Tag: punjab

  • ಬಾಲಕಿಯನ್ನು ಕಚ್ಚಿದ್ದ ನಾಯಿಗೆ ಪಾಕಿಸ್ತಾನದಲ್ಲಿ ಗಲ್ಲುಶಿಕ್ಷೆ

    ಬಾಲಕಿಯನ್ನು ಕಚ್ಚಿದ್ದ ನಾಯಿಗೆ ಪಾಕಿಸ್ತಾನದಲ್ಲಿ ಗಲ್ಲುಶಿಕ್ಷೆ

    ಲಾಹೋರ್: ಭಾರತದ ಪ್ರಜೆ ಕುಲಭೂಷಣ್ ಜಾಧವ್‍ಗೆ ಗಲ್ಲು ಶಿಕ್ಷೆ ನೀಡಿದ ಪ್ರಕರಣದಲ್ಲಿ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಪಾಕಿಸ್ತಾನಕ್ಕೆ ಭಾರೀ ಮುಖಭಂಗವಾಗಿದೆ. ಈ ನಡುವೆ ನಾಯಿಯೊಂದಕ್ಕೆ ಗಲ್ಲು ಶಿಕ್ಷೆ ವಿಧಿಸುವ ಮೂಲಕ ಪಾಕಿಸ್ತಾನ ವಿಶ್ವದಾದ್ಯಂತ ಸುದ್ದಿಯಲ್ಲಿದೆ.

    ಆಗಿದ್ದು ಇಷ್ಟೇ, ಪಂಜಾಬ್ ಪ್ರಾಂತ್ಯದಲ್ಲಿ ನಾಯಿಯೊಂದು ಬಾಲಕಿಗೆ ಕಚ್ಚಿತ್ತು. ಪೊಲೀಸ್ ಠಾಣೆಯಲ್ಲಿ ಬಾಲಕಿಯ ಪೋಷಕರು ನಾಯಿಯ ವಿರುದ್ಧ ದೂರು ನೀಡಿದ್ದರು. ವಿಚಾರಣೆ ನಡೆಸಿದ ಸಹಾಯ ಪೊಲೀಸ್ ಆಯುಕ್ತ ಸಲೀಂ, ಬಾಲಕಿಯನ್ನು ನಾಯಿ ಗಾಯಗೊಳಿಸಿದ ಕಾರಣ ಅದನ್ನು ಹತ್ಯೆ ಮಾಡಲೇಬೇಕು ಎಂದು ಹೇಳಿ ಗಲ್ಲು ಶಿಕ್ಷೆಯನ್ನು ಪ್ರಕಟಿಸಿದ್ದಾರೆ.

    ನಾಯಿ ಈಗಾಗಲೇ ಒಂದು ವಾರಗಳ ಕಾಲ ಜೈಲುಶಿಕ್ಷೆಯನ್ನು ಅನುಭವಿಸಿದೆ. ಈಗ ಸಹಾಯಕ ಕಮೀಷನರ್ ಅವರ ತೀರ್ಪನ್ನು ಪ್ರಶ್ನಿಸಿ, ಹೆಚ್ಚುವರಿ ಕಮೀಷನರ್ ಅವರನ್ನು ಭೇಟಿಯಾಗಲಿದ್ದೇನೆ ಎಂದು ನಾಯಿ ಮಾಲೀಕ ಹೇಳಿದ್ದಾರೆ ಎಂದು ಜಿಯೋ ಟಿವಿ ಸುದ್ದಿ ಪ್ರಸಾರ ಮಾಡಿದೆ.

    ಗಲ್ಲು ಶಿಕ್ಷೆಯಿಂದ ನನ್ನ ಮುದ್ದಿನ ನಾಯಿಯನ್ನು ಪಾರು ಮಾಡಲು ನಾನು ಎಲ್ಲ ಕೋರ್ಟ್ ಗಳ ಮೆಟ್ಟಿಲೇರಲು ಸಿದ್ಧನಿದ್ದೇನೆ ಎಂದು ನಾಯಿಯ ಮಾಲೀಕ ಜಮೀಲ್ ತಿಳಿಸಿದ್ದಾರೆ.

    ಇದನ್ನೂ ಓದಿ: ಜಾಗತಿಕ ನ್ಯಾಯಾಲಯದಲ್ಲಿ ಪಾಕಿಸ್ತಾನಕ್ಕೆ ಕಪಾಳ ಮೋಕ್ಷವಾದ ಕಥೆಯನ್ನು ಓದಿ

  • ವಿಡಿಯೋ: ಚಲಿಸುತ್ತಿದ್ದ ಬಸ್‍ನಲ್ಲಿ ಅಗ್ನಿ ಅವಘಡ- ಮೂವರು ಸಜೀವ ದಹನ

    ವಿಡಿಯೋ: ಚಲಿಸುತ್ತಿದ್ದ ಬಸ್‍ನಲ್ಲಿ ಅಗ್ನಿ ಅವಘಡ- ಮೂವರು ಸಜೀವ ದಹನ

    ಚಂಡೀಗಢ: ಚಲಿಸುತ್ತಿದ್ದ ಎಸಿ ಬಸ್‍ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ಮೂವರು ಸಜೀವವಾಗಿ ದಹನವಾದ ಮನಕಲಕುವ ಘಟನೆ ಪಂಜಾಬ್‍ನ ಬಾಥಿಂಡಾದ 35 ಕಿ.ಮೀ ದೂರದ ರಾಂಪುರ್ ಪುಲ್‍ನಲ್ಲಿ ಶನಿವಾರ ಸಂಜೆ ನಡೆದಿದೆ.

    ರೈಯಾ ಸಾರಿಗೆ ಕಂಪೆನಿ(ಆರ್‍ಟಿಸಿ) ಎಂಬ ಖಾಸಗಿ ಕಂಪೆನಿಗೆ ಸೇರಿದ ಬಸ್ ಇದಾಗಿದ್ದು, ಬಾಥಿಂಡಾದಿಂದ ಲೂದಿಯಾನದ ಕಡೆ ಚಲಿಸುತ್ತಿದ್ದ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ. ಘಟನೆಯಲ್ಲಿ 23 ಮಂದಿಗೆ ಗಾಯಗಳಾಗಿವೆ.

    ಮೊದಲು ಬಸ್ ನ ಹಿಂಬದಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕೂಡಲೇ ಪ್ರಯಾಣಿಕರು ಬಸ್ ನಿಂದ ಹೊರಗಿಳಿದಿದ್ದಾರೆ. ಆದ್ರೆ ಈ ವೇಳೆಗಾಗಲೇ ಬೆಂಕಿ ಬಸ್ಸನ್ನು ಸಂಪೂರ್ಣವಾಗಿ ಆವರಿಸಿಕೊಂಡಿದ್ದು, ಮೂವರು ಸಜೀವ ದಹನವಾಗಿದ್ದಾರೆ. ಮೃತರ ಬಗ್ಗೆ ಇನ್ನಷ್ಟೇ ತಿಳಿದುಬರಬೇಕಿದೆ. ಕೂಡಲೇ ಮಾಹಿತಿ ತಿಳಿದ ಅಗ್ನಿಶಾಮಕ ದಳದವರು ಸ್ಥಳಕ್ಕೆ ದೌಡಾಯಿಸಿದ್ದು, ಸುಮಾರು ಎರಡು ಗಂಡೆಗಳ ಕಾಲ ಬೆಂಕಿ ನಂದಿಸಲು ಹರಸಾಹಸಪಟ್ಟರು.

    ಘಟನೆಯಲ್ಲಿ ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇನ್ನು ಬಸ್ ನಲ್ಲಿ ಎಷ್ಟು ಜನ ಪ್ರಯಾಣಿಸುತ್ತಿದ್ದರು ಹಾಗೂ ಬಸ್ ನಲ್ಲಿ ಬೆಂಕಿ ಕಾಣಿಸಿಕೊಳ್ಳಲು ಕಾರಣವೇನೆಂದು ನಿಖರವಾಗಿ ತಿಳಿದುಬಂದಿಲ್ಲ. ಬಸ್ ನಲ್ಲಿ ಬೆಂಕಿ ಕಾಣಿಸಿಕೊಂಡ ತಕ್ಷಣವೇ ಚಾಲಕ ಬಸ್ ನಿಂದ ಹಾರಿದ್ದು, ಸ್ಥಳದಲ್ಲೇ ಸಾವನಪ್ಪಿದ್ದಾರೆ.

    ಬಸ್ ಚಲಿಸುತ್ತಿದ್ದಂತೆಯೇ ಹಿಂಬದಿಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ನಂತರವೂ 300 ಮೀಟರ್ ವರೆಗೆ ಬಸ್ ಚಲಿಸುತ್ತಲೇ ಇತ್ತು ಅಂತಾ ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ.

  • ಸಚಿವನಾದ್ರೂ ನಾನು ಕಾಮಿಡಿ ಶೋ ಬಿಡಲ್ಲ: ಸಿಧು

    ಸಚಿವನಾದ್ರೂ ನಾನು ಕಾಮಿಡಿ ಶೋ ಬಿಡಲ್ಲ: ಸಿಧು

    ಚಂಡೀಗಢ: ಸಚಿವನಾದ್ರೂ ನಾನು ಟಿವಿಯಲ್ಲಿ ಮಾಡ್ತಿರೋ ಕಾಮಿಡಿ ಶೋ ಬಿಡಲ್ಲ ಎಂದು ಮಾಜಿ ಕ್ರಿಕೆಟಿಗ ಹಾಗೂ ಪಂಜಾಬ್‍ನ ನೂತನ ಸಚಿವ ನವಜೋತ್ ಸಿಂಗ್ ಸಿಧು ಹೇಳಿದ್ದಾರೆ.

    ನಿನ್ನೆಯಷ್ಟೇ ಸಿಧು ಪಂಜಾಬ್‍ನ ನೂತನ ಸಚಿವರಾಗಿ ಅಧಿಕಾರ ಸ್ವೀಕರಿಸಿದ್ದರು. ಈ ಹಿಂದೆ ಬಿಜೆಪಿಯಲ್ಲಿದ್ದ ಸಿಧು ಅವರು ಕಳೆದ ವಿಧಾನಸಭೆ ಚುನಾವಣೆಗೂ ಮುನ್ನ ಕಾಂಗ್ರೆಸ್ ಕೈ ಹಿಡಿದಿದ್ದರು. ಜೊತೆಗೆ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು.

    ಆದರೆ ಈ ಎಲ್ಲ ಕೆಲಸಗಳ ನಡುವೆ ಸಿಧು ಅವರು ದಿ ಕಪಿಲ್ ಶರ್ಮಾ ಶೋನಲ್ಲೂ ಭಾವಹಿಸುತ್ತಿದ್ದರು. ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಒಂದು ದಿನದ ಬಳಿಕ ಮಾತನಾಡಿದ ಅವರು, ನಾನು ಬೆಳಗ್ಗೆ ಸಚಿವನಾಗಿ ಕೆಲಸ ಮಾಡುತ್ತೇನೆ. ರಾತ್ರಿ ಕಾಮಿಡಿ ಶೋ ಶೂಟಿಂಗ್‍ನಲ್ಲಿ ಭಾಗಿಯಾಗುತ್ತೇನೆ. ಯಾವುದೇ ಕಾರಣಕ್ಕೂ ಕೆಲಸದ ವಿಚಾರದಲ್ಲಿ ರಾಜಿ ಮಾಡಿಕೊಳ್ಳಲ್ಲ ಎಂದು ಹೇಳಿದ್ದಾರೆ. ಇದೊಂದು ಕಷ್ಟದ ಕೆಲಸ ಎನ್ನುವುದು ಗೊತ್ತು. ಆದರೂ ನಾನು ಕಾಮಿಡಿ ಶೋ ಬಿಡಲ್ಲ. ಪಂಜಾಬಿಗರ ಸಂಪೂರ್ಣ ಸೇವೆಗೂ ನಾನು ಸಿದ್ಧ. ಇದುವೇ ನನ್ನ ಪ್ರಮುಖ ಕೆಲಸ ಎಂದು ಹೇಳಿದರು.

    ಇದೇ ವೇಳೆ ನನಗೆ ಸಿಕ್ಕಿರುವ ಸಚಿವ ಸ್ಥಾನದ ಬಗ್ಗೆ ನನಗೆ ಯಾವುದೇ ಬೇಸರವಿಲ್ಲ ಎಂದೂ ಸಿಧು ಸ್ಪಷ್ಟಪಡಿಸಿದ್ದಾರೆ. ಈ ಹಿಂದೆ ಸಿಧು ಅವರನ್ನು ಪಂಜಾಬ್ ಡಿಸಿಎಂ ಮಾಡುತ್ತಾರೆ ಎಂಬ ವದಂತಿ ಹರಡಿತ್ತು. ಆದರೆ ಸಿಧುಗೆ ಪ್ರವಾಸೋದ್ಯಮ ಮತ್ತು ಸಾಂಸ್ಕೃತಿಕ ಸಚಿವಾಲಯವನ್ನು ಮಾತ್ರ ನೀಡಿದ್ದಾರೆ. ಇದರಿಂದ ಅವರು ಅಸಮಾಧಾನಗೊಂಡಿದ್ದಾರೆ ಎನ್ನಲಾಗಿತ್ತು. ಆದರೆ ಈ ಎಲ್ಲಾ ವಿಚಾರಗಳನ್ನು ಸಿಧು ಅವರು ಅಲ್ಲಗಳೆದಿದ್ದಾರೆ. ನನಗೆ ಯಾವುದೇ ಸಿಟ್ಟಿಲ್ಲ. ನನಗೆ ಕೊಟ್ಟಿರುವ ಜವಾಬ್ದಾರಿಯನ್ನು ಸಿಪಾಯಿಯಂತೆ ನಿರ್ವಹಿಸುತ್ತೇನೆ ಎಂದು ಸಿಧು ಹೇಳಿದರು.

  • ಪಂಜಾಬ್‍ನಲ್ಲಿಂದು ಅಮರಿಂದರ್ ಅಧಿಕಾರ ಗ್ರಹಣ – ಗೋವಾದಲ್ಲಿ ಪರಿಕ್ಕರ್‍ಗೆ ಮತ ಪರೀಕ್ಷೆ

    ಪಂಜಾಬ್‍ನಲ್ಲಿಂದು ಅಮರಿಂದರ್ ಅಧಿಕಾರ ಗ್ರಹಣ – ಗೋವಾದಲ್ಲಿ ಪರಿಕ್ಕರ್‍ಗೆ ಮತ ಪರೀಕ್ಷೆ

    – ಉತ್ತರಪ್ರದೇಶ ಸಿಎಂ ಆಯ್ಕೆ ಇನ್ನೂ ವಿಳಂಬ

    ನವದೆಹಲಿ: 10 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಪಂಜಾಬ್‍ನಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದೆ. ಮುಳುಗಿ ಹೋಗುತ್ತಿರುವ ಹಡಗಿಗೆ ಆಸರೆಯಂತಿರುವ ಪಂಜಾಬ್‍ನಲ್ಲಿ ನೂತನ ಮುಖ್ಯಮಂತ್ರಿಯಾಗಿ ಅಮರಿಂದರ್ ಸಿಂಗ್ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

    ಪಂಚರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಪಂಜಾಬ್‍ನಲ್ಲಿ ಮಾತ್ರ ಕಾಂಗ್ರೆಸ್ ಸ್ಪಷ್ಟ ಬಹುಮತ ಹೊಂದಿದೆ. ರಾಜಭವನದಲ್ಲಿ ಬೆಳಗ್ಗೆ 10 ಗಂಟೆಗೆ ನಡೆಯಲಿರುವ ಸಮಾರಂಭದಲ್ಲಿ ರಾಜ್ಯಪಾಲ ವಿಪಿ ಬಡ್ನೋರ್ ಪ್ರಮಾಣವಚನ ಬೋಧಿಸಲಿದ್ದಾರೆ. ನವಜೋತ್ ಸಿಂಗ್ ಸಿಧು, ಮನ್‍ಪ್ರೀತ್ ಸಿಂಗ್ ಬಾದಲ್ ಸೇರಿ ಒಟ್ಟು 9 ಮಂದಿ ಸಚಿವರಾಗಿ ಪ್ರತಿಜ್ಞಾವಿಧಿ ಸ್ವೀಕರಿಸಲಿದ್ದಾರೆ. 117 ಸದಸ್ಯ ಬಲದ ವಿಧಾನಸಭೆಯಲ್ಲಿ ಅತೀ ದೊಡ್ಡ ಪಕ್ಷವಾಗಿರುವ ಕಾಂಗ್ರೆಸ್ 77 ಶಾಸಕರನ್ನು ಹೊಂದಿದೆ. ಆಮ್ ಆದ್ಮಿ ಪಾರ್ಟಿ 20, ಶಿರೋಮಣಿ ಅಕಾಲಿದಳ ಮತ್ತು ಬಿಜೆಪಿ ಮೈತ್ರಿಕೂಟ 15 ಶಾಸಕರನ್ನು ಹೊಂದಿದೆ.

    ಮಂಗಳವಾರವಷ್ಟೇ ಗೋವಾದಲ್ಲಿ ಅಸ್ತಿತ್ವಕ್ಕೆ ಬಂದಿರುವ ಬಿಜೆಪಿ ನೇತೃತ್ವದ ಮೈತ್ರಿ ಸರ್ಕಾರದ ಹಣೆಬರಹ ಇವತ್ತು ನಿರ್ಧಾರವಾಗಲಿದೆ. ವಿಧಾನಸಭೆಯಲ್ಲಿ ನೂತನ ಸಿಎಂ ಮನೋಹರ್ ಪರಿಕ್ಕರ್ ಇಂದು ಬಹುಮತ ಸಾಬೀತುಪಡಿಸಬೇಕಿದೆ. 40 ಸದಸ್ಯ ಬಲದ ಸದನದಲ್ಲಿ ಕಾಂಗ್ರೆಸ್ 17, ಬಿಜೆಪಿ 13, ಮಹಾರಾಷ್ಟ್ರವಾದಿ ಗೋಮಂತಕ್ ಪಾರ್ಟಿ(ಎಂಜಿಪಿ), ಗೋವಾ ಫಾವರ್ಡ್(ಜಿಎಫ್‍ಪಿ) ಪಾರ್ಟಿ ತಲಾ ಮೂವರು ಶಾಸಕರನ್ನು ಹೊಂದಿದೆ. ಮೂವರು ಪಕ್ಷೇತರ ಮತ್ತು ಓರ್ವ ಎನ್‍ಸಿಪಿ ಶಾಸಕರಿದ್ದಾರೆ. ಇವರಲ್ಲಿ ಎಂಜಿಪಿ, ಜಿಎಫ್‍ಪಿ ಬಿಜೆಪಿಯೊಂದಿಗೆ ಮೈತ್ರಿ ಸರ್ಕಾರ ರಚಿಸಿಕೊಂಡಿದೆ. ಇಬ್ಬರು ಪಕ್ಷೇತರರೂ ಬೆಂಬಲ ಸೂಚಿಸಿದ್ದಾರೆ. ಅಲ್ಲಿಗೆ ಅಗತ್ಯ ಸರಳ ಬಹುಮತದ ಸಂಖ್ಯೆ 21ನ್ನು ದಾಟುವಲ್ಲಿ ಬಿಜೆಪಿ ಯಶಸ್ವಿಯಾಗಿದೆ. 8 ಮಂದಿ ಸಚಿವರಲ್ಲಿ ಎಂಜಿಪಿಯ ಇಬ್ಬರು, ಜಿಎಫ್‍ಪಿಯ ಮೂವರು ಮತ್ತು ಸ್ವತಂತ್ರ ಶಾಸಕರು ಸೇರಿದ್ದಾರೆ. ಈ ಮೂಲಕ ಯಾವುದೇ ಕಾರಣಕ್ಕೂ ಸರ್ಕಾರ ಬೀಳದಂತೆ ನೋಡಿಕೊಳ್ಳುವ ಕಸರತ್ತನ್ನು ಬಿಜೆಪಿ ಮಾಡಿಕೊಂಡಿದೆ.

    ಈ ನಡುವೆ ಅತೀ ದೊಡ್ಡ ಪಕ್ಷವಾಗಿದ್ದರೂ ಸರ್ಕಾರ ರಚನೆಗೆ ಆಹ್ವಾನ ನೀಡಿರಲಿಲ್ಲ ಎಂದು ರಾಜ್ಯಪಾಲರ ವಿರುದ್ಧ ದೂರಿದ್ದ ಕಾಂಗ್ರೆಸ್ ಸುಪ್ರೀಂಕೋರ್ಟ್ ಕದ ತಟ್ಟಿತ್ತು. ಈ ಹಿನ್ನೆಲೆಯಲ್ಲಿ ಗುರುವಾರವೇ ಬಹುಮತ ಸಾಬೀತುಪಡಿಸುವಂತೆ ನ್ಯಾಯಾಲಯ ಬಿಜೆಪಿಗೆ ಸೂಚಿಸಿತ್ತು.

    ಸೀಟು ಗಳಿಕೆಯಲ್ಲಿ ಎರಡನೇ ಸ್ಥಾನದಲ್ಲಿದ್ದರೂ ಗೋವಾ ಮತ್ತು ಮಣಿಪುರದಲ್ಲಿ ಬಿಜೆಪಿ ಹೊಂದಾಣಿಕೆ ಮಾಡಿಕೊಂಡು ಸರ್ಕಾರ ರಚನೆ ಮಾಡಿದೆ. ಆದ್ರೆ ಕಂಡುಕೇಳರಿಯದ ಜಯದ ಬಳಿಕವೂ ಉತ್ತರಪ್ರದೇಶದಲ್ಲಿ ಬಿಜೆಪಿ ಸರ್ಕಾರ ರಚನೆ ವಿಳಂಬವಾಗಿದೆ. ನಾಲ್ಕು ದಶಕಗಳ ಬಳಿಕ ಸಿಕ್ಕಿರುವ ಪ್ರಚಂಡ ಬಹುಮತದ ಹಿನ್ನೆಲೆಯಲ್ಲಿ ಸರ್ವ ಸಮುದಾಯಗಳನ್ನು ಓಲೈಸಬಲ್ಲ ಸಮರ್ಥ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಅಂತಿಮಗೊಳಿಸುವುದೇ ಪಕ್ಷಕ್ಕೆ ತಲೆನೋವಾಗಿ ಪರಿಣಮಿಸಿದೆ. ನೂತನ ಮುಖ್ಯಮಂತ್ರಿಯನ್ನು ಅಂತಿಮಗೊಳಿಸುವ ಹೊಣೆ ಹೊತ್ತಿರುವ ಕೇಂದ್ರ ಸಚಿವ ವೆಂಕಯ್ಯ ನಾಯ್ಡು, ಭೂಪೇಂದರ್ ಯಾದವ್ ಶನಿವಾರದಷ್ಟೊತ್ತಿಗೆ ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ.

    ರಾಜ್ಯದಲ್ಲಿ ಕಟ್ಟಕಡೆಯ ಬಿಜೆಪಿ ಸಿಎಂ ಆಗಿರುವ ರಾಜನಾಥ್ ಸಿಂಗ್‍ರ ಹೆಸರು ಮುಂಚೂಣಿಯಲ್ಲಿದೆಯಾದರೂ ಅದರ ಬಗ್ಗೆ ಚರ್ಚೆಯೇ ಅಪ್ರಯೋಜಕ ಎಂದು ಮಾಧ್ಯಮಗಳಿಗೆ ತಿರುಗೇಟು ನೀಡಿದ್ದಾರೆ. ಯಾವುದೇ ಕಾರಣಕ್ಕೂ ಸಿಎಂ ಕುರಿತ ಚರ್ಚೆ ನಡೆಸದಂತೆ ಬಿಜೆಪಿ ನಾಯಕರಿಗೆ ಹೈಕಮಾಂಡ್ ಸೂಚಿಸಿದೆ. ಮೂಲಗಳ ಪ್ರಕಾರ ನಾಳೆ ಪ್ರಧಾನಿ ನರೇಂದ್ರ ಮೋದಿ ಲಕ್ನೋಗೆ ಭೇಟಿ ನೀಡುವ ಸಾಧ್ಯತೆ ಇದೆ. ಪ್ರಚಂಡ ಫಲಿತಾಂಶದ ನಂತರ ರಾಜ್ಯಕ್ಕೆ ಪ್ರಧಾನಿ ನೀಡುತ್ತಿರುವ ಮೊಟ್ಟ ಮೊದಲ ಭೇಟಿ ಇದಾಗಲಿದೆ. ಉತ್ತರಪ್ರದೇಶ ಜೊತೆಗೆ ಉತ್ತರಾಖಂಡ್‍ನಲ್ಲೂ ಅದ್ಭುತ ಬಹುಮತ ಸಿಕ್ಕಿದ್ದರೂ ಮುಖ್ಯಮಂತ್ರಿ ಯಾರೆಂಬುದು ಇನ್ನೂ ಖಾತ್ರಿಯಾಗಿಲ್ಲ.

  • ರಾಜ್ಯದಲ್ಲಿ ಯಾವಾಗ ಬೇಕಾದ್ರೂ ಚುನಾವಣೆ ಬರಬಹುದು: ಬಿಎಸ್‍ವೈ

    ರಾಜ್ಯದಲ್ಲಿ ಯಾವಾಗ ಬೇಕಾದ್ರೂ ಚುನಾವಣೆ ಬರಬಹುದು: ಬಿಎಸ್‍ವೈ

    – ದೇಶದ ಉದ್ದಗಲಕ್ಕೂ ಬಿಜೆಪಿ ಗಾಳಿ ಬೀಸುತ್ತಿದೆ

    ಬೆಂಗಳೂರು: ಅಧಿಕಾರವನ್ನು ದುರುಪಯೋಗ ಮಾಡಿಕೊಂಡು ಚುನಾವಣೆಯಲ್ಲಿ ಗೆಲ್ಲಬಹುದೆಂಬ ಭ್ರಮೆಯಲ್ಲಿದ್ದ ಮುಖ್ಯಮಂತ್ರಿಯವರಿಗೆ ಉತ್ತರಪ್ರದೇಶ ಹಾಗೂ ಉತ್ತರಾಖಂಡ್ ಜನ ಸ್ಪಷ್ಟವಾದ ಉತ್ತರ ನೀಡಿದ್ದಾರೆ ಅಂತಾ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.

    ಪಂಚ ರಾಜ್ಯ ಚುನಾವಣಾ ಫಲಿತಾಂಶದ ಹಿನ್ನೆಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉತ್ತರಪ್ರದೇಶ ಹಾಗೂ ಉತ್ತರಾಖಂಡದ ಗೆಲುವು ನಂಜನಗೂಡು ಮತ್ತು ಗುಂಡ್ಲುಪೇಟೆಯಲ್ಲಿ ನಡೆಯೋ ಉಪಚುನಾವಣೆಗೆ ದೊಡ್ಡ ಶಕ್ತಿಯನ್ನು ತಂದುಕೊಟ್ಟಂತಾಗಿದೆ. ಮುಂದೆ ಬಿಜೆಪಿ ಕರ್ನಾಟಕದಲ್ಲಿ 150ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆದ್ದು ಅಧಿಕಾರ ನಡೆಸೋದಕ್ಕೆ ಇದು ನಾಂದಿಯಾಗಿದೆ ಅಂತಾ ಹೇಳಿದ್ರು.

    ಇಡೀ ದೇಶದ ಉದ್ದಗಲಕ್ಕೂ ಭಾರತೀಯ ಜನತಾ ಪಾರ್ಟಿಯ ಗಾಳಿ ಬೀಸುತ್ತಿದೆ. ಕರ್ನಾಟಕ ರಾಜ್ಯದಲ್ಲೂ ಅದೇ ಉತ್ಸಾಹ ಇರುವಂತಹ ಈ ಸಂದರ್ಭದಲ್ಲಿ ಭ್ರಷ್ಟ ಸರ್ಕಾರವನ್ನು ಕಿತ್ತು ಹಾಕುವ ಸಲುವಾಗಿ ಯಾವಾಗ ಬೇಕಾದ್ರೂ ಚುನಾವಣೆ ಬರಬಹುದು. ಡೈರಿ ಹಗರಣವನ್ನು ಸಿಬಿಐಗೆ ವಹಿಸಿದ್ರೆ ಎಲ್ಲರ ಬಣ್ಣ ಬಯಲಾಗಲಿದೆ. ಗೋಮಾಳಗಳ ಜಮೀನನ್ನು ಕಬಳಿಸಿರುವ ಬಗ್ಗೆ ಅನೇಕ ದಾಖಲೆಗಳು ನಮ್ಮಲ್ಲಿವೆ. ಅದೇ ರೀತಿ ಬಿಬಿಎಂಪಿಯಲ್ಲಿ ನಡೆದ ಅನೇಕ ಹಗರಣಗಳ ಬಗ್ಗೆ ನಮ್ಮಲ್ಲಿ ಮಾಹಿತಿಯಿದೆ. ಒಟ್ಟಿನಲ್ಲಿ ಕಳೆದ 4 ವರ್ಷಗಳಲ್ಲಿ 90 ಸಾವಿರ ಕೋಟಿಗೂ ಹೆಚ್ಚು ಹಣ ಸಾಲ ಮಾಡಿರುವುದೇ ಸಿದ್ದರಾಮಯ್ಯನವರ ದೊಡ್ಡ ಸಾಧನೆ. ಇವೆಲ್ಲವನ್ನೂ ಕೂಡ ಬಯಲು ಮಾಡ್ತೇವೆ. ನಾಳೆ ಈ ಎರಡೂ ಉಪಚುನಾವಣೆಯಲ್ಲಿ ಸಿದ್ದರಾಮಯ್ಯ ಸರ್ಕಾರದ ವೈಫಲ್ಯ ಹಾಗೂ ಭ್ರಷ್ಟಾಚಾರ ಹಗರಣಗಳ ವಿರುದ್ಧ ನಮ್ಮ ಹೋರಾಟವಿರುತ್ತದೆ ಅಂತಾ ಅಂದ್ರು.

    ಉತ್ತರಪ್ರದೇಶ ಹಾಗೂ ಉತ್ತರಾಖಂಡ್ ಎರಡೂ ರಾಜ್ಯಗಳಲ್ಲಿ ಹಗರಣಗಳನ್ನು ಬಟ್ಟ ಬಯಲು ಮಾಡಿದ ಪ್ರಧಾನಿ ನರೇಂದ್ರ ಮೋದಿಯವರಿಗೆ ಇಂದು ಯಶಸ್ಸು ಕಂಡಿದೆ. ಅದಕ್ಕಿಂತ ದೊಡ್ಡ ಪ್ರಮಾಣದಲ್ಲಿ ಹಗರಣಗಳ ಸುರಿಮಾಲೆಯೆ ಸುತ್ತಿಕೊಂಡಿರುವುದು ಈ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ. ಹೀಗಾಗಿ ಹೈಕಮಾಂಡ್ ಇವರೆಲ್ಲರನ್ನ ತುರ್ತಾಗೆ ದೆಹಲಿಗೆ ಬರಮಾಡಿಕೊಳ್ಳುವ ಪ್ರಯತ್ನ ನಡೆದಿದೆ. ಕಾಂಗ್ರೆಸ್ ಗೆ ದೊಡ್ಡ ಮಟ್ಟದ ಹಿನ್ನಡೆಯಾಗುತ್ತದೆ ಎಂಬುವುದು ಪಕ್ಷದ ಮುಖಂಡರಿಗೆ ಸ್ಪಷ್ಟವಾಗಿದೆ. ಬಹುಶಃ ಉತ್ತರಪ್ರದೇಶದಲ್ಲಿ ಯಾವ ರೀತಿ ಫಲಿತಾಂಶ ಬಂತೋ, ಅದೇ ರೀತಿ ಕರ್ನಾಟಕದಲ್ಲೂ ಗೆಲುವು ಸಾಧಿಸಲಿದ್ದೇವೆ. ಇದಕ್ಕೆ ಜನರ ಆಶೀರ್ವಾದ, ದೈವ ಬಲ, ಜನಬಲವಿದೆ. ಹಾಗೆಯೇ ನಾವು ಮಾಡಿರುವ ಸಾಧನೆಯಿದೆ ಅಂತಾ ಹೇಳಿದ್ದಾರೆ.

    ಸಿಎಂ ವಿರುದ್ಧ ಚಾಟಿ: ಎಲ್ಲ ವರ್ಗದ ಜನರ ಬೆಂಬಲದೊಂದಿಗೆ ನಾವು ಇಂದು ಚುನಾವಣೆಯಲ್ಲಿ ಗೆದಿದ್ದೇವೆ. ಹಾಗಾದ್ರೆ ಅಲ್ಪ ಸಂಖ್ಯಾತ ಮುಸ್ಲಿಂ ಮಂದಿಗಳು ಇಷ್ಟು ದೊಡ್ಡ ಪ್ರಮಾಣದಲ್ಲಿ ಸೀಟುಗಳನ್ನು ಕೊಟ್ಟಿದ್ದೀರಲ್ವಾ ಯಾಕೆ ಗೆಲ್ಲಲು ಸಾಧ್ಯವಾಗಿಲ್ಲ. ಜಾತಿ ಎಂಬ ವಿಷ ಬೀಜ ಬಿತ್ತು ರಾಜಕಾರಣ ಮಾಡಿರೋದಕ್ಕೆ ಜನ ತಕ್ಕ ಉತ್ತರ ಕೊಟ್ಟಿದ್ದಾರೆ ಅಂತಾ ಸಿಎಂ ವಿರುದ್ಧ ಬಿಎಸ್‍ವೈ ಚಾಟಿ ಬೀಸಿದ್ರು.

    ಉತ್ತರಪ್ರದೇಶದಲ್ಲಿ ಜನರ ಭಾವನೆಯ ಜೊತೆ ಬಿಜೆಪಿ ಆಟ ಆಡಿದೆ. ಹಿಂದೂಗಳ ವಿಚಾರವನ್ನು ಪ್ರಸ್ತಾಪ ಮಾಡಿ ಮತ ಗಳಿಸಿದೆ. ಕರ್ನಾಟಕದಲ್ಲಿ ಇದೇ ರೀತಿ ಆಗಲು ಸಾಧ್ಯವೇ ಇಲ್ಲ. ಅವರು ಗೆದ್ದೇ ಗೆಲ್ತೀವಿ ಅನ್ನೋ ಭ್ರಮೆಯಲ್ಲಿದ್ದಾರೆ ಅಂತಾ ಮುಖ್ಯಮಮಂತ್ರಿ ಸಿದ್ದರಾಮಯ್ಯ ಹೇಳಿದ್ದರು.

    ಇದನ್ನೂ ಓದಿ: ಮೋದಿ ಅಲೆ ಉತ್ತರ ಪ್ರದೇಶಕ್ಕೆ ಮಾತ್ರ ಸೀಮಿತವೇ: ಸಿಎಂ ಪ್ರಶ್ನೆ

  • ಪಂಜಾಬ್‍ನಲ್ಲಿ ಶಿರೋಮಣಿ ಮೈತ್ರಿಕೂಟಕಕ್ಕೆ ಸೋಲು: ಕಾಂಗ್ರೆಸ್ ಜಯಭೇರಿ

    ಪಂಜಾಬ್‍ನಲ್ಲಿ ಶಿರೋಮಣಿ ಮೈತ್ರಿಕೂಟಕಕ್ಕೆ ಸೋಲು: ಕಾಂಗ್ರೆಸ್ ಜಯಭೇರಿ

    ನವದೆಹಲಿ: ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಎಸ್‍ಪಿ ಮೈತ್ರಿಕೂಟ ಹೀನಾಯವಾಗಿ ಸೋತರೂ ಪಂಜಾಬ್‍ನಲ್ಲಿ ಕಾಂಗ್ರೆಸ್ ಅಧಿಕಾರದ ಗದ್ದುಗೆ ಏರುವುದು ನಿಚ್ಚಳವಾಗಿದೆ.

    ಆಡಳಿತರೂಢ ಶಿರೋಮಣಿ ಅಕಾಲಿದಳ ಬಿಜೆಪಿ ಮೈತ್ರಿಕೂಟವನ್ನು ಸೋಲಿಸುವ ಮೂಲಕ ಕಾಂಗ್ರೆಸ್ ಸ್ಪಷ್ಟ ಬಹುಮತ ಪಡೆಯುತ್ತ ಹೆಜ್ಜೆ ಇರಿಸಿದೆ. 117 ಕ್ಷೇತ್ರಗಳ ಪೈಕಿ 67 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿದೆ. ಶಿರೋಮಣಿ ಅಕಾಲಿ ದಳ 25, ಆಪ್ 22, ಇತರರು 2 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ.

    ಬಹುಮತಕ್ಕೆ 59 ಸ್ಥಾನಗಳು ಅಗತ್ಯವಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಏರುವುದು ಪಕ್ಕಾ ಆಗಿದೆ.

    2012ರಲ್ಲಿ ಶಿರೋಮಣಿ ಅಕಾಲಿದಳ 56,ಕಾಂಗ್ರೆಸ್ 46, ಬಿಜೆಪಿ 12, ಇತರರು 12 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು.

  • ಫಲಿತಾಂಶಕ್ಕೂ ಮೊದಲೇ ಕುರ್ಚಿಗಾಗಿ ಸರ್ಕಸ್- ಯಾವ ರಾಜ್ಯದಿಂದ ಯಾರೆಲ್ಲಾ ಸಂಭವನೀಯ ಸಿಎಂ ಅಭ್ಯರ್ಥಿಗಳು?

    ಫಲಿತಾಂಶಕ್ಕೂ ಮೊದಲೇ ಕುರ್ಚಿಗಾಗಿ ಸರ್ಕಸ್- ಯಾವ ರಾಜ್ಯದಿಂದ ಯಾರೆಲ್ಲಾ ಸಂಭವನೀಯ ಸಿಎಂ ಅಭ್ಯರ್ಥಿಗಳು?

    ನವದೆಹಲಿ: ಫಲಿತಾಂಶಕ್ಕೂ ಮೊದಲೇ ಸಿಎಂ ಸ್ಥಾನಕ್ಕಾಗಿ ಉತ್ತರ ಪ್ರದೇಶದಲ್ಲಿ ಭಾರೀ ಪೈಪೋಟಿ ನಡೀತಿದೆ. ಜೊತೆಗೆ ಉಳಿದ ರಾಜ್ಯಗಳಲ್ಲಿ ಯಾರೆಲ್ಲಾ ಸಿಎಂ ಸಂಭವನೀಯ ಅಭ್ಯರ್ಥಿಗಳಿದ್ದಾರೆ ಅನ್ನೋದನ್ನ ನೋಡೋದಾದ್ರೆ;

    1. ಉತ್ತರಪ್ರದೇಶ
    * ಯೋಗಿ ಆದಿತ್ಯನಾಥ್: ಪೂರ್ವಾಂಚಲ ಭಾಗದ ಪ್ರಬಲ ಮುಖಂಡರಾಗಿರೋ ಇವರಿಗೆ ಆರ್‍ಎಸ್‍ಎಸ್ ಆರ್ಶೀವಾದವಿದೆ. ಸನ್ಯಾಸಿ ಹಾಗೂ ಹೈಕಮಾಂಡ್‍ಗೆ ತುಂಬಾ ಹತ್ತಿರ.

    * ಕೇಶವ ಮಯೂರ: ಹಿಂದುಳಿದ ವರ್ಗಗಳ ಮುಖಂಡ, ಕುರ್ಮಿ ಜನಾಂಗದ ನಾಯಕ. ವಿಹೆಚ್‍ಪಿ ಹಿನ್ನೆಲೆ ಇದ್ದು, ಕೇಂದ್ರ ಸಚಿವರಾಗಿದ್ದಾರೆ. ಪೂರ್ವಾಂಚಲ ಭಾಗದ ಮುಖಂಡರಾಗಿರೀ ಇವರು ಅನುಭವಿ ರಾಜಕಾರಣಿ.

    * ಡಾ.ಮಹೇಶ್ ಶರ್ಮಾ: ಆರ್‍ಎಸ್‍ಎಸ್‍ಗೆ ಹತ್ತಿರ. ಉತ್ತಮ ಶೈಕ್ಷಣಿಕ ಹಿನ್ನೆಲೆ ಹೊಂದಿದ್ದಾರೆ. ಹಾಲಿ ಕೇಂದ್ರ ಸಚಿವರಾಗಿದ್ದಾರೆ.

    * ಕಲ್‍ರಾಜ್ ಮಿಶ್ರಾ: ಬ್ರಾಹ್ಮಣ ಮುಖಂಡ, ಉತ್ತಮ ರಾಜಕಾರಣಿ. ಇವರಿಗೆ ರಾಷ್ಟ್ರ ರಾಜಕಾರಣದ ಅನುಭವವಿದೆ.

    2. ಪಂಜಾಬ್
    ಕಾಂಗ್ರೆಸ್‍ನಿಂದ ಅಮರೀಂದರ್ ಸಿಂಗ್ ಸಿಎಂ ರೇಸ್‍ನಲ್ಲಿದ್ದರೆ, ನವಜೋತ್ ಸಿಂಗ್ ಸಿಧು ಸಂಭವನೀಯ ಡಿಸಿಎಂ ಅಭ್ಯರ್ಥಿಯಾಗಿದ್ದಾರೆ. ಬಿಜೆಪಿ, ಅಕಾಲಿದಳದಿಂದ ಪ್ರಕಾಶ್ ಸಿಂಗ್ ಬಾದಲ್ ಇದ್ದಾರೆ.

    3. ಗೋವಾ
    ಗೋವಾದಲ್ಲಿ ಸದ್ಯಕ್ಕೆ ಬಿಜೆಪಿ ಆಡಳಿತವಿದೆ. ಮತ್ತೊಂದು ಬಾರಿಗೆ ಅಧಿಕಾರಕ್ಕೆ ಬರುತ್ತೆ ಅಂತ ಚುನವಣೋತ್ತರ ಸಮೀಕ್ಷೆ ಹೇಳ್ತಿದೆ. ಹಾಗಾದ್ರೆ, ಗೋವಾಕ್ಕೆ ಯಾರು ಸಿಎಂ..? ನಾಯಕರ ಹಿನ್ನೆಲೆ ಏನು ಅಂತ ನೋಡೋದಾದ್ರೆ;
    * ಬಿಜೆಪಿಯಿಂದ ಮನೋಹರ್ ಪರಿಕ್ಕರ್ (ಅನುಭವಿ ರಾಜಕಾರಣಿ, ಕೇಂದ್ರ ಸಚಿವ)
    * ಬಿಜೆಪಿಯಿಂದ ಲಕ್ಷ್ಮಿಕಾಂತ್ ಪರ್ಸೇಕರ್ (ಹಾಲಿ ಸಿಎಂ, ಗೆಲುವಿನ ರೂವಾರಿ)
    * ಬಿಜೆಪಿಯಿಂದ ಫ್ರಾನ್ಸಿಸ್ ಡಿಸೋಜಾ (ಕ್ರಿಶ್ಚಿಯನ್ ಲೀಡರ್)
    * ಲೂಸಿನೋ ಫೆಲೈರೋ ( ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ )

    4. ಉತ್ತರಾಖಂಡ್
    ಉತ್ತರಾಖಂಡ್‍ನಲ್ಲಿ ಕಾಂಗ್ರೆಸ್‍ನ ಹರೀಶ್ ರಾವತ್ ವಿರೋಧಿ ಅಲೆ ಇದೆ. ಹೀಗಾಗಿ, ನಾವು ಪಟ್ಟಕ್ಕೇರ್ತೇವೆ ಅನ್ನೋದು ಬಿಜೆಪಿ ನಾಯಕರ ನಿರೀಕ್ಷೆ. ಹಾಗಾಗಿ, ಉತ್ತರಾಖಂಡ್‍ಗೆ ಯಾರು ಸಿಎಂ..? ನಾಯಕರ ಹಿನ್ನೆಲೆ ಏನು..?
    * ಬಿಜೆಪಿಗೆ ಸ್ಪಷ್ಟ ಬಹುಮತ ಸಾಧ್ಯತೆ
    * ಬಿಜೆಪಿಯಿಂದ ಬಿಸಿ ಖಂಡೂರಿ ರೇಸ್‍ನಲ್ಲಿದ್ದಾರೆ. 2007 ರಿಂದ 2009, 2011 ರಿಂದ 2012 ರವರೆಗೆ ಸಿಎಂ ಆಗಿದ್ದ ಅನುಭವ ಇವರಿಗಿದೆ.

    5. ಮಣಿಪುರ
    ಪುಟ್ಟರಾಜ್ಯ ಮಣಿಪುರದಲ್ಲಿ ಸತತವಾಗಿ ಹ್ಯಾಟ್ರಿಕ್ ಸಿಎಂ ಆಗಿದ್ದ ಕಾಂಗ್ರೆಸ್‍ನ ಒಕರಾಮ್ ಇಬೋಬಿ ಸಿಂಗ್‍ಗೆ ಬಿಜೆಪಿ ಪ್ರಬಲ ಪೈಪೋಟಿ ನೀಡಿದೆ. ಮಣಿಪುರದಲ್ಲಿ ಬಿಜೆಪಿ ಸಿಎಂ ಕ್ಯಾಂಡಿಡೇಟ್ ಯಾರು? ಅವರ ಹಿನ್ನೆಲೆ ಏನು ಅನ್ನೋದನ್ನ ನೋಡೋದಾದ್ರೆ;

    ಚವೋಬ ಸಿಂಗ್
    * ಚುನಾವಣಾ ನಿರ್ವಹಣಾ ಸಮಿತಿ ಮುಖ್ಯಸ್ಥ
    * ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ
    * ಪಕ್ಷ ಬೆಳವಣಿಗೆ ರೂವಾರಿ
    ಇವರ ಜೊತೆಗೆ ಹಾಲಿ ಬಿಜೆಪಿ ರಾಜ್ಯಾಧ್ಯಕ್ಷ ಬಾಬಾನಂದ ಸಿಂಗ್ ಹೆಸರು ಕೇಳಿ ಬಂದಿದೆ. ಇವರು ಪ್ರಧಾನಿ ಮೋದಿಯ ಕಟ್ಟಾ ಆರಾಧಕ.

  • ಪಂಚರಾಜ್ಯಗಳ ಮಹಾ ಫಲಿತಾಂಶಕ್ಕೆ ಕ್ಷಣಗಣನೆ

    ಪಂಚರಾಜ್ಯಗಳ ಮಹಾ ಫಲಿತಾಂಶಕ್ಕೆ ಕ್ಷಣಗಣನೆ

    ನವದೆಹಲಿ: ಪಂಚರಾಜ್ಯಗಳ ವಿಧಾನಸಭಾ ಮಹಾ ಫಲಿತಾಂಶಕ್ಕೆ 2 ಗಂಟೆಯಷ್ಟೇ ಬಾಕಿ ಇದೆ. ಕೆಲವೇ ಕ್ಷಣಗಳಲ್ಲಿ ಮತದಾನ ಎಣಿಕೆ ಕಾರ್ಯ ಶುರುವಾಗಲಿದೆ.

    ಸಾವಿರಾರು ಅಭ್ಯರ್ಥಿಗಳ ಎದೆಯಲ್ಲಿ ಢವ ಢವ ಶುರುವಾಗಿದೆ. ಚುನಾವಣೋತ್ತರ ಸಮೀಕ್ಷೆಗಳ ಪ್ರಕಾರ ಮೊದಲ ಬಾರಿಗೆ ಉತ್ತರ ಪ್ರದೇಶ, ಮಣಿಪುರದಲ್ಲಿ ಬಿಜೆಪಿ ಬಹುಮತ ಪಡೆಯುತ್ತಾ 4 ದಶಕದ ಬಳಿಕ ಮತ್ತೆ ಉತ್ತರಪ್ರದೇಶದಲ್ಲಿ ಬಿಜೆಪಿ ಪ್ರಚಂಡ ಜಯ ಸಾಧಿಸುತ್ತಾ? ಎಂಬುದಕ್ಕೆ ಇಂದು ಉತ್ತರ ಸಿಗಲಿದೆ.

    ಹಾಗೆ ಪಂಜಾಬ್‍ನಲ್ಲಿ 14 ಬಾರಿ ಕಾಂಗ್ರೆಸ್, 8 ಬಾರಿ ಅಕಾಲಿದಳದ ಆಡಳಿತ ಅಂತ್ಯವಾಗುತ್ತಾ? 3ನೇ ಬಾರಿಗೆ ಗೋವಾ, ಉತ್ತರಾಖಂಡ್‍ನಲ್ಲಿ ಮತ್ತೆ ಕಮಲ ಅರಳುತ್ತಾ ಎಂಬ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಗಲಿದೆ.

  • ಪಂಚ ರಾಜ್ಯಗಳ ಚುನಾವಣೆ: ಯಾವ ರಾಜ್ಯದಲ್ಲಿ ಎಷ್ಟು ಹಣ, ಮದ್ಯ, ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ?

    ಪಂಚ ರಾಜ್ಯಗಳ ಚುನಾವಣೆ: ಯಾವ ರಾಜ್ಯದಲ್ಲಿ ಎಷ್ಟು ಹಣ, ಮದ್ಯ, ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ?

    ದು ರಾಜ್ಯಗಳಲ್ಲಿ ಚುನಾವಣೆ ಮುಕ್ತಾಯವಾಗಿದ್ದು, ಮಾರ್ಚ್ 11ಕ್ಕೆ ಫಲಿತಾಂಶ ಪ್ರಕಟವಾಗಲಿದೆ. ಹೀಗಾಗಿ ಇಲ್ಲಿ ಚುನಾವಣೆಯ ಸಂದರ್ಭದಲ್ಲಿ ವಶಪಡಿಸಿಕೊಂಡಿರುವ ಹಣ, ಮದ್ಯ, ಡ್ರಗ್ಸ್ ಪ್ರಮಾಣದ ಮಾಹಿತಿಯನ್ನು ನೀಡಲಾಗಿದೆ.

    ಹಣ: 2017ರ ಚುನಾವಣೆ ಸಂದರ್ಭದಲ್ಲಿ ದಾಖಲೆ ಇಲ್ಲದ ಒಟ್ಟು 184.85 ಕೋಟಿ ರೂಪಾಯಿ ನಗದು ಹಣವನ್ನು ವಶಪಡಿಸಿಕೊಳ್ಳಲಾಗಿದೆ. 2012 ರ ಚುನಾವಣೆ ಸಮಯದಲ್ಲಿ 50.78 ಕೋಟಿ ರೂ. ಹಣವನ್ನು ವಶಕ್ಕೆ ಪಡೆಯಲಾಗಿತ್ತು.

    ಮದ್ಯ: ಚುನಾವಣೆಯ ಹೊಸ್ತಿಲಲ್ಲಿ ಎಲ್ಲ ಐದು ರಾಜ್ಯಗಳಿಂದ 83.21 ಕೋಟಿ ರೂ. ಮೌಲ್ಯದ ಮದ್ಯವನ್ನು ವಶ ಪಡೆಯಲಾಗಿದೆ. ಇನ್ನು ಕಳೆದ ವಿಧಾನಸಭಾ ಚುನಾವಣೆಯಲ್ಲಿ 2.82 ಕೋಟಿ ರೂ. ಮೌಲ್ಯದ ಮದ್ಯ ಅಧಿಕಾರಿಗಳು ವಶ ಪಡೆದಿದ್ದರು.

    ಡ್ರಗ್ಸ್: ಐದು ರಾಜ್ಯಗಳಲ್ಲಿ 31.78 ಕೋಟಿ ರೂ. ಮೌಲ್ಯದ ಡ್ರಗ್ಸ್ ಪತ್ತೆಯಾಗಿದೆ. 2012 ರ ಚುನಾವಣೆಯ ವೇಳೆಯಲ್ಲಿ 54.0 ಕೋಟಿ ಮೌಲ್ಯದ ಡ್ರಗ್ಸ್ ಪತ್ತೆಯಾಗಿತ್ತು.

    ರಾಜ್ಯಗಳಲ್ಲಿ ಸಿಕ್ಕಿರುವ, ಹಣ, ಮದ್ಯ, ಡ್ರಗ್ಸ್ ವಿವರ:

    ಉತ್ತರಪ್ರದೇಶ:
    ಹಣ: 2017 ರ ಚುನಾವಣೆಯಲ್ಲಿ 119.03 ಕೋಟಿ ರೂ. ವಶಕ್ಕೆ ಪಡೆದಿದ್ರೆ, 2012 ರಲ್ಲಿ 36.29 ಕೋಟಿ ರೂ. ವಶಕ್ಕೆ ಪಡೆಯಲಾಗಿತ್ತು.

    ಮದ್ಯ: 2017 ರ ಚುನಾವಣೆಯಲ್ಲಿ 64.66 ಕೋಟಿ ಮೌಲ್ಯದ ಮದ್ಯವನ್ನು ವಶಕ್ಕೆ ಪಡೆದಿದ್ರೆ. 2012 ರಲ್ಲಿ 0.07 ಕೋಟಿ ಮೌಲ್ಯದ ಮದ್ಯವನ್ನು ವಶಕ್ಕೆ ಪಡಯಲಾಗಿತ್ತು.

    ಡ್ರಗ್ಸ್: 2017 ಚುನಾವಣೆಯಲ್ಲಿ 9.60 ಕೋಟಿ ಮೌಲ್ಯದ ಡ್ರಗ್ಸ್ ವಶಕ್ಕೆ ಪಡೆಯಲಾಗಿದೆ.

    ಪಂಜಾಬ್ :

    ಹಣ: 2017 ರ ಚುನಾವಣೆಯಲ್ಲಿ 58.02 ಕೋಟಿ ರೂ. ನಗದು ವಶಕ್ಕೆ ಪಡೆಯಲಾಗಿದೆ. ಕಳೆದ 2012ರ ಚುನಾವಣೆಯಲ್ಲಿ 11.51 ಕೋಟಿ ರೂ. ನಗದನ್ನು ವಶಕ್ಕೆ ಪಡೆಯಲಾಗಿತ್ತು.

    ಮದ್ಯ: 2017 ರ ಚುನಾವಣೆಯಲ್ಲಿ 13.36 ಕೋಟಿ ರೂ. ಮೌಲ್ಯದ ಮದ್ಯವನ್ನು ವಶಕ್ಕೆ ಪಡೆಯಲಾಗಿದೆ. ಕಲೇದ 2012 ರ ಚುನಾವಣೆಯಲ್ಲಿ 2.59 ಕೋಟಿ ರೂ. ಮೌಲ್ಯದ ಮದ್ಯವನ್ನು ವಶ ಪಡೆಯಲಾಗಿತ್ತು.

    ಡ್ರಗ್ಸ್: 2017 ರ ಚುನಾವಣೆಯಲ್ಲಿ 18.26 ಕೋಟಿ ರೂ. ಮೌಲ್ಯದ ಡ್ರಗ್ಸ್ ವಶಕ್ಕೆ ಪಡೆಯಲಾಗಿದೆ. 2012 ಚುನಾವಣೆಯಲ್ಲಿ 54.0 ಕೋಟಿ ರೂ. ಮೌಲ್ಯದ ಡ್ರಗ್ಸ್ ವಶಕ್ಕೆ ಪಡೆಯಲಾಗಿತ್ತು.

    ಉತ್ತರಾಖಂಡ:
    ಹಣ: 2017 ರಚುನಾವಣೆಯಲ್ಲಿ 3.38 ಕೋಟಿ ರೂ. ವಶಕ್ಕೆ ಪಡೆದಿದ್ರೆ, 2012 ರ ಚುನಾವಣೆಯಲ್ಲಿ 1.30 ಕೋಟಿ ರೂ. ವಶಕ್ಕೆ ಪಡೆಯಲಾಗಿತ್ತು.

    ಮದ್ಯ: 2017 ರ ಚುನಾವಣೆಯಲ್ಲಿ 3.10 ಕೋಟಿ ರೂ. ಮೌಲ್ಯದ ಮದ್ಯ ವಶಕ್ಕೆ ಪಡೆದಿದ್ರೆ, 2012ರ ಚುನಾವಣೆಯಲ್ಲಿ 0.15 ಕೋಟಿ ಮೌಲ್ಯದ ಮದ್ಯವನ್ನು ವಶಕ್ಕೆ ಪಡೆಯಲಾಗಿತ್ತು.

    ಡ್ರಗ್ಸ್: 2017ರ ಚುನಾವಣೆಯಲ್ಲಿ 0.37 ಕೋಟಿ ರೂ. ಮೌಲ್ಯದ ಡ್ರಗ್ಸ್ ನ್ನು ವಶಕ್ಕ ಪಡೆಯಲಾಗಿದೆ.

    ಮಣಿಪುರ:
    ಹಣ: 2017 ರ ಚುನಾವಣೆಯಲ್ಲಿ 2.18 ಕೋಟಿ ರೂ. ನಗದು ಹಣವನ್ನು ವಶಕ್ಕೆ ಪಡೆದಿದ್ರೆ, 2012 ರ ಚುನಾವಣೆ ಸಮಯದಲ್ಲಿ 1.08 ಕೋಟಿ ರೂ. ನಗದು ಹಣವನ್ನು ವಶಕ್ಕೆ ಪಡೆಯಲಾಗಿತ್ತು.

    ಮದ್ಯ: 2017 ರ ಚುನಾವಣೆಯಲ್ಲಿ 1.02 ಕೋಟಿ ರೂ. ಮೌಲ್ಯದ ಮದ್ಯವನ್ನು ವಶಕ್ಕೆ ಅಧಿಕಾರಿಗಳು ವಶಕ್ಕೆ ಪಡೆದಿದ್ರು. ಇನ್ನೂ 2012 ರ ಚುನಾವಣೆಯಲ್ಲಿ 0.02 ಕೋಟಿ ಮೌಲ್ಯದ ಮದ್ಯವನ್ನ ವಶಕ್ಕೆ ಪಡೆಯಲಾಗಿತ್ತು.

    ಡ್ರಗ್ಸ್: 2017 ರ ಚುನಾವಣೆಯಲ್ಲಿ 3.32 ಕೋಟಿ ಮೌಲ್ಯದ ಡ್ರಗ್ಸ್ ವಶಕ್ಕೆ ಪಡೆಯಲಾಗಿದೆ.

    ಗೋವಾ:
    ಹಣ: ಈ ಬಾರಿಯ 2017 ರ ಚುನಾವಣೆಯಲ್ಲಿ 2.24 ಕೋಟಿ ರೂ. ನಗದು ಹಣವನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. 2012ರ ಚುನಾವಣೆ ವೇಳೆಯಲ್ಲಿ 0.60 ಕೋಟಿ ರೂ. ನಗದು ಚವಶಕ್ಕೆ ಪಡೆಯಲಾಗಿತ್ತು.

    ಮದ್ಯ: 2017ರ ಚುನಾವಣೆಯಲ್ಲಿ 1.07 ಕೋಟಿ ರೂ. ಮೌಲ್ಯದ ಮದ್ಯವನ್ನು ವಶಕ್ಕೆ ಪಡೆಯಲಾಗಿದೆ.

    ಡ್ರಗ್ಸ್: ಈ ಬಾರಿಯ ಚುನಾವಣೆಯಲ್ಲಿ 0.33 ಕೋಟಿ ಮೌಲ್ಯದ ಡ್ರಗ್ಸ್ ವಶಕ್ಕೆ ಪಡೆಯಲಾಗಿದೆ.

     

  • ಪತ್ನಿ ಜೊತೆಗೆ ಅಕ್ರಮ ಸಂಬಂಧ: ವಾಯುಸೇನಾಧಿಕಾರಿ ಸಹೋದ್ಯೋಗಿಯನ್ನು ಕೊಂದು ಏನ್ ಮಾಡ್ದ ಗೊತ್ತಾ?

    ಪತ್ನಿ ಜೊತೆಗೆ ಅಕ್ರಮ ಸಂಬಂಧ: ವಾಯುಸೇನಾಧಿಕಾರಿ ಸಹೋದ್ಯೋಗಿಯನ್ನು ಕೊಂದು ಏನ್ ಮಾಡ್ದ ಗೊತ್ತಾ?

    ಪಂಜಾಬ್: ಪತ್ನಿ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಾನೆಂದು ಶಂಕಿಸಿ ವಾಯುಪಡೆಯ ಅಧಿಕಾರಿಯೊಬ್ಬ ತನ್ನ ಸಹೋದ್ಯೋಗಿಯನ್ನೇ ಕೊಂದು ತುಂಡು ತುಂಡಾಗಿ ಕತ್ತರಿಸಿ ಬಳಿಕ ಪಾಲಿಥೀನ್ ಚೀಲಗಳಲ್ಲಿ ತುಂಬಿಸಿಟ್ಟ ಭಯಾನಕ ಸತ್ಯವೊಂದು ಪೊಲೀಸರ ವಿಚಾರಣೆಯ ವೇಳೆ ಬೆಳಕಿಗೆ ಬಂದಿದೆ.

    ಉತ್ತರಪ್ರದೇಶದ 27 ವರ್ಷದ ವಿಪಿನ್ ಶುಕ್ಲಾ ಕೊಲೆಯಾದ ದುರ್ಧೈವಿಯಾಗಿದ್ದು. ಈತ ಪಂಜಾಬ್‍ನ ಭಿಸಿಯಾನ ವಾಯುನೆಲೆಯಲ್ಲಿ ಉದ್ಯೋಗ ಮಾಡುತ್ತಿದ್ದನು. ಕೊಲೆ ಪ್ರಕರಣ ಸಂಬಂಧ ಸದ್ಯ ಪೊಲೀಸರು ವಾಯುನೆಲೆ ಅಧಿಕಾರಿಯಾದ ಸುಲೇಶ್ ಕುಮಾರ್ ಹಾಗೂ ಅವರ ಪತ್ನಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

    ಪ್ರಕರಣ ಬೆಳಕಿಗೆ: ಫೆಬ್ರವರಿ 15ರಿಂದ ವಿಪಿನ್ ಶುಕ್ಲಾ ನಾಪತ್ತೆಯಾಗಿದ್ದನು. ಈ ವೇಳೆ ಪತ್ನಿ ಕುಂಕುಮ್, ಪತಿ ನಾಪತ್ತೆಯಾಗಿದ್ದಾರೆ ಅಂತಾ ಬತಿಂಡಾದ ನಥಾನಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

    ದೂರಿನ ಆಧಾರದ ಮೇಲೆ ಪೊಲೀಸರು ವಾಯುನೆಲೆಯ ಅಧಿಕಾರಿಗಳ ಕ್ವಾಟ್ರಸ್‍ನಲ್ಲಿ ಹುಡುಕಾಟ ನಡೆಸುತ್ತಿದ್ದರು. ಈ ವೇಳೆ ಪೊಲೀಸರಿಗೆ ಸುಲೇಶ್ ಕುಮಾರ್ ಅವರ ಮನೆಯ ಆವರಣದಿಂದ ಕೊಳೆತ ಮಾಂಸದ ವಾಸನೆ ಬಂದಂತಾಯ್ತು. ಈ ವಾಸನೆಯ ಜಾಡು ಹಿಡಿದ ಪೊಲೀಸರು ಸುಲೇಶ್ ಮನೆಯನ್ನು ಜಾಲಾಡಿದ್ದರು. ಪರಿಣಾಮ ಮನೆಯ ಫ್ರಿಜ್‍ನಲ್ಲಿ 16 ಪಾಲಿಥೀನ್ ಚೀಲಗಳಲ್ಲಿ ಶವವೊಂದರ ತುಂಡಾದ ದೇಹಗಳನ್ನು ಪ್ಯಾಕ್ ಮಾಡಿಟ್ಟಿರುವ ಬಗ್ಗೆ ಬೆಳಕಿಗೆ ಬಂದಿದೆ. ಕೂಡಲೇ ಸುಲೇಶ್, ಪತ್ನಿ ಅನುರಾಧಳನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

    ಈ ವೇಳೆ ಸುಲೇಶ್, ಫೆಬ್ರವರಿ 8ರಂದು ನನ್ನ ಮನೆಯನ್ನು ಬದಲಾಯಿಸುವ ಸಲುವಾಗಿ ಮನೆ ವಸ್ತುಗಳನ್ನು ಪ್ಯಾಕ್ ಮಾಡಲು ಇದೆ. ಹೀಗಾಗಿ ವಿಪಿನ್‍ನನ್ನು ಉಪಾಯ ಮಾಡಿ ಮನೆಗೆ ಕರೆದಿದ್ದೆ. ಬಳಿಕ ಕೊಲೆ ಮಾಡಿ ಆತನ ದೇಹವನ್ನು ಒಂದು ಬಾಕ್ಸ್ ನಲ್ಲಿ ಹಾಕಿ ಹೊಸ ಮನೆಯಲ್ಲಿ ಇಟ್ಟಿದ್ದೆ ಅಂತಾ ಮಾಡಿದ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಮಾತ್ರವಲ್ಲದೇ ತನ್ನ ಪತ್ನಿಯ ಜತೆ ಅಕ್ರಮ ಸಂಬಂಧ ಹೊಂದಿದ್ದರಿಂದಲೇ ವಿಪಿನ್ ನನ್ನು ಕೊಲೆಗೈದಿದ್ದಾಗಿ ಹೇಳಿಕೆ ನೀಡಿದ್ದಾನೆ.

    ಸದ್ಯ ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 302 ರ(ಕೊಲೆ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.