Tag: puttige sri

  • ಬಂಧಿಯಾಗಿದ್ದ ರಾಮ-ಲಕ್ಷ್ಮಣರನ್ನು ಬಿಡುಗಡೆಗೊಳಿಸಿದ ನೆನಪು ಬಿಚ್ಚಿಟ್ಟ ಉಡುಪಿಯ ಪುತ್ತಿಗೆ ಶ್ರೀ

    ಬಂಧಿಯಾಗಿದ್ದ ರಾಮ-ಲಕ್ಷ್ಮಣರನ್ನು ಬಿಡುಗಡೆಗೊಳಿಸಿದ ನೆನಪು ಬಿಚ್ಚಿಟ್ಟ ಉಡುಪಿಯ ಪುತ್ತಿಗೆ ಶ್ರೀ

    ಉಡುಪಿ: ರಾಮಮಂದಿರ ಶಿಲಾನ್ಯಾಸ ಸಂದರ್ಭ ತಮ್ಮ ಮಂದಿರ ಹೋರಾಟದ ನೆನಪುಗಳನ್ನು ಉಡುಪಿ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಸ್ವಾಮೀಜಿ ಬಿಚ್ಚಿಟ್ಟಿದ್ದಾರೆ.

    ಅನೇಕ ದಶಕಗಳಿಂದ ನಾವೆಲ್ಲರೂ ಒಂದುಗೂಡಿ ಭಾವನಾತ್ಮಕವಾಗಿ ಯಾವ ಹೋರಾಟವನ್ನು ಮಾಡಿದ್ದೇವೊ ಅದೀಗ ಕೈಗೂಡಿದೆ. ಅಯೋಧ್ಯೆಯಲ್ಲಿ ಭವ್ಯವಾದ ರಾಮ ಮಂದಿರ ನಿರ್ಮಾಣವಾಗುತ್ತಿದೆ. ದಶಕಗಳಿಂದ ರಾಮ ಮಂದಿರದ ಚಳುವಳಿಯಲ್ಲಿ ನಾವು ಸಕ್ರಿಯವಾಗಿ ಭಾಗವಹಿಸಿದ್ದೆವು.

    ರಾಮಲಲ್ಲಾನ ವಿಗ್ರಹ ಬೀಗಮುದ್ರೆಯೊಂದಿಗೆ ಬಂಧಿಯಾಗಿತ್ತು. ಆ ಬೀಗಮುದ್ರೆ ಒಡೆಯುವ ವೇಳೆ ನಾನೂ ಪೇಜಾವರ ಶ್ರೀವಿಶ್ವೇಶತೀರ್ಥರ ಜೊತೆ ಹಾಜರಿದ್ದೆ. ಕಲ್ಲಿನಿಂದ ಬೀಗ ಒಡೆಯಲು ಜಜ್ಜುವಾಗ ತಪ್ಪಿ ಹೋಗುತ್ತಿತ್ತು. ಕೊನೆಗೆ ನಾನು ಕೈಯಲ್ಲಿ ಬೀಗ ಹಿಡಿದೆ. ಯಾರೋ ಭಕ್ತರು ಒಡೆದರು, ರಾಮ ದೇವರು ಬಂಧಮುಕ್ತರಾದರು. ಇದನ್ನು ಕಣ್ತುಂಬಿಕೊಂಡ ಕ್ಷಣ ಈಗಲೂ ಹಚ್ಚ ಹಸುರಾಗಿದೆ. ಆಗ ಮೊಳಗಿದ ರಾಮ ಘೋಷ ಮತ್ತೆಂದೂ ಕೇಳಿಲ್ಲ ಎಂದರು.

    ಅಯೋಧ್ಯೆಯಲ್ಲಿ ಮುಂದೆ ರಾಮನ ವಿಗ್ರಹ ಪ್ರತಿಷ್ಠಾಪನೆಯ ವೇಳೆಯಲ್ಲೂ ಪೇಜಾವರ ಶ್ರೀಗಳೊಂದಿಗೆ ಇದ್ದೆ. ಅನೇಕ ದಶಕಗಳಿಂದ ಭಾವನಾತ್ಮಕ ಹೋರಾಟ ಈಗ ಫಲಿಸುತ್ತಿದೆ. ಭವ್ಯವಾದ ರಾಮಮಂದಿರ ನಿರ್ಮಾಣವಾಗುತ್ತಿದೆ. ಪುತ್ತಿಗೆ ಮಠದಲ್ಲೂ ರಾಷ್ಟ್ರೀಯ ವಿಚಾರ ಸಂಕೀರಣ, ರಾಮಮಂದಿರ ಕುರಿತಾದ ಅನೇಕ ಸಭೆಗಳು ನಡೆದಿತ್ತು. ರಾಮಮಂದಿರ ನಿರ್ಮಾಣ ಅನೇಕ ಕಾಲದ ಆಕಾಂಕ್ಷೆ, ಸಂಕಲ್ಪ ಈಡೇರುತ್ತಿರುವುದು ಸಂತಸವಾಗುತ್ತಿದೆ. ಇಂತಹ ಸಂದರ್ಭದಲ್ಲಿ ನಾವು ಭಗವಂತನಿಗೆ ಕೃತಜ್ಞತೆಯನ್ನು ಸಲ್ಲಿಸಬೇಕು. ಭೂಮಿ ಪೂಜೆ ನಡೆಯುವಾಗ ರಾಮ ದೇವರ ವಿಶೇಷ ಅರ್ಚನೆ ಮಾಡುತ್ತೇವೆ. ಲಕ್ಷ ತುಳಸಿ ಅರ್ಚಿಸುವ ಮೂಲಕ ರಾಮನ ಪೂಜೆ ನಡೆಸ್ತೇವೆ ಎಂದು ಮಾಹಿತಿ ನೀಡಿದರು.

    ಅಳಿಲು ಕೂಡ ರಾಮಸೇತು ನಿರ್ಮಾಣದಲ್ಲಿ ಸೇವೆ ಸಲ್ಲಿಸಿದ್ದಂತೆ, ರಾಮ ಮಂದಿರ ನಿರ್ಮಾಣದಲ್ಲಿ ಪ್ರತಿಯೊಬ್ಬರು ಕೂಡ ತಮ್ಮ ಸೇವೆಯನ್ನು ಅರ್ಪಿಸಬೇಕು. ರಾಮಮಂದಿರ ಭಕ್ತರ ಭಕ್ತಿಯ ಪ್ರತೀಕವಾಗಿ ವಿರಾಜಮಾನವಾಗಲಿ ಎಂದು ಶ್ರೀ ಸುಗುಣೇಂದ್ರ ತೀರ್ಥರು ಹೇಳಿದರು.

  • ಕೆಎಂಸಿಯಲ್ಲಿ ಕೊರೊನಾ ಚಿಕಿತ್ಸೆ ನಡುವೆ ಪುತ್ತಿಗೆ ಶ್ರೀಗಳಿಂದ ಪ್ರತಿದಿನ ಪೂಜೆ

    ಕೆಎಂಸಿಯಲ್ಲಿ ಕೊರೊನಾ ಚಿಕಿತ್ಸೆ ನಡುವೆ ಪುತ್ತಿಗೆ ಶ್ರೀಗಳಿಂದ ಪ್ರತಿದಿನ ಪೂಜೆ

    ಉಡುಪಿ: ಪುತ್ತಿಗೆ ಸ್ವಾಮೀಜಿಗೆ ಕೊರೊನಾ ಸೋಂಕು ಹರಡಿದ್ದು, ಮಣಿಪಾಲ ಕೆಎಂಸಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚಿಕಿತ್ಸೆ ಪಡೆಯುತ್ತಿರುವ ಸ್ವಾಮೀಜಿ ವಿಶ್ರಾಂತಿಯ ಜೊತೆಗೆ ನಿರಂತರ ಪೂಜೆ ಪುನಸ್ಕಾರದಲ್ಲಿ ತೊಡಗಿದ್ದಾರೆ.

    ಅನುಷ್ಠಾನಗಳನ್ನು ಮಾಡುತ್ತಿದ್ದಾರೆ. ಆaಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗಲೂ ನಿತ್ಯ ಜಪ ಅನುಷ್ಠಾನಗಳಲ್ಲಿ ಪುತ್ತಿಗೆ ಶ್ರೀಗಳು ತೊಡಗಿಸಿಕೊಂಡಿರುವುದು ಗಮನಸೆಳೆದಿದೆ. ಉಡುಪಿ ಮಾತ್ರವಲ್ಲ ಅಮೆರಿಕ ಸೇರಿದಂತೆ ಹಲವಾರು ದೇಶಗಳಲ್ಲಿ ತಮ್ಮ ಶಾಖಾಮಠಗಳನ್ನು ಹೊಂದಿರುವ ಸ್ವಾಮೀಜಿ ಈ ಬಾರಿ ಉಡುಪಿಯಲ್ಲೇ ಚಾತುರ್ಮಾಸ್ಯ ವೃತ ಕೈಗೊಂಡಿದ್ದರು.

    ಚಾತುರ್ಮಾಸ್ಯಕ್ಕೆ ಸಂಕಲ್ಪ ಮಾಡಿದ್ದ ಸಮಯದಲ್ಲಿ ಜ್ವರ ಮತ್ತು ಶೀತದ ಲಕ್ಷಣಗಳು ಕಂಡು ಬಂದಿತ್ತು. ಈ ಹಿನ್ನೆಲೆಯಲ್ಲಿ ಪರೀಕ್ಷೆಗೆ ಒಳಗಾಗಿದ್ದು, ಪಾಸಿಟಿವ್ ಬಂದಿತ್ತು. ಬಳಿಕ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೀಗ ಚಿಕಿತ್ಸೆಯ ವೇಳೆ ಸ್ವಾಮೀಜಿ ಪೂಜೆ ಜಪ ಅನುಷ್ಠಾನಗಳಲ್ಲಿ ತೊಡಗಿರುವ ಫೋಟೋ ಭಕ್ತರಿಗೆ ಕೊಂಚ ನೆಮ್ಮದಿ ನೀಡಿದೆ. ಪಿಪಿಇ ಕಿಟ್ ಧರಿಸಿಕೊಂಡೇ ಶ್ರೀಗಳ ಶಿಷ್ಯವೃಂದ ಸ್ವಾಮೀಜಿಯ ಪೂಜೆಗೆ ಸಹಕರಿಸುತ್ತಿದ್ದಾರೆ. ಆರೈಕೆ ಮಾಡುವ ಸಂದರ್ಭ ಕೂಡ ಕಿಟ್ ತೊಟ್ಟಿರುವುದು ಫೋಟೋದಲ್ಲಿ ಕಾಣಿಸುತ್ತಿದೆ.

    ಶ್ರೀಗಳ ಆರೋಗ್ಯ ಚೆನ್ನಾಗಿದೆ. ಒಂದು ವಾರಗಳ ಕಾಲ ಅವರು ಆಸ್ಪತ್ರೆಯಲ್ಲಿ ಇರಬೇಕಾಗಬಹುದು. ರೋಗ ಲಕ್ಷಣ ವಾಸಿಯಾಗುತ್ತಿದೆ. ಭಕ್ತರು ಆತಂಕಪಡುವ ಅಗತ್ಯ ಇಲ್ಲ ಎಂದು ಕೆಎಂಸಿ ವೈದ್ಯರು ಹೇಳಿದ್ದಾರೆ. ಚಿಕಿತ್ಸೆ ನಡುವೆ ಅವರಷ್ಟಕ್ಕೆ ಪೂಜೆ ಪುನಸ್ಕಾರದಲ್ಲಿ ತೊಡಗಿಸಿಕೊಳ್ಳುತ್ತಾರೆ. ರೋಗದ ಬಗ್ಗೆಯೇ ಚಿಂತಿಸದೆ ಮಾನಸಿಕವಾಗಿ ನೆಮ್ಮದಿಯಿಂದ ಇರುವುದು ಕೂಡ ಅತೀ ಮುಖ್ಯ ಎಂದು ಚಿಕಿತ್ಸೆ ನೀಡುವ ವೈದ್ಯರು ಹೇಳಿದ್ದಾರೆ.

  • ಉಡುಪಿ ಪುತ್ತಿಗೆ ಶ್ರೀಗಳಿಗೆ ಕೊರೊನಾ- ಮಣಿಪಾಲ ಕೆಎಂಸಿಯಲ್ಲಿ ಚಿಕಿತ್ಸೆ

    ಉಡುಪಿ ಪುತ್ತಿಗೆ ಶ್ರೀಗಳಿಗೆ ಕೊರೊನಾ- ಮಣಿಪಾಲ ಕೆಎಂಸಿಯಲ್ಲಿ ಚಿಕಿತ್ಸೆ

    ಉಡುಪಿ: ಅಷ್ಟಮಠಗಳಲ್ಲಿ ಒಂದಾಗಿರುವ ಪುತ್ತಿಗೆ ಮಠಾಧೀಶರಿಗೆ ಕೊರೊನಾ ಪಾಸಿಟಿವ್ ಆವರಿಸಿದೆ. ಉಡುಪಿಯ ಪುತ್ತಿಗೆ ಮಠದಲ್ಲಿದ್ದ ಸುಗುಣೇಂದ್ರ ತೀರ್ಥ ಶ್ರೀಪಾದರಿಗೆ ಕೊರೊನಾದ ಲಕ್ಷಣ ಕಂಡು ಬಂದಿತ್ತು. ಈ ಹಿನ್ನೆಲೆಯಲ್ಲಿ ಅವರು ಮಣಿಪಾಲ ಕೆಎಂಸಿಗೆ ಭೇಟಿ ಕೊಟ್ಟಿದ್ದರು.

    ಈ ಸಂದರ್ಭ ಕೋವಿಡ್ 19 ಟೆಸ್ಟಿಂಗ್ ವೇಳೆ ಪಾಸಿಟಿವ್ ಇರುವುದು ಬೆಳಕಿಗೆ ಬಂದಿದೆ. ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಗೆ ಸುಗುಣೇಂದ್ರ ತೀರ್ಥ ಶ್ರೀಪಾದರನ್ನು ದಾಖಲಿಸಿಕೊಳ್ಳಲಾಗಿದೆ. ಅಲ್ಲೇ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪುತ್ತಿಗೆ ಮಠದ ಆಪ್ತರು ಮಾಹಿತಿ ಕೊಟ್ಟಿದ್ದಾರೆ. ಸದ್ಯ ಸುಗುಣೇಂದ್ರತೀರ್ಥ ಶ್ರೀಪಾದರಿಗೆ ರೋಗದ ಯಾವುದೇ ಲಕ್ಷಣಗಳು ಇಲ್ಲ ಸ್ವಾಮೀಜಿ ಸಂಪೂರ್ಣ ಆರೋಗ್ಯವಾಗಿದ್ದಾರೆ.

    ಸರ್ಕಾರದ ನಿಯಮದ ಪ್ರಕಾರ ಆಸ್ಪತ್ರೆಯಲ್ಲಿ ಉಳಿದುಕೊಳ್ಳಬೇಕಾಗುತ್ತದೆ ಎಂದರು. ಉಡುಪಿ ಮೂಲ ಮಠದಲ್ಲಿದ್ದ ಸುಗುಣೇಂದ್ರ ತೀರ್ಥ ಶ್ರೀಪಾದರು ಚಾತುರ್ಮಾಸ್ಯ ವ್ರತಾಚರಣೆಗೆ ಸಿದ್ಧತೆಗಳನ್ನು ನಡೆಸಿದ್ದರು. ಮಠದಲ್ಲಿ ನಡೆಯುವ ದೈನಂದಿನ ಓಡಾಟ, ಧಾರ್ಮಿಕ ಚಟುವಟಿಕೆ, ಪೂಜೆ ಪುನಸ್ಕಾರದ ಸಂದರ್ಭ ಶ್ರೀಗಳಿಗೆ ಕೊರೊನಾ ಆವರಿಸಿರಬಹುದು ಎನ್ನಲಾಗಿದೆ.

    ಸ್ವಾಮೀಜಿಯ ಜೊತೆಗಿದ್ದವರನ್ನು, ಆಪ್ತರನ್ನು ಕ್ವಾರಂಟೈನ್ ಮಾಡಲು ಉಡುಪಿ ಜಿಲ್ಲಾ ವೈದ್ಯಾಧಿಕಾರಿಗಳು ಸೂಚನೆ ನೀಡಿದ್ದಾರೆ.