Tag: Quarry

  • ಕ್ವಾರಿ ಗಣಿ ರಾಯಲ್ಟಿಯಲ್ಲಿ ಸರ್ಕಾರಕ್ಕೆ ವಂಚನೆ: ಕಠಿಣ ಕ್ರಮಕ್ಕೆ ಸಿಎಂ ಸೂಚನೆ

    ಕ್ವಾರಿ ಗಣಿ ರಾಯಲ್ಟಿಯಲ್ಲಿ ಸರ್ಕಾರಕ್ಕೆ ವಂಚನೆ: ಕಠಿಣ ಕ್ರಮಕ್ಕೆ ಸಿಎಂ ಸೂಚನೆ

    ಬೆಂಗಳೂರು: ಕ್ವಾರಿ ಗಣಿ ರಾಯಲ್ಟಿಯಲ್ಲಿ (Quarry Mine Royalty) ಸರ್ಕಾರಕ್ಕೆ ನಷ್ಟ ಆಗುತ್ತಿದೆ ಎನ್ನುವ ದೂರಿನ ಬಗ್ಗೆ ಅಧಿಕಾರಿಗಳ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಗರಂ ಆಗಿದ್ದಾರೆ. ಈ ಬಗ್ಗೆ ಕಠಿಣ ಕ್ರಮ ಕೈಗೊಂಡು ನಷ್ಟ ತಡೆಯುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

    ಜಿಲ್ಲಾಧಿಕಾರಿಗಳು, ಸಿಇಒ ಸಭೆಯಲ್ಲಿ ಸಚಿವ ಸಂತೋಷ್ ಲಾಡ್, ಈಶ್ವರ್ ಖಂಡ್ರೆ, ಶರಣ ಪ್ರಕಾಶ್ ಪಾಟೀಲ್ ಮುಂತಾದವರು ಅನುಮತಿ ಪಡೆಯದೇ ರಾಯಲ್ಟಿ ಸಂಗ್ರಹದಲ್ಲಿ ಸರ್ಕಾರಕ್ಕೆ ಆಗುತ್ತಿರುವ ನಷ್ಟದ ಬಗ್ಗೆ ಸಿಎಂ ಗಮನಕ್ಕೆ ತಂದರು.  ಇದನ್ನೂ ಓದಿ: ಮಾಜಿ ಸಚಿವ ಬಿ.ಸಿ ಪಾಟೀಲ್‌ ಅಳಿಯ ಆತ್ಮಹತ್ಯೆ

    ಸಚಿವ ಸಂತೋಷ್ ಲಾಡ್ (Santosh Lad) ಅವರು ಮಾತನಾಡಿ, ಕ್ವಾರಿ ಗಣಿಗಾರಿಕೆಯಲ್ಲಿ 50 ಲಕ್ಷ ಟನ್‌ ಪರಿಸರ ತೀರುವಳಿ ಪಡೆದರೆ, 20 ಲಕ್ಷ ಟನ್‌ಗೆ ಮಾತ್ರ ಪರ್ಮಿಟ್ ಪಡೆಯುತ್ತಾರೆ. ಹಾಗಿದ್ದರೆ ಹೆಚ್ಚಿನ ಮಟ್ಟದ ಪರಿಸರ ತೀರುವಳಿ ಪಡೆದದ್ದು ಏತಕ್ಕೆ? ರಾಜ್ಯದಲ್ಲಿ ಪರಿಸರ ತೀರುವಳಿ ಪಡೆದಿರುವುದಕ್ಕೂ, ಪರ್ಮಿಟ್ ಪಡೆದಿರುವುದಕ್ಕೂ ಅರ್ಧಕರ್ಧ ಕಡಿಮೆ ಇದೆ ಎಂದು ಸಭೆಯಲ್ಲಿ ತಿಳಿಸಿದರು. ಸಂತೋಷ್ ಲಾಡ್ ಅವರ ಮಾತಿಗೆ ಹಲವು ಸಚಿವರು ಧ್ವನಿಗೂಡಿಸಿದರು.

    ಈ ಬಗ್ಗೆ ಅಧಿಕಾರಿಗಳಿಗೆ ಸ್ಪಷ್ಟ ಎಚ್ಚರಿಕೆ ನೀಡಿದ ಸಿಎಂ ಇದನ್ನೆಲ್ಲಾ ತಕ್ಷಣ ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. ಈ ಬಗ್ಗೆ ಅಗತ್ಯವಿದ್ದರೆ ಸರ್ಕಾರದಿಂದ ಹೊಸ ನೀತಿಯನ್ನೇ ರೂಪಿಸೋಣ ಎಂದು ಹೇಳಿದರು. ಇದನ್ನೂ ಓದಿ: ವಿಶ್ವ ಚಾಂಪಿಯನ್ಸ್‌ಗೆ 125 ಕೋಟಿ ರೂ. ಬಹುಮಾನ – ರೋಹಿತ್‌, ಕೊಹ್ಲಿ, ದ್ರಾವಿಡ್‌ಗೆ ಸಿಕ್ಕಿದ್ದೆಷ್ಟು?

    ಯಾವುದೇ ಜಮೀನನ್ನು ತಪ್ಪಾಗಿ ಡೀಮ್ಡ್‌ ಅರಣ್ಯ ಪಟ್ಟಿಗೆ ಸೇರಿಸಿದ್ದರೆ, ಅಂತಹದ್ದನ್ನು ಗುರುತಿಸಲು ಕಂದಾಯ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಎರಡು ತಿಂಗಳ ಒಳಗಾಗಿ ಜಂಟಿ ಸಮೀಕ್ಷೆ ನಡೆಸಿ ಅದನ್ನು ಸಂಪುಟದ ಮುಂದೆ ಮಂಡಿಸಲು ಸೂಚನೆ ನೀಡಿದರು.

    ಕಟ್ಟುನಿಟ್ಟಿನ ಕ್ರಮ
    ಅಕ್ರಮ ಗಣಿಗಾರಿಕೆ, ಸಾಗಾಣಿಕೆ ಮತ್ತು ದಾಸ್ತಾನು ಕುರಿತು ಹಲವಾರು ದೂರುಗಳು ಬರುತ್ತಿದ್ದು, ಜಿಲ್ಲಾಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಅಕ್ರಮ ಗಣಿಗಾರಿಕೆ ಮಾಡುವ ಮರಳು ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಬೇಕು. ಗ್ರಾಮ ಪಂಚಾಯತ್‌ ಮೂಲಕ ಮರಳು ಪೂರೈಕೆ ಮಾಡಲು ಈಗಾಗಲೇ ಗುರುತಿಸಲಾಗಿರುವ ಮರಳು ಬ್ಲಾಕ್‌ಗಳ ಮೂಲಕ ಮರಳು ಪೂರೈಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ರಾಜ್ಯದಲ್ಲಿ ಒಟ್ಟು 372 ಮರಳು ಬ್ಲಾಕ್‌ಗಳನ್ನು ಗುರುತಿಸಲಾಗಿದ್ದು, 102 ಮರಳು ಬ್ಲಾಕ್‌ಗಳು ಕಾರ್ಯ ಪ್ರಾರಂಭಿಸಿವೆ. ಇನ್ನೂ 270 ಮರಳು ಬ್ಲಾಕ್‌ಗಳು ಕಾರ್ಯಾರಂಭ ಮಾಡಬೇಕು ಎಂದು ಸಿಎಂ ಸೂಚನೆ ನೀಡಿದರು.

  • ಕ್ವಾರಿಯಲ್ಲಿ ಸ್ಫೋಟ ಪ್ರಕರಣ – ಮಾಲೀಕ ಸೇರಿ 7 ಜನ ಅರೆಸ್ಟ್

    ಕ್ವಾರಿಯಲ್ಲಿ ಸ್ಫೋಟ ಪ್ರಕರಣ – ಮಾಲೀಕ ಸೇರಿ 7 ಜನ ಅರೆಸ್ಟ್

    ಕೋಲಾರ: ಕೆ.ಬಿ ಹೊಸಹಳ್ಳಿಯ (KB Hosahalli) ಕಲ್ಲು ಕ್ವಾರಿಯಲ್ಲಿ ಬ್ಲಾಸ್ಟಿಂಗ್ ವೇಳೆ ಕಾರ್ಮಿಕ ಸಾವಿಗೀಡಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ವಾರಿ (Quarry) ಮಾಲೀಕ ಸೇರಿ ಏಳು ಜನರನ್ನು ವೇಮಗಲ್ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

    ಕ್ವಾರಿ ಮಾಲೀಕ ಅಬ್ದುಲ್ ರೆಹಮಾನ್, ಮ್ಯಾನೇಜರ್ ದೇವರಾಜ್ ಸೇರಿ ಒಟ್ಟು ಏಳು ಜನರನ್ನು ಬಂಧಿಸಲಾಗಿದೆ. ತಲೆ ಮರೆಸಿಕೊಂಡಿರುವ ಉಳಿದ ನಾಲ್ಕು ಜನರಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಅಲ್ಲದೆ ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನ ನಡೆದಿದೆ ಎಂಬ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ (Department of Mines and Earth Sciences) ಅಧಿಕಾರಿಗಳು ಹಾಗೂ ಕೋಲಾರ (Kolar) ಎಸ್‍ಪಿ ನಾರಾಯಣ್ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಶವ ಸಂಸ್ಕಾರದ ವೇಳೆ ಕುತ್ತಿಗೆಯಲ್ಲಿ ಹಗ್ಗದ ಗುರುತು ಪತ್ತೆ – ಈಗ ಕೊಲೆ ಕೇಸ್ ದಾಖಲು

    ಬುಧವಾರ ರಾತ್ರಿ ನಡೆದ ಸ್ಫೋಟದಲ್ಲಿ ಯಾದಗಿರಿ (Yadgir) ಮೂಲದ ಕಾರ್ಮಿಕ ಸೋಮು ಜಾದವ್ ಎಂಬ ಕಾರ್ಮಿಕ ಸಾವನ್ನಪ್ಪಿದ್ದ. ಘಟನೆಯಲ್ಲಿ ಗೋಪಿ ಎಂಬುವರಿಗೆ ಗಂಭೀರ ಗಾಯವಾಗಿತ್ತು. ಈ ಸಂಬಂಧ ಜಿಲೆಟಿನ್ ಸ್ಫೋಟದಲ್ಲಿ ನಿರ್ಲಕ್ಷ್ಯ ವಹಿಸಿದ್ದ ಕ್ವಾರಿ ಮಾಲೀಕ ಸೇರಿದಂತೆ ಎಂಜಿನಯರ್‍ಗಳು ಹಾಗೂ ಇನ್ನಿತರ 11 ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಮಂಡ್ಯದಲ್ಲಿ ಐಪಿಎಲ್ ಬೆಟ್ಟಿಂಗ್ ಹಣಕ್ಕಾಗಿ ಯುವಕನ ಕೊಲೆ

  • ರಾಜ್ಯಾದ್ಯಂತ ಇಂದಿನಿಂದ  2,000ಕ್ಕೂ ಹೆಚ್ಚು ಕ್ರಷರ್, ಕ್ವಾರಿಗಳು ಬಂದ್

    ರಾಜ್ಯಾದ್ಯಂತ ಇಂದಿನಿಂದ 2,000ಕ್ಕೂ ಹೆಚ್ಚು ಕ್ರಷರ್, ಕ್ವಾರಿಗಳು ಬಂದ್

    ಚಿಕ್ಕಬಳ್ಳಾಪುರ: ಗಣಿ ಹಾಗೂ ಭೂ ವಿಜ್ಞಾನ ಇಲಾಖೆಯಡಿಯ ಕೆಎಂಎಂಸಿಆರ್ (KMMCR) ಕಾಯಿದೆಗೆ ಸಮಗ್ರ ತಿದ್ದುಪಡಿ ತರುವಂತೆ ಒತ್ತಾಯಿಸಿ, ಇಂದಿನಿಂದ ರಾಜ್ಯಾದ್ಯಂತ 2,000ಕ್ಕೂ ಹೆಚ್ಚು ಕಲ್ಲು ಪುಡಿ ಘಟಕ (Stone Crusher) ಹಾಗೂ ಕ್ವಾರಿಗಳನ್ನು (Quarry) ಬಂದ್ ಮಾಡಿ ಮಾಲೀಕರು ಅನಿರ್ದಿಷ್ಟಾವಧಿ ಧರಣಿ ನಡೆಸಲು ಮುಂದಾಗಿದ್ದಾರೆ.

    ಚಿಕ್ಕಬಳ್ಳಾಪುರ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಫೆಡರೇಷನ್ ಆಫ್‌ ಕರ್ನಾಟಕ ಕ್ವಾರಿ ಹಾಗೂ ಸ್ಟೋನ್ ಕ್ರಷರ್ ಒನರ್ಸ್ ಅಸೋಸಿಯೇಷನ್ ರಾಜ್ಯಾಧ್ಯಕ್ಷರು, ಈಗಾಗಲೇ ಗಣಿ ಮಾಲೀಕರಿಂದ ರಾಯಧನವನ್ನು ಸಂಗ್ರಹ ಮಾಡುತ್ತಿದ್ದರೂ ಸರ್ಕಾರ ಮರಳಿ ಗುತ್ತಿಗೆದಾರರಿಂದ ರಾಯಧನ ಸಂಗ್ರಹ ಮಾಡುತ್ತಿರುವುದು ಸರಿಯಲ್ಲ. ಇನ್ನೂ ಕೆಎಂಎಂಸಿಆರ್-1994 ಕಾಯಿದೆಯಲ್ಲಿ ಹಲವು ನಿಯಮಗಳಿಗೆ ತಿದ್ದುಪಡಿಗಳನ್ನು ತರಬೇಕು ಹಾಗೂ ಕರ್ನಾಟಕ ರಾಜ್ಯ ರಿಮೋಟ್ ಸೆನ್ಸಿಂಗ್ ಅಪ್ಲಿಕೇಷನ್ ಸೆಂಟರ್ ನೀಡಿರುವ ಆದೇಶವನ್ನು ಕೆಎಂಎಂಸಿಆರ್ ಕಾಯಿದೆ ತಿದ್ದುಪಡಿ ಆದ ನಂತರ ಅನುಷ್ಠಾನಗೊಳಿಸುವುದು ಸೇರಿ ಹಲವು ಬೇಡಿಕೆಗಳಿಗೆ ಆಗ್ರಹಿಸಿ ಅನಿರ್ದಿಷ್ಟಾವಧಿ ಧರಣಿ ಕೈಗೊಂಡಿದ್ದೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಹಾಡಹಗಲೇ ರಸ್ತೆಯಲ್ಲಿ ಯುವತಿಯನ್ನು ಕೊಂದು ತಾನೂ ವಿಷ ಸೇವಿಸಿ ಆಸ್ಪತ್ರೆ ಸೇರಿದ್ದ ಯುವಕ ಸಾವು

    ಹಾಗಾಗಿ ಕಲ್ಲು ಪುಡಿ ಘಟಕ ಹಾಗೂ ಕ್ವಾರಿಗಳನ್ನು ಬಂದ್ ಮಾಡಿದ್ದು ಎಂ ಸ್ಯಾಂಡ್ ಸೇರಿದಂತೆ ಜಲ್ಲಿ ಕಲ್ಲು ಮಾರಾಟ, ಸಾಗಾಟ ಕೂಡ ಬಂದ್ ಆಗಲಿದೆ. ಇದ್ರಿಂದ ಕಟ್ಟಡ, ರಸ್ತೆ, ಸೇತುವೆ ಕಾಮಗಾರಿಗಳಿಗೆ ಸಮಸ್ಯೆ ಎದುರಾಗಲಿದೆ. ಡಿ.28 ರಂದು ಕಲ್ಲು ಪುಡಿ ಘಟಕ ಹಾಗೂ ಕ್ವಾರಿಗಳ ಮಾಲೀಕರು, ಕಾರ್ಮಿಕರು ಬೆಳಗಾವಿಯ ಸುವರ್ಣ ಸೌಧದ ಎದುರು ಪ್ರತಿಭಟನೆ ನಡೆಸಿ ಸರ್ಕಾರದ ಮೇಲೆ ಒತ್ತಡ ಹಾಕಲು ತೀರ್ಮಾನ ಮಾಡಿದ್ದಾರೆ. ಇದನ್ನೂ ಓದಿ: ದರ್ಗಾ ಅಭಿವೃದ್ಧಿಗೆ 6 ಕೋಟಿ ದೇಣಿಗೆ ನೀಡಿದ ಜನಾರ್ದನ ರೆಡ್ಡಿ

    Live Tv
    [brid partner=56869869 player=32851 video=960834 autoplay=true]

  • ನಿಯಮಗಳನ್ನು ಮೀರಿ ಕಲ್ಲು ಕ್ವಾರಿಯಲ್ಲಿ ಭಾರೀ ಪ್ರಮಾಣದಲ್ಲಿ ಸ್ಫೋಟ

    ನಿಯಮಗಳನ್ನು ಮೀರಿ ಕಲ್ಲು ಕ್ವಾರಿಯಲ್ಲಿ ಭಾರೀ ಪ್ರಮಾಣದಲ್ಲಿ ಸ್ಫೋಟ

    ಚಿಕ್ಕಬಳ್ಳಾಪುರ: ಭೂಮಿಯೇ ಗಡ ಗಡ ನಡುಗುವ ಹಾಗೆ ಕಲ್ಲು ಕ್ವಾರಿಯಲ್ಲಿ ಬ್ಲಾಸ್ಟಿಂಗ್ ಮಾಡಿರುವ ಘಟನೆ ಗೌರಿಬಿದನೂರು ತಾಲೂಕಿನ ಅರ್ಕುಂದ್‌ ಗ್ರಾಮದ ಬಳಿ ನಡೆದಿದೆ.

    ಅರ್ಕುಂದ್‌ ಹಾಗೂ ಕಾಟನಾಗೇನಹಳ್ಳಿ ಗ್ರಾಮದ ಮಧ್ಯೆ ಇರುವ ಬೆಟ್ಟದಲ್ಲಿ ಈ ಬ್ಲಾಸ್ಟಿಂಗ್ ಮಾಡಿದ್ದಾರೆ. ಈ ಗಣಿಗಾರಿಕೆ ಸ್ಪೋಟದ ದೃಶ್ಯವು ಸ್ಥಳೀಯರ ಮೊಬೈಲ್‍ನಲ್ಲಿ ಸೆರೆಯಾಗಿದೆ. ಈ ಗಣಿಗಾರಿಕೆಯ ಸ್ಪೋಟದ ರಭಸಕ್ಕೆ ಬೃಹತ್ ಕಲ್ಲು ಬಂಡೆಗೆಳು ಆಕಾಶದತ್ತ ಚಿಮ್ಮುವಂತೆ ಕಾಣುತ್ತವೆ. ಸುಮಾರು 500-600 ಮೀ. ದೂರದವರೆಗೂ ಭಾರೀ ಗಾತ್ರದ ಕಲ್ಲುಗಳು ಚೆಲ್ಲಾಪಿಲ್ಲಿಯಾಗಿದೆ. ಇದನ್ನೂ ಓದಿ: ಚಾರ್ಮಾಡಿ ಘಾಟಿಯ ಬಂಡೆಗಳ ಮೇಲೆ ಪ್ರವಾಸಿಗರ ಮೋಜು-ಮಸ್ತಿ- ಸೂಕ್ತ ಕ್ರಮಕ್ಕೆ ಮನವಿ

    ಈ ಸ್ಫೋಟದಿಂದಾಗಿ ರೈತರ ಜಮೀನುಗಳಿಗೆ ಆ ಬೃಹತ್ ಗಾತ್ರದ ಕಲ್ಲುಗಳು ಬಂದು ಬಿದ್ದಿದೆ. ನಿಯಮಗಳನ್ನು ಮೀರಿ ಕಲ್ಲು ಕ್ವಾರಿಯಲ್ಲಿ ಭಾರೀ ಪ್ರಮಾಣದಲ್ಲಿ ಸ್ಫೋಟವಾಗುತ್ತಿದೆ. ಇದರಿಂದ ಬಹಳಷ್ಟು ತೊಂದರೆ ಆಗುತ್ತಿದೆ. ಈ ಕಲ್ಲು ಕ್ವಾರಿಗಳು ನಡೆಯುತ್ತಿರುವ ಜಾಗಕ್ಕೆ ಪ್ರಾಣಿಗಳು, ಅಥವಾ ಮನುಷ್ಯರು ಹೋದರೆ ಅವರ ಜೀವಕ್ಕೆ ಹಾನಿ ಆಗುವಷ್ಟು ಆಪತ್ತು ಇದೆ. ಈ ಬಗ್ಗೆ ಇನ್ನಾದರೂ ಇಲಾಖೆ ಕ್ರಮ ತೆಗೆದುಕೊಳ್ಳುತ್ತವೆಯಾ ಎಂದು ಕಾದು ನೋಡಬೇಕಾಗಿದೆ. ಇದನ್ನೂ ಓದಿ: ರಾಜಧಾನಿಯಲ್ಲಿ ಪ್ರಯಾಣಿಕರಿಗೆ ತಟ್ಟಲಿದೆ ಡೀಸೆಲ್ ಕೊರತೆ ಬಿಸಿ – ಬಸ್ ಸಂಚಾರದಲ್ಲಿ ವ್ಯತ್ಯಯ

    Live Tv

  • ಕ್ವಾರಿಯಲ್ಲಿ ಗುಡ್ಡ ಕುಸಿತ – 4 ಗಂಟೆಗೂ ಹೆಚ್ಚು ಕಾಲ ಬಂಡೆಯಡಿ ಸಿಲುಕಿ ಬದುಕುಳಿದಾತನಿಗೆ ಮುಂದುವರಿದ ಚಿಕಿತ್ಸೆ

    ಕ್ವಾರಿಯಲ್ಲಿ ಗುಡ್ಡ ಕುಸಿತ – 4 ಗಂಟೆಗೂ ಹೆಚ್ಚು ಕಾಲ ಬಂಡೆಯಡಿ ಸಿಲುಕಿ ಬದುಕುಳಿದಾತನಿಗೆ ಮುಂದುವರಿದ ಚಿಕಿತ್ಸೆ

    ಚಾಮರಾಜನಗರ: ಜಿಲ್ಲೆಯ ಗುಂಡ್ಲುಪೇಟೆಯ ಗುಮ್ಮಕಲ್ಲುಗುಡ್ಡ ಗಣಿ ಕುಸಿತ ಸ್ಥಳದಲ್ಲಿ ತೆರವು ಕಾರ್ಯಾಚರಣೆ ಮುಂದುವರಿದಿದ್ದು, ಎನ್‍ಡಿಆರ್‌ಎಫ್ ಪಡೆಗಳು ಹರಸಾಹಸ ಮಾಡಿ ಈವರೆಗೂ ಒಬ್ಬರ ಶವ ಹೊರ ತೆಗೆದಿದ್ದಾರೆ.

    ನಿನ್ನೆ ಬಂಡೆಯಡಿ 4 ಗಂಟೆಗೂ ಹೆಚ್ಚು ಕಾಲ ಸಿಲುಕಿ ಬದುಕುಳಿದಿದ್ದ ನೂರುದ್ದೀನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡಿಯುತ್ತಿದ್ದಾರೆ. ಬೃಹತ್ ಕಲ್ಲುಗಳ ಅಡಿ ಇನ್ನೂ ಇಬ್ಬರು ಕಾರ್ಮಿಕರು ಸಿಲುಕಿರುವ ಶಂಕೆ ಇದೆ. ಆದರೆ ನಿನ್ನೆ ಗುಡ್ಡ ಕುಸಿತ ವೇಳೆ 20ಕ್ಕೂ ಹೆಚ್ಚು ಕಾರ್ಮಿಕರಿದ್ದರು ಅಂತ ಪ್ರತ್ಯಕ್ಷದರ್ಶಿ ಹೇಳಿಕೆ ನೀಡಿದ್ದಾರೆ.‌ ಇದನ್ನೂ ಓದಿ: ಕ್ವಾರಿಯಲ್ಲಿ ಗುಡ್ಡ ಕುಸಿತ- ಮೂವರ ವಿರುದ್ಧ ಕೇಸ್ ದಾಖಲು

    ಗಣಿ ಗುತ್ತಿಗೆ ಪಡೆದಿದ್ದ ಮಹೇಂದ್ರಪ್ಪ, ಉಪಗುತ್ತಿಗೆ ಪಡೆದಿದ್ದ ಹಕೀಂ, ಗಣಿ ನೋಡಿಕೊಳ್ಳುತ್ತಿದ್ದ ನವೀದ್ ವಿರುದ್ಧ ಗಣಿ, ಭೂ ವಿಜ್ಞಾನ ಇಲಾಖೆ ದೂರು ದಾಖಲಿಸಿದೆ. ಮೂವರ ಪೈಕಿ ನವೀದ್‍ನನ್ನು ಪೊಲೀಸರು ಬಂಧಿಸಿದ್ದು, ಇನ್ನಿಬ್ಬರಿಗಾಗಿ ಹುಡುಕಾಟ ನಡೆಸಿದ್ದಾರೆ. ಇದನ್ನೂ ಓದಿ: ಗುಂಡ್ಲುಪೇಟೆಯಲ್ಲಿ ಕೆಲಸ ಮಾಡುತ್ತಿದ್ದಾಗಲೇ ಗುಡ್ಡ ಕುಸಿತ – ಇಬ್ಬರು ಗಣಿ ಕಾರ್ಮಿಕರು ಸಾವು?

    ಈ ನಡುವೆ ನಾಳೆಯಿಂದ ಒಂದು ತಿಂಗಳು ಚಾಮರಾಜನಗರದ ಎಲ್ಲಾ ಕ್ವಾರಿಗಳ ಸ್ಥಗಿತಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಸೋಮಣ್ಣ ಸೂಚಿಸಿದರು. ಕಾರ್ಯಾಚರಣೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ವೇಳೆ ಸಚಿವರಿಗೆ ಸ್ಥಳೀಯರು ತರಾಟೆ ತೆಗೆದುಕೊಂಡರು. ಸಚಿವರ ಕಾರ್‌ಗೆ ಅಡ್ಡ ಮಲಗಲು ನೋಡಿದ ಆಕ್ರೋಶಿತನೊಬ್ಬನನ್ನು ಪೊಲೀಸರು ಹೊತ್ತೊಯ್ಯಬೇಕಾಯ್ತು.

  • ಕ್ವಾರಿಯಲ್ಲಿ ಈಜಲೆಂದು ಮೇಲಿಂದ ಜಿಗಿದ ಯುವಕ ದುರ್ಮರಣ

    ಕ್ವಾರಿಯಲ್ಲಿ ಈಜಲೆಂದು ಮೇಲಿಂದ ಜಿಗಿದ ಯುವಕ ದುರ್ಮರಣ

    ಯಾದಗಿರಿ: ಕಲ್ಲಿನ ಕ್ವಾರಿಯಲ್ಲಿ ಈಜಲು ಹೋಗಿ ಯುವಕನೊಬ್ಬ ದಾರುಣವಾಗಿ ಸಾವನ್ನಪ್ಪಿದ ಘಟನೆ ಯಾದಗಿರಿಯಲ್ಲಿ ನಡೆದಿದೆ.

    ಮೃತ ಯುವಕನನ್ನು ನಾಯ್ಕಲ್ ಗ್ರಾಮದ 24 ವರ್ಷದ ರುದ್ರಗೌಡ ಎಂದು ಗುರುತಿಸಲಾಗಿದೆ. ಮೃತ ರುದ್ರಗೌಡ ಶನಿವಾರ ಬೆಳಗ್ಗೆ ಸುಮಾರು 11 ಗಂಟೆಗೆ ವಡಗೇರಾ ತಾಲೂಕಿನ ಗುರುಸಣಗಿ ಗ್ರಾಮದ ಹತ್ತಿರದಲ್ಲಿರುವ ಕಲ್ಲಿನ ಕ್ವಾರಿಯಲ್ಲಿ ಈಜಲು ಹೋಗಿದ್ದ ಎನ್ನಲಾಗಿದೆ.

    ಕ್ವಾರಿಯಲ್ಲಿ ಈಜಲು ರುದ್ರಗೌಡ ಮೇಲಿಂದ ಕೆಳಗೆ ಜಿಗಿದಿದ್ದಾನೆ. ಆದರೆ ಮೇಲಿಂದ ಬೀಳುವಾಗ ಕ್ವಾರಿಯಲ್ಲಿನ ಕಲ್ಲಿಗೆ ತೆಲೆತಾಗಿ ಸ್ಥಳದಲ್ಲೇ ರುದ್ರಗೌಡ ಮೃತಪಟ್ಟಿದ್ದಾನೆ. ಈ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ಪೊಲೀಸರು ಬಂದು ಯುವಕನ ಮೃತದೇಹವನ್ನು ಮೇಲೆತ್ತಿದ್ದಾರೆ. ಬಳಿಕ ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ.

    ಈ ಕುರಿತು ವಡಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಕ್ವಾರಿಯಲ್ಲಿ ಈಜಲು ಹೋಗಿ ಯುವಕ ನೀರು ಪಾಲು

    ಕ್ವಾರಿಯಲ್ಲಿ ಈಜಲು ಹೋಗಿ ಯುವಕ ನೀರು ಪಾಲು

    ಬೆಂಗಳೂರು: ಈಜಲು ಹೋಗಿ ಯುವಕನೊಬ್ಬ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಬೆಂಗಳೂರು ಹೊರವಲಯ ಆನೇಕಲ್ ಬಳಿಯ ಜಿಗಣಿ ಸಮೀಪದ ಕಲ್ಲುಬಾಳ ಗ್ರಾಮದಲ್ಲಿರುವ ಬಾಲರ್ ಬಂಡೆ ಕ್ವಾರಿಯಲ್ಲಿ ನಡೆದಿದೆ.

    ನರೇಶ್ (18) ಕ್ವಾರಿಯಲ್ಲಿ ಈಜಲು ಹೋಗಿ ಮೃತಪಟ್ಟ ಯುವಕ.

    ಶುಕ್ರವಾರ ಸಂಜೆ ಸುಮಾರು 4.30ಕ್ಕೆ ನರೇಶ್ ಮತ್ತು ಆತನ ಜೊತೆ 8 ಜನ ಸ್ನೇಹಿತರು ಕಲ್ಲುಬಾಳು ಗ್ರಾಮದಲ್ಲಿರುವ ಬಾಲರ್ ಬಂಡೆ ಕ್ವಾರಿಯಲ್ಲಿ ಈಜುಲು ಹೋಗಿದ್ದಾರೆ. ಮೊದಲು ನರೇಶ್ ಜೊತೆ ಮೂವರು ಸ್ನೇಹಿತರು ಈಜಲು ಹೋಗಿದ್ದಾರೆ. ಆದರೆ ಕಲ್ಲು ಕ್ವಾರಿ ಸುಮಾರು 30-40 ಅಡಿ ಆಳ ಇದ್ದುದ್ದರಿಂದ ನರೇಶ್ ನೀರಿನಲ್ಲಿ ಮುಳುಗಿ ಹೋಗಿದ್ದಾನೆ. ನಂತರ ಸ್ನೇಹಿತರೆಲ್ಲರೂ ಭಯಗೊಂಡು ಓಡಿ ಹೋಗಿ ಪೋಷಕರಿಗೆ ವಿಚಾರ ತಿಳಿಸಿದ್ದಾರೆ.

    ಪೋಷಕರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸ್ ಸಿಬ್ಬಂದಿ ಅಗ್ನಿಶಾಮಕ ದಳದ ಜೊತೆ ಕ್ವಾರಿಯ ಬಳಿ ಹೋಗಿ ಶವಕ್ಕಾಗಿ ಶೋಧ ಕಾರ್ಯವನ್ನು ಪ್ರಾರಂಭಿಸಿದ್ದಾರೆ. ಆದರೆ ಕತ್ತಲಾಗಿದ್ದರಿಂದ ಹುಡುಕಾಟ ಮಾಡಲು ಸಾಧ್ಯವಾಗದೆ ಇಂದು ಬೆಳಿಗ್ಗೆ ಸುಮಾರು 11 ಗಂಟೆಗೆ ಶವ ಪತ್ತೆಯಾಗಿದೆ.

    ಮರಣೋತ್ತರ ಪರೀಕ್ಷೆಗಾಗಿ ಶವವನ್ನು ಆನೇಕಲ್ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಈ ಘಟನೆಯ ಸಂಬಂಧ ಜಿಗಣಿ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿದ್ದಾರೆ.

  • ರಾಮಲಿಂಗಂ ಕಂಪನಿಯಿಂದ ರಾಜ್ಯದ ಸಂಪತ್ತು ಲೂಟಿ- ಅಕ್ರಮವಾಗಿ ಬೆಟ್ಟವನ್ನೇ ಅಗೆದು ಕರಗಿಸಿದ್ರು

    ರಾಮಲಿಂಗಂ ಕಂಪನಿಯಿಂದ ರಾಜ್ಯದ ಸಂಪತ್ತು ಲೂಟಿ- ಅಕ್ರಮವಾಗಿ ಬೆಟ್ಟವನ್ನೇ ಅಗೆದು ಕರಗಿಸಿದ್ರು

    ಚಿಕ್ಕಬಳ್ಳಾಪುರ: ರಾಮಲಿಂಗಂ ಕನ್ಸ್ಟ್ರಕ್ಷನ್ಸ್ ಕಂಪನಿ. ತಮಿಳುನಾಡು ಮೂಲದ ದೊಡ್ಡ ಕಂಪನಿ. ರಸ್ತೆ ಮಾಡ್ತಿದ್ದೇವೆ, ರಸ್ತೆಗೆ ಬೇಕಾದ ಕಲ್ಲು ಪುಡಿ ತಯಾರಿ ಘಟಕ ಮಾಡಲು ಘಟಕ ಸ್ಥಾಪನೆಗೆ ಸ್ವಲ್ಪ ಜಾಗ ಕೊಡಿ ಅಂತ ಗೋಮಾಳದ ಜಾಗ ಪಡೆದಿತ್ತು. ಆದ್ರೆ ಕಲ್ಲು ಪುಡಿ ಘಟಕ ಆರಂಭ ಮಾಡಿದ ಕಂಪನಿ ಆ ಜಾಗದ ಪಕ್ಕದಲ್ಲೇ ಇದ್ದ ಬೃಹತ್ ಬೆಟ್ಟವನ್ನೇ ಅಕ್ರಮವಾಗಿ ಕರಗಿಸಿಬಿಟ್ಟಿದೆ.

    ಇದು ನಡೆದಿರೋದು ಚಿಕ್ಕಬಳ್ಳಾಪುರ ಜಿಲ್ಲೆ ಬಸವನಹಳ್ಳಿಯ ಸರ್ವೆ ನಂ 37ರ ಗೋಮಾಳ ಜಮೀನಿನಲ್ಲಿ. ಯಲಹಂಕದಿಂದ-ಚಿಕ್ಕಬಳ್ಳಾಪುರ ಜಿಲ್ಲೆಯ ಕುಡಮಲಕುಂಟೆ ಕೈಗಾರಿಕಾ ಪ್ರದೇಶದವರೆಗಿನ ರಾಜ್ಯ ಹೆದ್ದಾರಿ 9ರ ನಿರ್ಮಾಣ ಕಾರ್ಯವನ್ನ ಗುತ್ತಿಗೆ ಪಡೆದಿರೋ ರಾಮಲಿಂಗಂ ಕಂಪನಿ, ಗೋಮಾಳದ ಭೂಮಿಯಲ್ಲಿ ಜಲ್ಲಿ ಕಲ್ಲು ಪುಡಿ ಘಟಕ ಸ್ಥಾಪನೆಗೆ ತಾತ್ಕಾಲಿಕ ಅನುಮತಿ ಪಡೆದಿದೆ. ಜೊತೆಗೆ ಗೋಮಾಳದ ಪಕ್ಕದಲ್ಲೇ ಇದ್ದ ಬೃಹತ್ ಬೆಟ್ಟವನ್ನೇ ಅಕ್ರಮವಾಗಿ ನುಂಗಿಬಿಟ್ಟಿದೆ. ಈ ಮೂಲಕ ಕೋಟಿ ಕೋಟಿ ಸಂಪತ್ತನ್ನು ಕೊಳ್ಳೆ ಹೊಡೆದಿದೆ.

    ಇನ್ನು ತಾತ್ಕಾಲಿಕ ಪರವಾನಗಿ ಅವಧಿ ಮುಗಿದು 2 ತಿಂಗಳಾಗುತ್ತಾ ಬಂದಿದ್ರೂ ಆರ್‍ಸಿಸಿಎಲ್ ಕಂಪನಿ ಅಕ್ರಮವಾಗಿ ರಾಜಾರೋಷವಾಗಿ ಲೂಟಿ ಮುಂದುವರೆಸಿದೆ. ಜೊತೆಗೆ ಇದೇ ಜಾಗದಲ್ಲಿ ಕ್ವಾರಿಗೆ ಅನುಮತಿ ನೀಡಿ ಅಂತ ಸರ್ಕಾರದ ಕಡೆಯಿಂದ ನೋಟಿಫಿಕೇಷನ್ ಮಾಡಿಸಿಕೊಂಡಿದೆ. ಆದ್ರೆ ಅದರ ಕಾರ್ಯಾದೇಶ ಪಡೆದಿಲ್ಲ. ಆದ್ರೂ ಕ್ವಾರಿ ಕಾಮಗಾರಿ ನಡೆಸ್ತಿದೆ.

    ಅವಧಿ ಮುಗಿದ ಕಾರಣ ಕಲ್ಲು ಪುಡಿ ಘಟಕ ಸ್ಥಗಿತಕ್ಕೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನೋಟಿಸ್ ನೀಡಿದ್ರೂ ಕಲ್ಲು ಪುಡಿ ಘಟಕ ನಿಂತಿಲ್ಲ. ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ತೆರಳಿದ ಪಬ್ಲಿಕ್ ಟಿವಿ ಸಿಬ್ಬಂದಿಗೆ ಆರ್‍ಸಿಎಲ್ ಕಡೆಯವ್ರು ಹಾಕಿದ್ದು ಅಪ್ಪಟ ಧಮಕಿ.

    ಗ್ರಾಮಪಂಚಾಯ್ತಿಯಿಂದ ಹಿಡಿದು ಸರ್ಕಾರದ ಮಟ್ಟದವರೆಗೂ ಎಲ್ರಿಗೂ ರಾಮಲಿಂಗಂ ಕಂಪನಿ ಅಕ್ರಮದ ಬಗ್ಗೆ ಗೊತ್ತಿದೆ. ಆದ್ರೆ ಯಾರು ತುಟಿ ಬಿಚ್ತಾನೆ ಇಲ್ಲ.

  • ಉಡುಪಿಯಲ್ಲಿ ಸರ್ಕಾರಿ ಸ್ವಾಮ್ಯದ ಕ್ವಾರಿಗೆ ಬಿದ್ದು ತಾಯಿ-ಮಗ ಸಾವು!

    ಉಡುಪಿಯಲ್ಲಿ ಸರ್ಕಾರಿ ಸ್ವಾಮ್ಯದ ಕ್ವಾರಿಗೆ ಬಿದ್ದು ತಾಯಿ-ಮಗ ಸಾವು!

    – ಮುಗಿಲುಮುಟ್ಟಿದ ತಂದೆಯ ಆಕ್ರಂದನ

    ಉಡುಪಿ: ಬೆಳಗಾವಿಯ ಅಥಣಿಯಲ್ಲಿ ಕೊಳವೆ ಬಾವಿಗೆ 6 ವರ್ಷದ ಬಾಲಕಿ ಬಿದ್ದು ಮೃತಪಟ್ಟ ಘಟನೆ ಮಾಸುವ ಮುನ್ನವೇ ಉಡುಪಿಯಲ್ಲಿ ಮತ್ತೊಂದು ದುರ್ಘಟನೆ ನಡೆದಿದೆ. ಬಟ್ಟೆ ಒಗೆಯಲು ಹೋಗಿದ್ದ ತಾಯಿ ಮಗುವನ್ನು ಕಲ್ಲು ಕ್ವಾರಿ ಬಲಿ ಪಡೆದಿದೆ.

    ನಡೆದಿದ್ದೇನು?: ಉಡುಪಿಯ ಅಲೆವೂರಿನ ಪೆರುಪಾದೆ ಸರ್ಕಾರಿ ಸ್ವಾಮ್ಯದ ಕಲ್ಲಿನ ಕ್ವಾರಿ ಬಾಗಲಕೋಟೆ ಮೂಲದ ದ್ಯಾಮವ್ವ ಮತ್ತು ಹನುಮಂತ ಬಿದ್ದು ಮುಳುಗಿ ಮೃತಪಟ್ಟಿದ್ದಾರೆ. ಬಟ್ಟೆ ಒಗೆಯಲು ಹೋದ ದ್ಯಾಮವ್ವ ನಾಲ್ಕು ವರ್ಷದ ಮಗನನ್ನು ಬಂಡೆಯ ಮೇಲೆ ಆಟವಾಡಲು ಬಿಟ್ಟಿದ್ದರು. ಹನುಮಂತ ಆಟವಾಡುತ್ತಾ ಕಲ್ಲಿನ ಕ್ವಾರಿಗೆ ಬಿದ್ದಿದ್ದಾನೆ. ಮಗ ನೀರಿಗೆ ಬಿದ್ದ ತಕ್ಷಣ ರಕ್ಷಿಸಲು ಹೋದ ತಾಯಿ ಕೂಡಾ ಮುಳುಗಿದ್ದಾರೆ. ತಾಯಿ-ಮಗು ಮುಳುಗುವುದನ್ನು ಕಂಡು ರಕ್ಷಿಸಲು ಸ್ಥಳೀಯರು ಹೋಗುವಷ್ಟರಲ್ಲಿ ಸಂಪೂರ್ಣ ಮುಳುಗಿ ಮೃತಪಟ್ಟಿದ್ದಾರೆ.

    ಘಟನೆ ನಡೆದು ಸುಮಾರು 1 ಗಂಟೆ ಬಿಟ್ಟು ಅಗ್ನಿಶಾಮಕ ದಳ ಬೋಟ್ ಜೊತೆ ಬಂತು. ಆ ತಂಡದಲ್ಲಿ ಮುಳುಗು ತಜ್ಞರೇ ಇರಲಿಲ್ಲ. ಗರುಡಪಾತಾಳ ಹಾಕಿ ಮೃತದೇಹ ಹುಡುಕಲು ಯತ್ನಿಸಿದಾಗ ಅದು ಸಾಧ್ಯವಾಗಲಿಲ್ಲ. ಅಗ್ನಿಶಾಮಕ ಅಧಿಕಾರಿಗಳ ಅಸಹಾಯಕತೆ ಕಂಡು ಸ್ಥಳೀಯ ಮುಳುಗು ತಜ್ಞರನ್ನು ಕರೆಸಲಾಯ್ತು. ಮೂವರು ಮುಳುಗು ತಜ್ಞರು ಬಂದು ಸುಮಾರು 15 ನಿಮಿಷಗಳ ಕಾಲ ಹುಡುಕಾಟ ನಡೆಸಿದರು. ಕ್ವಾರಿಯಲ್ಲಿ ಪಾಚಿ ತುಂಬಿಕೊಂಡಿದೆ. ಹಳೆಯ ಬಟ್ಟೆಗಳ ರಾಶಿಯೇ ಇದೆ. ಆಳದಲ್ಲಿ ಎರಡು ಮೃತದೇಹಗಳು ಸಿಲುಕಿದ್ದು, ಸದ್ಯ ಮೃತದೇಹಗಳನ್ನ ಮೇಲಕ್ಕೆತ್ತಿದ್ದೇವೆ ಅಂತಾ ಮುಳುಗು ತಜ್ಞರಾದ ಅಶೋಕ್ ಶೆಟ್ಟಿ, ನಿತೇಶ್, ಪ್ರಭಾಕರ್ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ರು.

    ಅಗ್ನಿಶಾಮಕದಳದ ಅಸಹಾಯಕತೆಗೆ ಸ್ಥಳೀಯರು ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು. ತಂಡದಲ್ಲಿ 10-15 ಮಂದಿ ಇದ್ದರು. ಅದರಲ್ಲಿ ಒಬ್ಬನೂ ಈಜುಗಾರ ಇರಲಿಲ್ಲ ಎಂಬುದು ವಿಪರ್ಯಾಸ. ಇವರು ದೋಣಿಯಲ್ಲಿ ಕಬ್ಬಿಣದ ಸಲಾಕೆಗಳನ್ನು ಎಸೆದು ಹುಡುಕಾಟ ಮಾಡಿದರು. ಒಬ್ಬ ಸಿಬ್ಬಂದಿಯೂ ನೀರಿಗೆ ಇಳಿಯಲಿಲ್ಲ. ಈಜಲು- ಮುಳುಗಲು ಬಾರದವರನ್ನು ಅಗ್ನಿಶಾಮಕ ಇಲಾಖೆಗೆ ಆಯ್ಕೆ ಮಾಡಿದ್ದು ಯಾಕೆ?, ಸರ್ಕಾರ ಕೂಡಲೇ ಈ ಬಗ್ಗೆ ಗಮನ ಹರಿಸಬೇಕು. ಪರಿಣತರನ್ನು ಇಲಾಖೆಗೆ ಸೇರಿಸಬೇಕು ಎಂದು ಸ್ಥಳೀಯ ಅಲೆವೂರು ಗ್ರಾಮ ಪಂಚಾಯತ್ ಸದಸ್ಯ ಹರೀಶ್ ಸೇರಿಗಾರ್ ಆಕ್ರೋಶ ವ್ಯಕ್ತಪಡಿಸಿದರು.

    ಮುಗಿಲುಮುಟ್ಟಿದ ಆಕ್ರಂದನ: ದ್ಯಾಮವ್ವನ ಗಂಡ ಯಮುನಪ್ಪ ಹಾಸಂಗಿಗೆ ಮಾತು ಬರಲ್ಲ. ಕಿವಿನೂ ಕೇಳಿಸಲ್ಲ. ಮೃತದೇಹಗಳ ಪಕ್ಕ ಯಮುನಪ್ಪ ಕುಳಿತು ರೋಧಿಸುತ್ತಿದ್ದುದ್ದು ನೆರೆದವರ ಮನ ಕಲಕುವಂತಿತ್ತು. ಕಳೆದ ಮೂವತ್ತು ವರ್ಷಗಳಿಂದ ಇಬ್ಬರ ಕುಟುಂಬ ಉಡುಪಿಯಲ್ಲಿ ಕೂಲಿ ಕೆಲಸಕ್ಕೆಂದು ಬಂದಿತ್ತು. ಇಬ್ಬರಿಗೂ ಇಲ್ಲೇ ಮದುವೆಯಾಗಿತ್ತು. ಎರಡೂ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿತ್ತು.

    ಜಿಲ್ಲೆಯಾದ್ಯಂತ ಸರ್ಕಾರ ನೂರಾರು ಬಂಡೆ ಕಲ್ಲು ಕ್ವಾರಿಗಳಿಗೆ ಪರವಾನಿಗೆ ನೀಡಿದೆ. ಕಲ್ಲು ತೆಗೆದು ಖಾಲಿಯಾದಾಗ ಕ್ವಾರಿಯನ್ನು ಹಾಗೆಯೇ ಬಿಟ್ಟು ಹೋಗಲಾಗುತ್ತದೆ. ಸುತ್ತಲೂ ತಡೆಗೋಡೆ ನಿರ್ಮಾಣ ಮಾಡಿಲ್ಲ. ಯಾವುದೇ ಮುನ್ನೆಚ್ಚರಿಕಾ ಬೋರ್ಟ್ ಅಳವಡಿಸಿಲ್ಲ. ಜಿಲ್ಲೆಯಾದ್ಯಂತ ನೂರಾರು ಕಲ್ಲುಕ್ವಾರಿಗಳಿದ್ದು ಎಲ್ಲವೂ ಹೀಗೆಯೇ ತೆರೆದುಕೊಂಡಿದೆ. ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಜವಾಬ್ದಾರಿ ಇದು. ನಿದ್ದೆ ಮಾಡುತ್ತಿರುವ ಸರ್ಕಾರ ಎಚ್ಚೆತ್ತುಕೊಳ್ಳಬೇಕು. ಮಳೆಗಾಲ ಆರಂಭಕ್ಕೆ ಮುನ್ನ ಸೂಕ್ತ ಕ್ರಮ ಕೈಗೊಳ್ಳಬೇಕು ಅಂತಾ ಸ್ಥಳೀಯರು ಒತ್ತಾಯಿಸಿದ್ದಾರೆ.

    https://www.youtube.com/watch?v=58cJh_BFu7Y