Tag: question paper leak

  • ರಷ್ಯಾ-ಉಕ್ರೇನ್ ಯುದ್ಧ ನಿಲ್ಲಿಸೋ ಮೋದಿಗೆ ಪ್ರಶ್ನೆ ಪತ್ರಿಕೆ ಸೋರಿಕೆಯನ್ನು ತಡೆಯಲು ಸಾಧ್ಯವಾಗ್ತಿಲ್ಲ: ರಾಗಾ ವ್ಯಂಗ್ಯ

    ರಷ್ಯಾ-ಉಕ್ರೇನ್ ಯುದ್ಧ ನಿಲ್ಲಿಸೋ ಮೋದಿಗೆ ಪ್ರಶ್ನೆ ಪತ್ರಿಕೆ ಸೋರಿಕೆಯನ್ನು ತಡೆಯಲು ಸಾಧ್ಯವಾಗ್ತಿಲ್ಲ: ರಾಗಾ ವ್ಯಂಗ್ಯ

    ನವದೆಹಲಿ: ರಷ್ಯಾ – ಉಕ್ರೇನ್ ಯುದ್ಧವನ್ನು ನಿಲ್ಲಿಸುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭಾರತದಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯನ್ನು ತಡೆಯಲು ಸಾಧ್ಯವಾಗುತ್ತಿಲ್ಲ ಎಂದು ಸಂಸದ ರಾಹುಲ್ ಗಾಂಧಿ ವ್ಯಂಗ್ಯ ಮಾಡಿದ್ದಾರೆ.

    ಎಐಸಿಸಿ (AICC) ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು ಶಿಕ್ಷಣ ವ್ಯವಸ್ಥೆಯನ್ನು ಬಿಜೆಪಿಯ ಮಾತೃಸಂಸ್ಥೆ ಆರ್‌ಎಸ್‌ಎಸ್ (RSS) ವಶಪಡಿಸಿಕೊಂಡಿರುವುದರಿಂದ ಪ್ರಶ್ನೆ ಪತ್ರಿಕೆ ಸೋರಿಕೆಯಾಗುತ್ತಿದೆ ಎಂದು ಆರೋಪಿಸಿದ್ದಾರೆ‌.

    ವಿಶ್ವವಿದ್ಯಾನಿಲಯದ ಉಪಕುಲಪತಿಗಳನ್ನು ಅರ್ಹತೆಯ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತಿಲ್ಲ “ನಿರ್ದಿಷ್ಟ ಸಂಸ್ಥೆ” ಯೊಂದಿಗೆ ಅವರ ಸಂಪರ್ಕದ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತಿದೆ. ಈ ಸಂಘಟನೆ ಮತ್ತು ಬಿಜೆಪಿ ಸೇರಿ ನಮ್ಮ ಶಿಕ್ಷಣ ವ್ಯವಸ್ಥೆಗೆ ನುಗ್ಗಿ ನಾಶ ಮಾಡುತ್ತಿದೆ. ನೋಟು ಅಮಾನ್ಯೀಕರಣದ ಮೂಲಕ ಆರ್ಥಿಕತೆ ನಾಶ ನರೇಂದ್ರ ಮೋದಿ ಈಗ ಶಿಕ್ಷಣ ವ್ಯವಸ್ಥೆಯನ್ನು ಹಾಳು ಮಾಡಿದ್ದಾರೆ ಎಂದು ರಾಹುಲ್ ಗಾಂಧಿ (Rahul Gandhi) ಹೇಳಿದರು. ಇದನ್ನೂ ಓದಿ: ನೀಟ್‌ ಪರೀಕ್ಷೆ ಹಿಂದಿನ ದಿನ ನನಗೆ ಪ್ರಶ್ನೆ ಪತ್ರಿಕೆ ಸಿಕ್ಕಿತ್ತು: ಪೊಲೀಸರ ಬಳಿ ತಪ್ಪೊಪ್ಪಿಕೊಂಡ ಬಂಧಿತ ವಿದ್ಯಾರ್ಥಿ

    ಮೋದಿ (Narendra Modi) ಮಾನಸಿಕವಾಗಿ ಕುಸಿದು ಹೋಗಿದ್ದಾರೆ. ದೇಶದಲ್ಲಿ ಏನಾದರೂ ಆಗಲಿ ಅವರಿಗೆ ಸರ್ಕಾರ ಉಳಿಯಬೇಕು ಎನ್ನುವಂತಾಗಿದೆ. ಸದ್ಯ ತಮ್ಮ ಪರವಾದ ಸ್ಪೀಕರ್ ಆಯ್ಕೆ ಮಾಡುವುದರಲ್ಲಿ ಮೋದಿ ತಲ್ಲಿನರಾಗಿದ್ದಾರೆ. ದೇಶದ ಜನರಲ್ಲಿ ಆಕ್ರೋಶ ಹೆಚ್ಚಾಗಿದೆ. ಮೋದಿಯವರ ಬಗ್ಗೆ ಇದ್ದ ಭಯ ಕಡಿಮೆಯಾಗಿದೆ. ವಾರಣಾಸಿಯಲ್ಲಿ ಮೋದಿಯವರತ್ತ ಚಪ್ಪಲಿ ತೂರಲಾಗಿದೆ. ಚುನಾವಣೆಗೂ ಮೊದಲು ಮೋದಿ ಕಡೆ ಚಪ್ಪಲಿ ತೂರುವ ಕೆಲಸ ಮಾಡುತ್ತಿರಲಿಲ್ಲ. ಬಿಜೆಪಿ ಒಳಗೂ ಮೋದಿ ಬಗ್ಗೆ ಈಗ ಯಾವುದೇ ಭಯ ಇಲ್ಲ ಗೌರವವೂ ಇಲ್ಲ ಎಂದು ಹೇಳಿದರು.

    ಪ್ರಶ್ನೆ ಪತ್ರಿಕೆ ಲೀಕ್ ಆಗುವ ಬಗ್ಗೆ ಸಂಸತ್ ನಲ್ಲಿ ಪ್ರಸ್ತಾಪಿಸಲಾಗುವುದು. ಸೂಕ್ತ ಕಾನೂನು ಜಾರಿಯಾಗಬೇಕಿದೆ. ಅದಕ್ಕೂ ಮುನ್ನ ಬಿಜೆಪಿ ಮಾತೃಸಂಸ್ಥೆ ಕಪಿ ಮುಷ್ಠಿಯಿಂದ ಶಿಕ್ಷಣ ವ್ಯವಸ್ಥೆಯನ್ನು ಹೊರ ತರಬೇಕಿದೆ. ಭಾರತ್ ಜೋಡೋ ಯಾತ್ರೆ ವೇಳೆ ಸಾಕಷ್ಟು ಯುವಕರು ಪ್ರಶ್ನೆ ಪತ್ರಿಕೆ ಲೀಕ್ ಬಗ್ಗೆ ದೂರಿದ್ದಾರೆ ಎಂದು ರಾಗಾ ಹೇಳಿದರು.

  • ಯುಪಿ ಪೊಲೀಸ್ ನೇಮಕಾತಿ ಪ್ರಶ್ನೆ ಪತ್ರಿಕೆ ಸೋರಿಕೆ – ನೇಮಕಾತಿ ಮಂಡಳಿಯ ಅಧ್ಯಕ್ಷೆ ರೇಣುಕಾ ಮಿಶ್ರಾ ವಜಾ

    ಯುಪಿ ಪೊಲೀಸ್ ನೇಮಕಾತಿ ಪ್ರಶ್ನೆ ಪತ್ರಿಕೆ ಸೋರಿಕೆ – ನೇಮಕಾತಿ ಮಂಡಳಿಯ ಅಧ್ಯಕ್ಷೆ ರೇಣುಕಾ ಮಿಶ್ರಾ ವಜಾ

    ಲಕ್ನೋ: ಉತ್ತರ ಪ್ರದೇಶ (Uttar Pradesh) ಪೊಲೀಸ್ ನೇಮಕಾತಿ ಪ್ರಶ್ನೆ ಪತ್ರಿಕೆ ಸೋರಿಕೆ (Question Paper Leak) ಪ್ರಕರಣಕ್ಕೆ ಸಂಬಂಧಿಸಿದಂತೆ ನೇಮಕಾತಿ ಮಂಡಳಿಯ ಅಧ್ಯಕ್ಷೆ ರೇಣುಕಾ ಮಿಶ್ರಾ (Renuka Mishra) ಅವರನ್ನು ವಜಾಗೊಳಿಸಲಾಗಿದೆ.

    ಉತ್ತರ ಪ್ರದೇಶ ಸರ್ಕಾರ ರೇಣುಕಾ ಮಿಶ್ರಾ ಅವರನ್ನು ವಜಾಗೊಳಿಸಿದ್ದು, ರಾಜೀವ್ ಕೃಷ್ಣ ಅವರಿಗೆ ನೇಮಕಾತಿ ಮಂಡಳಿಯ ಜವಾಬ್ದಾರಿಯನ್ನು ನೀಡಿದೆ. ಫೆಬ್ರವರಿ 17 ಮತ್ತು 18ರಂದು ಉತ್ತರ ಪ್ರದೇಶದಲ್ಲಿ ಪೊಲೀಸ್ ನೇಮಕಾತಿಯ ಲಿಖಿತ ಪರೀಕ್ಷೆಯನ್ನು ನಡೆಸಲಾಗಿತ್ತು. 60,000ಕ್ಕೂ ಹೆಚ್ಚು ಕಾನ್ಸ್ಟೇಬಲ್ ನೇಮಕಾತಿ ಪರೀಕ್ಷೆಯಲ್ಲಿ ಸುಮಾರು 48 ಲಕ್ಷಕ್ಕೂ ಅಧಿಕ ಅಭ್ಯರ್ಥಿಗಳು ಭಾಗವಹಿಸಿದ್ದರು. ಪ್ರಶ್ನೆ ಪತ್ರಿಕೆ ಸೋರಿಕೆ ಹಿನ್ನೆಲೆ ಪರೀಕ್ಷೆಯನ್ನು ರದ್ದುಗೊಳಿಸಲಾಗಿತ್ತು. ಇದನ್ನೂ ಓದಿ: ಬೆಂಗ್ಳೂರು ಜೈಲಿನಲ್ಲಿದ್ದುಕೊಂಡೇ ಸಹ ಕೈದಿಗಳನ್ನು ಸೆಳೆದು ಉಗ್ರ ಚಟುವಟಿಕೆಗೆ ಬಳಕೆ – ದೇಶದ 17 ಕಡೆ ಎನ್‌ಐಎ ದಾಳಿ

    ಸದ್ಯ ಈ ಪ್ರಕರಣವನ್ನು ಎಸ್‌ಟಿಎಫ್‌ಗೆ ಹಸ್ತಾಂತರಿಸಲಾಗಿದೆ. ಮುಂದಿನ 6 ತಿಂಗಳಲ್ಲಿ ಲಿಖಿತ ಪರೀಕ್ಷೆಯನ್ನು ಮತ್ತೊಮ್ಮೆ ನಡೆಸಲಾಗುವುದು ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಮುಂದಿನ 3 ತಿಂಗಳು ರಣರಣ ಬಿಸಿಲು – ಬಿಸಿಗಾಳಿಯ ಎಚ್ಚರಿಕೆ ನೀಡಿದ ಹವಾಮಾನ ಇಲಾಖೆ

  • 12ನೇ ತರಗತಿ ಬೋರ್ಡ್‌ ಪರೀಕ್ಷೆಯ ಪ್ರಶ್ನೆಪತ್ರಿಕೆ ವಾಟ್ಸಾಪ್‌ನಲ್ಲಿ ಲೀಕ್‌

    12ನೇ ತರಗತಿ ಬೋರ್ಡ್‌ ಪರೀಕ್ಷೆಯ ಪ್ರಶ್ನೆಪತ್ರಿಕೆ ವಾಟ್ಸಾಪ್‌ನಲ್ಲಿ ಲೀಕ್‌

    ಲಕ್ನೋ: ಉತ್ತರ ಪ್ರದೇಶದಲ್ಲಿ 12 ನೇ ತರಗತಿಯ ಬೋರ್ಡ್ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳು ವಾಟ್ಸಾಪ್ ಗ್ರೂಪಿನಲ್ಲಿ ಸೋರಿಕೆಯಾಗಿದೆ ಎಂದು ಆರೋಪಿಸಲಾಗಿದ್ದು, ಈ ಸಂಬಂಧ ದೂರು ದಾಖಲಾಗಿದೆ.

    ಗಣಿತ ಮತ್ತು ಜೀವಶಾಸ್ತ್ರ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳು ಲೀಕ್‌ (Mathematics and Biology Question papers Leak) ಆಗಿವೆ. ಗುರುವಾರ ಸೆಕೆಂಡ್‌ ಶಿಫ್ಟ್‌ ನಲ್ಲಿ ಪರೀಕ್ಷೆಗಳು ಆರಂಭವಾದ ಒಂದು ಗಂಟೆಯ ನಂತರ ಆಗ್ರಾದ ವಾಟ್ಸಾಪ್ ಗುಂಪಿನಲ್ಲಿ ಹಂಚಿಕೊಳ್ಳಲಾಗಿದೆ ಎಂದು ಆರೋಪಿಸಲಾಗಿದೆ.

    TET EXAM 2

     

    ಈ ಪ್ರಶ್ನೆ ಪತ್ರಿಕೆಗಳನ್ನು ಕಾಲೇಜು ಪ್ರಾಂಶುಪಾಲರೊಬ್ಬರ ಮಗ “ಆಲ್ ಪ್ರಿನ್ಸಿಪಲ್ಸ್ ಆಗ್ರಾ” ಎಂಬ ವಾಟ್ಸಾಪ್ ಗುಂಪಿನಲ್ಲಿ ಶೇರ್‌ ಮಾಡಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಪ್ರನೆಪತ್ರಿಕೆ ಸೋರಿಗೆ ಸಂಬಂಧ ಆಗ್ರಾ ಶಾಲೆಗಳ ಜಿಲ್ಲಾ ನಿರೀಕ್ಷಕ ದಿನೇಶ್‌ ಕುಮಾರ್‌ ಪೊಲೀಸರಿಗೆ ದೂರು ನೀಡಿದ್ದಾರೆ. ಜೊತೆಗೆ ಫತೇಪುರ್‌ ಸಿಕ್ರಿಯಲ್ಲಿ ಎಫ್‌ಐಆರ್‌ ದಾಖಲಿಸಲಾಗಿದೆ.

    ಪ್ರೌಢ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕ ಮತ್ತು ಪರೀಕ್ಷೆಗಳ ವೀಕ್ಷಕ ಮುಖೇಶ್ ಅಗರ್ವಾಲ್ ಪ್ರತಿಕ್ರಿಯಿಸಿ, ಶಿಕ್ಷಣ ಇಲಾಖೆಯು ಈ ಬಗ್ಗೆ ತನಿಖೆ ನಡೆಸಲು ಸಮಿತಿಯನ್ನು ರಚಿಸಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಗಾಜಾ ನೆರವು ಕೇಂದ್ರದಲ್ಲಿ ಜನರ ಮೇಲೆ ಇಸ್ರೇಲ್‌ ಸೈನಿಕರ ಗುಂಡಿನ ದಾಳಿ – 104 ಮಂದಿ ಸಾವು

    ಘಟನೆಯ ನಂತರ ನಾವು ಸಮಿತಿಯನ್ನು ರಚಿಸಿದ್ದೇವೆ ಮತ್ತು ಅದರ ಪ್ರಕಾರ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದೇವೆ. ಈ ಕೃತ್ಯ ಎಸಗಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಗರ್ವಾಲ್ ಹೇಳಿದರು.

  • ಸಿಟಿಇಟಿ ಪರೀಕ್ಷೆ ವಂಚನೆ – ಐವರು ಮಹಿಳೆಯರು ಸೇರಿದಂತೆ 18 ಮಂದಿ ಅರೆಸ್ಟ್

    ಸಿಟಿಇಟಿ ಪರೀಕ್ಷೆ ವಂಚನೆ – ಐವರು ಮಹಿಳೆಯರು ಸೇರಿದಂತೆ 18 ಮಂದಿ ಅರೆಸ್ಟ್

    ಲಕ್ನೋ: ಸಿಟಿಇಟಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಮಹಿಳೆಯರು ಸೇರಿದಂತೆ 18 ಮಂದಿಯನ್ನು ಗೌತಮ್ ಬುದ್ಧನಗರ ಪೊಲೀಸರು ಬಂಧಿಸಿದ್ದಾರೆ.

    ಇದೇ ಡಿಸೆಂಬರ್ 30ರಂದು ಸಿಬಿಎಸ್‍ಇ ಆಯೋಜಿಸಿದ್ದ (ಸಿಟಿಇಟಿ) ಕೇಂದ್ರ ಶಿಕ್ಷಕರ ಅರ್ಹತಾ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಲ್ಲಿ ತೊಡಗಿಕೊಂಡಿದ್ದ ಗ್ಯಾಂಗ್‍ವೊಂದನ್ನು ಬೇಧಿಸುವಲ್ಲಿ ಗೌತಮ್ ಬುದ್ಧನಗರ ಪೊಲೀಸರು ಯಶಸ್ವಿಯಾಗಿದ್ದಾರೆ. ಐವರು ಮಹಿಳೆಯರು ಸೇರಿದಂತೆ 18 ಮಂದಿಯನ್ನು ಗುರುವಾರ ಜಿಲ್ಲೆಯ ಸೆಕ್ಟರ್ 71 ರ ಹೋಟೆಲ್‍ನಲ್ಲಿ ಬಂಧಿಸಿದ್ದಾರೆ. ಇದನ್ನೂ ಓದಿ: ಚಿಟ್ ಫಂಡ್ ಹೆಸರಿನಲ್ಲಿ 6 ಕೋಟಿಗೂ ಹೆಚ್ಚು ಹಣ ದೋಖಾ – ಆರೋಪಿ ಅರೆಸ್ಟ್

    ಗುರುವಾರ ಮುಂಜಾನೆ ಪೊಲೀಸರು ಸೆಕ್ಟರ್ 58 ರಲ್ಲಿ ಗಸ್ತು ತಿರುಗುತ್ತಿದ್ದಾಗ, ನೋಯ್ಡಾ ವಿಭಾಗದ ಸೆಕ್ಟರ್ 60 ರಲ್ಲಿ ಮಾರುತಿ ಸುಜುಕಿ ಇಕೊವೊಂದನ್ನು ಗುರುತಿಸಿದ್ದಾರೆ. ಅನುಮಾನಸ್ಪದವಾಗಿ ಆ ಕಾರನ್ನು ಪೊಲೀಸರ ತಂಡವು ಪರಿಶೀಲಿಸಿದಾಗ ಕಾರಿನಲ್ಲಿ ಐವರು ಯುವಕರು ಕುಳಿತುಕೊಂಡಿದ್ದು, ಕೆಲ ಮಹಿಳೆಯರ ಪರ್ಸ್‍ಗಳು ಪೊಲೀಸರಿಗೆ ಸಿಕ್ಕಿವೆ. ಆಗ ಕಾರಿನಲ್ಲಿದ್ದ ಯುವಕರು ಈ ಪರ್ಸ್‍ಗಳು ನೋಯ್ಡಾದ ಸೆಕ್ಟರ್ 71 ರ ಅತಿಥಿ ಗೃಹದಲ್ಲಿ ಇದ್ದ ಕೆಲವು ಮಹಿಳೆಯರಿಗೆ ಸೇರಿದ್ದು ಎಂದು ಹೇಳಿದ್ದಾರೆ.

    ಆಗ ನೋಯ್ಡಾದ ಹೆಚ್ಚುವರಿ ಉಪ ಪೊಲೀಸ್ ಆಯುಕ್ತ (ಎಡಿಸಿಪಿ) ಕುಮಾರ್ ರಣವಿಜಯ್ ಸಿಂಗ್ ಆರೋಪಿಗಳ ವಿರುದ್ಧ ಅನುಮಾನ ಬಂದು ಪೊಲೀಸ್ ತಂಡದೊಂದಿಗೆ ಸೆಕ್ಟರ್ 71 ರಲ್ಲಿರುವ ಹೋಟೆಲ್ ಅನ್ನು ಶೋಧಿಸಿದ್ದಾರೆ. ಈ ವೇಳೆ ಅಲ್ಲಿದ್ದ ಆರೋಪಿಗಳನ್ನು ಬಂಧಿಸಲಾಗಿದೆ.

    ಆರೋಪಿಗಳಿಂದ ನಾವು ಮೂರು ಲ್ಯಾಪ್‍ಟಾಪ್‍ಗಳು, ಒಂದು ಕೀಬೋರ್ಡ್ ಒಂದು ಪ್ರಿಂಟರ್, 20 ಮೊಬೈಲ್ ಫೋನ್‍ಗಳು, 36,000 ರೂ. ನಗದು, ಐದು ಕಾರುಗಳು ಒಂದು ಟೊಯೊಟಾ ಫಾರ್ಚುನರ್, ಮಾರುತಿ ಸ್ವಿಫ್ಟ್ ಡಿಜೈರ್, ಮಹೀಂದ್ರಾ ಎಕ್ಸ್‍ಯುವಿ 500, ಮಾರುತಿ ಸುಜುಕಿ ಬಲೆನೊ, ಮಾರುತಿ ಸುಜುಕಿ ಇಕೊ ಮತ್ತು ಸಿಟಿಇಟಿಗೆ ಸಂಬಂಧಪಟ್ಟ 50 ಪ್ರವೇಶ ಪತ್ರಗಳನ್ನು ವಶಪಡಿಸಿಕೊಂಡಿದ್ದೇವೆ ಎಂದು ರಣವಿಜಯ್ ಸಿಂಗ್ ಬಹಿರಂಗಪಡಿಸಿದ್ದಾರೆ.

    ಪೊಲೀಸರೇ ಭಾಗಿ:
    ರಾಜಸ್ಥಾನದ ನಿವೃತ್ತ ಸಿಆರ್‍ಪಿಎಫ್ ಕಾನ್‍ಸ್ಟೆಬಲ್ ಭವಾನಿ ಶರ್ಮಾ (45) ಪ್ರಸ್ತುತ ಸಿಆರ್‍ಪಿಎಫ್‍ನಲ್ಲಿ ಸೇವೆ ಸಲ್ಲಿಸುತ್ತಿರುವ ಹೆಡ್ ಕಾನ್‍ಸ್ಟೆಬಲ್ ಶಿವ ರಾಮ್ ಸಿಂಗ್ (32), ಮತ್ತು ಹರಿಯಾಣ ಮೂಲದ ದೆಹಲಿ ಪೊಲೀಸ್ ವಿಕಾಸ್ (30) ಬಂಧಿತ ಆರೋಪಿಗಳು.

    ಇಡೀ ಕಾರ್ಯಾಚರಣೆಯನ್ನು ಸೋನಿಪತ್‍ನ ವಿನಯ್ ದಹಿಯಾ ಮತ್ತು ಅಂಕಿತ್ ಕುಮಾರ್ ನಡೆಸಿದ್ದು, ಅವರು ಪರಿಹರಿಸಿದ ಪ್ರಶ್ನೆ ಪತ್ರಿಕೆಗಳನ್ನು ಹಂಚಿಕೊಳ್ಳಲು ಪ್ರತಿ ಅಭ್ಯರ್ಥಿಗೆ 2.5-3 ಲಕ್ಷ ರೂ. ಶುಲ್ಕ ವಿಧಿಸುತ್ತಿದ್ದರು. ಈ ವಿಷಯವನ್ನು ತನಿಖೆ ಮಾಡಲು ನಾವು ಸಿಬಿಎಸ್‍ಇಗೆ ಪತ್ರ ಬರೆಯುತ್ತೇವೆ ಎಂದರು. ಇದನ್ನೂ ಓದಿ: ಹುಟ್ಟೂರಿನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ BSF ಯೋಧನ ಅಂತ್ಯಕ್ರಿಯೆ

    ನೋಯ್ಡಾದಲ್ಲಿ ಯಾವುದೇ ಪರೀಕ್ಷಾ ಕೇಂದ್ರ ಇರಲಿಲ್ಲ. ಆದಾಗ್ಯೂ ಈ ಶಂಕಿತರು ನೋಯ್ಡಾದಲ್ಲಿ ಪರಿಹರಿಸಿದ ಪತ್ರಿಕೆಗಳನ್ನು ವಿನಿಮಯ ಮಾಡಿಕೊಳ್ಳುತ್ತಿದ್ದರು. ಮತ್ತೊಬ್ಬ ಶಂಕಿತ ರವಿ ಎಂಬಾತ ಪ್ರಶ್ನೆಪತ್ರಿಕೆ ಹೊಂದಿರುವ ಪೆನ್‍ಡ್ರೈವ್‍ನೊಂದಿಗೆ ಸ್ಥಳದಿಂದ ಪರಾರಿಯಾಗಿದ್ದು, ಆತನಿಗಾಗಿ ಶೋಧ ಕಾರ್ಯಾಚರಣೆ ಆರಂಭಿಸಲಾಗಿದೆ ಎಂದು ಎಡಿಸಿಪಿ ತಿಳಿಸಿದ್ದಾರೆ.

  • ಕೆಪಿಎಸ್‍ಸಿ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ – ಮತ್ತೋರ್ವ ಆರೋಪಿ ಅರೆಸ್ಟ್

    ಕೆಪಿಎಸ್‍ಸಿ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ – ಮತ್ತೋರ್ವ ಆರೋಪಿ ಅರೆಸ್ಟ್

    ಬೆಳಗಾವಿ: ಕೆಪಿಎಸ್‍ಸಿ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ ಮತ್ತೋರ್ವ ಆರೋಪಿಯನ್ನು ಗೋಕಾಕ್‍ನಲ್ಲಿ ಬಂಧಿಸಲಾಗಿದೆ.

    ಬಂಧಿತ ಆರೋಪಿ ಸಂಗನಕೇರಿ ಗ್ರಾಮದ ಶಿವಲಿಂಗ ಪಾಟೀಲ್ ಆಗಿದ್ದು, ಈತ ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಸಂಗನಕೇರಿ ಗ್ರಾಮದಲ್ಲಿ ಜ್ಞಾನದೀಪ ಕೋಚಿಂಗ್ ಸೆಂಟರ್ ನಡೆಸುತ್ತಿದ್ದನು. ಆದರೆ ಎರಡು ವರ್ಷದ ಹಿಂದೆ ಕೋಚಿಂಗ್ ಸೆಂಟರ್ ಕ್ಲೋಸ್ ಮಾಡಿದ್ದನು. ಈ ಮುನ್ನ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಶಿವಲಿಂಗ ಪಾಟೀಲ್, ಎರಡು ವರ್ಷಗಳಿಂದ ತಲೆಮರೆಸಿಕೊಂಡು ಅಡ್ಡಾಡುತ್ತಿದ್ದನು.

    ಕೆಪಿಎಸ್‍ಸಿ ಪ್ರಶ್ನೆಪತ್ರಿಕೆ ಕೀ ಆನ್ಸರ್ ಸೋರಿಕೆ ಪ್ರಕರಣದಲ್ಲಿ ಶಿವಲಿಂಗ ಪಾಟೀಲ್ ಕೂಡ ಭಾಗಿಯಾಗಿರುವುದಾಗಿ ಬೆಂಗಳೂರು ಸಿಸಿಬಿ ಪೊಲೀಸರು, ಬೆಳಗಾವಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಳಗಾವಿ ಪೊಲೀಸರು ಎರಡು ದಿನಗಳ ಹಿಂದೆ ಶಿವಲಿಂಗ ಪಾಟೀಲ್ ಬಂಧಿಸಿದ್ದಾರೆ. ಇದೀಗ ಆರೋಪಿ ಶಿವಲಿಂಗ ಪಾಟೀಲ್‍ನನ್ನು ಬೆಂಗಳೂರು ಸಿಸಿಬಿ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.

  • ಪ್ರಶ್ನೆ ಪತ್ರಿಕೆ ಸೋರಿಕೆ – ಎಫ್‍ಡಿಎ ಪರೀಕ್ಷೆ ಮುಂದೂಡಿಕೆ

    ಪ್ರಶ್ನೆ ಪತ್ರಿಕೆ ಸೋರಿಕೆ – ಎಫ್‍ಡಿಎ ಪರೀಕ್ಷೆ ಮುಂದೂಡಿಕೆ

    ಬೆಂಗಳೂರು: ಭಾನುವಾರ ನಡೆಯಬೇಕಿದ್ದ ಎಫ್‍ಡಿಎ ಪರೀಕ್ಷೆಯನ್ನ ಮುಂದೂಡಲಾಗಿದೆ ಎಂದು ಕೆಪಿಎಸ್‍ಸಿ ಕಾರ್ಯದರ್ಶಿ ಜಿ. ಸತ್ಯವತಿ ಮಾಹಿತಿ ನೀಡಿದ್ದಾರೆ.

    ಪ್ರಶ್ನೆ ಪತ್ರಿಕೆ ಸೋರಿಕೆ ಹಿನ್ನೆಲೆ ನಾಳೆಯ ಪರೀಕ್ಷೆಯನ್ನ ಮುಂದೂಡಲಾಗಿದ್ದು, ಕೆಪಿಎಸ್‍ಸಿ ಶೀಘ್ರದಲ್ಲಿ ಪರೀಕ್ಷಾ ದಿನಾಂಕ ಪ್ರಕಟಿಸಲಿದೆ. 2019ನೇ ಸಾಲಿನ ಪ್ರಥಮ ದರ್ಜೆ ಸಹಾಯಕ ಹುದ್ದೆಗೆ 1,114 ಪೋಸ್ಟ್ ಗಳಿಗೆ ಪರೀಕ್ಷೆ ನಡೆಯುತ್ತಿತ್ತು. 3.74 ಲಕ್ಷ ಅಭ್ಯರ್ಥಿಗಳು ಪರೀಕ್ಷೆ ಬರೆಯಲು ಸಿದ್ಧಗೊಂಡಿದ್ದರು.

    ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿದ್ದ ನಾಲ್ವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ರಾಚಪ್ಪ, ಚಂದ್ರು ಸೇರಿದಂತೆ ಒಟ್ಟು ನಾಲ್ವರ ಬಂಧನವಾಗಿದ್ದು, ಬಂಧಿತರಿಂದ 24 ಲಕ್ಷ ನಗದು, 3 ವಾಹನಗಳನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರಶ್ನೆ ಪತ್ರಿಕೆ ಸೋರಿಕೆಯ ಮಾಹಿತಿಯನ್ನ ಸಿಸಿಬಿ ಪೊಲೀಸರು ಕೆಪಿಎಸ್‍ಸಿ ಗೆ ನೀಡುತ್ತಿದ್ದಂತೆ ಪರೀಕ್ಷೆ ಮುಂದೂಡಿ ಜಿ.ಸತ್ಯವತಿ ಆದೇಶಿದ್ದಾರೆ. ರಾಜ್ಯಾದ್ಯಂತ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವ ಬಗ್ಗೆ ಅನುಮಾನಗಳು ವ್ಯಕ್ತವಾಗಿವೆ.

  • ಪೊಲೀಸ್ ಪ್ರಶ್ನೆ ಪತ್ರಿಕೆ ಲೀಕ್ ಪ್ರಕರಣಕ್ಕೆ ಟ್ವಿಸ್ಟ್ – ಸಿಎಂ ಗೃಹ ಕಚೇರಿಗಿದೆ ನಂಟು!

    ಪೊಲೀಸ್ ಪ್ರಶ್ನೆ ಪತ್ರಿಕೆ ಲೀಕ್ ಪ್ರಕರಣಕ್ಕೆ ಟ್ವಿಸ್ಟ್ – ಸಿಎಂ ಗೃಹ ಕಚೇರಿಗಿದೆ ನಂಟು!

    ಬೆಂಗಳೂರು: ಪೊಲೀಸ್ ನೇಮಕಾತಿ ಪರೀಕ್ಷೆ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಕುಮಾರಸ್ವಾಮಿ ಕಚೇರಿಗೂ ಪೊಲೀಸ್ ಪ್ರಶ್ನೆ ಪತ್ರಿಕೆ ಲೀಕ್ ಗೂ ನಂಟು ಹೊಂದಿದ್ದು, ಸಿಎಂ ಗೃಹ ಕಚೇರಿ ಸಿಬ್ಬಂದಿಯೇ ಈಗ ಪೊಲೀಸರ ಅತಿಥಿಯಾಗಿದ್ದಾನೆ.

    ಸಿಎಂ ಗೃಹಕಚೇರಿಯ ಸಿಬ್ಬಂದಿ ಗೋವಿಂದರಾಜರನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ವಿಜಯನಗರದ ಪಟ್ಟೆಗಾರಪಾಳ್ಯದ ಮನೆಯಲ್ಲಿ ಸಿಸಿಬಿ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದು, ಈತ ಮೂಲತಃ ರೈಲ್ವೆ ಇಲಾಖೆಯಲ್ಲಿ ನೌಕರನಾಗಿ ಕೆಲಸ ಮಾಡುತ್ತಿದ್ದನು.

    ಈಗ ನಿಯೋಜನೆ ಮೇಲೆ ಸಿಎಂ ಗೃಹಕಚೇರಿಯಲ್ಲಿ ಗೋವಿಂದರಾಜು ಸಿಬ್ಬಂದಿಯಾಗಿದ್ದಾನೆ. ಪ್ರಶ್ನೆ ಪತ್ರಿಕೆ ಸೋರಿಕೆಯ ಮೂಲ ರೂವಾರಿ ಈ ಗೋವಿಂದರಾಜು ಆಗಿದ್ದು, ಅನುಮಾನದ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರು ಕಸ್ಟಡಿಗೆ ಪಡೆದುಕೊಂಡು ವಿಚಾರಣೆ ಮಾಡಿದ್ದಾರೆ.

    ಪೊಲೀಸ್ ಪ್ರಶ್ನೆ ಪತ್ರಿಕೆ ಲೀಕ್ ಪ್ರಕರಣದಲ್ಲಿ ಯಾವುದೇ ಸಚಿವರ ಲಿಂಕ್ ಇಲ್ಲ ಎಂದು ಪೊಲೀಸರು ಕೂಡ ಕೈಬಿಟ್ಟಿದ್ದರು. ಆದರೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಲ್ಕತ್ತಾದಲ್ಲಿ ಚೈತನ್ಯ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಆಗ ಆತ ಸಿಎಂ ಗೃಹ ಕಚೇರಿಯಲ್ಲಿ ಕೆಲಸ ಮಾಡುವ ಗೋವಿಂದರಾಜು ಬಗ್ಗೆ ಹೇಳಿದ್ದಾನೆ. ಗೋವಿಂದರಾಜು ಪೇಪರ್ ಲೀಕ್ ಆಗುವ ಒಂದು ತಿಂಗಳು ಹಿಂದೆ ಬಂದು ಕೆಲಸಕ್ಕೆ ಸೇರಿದ್ದನು. ಈತನಿಗೆ ಸುಮಾರು 3 ಲಕ್ಷ ಹಣವನ್ನು ಕೊಟ್ಟರೆ ಕಿಂಗ್‍ಪಿನ್ ಶಿವಕುಮಾರ್ ನನ್ನು ಭೇಟಿ ಮಾಡಿಸಿ ಪ್ರಶ್ನೆ ಪತ್ರಿಕೆ ಕೊಟ್ಟು ಪರೀಕ್ಷೆ ಬರೆಸುತ್ತಿದ್ದನು. ಇದೇ ರೀತಿ ಸುಮಾರು 20ಕ್ಕೂ ಹೆಚ್ಚು ಅಭ್ಯರ್ಥಿಗಳನ್ನು ಕಳುಹಿಸಿಕೊಟ್ಟಿದ್ದನು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

    ಈ ಹಿನ್ನೆಲೆಯಲ್ಲಿ ಗೋವಿಂದರಾಜುಗೂ ಆರೋಪಿ ಚೈತನ್ಯ ಮತ್ತು ಶಿವಕುಮಾರ್ ಜೊತೆ ಯಾವ ರೀತಿ ಸಂಪರ್ಕ ಇದೆ. ಬೇರೆ ಯಾವ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ ಎಂದು ವಿಚಾರಣೆ ಮಾಡಲು ಪೊಲೀಸರು ಏಳು ದಿನ ವಶಕ್ಕೆ ಪಡೆದುಕೊಂಡಿದ್ದಾರೆ.

    ನಡೆದಿದ್ದೇನು?
    ನವೆಂಬರ್ 25ರಂದು ನಡೆಯಬೇಕಿದ್ದ ಪೊಲೀಸ್ ಪೇದೆ ಹುದ್ದೆಯ ಲಿಖಿತ ಪ್ರಶ್ನೆ ಪತ್ರಿಕೆ ಸೋರಿಕೆ ಆಗಿತ್ತು. ಹೀಗಾಗಿ ಪರೀಕ್ಷೆಯನ್ನು ಅನಿರ್ಧಿಷ್ಟಾವಧಿಗೆ ಮುಂದೂಡಲಾಗಿತ್ತು. ಪ್ರಶ್ನೆ ಪತ್ರಿಕೆ ಸೋರಿಕೆಗೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಭಾರೀ ಜಾಲವನ್ನು ಪತ್ತೆ ಹಚ್ಚಿ ಕಿಂಗ್ ಪಿನ್ ಸೇರಿದಂತೆ 115 ಮಂದಿಯನ್ನು ಬಂಧಿಸಿದ್ದರು.

    ಕೊಡಗು ಜಿಲ್ಲೆಯ ಸೋಮವಾರಪೇಟೆಯ ವಿದ್ಯಾಮಂದಿರ ಕೊಠಡಿಯೊಂದರಲ್ಲಿ ರಾಜ್ಯದ ವಿವಿಧೆಡೆಯಿಂದ ಪರೀಕ್ಷಾರ್ಥಿಗಳನ್ನು ಕರೆಸಿಕೊಂಡು ಪ್ರಶ್ನೆ ಪತ್ರಿಕೆ ವಿತರಿಸಲು ಸಿದ್ಧತೆ ನಡೆಸಲಾಗಿತ್ತು. ನೇರವಾಗಿ ಪರೀಕ್ಷಾ ಕೇಂದ್ರಕ್ಕೆ ತೆರಳುವ ವ್ಯವಸ್ಥೆಯನ್ನೂ ಮಾಡಲಾಗಿತ್ತು. ಆದರೆ ಈ ಮೊದಲೇ ಖಚಿತ ಮಾಹಿತಿಯ ಮೇರೆಗೆ ಸಿಸಿಬಿ ಅಧಿಕಾರಿಗಳಾದ ಬಿ.ಆರ್.ವೇಣುಗೋಪಾಲ್, ಬಿ.ಬಾಲರಾಜು ನೇತೃತ್ವದ ಎರಡು ತಂಡಗಳು ದಾಳಿ ನಡೆಸಿದ್ದವು. ದಾಳಿ ವೇಳೆ ಕಿಂಗ್‍ಪಿನ್ ಶಿವಕುಮಾರ್ ನನ್ನು ಪ್ರಶ್ನೆ ಪತ್ರಿಕೆಗಳ ಸಹಿತ ಬಂಧಿಸಿದ್ದರು.

  • ಪೊಲೀಸ್ ಪೇದೆ ಪ್ರಶ್ನೆ ಪತ್ರಿಕೆ ಲೀಕ್ ಪ್ರಕರಣಕ್ಕೆ ಟ್ವಿಸ್ಟ್ – ಪ್ರಮುಖ ಆರೋಪಿಯ ಜೊತೆ ಮಾಜಿ ಸಿಎಂ ಪಿಎ ನಂಟು

    ಪೊಲೀಸ್ ಪೇದೆ ಪ್ರಶ್ನೆ ಪತ್ರಿಕೆ ಲೀಕ್ ಪ್ರಕರಣಕ್ಕೆ ಟ್ವಿಸ್ಟ್ – ಪ್ರಮುಖ ಆರೋಪಿಯ ಜೊತೆ ಮಾಜಿ ಸಿಎಂ ಪಿಎ ನಂಟು

    ಬೆಂಗಳೂರು: ಪೊಲೀಸ್ ಪೇದೆ ಪ್ರಶ್ನೆ ಪತ್ರಿಕೆ ಲೀಕ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ದೊರೆತಿದ್ದು, ಪ್ರಮುಖ ಆರೋಪಿ ಶಿವಕುಮಾರ್ ಜೊತೆ ಮಾಜಿ ಸಿಎಂ ಪಿಎ ನಂಟು ಹೊಂದಿದ್ದಾರೆ ಎಂಬ ಮಾಹಿತಿಯೊಂದು ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಹೌದು, ಪೊಲೀಸ್ ಪೇದೆ ಪ್ರಶ್ನೆ ಪತ್ರಿಕೆ ಲೀಕ್ ಪ್ರಕರಣದ ಹಿಂದೆ ಬಿಜೆಪಿ ಮುಖಂಡ ಈಶಪ್ಪ ಕೈವಾಡ ಇದೆ ಎನ್ನುವ ವಿಚಾರ ಮೂಲಗಳು ತಿಳಿಸಿವೆ. ಶಾಸಕ ಸ್ಥಾನದ ಆಕಾಂಕ್ಷಿಯಾಗಿದ್ದ ಈಶಪ್ಪ ಶಿವಕುಮಾರ್ ಜೊತೆ ಸೇರಿಕೊಂಡಿದ್ದರು ಎನ್ನುವ ವಿಚಾರದ ಬಗ್ಗೆ ಮಾಹಿತಿ ಲಭ್ಯವಾಗಿದೆ.

    ಕೊಪ್ಪಳದ ಗಜೇಂದ್ರಗಡದಲ್ಲಿ ಪ್ರಭಾವಿ ವ್ಯಕ್ತಿಯಾಗಿರುವ ಈಶಪ್ಪ, ಪ್ರಾಥಮಿಕ ಶಾಲೆ ಶಿಕ್ಷಕರಾಗಿ ಈಗ ಕೋಟಿ ಕೋಟಿ ಒಡೆಯರಾಗಿ ಬದಲಾಗಿದ್ದಾರೆ. ಇದನ್ನೂ ಓದಿ: ಪ್ರಶ್ನೆ ಪತ್ರಿಕೆ ಲೀಕ್ ನಲ್ಲಿ ಸ್ವಾಮೀಜಿಯ ಕೈವಾಡ

    ನವೆಂಬರ್ 25ರಂದು ನಡೆಯಬೇಕಿದ್ದ ಪೊಲೀಸ್ ಪೇದೆ ಹುದ್ದೆಯ ಲಿಖಿತ ಪ್ರಶ್ನೆ ಪತ್ರಿಕೆ ಸೋರಿಕೆ ಆಗಿತ್ತು. ಹೀಗಾಗಿ ಪರೀಕ್ಷೆಯನ್ನು ಅನಿರ್ಧಿಷ್ಟಾವಧಿಗೆ ಮುಂದೂಡಲಾಗಿತ್ತು. ಪ್ರಶ್ನೆ ಪತ್ರಿಕೆ ಸೋರಿಕೆಗೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಭಾರೀ ಜಾಲವನ್ನು ಪತ್ತೆ ಹಚ್ಚಿ ಕಿಂಗ್ ಪಿನ್ ಸೇರಿದಂತೆ 115 ಮಂದಿಯನ್ನು ಬಂಧಿಸಿದ್ದರು.

    ಕೊಡಗು ಜಿಲ್ಲೆಯ ಸೋಮವಾರಪೇಟೆಯ ವಿದ್ಯಾಮಂದಿರ ಕೊಠಡಿಯೊಂದರಲ್ಲಿ ರಾಜ್ಯದ ವಿವಿಧೆಡೆಯಿಂದ ಪರೀಕ್ಷಾರ್ಥಿಗಳನ್ನು ಕರೆಸಿಕೊಂಡು ಪ್ರಶ್ನೆ ಪತ್ರಿಕೆ ವಿತರಿಸಲು ಸಿದ್ಧತೆ ನಡೆಸಲಾಗಿತ್ತು. ನೇರವಾಗಿ ಪರೀಕ್ಷಾ ಕೇಂದ್ರಕ್ಕೆ ತೆರಳುವ ವ್ಯವಸ್ಥೆಯನ್ನೂ ಮಾಡಲಾಗಿತ್ತು. ಆದ್ರೆ ಈ ಮೊದಲೇ ಖಚಿತ ಮಾಹಿತಿಯ ಮೇರೆಗೆ ಸಿಸಿಬಿ ಅಧಿಕಾರಿಗಳಾದ ಬಿ.ಆರ್.ವೇಣುಗೋಪಾಲ್, ಬಿ.ಬಾಲರಾಜು ನೇತೃತ್ವದ ಎರಡು ತಂಡಗಳು ದಾಳಿ ನಡೆಸಿದ್ದವು. ದಾಳಿ ವೇಳೆ ಕಿಂಗ್‍ಪಿನ್ ಶಿವಕುಮಾರ್‍ನನ್ನು ಪ್ರಶ್ನೆ ಪತ್ರಿಕೆಗಳ ಸಹಿತ ಬಂಧಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪ್ರಶ್ನೆ ಪತ್ರಿಕೆ ಸೋರಿಕೆ – ಭಾನುವಾರದ ಪೊಲೀಸ್ ಪೇದೆ ನೇಮಕಾತಿ ಪರೀಕ್ಷೆ ಮುಂದೂಡಿಕೆ

    ಪ್ರಶ್ನೆ ಪತ್ರಿಕೆ ಸೋರಿಕೆ – ಭಾನುವಾರದ ಪೊಲೀಸ್ ಪೇದೆ ನೇಮಕಾತಿ ಪರೀಕ್ಷೆ ಮುಂದೂಡಿಕೆ

    – 116 ಅಭ್ಯರ್ಥಿಗಳು ವಶಕ್ಕೆ, ಪರೀಕ್ಷೆ ಮುಂದೂಡಿ ಎಡಿಜಿಪಿಯಿಂದ ಆದೇಶ

    ಹಾಸನ: ಪೊಲೀಸ್ ಪೇದೆ ನೇಮಕಾತಿ ಪ್ರವೇಶ ಪರೀಕ್ಷೆಯ ಪ್ರಶ್ನೆ ಪತ್ರಿಕೆ ನೀಡುವುದಾಗಿ ಆಮಿಷವೊಡ್ಡಿ ಹಣ ವಸೂಲಿ ಮಾಡುತ್ತಿದ್ದ ಜಾಲವನ್ನು ಜಿಲ್ಲೆಯ ಪೋಲಿಸರು ಭೇದಿಸಿದ್ದಾರೆ.

    ಪೊಲೀಸ್ ಪೇದೆ ನೇಮಕಾತಿ ಪ್ರವೇಶ ಪರೀಕ್ಷೆ ಭಾನುವಾರ ನಿಗದಿಯಾಗಿತ್ತು. ಹೀಗಾಗಿ ಅಭ್ಯರ್ಥಿಗಳನ್ನು ಕುಳ್ಳಿರಿಸಿ ಪ್ರಶ್ನೆ ಪತ್ರಿಕೆ ಹಂಚಲು ಸಿದ್ಧತೆ ನಡೆಸುತ್ತಿದ್ದಾಗ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾರೆ. ಪ್ರಕರಣದ ಕಿಂಗ್‍ಪಿನ್ ಶಿವಕುಮಾರ್ ಸ್ವಾಮಿಯನ್ನು ಬಂಧಿಸಲಾಗಿದೆ.

    ಪ್ರಶ್ನೆ ಪತ್ರಿಕೆ ಸೋರಿಕೆಯಾದ ಹಿನ್ನೆಲೆಯಲ್ಲಿ ನೇಮಕಾತಿ ವಿಭಾಗದ ಎಡಿಜಿಪಿ ಅವರು ಪರೀಕ್ಷೆಯನ್ನು ರದ್ದು ಮಾಡಿ ಆದೇಶ ಹೊರಡಿಸಿದ್ದಾರೆ. ಮುಂದಿನ ದಿನಾಂಕವನ್ನು ತಿಳಿಸಲಾಗುವುದು ಎಂದು ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿ ತಿಳಿಸಿದ್ದಾರೆ.

    ಏನಿದು ಪ್ರಕರಣ?:
    ಆರೋಪಿ ಶಿವಕುಮಾರ್ ಸ್ವಾಮಿ ಈ ಹಿಂದೆ ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಸಿಕ್ಕಿ ಬಿದ್ದಿದ್ದ. ಈ ಬೆನ್ನಲ್ಲೇ ಈಗ ಪೊಲೀಸ್ ಪೇದೆ ಪ್ರವೇಶ ಪರೀಕ್ಷೆ ಪ್ರಶ್ನೆ ಪತ್ರಿಕೆ ನೀಡುವುದಾಗಿ ಆಮಿಷವೊಡ್ಡಿ ಹಣ ವಸೂಲಿ ಮಾಡುತ್ತಿದ್ದ. ನಾಳೆ ಪರೀಕ್ಷಾರ್ಥಿಗಳನ್ನು ನೇರವಾಗಿ ಪರೀಕ್ಷಾ ಕೊಠಡಿಗೆ ಕಳುಹಿಸುವ ವ್ಯವಸ್ಥೆ ಮಾಡಿದ್ದ.

    ಪೊಲೀಸ್ ಪೇದೆ ಪರೀಕ್ಷೆಗೆ ಸಂಬಂಧಿಸಿದ ಪ್ರಶ್ನೆ ಪತ್ರಿಕೆ ಈ ಜಾಲದ ಬಗ್ಗೆ ಖಚಿತ ಮಾಹಿತಿ ಸಿಸಿಬಿಗೆ ಸಿಕ್ಕಿತ್ತು. ರಾಜ್ಯದ ವಿವಿಧ ಭಾಗಗಳಿಂದ ವಿಶೇಷವಾಗಿ ಉತ್ತರ ಕರ್ನಾಟಕದಿಂದ ಸುಮಾರು 116 ಅಭ್ಯರ್ಥಿಗಳನ್ನು ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಶನಿವಾರ ಸಂತೆಯ ಕಲ್ಲಮಠದ ಶ್ರೀನಂಜುಂಡೇಶ್ವರ ವಿದ್ಯಾಮಂದಿರ ಕೊಠಡಿಯೊಂದರಲ್ಲಿ ಸೇರಿಸಲಾಗಿತ್ತು. ಅಭ್ಯರ್ಥಿಗಳಿಗೆ ಪ್ರಶ್ನೆಪತ್ರಿಕೆ ಹಾಗೂ ಅವುಗಳಿಗೆ ಉತ್ತರ ನೀಡಲು ಶಿವಕುಮಾರ್, ಬಸವರಾಜು ಒಳ ಸಂಚು ರೂಪಿಸಿದ್ದರು.

    ಆರೋಪಿಗಳಿಗೆ ಬಲೆ ಬಿಸಿದ್ದ ಸಿಸಿಬಿಯ ಹಿರಿಯ ಪೊಲೀಸ್ ಅಧಿಕಾರಿ ಬಿ.ಆರ್.ವೇಣುಗೋಪಾಲ್ ಮತ್ತು ಬಿ.ಬಾಲರಾಜು ರವರ ನೇತೃತ್ವದ 2 ವಿಶೇಷ ತಂಡಗಳನ್ನು ರಚಿಸಿ, ಹಲವು ಸ್ಪಷ್ಟ ಸೂಚನೆಗಳನ್ನು ನೀಡಿದ್ದರು. ಈ ತಂಡವು ಇಂದು ಬೆಳಗ್ಗೆ ದಾಳಿ ನಡೆಸಿದೆ. ಈ ಜಾಲದ ಪ್ರಮುಖ ರುವಾರಿಯಾಗಿದ್ದ ಶಿವಕುಮಾರ್ ನನ್ನು ಪ್ರಶ್ನೆಪತ್ರಿಕೆ ಸಮೇತ ವಶಕ್ಕೆ ತೆಗೆದುಕೊಳ್ಳಲಾಗಿದೆ. ಅಕ್ರಮವಾಗಿ ಗುಂಪು ಸೇರಿಸಿದ್ದ ಸುಮಾರು 116 ಅಭ್ಯರ್ಥಿಗಳು, 7 ಜನ ಚಾಲಕರು, ಕ್ಲೀನರ್ಸ್ ಹಾಗೂ 4 ಮಿನಿ ಬಸ್, 1 ಇನ್ನೋವಾ ಕಾರ್ ವಾಹನಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.

    ಪ್ರತಿ ಅಭ್ಯರ್ಥಿಯಿಂದ 6 ರಿಂದ 8 ಲಕ್ಷ ರೂ. ಹಣ ಪಡೆಯಲಾಗಿತ್ತು ಎಂದು ತನಿಖೆಯಿಂದ ತಿಳಿದು ಬಂದಿದೆ. ಈ ಕೃತ್ಯವನ್ನು ಎಸಗಲು ಬೇರೆ ಬೇರೆ ಆಸಾಮಿಗಳ ಹೆಸರಿನ ದಾಖಲಾತಿಗಳನ್ನು ಬಳಸಿ, ಮೊಬೈಲ್ ಸಿಮ್ ಕಾರ್ಡ್‍ಗಳನ್ನು ಪಡೆದಿರುವುದಾಗಿಯೂ ಮತ್ತು ಇದಕ್ಕಾಗಿ ಸಾಮಾಜಿಕ ಜಾಲತಾಣದಲ್ಲಿ ನಕಲಿ ಖಾತೆಗಳನ್ನು ಸೃಷ್ಟಿಸಿರುವುದು ತಿಳಿದು ಬಂದಿದೆ. ದಾಳಿ ವೇಳೆ ಬಸವರಾಜು ಎಂಬ ಮತ್ತೋರ್ವ ಆರೋಪಿ ತಲೆಮರೆಸಿಕೊಂಡಿದ್ದು, ಈತನ ಪತ್ತೆ ಕಾರ್ಯ ಮುಂದುವರಿದಿರುತ್ತದೆ. ಈ ಸಂಬಂಧ ಬೆಂಗಳೂರು ನಗರ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಐಪಿಸಿ ಮತ್ತು ಐಟಿ ಕಾಯ್ದೆ ಅಡಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv