆರ್ ಅಶೋಕ್ ಆಗ್ರಹ

    – ಹಿಂದೂ ಮುಖಂಡರ ವಿರುದ್ಧ ಪ್ರಕರಣ ದಾಖಲಿಸಲು ಟಾಸ್ಕ್ ಫೋರ್ಸ್ ರಚನೆ; ಕಿಡಿ

    ಬೆಂಗಳೂರು: ಹೇಮಾವತಿ ನೀರು ಹಂಚಿಕೆ ವಿಚಾರದಲ್ಲಿ ಸರ್ಕಾರ ಎಲ್ಲ ರೈತರನ್ನು ಹಾಗೂ ಸರ್ವಪಕ್ಷಗಳ ಪ್ರಮುಖರನ್ನು ಕರೆದು ಸಭೆ ಮಾಡಿ ಚರ್ಚಿಸಬೇಕು. ರೈತರ ವಿರುದ್ಧ ದಾಖಲಿಸಿದ ಪ್ರಕರಣಗಳನ್ನು ಹಿಂಪಡೆಯಬೇಕು ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ (R Ashok) ಆಗ್ರಹಿಸಿದರು.

    ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಗಡಿಗೆ ಹೇಮಾವತಿ ನೀರು (Hemavati Water) ನೀಡಲು ತುಮಕೂರಿನ ರೈತರು ಪ್ರತಿಭಟಿಸುತ್ತಿರುವಾಗ, ಎರಡೂ ಜಿಲ್ಲೆಗಳ ಪ್ರತಿನಿಧಿಗಳು ಹಾಗೂ ರೈತರ ಜೊತೆ ಸರ್ಕಾರ ಚರ್ಚಿಸಬೇಕಿತ್ತು. ಈ ಕೆಲಸವನ್ನು ಸರ್ಕಾರ ಮಾಡದೆಯೇ ರೈತರ ನಡುವೆಯೇ ಎತ್ತಿ ಕಟ್ಟುವ ಕೆಲಸ ಮಾಡಿದೆ. ರೈತರಿಗೆ ಮನವರಿಕೆ ಮಾಡುವ ಬದಲು ಬೆದರಿಕೆ ಹಾಕುವುದು ಒಳ್ಳೆಯದಲ್ಲ. ಎಲ್ಲ ರೈತರನ್ನು ಸಮಭಾವದಿಂದ ನೋಡಬೇಕೇ ಹೊರತು, ಮಠಾಧೀಶರ ಮೇಲೆ, ಜನಪ್ರತಿನಿಧಿಗಳ ಮೇಲೆ ಕೇಸ್ ಹಾಕಬಾರದು. ಕಾಂಗ್ರೆಸ್‌ನ ಶಾಸಕರೇ ಆದ ಗುಬ್ಬಿ ಶ್ರೀನಿವಾಸ್ ಕೂಡ ಇದರ ವಿರುದ್ಧ ನಿಂತಿದ್ದಾರೆ ಎಂದರು. ಇದನ್ನೂ ಓದಿ: ರಾಮನಗರ-ತುಮಕೂರು ಮಧ್ಯೆ ಹೇಮಾವತಿ ಕಲಹ – ಸರ್ವಪಕ್ಷ ಸಭೆ ಕರೆಯಲು ಬಿಜೆಪಿ ಆಗ್ರಹ

    ರೈತರ ವಿರುದ್ಧ ಪ್ರಕರಣ ದಾಖಲಿಸುವುದು ಅಕ್ಷಮ್ಯ ಅಪರಾಧವಾಗಿದೆ. ರೈತರ ಜೊತೆಗೆ ಚರ್ಚಿಸಿ ಸಮನ್ವಯ ಸಾಧಿಸಬೇಕು. ಡಿಸಿಎಂ ಡಿ.ಕೆ ಶಿವಕುಮಾರ್ (D K Shivakumar) ಅವರ ಕುರ್ಚಿ ಹೋದರೆ ಅಧಿಕಾರವೇ ಇರುವುದಿಲ್ಲ. ರಾಜ್ಯ ಸರ್ಕಾರ ಎರಡು ಜಿಲ್ಲೆಗಳ ಸರ್ವಪಕ್ಷ ಸಭೆ ಕರೆದು ತೀರ್ಮಾನ ಕೈಗೊಳ್ಳಬೇಕು. ಅಲ್ಲದೇ ಕೇಸ್ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು.

    ಹಿಂದೂಗಳೇ ಗುರಿ:
    ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯಲ್ಲಿ ಟಾಸ್ಕ್ ಫೋರ್ಸ್ ಮಾಡಿ, ಹಿಂದೂ ಮುಖಂಡರ ವಿರುದ್ಧ ಪ್ರಕರಣ ದಾಖಲಿಸಲಾಗುತ್ತಿದೆ. ಇದು ಕೋಮುವಾದದ ವಿರುದ್ಧ ಅಲ್ಲ, ಹಿಂದೂಗಳ ವಿರುದ್ಧ ಇರುವ ಫೋರ್ಸ್. ಈ ಹಿಂದೆ ಇದ್ದ ಅಧಿಕಾರಿಗಳನ್ನು ವರ್ಗಾವಣೆ ಮಾಡಿ, ಅವರಿಗೆ ಬೇಕಾದ ಅಧಿಕಾರಿಗಳನ್ನು ನೇಮಿಸಿಕೊಂಡಿದ್ದಾರೆ. ಘಟನೆ ನಡೆದು ಎಷ್ಟೋ ದಿನಗಳಾದ ನಂತರ ಪ್ರಕರಣ ದಾಖಲಿಸಲಾಗುತ್ತಿದೆ. ಸುಳ್ಳು ಅಪಾದನೆ ಮಾಡಿ ಹಿಂದೂ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಿಸಿದರೆ, ಬೀದಿಗಿಳಿದು ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು. ಇದನ್ನೂ ಓದಿ: ʻಆಪರೇಷನ್‌ ಸಿಂಧೂರʼ ವೇಳೆ ಭಾರತ ಧ್ವಂಸಗೊಳಿಸಿದ್ದ ಮುರಿಡ್ಕೆ ಮಸೀದಿಯಲ್ಲಿ ಮತ್ತೆ ತಲೆಎತ್ತಿದ ಲಷ್ಕರ್‌ ಗುಂಪು; ವಿಡಿಯೋ ವೈರಲ್‌

    ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಕಾಂಗ್ರೆಸ್ ಪಕ್ಷದಿಂದ ಕರಾವಳಿ ಭಾಗಕ್ಕೆ ಹಣ ಬರುತ್ತಿಲ್ಲ. ಕಾಂಗ್ರೆಸ್‌ನ ಭಿಕ್ಷೆಯಿಂದ ಅಲ್ಲಿನ ಜನರು ಬದುಕುತ್ತಿಲ್ಲ. ಜನರ ಹಣದಲ್ಲೇ ಕಾಂಗ್ರೆಸ್ ನಾಯಕರು ಬದುಕುತ್ತಿದ್ದಾರೆ. ಡಿ.ಕೆ ಶಿವಕುಮಾರ್ ಕರಾವಳಿ ಜನರ ಬಳಿ ಕ್ಷಮೆ ಕೋರಬೇಕು ಎಂದು ಒತ್ತಾಯಿಸಿದರು. ಇದನ್ನೂ ಓದಿ: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ದಕ್ಷಿಣ ಆಫ್ರಿಕಾದ ದೈತ್ಯ ಬ್ಯಾಟರ್‌ ಕ್ಲಾಸೆನ್‌ ಗುಡ್‌ಬೈ

    ರಸ್ತೆ ದುರಸ್ತಿಯ ಯೋಗ್ಯತೆ ಇಲ್ಲದ ಸರ್ಕಾರ:
    ಗ್ರೇಟರ್ ಬೆಂಗಳೂರು (Greater Bengaluru) ರಚನೆ ಮಾಡಿದ ನಂತರ ಅಭಿವೃದ್ಧಿ ಕಾರ್ಯ ಆಗಿದೆಯೇ ಎಂದು ನೋಡಬೇಕು. ಬೆಂಗಳೂರಿನಲ್ಲಿ ಎಲ್ಲ ರಸ್ತೆಗಳಲ್ಲಿ ಗುಂಡಿಗಳಿವೆ. ರಸ್ತೆಗಳನ್ನು ದುರಸ್ತಿ ಮಾಡುವ ಯೋಗ್ಯತೆಯೇ ಸರ್ಕಾರಕ್ಕೆ ಇಲ್ಲ. ಕಸ ವಿಲೇವಾರಿ ಮಾಡಲು ಗುತ್ತಿಗೆದಾರರಿಗೆ ಜನವರಿಯಿಂದಲೇ ಬಿಲ್ ಪಾವತಿ ಮಾಡಿಲ್ಲ. ಹೊರರಾಜ್ಯದವರಿಗೆ ಗುತ್ತಿಗೆ ನೀಡಿ ಕಸದ ಲಾಬಿ ಸೃಷ್ಟಿ ಮಾಡಿದ್ದಾರೆ. ಇಂತಹ ಸ್ಥಿತಿಯಲ್ಲಿ ಬಿಬಿಎಂಪಿ ಚುನಾವಣೆ ಮಾಡಿದರೆ ಯಾವ ಮುಖ ಇಟ್ಟುಕೊಂಡು ಜನರ ಬಳಿಗೆ ಹೋಗುತ್ತಾರೆ ಎಂದು ಪ್ರಶ್ನಿಸಿದರು.

    ಮೇಕೆದಾಟು ಯೋಜನೆಗೆ ಆಗ್ರಹಿಸಿ ತಮಿಳುನಾಡು ಸರ್ಕಾರದ ಮುಂದೆ ಪ್ರತಿಭಟಿಸಲು, ಕಲ್ಲು ಹೊಡೆಯಲು ನಾವು ಸಿದ್ಧರಿದ್ದೇವೆ. ಡಿಸಿಎಂ ಡಿ.ಕೆ ಶಿವಕುಮಾರ್ ಇದಕ್ಕೆ ಸಿದ್ಧರಿದ್ದಾರೆಯೇ? ಇಲಾಖೆಗಳಿಗೆ ಅನುದಾನ ನೀಡದೆಯೇ ಸಚಿವರಿಗೆ ಕೆಲಸ ಮಾಡಲು ಆಗುತ್ತಿಲ್ಲ. ಕೆಎಸ್‌ಆರ್‌ಟಿಸಿಗೆ ಹಣ ನೀಡಿಲ್ಲ. ಜೋಳ ಖರೀದಿ ಕೇಂದ್ರಗಳಿಗೆ ಹಣ ನೀಡಿಲ್ಲ. ಸರ್ಕಾರಿ ಆಸ್ಪತ್ರೆಗಳಿಗೆ ಸಂಬಳಕ್ಕೆ ಹಣ ಕೊಟ್ಟಿಲ್ಲ ಕಿಡಿಕಾರಿದರು. ಇದನ್ನೂ ಓದಿ: ಕಮಲ್ ಹಾಸನ್‌ಗೆ ಕನ್ನಡದ ಪುಸ್ತಕ ನೀಡಿದ ರಂಜನಿ ರಾಘವನ್

    ನಟ ಕಮಲ್ ಹಾಸನ್ (Kamal Haasan) ಅವರ ಯಾವುದೇ ಚಿತ್ರಗಳ ಪ್ರದರ್ಶನಕ್ಕೆ ಅವಕಾಶ ನೀಡಬಾರದು. ಕನ್ನಡದ ವಿಚಾರಕ್ಕೆ ಬಂದಾಗ ಎಲ್ಲರೂ ಸ್ಪಷ್ಟವಾಗಿರಬೇಕು. ಕನ್ನಡದ ಎಲ್ಲ ಕಲಾವಿದರು ಕನ್ನಡದ ಪರವಾಗಿ ಮಾತಾಡಬೇಕು ಎಂದರು.

  • ಚಿತ್ತಾಪುರದಲ್ಲಿ ಛಲವಾದಿ ನಾರಾಯಣಸ್ವಾಮಿಗೆ ಘೇರಾವ್

    ಚಿತ್ತಾಪುರದಲ್ಲಿ ಛಲವಾದಿ ನಾರಾಯಣಸ್ವಾಮಿಗೆ ಘೇರಾವ್

    – ಸಚಿವ ಸ್ಥಾನದಿಂದ ಪ್ರಿಯಾಂಕ್ ಖರ್ಗೆ ವಜಾಕ್ಕೆ ಬಿಜೆಪಿ ಆಗ್ರಹ; ರಾಜ್ಯಪಾಲರಿಗೆ ದೂರು

    ಬೆಂಗಳೂರು: ಕಲಬುರಗಿಯಲ್ಲಿ ಪೊಲೀಸ್ ಅಧಿಕಾರಿಗಳೇ ನನ್ನನ್ನು ಬಂಧನದಲ್ಲಿ ಇಟ್ಟ ಹಾಗಿತ್ತು ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ(Chalavadi Narayanswamy) ಆಕ್ಷೇಪಿಸಿದರು.

    ವಿಧಾನಸಭೆ ವಿಪಕ್ಷ ನಾಯಕ ಆರ್ ಅಶೋಕ್(R Ashok), ಬಿಜೆಪಿ ಶಾಸಕರು ಮತ್ತು ವಿಧಾನಪರಿಷತ್ ಸದಸ್ಯರ ನಿಯೋಗವು ಗುರುವಾರ ರಾಜ್ಯಪಾಲರನ್ನು ಭೇಟಿ ಮಾಡಿತ್ತು. ಈ ಸಂದರ್ಭದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನನಗೆ ನಿಜವಾಗಲೂ ಪ್ರಾಣ ಬೆದರಿಕೆ ಇದೆ. ನನಗೆ ಏನೇ ಆದರೂ ಈ ಸರ್ಕಾರ ಮತ್ತು ಖರ್ಗೆಯವರ ಕುಮ್ಮಕ್ಕೇ ಅದಕ್ಕೆ ಕಾರಣ ಎಂದು ಆರೋಪಿಸಿದರು. ಇದನ್ನೂ ಓದಿ: ಮಡೆನೂರ್ ಮನುನನ್ನ ಬೆಂಗ್ಳೂರಿಗೆ ಕರೆತಂದ ಪೊಲೀಸ್‌ – ಅದು ರೇಪ್‌ ಅಲ್ಲ, ಒಪ್ಪಂದದ ಸಂಪರ್ಕ ಅಂದ ನಟ

    ಸಿಎಂ ಸಿದ್ದರಾಮಯ್ಯ ಅವರು ಪ್ರಿಯಾಂಕ್ ಖರ್ಗೆಯವರನ್ನು(Priyank Kharge) ಸಚಿವ ಸ್ಥಾನದಿಂದ ಹೊರದೂಡಬೇಕು. ಇಲ್ಲವಾದರೆ ಮುಂದಿನ ಘಟನೆಗಳಿಗೆ ಮುಖ್ಯಮಂತ್ರಿಗಳೇ ಹೊಣೆಗಾರರು. ನನ್ನ ಭದ್ರತಾ ವ್ಯವಸ್ಥೆ ಹೆಚ್ಚಿಸಬೇಕು. ಪೊಲೀಸರು ಅಷ್ಟು ಕಡಿಮೆ ಜನರನ್ನೇ ಹೊರಕ್ಕೆ ಹಾಕಿಲ್ಲ. ಒಬ್ಬ ಗನ್‌ಮ್ಯಾನ್ ಕೊಟ್ಟರೆ, 50 ಜನ ಬಂದರೆ ಅವರೇನು ಮಾಡಲು ಸಾಧ್ಯ ಎಂದು ಕೇಳಿದರು.

    ಎಐಸಿಸಿ ಅಧ್ಯಕ್ಷರ ಮಗನೆಂದರೆ ಅವರಿಗೆ ಬೇರೆ ನಿಯಮ, ಸಂವಿಧಾನ ಇದೆಯೇ? ಅವರನ್ನು ಸಚಿವರನ್ನಾಗಿ ಇಟ್ಟುಕೊಳ್ಳಲೇ ಬೇಕಾ? ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸ್ಥಿತಿ ಸಂಪೂರ್ಣ ಹದಗೆಟ್ಟಿದೆ ಎಂದು ತಿಳಿಸಿದರು. ಇದನ್ನೂ ಓದಿ: ಕನ್ನಡದ ನಟಿಯರನ್ನ ಹಾಕೊಂಡ್ರೆ ಲಾಭ ಬರಲ್ವಾ: ನಾರಾಯಣ ಗೌಡ ಆಕ್ರೋಶ

    ನಾನು ನೇರವಾಗಿ ಮಾತನಾಡುವುದು ಅವರಿಗೆ ಹಿತವಾಗಿಲ್ಲ. ಅವರು ಯಾವಾಗ ಜಮೀನು ವಾಪಸ್ ಕೊಟ್ಟರೋ ಆವತ್ತಿನಿಂದ ನನ್ನ ಹಿಂದೆ ಪಿತೂರಿ ಮಾಡುತ್ತಿರುವುದು ನನಗೆ ಗೊತ್ತಿದೆ. ನನ್ನನ್ನು ಮುಗಿಸುವ ತಂತ್ರ ಅವರದ್ದು ಎಂದು ಆರೋಪಿಸಿದರು. ಇದನ್ನೂ ಓದಿ: ಮೋದಿಜೀ ಪೊಳ್ಳು ಭಾಷಣ ನಿಲ್ಲಿಸಿ… ಕ್ಯಾಮೆರಾಗಳ ಮುಂದೆ ಮಾತ್ರ ನಿಮ್ಮ ರಕ್ತ ಏಕೆ ಕುದಿಯುತ್ತೆ? – ರಾಗಾ

    ಹೇಗಾದರೂ ನನಗೆ ಅಪಮಾನ ಮಾಡಬೇಕೆಂದು ಪ್ರಯತ್ನ ನಡೆದಿದೆ. ನಮ್ಮನ್ನು ಮುಗಿಸಲು ಪ್ರಿಯಾಂಕ್ ಖರ್ಗೆ ತೀರ್ಮಾನ ಮಾಡಿದ್ದಾರೆ. ಅವರ ಸತ್ಯ ಹೊರಹಾಕುವ ವಿಚಾರದಲ್ಲಿ ನಾನು ಅವರಿಗೆ ಕಂಟಕವಾಗಿದ್ದೇನೆ ಎಂದು ಅವರಿಗೆ ಅನಿಸಿರಬಹುದು ಎಂದು ದೂರಿದರು.

    ಅವಾಚ್ಯ ಶಬ್ದಗಳಿಂದ ನನ್ನನ್ನು ಬೈದಿದ್ದಾರೆ. ದಯವಿಟ್ಟು ಸಹಕರಿಸಿ ಎಂದು ಪೊಲೀಸರು ಹೇಳಿದರು. ಬೈಯುವುದನ್ನು ಕೇಳಿಕೊಂಡು, ಇಂಕ್ ಹಾಕಿದರೆ ಹಾಕಿಸಿಕೊಂಡು, ಮೊಟ್ಟೆ ಒಡೆದರೆ ಒಡೆಸಿಕೊಂಡು ಸಹಕರಿಸಬೇಕಿತ್ತೇ? ಅಲ್ಲಿ ಬಂದಿದ್ದ 25ರಿಂದ 30 ಜನರನ್ನು ಅಲ್ಲಿಂದ ಪೊಲೀಸರಿಗೆ ದೂಡಲಾಗಿಲ್ಲ. 100ಕ್ಕೂ ಹೆಚ್ಚು ಪೊಲೀಸರಿದ್ದರು. ಗೃಹ ಸಚಿವರು, ಎಡಿಜಿಪಿ, ಎಸ್ಪಿ ಬಳಿ ಮಾತನಾಡಿದ್ದೇನೆ. ಹೆಚ್ಚುವರಿ ಎಸ್ಪಿ ಅಲ್ಲೇ ನಿಂತಿದ್ದರು. ಡಿವೈಎಸ್ಪಿ, ಸರ್ಕಲ್ ಇನ್ಸ್‌ಪೆಕ್ಟರ್‌, ನಾಲ್ಕೈದು ಜನ ಇನ್ಸ್‌ಪೆಕ್ಟರ್‌ಗಳಿದ್ದರೂ ನಮ್ಮನ್ನು ಹೊರಕ್ಕೆ ಕಳುಹಿಸಲಿಲ್ಲ. ಬಹುಶಃ ಅವರಿಗಿಂತ ಇವರೇ ನಮ್ಮನ್ನು ಬಂಧನದಲ್ಲಿ ಇಟ್ಟಂತಿತ್ತು ಎಂದು ಟೀಕಿಸಿದರು. ಇದನ್ನೂ ಓದಿ: ಕೆನಿಶಾಗೆ ಕೊಲೆ ಬೆದರಿಕೆ – ಆರತಿ ಸಮಸ್ಯೆಗೆ ನಾನು ಕಾರಣ ಆಗಿದ್ರೆ ಕೋರ್ಟ್‌ ಮುಂದೆ ನಿಲ್ಲಿಸಿ ಎಂದ ಗಾಯಕಿ

    ಪ್ರಧಾನಿಯನ್ನು ವಿಷ ಸರ್ಪಕ್ಕೆ ಹೋಲಿಸಿದವರು ಯಾರು?
    ಈ ದೇಶದ ಪ್ರಧಾನಿಯನ್ನು ವಿಷ ಸರ್ಪಕ್ಕೆ ಹೋಲಿಸಿದವರು ಯಾರು? ಮಲ್ಲಿಕಾರ್ಜುನ ಖರ್ಗೆಯವರು. ಇದಕ್ಕೆ ಇವತ್ತಿಗೂ ದಾಖಲೆ ಇದೆ. ಪ್ರಿಯಾಂಕ್ ಖರ್ಗೆಯವರು ಮಾತು ಮಾತಿಗೆ ಆರೆಸ್ಸೆಸ್ ಚಡ್ಡಿಯವರು ಎನ್ನುತ್ತಾರೆ. ಇದು ನಮಗೆ ಅವಮಾನ ಅಲ್ಲವೇ. ಇದೆಲ್ಲ ನೀವು ಮಾಡಬಹುದು. ನಾವೊಂದು ಗಾದೆ ಹೇಳಿದರೆ ನಿಮಗೆ ಚುಚ್ಚುತ್ತದೆಯೇ? ನಮ್ಮನ್ನು ನಾಯಿಗೆ ಹೋಲಿಸಿದ್ದಾರೆ. ಇವರಿಗೆ ಪದ್ಮಭೂಷಣಕ್ಕೆ ಶಿಫಾರಸು ಮಾಡಬೇಕೇ? ನಮ್ಮ ಕ್ಷೇತ್ರದಿಂದ ಹಾಗೇ ಕಳಿಸಬೇಕೇ ಅಂದರೆ ಪ್ರಾಣ ತೆಗೆದು ಕಳಿಸುತ್ತಿದ್ದರೇ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಕಾನ್ ಫೆಸ್ಟಿವಲ್| ರೆಡ್ ಕಾರ್ಪೆಟ್‌ನಲ್ಲಿ ಜಾನ್ವಿ ವಾಕ್ – ‘ನನ್ನ ದೇವತೆ’ ಎಂದ ಬಾಯ್‌ಫ್ರೆಂಡ್

    ನಾನು ಸತ್ಯವನ್ನೇ ಹೇಳುವವ. ತಪ್ಪಿದ್ದರೆ, ಅದು ನನ್ನ ಗಮನಕ್ಕೆ ಬಂದರೆ ನಾನು ಹೋರಾಟ ಮಾಡುವವ. ನಮ್ಮ ಪಕ್ಷದ ಮುಖಂಡರನ್ನು ಗೌರವಿಸಿ ಅವರಿಗೆ ವಿಷಯ ತಿಳಿಸಿ ಇವೆಲ್ಲ ಮಾಡುತ್ತಿದ್ದೇನೆ. ನಮ್ಮ ಪಕ್ಷದ್ದು ಸಂಘಟಿತ ಹೋರಾಟ. ಡಿ.ಜಿ, ಗೃಹ ಸಚಿವ, ಮುಖ್ಯಮಂತ್ರಿಗಳಿಗೆ ದೂರು ಕೊಡಲಿದ್ದೇವೆ. ಕೇಂದ್ರದ ಗೃಹ ಸಚಿವರಿಗೂ ಮನವಿ ಕಳುಹಿಸಲಿದ್ದೇವೆ ಎಂದು ತಿಳಿಸಿದರು.

    ಮೂಕಪ್ರೇಕ್ಷಕರಾಗಿದ್ದ ಪೊಲೀಸ್ ಅಧಿಕಾರಿಗಳು
    ನನ್ನ ಮೇಲೆ ಹಾಕಲು ಇಂಕ್ ತಂದಿದ್ದರು. ಬಳಿಕ ಕಾರಿನ ಮೇಲೆ ಹಾಕಿದ್ದಾರೆ. ಅಲ್ಲಿದ್ದ ಪೊಲೀಸ್ ಅಧಿಕಾರಿಗಳು ಮೂಕಪ್ರೇಕ್ಷಕರಾಗಿದ್ದರು. ನಮ್ಮವರು 400ರಿಂದ 500 ಜನರಿದ್ದರು. ಅವರು ಹಲ್ಲೆ ಮಾಡಲು ಬಂದವರನ್ನು ಹತ್ತಿರ ಬರದಂತೆ ತಡೆದರು. ಕುಪಿತನಾಗಿ ನಾನು ಪೊಲೀಸರಿಗೆ, ರಕ್ಷಣೆ ಕೊಡುವುದಾದರೆ ಕೊಡಿ, ನಾನು ಹೋಗುವುದಾಗಿ ಹೇಳಿ ಹೊರಬಂದೆ. ಆಗ, ನಮ್ಮನ್ನು ಕರೆತಂದು ಯಾದಗಿರಿಗೆ ಹೋಗಲು ಗಡಿಭಾಗದಿಂದ ಆಚೆಗೆ ಬಿಟ್ಟರು. ಪ್ರಿಯಾಂಕ್ ಖರ್ಗೆ ಬೆಂಬಲಿಗರು, ಕೆಲಸಕ್ಕೆ ಅಡ್ಡಿಪಡಿಸಿದ್ದಲ್ಲದೇ ನನ್ನ ಮೇಲೆ ಮಾರಣಾಂತಿಕ ಹಲ್ಲೆ ಮಾಡಲು ಪ್ರಯತ್ನಿಸಿದ್ದಾರೆ ಎಂದು ದೂರಿದರು. ಇದನ್ನೂ ಓದಿ: ರನ್ಯಾರಾವ್‌ಗೆ ಪರಮೇಶ್ವರ್ ಶಿಕ್ಷಣ ಸಂಸ್ಥೆ ಸಾಲ ಕೊಟ್ಟಿರಬಹುದು: ರಾಮಲಿಂಗಾ ರೆಡ್ಡಿ

    ನಮ್ಮ ಪದಾಧಿಕಾರಿಯನ್ನು ತಳ್ಳಾಡಿ, ಬಟ್ಟೆ ಹರಿದಿದ್ದರು
    ನಮ್ಮ ಪಕ್ಷದ ಎಸ್ಸಿ ಮೋರ್ಚಾದ ಮಾಜಿ ಉಪಾಧ್ಯಕ್ಷ, ಜಿಲ್ಲಾ ಪರಿಷತ್ ಮಾಜಿ ಅಧ್ಯಕ್ಷ ಅಂಬಾರಾಯ ಅಷ್ಟಗಿ ಅವರು ನನ್ನನ್ನು ನೋಡಲು ಬಂದಿದ್ದರು. ಅವರನ್ನು ತಳ್ಳಾಡಿ ಬಟ್ಟೆ ಹರಿದಿದ್ದಾರೆ. ಅವರನ್ನು ರಾತ್ರಿ 3 ಗಂಟೆವರೆಗೆ ಒಂದು ಕಡೆ ಕೂಡಿ ಹಾಕಿದ್ದರು. ಒದೆ ತಿಂದವರೂ ಅವರೇ, ಅವರ ಮೇಲೇ ದೂರು ನೀಡುವುದಾಗಿ ಹೆದರಿಸಿದ್ದಾರೆ ಎಂದರು. ಇದನ್ನೂ ಓದಿ: ಉಗ್ರರು ಪಾಕಿಸ್ತಾನದಲ್ಲೇ ಅಡಗಿದ್ರೂ ನುಗ್ಗಿ ಹೊಡೆಯುತ್ತೇವೆ: ಜೈಶಂಕರ್‌

    ಬಳಿಕ ವಿಪಕ್ಷ ನಾಯಕ ಆರ್ ಅಶೋಕ್ ಮಾತನಾಡಿ, 5 ತಾಸು ನನ್ನನ್ನು ತಡೆಹಿಡಿದಿದ್ದೀರಿ. ಇಲ್ಲಿ ಪ್ರಜಾಪ್ರಭುತ್ವ ಇದೆಯೇ? ನಮ್ಮ ಸರ್ಕಾರ ಇದ್ದಾಗ ಸಿದ್ದರಾಮಯ್ಯನವರು ವಿಪಕ್ಷ ನಾಯಕರಾಗಿದ್ದರು. ಅವರು ಕೊಡಗಿಗೆ ಹೋಗಿದ್ದರು. ಚಲಿಸುವ ಕಾರಿಗೆ ಯಾರೋ ಒಬ್ಬ ಹುಡುಗ ಮೊಟ್ಟೆ ಬಿಸಾಕಿದ್ದ. ಆಗ ಅವರು ಎಷ್ಟೊಂದು ಮಾತನಾಡಿದ್ದರು. ನಾನು ಮಾಜಿ ಸಿಎಂ, ನನಗೇನು ಗೌರವ ಇಲ್ಲವೇ? ಪೊಲೀಸರು ಏನು ಮಾಡುತ್ತೀರಿ ಎಂದು ಸಿದ್ದರಾಮಯ್ಯ ಕೇಳಿದ್ದರು. ಆದರೆ ಈಗ ನಿಮಗೇನೂ ಅನಿಸುವುದಿಲ್ಲವೇ ಮುಖ್ಯಮಂತ್ರಿಗಳೇ ಎಂದು ಪ್ರಶ್ನೆ ಮುಂದಿಟ್ಟರು.

  • ಸರ್ಕಾರಕ್ಕೆ 2 ವರ್ಷ – ಸಿಎಂಗೆ `ದಿವಾಳಿ ಮಾಡೆಲ್ ಆಫ್ ಕರ್ನಾಟಕ’ ಬಿರುದು ಕೊಟ್ಟ ಬಿಜೆಪಿ

    ಸರ್ಕಾರಕ್ಕೆ 2 ವರ್ಷ – ಸಿಎಂಗೆ `ದಿವಾಳಿ ಮಾಡೆಲ್ ಆಫ್ ಕರ್ನಾಟಕ’ ಬಿರುದು ಕೊಟ್ಟ ಬಿಜೆಪಿ

    -ಬಿಜೆಪಿಯಿಂದ ವೈಫಲ್ಯಗಳ ಚಾರ್ಜ್‌ಶೀಟ್‌ ಬಿಡುಗಡೆ

    ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ (CM Siddaramaiah) `ದಿವಾಳಿ ಮಾಡೆಲ್ ಆಫ್ ಕರ್ನಾಟಕ’ ಬಿರುದನ್ನು ನಾವು ನೀಡುತ್ತಿದ್ದೇವೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ (R Ashok) ತಿಳಿಸಿದ್ದಾರೆ.

    ಬಿಜೆಪಿ ನಗರ ಕಾರ್ಯಾಲಯ ಬಾವುರಾವ್ ದೇಶಪಾಂಡೆ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಇಂದು ಮಾತನಾಡಿದ ಅವರು, ರಾಜ್ಯ ಸರ್ಕಾರ ದಿವಾಳಿಯಾಗಿದೆ. ಸಾಲ ಪಡೆದು ಸಂಬಳ ಕೊಡುವಂಥ ಸ್ಥಿತಿ ಬಂದಿದೆ. ನಮ್ಮ ಡಿ.ಕೆ.ಶಿವಕುಮಾರಣ್ಣ ನಿನ್ನೆ ಇದನ್ನು ಸರಿಯಾಗಿ ಹೇಳಿದ್ದಾರೆ. ತಿಂಗಳಿಗೊಮ್ಮೆ 2 ಸಾವಿರ ಹಣ ಕೊಡಲು ನಿಮ್ಮಪ್ಪನ ಮನೆ ಗಂಟಾ ಎಂದು ಕೇಳಿದ್ದಾರೆ. ತಿಂಗಳಿಗೊಮ್ಮೆ 2 ಸಾವಿರ ಫಟಾಫಟ್ ಹಣ ಕೊಡುವುದಾಗಿ ರಾಹುಲ್ ಗಾಂಧಿ ಹೇಳಿದ್ದರು. ಇಲ್ಲಿ ಶಿವಕುಮಾರ್ ಕಟಾಕಟ್, ಯಾವಾಗ ಹಣ ಬರುತ್ತೋ ಆಗ ದುಡ್ಡು ಕೊಡುವುದಾಗಿ ಹೇಳಿದ್ದಾರೆ ಎಂದು ಗಮನ ಸೆಳೆದರು.ಇದನ್ನೂ ಓದಿ: ಯಶ್ ತಾಯಿ ನಿರ್ಮಾಣದ ‘ಕೊತ್ತಲವಾಡಿ’ ಚಿತ್ರದ ಟೀಸರ್ ಔಟ್- ಸಾಥ್ ಕೊಟ್ಟ ನಟ ಶರಣ್

    ಯಾವ ಸಾಧನೆಗೆ ಈ ಸಂಭ್ರಮಾಚರಣೆ?
    ಮುಖ್ಯಮಂತ್ರಿಗಳೇ.. ಯಾವ ಸಾಧನೆಗಾಗಿ ಈ 2 ವರ್ಷದ ಸಂಭ್ರಮಾಚರಣೆ ಮಾಡಿದ್ದೀರಿ? ಏನು ಕಡಿದು ಕಟ್ಟೆ ಹಾಕಿದ್ದೀರಿ? ಎಂದು ಕೇಳಿದರು. ಹಾಲಿನ ದರ ಏರಿಸಿದ್ದೀರಿ. ನೀರು, ವಿದ್ಯುತ್, ಪೆಟ್ರೋಲ್, ಡೀಸೆಲ್, ಆಸ್ತಿ ತೆರಿಗೆ ಇವೆಲ್ಲವನ್ನೂ ಏರಿಸಿದ್ದೀರಿ. ದರ ಏರಿಸಿದ ಪರಿಣಾಮವಾಗಿ ಜನರು ಕಷ್ಟದಲ್ಲಿರುವಾಗ, ಸಮಾವೇಶ ಮಾಡಬೇಕೆಂದು ನಿಮಗೆ ಯಾಕೆ ಅನ್ನಿಸಿದೆ? ಎಂಬ ಪ್ರಶ್ನೆಯನ್ನು ಮುಂದಿಟ್ಟರು.

    ರೈತರ ಆತ್ಮಹತ್ಯೆ, ಬಾಣಂತಿಯರ ಸಾವಿಗಾಗಿ ಸಮಾವೇಶವೇ?
    ಎರಡು ವರ್ಷಗಳಾಗಿದೆ. ಪರಿಶಿಷ್ಟ ಜಾತಿಗೆ ಸೇರಿದ 187 ಕೋಟಿ ರೂ.ಯನ್ನು ಫಟಾಫಟ್ ಲೂಟಿ ಮಾಡಿದ್ದೀರಿ. ಇನ್ನೊಂದೆಡೆ 89 ಕೋಟಿ ರೂ. ಲೂಟಿ ಆಗಿರುವುದಾಗಿ ಸಿದ್ದರಾಮಯ್ಯನವರೇ ಅಧಿವೇಶನದಲ್ಲಿ ಹೇಳಿದ್ದಾರೆ. ಅದಕ್ಕಾಗಿ ಈ ಸಂಭ್ರಮವೇ? ಮುಡಾ ಹಗರಣದಲ್ಲಿ ವಾಸ್ತು ಪ್ರಕಾರ ಇರುವ 14 ಮೂಲೆ ನಿವೇಶನಗಳನ್ನು ಲೂಟಿ ಹೊಡೆದಿದ್ದಕ್ಕೆ ನಿಮ್ಮ ಈ ಸಂಭ್ರಮಾಚರಣೆಯೇ? ಎಂದು ಕೇಳಿದರು.

    ಕಳಪೆ ದ್ರಾವಣ ನೀಡಿ ದಿನನಿತ್ಯ 15-20 ಬಾಣಂತಿಯರ ಸಾವಾಗಿದೆಯಲ್ಲವೇ? ಸಚಿವರೇ, ಸರ್ಕಾರಿ ಆಸ್ಪತ್ರೆಗೆ ಹೆರಿಗೆಗೆ ಹೋದರೆ ವಾಪಸ್ ಬರುವುದೇ ಇಲ್ಲವೆಂಬ ಗ್ಯಾರಂಟಿಗಾಗಿ ಈ ಸಾಧನೆಯೇ? ರಾಜ್ಯದಲ್ಲಿ 2 ಸಾವಿರಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪರಿಹಾರ ಬರುವುದಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂದು ನಿಮ್ಮ ಸಚಿವರು ಹೇಳಿದ್ದಾರೆ. ಬರಗಾಲ ಬರಲೆಂದು ರೈತರು ಕೇಳಿಕೊಳ್ಳುತ್ತಾರೆಂದು ಇನ್ನೊಬ್ಬ ಸಚಿವ ಶಿವಾನಂದ ಪಾಟೀಲರು ಹೇಳಿದ್ದಾರೆ. ಈ ಸಾಧನೆಗಾಗಿ ಸಮಾವೇಶವೇ? ವಕ್ಫ್ ಮಂಡಳಿ ಹೆಸರಿನಲ್ಲಿ ಸಾಬರು ಲಕ್ಷಾಂತರ ಎಕರೆ ರೈತರ ಜಮೀನು, ದೇವಸ್ಥಾನದ ಆಸ್ತಿಯನ್ನು ಲೂಟಿ ಹೊಡೆದರಲ್ಲವೇ? ಅವರಿಗೆಲ್ಲ ಇದೇ ಜಮೀರ್ ಅಹ್ಮದ್ ಕೃಪಾಶೀರ್ವಾದ ಮಾಡಿದ್ದರಲ್ಲವೇ? ವಕ್ಫ್ ಆಸ್ತಿ ವಾಪಸ್ ಕೊಡಿಸುವುದಾಗಿ ಹೇಳಿಕೆ ಕೊಟ್ಟರಲ್ಲವೇ? ಇದಕ್ಕಾಗಿ ನಿಮ್ಮ ಸಾಧನಾ ಸಮಾವೇಶ ಮಾಡುತ್ತಿದ್ದೀರಾ? ಕೆಪಿಎಸ್‌ಸಿ ಪ್ರಶ್ನೆಪತ್ರಿಕೆ ತಯಾರು ಮಾಡಲು ಯೋಗ್ಯತೆ ಇಲ್ಲದ ಸರ್ಕಾರ ಇದು. ಕನ್ನಡ ಅನುವಾದದಲ್ಲಿ 79 ತಪ್ಪು ಮಾಡಿದ್ದಾರೆ. 2 ಲಕ್ಷ ಅಭ್ಯರ್ಥಿಗಳು ಇದ್ದರು. ಅವರ ಮನೆ, ಜೀವನ ಹಾಳು ಮಾಡಿದ್ದೀರಲ್ಲವೇ? ಅವರ ಬಾಳಿಗೆ ಕೊಡಲಿ ಇಟ್ಟಿದ್ದಕ್ಕೆ ಈ ಸಾಧನಾ ಸಮಾವೇಶ ಮಾಡುತ್ತೀರಾ? ಎಂದು ಕೇಳಿದರು.ಇದನ್ನೂ ಓದಿ: ಕಾಂಗ್ರೆಸ್‌ನವರ ಹೃದಯ ಬಗೆದ್ರೆ ರಾಹುಲ್ ಗಾಂಧಿ, ಪಾಕ್ ಪ್ರಧಾನಿ ಬಿರಿಯಾನಿ ತಿನ್ನೋದು ಕಾಣುತ್ತೆ: ಬಿ.ಸಿ ಪಾಟೀಲ್ ವ್ಯಂಗ್ಯ

    ಗಣೇಶ ವಿಗ್ರಹಕ್ಕೆ ಜೈಲುವಾಸ, ಪಾಕ್ ಜಿಂದಾಬಾದ್ ಹೇಳಿದ್ದಕ್ಕಾಗಿ ಸಂಭ್ರಮವೇ?
    ಹುಬ್ಬಳ್ಳಿಯಲ್ಲಿ ನೇಹಾ ಲವ್ ಜಿಹಾದ್ ಕೊಲೆ ಆಯಿತು. ಇದಕ್ಕಾಗಿ ಸಂಭ್ರಮಾಚರಣೆಯೇ? ನಾಗಮಂಗಲದಲ್ಲಿ ಪೊಲೀಸ್ ವ್ಯಾನಿನಲ್ಲೇ ಗಣೇಶನ ವಿಗ್ರಹದ ಮೆರವಣಿಗೆ ನಡೆಸಿ ವಿಸರ್ಜಿಸಿದ್ದೀರಿ. ಗಣೇಶನಿಗೂ ಜೈಲುವಾಸ ಮಾಡಿದ್ದೀರಿ. ಇದಕ್ಕೋಸ್ಕರ ಈ ಸಮಾವೇಶವೇ? ಪಾಕಿಸ್ತಾನದ ಜೊತೆ ಯುದ್ಧ ಬೇಡ ಎಂದಿದ್ದೀರಿ. ಪಾಕಿಸ್ತಾನ ಜಿಂದಾಬಾದ್ ಎಂದರೆ, ನಸೀರ್ ಸಾಬ್ ಜಿಂದಾಬಾದ್ ಹೇಳಿಕೆ ಕೊಟ್ಟಿರಿ. ಫೊರೆನ್ಸಿಕ್ ವರದಿಯಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದದ್ದು ಸಾಬೀತಾಗಿದೆ. ನಿಮಗೆ ಮಾನ ಮರ್ಯಾದೆ ಇದೆಯೇ ಕಾಂಗ್ರೆಸ್ಸಿಗರೇ ಎಂದು ಪ್ರಶ್ನೆಗಳನ್ನು ಮುಂದಿಟ್ಟರು.

    ಮಳೆಯಿಂದ 5 ಜನ ಮೃತಪಟ್ಟಿದ್ದಾರೆ. ಈ ಸಾವಿನ ಮೇಲೆ ಸಮಾವೇಶ ಮಾಡಿದ್ದೀರಿ. ಬೆಂಗಳೂರಿನ ಜನರು ಕರ್ನಾಟಕ ಬಜೆಟ್‌ನ ಶೇ. 67ರಷ್ಟು ತೆರಿಗೆ ಕಟ್ಟುತ್ತಾರೆ. ಅಂಥವರನ್ನು ನೀರಿನಲ್ಲಿ ಮುಳುಗಿಸಿದ್ದೀರಿ. ಬೆಂಗಳೂರನ್ನು ತೇಲುವ ಹಾಗೇ ಮಾಡಿದ್ದೀರಲ್ಲವೇ? ಇದಕ್ಕಾಗಿ ನಿಮ್ಮ ಸಮಾವೇಶ ಮಾಡಿದ್ದೀರಾ ಎಂದರು.

    ಹೆಚ್ಚು ಬಾರ್, ವೈನ್ ಸ್ಟೋರ್ ತೆರೆದಿದ್ದಕ್ಕೆ ಅಭಿನಂದನೆ:
    ಹಾಲಿನ ದರ 3 ಬಾರಿ 9 ರೂ. ಹೆಚ್ಚಿಸಿ ರೈತರಿಗೆ ಎಷ್ಟು ಪೈಸೆ ಕೊಟ್ಟಿದ್ದೀರಿ? ರೈತರ ಸಬ್ಸಿಡಿ ಇನ್ನೂ ಕೊಟ್ಟಿಲ್ಲ. ಕರ್ನಾಟಕದಲ್ಲಿ ಹೆಚ್ಚು ಬಾರ್‌ಗಳು, ವೈನ್ ಸ್ಟೋರ್ ತೆರೆದಿದ್ದೀರಿ. ಅದಕ್ಕಾಗಿ ವಿಪಕ್ಷವಾದ ನಮ್ಮಿಂದ ನಿಮಗೆ ಅಭಿನಂದನೆಗಳು ಎಂದು ವ್ಯಂಗ್ಯವಾಡಿದರು. ಬಾರ್, ವೈನ್ ಸ್ಟೋರ್‌ಗೆ ಹಳ್ಳಿಯಲ್ಲಿ 2 ಕೋಟಿ ರೂ., ನಗರದಲ್ಲಿ 3 ಕೋಟಿ ರೂ. ದರ ನಿಗದಿ ಮಾಡಿದ್ದಾರೆ ಎಂದು ಟೀಕಿಸಿದರು.

    ತಂದೆ, ತಾಯಿಯ ಆಸೆಗೆ ಕೊಳ್ಳಿ ಇಟ್ಟಿದ್ದೀರಲ್ಲವೇ?
    ಚಾಮರಾಜನಗರ, ಮಂಡ್ಯ, ರಾಯಚೂರು ಸೇರಿ 9 ವಿಶ್ವವಿದ್ಯಾಲಯಗಳನ್ನು ಯಾಕೆ ಮುಚ್ಚಿದ್ದೀರಿ? ಅದಕ್ಕೆ ಕೇವಲ 250 ಕೋಟಿ ರೂ. ಬೇಕಾಗಿತ್ತು. ನಿಮಗೆ ಬಾರ್, ವೈನ್ ಸ್ಟೋರ್‌ಗಳಿಂದ ಬರುವ ಹಣದ ಶೇ. 10ರಷ್ಟನ್ನು ಹಾಕಿದ್ದರೆ ಬಡ ವಿದ್ಯಾರ್ಥಿಗಳ ಆಸೆ ಈಡೇರಿಸಬಹುದಿತ್ತು. ಮಗ, ಮಗಳು ವಿದ್ಯಾವಂತರಾಗುವ ತಂದೆ, ತಾಯಿಯ ಆಸೆಗೆ ಕೊಳ್ಳಿ ಇಟ್ಟಿದ್ದೀರಲ್ಲವೇ? ಎಂದು ಕೇಳಿದರು.

    ರಾಜ್ಯದ 40 ಸರ್ಕಾರಿ ಸಂಸ್ಥೆಗಳ ದಿವಾಳಿ:
    ರಾಜ್ಯದ 40 ಸರ್ಕಾರಿ ಸಂಸ್ಥೆಗಳು ದಿವಾಳಿ ಆಗಿವೆ. ಸಾರ್ವಜನಿಕ ವಲಯದ 127 ಉದ್ಯಮಗಳಲ್ಲಿ 60 ಉದ್ಯಮಗಳು ನಷ್ಟದಲ್ಲಿವೆ. ಈ ಕಂಪನಿಗಳು 46,800 ಕೋಟಿ ರೂ. ಸಾಲ ಮಾಡಿವೆ. ಪ್ರವಾಸೋದ್ಯಮ, ರಾಜೀವ್ ಗಾಂಧಿ ವಸತಿ ನಿಗಮ, ಮೈಸೂರು ಪೇಪರ್ ಮಿಲ್ಸ್, KSRTC, NWKSRTC, BMTC, BESCOM ಮುಚ್ಚುವ ಸ್ಥಿತಿಯಲ್ಲಿದೆ ಎಂದು ಸಿಎಜಿ ವರದಿಯನ್ನು ಉಲ್ಲೇಖಿಸಿ ತಿಳಿಸಿದರು.ಇದನ್ನೂ ಓದಿ: ಕ್ಯಾಬ್‌ ಸೇವೆಗೆ ಮುನ್ನ ಟಿಪ್ಸ್‌ ಪಡೆದರೆ ಕಟ್ಟುನಿಟ್ಟಿನ ಕ್ರಮ: ಪ್ರಹ್ಲಾದ್‌ ಜೋಶಿ ಎಚ್ಚರಿಕೆ

  • 1,600 ಕೋಟಿ ಕಾಮಗಾರಿ ನಡೆದಿದ್ದರೆ ಬೆಂಗ್ಳೂರಿಗೆ ಇಂತಹ ಸ್ಥಿತಿ ಬರುತ್ತಿರಲಿಲ್ಲ: ಆರ್. ಅಶೋಕ್

    1,600 ಕೋಟಿ ಕಾಮಗಾರಿ ನಡೆದಿದ್ದರೆ ಬೆಂಗ್ಳೂರಿಗೆ ಇಂತಹ ಸ್ಥಿತಿ ಬರುತ್ತಿರಲಿಲ್ಲ: ಆರ್. ಅಶೋಕ್

    – ಗ್ರೇಟರ್ ಬೆಂಗಳೂರು ಹೋಗಿ ವಾಟರ್ ಬೆಂಗಳೂರು ಆಗಿದೆ

    ಬೆಂಗಳೂರು: ಬಿಜೆಪಿ ಅವಧಿಯಲ್ಲಿ 1,600 ಕೋಟಿ ರೂ. ಹಣವನ್ನು ಬೆಂಗಳೂರಿನ ಅಭಿವೃದ್ಧಿಗೆ ನೀಡಿದ್ದು, ಆ ಕಾಮಗಾರಿಗಳನ್ನು ಕಾಂಗ್ರೆಸ್ ಸರ್ಕಾರ ರದ್ದು ಮಾಡಿದೆ. ಆ ಕಾಮಗಾರಿಗಳು ನಡೆದಿದ್ದರೆ ಇಂತಹ ಪ್ರವಾಹದ ಸ್ಥಿತಿ ಬರುತ್ತಿರಲಿಲ್ಲ ಎಂದು ತಿಳಿಸಿ ಎಂದು ವಿಪಕ್ಷ ನಾಯಕ ಆರ್. ಅಶೋಕ್(R Ashok) ಕಿಡಿಕಾರಿದರು.

    ಸಿಲ್ಕ್ ಬೋರ್ಡ್ ಜಂಕ್ಷನ್‌ನಲ್ಲಿ ಪ್ರವಾಹ ಪರಿಶೀಲನೆ ನಡೆಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬೆಂಗಳೂರಿಗೆ(Bengaluru) ಕಳೆದ 2 ವರ್ಷಗಳಲ್ಲಿ ಏನು ಮಾಡಿದ್ದೀರಿ? ಇಡೀ ಬೆಂಗಳೂರು ಮಳೆಯಿಂದಾಗಿ ಮುಳುಗುತ್ತಿದ್ದು, ಜನರು ಪರದಾಡುತ್ತಿದ್ದಾರೆ. ಮಳೆಯಿಂದಾಗಿ 5 ಜನರು ಸತ್ತಿದ್ದಾರೆ. ಇಂಥವರ ಸಾವಿನ ಮೇಲೆ ಕಾಂಗ್ರೆಸ್ ಸಾಧನೆಯ ಸಮಾವೇಶ ಮಾಡುತ್ತಿದೆ. ಸರ್ಕಾರಕ್ಕೆ ಮಾನ ಮರ್ಯಾದೆ ಇದ್ದರೆ ಸಮಾವೇಶವನ್ನು ರದ್ದು ಮಾಡಬೇಕಿತ್ತು. ಕಾಂಗ್ರೆಸ್‌ನ ತಪ್ಪಿನಿಂದಲೇ ಜನರು ಸತ್ತಿದ್ದಾರೆ. ಇಂತಹ ಸಮಾವೇಶ ಮಾಡುವ ನೈತಿಕ ಅರ್ಹತೆ ಸರ್ಕಾರಕ್ಕೆ ಇಲ್ಲ ಎಂದು ಟೀಕಿಸಿದರು. ಇದನ್ನೂ ಓದಿ: ಕಾಂಗ್ರೆಸ್ ಸರ್ಕಾರ ಇರೋವರೆಗೂ ಗ್ಯಾರಂಟಿ ಸ್ಕೀಂ ನಿಲ್ಲೋದಿಲ್ಲ: ಡಿಕೆಶಿ ಸ್ಪಷ್ಟನೆ

    ಬೆಂಗಳೂರಿನ ಸಾಯಿ ಬಡಾವಣೆಗೆ ಡಿಸಿಎಂ ಡಿ.ಕೆ ಶಿವಕುಮಾರ್(D K Shivakumar) ಭೇಟಿ ನೀಡಿ, ಅಭಿವೃದ್ಧಿ ಮಾಡುತ್ತೇನೆಂದು ಹೇಳಿದ್ದರು. ಸಿಲ್ಕ್ ಬೋರ್ಡ್ ಬಳಿ ಕಳೆದ ಸಲವೂ ಪ್ರವಾಹವಾಗಿತ್ತು. ಇಷ್ಟಾದರೂ ಅಭಿವೃದ್ಧಿಗೆ ನಯಾಪೈಸೆ ಬಿಡುಗಡೆಯಾಗಿಲ್ಲ. ಬಿಜೆಪಿ ಅವಧಿಯಲ್ಲಿ ರಾಜಕಾಲುವೆ, ರಸ್ತೆ ಅಭಿವೃದ್ಧಿಗೆ 1,600 ಕೋಟಿ ರೂ. ನೀಡಲಾಗಿತ್ತು. ಅದನ್ನು ಕಾಂಗ್ರೆಸ್(Congress) ರದ್ದು ಮಾಡಿದೆ. ಆ ಅಭಿವೃದ್ಧಿ ಕಾರ್ಯ ನಡೆದಿದ್ದರೆ, ಈ ರೀತಿ ಪ್ರವಾಹ ಆಗುತ್ತಿರಲಿಲ್ಲ. ಬೆಂಗಳೂರಿನ ಪ್ರಗತಿಗೆ ಹಣ ನೀಡದೆ ಲೂಟಿ ಮಾಡಲು ಆ ಹಣವನ್ನು ಬಳಸಲಾಗಿದೆ. ಎಲ್ಲ ಹಣವನ್ನು ಸುರಂಗ ಮಾರ್ಗ ಯೋಜನೆಗೆ ಮೀಸಲಿಟ್ಟಿದ್ದಾರೆ. ಈಗ ಎಲ್ಲ ರಸ್ತೆಗಳಲ್ಲಿ ಸುರಂಗ ಆಗಿದೆ ಎಂದು ಗುಡುಗಿದರು. ಇದನ್ನೂ ಓದಿ: `ಆಪರೇಷನ್ ಸಿಂಧೂರ’ ಬೂಟಾಟಿಕೆ ಅಂದಿದ್ದ ಕೊತ್ತೂರು ಮಂಜುನಾಥ್ ವಿರುದ್ಧ ಪ್ರಕರಣ ದಾಖಲು

    ಪ್ರವಾಹದ ಸ್ಥಳಗಳಲ್ಲಿ ಸೆನ್ಸರ್ ಅಳವಡಿಸಲಾಗುವುದು ಎಂದು ಸರ್ಕಾರ ಹೇಳಿತ್ತು. ಆದರೆ ಯಾವ ಕೆಲಸವೂ ಆಗಿಲ್ಲ. ಏ. 15ರಂದೇ ಹವಾಮಾನ ಇಲಾಖೆ ಮಳೆ ಜೋರಾಗಲಿದೆ ಎಂದು ಸೂಚನೆ ನೀಡಿತ್ತು. ಒಂದು ತಿಂಗಳ ಸಮಯದಲ್ಲಿ ಬಿಬಿಎಂಪಿಯಿಂದ(BBMP) ಮುಂಜಾಗ್ರತಾ ಸಭೆ ನಡೆಸಿಲ್ಲ. ಸಮಾವೇಶಕ್ಕೆ ಮಾತ್ರ ತರಾತುರಿಯಲ್ಲಿ ಸಿದ್ಧತೆ ಮಾಡಿಕೊಂಡರು. 14 ಸಾವಿರ ಗುಂಡಿ ಮುಚ್ಚಿದ್ದೇವೆ ಎಂದು ಕಾಂಗ್ರೆಸ್ ನಾಯಕರು ಹೇಳಿದ್ದಾರೆ. ಈಗ ಕಾಂಗ್ರೆಸ್ ಪಕ್ಷವನ್ನು ಮುಚ್ಚಿಹಾಕಲು ಜನರೇ ಗುಂಡಿ ತೆಗೆಯುತ್ತಿದ್ದಾರೆ ಎಂದರು. ಇದನ್ನೂ ಓದಿ: ಮುದ್ದಿನ ನಾಯಿಗೋಸ್ಕರ ಪವಿ ಪೂವಪ್ಪ ಲವ್ ಬ್ರೇಕಪ್ – ಕಣ್ಣೀರಿಟ್ಟ ‘ಬಿಗ್ ಬಾಸ್’ ಸ್ಪರ್ಧಿ

    ಯುದ್ಧಕ್ಕೆ ಸಾಕ್ಷಿ ಕೇಳುವ ಇವರು, ಜನರು ಸಾಯುತ್ತಿರುವುದನ್ನು ಬಂದು ನೋಡಲಿ. ಇದಕ್ಕೆ ಯಾವುದೇ ಸಾಕ್ಷಿ ಬೇಕಿಲ್ಲ. ಬಿಜೆಪಿ ಅವಧಿಯಲ್ಲಿ ಪ್ರತಿ ವರ್ಷ ಏಳೆಂಟು ಸಾವಿರ ಕೋಟಿ ರೂ. ನೀಡಲಾಗುತ್ತಿತ್ತು. ಕಾಂಗ್ರೆಸ್ ಸರ್ಕಾರ ಬೆಂಗಳೂರಿಗೆ ನೀಡಿರುವ ಹಣವೆಲ್ಲವನ್ನೂ ಸುರಂಗ ನಿರ್ಮಿಸಲು ಬಳಸಲಾಗುತ್ತಿದೆ. ಬೆಂಗಳೂರು ಮುಳುಗುತ್ತಿರುವ ಬಗ್ಗೆ ಸರ್ಕಾರಕ್ಕೆ ಯಾವುದೇ ಕಾಳಜಿ ಇಲ್ಲ. ಗ್ರೇಟರ್ ಬೆಂಗಳೂರು(Greater Bengaluru) ಹೋಗಿ ವಾಟರ್ ಬೆಂಗಳೂರು ಆಗಿದೆ. ಮನೆ ಬಾಗಿಲಿಗೆ ಅವಾಂತರ, ಸಾವುಗಳನ್ನು ಸರ್ಕಾರ ತರುತ್ತಿದೆ ಎಂದು ದೂರಿದರು.

  • ಕಾಂಗ್ರೆಸ್ ಬಿದ್ದು ಹೋಗುವ ನುಗ್ಗೆ ಮರ: ಆರ್.ಅಶೋಕ್ ಲೇವಡಿ

    ಕಾಂಗ್ರೆಸ್ ಬಿದ್ದು ಹೋಗುವ ನುಗ್ಗೆ ಮರ: ಆರ್.ಅಶೋಕ್ ಲೇವಡಿ

    – ರಾಜ್ಯದಲ್ಲಿ ಹುಟ್ಟಿದ್ರೂ, ಸತ್ರೂ ಟ್ಯಾಕ್ಸ್; ವಿಪಕ್ಷ ನಾಯಕ ಕಿಡಿ

    ಚಿಕ್ಕಮಗಳೂರು: ಕಾಂಗ್ರೆಸ್ ಕೋಮಾ ಸ್ಟೇಜಲ್ಲಿರೋ ಬೀಳೋ ನುಗ್ಗೆ ಮರ ಇದ್ದ ಹಾಗೆ. ಅವರಿಂದ ಪಾಠ ಕಲಿಯುವ ಅಗತ್ಯ ನನಗಿಲ್ಲ ಎಂದು ವಿಪಕ್ಷ ನಾಯಕ ಆರ್.ಅಶೋಕ್(R Ashok) ಲೇವಡಿ ಮಾಡಿದ್ದಾರೆ.

    ಚಿಕ್ಕಮಗಳೂರಿನಲ್ಲಿ(Chikkamagaluru) ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನನ್ನನ್ನ ಕಾಂಗ್ರೆಸ್‌ನವರು ನೇಮಿಸಿದ್ರೆ, ಅವರು ಹೇಳಿದ ಹಾಗೆ ರಾಜೀನಾಮೆ ಕೊಡಬಹುದಿತ್ತು. ನನ್ನನ್ನು ನೇಮಿಸಿರುವುದು ಬಿಜೆಪಿ(BJP), ಈ ದೇಶದಲ್ಲಿ ಎಲ್ಲಾ ರಾಜ್ಯದಲ್ಲಿರುವ ಪಾರ್ಟಿ ಬಿಜೆಪಿ. ಕಾಂಗ್ರೆಸ್‌ನವರು ಎಲ್ಲೋ ಎರಡು ಕಡೆ ಕ್ರಾಸ್ ಆಗಿ ಅಧಿಕಾರದಲ್ಲಿ ಇದ್ದಾರೆ. ಆ ಎರಡು ರಾಜ್ಯದಲ್ಲೂ ಯಾವಾಗ ಕಾಂಗ್ರೆಸ್ ಸರ್ಕಾರ ಬಿದ್ದೋಗುತ್ತೋ ಗೊತ್ತಿಲ್ಲ ಎಂದು ಲೇವಡಿ ಮಾಡಿದರು. ಇದನ್ನೂ ಓದಿ: 2006ರಲ್ಲಿ RSS ಕಚೇರಿ ಮೇಲಿನ ದಾಳಿಯ ಪ್ರಮುಖ ಸಂಚುಕೋರ, ಲಷ್ಕರ್ ಉಗ್ರ ಪಾಕ್‌ನಲ್ಲಿ ಹತ್ಯೆ

    ಕಾಂಗ್ರೆಸ್(Congress) ಸರ್ಕಾರ ಬೀಳೋ ಹಂತದಲ್ಲಿರುವ ನುಗ್ಗೆ ಮರ ಇದ್ದ ಹಾಗೆ. ಕಾಂಗ್ರೆಸ್‌ನವರಿಂದ ಪಾಠ ಕಲಿಯುವ ಅಗತ್ಯ ನನಗಿಲ್ಲ. ನಮ್ಮದು ಇಡೀ ಪ್ರಪಂಚದಲ್ಲಿರುವ ನಂಬರ್ ಒನ್ ಪಾರ್ಟಿ. ಕೋಮಾ ಸ್ಥಿತಿಯಲ್ಲಿರುವ ಕಾಂಗ್ರೆಸ್ ಪಾರ್ಟಿಯಿಂದ ಬುದ್ಧಿವಾದ ಕಲಿಯುವ ಅವಶ್ಯಕತೆ ಇಲ್ಲ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಆಪರೇಷನ್ ಸಿಂಧೂರ ಬಗ್ಗೆ ಸರಿಯಾದ ಮಾಹಿತಿ ಕೊಟ್ಟಿಲ್ಲ – ಸಂಸತ್ ಅಧಿವೇಶನ ಕರೆಯಲು ಪ್ರಿಯಾಂಕ್ ಖರ್ಗೆ ಒತ್ತಾಯ

    ಬೆಲೆ ಏರಿಕೆ ಅನ್ನೋದು ಕಾಂಗ್ರೆಸ್ಸಿನ ದಿನ ನಿತ್ಯದ ಕಸುಬಾಗಿದೆ. ಸರ್ಕಾರಿ ನೌಕರರಿಗೆ ಸರಿಯಾಗಿ ಸಂಬಳ ಆಗುತ್ತಿಲ್ಲ. ಮೋದಿ ಜನೌಷಧಿ ತಂದು ಬಡವರಿಗೆ ಸಹಾಯ ಮಾಡಿದ್ರು. ಆದರೆ, ಈಗ ಅದಕ್ಕೆ ಎಳ್ಳು ನೀರು ಬಿಟ್ರು. ಮೂರನೇ ಬಾರಿ ಬಿಯರ್ ದರ ಏರಿಸಿದ್ದಾರೆ. ಸಿದ್ದರಾಮಯ್ಯ ನೋಡಿದ್ರೆ ಗಾಂಧಿ ಶ್ಲೋಕ ಹೇಳ್ತಾರೆ ಎಂದರು. ಇದನ್ನೂ ಓದಿ: ಮುಜೀಬ್ ಬಯೋಪಿಕ್‌ನಲ್ಲಿ ಶೇಖ್ ಹಸೀನಾ ಪಾತ್ರದಲ್ಲಿ ನಟಿಸಿದ್ದ ಬಾಂಗ್ಲಾ ನಟಿ ಅರೆಸ್ಟ್

    ಕಡಿಮೆ ದರ ಅಂತ ಜನ ಬಿಯರ್ ಕುಡಿಯುತ್ತಿದ್ರು. ರಾಜ್ಯದಲ್ಲಿ ಎಣ್ಣೆ ರೇಟ್ ಜಾಸ್ತಿ ಆದ ಮೇಲೆ ಕಳ್ಳತನ ಜಾಸ್ತಿಯಾಗಿದೆ. ಕಬ್ಬಿಣದ ಗೇಟ್‌ಗಳನ್ನೇ ಎತ್ಕೊಂಡು ಹೋಗಿ ಮಾರಿ ಕುಡಿತ ಇದ್ದಾರೆ. ರಾಜ್ಯದಲ್ಲಿ ಹುಟ್ಟಿದ್ರು ತೆರಿಗೆ, ಸತ್ರು ತೆರಿಗೆ. ಯಾವ ಪುರುಷಾರ್ಥಕ್ಕೆ 2 ವರ್ಷದ ಸಾಧನೆ ಎಂದು ಟೀಕಿಸಿದರು.

    ಯಾರನ್ನೋ ನಿಲ್ಲಿಸಿ 2000 ರೂ. ಗ್ಯಾರಂಟಿ ಹಣ ಕೊಟ್ಟು, ಬೋರ್‌ವೆಲ್ ಕೊರೆಸಿದ್ವಿ ಅಂತಾ ಬುರುಡೆ ಬಿಡಿಸೋದು. ಈ ರೀತಿ ಅಪಪ್ರಚಾರ ಮಾಡುವ ಮೂಲಕ ಸರ್ಕಾರವನ್ನ ನಡೆಸ್ತಾ ಇದ್ದಾರೆ. ಈಗ ಸಂಭ್ರಮಾಚರಣೆ ಮಾಡ್ತಾ ಇರೋದು ಹಾಸ್ಯಾಸ್ಪದ ಎಂದು ಕಿಡಿಕಾರಿದರು.

  • ಅವೈಜ್ಞಾನಿಕ ನೀತಿಯಿಂದ ಅಬಕಾರಿ ಆದಾಯದ ಮೂಲಕ್ಕೆ ಸರ್ಕಾರ ಕೊಡಲಿ ಪೆಟ್ಟು ನೀಡಲು ಮುಂದಾಗಿದೆ – ಅಶೋಕ್

    ಅವೈಜ್ಞಾನಿಕ ನೀತಿಯಿಂದ ಅಬಕಾರಿ ಆದಾಯದ ಮೂಲಕ್ಕೆ ಸರ್ಕಾರ ಕೊಡಲಿ ಪೆಟ್ಟು ನೀಡಲು ಮುಂದಾಗಿದೆ – ಅಶೋಕ್

    ಬೆಂಗಳೂರು: ಅಪಾಯಕಾರಿ ನೀತಿಗಳ ಮೂಲಕ ಅಬಕಾರಿ ಆದಾಯದ ಮೂಲಕ್ಕೆ ಕೊಡಲಿ ಪೆಟ್ಟು ನೀಡಲು ರಾಜ್ಯ ಸರ್ಕಾರ (State Government) ಮುಂದಾಗಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ (R Ashok) ಆರೋಪಿಸಿದ್ದಾರೆ.

    ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಅವರು, ಅವೈಜ್ಞಾನಿಕ ಆರ್ಥಿಕ ನೀತಿಗಳಿಂದ ದಿವಾಳಿ ಸ್ಥಿತಿ ತಲುಪಿರುವ ರಾಜ್ಯ ಸರ್ಕಾರ ಸಂಪನ್ಮೂಲಗಳ ಸಂಗ್ರಹಕ್ಕೆ ಅನುಸರಿಸುತ್ತಿರುವ ಮಾರ್ಗ ಉದ್ಯಮಕ್ಕೆ ಮಾರಕವಾಗಿದೆ. ದರ ಮತ್ತು ಸನ್ನದು ಶುಲ್ಕಗಳ ಏರಿಕೆಗೂ ಒಂದು ಮಾನದಂಡ ಇರುತ್ತದೆ. ಆದರೆ ಒಂದೇ ವರ್ಷದಲ್ಲಿ ಮದ್ಯ ಮಾರಾಟ ಮತ್ತು ಸನ್ನದು ಶುಲ್ಕವನ್ನು ಅಡ್ಡಾದಿಡ್ಡಿ ಹೆಚ್ಚಿಸುತ್ತಿರುವುದು ಉದ್ಯಮದ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ ಎಂದು ಎಚ್ಚರಿಸಿದ್ದಾರೆ.ಇದನ್ನೂ ಓದಿ: ಮೇ 21 ರಂದು ವಿಧಾನಸೌಧದ ಮುಂದೆ ಆಂಧ್ರಕ್ಕೆ ಆನೆಗಳ ಹಸ್ತಾಂತರ

    ಎಷ್ಟು ಸಲ ಹೆಚ್ಚಳ?
    ಬಜೆಟ್‌ನಲ್ಲಿ ಯಾವುದೇ ತೆರಿಗೆ ಹಾಕಿಲ್ಲ ಎಂದು ಬೆನ್ನು ತಟ್ಟಿಕೊಂಡು ನಂತರದಲ್ಲಿ ಆಲ್ಕೋಹಾಲ್ ದರಗಳನ್ನು ಯದ್ವಾತದ್ವಾ ಹೆಚ್ಚಿಸಿದ್ದಾರೆ. ಅದರಲ್ಲೂ ಬಿಯರ್ ದರವನ್ನು ವರ್ಷದಲ್ಲಿ ಎರಡೂ ಮೂರು ಸಲ ಹೆಚ್ಚಿಸಲಾಗಿದೆ. ಗ್ರಾಹಕರಿಗೆ ದೊಡ್ಡ ಹೊರೆ ಹೊರಿಸಲಾಗಿದೆ. ಮದ್ಯಪ್ರಿಯರು ಪ್ರತಿಭಟಿಸುವುದಿಲ್ಲ ಎಂಬ ಕಾರಣಕ್ಕೆ ಇಂತಹ ಕ್ರಮ ಅನುಸರಿಸುವುದು ಒಳ್ಳೆಯದಲ್ಲ.

    ಸರಿಯಾದ ಆರ್ಥಿಕ ಶಿಸ್ತು ಮತ್ತು ಸಿದ್ಧತೆಗಳಿಲ್ಲದೆ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಲಾಯಿತು. ಇದರಿಂದ ಅಭಿವೃದ್ಧಿ ಕಾರ್ಯಕ್ರಮಗಳು ಸ್ಥಗಿತಗೊಂಡಿವೆ. ಬೊಕ್ಕಸ ಬರಿದಾಗಿ ಸರ್ಕಾರ ದಿವಾಳಿಯಾಗಿದೆ.

    ಇದನ್ನು ಹೇಗಾದರೂ ಸರಿಪಡಿಸಿಕೊಳ್ಳಲು ಹೆಣಗುತ್ತಿರುವ ಸರ್ಕಾರ, ಸಿಕ್ಕ ಸಿಕ್ಕ ಎಲ್ಲ ವಸ್ತುಗಳ ದರ ಹೆಚ್ಚಳ ಮಾಡಿದೆ. ಆದರೂ ಪರಿಸ್ಥಿತಿ ಸುಧಾರಿಸುತ್ತಿಲ್ಲ. ಹೀಗಾಗಿ ಇಂತಹ ದರ ಮತ್ತು ಶುಲ್ಕ ಹೆಚ್ಚಳದಂತಹ ವಾಮ ಮಾರ್ಗಗಳ ಮೂಲಕ ಸರ್ಕಾರ ಉದ್ಯಮವನ್ನು ಶೋಷಣೆ ನಡೆಸುತ್ತಿದೆ ಎಂದು ಆರೋಪಿಸಿದ್ದಾರೆ.

    ನೂರು ಪಟ್ಟು ಹೆಚ್ಚಳ:
    ಮದ್ಯ ಉತ್ಪಾದನೆ, ಬಾಟ್ಲಿಂಗ್, ಮಾರಾಟ ಮಳಿಗೆಗಳು ಸೇರಿ ಎಲ್ಲ ಸ್ವರೂಪದ ಶುಲ್ಕಗಳನ್ನು ಶೇಕಡಾ ನೂರರಷ್ಟು ಹೆಚ್ಚಳಕ್ಕೆ ಮುಂದಾಗಿದೆ. ಇದಕ್ಕಾಗಿ ಅಬಕಾರಿ ಕಾನೂನುಗಳಿಗೆ ತಿದ್ದುಪಡಿ ಮಾಡಿ ಕರಡು ನಿಯಮಗಳ ಅಧಿಸೂಚನೆಯನ್ನು ಪ್ರಕಟಿಸಿದೆ. ಜುಲೈ 1 ರಿಂದ ಪರಿಷ್ಕೃತ ದರಗಳು ಜಾರಿಗೊಳ್ಳಲಿವೆ. ಆ ಮೂಲಕ ಉದ್ಯಮದ ಅಂತ್ಯಕ್ಕೆ ಮೊಳೆ ಹೊಡೆದಂತಾಗಲಿದೆ ಎಂದಿದ್ದಾರೆ.

    ಇಲಾಖೆಗೆ 40 ಸಾವಿರ ಕೋಟಿ ರೂ.ಯ ಗುರಿ ನಿಗದಿ ಮಾಡಲಾಗಿದೆ. ಇದನ್ನು ತಲುಪಲು ಅಧಿಕಾರಿಗಳು ಇದ್ದಬದ್ದ ಎಲ್ಲಾ ಅವಕಾಶಗಳನ್ನು ಬಳಕೆ ಮಾಡುತ್ತಿದ್ದಾರೆ. ಆ ಮೂಲಕ ಉದ್ಯಮವನ್ನು ಸಂಕಷ್ಟಕ್ಕೆ ದೂಡಲಾಗುತ್ತಿದೆ ಎಂದು ಹೇಳಿದ್ದಾರೆ.

    ಈಗಲೂ ಕಾಲ ಮಿಂಚಿಲ್ಲ:
    ಉದ್ಯಮದ ಹಿತದೃಷ್ಟಿಯಿಂದ ಈಗಲೂ ಕಾಲ ಮಿಂಚಿಲ್ಲ. ಸರ್ಕಾರ ಅವೈಜ್ಞಾನಿಕ ಕ್ರಮಗಳನ್ನು ಬಿಟ್ಟು ಉದ್ಯಮ, ಮಾರಾಟಗಾರರು ಮತ್ತು ಗ್ರಾಹಕರ ಹಿತದೃಷ್ಟಿಯಿಂದ ನಿರ್ಧಾರ ಕೈಗೊಳ್ಳಬೇಕು. ಸನ್ನದು ಶುಲ್ಕ ಪರಿಷ್ಕರಣೆಯನ್ನು ಮರುಪರಿಶೀಲಿಸಬೇಕು ಎಂದು ಆಗ್ರಹಿಸಿದ್ದಾರೆ.ಇದನ್ನೂ ಓದಿ: ಸೈನಿಕರ ಸುರಕ್ಷೆಗೆ ಉಡುಪಿ ಪೇಜಾವರ ಶ್ರೀ ಮಾರ್ಗದರ್ಶನದಲ್ಲಿ ಸುದರ್ಶನ ಯಾಗ

  • ಯುದ್ಧ ಅಥವಾ ಶಾಂತಿ ಬಗ್ಗೆ ಕಾಂಗ್ರೆಸ್ ಸರಿಯಾದ ನಿಲುವು ಪ್ರಕಟಿಸಲಿ: ಆರ್.ಅಶೋಕ್

    ಯುದ್ಧ ಅಥವಾ ಶಾಂತಿ ಬಗ್ಗೆ ಕಾಂಗ್ರೆಸ್ ಸರಿಯಾದ ನಿಲುವು ಪ್ರಕಟಿಸಲಿ: ಆರ್.ಅಶೋಕ್

    – ಬೆಂಗಳೂರು ಒಡೆಯಲು ಕಾಂಗ್ರೆಸ್ ಮುಂದಾಗಿದೆ, ಇದರ ವಿರುದ್ಧ ಕಾನೂನು ಹೋರಾಟ ಮಾಡ್ತೇವೆ

    ಬೆಂಗಳೂರು: ಕಾಂಗ್ರೆಸ್‌ನಲ್ಲಿ (Congress) ಒಬ್ಬರು ಯುದ್ಧ ಬೇಕು ಎಂದರೆ ಮತ್ತೊಬ್ಬರು ಶಾಂತಿ ಬೇಕು ಎನ್ನುತ್ತಾರೆ. ಎಐಸಿಸಿಯಲ್ಲಿ (AICC) ಈ ಬಗ್ಗೆ ಸರಿಯಾದ ನಿಲುವು ಪ್ರಕಟಿಸಲಿ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ (R Ashok) ಹೇಳಿದರು.

    ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಆಡಳಿತದಲ್ಲಿದ್ದಾಗ ಅಮೆರಿಕದ ಬಳಿ ಹೋಗಿ ಭಿಕ್ಷೆ ಬೇಡಿದ್ದನ್ನು ನೋಡಿದ್ದೇವೆ. ಮುಂಬೈಯಲ್ಲಿನ ಉಗ್ರ ದಾಳಿಯಲ್ಲಿ 175 ಜನರು ಸತ್ತಿದ್ದರು. ಆಗ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರ ಪ್ರತಿಕ್ರಿಯೆ ನೀಡಲೇ ಇಲ್ಲ. ಆದರೆ ಈಗ ಪ್ರಧಾನಿ ಮೋದಿ ತಕ್ಕ ಪ್ರತ್ಯುತ್ತರ ನೀಡಿದ್ದಾರೆ. ಸಿಂಧೂ ನದಿ ಒಪ್ಪಂದಕ್ಕೆ ನಾವು ಸಹಿ ಹಾಕಿಲ್ಲ. ಅದನ್ನು ಪ್ರಧಾನಿ ಮೋದಿ ರದ್ದು ಮಾಡಿದ್ದಾರೆ. ಭಯೋತ್ಪಾದಕ ದಾಳಿಗಳಾದಾಗಲೇ ಕಾಂಗ್ರೆಸ್ ಅದನ್ನು ಮಾಡಬೇಕಿತ್ತು. ಇದನ್ನು ಸಚಿವ ಸಂತೋಷ್ ಲಾಡ್ ಅರಿಯಬೇಕು ಎಂದು ಹೇಳಿದರು. ಇದನ್ನೂ ಓದಿ: ಗ್ರೇಟರ್ ಅಲ್ಲ, ಕ್ವಾರ್ಟರ್ ಬೆಂಗಳೂರು – ಆರ್.ಅಶೋಕ್ ಲೇವಡಿ

    ಇಡೀ ಜಮ್ಮು ಕಾಶ್ಮೀರ ಪ್ರಧಾನಿ ಮೋದಿಯವರ ಪರವಾಗಿ ನಿಂತಿದೆ. ಅಲ್ಲಿನ ಮುಖ್ಯಮಂತ್ರಿ ಕೂಡ ಕೇಂದ್ರ ಸರ್ಕಾರಕ್ಕೆ ಬೆಂಬಲ ನೀಡಿದ್ದಾರೆ. ಅಲ್ಲಿನ ಅಭಿವೃದ್ಧಿಯನ್ನು ಜನರು ನೋಡಿದ್ದಾರೆ. ಪಾಕ್ ಆಕ್ರಮಿತ ಕಾಶ್ಮೀರ ನಮ್ಮದು. ಅದನ್ನು ಮರಳಿ ಪಡೆಯುತ್ತೇವೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಕಾಂಗ್ರೆಸ್‌ನ ಒಬ್ಬೇ ಒಬ್ಬ ನಾಯಕರು ಈ ಮಾತನ್ನು ಧೈರ್ಯವಾಗಿ ಹೇಳಿಲ್ಲ ಎಂದರು. ಇದನ್ನೂ ಓದಿ: ಈಗ U Turn – ಕದನ ವಿರಾಮ ಬಿಲ್ಡಪ್ ಕೊಟ್ಟು ಈಗ ತಣ್ಣಗಾದ ಟ್ರಂಪ್‌!

    ಯಾವುದೇ ಮಧ್ಯಸ್ಥಿಕೆಯನ್ನು ಒಪ್ಪಲ್ಲ ಎಂದು ವಿದೇಶಾಂಗ ಸಚಿವರು ಈಗಾಗಲೇ ಹೇಳಿದ್ದಾರೆ. ಆದರೂ ಕಾಂಗ್ರೆಸ್‌ನವರು ಮೊಸರಲ್ಲಿ ಕಲ್ಲು ಹುಡುಕುತ್ತಿದ್ದಾರೆ. ಮೊದಲು ಯುದ್ಧ ಬೇಡ, ಶಾಂತಿ ಬೇಕು ಎಂದವರು ನಂತರ ಯುದ್ಧ ಮಾಡಿ. ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ ಕದನ ವಿರಾಮವನ್ನು ಸ್ವಾಗತಿಸಿದ್ದಾರೆ. ಆದರೆ ಅದೇ ಕಾಂಗ್ರೆಸ್‌ನಲ್ಲಿ ಹಲವರು ಯುದ್ಧ ಮುಂದುವರಿಸಬೇಕಿತ್ತು ಎಂದಿದ್ದಾರೆ. ಕಾಂಗ್ರೆಸ್‌ನಲ್ಲೇ ಅನೇಕ ಗುಂಪುಗಳಿದ್ದು, ಒಬ್ಬೊಬ್ಬರು ಒಂದೊಂದು ಅಭಿಪ್ರಾಯ ಹೇಳುತ್ತಾರೆ. ಜೈರಾಮ್ ರಮೇಶ್ ಅವರು ಎಚ್ಚರಿಕೆ ನೀಡಿದ ನಂತರವೂ ಎಲ್ಲರೂ ವಿರುದ್ಧ ಹೇಳಿಕೆ ನೀಡುತ್ತಾರೆ ಎಂದು ದೂರಿದರು. ಇದನ್ನೂ ಓದಿ: ಕರ್ನಲ್ ಸೋಫಿಯಾ ಪತಿ ಮನೆ ಮೇಲೆ RSS ದಾಳಿ ವದಂತಿ – ಪೋಸ್ಟ್ ಮಾಡಿದ್ದವನ ವಿರುದ್ಧ FIR

    ಎಐಸಿಸಿಯಲ್ಲಿ ಯುದ್ಧದ ಕುರಿತು ಸರಿಯಾದ ನಿಲುವು ಪ್ರಕಟ ಮಾಡಲಿ. ಯುದ್ಧ ಬೇಕೆ, ಶಾಂತಿ ಬೇಕೆ, ಸಂಧಾನ ಬೇಕೆ ಎಂಬುದನ್ನು ಸರಿಯಾಗಿ ತಿಳಿಸಲಿ. ಆ ನಂತರ ಅಧಿವೇಶನದ ಬಗ್ಗೆ ಮಾತಾಡಲಿ. ಯೋಧರು ಈಗಲೂ ಭಯೋತ್ಪಾದಕರನ್ನು ಹುಡುಕಿ ಕೊಲ್ಲುತ್ತಿದ್ದಾರೆ. ಅಂತಹ ಯೋಧರ ಬಗ್ಗೆ ಎಲ್ಲರೂ ನಂಬಿಕೆ ಇರಿಸಬೇಕು. ಕಾಶ್ಮೀರದಲ್ಲಿ ಕಾಂಗ್ರೆಸ್ ಮಿತ್ರಪಕ್ಷಗಳ ಆಡಳಿತವಿದೆ. ಆ ಸರ್ಕಾರವನ್ನು ಇವರು ಎಂದಿಗೂ ಪ್ರಶ್ನಿಸುವುದಿಲ್ಲ. ಇಂತಹ ಸಮಯದಲ್ಲಿ ರಾಜಕೀಯ ಮಾಡಬಾರದು ಎಂದರು.  ಇದನ್ನೂ ಓದಿ: ಪ್ರಧಾನಿ ಮೋದಿ, ರಫೆಲ್ ಯುದ್ಧ ವಿಮಾನದ ಬಗ್ಗೆ ಅವಹೇಳನಕಾರಿ ಪೋಸ್ಟ್ – ಯುವಕ ಅರೆಸ್ಟ್

  • ಗ್ರೇಟರ್ ಅಲ್ಲ, ಕ್ವಾರ್ಟರ್ ಬೆಂಗಳೂರು – ಆರ್.ಅಶೋಕ್ ಲೇವಡಿ

    ಗ್ರೇಟರ್ ಅಲ್ಲ, ಕ್ವಾರ್ಟರ್ ಬೆಂಗಳೂರು – ಆರ್.ಅಶೋಕ್ ಲೇವಡಿ

    ಬೆಂಗಳೂರು: ಗ್ರೇಟರ್ ಅಲ್ಲ, ಕ್ವಾರ್ಟರ್ ಬೆಂಗಳೂರು ಮಾಡಿದ್ದಾರೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ (R Ashok) ಲೇವಡಿ ಮಾಡಿದರು.

    ಇಂದಿನಿಂದ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಅಸ್ತಿತ್ವಕ್ಕೆ ಬಂದ ಹಿನ್ನೆಲೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾಡಪ್ರಭು ಕೆಂಪೇಗೌಡರು ಒಂದು ಬೆಂಗಳೂರು ಕಟ್ಟಿದರೆ, ಕಾಂಗ್ರೆಸ್ ಸರ್ಕಾರ ಬೆಂಗಳೂರನ್ನು ಮೂರು ಭಾಗ ಮಾಡಿದೆ. ಇದರಿಂದಾಗಿ ಅಭಿವೃದ್ಧಿ ಸಾಧ್ಯವಾಗುವುದಿಲ್ಲ. 110 ಹಳ್ಳಿಗಳಲ್ಲಿ ಜನರಿಗೆ ಹೆಚ್ಚು ತೆರಿಗೆ ವಿಧಿಸಲಾಗಿದೆ. ಯಾರದ್ದೋ ಜಮೀನಿಗೆ ಬೆಲೆ ಹೆಚ್ಚಿಸುವಂತೆ ಮಾಡಲು ಇಂತಹ ಯೋಜನೆ ರೂಪಿಸಲಾಗಿದೆ. ಇದರಿಂದಾಗಿ ಕೆಂಪೇಗೌಡರ ಚಿಂತನೆಗೆ ದ್ರೋಹ ಬಗೆದಂತಾಗಿದೆ. ಬೆಂಗಳೂರು ಭಾಗವಾದರೆ ಆದಾಯ ಬರುವುದಿಲ್ಲ. ಐಟಿ-ಬಿಟಿ ಕೇಂದ್ರಗಳು ಒಂದು ಕಡೆ ಇರುವಾಗ, ಮತ್ತೊಂದು ಕಡೆಗೆ ಆದಾಯವೇ ಬರುವುದಿಲ್ಲ. ಮೂರು ಪಾಲಿಕೆಗಳು ನಿರ್ಮಾಣವಾದರೆ ಅಲ್ಲಿ ಕನ್ನಡಿಗರೇ ಮೇಯರ್ ಆಗುತ್ತಾರೆ ಎಂಬ ಖಚಿತತೆ ಇಲ್ಲ ಎಂದು ವಿರೋಧ ವ್ಯಕ್ತಪಡಿಸಿದರು.ಇದನ್ನೂ ಓದಿ: ಈಗ U Turn – ಕದನ ವಿರಾಮ ಬಿಲ್ಡಪ್ ಕೊಟ್ಟು ಈಗ ತಣ್ಣಗಾದ ಟ್ರಂಪ್‌!

    ಮುಖ್ಯಮಂತ್ರಿಗಳು ಪಾಲಿಕೆಯಿಂದ ಆಯ್ಕೆಯಾಗುವುದಿಲ್ಲ ಎಂದಾದ ಮೇಲೆ ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ಅವರನ್ನು ಹೇಗೆ ಅಧ್ಯಕ್ಷರನ್ನಾಗಿ ಮಾಡುತ್ತಾರೆ? ಮುಖ್ಯಮಂತ್ರಿ ಸಿದ್ದರಾಮಯ್ಯ ಪಾಲಿಕೆ ಸಭೆಯಲ್ಲಿ ಬಂದು ಕೂರಲು ಸಾಧ್ಯವಿಲ್ಲ. ಬೆಂಗಳೂರು ಭಾಗ ಆಗಬಾರದು ಎಂಬುದು ಬಿಜೆಪಿಯ ಅಭಿಪ್ರಾಯ. ಮುಂದೆ ನಮ್ಮ ಸರ್ಕಾರ ಬಂದರೆ ಬೆಂಗಳೂರನ್ನು ಒಂದು ಮಾಡುವ ಕೆಲಸ ಮಾಡುತ್ತೇವೆ. ಗ್ರೇಟರ್ ಬೆಂಗಳೂರಿಗೆ ವಿರುದ್ಧವಾಗಿ ಕಾನೂನು ಹೋರಾಟ ಮಾಡಲಿದ್ದೇವೆ ಎಂದು ಹೇಳಿದರು.

    ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತಮ್ಮ ಲಾಭಕ್ಕೆ ಎಲ್ಲವನ್ನೂ ಮಾಡುತ್ತಿದ್ದಾರೆ. ಬಿಡಿಎ ಲೇಔಟ್‌ಗಳು ಇನ್ನೂ ಖಾಲಿ ಇದ್ದು, ಅಲ್ಲಿಗೆ ನೀರು, ವಿದ್ಯುತ್ ಕೊಡಲು ಆಗುತ್ತಿಲ್ಲ. ಬಿಬಿಎಂಪಿ ಚುನಾವಣೆಯನ್ನು ಮುಂದೂಡಲು ಈ ಯೋಜನೆ ಮಾಡಿದ್ದಾರೆ. ನಗರದಲ್ಲಿ ಎಲ್ಲ ಕಡೆ ಕಸದ ರಾಶಿ ಇದೆ, ಮೇಕೆದಾಟು ಯೋಜನೆ ಜಾರಿ ಮಾಡಿಲ್ಲ, ನಗರದ ಆಡಳಿತ ನಡೆಸಲು ಆಗುತ್ತಿಲ್ಲ. ಇಂತಹ ವಿಫಲತೆಯನ್ನು ಒಪ್ಪಿಕೊಳ್ಳದೆ ಇಂತಹ ಯೋಜನೆ ತಂದಿದ್ದಾರೆ ಎಂದು ಟೀಕಿಸಿದರು.ಇದನ್ನೂ ಓದಿ: ಕರ್ನಲ್ ಸೋಫಿಯಾ ಪತಿ ಮನೆ ಮೇಲೆ RSS ದಾಳಿ ವದಂತಿ – ಪೋಸ್ಟ್ ಮಾಡಿದ್ದವನ ವಿರುದ್ಧ FIR