Tag: Pushpagiri

  • ಕುಮಾರಪರ್ವತದಲ್ಲಿ ನಾಪತ್ತೆ – ತೀರ್ಥದ ಪೈಪ್‍ನಿಂದಾಗಿ ಕುಕ್ಕೆ ಸೇರಿದ ಬೆಂಗ್ಳೂರು ಯುವಕ

    ಕುಮಾರಪರ್ವತದಲ್ಲಿ ನಾಪತ್ತೆ – ತೀರ್ಥದ ಪೈಪ್‍ನಿಂದಾಗಿ ಕುಕ್ಕೆ ಸೇರಿದ ಬೆಂಗ್ಳೂರು ಯುವಕ

    ಮಡಿಕೇರಿ: ಟ್ರೆಕ್ಕಿಂಗ್‍ಗೆ ಬಂದ 12 ಯುವಕರ ತಂಡದಲ್ಲಿ ನಾಪತ್ತೆಯಾಗಿದ್ದ ಬೆಂಗಳೂರಿನ ಗಾಯತ್ರಿ ನಗರದ ಯುವಕ ಸುರಕ್ಷಿತವಾಗಿ ಪತ್ತೆಯಾಗಿದ್ದಾರೆ.

    ಕೊಡಗು ಜಿಲ್ಲೆಯ ಪುಷ್ಪಗಿರಿ ಬೆಟ್ಟದಲ್ಲಿ ದಾರಿ ತಪ್ಪಿರುವ 25 ವರ್ಷದ ಸಂತೋಷ್ ಇಂದು ಮಧ್ಯಾಹ್ನ 12.30ರ ಸುಮಾರಿಗೆ ದಕ್ಷಿಣ ಕನ್ನಡ ಜಿಲ್ಲೆಯ ಆದಿ ಸುಬ್ರಹ್ಮಣ್ಯದ ಬಳಿಯಿಂದಾಗಿ ಕುಕ್ಕೆ ಸುಬ್ರಹ್ಮಣ್ಯ ತಲುಪಿದ್ದಾರೆ.

    ಕುಕ್ಕೆ ಸೇರಿದ್ದು ಹೇಗೆ?
    ಕುಮಾರಪರ್ವತ ಬಳಿಯ ಗುಡ್ಡದಿಂದ ದೇವಾಲಯಕ್ಕೆ ತೀರ್ಥದ ಉದ್ದೇಶದಿಂದ ಪೈಪ್ ಲೈನ್ ಅಳವಡಿಸಲಾಗಿತ್ತು. ಈ ಪೈಪ್ ಅನ್ನು ದಾರಿ ಸೂಚಕವಾಗಿ ಬಳಸಿ ಮತ್ತೆ ಸುಬ್ರಹ್ಮಣ್ಯ ತಲುಪಿದೆ ಎಂದು ಸಂತೋಷ್ ತಿಳಿಸಿದ್ದಾರೆ. ಸಂತೋಷ್ ವಾಪಸ್ ಬಂದ ಕೂಡಲೇ ಸ್ಥಳೀಯರು ಅವರಿಗೆ ನೀರು, ಹಣ್ಣು ನೀಡಿ ಉಪಚರಿಸಿದ್ದಾರೆ.

    ನಾಪತ್ತೆಯಾಗಿದ್ದು ಹೇಗೆ?
    ಬೆಂಗಳೂರಿನಿಂದ 12 ಮಂದಿ ಯುವಕರ ತಂಡವೊಂದು ಭಾನುವಾರ ಬೆಳಗ್ಗೆ 7 ಗಂಟೆ ಸುಮಾರಿಗೆ ಕುಕ್ಕೆ ಸುಬ್ರಹ್ಮಣ್ಯಕ್ಕೆ ಬಂದಿದೆ. ಹೀಗೆ ಬಂದ ತಂಡ ಸುಬ್ರಮಣ್ಯದ ಗಿರಿಗದ್ದೆಯಿಂದ ಕುಮಾರಪರ್ವತದ ಮೂಲಕ ಸೋಮವಾರಪೇಟೆ ತಾಲೂಕಿನ ಪುಷ್ಪಗಿರಿ ಬೆಟ್ಟಕ್ಕೆ ತೆರಳಿತ್ತು. ಬೆಳಗ್ಗೆ 11 ಗಂಟೆ ಸುಮಾರಿಗೆ ಶೇಷ ಪರ್ವತಕ್ಕೆ ತಲುಪಿದ 12 ಮಂದಿ ಯುವಕರು ಅಲ್ಲಿಂದ ಹಿಂದಿರುಗಿ ಗಿರಿಗದ್ದೆಗೆ ಬಂದಿದ್ದಾರೆ. ಅಲ್ಲಿ ಮಧ್ಯಾಹ್ನದ ಊಟ ಮುಗಿಸಿ ಸುಬ್ರಹ್ಮಣ್ಯ ಕಡೆ ಪ್ರಯಾಣಿಸಿದ್ದಾರೆ. ಈ ವೇಳೆ 12 ಮಂದಿಯ ತಂಡ 6 ಮಂದಿಯಂತೆ 2 ವಿಭಾಗಗಳಾಗಿದೆ. ಇದರಲ್ಲಿ 6 ಜನರ ತಂಡ ಮೊದಲು ಆಗಮಿಸಿತ್ತು. ಸ್ವಲ್ಪ ಸಮಯದ ಬಳಿಕ ಗಿರಿಗದ್ದೆ ಮನೆಯಿಂದ ಉಳಿದ 6 ಜನರ ತಂಡ ಸುಬ್ರಹಣ್ಯಕ್ಕೆ ಬರುತ್ತಿದ್ದ ಸಂದರ್ಭದಲ್ಲಿ ಜೋರಾಗಿ ಮಳೆ ಸುರಿಯಲಾರಂಭಿಸಿದೆ. ಈ ವೇಳೆ ಸಂತೋಷ್ ತನ್ನ ಜಾಕೆಟ್ ತೆಗೆದು ರೈನ್ ಕೋಟ್ ಹಾಕಿಕೊಂಡಿದ್ದಾರೆ. ಅಲ್ಲಿಯವರೆಗೆ ಸ್ನೇಹಿತರ ಜೊತೆಗಿದ್ದ ಸಂತೋಷ್ ಆ ಬಳಿಕದಿಂದ ಕಾಣೆಯಾಗಿದ್ದರು.

    ತಮ್ಮ ತಂಡದಲ್ಲಿ ಸಂತೋಷ್ ಇಲ್ಲದಿರುವುದನ್ನು ಗಮನಿಸಿದ ಇತರ ಸ್ನೇಹಿತರು ಕೂಡಲೇ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇತ್ತ ಈ ಕುರಿತು ಮಾಹಿತಿ ಪಡೆದ ಪುಷ್ಪಗಿರಿ ವನ್ಯಜೀವಿ ವಿಭಾಗದ ಸಿಬ್ಬಂದಿ ಭಾನುವಾರ ಸಂಜೆಯಿಂದ ತೀವ್ರ ಶೋಧಕಾರ್ಯ ನಡೆಸಿದ್ದರು.

  • ಗಮನಿಸಿ, ಪುಷ್ಪಗಿರಿ, ಬ್ರಹ್ಮಗಿರಿಯಲ್ಲಿ ಚಾರಣಕ್ಕೆ ಬ್ರೇಕ್!

    ಗಮನಿಸಿ, ಪುಷ್ಪಗಿರಿ, ಬ್ರಹ್ಮಗಿರಿಯಲ್ಲಿ ಚಾರಣಕ್ಕೆ ಬ್ರೇಕ್!

    ಮಡಿಕೇರಿ: ದೂರದ ಊರಿನಿಂದ ಕೊಡಗಿಗೆ ಆಗಮಿಸುತ್ತಿದ್ದ ಟ್ರೆಕ್ಕಿಂಗ್ ಪ್ರಿಯರಿಗೆ ಚಾರಣವನ್ನು ನಿಷೇಧ ಮಾಡುವ ಮೂಲಕ ಅರಣ್ಯ ಇಲಾಖೆ ಶಾಕ್ ನೀಡಿದೆ.

    ಪ್ರತಿ ವರ್ಷ ಇಲ್ಲಿನ ಬ್ರಹ್ಮಗಿರಿ ಹಾಗೂ ಪುಷ್ಪಗಿರಿ ಬೆಟ್ಟಗಳನ್ನು ಏರುವುದಕ್ಕೆ ಸಾವಿರಾರು ಸಂಖ್ಯೆಯಲ್ಲಿ ರಾಜ್ಯ, ಹೊರ ರಾಜ್ಯ, ವಿದೇಶದಿಂದಲೂ ಚಾರಣ ಪ್ರಿಯರು ಆಗಮಿಸುತ್ತಾರೆ. ಆದರೆ ಸದ್ಯಕ್ಕೆ ಪುಷ್ಪಗಿರಿ, ಬ್ರಹ್ಮಗಿರಿ ಬೆಟ್ಟಗಳಲ್ಲಿ ಚಾರಣಕ್ಕೆ ಬ್ರೇಕ್ ಹಾಕಿ, ಯಾರು ಅರಣ್ಯ ಪ್ರವೇಶ ಮಾಡಬಾರದು ಎಂದು ಅರಣ್ಯ ಇಲಾಖೆ ಆದೇಶ ಹೊರಡಿಸಿದೆ.

    ಟ್ರೆಕ್ಕಿಂಗ್ ಬ್ಯಾನ್ ಮಾಡುವುದಕ್ಕೆ ಮುಖ್ಯವಾದ ಕಾರಣ ಕಾಡ್ಗಿಚ್ಚು. ಬೇಸಿಗೆ ಸಮಯದಲ್ಲಿ ಅಮೂಲ್ಯವಾದ ಸಸ್ಯ ಸಂಪತ್ತು ಕಾಡ್ಗಿಚ್ಚಿಗೆ ಬಲಿಯಾಗುತ್ತಿದೆ. ಅಲ್ಲದೇ ಕಾಡು ಪ್ರಾಣಿಗಳು ಕೂಡ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಸಾವನ್ನಪ್ಪಿದ್ದ ಅದೆಷ್ಟೋ ಉದಾಹರಣೆಗಳು ಕಣ್ಣ ಮುಂದಿದೆ. ಈ ಕಾಡ್ಗಿಚ್ಚು ಅರಣ್ಯಕ್ಕೆ ಮಾನವನ ಪ್ರವೇಶದಿಂದಲೇ ಆಗುತ್ತಿರುವುದರಿಂದ ಚಾರಣಿಗರನ್ನೇ ಅರಣ್ಯ ಪ್ರವೇಶದಂತೆ ನಿಷೇಧ ಮಾಡಲಾಗಿದೆ. ಇದನ್ನೂ ಓದಿ: ಚಾರಣದಲ್ಲೇ ಲವ್ವಾಗಿ ಮದ್ವೆಯಾದ್ರು- ಅರಣ್ಯಪ್ರದೇಶದ ಅಗ್ನಿ ಅವಘಡಕ್ಕೆ ಪತಿ ಬಲಿ

    ಇಲಾಖೆಯ ಈ ನಿರ್ಧಾರಕ್ಕೆ ಚಾರಣಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ನಾವು ಕೂಡ ಪ್ರಕೃತಿಯ ಮೇಲೆ ಪ್ರೀತಿ ಇರುವುದರಿಂದ ಟ್ರೆಕ್ಕಿಂಗ್ ಮಾಡ್ತೀವಿ, ನಮಗೂ ಕಾಡ್ಗಿಚ್ಚಿನ ಬಗ್ಗೆ ಅರಿವಿದೆ. ನಿಷೇಧ ಹೇರುವುದು ಯಾವ ನ್ಯಾಯ ಎಂದು ಪ್ರಶ್ನಿಸಿದ್ದಾರೆ.

    ಮಳೆಗಾಲದಲ್ಲಿ ಟ್ರೆಕ್ಕಿಂಗ್ ಮಾಡುವುದ್ದಕ್ಕೆ ಆಗಲ್ಲ, ಬೇಸಿಗೆಯಲ್ಲಾದರೂ ಕಾಡಿನೊಳಗೆ ಪಯಣಿಸಿ ಪ್ರಕೃತಿಯ ಸೌಂದರ್ಯ ಸವಿಯೋಣ ಎಂದುಕೊಂಡರೆ ಅದಕ್ಕೂ ಬ್ರೇಕಾ ಎಂದು ಚಾರಣಿಗರು ಬೇಸರ ವ್ಯಕ್ತಪಡಿಸಿದ್ದಾರೆ. ಆದರೆ ಅರಣ್ಯ ಇಲಾಖೆಯವರು ಇದ್ಯಾವುದಕ್ಕೆ ತಲೆಕೆಡಿಸಿಕೊಳ್ಳದೇ ಬ್ರಹ್ಮಗಿರಿ ಹಾಗೂ ಪುಷ್ಟಗಿರಿ ಬೆಟ್ಟವನ್ನು ಏರದಂತೆ ಬ್ರೇಕ್ ಹಾಕಿದ್ದಾರೆ.

    ಅತಿಕ್ರಮಣ ಪ್ರವೇಶ ಮಾಡಿದರೆ ಶಿಕ್ಷೆ ಕಟ್ಟಿಟ್ಟ ಬುತ್ತಿ ಎಂದು ಖಡಕ್ ವಾರ್ನಿಂಗ್ ಕೂಡ ನೀಡಿದೆ. ಶೀತ ಆಗುತ್ತೆ ಅಂತಾ ಮೂಗನ್ನ ಕಟ್ ಮಾಡೋಕೆ ಆಗುತ್ತಾ? ಹಾಗೆಯೇ ಕಾಡ್ಗಿಚ್ಚು ಯಾರೋ ಕಿಡಿಗೇಡಿಗಳು ಹಬ್ಬಿಸ್ತಾರೆ ಎಂದು ನಮ್ಮನ್ನು ಅರಣ್ಯ ಪ್ರವೇಶ ಮಾಡದಂತೆ ತಡೆಯೋದು ಎಷ್ಟು ಸರಿ ಅನ್ನೋದು ಚಾರಣಿಗರ ವಾದ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv