Tag: Quarantine center

  • ಸೌಲಭ್ಯವಿಲ್ಲ ಊರಿಗೆ ಕಳುಹಿಸಿ ಎಂದ ಸೋಂಕಿತರ ಮನವೊಲಿಸಿದ ಶಾಸಕ ಬಾಲಕೃಷ್ಣ

    ಸೌಲಭ್ಯವಿಲ್ಲ ಊರಿಗೆ ಕಳುಹಿಸಿ ಎಂದ ಸೋಂಕಿತರ ಮನವೊಲಿಸಿದ ಶಾಸಕ ಬಾಲಕೃಷ್ಣ

    ಹಾಸನ: ಕ್ವಾರಂಟೈನ್ ಕೇಂದ್ರದಲ್ಲಿ ಸರಿಯಾದ ವ್ಯವಸ್ಥೆಯಿಲ್ಲ ನಮ್ಮನ್ನು ಊರಿಗೆ ಕಳುಹಿಸಿ ಎಂದು ಕೇಳಿಕೊಂಡ ಸೋಂಕಿತರ ಬಳಿ ತೆರಳಿದ ಶಾಸಕ ಬಾಲಕೃಷ್ಣ, ನೀವು ಊರಿಗೆ ಹೋದ ತಕ್ಷಣ ಅಕ್ಕಪಕ್ಕದ ಮನೆಯವರು ಬೇರೆ ರೀತಿ ನಿಮ್ಮನ್ನು ನೋಡಬಹುದು, ಹೀಗಾಗಿ ದಯವಿಟ್ಟು ಸಹಕರಿಸಿ ಎಂದು ಮನವಿ ಮಾಡಿದ ಘಟನೆ ಹಾಸನ ಜಿಲ್ಲೆಯ, ಚನ್ನರಾಯಪಟ್ಟಣದಲ್ಲಿ ನಡೆದಿದೆ.

    ಕೊರೊನಾ ರೋಗ ಲಕ್ಷಣಗಳು ಇಲ್ಲದೆ ಪಾಸಿಟಿವ್ ಬಂದಿರುವವರನ್ನು ತಾಲೂಕು ಕೇಂದ್ರದಲ್ಲೇ ಪ್ರತ್ಯೇಕ ವ್ಯವಸ್ಥೆ ಮಾಡಿ ಕ್ವಾರಂಟೈನ್ ಮಾಡಲಾಗಿದೆ. ಚನ್ನರಾಯಪಟ್ಟಣ ತಾಲೂಕಿನ ಕ್ವಾರಂಟೈನ್ ಕೇಂದ್ರದಲ್ಲಿ ಬಿಸಿನೀರು, ಮಾಸ್ಕ್ ಸಿಗುತ್ತಿಲ್ಲ. ಕರೆಂಟ್ ಕೂಡ ಇಲ್ಲ ಎಂದು ಆಕ್ರೋಶ ಹೊರಹಾಕಿದ್ದ ಸೋಂಕಿತರು, ಕ್ವಾರಂಟೈನ್ ಕೇಂದ್ರದಿಂದ ನಮ್ಮನ್ನು ಊರಿಗೆ ಕಳುಹಿಸಿ ಎಂದು ಪಟ್ಟು ಹಿಡಿದಿದ್ದರು.

    ವಿಚಾರ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಶಾಸಕ ಬಾಲಕೃಷ್ಣ, ಸರಿಯಾದ ವ್ಯವಸ್ಥೆ ಮಾಡದಿದ್ದರೆ ಅದನ್ನೆಲ್ಲ ವಿಡಿಯೋ ಮಾಡಿ ವಾಟ್ಸಪ್‍ನಲ್ಲಿ ಹಾಕುತ್ತಾರೆ. ಆರೋಗ್ಯ ಇಲಾಖೆಯವರೇ ಉತ್ತಮ ಸೌಲಭ್ಯ ಕೊಡದೆ ಹಿಂದೆ ಸರಿದರೆ ಹೇಗೆ ಎಂದು ಕ್ವಾರಂಟೈನ್ ಕೇಂದ್ರದಲ್ಲಿ ಕೆಲಸ ನಿರ್ವಹಿಸುತ್ತಿರುವ ಸಿಬ್ಬಂದಿಗೆ ತಿಳಿಹೇಳಿದ್ದಾರೆ. ನಂತರ ಕ್ವಾರಂಟೈನ್‍ನಲ್ಲಿ ಇರುವವರನ್ನು ದಯವಿಟ್ಟು ಅಲ್ಪಸ್ವಲ್ಪ ಲೋಪದೋಷ ಇದ್ದರೆ ಸಹಕರಿಸಿ. ಎಲ್ಲವನ್ನೂ ಸರಿಪಡಿಸಿಕೊಡುತ್ತೇನೆ ಎಂದು ಮನವಿ ಮಾಡಿಕೊಂಡಿದ್ದಾರೆ.

    ಈಗಾಗಲೇ 6 ಎಲೆಕ್ಟ್ರಿಕಲ್ ಗ್ಯಾಸ್ ಗೀಸರ್ ಗಳು ಮತ್ತು ಬಟ್ಟೆ ತೊಳೆಯುವ ವಾಷಿಂಗ್ ಯಂತ್ರವನ್ನು ತರಿಸಿಕೊಡಲು ವ್ಯವಸ್ಥೆ ಮಾಡಿದ್ದೇನೆ. ಬಲ್ಬ್‌ಗಳಿಗೂ ವ್ಯವಸ್ಥೆ ಮಾಡಲಾಗಿದೆ. ನಾಳೆ ಬೆಳಗ್ಗೆಯೇ ಎಲ್ಲ ವ್ಯವಸ್ಥೆ ಸರಿಯಾಗಲಿದೆ. ಆಸ್ಪತ್ರೆಯಿಂದ ನೀವು ಗುಣಮುಖರಾದ ರಿಪೋರ್ಟ್ ಕೊಟ್ಟು ಸಹಿ ಮಾಡಿಸಿ ಕಳುಹಿಸಿ ಕೊಡುವವರೆಗೂ ಸಹಕರಿಸಿ ಎಂದಿದ್ದಾರೆ. ಜೊತೆಗೆ ಡ್ರೈ ಪ್ರೂಟ್ಸ್‌ ಹಾಗೂ ಬೇಕರಿ ಪದಾರ್ಥಗಳನ್ನು ತರಿಸಿಕೊಟ್ಟು ಧೈರ್ಯ ತುಂಬಿದ್ದಾರೆ.

  • ಕ್ವಾರಂಟೈನ್ ಕೇಂದ್ರದಲ್ಲೇ ಕೊರೊನಾ ಸೋಂಕಿತ 14ರ ಬಾಲಕಿ ಮೇಲೆ ಅತ್ಯಾಚಾರ

    ಕ್ವಾರಂಟೈನ್ ಕೇಂದ್ರದಲ್ಲೇ ಕೊರೊನಾ ಸೋಂಕಿತ 14ರ ಬಾಲಕಿ ಮೇಲೆ ಅತ್ಯಾಚಾರ

    ನವದೆಹಲಿ: ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡಲು ಆರಂಭಿಸಿರುವ ಕ್ವಾರಂಟೈನ್ ಕೇಂದ್ರದಲ್ಲಿ 14 ವರ್ಷದ ಅಪ್ರಾಪ್ತ ಬಾಲಕಿ ಮೇಲೆ ಯುವಕ ಅತ್ಯಾಚಾರ ಎಸಗಿದ್ದಾನೆ.

    ಬಾಲಕಿ ಶೌಚಾಲಯಕ್ಕೆ ತೆರಳಿದ್ದ ಸಂದರ್ಭದಲ್ಲಿ 19 ವರ್ಷದ ಕೊರೊನಾ ಸೋಂಕಿತ ಯುವಕ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಈ ಘಟನೆಯನ್ನು ಮತ್ತೊಬ್ಬ ಕೊರೊನಾ ರೋಗಿ ಮೊಬೈಲ್ ಫೋನ್‍ನಲ್ಲಿ ಚಿತ್ರೀಕರಿಸಿದ್ದಾನೆ. ಅಲ್ಲದೇ ಕೃತ್ಯಕ್ಕೆ ಸಹಕಾರ ನೀಡಿ ಯಾರು ಬಾರದಂತೆ ನೋಡಿಕೊಂಡಿದ್ದಾನೆ.

    ಘಟನೆ ನಡೆದ ಬಳಿಕ ಬಾಲಕಿ ಭಯದಿಂದ ತನ್ನ ಹಾಸಿಕೆ ಕಡೆ ಮರಳಿದ್ದು, ಮರುದಿನ ತನ್ನೊಂದಿಗಿದ್ದ ಇತರೇ ಬಾಲಕಿಯರಿಗೆ ಕೃತ್ಯದ ಬಗ್ಗೆ ತಿಳಿಸಿದ್ದಾಳೆ. ಆ ಬಳಿಕ ಬಾಲಕಿಯ ಗೆಳತಿಯರು ಆರೋಪಿಗಳ ದುಷ್ಕೃತ್ಯದ ಬಗ್ಗೆ ಕ್ವಾರಂಟೈನ್ ಕೇಂದ್ರದ ನಿರ್ವಹಕರಿಗೆ ತಿಳಿಸಿದ್ದಾರೆ. ಘಟನೆ ಬಗ್ಗೆ ಮಾಹಿತಿ ಪಡೆದ ನಿರ್ವಹಕರು ಪೊಲೀಸರಿಗೆ ದೂರು ನೀಡಿದ್ದರು.

    ಸದ್ಯ ಆರೋಪಿಗಳ ವಿರುದ್ಧ ಪೋಕ್ಸೋ ಕಾಯ್ದೆ ಅಡಿ ದೂರು ದಾಖಲಿಸಲಾಗಿದೆ. ಕಾಮುಕರನ್ನು ವಶಕ್ಕೆ ಪಡೆದಿರುವ ಪೊಲೀಸರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದಾರೆ. ಆರೋಪಿಗಳು ಕೊರೊನಾದಿಂದ ಗುಣಮುಖರಾದ ಬಳಿಕ ಜೈಲಿಗೆ ಕಳುಹಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

    ಕ್ವಾರಂಟೈನ್ ಕೇಂದ್ರದಲ್ಲಿ 6 ರಿಂದ 7 ದಿನಗಳ ಕಾಲ ಆರೋಪಿಗಳು ಚಿಕಿತ್ಸೆ ಪಡೆಯುತ್ತಿದ್ದರು. ಈ ಸಂದರ್ಭದಲ್ಲಿ ಬಾಲಕಿಯೊಂದಿಗೆ ಮಾತನಾಡುತ್ತಿದ್ದರು. ಘಟನೆ ನಡೆದ ರಾತ್ರಿಯೂ ಬಾಲಕಿ ಶೌಚಾಲಯಕ್ಕೆ ತೆರಳುತ್ತಿದ್ದ ವೇಳೆ ಮಾತನಾಡಿದ್ದ ಆರೋಪಿ, ಮತ್ತೊಬ್ಬನ ಸಹಾಯ ಪಡೆದು ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದ ಎಂದು ಪೊಲೀಸರ ಪ್ರಾಥಮಿಕ ತನಿಖೆ ವೇಳೆ ತಿಳಿದು ಬಂದಿದೆ. ಘಟನೆಯಿಂದ ಕ್ವಾರಂಟೈನ್ ಕೇಂದ್ರದಲ್ಲಿರುವ ಮಹಿಳೆಯರು ಆತಂಕಗೊಂಡಿದ್ದಾರೆ. ಕೊರೊನಾದಿಂದ ಚೇತರಿಸಿಕೊಳ್ಳಲು ಕ್ವಾರಂಟೈನ್ ಕೇಂದ್ರಗಳಿಗೆ ಆಗಮಿಸಿದರೆ ಇಲ್ಲಿ ಕಾಮುಕರ ಆತಂಕ ಎದುರಾಗಿದೆ ಎಂದು ಮಹಿಳೆಯರು ಹೇಳಿದ್ದಾರೆ. ಇದು ದೆಹಲಿಯ ಕ್ವಾರಂಟೈನ್ ಕೇಂದ್ರದಲ್ಲಿ ವರದಿಯಾದ ಮೊದಲ ಲೈಂಗಿಕ ಕಿರುಕುಳದ ಪ್ರಕರಣವಾಗಿದೆ.

  • ವೈದ್ಯನೆಂದು ಸುಳ್ಳು ಹೇಳಿ ಮಸಾಜ್ ಮಾಡಲು ಸೋಂಕಿತೆಯ ಬಟ್ಟೆ ಬಿಚ್ಚಿದ- ಕ್ವಾರಂಟೈನ್ ಕೇಂದ್ರದಲ್ಲೇ ರೇಪ್

    ವೈದ್ಯನೆಂದು ಸುಳ್ಳು ಹೇಳಿ ಮಸಾಜ್ ಮಾಡಲು ಸೋಂಕಿತೆಯ ಬಟ್ಟೆ ಬಿಚ್ಚಿದ- ಕ್ವಾರಂಟೈನ್ ಕೇಂದ್ರದಲ್ಲೇ ರೇಪ್

    – 40 ವರ್ಷದ ಮಹಿಳೆಯ ಮೇಲೆ 25ರ ಯುವಕ ಅತ್ಯಾಚಾರ
    – ಮಸಾಜ್ ಮಾಡುತ್ತಾ ಅತ್ಯಾಚಾರ ಮಾಡಿ ರೂಮಿನಿಂದ ಎಸ್ಕೇಪ್

    ಮುಂಬೈ: ವೈದ್ಯ ಎಂದು ಸುಳ್ಳು ಹೇಳಿ ಕ್ವಾರಂಟೈನ್ ಕೇಂದ್ರದಲ್ಲಿಯೇ ಕೊರೊನಾ ಸೋಂಕಿತೆಯ ಮೇಲೆ ಅತ್ಯಾಚಾರ ಎಸಗಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

    ನವೀ ಮುಂಬೈನ ಪನ್ವೆಲ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, 40 ವರ್ಷದ ಮಹಿಳೆಯ ಮೇಲೆ 25 ವರ್ಷದ ಯುವಕ ಅತ್ಯಾಚಾರ ಎಸಗಿದ್ದಾನೆ. ಆರೋಪಿಯನ್ನು ಶುಬಾಮ್ ಖತು ಎಂದು ಗುರುತಿಸಲಾಗಿದೆ. ಸದ್ಯಕ್ಕೆ ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

    ಏನಿದು ಪ್ರಕರಣ?
    ಸಂತ್ರಸ್ತೆಗೆ ಕೊರೊನಾ ಸೋಂಕು ದೃಢವಾದ ನಂತರ ಪನ್ವೆಲ್‍ನಲ್ಲಿರುವ ಇಂಡಿಯಾ ಬುಲ್ಸ್ ಕ್ವಾರಂಟೈನ್ ಕೇಂದ್ರದಲ್ಲಿ ಇರಿಸಲಾಗಿತ್ತು. ಇದೇ ಕೇಂದ್ರದಲ್ಲಿ ಸೋಂಕಿತರ ಸಂಪರ್ಕಕ್ಕೆ ಬಂದಿದ್ದ ಆರೋಪಿಯನ್ನು ಕ್ವಾರಂಟೈನ್ ಮಾಡಲಾಗಿತ್ತು. ಅಲ್ಲದೇ ಸಂತ್ರಸ್ತೆಯಿದ್ದ ಫೋರಿನಲ್ಲಿ ಆರೋಪಿಯ ಸಹೋದರ ಕೂಡ ಇದ್ದನು. ಸಹೋದರನ್ನು ನೋಡಲು ಹೋಗಿದ್ದಾಗ ಆರೋಪಿ ಆಕಸ್ಮಿಕವಾಗಿ ಸಂತ್ರಸ್ತೆಯಿದ್ದ ರೂಮಿನ ಬಾಗಿಲು ಬಡಿದಿದ್ದಾನೆ. ನಂತರ ಸಂತ್ರಸ್ತೆಯ ಬಳಿ ಕ್ಷಮೆ ಕೇಳಿ ಹೊರಟು ಹೋಗಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.

    ಆರೋಪಿಯ ಸಹೋದರನಿಗೆ ಕೊರೊನಾ ಪಾಸಿಟಿವ್ ಬಂದ ನಂತರ ಆತನನ್ನು ಗುರುವಾರ ಕೋವಿಡ್ -19 ವಾರ್ಡಿಗೆ ಸ್ಥಳಾಂತರಿಸಲಾಯಿತು. ಗುರುವಾರ ಸಂಜೆ ಆರೋಪಿ ಸಂತ್ರಸ್ತೆಯ ರೂಮಿಗೆ ಹೋಗಿದ್ದಾನೆ. ಆರೋಪಿ ತಾನು ವೈದ್ಯ ಎಂದು ಸಂತ್ರಸ್ತೆಯ ಬಳಿ ಸುಳ್ಳು ಹೇಳಿ, ಸಂತ್ರಸ್ತೆಗೆ ಏನಾದರೂ ತೊಂದರೆ ಇದಿಯಾ ಎಂದು ಕೇಳಿದ್ದಾನೆ. ಆಗ ಸಂತ್ರಸ್ತೆ ಆತನನ್ನು ನಿಜವಾದ ವೈದ್ಯ ಎಂದುಕೊಂಡು ತನಗೆ ದೇಹದ ನೋವು ಇದೆ ಎಂದು ಹೇಳಿದ್ದಾರೆ ಎಂದು ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ಅಶೋಕ್ ರಜಪೂತ್ ಹೇಳಿದ್ದಾರೆ.

    ಆರೋಪಿ ಕೋವಿಡ್ -19 ವರದಿಗಳನ್ನು ಪರಿಶೀಲಿಸಿದ್ದು, ಮಸಾಜ್ ಮಾಡಬೇಕು ಎಂದು ಹೇಳಿದ್ದಾನೆ. ಅಲ್ಲದೇ ಮಸಾಜ್ ಹೆಸರಿನಲ್ಲಿ ಆರೋಪಿ ಸಂತ್ರಸ್ತೆ ಬಟ್ಟೆಗಳನ್ನು ತೆಗೆದು ಮಸಾಜ್ ಮಾಡಲು ಪ್ರಾರಂಭಿಸಿದ್ದನು. ನಂತರ ರೂಮಿನ ಬಾಗಿಲನ್ನು ಲಾಕ್ ಮಾಡಿ ಸಂತ್ರಸ್ತೆಯ ಜೊತೆ ಅಸಭ್ಯವಾಗಿ ವರ್ತಿನಿಸಿದ್ದಾನೆ. ನಂತರ ಆಕೆಯ ಮೇಲೆ ಅತ್ಯಾಚಾರ ಎಸಗಿ ರೂಮಿನಿಂದ ಪರಾರಿಯಾಗಿದ್ದಾನೆ.

    ಶುಕ್ರವಾರ ಸಂತ್ರಸ್ತೆ ಈ ಘಟನೆಯ ಬಗ್ಗೆ ದೂರು ನೀಡಿದ್ದಾರೆ. ಆದರೆ ಆತನನ್ನ ಬಂಧಿಸದೆ ಕ್ವಾರಂಟೈನ್ ಕೇಂದ್ರದಲ್ಲಿ ಪ್ರತ್ಯೇಕವಾಗಿ ಇರಿಸಲಾಗಿದೆ. ಆತನಿಗೆ ಕೊರೊನಾ ಟೆಸ್ಟ್ ಮಾಡಿದ್ದು, ವರದಿಗಾಗಿ ಕಾಯುತ್ತಿದ್ದೇವೆ. ಪನ್ವೆಲ್ ತಾಲೂಕು ಪೊಲೀಸ್ ಠಾಣೆಯಲ್ಲಿ ಆತನ ವಿರುದ್ಧ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿವೆ ಎಂದು ಅಶೋಕ್ ರಜಪೂತ್ ತಿಳಿಸಿದರು.

  • ಊಟ ಕೋಡೋದು ನನ್ನ ಕೆಲಸ ಅಲ್ಲ: ಕ್ವಾರಂಟೈನ್ ಕೇಂದ್ರದಲ್ಲಿ ಅಧಿಕಾರಿಯ ಉದ್ಧಟತನ

    ಊಟ ಕೋಡೋದು ನನ್ನ ಕೆಲಸ ಅಲ್ಲ: ಕ್ವಾರಂಟೈನ್ ಕೇಂದ್ರದಲ್ಲಿ ಅಧಿಕಾರಿಯ ಉದ್ಧಟತನ

    ತುಮಕೂರು: ಕ್ವಾರಂಟೈನ್‍ನಲ್ಲಿ ಇದ್ದವರಿಗೆ ಸರಿಯಾದ ಊಟ, ತಿಂಡಿ ವ್ಯವಸ್ಥೆ ಮಾಡದ್ದನ್ನು ಪ್ರಶ್ನಿಸಿದಕ್ಕೆ ಪಟ್ಟಣ ಪಂಚಾಯ್ತಿ ಮುಖ್ಯ ಅಧಿಕಾರಿಯೋರ್ವ ಬೀದಿ ರಂಪಾಟ ಮಾಡಿಕೊಂಡಿರುವ ಘಟನೆ ತುಮಕೂರು ಜಿಲ್ಲೆಯಲ್ಲಿ ನಡೆದಿದೆ.

    ಚಿಕ್ಕನಾಯಹಳ್ಳಿ ತಾಲೂಕಿನ ಹುಳಿಯಾರಿನ ಬಿಸಿಎಂ ಹಾಸ್ಟೆಲ್‍ನಲ್ಲಿ ಯುವಕ ಮತ್ತು ಆತನ ತಾಯಿಯನ್ನು ಕ್ವಾರಂಟೈನ್ ಮಾಡಲಾಗಿತ್ತು. ರಾತ್ರಿ ಊಟ ವ್ಯವಸ್ಥೆ ಇಲ್ಲದೆ ಬಗ್ಗೆ ಕ್ವಾರಂಟೈನ್‍ನಲ್ಲಿದ್ದ ಯುವಕ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಕ್ಕೆ ಹಾಕಿದ್ದ, ಇದನ್ನು ಗಮನಿಸಿದ ಸ್ಥಳೀಯರು ಅವರಿಗೆ ಊಟದ ವ್ಯವಸ್ಥೆ ಮಾಡಿದ್ದರು.

    ಈ ನಡುವೆ ಸ್ಥಳೀಯರು ಪಟ್ಟಣ ಪಂಚಾಯ್ತಿ ಸಿಇಓ ಅವರಿಗೆ ಹಲವು ಬಾರಿ ಕರೆ ಮಾಡಿದರೂ ಸ್ವೀಕರಿಲಿಲ್ಲ. ಇಂದು ಬೆಳಗ್ಗೆ ಸ್ಥಳಕ್ಕೆ ಬಂದ ಅಧಿಕಾರಿಗಳನ್ನು ಸ್ಥಳೀಯರು ತರಾಟೆ ತೆಗೆದುಕೊಂಡಿದ್ದಾರೆ. ಇದಕ್ಕೆ ಸಿಟ್ಟಾದ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಮಂಜುನಾಥ್ ನನಗೆ ನಿಗಾವಹಿಸಲು ಅಷ್ಟೇ ಜವಾಬ್ದಾರಿ ನೀಡಿದ್ದಾರೆ. ಊಟ ಕೊಡುವುದಕ್ಕೆ ಬಿಸಿಎಂ ಹಾಸ್ಟೆಲ್ ಅಧಿಕಾರಿಗಳು ಇದ್ದಾರೆ. ಅದನ್ನೆಲ್ಲ ನನ್ನ ಬಳಿ ಕೇಳಬೇಡಿ ಎಂದು ಉದ್ಧಟತನ ತೋರಿದ್ದಾನೆ.

    ಇದರಿಂದಾಗಿ ಸ್ಥಳೀಯರು ಮತ್ತು ಮುಖ್ಯಾಧಿಕಾರಿ ನಡುವೆ ಜಟಾಪಟಿ ನಡೆದು ಕೈ ಕೈ ಮಿಲಾಯಿಸುವ ಹಂತಕ್ಕೂ ಹೋಗಿತ್ತು.

  • ಕಣ್ತೆರೆಯುವ ಮುನ್ನವೇ ಕಣ್ಮುಚ್ಚಿದ ಕಂದಮ್ಮ- ತಾಯಿಯ ಕಣ್ಣೀರು ಕಂಡು ಮರುಗಿದ ಜನ

    ಕಣ್ತೆರೆಯುವ ಮುನ್ನವೇ ಕಣ್ಮುಚ್ಚಿದ ಕಂದಮ್ಮ- ತಾಯಿಯ ಕಣ್ಣೀರು ಕಂಡು ಮರುಗಿದ ಜನ

    ಕಲಬುರಗಿ: ಕ್ವಾರಂಟೈನ್ ಕೇಂದ್ರದಿಂದ ಆಸ್ಪತ್ರೆಗೆ ಸೇರುವ ಮಾರ್ಗ ಮಧ್ಯೆ ಗರ್ಭಿಣಿಗೆ ಹೆರಿಗೆಯಾಗಿದ್ದು, ದುರಾದೃಷ್ಟವಶಾತ್ ಮಗು ಸಾವನ್ನಪಿದ ಕರುಣಾಚನಕ ಘಟನೆ ಇಂದು ಜಿಲ್ಲೆಯಲ್ಲಿ ನಡೆದಿದೆ.

    ಮಹಾರಾಷ್ಟ್ರದ ಪುಣೆಯಿಂದ ಜೂನ್ 11ರಂದು ಬಂದಿದ್ದ 35 ವರ್ಷದ ಗರ್ಭಿಣಿ ಹಾಗೂ ಅವರ ಕುಟುಂಬಸ್ಥರನ್ನು ಸೇಡಂ ಪಟ್ಟಣದ ಲಾಡ್ಜ್ ನಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಆದರೆ ಇಂದು ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡು ಬಳಲುತ್ತಿದ್ದರು. ಇದರಿಂದಾಗಿ ಕ್ವಾರಂಟೈನ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಅಂಬುಲೆನ್ಸ್ ವ್ಯವಸ್ಥೆ ಕಲ್ಪಿಸಿ ಕಲಬುರಗಿಯ ಜಿಲ್ಲಾಸ್ಪತ್ರೆಗೆ ಕಳುಹಿಸಿಕೊಟ್ಟಿದ್ದರು.

    ಸೇಡಂನಿಂದ ಕಲಬುರಗಿಗೆ ಬರುವ ಮಾರ್ಗ ಮಧ್ಯೆ ಮಹಿಳೆ ಅಂಬುಲೆನ್ಸ್ ನಲ್ಲೇ ಗಂಡು ಮಗುವಿಗೆ ಜನ್ಮ ನೀಡಿದ್ದರು. ತಕ್ಷಣವೇ ಮೃತ ಮಗುವಿನ ಜೊತೆಗೆ ಮಹಿಳೆಯನ್ನು ಕಲಬುರಗಿ ಜಿಮ್ಸ್ ಗೆ ದಾಖಲು ಮಾಡಲು ಆರೋಗ್ಯ ಇಲಾಖೆ ಸಿಬ್ಬಂದಿ ಮುಂದಾಗಿದ್ದರು. ಆದರೆ ಕಲಬುರಗಿ ಸಮೀಪ ಇರುವಾಗಲೇ ಮಗು ಸಾವನ್ನಪ್ಪಿದೆ. ಮಗುವನ್ನು ಕಳೆದುಕೊಂಡ ತಾಯಿಯ ಆಕ್ರಂದನ ಮುಗಿಲು ಮುಟ್ಟಿತ್ತು. ಆಕೆಯ ಸ್ಥಿತಿಯನ್ನು ಕಂಡು ವೈದ್ಯರು ಹಾಗೂ ಜನರು ಕಣ್ಣೀರಾದರು.

  • ಮಥುರಾ ಕ್ವಾರೆಂಟೈನ್ ಕೇಂದ್ರದಲ್ಲಿ ಬೆಳ್ತಂಗಡಿಯ ಯೋಧ ಸಾವು

    ಮಥುರಾ ಕ್ವಾರೆಂಟೈನ್ ಕೇಂದ್ರದಲ್ಲಿ ಬೆಳ್ತಂಗಡಿಯ ಯೋಧ ಸಾವು

    ಕಾರವಾರ: ಮಥುರಾದ ಕ್ವಾರೆಂಟೈನ್ ಕೇಂದ್ರದಲ್ಲಿದ್ದ ಜಿಲ್ಲೆಯ ಬೆಳ್ತಂಗಡಿಯ ಯೋಧ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

    ಬೆಳ್ತಂಗಡಿ ತಾಲೂಕಿನ ಬಾರ್ಯ ಗ್ರಾಮದ ಸಂದೇಶ್ ಶೆಟ್ಟಿ (34) ಸಾವನ್ನಪ್ಪಿದ ಯೋಧ. ಸಂದೇಶ್ ರಜೆ ಪಡೆದು ಸ್ವಗ್ರಾಮಕ್ಕೆ ಬಂದಿದ್ದರು. ಕೊರೊನಾ ಲಾಕ್‍ಡೌನ್‍ನಿಂದಾಗಿ ವಾಪಸ್ ಹೋಗಲು ಸಾಧ್ಯವಿರಲಿಲ್ಲ. ಸದ್ಯ ಲಾಕ್‍ಡೌನ್ ಸಡಿಲೆಕೆ ಹಿನ್ನೆಲೆಯಲ್ಲಿ ಅವರು ಸೋಮವಾರ ಕರ್ತವ್ಯಕ್ಕೆ ಹಾಜರಾಗಿದ್ದರು.

    ಕೋವಿಡ್-19 ನಿಯಮದ ಪ್ರಕಾರ ಬೇರೆ ರಾಜ್ಯ, ಪ್ರದೇಶದಿಂದ ಬಂದವರು 14 ದಿನಗಳ ಕಾಲ ಕ್ವಾರಂಟೈನ್ ಕೇಂದ್ರದಲ್ಲಿ ಇರಬೇಕು. ಅದರಂತೆ ಸಂದೇಶ್ ಅವರು ಕೂಡ ಮಥುರಾದ ಕ್ವಾರಂಟೈನ್ ಕೇಂದ್ರದಲ್ಲಿ ಉಳಿದಿದ್ದರು. ಆದರೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

    ಸಂದೇಶ್ ಶೆಟ್ಟಿ ಅವರು ಭಾರತೀಯ ಸೇನೆಯಲ್ಲಿ 14 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದರು. ಅವರ ಸಾವಿನ ಸುದ್ದಿ ಕೇಳಿದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

  • ಕ್ವಾರಂಟೈನ್ ಕೇಂದ್ರದಲ್ಲೇ ಅರಳಿದ ವಿಘ್ನ ವಿನಾಶಕ

    ಕ್ವಾರಂಟೈನ್ ಕೇಂದ್ರದಲ್ಲೇ ಅರಳಿದ ವಿಘ್ನ ವಿನಾಶಕ

    ಬಾಗಲಕೋಟೆ: ಕೆಸರಿನಲ್ಲಿಯೇ ಕಮಲದ ಹೂ ಅರಳುವಂತೆ ಕ್ವಾರಂಟೈನ್ ಕೇಂದ್ರದಲ್ಲಿ ಇದ್ದರೂ ಜಿಲ್ಲೆಯ ಶಿಲ್ಪಕಲಾವಿದರೊಬ್ಬರು ತಮ್ಮ ಕೈ ಚಳಕದಿಂದ ಗಣೇಶನ ಮೂರ್ತಿ ಕೆತ್ತನೆ ಮಾಡಿ ಗಮನ ಸಳೆದಿದ್ದಾರೆ.

    ಮುಧೋಳ ತಾಲೂಕಿನ ಲೋಕಾಪುರದ ಮಲ್ಲಪ್ಪ ಬಡಿಗೇರ ಅವರ ಕುಟುಂಬಸ್ಥರು ಕೊರೊನಾ ಭೀತಿ ಹಿನ್ನೆಲೆ ಮಹಾರಾಷ್ಟ್ರದಿಂದ ಊರಿಗೆ ವಾಪಸ್ ಆಗಿದ್ದರು. ಆದರೆ ಅವರನ್ನು ಲೋಕಾಪುರದ ಕ್ವಾರಂಟೈನ್ ಕೇಂದ್ರದಲ್ಲಿ ಇರಿಸಲಾಗಿತ್ತು. ಹೀಗಾಗಿ ಮಲ್ಲಪ್ಪ ಅವರು ಕೂಡ ಕುಟುಂಬಸ್ಥರೊಂದಿಗೆ ಕ್ವಾರಂಟೈನ್ ಕೇಂದ್ರದಲ್ಲಿ ಉಳಿದಿದ್ದರು.

    ಶಿಲ್ಪಕಲಾವಿದ ಮಲ್ಲಪ್ಪ ತಮ್ಮ ಆಸಕ್ತಿಯನ್ನು ಕ್ವಾರಂಟೈನ್ ಕೇಂದ್ರದ ಅಧಿಕಾರಿಗಳ ಮುಂದೆ ವ್ಯಕ್ತಪಡಿಸಿದ್ದರು. ಈ ವೇಳೆ ಜಿಲ್ಲಾ ಪಂಚಾಯತ್ ಸಿಇಓ ಗಂಗೂಬಾಯಿ ಮಾನಕರ್ ಅವರು ಮೂರ್ತಿ ಕೆತ್ತನೆ ಕೆಲಸ ಕೊಟ್ಟು ಅಗತ್ಯ ಸಾಮಗ್ರಿಗಳನ್ನು ನೀಡಿದ್ದರು. ತಮಗೆ ದೊರೆತ ಕೆಲವೇ ಕೆಲವು ಸಾಮಗ್ರಿಗಳಿಂದ ಮಲ್ಲಪ್ಪ ಅವರು ವಿಘ್ನ ವಿನಾಶಕ ಗಣೇಶ್‍ನ ವಿಗ್ರಹವನ್ನ ಕೆತ್ತನೆ ಮಾಡಿ ಗಮನ ಸಳೆದಿದ್ದಾರೆ.

    ಲೋಕಾಪುರ ಪಂಚಾಯಿತಿ ಪಿಡಿಓ ಅವರು ಮಲ್ಲಪ್ಪ ಅವರಿಗೆ 10 ಸಾವಿರ ರೂ.ವನ್ನು ಪ್ರೋತ್ಸಾಹ ಧನವಾಗಿ ಕೊಟ್ಟು ಮೂರ್ತಿಯನ್ನು ಖರೀದಿಸಿ ಬೆಂಬಲಿಸಿದ್ದಾರೆ. ಮಲ್ಲಪ್ಪ ಅವರ ಕಾರ್ಯಕ್ಕೆ ಅಧಿಕಾರಿಗಳು ಹಾಗೂ ಕ್ವಾರಂಟೈನ್‍ನಲ್ಲಿದ್ದವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  • ಕಾಣೆಯಾದ ಮಗ 10 ವರ್ಷದ ಬಳಿಕ ಪ್ರತ್ಯಕ್ಷ

    ಕಾಣೆಯಾದ ಮಗ 10 ವರ್ಷದ ಬಳಿಕ ಪ್ರತ್ಯಕ್ಷ

    – ಮಗನಿಗಾಗಿ ಕಣ್ಣೀರಿಡುತ್ತಿದ್ದ ದಂಪತಿಗೆ ವರವಾದ ಕೊರೊನಾ
    – ಗ್ರಾಮದ ಸ್ವಾಸ್ಥ್ಯಕ್ಕಾಗಿ ಕ್ವಾರಂಟೈನ್ ಕೇಂದ್ರಕ್ಕೆ ಶಿಫ್ಟ್

    ತುಮಕೂರು: ಹತ್ತು ವರ್ಷಗಳ ಹಿಂದೆ ಮಗ ನಾಪತ್ತೆಯಾದ ಹಿನ್ನೆಲೆಯಲ್ಲಿ ಪೋಷಕರು ಪೊಲೀಸರಿಗೆ ದೂರು ನೀಡಿದರೂ ಮಗನನ್ನ ಪತ್ತೆ ಹಚ್ಚಲು ಸಾಧ್ಯವಾಗಿರಲಿಲ್ಲ. ಮಗ ನಾಪತ್ತೆಯಾದ ಕೊರಗಿನಲ್ಲೇ ಹತ್ತು ವರ್ಷಗಳಿಂದ ದಿನದೂಡುತ್ತಿದ್ದ ಪೋಷಕರಿಗೆ ಅಚ್ಚರಿ ಎಂಬಂತೆ ಮಗ ಪ್ರತ್ಯಕ್ಷವಾಗಿದ್ದಾನೆ. ಹಲವು ವರ್ಷಗಳ ಬಳಿಕ ಮಗ ಮನೆ ಸೇರಿದರೂ ಪೋಷಕರು ಅವನ ಜೊತೆ ಸೇರದಂತ ಸಂಕಷ್ಟವನ್ನು ಕೊರೊನಾ ತಂದೊಡ್ಡಿದೆ.

    ಹೌದು. ಕುಣಿಗಲ್ ತಾಲೂಕಿನ ಗುನ್ನಾಗರೆ ಗ್ರಾಮದ ಕೃಷ್ಣಪ್ಪ ದಂಪತಿಗೆ ಕೊರೊನಾ ವರವಾಗಿ ಪರಿಣಮಿಸಿದೆ. ಹತ್ತು ವರ್ಷಗಳ ಹಿಂದೆ ಮನೆ ತೊರೆದು ಹೋಗಿದ್ದ ಮಗ ಕೊರೊನಾ ಭೀತಿಯಿಂದ ಹಿಂತಿರುಗಿ ಬಂದಿದ್ದಾರೆ.

    ಕೃಷ್ಣಪ್ಪ ಅವರ ಮಗ ರಂಗಸ್ವಾಮಿ 2011ರಲ್ಲಿ ಶಾಲೆಗೆಂದು ಹೋಗಿ ಕಾಣೆಯಾಗಿದ್ದರು. ಪೋಷಕರು ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಮಗ ಕಾಣೆಯಾದ ಹಿನ್ನೆಲೆಯಲ್ಲಿ ಹೆತ್ತವರು ಕಣ್ಣೀರಿನಲ್ಲಿಯೇ ದಿನಗಳನ್ನು ನೂಕುತ್ತಿದ್ದರು. ಶುಕ್ರವಾರ ರಾತ್ರಿ ರಂಗಸ್ವಾಮಿ ತನ್ನ ಅಜ್ಜಿಯ ಮನೆ (ಶೆಟ್ಟಿಗೆರೆ)ಗೆ ಬಂದು ತನ್ನ ಪರಿಚಯವನ್ನು ಹೇಳಿಕೊಂಡಾಗ ಆಶ್ಚರ್ಯವಾಗಿ, ತಂದೆ ತಾಯಿಯ ಗಮನಕ್ಕೆ ತಂದಿದ್ದಾರೆ. ಮಗ ಬಂದಿರುವ ಸುದ್ದಿ ತಿಳಿದು ಶೆಟ್ಟಿಗೆರೆಗೆ ಬಂದ ಕೃಷ್ಣಪ್ಪ ದಂಪತಿ ಮಗನನ್ನು ನೋಡಿ ಆನಂದಬಾಷ್ಪ ಸುರಿಸಿದ್ದಾರೆ.

    ರಂಗಸ್ವಾಮಿ ಕಳೆದ ಹತ್ತು ವರ್ಷಗಳಿಂದ ಬೀದರ್ ಜಿಲ್ಲೆ ಭಾಲ್ಕಿಯಲ್ಲಿ ಕೆಲಸ ಮಾಡುತ್ತಿದ್ದ. ಆದರೆ ಕೊರೊನಾ ಹಿನ್ನೆಲೆ ಕೆಲಸವಿಲ್ಲದೆ ಬೇಸತ್ತು ತವರಿಗೆ ಬರುವ ಮನಸ್ಸು ಮಾಡಿದ್ದಾರೆ ಎಂದು ಚಿಕ್ಕಪ್ಪ ಕುಮಾರ್ ತಿಳಿಸಿದ್ದಾರೆ.

    ಮಹಾರಾಷ್ಟ್ರ ಗಡಿ ಭಾಗದಿಂದ ಬಂದಿರುವ ಕಾರಣ ಪೋಷಕರೇ ಎಚ್ಚೆತ್ತು, 10 ವರ್ಷದ ನಂತರ ಬಂದ ಮಗನನ್ನು ಮನೆಗೆ ಸೇರಿಸದೆ, ಆರೋಗ್ಯ ತಪಾಸಣೆಗೆಂದು ಸಂಬಂಧಪಟ್ಟವರಿಗೆ ಮಾಹಿತಿ ನೀಡಿದ್ದರು. ಅವರನ್ನು ಹುಲಿಯೂರು ದುರ್ಗದ ಹೇಮಗಿರಿಬೆಟ್ಟದ ಬಳಿಯ ವಸತಿ ಶಾಲೆಗೆ ಕ್ವಾರಂಟೈನ್ ಮಾಡಲಾಗಿದೆ.

    ಗ್ರಾಮಸ್ಥರ ಆರೋಗ್ಯ ಮುಖ್ಯ:
    ಮಗ ಬಂದಿರುವುದು ಸಂತೋಷ. ಆದರೆ ಅವನು ಗಡಿಭಾಗದಿಂದ ಬಂದಿರುವ ಕಾರಣ ಆರೋಗ್ಯದ ಜತೆ ಗ್ರಾಮಸ್ಥರ ಆರೋಗ್ಯವೂ ಮುಖ್ಯ. 10 ವರ್ಷ ಕಾದ ನಮಗೆ ಹದಿನೈದು ದಿನ ಕಾಯುವುದು ದೊಡ್ಡದಲ್ಲ. ಹಾಗಾಗಿ ವರದಿ ಬಂದ ನಂತರ ಆರೋಗ್ಯವಂತ ಮಗನನ್ನು ಮನೆಗೆ ಸೇರಿಸಿಕೊಳ್ಳುವುದಾಗಿ ಪೋಷಕರು ಹೇಳುತ್ತಿದ್ದಾರೆ.

  • ತಿಂಡಿಗೆ 40 ಚಪಾತಿ, ಊಟಕ್ಕೆ 10 ಪ್ಲೇಟ್ ಅನ್ನ- ಕ್ವಾರಂಟೈನ್‍ನಲ್ಲಿದ್ದ ವ್ಯಕ್ತಿ ನೋಡಿ ಅಧಿಕಾರಿಗಳು ಸುಸ್ತು

    ತಿಂಡಿಗೆ 40 ಚಪಾತಿ, ಊಟಕ್ಕೆ 10 ಪ್ಲೇಟ್ ಅನ್ನ- ಕ್ವಾರಂಟೈನ್‍ನಲ್ಲಿದ್ದ ವ್ಯಕ್ತಿ ನೋಡಿ ಅಧಿಕಾರಿಗಳು ಸುಸ್ತು

    ಪಾಟ್ನಾ: ಕ್ವಾರಂಟೈನ್ ಕೇಂದ್ರದಲ್ಲಿರುವ ವ್ಯಕ್ತಿಯೊಬ್ಬ ತಿಂಡಿಗೆ 40 ಚಪಾತಿ, ಊಟಕ್ಕೆ 10 ಪ್ಲೇಟ್ ಅನ್ನವನ್ನು ತಿನ್ನುವುದನ್ನು ನೋಡಿ ಅಧಿಕಾರಿಗಳು ಸುಸ್ತುಗಿದ್ದಾರೆ.

    ಈ ರೀತಿ ತಿನ್ನುವ ವ್ಯಕ್ತಿಯನ್ನು ಅನುಪ್ ಓಜಾ ಎಂದು ಗುರುತಿಸಲಾಗಿದೆ. ಈತ ದಿನದಲ್ಲಿ ತಿಂಡಿಗೆ ಬರೋಬ್ಬರಿ 40 ಚಪಾತಿಗಳನ್ನು ತಿಂದಿದ್ದಾನೆ. ಜೊತೆಗೆ ಊಟದ ಸಮಯದಲ್ಲಿ ಹತ್ತು ಪ್ಲೇಟ್ ಅನ್ನವನ್ನು ತಿಂದಿದ್ದಾನೆ. ಈ ಅಧುನಿಕ ಬಕಾಸುರನನ್ನು ನೋಡಿದ ಅಲ್ಲಿ ಅಧಿಕಾರಿಗಳು ಗೊಂದಲಕ್ಕೊಳಗಾಗಿದ್ದಾರೆ.

    ಈ ಘಟನೆ ಬಿಹಾರದ ಬಕ್ಸಾರ್ ನಲ್ಲಿರುವ ಕ್ವಾರಂಟೈನ್ ಕೇಂದ್ರದಲ್ಲಿ ನಡೆದಿದೆ. ಅನುಪ್ ರಾಜಸ್ಥಾನದಿಂದ ಬಿಹಾರಕ್ಕೆ ಮರಳಿದ್ದ, ಆದ್ದರಿಂದ ಸರ್ಕಾರದ ನಿಮಯದಂತೆ ಆತನನ್ನು ಕ್ವಾರಂಟೈನ್ ಕೇಂದ್ರದಲ್ಲಿ ಇರಿಸಲಾಗಿದೆ. ಈ ವೇಳೆ ಈತ ದಿನಕ್ಕೆ ತಿಂಡಿಯ ವೇಳೆಗೆ 40 ಚಪಾತಿಯನ್ನು ತಿಂದಿದ್ದಾನೆ. ನಂತರ ಊಟದ ವೇಳೆಗೆ ಸುಮಾರು 10 ಪ್ಲೇಟ್ ಅನ್ನವನ್ನು ತಿಂದಿದ್ದಾನೆ. ಇದನ್ನು ನೋಡಿದ ಅಲ್ಲಿನ ಸಿಬ್ಬಂದಿ ಥಂಡಾ ಹೊಡಿದಿದ್ದಾರೆ.

    ಒಬ್ಬ ವ್ಯಕ್ತಿ ಜಾಸ್ತಿ ಊಟ ತಿನ್ನುತ್ತಾನೆ ಎಂದು ಕ್ವಾರಂಟೈನ್ ಕೇಂದ್ರದ ಸಿಬ್ಬಂದಿ ಅಧಿಕಾರಿಗಳಿಗೆ ತಿಳಿಸಿದ್ದಾರೆ. ನಂತರ ಇದನ್ನು ಕೇಳಿ ಅಶ್ಚರ್ಯಗೊಂಡು ಅಧಿಕಾರಿಗಳು, ಊಟದ ವೇಳೆಗೆ ಕ್ವಾರಂಟೈನ್ ಕೇಂದ್ರಕ್ಕೆ ಬಂದಿದ್ದಾರೆ. ಈ ವೇಳೆ ವ್ಯಕ್ತಿ ಬರೋಬ್ಬರಿ ಹತ್ತು ಜನರು ತಿನ್ನುವ ಆಹಾರವನ್ನು ಒಬ್ಬನೇ ತಿಂದಿದ್ದಾನೆ. ಇದನ್ನು ಕಂಡ ಅಧಿಕಾರಿಗಳು ಅಘಾತಕ್ಕೊಳಗಾಗಿದ್ದಾರೆ. ಈ ರೀತಿ ತಿಂದರೆ ಕ್ವಾರಂಟೈನ್ ಕೇಂದ್ರದಲ್ಲಿ ಆಹಾರದ ಸಮಸ್ಯೆ ಎದುರಾಗುತ್ತದೆ ಎಂದು ಅಧಿಕಾರಿಗಳು ಕಳವಳ ವ್ಯಕ್ತಪಡಿಸಿದ್ದಾರೆ.

    ಈ ವಿಚಾರವಾಗಿ ಮಾತನಾಡಿರುವ ಬ್ಲಾಕ್ ಡೆವಲಪ್ಮೆಂಟ್ ಆಫೀಸರ್ (ಬಿಡಿಒ) ಎಕೆ ಸಿಂಗ್, ಒಂದು ದಿನ ಕ್ವಾರಂಟೈನ್ ಕೇಂದ್ರದಲ್ಲಿ ‘ಲಿಟ್ಟಿ’ (ಬಿಹಾರದ ಒಂದು ಬಗೆಯ ತಿಂಡಿ)ಯನ್ನು ಮಾಡಿದ್ದಾರೆ. ಈ ವೇಳೆ ಪವನ್ 85 ಲಿಟ್ಟಿಗಳನ್ನು ತಿಂದಿದ್ದಾನೆ. ಜೊತೆಗೆ ರೊಟ್ಟಿ ಮಾಡಿದರೆ ಒಬ್ಬನೇ 20 ಜನ ತಿನ್ನವ ಆಹಾರವನ್ನು ಒಬ್ಬನೇ ತಿನ್ನುತ್ತಾನೆ. ಕ್ವಾರಂಟೈನ್ ಕೇಂದ್ರದಲ್ಲಿ ಅಡುಗೆ ಮಾಡುವವರು ಕೂಡ ನಾವು ಅಡುಗೆ ಮಾಡುವುದಿಲ್ಲ ಎಂದು ಹಠ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

    ಬಿಹಾರದಲ್ಲಿ ಒಟ್ಟು 3,061 ಕೊರೊನಾ ಪ್ರಕರಣಗಳು ವರದಿಯಾಗಿವೆ. ಇದರಲ್ಲಿ 15 ಜನ ಸೋಂಕಿನಿಂದ ಸಾವನ್ನಪ್ಪಿದ್ದಾರೆ. 1,083 ಜನರು ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದಾರೆ.

  • ‘ನಮ್ಮನ್ನ ಬಿಟ್ಟು ಬಿಡಿ, ನಮ್ಮೂರಿಗೆ ಹೋಗ್ತೀವಿ’

    ‘ನಮ್ಮನ್ನ ಬಿಟ್ಟು ಬಿಡಿ, ನಮ್ಮೂರಿಗೆ ಹೋಗ್ತೀವಿ’

    – ಅವಧಿ ಮುಗಿದರೂ ಕ್ವಾರಂಟೈನ್ ಕೇಂದ್ರದಲ್ಲಿರುವ ಕಾರ್ಮಿಕರ ಅಳಲು

    ಯಾದಗಿರಿ: ನಮ್ಮನ್ನ ಬಿಟ್ಟು ಬಿಡಿ, ನಾವು ನಮ್ಮೂರಿಗೆ ಹೋಗುತ್ತೇವೆ ಎಂದು ಅವಧಿ ಮುಗಿದರೂ ಕ್ವಾರಂಟೈನ್ ಕೇಂದ್ರದಲ್ಲಿರುವ ಕಾರ್ಮಿಕರು ಯಾದಗಿರಿ ತಾಲೂಕಿನ ಲಿಂಗೇರಿನಲ್ಲಿ ಪ್ರತಿಭಟನೆ ನಡೆಸಿದ್ದಾರೆ.

    ಬೇಸಿಗೆ ಬಿಸಿಲಲ್ಲಿ ಫ್ಯಾನ್, ಕರೆಂಟ್ ಇಲ್ಲದೇ ಹೇಗೆ ಇರಬೇಕು. ಇದರ ಜೊತೆಗೆ ಕಳಪೆ ಆಹಾರ ನೀಡುತ್ತಿದ್ದಿರಿ, ಇದರಿಂದ ಅನಾರೋಗ್ಯ ಪೀಡಿತರಾಗಿದ್ದೇವೆ. ನಾವು ಇಲ್ಲಿ ಇರಲ್ಲ, ನಮ್ಮನ್ನು ಬಿಟ್ಟು ಬಿಡಿ ಎಂದು ಕಾರ್ಮಿಕರು ಪ್ರತಿಭಟನೆ ಮೂಲಕ ಅಳಲು ತೋಡಿಕೊಂಡಿದ್ದಾರೆ.

    ಯಾದಗಿರಿ ತಾಲೂಕಿನ ಲಿಂಗೇರಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಮಹಾರಾಷ್ಟ್ರದಿಂದ ಜಿಲ್ಲೆಗೆ ಬಂದಿದ್ದ ವಲಸೆ ಕಾರ್ಮಿಕರನ್ನು ಕ್ವಾರಂಟೈನ್ ಮಾಡಲಾಗಿದೆ. ಈಗಾಗಲೇ ಅವರ ಕ್ವಾರಂಟೈನ್ ಅವಧಿ ಮುಗಿದಿದ್ದರೂ ಕೇಂದ್ರದಲ್ಲೇ ಇರಿಸಲಾಗಿದೆ. ಇದರಿಂದಾಗಿ ಕಾರ್ಮಿಕರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಕಳೆದ 21 ದಿನಗಳಿಂದ ನಮ್ಮನ್ನ ಕ್ವಾರಂಟೈನ್ ಕೇಂದ್ರದಲ್ಲಿ ಇಡಲಾಗಿದೆ. ನಮ್ಮನ್ನು ಕೊರೊನಾ ಟೆಸ್ಟ್ ಗೆ ಒಳಪಡಿಸಲಾಗಿದ್ದು, ರಿಪೋರ್ಟ್ ಕೂಡ ಬಂದಿದೆ. ಆದರೂ ಇಲ್ಲಿಯೇ ಇರಿಸಿದ್ದಾರೆ. ನಾವು ಮಾತ್ರ ಇಂದು ಮನೆಗೆ ಹೋಗುತ್ತೇನೆ. ನಮ್ಮ ವಿರುದ್ಧ ಯಾವುದೇ ಕ್ರಮ ಬೇಕಾದರೂ ಕೈಗೊಳ್ಳಿ ಎಂದು ಕ್ವಾರಂಟೈನ್ ಕೇಂದ್ರದಲ್ಲಿರುವ ವಲಸೆ ಕಾರ್ಮಿಕರೊಬ್ಬರು ಕಿಡಿಕಾರಿದ್ದಾರೆ.