Tag: puttakkana makkalu

  • `ಪುಟ್ಟಕ್ಕ’ ಉಮಾಶ್ರೀ ಹೋರಾಟಕ್ಕೆ ನಟ ರವಿಚಂದ್ರನ್ ಸಾಥ್

    `ಪುಟ್ಟಕ್ಕ’ ಉಮಾಶ್ರೀ ಹೋರಾಟಕ್ಕೆ ನಟ ರವಿಚಂದ್ರನ್ ಸಾಥ್

    ಜೀ಼ ಕನ್ನಡ ವಾಹಿನಿಯಲ್ಲಿ ಸಂಜೆ 6-30 ಕ್ಕೆ ಪ್ರಸಾರವಾಗುವ ಅತ್ಯಂತ ಯಶಸ್ವಿ ಧಾರಾವಾಹಿ ‘ಪುಟ್ಟಕ್ಕನ ಮಕ್ಕಳು’ (Puttakkana Makkalu). ಪ್ರಸಾರದ ಮೊದಲ ವಾರದಲ್ಲಿ ಅತೀ ಹೆಚ್ಚು ಕನ್ನಡಿಗರ ಮನಸುಗಳನ್ನ ಗೆದ್ದ ಖ್ಯಾತಿ ಈ ಧಾರಾವಾಹಿಯದು. ಇದೀಗ 900 ಸಂಚಿಕೆಗಳನ್ನು ಪೂರೈಸಿ ಸಾವಿರ ಸಂಚಿಕೆಗಳತ್ತ ಹೆಜ್ಜೆ ಇಡುತ್ತಿದ್ದರೂ ತನ್ನ ಜನಪ್ರಿಯತೆಯನ್ನು ಕಳೆದುಕೊಳ್ಳದೆ ಮುನ್ನುಗ್ಗುತ್ತಿದೆ. ಈ ಸಮಯದಲ್ಲಿ ನಟ ರವಿಚಂದ್ರನ್ ಧಾರಾವಾಹಿಗೆ ಎಂಟ್ರಿ ಕೊಟ್ಟು ಕುತೂಹಲ ಮೂಡಿಸಿದ್ದಾರೆ.

    ‘ಹೆಣ್ಣು ಮಕ್ಕಳ ಹೆತ್ತೋರು ಎಲ್ಲ ದೇವರಿಗು ದೊಡ್ಡೋರು’ ಅನ್ನುವ ಈ ಧಾರಾವಾಹಿಯ ಹಾಡಿನ ಸಾಲು ಪುಟ್ಟಕ್ಕನ ಕತೆಯ ಸಾರವನ್ನು ತೋರಿಸುತ್ತದೆ. ಗಂಡು ಮಗು ಆಗಿಲ್ಲ ಅನ್ನುವ ಕಾರಣಕ್ಕೆ ಗಂಡ ಗೋಪಾಲ ಪುಟ್ಟಕ್ಕನನ್ನು ಬಿಟ್ಟು ಹೋಗುತ್ತಾನೆ. ತಂದೆ ಇಲ್ಲದೆ ತಬ್ಬಲಿಯಾದ ಮೂರು ಹೆಣ್ಣು ಮಕ್ಕಳನ್ನು ಹೆಗಲಿಗೆ ಕಟ್ಟಿಕೊಂಡು, ಅವರಿಗೆ ಬದುಕಿನ ದಾರಿ ತೋರಿಸಲು ಹೋರಾಡುವ ದಿಟ್ಟ ಮಹಿಳೆಯ ಕಥೆಯೇ ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ.

    ಧಾರಾವಾಹಿಯ ಮುಖ್ಯ ಪಾತ್ರವಾದ ‘ಪುಟ್ಟಕ್ಕ’ನ ಪಾತ್ರವನ್ನು ಕನ್ನಡದ ಖ್ಯಾತ ನಟಿ ಉಮಾಶ್ರೀ (Umashree) ಮಾಡುತ್ತಿದ್ದಾರೆ. ಪುಟ್ಟಕ್ಕನಿಗೆ ಜೊತೆಯಾಗಿ ನಿಂತವರು ಮಗಳು ಸಹನಾ, ಸ್ನೇಹಾ, ಸುಮಾ. ಗೆಳತಿ ಬಂಗಾರಮ್ಮ. ಅಳಿಯ ಕಂಠಿ ಮತ್ತಿತರ ಪಾತ್ರ. ಇದೀಗ ಈ ಧಾರಾವಾಹಿ ಮಹತ್ತರ ಘಟ್ಟದಲ್ಲಿ ಬಂದು ನಿಂತಿದೆ. ತನ್ನ ಆಸೆ, ಕನಸಿನಂತೆ ಜಿಲ್ಲಾಧಿಕಾರಿ ಆಗಿದ್ದ ಸ್ನೇಹಾ, ರಸ್ತೆ ಅಪಘಾತದಲ್ಲಿ ತೀರಿಕೊಂಡಿದ್ದಳು. ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿ ಆಗಿದ್ದ ಅವಳ ಮೇಲೆ ನಿಧನದ ಬಳಿಕವೂ ಅವ್ಯವಹಾರದ ಆರೋಪ ಬಂದಿದ್ದು, ಮಗಳ ಪರವಾಗಿ ಪುಟ್ಟಕ್ಕ ಹೋರಾಟಕ್ಕೆ ಮುಂದಾಗಿದ್ದಾಳೆ.

    ಮಗಳು ಸ್ನೇಹಾ ಮೇಲಿನ ಸುಳ್ಳು ಆರೋಪಕ್ಕೆ ಪ್ರತಿಯಾಗಿ ಪಾದಯಾತ್ರೆ ಮಾಡುತ್ತಿದ್ದು, ನ್ಯಾಯಕ್ಕಾಗಿ ಹಂಬಲಿಸುತ್ತಿದ್ದಾಳೆ. ಮಗಳಿಗೆ ಅಂಟಿದ ಕಳಂಕ ತೊಳೆಯುವ ಈ ಕಾರ್ಯಕ್ಕೆ ಯಾರಿಂದಲೂ ನಿರೀಕ್ಷಿತ ಬೆಂಬಲ ಸಿಕ್ಕಿಲ್ಲ. ಹೀಗೆ ಬೇಸತ್ತಿರುವ ಪುಟ್ಟಕ್ಕನಿಗೆ ಸಾಥ್ ಕೊಡಲು ‘ಕ್ರೇಜಿ ಸ್ಟಾರ್ ರವಿಚಂದ್ರನ್’ ಮುಂದಾಗಿದ್ದಾರೆ. ಜಸ್ಟಿಸ್ ಫಾರ್ ಸ್ನೇಹಾ ಹೋರಾಟಕ್ಕೆ ಪುಟ್ನಂಜ ಕೈ ಜೋಡಿಸಿದ್ದಾರೆ.

    ಪುಟ್ನಂಜ ಸಿನಿಮಾದಲ್ಲಿ ಮೊಡಿ ಮಾಡಿದ್ದ ಉಮಾಶ್ರೀ ಮತ್ತು ರವಿಚಂದ್ರನ್ (Ravichandran), ಇದೀಗ ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ ಮೂಲಕ ಕಿರುತೆರೆಯಲ್ಲಿ ಒಂದಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ರವಿಚಂದ್ರನ್ ಅವರಿಂದ ಪುಟ್ಟಕ್ಕನ ಹೋರಾಟಕ್ಕೆ ನ್ಯಾಯ ಸಿಗುತ್ತಾ? ಮಗಳಿಗೆ ಅಂಟಿದ ಕಳಂಕ ಹೋಗುತ್ತಾ?  ಅನ್ನೋದನ್ನು ನೋಡಲು ಪ್ರೇಕ್ಷಕರು ಕಾಯುತ್ತಿದ್ದಾರೆ.

  • ‘ಪುಟ್ಟಕ್ಕನ ಮಕ್ಕಳು’ ಸ್ನೇಹಾ ಪಾತ್ರ ಅಂತ್ಯ- ಫ್ಯಾನ್ಸ್‌ಗೆ ಸಂದೇಶ ನೀಡಿದ ಸಂಜನಾ

    ‘ಪುಟ್ಟಕ್ಕನ ಮಕ್ಕಳು’ ಸ್ನೇಹಾ ಪಾತ್ರ ಅಂತ್ಯ- ಫ್ಯಾನ್ಸ್‌ಗೆ ಸಂದೇಶ ನೀಡಿದ ಸಂಜನಾ

    ಕಿರುತೆರೆಯ ಜನಪ್ರಿಯ ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ (Puttakkana Makkalu) ಸ್ನೇಹಾ (Sneha) ಪಾತ್ರ ಅಂತ್ಯವಾಗಿದೆ. ಸ್ನೇಹಾ ಪಾತ್ರದಲ್ಲಿ ಸಂಜನಾ ಬುರ್ಲಿ (Sanjana Burli) ಸೀರಿಯಲ್‌ಗೆ ಅಧಿಕೃತವಾಗಿ ಗುಡ್ ಬೈ ಹೇಳಿದ್ದಾರೆ. ಸ್ನೇಹಾ ಪಾತ್ರದ ಸಾವಿನ ದೃಶ್ಯ ನೋಡಿ ಪ್ರೇಕ್ಷಕರು ಕಣ್ಣೀರಿಟ್ಟಿದ್ದಾರೆ. ತಮ್ಮ ಪಾತ್ರ ಅಂತ್ಯವಾದ ಬೆನ್ನಲ್ಲೇ ಅಭಿಮಾನಿಗಳಿಗೆ ಸೋಶಿಯಲ್ ಮೀಡಿಯಾದಲ್ಲಿ ಸಂದೇಶವೊಂದನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಸ್ವೀಟಿ ಫ್ಯಾನ್ಸ್‌ಗೆ ಬಿಗ್ ಅಪ್‌ಡೇಟ್- 2 ಸಿನಿಮಾಗಳ ಶೂಟಿಂಗ್ ಮುಗಿಸಿದ ನಟಿ

    ನಮಸ್ತೆ ಪ್ರಿಯರೇ, ಎಲ್ಲಾ ಫ್ಯಾನ್ಸ್ಗೆ ನಾನು ಒಂದು ಸುದ್ದಿಯನ್ನು ಹಂಚಿಕೊಳ್ಳಲು ಇಷ್ಟಪಡುತ್ತೇನೆ. ಪ್ರತಿಯೊಂದು ದೊಡ್ಡ ವಿಷಯವೂ ಕೊನೆಗೊಳ್ಳುತ್ತದೆ. ಅದರಂತೆ ಈ ಮಹತ್ವದ ಪಾತ್ರದೊಂದಿಗೆ ನನ್ನ ಪ್ರಯಾಣವೂ ಕೊನೆಗೊಂಡಿದೆ. ‘ಪುಟ್ಟಕ್ಕನ ಮಕ್ಕಳು’ ಸೀರಿಯಲ್‌ನ ಸ್ನೇಹಾ ಪಾತ್ರವು ಕೊನೆಯಾಗುತ್ತಿದೆ. ಕಳೆದ 3 ವರ್ಷಗಳಿಂದ ಸ್ನೇಹಾ ಪಾತ್ರವನ್ನು ನಿರ್ವಹಿಸುವುದು ನನ್ನ ನಟನಾ ವೃತ್ತಿಜೀವನದ ಅವಿಭಾಜ್ಯ ಅಂಗವಾಗಿತ್ತು. ಈ ಸಮಯ ಎಷ್ಟು ವೇಗವಾಗಿ ಮುಗಿಯಿತು ಅನ್ನೋದೇ ಗೊತ್ತಾಗಲಿಲ್ಲ. ಈ ಸೀರಿಯಲ್‌ನಲ್ಲಿ ನಾನು ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದೆ. ಅದಕ್ಕಾಗಿ ನಾನು ಯಾವಾಗಲೂ ಕೃತಜ್ಞರಾಗಿರುತ್ತೇನೆ. ನನಗೆ ಈ ಉತ್ತಮ ಪಾತ್ರವನ್ನು ನೀಡಿದ್ದಕ್ಕಾಗಿ ಮತ್ತು ನನ್ನನ್ನು ಸ್ನೇಹಾ ಆಗಿ ಆಯ್ಕೆ ಮಾಡಿದ್ದಕ್ಕಾಗಿ ವಾಹಿನಿ ಮತ್ತು ಇಡೀ ತಂಡಕ್ಕೆ ಧನ್ಯವಾದಗಳನ್ನು ಹೇಳುತ್ತೇನೆ.

    ಆದರೆ ಈಗ ನಾನು ಮುಂದುವರಿಯುವ ಸಮಯ ಬಂದಿದೆ. ಕೆಲವು ಅನಿವಾರ್ಯ ಸಂದರ್ಭಗಳು ಮತ್ತು ನನ್ನ ವೈಯಕ್ತಿಕ ಕಾರಣಗಳಿಂದಾಗಿ ನಾನು ಭಾರವಾದ ಹೃದಯದಿಂದ ಈ ಸೀರಿಯಲ್ ಅನ್ನು ತೊರೆಯುವ ಸ್ಥಿತಿ ನಿರ್ಮಾಣವಾಯಿತು. ನನ್ನ ಜೀವನದಲ್ಲಿ ಈ ಸಮಯದಲ್ಲಿ ಸಾಧಿಸಲು ನನಗೆ ಇತರ ಸವಾಲುಗಳಿವೆ. ಈ ಪ್ರಾಜೆಕ್ಟ್ನಲ್ಲಿನ ಈ ಪಾತ್ರಕ್ಕಾಗಿ ನಾನು ನಟಿನಾಗಿ ಪಡೆದ ಅಪಾರ ಪ್ರೀತಿ ಮತ್ತು ಮನ್ನಣೆಯು ನನ್ನ ದೊಡ್ಡ ಪ್ರಶಸ್ತಿ. ಅದು ನನ್ನೊಂದಿಗೆ ಶಾಶ್ವತವಾಗಿ ಉಳಿಯುತ್ತದೆ. ನಿಮ್ಮಲ್ಲಿ ಹೆಚ್ಚಿನವರು ಪಾತ್ರವು ಸಾಯುವುದನ್ನು ನೋಡಿ ದುಃಖಿತರಾಗಿದ್ದೀರಿ ಎಂದು ನನಗೆ ತಿಳಿದಿದೆ. ಆದರೆ, ನಾಯಕಿಯಾಗಿ ನಾನು ನಟಿಸಿದ್ದ ಪಾತ್ರವನ್ನು ಯಾರು ಬದಲಿಸಲು ಸಾಧ್ಯವಿಲ್ಲ ಎಂದು ಭಾವಿಸುತ್ತೇನೆ. ಅದನ್ನು ನಾವು ಪಾಸಿಟಿವ್ ಆಗಿ ತೆಗೆದುಕೊಳ್ಳೋಣ ಎಂದಿದ್ದಾರೆ ಸಂಜನಾ.

    ಸ್ವಲ್ಪ ಸಮಯದ ನಂತರ ವಿಭಿನ್ನ ಪಾತ್ರಗಳಲ್ಲಿ ನನ್ನ ಅಭಿಮಾನಿಗಳನ್ನು ಭೇಟಿಯಾಗಲು ಆಶಿಸುತ್ತಿದ್ದೇನೆ, ಆದರೆ, ಸದ್ಯದ ಮಟ್ಟಿಗೆ ನನ್ನ ಪಾತ್ರ ಅಂತ್ಯವಾಗಿದೆ. ಕಳೆದ 3 ವರ್ಷಗಳಲ್ಲಿ ಇಡೀ ಕರ್ನಾಟಕ ನನ್ನ ಮೇಲೆ ನೀಡಿದ ಪ್ರೀತಿ ಮತ್ತು ಬೆಂಬಲಕ್ಕೆ ಧನ್ಯವಾದಗಳು. ನನ್ನ ವೈಯಕ್ತಿಕ ಮತ್ತು ವೃತ್ತಿಪರ ಪ್ರಗತಿಗೆ ಸಂಬಂಧಿಸಿದಂತೆ ಹೆಚ್ಚಿನ ಅಪ್‌ಡೇಟ್‌ಗಳಿಗಾಗಿ ನನ್ನ ಸೋಶಿಯಲ್ ಮೀಡಿಯಾ ಫ್ಲಾಟ್‌ಫಾರ್ಮ್ ಅನ್ನು ನೋಡ್ತಾ ಇರಿ. ಈಗ ಪಾಸಿಟಿವ್ ನೋಟ್‌ನೊಂದಿಗೆ ಮುಂದುವರಿಯೋಣ. ಏನಾಗಲಿ ಮುಂದೆ ಸಾಗು ನೀ.. ಮತ್ತೊಮ್ಮೆ ತೆರೆ ಮೇಲೆ ಭೇಟಿ ಆಗೋಣ ಬೇರೆ ವಿಭಿನ್ನ ಪಾತ್ರ ಜೊತೆಗೆ, ಶೀಘ್ರದಲ್ಲಿ ನನ್ನ ಅಭಿಮಾನಿಗಳೇ ನನ್ನ ಸ್ಪೂರ್ತಿ, ಶಕ್ತಿ. ಚಿಯರ್ಸ್ ಸಂಜನಾ ಬುರ್ಲಿ ಎಂದು ಅವರು ಬರೆದುಕೊಂಡಿದ್ದಾರೆ.

    ಇನ್ನೂ ಕಳೆದ ಮೂರು ವರ್ಷಗಳಿಂದ ಸಂಜನಾ ಬುರ್ಲಿ ಅವರು ಸ್ನೇಹಾ ಪಾತ್ರಕ್ಕೆ ಜೀವ ತುಂಬಿದ್ದರು. ಹಿರಿಯ ನಟಿ ಉಮಾಶ್ರೀ (Umashree) ಮಗಳಾಗಿ, ಕಂಠಿ ಪತ್ನಿಯ ಪಾತ್ರದಲ್ಲಿ ಉತ್ತಮವಾಗಿ ನಟಿಸಿದ್ದರು. ಈಗ ಅವರ ಪಾತ್ರ ಅಂತ್ಯವಾಗಿರೋದು ಸಹಜವಾಗಿ ಪ್ರೇಕ್ಷಕರಿಗೆ ಬೇಸರವುಂಟು ಮಾಡಿದೆ.