Tag: PV Sindhu

  • ಪಿ.ವಿ. ಸಿಂಧುಗೆ ಮೆಗಾ ಸ್ಟಾರ್ ಸನ್ಮಾನ

    ಪಿ.ವಿ. ಸಿಂಧುಗೆ ಮೆಗಾ ಸ್ಟಾರ್ ಸನ್ಮಾನ

    ಹೈದರಾಬಾದ್: ಕ್ರೀಡಾ ಪಟು ಪಿ.ವಿ. ಸಿಂಧುಗೆ ಟಾಲಿವುಡ್ ನಟ ಚಿರಂಜೀವಿ ವಿಶೇಷ ಔತಣಕೂಟ ಏರ್ಪಡಿಸಿ ಸನ್ಮಾನ ಮಾಡಿದ್ದಾರೆ.

    ಟೊಕಿಯೋ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದು ಪಿ.ವಿ.ಸಿಂಧು ದೇಶಕ್ಕೆ ಕೀರ್ತಿ ತಂದಿದ್ದರು. ಒಲಿಂಪಿಕ್ಸ್ ಇತಿಹಾಸದಲ್ಲಿ ಒಂದಕ್ಕಿಂತ ಹೆಚ್ಚು ಪದಕ ಗೆದ್ದ ಮಹಿಳಾ ಕ್ರೀಡಾಪಟು ಎಂಬ ಹೆಗ್ಗಳಿಕೆಗೂ ಸಿಂಧು ಪಾತ್ರರಾಗಿದ್ದರು. ಪದಕ ಗೆದ್ದು ದೇಶದ ಹಿರಿಮೆ ಹೆಚ್ಚಿಸಿದ ಸಿಂಧುಗೆ ದೇಶಾದ್ಯಂತ ಅಭಿನಂದನೆಗಳ ಮಹಾಪೂರವೇ ಹರಿದುಬಂದಿತ್ತು. ಇದೀಗ ಮೆಗಾ ಸ್ಟಾರ್ ಚಿರಂಜೀವಿ ಮತ್ತು ಅವರ ಪುತ್ರ ರಾಮ್ ಚರಣ್ ಅವರು ತಮ್ಮ ಮನೆಯಲ್ಲಿ ಸಾಧಕಿ ಸಿಂಧು ಅವರಿಗಾಗಿ ಒಂದು ವಿಶೇಷ ಔತಣಕೂಟವನ್ನೇ ಏರ್ಪಡಿಸಿದ್ದರು. ಇದೇ ವೇಳೆ ತೆಲುಗು ಚಿತ್ರರಂಗದ ಗಣ್ಯರು ಸಿಂಧುಗೆ ಸನ್ಮಾನಿಸಿದ್ದಾರೆ ಈ ವೀಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ನಟ ಚಿರಂಜೀವಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಜಾತಿ ಗಣತಿ ವರದಿಯನ್ನ ಬಿಜೆಪಿ ಒಪ್ಪಿಕೊಳ್ಳಲು ತಯಾರಿಲ್ಲ: ಸಿದ್ದರಾಮಯ್ಯ

    ವಿಶೇಷ ಔತಣಕೂಟದಲ್ಲಿ ಅತಿಥಿಗಳಾಗಿ ತೆಲುಗು ಚಿತ್ರರಂಗದ ಸೆಲೆಬ್ರಿಟಿಗಳು ಮತ್ತು ತೆಲಂಗಾಣದ ಇತರ ಪ್ರಸಿದ್ಧ ವ್ಯಕ್ತಿಗಳು ಸೇರಿದ್ದರು. ತೆಲಂಗಾಣ ಐಟಿ ಪ್ರಧಾನ ಕಾರ್ಯದರ್ಶಿ ಜಯೇಶ್ ರಂಜನ್, ನಟಿ ಸುಹಾಸಿನಿ, ನಾಗಾರ್ಜುನ ಮತ್ತು ಅವರ ಪುತ್ರ ಅಖಿಲ್, ರಾಣಾ ದಗ್ಗುಬಾಟಿ, ವರುಣ್ ತೇಜ್, ಸಾಯಿ ಧರಮ್ ತೇಜ್, ನಿರ್ಮಾಪಕ ಅಲ್ಲು ಅರವಿಂದ್ ಮತ್ತು ಇತರರು ಸೇರಿದ್ದರು.

    ಪ್ರೀತಿಯ ಅತಿಥಿಗಳು ಮತ್ತು ಉತ್ತಮ ಸಂಭಾಷಣೆಗಳೊಂದಿಗೆ ಈ ಸಂಭ್ರಮದ ಪಾಟೀಯಲ್ಲಿ ನಾನು ಕಳೆದಿದ್ದೇನೆ. ನಾನು ಈ ಔತಣಕೂಟದ ಭಾಗವಾಗಿರುವುದು ತುಂಬಾ ಸಂತೋಷವಾಗಿದೆ. ಧನ್ಯವಾದಗಳು ಚಿರಂಜೀವಿ ಸರ್ ಎಂದು ಸಿಂಧು ಕೂಡ ಟ್ವೀಟ್ ಮಾಡಿದ್ದಾರೆ.

  • ಕೊಟ್ಟ ಮಾತಿನಂತೆ ಸಿಂಧು ಜೊತೆ ಐಸ್‍ಕ್ರೀಂ ಸವಿದ ಮೋದಿ

    ಕೊಟ್ಟ ಮಾತಿನಂತೆ ಸಿಂಧು ಜೊತೆ ಐಸ್‍ಕ್ರೀಂ ಸವಿದ ಮೋದಿ

    ನವದೆಹಲಿ: ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿ ಬಂದ ನಂತರ ನಿಮ್ಮೊಂದಿಗೆ ಐಸ್‍ಕ್ರೀಂ ಸೇವಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ ಸಿಂಧು ಅವರಿಗೆ ಮಾತುಕೊಟ್ಟಿದ್ದರು. ಇದೀಗ ಪಿ.ವಿ ಸಿಂಧು ಜೊತೆ ಐಸ್‍ಕ್ರೀಂ ಸವಿಯುವ ಮೂಲಕ ಮೋದಿ ತಮ್ಮ ಮಾತನ್ನು ಉಳಿಸಿಕೊಂಡಿದ್ದಾರೆ.

    ಮೋದಿ ತಮ್ಮ ನಿವಾಸದಲ್ಲಿ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ ಭಾರತೀಯ ಕ್ರೀಡಾಪಟುಗಳಿಗೆ ಔತಣಕೂಟ ಏರ್ಪಡಿಸಿದ್ದರು. ಈ ವೇಳೆ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದ ಸಿಂಧು ಜೊತೆ ಕೂತು ಐಸ್‍ಕ್ರೀಂ ಸೇವಿಸುತ್ತ ಕೆಲಹೊತ್ತು ಮಾತುಕತೆ ನಡೆಸಿದ್ದಾರೆ. ಇದನ್ನೂ ಓದಿ: ಫೋಟೋ ಹಂಚಿಕೊಂಡು ಧನ್ಯವಾದ ಸಲ್ಲಿಸಿದ ಚಿನ್ನದ ಹುಡುಗ ನೀರಜ್ ಚೋಪ್ರಾ

    ಔತಣಕೂಟದಲ್ಲಿ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ ಕ್ರೀಡಾಪಟುಗಳೆಲ್ಲರೂ ಭಾಗವಹಿಸಿದ್ದರು. ಅವರೆಲ್ಲರೊಂದಿಗೆ ಮೋದಿ ಮಾತುಕತೆ ನಡೆಸಿ ಫೋಟೋಗೆ ಫೋಸ್ ನೀಡಿದ್ದಾರೆ. ಮೋದಿ ವಿಶೇಷವಾಗಿ ಚಿನ್ನದ ಹುಡುಗ ನೀರಜ್ ಚೋಪ್ರಾ ಅವರ ಮೆಚ್ಚಿನ ಚೂರ್ಮಾ ಮಾಡಿಸಿ ಊಟ ಬಡಿಸಿದ್ದಾರೆ. ಭಾರತದ ಕುಸ್ತಿಪಟುಗಳ ಮತ್ತು ಹಾಕಿ ತಂಡದ ಎಲ್ಲ ಆಟಗಾರರೊಂದಿಗೂ ಕೂಡ ಮೋದಿ ಕುಶಲೋಪರಿ ವಿಚಾರಿಸಿ ಅವರ ಸಾಧನೆಯನ್ನು ಮನಸಾರೆ ಕೊಂಡಾಡಿದರು.

  • ಸಿಂಧುಗೆ ಜಯ – ಭಾರತಕ್ಕೆ ಕಂಚಿನ ಸಿಂಧೂರ

    ಸಿಂಧುಗೆ ಜಯ – ಭಾರತಕ್ಕೆ ಕಂಚಿನ ಸಿಂಧೂರ

    ಟೋಕಿಯೋ: ಮಹಿಳಾ ಬ್ಯಾಡ್ಮಿಂಟನ್ ಸಿಂಗಲ್ಸ್ ನಲ್ಲಿ ಪಿವಿ ಸಿಂಧು ಕಂಚಿನ ಪದಕ ಗೆದ್ದಿದ್ದಾರೆ. ಈ ಮೂಲಕ ಸತತ ಎರಡು ಒಲಿಂಪಿಕ್ಸ್ ನಲ್ಲಿ ಭಾರತದ ಪರ ಪದಕ ಪಡೆದ ಮೊದಲ  ಮಹಿಳಾ ಆಟಗಾರ್ತಿ ಎಂಬ ದಾಖಲೆ ಬರೆದಿದ್ದಾರೆ.

    ಇಂದು ನಡೆದ ಪಂದ್ಯದಲ್ಲಿ ಚೀನಾದ ಬಿಂಗ್ ಜಿಯಾವೋ ವಿರುದ್ಧ 21-13, 21-15 ನೇರ ಸೆಟ್‍ಗಳಿಂದ ಜಯಗಳಿಸಿ ಕಂಚಿನ ಪದಕ ಗೆದ್ದಿದ್ದಾರೆ. 2016ರ ರಿಯೋ ಒಲಿಂಪಿಕ್ಸ್ ನಲ್ಲಿ ಸಿಂಧು ಫೈನಲ್ ನಲ್ಲಿ ಸೋತು ಬೆಳ್ಳಿ ಪದಕವನ್ನು ಗೆದ್ದಿದ್ದರು.

    ನಿನ್ನೆ ನಡೆದ ಪಂದ್ಯದಲ್ಲಿ ವಿಶ್ವದ ನಂಬರ್ 1 ಬ್ಯಾಡ್ಮಿಂಟನ್ ಆಟಗಾರ್ತಿ ತೈ ತ್ಸು ಯಿಂಗ್ ವಿರುದ್ಧ ಸಿಂಧು ಸೋಲನ್ನು ಅನುಭವಿಸಿದ್ದರು. ಇಂದು ಆರಂಭದಿಂದಲೇ ಭರ್ಜರಿ ಆಟ ಪ್ರದರ್ಶಿಸಿ ಎದುರಾಳಿಯನ್ನು ಸೋಲಿಸಿ ಭಾರತಕ್ಕೆ ಎರಡನೇ ಪದಕವನ್ನು ತಂದುಕೊಟ್ಟಿದ್ದಾರೆ. ಇದನ್ನೂ ಓದಿ : ಡಿಸ್ಕಸ್ ಥ್ರೋನಲ್ಲಿ ಕಮಲ್‍ಪ್ರೀತ್ ಅಚ್ಚರಿ- ಫೈನಲ್‍ಗೆ ಲಗ್ಗೆ

    ಪುರುಷರ 66 ಕೆಜಿ ಕುಸ್ತಿ ವಿಭಾಗದಲ್ಲಿ ಸುಶೀಲ್ ಕುಮಾರ್ 2008ರ ಬೀಜಿಂಗ್ ಒಲಿಂಪಿಕ್ಸ್ ನಲ್ಲಿ ಕಂಚು, 2012ರ ಲಂಡನ್ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದಿದ್ದರು.

  • ಸೆಮಿಫೈನಲ್‍ನಲ್ಲಿ ಎಡವಿದ ಪಿ.ವಿ.ಸಿಂಧು- ಬ್ಯಾಡ್ಮಿಂಟನ್‍ನಲ್ಲಿ ಚಿನ್ನದ ಕನಸು ಭಗ್ನ

    ಸೆಮಿಫೈನಲ್‍ನಲ್ಲಿ ಎಡವಿದ ಪಿ.ವಿ.ಸಿಂಧು- ಬ್ಯಾಡ್ಮಿಂಟನ್‍ನಲ್ಲಿ ಚಿನ್ನದ ಕನಸು ಭಗ್ನ

    ಟೋಕಿಯೋ: ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು ಸೆಮಿ ಫೈನಲ್ಸ್ ನಲ್ಲಿ ಮುಗ್ಗರಿಸಿದ್ದು, ಈ ಮೂಲಕ ಬ್ಯಾಡ್ಮಿಂಟನ್‍ನಲ್ಲಿ ಭಾರತಕ್ಕೆ ಚಿನ್ನದ ಪದಕ ಕೈ ತಪ್ಪಿದಂತಾಗಿದೆ.

    ಮುಸಾಶಿನೋ ಫಾರೆಸ್ಟ್ ಸ್ಪೋರ್ಟ್ ಪ್ಲಾಜಾದಲ್ಲಿ ನಡೆದ ಮಹಿಳೆಯರ ಸಿಂಗಲ್ಸ್ ಬ್ಯಾಡ್ಮಿಂಟನ್‍ನಲ್ಲಿ ವಿಶ್ವದ ನಂ.1 ಆಟಗಾರ್ತಿ ಚೈನೀಸ್ ತೈಪೆ ತೈ ಜು ಯಿಂಗ್ ಆಕ್ರಮಣಕಾರಿ ಆಟವಾಡಿದರು. ಹೀಗಾಗಿ 21-18, 21-12 ನೇರ ಸೆಟ್‍ಗಳಲ್ಲಿ ಪಿ.ವಿ.ಸಿಂಧು ಸೋಲನುಭವಿಸಿದ್ದಾರೆ. ಈ ಪಂದ್ಯದಲ್ಲಿ ಗೆಲುವಿನೊಂದಿಗೆ ತೈ ಜು ಯಿಂಗ್ ಫೈನಲ್ ಪ್ರವೇಶಿಸಿದ್ದಾರೆ.

    ಪಿ.ವಿ.ಸಿಂಧು ಅವರು ಕಂಚಿನ ಪದಕಕ್ಕಾಗಿ ಸ್ಪರ್ಧಿಸಲಿದ್ದಾರೆ. ಭಾನುವಾರ ನಡೆಯಲಿರುವ ಪಂದ್ಯದಲ್ಲಿ ಪಿ.ವಿ.ಸಿಂಧು ಅವರು ಹಿ ಬಿಂಗ್ ಜಿಯಾವೋ ಅವರೊಂದಿಗೆ ಸೆಣಸಲಿದ್ದಾರೆ.

    ಸಿಂಧು ವಿರುದ್ಧ ತೈ ಜು ಯಿಂಗ್ ಈ ಮೊದಲು 13-7 ರ ಗೆಲುವಿನ ದಾಖಲೆ ಹೊಂದಿದ್ದರು. ಕಳೆದ 3 ಪಂದ್ಯಗಳಲ್ಲಿ ಸಿಂಧುಗೆ ಸೋಲುಣಿಸಿದ್ದಾರೆ. ಆದರೆ ರಿಯೋ ಒಲಿಂಪಿಕ್ಸ್, 2018ರ ವರ್ಲ್ಡ್ ಟೂರ್ ಫೈನಲ್ಸ್, 2019ರ ವಿಶ್ವ ಚಾಂಪಿಯನ್‍ಶಿಪ್ ಮೊದಲಾದ ಪಂದ್ಯಗಳಲ್ಲಿ ತೈ ಜು ಯಿಂಗ್ ಗೆ ಪಿ.ವಿ.ಸಿಂಧು ಸೋಲಿನ ರುಚಿ ತೋರಿಸಿದ್ದರು.

  • ಬ್ಯಾಡ್ಮಿಂಟನ್ ಸೆಮಿಫೈನಲ್ ಪ್ರವೇಶಿಸಿದ ಪಿ.ವಿ ಸಿಂಧು

    ಬ್ಯಾಡ್ಮಿಂಟನ್ ಸೆಮಿಫೈನಲ್ ಪ್ರವೇಶಿಸಿದ ಪಿ.ವಿ ಸಿಂಧು

    ಟೋಕಿಯೋ: ಒಲಿಂಪಿಕ್ಸ್ ಕ್ರೀಡಾಕೂಟದ ಬ್ಯಾಡ್ಮಿಂಟನ್ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಪಿ.ವಿ ಸಿಂಧು ಸೆಮಿಫೈನಲ್‍ಗೆ ಲಗ್ಗೆ ಇಟ್ಟಿದ್ದಾರೆ.

    ಕ್ವಾರ್ಟರ್ ಫೈನಲ್‍ನಲ್ಲಿ ಜಪಾನ್‍ನ ಅಕಾನೆ ಯಮಗೂಚಿ ವಿರುದ್ಧ 21-13, 22-20 ಅಂಕಗಳೊಂದಿಗೆ ಸಿಂಧು ಗೆಲುವಿನ ನಗೆ ಬೀರಿದರು. ಈ ಮೂಲಕ ಸೆಮಿಫೈನಲ್‍ಗೆ ಲಗ್ಗೆ ಇಟ್ಟಿದ್ದಾರೆ. ಇದನ್ನೂ ಓದಿ: ಭಾರತಕ್ಕೆ ಮತ್ತೊಂದು ಪದಕ ಖಚಿತ – ಸೆಮಿಗೆ ಲವ್ಲೀನಾ ಎಂಟ್ರಿ

    4 ಪಂದ್ಯಗಳನ್ನು ಸತತವಾಗಿ ಗೆಲ್ಲುವ ಮೂಲಕ ಸೆಮಿಫೈನಲ್ ಪ್ರವೇಶ ಪಡೆದಿದ್ದಾರೆ. ರಾಚನೋಕ್ ಇಂಟನಾನ್ ಮತ್ತು ತೈ ತ್ಸುಯಿಂಗ್ ನಡುವಿನ ಪಂದ್ಯದಲ್ಲಿ ವಿಜಯಿಯಾದವರ ಜೊತೆ ನಾಳೆ ಸಿಂಧು ಸೆಮಿಫೈನಲ್ ಆಡಲಿದ್ದಾರೆ.

  • ಒಲಿಂಪಿಕ್ಸ್ ಡೋಪಿಂಗ್ ಪರೀಕ್ಷೆ- 18 ಅಥ್ಲೀಟ್ಸ್ ಅನರ್ಹ

    ಒಲಿಂಪಿಕ್ಸ್ ಡೋಪಿಂಗ್ ಪರೀಕ್ಷೆ- 18 ಅಥ್ಲೀಟ್ಸ್ ಅನರ್ಹ

    ಟೋಕಿಯೋ: ಜಪಾನ್‍ನಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್ ನಲ್ಲಿ ಡೋಪಿಂಗ್ ಪರೀಕ್ಷೆಯಲ್ಲಿ 18 ಅಥ್ಲೀಟ್ಸ್ ಗಳು ಅನರ್ಹರಾಗಿದ್ದಾರೆ. ಈಗಾಗಲೇ ಪದಕ ಜಯಿಸಿದವರು ಕೂಡ ಡೋಪಿಂಗ್ ಪರೀಕ್ಷೆಯಲ್ಲಿ ಅನರ್ಹರಾದ ಬಗ್ಗೆ ವರದಿಯಾಗಿದೆ.

    ಪ್ರಮುಖವಾಗಿ ಸ್ವಿಸ್ ಓಟಗಾರ ಅಲೆಕ್ಸ್ ವಿಲ್ಸನ್ ಅನರ್ಹವಾಗಿರುವ ಬಗ್ಗೆ ವರದಿಯಾಗಿದ್ದು, ಅಲೆಕ್ಸ್ ವಿಲ್ಸನ್ ಮೂಲತಃ ಜಮೈಕಾದವರಾಗಿದ್ದು ಪ್ರಸ್ತುತ ಸ್ವಿಸ್ ಪರವಾಗಿ ವೇಗದ ಓಟದ ವಿಭಾಗದಲ್ಲಿ ಪ್ರತಿನಿದಿಸುತ್ತಿದ್ದರು. ಆದರೆ ಇದೀಗ ಒಲಿಂಪಿಕ್ಸ್ ಸಮಿತಿ ನಡೆಸಿದ ಡೋಪಿಂಗ್ ಪರೀಕ್ಷೆಯಲ್ಲಿ ವಿಫಲರಾಗಿ ಕೂಟದಿಂದ ಹೊರ ಬಿದ್ದಿದ್ದಾರೆ. ಇದನ್ನೂ ಓದಿ: ಒಲಿಂಪಿಕ್ಸ್ ಕ್ರೀಡಾಪಟುಗಳು ಗೆದ್ದ ಪದಕವನ್ನು ಕಚ್ಚಲು ಇದು ಅಸಲಿ ಕಾರಣ!

    ಟೋಕಿಯೋ ಒಲಿಂಪಿಕ್ಸ್‍ನಲ್ಲಿ ಭಾರತದ ಪರ ಪದಕ ಭರವಸೆ ಮೂಡಿಸಿದ್ದ ಮಹಿಳಾ ಬಾಕ್ಸರ್ ಮೇರಿ ಕೋಮ್ ಪ್ರೀ ಕ್ವಾರ್ಟರ್ ಫೈನಲ್‍ನಲ್ಲಿ ಹೊರ ಬಿದ್ದಿದ್ದಾರೆ. 51 ಕೆಜಿ ವಿಭಾಗದಲ್ಲಿ ಕೊಲಂಬಿಯಾದ ಇಂಗ್ರಿಟ್ ವೆಲೆನ್ಸಿಯಾ ವಿರುದ್ಧ 16 ಸುತ್ತು ಸೆಣಸಿ, 2-3 ಅಂತರದಲ್ಲಿ ಸೋಲನ್ನಪ್ಪಿದ್ದಾರೆ. ಇನ್ನುಳಿದಂತೆ ಪುರುಷರ ಹಾಕಿ ತಂಡ ಅರ್ಜೇಂಟೀನಾ ವಿರುದ್ಧ 3-1 ಗೋಲ್‍ಗಳಿಂದ ಜಯಿಸಿ ಕ್ವಾರ್ಟರ್ ಫೈನಲ್‍ಗೆ ಲಗ್ಗೆ ಇಟ್ಟಿದೆ. ಆದರೆ, ಮಹಿಳೆಯರ ತಂಡ ಬ್ರಿಟನ್ ವಿರುದ್ಧ 1-4 ಗೋಲ್‍ಗಳಿಂದ ಸೋಲಪ್ಪಿ ನಿರಾಸೆ ಅನುಭವಿಸಿದೆ.

    ಬ್ಯಾಡ್ಮಿಂಟನ್‍ನಲ್ಲಿ ಪಿವಿ ಸಿಂಧೂ, 91 ಕೆಜಿ ವಿಭಾಗದ ಬಾಕ್ಸಿಂಗ್‍ನಲ್ಲಿ ಸತೀಶ್‍ಕುಮಾರ್ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ಶೂಟಿಂಗ್‍ನಲ್ಲಿ ಮನು ಬಾಕರ್, ಆರ್ಚರಿಯಲ್ಲಿ ಅತನುದಾಸ್ ಪ್ರೀ ಕ್ವಾರ್ಟರ್ ಫೈನಲ್ ತಲುಪಿದ್ದು, ಭಾರತಕ್ಕೆ ಪದಕ ಭರವಸೆ ಮೂಡಿಸಿದ್ದಾರೆ.

  • ಟೋಕಿಯೋ ಒಲಿಂಪಿಕ್ಸ್ ಪದಕಕ್ಕೆ ಮುತ್ತಿಕ್ಕಲು ಸಜ್ಜಾದ ಭಾರತೀಯ ಕ್ರೀಡಾಪಟುಗಳು

    ಟೋಕಿಯೋ ಒಲಿಂಪಿಕ್ಸ್ ಪದಕಕ್ಕೆ ಮುತ್ತಿಕ್ಕಲು ಸಜ್ಜಾದ ಭಾರತೀಯ ಕ್ರೀಡಾಪಟುಗಳು

    ಟೋಕಿಯೋ: 2021ರ ಟೋಕಿಯೋ ಒಲಿಂಪಿಕ್ಸ್‍ಗೆ ಕ್ಷಣಗಣನೆ ಆರಂಭವಾಗಿದೆ. ಇನ್ನೂ ಕೇವಲ ಕೆಲವೇ ಗಂಟೆಗಳು ಮಾತ್ರ ಭಾಗಿ ಉಳಿದುಕೊಂಡಿರುವಂತೆ, ಭಾರತ ಹಲವು ಕ್ರೀಡಾಪಟುಗಳು ಪದಕ ಬೇಟೆಯಾಡುವ ತವಕದಲ್ಲಿದ್ದಾರೆ.

    2020ರಲ್ಲಿ ನಡೆಯಬೇಕಿದ್ದ ಟೋಕಿಯೋ ಒಲಿಂಪಿಕ್ಸ್ ಕೊರೊನಾದಿಂದಾಗಿ ಒಂದು ವರ್ಷ ಮುಂದೂಡಲ್ಪಟ್ಟಿತ್ತು. ಈ ವರ್ಷ ಜುಲೈ 23ರಿಂದ ಆಗಸ್ಟ್ 8 ರವರೆಗೆ ಜಪಾನ್‍ನ ಟೋಕಿಯೋದಲ್ಲಿ ನಡೆಯುತ್ತಿದೆ.

    ಈಗಾಗಲೇ ಭಾರತದ 120 ಕ್ರೀಡಾಪಟುಗಳು ಟೋಕಿಯೋ ತಲುಪಿದ್ದಾರೆ. 120 ಕ್ರೀಡಾಪಟುಗಳ ಪೈಕಿ 5 ಮಂದಿ ಕನ್ನಡಿಗರು ಸೇರಿದ್ದಾರೆ. ಈ ಮೂಲಕ ಭಾರತ ಒಲಿಂಪಿಕ್ಸ್ ಇತಿಹಾಸದಲ್ಲಿ ಈ ಬಾರಿ ಅತೀ ಹೆಚ್ಚಿನ ಕ್ರೀಡಾಪಟುಗಳನ್ನು ಕಳುಹಿಸಿದೆ. ಈ ಬಾರಿ 68 ಪುರುಷ ಸ್ಪರ್ಧಿಗಳು ಮತ್ತು 52 ಮಹಿಳಾ ಸ್ಪರ್ಧಿಗಳು ವಿವಿಧ ಕ್ರೀಡೆಯಲ್ಲಿ ಭಾಗವಹಿಸಲಿದ್ದಾರೆ. ಇದಲ್ಲದೆ ಈ ಬಾರಿ ವಿಶೇಷವೆಂಬಂತೆ ಯುವ ಪಡೆ ಟೋಕಿಯೋಗೆ ತೆರಳಿದೆ. 120 ಕ್ರೀಡಾಪಟುಗಳ ಪೈಕಿ 10ಕ್ಕೂ ಹೆಚ್ಚು ಕ್ರೀಡಾಪಟುಗಳು 20 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದು, ಭಾರತ ಭವಿಷ್ಯದ ಕ್ರೀಡಾಪಟುಗಳಾಗಿ ಗುರುತಿಸಿಕೊಂಡಿದ್ದಾರೆ. ಕೊರೊನಾದಿಂದಾಗಿ ಬಹಳ ವಿಭಿನ್ನವಾಗಿ ಈ ಬಾರಿಯ ಒಲಿಂಪಿಕ್ಸ್ ಆಯೋಜನೆ ಮಾಡಲಾಗಿದೆ. ಇದನ್ನೂ ಓದಿ: ಇಂಗ್ಲೆಂಡ್ ಸರಣಿ ಆರಂಭಕ್ಕೂ ಮುನ್ನ ಟೀಂ ಇಂಡಿಯಾಗೆ ಗಾಯದ ಬರೆ

    ಈಗಾಗಲೇ ಭಾರತದ ಸ್ಟಾರ್ ಆಟಗಾರರನ್ನು ಗಮನದಲ್ಲಿಟ್ಟುಕೊಂಡು ಈ ಬಾರಿ ಈ ಕ್ರೀಡಾಪಟುಗಳಿಂದ ಪದಕ ನಿರೀಕ್ಷೆಗಳನ್ನು ಕ್ರೀಡಾ ತಜ್ಞರು ವ್ಯಕ್ತಪಡಿಸಿದ್ದಾರೆ. ಈ ವರ್ಷ ಎಲ್ಲ ಕ್ರೀಡಾಪಟುಗಳಿಗೆ ಅಭ್ಯಾಸಕ್ಕಾಗಿ ಸಾಕಷ್ಟು ಸಮಯವಕಾಶ ಸಿಕ್ಕಿರುವುದರಿಂದಾಗಿ ಪದಕ ಮುಡಿಗೇರಿಸಿಕೊಳ್ಳುವ ಅವಕಾಶವಿದೆ.

    ಭಾರತ ಸ್ಟಾರ್ ಅಥ್ಲೀಟ್‍ಗಳ ಪೈಕಿ ಪಿ.ವಿ ಸಿಂಧು ಬ್ಯಾಡ್ಮಿಂಟನ್, ಮೇರಿ ಕೋಮ್ ಬಾಕ್ಸಿಂಗ್, ಅಮಿತ್ ಫಂಗಲ್ ಬಾಕ್ಸಿಂಗ್, ಸಾಕ್ಷಿ ಮಲಿಕ್ ಕುಸ್ತಿ, ವಿನೇಶ್ ಪೊಗಾಟ್ ಕುಸ್ತಿ, ಭಜರಂಗ್ ಪೊನಿಯಾ ಕುಸ್ತಿ, ಮನು ಭಾಕರ್ ಶೂಟಿಂಗ್, ದೀಪಿಕಾ ಕುಮಾರಿ ಆರ್ಚರಿ, ಮೀರಾಬಾಯಿ ಚಾನು ವೇಟ್‍ಲಿಪ್ಟಿಂಗ್‍ನಲ್ಲಿ ಸ್ಪರ್ಧಿಸುತ್ತಿದ್ದು ಇವರೆಲ್ಲರ ಮೇಲೆ ಪದಕದ ನಿರೀಕ್ಷೆ ಇದೆ. ಇವರೊಂದಿಗೆ ಇನ್ನಿತರ ಯುವ ಕ್ರೀಡಾಪಟುಗಳು ಪದಕವನ್ನು ಮುಡಿಗೇರಿಸಿಕೊಳ್ಳಲಿ ಎಂಬುದು ನಮ್ಮೆಲ್ಲರ ಆಶಯ. ಆಲ್ ದಿ ಬೇಸ್ಟ್ ಇಂಡಿಯಾ.

  • ‘ಐ ರಿಟೈರ್’ ಬರೆದು ನಿವೃತ್ತಿಗೆ ಟ್ವಿಸ್ಟ್ ಕೊಟ್ಟ ಸಿಂಧು

    ‘ಐ ರಿಟೈರ್’ ಬರೆದು ನಿವೃತ್ತಿಗೆ ಟ್ವಿಸ್ಟ್ ಕೊಟ್ಟ ಸಿಂಧು

    ನವದೆಹಲಿ: ಭಾರತದ ಹೆಮ್ಮೆಯ ಬ್ಯಾಡ್ಮಿಂಟನ್ ಆಟಗಾರ್ತಿ, ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಪಿ.ವಿ.ಸಿಂಧು ಅವರ ಸಾಮಾಜಿಕ ಜಾಲತಾಣದ ಪೋಸ್ಟ್ ಇದೀಗ ವೈರಲ್ ಆಗಿದ್ದು, ಇದನ್ನು ನೋಡಿದ ಬಹುತೇಕರು ಆಘಾತಕ್ಕೊಳಗಾಗಿದ್ದಾರೆ. ಆದರೆ ಈ ಬಗ್ಗೆ ಕೊನೆಗೆ ಸಿಂಧು ಸ್ಪಷ್ಟಪಡಿಸಿದ್ದಾರೆ.

    ನಿವೃತ್ತಿಯ ಪೋಸ್ಟ್ ಬಗ್ಗೆ ಟ್ವೀಟ್ ಮಾಡಿರುವ ಪಿ.ವಿ.ಸಿಂಧು, ಐ ರಿಟೈರ್ ಎಂದು ದೊಡ್ಡ ಅಕ್ಷರದಲ್ಲಿ ಬರೆದಿದ್ದಾರೆ. ಇದಕ್ಕೆ ಮತ್ತೆ ಸ್ಪಷ್ಟನೆ ನೀಡಿದ್ದಾರೆ. ಆದರೆ ಆರಂಭದಲ್ಲಿ ಈ ಪೋಸ್ಟ್ ನೋಡಿದವರಿಗೆ ಶಾಕ್ ಆಗಿದೆ.

    ಡೆನ್ಮಾರ್ಕ್ ಓಪನ್ ವಾಸ್ ಫೈನಲ್ ಸ್ಟ್ರಾ, ಐ ರಿಟೈರ್ ಎಂದು ಮೊದಲ ಪುಟದಲ್ಲಿ ಬರೆದಿದ್ದಾರೆ. ಈ ಮೂಲಕ ತಮ್ಮ ಅಭಿಮಾನಿಗಳನ್ನು ಗೊಂದಲಕ್ಕೆ ತಳ್ಳಿದ್ದಾರೆ. ಆರಂಭದಲ್ಲಿ ಕುತೂಹಲ ಕೆರಳಿಸುವಂತೆ ಪತ್ರ ಬರೆಯಲಾಗಿದ್ದು, ಅವರ ಅಭಿಮಾನಿಗಳು ಸಹ ಅಷ್ಟೇ ಕುತೂಹಲವಾಗಿ ಒದಿದ್ದಾರೆ. ಆರಂಭದಲ್ಲಿ ಹಾಗೇ ಅನಿಸಿದರೂ, ಪಿವಿ ಸಿಂಧು ಪತ್ರದ ಕೊನೆಗೆ ಯಾವುದಕ್ಕೆ ವಿದಾಯ ಹೇಳಿರುವುದು ಎಂದು ಸ್ಪಷ್ಟಪಡಿಸಿದ್ದಾರೆ.

    ಭಾವನೆಗಳನ್ನು ಸ್ವಚ್ಛಗೊಳಿಸಿ ಆಗಮಿಸುವ ಬಗ್ಗೆ ಯೋಚಿಸುತ್ತಿದ್ದೇನೆ. ಇದರೊಂದಿಗೆ ನಾನು ಹೋರಾಟ ನಡೆಸುತ್ತಿದ್ದೇನೆ. ಇದು ನನಗೆ ತಪ್ಪು ಅನ್ನಿಸುತ್ತಿದೆ. ನಿಮಗೆ ಗೊತ್ತಾ, ಹೀಗಾಗಿಯೇ ನಾನು ಇಂದು ಈ ಬರವಣಿಗೆ ಮೂಲಕ ನಿಮಗೆ ತಿಳಿಸುತ್ತಿದ್ದೇನೆ. ಇದರಿಂದ ಆಘಾತವಾಗಿದೆ, ವಿಚಲಿತರಾಗಿದ್ದೀರಿ ಎಂಬುದು ತಿಳಿದಿದೆ. ಆದರೆ ನೀವು ಓದುವುದನ್ನು ಮುಗಿಸುವಷ್ಟರಲ್ಲಿ ನನ್ನ ಅನಿಸಿಕೆ ಏನು ಎಂಬುದು ನಿಮಗೆ ಸಂಪೂರ್ಣವಾಗಿ ಅರ್ಥವಾಗುತ್ತದೆ. ಇದಕ್ಕೆ ನೀವೂ ಬೆಂಬಲ ಸೂಚಿಸುತ್ತೀರಿ ಎಂಬ ಭರವಸೆ ನನಗಿದೆ ಎಂದು 25 ವರ್ಷದ ಆಟಗಾರ್ತಿ ಪತ್ರದಲ್ಲಿ ತಿಳಿಸಿದ್ದಾರೆ.

    ಕೊರೊನಾ ಮಹಾಮಾರಿ ನನ್ನ ಕಣ್ಣು ತೆರೆಸಿದೆ. ನನ್ನ ವಿರುದ್ಧದ ಕಠಿಣ ಸ್ಪರ್ಧಾಳುಗಳ ವಿರುದ್ಧ ಹೋರಾಡುವುದಕ್ಕೆ ನಾನು ತಯಾರಾಗಿದ್ದೇನೆ. ಹಲ್ಲು ಹಾಗೂ ಉಗುರಿನಿಂದ ಹಿಡಿದು ಆಟದ ಕೊನೆಯ ಶಾಟ್ ಎದುರಿಸುವ ಬಗೆಯನ್ನು ಅರಿತಿದಿದ್ದೇನೆ. ಈ ಹಿಂದೆಯೂ ನಾನು ಇದನ್ನು ಮಾಡಿದ್ದೇನೆ, ಮತ್ತೆ ಮಾಡುತ್ತೇನೆ. ಆದರೆ ಕಣ್ಣಿಗೆ ಕಾಣದ ವೈರಸ್ ವಿರುದ್ಧ ಹೇಗೆ ಹೋರಾಡುವುದು? ಇಡೀ ಜಗತ್ತು ಇದನ್ನು ಸರಿಪಡಿಸಲು ಸಾಧ್ಯವಿಲ್ಲ ಎಂದಿದ್ದಾರೆ.

    ಈ ವೈರಸ್‍ನಿಂದಾಗಿ ತಿಂಗಳುಗಟ್ಟಲೇ ಮನೆಯಲ್ಲೇ ಇರಬೇಕಾಯಿತು. ಈಗಲೂ ನಾವು ಹೊರಗೆ ಕಾಲಿಡಬೇಕೆಂದರೆ ಹಲವು ಪ್ರಶ್ನೆಗಳಿಗೆ ಉತ್ತರಿಸಬೇಕು. ಮನಕಲಕುವ ಹಲವು ಕಥೆಗಳನ್ನು ಕೇಳಿದಾಗ, ನೋಡಿದಾಗ ನನಗೆ ನಾನೇ ಪ್ರಶ್ನಿಸಿಕೊಳ್ಳುವಂತಾಗಿದೆ. ಈ ಜಗತ್ತಿನಲ್ಲಾ ನಾವಿರುವುದು ಎಂಬ ಪ್ರಶ್ನೆ ಕಾಡುತ್ತಿದೆ. ನಾನು ಪ್ರತಿನಿಧಿಸುತ್ತಿರುವ ಡೆನ್ಮಾರ್ಕ್ ಓಪನ್ ಕೊನೆಯ ಪಂದ್ಯ ಅಲ್ಲ. ಇಂದು ನಾನು ಋಣಾತ್ಮಕತೆ, ಹೆದರಿಕೆ, ಅನಿಶ್ಚಿತತೆಯಿಂದ ನಿವೃತ್ತಿ ಪಡೆಯುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ.

    ನಾವು ಕುಗ್ಗಬೇಕಾಗಿಲ್ಲ, ಇದಕ್ಕೆ ನಾವು ಹೆಚ್ಚಿನ ರೀತಿ ಸಿದ್ಧರಾಗಬೇಕಿದೆ. ಎಲ್ಲರೂ ಸೇರಿ ಈ ವೈರಸ್‍ನ್ನು ಸೋಲಿಸಬೇಕಿದೆ. ಇಂದು ನಾವು ಮಾಡುವ ಆಯ್ಕೆಗಳು ನಮ್ಮು ಭವಿಷ್ಯ ಹಾಗೂ ಮುಂದಿನ ಪೀಳಿಗೆಯನ್ನು ನಿರ್ಧರಿಸುತ್ತವೆ. ಇದನ್ನು ವುಗಳನ್ನು ನಿಭಾಯಿಸುವುದರಿಂದ ನಾವು ಹಿಂದೆ ಸರಿಯಬಾರದು ಎಂದು ಕರೆ ನೀಡಿದ್ದಾರೆ.

    ಈ ಪೋಸ್ಟ್ ಓದಿ ನಿಮಗೆ ಶಾಕ್ ಆಗಬಹುದು. ಇದು ನಿಮಗೆ ತಿಳಿಯಬೇಕೆಂದು ಈ ರೀತಿ ಮಾಡಿದೆ. ಸುರಂಗ ದಾಟಿದ ಬಳಿಕ ಬೆಳಕು ಹೊಳೆಯುತ್ತದೆ ಎಂಬ ಭರವಸೆಯನ್ನು ನಾವು ಹೊಂದಬೇಕು. ಹೌದು ಡೆನ್ಮಾರ್ಕ್ ಓಪನ್ ನಡೆಯಲಿಲ್ಲ. ಆದರೆ ನಾನು ತಯಾರಿ ನಡೆಸುವುದನ್ನು ಬಿಡಲಿಲ್ಲ. ಜೀವನ ನಿಮ್ಮ ಬಳಿ ಬರುವಾಗ ತುಂಬಾ ಕಠಿಣವಾಗಿರುತ್ತದೆ. ಹೀಗಾಗಿ ನಾನು ಈಗ ಏಷ್ಯಾ ಓಪನ್‍ಗೆ ತಯಾರಾಗುತ್ತಿದ್ದೇನೆ. ನಾವು ಸುರಕ್ಷಿತ ಜಗತ್ತಿಗೆ ತಲುಪುವವರೆಗೆ ನಮ್ಮ ಕೆಲಸವನ್ನು ಮಾಡಲೇಬೇಕು ಎಂದು ಕೊರೊನಾ ಸಂದರ್ಭದ ಕಷ್ಟಗಳ ಬಗ್ಗೆ ಬರೆದಿದ್ದಾರೆ.

  • ಪಿವಿ ಸಿಂಧುವನ್ನು ಮದುವೆಯಾಗ್ತೀನಿ, ಇಲ್ಲ ಅಂದ್ರೆ ಕಿಡ್ನಾಪ್ – ಡಿಸಿಗೆ 70ರ ವೃದ್ಧನ ಬೇಡಿಕೆ

    ಪಿವಿ ಸಿಂಧುವನ್ನು ಮದುವೆಯಾಗ್ತೀನಿ, ಇಲ್ಲ ಅಂದ್ರೆ ಕಿಡ್ನಾಪ್ – ಡಿಸಿಗೆ 70ರ ವೃದ್ಧನ ಬೇಡಿಕೆ

    ಚೆನ್ನೈ: ಬ್ಯಾಡ್ಮಿಂಟನ್ ಚಾಂಪಿಯನ್ ಪಿವಿ ಸಿಂಧು ಅವರೊಂದಿಗೆ ವಿವಾಹ ಮಾಡಬೇಕು. ಇಲ್ಲವಾದರೆ ಆಕೆಯನ್ನು ಅಪಹರಿಸುತ್ತೇನೆ ಎಂದು 70 ವರ್ಷದ ವೃದ್ಧ ಜಿಲ್ಲಾಧಿಕಾರಿಗಳಿಗೆ ಅರ್ಜಿ ಸಲ್ಲಿಸಿರುವ ಘಟನೆ ತಮಿಳುನಾಡಿನ ರಾಮನಾಥಪುರಂನಲ್ಲಿ ನಡೆದಿದೆ.

    ಡಿಸಿ ಅವರಿಗೆ ಅರ್ಜಿ ಸಲ್ಲಿಸಿದ ವೃದ್ಧನ ಹೆಸರು ಮಲೈಸ್ವಾಮಿ. ಆದರೆ ಅರ್ಜಿಯಲ್ಲಿ ಆತ ತನಗೆ ಕೇವಲ 16 ವರ್ಷ ಎಂದು ನಮೂದಿಸಿದ್ದು, ಸಿಂಧುರೊಂದಿಗೆ ವಿವಾಹಕ್ಕೆ ಬೇಕಾದ ಸಿದ್ಧತೆ ನಡೆಸಿಕೊಡಿ ಎಂದು ಕೋರಿದ್ದಾರೆ. ಅಲ್ಲದೇ ಮದುವೆ ಸಿದ್ಧತೆ ಮಾಡದಿದ್ದರೆ ಸಿಂಧುರನ್ನ ಅಪಹರಣ ಮಾಡುವುದಾಗಿಯೂ ತಿಳಿಸಿದ್ದಾರೆ.

    ಜಿಲ್ಲಾಧಿಕಾರಿಗಳು ಪ್ರತಿ ತಿಂಗಳು ಜನರ ಸಮಸ್ಯೆಗಳನ್ನು ಕೇಳಲು ಸಭೆಯನ್ನು ಏರ್ಪಡಿಸುತ್ತಾರೆ. ಈ ಸಭೆಗೆ ಆಗಮಿಸಿದ್ದ ಮಲೈಸ್ವಾಮಿ ಅವರು ಸಿಂಧು ಆಡುವ ಶೈಲಿ ತನಗೆ ಬಹಳ ಇಷ್ಟವಾಗಿದ್ದು, ಆಕೆಯನ್ನು ತನ್ನ ಮದುವೆಯಾಗುವ ಯೋಚನೆ ಇದೆ ಎಂದು ಇಬ್ಬರ ಫೋಟೋಗಳನ್ನು ಜಿಲ್ಲಾಧಿಕಾರಿಗಳಿಗೆ ನೀಡಿದ್ದಾರೆ.

    ಅರ್ಜಿಯಲ್ಲಿ ತಾನು 2004 ರಲ್ಲಿ ಜನಿಸಿರುವುದಾಗಿ ಹೇಳಿರುವ ಮಲೈಸ್ವಾಮಿ ಜಿಲ್ಲಾಧಿಕಾರಿಗೆ ಅರ್ಜಿ ನೀಡಿದ್ದಾರೆ. ಇಂತಹ ವಿಚಿತ್ರ ಅರ್ಜಿ ಪಡೆದಿರುವ ಜಿಲ್ಲಾಧಿಕಾರಿಗಳು ಹಾಗೂ ಸ್ಥಳದಲ್ಲಿದ್ದ ಜನರು ಕ್ಷಣ ಕಾಲ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಆದರೆ ಸಿಂಧುರೊಂದಿಗೆ ತನ್ನ ಮದುವೆ ಮಾಡಲೇ ಬೇಕು ಎಂದು ವೃದ್ಧ ಮಲೈಸ್ವಾಮಿ ಪಟ್ಟು ಹಿಡಿದಿರುವುದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

  • ಪಿ.ವಿ.ಸಿಂಧುರಿಂದ ಯುವ ದಸರಾ ಉದ್ಘಾಟನೆ- ಸಿಎಂ ಆಹ್ವಾನ

    ಪಿ.ವಿ.ಸಿಂಧುರಿಂದ ಯುವ ದಸರಾ ಉದ್ಘಾಟನೆ- ಸಿಎಂ ಆಹ್ವಾನ

    ಬೆಂಗಳೂರು: ಯುವ ದಸರಾ ಉದ್ಘಾಟನೆ ಮಾಡುವಂತೆ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‍ಶಿಪ್‍ನಲ್ಲಿ ಚಿನ್ನ ಪದಕ ಗೆದ್ದ ಪಿ.ವಿ.ಸಿಂಧು ಅವರಿಗೆ ಸಿಎಂ ಬಿ.ಎಸ್.ಯಡಿಯೂರಪ್ಪ ಆಹ್ವಾನ ನೀಡಿದ್ದಾರೆ.

    ಈ ಕುರಿತು ಪತ್ರ ಬರೆದಿರುವ ಸಿಎಂ ಯಡಿಯೂರಪ್ಪ ಅವರು, ಕರ್ನಾಟಕ ಸರ್ಕಾರವು ವಿಶ್ವವಿಖ್ಯಾತ ದಸರಾ ಹಬ್ಬವನ್ನು ನಡೆಸುತ್ತಿದೆ. ಒಂಬತ್ತು ದಿನಗಳ ಕಾಲ ವಿವಿಧ ಕಾರ್ಯಕ್ರಮಗಳು ನಡೆಯಲಿದ್ದು, ದೇಶ-ವಿದೇಶದಿಂದ ಲಕ್ಷಂತಾರ ಜನರು ಮೈಸೂರಿಗೆ ಭೇಟಿ ನೀಡುತ್ತಾರೆ. 410ನೇ ದಸರಾ ಸಂಭ್ರಮಕ್ಕೆ ವಿವಿಧ ಕ್ಷೇತ್ರದ ಸಾಧಕರು, ಶ್ರೇಷ್ಠ ವ್ಯಕ್ತಿಗಳು ಸಾಕ್ಷಿಯಾಗಲಿದ್ದಾರೆ ಎಂದು ತಿಳಿಸಿದ್ದಾರೆ.

    ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‍ಶಿಪ್‍ನಲ್ಲಿ ಚಿನ್ನ ಪದಕ ಗೆದ್ದು ಭಾರತದ ಕೀರ್ತಿ ಪತಾಕೆ ಹಾರಿಸಿದ್ದೀರಿ. ಲಕ್ಷಾಂತರ ಯುವ ಕ್ರೀಡಾ ಪ್ರತಿಭೆಗಳಿಗೆ ಸ್ಫೂರ್ತಿಯಾಗಿರುವ ನೀವು ಅಕ್ಟೋಬರ್ 1ರಂದು ಯುವ ದಸರಾವನ್ನು ಉದ್ಘಾಟನೆ ಮಾಡಬೇಕು. ನಿಮ್ಮಿಂದ ಯುವ ದಸರಾ ಉದ್ಘಾಟನೆ ಆಗಬೇಕು ಎನ್ನುವುದು ನಮ್ಮ ಬೇಡಿಕೆಯಾಗಿದೆ ಎಂದು ಸಿಎಂ ಯಡಿಯೂರಪ್ಪ, ಪಿ.ವಿ.ಸಿಂಧು ಅವರಿಗೆ ಪತ್ರದ ಮೂಲಕ ಮನವಿ ಮಾಡಿಕೊಂಡಿದ್ದಾರೆ.

    ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‍ಶಿಪ್‍ನಲ್ಲಿ ಚಿನ್ನ ಪದಕ ಗೆದ್ದ ಪಿ.ವಿ.ಸಿಂಧು ಅವರಿಗೆ ಸಿಎಂ ಬಿ.ಎಸ್‍.ಯಡಿಯೂರಪ್ಪನವರ ನೇತೃತ್ವದ ಸರ್ಕಾರವು 10 ಲಕ್ಷ ರೂ. ಬಹುಮಾನ ಘೋಷಿಸಿತ್ತು.

    ಈ ಬಾರಿ ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾವನ್ನು ಕನ್ನಡದ ಹಿರಿಯ ಸಾಹಿತಿ ಎಸ್.ಎಲ್ ಭೈರಪ್ಪ ಅವರು ಉದ್ಘಾಟನೆ ಮಾಡಲಿದ್ದಾರೆ. ಸೆಪ್ಟೆಂಬರ್ 29ರಂದು ಬೆಳಗ್ಗೆ ಸುಮಾರು 9.30ರ ವೃಶ್ಚಿಕ ಲಗ್ನದಲ್ಲಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಕೆ ಮಾಡಲಾಗುತ್ತದೆ. ಚಾಮುಂಡಿಬೆಟ್ಟದ ದೇವಾಲಯದ ಆವರಣದಲ್ಲಿ ಚಾಮುಂಡೇಶ್ವರಿ ಪೂಜೆ ಸಲ್ಲಿಸಿ ದಸರಾ ಉದ್ಘಾಟನೆ ಮಾಡಲಾಗುತ್ತದೆ.

    ಸಿಎಂ ಯಡಿಯೂರಪ್ಪ ಅವರು ಸೆಪ್ಟೆಂಬರ್ 29ರಂದು ಸಂಜೆ 7.30ಕ್ಕೆ ಅರಮನೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ಮಾಡಲಿದ್ದಾರೆ. ಅಕ್ಟೋಬರ್ 8ರಂದು 2.15ರಿಂದ 2.58ರ ಮಕರ ಲಗ್ನದಲ್ಲಿ ನಂದಿ ಪೂಜೆ ಮಾಡಲಾಗುತ್ತದೆ. ಅದೇ ದಿನ ಸಂಜೆ 4.31ರಿಂದ 4.57ರವರೆಗೆ ಕುಂಭ ಲಗ್ನದಲ್ಲಿ ಚಿನ್ನದ ಅಂಬಾರಿಯಲ್ಲಿರುವ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡಲಾಗುತ್ತದೆ.