Tag: Punugu cat

  • ಅಪರೂಪದ ಪುನುಗು ಬೆಕ್ಕು ಕಳ್ಳಸಾಗಣೆ- ಇಬ್ಬರ ಬಂಧನ

    ಅಪರೂಪದ ಪುನುಗು ಬೆಕ್ಕು ಕಳ್ಳಸಾಗಣೆ- ಇಬ್ಬರ ಬಂಧನ

    ಉಡುಪಿ: ಪಶ್ಚಿಮಘಟ್ಟ ದಟ್ಟ ಕಾಡು, ಅಭಯಾರಣ್ಯಗಳಲ್ಲಿ ಮಾತ್ರ ಕಾಣಸಿಗುವ ಅಪರೂಪದ ಪುನುಗು ಬೆಕ್ಕನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಇಬ್ಬರ ಮೇಲೆ ಅರಣ್ಯಾಧಿಕಾರಿಗಳು ದಾಳಿ ಮಾಡಿದ್ದಾರೆ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಅರಣ್ಯ ಸಂಚಾರಿ ದಳ ಇಲ್ಲಿನ ಅಧಿಕಾರಿ ಹಾಗೂ ಸಿಬ್ಬಂದಿ ಪುನುಗು ಬೆಕ್ಕು ಸಹಿತ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

    ಬ್ರಹ್ಮಾವರ ತಾಲೂಕಿನ ಹಿಲಿಯಾಣ ಗ್ರಾಮದ ಹೈಕಾಡಿ ಎಂಬಲ್ಲಿ ಈ ಘಟನೆ ನಡೆದಿದೆ. ಕುಂದಾಪುರ ವೆಸ್ಟ್ ಬ್ಲಾಕ್ ರಸ್ತೆ ದತ್ತಾತ್ರೇಯ ನಗರದ ನಿವಾಸಿ ಅಸ್ಗರ್ ಅಲಿ ಹಾಗೂ ಬಿದ್ಕಲಕಟ್ಟೆ ನಿವಾಸಿ ಶರತ್ ಬಂಧಿತ ಆರೋಪಿಗಳು. ಬಂಧಿತರಿಂದ ಜೀವಂತ ಪುನುಗು ಬೆಕ್ಕು, ಪಂಜರ, ಮಾರುತಿ ಇಕೋ ಕಾರು, ಮೊಬೈಲ್ ಫೋನುಗಳನ್ನು ವಶಕ್ಕೆ ಪಡೆಯಲಾಗಿದೆ.

    ದಾಳಿಯ ವೇಳೆ ಇನ್ನೋರ್ವ ಆರೋಪಿ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಈ ಪ್ರಕರಣವು ವನ್ಯಜೀವಿ ಅರಣ್ಯ ಸಂರಕ್ಷಣಾ ಕಾಯ್ದೆಗೆ ಸಂಬಂಧಿಸಿದ ಪ್ರಕರಣವಾದ್ದರಿಂದ ಆರೋಪಿಗಳನ್ನು ಮತ್ತು ಸ್ವತ್ತುಗಳನ್ನು ಮುಂದಿನ ತನಿಖೆ ಬಗ್ಗೆ ನ್ಯಾಯಾಲಯದ ಅನುಮತಿ ಪಡೆದು ಶಂಕರನಾರಾಯಣ ವಲಯ ಅರಣ್ಯಾಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ.

    ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಮಾತ್ರ ಹೆಚ್ಚಾಗಿ ಕಂಡು ಬರುವ ಪುನುಗು ಬೆಕ್ಕು ವಿನಾಶದಂಚಿನಲ್ಲಿರುವ ಜೀವಿಗಳ ಪಟ್ಟಿಯಲ್ಲಿದೆ. ಲಕ್ಷಾಂತರ ಬೆಲೆ ಬಾಳುವ ಪುನುಗು ಬೆಕ್ಕನ್ನು ಕಳ್ಳ ಸಾಗಣೆ ಮಾಡುವ ದೊಡ್ಡ ಜಾಲವೇ ಈ ಭಾಗದಲ್ಲಿದೆ ಎನ್ನುತ್ತಾರೆ ಪ್ರಾಣಿಪ್ರಿಯರು. ಜಿಂಕೆ ಕೊಂಬು, ಚಿರತೆ ಚರ್ಮದಂತೆ ಪುನುಗು ಬೆಕ್ಕಿನ ಮಾಂಸ ಮತ್ತು ಎಣ್ಣೆಗೆಯ ತಯಾರಿಗೆ ಉಪಯೋಗಿಸುತ್ತಾರೆ ಎಂಬ ಮಾಹಿತಿಯಿದೆ.

  • ಧಾರವಾಡ ಎಸಿ ಕಚೇರಿಯಲ್ಲಿ ಪುನುಗು ಬೆಕ್ಕು ಪ್ರತ್ಯಕ್ಷ

    ಧಾರವಾಡ ಎಸಿ ಕಚೇರಿಯಲ್ಲಿ ಪುನುಗು ಬೆಕ್ಕು ಪ್ರತ್ಯಕ್ಷ

    ಧಾರವಾಡ: ನಗರದ ಉಪವಿಭಾಗಾಧಿಕಾರಿ ಕಚೇರಿ ಆವರಣದಲ್ಲಿ ಇಂದು ಪುನುಗು ಬೆಕ್ಕನ್ನು ಕಂಡು ಅಧಿಕಾರಿಗಳು ಹಾಗೂ ಸಾರ್ವಜನಿಕರು ಒಂದು ಕ್ಷಣ ಗಾಬರಿಯಾಗಿದ್ದಾರೆ.

    ಪುನುಗು ಬೆಕ್ಕು ಕಂಡು ಕೆಲವರು ಹೌಹಾರಿದರೆ, ಇನ್ನೂ ಕೆಲವರು ಕುತೂಹಲದಿಂದ ನೋಡುತ್ತ ನಿಂತಿದ್ದರು. ಬೆಳ್ಳಂಬೆಳ್ಳಗ್ಗೆ ಉಪವಿಭಾಗಾಧಿಕಾರಿ ಕಚೇರಿ ಆವರಣದಲ್ಲಿ ನಾಲ್ಕು ಗಂಟೆಗೂ ಅಧಿಕ ಕಾಲ ಪುನುಗು ಬೆಕ್ಕು ಕಾಣಿಸಿಕೊಂಡಿದೆ.

    ಕಚೇರಿಗೆ ಬರುತ್ತಿದ್ದ ಸಿಬ್ಬಂದಿ ಹಾಗೂ ಜನ ಪುನುಗು ಬೆಕ್ಕನ್ನು ಕುತೂಹಲದಿಂದ ನೋಡುತ್ತಲೇ ನಿಂತಿದ್ದರು. ಸುಮಾರು ನಾಲ್ಕು ಗಂಟೆಗಳ ಈ ಬೆಕ್ಕು ಕಚೇರಿ ಆವರಣದಲ್ಲಿಯೇ ಓಡಾಡುತ್ತಿತ್ತು. ಬಳಿಕ ಉರಗ ತಜ್ಞ ಯಲ್ಲಪ್ಪ ಸ್ಥಳಕ್ಕಾಗಮಿಸಿ, ಈ ಅಪರೂಪದ ಬೆಕ್ಕನ್ನು ಸೆರೆ ಹಿಡಿದು ಅರಣ್ಯದಲ್ಲಿ ಬಿಟ್ಟು ಬಂದಿದ್ದಾರೆ. ಇತ್ತೀಚೆಗೆ ಧಾರವಾಡದಲ್ಲಿ ಅಲ್ಲಲ್ಲಿ ಪುನುಗು ಬೆಕ್ಕುಗಳು ಕಂಡು ಬರುತ್ತಿದ್ದು, ಇದರ ಸಂತತಿ ಧಾರವಾಡದಲ್ಲಿ ಹೆಚ್ಚಾಗಿದೆಯಾ ಎನ್ನುವ ಸಂಶಯ ವ್ಯಕ್ತವಾಗಿದೆ.