Tag: r ashok

  • ಕಡತಕ್ಕೆ ಸಹಿ ಹಾಕಲು 10 ವರ್ಷ ಕಾಯಬೇಕಿತ್ತೇ? – ಸಿಎಂಗೆ ಆರ್.ಅಶೋಕ್ ಪ್ರಶ್ನೆ

    ಕಡತಕ್ಕೆ ಸಹಿ ಹಾಕಲು 10 ವರ್ಷ ಕಾಯಬೇಕಿತ್ತೇ? – ಸಿಎಂಗೆ ಆರ್.ಅಶೋಕ್ ಪ್ರಶ್ನೆ

    – ವಿಪಕ್ಷವಾಗಲು ಕಾಂಗ್ರೆಸ್‌ನಿಂದ ತಯಾರಿ
    – ನಮ್ಮದು ಹೋರಾಟ, ಕಾಂಗ್ರೆಸ್‌ನದ್ದು ಹಾರಾಟ

    ಮಂಡ್ಯ: ಕಾಂಗ್ರೆಸ್ (Congress) ವಿಪಕ್ಷವಾಗಿ ಬೀದಿಗಿಳಿದು ‘ನಾನು ಕಳ್ಳ ಅಲ್ಲ, ನಾನು ಕಳ್ಳ ಅಲ್ಲ, ನನ್ನ ನಂಬಿ’ ಎಂದು ಹೇಳುವುದನ್ನು ಗಮನಿಸಿದರೆ, ಕಾಂಗ್ರೆಸ್ ಪಕ್ಷ ವಿಪಕ್ಷವಾಗಲು ತಯಾರಿ ಮಾಡುತ್ತಿರುವಂತೆ ಕಾಣುತ್ತಿದೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ (R.Ashok) ವ್ಯಂಗ್ಯವಾಡಿದ್ದಾರೆ.

    ಮಂಡ್ಯದ (Mandya) ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಕಾಂಗ್ರೆಸ್ ಸರ್ಕಾರದ ಹಗರಣಗಳ ಕುರಿತು ಪುಸ್ತಕ ಬಿಡುಗಡೆ ಮಾಡಿ, ಅವರು ಮಾತನಾಡಿದರು. ಈ ವೇಳೆ ಆಡಳಿತ ಪಕ್ಷವಾದ ಕಾಂಗ್ರೆಸ್ ಪಕ್ಷವು ದಾಖಲೆಗಳನ್ನು ಕೊಟ್ಟು ಸರ್ಕಾರ ಸ್ವಚ್ಛ, ಪಾರದರ್ಶಕ ಎಂದು ವಿಧಾನಸಭೆ ಒಳಗೆ ಹೇಳಬೇಕಿತ್ತು. ಆದರೆ ಕಾಂಗ್ರೆಸ್ ವಿಪಕ್ಷವಾಗಿ ಕೆಲಸ ಮಾಡಲು ಪೀಠಿಕೆ ಹಾಕಲು ಹೊರಡುತ್ತಿದೆ ಎಂದು ಕುಟುಕಿದ್ದಾರೆ.

    ವಿಪಕ್ಷವಾಗಿ ನಾವು ಹೋರಾಟ ಮಾಡುತ್ತಿದ್ದೇವೆ, ಕಾಂಗ್ರೆಸ್ ಪಕ್ಷ ಆಡಳಿತ ಪಕ್ಷವಾಗಿ ಹಾರಾಟ ಮಾಡುತ್ತಿದೆ. ಮಂತ್ರಿಗಳಿಗೆವಹಿಸಿದ ಸಭೆಗಳನ್ನು ಮಾಡಿ, ನಾವು ಬಿಜೆಪಿ ಭ್ರಷ್ಟಾಚಾರಗಳನ್ನು ಬಯಲಿಗೆ ತರುತ್ತೇವೆ. ಕೇಂದ್ರ ನೀಡುವ ಅನುದಾನದಲ್ಲಿ ತಾರತಮ್ಯವಾಗಿದೆ ಎಂದು, ಆ ಬಗ್ಗೆ ಸಮಾವೇಶ ಮಾಡುತ್ತಿದ್ದೇವೆ ಎಂದು ಕಾಂಗ್ರೆಸ್ಸಿನವರು ನಾಟಕ ಆಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

    ಕೇಂದ್ರದ ಅನುದಾನ ಬಾರದಿದ್ದರೆ ಪ್ರಜಾಪ್ರಭುತ್ವದ ರೀತಿಯಲ್ಲಿ ಮಾತನಾಡಬೇಕಿತ್ತು. ನಮ್ಮ ರಾಜ್ಯದ ಸಂಸದರಾದ ಮಲ್ಲಿಕಾರ್ಜುನ ಖರ್ಗೆ ಜೀಯವರು ವಿಪಕ್ಷ ನಾಯಕರು, ಅವರು ತಾರತಮ್ಯ ಆಗಿದೆ ಎಂದು ಸಂಸತ್ತಿನಲ್ಲಿ ಒಂದು ದಿನವೂ ಮಾತನಾಡಿಲ್ಲ. ಇಲ್ಲಿ ರಾಜಕೀಯದ ಬೇಳೆ ಬೇಯಿಸಲು ಕೇಂದ್ರದ ಮೇಲೆ ಗೂಬೆ ಕೂರಿಸುವ ಕೆಲಸ ನಡೆಸುತ್ತಿದ್ದಾರೆ. ಈ ಬಗ್ಗೆ ಸ್ವತಃ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬೆಂಗಳೂರಿಗೆ ಬಂದು ಕಾಂಗ್ರೆಸ್ಸಿನವರ ಮುಖಕ್ಕೆ ಮಂಗಳಾರತಿ ಎತ್ತಿ ಹೋಗಿದ್ದಾರೆ. ಡಾ. ಮನಮೋಹನ್ ಸಿಂಗ್ ಅವರ ಸರ್ಕಾರ 10 ವರ್ಷ ಇತ್ತು. ಅದೇ ರೀತಿ ನರೇಂದ್ರ ಮೋದಿಯವರ ಸರಕಾರ 10 ವರ್ಷ ಇತ್ತು. ಅಂಕಿ ಅಂಶಗಳೊಂದಿಗೆ ಹೋಲಿಸಿ ಅನುದಾನ, ಸಹಾಯದ ವಿವರ ನೀಡಿದ್ದಾರೆ. ಯಾವುದರಲ್ಲೂ ಕಡಿಮೆ ಮಾಡಿಲ್ಲ. ನಾನೇ ಹಿಂದೆ ಕಂದಾಯ ಸಚಿವನಾಗಿದ್ದೆ. ಡಾ.ಮನಮೋಹನ್ ಸಿಂಗ್ ಅವರ ಸರ್ಕಾರ ಕೊಟ್ಟ ಮೊತ್ತದಿಂದ 5 ಪಟ್ಟು ಜಾಸ್ತಿ ಮೋದಿಯವರ ಸರ್ಕಾರ ಕೊಟ್ಟಿದೆ ಎಂದು ಅವರು ಹೇಳಿದ್ದಾರೆ.

    ಪಾದಯಾತ್ರೆ ಅಂತಿಮ ಘಟ್ಟ
    ಪಾದಯಾತ್ರೆಯ ಅಂತಿಮ ಘಟ್ಟಕ್ಕೆ ತಲುಪಿದ್ದೇವೆ. ಇಂದು ಸಂಜೆ ಮೈಸೂರು ಗಡಿಭಾಗ ತಲುಪಿ ಶನಿವಾರ ಬೆಳಿಗ್ಗೆ ಆರೇಳು ಕಿಮೀ ಪಾದಯಾತ್ರೆಯ ಬಳಿಕ ಮೈಸೂರಲ್ಲಿ ಬೃಹತ್ ಸಮಾವೇಶ ನಡೆಯಲಿದೆ. ಜನರು ನಮ್ಮನ್ನು ವಿಪಕ್ಷವಾಗಿ ಆಯ್ಕೆ ಮಾಡಿದ್ದಾರೆ. ಸರ್ಕಾರ ಮಾಡುವ ತಪ್ಪುಗಳನ್ನು ಜನರ ಮುಂದಿಡುವುದು, ಜನರಿಗೆ ತಿಳಿಸುವುದು ನಮ್ಮ ಕರ್ತವ್ಯ. ಅವರ ಭ್ರಷ್ಟಾಚಾರ, ಅವ್ಯವಹಾರ, ಸ್ವಜನ ಪಕ್ಷಪಾತ- ಇವೆಲ್ಲವನ್ನೂ ತಿಳಿಸುವುದು, ಹೋರಾಟ ಮಾಡುವುದು ನಮ್ಮ ಹಕ್ಕು ಎಂದು ಅವರು ಪ್ರತಿಪಾದಿಸಿದರು.

    ಕಾನೂನು ಪ್ರಕಾರ, ನಿಯಮ ಪ್ರಕಾರ ಸಿದ್ದರಾಮಯ್ಯನವರು ನಿವೇಶನ ಪಡೆದಿದ್ದರೆ 2014ರಲ್ಲಿ ಕಡತ ಬಂದಾಗ ಯಾಕೆ ತಿರಸ್ಕರಿಸಿದ್ದರು? ಇದು ಬಿಜೆಪಿಯ ಪ್ರಶ್ನೆ. 10 ವರ್ಷ ಅದಕ್ಕಾಗಿ ಕಾಯಬೇಕಿತ್ತೇ? ಅನ್ಯಾಯ ಇದ್ದ ಕಾರಣ ನೀವು ಆಗ ಸಹಿ ಹಾಕಿಲ್ಲ ಅಲ್ಲವೇ? ಈ ಆಪಾದನೆಗೆ ಅವರಲ್ಲಿ ಉತ್ತರ ಇಲ್ಲ ಎಂದು ತೀವ್ರ ವಾಗ್ದಾಳಿ ನಡೆಸಿದ್ದಾರೆ.

    ಅಣ್ಣ ಡಿ.ಕೆ.ಶಿವಕುಮಾರಣ್ಣ, ಸಿದ್ರಾಮಣ್ಣ, ನೀವು ವಾಲ್ಮೀಕಿ ನಿಗಮದ ಹಗರಣ, ಮುಡಾ ಹಗರಣ ಮಾಡಿದ್ದೀರಿ. 25 ಸಾವಿರ ಕೋಟಿ ರೂ. ಟಿಎಸ್‌ಪಿ ದಲಿತರ ಉದ್ಧಾರಕ್ಕೆ ಸೇರಬೇಕಾದ ಹಣವನ್ನು ಗ್ಯಾರಂಟಿ ಕೊಡಲು ಬಳಸಿದ್ದೀರಿ. ಇದಕ್ಕೆ ದಲಿತರ ಹಣವೇ ಬೇಕಾಗಿತ್ತು. ಈ ಕುರಿತು ದಾಖಲೆ ಬಿಡುಗಡೆ ಮಾಡಿದ್ದೇವೆ ಎಂದು ಅವರು ಹೇಳಿದ್ದಾರೆ.

    ಯಾರು ನಿಮ್ಮ ಕೈ ಕಟ್ಟಿ ಹಾಕಿದ್ದರು?
    ಬೇರೆ ಜಾತಿಗಳವರ ಹಣವನ್ನು ಇವರು ಮುಟ್ಟಿಲ್ಲ. ಯಾರೂ ಕೇಳೋರಿಲ್ಲ; ಹೇಳೋರಿಲ್ಲವೆಂದು ದಲಿತರದೇ ಹಣ ವರ್ಗಾವಣೆ ಮಾಡಿದ್ದಾರೆ. ಇದೆಲ್ಲ ವಿವರವನ್ನೂ ನಾವು ಬಿಡುಗಡೆ ಮಾಡಿದ್ದೇವೆ. ಬೊಮ್ಮಾಯಿ, ನಮ್ಮ ಮೇಲೆ ಇದ್ದ ಆರೋಪಗಳ ದಾಖಲೆಗಳನ್ನು ಆಗ ಬಿಡುಗಡೆ ಮಾಡಬೇಕಿತ್ತು. ಯಾರು ನಿಮ್ಮ ಕೈ ಕಟ್ಟಿ ಹಾಕಿದ್ದರು ಎಂದು ಅವರು ಪ್ರಶ್ನಿಸಿದ್ದಾರೆ.

  • ಸಿದ್ದರಾಮಯ್ಯ ರಾಜೀನಾಮೆ ನೀಡಲು ಮುಹೂರ್ತ ಫಿಕ್ಸ್: ಸಿಎಂ ವಿರುದ್ಧ ಆರ್.ಅಶೋಕ್ ವಾಗ್ದಾಳಿ

    ಸಿದ್ದರಾಮಯ್ಯ ರಾಜೀನಾಮೆ ನೀಡಲು ಮುಹೂರ್ತ ಫಿಕ್ಸ್: ಸಿಎಂ ವಿರುದ್ಧ ಆರ್.ಅಶೋಕ್ ವಾಗ್ದಾಳಿ

    ಮಂಡ್ಯ: ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ (Cm Siddaramaiah) ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಬಹಿರಂಗ ಸಭೆಯಲ್ಲಿ ವಿಪಕ್ಷ ನಾಯಕ ಆರ್. ಅಶೋಕ್ (R. Ashok) ಮಾತನಾಡಿದ್ದಾರೆ. ಇದನ್ನೂ ಓದಿ:ಪದಕ ಗೆದ್ದು ತಾಯ್ನಾಡಿಗೆ ಮರಳಿದ ಮನು ಭಾಕರ್‌ಗೆ ಹೂಮಳೆಯ ಸ್ವಾಗತ

    ಇದು ಪಾದಯಾತ್ರೆ ಅಲ್ಲ, ಜನಯಾತ್ರೆ ಆಗಿದೆ. ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಲು ಮುಹೂರ್ತ ಫಿಕ್ಸ್ ಆಗಿದೆ. ಕುಂಕುಮಕ್ಕೆ 7, ಅರಿಶಿನಕ್ಕೆ 7 ಸೈಟ್ ಕೊಟ್ಟಿದ್ದಾರೆ. ನಿಮಗೆ ದಾರಿದ್ರ್ಯ ಬಂದಿತ್ತಾ. ನಿಮಗೆ ಜ್ಞಾನ ಬೇಡವೇ ಎಂದು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ಮುಖ್ಯಮಂತ್ರಿ ಆಗಿರುವ ನಿಮಗೆ ಜ್ಞಾನ ಬೇಕಲ್ಲ. ಗಬ್ಬು ಹಿಡಿದಿರುವ ಮುಡಾದಲ್ಲಿ ಯಾಕೆ ಸೈಟ್ ಬರಿಸಿಕೊಂಡಿರಿ ಎಂದಿದ್ದಾರೆ. ದಲಿತ ಕುಟುಂಬದಿಂದ ಹೇಗೆ ಸೈಟ್ ಬರಿಸಿಕೊಂಡಿದ್ದೀರಿ. ಸಿಎಂ ಆಗಿ ಅವರ ಆಸ್ತಿಯನ್ನು ನೀವು ಕಬಳಿಸಿದ್ದೀರಾ. ಇದು ನ್ಯಾಯನಾ ಎಂದು ಪ್ರಶ್ನೆ ಮಾಡಿದ್ದಾರೆ.

    ಸತ್ತಿರುವವನ ಹೆಸರಿಗೆ ಡಿ ನೋಟಿಫಿಕೇಷನ್ ಮಾಡಿಸಿದ್ದಾರೆ. ಇದರ ಪ್ರತಿ ಹಂತದಲ್ಲೂ ಸಿದ್ದರಾಮಯ್ಯ ಅವರ ಪಾತ್ರ ಇದೆ. ಜಮೀನು ಐದು ಲಕ್ಷಕ್ಕೆ ಪಡೆದು ಇದೀಗ 62 ಕೋಟಿ ಕೇಳುತ್ತಿದ್ದಾರೆ. ಸಿದ್ದರಾಮಯ್ಯಗೆ ಬೆನ್ನಿಗೆ ಚೂರಿ ಹಾಕುವವರು ಪಕ್ಕದಲ್ಲೇ ಕುಳಿತಿದ್ದಾರೆ. ಕಾಂಗ್ರೆಸ್‌ನಲ್ಲೇ ಬೆನ್ನಿಗೆ ಚೂರಿ ಹಾಕುವವರು ಇದ್ದಾರೆ. ಈ ಹೋರಾಟ ಸಿದ್ದರಾಮಯ್ಯ ಲೂಟಿ ಮಾಡಿರುವ ಬಗ್ಗೆಯಾಗಿದೆ. ಅಕ್ರಮವಾಗಿ ಪಡೆದುಕೊಂಡಿರುವ ಸೈಟ್‌ಗಳು ವಾಪಾಸ್ ಬರಬೇಕು. ಈ ಪಾದಯಾತ್ರೆಯನ್ನ ದಾರಿ ತಪ್ಪಿಸಬೇಡಿ ಎಂದು ಡಿ.ಕೆ ಶಿವಕುಮಾರ್‌ಗೆ ಎಚ್ಚರಿಕೆ ನೀಡಿದ್ದಾರೆ.

  • 27 ಹಕ್ಕುದಾರರಿರುವ ಪಿತ್ರಾರ್ಜಿತ ಆಸ್ತಿಯನ್ನು ಒಬ್ಬನ ಸಹಿಯಿಂದ ಪಡೆದ ಸಿಎಂ, ಅಕ್ರಮವಾಗಿ ಜಮೀನು ಖರೀದಿ: ಆರ್‌.ಅಶೋಕ್

    27 ಹಕ್ಕುದಾರರಿರುವ ಪಿತ್ರಾರ್ಜಿತ ಆಸ್ತಿಯನ್ನು ಒಬ್ಬನ ಸಹಿಯಿಂದ ಪಡೆದ ಸಿಎಂ, ಅಕ್ರಮವಾಗಿ ಜಮೀನು ಖರೀದಿ: ಆರ್‌.ಅಶೋಕ್

    ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಖರೀದಿಸಿದ ಜಮೀನು ಪಿತ್ರಾರ್ಜಿತ ಆಸ್ತಿಯಾಗಿದ್ದು, ಅದಕ್ಕೆ 27 ಹಕ್ಕುದಾರರಿದ್ದರೂ ಕೇವಲ ಒಬ್ಬರ ಬಳಿ ಸಹಿ ಹಾಕಿಸಿಕೊಳ್ಳಲಾಗಿದೆ. ಇದು ಸಂಪೂರ್ಣ ಅಕ್ರಮ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ್ (R.Ashok) ಹೇಳಿದರು.

    ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಅವರ ಜಮೀನಿಗೆ ಸಂಬಂಧಿಸಿದ ದಾಖಲೆಗಳನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದರು. ಜಮೀನಿನ ಮೂಲ ಹಕ್ಕುದಾರರು, ಇತಿಹಾಸದ ಕುರಿತು ವಿವರಿಸಿದರು. ಇದನ್ನೂ ಓದಿ: MUDA Scam | ಆರೋಪ ನಿರಾಧಾರ, ನೋಟಿಸ್‌ ನೀಡಿರುವುದು ಕ್ರಮಬದ್ದವಲ್ಲ: ರಾಜ್ಯಪಾಲರಿಗೆ ಸಿಎಂ ಉತ್ತರ

    ಸಿಎಂ ಸಿದ್ದರಾಮಯ್ಯ ಖರೀದಿಸಿದ ಜಾಗ ನಿಂಗ ಎಂಬುವರಿಗೆ ಸೇರಿದ ಜಮೀನಾಗಿದ್ದು, 1936 ರಲ್ಲಿ ನಿಂಗ ಜಮೀನು ಖರೀದಿಸಿದ್ದರು. ಅವರು 28 ವರ್ಷಗಳ ಹಿಂದೆ ನಿಧನರಾಗಿದ್ದು, ಅವರ ಪತ್ನಿ ನಿಂಗಮ್ಮ 1990 ರಲ್ಲಿ ಮೃತರಾಗಿದ್ದರು. ಇದು ನಿಂಗ ಮತ್ತು ನಿಂಗಮ್ಮ ಅವರ ಸ್ವಯಾರ್ಜಿತ ಆಸ್ತಿಯಾಗಿದ್ದು, ಅವರ ಮಕ್ಕಳಿಗೆ ಪಿತ್ರಾರ್ಜಿತ ಆಸ್ತಿಯಾಗಿದೆ. ನಿಂಗ ಅವರಿಗೆ ಮೂರು ಮಕ್ಕಳಿದ್ದು, ಅವರ ಕುಟುಂಬದವರು 27 ಜನರಿದ್ದಾರೆ. ಆದರೆ ಸಿಎಂ ಸಿದ್ದರಾಮಯ್ಯ ದೇವರಾಜು ಎಂಬ ಒಬ್ಬ ವ್ಯಕ್ತಿಯಿಂದ ಮಾತ್ರ ಸಹಿ ಹಾಕಿಸಿಕೊಂಡಿದ್ದಾರೆ ಎಂದು ತಿಳಿಸಿದರು.

    1968 ರಲ್ಲಿ ಸರ್ವೆ ಸಂಖ್ಯೆ 464 ರಲ್ಲಿ ನಿಂಗ ಅವರ ಪುತ್ರ ಮಲ್ಲಯ್ಯ ಅವರ ಹೆಸರಿಗೆ ಈ ಜಮೀನು ನೋಂದಣಿಯಾಗಿತ್ತು. 1990 ರಲ್ಲಿ ಒಟ್ಟು 462 ಎಕರೆ ಜಮೀನಿನಲ್ಲಿ ದೇವನೂರು ಬಡಾವಣೆ ಮುಡಾ ಪ್ರಾಥಮಿಕ ಅಧಿಸೂಚನೆ ಹೊರಡಿಸಿತ್ತು. ಬಳಿಕ ಜಮೀನು ಸಂಬಂಧ ದೇವರಾಜು ಅವರಿಗೆ ಮುಡಾದಿಂದ 3 ಲಕ್ಷ ರೂ. ಅವಾರ್ಡ್ ನೀಡಲಾಗಿತ್ತು. ಈ ಅವಾರ್ಡ್ ನೋಟಿಸ್‌ಗೆ ಮಲ್ಲಯ್ಯ ಸಹಿ ಹಾಕಿದ್ದರು. ನಂತರ 1998 ರಲ್ಲಿ ಮುಡಾ ಸರ್ವೆ ಸಂಖ್ಯೆ 464 ನ್ನು ಭೂ ಸ್ವಾಧೀನದಿಂದ ಕೈ ಬಿಟ್ಟಿತ್ತು ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ರಾಜ್ಯಾದ್ಯಂತ ಮುಂದಿನ 5 ದಿನ ಮಳೆಯ ಮುನ್ಸೂಚನೆ

    ಈ ಜಮೀನು 1998 ರಲ್ಲಿ ಮುಡಾದಿಂದ ಡಿ ನೋಟಿಫಿಕೇಶನ್‌ ಆಗಿತ್ತು. ಆಗ ಸಿದ್ದರಾಮಯ್ಯನವರೇ ಉಪಮುಖ್ಯಮಂತ್ರಿಯಾಗಿದ್ದರು. ತಂದೆ-ತಾಯಿ ಸತ್ತ ನಂತರ ಕುಟುಂಬದ ಎಲ್ಲರ ಸಹಿ ಪಡೆಯಬೇಕಾಗುತ್ತದೆ. 2004 ರಲ್ಲಿ ದೇವರಾಜು ಅವರಿಂದ ಸಿದ್ದರಾಮಯ್ಯ ಅವರ ಭಾಮೈದುನ ಮಲ್ಲಿಕಾರ್ಜುನ ಸ್ವಾಮಿ 3 ಎಕರೆ 16 ಗುಂಟೆ ಜಮೀನನ್ನು ಕ್ರಯಕ್ಕೆ ಪಡೆದು ಕಾನೂನು ಬಾಹಿರವಾಗಿ ನೋಂದಣಿ ಮಾಡಿಸಿಕೊಂಡಿದ್ದರು. 2005 ರಲ್ಲಿ ಇದು ಭೂ ಪರಿವರ್ತನೆಯಾಯಿತು. 2001 ರಲ್ಲೇ ಬಡಾವಣೆ ಮಾಡಲು ಇದನ್ನು ಎಲ್‌ & ಟಿಗೆ ನೀಡಲಾಗಿತ್ತು. ಅದಾದ ನಂತರ ಈ ಜಮೀನು ಪರಿವರ್ತನೆಯಾಗಿದೆ ಎಂದು ಹೇಳಿದರು.

    ಈ ಜಮೀನು ಮೂಲೆಯಲ್ಲಿದ್ದುದರಿಂದ ಇದು ಬೇಕಿಲ್ಲ ಎಂದು ಕೈ ಬಿಡಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ. ಆದರೆ ಇದು ಮಧ್ಯಭಾಗದಲ್ಲಿ ಬರುತ್ತದೆ. ದಲಿತ ವ್ಯಕ್ತಿ ನಿಂಗನಿಗೆ ಸೇರಿದ ಜಮೀನಿನ ದಾಖಲೆಗಳ ವಿವರ ದೊಡ್ಡ ದೊಡ್ಡ ಹುದ್ದೆಗಳಲ್ಲಿದ್ದ ಸಿದ್ದರಾಮಯ್ಯನವರಿಗೆ ತಿಳಿಯಲೇ ಇಲ್ಲ. ಈ ಜಮೀನನ್ನು ಸಿದ್ದರಾಮಯ್ಯ ಪತ್ನಿಗೆ ಭಾವ ಅರಿಶಿನ ಕುಂಕುಮಕ್ಕೆ ನೀಡಿದ್ದಾರೆ. ಇದು ಪೂರ್ವ ಯೋಜಿತ ಅಕ್ರಮವಾಗಿದೆ ಎಂದರು.

    ಸಿಎಂ ಸಿದ್ದರಾಮಯ್ಯ ಪತ್ನಿ 2014 ರಲ್ಲಿ ಮುಡಾಗೆ ಪತ್ರ ಬರೆದು ಬದಲಿ ಪರಿಹಾರ ಜಮೀನು ನೀಡುವಂತೆ ಕೋರಿದ್ದರು. ಇದಕ್ಕೆ ಉತ್ತರ ಬರೆದ ಮುಡಾ ಆಯುಕ್ತರು, ಬದಲಿ ಜಮೀನು ಇಲ್ಲವೆಂದು, ಅದಕ್ಕೆ ತತ್ಸಮಾನ ಜಮೀನು ನೀಡಲಾಗುವುದು ಎಂದು ತಿಳಿಸುತ್ತಾರೆ. ನಂತರ 2014 ರಲ್ಲಿ 50:50 ವಿಧಾನದಲ್ಲಿ ಪರಿಹಾರ ನೀಡಲಾಯಿತು. 2023 ರಲ್ಲಿ ನಗರಾಭಿವೃದ್ಧಿ ಇಲಾಖೆ ಇವೆಲ್ಲವೂ ನಿಯಮಬಾಹಿರ ಎಂದು ಆದೇಶ ಮಾಡಿತ್ತು ಎಂದು ತಿಳಿಸಿದರು. ಇದನ್ನೂ ಓದಿ: ಕಾಳಿ ನದಿಗೆ ಅಡ್ಡಲಾಗಿ ಕಟ್ಟಿದ್ದ ಸೇತುವೆ ಕುಸಿತ – ನೀರಿಗೆ ಬಿದ್ದ ಲಾರಿ, ಚಾಲಕನ ರಕ್ಷಣೆ

    ಈ ಜಮೀನಿನ ಮಾಲೀಕತ್ವದ ವಿಷಯದಲ್ಲೇ ಇನ್ನೂ ತೀರ್ಮಾನ ಆಗಿಲ್ಲ. ಆದರೂ ಸಿಎಂ ಸಿದ್ದರಾಮಯ್ಯ ಹಾಗೂ ಅವರ ಕುಟುಂಬದವರು ಅದನ್ನು ಪರಿಶೀಲಿಸಿಲ್ಲ. ಈ ಜಮೀನನ್ನು ಮೃತರಾದ ನಿಂಗ ಅವರ ಹೆಸರಿನಲ್ಲಿ ಡಿ ನೋಟಿಫೈ ಮಾಡಿದ್ದಾರೆ. ಬದಲಿ ಜಮೀನು ಪರಿಹಾರ ನೀಡುವುದಾದರೆ ಅದೇ ಜಾಗದಲ್ಲಿ ನಿವೇಶನ ನೀಡಬೇಕು. ಆದರೆ ಬೆಲೆಬಾಳುವ ಸೈಟುಗಳನ್ನು ನೀಡಿದ್ದಾರೆ. ಇದಕ್ಕೆ ಅಧಿಕಾರಿಗಳ ಮೇಲೆ ಯಾರು ಒತ್ತಡ ಹೇರಿದ್ದಾರೆ ಎಂದು ಪ್ರಶ್ನೆ ಮಾಡಿದರು.

    ಮುಖ್ಯಮಂತ್ರಿ ಸಿದ್ದರಾಮಯ್ಯ 40 ವರ್ಷಗಳ ರಾಜಕೀಯದಲ್ಲಿ ಕ್ಲೀನ್‌ ಎಂದು ಹೇಳಿ, ಕ್ಲೀನ್‌ ಆಗಿ 14 ಸೈಟುಗಳನ್ನು ನುಂಗಿದ್ದಾರೆ. ಈ ಹಿಂದೆ ರೀಡು ಪ್ರಕರಣದಲ್ಲಿ ಕೆಂಪಣ್ಣ ಆಯೋಗ ನೇಮಿಸಿ ಆರು ವರ್ಷ ಕಳೆದರೂ ವರದಿ ಬರಲಿಲ್ಲ. ಅದೇ ತಂತ್ರವನ್ನು ಪ್ರಯೋಗಿಸಿ ದೇಸಾಯಿ ಆಯೋಗ ರಚಿಸಿದ್ದು, ಇದಕ್ಕೆ 60 ವರ್ಷ ಅವಧಿ ನೀಡುತ್ತಾರಾ ಎಂದು ಸ್ಪಷ್ಟಪಡಿಸಬೇಕು ಎಂದರು.

    ಕ್ಲೀನ್‌ ಎಂಬ ಪಟ್ಟವನ್ನು ರಾಜ್ಯದ ಜನರು ನೀಡಬೇಕಿದ್ದರೂ, ಮುಖ್ಯಮಂತ್ರಿಯವರು ತಮ್ಮನ್ನು ತಾವೇ ಕ್ಲೀನ್‌ ಎಂದು ಹೇಳಿಕೊಳ್ಳುತ್ತಿದ್ದಾರೆ. ಸದನದಲ್ಲಿ ಮಾತನಾಡಿದ್ದನ್ನು ಮರುದಿನ ಪತ್ರಿಕೆಗಳಲ್ಲಿ ಜಾಹೀರಾತು ನೀಡುತ್ತಾರೆ. ಹಣದ ಬಲ ಇದ್ದವರಿಗೆ ಮಾತ್ರ ಸದನದಲ್ಲಿ ಸ್ಥಾನ ಎಂದು ಅವರೇ ತೋರಿಸಿದಂತಾಗಿದೆ. ಈಗ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಲಿ ಎಂದು ಆಗ್ರಹಿಸಿದರು.

  • ಸಿದ್ದರಾಮಯ್ಯಗೆ ಮುಖ್ಯಮಂತ್ರಿ ಸ್ಥಾನದಲ್ಲಿ ಉಳಿಯುವ ನೈತಿಕತೆ ಇಲ್ಲ, ಕೂಡಲೇ ರಾಜೀನಾಮೆ ನೀಡಲಿ: ಆರ್‌.ಅಶೋಕ್

    ಸಿದ್ದರಾಮಯ್ಯಗೆ ಮುಖ್ಯಮಂತ್ರಿ ಸ್ಥಾನದಲ್ಲಿ ಉಳಿಯುವ ನೈತಿಕತೆ ಇಲ್ಲ, ಕೂಡಲೇ ರಾಜೀನಾಮೆ ನೀಡಲಿ: ಆರ್‌.ಅಶೋಕ್

    ಬೆಂಗಳೂರು: ಕಾಂಗ್ರೆಸ್‌ನ ಭ್ರಷ್ಟಾಚಾರದಿಂದಾಗಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈಗ ಪಿಎಸ್‌ಐ ಮೃತಪಟ್ಟಿದ್ದಾರೆ. ಸಿದ್ದರಾಮಯ್ಯ (Siddaramaiah) ಅವರಿಗೆ ಇನ್ನು ಸಿಎಂ ಸ್ಥಾನದಲ್ಲಿ ಉಳಿಯಲು ಯಾವುದೇ ನೈತಿಕತೆ ಇಲ್ಲ. ಅವರು ಕೂಡಲೇ ರಾಜೀನಾಮೆ ನೀಡಿ ಮನೆಗೆ ಹೋಗಬೇಕು ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ್ (R.Ashok) ಆಗ್ರಹಿಸಿದರು.

    ಕಾಂಗ್ರೆಸ್‌ ಸರ್ಕಾರದ ಭ್ರಷ್ಟಾಚಾರವನ್ನು ವಿರೋಧಿಸಿ ಕೆಂಗೇರಿಯಿಂದ ಆರಂಭವಾದ ಬಿಜೆಪಿ-ಜೆಡಿಎಸ್‌ ‌’ಮೈಸೂರು ಚಲೋ’ ಪಾದಯಾತ್ರೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಇದನ್ನೂ ಓದಿ: ಮೈಸೂರು ಚಲೋಗೆ ಭರ್ಜರಿ ಆರಂಭ; ಸಿದ್ದರಾಮಯ್ಯ ವಿರುದ್ಧ ಗುಡುಗಿದ ದೋಸ್ತಿ ನಾಯಕರು

    ಬಿಜೆಪಿಯನ್ನು ಜನರು ವಿಧಾನಸಭೆಗೆ ಕಳುಹಿಸಿರುವುದೇ ಭ್ರಷ್ಟಾಚಾರವನ್ನು ಮಟ್ಟ ಹಾಕಲು. ಸಿಎಂ ಸಿದ್ದರಾಮಯ್ಯ ಮುಡಾದಲ್ಲಿ 14 ಸೈಟು ಕೊಳ್ಳೆ ಹೊಡೆದ ನಂತರ ಅವರ ಬೆಂಬಲಿಗರು 300 ಸೈಟು ದೋಚಿದ್ದಾರೆ. ಅವರ ಪಕ್ಷದವರೇ 3-4 ಸಾವಿರ ಕೋಟಿ ರೂ. ಲೂಟಿಯಾಗಿದೆ ಎಂದು ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ. ದಲಿತರ ಜಮೀನಿನ ನಿವೇಶನಗಳನ್ನು ಸಿಎಂ ಸಿದ್ದರಾಮಯ್ಯ ಪಡೆದಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.

    ರಾಜ್ಯಪಾಲರಿಗೆ ನೋಟಿಸ್‌ ಕೊಡಲು ಅಧಿಕಾರವಿದೆಯಾ ಎಂದು ಇವರು ಪ್ರಶ್ನೆ ಮಾಡುತ್ತಾರೆ. ಬಿ.ಎಸ್‌.ಯಡಿಯೂರಪ್ಪ ಸಿಎಂ ಆಗಿದ್ದಾಗ ಖಾಸಗಿ ದೂರು ಆಧರಿಸಿ ಯಡಿಯೂರಪ್ಪ ವಿರುದ್ಧ ಕ್ರಮ ವಹಿಸಿದ್ದರು. ಕಾಂಗ್ರೆಸ್‌ ನಾಯಕರು ಕೇವಲ ನೋಟಿಸ್‌ಗೆ ಗಢಗಢ ಎನ್ನುತ್ತಿದ್ದಾರೆ. ಕಾಂಗ್ರೆಸ್‌ ಈಗ ಒಡೆದ ಮನೆಯಾಗಿದೆ. ಇಂತಹ ಕಾಂಗ್ರೆಸ್‌ನ ಭ್ರಷ್ಟಾಚಾರದ ವಿರುದ್ಧ ನಾವೆಲ್ಲರೂ ಹೋರಾಟ ಮಾಡುತ್ತಿದ್ದೇವೆ. ಕೆಂಗೇರಿಯಲ್ಲಿ ಭೂ ಸ್ವಾಧೀನ ಮಾಡಿ ಪರಿಹಾರವಾಗಿ ಎಂ.ಜಿ.ರಸ್ತೆಯಲ್ಲಿ ನಿವೇಶನ ನೀಡಿದರೆ ಅದು ನ್ಯಾಯವೇ? ನೂರಾರು ಕಾನೂನು ಪ್ರಶ್ನೆಗಳು ನಮ್ಮ ಮುಂದಿದೆ ಎಂದರು. ಇದನ್ನೂ ಓದಿ: ಈ ಸರ್ಕಾರ 10 ತಿಂಗಳು ಮುಂದುವರೆಯಲಿ ನೋಡೋಣ: ಎಚ್‌ಡಿಕೆ ಸವಾಲು

    ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದ ವಿರುದ್ಧ ಸದನದಲ್ಲಿ ಮಾತನಾಡಿದ್ದೇವೆ. ಆದರೆ ಮುಡಾ ಹಗರಣದ ಬಗ್ಗೆ ಮಾತನಾಡಲು ಅವಕಾಶ ನೀಡಿಲ್ಲ. ಅದಕ್ಕಾಗಿ ಬೀದಿಗಿಳಿದು ಹೋರಾಡುತ್ತಿದ್ದೇವೆ. ಕಾಂಗ್ರೆಸ್‌ ವಿರೋಧ ಪಕ್ಷವಾಗಿಯೇ ಪ್ರಶ್ನೆ ಕೇಳಬೇಕಿತ್ತು. ಈಗ ನಾವು ಹೋರಾಟ ಆರಂಭಿಸಿದ ಬಳಿಕ, ರೈಲು ಹೋದ ಬಳಿಕ ಟಿಕೆಟ್‌ ಪಡೆದಂತೆ ಹಿಂದಿನ ಸರ್ಕಾರದ ಬಗ್ಗೆ ಪ್ರಶ್ನೆ ಕೇಳುತ್ತಿದ್ದಾರೆ. ಇದಕ್ಕೆ ಜನರು ಬೆಲೆ ಕೊಡುವುದಿಲ್ಲ. ಇವರ ಮೇಲೆ ಆರೋಪ ಬಂದಿದ್ದಕ್ಕೆ ಈಗ ಬಿಜೆಪಿ ಮೇಲೆ ಆರೋಪ ಮಾಡುತ್ತಿದ್ದಾರೆ ಅಷ್ಟೆ ಎಂದರು. ಎರಡು ಹಗರಣಗಳ ಬಗ್ಗೆ ಮೊದಲು ಕಾಂಗ್ರೆಸ್‌ ಸರ್ಕಾರ ಜನರಿಗೆ ಉತ್ತರ ನೀಡಲಿ. ನಂತರ ನಮ್ಮ ಹಿಂದಿನ ಸರ್ಕಾರದ ವಿರುದ್ಧ ತನಿಖೆ ಮಾಡಿಕೊಳ್ಳಲಿ ಎಂದರು.

    ಯಾದಗಿರಿಯ ಪಿಎಸ್‌ಐ ಪರಶುರಾಮ್‌ ವರ್ಗಾವಣೆಗಾಗಿ ಲಂಚ ಕೊಡಲಾಗದೆ ಹೃದಯಾಘಾತವಾಗಿ ಮೃತಪಟ್ಟಿದ್ದಾರೆ. ಬ್ರಹ್ಮಾಂಡ ಭ್ರಷ್ಟಾಚಾರ ಮಾಡಿ ಜನರನ್ನು ಲೂಟಿ ಮಾಡುತ್ತಿರುವ ಕಾಂಗ್ರೆಸ್‌ ಪಕ್ಷಕ್ಕೆ ಹೃದಯಾಘಾತವಾಗುವಂತೆ ಬಿಜೆಪಿ-ಜೆಡಿಎಸ್‌ ಪಾದಯಾತ್ರೆ ಮಾಡಲಿದೆ ಎಂದರು.

    187 ಕೋಟಿ ರೂ. ಹಣ ಉಳಿಸಲು ಹೋಗಿ ಪ್ರಾಮಾಣಿಕ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡರು. ಈಗ ಪಿಎಸ್‌ಐ ಸತ್ತಿದ್ದಾರೆ. ಈ ಸರ್ಕಾರ ಯಾವುದೇ ಅಧಿಕಾರಿಗಳನ್ನು ಬಿಡುವುದಿಲ್ಲ. ಸಿದ್ದರಾಮಯ್ಯ ಅವರಿಗೆ ಇನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಉಳಿಯಲು ನೈತಿಕತೆ ಇಲ್ಲ. ಅವರು ಕೂಡಲೇ ರಾಜೀನಾಮೆ ನೀಡಿ ಮನೆಗೆ ಹೋಗುವುದು ಸೂಕ್ತ. ಕಾಂಗ್ರೆಸ್‌ನ ಲಂಚಾವತಾರದ ವಿರುದ್ಧ ನಿಲ್ಲುವವರಿಗೆ ಬಿಜೆಪಿ ಸದಾ ಬೆಂಬಲ ನೀಡಲಿದೆ. ಅಂತಹವರ ಪರವಾಗಿ ನಾನು ಧ್ವನಿಯಾಗಿ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.

  • ಸಿದ್ದರಾಮಯ್ಯ ರಕ್ಷಣೆ ಮಾಡಲು ರಾಜ್ಯಪಾಲರ ವಿರುದ್ದ ಕ್ಯಾಬಿನೆಟ್ ನಿರ್ಣಯ : ಅಶೋಕ್‌ ಕಿಡಿ

    ಸಿದ್ದರಾಮಯ್ಯ ರಕ್ಷಣೆ ಮಾಡಲು ರಾಜ್ಯಪಾಲರ ವಿರುದ್ದ ಕ್ಯಾಬಿನೆಟ್ ನಿರ್ಣಯ : ಅಶೋಕ್‌ ಕಿಡಿ

    ಬೆಂಗಳೂರು: ಸಿಎಂ ಸಿದ್ದರಾಮಯ್ಯರನ್ನು (CM Siddaramaiah) ರಕ್ಷಣೆ ಮಾಡಲು ಇಂದಿನ ಕ್ಯಾಬಿನೆಟ್‌ನಲ್ಲಿ (Cabinet) ರಾಜ್ಯಪಾಲರ ವಿರುದ್ದ ನಿರ್ಣಯ ಅಂಗೀಕಾರ ಮಾಡಿದ್ದಾರೆ ಎಂದು ವಿಪಕ್ಷ ನಾಯಕ ಅಶೋಕ್ (R Ashok) ಕಿಡಿಕಾರಿದ್ದಾರೆ.

    ಬೆಂಗಳೂರಿನಲ್ಲಿ ಮಾತನಾಡಿದ ಅವರು,ಕ್ಯಾಬಿನೆಟ್ ಮಂತ್ರಿಗಳು ಸಿದ್ದರಾಮಯ್ಯ ರಕ್ಷಣೆ ನಿಂತಿದ್ದಾರೆ‌. ದೂರು ಕೊಟ್ಟಾಗ ಅದಕ್ಕೆ ವಿವರಣೆ ಕೇಳುವುದು ರಾಜ್ಯಪಾಲರ ಕರ್ತವ್ಯ. ರಾಜ್ಯಪಾಲರು ಹೀಗೆ ಕೇಳಬೇಕು ಅಂದರೆ ಆಗುತ್ತಾ? ರಾಜ್ಯಪಾಲರು ನೋಟಿಸ್‌ ಕೊಡುವಾಗ ಕಾನೂನು ನೋಡಿ ಕೊಟ್ಟಿರುತ್ತಾರೆ. ಅದನ್ನ ‌ಪ್ರಶ್ನೆ ಮಾಡಿದ್ರೆ ಕಾನೂನುಗಿಂತ ನೀವು ದೊಡ್ಡವರಾ? ಕ್ಯಾಬಿನೆಟ್ ಕರೆದು ರಾಜ್ಯಪಾಲರ ಮೇಲೆ ಒತ್ತಡ ಹಾಕುವುದು ಸರಿಯಲ್ಲ ಅಂತ ಕಿಡಿಕಾರಿದರು.  ಇದನ್ನೂ ಓದಿ: ಮುಡಾ ಹಗರಣ; ಸಿಎಂ ಪರವಾಗಿ ಸಂಪುಟ ನಿರ್ಣಯ

     

    ಸಂವಿಧಾನದ ಪ್ರಕಾರ ರಾಜ್ಯಕ್ಕೆ ಸುಪ್ರೀಂ ರಾಜ್ಯಪಾಲರು. ಅವರಿಗೆ ಕಾನೂನು ಹೇಳಿಕೊಡಲು ಹೋಗ್ತೀರಾ? ಇದರಿಂದ ನೀವು ತಪ್ಪು ಮಾಡಿದ್ದೀರಾ ಅಂತ ಅಗುತ್ತದೆ. ಏನು ತಪ್ಪು ಮಾಡಿಲ್ಲ ಅಂದರೆ ಯಾಕೆ ಅಧಿವೇಶನದಲ್ಲಿ ಚರ್ಚೆ ಮಾಡಲಿಲ್ಲ. ಸಿಎಂ ಅವರು ದಾಖಲೆ ಸಮೇತ ಅಲ್ಲೇ ಎಲ್ಲವನ್ನು ಹೇಳಬಹುದಿತ್ತು. ಆದರೆ ಸಿದ್ದರಾಮಯ್ಯ ಅಂದು ಹೇಡಿ ತರಹ ಓಡಿ ಹೋಗಿದ್ದಾರೆ. ಇವರು ತಪ್ಪು ಮಾಡಿಲ್ಲ ಅಂದರೆ ಸರ್ಕಾರ ಅಸ್ಥಿರ ಆಗುತ್ತೆ ಅಂತ ಯಾಕೆ ಭಯ ಬೀಳ್ತಾರೆ ಅಂತ ವಾಗ್ದಾಳಿ ನಡೆಸಿದರು.

     

    ಯಡಿಯೂರಪ್ಪ, ಜನಾರ್ದನ ರೆಡ್ಡಿ ಅವರ ಮೇಲು ದೂರು ದಾಖಲಾಗಿತ್ತು. ಅಂದು ಅವರು ಹೋರಾಟ ಮಾಡಿದ್ದರು. ಯಡಿಯೂರಪ್ಪ ವಿರುದ್ದ ಅಂದು ಅನುಮತಿ ಕೊಟ್ಟಿದ್ದು ಯಾರು? ಅವತ್ತು ಕೇಂದ್ರದಲ್ಲಿ ಯಾವ ಸರ್ಕಾರ ಇತ್ತು. ಅವತ್ತು ರಾಜ್ಯಪಾಲರು ಯಾರು? ನಾವು ಅವತ್ತು ಕ್ಯಾಬಿನೆಟ್‌ನಲ್ಲಿ ಹೀಗೆ ಏನಾದ್ರು ನಿರ್ಣಯ ಮಾಡಿದ್ದೀವಾ? ಇಷ್ಟೆಲ್ಲ ಇವರು ಮಾಡುತ್ತಿರುವುದು ನೋಡಿದರೆ ಇವರು ತಪ್ಪು ಮಾಡಿರುವುದು ನಿಜ ಅಂತ ಅನ್ನಿಸುತ್ತಿದೆ ಎಂದು ಆರೋಪಿಸಿದರು. ಯಡಿಯೂರಪ್ಪ ಮೇಲೂ ಅಂದು ಯಾರೋ ಒಬ್ಬರು ಖಾಸಗಿ ದೂರು ನೀಡಿದ್ದರು. ಯಡಿಯೂರಪ್ಪ ಅಂದು ಕಾನೂನು ಹೋರಾಟ ಮಾಡಿದ್ದರು. ಈಗ ನೀವು ತಪ್ಪಿಲ್ಲ ಅಂದರೆ ಕಾನೂನು ಹೋರಾಟ ಮಾಡಿ ಅಂತ ಸಿಎಂ ಸಿದ್ದರಾಮಯ್ಯಗೆ ಸವಾಲ್ ಹಾಕಿದರು.

  • ಅಶೋಕ್ ವಿರುದ್ಧ ಪ್ರದೀಪ್ ಈಶ್ವರ್ ಹಕ್ಕುಚ್ಯುತಿ ಮಂಡನೆ ಪ್ರಸ್ತಾಪ: ರೂಲಿಂಗ್ ಕಾಯ್ದಿರಿಸಿದ ಸ್ಪೀಕರ್

    ಅಶೋಕ್ ವಿರುದ್ಧ ಪ್ರದೀಪ್ ಈಶ್ವರ್ ಹಕ್ಕುಚ್ಯುತಿ ಮಂಡನೆ ಪ್ರಸ್ತಾಪ: ರೂಲಿಂಗ್ ಕಾಯ್ದಿರಿಸಿದ ಸ್ಪೀಕರ್

    ಬೆಂಗಳೂರು: ವಿಧಾನಸಭೆಯಲ್ಲಿ (Assembly Session) ಪ್ರತಿಪಕ್ಷ ನಾಯಕ ಆರ್.ಅಶೋಕ್ (R.Ashok) ವಿರುದ್ಧ ಹಕ್ಕುಚ್ಯುತಿ ಮಂಡನೆ ಪ್ರಸ್ತಾಪ ಮಾಡಲಾಗಿದೆ. ಆರ್.ಅಶೋಕ್ ನಿಂದನೆ ಮಾಡಿದ್ದಾರೆ ಎಂದು ಶಾಸಕ ಪ್ರದೀಪ್ ಈಶ್ವರ್ (Pradeep Eshwar) ಹಕ್ಕುಚ್ಯುತಿ ಪ್ರಸ್ತಾಪಿಸಿದರು.

    ಬಡತನ, ಕಣ್ಣೀರು ಸುರಿಸಿ ನಾನು ವಿಧಾನಸಭೆಗೆ ಬಂದಿದ್ದೇನೆ. ನಾನು ಶ್ರೀಮಂತ ಕುಟುಂಬದಿಂದ ಬಂದವನಲ್ಲ. ನಾನು ಗೆದ್ದ ಕೂಡಲೇ ಹತ್ತು ಆಂಬ್ಯುಲೆನ್ಸ್‌ಗಳನ್ನು ಬಡವರಿಗಾಗಿ ಕೊಟ್ಟಿದ್ದೇನೆ. ನನ್ನ ಸ್ವಂತ ದುಡ್ಡಲ್ಲಿ ಜನರನ್ನು ಕಾಪಾಡುತ್ತಿದ್ದೇನೆ. ವಿರೋಧ ಪಕ್ಷದ ನಾಯಕರ ಮೇಲೆ ಗೌರವ ಇದೆ. ಅವರು ಶಾಸಕರ ಮೇಲೆ ಕೆಟ್ಟದಾಗಿ ಪದ ಬಳಕೆ ಮಾಡಿದ್ದಾರೆ. ಇದು ಸರೀನಾ ಎಂದು ಎಂದು ಪ್ರಶ್ನಿಸಿದ ಅವರು ಹಕ್ಕುಚ್ಯುತಿ ಮಂಡಿಸಿದರು. ಇದನ್ನೂ ಓದಿ: ಡಿಸಿಎಂ ಡಿಕೆ ಶಿವಕುಮಾರ್ ನಮ್ಮ ಸೈನಿಕರಿಗೆ ಅಪಮಾನ ಮಾಡಿದ್ದಾರೆ: ಹೆಚ್‌ಡಿಕೆ

    ಹಕ್ಕುಚ್ಯುತಿ ಮಂಡನೆ ವಿಚಾರವಾಗಿ ಆರ್.ಅಶೋಕ್ ಮಾತನಾಡಿ, ಗೌರವಾನ್ವಿತ ಪ್ರದೀಪ್ ಈಶ್ವರ್ ಅವರು ನಾನು ಅವಾಚ್ಯ ಶಬ್ಧ ಬಳಸಿದೆ ಎಂದು ಹೇಳುತ್ತಿದ್ದಾರೆ. ನಾನು ದಾಖಲೆಗಳನ್ನು ಕೇಳಿದೆ ಆ ರೀತಿ ಯಾವುದು ಇಲ್ಲ. ಪ್ರದೀಪ್ ಈಶ್ವರ್ ಬಹಳ ದೊಡ್ಡ ದೊಡ್ಡ ಮಾತಾಡಿದ್ದಾರೆ. ನಾನು ಆ ರೀತಿ ಬಳಸಿದ್ದರೆ ದಾಖಲೆಗಳನ್ನು ಕೊಡಲಿ. ಹಾಗೆ ಬಳಸಿದ್ದರೆ ತಪ್ಪು ತಪ್ಪೇ ಎಂದರು. ಇನ್ನೂ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಪೋಸ್ಟ್ ಹಾಕಿಕೊಂಡಿದ್ದಾರೆ, ಅದರ ಬಗ್ಗೆ ಮಾತಾಡಲಿ ಎಂದು ಬಿಜೆಪಿ ಶಾಸಕರು ಇದೇ ವೇಳೆ ಟಾಂಗ್ ಕೊಟ್ಟರು.

    ಬಳಿಕ ಸ್ಪೀಕರ್ ಖಾದರ್ ಮಧ್ಯ ಪ್ರವೇಶಿಸಿ ಹಕ್ಕುಚ್ಯುತಿ ಸ್ವೀಕಾರ ಮಾಡಬೇಕಾ? ಅಥವಾ ಮಾಡಬಾರದಾ? ಎಂಬ ಬಗ್ಗೆ ರೂಲಿಂಗ್ ಕಾಯ್ದಿರಿಸಿದರು. ನಾವು ಸದನದಲ್ಲಿ ನಮ್ಮ ಸ್ಟೇಟಸ್‍ನ್ನು ತೋರಿಸೋದು ಬೇಡ. ಅದನ್ನು ಹೊರಗೆ ಎಲ್ಲಿ ಮಾಡಬೇಕೋ ಅಲ್ಲಿ ಮಾಡೋಣ. ನಾನು ದಾಖಲೆಗಳನ್ನು ತರಿಸಿಕೊಂಡು ಪರಿಶೀಲನೆ ಮಾಡುತ್ತೇನೆ ಎಂದು ಸದನಕ್ಕೆ ತಿಳಿಸಿದರು. ಇದನ್ನೂ ಓದಿ: ಮಾಜಿ ಸಚಿವ ನಾಗೇಂದ್ರ ಇಡಿ ಕಸ್ಟಡಿ ಇಂದಿಗೆ ಅಂತ್ಯ

  • ಒಕ್ಕಲಿಗರು, ಬ್ರಾಹ್ಮಣರು, ಲಿಂಗಾಯತರ ನಿಗಮ ಹಣವನ್ನೂ ಬಳಸಿಕೊಳ್ಳಿ ಅಂತಾ ಸರ್ಕಾರಕ್ಕೆ ಹೇಳಿದ್ದೇನೆ: ಆರ್.ಅಶೋಕ್ ಕಿಡಿ

    ಒಕ್ಕಲಿಗರು, ಬ್ರಾಹ್ಮಣರು, ಲಿಂಗಾಯತರ ನಿಗಮ ಹಣವನ್ನೂ ಬಳಸಿಕೊಳ್ಳಿ ಅಂತಾ ಸರ್ಕಾರಕ್ಕೆ ಹೇಳಿದ್ದೇನೆ: ಆರ್.ಅಶೋಕ್ ಕಿಡಿ

    ಹಾಸನ: ನಾನೇ ಸರ್ಕಾರಕ್ಕೆ ಹೇಳಿದ್ದೇನೆ. ಒಕ್ಕಲಿಗರ ನಿಗಮ, ಬ್ರಾಹ್ಮಣರು, ಲಿಂಗಾಯಿತರು ನಿಗಮದ ಹಣ ಇದೆ ಎಲ್ಲವನ್ನೂ ಬಳಸಿಕೊಳ್ಳಿ ಎಂದಿದ್ದೇನೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ (R.Ashok) ವಾಗ್ದಾಳಿ ನಡೆಸಿದ್ದಾರೆ.

    ಹಾಸನ (Hassan) ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಳೆಯಿಂದ ಅಪಾರ ಪ್ರಮಾಣದಲ್ಲಿ ಹಾನಿಯಾಗಿರುವ ಪ್ರದೇಶಕ್ಕೆ ಭೇಟಿ ಪರಿಶೀಲನೆ ನಡೆಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಸ್ಕ್ಯಾಂಡಲ್‌ಗಳಲ್ಲಿ ಸಿಲುಕಿಕೊಂಡಿದೆ. ಅದರಿಂದ ಹೊರಬರಲು ಅವರಿಗೆ ಆಗ್ತಿಲ್ಲ, ಅದಕ್ಕೆ ಅದರಲ್ಲಿ ಬ್ಯುಸಿ ಇದ್ದಾರೆ. ನಾನು ಕಂದಾಯ ಸಚಿವನಾಗಿ ಮಳೆಹಾನಿಗೆ ತುರ್ತು ಪರಿಹಾರ ನೀಡಿದ್ದೆ. ಇಲ್ಲಿ ಪರಿಹಾರ ಕೊಡಲು ಇನ್ನೂ ಶುರು ಮಾಡಿಲ್ಲ. ಕೇಂದ್ರ ಸರ್ಕಾರ ಕೊಟ್ಟಿರುವ ಹಣವನ್ನು ಇವರು ಕೊಡುತ್ತಿದ್ದಾರೆ. ಕೇಂದ್ರ ಸರ್ಕಾರ ಕೊಟ್ಟಿರುವುದನ್ನು ನೀಡಿ ಕೈಚೆಲ್ಲಿ ಕೂರಬಾರದು. ರಾಜ್ಯ ಸರ್ಕಾರ ಅದಕ್ಕೆ ಹೆಚ್ಚಿನ ಹಣ ಹಾಕಿ ಪರಿಹಾರ ನೀಡಬೇಕು. ಸರ್ಕಾರಕ್ಕೆ ಆರ್ಥಿಕ ಸಂಕಷ್ಟ ಎದುರಾಗಿದೆ. ಸರ್ಕಾರದ ಖಜಾನೆಯಲ್ಲಿ ಹಣ ಇಲ್ಲ. ಸರ್ಕಾರ ಪಾಪರ್ ಆಗಿದೆ, ಕಳೆದ ಆರೇಳು ತಿಂಗಳಿನಿಂದ ಅದೇ ಸ್ಥಿತಿಯಲ್ಲಿದೆ. ಈಗ ಗ್ಯಾರೆಂಟಿಗಾಗಿ ಟ್ಯಾಕ್ಸ್ ಹಾಕುತ್ತಿದ್ದಾರೆ. ದಲಿತರ ಹಣ ಉಪಯೋಗಿಸಿಕೊಂಡಿದ್ದಾರೆ. ಸರ್ಕಾರದ ಬಳಿ ಹಣ ಇಲ್ಲ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ: ರೊಟ್ಟಿ ಮೇಲೆ ಉಗುಳಿದ ಅನ್ಯಕೋಮಿನ ವ್ಯಾಪಾರಿ; ರಾಮ-ಶಬರಿಗೆ ಹೋಲಿಸಿದ ಸೋನು ಸೂದ್‌ ವಿರುದ್ಧ ಆಕ್ರೋಶ

    ಈ ಸರ್ಕಾರ ಪಾಪರ್ ಆಗಿದೆ, ಅವರ ಬಳಿ ದುಡ್ಡಿಲ್ಲ. ಎಸ್ಟಿಮೇಟ್ ಮಾಡದೇ ಗ್ಯಾರೆಂಟಿ ತಂದಿದ್ದಾರೆ. ಅದಕ್ಕೆ ಇವಾಗ ದಲಿತರ ಹಣ ಹುಡುಕುತ್ತಿದ್ದಾರೆ. ನಾನೇ ಸರ್ಕಾರಕ್ಕೆ ಹೇಳಿದ್ದೇನೆ. ಒಕ್ಕಲಿಗರ ನಿಗಮ, ಬ್ರಾಹ್ಮಣರು, ಲಿಂಗಾಯಿತರು ನಿಗಮದ ಹಣ ಇದೆ ಎಲ್ಲವನ್ನೂ ಬಳಸಿಕೊಳ್ಳಿ. ಇಲ್ಲಾ ಅಂದರೆ ನಿಮ್ಮ ಬಾಳು ಬೀದಿಗೆ ಬರುತ್ತದೆ. ಈ ಸರ್ಕಾರ ಒಂದು ರೀತಿ ಕೋಮಾ ಸ್ಟೇಜ್‌ನಲ್ಲಿದೆ. ನಾನು ಒಂದು ಒಳ್ಳೆಯ ಸಲಹೆ ಕೊಡ್ತೇನೆ. ನಿಮಗೆ ಯಾವ್ಯಾವ ಜಾತಿ ಬೇಕು, ಸಂವಿಧಾನ ಬದಲಾವಣೆ ಮಾಡಿ ಬಿಡೋಣ. ಇಂತಹ ಜಾತಿಯವರು ಲೂಟಿ ಹೊಡೆದರೆ, ಅಕ್ರಮ ಮಾಡಿದರೆ, ಕಳ್ಳತನ ಮಾಡಿದ್ರೆ ಏನು ಕ್ರಮ ತೆಗೆದುಕೊಳ್ಳುವ ಆಗಿಲ್ಲ ಎಂದು ಕಾನೂನು ಮಾಡಿಬಿಡಿ. ಈ ಜಾತಿಯವನಾದರೆ ಕಳ್ಳತನ ಮಾಡಬಹುದು, ಈ ಜಾತಿಯವನಾದರೆ ಕಳ್ಳತನ ಮಾಡಬಾರದು ಎಂದು ಸಂವಿಧಾನದಲ್ಲಿ ಇದೆಯಾ? ಈ ಸರ್ಕಾರ ಹಗರಣಗಳಲ್ಲಿ ಸಿಲುಕಿಕೊಂಡಿದೆ. ಹೊರಗಡೆ ಬರಲು ಆಗುತ್ತಿಲ್ಲ, ದಾರಿ ಕಾಣದಾಗಿದೆ. ಎಲ್ಲಾ ದಲಿತರ ಹಣ ಉಪಯೋಗಿಸಿಕೊಳ್ಳುತ್ತಿದ್ದಾರೆ. ವಾಲ್ಮೀಕಿ, ಮುಡಾದಲ್ಲೂ ದಲಿತರ ಹಣವೇ. ದಲಿತರ ತಲೆ ಮೇಲೆ ಚಪ್ಪಡಿ ಎಳೆಯುವ ಕೆಲಸವನ್ನು ಈ ಸರ್ಕಾರ ಮಾಡಿದೆ. ರಾಜ್ಯ ಸರ್ಕಾರಕ್ಕೆ ಮರ್ಯಾದೆ ಇಲ್ಲ, ತಪ್ಪಿಸಿಕೊಳ್ಳುವ ದಾರಿ ಇಲ್ಲ ಎಂದು ಚಾಟಿ ಬೀಸಿದ್ದಾರೆ.

    ಹಿಂದುಳಿದ ನಾಯಕನಾಗಿದ್ದ ಸಿದ್ದರಾಮಯ್ಯಗೆ ಮಾತನಾಡಲು ಬಿಡುತ್ತಿಲ್ಲ ಎಂಬ ರಾಜಣ್ಣ ಹೇಳಿಕೆಗೆ ಪ್ರತಿಕ್ರಿಯಿಸಿ, ಸಿದ್ದರಾಮಯ್ಯ ಮಾತನಾಡಬೇಕಾದರೆ ಡೆತ್‌ನೋಟ್‌ನ್ನು ಓದಿದ್ರು. ಅದರಲ್ಲಿ ಸಚಿವರು, ಎಂಎಲ್‌ಎ, ವಾಲ್ಮೀಕಿ ನಿಗಮದ ಅಧ್ಯಕ್ಷರ ಹೆಸರನ್ನು ಬಿಟ್ಟು ಓದುತ್ತಾರೆ. ಜನರಿಗೆ ತಪ್ಪು ಮಾಹಿತಿ ಹೋಗಬಾರದು, ಅದನ್ನು ಓದಿ. ಯಾರೂ ಭಾಗಿಯಾಗಿಲ್ಲ. ಅಧಿಕಾರಿಗಳೇ ಎಲ್ಲಾ ತಿಂದು ಹಾಕಿದ್ದಾರೆ ಅಂತ ಹೇಳಿದ್ದಾರೆ. 187 ಕೋಟಿ ಅಧಿಕಾರಿಗಳೇ ತಿನ್ನಲು ಆಗುತ್ತಾ? ಅದರಿಂದ ದೊಡ್ಡ ತಿಮಿಂಗಿಲಗಳೇ ಇರುವುದರಿಂದ ತಿಂದಿದ್ದಾರೆ. ಅಧಿಕಾರಿಗಳು ಅಲ್ಲಿ ಇಲ್ಲಿ ಬಿದ್ದಿದ್ದನ್ನು ತಿಂದಿದ್ದಾರೆ ಅಷ್ಟೇ ಎಂದು ಹೇಳಿದ್ದಾರೆ. ಇದನ್ನೂ ಓದಿ: ಶಾರ್ಟ್ ಸರ್ಕ್ಯೂಟ್‌ನಿಂದ ಕುವೈತ್‌ನ ಫ್ಲ್ಯಾಟ್‌ನಲ್ಲಿ ಬೆಂಕಿ – ಕೇರಳ ಮೂಲದ ದಂಪತಿ, ಇಬ್ಬರು ಮಕ್ಕಳು ದುರ್ಮರಣ

    ಹೆಚ್‌ಡಿಕೆ ಮಳೆ ಹಾನಿ ಪ್ರದೇಶಕ್ಕೆ ಭೇಟಿ ನೀಡಿದರೆ ಏನೂ ಪ್ರಯೋಜನವಿಲ್ಲ ಎಂಬ ಡಿಕೆಶಿ ಹೇಳಿಕೆಗೆ ಪ್ರತಿಕ್ರಿಯಿಸಿ, ಡಿ.ಕೆ.ಶಿವಕುಮಾರ್ ಬಂದರೆ ಪ್ರಯೋಜನ ಆಗುತ್ತೆ ಅಂದರೆ ಅವರು ಮನೆ ಬಿಟ್ಟು ಬರಬೇಕು. ಅವರು ಬರಲ್ಲ, ಕೇಂದ್ರ ಸಚಿವರು ಬಂದರೆ ಪರಿಹಾರ ಸಿಗಲ್ಲ ಅಂತೀರಾ, ನೀವಾದರೂ ಬನ್ನಿ. ನಿಮಗೆ ಬರುವ ಯೋಗ್ಯತೆ ಇಲ್ಲವಾ? ನೀವು ಬಂದು ಬೇರೆಯವರಿಗೆ ಬುದ್ದಿವಾದ ಹೇಳಿ. ನೀವು ಕೊಡುತ್ತಿರುವುದು ಎನ್‌ಡಿಆರ್‌ಎಫ್ ಹಣ, ನೀವು ನಯಾಪೈಸೆ ಕೊಟ್ಟಿಲ್ಲ. ಕುಮಾರಸ್ವಾಮಿ ಬರಲು ರೈಟ್ಸ್ ಇದೆ, ಕೇಳಲು ರೈಟ್ಸ್ ಇದೆ. ಕುಮಾರಸ್ವಾಮಿ ಕೇಂದ್ರ ಮಂತ್ರಿ ಇದ್ದಾರೆ. ರಾಷ್ಟ್ರೀಯ ಹೆದ್ದಾರಿ ಕೇಂದ್ರಕ್ಕೆ ಸೇರುತ್ತೆ. ಎಲ್ಲರೂ ಒಕ್ಕೂಟದ ವ್ಯವಸ್ಥೆಯಲ್ಲಿದ್ದೀರಿ. ಕುಮಾರಸ್ವಾಮಿ ಅವರಿಗೆ ಕೈಯಲ್ಲಿ ಆಗಲ್ಲ ಅಂದರೆ ನೀವು ಬಂದು ಕೆಲಸ ಮಾಡಿ. ಕುಮಾರಸ್ವಾಮಿ ದೇಶ ಎಲ್ಲಾ ಸುತ್ತಬೇಕು, ಅದರ ನಡುವೆ ಕರ್ನಾಟಕಕ್ಕೆ ಆದ್ಯತೆ ಕೊಟ್ಟು ಬರುತ್ತಿದ್ದಾರೆ. ನಿಮಗೆ ಏಕೆ ಬರಲು ಆಗುತ್ತಿಲ್ಲ. ಸರ್ಕಾರ ಸತ್ತು ಹೋಗಿದೆ, ಸರ್ಕಾರ ಬದುಕಿದ್ದರೆ ತಾನೇ ಏನಾದರೂ ಕೇಳೋದು. ಸರ್ಕಾರ ಸ್ಕ್ಯಾಂಡಲ್‌ಗಳಿಗೆ ಮುಳುಗಿ ಉತ್ತರ ಕೊಡಲು ಆಗುತ್ತಿಲ್ಲ. ಸರ್ಕಾರ ಬದುಕಿದೆ ಅಂತಾ ಮೊದಲು ತೋರಿಸಲಿ ಎಂದು ಸವಾಲು ಹಾಕಿದ್ದಾರೆ.

  • ವಾಲ್ಮೀಕಿ ನಿಗಮದ ಹಗರಣ ಬಿಟ್ಟು ಸಿಎಂ ಬೇರೆ ವಿಷಯ ಮಾತಾಡುತ್ತಾರೆ, ಹಗರಣ ಮುಚ್ಚಿಹಾಕುವ ಪ್ರಯತ್ನ: ಆರ್.ಅಶೋಕ್

    ವಾಲ್ಮೀಕಿ ನಿಗಮದ ಹಗರಣ ಬಿಟ್ಟು ಸಿಎಂ ಬೇರೆ ವಿಷಯ ಮಾತಾಡುತ್ತಾರೆ, ಹಗರಣ ಮುಚ್ಚಿಹಾಕುವ ಪ್ರಯತ್ನ: ಆರ್.ಅಶೋಕ್

    – ಮುಖ್ಯಮಂತ್ರಿಯೇನು ಕತ್ತೆ ಕಾಯುತ್ತಿದ್ದರಾ ಎಂದು ವಿಪಕ್ಷ ನಾಯಕ ಪ್ರಶ್ನೆ

    ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ (Valmiki Case) ಹಗರಣವನ್ನು ಅಧಿಕಾರಿಗಳ ಮೇಲೆ ಎತ್ತಿ ಹಾಕುವ ಕೆಲಸವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಡುತ್ತಿದ್ದಾರೆ. ಅವರ 40 ವರ್ಷಗಳ ಶುದ್ಧ ಹಸ್ತದ ಮುಖವಾಡ ಕಳಚಿ ಬಿದ್ದಿದೆ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ್ (R.Ashok) ಹೇಳಿದರು.

    ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣವನ್ನು ಮುಚ್ಚಿಹಾಕುವ ಸ್ಪಷ್ಟ ತೀರ್ಮಾನವನ್ನು ಕಾಂಗ್ರೆಸ್‌ ಮಾಡಿದೆ. ಅದಕ್ಕೆ ಕ್ಲೀನ್‌ಚಿಟ್‌ ಕೊಟ್ಟುಕೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah). ಎಲ್ಲ ತಪ್ಪನ್ನು ಅಧಿಕಾರಿಗಳ ಮೇಲೆ ಹಾಕಿದ್ದಾರೆ. ಎಲ್ಲ ಅಧಿಕಾರಿಗಳೇ ಮಾಡಿದ್ದರೆ, ಮುಖ್ಯಮಂತ್ರಿಯೇನು ಕತ್ತೆ ಕಾಯುತ್ತಿದ್ದರೇ? ಆ ಅಧಿಕಾರಿ ಹಿಂದೆಯೇ ತಪ್ಪು ಮಾಡಿದ್ದರೆ ಅದೇ ಹುದ್ದೆಯಲ್ಲಿ ಉಳಿಸಿಕೊಂಡಿದ್ದು ಏಕೆ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಶಿರೂರಿಗೆ ಹೆಚ್‍ಡಿಕೆ ಭೇಟಿ ವಿಚಾರ ಸುದ್ದಿಯಾಗದಂತೆ ಸರ್ಕಾರದಿಂದ ತಡೆ – ಜೆಡಿಎಸ್ ಆರೋಪ

    ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮುಖವಾಡ ಕಳಚಿ ಬಿದ್ದಿದ್ದು, ಅವರೆಷ್ಟು ಶುದ್ಧ ಹಸ್ತರು ಎಂದು ಬಯಲಾಗಿದೆ. ರಾಜ್ಯದ ಜನರ ಹಣವನ್ನು ಕಳ್ಳ ಖಾತೆಯಲ್ಲಿ ಇಟ್ಟಿದ್ದು ರಾಜ್ಯ ಸರ್ಕಾರ. ಇದರಲ್ಲಿ ಕೇಂದ್ರ ಆರ್ಥಿಕ ಸಚಿವೆ ನಿರ್ಮಲಾ ಸೀತಾರಾಮನ್‌ ಅವರ ಪಾತ್ರವೇ ಇಲ್ಲ. ಬ್ಯಾಂಕ್‌ ಅಧಿಕಾರಿಗಳು ಹಗರಣದ ತನಿಖೆಯನ್ನು ಸಿಬಿಐಗೆ ವಹಿಸಿದರು. ಆದರೆ ಸರ್ಕಾರ ವಿಶೇಷ ತನಿಖಾ ದಳಕ್ಕೆ ನೀಡಿ ಮುಚ್ಚಿಹಾಕಿದ್ದಾರೆ ಎಂದರು.

    ಸಿಎಂ ಸಿದ್ದರಾಮಯ್ಯ ಪುಟಗಟ್ಟಲೆ ಜಾಹೀರಾತು ನೀಡಿ ಸ್ಪಷ್ಟನೆ ಕೊಟ್ಟಿದ್ದಾರೆ. ಜೊತೆಗೆ, ಜಾತಿ ಬಗ್ಗೆ ಹೇಳಿದ್ದಾರೆ. ನಿರ್ದಿಷ್ಟ ಜಾತಿಯ ವಿರುದ್ಧ ಯಾವುದೇ ಆಪಾದನೆ ಮಾಡಬಾರದು ಎಂದು ಸಂವಿಧಾನದಲ್ಲೇ ತಿದ್ದುಪಡಿ ಮಾಡಲಿ. ಸಿಎಂ ಸಿದ್ದರಾಮಯ್ಯ ಬೆಚ್ಚಿ ಬಿದ್ದಿರುವುದರಿಂದ ಹೀಗೆ ಮಾತಾಡುತ್ತಿದ್ದಾರೆ. 40 ಕ್ಕೂ ಅಧಿಕ ದಾಖಲೆಗಳನ್ನು ನಾನು ಕೊಟ್ಟಿದ್ದು, ಈ ಬಗ್ಗೆ ಸಿಎಂ ಸ್ಪಷ್ಟೀಕರಣ ಕೊಡದೆ ಎಲ್ಲಕ್ಕೂ ಪದ್ಮನಾಭ ಕಾರಣ ಎಂದು ಹೇಳಿದ್ದಾರೆ ಎಂದರು.

    ಸಚಿವರ ತಪ್ಪಿಲ್ಲ ಎಂದ ಮೇಲೆ ಬಿ.ನಾಗೇಂದ್ರ ರಾಜೀನಾಮೆ ಯಾಕೆ ಕೊಟ್ಟರು? ಹಾಗಾದರೆ ಸಿಎಂ ಅವರನ್ನು ಅರ್ಧ ದಾರಿಯಲ್ಲೇ ಕೈ ಬಿಟ್ಟಿದ್ದಾರೆ ಎಂದರ್ಥ. ಲೋಕಸಭೆ ಚುನಾವಣೆಗಾಗಿ ನಾಗೇಂದ್ರ ಹಾಗೂ ಬಸವನಗೌಡ ದದ್ದಲ್‌ ಶ್ರಮ ವಹಿಸಿ, ಕಾಂಗ್ರೆಸ್‌ ಪಕ್ಷಕ್ಕಾಗಿ ಹಣ ಸಂಗ್ರಹ ಮಾಡಿ ತೆಲಂಗಾಣಕ್ಕೆ ಕಳುಹಿಸಿದ್ದಾರೆ ಎಂದರು.

    ತನಿಖೆ ಮಾಡಿ
    ಬಿಜೆಪಿ ಸರ್ಕಾರದಲ್ಲಿ ಹಗರಣಗಳ ಸರಮಾಲೆ ಎಂದು ಆರೋಪ ಮಾಡಿ, ಅಧಿಕಾರಕ್ಕೆ ಬಂದು 15 ತಿಂಗಳಾದರೂ 40 ಪರ್ಸೆಂಟ್‌ ಆರೋಪದ ತನಿಖೆ ಇನ್ನೂ ಮುಗಿಸಿಲ್ಲ. ಹಿಂದಿನ ಸರ್ಕಾರ ಹಗರಣ ಮಾಡಿದ್ದರೆ, ಅದನ್ನು ತನಿಖೆ ಮಾಡಲು ಇಷ್ಟು ಸಮಯ ಬೇಕೆ ಎಂದು ಪ್ರಶ್ನೆ ಮಾಡಿದರು.

    ಬಿಜೆಪಿಗೆ ಯಾವ ಒತ್ತಡವೂ ಇಲ್ಲ. ಆದರೆ ರಾಜ್ಯದ ಜನರ ಒತ್ತಡ ಮಾತ್ರ ಇದೆ. ಜನರಿಗಾಗಿ ಹಾಗೂ ದಲಿತರಿಗಾಗಿ ಈ ಮಟ್ಟಕ್ಕೆ ಹೋರಾಟ ಮಾಡುತ್ತಿದ್ದೇವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು, ದಲಿತರ ಹಣ ವಾಪಸ್‌ ಸಿಗಬೇಕು, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು ಎನ್ನುವುದು ನಮ್ಮ ಪಕ್ಷದ ಉದ್ದೇಶ ಎಂದು ತಿಳಿಸಿದರು.

    ಸಿಎಂ ಸಿದ್ದರಾಮಯ್ಯ ಮಾಡಿರುವ ಆರೋಪದ 21 ಹಗರಣಗಳನ್ನು ನಾವೇ ತನಿಖೆ ಮಾಡುತ್ತೇವೆ. ಅವರು ಅಧಿಕಾರದಿಂದ‌ ಕೆಳಕ್ಕಿಳಿದು ನಮಗೆ ಅಧಿಕಾರ ನೀಡಲಿ ಎಂದು ಸವಾಲು ಹಾಕಿದರು.

    ತಾರತಮ್ಯ
    ಬ್ರ್ಯಾಂಡ್ ಬೆಂಗಳೂರು ಆಗಬೇಕೆಂದರೆ ಎಲ್ಲ ಕ್ಷೇತ್ರಗಳು ಅಭಿವೃದ್ಧಿಯಾಗಬೇಕು. ಬೆಂಗಳೂರಿನಲ್ಲಿ ಬಿಜೆಪಿ ಶಾಸಕರೇ ಹೆಚ್ಚಿದ್ದು, ಡಿಸಿಎಂ ಡಿ.ಕೆ.ಶಿವಕುಮಾರ್ ಎಲ್ಲರ‌‌ ಬಳಿ ಚರ್ಚೆ ಮಾಡಿ ಅನುದಾನ ನೀಡಲಿ. ಕಾಂಗ್ರೆಸ್ ಶಾಸಕರಿಗೆ ಬಿಜೆಪಿ ಸರ್ಕಾರ ಅನುದಾನ ನೀಡಿತ್ತು. ಅದೇ ರೀತಿ ಕಾಂಗ್ರೆಸ್ ಕೂಡ ನಡೆದುಕೊಳ್ಳಲಿ. ಈಗಾಗಲೇ‌ ನಗರದಲ್ಲಿ ಕಸದ ರಾಶಿ ಹೆಚ್ಚಿದ್ದು, ವಿಲೇವಾರಿ ಮಾಡಲು ಕೂಡಲೇ ಕ್ರಮ ವಹಿಸಲಿ ಎಂದು ಆಗ್ರಹಿಸಿದರು.

  • ಇಂದಿನ ಸದನ ಒಂದು ಕಪ್ಪು ಚುಕ್ಕೆ – ಸದನ ನಡೆಸಲು ಸ್ಪೀಕರ್ ವಿಫಲ: ಆರ್.ಅಶೋಕ್

    ಇಂದಿನ ಸದನ ಒಂದು ಕಪ್ಪು ಚುಕ್ಕೆ – ಸದನ ನಡೆಸಲು ಸ್ಪೀಕರ್ ವಿಫಲ: ಆರ್.ಅಶೋಕ್

    -ನಮ್ಮ ಪ್ರಶ್ನೆಗಳಿಗೆ ಸಿಎಂ ಉತ್ತರ ಕೊಡಲಿಲ್ಲ

    ಬೆಂಗಳೂರು: ವಾಲ್ಮೀಕಿ ನಿಗಮದ 187 ಕೋಟಿ ರೂ. ಹಣವನ್ನು (Valmiki Corporation Scam) ಈ ಸರ್ಕಾರದ ಒಬ್ಬ ಸಚಿವ, ಒಬ್ಬ ಶಾಸಕ, ಮುಖ್ಯಮಂತ್ರಿ ಸೇರಿ ಹಲವಾರು ಸಚಿವರು ಲೂಟಿ ಮಾಡಿ ಲೋಕಸಭಾ ಚುನಾವಣೆಗೆ ಬಳಸಿದ್ದಾರೆ. ಅದು ಇ.ಡಿ ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟವಾಗಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ (R.Ashok) ಹೇಳಿದ್ದಾರೆ.

    ವಿಧಾನಸೌಧದಲ್ಲಿ ಮಾತನಾಡಿದ ಅವರು, ಲೂಟಿ ಆದ ಹಣ ಎಲ್ಲೆಲ್ಲಿ ಹೋಗಿದೆ? ಯಾವಾಗ ವಾಪಸ್ ತರುತ್ತೀರಿ ಎಂದು ನಾವು ನಿಲುವಳಿ ಸೂಚನೆ ಮೂಲಕ ಪ್ರಶ್ನಿಸಿದ್ದೇವೆ. ಅಲ್ಲದೇ ಎಫ್‍ಐಆರ್‌ನಲ್ಲಿ ನಾಗೇಂದ್ರ, ನಿಗಮದ ಅಧ್ಯಕ್ಷ, ಶಾಸಕ ದದ್ದಲ್ ಹೆಸರಿಲ್ಲ. ಒತ್ತಡ ಹಾಕಿ ಅವರ ಹೆಸರನ್ನು ಕೈಬಿಟ್ಟಿದ್ದಾರೆ. ಮುಖ್ಯಮಂತ್ರಿ ವೀರಾವೇಶದ ಮಾತನಾಡಿ ತಮ್ಮ ಸರ್ಕಾರ ಭಾಗಿಯಾಗಿಲ್ಲ ಎಂದಿದ್ದಾರೆ. ಹಾಗಿದ್ದರೆ ಸಚಿವರು ರಾಜೀನಾಮೆ ಕೊಟ್ಟಿದ್ದು ಯಾಕೆ? ಬುದ್ಧಿ ಇಲ್ಲದೇ ರಾಜೀನಾಮೆ ಕೊಟ್ಟರೇ ಎಂದು ಅವರು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: 1.6 ಕೋಟಿ ಮೌಲ್ಯದ 3 ಮನೆ, 3 ಕೋಟಿಯ 2 ಶೆಡ್ – ಮುದ್ದುಕುಮಾರ್ ಆಸ್ತಿ ಕಂಡು ಅಧಿಕಾರಿಗಳೇ ಸುಸ್ತು!

    89 ಕೋಟಿ ರೂ. ಲೂಟಿ ಆಗಿದೆ ಎಂದು ನೀವೇ ಒಪ್ಪಿಕೊಂಡಿದ್ದೀರಿ. ಆತ್ಮಹತ್ಯೆ ಹಾಗೂ ಲೂಟಿಯ ತನಿಖೆ ಮಾಡುವುದನ್ನು ಬಿಟ್ಟು ನಿಮ್ಮ ಸರ್ಕಾರದಲ್ಲಿ ಹೀಗಾಗಿತ್ತು, ಹಾಗಾಗಿತ್ತು ಎಂದು ಹೇಳಿದ್ದು ಸರಿಯೇ? 40% ಸರ್ಕಾರ ಎಂದು ನಮ್ಮ ವಿರುದ್ಧ ಪೋಸ್ಟರ್ ಅಂಟಿಸಿದ್ದೀರಲ್ಲವೇ? 14 ತಿಂಗಳಾದರೂ 40% ಸರ್ಕಾರ ಎಂಬ ವಿಷಯದಲ್ಲಿ ಫಲಿತಾಂಶ ಬಂದಿದೆಯೇ? ಅದೆಲ್ಲ ಬೋಗಸ್ ಎಂದು ಅವರು ಹೇಳಿದ್ದಾರೆ.

    ದಲಿತನ ಸಾವಿಗೆ ನ್ಯಾಯ ಸಿಗಬೇಕು. ಲೂಟಿಯಾದ ಹಣ ಮರಳಿ ಅವರಿಗೆ ಸಿಗಬೇಕು. ಈ ಸರ್ಕಾರದಲ್ಲಿ ಅಪರಾಧಿಗಳು ಯಾರಿದ್ದಾರೋ ಅವರಿಗೆ ಶಿಕ್ಷೆ ಆಗಬೇಕು. ಆದರೆ ನಮ್ಮ ಬೇಡಿಕೆಗಳಿಗೆ ಎಳ್ಳು ನೀರು ಬಿಟ್ಟಂತೆ ಸಿಎಂ ಮಾತನಾಡಿದ್ದಾರೆ ಎಂದು ಅವರು ತೀವ್ರ ಅಸಮಾಧಾನ ಹೊರಹಾಕಿದ್ದಾರೆ.

    ಸದನ ಇವತ್ತು ನಡೆದಿದ್ದೇ ಸರಿಯಾಗಿಲ್ಲ. ಕರ್ನಾಟಕದ ಇತಿಹಾಸದಲ್ಲಿ ಈ ರೀತಿ ಸದನ ನಡೆದಿರುವುದು ಒಂದು ಕಪ್ಪು ಚುಕ್ಕಿ. ಸದನ ನಡೆಸಲು ಸ್ಪೀಕರ್ ಅವರಿಗೆ ಆಗಲೇ ಇಲ್ಲ. ಸ್ಪೀಕರ್ ಅವರು ಸದನ ನಡೆಸುವಲ್ಲಿ ವಿಫಲರಾಗಿದ್ದಾರೆ. ಮೂಕ ಪ್ರೇಕ್ಷಕರಂತೆ ಅವರು ಕುಳಿತಿದ್ದರು. ಇಂಥ ಸ್ಪೀಕರ್ ಅವರಿಂದ ಏನನ್ನೂ ನಿರೀಕ್ಷೆ ಮಾಡಲು ಸಾಧ್ಯವಾಗದು. ಅವಮಾನಕರ ರೀತಿಯಲ್ಲಿ ಸದನ ನಡೆಸಿದ್ದಾರೆ. ಸ್ಪೀಕರ್ ಅವರ ನಡೆ ಸದನಕ್ಕೆ ಗೌರವ ತರುವಂತೆ ಇರಲಿಲ್ಲ ಎಂದು ಅವರು ಕಿಡಿಕಾರಿದ್ದಾರೆ. ಇದನ್ನೂ ಓದಿ: ಸಿಎಂ ರಾಜೀನಾಮೆ ಕೊಡುವ ದಿನ ಹತ್ತಿರ ಬಂದಿದೆ: ವಿಜಯೇಂದ್ರ

  • ಇದೇನು ವಿಧಾನಸಭೆಯಾ, ನಿಮ್ಹಾನ್ಸಾ? – ಹಾಡು ಹೇಳಿದ ಬಿಜೆಪಿ ಶಾಸಕರ ವಿರುದ್ಧ ಸ್ಪೀಕರ್ ಗರಂ

    ಇದೇನು ವಿಧಾನಸಭೆಯಾ, ನಿಮ್ಹಾನ್ಸಾ? – ಹಾಡು ಹೇಳಿದ ಬಿಜೆಪಿ ಶಾಸಕರ ವಿರುದ್ಧ ಸ್ಪೀಕರ್ ಗರಂ

    – ಏನಿಲ್ಲ ಏನಿಲ್ಲ ಮಳೆಗಾಲಕ್ಕೆ ಪರಿಹಾರ ಏನಿಲ್ಲ, ಅನುದಾನ ಬರಲ್ಲ: ಬಿಜೆಪಿ ಲೇವಡಿ
    – ಬಣ್ಣ ಹಚ್ಚಿಕೊಂಡು ಕುಣಿಯಿರಿ ಅಂತ ಶಿವಲಿಂಗೇಗೌಡ ಕಿಡಿ

    ಬೆಂಗಳೂರು: ವಿಧಾನಸಭೆಯ ಕಲಾಪದ (Assembly Session) ವೇಳೆ ಗದ್ದಲ ಮಾಡಿದ ಬಿಜೆಪಿ ಶಾಸಕರಿಗೆ ಇದೇನು ನಿಮ್ಹಾನ್ಸಾ ಅಥವಾ ವಿಧಾನಸಭೆನಾ? ಅಂತ ಸ್ಪೀಕರ್ ಯು.ಟಿ ಖಾದರ್ (U.T. Khader) ಗರಂ ಆದ ಪ್ರಸಂಗ ನಡೆದಿದೆ.

    ವಿಧಾನಸಭೆಯಲ್ಲಿ ಗದ್ದಲದ ನಡುವೆಯೇ ಮಳೆಹಾನಿ ಚರ್ಚೆಗೆ ಸ್ಪೀಕರ್ ಅವಕಾಶ ಕೊಟ್ಟರು. ಈ ವೇಳೆ ಶಾಸಕ ಪೊನ್ನಣ್ಣ ಚರ್ಚೆ ಆರಂಭಿಸಿದರು. ಇದೇ ಸಂದರ್ಭದಲ್ಲಿ ಬಿಜೆಪಿ ಶಾಸಕರು ಚಪ್ಪಾಳೆ ತಟ್ಟಿ ಘೋಷಣೆ ಕೂಗಿದರು. ಅಲ್ಲದೇ `ಏನಿಲ್ಲ ಏನಿಲ್ಲ ಮಳೆಗಾಲಕ್ಕೆ ಪರಿಹಾರ ಏನಿಲ್ಲ, ಅನುದಾನ ಬರಲ್ಲ’ ಅಂತ ಪ್ರತಿಪಕ್ಷದ ಸದಸ್ಯರು ಹಾಡು ಹೇಳಿ ಗದ್ದಲ ಎಬ್ಬಿಸಿದರು. ಈ ವೇಳೆ ಇದು ಯಾವ ನಾಟಕದ ಕಂಪನಿ? ಅಂತ ಸ್ಪೀಕರ್ ಸಿಡಿಮಿಡಿಗೊಂಡರು. ಇದನ್ನೂ ಓದಿ: ಲೋಕಾಯುಕ್ತ ದಾಳಿ ವೇಳೆ ಚಿನ್ನ ಇದ್ದ ಬ್ಯಾಗನ್ನು ಪಕ್ಕದ ಮನೆಗೆ ಎಸೆದ ಅಧಿಕಾರಿ

    ಇದೇ ವೇಳೆ ಭೋವಿ ನಿಗಮದ ಅಕ್ರಮದ ಬಗ್ಗೆ ಕಾಂಗ್ರೆಸ್ ಶಾಸಕ ಶಿವಲಿಂಗೇಗೌಡ (Shivalinge Gowda) ಪ್ರಸ್ತಾಪ ಮಾಡಿದರು. 220 ಕೋಟಿ ರೂ. ಅಕ್ರಮ ಮಾಜಿ ಸಿಎಂ ಬೊಮ್ಮಾಯಿ ಹಾಗೂ ಯಡಿಯೂರಪ್ಪ ಕಾಲದಲ್ಲಿ ಆಗಿದೆ ಎಂದು ಪೇಪರ್ ಕಟ್ಟಿಂಗ್ ಪ್ರದರ್ಶಿಸಿ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೇ ಎಲ್ಲಾ ಕಡೆ ಮಳೆಯಾಗಿ ಸಮಸ್ಯೆ ಆಗ್ತಿದೆ. ಅದನ್ನು ಬಿಟ್ಟು ಕ್ಷುಲ್ಲಕ ರಾಜಕಾರಣ ಮಾಡ್ತಿದ್ದಾರೆ, ನಾಚಿಕೆ ಆಗಬೇಕು ಇವರಿಗೆ. ವಾಲ್ಮೀಕಿ ನಿಗಮದಲ್ಲಿ ಅಚಾತುರ್ಯ ನಡೆದು ಹೋಗಿದೆ. ತಪ್ಪು ಮಾಡಿದವರು ಶಿಕ್ಷೆ ಅನುಭವಿಸ್ತಾರೆ. ನಿಮಗೆ ನಾಚಿಕೆ, ಮಾನ ಮರ್ಯಾದೆ ಇದೆಯಾ? ತಾಕತ್ ಇದ್ದರೆ ಚರ್ಚೆಗೆ ಬರಲಿ ಎಂದು ಸವಾಲು ಹಾಕಿದರು.

    ಮುಂದುವರಿದು, ನಿಮ್ಮನ್ನೂ ಅಷ್ಟು ಸುಲಭವಾಗಿ ಬಿಡುವುದಿಲ್ಲ. ಲೋಕಸಭೆಯಲ್ಲಿ ವಿರೋಧ ಪಕ್ಷಗಳನ್ನು ಹೊರಗಿಟ್ಟು ಸದನ ನಡೆಸಲಿಲ್ಲವಾ? ಹಾಗೇ ಇವರನ್ನೂ ಹೊರಗೆ ಇಟ್ಟು ಸದನ ನಡೆಸಿ ಅಧ್ಯಕ್ಷರೇ. ನಿಮಗೆ ಆತ್ಮಸಾಕ್ಷಿ ಇದೆಯಾ? ನೈತಿಕತೆ ಇದೆಯಾ? ಗೌರವ ಇದೆಯಾ? ಎಲ್ಲಾ ನಿಗಮಗಳ ಅಕೌಂಟ್‍ನ್ನು ಸಿಎಂ ಹೋಗಿ ನೋಡೋಕೆ ಆಗುತ್ತಾ? ಸಿಎಂ ಹೇಗೆ ವಾಲ್ಮೀಕಿ ಹಗರಣದ ಜವಬ್ದಾರಿ ಆಗ್ತಾರೆ ಎಂದು ಸಿಎಂ ಸಿದ್ದರಾಮಯ್ಯ ಬೆನ್ನಿಗೆ ನಿಂತು ಪ್ರತಿಪಕ್ಷಗಳಿಗೆ ತಿರುಗೇಟು ಕೊಟ್ಟರು.

    ಬಿಜೆಪಿ ಶಾಸಕರು ಹಾಡು ಹೇಳಿದ ವಿಚಾರವಾಗಿ ಅವರು, ಬಣ್ಣ ಹಚ್ಕೊಂಡಾದ್ರೂ ಕುಣೀರಿ. ಎಲ್ಲರೂ ಬಣ್ಣ ಹಚ್ಚಿಕೊಂಡು ನಾಟಕ ಮಾಡಿದ್ರೆ, ನೀವು ಬಣ್ಣ ಹಚ್ಚದೇ ನಾಟಕ ಮಾಡ್ತೀರಿ. ನಾಟಕ ಸಾಕು ಕುಳಿತುಕೊಳ್ಳಿ ಎಂದು ಬಿಜೆಪಿ ಶಾಸಕರಿಗೆ ತಿರುಗೇಟು ಕೊಟ್ಟರು.

    ಇದೇ ವೇಳೆ ಅತಿವೃಷ್ಠಿಯ ಬಗ್ಗೆ ಶಾಸಕ ಆರ್.ವಿ ದೇಶಪಾಂಡೆ ಚರ್ಚೆ ಆರಂಭಿಸಿ ಉತ್ತರಕನ್ನಡದಲ್ಲಿ ಗುಡ್ಡ ಕುಸಿತದ ಬಗ್ಗೆ ಮಾತು ಆರಂಭಿಸಿದರು. ಈ ವೇಳೆ ವಿರೋಧ ಪಕ್ಷದ ನಾಯಕ ಅಶೋಕ್ `ಏನಿಲ್ಲ ಏನಿಲ್ಲ ದೇಶಪಾಂಡೆಗೆ ಮಂತ್ರಿ ಸ್ಥಾನವಿಲ್ಲ’ ಎಂದು ಲೇವಡಿ ಮಾಡಿದರು. ಅಲ್ಲದೇ ವಾಲ್ಮೀಕಿ ಹಗರಣದ (Valmiki Corporation Scam) ಬಗ್ಗೆ ಮಾತನಾಡಿ ಎಂದು ಅವರು ಆಗ್ರಹಿಸಿದರು. ಇದನ್ನೂ ಓದಿ: ಸದನದಲ್ಲಿ `ಒಂದು ಮೊಟ್ಟೆಯ ಕಥೆ’; ನಾನಂತೂ ಮೊಟ್ಟೆ ತಿನ್ನಲ್ಲ, ಮುಟ್ಟೋದೂ ಇಲ್ಲ: ಲಕ್ಷ್ಮಿ ಹೆಬ್ಬಾಳ್ಕರ್‌