Tag: qatar

  • ಕತಾರ್ ನಲ್ಲಿ ಸಿಲುಕಿದ ಹಕ್ಕಿ ಪಿಕ್ಕಿ ಸಮುದಾಯದ ಆರು ಜನರು

    ಕತಾರ್ ನಲ್ಲಿ ಸಿಲುಕಿದ ಹಕ್ಕಿ ಪಿಕ್ಕಿ ಸಮುದಾಯದ ಆರು ಜನರು

    -ಭಾಷೆ ಬರದ ನಾಡಿನಲ್ಲಿ ಸಿಲುಕಿದ ಕನ್ನಡಿಗರು
    -ಮೈಸೂರಿನಿಂದ ಕತಾರ್ ಗೆ ಹೋಗಿದ್ದಾದ್ರೂ ಹೇಗೆ?

    ಬೆಂಗಳೂರು: ಮೈಸೂರು ಜಿಲ್ಲೆಯ ಹಕ್ಕಿ ಪಿಕ್ಕಿ ಸಮುದಾಯಕ್ಕೆ ಸೇರಿದ ಆರು ಜನರಿರುವ ಎರಡು ಕುಟುಂಬದ ಸದಸ್ಯರು ಕತಾರ್ ನಲ್ಲಿ ಸಿಲುಕಿಕೊಂಡು ಕಂಗಾಲಾಗಿದ್ದಾರೆ. ಭಾಷೆ ಬಾರದ ದೇಶದಲ್ಲಿ ಎರಡೂವರೆ ತಿಂಗಳಿನಿಂದ ಸಿಲುಕಿ ವಾಪಸ್ ಬರಲು ಆರ್ಥಿಕ ಶಕ್ತಿ ಇಲ್ಲದೆ ತವರು ಸೇರಲು ಸಹಾಯ ಕೇಳುತ್ತಿದ್ದಾರೆ.

    ಆಗಿದ್ದೇನು? ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಪಕ್ಷರೇಶ್ವರ ಎಂಬ ಹಳ್ಳಿಯ ಕಾಡಂಚಿನಲ್ಲಿರುವ ಹಕ್ಕಿ ಪಿಕ್ಕಿ ಸಮುದಾಯಕ್ಕೆ ಸೇರಿದ ಸುಬ್ರಮಣ್ಯ, ಜ್ಯೋತಿ, ಗೋಪಿ, ಚಂದ್ರಕಾಂತ್, ಕುಮಾರ್, ಮೀನಾ ಎಂಬವರು ಕಾಡಲ್ಲಿ ಸಿಗುವ ಗಿಡ ಮೂಲಿಕೆಗಳಿಂದ ವನೌಷಧ, ಮಸಾಜ್ ಮಾಡುವ ತೈಲ ತಯಾರು ಮಾಡುವ ಕೆಲಸ ಮಾಡಿಕೊಂಡಿದ್ದರು. ಅಲ್ಲದೇ ಈ ಉತ್ಪನ್ನಗಳನ್ನು ದೇಶದ ಇತರ ಮಹಾನಗರಗಳಲ್ಲಿ ನಡೆಯುವ ಆಯುರ್ವೇದ ಹಾಗೂ ಇತರ ಮೇಳಗಳಲ್ಲಿ ಪ್ರದರ್ಶನ ಹಾಗೂ ಮಾರಾಟ ಮಾಡಿಕೊಂಡು ಜೀವನ ನಡೆಸುತ್ತಿದ್ದರು.

    ಕತಾರ್ ಆಸೆ: ಇದೇ ರೀತಿ ಮೇಳಗಳಲ್ಲಿ ವನೌಷಧ ಮಾರಿಕೊಂಡು ಜೀವನ ನಡೆಸುತ್ತಿರುವವರಿಗೆ ಯಾರೋ ಕತಾರ್ ನಲ್ಲಿ ಈ ರೀತಿಯ ವನೌಷಧ ಹಾಗೂ ಗಿಡಮೂಲಿಕೆಗಳಿಗೆ ಬೆಲೆ ಇದೆ. ಹಾಗೂ ಅಲ್ಲಿ ಇದರ ಮೇಳ ನಡೆಯುತ್ತಿದೆ ಎಂದು ಹೇಳಿದನ್ನು ನೆಚ್ಚಿಕ್ಕೊಂಡು ಕತಾರ್ ಗೆ ಆರು ಜನರ ಎರಡು ಕುಟುಂಬಗಳು ಮಾರ್ಚ್ ಮೊದಲ ವಾರದಲ್ಲಿ ಕತಾರ್ ಗೆ ತೆರಳಿದ್ದಾರೆ. ಆದರೆ ಅಲ್ಲಿಗೆ ಹೋಗುವಷ್ಟರಲ್ಲಿ ಪ್ರದರ್ಶನ ಆರಂಭವಾಗುವ ಮೊದಲೇ ಲಾಕ್‍ಡೌನ್ ಘೋಷಣೆಯಾಗಿದ್ದು, ಮುಂದೇನು ಮಾಡಬೇಕು ಎಂದು ತಿಳಿಯದೇ ದಿಕ್ಕು ತೋಚದಂತಾಗಿ ಕುಳಿತುಕೊಂಡಿದ್ದಾರೆ.

    ನೆರವಿಗೆ ಬಂದ ಕನ್ನಡ ಸಂಘ:  ತಾವು ಸಂಕಷ್ಟದಲ್ಲಿ ಸಿಲುಕಿ ದಿಕ್ಕು ತೋಚದೇ ಊರಿಗೆ ಕರೆ ಮಾಡಿದ್ದಾರೆ. ಅಲ್ಲದೆ ಭಾರತೀಯ ರಾಯಭಾರಿ ಕಚೇರಿ ನಂಬರ್ ಪಡೆದು ತಾವು ಕನ್ನಡದವರು ಎಂದು ಹೇಳಿಕೊಂಡಿದ್ದಾರೆ. ಕನ್ನಡದವರು ಎಂದ ಕೂಡಲೇ ಭಾರತೀಯ ರಾಯಭಾರಿ ಕಚೇರಿಯವರು ಕತಾರ್ ನಲ್ಲಿರುವ ಕನ್ನಡ ಸಂಘದ ಸುಬ್ರಮಣ್ಯ ಹೆಬ್ಬಾಗಿಲು ಅವರಿಗೆ ಮಾಹಿತಿ ನೀಡಿದ್ದಾರೆ.

  • ಕತಾರ್‌ನಲ್ಲಿ ಕನ್ನಡ ರಾಜ್ಯೋತ್ಸವ ಸಂಭ್ರಮ – ಭೈರಪ್ಪ, ಪುನೀತ್‍ಗೆ ಬಿರುದು ನೀಡಿ ಸನ್ಮಾನ

    ಕತಾರ್‌ನಲ್ಲಿ ಕನ್ನಡ ರಾಜ್ಯೋತ್ಸವ ಸಂಭ್ರಮ – ಭೈರಪ್ಪ, ಪುನೀತ್‍ಗೆ ಬಿರುದು ನೀಡಿ ಸನ್ಮಾನ

    ದೋಹಾ: ಕತಾರ್‌ನಲ್ಲಿರುವ ಕರ್ನಾಟಕ ಸಂಘ ಕನ್ನಡ ರಾಜ್ಯೋತ್ಸವದ ಹಿನ್ನೆಲೆಯಲ್ಲಿ ಖ್ಯಾತ ಸಾಹಿತಿ ಎಸ್.ಎಲ್ ಭೈರಪ್ಪ ಮತ್ತು ನಟ ಪುನೀತ್‍ ರಾಜ್‍ಕುಮಾರ್ ಅವರಿಗೆ ಬಿರುದು ನೀಡಿ ಸನ್ಮಾನಿಸಿದೆ.

    ಅಲ್ ವಕ್ರಾದಲ್ಲಿ ಇರುವ ಡಿ.ಪಿ.ಎಸ್-ಎಂ.ಐ.ಎಸ್ ಶಾಲೆಯ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ, ಕಾದಂಬರಿಕಾರ ಪದ್ಮಶ್ರೀ ಡಾ. ಎಸ್.ಎಲ್ ಭೈರಪ್ಪರವರಿಗೆ 2019ನೇ ಸಾಲಿನ `ಕತಾರ್ ಕನ್ನಡ ಸಮ್ಮಾನ್’ ಪುರಸ್ಕಾರವನ್ನು ನೀಡಿ ಸನ್ಮಾನಿಸಲಾಯಿತು. ಪುನೀತ್ ಅವರಿಗೆ ‘ಕಲಾ ಸಾರ್ವಭೌಮ’ ಬಿರುದನ್ನು ನೀಡಿ ಸನ್ಮಾನಿಸಲಾಯಿತು. ಪುನೀತ್ ದಂಪತಿ ಹಾಗೂ ಭೈರಪ್ಪನವರನ್ನು ವಾದ್ಯಗೋಷ್ಠಿಯ ಮೆರವಣಿಗೆಯಲ್ಲಿ ಸಭಾಂಗಣಕ್ಕೆ ಕರೆತಂದು ಸನ್ಮಾನಿಸಿದ್ದು ವಿಶೇಷವಾಗಿತ್ತು.

    ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಭಾರತೀಯ ರಾಯಭಾರಿಯಾದ ಪಿ. ಕುಮರನ್ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಭಾರತೀಯ ಸಾಂಸ್ಕೃತಿಕ ಸಂಸ್ಥೆಯ ಅಧ್ಯಕ್ಷರಾದ ಮಣಿಕಂಠನ್, ನಿಕಟಪೂರ್ವ ಅಧ್ಯಕ್ಷೆ ಮಿಲನ್ ಅರುಣ್, ಐ.ಸಿ.ಬಿ.ಫ್.ನ ಉಪಾಧ್ಯಕ್ಷರಾದ ಮಹೇಶ ಗೌಡ ಹಾಗೂ ಅದರ ಜಂಟಿ ಕಾರ್ಯದರ್ಶಿಯಾದ ಸುಬ್ರಮಣ್ಯ ಹೆಬ್ಬಾಗಿಲು ಉಪಸ್ಥಿತರಿದ್ದರು. ಕಾರ್ಯಕ್ರಮದ ಅಂಗವಾಗಿ ಸಂಘದ ಸ್ಮರಣ ಸಂಚಿಕೆ ‘ಶ್ರೀಗಂಧ’ವನ್ನು ಕೂಡ  ಅತಿಥಿಗಳಿಂದ ಅನಾವರಣ ಮಾಡಲಾಯಿತು.

    ಸಂಘವು ಅಂಗೀಕೃತಗೊಂಡು 20 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಟಿವಿ ನಟ ಹಾಗೂ ನಿರೂಪಕ ವಿಜಯೇಂದ್ರ ಅಥಣೀಕರ್ ಅವರು ಕಾರ್ಯಕ್ರಮವನ್ನು ನಿರೂಪಿಸಿದರೆ ಹಿನ್ನೆಲೆ ಗಾಯಕರಾದ ಹರ್ಷಾ ಹಾಗೂ ಕು. ಮೈತ್ರಿ ಐಯ್ಯರ್ ಅವರು ಹಾಡಿ ರಂಜಿಸಿದರು. ಡಾ. ಸಂಜಯ್ ಶಾಂತಾರಾಮ್‍ರವರ ಶಿವಪ್ರಿಯ ತಂಡ ನೃತ್ಯ ರೂಪಕವನ್ನು ಪ್ರದರ್ಶಿಸಿತು.

    ಕರ್ನಾಟಕ ಮೂಲದ ಸಂಘ ಸಂಸ್ಥೆಗಳಾದ ತುಳು ಕೂಟ, ಬಂಟ್ಸ್ ಕತಾರ್, ಎಸ್. ಕೆ.ಎಮ್. ಡಬ್ಲ್ಯೂ, ಕೆ.ಎಮ್.ಸಿ.ಎ., ಎಂ.ಸಿ.ಸಿ, ಕತಾರ್ ಬಿಲ್ಲವಾಸ್ ಹಾಗೂ ಎಂ.ಸಿ.ಎ ಸಂಘಟನೆಗಳ ಅಧ್ಯಕ್ಷರು ಹಾಗು ಕಾರ್ಯಕಾರಿ ಸಮಿತಿಯ ಸದಸ್ಯರು ಕೂಡ ಪ್ರಸ್ತುತರಿದ್ದರು.

    ಸ್ಥಳೀಯ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸಂಘದ ಸದಸ್ಯರು ಹಾಗೂ ಮಕ್ಕಳು ಅಪ್ಪು ಅಭಿನಯಿಸಿದಂತಹ ಸಿನಿಮಾ ಹಾಡುಗಳ ಮೆಡ್ಲೆ ಹಾಗೂ ರಾಜಕುಮಾರ್ ರವರ ಕುರಿತು ನೃತ್ಯರೂಪಕವನ್ನು ಪ್ರದರ್ಶಿಸಿ ಪುನೀತ್‍ರವರ ಮೆಚ್ಚುಗೆಯನ್ನು ಪಡೆದರು. ಬಂಟ್ಸ್ ಕತಾರ್‌ನ ಸದಸ್ಯರು ಲಿಂಗೈಕ್ಯರಾದ ಸಿದ್ಧಗಂಗಾ ಶ್ರೀ ಶಿವಕುಮಾರ ಸ್ವಾಮೀಜಿಯವರ ಕುರಿತು, ತುಳು ಕೂಟದ ಸದಸ್ಯರು ಪಂಚಭೂತಗಳು ಹಾಗು ಅವುಗಳಲ್ಲಿ ಉಂಟಾಗುತ್ತಿರುವ ಮಾಲಿನ್ಯದ ಬಗೆಗೆ, ಕತಾರ್ ಬಿಲ್ಲವಾಸ್‍ರವರು ಪರಿಸರ / ಕಾಡುಗಳ ಸಂರಕ್ಷಣೆಯ ಕುರಿತು ಹೀಗೆ ಕಾರ್ಯಕ್ರಮವನ್ನು ಪ್ರದರ್ಶಿಸಿದರು. 1 ಸಾವಿರಕ್ಕೂ ಹೆಚ್ಚು ಕನ್ನಡಿಗರು ಕಾರ್ಯಕ್ರಮಕ್ಕೆ ಆಗಮಿಸಿ ಸಂಭ್ರಮದಿಂದ ಕನ್ನಡ ರಾಜ್ಯೋತ್ಸವವನ್ನು ಆಚರಿಸಿದರು.

  • ಸೈಮಾ ಪ್ರಶಸ್ತಿ- ಕೆಜಿಎಫ್‍ಗೆ ಸಿಂಹಪಾಲು, ಡಾಲಿ, ಕಾಸರಗೋಡಿಗೆ ಪ್ರಶಸ್ತಿ

    ಸೈಮಾ ಪ್ರಶಸ್ತಿ- ಕೆಜಿಎಫ್‍ಗೆ ಸಿಂಹಪಾಲು, ಡಾಲಿ, ಕಾಸರಗೋಡಿಗೆ ಪ್ರಶಸ್ತಿ

    ದೋಹಾ: ಸಾಕಷ್ಟು ಕೂತೂಹಲ ಕೆರಳಿಸಿದ್ದ 2019ರ ಸೈಮಾ ಪ್ರಶಸ್ತಿಗೆ ತೆರೆಬಿದ್ದಿದೆ. ಕತಾರ್ ನ ರಾಜಧಾನಿ ದೋಹಾದಲ್ಲಿ ದಕ್ಷಿಣ ಭಾರತದ 8ನೇ ಅಂತರಾಷ್ಟ್ರೀಯ ವರ್ಣರಂಜಿತ ಸಮಾರಂಭ ನಡೆದಿದ್ದು 2019ರ ಸೈಮಾ ಪ್ರಶಸ್ತಿ ಘೋಷಣೆಯಾಗಿದೆ.

    ಕನ್ನಡ-ತೆಲುಗು-ತಮಿಳು-ಮಲೆಯಾಳಂ ಭಾಷೆಯ ಸಿನಿದಿಗ್ಗಜರು ಒಟ್ಟಾಗಿ ಸೇರಿದ್ದು ಸೈಮಾ ಗೋಲ್ಡನ್ ಟ್ರೋಪಿಗೆ ಮುತ್ತಿಕ್ಕಿದ್ದಾರೆ. ಅತ್ಯುತ್ತಮ ಸಿನಿಮಾ, ಅತ್ಯುತ್ತಮ ಸಂಗೀತ ನಿರ್ದೇಶಕ, ಅತ್ಯುತ್ತಮ ಖಳನಾಯಕ. ಅತ್ಯುತ್ತಮ ನಟಿ ಸೇರಿದಂತೆ ಹಲವು ವಿಭಾಗಗಳಿಗೆ ಪ್ರಶಸ್ತಿ ನೀಡಲಾಗಿದೆ.

    ಅತ್ಯುತ್ತಮ ನಟನಾಗಿ ಮಿಂಚಿದ ರಾಕಿಭಾಯ್, ಕನ್ನಡ ಚಿತ್ರರಂಗದ ಬ್ಲಾಕ್ ಬಸ್ಟರ್ ಕೆಜಿಎಫ್ ಚಿತ್ರದ ನಾಯಕ ರಾಕಿಂಗ್ ಸ್ಟಾರ್ ಯಶ್ ಅವರಿಗೆ 2019ರ ಸೈಮಾ ಅತ್ಯುತ್ತಮ ನಟನಾಗಿ ಗೋಲ್ಡನ್ ಬ್ಯೂಟಿಗೆ ಮುತ್ತಿಕ್ಕಿದ್ದಾರೆ. ಕನ್ನಡ, ತಮಿಳು, ತೆಲುಗು ಮತ್ತು ಹಿಂದಿ ಸೇರಿದಂತೆ ಹಲವಾರು ಭಾಷೆಗಳಲ್ಲಿ ಬಿಡುಗಡೆಯಾಗಿದ್ದ ಈ ಚಿತ್ರ ದೇಶದಾದ್ಯಂತ ಉತ್ತಮ ಯಶಸ್ಸು ಕಂಡಿತ್ತು.

    ಕೆಜಿಎಫ್‍ನಂತಹ ಬಿಗ್ ಬಜೆಟ್ ಸಿನಿಮಾ ಮಾಡಿ ಸೈ ಅನಿಸಿಕೊಂಡ ನಿರ್ದೇಶಕ ಪ್ರಶಾಂತ್ ನೀಲ್ ಅವರಿಗೆ ಸೈಮಾದ ಅತ್ಯುತ್ತಮ ನಿರ್ದೇಶಕನಾಗಿ ಪ್ರಶಸ್ತಿ ಪಡೆದಿದ್ದಾರೆ. ತಮ್ಮ ಚೊಚ್ಚಲ ಸಿನಿಮಾದಲ್ಲೇ ಉಗ್ರಂ ರೀತಿಯ ಮಾಸ್ ಹಿಟ್ ಕೊಟ್ಟಿದ್ದ ಪ್ರಶಾಂತ್ ತನ್ನ ಎರಡನೇ ಚಿತ್ರದಲ್ಲಿ ಕೆಜಿಎಫ್‍ನಂತಹ ಬಿಗ್ ಸಿನಿಮಾ ಮಾಡಿ ಗೆದ್ದಿದ್ದರು.

    ಕನ್ನಡ ವಿಭಾಗ ಸೈಮಾ ಪ್ರಶಸ್ತಿಯ ಬಹುಪಾಲು ಪ್ರಶಸ್ತಿಗಳನ್ನು ತನ್ನ ತೆಕ್ಕೆಗೆ ಹಾಕಿಕೊಂಡಿರುವ ಕೆಜಿಎಫ್ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ಈ ಸಿನಿಮಾದಲ್ಲಿ ಯಶ್ ಅವರ ತಾಯಿಯ ಪಾತ್ರದಲ್ಲಿ ಮಿಂಚಿದ್ದ ಅರ್ಚನಾ ಜೋಯಿಸ್ ಅವರಿಗೆ ಸೈಮಾದ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ದೊರತಿದೆ.

    ಕೆಜಿಎಫ್ ಸಿನಿಮಾಗೆ ಒಟ್ಟು ಐದು ಪ್ರಶಸ್ತಿಗಳು ಲಭಿಸಿದ್ದು, ಕೆಜಿಎಫ್ ಸಿನಿಮಾದಲ್ಲಿ ರಾಜಕಾರಣಿಯಾಗಿ ಅಭಿನಯಸಿದ್ದ ಅಚ್ಯುತ್ ಕುಮಾರ್ ಅವರಿಗೆ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಸಿಕ್ಕಿದೆ. ಕೆಜಿಎಫ್ ಚಿತ್ರಕ್ಕೆ ಉತ್ತಮ ಛಾಯಾಗ್ರಹಣ ಮಾಡಿದ್ದ ಭುವನ್ ಗೌಡ ಅವರಿಗೆ ಸೈಮಾದ ಅತ್ಯುತ್ತಮ ಛಾಯಾಗ್ರಹಣ ಪ್ರಶಸ್ತಿ ಲಭಿಸಿದೆ.

    ಹ್ಯಾಟ್ರಿಕ್ ಹಿರೋ ಶಿವರಾಜ್‍ಕುಮಾರ್ ಅಭಿನಯದ ಟಗರು ಚಿತ್ರಕ್ಕೆ ಅತ್ಯುತ್ತಮ ಖಳನಾಯಕ ಪ್ರಶಸ್ತಿ ಸಿಕ್ಕಿದ್ದು, ಈ ಚಿತ್ರದಲ್ಲಿ ಡಾಲಿ ಎಂಬ ಹೆಸರಿನ ಪಾತ್ರದಲ್ಲಿ ತನ್ನ ವಿಭಿನ್ನ ನಟನೆಯ ಮೂಲಕ ಸಖತ್ ಮನೋರಂಜನೆ ನೀಡಿದ್ದ ಡಾಲಿ ಧನಂಜಯ ಅವರಿಗೆ 2019ರ ಅತ್ಯುತ್ತಮ ಖಳನಾಯಕ ಪ್ರಶಸ್ತಿ ಸಿಕ್ಕಿದೆ.

    ಅತ್ಯುತ್ತಮ ಯುವ ನಿರ್ದೇಶಕ ಪ್ರಶಸ್ತಿ ಅಯೋಗ್ಯ ಚಿತ್ರ ತಂಡಕ್ಕೆ ಸಿಕ್ಕಿದೆ. ಸತೀಶ್ ನಿನಾಸಂ, ಡಿಂಪಲ್ ಕ್ವೀನ್ ರಚಿತಾ ರಾಮ್ ಹಾಕಿಕೊಂಡು ಉತ್ತಮ ಕೌಟುಂಬಿಕ ಕಾಮಿಡಿ ಚಿತ್ರ ಮಾಡಿದ ಮಹೇಶ್ ಅವರಿಗೆ ಸೈಮಾದ ಅತ್ಯುತ್ತಮ ಯುವ ನಿರ್ದೇಶಕ ಪ್ರಶಸ್ತಿ ದೊರಕಿದೆ. ಇದೇ ಚಿತ್ರದ `ಏನಮ್ಮಿ ಏನಮ್ಮಿ’ ಪದ್ಯ ಬರೆದ ಚೇತನ್ ಕುಮಾರ್ ಅವರಿಗೆ ಅತ್ಯುತ್ತಮ ಚಿತ್ರ ಸಾಹಿತಿ ಪ್ರಶಸ್ತಿ ಸಿಕ್ಕಿದೆ.

    ದಯಾಳ್ ಪದ್ಮನಾಭನ್ ನಿರ್ದೇಶನ ಮಾಡಿದ ಕರಾಳರಾತ್ರಿ ಸಿನಿಮಾಗೆ ಅತ್ಯುತ್ತಮ ನವ ನಟಿ ಪ್ರಶಸ್ತಿ ಸಿಕಿದ್ದು, ಈ ಚಿತ್ರದಲ್ಲಿ ಜೆಕೆ ಜೊತೆ ನಾಯಕಿಯಾಗಿ ನಟಿಸಿದ್ದ ಬಿಗ್‍ಬಾಸ್ ಖ್ಯಾತಿಯ ಅನುಪಮಾ ಗೌಡ ಅವರು ಪ್ರಶಸ್ತಿ ಗೆದ್ದಿದ್ದಾರೆ.

    ಬೆಲ್‍ಬಾಟಮ್ ಖ್ಯಾತಿಯ ನಟ ರಿಷಬ್ ಶೆಟ್ಟಿ ನಿರ್ದೇಶನದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಚಿತ್ರಕ್ಕೆ ಅತ್ಯುತ್ತಮ ಹಾಸ್ಯ ನಟ ಪ್ರಶಸ್ತಿ ಸಿಕ್ಕಿದೆ. ಈ ಚಿತ್ರದಲ್ಲಿ ಕಾಮಿಡಿ ಟೈಮಿಂಗ್ ಮೂಲಕ ಹೆಸರುವಾಸಿಯಾದ ಪ್ರಕಾಶ್ ತುಮಿನಾಡ್ ಅವರಿಗೆ ಸೈಮಾ ಪ್ರಶಸ್ತಿ ಒಲಿದಿದೆ.

  • ಕತಾರ್ ಟು ಕುವೈತ್ ಇದೊಂದು ರಕ್ತದ ಕಥೆ: ಕನ್ನಡಿಗ ದಂಪತಿಯ ಮನಗೆದ್ದ ಕೇರಳಿಗ!

    ಕತಾರ್ ಟು ಕುವೈತ್ ಇದೊಂದು ರಕ್ತದ ಕಥೆ: ಕನ್ನಡಿಗ ದಂಪತಿಯ ಮನಗೆದ್ದ ಕೇರಳಿಗ!

    ಬೆಂಗಳೂರು: “ಪತ್ನಿಗೆ ಬಾಂಬೆ ಬ್ಲಡ್ ಗ್ರೂಪಿನ ರಕ್ತ ಬೇಕು ಎಂದು ಕೇಳಿದಾಗ ನನಗೆ ಏನು ಮಾಡಬೇಕು ಎನ್ನುವುದು ತಿಳಿಯಲಿಲ್ಲ. ಎಷ್ಟು ಹುಡುಕಿದರೂ ರಕ್ತ ಸಿಗದೇ ಇದ್ದಾಗ ಚಿಂತೆಯಾಗಿತ್ತು. ಆದರೆ ಕೊನೆಗೆ ಎಲ್ಲರ ಸಹಕಾರದಿಂದಾಗಿ ರಕ್ತ ಸಿಕ್ಕಿತು” ಇದು ವಿನುತಾ ಗೌಡ ಅವರ ಪತಿ ದಯಾನಂದ ಗೌಡ ಅವರ ಸಂತೋಷದ ಮಾತುಗಳು.

    ಮೂಲತಃ ಉಡುಪಿ ಮೂಲದ ಗರ್ಭಿಣಿ ವಿನುತಾ ಕುವೈತ್‍ನ ಅದಾನ್ ಆಸ್ಪತ್ರೆ ದಾಖಲಾಗಿದ್ದರು. ಬಾಂಬೆ ಗ್ರೂಪ್ ರಕ್ತ ಹೊಂದಿದ್ದ ಅವರಿಗೆ ಸಿಸೇರಿಯನ್ ಆಪರೇಷನ್ ಮಾಡಬೇಕಾಗಿತ್ತು. ಭಾರತದಲ್ಲಿ 7,600 ಜನರಲ್ಲಿ ಒಬ್ಬರಲ್ಲಿ ಮಾತ್ರ ಈ ರಕ್ತ ಇರುವ ಕಾರಣ ಬಾಂಬೆ ಗ್ರೂಪ್ ರಕ್ತಕ್ಕೆ ಹುಡುಕಾಟ ಆರಂಭವಾಯಿತು. ಆಸ್ಪತ್ರೆಗೆ ದಾಖಲಾಗಿ ದಿನ ಕಳೆದರೂ ರಕ್ತ ದಾನಿಗಳು ಸಿಗಲೇ ಇಲ್ಲ. ಕೊನೆಗೆ ಕತಾರ್‍ನಲ್ಲಿ ಒಂದು ಹೈಪರ್ ಮಾರ್ಕೆಟ್‍ನಲ್ಲಿ ಕೆಲಸ ಮಾಡುತ್ತಿದ್ದ ನಿಧೀಶ್ ರಘುನಾಥ್ ಕುವೈತ್‍ಗೆ ಆಗಮಿಸಿ ರಕ್ತ ನೀಡಿ ಸಮಸ್ಯೆಯನ್ನು ನಿವಾರಿಸಿದರು.

    ಪತ್ನಿಯ ರಕ್ತಕ್ಕಾಗಿ ಏನೆಲ್ಲ ಕಷ್ಟ ಆಗಿತ್ತು? ಬಳಿಕ ಸಿಕ್ಕಿದ್ದು ಹೇಗೆ ಎನ್ನುವುದನ್ನು ದಯಾನಂದ ಗೌಡ ಅವರು ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.

    ಪತಿ ವಿವರಿಸಿದ್ದು ಹೀಗೆ:
    ನವೆಂಬರ್ 25 ರಂದು ಪತ್ನಿ ಕುವೈತ್ ಆಸ್ಪತ್ರೆಗೆ ದಾಖಲಾಗಿದ್ದಳು. ಮೆಡಿಕಲ್ ಚೆಕಪ್ ವೇಳೆ ನಾರ್ಮಲ್ ಡೆಲಿವರಿ ಕಷ್ಟ ಸಿಸೇರಿಯನ್ ಮಾಡಬೇಕು ಎಂದು ವೈದ್ಯರು ತಿಳಿಸಿದರು. ಈ ವೇಳೆ ಬಾಂಬೆ ಬ್ಲಡ್ ಬೇಕು ಎಂದು ಹೇಳಿದರು. ರಕ್ತದ ಗುಂಪುಗಳ ಬಗ್ಗೆ ತಿಳಿದಿದ್ದರೂ ಈ ರಕ್ತದ ಗುಂಪು ನನಗೆ ಗೊತ್ತಿರಲಿಲ್ಲ. ಬ್ಲಡ್ ಬ್ಯಾಂಕ್ ಗೆ ತೆರಳಿ ವಿಚಾರಿಸಿದಾಗ ಅಲ್ಲೂ ಸಿಗಲಿಲ್ಲ. ಪರಿಚಯಸ್ಥರಿಗೆ ತಿಳಿಸಿ, ಫೇಸ್‍ಬುಕ್, ವಾಟ್ಸಪ್ ನಲ್ಲಿ ಈ ವಿಚಾರವನ್ನು ಶೇರ್ ಮಾಡಲಾಯಿತು. ಆದರೂ ಈ ರಕ್ತ ಇರುವ ವ್ಯಕ್ತಿಗಳು ಸಿಗಲೇ ಇಲ್ಲ.

    ನಾವು ಬಹಳ ಬೇಸರದಲ್ಲಿದ್ದಾಗ ಪಾಸ್ಟರ್ ಒಬ್ಬರಿಗೆ ವಿಚಾರ ತಿಳಿದು ನಾನು ರಕ್ತದಾನಿಗಳನ್ನು ಸಂಪರ್ಕಿಸುತ್ತೇನೆ. ನೀವು ಚಿಂತೆ ಮಾಡಬೇಡಿ ಎಂದು ಹೇಳಿದರು. ಬಳಿಕ ಈ ವಿಚಾರವನ್ನು ‘ಬ್ಲಡ್ ಡೋನರ್ಸ್ ಫೋರಮ್, ಕೇರಳ-ಕುವೈತ್ ಚಾಪ್ಟರ್’ ಆನ್‍ಲೈನ್ ಗ್ರೂಪಿಗೆ ತಿಳಿಸಿದರು. ಈ ಗ್ರೂಪಿನಲ್ಲಿ ಮೆಸೇಜ್ ಶೇರ್ ಆಗಿ ನಿಧೀಶ್ ಅವರಿಗೆ ಗುರುವಾರ ಈ ವಿಚಾರ ತಿಳಿಯಿತು. ಕೂಡಲೇ ನಿಧೀಶ್ ಕತಾರ್‍ನಿಂದ ಬರುವುದಾಗಿ ತಿಳಿಸಿದರು. ಈ ವೇಳೆ ಅಲ್ಲೇ ಒಂದು ವೈದ್ಯಕೀಯ ರಕ್ತ ಪರೀಕ್ಷೆ ನಡೆಯಿತು. ಈ ವೇಳೆ ಮೆಡಿಕಲ್ ಅಗತ್ಯಕ್ಕಾಗಿ ತುರ್ತು ವೀಸಾ ಬೇಕೆಂದು ಮನವಿ ಮಾಡಲಾಯಿತು. ಮರುದಿನ ಅಂದರೆ ಶುಕ್ರವಾರ ಕಚೇರಿಗೆ ರಜೆ ಪಡೆದು ತುರ್ತು ವಿಮಾನದ ಮೂಲಕ ನಿಧೀಶ್ ಕುವೈತ್‍ಗೆ ಆಗಮಿಸಿದರು.

    ನಿಧೀಶ್ ಬಂದವರೇ ಜಾಬಿರಿಯಾ ಬ್ಲಡ್ ಬ್ಯಾಂಕಿನಲ್ಲಿ ಪರೀಕ್ಷೆ ಮಾಡಿ ಬಳಿಕ ರಕ್ತದಾನ ಮಾಡಿದರು. ಇಲ್ಲಿ ಎಲ್ಲ ವೈದ್ಯಕೀಯ ಪರೀಕ್ಷೆಗಳನ್ನು ಮುಗಿಸಿ ಒಂದು ದಿನ ಬಳಿಕ ವೈದ್ಯರು ಸಿಸೇರಿಯನ್ ಮಾಡಿ ಡೆಲಿವರಿ ಮಾಡಿದರು. ಗಂಡು ಮಗುವಿಗೆ ಜನ್ಮ ನೀಡಿದ್ದು, ಪತ್ನಿ ಮತ್ತು ಮಗು ಇಬ್ಬರು ಆರೋಗ್ಯವಾಗಿದ್ದಾರೆ.

    ನಿಧೀಶ್ ಅವರು ವಿನುತಾಗೆ ರಕ್ತ ಕೊಟ್ಟ ಬಳಿಕ ನನ್ನ ಕಣ್ಣಲ್ಲಿ ನೀರು ಬಂತು. ಕಷ್ಟ ಕಾಲದಲ್ಲಿ ಸುಮಾರು ಒಂದೂವರೆ ಗಂಟೆ ವಿಮಾನದಲ್ಲಿ ಪ್ರಯಾಣಿಸಿ ಅಲ್ಲಿಂದ ಇಲ್ಲಿಗೆ ಬಂದು ರಕ್ತ ಕೊಟ್ಟದ್ದಕ್ಕೆ ಎಷ್ಟು ಧನ್ಯವಾದ ಹೇಳಿದರೂ ಸಾಲದು ಎಂದು ತಿಳಿಸಿದರು.

    ಅಮ್ಮ ಮತ್ತು ಮಗುವಿನ ಪ್ರಾಣ ರಕ್ಷಿಸಿದ ಕೇರಳದ ಕಣ್ಣೂರಿನ ಇರಿಟ್ಟಿ ಮೂಲದ ನಿಧೀಶ್‍ಗೆ ಕುವೈತ್‍ನಲ್ಲಿರುವ ಅನಿವಾಸಿ ಭಾರತೀಯರು ಧನ್ಯವಾದ ಹೇಳಿದ್ದಾರೆ. ಅಷ್ಟೇ ಅಲ್ಲದೇ ಕುವೈತ್‍ನ ಆರೋಗ್ಯ ವಿಭಾಗವೂ ಅವರನ್ನು ಸನ್ಮಾನಿಸಿದೆ. ಕೇರಳ ಕುವೈತ್ ನಲ್ಲಿರುವ ರಕ್ತದಾನಿಗಳ ಸಂಘ ಸಹ ನಿಧೀಶ್ ಅವರನ್ನು ಸನ್ಮಾನಿಸಿದೆ.

    ಮಂಗಳೂರು ದೇರಳಕಟ್ಟೆ ದಯಾನಂದ ಗೌಡ ಅವರು ಕಳೆದ 10 ವರ್ಷಗಳಿಂದ ಕುವೈತ್ ನಲ್ಲಿ ಉದ್ಯೋಗದಲ್ಲಿದ್ದಾರೆ.

    ರಸ್ತೆ ಅಪಘಾತವಾದಾಗ ಗಾಯಾಳುಗಳು ರಕ್ಷಿಸಿ ಎಂದು ಕಣ್ಣೀರಿಟ್ಟರೂ ಜನ ನರಳುತ್ತಿರುವ ದೃಶ್ಯವನ್ನು ಮೊಬೈಲ್ ನಲ್ಲಿ ಚಿತ್ರೀಕರಿಸಿ ಅಲ್ಲಿಂದ ತೆರಳುವುದನ್ನು ನಾವು ನೋಡಿದ್ದೇನೆ. ಈ ಪ್ರಕರಣಗಳು ನಮ್ಮ ಕಣ್ಣಿನ ಮುಂದೆ ಇರುವಾರಗ ಆಸ್ಪತ್ರೆಗೆ ದಾಖಲಾಗಿದ್ದ ವಿನುತಾ ಅವರಿಗೆ ಒಂದು ದೇಶದಿಂದ ಮತ್ತೊಂದು ದೇಶಕ್ಕೆ ತುರ್ತಾಗಿ ವಿಮಾನದಲ್ಲಿ ಆಗಮಿಸಿ ರಕ್ತ ನೀಡುವ ಮೂಲಕ ವಿನೀಶ್ ಈಗ ಭಾರತೀಯರ ಮನಗೆದ್ದಿದ್ದಾರೆ.

    ಏನಿದು ‘ಬಾಂಬೆ ಗ್ರೂಪ್’ ರಕ್ತ?
    ರಕ್ತದ ಕಣಗಳ ಆಧಾರದ ಮೇಲೆ ರಕ್ತದ ಗುಂಪನ್ನು ಗುರುತಿಸಲಾಗುತ್ತದೆ. ಎ ಗುಂಪಿನಲ್ಲಿ ಎ-ಆ್ಯಂಟಿಜನ್, ಬಿ ಗುಂಪಿನಲ್ಲಿ ಬಿ-ಆ್ಯಂಟಿಜನ್, ಎಬಿಯಲ್ಲಿ ಎಬಿ-ಆ್ಯಂಟಿಜನ್ ಮತ್ತು ಒ ಗುಂಪಿನಲ್ಲಿ ಎಚ್ ಆ್ಯಂಟಿಜನ್ ಇರುತ್ತದೆ. ಯಾವ ವ್ಯಕ್ತಿ ಒ ಗುಂಪಿನವರಾಗಿದ್ದು, ಅವರಲ್ಲಿ ಎಚ್-ಆ್ಯಂಟಿಜನ್ ಅಂಶ ಇರುವುದಿಲ್ಲವೋ ಅಂತಹವರನ್ನು ಬಾಂಬೆ ಗುಂಪಿನ ರಕ್ತದವರು ಎಂದು ಗುರುತಿಸಲಾಗುತ್ತದೆ.

    ಈ ರಕ್ತದ ಮಾದರಿ ಮೊದಲು ಮುಂಬೈನಲ್ಲಿ ಪತ್ತೆಯಾಗಿತ್ತು. ಹಾಗಾಗಿ ಮುಂಬಯಿನ ಹಳೆಯ ಹೆಸರಾದ ಬಾಂಬೆ ಹೆಸರಿನೊಂದಿಗೆ ‘ಬಾಂಬೆ ಬ್ಲಡ್’ ಎಂದು ಕರೆಯಲಾಗುತ್ತದೆ.

  • ಶಹಬ್ಬಾಸ್ ಹೇಳಿ..ಕತಾರ್ ನಿಂದ ಕುವೈತ್‍ಗೆ ಬಂದು ರಕ್ತ ನೀಡಿ ಗರ್ಭಿಣಿಯ ಪ್ರಾಣ ಉಳಿಸಿದ ಭಾರತೀಯ!

    ಶಹಬ್ಬಾಸ್ ಹೇಳಿ..ಕತಾರ್ ನಿಂದ ಕುವೈತ್‍ಗೆ ಬಂದು ರಕ್ತ ನೀಡಿ ಗರ್ಭಿಣಿಯ ಪ್ರಾಣ ಉಳಿಸಿದ ಭಾರತೀಯ!

    ದೋಹಾ: ಕತಾರ್ ನಿಂದ ಕುವೈತ್‍ಗೆ ಭಾರತೀಯನೊಬ್ಬ ಪ್ರಯಾಣ ಮಾಡಿ ಉಡುಪಿ ಮೂಲದ ಗರ್ಭಿಣಿಯೊಬ್ಬರಿಗೆ ರಕ್ತವನ್ನು ದಾನ ಮಾಡಿ ಪ್ರಾಣ ಉಳಿಸಿ ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದ್ದಾರೆ.

    ಕತಾರ್ ನಲ್ಲಿ ಒಂದು ಹೈಪರ್ ಮಾರ್ಕೆಟ್‍ನಲ್ಲಿ ಕೆಲಸ ಮಾಡುತ್ತಿದ್ದ ನಿಧೀಶ್ ರಘುನಾಥ್ ಈ ವಿಶೇಷ ಸಾಧನೆ ಮಾಡಿದ ವ್ಯಕ್ತಿ. ಇವರು ಗರ್ಭಿಣಿಯೊಬ್ಬರ ಚಿಕಿತ್ಸೆಗಾಗಿ ಕತಾರ್ ನಿಂದ ಕುವೈತ್‍ಗೆ ಆಗಮಿಸಿ ರಕ್ತ ನೀಡಿ ತಾಯಿ ಮಗುವಿನ ಪ್ರಾಣವನ್ನು ಉಳಿಸಿದ್ದಾರೆ.

    ಏನಿದು ಘಟನೆ?
    ಗರ್ಭಿಣಿ ವಿನೀತಾ ಕುವೈತ್‍ನ ಅದಾನ್ ಆಸ್ಪತ್ರೆ ದಾಖಲಾಗಿದ್ದರು. ಬಾಂಬೆ ಗ್ರೂಪ್ ರಕ್ತ ಹೊಂದಿದ್ದ ಅವರಿಗೆ ಸಿಸೇರಿಯನ್ ಆಪರೇಷನ್ ಮಾಡಬೇಕಾಗಿತ್ತು. ಭಾರತದಲ್ಲಿ 7,600 ಜನರಲ್ಲಿ ಒಬ್ಬರಲ್ಲಿ ಮಾತ್ರ ಈ ರಕ್ತ ಇರುವ ಕಾರಣ ಬಾಂಬೆ ಗ್ರೂಪ್ ರಕ್ತಕ್ಕೆ ಹುಡುಕಾಟ ಆರಂಭವಾಯಿತು.

    ಕುವೈತ್‍ನಲ್ಲಿ ಈ ಗುಂಪಿನ ರಕ್ತದ ದಾನಿಗಳಿಗಾಗಿ ಹುಡುಕಾಟ ಆರಂಭವಾಗಿ ಆದರೆ ಎಷ್ಟು ಹುಡುಕಿದರೂ ದಾನಿಗಳು ಸಿಗಲಿಲ್ಲ. ನಂತರ ಕೂಡಲೇ ಕೇರಳ ಮೂಲದ ‘ಬ್ಲಡ್ ಡೋನರ್ಸ್ ಫೋರಮ್, ಕೇರಳ-ಕುವೈತ್ ಚಾಪ್ಟರ್’ ಎಂಬ ರಕ್ತದಾನಿಗಳ ಸಂಸ್ಥೆಯಲ್ಲಿ ಆನ್‍ಲೈನ್ ಮೂಲಕ ಹುಡುಕಾಟ ಆರಂಭಿಸಲಾಯಿತು.

    ತುರ್ತು ರಕ್ತ ಬೇಕಾಗಿರುವ ವಿಚಾರವನ್ನು ಸಾಮಾಜಿಕ ತಾಣದಲ್ಲಿಯೂ ಶೇರ್ ಮಾಡಲಾಯಿತು. ಈ ವಿಚಾರ ಕತಾರ್ ನಲ್ಲಿದ್ದ ಕೇರಳ ಮೂಲದ ನಿಧೀಶ್ ರಘುನಾಥ್ ಅವರಿಗೂ ತಲುಪಿತು. ನನ್ನದು ಅದೇ ಗುಂಪಿನ ರಕ್ತ ಎಂದು ತಿಳಿದಿದ್ದ ನಿಧೀಶ್, ಕೂಡಲೇ ರಕ್ತ ನೀಡಲು ಮುಂದಾಗಿ ಅವರು ಕೆಲಸ ಮಾಡುತ್ತಿದ್ದ ಸಂಸ್ಥೆಯಿಂದ ಕುವೈತ್‍ಗೆ ತೆರಳಲು ಅನುಮತಿ ಪಡೆದರು. ಅಷ್ಟೇ ಅಲ್ಲದೇ ತುರ್ತಾಗಿ ಕುವೈತ್‍ಗೆ ತಲುಪಿಸುವ ವ್ಯವಸ್ಥೆ ಮಾಡಲಾಯಿತು. ಹೀಗಾಗಿ ವೀಸಾ ಪ್ರಕ್ರಿಯೆ ಮುಗಿದು ಶುಕ್ರವಾರ ನಿಧೀಶ್ ಕುವೈತ್ ತಲುಪಿದರು.

    ನಿಧೀಶ್ ರಕ್ತ ಪರೀಕ್ಷೆ ಮಾಡಿ ನಂತರ ಜಾಬಿರಿಯಾ ರಕ್ತ ನಿಧಿಯಲ್ಲಿ ರಕ್ತದಾನ ಮಾಡಲಾಯಿತು. ಅಮ್ಮ ಮತ್ತು ಮಗುವಿನ ಪ್ರಾಣ ರಕ್ಷಿಸಿದ ನಿಧೀಶ್‍ಗೆ ಕುವೈತ್‍ನಲ್ಲಿರುವ ಅನಿವಾಸಿ ಭಾರತೀಯರು ಧನ್ಯವಾದ ಹೇಳಿದ್ದಾರೆ. ಅಷ್ಟೇ ಅಲ್ಲದೇ ಕುವೈತ್‍ನ ಆರೋಗ್ಯ ವಿಭಾಗವೂ ಅವರನ್ನು ಸನ್ಮಾನಿಸಿದೆ.

    ಏನಿದು ‘ಬಾಂಬೆ ಗ್ರೂಪ್’ ರಕ್ತ?
    ರಕ್ತದ ಕಣಗಳ ಆಧಾರದ ಮೇಲೆ ರಕ್ತದ ಗುಂಪನ್ನು ಗುರುತಿಸಲಾಗುತ್ತದೆ. ಎ ಗುಂಪಿನಲ್ಲಿ ಎ-ಆ್ಯಂಟಿಜನ್, ಬಿ ಗುಂಪಿನಲ್ಲಿ ಬಿ-ಆ್ಯಂಟಿಜನ್, ಎಬಿಯಲ್ಲಿ ಎಬಿ-ಆ್ಯಂಟಿಜನ್ ಮತ್ತು ಒ ಗುಂಪಿನಲ್ಲಿ ಎಚ್ ಆ್ಯಂಟಿಜನ್ ಇರುತ್ತದೆ. ಯಾವ ವ್ಯಕ್ತಿ ಒ ಗುಂಪಿನವರಾಗಿದ್ದು, ಅವರಲ್ಲಿ ಎಚ್-ಆ್ಯಂಟಿಜನ್ ಅಂಶ ಇರುವುದಿಲ್ಲವೋ ಅಂತಹವರನ್ನು ಬಾಂಬೆ ಗುಂಪಿನ ರಕ್ತದವರು ಎಂದು ಗುರುತಿಸಲಾಗುತ್ತದೆ.

    ಈ ರಕ್ತದ ಮಾದರಿ ಮೊದಲು ಮುಂಬೈನಲ್ಲಿ ಪತ್ತೆಯಾಗಿತ್ತು. ಹಾಗಾಗಿ ಮುಂಬಯಿನ ಹಳೆಯ ಹೆಸರಾದ ಬಾಂಬೆ ಹೆಸರಿನೊಂದಿಗೆ ‘ಬಾಂಬೆ ಬ್ಲಡ್’ ಎಂದು ಕರೆಯಲಾಗುತ್ತದೆ.

     

  • ಕತಾರ್ ಕನ್ನಡಿಗ ಸುಬ್ರಹ್ಮಣ್ಯ ಹೆಬ್ಬಾಗಿಲು ಅವರಿಗೆ ಉಡುಪಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ

    ಕತಾರ್ ಕನ್ನಡಿಗ ಸುಬ್ರಹ್ಮಣ್ಯ ಹೆಬ್ಬಾಗಿಲು ಅವರಿಗೆ ಉಡುಪಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ

    ಬೆಂಗಳೂರು: ಇತ್ತೀಚೆಗೆ ಆರ್ಯಭಟ ಪ್ರಶಸ್ತಿಯನ್ನು ಪಡೆದಿದ್ದ, ಕತಾರ್‍ನ ಕರ್ನಾಟಕ ಸಂಘದ ಉಪಾಧ್ಯಕ್ಷ ಹಾಗೂ ಖಜಾಂಜಿಯಾದ ಸುಬ್ರಹ್ಮಣ್ಯ ಹೆಬ್ಬಾಗಿಲು ಅವರಿಗೆ ಮತ್ತೊಂದು ಪ್ರಶಸ್ತಿಯ ಗರಿ ಮುಡಿಗೇರಿದೆ.

    ಹೌದು, ಈ ಬಾರಿಯ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಇವರಿಗೆ ಲಭಿಸಿದೆ. ಕಳೆದ ಹತ್ತು ವರ್ಷಗಳಿಂದ ಕತಾರ್‍ನಲ್ಲಿ ಕನ್ನಡ ನಾಡು, ನುಡಿ ಸೇವೆಯನ್ನು ಸಲ್ಲಿಸುತ್ತಿರುವ ಇವರಿಗೆ ಈ ಬಾರಿಯ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಸಿಕ್ಕಿದೆ.

    ಸುಬ್ರಹ್ಮಣ್ಯ ಹೆಬ್ಬಾಗಿಲು ಅವರು ಕತಾರ್ ನಲ್ಲಿ ಸುಮಾರು 50 ಜನ ಕನ್ನಡಿಗರಿಗೆ ಕೆಲಸವನ್ನು ದೊರಕಿಸಿಕೊಟ್ಟಿರುತ್ತಾರೆ. ಇತ್ತೀಚಿಗೆ ಬಿಡುಗಡೆಯಾಗಿದ್ದ ಹೊಸ ಚಲಚಿತ್ರಗಳಾದ ಒಂದು ಮೊಟ್ಟೆ ಕಥೆ ಹಾಗು ಕಾಫಿತೋಟ ಸೇರಿದಂತೆ, ಕೇವಲ ಒಂದು ವರ್ಷದಲ್ಲಿ 8 ಕನ್ನಡ ಸಿನಿಮಾಗಳ ಯಶಸ್ವಿ ಪ್ರದರ್ಶವನ್ನು ಕತಾರ್‍ನಲ್ಲಿ ಆಯೋಜಿಸಿದ ಹೆಗ್ಗಳಿಕೆ ಇವರದ್ದು.

  • ಕತಾರ್ ಕನ್ನಡಿಗ ಸುಬ್ರಮಣ್ಯ ಹೆಬ್ಬಾಗಿಲುಗೆ ಆರ್ಯಭಟ ಪ್ರಶಸ್ತಿ

    ಕತಾರ್ ಕನ್ನಡಿಗ ಸುಬ್ರಮಣ್ಯ ಹೆಬ್ಬಾಗಿಲುಗೆ ಆರ್ಯಭಟ ಪ್ರಶಸ್ತಿ

    ದೋಹಾ: ದೋಹಾದಲ್ಲಿ ನೆಲೆಸಿರುವ ಸುಬ್ರಮಣ್ಯ ಹೆಬ್ಬಾಗಿಲು ಅವರಿಗೆ ಈ ಬಾರಿಯ ಆರ್ಯಭಟ ಇಂಟನ್ರ್ಯಾಷನಲ್ ಪ್ರಶಸ್ತಿ ಲಭಿಸಿದ್ದು ಬೆಂಗಳೂರಿನಲ್ಲಿ ಪ್ರಶಸ್ತಿ ಸ್ವೀಕರಿಸಿದ್ದಾರೆ.

    ವೃತ್ತಿಯಲ್ಲಿ ಇಂಜಿನಿಯರ್ ಆಗಿ 2007 ರಿಂದ ಕತಾರ್ ನ ಅಲ್ ಮಿಸ್ನಾದ್ ಕಂಪನಿಯಲ್ಲಿ ಕೆಲಸ ನಿರ್ವಹಿಸುತ್ತಿರುವ, ಅಲ್ಲಿಯ ಪ್ರಸ್ತುತ ಕರ್ನಾಟಕ ಸಂಘ, ಕತಾರ್ ನ ಉಪಾಧ್ಯಕ್ಷ ಹಾಗು ಖಜಾಂಜಿಯಾಗಿ ಸೇವೆಯನ್ನು ಸಲ್ಲಿಸುತ್ತಿರುವ ಇವರು, ತಮ್ಮ ಬಿಡುವಿನ ಸಮಯದಲ್ಲಿ ಇಲ್ಲಿಯ ಹಲವಾರು ಸಂಘ-ಸಂಸ್ಥೆಗಳಲ್ಲಿ ತಮ್ಮ ನಿಸ್ವಾರ್ಥ ಸೇವೆಯನ್ನು ಸಲ್ಲಿಸುತ್ತಿದ್ದಾರೆ.

    ಬೈಂದೂರ್ ಎಂಬ ಸಣ್ಣ ಊರಿನಲ್ಲಿ, ಮಾರ್ಚ್ 24, 1982 ರಂದು ಶ್ರೀ ಗುರುದತ್ತಾ ಶೆರುಗರ್ ಹಾಗು ಶ್ರೀಮತಿ ಮುಕುಂಬ ಎಂಬ ರೈತ ದಂಪತಿಗಳಿಗೆ ಜನಿಸಿದ ಇವರು ದೋಹಾದಲ್ಲಿ ನೆಲೆಸಿದ್ದಾರೆ.

    ಕರ್ನಾಟಕ ಸಂಘದಲ್ಲಿ 2011 ರಿಂದ, ಕನ್ನಡ ಭಾಷೆ ಮತ್ತು ಸಂಸ್ಕೃತಿ ಯನ್ನು ಕತಾರ್ ನಲ್ಲಿ ಉಳಿಸಿ, ಬೆಳೆಸುವ ದಿಕ್ಕಿನಲ್ಲಿ ನಿರಂತರ ಸೇವೆ ಸಲ್ಲಿಸುತ್ತಿದ್ದು, ಕರ್ನಾಟಕದ ಚಲನಚಿತ್ರ ಹಾಗು ಇನ್ನಿತರ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿರುವ ಹಲವಾರು ದಿಗ್ಗಜರುಗಳನ್ನು ಕತಾರ್ ಗೆ ಕರೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

    ಕತಾರ್ ನಲ್ಲಿ ಕನ್ನಡ ಚಲನಚಿತ್ರಗಳ ಯಶಸ್ವಿ ಪ್ರದರ್ಶನದಲ್ಲಿ ಪ್ರಮುಖ ಪಾತ್ರ ಇವರದ್ದು. ಕೇವಲ ಒಂದು ವರ್ಷದಲ್ಲಿ ರಂಗಿತರಂಗ, ಕೋಟಿಗೊಬ್ಬ-2, ಹೆಬ್ಬುಲಿ, ಕಿರಿಕ್ ಪಾರ್ಟಿ, ದೊಡ್ಮನೆ ಹುಡ್ಗ ಮತ್ತು ಚೌಕ ಚಲನಚಿತ್ರಗಳ ಪ್ರದರ್ಶನ. 50 ಕ್ಕೂ ಹೆಚ್ಚು ಕನ್ನಡ ಜನರಿಗೆ ಕತಾರ್ ನಲ್ಲಿ ಕೆಲಸ ದೊರಕಿಸಿಕೊಟ್ಟ ಹೆಗ್ಗಳಿಕೆ ಇವರದ್ದು.

    ಭಾರತೀಯ ಸಾಂಸ್ಕೃತಿಕ ಕೇಂದ್ರ (ಐಸಿಸಿ)ದ ಸದಸ್ಯನಾಗಿದ್ದು ಅಲ್ಲಿ ಹಮ್ಮಿಕೊಳ್ಳುವ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗು ಇನ್ನಿತರ ಕಾರ್ಯಕ್ರಮಗಳಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದಾರೆ. ಮತ್ತು ಇಂಡಿಯನ್ ಕಮ್ಯುನಿಟಿ ಬೆನೆವೆಲೆಂಟ್ ಫೋರಮ್(ಐಸಿಬಿಎಫ್) ನಲ್ಲಿ ಸದಸ್ಯನಾಗಿದ್ದು ಅಲ್ಲಿ ಹಮ್ಮಿಕೊಳ್ಳುವ ದಾನ-ದತ್ತಿ ಕಾರ್ಯಗಳಲ್ಲಿ, ಉಚಿತ ವೈದ್ಯಕೀಯ ಶಿಬಿರಗಳಲ್ಲಿ, ಕಾರ್ಮಿಕರ ಶ್ರೇಯೋಭಿವೃದ್ಧಿ ಕಾರ್ಯಗಳಲ್ಲಿ ನಿರಂತರ ಹಾಗು ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದಾರೆ.

     

  • ದೋಹಾದಲ್ಲಿ ವನಿತಾ ಪ್ರತಿಭಾ ಸಂಭ್ರಮ, ಮಕ್ಕಳ ಪ್ರತಿಭಾನೇಷ್ವಣೆ ಕಾರ್ಯಕ್ರಮ

    ದೋಹಾದಲ್ಲಿ ವನಿತಾ ಪ್ರತಿಭಾ ಸಂಭ್ರಮ, ಮಕ್ಕಳ ಪ್ರತಿಭಾನೇಷ್ವಣೆ ಕಾರ್ಯಕ್ರಮ

    ಕತಾರ್: ಕರ್ನಾಟಕ ಸಂಘವು ಇತ್ತೀಚೆಗೆ ದೋಹಾದಲ್ಲಿನ ಭಾರತೀಯ ಸಾಂಸ್ಕೃತಿಕ ಕೇಂದ್ರದ ಅಶೋಕ ಸಭಾಂಗಣದಲ್ಲಿ ವನಿತಾ ಪ್ರತಿಭಾ ಸಂಭ್ರಮ ಹಾಗೂ ಮಕ್ಕಳ ಪ್ರತಿಭಾನೇಷ್ವಣೆ ಕಾರ್ಯಕ್ರಮವನ್ನು ಆಯೋಜಿಸಿತ್ತು. ಈ ಕಾರ್ಯಕ್ರಮದ ಗೌರವಾನ್ವಿತ ಅತಿಥಿಯಾಗಿ ಸಿಂಪಲ್ಲಾಗಿ ಒಂದು ಲವ್ ಸ್ಟೋರಿ ಖ್ಯಾತಿಯ ಚಿತ್ರತಾರೆ ಶ್ವೇತಾ ಶ್ರೀವಾತ್ಸವ್ ಆಗಮಿಸಿದ್ದರು.

    ಇದೇ ಸಂದರ್ಭದಲ್ಲಿ ಜನಪ್ರಿಯ ಗಾಯಕರಾದ ರತ್ನಮಾಲಾ ಪ್ರಕಾಶ್, ಇಂದು ವಿಶ್ವನಾಥ್ ಹಾಗೂ ಪಂಚಮ್ ಹಳಿಬಂಡಿಯವರಿಂದ ಮಧುರಗೀತೆಗಳ ಭಾವಸಂಗಮದಲ್ಲಿ ಹೃದಯಂಗಮದ ಭಾವಗೀತೆಗಳು, ಜನಪ್ರಿಯ ಕನ್ನಡ ಮತ್ತು ಹಿಂದಿ ಚಲನಚಿತ್ರಗೀತೆಗಳು ಮೂಡಿಬಂದವು.

    ವನಿತೆಯರಿಗಾಗಿ ನಡೆದ ಫ್ಯಾಷನ್ ಶೋಗೆ ಹಿರಿಯ ಮಹಿಳೆಯೊಬ್ಬರು ವೇದಿಕೆ ಮೇಲೆ ನಡೆದು ಸಂಚಲನ ಮೂಡಿಸಿದರು. ನಂತರ ಅನೇಕ ವನಿತೆಯರು ವರ್ಣಮಯ ಸೀರೆ, ಉಡುಗೆ-ತೊಡುಗೆಗಳಲ್ಲಿ ವೇದಿಕೆಯಲ್ಲಿ ಹೆಜ್ಜೆ ಹಾಕಿದರು.

    ಕಿಕ್ಕಿರಿದ ಜನಸ್ತೋಮದೆದುರು ಶ್ವೇತಾ ಶ್ರೀವಾತ್ಸವ್, ರತ್ನಮಾಲಾ ಪ್ರಕಾಶ್, ಇಂದು ವಿಶ್ವನಾಥ್ ಹಾಗೂ ಪಂಚಮ್ ಹಳಿಬಂಡಿಯವರನ್ನು ಅಭಿನಂದಿಸಿ ಸನ್ಮಾನಿಸಲಾಯಿತು. ಸನ್ಮಾನದ ನಂತರ, ಶ್ವೇತಾ ಮಾತನಾಡಿ ಸಂಘದ ಕೆಲಸವನ್ನು ಹೊಗಳಿದರು.

    ಸಮಾರಂಭದ ಮುಖ್ಯ ಅತಿಥಿಗಳಾಗಿದ್ದ ಕತಾರಿನ ಎಂ.ಈ.ಎಸ್ ಭಾರತೀಯ ಶಾಲೆಯ ಉಪ ಪ್ರಾಂಶುಪಾಲರಾದ ಹಮೀದ ಖಾದರ್ ನಾರಿ ಶಕ್ತಿಯುತವಾಗಲು ಕರೆ ನೀಡಿದರು. ಸದಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ವಯಸ್ಸು ಅಡ್ಡಬರಬಾರದೆಂದರು. ಮಕ್ಕಳಿಗೆ ಮತ್ತು ವನಿತೆಯರಿಗೆ ಏರ್ಪಡಿಸಿದ್ದ ಅನೇಕ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಅಲ್ಲದೇ ಶೈಕ್ಷಣಿಗವಾಗಿ ಹಾಗು ಪಠ್ಯೇತರ ವಿಭಾಗದಲ್ಲಿ ಅತ್ಯುನ್ನತ ಸಾಧನೆಗೈದ ಏಳು ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.
    ಸಂಘದ ಅಧ್ಯಕ್ಷ, ಹೆಚ್.ಕೆ.ಮಧು ಪ್ರಾಸ್ತಾವಿಕ ಭಾಷಣದೊಂದಿಗೆ ಸ್ವಾಗತಿಸಿದರು. ಡಾ. ರೋಹಿಣಿ ದೊರೆ ಕಾರ್ಯಕ್ರಮವನ್ನು ನಿರೂಪಿಸಿದರು. ಮಹಿಳಾ ವಿಭಾಗದ ಕಾರ್ಯದರ್ಶಿ, ಶಿಲ್ಪಾ ಶೆಟ್ಟಿ ವಂದಿಸಿದರು.