Tag: Purchasing center

  • ಹೊರ ರಾಜ್ಯದಲ್ಲಿ ಕುಗ್ಗಿದ ಭತ್ತದ ಬೇಡಿಕೆ- ಖರೀದಿ ಕೇಂದ್ರ ತೆರೆಯಲು ರೈತರ ಆಗ್ರಹ

    ಹೊರ ರಾಜ್ಯದಲ್ಲಿ ಕುಗ್ಗಿದ ಭತ್ತದ ಬೇಡಿಕೆ- ಖರೀದಿ ಕೇಂದ್ರ ತೆರೆಯಲು ರೈತರ ಆಗ್ರಹ

    ರಾಯಚೂರು: ಭತ್ತದ ಕಣಜವಾಗಿರುವ ರಾಯಚೂರು, ಬಳ್ಳಾರಿ, ಕೊಪ್ಪಳ ಜಿಲ್ಲೆಯ ರೈತರು ಭತ್ತಕ್ಕೆ ಬೆಲೆಯಿಲ್ಲದೆ ಸಂಕಷ್ಟದಲ್ಲಿದ್ದಾರೆ. ಮಾರುಕಟ್ಟೆಯಲ್ಲಿ ಭತ್ತದ ದರ ಇಳಿಮುಖವಾಗುತ್ತಿರುವುದು ರೈತರಲ್ಲಿ ಆತಂಕ ಮೂಡಿಸಿದೆ. ಒಂದೆಡೆ ಮಳೆ, ಪ್ರವಾಹ ಶಾಕ್ ನೀಡಿದರೆ ಬೆಲೆ ಇಳಿಕೆ ಬದುಕು ಮುಳುಗಿಸುತ್ತಿದೆ. ಹೀಗಾಗಿ ಭತ್ತ ಖರೀದಿ ಕೇಂದ್ರ ಆರಂಭದ ನಿರೀಕ್ಷೆಯಲ್ಲಿ ರೈತರು ಕುಳಿತಿದ್ದಾರೆ.

    ಈ ಬಾರಿಯ ಮುಂಗಾರು ಹಂಗಾಮಿನಲ್ಲಿ ಎಲ್ಲಾ ಜಲಾಶಯಗಳು ಭರ್ತಿಯಾಗಿ ಕಾಲುವೆಗೆ ಸಮರ್ಪಕ ನೀರು ಹರಿದಿದ್ದರಿಂದ ರೈತರು ಉತ್ಸಾಹದಲ್ಲಿ ಭತ್ತ ನಾಟಿ ಮಾಡಿದ್ದಾರೆ. ಆದ್ರೆ ಈಗ ಮಾರುಕಟ್ಟೆಯಲ್ಲಿ ಭತ್ತದ ಬೆಲೆ ದಿನೇ ದಿನೇ ಕುಸಿಯುತ್ತಿರುವುದು ರೈತರನ್ನ ಕಂಗೆಡಿಸಿದೆ. ಅತೀ ಹೆಚ್ಚು ಭತ್ತ ಬೆಳೆಯುವ ರಾಜ್ಯದ ರಾಯಚೂರು, ಬಳ್ಳಾರಿ, ಕೊಪ್ಪಳದ ಸಾವಿರಾರು ಜನ ರೈತರು ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಲಾಕ್‍ಡೌನ್‍ನಿಂದ ಸಂಕಷ್ಟಕ್ಕೆ ಸಿಲುಕಿದ್ದ ಅಕ್ಕಿ ಉದ್ಯಮ ಇನ್ನೂ ಪೂರ್ಣ ಪ್ರಮಾಣದಲ್ಲಿ ಚೇತರಿಕೆ ಕಂಡುಕೊಂಡಿಲ್ಲ. ಪ್ರಸ್ತುತ ಮಾರುಕಟ್ಟೆಯಲ್ಲಿ ಸೋನಾಮಸೂರಿ ಹೊಸ ಭತ್ತ ಕ್ವಿಂಟಾಲ್‍ಗೆ 1,100 ರೂ.ನಿಂದ 1,250 ರೂ.ವರೆಗೆ ಮಾರಾಟವಾಗುತ್ತಿದೆ. ಹಳೆ ಭತ್ತ 1,500 ರೂ. ನಿಂದ 1,750ರೂ.ವರೆಗೆ ಮಾರಾಟವಾಗುತ್ತಿದೆ. ಆದರೆ ಕಳೆದ ವರ್ಷ ಭತ್ತ ಗರಿಷ್ಠ 2 ಸಾವಿರ ರೂ. ನಿಂದ 2400 ರೂ.ವರೆಗೆ ಮಾರಾಟವಾಗಿತ್ತು.

    ರಾಯಚೂರು, ಬಳ್ಳಾರಿ, ಕೊಪ್ಪಳ ಜಿಲ್ಲೆಗಳಿಂದ ಮಹಾರಾಷ್ಟ್ರ, ತಮಿಳುನಾಡು, ಗುಜರಾತ್ ಹಾಗೂ ಬೆಂಗಳೂರಿಗೆ ಹೆಚ್ಚಿನ ಪ್ರಮಾಣದ ಅಕ್ಕಿಯನ್ನು ಮಾರಾಟ ಮಾಡಲಾಗುತ್ತಿತ್ತು. ಆದರೆ ಲಾಕ್‍ಡೌನ್‍ನಿಂದ ಅಕ್ಕಿ ಉದ್ಯಮ ಸ್ಥಗಿತಗೊಂಡಿದ್ದು, ಲಾಕ್‍ಡೌನ್ ತೆರವುಗೊಂಡರೂ ಬೇಡಿಕೆಯಿಲ್ಲದೆ ತಮಿಳುನಾಡಿಗೆ ಮಾತ್ರ ಅಕ್ಕಿ ಸರಬರಾಜು ಮಾಡಲಾಗುತ್ತಿದೆ. ಈಗಾಗಲೇ ಸಾಮಾನ್ಯ ಭತ್ತಕ್ಕೆ ಕ್ವಿಂಟಾಲ್‍ಗೆ 1,868 ರೂ. ಉತ್ತಮ ಭತ್ತಕ್ಕೆ 1,888 ರೂ. ಬೆಂಬಲ ಬೆಲೆ ಘೋಷಣೆ ಮಾಡಿದ್ದರೂ ಖರೀದಿ ಕೇಂದ್ರಗಳನ್ನು ಆರಂಭಿಸಿಲ್ಲ. ಹೀಗಾಗಿ ಖರೀದಿ ಆರಂಭಿಸಲು ರೈತರು ಒತ್ತಾಯಿಸಿದ್ದಾರೆ.

    ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ರಾಯಚೂರು ಜಿಲ್ಲೆಯಲ್ಲಿ 1.56 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಳ್ಳಾರಿ ಜಿಲ್ಲೆಯಲ್ಲಿ 80 ಸಾವಿರ ಹೆಕ್ಟೇರ್‍ನಲ್ಲಿ, ಕೊಪ್ಪಳ ಜಿಲ್ಲೆಯಲ್ಲಿ 70 ಸಾವಿರ ಹೆಕ್ಟೇರ್‍ನಲ್ಲಿ ಭತ್ತ ನಾಟಿ ಮಾಡಲಾಗಿದೆ. ಬೆಲೆ ಇಳಿಮುಖವಾಗುತ್ತಾ ಸಾಗಿದರೆ ರೈತರು ನಷ್ಟಕ್ಕೆ ಗುರಿಯಾಗಲಿದ್ದಾರೆ. ರಾಯಚೂರು ಜಿಲ್ಲೆಯಲ್ಲಿ 130 ಅಕ್ಕಿ ಗಿರಣಿಗಳಿದ್ದು, ಶೇ.70 ರಷ್ಟು ಮಾತ್ರ ಕಾರ್ಯನಿರ್ವಹಿಸುತ್ತಿವೆ. ಭತ್ತ ಖರೀದಿ ಕೇಂದ್ರ ತೆರೆಯಲು ಸರ್ಕಾರದಿಂದ ಆದೇಶ ಬಂದಿದ್ದು, ಶೀಘ್ರದಲ್ಲೇ ತೆರೆಯುವುದಾಗಿ ರಾಯಚೂರು ಜಿಲ್ಲಾಧಿಕಾರಿ ವೆಂಕಟೇಶ್ ಕುಮಾರ್ ಹೇಳಿದ್ದಾರೆ.

    ಹೊರರಾಜ್ಯಗಳಿಂದ ಅಕ್ಕಿಗೆ ಬೇಡಿಕೆ ಬಾರದ ಕಾರಣ ಡಿಸೆಂಬರ್ ಮತ್ತು ಏಪ್ರಿಲ್‍ನಲ್ಲಿ ಬಂದ ಭತ್ತವನ್ನು ಬಹುತೇಕ ರೈತರು ದಾಸ್ತಾನು ಮಾಡಿದ್ದು, ಈಗಾಗಲೇ ಮುಂಗಾರು ಹಂಗಾಮಿನ ಭತ್ತ ಕಟಾವು ನಡೆಯುತ್ತಿದ್ದು, ಹೊಸ ಭತ್ತ ಮಾರುಕಟ್ಟೆಗೆ ಬಂದಲ್ಲಿ ದರ ಮತ್ತಷ್ಟು ಇಳಿದು ರೈತರು ನಷ್ಟಕ್ಕೆ ಗುರಿಯಾಗಲಿದ್ದಾರೆ. ಹೀಗಾಗಿ ಬೆಂಬಲ ಬೆಲೆ ಮಾರುಕಟ್ಟೆ ಬೆಲೆಗಿಂತ ಹೆಚ್ಚಾಗಿರಬೇಕು ಅಂತ ರೈತರು ಒತ್ತಾಯಿಸಿದ್ದಾರೆ.

  • ಆರಂಭವಾಗದ ಖರೀದಿ ಕೇಂದ್ರ: ನಷ್ಟದ ಸುಳಿಯಲ್ಲಿ ಭತ್ತ, ತೊಗರಿ ಬೆಳೆಗಾರರು

    ಆರಂಭವಾಗದ ಖರೀದಿ ಕೇಂದ್ರ: ನಷ್ಟದ ಸುಳಿಯಲ್ಲಿ ಭತ್ತ, ತೊಗರಿ ಬೆಳೆಗಾರರು

    ರಾಯಚೂರು: ಕಳೆದ ಮೂರು ವರ್ಷಗಳಿಂದ ಬರಗಾಲವನ್ನೇ ಅನುಭವಿಸಿದ್ದ ರಾಯಚೂರಿನ ರೈತರು ಈ ಬಾರಿ ತಡವಾದರೂ ಉತ್ತಮ ಮಳೆಯನ್ನು ಕಂಡಿದ್ದಾರೆ. ಮಳೆಯಿಂದಾಗಿ ಉತ್ತಮ ಫಸಲನ್ನೂ ಪಡೆದಿದ್ದಾರೆ. ಆದರೆ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಬೆಲೆಯಿಲ್ಲದೆ ಕಂಗಾಲಾಗಿದ್ದಾರೆ.

    ಖರೀದಿ ಕೇಂದ್ರಗಳನ್ನು ತೆರೆದು ಬೆಲೆ ಕುಸಿತ ಕಂಡಿರುವ ಬೆಳೆಗಳನ್ನು ಖರೀದಿಸುವುದಾಗಿ ಭರವಸೆ ನೀಡಿದ್ದ ಸರ್ಕಾರ ಇದುವರೆಗೂ ಖರೀದಿ ಕೇಂದ್ರ ಸ್ಥಾಪಿಸಿಲ್ಲ. ಇದು ರೈತರನ್ನು ಇನ್ನಷ್ಟು ಕಂಗೆಡುವಂತೆ ಮಾಡಿದೆ. ಈ ಬಾರಿ ಹೆಚ್ಚು ಪ್ರಮಾಣದಲ್ಲಿ ಬಿತ್ತನೆ ಮಾಡಿದ ರೈತರು ಬೆಲೆಯಿಲ್ಲದೆ ಸಿಕ್ಕ ಬೆಲೆಗೆ ಮಾರುವ ಸ್ಥಿತಿಯಲ್ಲಿದ್ದಾರೆ. ಕೆಲ ರೈತರು ಬೆಳೆಯನ್ನು ಮಾರುಕಟ್ಟೆಗೆ ತಂದಿದ್ದರೆ, ಇನ್ನೂ ಕೆಲವರ ಬೆಳೆ ಶೀಘ್ರದಲ್ಲೇ ಕೈಗೆ ಬರಲಿದೆ.

    ಜಿಲ್ಲೆಯಲ್ಲಿ 1.20 ಲಕ್ಷ ಹೆಕ್ಟರ್ ಪ್ರದೇಶದಲ್ಲಿ ಭತ್ತವನ್ನು ಬಿತ್ತನೆ ಮಾಡುವ ಗುರಿ ಇದ್ದು ಈಗಾಗಲೇ 1.08 ಲಕ್ಷ ಹೆಕ್ಟರ್ ಭತ್ತವನ್ನು ಬಿತ್ತನೆ ಮಾಡಿದ್ದಾರೆ. ಪ್ರತಿ ಹೆಕ್ಟರ್ ಗೆ ಸುಮಾರು 42.31 ಕ್ವಿಂಟಾಲ್ ಭತ್ತದ ಇಳುವರಿ ಬರುತ್ತಿದ್ದು, 76 ಲಕ್ಷ ಕ್ವಿಂಟಾಲ್ ಇಳುವರಿ ಬರುವ ನಿರೀಕ್ಷೆ ಇದೆ. ಇದೇ ರೀತಿ ಜಿಲ್ಲೆಯಲ್ಲಿ 47,581 ಹೆಕ್ಟರ್ ಪ್ರದೇಶದಲ್ಲಿ ತೊಗರಿ ಬಿತ್ತನೆ ಮಾಡಬೇಕಾಗಿದ್ದು, ಈ ವರ್ಷ ಉತ್ತಮ ಮಳೆಯಾಗಿದ್ದರಿಂದ 62,666 ಹೆಕ್ಟರ್ ಪ್ರದೇಶದಲ್ಲಿ ಬಿತ್ತನೆ ಮಾಡಿದ್ದಾರೆ. ಪ್ರತಿ ಹೆಕ್ಟರ್ ಗೆ 3.72 ಕ್ವಿಂಟಾಲ್ ತೊಗರಿ ಇಳುವರಿ ಬರಲಿದೆ. ಇದರಿಂದಾಗಿ 2.33 ಲಕ್ಷ ಕ್ವಿಂಟಾಲ್ ತೊಗರಿ ಬರಲಿದೆ ಎಂದು ಅಂದಾಜಿಸಲಾಗಿದೆ. ಈಗಾಗಲೇ ಭತ್ತವನ್ನು ಕಟಾವು ಮಾಡಿ 2 ತಿಂಗಳು, ತೊಗರಿಯನ್ನು ಕಟಾವು ಮಾಡಿ ಒಂದುವರೆ ತಿಂಗಳಾಗಿದೆ. ಆದರೆ ಈಗ ಮಾರಾಟ ಮಾಡಿದರೆ ರೈತ ಸಂಪೂರ್ಣವಾಗಿ ಹಾನಿಗೊಳಗಾಗುವ ಸಾಧ್ಯತೆ ಇದೆ. ಕಾರಣ ಮಾರುಕಟ್ಟೆಯಲ್ಲಿ ಭತ್ತ ಹಾಗು ತೊಗರಿ ದರ ಅತ್ಯಂತ ಕಡಿಮೆ ಇದೆ. ಉತ್ತಮ ದರಕ್ಕಾಗಿ ರೈತ ಕಾಯಿಯುತ್ತಿದ್ದಾನೆ.

    ಸರ್ಕಾರ ಸಕಾಲಕ್ಕೆ ಬೆಂಬಲ ಬೆಲೆ ನೀಡಿ ಖರೀದಿ ಕೇಂದ್ರ ಆರಂಭಿಸದೆ ಇರುವುದರಿಂದ ಕಡಿಮೆ ದರಕ್ಕೆ ಮಾರಾಟ ಮಾಡಬೇಕಾಗಿದೆ. ಕೆಲವು ರೈತರು ಮಾತ್ರ ಖರೀದಿ ಕೇಂದ್ರಕ್ಕಾಗಿ ಕಾಯುತ್ತಿದ್ದಾರೆ. ಈ ಮಧ್ಯೆ ಬೆಂಬಲ ಬೆಲೆಯಲ್ಲಿ ಭತ್ತ ಹಾಗೂ ತೊಗರಿಯನ್ನು ಖರೀದಿಸುವುದಾಗಿ ಸರ್ಕಾರ ಘೋಷಣೆ ಮಾಡಿದೆ. ತೊಗರಿಗೆ ಕೇಂದ್ರ ಸರ್ಕಾರ 4,800 ರೂಪಾಯಿ ಅದಕ್ಕೆ ರಾಜ್ಯ ಸರ್ಕಾರ 300 ರೂಪಾಯಿ ಸಹಾಯಧನ ನೀಡಲು ನಿರ್ಧರಿಸಿ ರೈತರಿಂದ ನೊಂದಣಿ ಕಾರ್ಯ ಆರಂಭಿಸಬೇಕಾಗಿದೆ. ಸರ್ಕಾರವು ಕೃಷಿ ನೋಂದಣಿಗಾಗಿ ಸಾಫ್ಟವೇರ್ ಅಭಿವೃದ್ಧಿ ಮಾಡಿದ್ದು, ಇದುವರೆಗೂ ಸಾಫ್ಟವೇರ್ ರಾಯಚೂರಿಗೆ ಬಂದಿಲ್ಲ. ಇದರಿಂದ ನೋಂದಣಿಯಾಗಿಲ್ಲ. ಈ ತಿಂಗಳ ಅಂತ್ಯದವರೆಗೂ ನೋಂದಣಿ ಮಾಡಲು ಅವಕಾಶ ನೀಡಿದೆ. ಇನ್ನೂ ಭತ್ತವನ್ನು 1,835 ರೂಪಾಯಿಗೆ ಪ್ರತಿ ಕ್ವಿಂಟಾಲ್ ಖರೀದಿಸಲು ಭತ್ತದ ಖರೀದಿ ಕೇಂದ್ರ ಆರಂಭಿಸಿದೆ. ಆದರೆ ಮಾರುಕಟ್ಟೆಯಲ್ಲಿ ಇದೇ ದರವಿದೆ.

    ಭತ್ತವನ್ನು ಪ್ರತಿ ಕ್ವಿಂಟಾಲಿಗೆ 2,500 ರೂಪಾಯಿಯಂತೆ ಖರೀದಿಸಲು ಒತ್ತಾಯಿಸಿದ್ದು, ಅದಕ್ಕೆ ರಾಜ್ಯ ಸರ್ಕಾರ 2,000 ರೂಪಾಯಿಯಂತೆ ಖರೀದಿಸುವ ಭರವಸೆ ನೀಡಿದೆ. ಆದರೆ ಇನ್ನೂ ಆದೇಶ ಬಂದಿಲ್ಲ. ಈ ಗೊಂದಲದ ಮಧ್ಯೆ ರೈತರು ಎಪಿಎಂಸಿ ಗಳಲ್ಲಿ ಅನಿವಾರ್ಯವಾಗಿ ಮಾರಾಟ ಮಾಡುತ್ತಿದ್ದಾರೆ. ಮುಂದೆ ಖರೀದಿ ಕೇಂದ್ರಗಳು ಆರಂಭವಾದರೂ ಅವುಗಳು ರೈತರಿಗಿಂತ ವ್ಯಾಪಾರಿಗಳಿಗೆ ಅನುಕೂಲ ಎನ್ನುವ ಪರಸ್ಥಿತಿಯಿದೆ.

    ರಾಯಚೂರು ಎಪಿಎಂಸಿಗೆ ನಿತ್ಯವೂ 10 ಸಾವಿರ ಕ್ವಿಂಟಾಲ್ ತೊಗರಿ ಮಾರಾಟಕ್ಕಾಗಿ ಬರುತ್ತಿದೆ. ಈಗ ಮಾರುಕಟ್ಟೆಯಲ್ಲಿ ತೊಗರಿಯ ದರ ಸರಾಸರಿ 5,220 ರೂಪಾಯಿ ಇದೆ. ಆದರೆ ಸರ್ಕಾರದ ಗೊಂದಲ ನೀತಿಯಿಂದಾಗಿ ಬೆಂಬಲ ಬೆಲೆ ಖರೀದಿ ಕೇಂದ್ರಗಳು ಆರಂಭವಾಗದೆ ರೈತ ಸಂಕಷ್ಟ ಅನುಭವಿಸುವಂತಾಗಿದೆ.

  • ತೊಗರಿ ಖರೀದಿ ಕೇಂದ್ರ ತೆರೆಯಲು ಒತ್ತಾಯಿಸಿ ರೈತರಿಂದ ಹೋರಾಟ

    ತೊಗರಿ ಖರೀದಿ ಕೇಂದ್ರ ತೆರೆಯಲು ಒತ್ತಾಯಿಸಿ ರೈತರಿಂದ ಹೋರಾಟ

    ರಾಯಚೂರು: ಜಿಲ್ಲೆಯ ತಾಲೂಕು ಕೇಂದ್ರಗಳಲ್ಲಿ ತೊಗರಿ ಖರೀದಿ ಕೇಂದ್ರಗಳನ್ನು ತೆರೆಯುವಂತೆ ಆಗ್ರಹಿಸಿ ನಗರದ ಟಿಪ್ಪು ಸುಲ್ತಾನ್ ಉದ್ಯಾನವನದಲ್ಲಿ ರೈತರು ಪ್ರತಿಭಟನೆ ನಡೆಸಿದರು. ಜಿಲ್ಲಾಧಿಕಾರಿಗಳು ಈಗಾಗಲೆ ತಾಲೂಕುಗಳಲ್ಲಿ ತೊಗರಿ ಖರೀದಿ ಕೇಂದ್ರ ತೆರೆಯಲು ಆದೇಶಿಸಿದ್ದರೂ ಸೊಸೈಟಿಯವರು ಆನ್‍ಲೈನ್ ಕೇಂದ್ರಗಳನ್ನ ಪ್ರಾರಂಭಿಸುತ್ತಿಲ್ಲ. ಕೂಡಲೇ ತೊಗರಿ ಖರೀದಿ  ಕೇಂದ್ರಗಳನ್ನ ಸ್ಥಾಪಿಸಿ ರೈತರ ತೊಗರಿಯನ್ನ ಖರೀದಿಸಬೇಕು ಎಂದು ರೈತರು ಒತ್ತಾಯಿಸಿದರು.

    ಕರ್ನಾಟಕ ನೇಗಿಲಯೋಗಿ ರೈತ ಸಂಘದ ನೇತೃತ್ವದಲ್ಲಿ ಲಿಂಗಸುಗೂರು ತಾಲೂಕಿನ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪ್ರತಿಭಟನೆ ನಡೆಸಿದರು. ಈಗಾಗಲೇ ಡಿಸಿಎಂ ಹಾಗೂ ಕೃಷಿ ಸಚಿವ ಲಕ್ಷ್ಮಣ ಸವದಿ ಜನವರಿ 1ರಿಂದ ಬೆಲೆ ಕುಸಿತವಾದ ಎಲ್ಲಾ ಬೆಳೆಗಳ ಖರೀದಿ ಕೇಂದ್ರ ಸ್ಥಾಪಿಸುವುದಾಗಿ ಹೇಳಿದ್ದಾರೆ. ಆದರೆ ಜಿಲ್ಲೆಯಲ್ಲಿ ಯಾವ ಪ್ರಕ್ರಿಯೆಗಳು ಆರಂಭವಾಗಿಲ್ಲ. ಕೂಡಲೇ ಕ್ರಮವಹಿಸಬೇಕು ಅಂತ ರೈತರು ಒತ್ತಾಯಿಸಿದರು.

    ಲಿಂಗಸುಗೂರು ತಾಲೂಕಿನ ಚಿಕ್ಕಹೆಸರೂರು ಗ್ರಾಮಕ್ಕೆ ಶಾಶ್ವತ ಕುಡಿಯುವ ನೀರು, ಎಪಿಎಂಸಿಗಳನ್ನ ಕೃಷಿಯೇತರ ವ್ಯಾಪಾರಗಳನ್ನು ಮಾಡುವವರ ವಿರುದ್ಧ ಕ್ರಮ, ಫಸಲ್ ಭೀಮಾ ಯೋಜನೆ ಸಮರ್ಪಕ ಜಾರಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.