Tag: puttur

  • 35ಕ್ಕೂ ಹೆಚ್ಚು ಪ್ರಯಾಣಿಕರಿದ್ದ ಪುತ್ತೂರು-ಬೆಂಗ್ಳೂರು KSRTC ಬಸ್ ಪಲ್ಟಿ

    35ಕ್ಕೂ ಹೆಚ್ಚು ಪ್ರಯಾಣಿಕರಿದ್ದ ಪುತ್ತೂರು-ಬೆಂಗ್ಳೂರು KSRTC ಬಸ್ ಪಲ್ಟಿ

    ಬೆಂಗಳೂರು: ನೆಲಮಂಗಲದ ಸೋಲೂರು ಬಳಿಯ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಬೆಳ್ಳಂಬೆಳಗ್ಗೆ ಭೀಕರ ಅಪಘಾತ ನಡೆದಿದೆ.

    ಚಾಲಕನ ನಿಯಂತ್ರಣ ತಪ್ಪಿದ ಕೆಎಸ್‍ಆರ್ ಟಿಸಿ ಬಸ್, ರಸ್ತೆ ಡಿವೈಡರ್ ಗೆ ಡಿಕ್ಕಿ ಹೊಡೆದು ನಂತರ ಪಲ್ಟಿಯಾಗಿದೆ. ಕೂಡಲೇ ಕಾರ್ಯಾಚರಣೆ ನಡೆಸಿದ ಸ್ಥಳೀಯರು, ಬಸ್ಸಿನಲ್ಲಿದ್ದ ಪ್ರಯಾಣಿಕರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲು ನೆರವಾಗಿದ್ದಾರೆ.

    ಅಪಘಾತಕ್ಕೀಡಾದ ಬಸ್, ಪುತ್ತೂರಿನಿಂದ ಬೆಂಗಳೂರಿಗೆ ಬರುತ್ತಿತ್ತು. ಅಪಘಾತದಲ್ಲಿ 35ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿವೆ.

  • ತಲ್ವಾರ್ ಬೀಸಿ ಆತಂಕ ಸೃಷ್ಟಿಸಿದ ಯುವಕ

    ತಲ್ವಾರ್ ಬೀಸಿ ಆತಂಕ ಸೃಷ್ಟಿಸಿದ ಯುವಕ

    ಮಂಗಳೂರು: ಯುವಕನೊಬ್ಬ ರಸ್ತೆಯಲ್ಲಿ ತಲ್ವಾರ್ ಬೀಸಿ ಸಾರ್ವಜನಿಕರಲ್ಲಿ ಕೆಲಕಾಲ ಆತಂಕ ಸೃಷ್ಟಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಪುಣ್ಚತ್ತಾರು ಎಂಬಲ್ಲಿ ನಡೆದಿದೆ.

    ಅವಿನಾಶ್ ತಲ್ವಾರ್ ಬೀಸಿದ ಯುವಕ. ಈತ ಪುಣ್ಚತ್ತಾರು ಗ್ರಾಮದ ನಿವಾಸಿಯಾಗಿದ್ದು, ಪೇಟೆಯ ಸುತ್ತ ತಲವಾರು ಝಳಪಿಸುತ್ತಾ ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದ್ದಾನೆ. ಅವಿನಾಶ್ ಮಾನಸಿಕ ಅಸ್ವಸ್ಥ ಎಂದು ಹೇಳಲಾಗುತ್ತಿದೆ.

    ಸ್ಥಳೀಯರು ಹಾಗೂ ಪೋಲೀಸರು ಈತನನ್ನು ಹಿಡಿಯಲು ಪ್ರಯತ್ನಿಸಿದರೂ ಸಫಲವಾಗಿಲ್ಲ. ಪೊಲೀಸ್ ಜೀಪಿನ ಬಳಿಗೂ ಬಂದು ಈತ ತಲ್ವಾರ್ ಬೀಸಿದ್ದು, ಬಳಿಕ ಪೊಲೀಸರು ಹಾಗೂ ಸ್ಥಳೀಯರು ಉಪಾಯವಾಗಿ ಆತನನ್ನು ಹಿಡಿದು ಮಂಗಳೂರಿನ ಕಂಕನಾಡಿ ಮಾನಸಿಕ ಅಸ್ವಸ್ಥರ ಆಸ್ಪತ್ರೆಗೆ ದಾಖಲಿಸಿದ್ದಾರೆ.

  • ಹಬ್ಬದ ದಿನವೇ ಒಂದೇ ಕುಟುಂಬದ ನಾಲ್ವರ ದುರ್ಮರಣ

    ಹಬ್ಬದ ದಿನವೇ ಒಂದೇ ಕುಟುಂಬದ ನಾಲ್ವರ ದುರ್ಮರಣ

    ಮಂಗಳೂರು: ಗಣೇಶ ಹಬ್ಬದ ದಿನವೇ ಕಾರು ಕೆರೆಗೆ ಬಿದ್ದು ನಾಲ್ವರು ದಾರುಣವಾಗಿ ಮೃತಪಟ್ಟ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ಸಮೀಪದ ಮಾಣಿ – ಮೈಸೂರು ರಾಜ್ಯ ಹೆದ್ದಾರಿಯ ಕೌಡಿಚ್ಚಾರ್ ಬಳಿ ನಡೆದಿದೆ.

    ಈ ಘಟನೆ ಇಂದು ಬೆಳಗ್ಗೆ ನಡೆದಿದೆ. ಚಾಲಕನ ನಿಯಂತ್ರಣ ತಪ್ಪಿ ಕಾರು ರಸ್ತೆ ಬದಿಯಲ್ಲಿರುವ ಕೆರೆಗೆ ಬಿದ್ದಿದೆ ಎನ್ನಲಾಗಿದ್ದು. ಕಾರಿನಲ್ಲಿ ಗಂಡ, ಹೆಂಡತಿ ಇಬ್ಬರು ಮಕ್ಕಳು ಇದ್ದರು. ಮೃತರು ಮಡಿಕೇರಿ ಶುಂಠಿಕೊಪ್ಪ ನಿವಾಸಿಗಳು ಎಂಬುದಾಗಿ ತಿಳಿದುಬಂದಿದೆ.

    ಘಟನಾ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿ, ಕಾರು ಮೇಲಕ್ಕೆತ್ತಿದ್ದಾರೆ. ಅಲ್ಲದೆ ಮೃತದೇಹಗಳನ್ನೂ ಹೊರ ತೆಗೆದಿದ್ದಾರೆ. ಸದ್ಯ ನಾಲ್ವರ ಮೃತದೇಹವನ್ನು ಸರ್ಕಾರಿ ಆಸ್ಪತ್ರೆಯ ಶೌಆಗಾರದಲ್ಲಿ ಇರಿಸಲಾಗಿದೆ.

    ಪುತ್ತೂರಿನ ಸಂಪ್ಯ ಠಾಣಾ ವ್ಯಾಪ್ತಿಯಲ್ಲಿ ಈ ಅವಘಡ ಸಂಭವಿದೆ.

  • ವಿದ್ಯಾರ್ಥಿನಿ ಮೇಲೆ ಗ್ಯಾಂಗ್ ರೇಪ್ -ಎಲ್ಲ ಆರೋಪಿಗಳು ಅಂದರ್

    ವಿದ್ಯಾರ್ಥಿನಿ ಮೇಲೆ ಗ್ಯಾಂಗ್ ರೇಪ್ -ಎಲ್ಲ ಆರೋಪಿಗಳು ಅಂದರ್

    ಮಂಗಳೂರು: ಸಹಪಾಠಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲ ಐದು ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

    ಪುತ್ತೂರು ತಾಲೂಕಿನ ಬಜತ್ತೂರು ಗ್ರಾಮದ ಗುರುನಂದನ್ (19), ಆರ್ಯಾಪು ಗ್ರಾಮದ ಸುನಿಲ್ (19), ಬಂಟ್ವಾಳ ತಾಲೂಕಿನ ಪೆರ್ನೆ ಗ್ರಾಮದ ಪ್ರಜ್ವಲ್ (19), ಬರಿಮಾರು ಗ್ರಾಮದ ಪ್ರಖ್ಯಾತ್ (19) ಹಾಗೂ ಕಿಶನ್ (19) ಬಂಧಿತ ಆರೋಪಿಗಳು. ಈ ಆರೋಪಿಗಳು ಪುತ್ತೂರಿನ ಖಾಸಗಿ ಕಾಲೇಜಿನ ವಿದ್ಯಾರ್ಥಿಗಳಾಗಿದ್ದರು.

    ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಂ.ಲಕ್ಷ್ಮೀಪ್ರಸಾದ್ ಅವರು, ಸಂತ್ರಸ್ತೆ ದಲಿತ ಸಮುದಾಯಕ್ಕೆ ಸೇರಿದವಳಾಗಿದ್ದಾಳೆ. ಪುತ್ತೂರಿನ ಖಾಸಗಿ ಕಾಲೇಜಿನಲ್ಲಿ ವ್ಯಾಸಾಂಗ ಮಾಡುತ್ತಿದ್ದಾಳೆ. ಫೆಬ್ರವರಿ ತಿಂಗಳಿನಲ್ಲಿ ವಿದ್ಯಾರ್ಥಿನಿ ಕಾಲೇಜು ಮುಗಿಸಿಕೊಂಡು ಮನೆಗೆ ಹೋಗಲು ಬಸ್ ನಿಲ್ದಾಣದಲ್ಲಿ ನಿಂತಿದ್ದಳು. ಈ ವೇಳೆ ಅಲ್ಲಿಗೆ ಬಂದ ಸಹಪಾಠಿಗಳು ನಿನ್ನ ಜೊತೆಗೆ ಮಾತನಾಡಬೇಕು ಎಂದು ಹೇಳಿ ತಮ್ಮ ಕಾರಿನಲ್ಲಿ ಕರೆದುಕೊಂಡು ಹೋಗಿದ್ದಾರೆ. ವಿದ್ಯಾರ್ಥಿಗಳು ತನಗೆ ಪರಿಚಿತರಾಗಿದ್ದರಿಂದ ಏನನ್ನೂ ಪ್ರಶ್ನಿಸದೇ ಸಂತ್ರಸ್ತೆ ಅವರೊಂದಿಗೆ ಹೋಗಿದ್ದಾಳೆ ಎಂದು ತಿಳಿಸಿದರು.

    ಕಾರು ಕಾಡಿನ ಕಡೆಗೆ ಹೊಗುತ್ತಿದ್ದಂತೆ ಭಯಗೊಂಡ ವಿದ್ಯಾರ್ಥಿನಿ, ಎಲ್ಲಿಗೆ ಹೋಗುತ್ತಿದ್ದೇವೆ ಎಂದು ಪ್ರಶ್ನಿಸಿದ್ದಾಳೆ. ಆಗ ಇಲ್ಲಿಯೇ ಸ್ವಲ್ಪ ದೂರ ಅಂತ ಹೇಳಿ ಯುವಕರು ನಿರ್ಜನ ಪ್ರದೇಶಕ್ಕೆ ಬಂದು ಕಾರು ನಿಲ್ಲಿಸಿದ್ದಾರೆ. ಬಳಿಕ ಆಕೆಗೆ ಮತ್ತು ಬರಿತ ಆಹಾರ ನೀಡಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಈ ದೃಶವನ್ನು ಕಾಮುಕರು ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದರು ಎಂದು ಮಾಹಿತಿ ನೀಡಿದರು.

    ಘಟನೆಯ ಬಗ್ಗೆ ಯಾರಿಗೂ ಹೇಳದಂತೆ ಸಂತ್ರಸ್ತೆಗೆ ಆರೋಪಿಗಳು ಜೀವ ಬೆದರಿಕೆ ಹಾಕಿದ್ದಾರೆ. ಹೀಗಾಗಿ ವಿದ್ಯಾರ್ಥಿನಿ ಯಾರ ಮುಂದೆಯೂ ಘಟನೆಯ ಬಗ್ಗೆ ಹೇಳಿಕೊಂಡಿರಲಿಲ್ಲ. ಅತ್ಯಾಚಾರ ಎಸಗುತ್ತಿರುವ ವಿಡಿಯೋ ಬೆಳಗ್ಗೆಯಿಂದ ವೈರಲ್ ಆಗಿದ್ದರಿಂದ ಆರೋಪಿಗಳ ಕೃತ್ಯ ಬೆಳಕಿಗೆ ಬಂದಿದೆ ಎಂದರು.

    ದ್ವೇಷದಿಂದ ಬಯಲಾಯ್ತು ಕೃತ್ಯ:
    ಆರೋಪಿಗಳು ಫೆಬ್ರವರಿ ತಿಂಗಳಿನಲ್ಲಿಯೇ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದರು. ಆದರೆ ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು, ವಿಡಿಯೋ ವೈರಲ್ ಆಗಿದ್ದರಿಂದ. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲು ಮುಖ್ಯ ಕಾರಣ ಆರೋಪಿಗಳ ಮಧ್ಯೆ ಮನಸ್ತಾಪ ಉಂಟಾಗಿದ್ದು ಎನ್ನಲಾಗಿದೆ.

    ಕಾಲೇಜಿನ ಚುನಾವಣೆ ವಿಚಾರದಲ್ಲಿ ನಾಲ್ವರು ಆರೋಪಿ ವಿದ್ಯಾರ್ಥಿಗಳ ಮಧ್ಯೆ ಮನಸ್ತಾಪ ಉಂಟಾಗಿತ್ತು. ಹೀಗಾಗಿ ಈ ದ್ವೇಷ ಸಾಧನೆ ಉದ್ದೇಶದಿಂದ ವಿಡಿಯೋವನ್ನು ವೈರಲ್ ಮಾಡಿದ್ದಾರೆ. ಅನಾಮಧೇಯ ವ್ಯಕ್ತಿಯ ಹೆಸರಿನಲ್ಲಿ ವಿಡಿಯೋ ಹರಿಬಿಟ್ಟು ಪ್ರಕರಣವನ್ನು ಆರೋಪಿ ವಿದ್ಯಾರ್ಥಿಗಳೇ ಒಪ್ಪಿಕೊಂಡಿದ್ದಾರೆ ಎಂದು ಬಿ.ಎಂ.ಲಕ್ಷ್ಮೀಪ್ರಸಾದ್ ತಿಳಿಸಿದರು.

  • ಮತದಾನ ಮಾಡಿ ಹೆಣ್ಣು ಮಗುವಿಗೆ ಜನ್ಮ ನೀಡಿದ ಮಹಿಳೆಯರು!

    ಮತದಾನ ಮಾಡಿ ಹೆಣ್ಣು ಮಗುವಿಗೆ ಜನ್ಮ ನೀಡಿದ ಮಹಿಳೆಯರು!

    ಮಂಗಳೂರು/ಮಂಡ್ಯ: ಮದುವೆ ಮಂಟಪಕ್ಕೆ ತೆರಳುವ ಮೊದಲೇ ವಧುಗಳು ಮತದಾನ ಮಾಡಿದ್ದರೆ, ಇತ್ತ ಮತದಾನ ಮಾಡಿದ ಬಳಿಕ ಇಬ್ಬರು ಮಹಿಳೆಯರು ಹೆಣ್ಣು ಮಗುವಿಗೆ ಜನ್ಮ ನೀಡಿದ ಘಟನೆ ನಡೆದಿದೆ.

    ಈ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಹಾಗೂ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಚಿಕ್ಕಮರಳಿ ಗ್ರಾಮದಲ್ಲಿ ನಡೆದಿದೆ. ಪುತ್ತೂರಿನ ಉರ್ಲಾಂಡಿ ನಿವಾಸಿ ಮೀನಾಕ್ಷಿ ಹಾಗೂ ಚಿಕ್ಕಮರಳಿ ಗ್ರಾಮದ ಮಂಗಳ ನವೀನ್ ಮತ ಚಲಾಯಿಸಿ ನಂತರ ಹೆರಿಗೆಗಾಗಿ ಆಸ್ಪತ್ರೆಗೆ ತೆರಳಿದ್ದಾರೆ.

    ಮೀನಾಕ್ಷಿಯವರು ಪುತ್ತೂರು ನಗರ ಕೋರ್ಟ್ ಬೂತ್ ನಲ್ಲಿ ಮತ ಚಲಾಯಿಸಿದ್ದಾರೆ. ಮತದಾನ ಬಳಿಕ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ತಾಯಿ ಮಗು ಇಬ್ಬರೂ ಆರೋಗ್ಯವಾಗಿರುವುದಾಗಿ ವೈದ್ಯರು ತಿಳಿಸಿದ್ದಾರೆ.

    ಸದೃಢ ಭಾರತಕ್ಕಾಗಿ ನವ-ವಧುಗಳು ಸರತಿ ಸಾಲಿನಲ್ಲಿಯೇ ನಿಂತು ಬೆಳಗ್ಗೆ ತನ್ನ ಹಕ್ಕು ಚಲಾಯಿಸಿದ್ದರು. ಬಂಟ್ವಾಳ ವಿಧಾನಸಭಾ ಕ್ಷೇತ್ರ ವಿಟ್ಲದ ಕುಡ್ಪಲ್ತಡ್ಕದಲ್ಲಿ ವಧು ಶ್ರುತಿ ಶೆಟ್ಟಿ ತನ್ನ ಮದುವೆಗೂ ಮುಂಚೆಯೇ ಮತದಾನ ಮಾಡಿದ್ದಾರೆ. ಇತ್ತ ಬೆಳ್ತಂಗಡಿಯಲ್ಲೂ ಮೂವರು ವಧುಗಳು ಒಂದೇ ಮತಗಟ್ಟೆಯಲ್ಲಿ ತಮ್ಮ ಮತವನ್ನು ಚಲಾಯಿಸಿದ್ದಾರೆ. ತಾಲೂಕಿನ ತಣ್ಣೀರುಪಂಥ ಬೂತ್ ನಲ್ಲಿ ಮದುವೆ ಶೃಂಗಾರದಲ್ಲೇ ಬಂದ ಅಕ್ಷತಾ, ಅಶ್ವಿನಿ ಹಾಗೂ ಹೇಮಲತಾ ಮದುವೆ ಮಂಟಪಕ್ಕೆ ತೆರಳುವ ಮುನ್ನವೇ ತಮ್ಮ ಅಮೂಲ್ಯ ಮತವನ್ನು ಹಾಕಿದ್ದಾರೆ.

  • ಸಂಸದ ನಳಿನ್​ಕುಮಾರ್​ಗೆ ಟಿಕೆಟ್ ನೀಡಿದ್ರೆ ಆತ್ಮಹತ್ಯೆ..!

    ಸಂಸದ ನಳಿನ್​ಕುಮಾರ್​ಗೆ ಟಿಕೆಟ್ ನೀಡಿದ್ರೆ ಆತ್ಮಹತ್ಯೆ..!

    – ಪಕ್ಷದ ಕಾರ್ಯಕರ್ತನಿಂದ ಬೆದರಿಕೆ

    ಮಂಗಳೂರು: ಸಂಸದ ನಳಿನ್ ಕುಮಾರ್ ಗೆ ಈ ಬಾರಿ ಬಿಜೆಪಿ ಟಿಕೆಟ್ ನೀಡಿದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಪಕ್ಷದ ಕಾರ್ಯಕರ್ತನೊಬ್ಬ ಬೆದರಿಕೆ ಹಾಕಿದ್ದಾನೆ.

    ಶಕ್ತಿಕೇಂದ್ರ ಕಾರ್ಯಕರ್ತರ ಸಮಾವೇಶಕ್ಕೆ ಬರುವಂತೆ ಕಾರ್ಯಕರ್ತನೊಬ್ಬ ಕರೆ ಮಾಡಿದಾಗ, ಈ ಮಾತು ಹೇಳಿದ್ದು ತುಳುವಿನಲ್ಲಿರುವ ಆಡಿಯೋ ಈಗ ಭಾರೀ ವೈರಲ್ ಆಗಿದೆ.

    ಈ ಬಾರಿ ಯಾವುದೇ ಕಾರಣಕ್ಕೂ ನಳಿನ್ ಪರವಾಗಿ ಮತ ಯಾಚನೆಗೆ ಬರುವುದಿಲ್ಲ. ಗಲಾಟೆ, ಕೇಸ್ ಗಳಾದಾಗ ಹತ್ತಿರ ಸುಳಿಯದ ನಳಿನ್ ಯಾಕೆ ಬೇಕು. ಠಾಣೆಗೂ ಬರಲಾಗದವನು ಮತ್ತೆ ಆಯ್ಕೆಯಾಗಬಾರದು ಎಂದು ಆಕ್ರೋಶ ವ್ಯಕ್ತಪಡಿಸುತ್ತಾ ಈ ಬಾರಿ ಟಿಕೆಟ್ ನೀಡಿದರೆ ಬಿಜೆಪಿ ಕಚೇರಿ ಮುಂದೆ ಆತ್ಮಹತ್ಯೆ ಮಾಡಿಕೊಳ್ತೇನೆ ಅನ್ನುವ ಬೆದರಿಕೆ ಒಡ್ಡಿದ್ದಾನೆ.

    ಸಂಭಾಷಣೆ ನಡೆಸಿರುವ ಇಬ್ಬರೂ, ಪುತ್ತೂರಿನ ಬಿಜೆಪಿ ಕಾರ್ಯಕರ್ತರಾಗಿದ್ದು ಈ ಬಾರಿ ನಳಿನ್ ಪರ ಕೆಲಸ ಮಾಡುವುದಿಲ್ಲ ಎಂದು ಹೇಳಿಕೊಂಡಿದ್ದಾರೆ. ಅಲ್ಲದೆ, ತಮ್ಮ ಒಟ್ಟಿಗಿರುವ ಹುಡುಗರನ್ನೂ ಕಳಿಸಿಕೊಡಲ್ಲ ಎಂದು ಹೇಳುತ್ತಾರೆ.

    ಸುಳ್ಯ, ಪುತ್ತೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಬಹುತೇಕ ಭಾಗದ ಬಿಜೆಪಿ ಕಾರ್ಯಕರ್ತರು ನಳಿನ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ನಳಿನ್ ಬದಲಾವಣೆ ಬಯಸಿ ಪೋಸ್ಟ್ ಮಾಡಿದ್ದಾರೆ. ಬಿಜೆಪಿ ಅಧ್ಯಕ್ಷ ಅಮಿತ್ ಶಾ ಸರ್ವೆಯಲ್ಲೂ ನಳಿನ್ ಬಗ್ಗೆ ನೆಗೆಟಿವ್ ಬಂದಿದ್ದು ಈ ಬಾರಿ ಅಭ್ಯರ್ಥಿ ಬದಲಾಯಿಸಲು ಬಯಸಿದ್ದಾರೆ ಅನ್ನುವುದು ತಿಳಿದುಬಂದಿತ್ತು.

  • ಎನ್‍ಐಎ ಮೋಸ್ಟ್ ವಾಂಟೆಡ್ ಲಿಸ್ಟ್ ನಲ್ಲಿ ಪುತ್ತೂರಿನ ಯುವಕ!

    ಎನ್‍ಐಎ ಮೋಸ್ಟ್ ವಾಂಟೆಡ್ ಲಿಸ್ಟ್ ನಲ್ಲಿ ಪುತ್ತೂರಿನ ಯುವಕ!

    ಮಂಗಳೂರು: ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‍ಐಎ) ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಯುವಕನೊಬ್ಬನ ಹೆಸರಿದ್ದು, ಈತನ ಪತ್ತೆಗೆ ಸಹಕರಿಸಿ ಎಂದು ಸಂಸ್ಥೆ ಟ್ವಿಟ್ಟರ್‍ನಲ್ಲಿ ಮನವಿ ಮಾಡಿಕೊಂಡಿದೆ.

    ಹೌದು. ಏಳೆಂಟು ವರ್ಷಗಳಿಂದ ನಾಪತ್ತೆಯಾಗಿದ್ದ ಪುತ್ತೂರು ತಾಲೂಕಿನ ನೂಜಿಬಾಳ್ತಿಲ ನಿವಾಸಿ ಅಣ್ಣಾ ಎಂದೇ ಖ್ಯಾತನಾಗಿರೋ ಜಯಪ್ರಕಾಶ್ ಹೆಸರು ಪಟ್ಟಿಯಲ್ಲಿದೆ. ಸನಾತನ ಸಂಸ್ಥೆಯಲ್ಲಿ ಗುರುತಿಸಿಕೊಂಡಿದ್ದ ಜಯಪ್ರಕಾಶ್ ಹೆಸರು ಅಜ್ಮೀರ್ ದರ್ಗಾ ಸ್ಫೋಟ, ಸಂಜೋತಾ ಎಕ್ಸ್ ಪ್ರೆಸ್ ಬಾಂಬ್ ಸ್ಫೋಟ, ಗೋವಾ ಮತ್ತು ಹೈದರಾಬಾದ್ ಮೆಕ್ಕಾಮಸೀದಿ ಸ್ಫೋಟದಲ್ಲಿ ಬಾಗಿಯಾಗಿದ್ದು ಆತನ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ.

    ಕೆಲ ವರ್ಷಗಳ ಹಿಂದೆ ನಾಪತ್ತೆಯಾಗಿರೋ ಅಣ್ಣಾ, ಮಾಲೆಂಗಾವ್ ಸ್ಪೋಟಕ್ಕೆ ಮುನ್ನ ಆಗಾಗ ಊರಿಗೆ ಬರುತ್ತಿದ್ದನು. ಆದ್ರೆ ತದನಂತರ ಆತ ಊರಿಗೆ ಬಂದಿಲ್ಲ ಎಂದು ಜಯಪ್ರಕಾಶ್ ಕುಟುಂಬದ ಮೂಲಗಳಿಂದ ತಿಳಿದುಬಂದಿದೆ.

    ಇದೀಗ ಭಾರತಕ್ಕೆ ಬೇಕಾಗಿರುವ ಮೋಸ್ಟ್ ವಾಂಟೆಡ್ ಕ್ರಿಮಿನಲ್‍ಗಳ ಪಟ್ಟಿಯಲ್ಲಿ ಜಯಪ್ರಕಾಶ್ ಹೆಸರನ್ನು ಸೇರಿಸಿ ಎನ್‍ಐಎ ಪಟ್ಟಿಯನ್ನು ಸಾರ್ವಜನಿಕರಿಗಾಗಿ ಬಿಡುಗಡೆ ಮಾಡಿದೆ. ಉಗ್ರ ಹಫೀಜ್ ಸಯೀದ್, ರಿಯಾಜ್ ಭಟ್ಕಳ್ ಸೇರಿ ನಕ್ಸಲರು, ಐಸಿಸ್ ಸೇರಿದವರು ಲಿಸ್ಟ್ ನಲ್ಲಿದ್ದಾರೆ. ನೂರಕ್ಕೂ ಮಿಕ್ಕವರ ಪಟ್ಟಿ ಮಾಡಿ ಪತ್ತೆಗಾಗಿ ಎನ್‍ಐಎ ಸಾರ್ವಜನಿಕರ ಮೊರೆ ಹೋಗಿದೆ. ಅಲ್ಲದೇ ಇವರುಗಳ ಸುಳಿವು ಸಿಕ್ಕಿದಲ್ಲಿ ಗುಪ್ತ ಮಾಹಿತಿ ನೀಡುವಂತೆ ಎನ್‍ಐಎ ಟ್ವೀಟ್ ಮಾಡಿ ಮನವಿ ಮಾಡಿಕೊಂಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಅಮಾವಾಸ್ಯೆಯಂದು ಹುಟ್ಟಿದ ಹೆಂಗಸಿನ ಬಲಿ ಕೊಟ್ರೆ ಸಿಗುತ್ತಂತೆ ನಿಧಿ- ಮಹಿಳೆ ಅಪಹರಿಸಿದ ಭೂಪ ಅರೆಸ್ಟ್!

    ಅಮಾವಾಸ್ಯೆಯಂದು ಹುಟ್ಟಿದ ಹೆಂಗಸಿನ ಬಲಿ ಕೊಟ್ರೆ ಸಿಗುತ್ತಂತೆ ನಿಧಿ- ಮಹಿಳೆ ಅಪಹರಿಸಿದ ಭೂಪ ಅರೆಸ್ಟ್!

    ಹಾಸನ: ಅಮಾವಾಸ್ಯೆಯಂದು ಹುಟ್ಟಿದ ಹೆಂಗಸನ್ನು ಬಲಿ ಕೊಟ್ರೆ ನಿಧಿ ಸಿಗುತ್ತೆ ಅನ್ನೋ ಮೂಢನಂಬಿಕೆಯಲ್ಲಿ ತನ್ನ ಬಳಿ ಕೆಲಸ ಮಾಡ್ತಿದ್ದ ಡ್ರೈವರ್ ಹೆಂಡತಿ, ಮಕ್ಕಳನ್ನೇ ಅಪಹರಿಸಿದ್ದ ಭೂಪನನ್ನು ಇದೀಗ ಪೊಲೀಸರು ಬಂಧಿಸಿದ್ದಾರೆ.

    ಮನೆಯೊಂದರಲ್ಲಿ ಕೂಡಿಟ್ಟಿದ್ದ ಆ ಕಿರಾತಕನ ಸಂಚಿನ ಬಗ್ಗೆ ಕಿಡ್ನಾಪ್ ಆಗಿದ್ದ ಮಹಿಳೆ ತನ್ನ ಗಂಡನಿಗೆ ಫೋನ್ ಮಾಡಿ, ತನ್ನ ಅಪಹರಣ ಹಾಗೂ ನಿಧಿಗಾಗಿ ಬಲಿ ಕೊಡಲು ಮಂದಾಗಿದ್ದಾನೆ ಎಂದು ತಿಳಿಸಿದ್ದಾರೆ. ಕೂಡಲೇ ಪತಿ ರಾಜೇಶ್ ಆ ಫೋನ್ ಕಾಲ್ ರೆಕಾರ್ಡ್ ಮಾಡಿ ಪೊಲೀಸರಿಗೆ ದೂರು ನೀಡಿದ್ರು.

    ದೂರು ಸ್ವೀಕರಿಸಿದ ಪೊಲೀಸರು ಕೂಡಲೇ ಎಚ್ಚೆತ್ತು ಮೊಬೈಲ್ ಲೊಕೇಷನ್ ಆಧಾರಿಸಿ ಮಹಿಳೆ ಮತ್ತು ಮಕ್ಕಳನ್ನ ಪತ್ತೆ ಮಾಡಿದ ಪೊಲೀಸರು, ಹಾಸನ ನಗರದ ಹೊರವಲಯ ತಣ್ಣೀರುಹಳ್ಳದ ಮನೆಯಲ್ಲಿ ಬಂಧಿಸಿಟ್ಟಿದ್ದ ದಕ್ಷಿಣ ಕನ್ನಡ ಜಿಲ್ಲೆ ನೆಲ್ಯಾಡಿಯ ಅನಿಲ್‍ನನ್ನ ಬಂಧಿಸಿದ್ದಾರೆ.

    ಮೊದಲೇ ದೂರು ದಾಖಲು:
    ಹಾಸನದಲ್ಲಿ ನಿಧಿಗಾಗಿ ಬಲಿಗೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಸನ ಎಸ್ಪಿ ರಾಹುಲ್ ಕುಮಾರ್ ಸ್ಪಷ್ಟನೆ ನೀಡಿದ್ದು, ನಿಧಿಗಾಗಿ ಬಲಿ ಎಂಬ ವಿಚಾರ ಸುಳ್ಳು ವದಂತಿಯಾಗಿದೆ. ಮಹಿಳೆ ಮತ್ತು ಕಾಣೆಯಾಗಿರೋ ಬಗ್ಗೆ ಈ ಮೊದಲೇ ದೂರು ದಾಖಲಾಗಿತ್ತು.

    ನೆಲ್ಯಾಡಿ ಮೂಲದ ರಾಜೇಶ್ ತನ್ನ ಪತ್ನಿ ಮತ್ತು ಮಕ್ಕಳು ಕಾಣೆಯಾಗಿದ್ದಾರೆಂದು ದಕ್ಷಿಣ ಕನ್ನಡ ಜಿಲ್ಲೆಯ ಕಡಬ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆದ್ರೆ ಇದೀಗ ಬಲಿಗಾಗಿ ಅರೋಪಿ ಅನಿಲ್ ಪತ್ನಿಯನ್ನ ಕಿಡ್ನಾಪ್ ಮಾಡಿದ್ದಾರೆ ಎಂದು ಆರೋಪ ಮಾಡಲಾಗಿದೆ. ಆರೋಪಿ ಹಾಗೂ ದೂರುದಾರ ಕುಟುಂಬ 10 ವರ್ಷದಿಂದ ಪರಿಚಯ ಇತ್ತು. ಮುಂದಿನ ವಿಚಾರಣೆ ಪುತ್ತೂರು ಪೊಲೀಸರು ನಡೆಸುತ್ತಾರೆ ಅಂತ ಹೇಳಿದ್ದಾರೆ.

  • ಸಹಪಾಠಿಗಳ ಮೇಲೆ ಹಲ್ಲೆಗೈದು ವಿದ್ಯಾರ್ಥಿಯಿಂದ ಕಿರುಕುಳ- ದೂರು ನೀಡಿದ್ರೆ ಕೊಲ್ಲುವ ಬೆದರಿಕೆ

    ಸಹಪಾಠಿಗಳ ಮೇಲೆ ಹಲ್ಲೆಗೈದು ವಿದ್ಯಾರ್ಥಿಯಿಂದ ಕಿರುಕುಳ- ದೂರು ನೀಡಿದ್ರೆ ಕೊಲ್ಲುವ ಬೆದರಿಕೆ

    ಮಂಗಳೂರು: ಕಾಲೇಜಿನ ವಿದ್ಯಾರ್ಥಿಯೋರ್ವ ತನ್ನ ಸಹಪಾಠಿಗಳಿಗೆ ಹಲ್ಲೆ ನಡೆಸಿ ಕಿರುಕುಳ ನೀಡಿರುವ ಘಟನೆಯೊಂದು ಬೆಳಕಿಗೆ ಬಂದಿದೆ. ಹಲ್ಲೆ ನಡೆಸಿರುವ ವಿಡಿಯೋ ಇದೀಗ ಪಬ್ಲಿಕ್ ಟಿವಿಗೆ ಲಭಿಸಿದೆ.

    ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ವಿವೇಕಾನಂದ ಕಾಲೇಜಿನ ಹಿರಿಯ ವಿದ್ಯಾರ್ಥಿ ವಿಜಯನಾಥ ಶೆಟ್ಟಿ ಎಂಬಾತ ಹಲ್ಲೆ ನಡೆಸಿದ್ದು, ಈ ಬಗ್ಗೆ ನೊಂದ ವಿದ್ಯಾರ್ಥಿಯೋರ್ವ ಹಲ್ಲೆಯ ದೃಶ್ಯಗಳ ಸಹಿತ ಪತ್ರ ಬರೆದು ಮಾಹಿತಿ ನೀಡಿದ್ದಾನೆ.

    ವಿಜಯನಾಥ ಶೆಟ್ಟಿ ಎಂಬಾತ ಕಾಲೇಜಿನ ಇತರ ವಿದ್ಯಾರ್ಥಿಗಳಿಗೆ ಹಲ್ಲೆ ನಡೆಸಿ ಕಿರುಕುಳ ನೀಡುತ್ತಿದ್ದಾನೆ. ತನ್ನ ಮಾವನ ಜೊತೆಗೆ ಸೇರಿಕೊಂಡು ರೌಡಿಯಂತೆ ವರ್ತಿಸುತ್ತಾನೆ. ಪೊಲೀಸರಿಗೆ ದೂರು ನೀಡಿದರೆ ಕೊಲ್ಲುವುದಾಗಿ ಬೆದರಿಕೆ ಒಡ್ಡಿದ್ದಾನೆ ಅಂತ ಪತ್ರದಲ್ಲಿ ತಿಳಿಸಿದ್ದಾನೆ.

  • ಗುಡ್ಡದಿಂದ ಬಿದ್ದು ವೃದ್ಧ ಸಾವು- ಸಂಜೆಯಾದ್ರೂ ಶವ ಮುಟ್ಟದ ಗ್ರಾಮಸ್ಥರು!

    ಗುಡ್ಡದಿಂದ ಬಿದ್ದು ವೃದ್ಧ ಸಾವು- ಸಂಜೆಯಾದ್ರೂ ಶವ ಮುಟ್ಟದ ಗ್ರಾಮಸ್ಥರು!

    ಮಂಗಳೂರು: ಗುಡ್ಡದಿಂದ ಬಿದ್ದು ಸಾವನ್ನಪ್ಪಿದ ವೃದ್ಧನ ಶವವನ್ನು ಯಾರೊಬ್ಬರೂ ಮುಟ್ಟದೇ ಸಂಜೆಯಾದ್ರೂ ಅನಾಥವಾಗೇ ಬಿದ್ದಿದ್ದ ಅಮಾನವೀಯ ಘಟನೆಯೊಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿದೆ.

    ಈ ಘಟನೆ ಜಿಲ್ಲೆಯ ಪುತ್ತೂರು ತಾಲೂಕಿನ ಕೊಯಿಲ ಗ್ರಾಮದ ಗುಲ್ಗೋಡಿಯಲ್ಲಿ ನಡೆದಿದೆ. 80 ವರ್ಷದ ತರೀಕೆರೆ ನಿವಾಸಿ ಅಸಲಪ್ಪ ಮೃತ ವೃದ್ಧ.

    ಗ್ರಾಮದಲ್ಲಿ ದೈವದ ನರ್ತನ ಸೇವೆಯಿದ್ದು ಸೂತಕ ಆವರಿಸುವುದು ಅಂತ ಮನೆಯಲ್ಲಿಯೇ ಗ್ರಾಮಸ್ಥರು ಉಳಿದ್ರು. ಬಳಿಕ ಘಟನೆಯ ಮಾಹಿತಿ ತಿಳಿದ ಕಡಬ ಠಾಣಾ ಪೊಲೀಸರು ಶವವನ್ನು ಹೆಗಲ ಮೇಲೆ ಹೊತ್ತೊಯ್ದು ಅಂತ್ಯ ಸಂಸ್ಕಾರ ಮಾಡಿ ಕರ್ತವ್ಯದ ಜೊತೆಗೆ ಮಾನವೀಯತೆ ಮೆರೆದಿದ್ದಾರೆ.

    ಪಿಎಸ್‍ಐ ಪ್ರಕಾಶ್, ಎಎಸ್‍ಐ ರವಿ, ಹೋಮ್ ಗಾರ್ಡ್ ಸಂದೇಶ್ ಕಾರ್ಯವನ್ನು ಸಾರ್ವಜನಿಕರು ಶ್ಲಾಘಿಸಿದರು.