Tag: puttur

  • ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ಬಲವಂತದ ಕ್ರಮ ಕೈಗೊಳ್ಳದಂತೆ ಕೋರ್ಟ್ ಆದೇಶ

    ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ಬಲವಂತದ ಕ್ರಮ ಕೈಗೊಳ್ಳದಂತೆ ಕೋರ್ಟ್ ಆದೇಶ

    ಮಂಗಳೂರು: ಪ್ರಚೋದನಕಾರಿ ಭಾಷಣ ಆರೋಪದಡಿ ಎಫ್‌ಐಆರ್ ದಾಖಲಾಗಿದ್ದ ಕಲ್ಲಡ್ಕ ಪ್ರಭಾಕರ ಭಟ್ (Kalladka Prabhakar Bhat) ವಿರುದ್ಧ ಬಲವಂತದ ಕ್ರಮ ಕೈಗೊಳ್ಳದಂತೆ ಕೋರ್ಟ್ ಆದೇಶ ನೀಡಿದೆ.

    ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು (Puttur) ಆರನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ಕೋರ್ಟ್ ಆದೇಶ ನೀಡಿದೆ. ನ್ಯಾಯಾಲಯದ ಮುಂದಿನ ವಿಚಾರಣೆಯವರೆಗೆ ಬಂಧನ ಸಹಿತ ಬಲವಂತದ ಕ್ರಮ ಕೈಗೊಳ್ಳದಂತೆ ಪೊಲೀಸರಿಗೆ ಕೋರ್ಟ್ ಸೂಚನೆ ನೀಡಿ, ಅಕ್ಟೋಬರ್ 29ಕ್ಕೆ ವಿಚಾರಣೆಯನ್ನು ಮುಂದೂಡಿದೆ.

    ಏನಿದು ಪ್ರಕರಣ?
    ಪ್ರಚೋದನಕಾರಿ ಭಾಷಣ ಆರೋಪದಡಿ ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ಅ.20ರಂದು ಪುತ್ತೂರು ಉಪ್ಪಳಿಗೆಯಲ್ಲಿ ನಡೆದ ದೀಪೋತ್ಸವ ಕಾರ್ಯಕ್ರಮದಲ್ಲಿ ಕಲ್ಲಡ್ಕ ಪ್ರಭಾಕರ ಭಟ್ ಭಾಷಣ ಮಾಡಿದ್ದರು. ಭಾಷಣದ ವೇಳೆ ಧಾರ್ಮಿಕ ದ್ವೇಷ ಹಾಗೂ ಮಹಿಳೆಯರ ಘನತೆಗೆ ಧಕ್ಕೆ ಮಾಡಿದ್ದಾರೆ ಎಂದು ಈಶ್ವರಿ ಪದ್ಮುಂಜ ಎಂಬವವರು ನೀಡಿದ ದೂರಿನ ಅನ್ವಯ ಎಫ್‌ಐಆರ್ ದಾಖಲಾಗಿತ್ತು. ಭಾರತೀಯ ನ್ಯಾಯ ಸಂಹಿತೆ 2023ರ 79, 196, 299, 302 ಹಾಗೂ 3(5) ಕಲಂಗಳ ಅಡಿಯಲ್ಲಿ ಪ್ರಭಾಕರ ಭಟ್ ಮತ್ತು ಕಾರ್ಯಕ್ರಮ ಆಯೋಜಕರ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ಈ ಪ್ರಕರಣ ಸಂಬಂಧ ಪುತ್ತೂರು ಗ್ರಾಮಾಂತರ ಪೊಲೀಸರು ಅ.30ರಂದು ವಿಚಾರಣೆಗೆ ಹಾಜರಾಗಲು ನೋಟಿಸ್ ನೀಡಿದ್ದರು.

    ಹೀಗಾಗಿ ಕಲ್ಲಡ್ಕ ಪ್ರಭಾಕರ ಭಟ್ ಪೊಲೀಸರ ಎಫ್‌ಐಆರ್ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದರು. ಸದ್ಯ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಮುಂದಿನ ವಿಚಾರಣೆವರೆಗೆ ಬಂಧನ ಸಹಿತ ಬಲವಂತದ ಕ್ರಮ ಕೈಗೊಳ್ಳದಂತೆ ಪೊಲೀಸರಿಗೆ ನೋಟಿಸ್ ಜಾರಿ ಮಾಡಿದೆ.

  • ಸಿಎಂ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ನೂಕುನುಗ್ಗಲು – 11ಕ್ಕೂ ಹೆಚ್ಚು ಜನ ಅಸ್ವಸ್ಥ

    ಸಿಎಂ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ನೂಕುನುಗ್ಗಲು – 11ಕ್ಕೂ ಹೆಚ್ಚು ಜನ ಅಸ್ವಸ್ಥ

    ಮಂಗಳೂರು: ಸಿಎಂ ಸಿದ್ದರಾಮಯ್ಯ (Siddaramaiah) ಭಾಗವಹಿಸಿದ್ದ ʻಅಶೋಕ ಜನಮನ -2025ʼ ಹಾಗೂ ದೀಪಾವಳಿ ಪ್ರಯುಕ್ತ ವಸ್ತ್ರದಾನ ಕಾರ್ಯಕ್ರಮದಲ್ಲಿ ನೂಕುನುಗ್ಗಲು ಸಂಭವಿಸಿ 11ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾದ ಘಟನೆ ಪುತ್ತೂರಿನಲ್ಲಿ ನಡೆದಿದೆ. ಮಹಿಳೆಯರು ಮಕ್ಕಳು ಸೇರಿ 11ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿದ್ದಾರೆ.

    ಹೌದು. ಪುತ್ತೂರು ಶಾಸಕ ಅಶೋಕ್ ರೈ (Ashok Rai) ಮಾಲೀಕತ್ವದ ರೈ ಎಸ್ಟೇಟ್ ಮತ್ತು ಚಾರಿಟೇಬಲ್ ಟ್ರಸ್ಟ್ ವತಿಯಿಂದ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕು ಕ್ರೀಡಾಂಗಣದಲ್ಲಿ ʻಅಶೋಕ ಜನಮನ -2025ʼ ಹಾಗೂ ದೀಪಾವಳಿ ಪ್ರಯುಕ್ತ ವಸ್ತ್ರದಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ದೀಪಾವಳಿ ಹಿನ್ನೆಲೆ ಸಾರ್ವಜನಿಕರಿಗೆ ತಟ್ಟೆ, ವಸ್ತ್ರ ಹಂಚುವ ಕಾರ್ಯಕ್ರಮ ಇದಾಗಿತ್ತು. ಸಿಎಂ ಸಿದ್ದರಾಮಯ್ಯ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

    ಕ್ರೀಡಾಂಗಣದಲ್ಲಿ ಸಾಮರ್ಥ್ಯಕ್ಕಿಂತ ಹೆಚ್ಚು ಜನ ಭಾಗಿಯಾಗಿದ್ದ ಹಿನ್ನೆಲೆ ನೂಕುನುಗ್ಗಲು ಉಂಟಾಗಿದೆ. ಈ ವೇಳೆ ಕೆಲವರಿಗೆ ಉಸಿರಾಟದಲ್ಲಿ ಸಮಸ್ಯೆ ಉಂಟಾಗಿದ್ದು, ಅಸ್ವಸ್ಥರಾಗಿದ್ದಾರೆ. ಪುಟ್ಟ ಪುಟ್ಟ ಮಕ್ಕಳನ್ನು ಕಂಕುಳಲ್ಲಿ ಹೊತ್ತುಬಂದಿದ್ದ ಕೆಲವರು ನೀರು ಸಿಗದೇ ಪರದಾಡಿದ್ದಾರೆ. ಇದರಿಂದ ಕೆಸರು ತುಂಬಿದ್ದ ಮೈದಾನದಲ್ಲಿ ಅವ್ಯವಸ್ಥೆ ಉಂಟಾಗಿದೆ.

    ಸದ್ಯ ಅಸ್ವಸ್ಥರನ್ನ ಪುತ್ತೂರು ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತದೆ.

  • 7 ದಿನ ಲವ್ವರ್ ಜೊತೆ ಲಾಡ್ಜ್‌ನಲ್ಲಿದ್ದ ಪುತ್ತೂರಿನ ಯುವಕ ಸಾವು – ಹೆಚ್ಚು ಮಾತ್ರೆ ಸೇವಿಸಿದ್ದರಿಂದ ಮೃತಪಟ್ಟಿರೋ ಶಂಕೆ

    7 ದಿನ ಲವ್ವರ್ ಜೊತೆ ಲಾಡ್ಜ್‌ನಲ್ಲಿದ್ದ ಪುತ್ತೂರಿನ ಯುವಕ ಸಾವು – ಹೆಚ್ಚು ಮಾತ್ರೆ ಸೇವಿಸಿದ್ದರಿಂದ ಮೃತಪಟ್ಟಿರೋ ಶಂಕೆ

    ಬೆಂಗಳೂರು: 7 ದಿನ ಲವ್ವರ್ ಜೊತೆ ಲಾಡ್ಜ್‌ನಲ್ಲಿದ್ದ ಯುವಕ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚು ಮಾತ್ರೆ ಸೇವಿಸಿದ್ದಕ್ಕಾಗಿ ಮೃತಪಟ್ಟಿರೋ ಶಂಕೆ ವ್ಯಕ್ತವಾಗಿದೆ.

    ಮೃತ ಯುವಕನನ್ನು ಪುತ್ತೂರು ಮೂಲದ ತಕ್ಷಿತ್ (20) ಎಂದು ಗುರುತಿಸಲಾಗಿದ್ದು, ಮಡಿವಾಳದ ಲಾಡ್ಜ್ವೊಂದರಲ್ಲಿ ಪ್ರೇಯಿಸಿ 7 ದಿನ ಕಾಲ ಕಳೆದು, ಬಳಿಕ ಮಾರನೇ ದಿನ ಸಾವನ್ನಪ್ಪಿದ್ದಾನೆ.ಇದನ್ನೂ ಓದಿ: ಬೆಂಗಳೂರು | 8 ದಿನ ಪ್ರೇಯಸಿ ಜೊತೆಯಿದ್ದ ಯುವಕ ಲಾಡ್ಜ್‌ನಲ್ಲಿ ಸಾವು

    ಸದ್ಯ ಈ ಪ್ರಕರಣ ಸಂಬಂಧಿಸಿದಂತೆ ಯುವಕನ ಮರಣೋತ್ತರ ಪರೀಕ್ಷೆಯಲ್ಲಿ ಹಲವು ವಿಚಾರಗಳು ಬಯಲಾಗಿವೆ. ಇದು ಅನುಮಾನಾಸ್ಪದ ಸಾವು ದೇಹದ ಮೇಲೆ ಯಾವುದೇ ಗಾಯಗಳಿಲ್ಲ ಎಂದು ರಿಪೋರ್ಟ್ ಪೆಂಡಿಂಗ್ ಇಟ್ಟಿದ್ದಾರೆ. ಹೀಗಾಗಿ ಪೊಲೀಸರು ಸಾವಿಗೆ ನಿಖರ ಕಾರಣ ಪತ್ತೆ ಹಚ್ಚಲು ದೇಹದ ಹಲವು ಸ್ಯಾಂಪಲ್‌ಗಳನ್ನ ಎಫ್‌ಎಸ್‌ಎಲ್‌ಗೆ ರವಾನೆ ಮಾಡಿದ್ದಾರೆ.

    ಲಿವರ್ ಪೀಸ್, ಜಠರ ಪೀಸ್, ಹೊಟ್ಟೆಯ ದ್ರವಣಾಂಶಗಳು, ಕಾಲರಾ ಪತ್ತೆ ಹಚ್ಚುವುದಕ್ಕೆ ವಿಸರ್ಜನಾ ತ್ಯಾಜ್ಯ, ಮಾತ್ರೆ ಸೇವನೆ ಪತ್ತೆಗೆ ರಕ್ತದ ಸ್ಯಾಂಪಲ್ ಸೇರಿ ಹಲವು ಪರೀಕ್ಷೆಗಾಗಿ ಎಫ್‌ಎಸ್‌ಲ್‌ಗೆ ರವಾನಿಸಿದ್ದಾರೆ. ಈ ಎಲ್ಲ ಪರೀಕ್ಷೆಗಳ ವರದಿ ಒಂದು ತಿಂಗಳ ಒಳಗಡೆ ಬರಲಿದೆ.

    ಏನಿದು ಪ್ರಕರಣ?
    ಶುಕ್ರವಾರ (ಅ.18) ಯುವಕ ಸಾವನ್ನಪ್ಪಿದ್ದು, ಬೆಳಗ್ಗೆ ಲಾಡ್ಜ್ ಸಿಬ್ಬಂದಿ ರೂಂ ಬಾಗಿಲು ತೆಗೆದಾಗ ಘಟನೆ ಬೆಳಕಿಗೆ ಬಂದಿದೆ. ಕಳೆದ ವಾರ ತನ್ನ ಪ್ರೇಯಸಿಯೊಂದಿಗೆ ಬೆಂಗಳೂರಿಗೆ ಬಂದಿದ್ದ ತಕ್ಷಿತ್ ಆನ್‌ಲೈನ್‌ನಲ್ಲಿ ಮಡಿವಾಳದಲ್ಲಿರುವ ಲಾಡ್ಜ್ವೊಂದರಲ್ಲಿ ರೂಂ ಬುಕ್ ಮಾಡಿದ್ದ. 7 ದಿನ ಲಾಡ್ಜ್‌ನಲ್ಲಿ ಪ್ರೇಯಸಿಯೊಂದಿಗೆ ಇದ್ದ. ಗುರುವಾರ ಯುವತಿಯ ಆರೋಗ್ಯದಲ್ಲಿ ಏರುಪೇರು ಉಂಟಾಗಿ ಆಕೆ ವಿರಾಜಪೇಟೆಗೆ ಹೋಗಿದ್ದಳು. ಹುಡುಗಿ ಹೋದ ಮರುದಿನವೇ ಯುವಕ ಮೃತಪಟ್ಟಿದ್ದಾನೆ.ಇದನ್ನೂ ಓದಿ: ಮಂಗಳೂರು| ಯುವತಿಯರು ಬಟ್ಟೆ ಬದಲಿಸುವ ವೀಡಿಯೋ ಮಾಡಿ ವೈರಲ್ ಮಾಡಿದ್ದ ರೂಮ್‌ಮೇಟ್ ಬಂಧನ

  • ಬೆಂಗಳೂರು | 8 ದಿನ ಪ್ರೇಯಸಿ ಜೊತೆಯಿದ್ದ ಯುವಕ ಲಾಡ್ಜ್‌ನಲ್ಲಿ ಸಾವು

    ಬೆಂಗಳೂರು | 8 ದಿನ ಪ್ರೇಯಸಿ ಜೊತೆಯಿದ್ದ ಯುವಕ ಲಾಡ್ಜ್‌ನಲ್ಲಿ ಸಾವು

    ಬೆಂಗಳೂರು: 8 ದಿನ ಪ್ರೇಯಸಿ ಜೊತೆಗಿದ್ದು ಬಳಿಕ ಯುವಕ ಸಾವನ್ನಪ್ಪಿರುವ ಘಟನೆ ಬೆಂಗಳೂರಿನಲ್ಲಿ ಲಾಡ್ಜ್‌ವೊಂದರಲ್ಲಿ ನಡೆದಿದೆ.

    ಮೃತ ಯುವಕನನ್ನು ಪುತ್ತೂರು ಮೂಲದ ತಕ್ಷಿತ್ (20) ಎಂದು ಗುರುತಿಸಲಾಗಿದೆ.

    ಶುಕ್ರವಾರ (ಅ.18) ಯುವಕ ಸಾವನ್ನಪ್ಪಿದ್ದು, ಬೆಳಗ್ಗೆ ಲಾಡ್ಜ್ ಸಿಬ್ಬಂದಿ ರೂಂ ಬಾಗಿಲು ತೆಗೆದಾಗ ಘಟನೆ ಬೆಳಕಿಗೆ ಬಂದಿದೆ. ಕಳೆದ ವಾರ ತನ್ನ ಪ್ರೇಯಸಿಯೊಂದಿಗೆ ಬೆಂಗಳೂರಿಗೆ ಬಂದಿದ್ದ. ತಕ್ಷಿತ್ ಆನ್‌ಲೈನ್ ಮೂಲಕ ಮಡಿವಾಳದಲ್ಲಿರುವ ಲಾಡ್ಜ್‌ವೊಂದರಲ್ಲಿ ರೂಂ ಬುಕ್ ಮಾಡಿದ್ದ. ಎಂಟು ದಿನ ಲಾಡ್ಜ್‌ನಲ್ಲಿ ಪ್ರೇಯಸಿಯೊಂದಿಗೆ ಇದ್ದ. ಗುರುವಾರ ಯುವತಿಯ ಆರೋಗ್ಯದಲ್ಲಿ ಏರುಪೇರು ಉಂಟಾಗಿ ಆಕೆ ವಿರಾಜಪೇಟೆಗೆ ಹೋಗಿದ್ದಳು. ಹುಡುಗಿ ಹೋದ ಮರುದಿನವೇ ಯುವಕ ಮೃತಪಟ್ಟಿದ್ದಾನೆ.

    ಸದ್ಯ ತಕ್ಷಿತ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಿದ್ದು, ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕ ಯುವಕ ಸಾವಿಗೆ ನಿಖರ ಕಾರಣ ತಿಳಿದು ಬರಲಿದೆ.

  • ಪುತ್ತೂರು | ವಿಹರಿಸುತ್ತಿದ್ದ ಜೋಡಿಗೆ ಕಿರುಕುಳ – ನಿಂದಿಸಿ ವಿಡಿಯೋ ಹರಿಬಿಟ್ಟ ಪುಂಡರು

    ಪುತ್ತೂರು | ವಿಹರಿಸುತ್ತಿದ್ದ ಜೋಡಿಗೆ ಕಿರುಕುಳ – ನಿಂದಿಸಿ ವಿಡಿಯೋ ಹರಿಬಿಟ್ಟ ಪುಂಡರು

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೈತಿಕ ಪೊಲೀಸ್‍ಗಿರಿ ಮುಂದುವರಿದಿದೆ. ಪುತ್ತೂರಿನ ಬಿರುಮಲೆಗುಡ್ಡದಲ್ಲಿ ವಿಹರಿಸುತ್ತಿದ್ದ ಜೋಡಿಗೆ ಪಾನಮತ್ತನಾಗಿ ಬಂದ ಯುವಕರ ಗುಂಪು ಕಿರುಕುಳ ನೀಡಿದೆ.

    ಜೋಡಿಯ ಫೋಟೋ, ವಿಡಿಯೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಕಿರುಕುಳ ನೀಡಲಾಗಿದೆ. ಯುವತಿಯ ಹೆಲ್ಮೆಟ್ ಕಸಿದುಕೊಂಡು ಹಲ್ಲೆಗೆ ಯತ್ನ ಮಾಡಲಾಗಿದೆ. ಅಲ್ಲದೇ ಅವ್ಯಾಚ್ಯ ಶಬ್ಧಗಳಿಂದ ಪುಂಡರು ನಿಂದಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರು | ಅಪ್ರಾಪ್ತೆಯನ್ನು ಕರೆದೊಯ್ದು ಮದುವೆಗೆ ಯತ್ನ – ಆರೋಪಿ ಅರೆಸ್ಟ್

    ಕಿಡಿಗೇಡಿಗಳಿಂದ ತಪ್ಪಿಸಿಕೊಂಡು ಜೋಡಿ ಬಚಾವ್ ಆಗಿದೆ. ಜಿಲ್ಲೆಯಲ್ಲಿ ಹೆಚ್ಚುತ್ತಿರುವ ನೈತಿಕ ಪೊಲೀಸ್‍ಗಿರಿಗೆ ಬ್ರೇಕ್ ಹಾಕಬೇಕು ಎಂದು ಜನ ಆಗ್ರಹಿಸಿದ್ದಾರೆ. ಇದನ್ನೂ ಓದಿ: ಜಾತ್ರೆಯಲ್ಲಿ ಗುಂಡು ಹಾರಿಸಿದ ಪ್ರಕರಣ – ರಮೇಶ್‌ ಜಾರಕಿಹೊಳಿ ಪುತ್ರನ ವಿರುದ್ಧ ಎಫ್‌ಐಆರ್‌

  • ಮಂಗಳೂರು | ಲವ್-ಸೆಕ್ಸ್ ದೋಖಾ ಕೇಸ್‌ – ಬಿಜೆಪಿ ಪ್ರಭಾವಿ ಮುಖಂಡನ ಪುತ್ರ ಅರೆಸ್ಟ್‌

    ಮಂಗಳೂರು | ಲವ್-ಸೆಕ್ಸ್ ದೋಖಾ ಕೇಸ್‌ – ಬಿಜೆಪಿ ಪ್ರಭಾವಿ ಮುಖಂಡನ ಪುತ್ರ ಅರೆಸ್ಟ್‌

    – ಯುವತಿಯನ್ನ ಗರ್ಭಿಣಿ ಮಾಡಿ ಕೈಕೊಟ್ಟಿದ್ದ ಆರೋಪಿ
    – ಈಗಾಗಲೇ ಗಂಡು ಮಗುವಿಗೆ ಜನ್ಮ ನೀಡಿರುವ ಸಂತ್ರಸ್ತೆ

    ಮಂಗಳೂರು: ಲವ್‌-ಸೆಕ್ಸ್‌ ದೋಖಾ ಪ್ರಕರಣದಲ್ಲಿ ಇಲ್ಲಿನ ಬಿಜೆಪಿ ಮುಖಂಡನ ಪುತ್ರನನ್ನು ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಠಾಣೆ ಪೊಲೀಸರು (Dakshina Kannada Women Police) ಬಂಧಿಸಿದ್ದಾರೆ.

    ಪುತ್ತೂರು (Puttur) ಬಿಜೆಪಿ ಘಟಕದ ಪ್ರಭಾವಿ ಮುಖಂಡನ (BJP Leader) ಮಗ ಕೃಷ್ಣ ಜೆ.ರಾವ್ (21) ಬಂಧಿತ ಆರೋಪಿ. ಮೈಸೂರಿನ ಟಿ. ನರಸೀಪುರದಲ್ಲಿ ಆರೋಪಿಯನ್ನ ಪೊಲೀಸರು ಬಂಧಿಸಿದ್ದಾರೆ. ಈಗಾಗಲೇ ಸಂತ್ರಸ್ತ ಯುವತಿ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಇದನ್ನೂ ಓದಿ: ಮಂಗಳೂರು | ಹಿಂದೂ ಮುಖಂಡನ ಮೊಬೈಲ್‍ನಲ್ಲಿ ಕರಾವಳಿ ರಾಜಕಾರಣಿಯ 50 ಅಶ್ಲೀಲ ವಿಡಿಯೋ!

    ಏನಿದು ಪ್ರಕರಣ?
    ಆರೋಪಿ ಕೃಷ್ಣ ಜೆ.ರಾವ್ ಪುತ್ತೂರಿನ ಹೈಸ್ಕೂಲ್‌ವೊಂದರಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾಗ ಹುಡುಗಿಯೊಬ್ಬಳನ್ನ ಪ್ರೀತಿಸುತ್ತಿದ್ದ. ಅದೇ ಪ್ರೀತಿ ಹಾಗೆಯೇ ಮುಂದುವರಿದಿತ್ತು. ಬಳಿಕ 2024ರ ಅ.11ರಂದು ಮನೆಯಲ್ಲಿ ಯಾರೂ ಇಲ್ಲದ ವೇಳೆ ಯುವತಿಯನ್ನ ಕರೆದುಕೊಂಡು ಹೋಗಿದ್ದ. ಈ ವೇಳೆ ಮದುವೆಯಾಗುತ್ತೇನೆ ನಂಬಿಸಿ, ಆಕೆಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ್ದ. ಅದಾದ ಬಳಿಕ 2025ರ ಜನವರಿಂದಲೂ ಬಲವಂತವಾಗಿ ಯುವತಿ ಜೊತೆ ಲೈಂಗಿಕ ಕ್ರಿಯೆ ನಡೆಸಿದ್ದ. ಕೆಲವು ಸಮಯದ ನಂತರ ಯುವತಿ ಗರ್ಭಿಣಿಯಾದ ವಿಚಾರ ಬೆಳಕಿಗೆ ಬಂದಿತ್ತು. ಆದ್ರೆ ಕೃಷ್ಣ ಮದುವೆಯಾಗಲು ನಿರಾಕರಿಸಿದ್ದ. ಇದನ್ನೂ ಓದಿ: ಮಂಗಳೂರು | ಲವ್, ಸೆಕ್ಸ್, ದೋಖಾ ಆರೋಪ – ಕೇಸ್ ದಾಖಲಾಗ್ತಿದ್ದಂತೆ ಆರೋಪಿ ಯುವಕ ಎಸ್ಕೇಪ್3

    ಇದಾದ ಬಳಿಕ ಇಬ್ಬರ ನಡುವೆ ರಾಜಿ ಪಂಚಾಯಿತಿ ನಡೆದಿತ್ತು. ಸಂಧಾನ ನಡೆದಿದ್ದ ಹಿನ್ನೆಲೆ ಆರೋಪಿ ವಿರುದ್ಧ ಎಫ್‌ಐಆರ್‌ ಸಹ ದಾಖಲಾಗಿರಲಿಲ್ಲ. ಯುವಕನಿಗೆ 21 ವರ್ಷ ತುಂಬದ ಹಿನ್ನಲೆ ಮದುವೆಗೆ ಅಡ್ಡಿಪಡಿಸಲಾಗಿತ್ತು. ಆದ್ರೆ ಕಳೆದ ಜೂನ್‌ 23ಕ್ಕೆ 21 ವರ್ಷ ತುಂಬಿತ್ತು. ಆದಾಗ್ಯೂ ಮದುವೆಗೆ ಯುವಕ ಹಿಂದೇಟು ಹಾಕಿದ್ದ. ಹೀಗಾಗಿ ಮಂಗಳೂರಿನ ಖಾಸಗಿ ಕಾಲೇಜಿನ ಬಿ.ಎಸ್ಸಿ ಫಾರೆನ್ಸಿಕ್ ಸೈನ್ಸ್ ವಿದ್ಯಾರ್ಥಿನಿ ಪುತ್ತೂರು ಮಹಿಳಾ ಠಾಣೆಯಲ್ಲಿ ದೂರು ದಾಖಲಿಸಿದ್ದಳು. ಇದನ್ನೂ ಓದಿ: ದಕ್ಷಿಣ ಕನ್ನಡ ಜಿಲ್ಲೆ ಮರುನಾಮಕರಣ ಕೂಗಿಗೆ ಧ್ವನಿಗೂಡಿಸಿದ ಶಾಸಕ ಕಾಮತ್

    ದೂರು ದಾಖಲಿಸುತ್ತಿದ್ದಂತೆ ಆರೋಪಿ ಎಸ್ಕೇಪ್‌ ಆಗಿದ್ದ. ಆದ್ರೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿ ಪತ್ತೆಗೆ ಬಲೆ ಬೀಸಿದ್ದರು. ಸದ್ಯ ಮೈಸೂರು ಜಿಲ್ಲೆಯ ಟಿ ನರಸೀಪುರ ತಾಲೂಕಿನಲ್ಲಿ ಆರೋಪಿಯನ್ನ ಬಂಧಿಸಿ, ಮೆಡಿಕಲ್ ಟೆಸ್ಟ್ ಗಾಗಿ ಪುತ್ತೂರು ಸರ್ಕಾರಿ ಆಸ್ಪತ್ರೆಗೆ ಕರೆತಂದಿದ್ದಾರೆ. ಇದನ್ನೂ ಓದಿ: ಶಿಶು ಮರಣ ತಗ್ಗಿಸಿದ ಅಮೃತ – ಜೀವ ಸಂಜೀವಿನಿಯಾಗಿ ಲೇಡಿಗೋಷನ್ ಹ್ಯೂಮನ್ ಮಿಲ್ಕ್ ಬ್ಯಾಂಕ್

  • ಮಂಗಳೂರು | ಲವ್, ಸೆಕ್ಸ್, ದೋಖಾ ಆರೋಪ – ಕೇಸ್ ದಾಖಲಾಗ್ತಿದ್ದಂತೆ ಆರೋಪಿ ಯುವಕ ಎಸ್ಕೇಪ್

    ಮಂಗಳೂರು | ಲವ್, ಸೆಕ್ಸ್, ದೋಖಾ ಆರೋಪ – ಕೇಸ್ ದಾಖಲಾಗ್ತಿದ್ದಂತೆ ಆರೋಪಿ ಯುವಕ ಎಸ್ಕೇಪ್

    – ಯುವತಿಯನ್ನ ಗರ್ಭಿಣಿ ಮಾಡಿ ಕೈಕೊಟ್ಟ ಹೈನಾತಿ

    ಮಂಗಳೂರು: ಜಿಲ್ಲೆಯ ಯುವಕನೋರ್ವನ ವಿರುದ್ಧ ಲವ್, ಸೆಕ್ಸ್, ದೋಖಾ ಆರೋಪ ಕೇಳಿಬಂದಿದ್ದು, ಪೊಲೀಸರು ಆರೋಪಿಯ ಪತ್ತೆಗಾಗಿ ಬಲೆ ಬೀಸಿದ್ದಾರೆ.

    ಆರೋಪಿಯನ್ನು ಪುತ್ತೂರಿನ ಬಪ್ಪಳಿಗೆ ನಿವಾಸಿ ಶ್ರೀಕೃಷ್ಣ(21) ಎಂದು ಗುರುತಿಸಲಾಗಿದೆ.

    ಆರೋಪಿ ಶ್ರೀಕೃಷ್ಣ ಪುತ್ತೂರಿನ ಹೈಸ್ಕೂಲ್‌ವೊಂದರಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾಗ ಹುಡುಗಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಅದೇ ಪ್ರೀತಿ ಹಾಗೆಯೇ ಮುಂದುವರೆದಿತ್ತು. ಬಳಿಕ 2024ರ ಅ.11ರಂದು ಮನೆಯಲ್ಲಿ ಯಾರೂ ಇಲ್ಲದ ವೇಳೆ ಯುವತಿಯನ್ನು ಕರೆದುಕೊಂಡು ಹೋಗಿದ್ದ. ಈ ವೇಳೆ ಮದುವೆಯಾಗುತ್ತೇನೆ ನಂಬಿಸಿ, ದೈಹಿಕ ಸಂಪರ್ಕ ಬೆಳೆಸಿದ್ದ. ಅದಾದ ಬಳಿಕ 2025ರ ಜನವರಿಯಲ್ಲಿ ಬಲವಂತವಾಗಿ ಯುವತಿ ಜೊತೆ ಲೈಂಗಿಕ ಕ್ರಿಯೆ ನಡೆಸಿದ್ದ.

    ಕೆಲವು ಸಮಯದ ನಂತರ ಯುವತಿ ಗರ್ಭಿಣಿಯಾಗಿದ್ದು, ಈ ವೇಳೆ ಶ್ರೀಕೃಷ್ಣನಿಂದ ಮದುವೆಯಾಗಲು ನಿರಾಕರಿಸಿದ್ದಾನೆ. ಹೀಗಾಗಿ ಮಂಗಳೂರಿನ ಖಾಸಗಿ ಕಾಲೇಜಿನ ಬಿ.ಎಸ್ಸಿ ಫಾರೆನ್ಸಿಕ್ ಸೈನ್ಸ್ ವಿದ್ಯಾರ್ಥಿನಿ ಪುತ್ತೂರು ಮಹಿಳಾ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡು ಆರೋಪಿಯ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

     

  • ಬಿಜೆಪಿ ಮುಖಂಡ ಅರುಣ್ ಕುಮಾರ್ ಪುತ್ತಿಲಗೆ ಗಡೀಪಾರು ನೋಟಿಸ್

    ಬಿಜೆಪಿ ಮುಖಂಡ ಅರುಣ್ ಕುಮಾರ್ ಪುತ್ತಿಲಗೆ ಗಡೀಪಾರು ನೋಟಿಸ್

    ಮಂಗಳೂರು: ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯಲ್ಲಿ ಹಿಂದೂ ಮುಖಂಡರು ಹಾಗೂ ಕಾರ್ಯಕರ್ತರ ವಿರುದ್ಧ ಎಫ್‌ಐಆರ್  ದಾಖಲಾದ ಬೆನ್ನಲ್ಲೇ ಪುತ್ತಿಲ ಪರಿವಾರ ಮುಖ್ಯಸ್ಥ, ಬಿಜೆಪಿ ಮುಖಂಡ ಅರುಣ್ ಕುಮಾರ್ ಪುತ್ತಿಲಗೆ (Arun Kumar Puthila) ಗಡಿಪಾರು ನೋಟಿಸ್ ನೀಡಲಾಗಿದೆ.

    ಪುತ್ತೂರು ವಿಭಾಗದ ಸಹಾಯಕ ಆಯುಕ್ತ ಅರುಣ್ ಕುಮಾರ್ ಪುತ್ತಿಲ ಅವರಿಗೆ ಗಡೀಪಾರು ನೋಟಿಸ್ (Deportation Notice) ನೀಡಿದ್ದಾರೆ. ಕರ್ನಾಟಕ ಪೊಲೀಸ್ ಅಧಿನಿಯಮ, 1963 ಕಲಂ:58ರಡಿ ನೋಟೀಸ್ ಜಾರಿ ಮಾಡಲಾಗಿದೆ. ಅಲ್ಲದೇ ಜೂನ್ 6ರಂದು ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ. ಇದನ್ನೂ ಓದಿ: Chikkaballapura | ಲಾಂಗ್‌ನಲ್ಲಿ ಕೇಕ್ ಕಟ್ ಮಾಡಿ ಹುಟ್ಟುಹಬ್ಬ ಆಚರಣೆ – ಆಟೋ ಚಾಲಕ ಅರೆಸ್ಟ್

    ದಕ್ಷಿಣ ಕನ್ನಡ ಜಿಲ್ಲೆಯಿಂದ ಕಲಬುರಗಿ ಜಿಲ್ಲೆಯ ಶಹಬಾದ್ ಪೊಲೀಸ್ ಠಾಣಾ ವ್ಯಾಪ್ತಿಗೆ ಗಡಿಪಾರು ಆದೇಶ ಹೊರಡಿಸುವ ಕುರಿತು ನೋಟಿಸ್ ಜಾರಿ ಮಾಡಿದ್ದು, ಸ್ವತಃ ಅಥವಾ ನ್ಯಾಯವಾದಿಯವರ ಮೂಲಕ ವಿಚಾರಣೆಗೆ ಹಾಜರಾಗಿ ವಾದಿಸಲು ಸೂಚನೆ ನೀಡಲಾಗಿದೆ. ತಪ್ಪಿದಲ್ಲಿ ಸದರಿ ಪ್ರಕರಣದಲ್ಲಿ ಆಸಕ್ತಿ ಇಲ್ಲವೆಂದು ಭಾವಿಸಿ ಲಭ್ಯವಿರುವ ಮಾಹಿತಿಯ ಆಧಾರದಲ್ಲಿ ಏಕಪಕ್ಷೀಯವಾಗಿ ತೀರ್ಮಾನ ಕೈಗೊಳ್ಳುವ ಬಗ್ಗೆ ನೋಟಿಸ್ ಮೂಲಕ ಮಾಹಿತಿ ನೀಡಲಾಗಿದೆ. ಇದನ್ನೂ ಓದಿ: 4,000 ಸಕ್ರಿಯ ಕೊರೊನಾ ಕೇಸ್‌ಗಳ ಸನಿಹದಲ್ಲಿ ಭಾರತ – ಕೇರಳದಲ್ಲಿಯೇ 1,400 ಪ್ರಕರಣ

  • ಪುತ್ತೂರು | ಖಾಸಗಿ ಬಸ್, ಕಾರು ನಡುವೆ ಅಪಘಾತ – ತಂದೆ, ಮಗಳಿಗೆ ಗಂಭೀರ ಗಾಯ

    ಪುತ್ತೂರು | ಖಾಸಗಿ ಬಸ್, ಕಾರು ನಡುವೆ ಅಪಘಾತ – ತಂದೆ, ಮಗಳಿಗೆ ಗಂಭೀರ ಗಾಯ

    ಮಂಗಳೂರು: ಖಾಸಗಿ ಬಸ್ ಹಾಗೂ ಕಾರಿನ ನಡುವೆ ಭೀಕರ ಅಪಘಾತ ಸಂಭವಿಸಿ, ತಂದೆ, ಮಗಳು ಗಂಭೀರ ಗಾಯಗೊಂಡಿರುವ ಘಟನೆ ದಕ್ಷಿಣಕನ್ನಡ (Dakshina Kannada) ಜಿಲ್ಲೆಯ ಪುತ್ತೂರಿನ (Puttur) ಮುರದಲ್ಲಿ ನಡೆದಿದೆ.

    ಪುತ್ತೂರಿನಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಖಾಸಗಿ ಬಸ್, ಪುತ್ತೂರಿನಿಂದ ಕೆದಿಲ ಕಡೆಗೆ ತೆರಳುತ್ತಿದ್ದ ಕಾರಿಗೆ ಡಿಕ್ಕಿಯಾಗಿದೆ. ಮುರ ಎಂಬಲ್ಲಿ ಕಾರು ಚಾಲಕ ಬಲಕ್ಕೆ ತೆಗೆದುಕೊಳ್ಳುವಾಗ ಕಾರಿನ ಹಿಂಬದಿಗೆ ಬಸ್ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಕಾರು ಪಲ್ಟಿಯಾಗಿದ್ದು, ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಇದನ್ನೂ ಓದಿ: ಡಿವೈಡರ್‌ಗೆ ಲಾರಿ ಡಿಕ್ಕಿ – ಚೆಲ್ಲಾಪಿಲ್ಲಿಯಾದ ಔಷಧ ಬಾಕ್ಸ್‌ಗಳು

    ಕಾರಿನಲ್ಲಿ ಒಟ್ಟು ಮೂವರು ಪ್ರಯಾಣಿಕರಿದ್ದರು. ತಂದೆ ಹಾಗೂ ಮಗಳಿಗೆ ಗಂಭೀರ ಗಾಯಗಳಾಗಿದ್ದು, ಪವಾಡ ಸದೃಶ್ಯವಾಗಿ ಮಗು ಪ್ರಾಣಾಪಾಯದಿಂದ ಪಾರಾಗಿದೆ. ಗಾಯಾಳುಗಳನ್ನು ಮಂಗಳೂರಿನ (Mangaluru) ಖಾಸಗಿ ಆಸ್ಪತ್ರೆಗೆ ದಾಖಲಾಗಿದೆ. ಪುತ್ತೂರು ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಇದನ್ನೂ ಓದಿ: ಕಾರಿನಲ್ಲಿ ಒಂದೇ ಕುಟುಂಬದ 7 ಮಂದಿ ವಿಷ ಸೇವಿಸಿ ಆತ್ಮಹತ್ಯೆ

  • ಹತ್ತೂರಿನ ಒಡೆಯ ಪುತ್ತೂರು ಮಹಾಲಿಂಗೇಶ್ವರ – ಇಲ್ಲಿ ಆನೆಗಳಿಗೆ ಪ್ರವೇಶವಿಲ್ಲ

    ಹತ್ತೂರಿನ ಒಡೆಯ ಪುತ್ತೂರು ಮಹಾಲಿಂಗೇಶ್ವರ – ಇಲ್ಲಿ ಆನೆಗಳಿಗೆ ಪ್ರವೇಶವಿಲ್ಲ

    ತ್ತೂರು ಬಿಟ್ಟರೂ ಪುತ್ತೂರು ಬಿಡೆನು ಎಂಬ ಮಾತಿದೆ. ಪುತ್ತೂರು ಎಂದಾಕ್ಷಣ ಮೊದಲು ನೆನಪಾಗುವುದೇ ಮಹಾಲಿಂಗೇಶ್ವರ ದೇವಾಲಯ. ಕ್ಷೇತ್ರದ ಆರಾಧ್ಯದೇವ ಮಹಾಲಿಂಗೇಶ್ವರ ಪುತ್ತೂರಿಗರನ್ನು ಎಲ್ಲಾ ತೊಂದರೆಗಳಿಂದಲೂ ರಕ್ಷಿಸಿದರೆ, ಈ ದೇವರನ್ನು ನಂಬಿ ಬಂದ ಪರವೂರವರನ್ನೂ ಯಾವತ್ತೂ ಕೈಬಿಟ್ಟಿಲ್ಲ ಎಂಬ ನಂಬಿಕೆಯಿದೆ. ಆದರೆ ಈ ಕ್ಷೇತ್ರಕ್ಕೆ ಆನೆಗಳನ್ನು ಕರೆತರುವಂತಿಲ್ಲ. ಇದಕ್ಕೆ ಕಾರಣವೇನು? ಪುತ್ತೂರು ಜಾತ್ರೆ ಪ್ರಸಿದ್ಧಿ ಯಾಕೆ? ದೇವಾಲಯದ ಇತಿಹಾಸವೇನು ಎಂಬುದರ ಕುರಿತು ಇಲ್ಲಿ ವಿವರಿಸಲಾಗಿದೆ.

    ಆನೆಗಳಿಗೆ ಪ್ರವೇಶವಿಲ್ಲ:
    ಮಹಾಲಿಂಗೇಶ್ವರ ದೇವಾಲಯವು ಸುಮಾರು ಹನ್ನೊಂದು ಅಥವಾ ಹನ್ನೆರಡನೇ ಶತಮಾನಕ್ಕೆ ಸೇರಿದ್ದು ಎಂದು ಹೇಳಲಾಗಿದೆ. ಈ ದೇವಾಲಯದ ಸುತ್ತಮುತ್ತ ಆನೆ ಬರುವ ಹಾಗಿಲ್ಲ. ಹಾಗೇನಾದರೂ ಅಪ್ಪಿತಪ್ಪಿ ಬಂದಲ್ಲಿ ಅವುಗಳಿಗೆ ಸಾವು ಖಚಿತವೆಂಬ ಪ್ರತೀತಿ ಇದೆ. ಇದಕ್ಕೊಂದು ಪೌರಾಣಿಕ ಇತಿಹಾಸವಿದೆ. ಒಮ್ಮೆ ಗೋವಿಂದ ಭಟ್ಟ ಎಂಬ ಬ್ರಾಹ್ಮಣ ಪೂಜೆ ಮಾಡಲೆಂದು ತಂದ ಶಿವಲಿಂಗವನ್ನು ಈಗಿನ ಮಹಾಲಿಂಗೇಶ್ವರ ನೆಲೆಸಿರುವ ಸ್ಥಳದಲ್ಲಿ ಮರೆತು ನೆಲದ ಮೇಲಿಟ್ಟು ಸ್ನಾನ ಮಾಡಿ ಬಂದರು. ಭೂಮಿಯನ್ನು ಸ್ಪರ್ಶಿಸಿದ ಈ ಮಹಾಲಿಂಗವು ಏನೇ ಮಾಡಿದರೂ ಮೇಲೆತ್ತಲಾಗಲಿಲ್ಲ.

    ಶಿವಲಿಂಗವನ್ನು ಎತ್ತಲೇಬೇಕೆಂಬ ಕಾರಣಕ್ಕಾಗಿ ಭಟ್ಟರು ಆನೆಯನ್ನು ಕರೆಸಿ ಶಿವಲಿಂಗಕ್ಕೆ ಹಗ್ಗ ಕಟ್ಟಿ ಎಳೆಸುತ್ತಾರೆ. ಆನೆಯು ಶಿವಲಿಂಗವನ್ನು ಎಳೆಯುತ್ತಿದ್ದಂತೆ ಶಿವಲಿಂಗವೇ ಬೆಳೆಯುತ್ತಾ ಹೋಗುತ್ತದೆ. ಈ ಶಿವಲಿಂಗವೇ ಈಗ ಪೂಜಿಸಲ್ಪಡುತ್ತಿರುವ ಮಹಾಲಿಂಗೇಶ್ವರ. ಆನೆಯು ಮತ್ತೂ ಬಲವಾಗಿ ಶಿವಲಿಂಗವನ್ನು ಎಳೆಯುತ್ತಿದ್ದಂತೆ ಆನೆಯೇ ಛಿದ್ರಛಿದ್ರವಾಗಿ ಎಲ್ಲೆಡೆ ಸಿಡಿದು ಬೀಳುತ್ತದೆ. ಆನೆಯ ಒಂದೊಂದು ಅಂಗಗಳು ಬಿದ್ದ ಒಂದೊಂದು ಸ್ಥಳಕ್ಕೆ ಒಂದೊಂದು ಹೆಸರು ಹುಟ್ಟಿಕೊಂಡಿದೆ ಎಂಬ ಪ್ರತೀತಿ ಇದೆ. ಕೊಂಬು ಬಿದ್ದೆಡೆ ಕೊಂಬೆಟ್ಟು, ತಲೆ ಬಿದ್ದಲ್ಲಿ ತಾಳೆಪ್ಪಾಡಿ, ಕೈ ಬಿದ್ದ ಜಾಗ ಕೇಪಳ ಮತ್ತು ಬಾಲ ಬಿದ್ದ ಸ್ಥಳವನ್ನು ಬೀದಿಮಜಲು ಎಂದು ಕರೆಯಲಾಗುತ್ತದೆ .

    ಶಿವಲಿಂಗದ ಈ ಅದ್ಬುತವನ್ನು ಕಂಡ ಅಂದಿನ ಬಂಗರಾಜರು ದೇವರಿಗೆ ಗುಡಿಯನ್ನು ಕಟ್ಟಿಸುತ್ತಾರೆ. ಈ ದೇವಾಲಯದ ಎದುರು ಭಾಗದಲ್ಲಿ ಮೂರು ಕಾಲುಳ್ಳ ನಂದಿ ಇರುವುದು ಇಲ್ಲಿನ ವಿಶೇಷತೆ. ಈ ನಂದಿಯ ಹಿಂದೆ ಒಂದು ವಿಶೇಷ ಕಥೆ ಇದೆ. ಈ ಪ್ರದೇಶದ ಜನರು ಬೆಳೆಯುತ್ತಿದ್ದ ಭತ್ತದ ಪೈರನ್ನು ಪ್ರತೀ ಬಾರಿಯೂ ಒಂದು ಬಸವ ತಿಂದು ನಾಶ ಮಾಡುತ್ತಿದ್ದು, ಕಾದು ಕುಳಿತ ರೈತರು ಬಸವನ ಕಾಲಿಗೆ ಹೊಡೆದಾಗ ಬಸವನ ಕಾಲು ಮುರಿಯುತ್ತದೆ. ಕಾಲು ಮುರಿದ ಬಸವ ಕಣ್ಣೀರಿಡುತ್ತಾ ಮಹಾಲಿಂಗೇಶ್ವರನ ಮುಂದೆ ಬಂದು ನಿಲ್ಲುತ್ತದೆ.

    ಬಸವನ ಕಣ್ಣೀರು ಕಂಡ ಈಶ್ವರ ಮುಂದೆ ನಿನಗೆ ಯಾರಿಂದಲೂ ತೊಂದರೆ ಆಗದಿರಲು ಹಾಗೂ ನಿನ್ನನ್ನು ಎಲ್ಲರೂ ಪೂಜಿಸುವಂತಾಗಲಿ ಎಂದು ಬಸವನನ್ನು ಕಲ್ಲಾಗಿ ಮಾಡುತ್ತಾನೆ. ಈಗ ನಾವು ನೋಡುತ್ತಿರುವ ಪುತ್ತೂರಿನ ಮಹಾಲಿಂಗೇಶ್ವರ ದೇವಾಲಯದ ಮುಂದೆ ಇರುವ ನಂದಿಯ ಒಂದು ಕಾಲು ಮುರಿದಿರುವುದನ್ನು ಕಾಣಬಹುದು. ಮುರಿದ ಬಸವನ ಕಾಲು ಈಗಲೂ ಪಕ್ಕದ ಪೈರಿನ ಹೊಲದ ಮಧ್ಯೆ ಇದೆ ಎಂಬ ನಂಬಿಕೆ ಇದೆ. ಅಲ್ಲದೇ ಪ್ರತಿದಿನ ಮಧ್ಯಾಹ್ನ ಪೂಜೆಯ ವೇಳೆಗೆ ದೇಗುಲದ ಬಸವ ದೇವಾಲಯದ ಎದುರು ಹಾಜರಾಗುತ್ತದೆ. ದೇವರಿಗೆ ಕೈಮುಗಿಯುವ ಭಕ್ತರು ಈ ಬಸವನನ್ನೂ ಪೂಜಿಸುತ್ತಾರೆ.

    ಮುಂದಿನ ದಿನಗಳಲ್ಲಿ ಮಹಾಲಿಂಗೇಶ್ವರನ ಪರಿವಾರ ದೇವತೆಗಳಾದ ಪಾರ್ವತಿ, ಸುಬ್ರಹ್ಮಣ್ಯ, ಗಣೇಶ ಹಾಗೂ ಇತರ ದೈವಗಳನ್ನು, ದೇವಾಲಯದ ಮುಂಭಾಗದಲ್ಲಿ ನಾಗರಾಜ, ಅಯ್ಯಪ್ಪ ಮತ್ತು ನವಗ್ರಹಗಳ ಗುಡಿಯನ್ನು ಕಟ್ಟಲಾಯಿತು. ಅವುಗಳಿಗೆ ಶಾಸ್ತ್ರೋಕ್ತವಾಗಿ ಪೂಜೆಯನ್ನು ಮಾಡಲಾಗುತ್ತಿದೆ. ಅಲ್ಲದೇ ದೇವಾಲಯದ ಮುಂಭಾಗದಲ್ಲಿಯೇ ಒಂದು ಸ್ಮಶಾನ ಕೂಡ ಇದೆ. ಅದರ ಪಕ್ಕ ಮತ್ತೊಂದು ಬೃಹದಾಕಾರದ ಶಿವನ ಮೂರ್ತಿ ಇದೆ.

    ಪುಷ್ಕರಿಣಿ:
    ಆನೆ ಸೋತು ಬಿದ್ದ ಜಾಗದಲ್ಲಿ ನಿರ್ಮಾಣಗೊಂಡ ಬೃಹತ್ ಗುಳಿಯಲ್ಲೇ ಕೆರೆ ನಿರ್ಮಿಸಲಾಗಿತ್ತು. ಕೆರೆಯಲ್ಲಿ ನೀರು ಸಿಗದೇ ಇದ್ದಾಗ ಶಿವ ಭಕ್ತರಿಗೆ ಕೆರೆಯ ಮಧ್ಯದಲ್ಲಿ ಅನ್ನಸಂತರ್ಪಣೆ ಮಾಡಲಾಗಿತ್ತು. ಭಕ್ತರು ಊಟ ಮಾಡುತ್ತಿದ್ದಂತೆ ಗಂಗೆ ಉಕ್ಕಿ ಬಂದಿದ್ದು, ಅವರೆಲ್ಲ ಅನ್ನದ ಎಲೆಯನ್ನು ಕೆರೆಯಲ್ಲೇ ಬಿಟ್ಟು ಮೇಲೆ ಬಂದಿದ್ದರು. ನೀರಿನಾಳದಲ್ಲಿ ಉಳಿದ ಅನ್ನದ ಅಗುಳುಗಳೇ ಮುತ್ತುಗಳಾಗಿ ಪರಿವರ್ತನೆಯಾಗಿ ಕ್ರಮೇಣ ಈ ಊರಿಗೆ ಪುತ್ತೂರು ಎಂಬ ಹೆಸರು ಬಂತೆಂಬ ಕಥೆಯಿದೆ.

    ದೇವಾಲಯದ ವಿಶೇಷತೆ:
    ಮಹಾಲಿಂಗೇಶ್ವರ ದೇವಸ್ಥಾನದ ಒಳಾಂಗಣದಲ್ಲಿ ಸುಬ್ರಹ್ಮಣ್ಯ ಗುಡಿ, ಗಣಪತಿ ಗುಡಿ, ಶಾಸ್ತಾವು ಗುಡಿ, ದೇವಿ ಗುಡಿ, ದೈವಗಳ ಗುಡಿಗಳಿವೆ. ಒಳಾಂಗಣದ ದಕ್ಷಿಣದಲ್ಲಿ ಸಪ್ತ ಮಾತೃಕೆಯರನ್ನು, ಗಣಪತಿ ಮತ್ತು ವೀರಭದ್ರನನ್ನು ಸುತ್ತಲೂ ಅಷ್ಟದಿಕಾಲಕರನ್ನು ಸ್ಥಾಪಿಸಲಾಗಿದೆ. ಈಶಾನ್ಯದಲ್ಲಿ ಚೆಂಡೇಶ್ವರ, ಕ್ಷೇತ್ರಪಾಲಕನನ್ನು ಹಾಗೂ ನಂದಿಯ ಹಿಂಭಾಗದಲ್ಲಿ ಬಲಿಕಲ್ಲು ಸ್ಥಾಪಿಸಲಾಗಿದೆ. ಒಳಾಂಗಣದ ದಕ್ಷಿಣದಲ್ಲಿ, ಮಾಹೇಶ್ವರಿ, ಕೌಮಾರೀ, ವೈಷ್ಣವೀ, ವಾರಾಹೀ, ಇಂದ್ರಾಣಿ, ಚಾಮುಂಡಾ ಎಂಬ ಸಪ್ತ ಮಾತೃಕೆಯರನ್ನು, ಗಣಪತಿ ಮತ್ತು ವೀರಭದ್ರನನ್ನು ಒಂದೇ ಪೀಠದಲ್ಲಿ ಪ್ರತಿಷ್ಠಾಪಿಸಲಾಗಿದೆ.

    ಪುನರ್ ನಿರ್ಮಾಣಗೊಂಡು 2013ರಲ್ಲಿ ವೈಭವದ ಬ್ರಹ್ಮಕಲಶೋತ್ಸವಕ್ಕೆ ಸಾಕ್ಷಿಯಾದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಗರ್ಭಗುಡಿಯ ಹೊರಾಂಗಣದ ಕೆಳ ಭಾಗದಲ್ಲಿ ಧರ್ಮದ ಸಂಕೇತವಾಗಿ 192 ನಂದಿಗಳನ್ನೂ, ಮೇಲ್ಭಾಗದಲ್ಲಿ ಶೌರ್ಯದ ಸಂಕೇತವಾಗಿ 108 ಸಿಂಹವನ್ನು ಶಿಲೆಯಲ್ಲಿ ಕೆತ್ತಲಾಗಿದೆ.

    ಪುತ್ತೂರು ಒಡೆಯನ ದೇವಾಲಯಕ್ಕೆ ತೌಳವ-ದ್ರಾವಿಡ ಶೈಲಿಯ ರಾಜಗೋಪುರ ಸಮರ್ಪಣೆಯಾಗಿದೆ. 19 ಅಡಿ ಸುತ್ತಳತೆ, 47 ಅಡಿ ಎತ್ತರದ ರಾಜಗೋಪುರವನ್ನು 120 ಮೂರ್ತಿಗಳಿಂದ ಅಲಂಕರಿಸಲಾಗಿದೆ. ತುತ್ತ ತುದಿಯಲ್ಲಿ ಪಂಚಕಲಶಗಳು ಶೋಭಾಯಮಾನವಾದರೆ ಇಕ್ಕೆಲಗಳಲ್ಲಿ ಶೋಭಾನೆ ಮಂಟಪವಿದೆ.

    ಬ್ರಹ್ಮರಥ:
    ಮಹಾಲಿಂಗೇಶ್ವರ ದೇವರಿಗೆ ಮುತ್ತಪ್ಪ ರೈಯವರು 2010ರಲ್ಲಿ ಕಲಾತ್ಮಕ ಕೆತ್ತನೆಗಳಿರುವ 71 ಅಡಿ ಎತ್ತರದ 20 ಅಡಿ ಅಗಲದ ಬ್ರಹ್ಮರಥವನ್ನು ನೀಡಿದ್ದಾರೆ. ಹೊಯ್ಸಳ ಶೈಲಿ ಕಾಷ್ಠ ಶಿಲ್ಪದಲ್ಲಿರುವ ಈ ರಥವನ್ನು ನಿರ್ಮಿಸಲು ಎರಡು ವರ್ಷ ತಗುಲಿದ್ದು, 7,200 ಮಾನವ ದಿನಗಳು ಬಳಕೆಯಾಗಿವೆ. ಅನಂತರ ರಥಬೀದಿ ರಚಿಸಲಾಗಿದೆ. ಪ್ರತಿವರ್ಷ ಏ.17ರಂದು ರಥೋತ್ಸವ ನಡೆಯುತ್ತದೆ. ಇದನ್ನು ಕಣ್ತುಂಬಿಕೊಳ್ಳಲು ಸಾಗರೋಪಾದಿಯಲ್ಲಿ ಭಕ್ತರು ಆಗಮಿಸುತ್ತಾರೆ.

    ದಶದಿಕ್ಕುಗಳಿಗೆ ದೇವರ ಪೇಟೆ ಸವಾರಿ:
    ಮಹಾಲಿಂಗೇಶ್ವರ ದೇವರ ವಾರ್ಷಿಕ ಜಾತ್ರೆ ಪ್ರತಿವರ್ಷ ಏ.10ರಿಂದ 20ರ ತನಕ ನಡೆಯುತ್ತದೆ. ಜಾತ್ರೆಯ ಸಂದರ್ಭ ದೇವರು ಪುತ್ತೂರಿನ ದಶ ದಿಕ್ಕುಗಳಿಗೆ ಪೇಟೆ ಸವಾರಿ ಉತ್ಸವದಲ್ಲಿ ತೆರಳಿ ಭಕ್ತರ ಕಟ್ಟೆಪೂಜೆ ಸೇವೆಯನ್ನು ಸ್ವೀಕರಿಸುವುದರ ಮೂಲಕ ಮನೆ ಬಾಗಿಲಿಗೆ ಬರುವ ದೇವರೆಂದು ಪ್ರಸಿದ್ಧಿ ಪಡೆದಿದೆ. 10 ದಿನಗಳ ಕಾಲ ಪೇಟೆ ಸವಾರಿ ನಡೆಯುವ ಪುತ್ತೂರು ಜಾತ್ರೆ ದಕ್ಷಿಣ ಕನ್ನಡ ಜಿಲ್ಲೆಯ ಮಟ್ಟಿಗೆ ಧಾರ್ಮಿಕ ಚರಿತ್ರೆಯೂ ಹೌದು.

    ದೇವರು ಸಕಲ ಗೌರವಗಳೊಂದಿಗೆ ಪೇಟೆಯ ವಿವಿಧ ಭಾಗಗಳಿಗೆ ಸವಾರಿ ತೆರಳಿ ಸಾವಿರಾರು ಕಟ್ಟೆಪೂಜೆ, ಭಕ್ತರು ಅರ್ಪಿಸಿದ ಹೂವು, ಹಣ್ಣು, ಆರತಿ ಸ್ವೀಕರಿಸುವುದು ಜಾತ್ರೆಯ ವಿಶೇಷ. ಭಕ್ತರು ಈ ಜಾತ್ರೆಯನ್ನು ಹತ್ತು ದಿನಗಳ ಕಾಲ ಬಹಳ ವೈಭವ ಮತ್ತು ಪ್ರದರ್ಶನದೊಂದಿಗೆ ಆಚರಿಸುತ್ತಾರೆ. ಈ ಸಂದರ್ಭ ಪುತ್ತೂರು ಸುಂದರವಾದ ದೀಪಗಳು ಮತ್ತು ಪಟಾಕಿಗಳ ಪ್ರದರ್ಶನದಿಂದ ಬೆರಗುಗೊಳಿಸುತ್ತದೆ.

    ಪುತ್ತೂರು ಬೆಡಿ:
    ಪುತ್ತೂರು ಜಾತ್ರೆಯ ಸಂದರ್ಭ ಏ.17ರಂದು ನಡೆಯುವ ಸುಡುಮದ್ದು ಪ್ರದರ್ಶನ ʼಪುತ್ತೂರು ಬೆಡಿ’ ಎಂದೇ ಪ್ರಸಿದ್ಧಿ ಪಡೆದಿದೆ. ಇದನ್ನು ವೀಕ್ಷಿಸಲು ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಈಗ ಏ.16ರಂದು ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಗಳ ಭಂಡಾರ ದೇವಸ್ಥಾನಕ್ಕೆ ಆಗಮಿಸಿದ ಬಳಿಕ ಪುತ್ತೂರು ಜಾತ್ರೆಗದ್ದೆಯಲ್ಲಿ ಸುಡುಮದ್ದು ಪ್ರದರ್ಶನ ನಡೆಯುತ್ತದೆ. ಇದನ್ನು ಸಣ್ಣ ಬೆಡಿ ಎನ್ನುತ್ತಾರೆ. ಏ.17ರಂದು ಬ್ರಹ್ಮರಥೋತ್ಸವದ ಬಳಿಕ ದೊಡ್ಡ ಬೆಡಿ ನಡೆಯುತ್ತದೆ.

    ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನವು ಬೆಂಗಳೂರಿನಿಂದ 300 ಕಿ.ಮೀ ದೂರದಲ್ಲಿದೆ. ಪುತ್ತೂರು ರೈಲು ನಿಲ್ದಾಣ ಹತ್ತಿರದ ರೈಲು ನಿಲ್ದಾಣವಾಗಿದ್ದು,. ಮಂಗಳೂರು ಹತ್ತಿರದ ವಿಮಾನ ನಿಲ್ದಾಣವಾಗಿದೆ. ಬಸ್‌ ಮೂಲಕವೂ ಈ ದೇವಾಲಯವನ್ನು ತಲುಪಬಹುದಾಗಿದೆ.