Tag: puttur

  • ಸಿಇಟಿಯಲ್ಲಿ ಪುತ್ತೂರು ವಿವೇಕಾನಂದ ವಿದ್ಯಾರ್ಥಿ ಗೌರೀಶ್ ಕಜಂಪಾಡಿಗೆ 9ನೇ ರ‍್ಯಾಂಕ್

    ಸಿಇಟಿಯಲ್ಲಿ ಪುತ್ತೂರು ವಿವೇಕಾನಂದ ವಿದ್ಯಾರ್ಥಿ ಗೌರೀಶ್ ಕಜಂಪಾಡಿಗೆ 9ನೇ ರ‍್ಯಾಂಕ್

    ಮಂಗಳೂರು: ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿಯು ವೃತ್ತಿಪರ ಕೋರ್ಸುಗಳಿಗೆ ನಡೆಸಿದ 2020 ನೇ ಸಾಲಿನ ಸಿಇಟಿ ಪರೀಕ್ಷೆಯ ಫಲಿತಾಂಶ ಇಂದು ಹೊರ ಬಿದ್ದಿದೆ. ವಿವೇಕಾನಂದ ಪದವಿಪೂರ್ವ ಕಾಲೇಜಿನ ಗೌರೀಶ್ ಕಜಂಪಾಡಿ ಅವರಿಗೆ ಎಂಜಿನಿಯರಿಂಗ್‍ನಲ್ಲಿ ರಾಜ್ಯಕ್ಕೆ 9ನೇ ರ‍್ಯಾಂಕ್ ಹಾಗೂ ಫಾರ್ಮಾದಲ್ಲಿ 10ನೇ ರ‍್ಯಾಂಕ್ ಲಭಿಸಿದೆ.

    ಇವರು ಪೆರ್ಲದ ಬಾಲರಾಜ್ ಹಾಗೂ ರಾಜನಂದಿನಿ ಕಜಂಪಾಡಿ ಇವರ ಪುತ್ರ. ಗೌರೀಶ್ 99.864 ಅಂಕಗಳೊಂದಿಗೆ ಜಿಇಇ 2020ರ ದಕ್ಷಿಣ ಕನ್ನಡದ ಟಾಪರ್ ಹಾಗೂ ಕೆವಿಪಿವೈ 2019 ಪರೀಕ್ಷೆಯಲ್ಲಿ ಅಖಿಲ ಭಾರತ ಮಟ್ಟದ 454 ನೇ ರ‍್ಯಾಂಕ್ ಸಾಧನೆ ಮಾಡಿದ್ದಾರೆ. ಇವರನ್ನು ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಉಪನ್ಯಾಸಕರು ಅಭಿನಂದಿಸಿದ್ದಾರೆ. ಇದನ್ನೂ ಓದಿ: ಸಿಇಟಿ ಫಲಿತಾಂಶ ಪ್ರಕಟ – ರ‍್ಯಾಂಕ್ ವಿಜೇತ ವಿದ್ಯಾರ್ಥಿಗಳ ವಿವರ ಇಲ್ಲಿದೆ

    ಬೆಂಗಳೂರಿನ ಆರ್‌ವಿ ಪಿಯು ಕಾಲೇಜಿನ ರಕ್ಷಿತ್ ಎಂ ಮೊದಲ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಎಂಜಿನಿಯರಿಂಗ್ ವಿಭಾಗದ ರ‍್ಯಾಂಕ್ ವಿಜೇತರ ಪಟ್ಟಿ ಇಂತಿದೆ.
    1. ರಕ್ಷಿತ್ ಎಂ- ಆರ್‌ವಿವಿ ಕಾಲೇಜ್ ಬೆಂಗಳೂರು
    2. ಶುಭನ – ಶ್ರೀ ಚೈತ್ಯನ್ಯ ಟೆಕ್ನೋ ಸ್ಕೂಲ್ ಬೆಂಗಳೂರು
    3. ಎಂ ಶಶಾಂಕ್ ಬಾಲಾಜಿ – ಬೇಸ್ ಪಿಯು ಕಾಲೇಜ್ ಹುಬ್ಬಳ್ಳಿ
    4. ಶಶಾಂಕ್ ಪಿ – ಎಕ್ಸ್ ಪರ್ಟ್ ಪಿಯು ಕಾಲೇಜ್, ಮಂಗಳೂರು
    5. ಸಂದೀಪ್ ನಾಸ್ಕರ್ – ಹೊರ ರಾಜ್ಯದ ವಿದ್ಯಾರ್ಥಿ
    6. ನಕುಲ್ ಅಭಯ್ – ವಿದ್ಯಾನಿಕೇತನ ಕಾಲೇಜ್, ಹುಬ್ಬಳ್ಳಿ
    7. ಎಸ್.ಶ್ರೀನಿವಾಸ್ – ಶ್ರೀ ಚೈತನ್ಯ ಟೆಕ್ನೋ ಸ್ಕೂಲ್ ಬೆಂಗಳೂರು
    8. ಅದ್ವೈತ್ ಪ್ರಸಾದ್ – ಏರ್‍ಫೋರ್ಸ್ ಸ್ಕೂಲ್ ಹೆಬ್ಬಾಳ, ಬೆಂಗಳೂರು
    9. ಗೌರೀಶ. ಕಜಂಪಾಡಿ – ವಿವೇಕಾನಂದ ಕಾಲೇಜ್, ಪುತ್ತೂರು
    10 ದೀಪ್ತೀ ಎಸ್. ಪಾಟೀಲ್ – ಬೇಸ್ ಪಿಯು ಕಾಲೇಜ್, ಬೆಂಗಳೂರು

    ಬಿ ಫಾರ್ಮಾ
    1. ಸಾಯಿ ವಿವೇಕ್.ಪಿ – ನಾರಾಯಣ ಇ-ಟೆಕ್ನೋ ಶಾಲೆ, ಬೆಂಗಳೂರು
    2. ಸಂದೀಪನ್ ನಸ್ಕರ್ – ಹೊರ ರಾಜ್ಯ
    3. ಪವನ್ ಎಸ್. ಗೌಡ – ನಾರಾಯಣ ಪಿಯು ಕಾಲೇಜ್, ಬೆಂಗಳೂರು
    4. ಆರ್ಯನ್ ಮಹಲಿಂಗಪ್ಪ ಚನ್ನಲ್ – ಪ್ರಗತಿ ಪಬ್ಲಿಕ್ ಸೆಕ್ಟರ್ ಸ್ಕೂಲ್ ಕೋಟ
    5. ಸಂಜನಾ ಕೆ. – ಬಿಎಎಸ್‍ಇ ಪಿಯು ಕಾಲೇಜ್, ಮೈಸೂರು
    6. ಎಂ.ಶಶಾಂಕ್ ಬಾಲಾಜಿ – ಬಿಎಎಸ್‍ಇ ಪಿಯು ಕಾಲೇಜ್, ಹುಬ್ಬಳ್ಳಿ
    7. ಅರ್ನವ್ ಅಯ್ಯಪ್ಪ ಪಿ.ಪಿ. – ಆಳ್ವಾಸ್ ಪಿಯು ಕಾಲೇಜ್ ಮೂಡುಬಿದ್ರೆ, ದಕ್ಷಿಣ ಕನ್ನಡ
    8. ವರುಣ್ ಗೌಡ ಎ.ಬಿ. – ಎಕ್ಸ್ ಪರ್ಟ್ ಪಿಯು ಕಾಲೇಜ್, ಮಂಗಳೂರು
    9. ಎಂ.ಡಿ. ಅರ್ಬಾಜ್ ಅಹ್ಮದ್ – ಶಾಹೀನ್ ಇಂಡಿಪೆಂಡೆಂಟ್ ಪಿಯು ಕಾಲೇಜ್, ಬೀದರ್
    10. ಗೌರೀಶ್ ಕಜಂಪಡಿ – ವಿವೇಕಾನಂದ ಪಿಯು ಕಾಲೇಜ್ ಪುತ್ತೂರು, ದಕ್ಷಿಣ ಕನ್ನಡ

  • 1.75 ಕೋಟಿ ಮೌಲ್ಯದ 175 ಕೆಜಿ ಗಾಂಜಾ ವಶ- ಆರೋಪಿಗಳ ಹೆಡೆಮುರಿ ಕಟ್ಟಿದ ಪುತ್ತೂರು ಪೊಲೀಸರು

    1.75 ಕೋಟಿ ಮೌಲ್ಯದ 175 ಕೆಜಿ ಗಾಂಜಾ ವಶ- ಆರೋಪಿಗಳ ಹೆಡೆಮುರಿ ಕಟ್ಟಿದ ಪುತ್ತೂರು ಪೊಲೀಸರು

    -ಕೇರಳದ ಗಡಿ ಓಪನ್ ಆಗ್ತಿದಂತೆ ದಂಧೆ ಶುರು

    ಮಂಗಳೂರು: 175 ಕೋಟಿ ಮೌಲ್ಯದ ಬರೋಬ್ಬರಿ 175 ಕೆಜಿ ಗಾಂಜಾವನ್ನು ಪುತ್ತೂರು ಪೊಲೀಸರು ವಶಪಡಿಸಿಕೊಂಡಿದ್ದು, ಮೂವರನ್ನು ಬಂಧಿಸಿದ್ದಾರೆ.

    ಪುತ್ತೂರು ನಗರ ಠಾಣಾ ವ್ಯಾಪ್ತಿಯಲ್ಲಿ ಬರುವ ಬಂಟ್ವಾಳ ತಾಲೂಕಿನ ಕೆದಿಲ ಗ್ರಾಮದ ಪಾಟ್ರಕೋಡಿ ಎಂಬಲ್ಲಿ ಕಾರ್ಯಾಚರಣೆ ಮಾಡಿದ್ದಾರೆ. 1,75,000 ರೂಪಾಯಿ ಮೌಲ್ಯದ 175 ಕೆ.ಜಿ. ಗಾಂಜಾ ವಶಪಡಿಸಿಕೊಂಡಿದ್ದಾರೆ. 3 ಲಕ್ಷ ರೂ. ಮೌಲ್ಯದ ಪಿಕಪ್ ವಾಹನ ಮತ್ತು 4 ಲಕ್ಷ ರೂ. ಮೌಲ್ಯದ ಕಾರು ಹಾಗೂ ಮೂರು ಮೊಬೈಲ್ ಫೋನ್‍ಗಳನ್ನು ಆರೋಪಿಗಳಿಂದ ವಶಪಡಿಸಿಕೊಳ್ಳಲಾಗಿದೆ.

    ಕಾಸರಗೋಡು ಜಿಲ್ಲೆಯ ಮಂಜೇಶ್ವರದ ದೂಮಕ್ಕಾಡ್ ನಿವಾಸಿ ಇಬ್ರಾಹಿಂ ಯಾನೆ ಅರ್ಷದ್ (26), ಕಾಸರಗೋಡು ಜಿಲ್ಲೆಯ ಮಂಜೇಶ್ವರದ ಹೊಸಂಗಡಿಯ ಮಿಜಿರ್‍ಪಳ್ಳ ನಿವಾಸಿ ಮಹಮ್ಮದ್ ಶಫೀಕ್ (31) ಮತ್ತು ಬಂಟ್ವಾಳ ತಾಲೂಕು ಕನ್ಯಾನದ ಮಡಕುಂಜ ನಿವಾಸಿ ಖಲಂದರ್ ಶಾಫಿ(26) ಬಂಧಿತ ಆರೋಪಿಗಳು.

    ಇವರ ಪೈಕಿ ಇಬ್ರಾಹಿಂ ಅರ್ಷದ್ ಮೇಲೆ ಮಂಜೇಶ್ವರ ಠಾಣೆಯಲ್ಲಿ 7 ಪ್ರಕರಣ, ಕುಂಬಳೆ ಠಾಣೆಯಲ್ಲಿ ಈಗಾಗಲೇ 2 ಪ್ರಕರಣಗಳು ದಾಖಲಾಗಿವೆ. ಖಲಂದರ್ ಶಾಫಿ ಮೇಲೆ ವಿಟ್ಲ ಠಾಣೆಯಲ್ಲಿ 2 ಗಾಂಜಾ ಪ್ರಕರಣ,1 ಕೊಲೆ ಯತ್ನ, ಪ್ರಕರಣ, ಕಾವೂರು ಠಾಣೆಯಲ್ಲಿ ಒಂದು ಗಾಂಜಾ ಪ್ರಕರಣ ದಾಖಲಾಗಿದೆ.

    ಇದೊಂದು ಅಂತಾರಾಜ್ಯ ಗಾಂಜಾ ಸಾಗಾಟ ಜಾಲವಾಗಿದ್ದು, ಇದರ ಹಿಂದೆ ದೊಡ್ಡದೊಂದು ನೆಟ್‍ವರ್ಕ್ ಕೆಲಸ ಮಾಡುತ್ತಿದೆ ಎಂಬ ಸಂಶಯ ವ್ಯಕ್ತವಾಗಿದೆ. ಇನ್ನು ಈ ಕಾರ್ಯಚರಣೆ ಬಗ್ಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪುತ್ತೂರು ಶಾಸಕ ಸಂಜೀವ ಮಠಂದೂರು ಕೂಡ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

    ಕಡಲೂರು ಮಂಗಳೂರಿನ ಮಾದಕ ಜಗತ್ತಿಗೂ ಕೇರಳಕ್ಕೂ ಇನ್ನಿಲ್ಲಿದ ನಂಟಿದೆ. ಕೇರಳದಿಂದ ಭಾರೀ ಪ್ರಮಾಣದ ಗಾಂಜಾ ದಕ್ಷಿಣ ಕನ್ನಡ ಜಿಲ್ಲೆಗೆ ಬರುತ್ತೆ. ಆದ್ರೆ ಕಳೆದ 5 ತಿಂಗಳಿಂದ ಈ ದಂಧೆಯ ಚೈನ್ ಲಿಂಕ್ ಕಟ್ ಆಗಿತ್ತು. ಅದಕ್ಕೆ ಕಾರಣ ಕೊರೊನಾ. ಲಾಕ್‍ಡೌನ್ ನಲ್ಲಿ ದಂಧೆಕೋರರು ಕೂಡ ತಣ್ಣಗಾಗಿದ್ರು. ಯಾಕಂದ್ರೆ ಕೇರಳ ಮತ್ತು ಕರ್ನಾಟಕ ಗಡಿಗಳಲ್ಲಿ ಎಂಟ್ರಿ ನಿಷೇಧವಾಗಿತ್ತು. ಅಲ್ಲದೆ ಚೆಕ್ ಪೋಸ್ಟ್ ಗಳಲ್ಲಿ ತಪಾಸಣೆ ಹೆಚ್ಚಾಗಿದ್ದರಿಂದ ಮಾಫಿಯಾ ಸೈಲೆಂಟಾಗಿತ್ತು. ಆದ್ರೆ ಕಳೆದ ಒಂದು ವಾರದಿಂದ ಕೇರಳ ಮತ್ತು ಕರ್ನಾಟಕ ಸಂಚಾರದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಗಡಿಗಳಲ್ಲಿ ಸುಲಭ ಪಾಸ್ ಗಳನ್ನು ಮಾಡಲಾಗಿದೆ. ಇದು ಆಗಿದ್ದ ಆಗಿದ್ದು ಗಾಂಜಾ ಮಾಫಿಯ ಭಾರೀ ಪ್ರಮಾಣದ ಗಾಂಜನ್ನು ವಶಪಡಿಸಿಕೊಂಡಿದೆ. ಪುತ್ತೂರು ನಗರ ಪೊಲೀಸರು ಮೂವರು ಆರೋಪಿಗಳನ್ನು ದಸ್ತಗಿರಿ ಮಾಡಿ ಅಪಾರ ಪ್ರಮಾಣದ ಗಾಂಜಾ ವಶಪಡಿಸಿಕೊಂಡು ಎರಡು ವಾಹನಗಳನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.

  • ಕೊರೊನಾ ಸೋಂಕಿತೆ ಕುಟುಂಬಕ್ಕೆ ‘ಮನೆಯೇ ಮಂತ್ರಾಲಯ’ ಮೂಲಕ ನೆರವು

    ಕೊರೊನಾ ಸೋಂಕಿತೆ ಕುಟುಂಬಕ್ಕೆ ‘ಮನೆಯೇ ಮಂತ್ರಾಲಯ’ ಮೂಲಕ ನೆರವು

    ಮಂಗಳೂರು: ಪುತ್ತೂರು ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಅಡುಗೆ ಸಹಾಯಕಿಯಾಗಿದ್ದ ಮಹಿಳೆಗೆ ಕೋವಿಡ್ ಸೋಂಕು ತಗುಲಿ ಜೀವನ ಸಾಗಿಸುವುದೇ ಕಷ್ಟವಾಗಿದ್ದಾಗ ಪಬ್ಲಿಕ್ ಟಿವಿಯ ಮನೆಯೇ ಮಂತ್ರಾಲಯ ಕಾರ್ಯಕ್ರಮ ಕುಟುಂಬಕ್ಕೆ ನೆರವಾಗಲು ಸಹಕಾರಿಯಾಗಿದೆ.

    ಪುತ್ತೂರು ತಾಲೂಕಿನ ಶಾಂತಿಗೋಡು ನಿವಾಸಿಯಾಗಿರುವ ಬಡ ಮಹಿಳೆಯ ಪುತ್ರಿ ಉಷಾ ಪಬ್ಲಿಕ್ ಟಿವಿಯ ಮನೆಯೇ ಮಂತ್ರಾಲಯ ಕಾರ್ಯಕ್ರಮಕ್ಕೆ ಕರೆ ಮಾಡಿ ಸಂಕಷ್ಟ ಹೇಳಿಕೊಂಡಿದ್ದರು. ಸೋಂಕಿತ ತಾಯಿ ತಾಲೂಕು ಆಸ್ಪತ್ರೆಯಲ್ಲಿ ಅಡುಗೆ ಸಹಾಯಕಿಯಾಗಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದರು. ಕೋವಿಡ್ ಸೋಂಕು ತಗುಲಿ ಚಿಕಿತ್ಸೆ ಪಡೆದು ಹೋಂ ಕ್ವಾರಂಟೈನ್ ನಲ್ಲಿದ್ದರು. ಎರಡು ತಿಂಗಳಿಂದ ಸಂಬಳ ಆಗಿಲ್ಲ, ತಂದೆಗೂ ಕೆಲಸವಿಲ್ಲ. ಜೀವನ ನಿರ್ವಹಣೆ ಕಷ್ಟ ಅಗಿದೆ ಅಂತ ಅಳಲು ತೋಡಿಕೊಂಡಿದ್ದರು. ಕೊರೊನಾ ಭೀತಿಯಿಂದ ಸ್ಥಳೀಯವಾಗಿ ಯಾರೂ ಹತ್ತಿರ ಬರುತ್ತಿಲ್ಲ. ದಯವಿಟ್ಟು ಏನಾದ್ರೂ ಸಹಾಯ ಮಾಡಿ ಅಂತ ಮನವಿ ಮಾಡಿದ್ದರು.

    ಕಾರ್ಯಕ್ರಮ ವೀಕ್ಷಿಸಿದ ಕಡಬ ರೋಟರಿ ಸಂಸ್ಥೆಯ ಮಾಜಿ ಅಧ್ಯಕ್ಷ ಹಾಜಿ ಮಹಮ್ಮದ್ ರಫೀಕ್ ಕೊಡಾಜೆ, ಇವರು ಸೋಂಕಿತ ನೊಂದ ಮಹಿಳೆಯ ಕುಟುಂಬಕ್ಕೆ ನೆರವಾಗಲು ಮುಂದೆ ಬಂದರು. ಶಾಂತಿಗೋಡಿನಲ್ಲಿರುವ ಮಹಿಳೆಯ ಮನೆಗೆ ತೆರಳಿ ಆತ್ಮಸ್ಥೈರ್ಯ ತುಂಬಿದ ರೊಟೇರಿಯನ್ ರಫೀಕ್ ಹಾಜಿ, ಮಹಿಳೆಯ ಕುಟುಂಬಕ್ಕೆ 25 ಕೆಜಿ. ಅಕ್ಕಿ ಹಾಗೂ ತಿಂಗಳಿಗಾಗುವಷ್ಟು ದಿನಸಿ ಸಾಮಗ್ರಿಗಳನ್ನು ನೀಡಿ ನೆರವಾಗಿದ್ದಾರೆ.

    ಸಂಕಷ್ಟದಲ್ಲಿದ್ದಾಗ ಯಾರೂ ನೆರವಾಗದೇ ಕಂಗಾಲಾಗಿದ್ದ ನಮಗೆ ಪಬ್ಲಿಕ್ ಟಿವಿಯಿಂದಾಗಿ ಹೋದ ಜೀವ ಬಂದಂತಾಗಿದೆ ಎಂದು ಸೋಂಕಿತ ಮಹಿಳೆ ಹೇಳಿದರು. ಕಷ್ಟ ಕಾಲದಲ್ಲಿ ನೆರವಾದ ರಫೀಕ್ ಹಾಜಿಯವರಿಗೂ ಮಹಿಳೆ ಹೃದಯಾಳದ ಕೃತಜ್ಞತೆ ಸಲ್ಲಿಸಿದರು. ಪಬ್ಲಿಕ್ ಟಿವಿ ಪ್ರತಿನಿಧಿಯ ಮಧ್ಯಪ್ರವೇಶದಿಂದ ಈಗ ಮಹಿಳೆಗೆ ಅಡುಗೆ ಗುತ್ತಿಗೆದಾರರು ಒಂದು ತಿಂಗಳ ಸಂಬಳ ನೀಡಿದ್ದು, ಬಾಕಿ ಹಣವನ್ನು ಶೀಘ್ರವೇ ನೀಡುವುದಾಗಿ ಭರವಸೆ ನೀಡಿದ್ದಾರೆ. ಕೊರೊನಾ ಸೋಂಕು ತಗುಲಿ ಸಂಕಷ್ಟದಲ್ಲಿದ್ದ ಬಡ ಮಹಿಳೆಯ ಕುಟುಂಬಕ್ಕೆ ಕಿರು ಸಹಾಯ ಮಾಡಲು ಅವಕಾಶ ನೀಡಿದ ಪಬ್ಲಿಕ್ ಟಿವಿ ಸಂಸ್ಥೆಗೆ ನಾನು ಆಭಾರಿಯಾಗಿದ್ದೇನೆ ಎಂದು ರೊಟೇರಿಯನ್ ಹಾಜಿ ರಫೀಕ್ ಕೊಡಾಜೆ ಧನ್ಯವಾದ ತಿಳಿಸಿದ್ದಾರೆ.

  • ಬೀಡಿ ಕಟ್ಟುತ್ತಿದ್ದಾಗ ಕಾಂಪೌಂಡ್ ಕುಸಿದು ಮಹಿಳೆ ದುರ್ಮರಣ

    ಬೀಡಿ ಕಟ್ಟುತ್ತಿದ್ದಾಗ ಕಾಂಪೌಂಡ್ ಕುಸಿದು ಮಹಿಳೆ ದುರ್ಮರಣ

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಗುರುಪುರದಲ್ಲಿ ಗುಡ್ಡ ಕುಸಿದು ಇಬ್ಬರು ಮಕ್ಕಳು ದುರ್ಮರಣಕ್ಕೀಡಾದ ಸುದ್ದಿ ಮಾಸುವ ಮುನ್ನವೇ ಇದೀಗ ಜಿಲ್ಲೆಯಲ್ಲಿ ಮತ್ತೊಂದು ಅವಘಡ ಸಂಭವಿಸಿದೆ.

    ಹೌದು. ಜಿಲ್ಲೆಯ ಪುತ್ತೂರು ತಾಲೂಕಿನ ಗೋಳಿತೊಟ್ಟು ಎಂಬಲ್ಲಿ ಕಾಂಪೌಂಡ್ ಕುಸಿದು ಶೋಭಾ (49) ಮೃತಪಟ್ಟಿದ್ದಾರೆ. ಶೋಭಾ ಎಂದಿನಂತೆ ಇಂದು ಕೂಡ ಮನೆಯ ಹಿಂಬದಿ ಬೀಡಿ ಕಟ್ಟುತ್ತಾ ಕುಳಿತಿದ್ದರು. ಈ ವೇಳೆ ಏಕಾಏಕಿ ಪಕ್ಕದ ಮನೆಯ ಕಾಂಪೌಂಡ್ ಗೋಡೆ ಕುಸಿದು ಬಿದ್ದಿದೆ. ಪರಿಣಾಮ ಕಾಂಪೌಂಡ್ ಅಡಿ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

    ಕಾಂಪೌಂಡ್ ಫಾರೂಕು ಎಂಬವರ ಮನೆಯದ್ದಾಗಿದೆ. ಸದ್ಯ ಮಹಿಳೆಯ ಮೃತದೇಹವನ್ನು ತೆಗೆಯಲು ಪೊಲೀಸರು ಹಾಗೂ ಸ್ಥಳೀಯರು ಹರಸಾಹಸ ಪಡುತ್ತಿದ್ದಾರೆ. ಮಹಿಳೆಯ ಕುಟುಂಬದವರ ಆಕ್ರಂದನ ಮುಗಿಲುಮುಟ್ಟಿದೆ.

  • ‘ಕಟ್ಟೋಣ ಬಾಳಿಗೊಂದು ಸೂರು’- ವಾಟ್ಸಪ್ ಗ್ರೂಪ್‍ನಿಂದ ಮನೆ ನಿರ್ಮಾಣ

    ‘ಕಟ್ಟೋಣ ಬಾಳಿಗೊಂದು ಸೂರು’- ವಾಟ್ಸಪ್ ಗ್ರೂಪ್‍ನಿಂದ ಮನೆ ನಿರ್ಮಾಣ

    – ಲಾಕ್‍ಡೌನ್‍ನಲ್ಲೇ ಬಡ ಕುಟುಂಬದ ಹೊಸ ಮನೆಯ ಲಾಕ್ ಓಪನ್

    ಮಂಗಳೂರು: ಕೊರೊನಾ ಲಾಕ್‍ಡೌನ್ ಸಮಯದಲ್ಲಿ ಎಲ್ಲರೂ ಮನೆಯೊಳಗಿದ್ದು ಆರೋಗ್ಯ ಮತ್ತು ಭವಿಷ್ಯದ ಚಿಂತೆಯಲ್ಲಿದ್ದರೆ ಜಿಲ್ಲೆಯ ಯುವಕರ ಗುಂಪೊಂದು ಮತ್ತೊಬ್ಬರ ಬದುಕು ಕಟ್ಟುವ ಕೆಲಸ ಮಾಡಿದೆ.

    ಹೌದು.. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಪಾಲ್ತಾಡಿ ಗ್ರಾಮದ ಅಂಕತ್ತಡ್ಕ ಚೆನ್ನಾವರ ಅಭ್ಯುದಯ ಯುವಕ ಮಂಡಲ ಮತ್ತು ಮಂಜುನಾಥನಗರ ವಿವೇಕಾನಂದ ಯುವಕ ಮಂಡಲ ವಾಟ್ಸಪ್ ಗ್ರೂಪ್ ರಚಿಸಿದ್ದಾರೆ. ಅವರು ದಾನಿಗಳ ನೆರವಿನ ಜೊತೆಗೆ ಶ್ರಮದಾನದ ಮೂಲಕ ಬಡ ಕುಟುಂಬವೊಂದಕ್ಕೆ ಮನೆ ಕಟ್ಟಿ ಮಾದರಿಯಾಗಿದ್ದಾರೆ.

    ಈ ಎರಡು ಯುವಕ ಮಂಡಲದ ಸದಸ್ಯರು ಶ್ರಮದಾನ ನಡೆಸುವ ಮೂಲಕ ಅಸಹಾಯಕ ಕುಟುಂಬವೊಂದಕ್ಕೆ ಆಸರೆಯಾಗಿದ್ದಾರೆ. ಸುಮಾರು 2.5 ಲಕ್ಷ ರೂ.ವೆಚ್ಚದಲ್ಲಿ ಮನೆಯೊಂದನ್ನು ನಿರ್ಮಿಸಿ ಹಸ್ತಾಂತರಿಸಲು ಸಿದ್ಧತೆ ನಡೆಸಿದ್ದಾರೆ. ಸವಣೂರು ಗ್ರಾಮ ಪಂಚಾಯತ್‍ನ ಪಾಲ್ತಾಡಿ ಗ್ರಾಮದ ಅಂಕತ್ತಡ್ಕದ ಮಾಣಿ ಎಂಬವರ ಮಗಳು ಸುಂದರಿ ಅವರು ತನ್ನ ಮಕ್ಕಳಾದ ಆಶಾ, ಧನ್ವಿ, ಸನತ್ ಜತೆ ಸಣ್ಣ ಟರ್ಪಾಲ್ ಕಟ್ಟಿದ ಜೋಪಡಿಯಲ್ಲಿ ವಾಸವಾಗಿದ್ದಾರೆ. ಕಟ್ಟಿಗೆ ದಾಸ್ತಾನಿನಂತಿರುವ ಸಣ್ಣ ಮನೆ, ಅಡುಗೆ ಕೋಣೆಯಿಂದ ಹಿಡಿದು ಎಲ್ಲವೂ ಅದರಲ್ಲಿಯೇ ನಡೆಯಬೇಕು.

    ಮಳೆ ಬಂದರೆ ಸೋರುವ ಮೇಲ್ಛಾವಣಿ, ಭದ್ರತೆ ಇಲ್ಲವೇ ಇಲ್ಲ ಇಂತಹ ಅಸಹಾಯಕ ಸ್ಥಿತಿಯಲ್ಲಿಯೇ ಸುಂದರಿ ಅವರ ಜೀವನ ಕಳೆಯುತ್ತಿದ್ದರು. ಲಾಕ್‍ಡೌನ್ ಸಂದರ್ಭದಲ್ಲಿ ಇಲ್ಲಿನ ಯುವಕ ಮಂಡಲ ಹಾಗೂ ಸೇವಾ ಭಾರತಿ ವತಿಯಿಂದ ಆಹಾರದ ಕಿಟ್ ಕೊಡುವ ಸಂದರ್ಭದಲ್ಲಿ ಅವರ ದಯನೀಯ ಸ್ಥಿತಿ ಕಂಡಿದ್ದರು. ಮಳೆಗಾಲದಲ್ಲಿ ಇಂತಹ ಮನೆಯಲ್ಲಿರುವುದು ಕಷ್ಟಕರ ಎಂಬುದನ್ನು ಅರಿತು ಯುವಕರು ಮನೆ ನಿರ್ಮಾಣ ಕಾರ್ಯಕ್ಕೆ ಮುಂದಾಗಿದ್ದರು.

    ಸುಂದರಿ ಅವರ ಮನೆಯ ದಾಖಲೆ ಪತ್ರಗಳು ಸರಿಯಿಲ್ಲದ ಕಾರಣ ಸರ್ಕಾರದ ನಿವೇಶನವೂ ದೊರಕಿರಲಿಲ್ಲ. ಇದಕ್ಕಾಗಿ ವಾಟ್ಸಪ್‍ನಲ್ಲಿ “ಕಟ್ಟೋಣ ಬಾಳಿಗೊಂದು ಸೂರು” ಎಂಬ ಗುಂಪು ರಚಿಸಲಾಗಿತ್ತು. ಅದರಲ್ಲಿ ದಾನಿಗಳನ್ನು ಸೇರಿಸಿ, ಯುವಕ ಮಂಡಳಿಗಳ ಸದಸ್ಯರನ್ನು ಸೇರಿಸಿ ಕಾರ್ಯೋನ್ಮುಖರಾದರು. ಇದೀಗ ಮನೆ ನಿರ್ಮಾಣದ ಕಾರ್ಯ ಮುಕ್ತಾಯ ಹಂತಕ್ಕೆ ತಲುಪಿದೆ.

    ಗ್ರಾಮ ಪಂಚಾಯತಿಯ ಕುಡಿಯುವ ನೀರಿನ ಸಂಪರ್ಕ ಬಿಟ್ಟರೆ ಬೇರೆ ಯಾವುದೇ ನೀರಿನ ಆಶ್ರಯ ಇಲ್ಲದಿರುವುದರಿಂದ ಪುತ್ತೂರು ತಾಲೂಕು ಪಂಚಾಯತಿ ಕಾರ್ಯನಿರ್ವಾಹಣಾಧಿಕಾರಿ ನವೀನ್ ಭಂಡಾರಿ ಅವರು ಉದ್ಯೋಗ ಖಾತರಿ ಯೋಜನೆಯ ಮೂಲಕ ಬಾವಿ ನಿರ್ಮಾಣಕ್ಕೆ ಅವಕಾಶ ಕಲ್ಪಿಸಿದರು. ಜೂನ್ 5ರೊಳಗೆ ಮನೆ ನಿರ್ಮಾಣ ಪೂರ್ಣಗೊಳಿಸಿ ಕುಟುಂಬಕ್ಕೆ ಹಸ್ತಾಂತರ ಮಾಡುವ ಇರಾದೆ ಈ ತಂಡಕ್ಕೆ ಇದೆ.

    ಪಾಲ್ತಾಡಿ ಗ್ರಾಮದ ಅಂಕತ್ತಡ್ಕ ಸಮೀಪದಲ್ಲಿ ನಿರ್ಗತಿಕ ಕುಟುಂಬವೊಂದಕ್ಕೆ ಸವಣೂರು ಗ್ರಾ.ಪಂ.ಅಧ್ಯಕ್ಷೆ ಇಂದಿರಾ ಬಿ.ಕೆ, ಸದಸ್ಯ ಸತೀಶ್ ಅಂಗಡಿಮೂಲೆ, ಸಾಮಾಜಿಕ ಕಾರ್ಯಕರ್ತ,ವಿದ್ಯುತ್ ಗುತ್ತಿಗೆದಾರ ಸುಬ್ರಾಯ ಗೌಡ ಅವರ ನೇತೃತ್ವದಲ್ಲಿ ಚೆನ್ನಾವರ ಅಭ್ಯುದಯ ಯುವಕ ಮಂಡಲ ಮತ್ತು ಮಂಜುನಾಥನಗರ ವಿವೇಕಾನಂದ ಯುವಕ ಮಂಡಲ ಇದರ ಸಹಭಾಗಿತ್ವದಲ್ಲಿ ಮನೆ ನಿರ್ಮಾಣ ಮಾಡುವ ಮೂಲಕ ಮಾದರಿ ಕಾರ್ಯ ಮಾಡಿದ್ದಾರೆ.

  • ಮಾಸ್ಕ್ ಧರಿಸಿ ಅಂದಿದ್ದಕ್ಕೆ ಹೆಲ್ಮೆಟ್‍ನಿಂದ ಹಲ್ಲೆಗೈದ ಯುವಕರು

    ಮಾಸ್ಕ್ ಧರಿಸಿ ಅಂದಿದ್ದಕ್ಕೆ ಹೆಲ್ಮೆಟ್‍ನಿಂದ ಹಲ್ಲೆಗೈದ ಯುವಕರು

    ಮಂಗಳೂರು: ಕೊರೊನಾ ವೈರಸ್ ಮಹಾಮಾರಿ ವಕ್ಕರಿಸಿದಾಗಿನಿಂದ ದೇಶಾದ್ಯಂತ ಮಾಸ್ಕ್ ಕಡ್ಡಾಯ ಮಾಡಲಾಗಿದೆ. ಆದರೆ ಇದೀಗ ಮಾಸ್ಕ್ ಧರಿಸಿ ಅಂದಿದ್ದಕ್ಕೆ ಯುವಕರ ತಂಡವೊಂದು ಹಲ್ಲೆ ಮಾಡಿದೆ.

    ಈ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿರುವ ರಿಲಯನ್ಸ್ ಮಾರ್ಟ್ ನಲ್ಲಿ ನಡೆದಿದೆ. ಮಾಸ್ಕ್ ಧರಿಸಿ ಅಂಗಡಿಯೊಳಗೆ ಬರಲು ಸೂಚಿಸಿದ್ದರಿಂದ ಕೋಪಗೊಂಡ ಯುವಕರ ಗುಂಪು ಹಲ್ಲೆ ಮಾಡಿದೆ.

    ಯುವಕರ ಗುಂಪೊಂದು ಮಾಸ್ಕ್ ಧರಿಸದೇ ಅಂಗಡಿ ಪ್ರವೇಶಿಸಲು ಯತ್ನಿಸಿದೆ. ಇದನ್ನು ಗಮನಿಸಿದ ಸೆಕ್ಯೂರಿಟಿ ಗಾರ್ಡ್ ಮಾಸ್ಕ್ ಧರಿಸಿ ಬರುವಂತೆ ತಡೆದಿದ್ದಾರೆ. ಈ ವೇಳೆ ಗುಂಪು ಸೆಕ್ಯೂರಿಟಿ ಜೊತೆ ಘರ್ಷಣೆಗಿಳಿದಿದೆ. ಅಲ್ಲದೆ ರಿಲಯನ್ಸ್ ಮಾರ್ಟ್ ಸಿಬ್ಬಂದಿ ಮೇಲೆ ಹೆಲ್ಮೆಟ್ ನಿಂದ ಹಲ್ಲೆ ಮಾಡಿದೆ.

    ಮಾಸ್ಕ್ ವಿಚಾರದಲ್ಲಿ ಸಿಬ್ಬಂದಿ ಮತ್ತು ಯುವಕರ ತಂಡದ ನಡುವೆ ಮಾರಾಮಾರಿ ನಡೆದ ಘಟನೆಗೆ ಸಂಬಂಧಿಸಿದಂತೆ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • 30 ಲಕ್ಷ ರೂ. ಮೌಲ್ಯದ ಆನೆ ದಂತ ಸಾಗಿಸುತ್ತಿದ್ದ ಇಬ್ಬರ ಬಂಧನ

    30 ಲಕ್ಷ ರೂ. ಮೌಲ್ಯದ ಆನೆ ದಂತ ಸಾಗಿಸುತ್ತಿದ್ದ ಇಬ್ಬರ ಬಂಧನ

    – ಎರಡು ಆನೆ ದಂತ ವಶಕ್ಕೆ ಪಡೆದ ಅಧಿಕಾರಿಗಳು

    ಮಂಗಳೂರು: ಆನೆ ದಂತ ಕಳವು ಮಾಡಿ ಮಾರುತ್ತಿದ್ದ ಜಾಲವನ್ನು ಪತ್ತೆ ಹಚ್ಚಿದ ಪುತ್ತೂರು ಅರಣ್ಯ ಸಂಚಾರ ದಳವು ಇಬ್ಬರನ್ನು ಬಂಧಿಸಿದೆ.

    ಮಡಿಕೇರಿ ನಿವಾಸಿ ದಿನೇಶ್ ಹಾಗೂ ಸಕಲೇಶಪುರದ ನಿವಾಸಿ ಕುಮಾರ್ ಬಂಧಿತ ಆರೋಪಿಗಳು. ಪುತ್ತೂರು ಅರಣ್ಯ ಸಂಚಾರ ದಳದ ಅಧಿಕಾರಿಗಳು ಇಂದು ನಡೆಸಿದ ಕಾರ್ಯಾಚರಣೆಯಲ್ಲಿ ಆರೋಪಿಗಳು ಸಿಕ್ಕಿ ಬಿದ್ದಿದ್ದಾರೆ. ಬಂಧಿತರಿಂದ ಸುಮಾರು 30 ಲಕ್ಷ ರೂ. ಮೌಲ್ಯದ ಎರಡು ಆನೆಯ ದಂತಗಳನ್ನು ವಶಕ್ಕೆ ಪಡೆಯಲಾಗಿದೆ.

    ಆರೋಪಿಗಳು ಓಮ್ನಿ ಕಾರಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳದ ಪುದುಬೆಟ್ಟು ಪ್ರದೇಶದಲ್ಲಿ ಸಕಲೇಶಪುರದಿಂದ ಧರ್ಮಸ್ಥಳ ಮಾರ್ಗವಾಗಿ ಸಾಗುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಅಧಿಕಾರಿಗಳು, ಕಾರನ್ನು ತಡೆದು ನಿಲ್ಲಿಸಿ ತಪಾಸಣೆ ನಡೆಸಿದ್ದಾರೆ. ಈ ವೇಳೆ ಕಾರಿನಲ್ಲಿ 30 ಲಕ್ಷ ರೂ. ಬೆಲೆಬಾಳುವ ಎರಡು ಆನೆ ದಂತ ಪತ್ತೆಯಾಗಿವೆ.

    ಬಂಧಿತ ದಿನೇಶ್ ಹಾಗೂ ಕುಮಾರ್ ಆನೆ ದಂತ ಹಾಗೂ ಅವುಗಳನ್ನು ಸಾಗಿಸಲು ಬಳಸಿದ ಮಾರುತಿ ಓಮ್ನಿ ಕಾರನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ವಿಚಾರಣೆ ವೇಳೆ ಆರೋಪಿಗಳು, ಆನೆಗಳನ್ನು ಕೊಂದು ಅದರ ದಂತವನ್ನು ಕದ್ದು ಮಾರುತ್ತಿದ್ದ ಬಗ್ಗೆ ಒಪ್ಪಿಕೊಂಡಿದ್ದಾರೆ. ಈ ಹಿಂದೆಯೂ ಇದೇ ರೀತಿ ಆನೆ ದಂತಗಳನ್ನು ಮಾರಾಟ ಮಾಡಿರುವ ಶಂಕೆಯಿಂದ ಅಧಿಕಾರಿಗಳು ಮತ್ತಷ್ಟು ವಿಚಾರಣೆ ನಡೆಸಿದ್ದಾರೆ.

  • 10 ದಿನಗಳ ಹಿಂದೆ ಹುಟ್ಟೂರಿಗೆ ಬಂದು ಪ್ರವಚನ – ರಾಮಕುಂಜದಲ್ಲಿ ನೀರವ ಮೌನ

    10 ದಿನಗಳ ಹಿಂದೆ ಹುಟ್ಟೂರಿಗೆ ಬಂದು ಪ್ರವಚನ – ರಾಮಕುಂಜದಲ್ಲಿ ನೀರವ ಮೌನ

    ಪುತ್ತೂರು: ಉಡುಪಿ ಪೇಜಾವರ ಮಠದ ವಿಶ್ವೇಶತೀರ್ಥ ಶ್ರೀಪಾದರು ವಿಶ್ವಮಾನ್ಯರಾಗುವ ಮುನ್ನ ಪುಟ್ಟ ಬಾಲಕನಾಗಿ ಓಡಾಡಿದ, ಹಳ್ಳಕ್ಕೆ ಬಿದ್ದ, ಪೂಜೆ ಮಾಡುತ್ತಾ ಖುಷಿಪಟ್ಟ ಊರು ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ರಾಮಕುಂಜ.

    ಶ್ರೀಗಳ ಹುಟ್ಟೂರಾಗಿ, ಮಧ್ವಾಚಾರ್ಯರ ಪಾದಸ್ಪರ್ಶ ಅನುಭವಿಸಿದ ಈ ಊರು ಈಗ ಶಿಕ್ಷಣ ಕಾಶಿಯಾಗಿಯೂ ಜನಪ್ರಿಯವಾಗಿದೆ. ಏಳನೇ ವಯಸ್ಸಿನಲ್ಲೇ ಸನ್ಯಾಸ ದೀಕ್ಷೆ ಪಡೆದರೂ ರಾಮಕುಂಜದೊಂದಿಗಿನ ಪ್ರೀತಿಯ ಸಂಬಂಧ ಈ 88ರ ಹರೆಯದಲ್ಲೂ ಮುಂದುವರಿದಿತ್ತು. ಅಲ್ಲಿನ ದೈವಿಕ ವಾತಾವರಣ, ಜನರ ಪ್ರೀತಿ ಮತ್ತು ಹುಟ್ಟೂರಿನ ಅಭಿಮಾನ ಶ್ರೀಗಳ ಹೃದಯದಲ್ಲಿ ನಿರಂತರವಾಗಿ ಇತ್ತು. ಅನಾರೋಗ್ಯ ಇದ್ದರೂ ಕಳೆದ 10 ದಿನಗಳ ಹಿಂದೆ ಶ್ರೀಗಳು ತಾವು ಹುಟ್ಟಿದ ಊರಿಗೆ ಬಂದು ಗ್ರಾಮದ ಜನರಿಗೆ ಪ್ರವಚನ ನೀಡಿದ್ದರು. ಇದನ್ನೂ ಓದಿ: ಹಿಂದೂ ಧರ್ಮ ಪರಿಚಾರಕ ಶ್ರೀಗಳಿಗೆ ಮುಸ್ಲಿಂ ಡ್ರೈವರ್! – ಆರಿಫ್‍ಗೆ ಕೊನೆಯಾಸೆ ಈಡೇರದ ನೋವು

    ಶಿವಳ್ಳಿ ಬ್ರಾಹ್ಮಣ ಪಡ್ಡಿಲ್ಲಾಯ ಕುಲದಲ್ಲಿ 1931ರ ನವೆಂಬರ್ 27 ರಂದು ಮೀಯಾಳ ನಾರಾಯಣ ಆಚಾರ್ಯ ಹಾಗೂ ಕಮಲಮ್ಮ ದಂಪತಿಯ ಪುತ್ರನಾಗಿ ಜನಿಸಿದ್ದ ಹಳೆ ನೇರಂಕಿ ಗ್ರಾಮದ ಎರೆಟಾಡಿ ಮನೆ ಈಗಲೂ ಗಟ್ಟಿಯಾಗಿದೆ. ಮಣ್ಣಿನ ಗೋಡೆ ನವೀಕರಣಗೊಂಡಿದೆ. ಪ್ರಸಕ್ತ ಈ ಮನೆಯಲ್ಲಿ ಶ್ರೀಗಳ ತಮ್ಮನ ಮಗ ರಾಮಕುಂಜೇಶ್ವರ ಪಿಯು ಕಾಲೇಜಿನ ಉಪನ್ಯಾಸಕ ಹರಿ ನಾರಾಯಣ ಆಚಾರ್ಯರ ಕುಟುಂಬ ವಾಸವಾಗಿದೆ.  ಇದನ್ನೂ ಓದಿ: 8ನೇ ವಯಸ್ಸಿನಲ್ಲಿ ದೀಕ್ಷೆ, ದಲಿತ ಪರ ಹೋರಾಟ, 5ನೇ ಬಾರಿ ಪರ್ಯಾಯ ಪೀಠ ಏರಿ ಸಾಧನೆ

    ಮನೆ ದೇವರು ವಿಷ್ಣುಮೂರ್ತಿಗೆ ಇಂದಿಗೂ ಇಲ್ಲಿ ಹರಿ ನಾರಾಯಣ ಆಚಾರ್ಯ ಅವರು ನಿತ್ಯ ಪೂಜೆ ನಡೆಸುತ್ತಿದ್ದಾರೆ. ಮನೆಯ ಪೂರ್ವಕ್ಕೆ 100 ಮೀ. ಅಂತರದಲ್ಲಿರುವ ಪುರಾತನ ವಿಷ್ಣುಮೂರ್ತಿ ದೇವಸ್ಥಾನ ಈಗ ಮುಳಿಹುಲ್ಲಿನಿಂದ ಮೇಲೆದ್ದಿದೆ. ಇಲ್ಲಿ ಶ್ರೀಗಳ ಅಜ್ಜ ಹಾಗೂ ತಂದೆ ಪೂಜೆ ಮಾಡುತ್ತಿದ್ದರು. ಇಲ್ಲೇ ಗರ್ಭಗುಡಿಯ ಇಡೆನಾಳ್ಯದಲ್ಲಿ ಕುಳಿತು ಪೇಜಾವರರು ದೇವರ ನೈವೇದ್ಯ ಸೇವಿಸಿ ಧಾರ್ಮಿಕತೆಯನ್ನು ಆವಾಹಿಸಿಕೊಂಡವರು ಎಂದು ಹರಿ ನಾರಾಯಣ ಆಚಾರ್ಯರು ಹೇಳುತ್ತಾರೆ. ಇದನ್ನೂ ಓದಿ: ಅಷ್ಟ ಮಠದ ಹಿರಿಯ ಯತಿ, ನಾಡಿನ ಹಿರಿಯ ವಿದ್ವಾಂಸ ಪೇಜಾವರ ಶ್ರೀ ಕೃಷ್ಣೈಕ್ಯ

    ಇಂದು ಶ್ರೀಗಳು ಇಲ್ಲದೇ ಇರುವುದರಿಂದ ರಾಮಕುಂಜ ಗ್ರಾಮದಲ್ಲಿ ಒಬ್ಬ ತಪಸ್ವಿಯನ್ನು ಕಳೆದುಕೊಂಡು ಊರೇ ಅನಾಥವಾಗಿದೆ ಎಂದು ಇಲ್ಲಿನ ಗ್ರಾಮಸ್ಥರು ತಮ್ಮ ನೋವನ್ನು ಹಂಚಿಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲದೆ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಶಿಕ್ಷಣದ ಕ್ರಾಂತಿಯನ್ನು ರಾಮಕುಂಜ ಗ್ರಾಮದಲ್ಲಿ ಮಾಡಿದ್ದಾರೆ. ಆದರೆ ಇಷ್ಟೆಲ್ಲಾ ಮಾಡಿದ ಶ್ರೀಗಳು ಇಂದು ನಮ್ಮೊಂದಿಗೆ ಇಲ್ಲ ಎಂಬ ನೋವು ಗ್ರಾಮಸ್ಥರಲ್ಲಿದೆ.

  • ಮನೆಗೆ ನುಗ್ಗಿ ಒಂದೇ ಕುಟುಂಬದ ಇಬ್ಬರ ಕೊಲೆ- ಮಹಿಳೆ ಗಂಭೀರ

    ಮನೆಗೆ ನುಗ್ಗಿ ಒಂದೇ ಕುಟುಂಬದ ಇಬ್ಬರ ಕೊಲೆ- ಮಹಿಳೆ ಗಂಭೀರ

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕುರಿಯ ಅಜಲಾಡಿ ಎಂಬಲ್ಲಿ ಮನೆಗೆ ನುಗ್ಗಿ ಒಂದೇ ಕುಟುಂಬದ ಇಬ್ಬರ ಕೊಲೆಗೈದ ಘಟನೆ ನಡೆದಿದೆ.

    ಈ ಘಟನೆ ಸೋಮವಾರ ತಡರಾತ್ರಿ ನಡೆದಿದ್ದು, ಇಂದು ಬೆಳಕಿಗೆ ಬಂದಿದೆ. ಮೃತ ದುರ್ದೈವಿಗಳನ್ನು ಕೊಗ್ಗು ಸಾಹೇಬ್ (62) ಮತ್ತು ಮೊಮ್ಮಗಳು ಸಮೀಹ(14) ಎಂದು ಗುರುತಿಸಲಾಗಿದೆ. ಘಟನೆಯಿಂದಾಗಿ ಕೊಗ್ಗು ಸಾಹೇಬರ ಪತ್ನಿ ಖತೀಜ(55) ಮೇಲೂ ಮಾರಣಾಂತಿಕ ಹಲ್ಲೆ ನಡೆದಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

    ತಡರಾತ್ರಿ ತಂಡವೊಂದು ಏಕಾಏಕಿ ಕೊಗ್ಗು ಸಾಹೇಬ್ ಮನೆಗೆ ನುಗ್ಗಿ ಈ ಕೃತ್ಯ ಎಸಗಿದೆ. ಬಳಿಕ ಮನೆಯಲ್ಲಿದ್ದ ಚಿನ್ನಾಭರಣ ಹಾಗೂ ನಗದಿನೊಂದಿಗೆ ತಂಡ ಎಸ್ಕೇಪ್ ಆಗಿದೆ. ಬಾಡಿಗೆ ಮನೆಯಲ್ಲಿ ಅಜ್ಜಿ, ಅಜ್ಜ ಮತ್ತು ಮೊಮ್ಮಗಳು ವಾಸವಾಗಿದ್ದರು. ಇಂದು ಬೆಳಗ್ಗೆ ಪುತ್ರ ರಝಾಕ್ ಮನೆಗೆ ಹೋದಾಗ ಘಟನೆ ಬೆಳಕಿಗೆ ಬಂದಿದ್ದು, ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

    ಘಟನಾ ಸ್ಥಳಕ್ಕೆ ಪುತ್ತೂರಿನ ಸಂಪ್ಯ ಗ್ರಾಮಾಂತರ ಠಾಣೆ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

  • ಗ್ಯಾಸ್ ಟ್ಯಾಂಕರ್ ನಿಂದ ಅನಿಲ ಸೋರಿಕೆ- ಹೆದ್ದಾರಿಯಲ್ಲಿ ವಾಹನ ಸಂಚಾರ ಸ್ಥಗಿತ

    ಗ್ಯಾಸ್ ಟ್ಯಾಂಕರ್ ನಿಂದ ಅನಿಲ ಸೋರಿಕೆ- ಹೆದ್ದಾರಿಯಲ್ಲಿ ವಾಹನ ಸಂಚಾರ ಸ್ಥಗಿತ

    ಮಂಗಳೂರು: ಚಲಿಸುತ್ತಿದ್ದ ಗ್ಯಾಸ್ ಟ್ಯಾಂಕರ್ ನಿಂದ ಭಾರೀ ಪ್ರಮಾಣ ಅನಿಲ ಸೋರಿಕೆಯಾಗಿದೆ. ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಅನಿಲ ಸೋರಿಕೆಯಾಗಿದೆ.

    ಪುತ್ತೂರು ತಾಲೂಕಿನ ಉಪ್ಪಿನಂಗಡಿ ಸಮೀಪದ ಕರವೇಲು ಬಳಿ ಗ್ಯಾಸ್ ಸಿಲಿಂಡರ್ ನ ಕ್ಯಾಪ್ ಏಕಾಏಕಿ ಓಪನ್ ಆಗಿದ್ದರಿಂದ ಅನಿಲ ಸೋರಿಕೆಯಾಗಿದ್ದು, ಮುನ್ನೆಚ್ಚರಿಕ ಕ್ರಮವಾಗಿ ಅಧಿಕಾರಿಗಳು ಹೆದ್ದಾರಿಯಲ್ಲಿ ವಾಹನ ಸಂಚಾರ ಸ್ಥಗಿತಗೊಳಿಸಿದ್ದಾರೆ.

    ಸ್ಥಳಕ್ಕೆ ಎಂಆರ್‌ಪಿಎಲ್ (Mangalore Refinery and Petrochemicals Limited) ತಜ್ಞರು ಆಗಮಿಸಿ ಅನಿಲ ಸೋರಿಕೆ ತಡೆದಿದ್ದಾರೆ. ಗ್ಯಾಸ್ ಟ್ಯಾಂಕರ ಮಂಗಳೂರಿನಿಂದ ಬೆಂಗಳೂರಿಗೆ ಹೋಗುತ್ತಿತ್ತು. ಅನಿಲ ಹೇಗೆ ಸೋರಿಕೆ ಆಗಿದೆ ಎಂಬುದರ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದು, ಚಾಲಕನ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ.