Tag: Purse

  • ಮಾನವೀಯತೆ ಮೆರೆದ ಪೊಲೀಸರು – ಕಳ್ಕೊಂಡಿದ್ದ 30,000 ಹಣ, ಎಟಿಎಂ ಕಾರ್ಡ್ ಯುವಕನಿಗೆ ವಾಪಸ್

    ಮಾನವೀಯತೆ ಮೆರೆದ ಪೊಲೀಸರು – ಕಳ್ಕೊಂಡಿದ್ದ 30,000 ಹಣ, ಎಟಿಎಂ ಕಾರ್ಡ್ ಯುವಕನಿಗೆ ವಾಪಸ್

    ಬೆಂಗಳೂರು: ದಾರಿಯಲ್ಲಿ ಕಳೆದುಕೊಂಡಿದ್ದ ಎಟಿಎಂ ಕಾರ್ಡ್ ಮತ್ತು ಹಣವನ್ನು ಯುವಕನಿಗೆ ಹಿಂದಿರುಗಿಸುವ ಮೂಲಕ ಪೊಲೀಸರು ಮಾನವೀಯತೆ ಮೆರೆದಿರುವ ಘಟನೆ ಡಾಬಸ್ ಪೇಟೆ ಪೊಲೀಸ್ ಠಾಣೆಯಲ್ಲಿ ನಡೆದಿದೆ.

    ತುಮಕೂರಿನ ಕೋಡಿಹಳ್ಳಿ ನಿವಾಸಿ ರಾಕೇಶ್ ಪರ್ಸ್ ಕಳೆದುಕೊಂಡಿದ್ದ. ಈತನ ಪರ್ಸ್ ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಮಾಚನಹಳ್ಳಿ ಕಾಲೋನಿಯ ಬಳಿ ಸಿಕ್ಕಿತ್ತು. ಈ ಪರ್ಸ್‌ನಲ್ಲಿ ಎಟಿಎಂ ಕಾರ್ಡ್, ಡಿಎಲ್ ಮತ್ತು 30 ಸಾವಿರ ಹಣ ಇತ್ತು. ಇದನ್ನ ನೋಡಿದ ಡಾಬಸ್ ಪೇಟೆ ಪೊಲೀಸರು ಯುವಕನನ್ನ ಪತ್ತೆ ಮಾಡಿ ಮತ್ತೆ ಆತನಿಗೆ ಹಿಂದುರುಗಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

    ಡಾಬಸ್ ಪೇಟೆ ಪಿಎಸ್‍ಐ ಮಂಜುನಾಥ್ ಡಿ.ಆರ್. ನೇತೃತ್ವದಲ್ಲಿ ಹಣ ವಾಪಸ್ ಮಾಡಲಾಗಿದೆ. ತಮ್ಮ ವಸ್ತುಗಳು ಮತ್ತೆ ಸಿಕ್ಕಿದ್ದಕ್ಕೆ ರಾಕೇಶ್ ಪೊಲೀಸರ ಕಾರ್ಯಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. ಅಲ್ಲದೇ ಪೊಲೀಸರ ಕಾರ್ಯಕ್ಕೆ ಜನರು ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಡಾಬಸ್ ಪೇಟೆ ಹೆಡ್ ಕಾನ್‍ಸ್ಟೇಬಲ್ ನಾಗೇಶ್ ಹಾಗೂ ಪೊಲೀಸ್ ಕಾನ್‍ಸ್ಟೇಬಲ್ ಗಂಗೇಶ್‍ಗೆ ಪಿಎಸ್‍ಐ ಮಂಜುನಾಥ್ ಅಭಿನಂದಿಸಿದ್ದಾರೆ.

  • ಬರೋಬ್ಬರಿ 14 ವರ್ಷಗಳ ನಂತ್ರ ಸಿಕ್ತು ರೈಲಿನಲ್ಲಿ ಕಳೆದುಕೊಂಡಿದ್ದ ಪರ್ಸ್!

    ಬರೋಬ್ಬರಿ 14 ವರ್ಷಗಳ ನಂತ್ರ ಸಿಕ್ತು ರೈಲಿನಲ್ಲಿ ಕಳೆದುಕೊಂಡಿದ್ದ ಪರ್ಸ್!

    ಮುಂಬೈ: ವ್ಯಕ್ತಿಯೊಬ್ಬರು 2006ರಲ್ಲಿ ರೈಲಿನಲ್ಲಿ ಕಳೆದುಕೊಂಡಿದ್ದ ಪರ್ಸ್ ಇದೀಗ ಬರೋಬ್ಬರಿ 14 ವರ್ಷಗಳ ಬಳಿಕ ಅವರಿಗೆ ವಾಪಸ್ ದೊರೆತ ಅಚ್ಚರಿಯ ಘಟನೆಯೊಂದು ನಡೆದಿದೆ.

    ಹೌದು. ಹೇಮಂತ್ ಪಡಲ್ಕರ್ ಅವರು 2006ರಲ್ಲಿ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್- ಪನ್ವೆಲ್ ಸ್ಥಳೀಯ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ತಮ್ಮ ಪರ್ಸ್ ಕಳೆದುಕೊಂಡಿದ್ದರು. ಅದರಲ್ಲಿ 900 ರೂ. ಇತ್ತು ಎಂದು ಸರ್ಕಾರಿ ರೈಲ್ವೇ ಪೊಲೀಸ್ ಅಧಿಕಾರಿ(ಜಿಆರ್‌ಪಿ)ಯೊಬ್ಬರು ತಿಳಿಸಿದ್ದಾರೆ.

    ಇದೇ ವರ್ಷ ಏಪ್ರಿಲ್ ತಿಂಗಳಿನಲ್ಲಿ ಪೊಲೀಸ್ ಅಧಿಕಾರಿ, ಹೇಮಂತ್ ಅವರಿಗೆ ಕರೆ ಮಾಡಿ ನಿಮ್ಮ ಪರ್ಸ್ ಸಿಕ್ಕಿದೆ ಎಂದು ಮಾಹಿತಿ ನೀಡಿದ್ದರು. ಆದರೆ ಕೊರೊನಾ ವೈರಸ್ ಭೀತಿಯಿಂದ ಲಾಕ್‍ಡೌನ್ ಹೇರಿದ್ದ ಪರಿಣಾಮ ಹೇಮಂತ್ ಪರ್ಸ್ ತೆಗೆದುಕೊಳ್ಳಲು ಹೋಗಲು ಸಾಧ್ಯವಾಗಿರಲಿಲ್ಲ.

    ಲಾಕ್‍ಡೌನ್ ತೆರವುಗೊಳಿಸಿದ ಬಳಿಕ ನೆರೆಯ ನವೀ ಮುಂಬೈ ಟೌನ್‍ಶಿಪ್ ಪನ್ವೆಲ್ ನಿವಾಸಿಯಗಿರುವ ಹೇಮಂತ್, ವಾಶಿಯಲ್ಲಿರುವ ಜಿಆರ್‌ಪಿ ಕಚೇರಿಗೆ ತೆರಳಿದ್ದಾರೆ. ಈ ವೇಳೆ ಅಧಿಕಾರಿ ಹಣದೊಂದಿಗೆ ಪರ್ಸ್ ಹಸ್ತಾಂತರಿಸಿದರು.

    ಈ ಸಂಬಂಧ ಪ್ರತಿಕ್ರಿಯಿಸಿರುವ ಹೇಮಂತ್, ಪರ್ಸ್ ಕಳೆದುಕೊಂಡಿದ್ದ ಸಮಯದಲ್ಲಿ ಅದರಲ್ಲಿ ಒಟ್ಟು 900 ರೂ. ಇತ್ತು. ವಾಶಿ ಜಿಆರ್‌ಪಿ ಅವರು ಸದ್ಯ ಅದರಲ್ಲಿ ನನಗೆ 300 ರೂ. ಹಿಂದುರುಗಿಸಿದರು. ಸ್ಟ್ಯಾಂಪ್ ಪೇಪರ್ ಕೆಲಸಕ್ಕಾಗಿ ಅವರು 100 ರೂ. ಕಡಿತಗೊಳಿಸಿದ್ದು, ಉಳಿದ 500 ರೂ. ಹಳೆ  ನೋಟು ನಿಷೇಧವಾಗಿರುವ ಹಿನ್ನೆಲೆಯಲ್ಲಿ ಹೊಸ ನೋಟಿನೊಂದಿಗೆ ನೀಡಿದ್ದಾರೆ.

    ಜಿಆರ್‍ಪಿ ಅವರ ಕಚೇರಿ ತೆರಳಿದಾಗ ಅಲ್ಲಿ ಅನೇಕ ಮಂದಿ ತಮ್ಮ ಹಣ ಕಳೆದುಕೊಂಡಿದ್ದವರು ಬಂದಿದ್ದರು. ಸದ್ಯ ಕಳೆದುಕೊಂಡ ಪರ್ಸ್ ವಾಪಸ್ ಸಿಕ್ಕಿರುವುದಕ್ಕೆ ತುಂಬಾ ಸಂತಸವಾಗಿದೆ ಎಂದು ಹೇಮಂತ್ ತಿಳಿಸಿದ್ದಾರೆ.

    ಕೆಲ ದಿನಗಳ ಹಿಂದೆಯಷ್ಟೇ ಹೇಮಂತ್ ಪರ್ಸ್ ಕದ್ದಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ. ಆರೋಪಿಯನ್ನು ಬಂಧಿಸಿದಾಗ ಆತನ ಬಳಿಯಿದ್ದ ಪರ್ಸ್ ನಲ್ಲಿ 900 ರೂ. ಇತ್ತು. ಸದ್ಯ ಹೇಮಂತ್ ಅವರಿಗೆ ನಾವು 300 ರೂ. ನೀಡಿದ್ದೇವೆ. ಉಳಿದ 500 ರೂ. ನೋಟನ್ನು ಹೊಸ ನೋಟಿಗೆ ಬದಲಾಯಿಸಿ ಕೊಡುವುದಾಗಿ ಅಧಿಕಾರಿ ತಿಳಿಸಿದ್ದಾರೆ.

  • ಮೊಬೈಲ್, ಪರ್ಸ್ ಕದ್ದು ಪರಾರಿ- ಎಟಿಎಂ ಪಿನ್ ಕೇಳಲು ಬಂದು ಸಿಕ್ಕಿಬಿದ್ರು

    ಮೊಬೈಲ್, ಪರ್ಸ್ ಕದ್ದು ಪರಾರಿ- ಎಟಿಎಂ ಪಿನ್ ಕೇಳಲು ಬಂದು ಸಿಕ್ಕಿಬಿದ್ರು

    – ಸ್ವಲ್ಪ ದೂರ ತೆರಳಿ ಎಟಿಎಂ ಪಿನ್‍ಗಾಗಿ ಮರಳಿದ್ದ ಕಳ್ಳರು

    ನವದೆಹಲಿ: ಮೊಬೈಲ್, ಪರ್ಸ್ ಕದ್ದು ಪರಾರಿಯಾಗುತ್ತಿದ್ದ ಕಳ್ಳರ ಮೇಲೆ ಗುಂಡಿನ ದಾಳಿ ನಡೆಸಿ ಪೊಲೀಸರು ಬಂಧಿಸಿದ್ದಾರೆ. ಆದರೆ ಇವರು ಹೇಗೆ ಸಿಕ್ಕಿಬಿದ್ದರು ಎಂದು ಕೇಳಿದರೆ ನಿಮಗೂ ಸೋಜಿಗವೆನಿಸುತ್ತದೆ.

    ನೊಯ್ಡಾದ ಫೇಸ್-3 ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬುಧವಾರ ರಾತ್ರಿ ಪ್ರಕರಣ ನಡೆದಿದ್ದು, ಆರೋಪಿಗಳನ್ನು ಗೌರವ್ ಸಿಂಗ್ ಹಾಗೂ ಸದಾನಂದ ಎಂದು ಗುರುತಿಸಲಾಗಿದೆ. ಇಬ್ಬರೂ ಸ್ಥಳೀಯರು, 25 ವರ್ಷ ವಯಸ್ಸಿನವರು. ಆರೋಪಿಗಳಿಂದ ಪರ್ಸ್, 3,200 ರೂ. ನಗದು, ಎಟಿಎಂ ಕಾರ್ಡ್ ಹಾಗೂ 2 ದೇಶಿ ಬಂದೂಕುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಸೆಂಟ್ರಲ್ ನೊಯ್ಡಾ ಡಿಸಿಪಿ ಹರೀಶ್ ಚಂದ್ರ ಮಾಹಿತಿ ನೀಡಿದ್ದಾರೆ.

    ವ್ಯಕ್ತಿಯೊಬ್ಬ ರಾತ್ರಿ ಊಟಕ್ಕೆ ಹೊರಗಡೆ ಬಂದಾಗ ಬೈಕ್‍ನಲ್ಲಿ ಬಂದ ಇಬ್ಬರು ಆರೋಪಿಗಳು ಆತನಿಗೆ ಪಿಸ್ತೂಲು ತೋರಿಸಿ ಮೊಬೈಲ್ ಹಾಗೂ ಪರ್ಸ್ ಕದ್ದು ಪರಾರಿಯಾಗುತ್ತಿದ್ದರು. ಸಂತ್ರಸ್ತನ ಪರ್ಸ್‍ನಲ್ಲಿ ಸ್ವಲ್ಪ ನಗದು, ವಾಹನ ಚಾಲನಾ ಪರವಾನಗಿ, ಆಧಾರ್ ಕಾರ್ಡ್ ಹಾಗೂ ಎಟಿಎಂ ಕಾರ್ಡ್ ಇತ್ತು. ಇವನ್ನೆಲ್ಲ ಕದ್ದು ಸ್ವಲ್ಪ ದೂರ ತೆರಳಿದ ನಂತರ ಆರೋಪಿಗಳು ಎಟಿಎಂ ಪಿನ್ ಕೇಳಲು ಮರಳಿ ಸಂತ್ರಸ್ತನ ಬಳಿ ಬಂದಿದ್ದರು. ನಂತರ ಮತ್ತೆ ಓಡಿದ್ದರು ಎಂದು ಡಿಸಿಪಿ ವಿವರಿಸಿದ್ದಾರೆ.

    ಈ ಕುರಿತು ತಕ್ಷಣವೇ ಸ್ಥಳೀಯ ಪೊಲೀಸ್ ಠಾಣೆಗೆ ವರದಿ ನೀಡಲಾಯಿತು. ನಂತರ ಅನುಮಾನ ಬಂದವರನ್ನು ಪರಿಶೀಲಿಸುವಂತೆ ತಳಿಸಲಾಯಿತು. ಪೊಲೀಸರು ಭದ್ರತಾ ತಪಾಸಣೆ ನಡೆಸಿ ಇಬ್ಬರು ಆರೋಪಿಗಳನ್ನು ತಡೆ ಹಿಡಿದಿದ್ದರು. ತಪಾಸಣೆ ನಿಲ್ಲಿಸಿ ಎಂದು ಹೇಳಿ ಪೊಲೀಸರ ಮೇಲೇ ಆರೋಪಿಗಳು ಗುಂಡು ಹಾರಿಸಿ, ಮತ್ತೆ ತಪ್ಪಿಸಿಕೊಂಡರು. ಪೊಲೀಸರು ಬಿಡದೆ ಹಿಂಬಾಲಿಸಿದರು. ಆಗ ಪ್ರತಿಯಾಗಿ ಪೊಲೀಸರು ಸಹ ಗುಂಡು ಹಾರಿಸಿದರು ಇಬ್ಬರಿಗೂ ಗಾಯಗಳಾಗಿದ್ದು, ಬಂಧಿಸಿ ಹತ್ತಿರದ ಆಸ್ಪತ್ರೆಗೆ ದಶಖಲಿಸಲಾಯಿತು ಎಂದು ಡಿಸಿಪಿ ಚಂದ್ರ ವಿವರಿಸಿದ್ದಾರೆ.

  • ಬಸ್‍ನಲ್ಲಿ ಕಳೆದೋಯ್ತು ATM ಕಾರ್ಡ್‌ಗಳಿದ್ದ ಪರ್ಸ್- ತಕ್ಷಣವೇ ಬಂತು 50 ಸಾವಿರ ಡ್ರಾ ಮೆಸೇಜ್

    ಬಸ್‍ನಲ್ಲಿ ಕಳೆದೋಯ್ತು ATM ಕಾರ್ಡ್‌ಗಳಿದ್ದ ಪರ್ಸ್- ತಕ್ಷಣವೇ ಬಂತು 50 ಸಾವಿರ ಡ್ರಾ ಮೆಸೇಜ್

    ಮಡಿಕೇರಿ: ಮಹಿಳೆಯೊಬ್ಬರು ಬಸ್ಸಿನಲ್ಲಿ ಪರ್ಸ್ ಕಳೆದುಕೊಂಡ ಒಂದೇ ಗಂಟೆಗೆ ತಮ್ಮ ಖಾತೆಯಲ್ಲಿದ್ದ ಸಾವಿರಾರು ರೂಪಾಯಿ ಹಣ ಮಂಗಮಾಯವಾಗಿತ್ತು. ಪರ್ಸ್ ಕಳೆದುಹೋಗಿದೆ ಅನ್ನೋದು ಗೊತ್ತಾಗದ ಮಹಿಳೆಯ ಮೊಬೈಲ್‍ಗೆ ಹಣ ಡ್ರಾ ಆದ ಮೆಸೇಜ್ ಬಂದಿತ್ತು. ಹಣ ಎಗರಿಸಿದ ಕಳ್ಳಿಯರ ವಿರುದ್ಧ ಸಾಕ್ಷಿ ಸಮೇತ ಪೊಲೀಸರಿಗೆ ದೂರು ನೀಡಿ ವರ್ಷವಾದರೂ ಕಳ್ಳಿಯರು ಮಾತ್ರ ಸಿಕ್ಕಿಲ್ಲ.

    ಅನುರಾಧ ಪರ್ಸ್ ಕಳೆದುಕೊಂಡಿರುವ ಮಹಿಳೆ. ಇವರು ಮಡಿಕೇರಿ ತಾಲೂಕಿನ ಗಾಳೀಬೀಡಿನಲ್ಲಿರುವ ನವೋದಯ ಶಾಲೆ ಉದ್ಯೋಗಿಯಾಗಿದ್ದು, ಒಂದು ವರ್ಷದ ಹಿಂದೆ ಇವರು ಬೆಂಗಳೂರಿಗೆ ಹೋಗುವಾಗ ಬಸ್ಸಿನಲ್ಲಿ ಇವರ ಪರ್ಸ್ ಕಳೆದುಹೋಗಿತ್ತು. ಪರ್ಸಿನಲ್ಲೇ ಎಟಿಎಂ ಕಾರ್ಡ್, ಅದರ ಪಿನ್ ನಂಬರ್ ಕೂಡ ಇತ್ತು. ಆದರೆ ಈ ಪರ್ಸ್ ಕಳೆದುಹೋಗಿರುವುದು ಅನುರಾಧ ಅವರ ಗಮನಕ್ಕೆ ಬಂದಿಲ್ಲ.

    ಸಂಬಂಧಿಕರ ಮನೆಗೆ ಹೋದಾಗ ಮೊಬೈಲ್‍ಗೆ ಹಣ ಡ್ರಾ ಆಗಿದ್ದ ಮೆಸೇಜ್ ಬಂದಿದೆ. ಆ ನಂತರವೇ ತಮ್ಮ ಪರ್ಸ್ ಕಳೆದುಹೋಗಿರುವುದು ಗೊತ್ತಾಗಿದೆ. ಅಷ್ಟರಲ್ಲಿ ಪರ್ಸ್ ಕಳೆದು ಹೋಗಿ ಒಂದು ಗಂಟೆ ಆಗಿತ್ತು. ಪರ್ಸ್ ಎಗರಿಸಿದವರು ಬೆಂಗಳೂರಿನ ಬನಶಂಕರಿಯಲ್ಲಿರುವ ಎಸ್‍ಬಿಐ ಎಟಿಎಂನಿಂದ ಬರೋಬ್ಬರಿ 30 ಸಾವಿರ ಹಣ ತೆಗೆದಿದ್ದಾರೆ. ನಂತರ ವಿಜಯನಗರದಲ್ಲಿರುವ ಕರ್ನಾಟಕ ಬ್ಯಾಂಕ್ ಎಟಿಎಂನಿಂದಲೂ ಹಣ ತೆಗೆದಿದ್ದಾರೆ.

    ಎಂಟಿಎಂಗೆ ಬರುವ ಕಳ್ಳಿಯರು ಮೊದಲು ಎರಡು ಬಾರಿ ತಾವೇ ಹಣ ತೆಗೆಯುವುದಕ್ಕೆ ಪ್ರಯತ್ನಿಸಿದ್ದಾರೆ. ಆದರೆ ಅದು ಸಾಧ್ಯವಾಗದಿದ್ದಾಗ ಅಲ್ಲೇ ಇರುವ ಸೆಕ್ಯುರಿಟಿ ಗಾರ್ಡ್ ಕರೆದು ಅವರಿಂದ ಹಣ ತೆಗೆಸಿಕೊಂಡಿದ್ದಾರೆ. ಇದೆಲ್ಲವೂ ಎಟಿಎಂ ಒಳಗೆ ಇರುವ ಸಿಸಿ ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿದೆ. ಎಟಿಎಂ ಒಳಗೆ ಬಂದ ಕಳ್ಳಿಯರು ಬರೋಬ್ಬರಿ ಏಳು ನಿಮಿಷಗಳ ಕಾಲ ಅದರೊಳಗೆ ಇದ್ದು, ಹಣದೋಚಿದ್ದಾರೆ ಎಂದು ಅನುರಾಧ ಸಹೋದರ ಮಂಜುನಾಥ ತಿಳಿಸಿದ್ದಾರೆ.

    ನನ್ನ ಯೂನಿಯನ್ ಬ್ಯಾಂಕ್ ಮತ್ತು ವಿಜಯ ಬ್ಯಾಂಕ್ ಎರಡು ಎಟಿಎಂಗಳನ್ನು ಬಳಸಿ ಕಳ್ಳಿಯರು 30 ಸಾವಿರ ಹಣ ಡ್ರಾ ಮಾಡಿದ್ದಾರೆ. ಅಷ್ಟಕ್ಕೂ ಸುಮ್ಮನಾಗದೆ ಬೆಂಗಳೂರಿನ ವಿವಿಧ ಮಾಲ್‍ಗಳಿಗೆ ಹೋಗಿ 20 ಸಾವಿರ ರೂಪಾಯಿಯಲ್ಲಿ ಶೂ, ಬಟ್ಟೆ ಸೇರಿದಂತೆ ತಮಗೆ ಇಷ್ಟಬಂದ ವಸ್ತುಗಳನ್ನು ಖರೀದಿ ಮಾಡಿ ಕಾರ್ಡನ್ನು ಸ್ವೈಪ್ ಮಾಡಿದ್ದಾರೆ ಎಂದು ಅನುರಾಧ ಹೇಳಿದ್ದಾರೆ.

    ಬೆಂಗಳೂರಿನಿಂದ ಮಡಿಕೇರಿಗೆ ಬಂದ ಅನುರಾಧ 2019ರ ಮಾರ್ಚ್ 3ರಂದು ಜಿಲ್ಲಾ ಅಪರಾಧ ವಿಭಾಗದ ಪೊಲೀಸರಿಗೆ ದೂರು ನೀಡಿದ್ದಾರೆ. ಜೊತೆಗೆ ಎಟಿಎಂನಿಂದ ಹಣತೆಗೆದಿರುವ ಮಹಿಳೆಯರ ವಿಡಿಯೋ, ಮಾಲ್ ನಲ್ಲಿ ವಸ್ತುಗಳನ್ನು ಖರೀದಿ ಮಾಡಿ ಕಾರ್ಡ್ ಸ್ವೈಪ್ ಮಾಡಿರುವ  ಎಲ್ಲದರ ದಾಖಲೆ ನೀಡಿದ್ದಾರೆ. ಆದರೂ ಯಾವುದೇ ಪ್ರಯೋಜನವಾಗಿಲ್ಲ.

  • ಶಬರಿಮಲೆಯಲ್ಲಿ ಮಿಸ್- ಊರಿಗೆ ಹಿಂದಿರುಗಿದ 2 ಗಂಟೆಯಲ್ಲೇ ಪರ್ಸ್ ಪತ್ತೆ

    ಶಬರಿಮಲೆಯಲ್ಲಿ ಮಿಸ್- ಊರಿಗೆ ಹಿಂದಿರುಗಿದ 2 ಗಂಟೆಯಲ್ಲೇ ಪರ್ಸ್ ಪತ್ತೆ

    – ಶಬರಿಮಲೆಯಲ್ಲಿ ಕಳೆದು ಹೋದ ಪರ್ಸ್ ಮಂಗ್ಳೂರಲ್ಲಿ ಪ್ರತ್ಯಕ್ಷ
    – ಅಯ್ಯಪ್ಪನ ಮಹಿಮೆಗೆ ಶರಣಾದ ಭಕ್ತ

    ಮಂಗಳೂರು: ಶಬರಿಮಲೆಯ ಅಯ್ಯಪ್ಪನ ಸನ್ನಿಧಾನದಲ್ಲಿ ಕಳೆದು ಹೋಗಿದ್ದ ಭಕ್ತರೊಬ್ಬರ ಪರ್ಸ್ ಮಂಗಳೂರಿನಲ್ಲಿ ಸಿಕ್ಕಿರುವ ಅಪರೂಪದ ಘಟನೆ ನಡೆದಿದೆ.

    ಮಂಗಳೂರಿನ ಕುಂಜತ್ತಬೈಲ್ ನಿವಾಸಿ ದೇವರಾಜ್ ಅಮೀನ್, ವರ್ಷದ ಪ್ರತಿ ತಿಂಗಳೂ ಶಬರಿಮಲೆ ಯಾತ್ರೆ ಮಾಡುತ್ತಾರೆ. ಅದರಂತೆ ಕಳೆದ ಮಕರ ಸಂಕ್ರಾಂತಿಯಂದು ತನ್ನ ಶಿಷ್ಯ ವೃಂದದ ಜೊತೆಗೆ ಶಬರಿಮಲೆಗೆ ತೆರಳಿದ್ದರು. ಅಯ್ಯಪ್ಪನ ದರ್ಶನ ಮಾಡುವ ವೇಳೆ 7,500 ರೂಪಾಯಿ ಇದ್ದ ಪರ್ಸ್ ಕಳೆದು ಹೋಗಿತ್ತು.

    ಭಾರೀ ಜನಸಂದಣಿಯ ನಡುವೆ ತನ್ನಲ್ಲಿದ್ದ ಪರ್ಸ್ ಎಲ್ಲಿ ಕಳೆದು ಹೋಗಿರಬಹುದೆಂದು ದುಃಖಿಸಿದರು. ಪ್ರಸಾದ ತೆಗೆದುಕೊಳ್ಳಲೂ ಹಣವಿಲ್ಲದೆ ರೋಧಿಸಿದರು. ಸನ್ನಿಧಾನದಲ್ಲಿ ಪರಮ ಪಾವನ ಮೂರ್ತಿಯ ಎದುರು ಕಣ್ಣೀರಿಟ್ಟರು. ಪವಿತ್ರ ಕ್ಷೇತ್ರದಲ್ಲೇ ಹಣ ಕಳೆದುಕೊಂಡಿರುದರಿಂದ ಇನ್ಮುಂದೆ ಈ ಶಬರಿಮಲೆಗೆ ಬರೋದಿಲ್ಲ ಎಂದು ದೇವರ ಎದುರೇ ಕೋಪ ತೋಡಿಕೊಂಡರು.

    ಹೀಗೆ ಅತ್ಯಂತ ದುಃಖದಿಂದಲೇ ಶಬರಿಮಲೆ ಯಾತ್ರೆ ಮುಗಿಸಿ ಬಂದ ದೇವರಾಜ್ ಅಯ್ಯಪ್ಪನಲ್ಲಿ ಮತ್ತೆ ಮತ್ತೆ ಬೇಡಿಕೊಂಡರು. ಪವಾಡವೆಂಬಂತೆ ಊರಿಗೆ ಬಂದ ಎರಡೇ ಗಂಟೆಯಲ್ಲಿ ದೇವರಾಜರ ಮೊಬೈಲ್‍ಗೆ ಅಪರಿಚಿತ ನಂಬರ್ ನಿಂದ ಕರೆ ಬಂದಿದೆ. ಮಂಗಳೂರಿನ ಕೊಟ್ಟಾರದ ಅಬ್ಬಕ್ಕನಗರದಿಂದ ಶಬರಿಮಲೆಗೆ ಹೋಗಿದ್ದ ಜಯಪ್ರಕಾಶ್‍ಗೆ ದೇವರಾಜ್ ಪರ್ಸ್ ಸನ್ನಿಧಾನದಲ್ಲಿ ಸಿಕ್ಕಿದ್ದು, ಸುರಕ್ಷಿತವಾಗಿ ಅದನ್ನು ಊರಿಗೆ ಬಂದು ಒಪ್ಪಿಸಿದ್ದಾರೆ.

    ಲಕ್ಷಾಂತರ ಜನರಿರುವ ಸ್ಥಳದಲ್ಲಿ ಕಳೆದು ಹೋದ ಪರ್ಸ್ ಮರಳಿ ಸಿಕ್ಕಿರುವುದರಿಂದ ದೇವರಾಜ್ ತಾನು ನಂಬುವ ಅಯ್ಯಪ್ಪನ ಮಹಿಮೆಗೆ ಶರಣಾದರು.

  • ರೋಗಿ ನೋಡುವ ನೆಪದಲ್ಲಿ ಮೊಬೈಲ್, ಪರ್ಸ್ ಕದ್ದ

    ರೋಗಿ ನೋಡುವ ನೆಪದಲ್ಲಿ ಮೊಬೈಲ್, ಪರ್ಸ್ ಕದ್ದ

    ಬೆಂಗಳೂರು: ಆಸ್ಪತ್ರೆಯಲ್ಲಿ ರೋಗಿ ನೋಡುವ ನೆಪದಲ್ಲಿ ಬಂದ ಕಳ್ಳನೊಬ್ಬ ಮೊಬೈಲ್ ಹಾಗೂ ಪರ್ಸ್ ಎಗರಿಸಿರುವ ಘಟನೆ ನಡೆದಿದೆ.

    ಬೆಂಗಳೂರು ಗ್ರಾಮಂತರ ಜಿಲ್ಲೆಯ ನೆಲಮಂಗಲ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಘಟನೆ ನಡೆದಿದ್ದು, ನೆಲಮಂಗಲ ಪಟ್ಟಣದ ಲೋಹಿತ್ ನಗರದ ಪಾಷ ಅವರ ಸಂಬಂಧಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ರೋಗಿ ನೋಡಿಕೊಳ್ಳಲು ಪಾಷ ಆಸ್ಪತ್ರೆಯಲ್ಲಿಯೇ ಇದ್ದರು.

    ಈ ವೇಳೆ ರಾತ್ರಿ ಒಂದು ಗಂಟೆ ಸುಮಾರಿಗೆ ಪಕ್ಕದ ಹಾಸಿಗೆಯಲ್ಲಿದ್ದ ರೋಗಿ ನೋಡಲು ಸಂಬಂಧಿಕರು ಬಂದಿದ್ದರು. ಅವರ ಜೊತೆಯಲ್ಲಿಯೇ ಬಂದಿದ್ದ ಚಾಲಕಿ ಕಳ್ಳ ಕರೆ ಮಾಡಲು ಪಾಷ ಅವರಿಂದ ಮೊಬೈಲ್ ತಗೊಂಡು ಹಾಗೆಯೇ ಮಾತನಾಡುತ್ತ ಆಸ್ಪತ್ರೆಯಿಂದ ಪರಾರಿಯಾಗಿದ್ದಾನೆ. ಇದೇ ವೇಳೆ ಪಕ್ಕದ ಬೆಡ್ ರೋಗಿಯಿಂದ ಪರ್ಸ್ ಮತ್ತು ಎರಡು ಸಾವಿರ ರೂ. ಹಣ ದೋಚಿ ಪರಾರಿಯಾಗಿದ್ದಾನೆ. ಈ ಕುರಿತು ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ದಾರಿಯಲ್ಲಿ ಸಿಕ್ಕ ಪರ್ಸ್ ಹಿಂದಿರುಗಿಸಿದ ಮಕ್ಕಳು

    ದಾರಿಯಲ್ಲಿ ಸಿಕ್ಕ ಪರ್ಸ್ ಹಿಂದಿರುಗಿಸಿದ ಮಕ್ಕಳು

    -2200 ಹಣ, ಪಾನ್, ಎಟಿಎಂ ಕಾರ್ಡ್ ಇತ್ತು

    ಚಿಕ್ಕಮಗಳೂರು: ಜಿಲ್ಲೆಯ ಕೊಪ್ಪ ತಾಲೂಕಿನ ಹಿರೇಕೂಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಶಾಲೆ ಮುಗಿಸಿಕೊಂಡು ಮನೆಗೆ ಹೋಗುವಾಗ ದಾರಿಯಲ್ಲಿ ಸಿಕ್ಕ ಪರ್ಸ್ ಅನ್ನು ಸಂಬಂಧಪಟ್ಟವರಿಗೆ ಹಿಂದಿರುಗಿಸಿದ್ದಾರೆ.

    6ನೇ ತರಗತಿಯ ಭರತ್, ಶರತ್, 5ನೇ ತರಗತಿಯ ಚೈತ್ರಾ ಮತ್ತು 3ನೇ ತರಗತಿಯ ಭೂಮಿಕಾ ಒಂದೇ ಕುಟುಂಬದ ನಾಲ್ವರು ಮಕ್ಕಳು ಶನಿವಾರ ಶಾಲೆ ಮುಗಿಸಿಕೊಂಡು ಮನೆಗೆ ಹೋಗುತ್ತಿದ್ದರು. ಆಗ ಶಿವಪುರ ರಸ್ತೆಯ ಸೂರ್ಯ ದೇವಸ್ಥಾನದ ಬಳಿ ಪರ್ಸ್ ಸಿಕ್ಕಿತ್ತು. ಅದರಲ್ಲಿ 2200 ರೂಪಾಯಿ ಹಣ, ಪಾನ್ ಹಾಗೂ ಎಟಿಎಂ ಕಾರ್ಡ್ ಇದ್ದವು.

    ಮಕ್ಕಳು ಸಿಕ್ಕ ಪರ್ಸ್ ಅನ್ನು ಸೋಮವಾರ ಶಾಲೆಗೆ ಬಂದು ಶಿಕ್ಷಕ ಸುಖೇಶ್ ಅವರಿಗೆ ಕೊಟ್ಟಿದ್ದಾರೆ. ಶಿಕ್ಷಕರು ಸಂಬಂಧಪಟ್ಟವರಿಗೆ ಹಿಂದಿರುಗಿಸಿ ಮಕ್ಕಳ ಪ್ರಾಮಾಣಿಕತೆಯನ್ನ ಕೊಂಡಾಡಿದ್ದಾರೆ. ಮಕ್ಕಳು ಕೊಟ್ಟ ಪರ್ಸ್ ಅನ್ನು ಶಿಕ್ಷಕ ಸುಖೇಶ್, ಸಂದೀಪ್ ಅವರನ್ನು ಸಂಪರ್ಕಿಸಿ ಮಕ್ಕಳ ಕೈಯಿಂದಲೇ ಅವರಿಗೆ  ಅವರ ಪರ್ಸ್  ಹಿಂದಿರುಗಿಸಿದ್ದಾರೆ. ಮಕ್ಕಳ ಪ್ರಾಮಾಣಿಕತೆಗೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  • ಹಣ, ಬಂಗಾರ, ಬೆಲೆ ಬಾಳುವ ಮೊಬೈಲ್ ಹಿಂದಿರುಗಿಸಿದ ಆಟೋ ಚಾಲಕರು

    ಹಣ, ಬಂಗಾರ, ಬೆಲೆ ಬಾಳುವ ಮೊಬೈಲ್ ಹಿಂದಿರುಗಿಸಿದ ಆಟೋ ಚಾಲಕರು

    ಕೊಪ್ಪಳ: ಬೆಲೆಬಾಳುವ ವಸ್ತುಗಳು ಸಿಕ್ಕರೆ ಸಾಕು, ಮರಳಿ ಕೊಡದೆ ಯಾಮಾರಿಸೋರೆ ಇರುತ್ತಾರೆ. ಆದರೆ ಕೊಪ್ಪಳದಲ್ಲಿ ಆಟೋ ಚಾಲಕರು ಪ್ರಯಾಣಿಕರು ಬಿಟ್ಟು ಹೋದ ಬೆಲೆಬಾಳುವ ವಸ್ತುಗಳನ್ನು ಮರಳಿ ಗ್ರಾಹಕರಿಗೆ ಹಿಂದಿರುಗಿಸಿ ಮಾನವೀಯತೆ ಮೆರೆದಿದ್ದಾರೆ.

    ಭಾನುವಾರ ಕೊಪ್ಪಳ ರೈಲ್ವೆ ನಿಲ್ದಾಣದಲ್ಲಿ ಬಳ್ಳಾರಿಯಿಂದ ಬಂದ ಜಯಶ್ರೀ ಕುಟುಂಬಸ್ಥರು ಆಟೋದಲ್ಲಿ ಮನೆಗೆ ತೆರಳಿದ್ದರು. ಅವರು ಆಟೋದಲ್ಲಿಯೇ ಮರೆತು ತಮ್ಮ ಪರ್ಸ್ ಬಿಟ್ಟು ಹೋಗಿದ್ದರು. ಪರ್ಸ್ ನಲ್ಲಿ ಮೂರು ಬೆಲೆಬಾಳು ಮೊಬೈಲ್‍ಗಳು, ಹಣ, ಬಂಗಾರದ ಆಭರಣಗಳಿದ್ದವು. ಸುಮಾರು 2 ಗಂಟೆ ಬಳಿಕ ಮೊಬೈಲ್‍ಗಳ ನೆನಪಾದಾಗ ಪರ್ಸ್ ಬಿಟ್ಟಿರುವುದು ಬೆಳಕಿಗೆ ಬಂದಿದೆ.

    ಜಯಶ್ರೀ ಆಟೋ ಏರಿದ ಸ್ಥಳಕ್ಕೆ ಆಗಮಿಸಿ ವಿಚಾರಿಸಿದಾಗ ರೈಲ್ವೆ ನಿಲ್ದಾಣದ ಚಾಲಕರು ಅವರಿಗೆ ಧೈರ್ಯ ತುಂಬಿ ಕೇವಲ ಹತ್ತು ನಿಮಿಷದಲ್ಲೇ ಯಾರ ಆಟೋ ಎಂದು ಗುರುತಿಸಿ ಆಟೋದಲ್ಲೇ ಇದ್ದ ಪರ್ಸ್ ಮರಳಿ ನೀಡಿದ್ದಾರೆ. ಪರ್ಸ್ ನಲ್ಲಿದ್ದ ಎಲ್ಲಾ ವಸ್ತುಗಳು ಹಾಗೆ ಇದ್ದವು. ಕಳೆದು ಹೋಗಿದ್ದ ವಸ್ತುಗಳು ತಮ್ಮ ಕೈ ಸೇರಿದ್ದಕ್ಕೆ ಆಟೋದವರಿಗೆ ಜಯಶ್ರೀ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.

    ಈ ಮೂಲಕ ಕೊಪ್ಪಳ ರೈಲ್ವೆ ನಿಲ್ದಾಣದ ಆಟೋ ಚಾಲಕರು ಮಾದರಿಯಾಗಿ ಮಾನವೀಯತೆ ಮೆರೆದಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv