Tag: punjab

  • ಕಥುವಾ ಬಾಲಕಿಯ ಮೇಲೆ ಅತ್ಯಾಚಾರ, ಕೊಲೆ – 6 ಮಂದಿ ದೋಷಿಗಳು

    ಕಥುವಾ ಬಾಲಕಿಯ ಮೇಲೆ ಅತ್ಯಾಚಾರ, ಕೊಲೆ – 6 ಮಂದಿ ದೋಷಿಗಳು

    ನವದೆಹಲಿ: ದೇಶಾದ್ಯಂತ ತೀವ್ರ ಸಂಚಲನ ಮೂಡಿಸಿದ್ದ ಜಮ್ಮು-ಕಾಶ್ಮೀರದ ಕಥುವಾ ಬಾಲಕಿಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಜನರು ದೋಷಿಗಳು ಎಂದು ಪಂಜಾಬ್‍ನ ಪಠಾಣ್‍ಕೋಟ್ ನ್ಯಾಯಾಲಯವು ತೀರ್ಪು ನೀಡಿದೆ.

    ಕಳೆದ ವರ್ಷ ಜೂನ್ ಮೊದಲ ವಾರದಲ್ಲಿ 8 ವರ್ಷದ ಬಾಲಕಿಯನ್ನು ಅತ್ಯಾಚಾರಗೈದು ಕೊಲೆ ಮಾಡಲಾಗಿತ್ತು. ಆದರೆ ಪ್ರಕರಣದ ಕುರಿತು ವಿಚಾರಣೆಯ ವಿಳಂಬಕ್ಕೆ ಅಸಮಾಧಾನ ಹೊರ ಹಾಕಿದ್ದ ಸುಪ್ರೀಂ ಕೋರ್ಟ್ ಪ್ರಕರಣವನ್ನು ಶೀಘ್ರವೇ ಮುಗಿಸಬೇಕು ಆದೇಶ ನೀಡಿ ಪ್ರಕರಣವನ್ನು ಪಠಾಣ್‍ಕೋಟ್ ನ್ಯಾಯಾಲಯಕ್ಕೆ ವರ್ಗಾಯಿಸಿತ್ತು.

    ಸುಪ್ರೀಂ ಕೋರ್ಟ್ ಆದೇಶದನ್ವಯ ವಿಚಾರಣೆ ನಡೆಸಿದ ಪಂಜಾಬಿನ ಪಠಾಣ್ ಕೋಟ್ ನ್ಯಾಯಾಲಯವು, 8 ಜನ ಆರೋಪಿಗಳ ಪಟ್ಟಿಯಲ್ಲಿ 6 ಜನರು ಅಪರಾಧಿಗಳು ಎಂದು ತೀರ್ಪು ನೀಡಿದೆ. ಅಪರಾಧಿಗಳ ಶಿಕ್ಷೆಯ ಪ್ರಮಾಣವನ್ನು ಇಂದು ಮಧ್ಯಾಹ್ನದ ಪ್ರಕಟಿಸಲಾಗುತ್ತದೆ ಎಂದು ಕೋರ್ಟ್ ತಿಳಿಸಿದೆ.

    ಅಪರಾಧಿಗಳ ಪಟ್ಟಿಯಲ್ಲಿ ಸಾಂಜಿ ರಾಮ್, ತಿಲಕ್ ರಾಜ್, ಅರವಿಂದ್ ದತ್ತಾ ಪ್ರಮುಖರು. ಈ ಪ್ರಕಣವನ್ನು ಮುಚ್ಚಿ ಹಾಕಲು ಸಹಕರಿಸಿದ್ದ ಪೊಲೀಸ್ ಅಧಿಕಾರಿಗಳಾದ ದೀಪಕ್ ಕಜೂರಿಯ ವಿರುದ್ಧವು ಆರೋಪ ಸಾಬೀತಾಗಿದೆ.

    ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಥುವ ಗ್ರಾಮದ ಮುಖಂಡ ಸಂಜಿ ರಾಮ್, ಆತನ ಮಗ ವಿಶಾಲ್, ಗೆಳೆಯರಾದ ಆನಂದ್ ದತ್ತ ಹಾಗೂ ಪ್ರಕರಣದಲ್ಲಿ ಅತ್ಯಾಚಾರಿಗಳಿಗೆ ಸಹಕರಿಸಿದ ಪೊಲೀಸ್ ಅಧಿಕಾರಿಗಳಾದ ದೀಪಕ್ ಕಜೂರಿಯ, ಸುರೇಂದ್ರ ವರ್ಮ, ಮುಖ್ಯ ಪೇದೆ ತಿಲಕ್ ರಾಜ್ ಮೇಲಿನ ಆರೋಪ ಸಾಬೀತಾಗಿದೆ ಎಂದು ಕೋರ್ಟ್ ತೀರ್ಪಿನಲ್ಲಿ ಹೇಳಿದೆ. ಪ್ರಕರಣವನ್ನು ಜೂನ್ 3 ರಂದು ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ತೇಜ್‍ವಿಂದರ್ ಸಿಂಗ್ ಜೂನ್ 10ಕ್ಕೆ ತೀರ್ಪನ್ನು ಕಾಯ್ದಿರಿಸಿದ್ದರು.

    ಏನಿದು ಪ್ರಕರಣ?:
    ಸಂಜೀ ರಾಮ್ ಹಾಗೂ ಆತನ ಗುಂಪು ಜಮ್ಮು-ಕಾಶ್ಮೀರದ ಕಥುವಾ ಜಿಲ್ಲೆಯಲ್ಲಿ ನೆಲೆಸಿದ್ದ ಅಲ್ಪಸಂಖ್ಯಾತ ಅಲೆಮಾರಿಗಳನ್ನು ತೆರುವುಗೊಳಿಸಲು ಷಡ್ಯಂತ್ರ ರೂಪಿಸಿತ್ತು. ಹೀಗಾಗಿ ಜಿಲ್ಲೆಯ 8 ವರ್ಷದ ಬಾಲಕಿ ಕುದುರೆಗೆ ಮೇವು ತಿನ್ನಿಸಲು ಮನೆಯಿಂದ ಹೊರ ಹೋಗಿದ್ದಾಗ ಆಕೆಯನ್ನು ಅಪಹರಿಸಿದ್ದರು. ಬಾಲಕಿಯನ್ನು ದೇವಾಲಯದಲ್ಲಿ ಇರಿಸಿ ಮೂರು ದಿನಗಳ ಕಾಲ ಅತ್ಯಾಚಾರ ಎಸಗಿ, ಕೊಲೆ ಮಾಡಿದ್ದರು ಎನ್ನುವ ಆರೋಪ ಕೇಳಿ ಬಂದಿತ್ತು.

    ಬಾಲಕಿ ಅಪಹರಣವಾದ ಮೂರು ದಿನಗಳ ನಂತರ ಆಕೆಯ ಮೃತ ದೇಹ ದೇವಾಲಯದ ಬಳಿ ಪತ್ತೆಯಾಗಿತ್ತು. ಈ ಪ್ರಕರಣ ದೇಶಾದ್ಯಂತ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ದೇಶದಲ್ಲಿ ವಿವಿಧೆಡೆ ಪ್ರತಿಭಟನೆ ನಡೆಸಿ, ಬಾಲಕಿ ಸಾವಿಗೆ ನ್ಯಾಯ ಸಿಗಬೇಕು ಎಂಬ ಒತ್ತಾಯ ಕೇಳಿ ಬಂದಿತ್ತು. ಮಗಳನ್ನು ಕಳೆದುಕೊಂಡ ಪೋಷಕರು, ನಾವು ಜೀವ ಬೆದರಿಕೆ ಎದುರಿಸುತ್ತಿದ್ದೇವೆ. ಇಲ್ಲಿ ನ್ಯಾಯ ಸಿಗುವ ವಿಶ್ವಾಸವಿಲ್ಲ ಎಂದು ಸುಪ್ರೀಂ ಕೋರ್ಟ್ ಗೆ ದೂರು ನೀಡಿದ್ದರು.

    ಮೃತ ಬಾಲಕಿಯ ಪೋಷಕರ ಮನವಿಗೆ ಸ್ಪಂದಿಸಿದೆ ಸುಪ್ರೀಂ ಕೋರ್ಟ್ ಪ್ರಕರಣವನ್ನು ಜಮ್ಮು-ಕಾಶ್ಮೀರದಿಂದ 30 ಕಿ.ಮೀ ದೂರ ವಿರುವ ಪಂಜಾಬ್ ಪ್ರಾಂತ್ಯದ ಪಠಾಣ್‍ಕೋಟ್‍ಗೆ ಹಸ್ತಾಂತರಿಸಿತ್ತು. ಅಷ್ಟೇ ಅಲ್ಲದೆ ಪ್ರತಿದಿನ ವಿಡಿಯೋ ಕ್ಯಾಮೆರಾ ಮೂಲಕ ವಿಚಾರಣೆ ನಡೆಸಿ ಶೀಘ್ರದಲ್ಲಿ ತೀರ್ಪು ನೀಡಬೇಕು ಎಂದು ಸೂಚಿಸಿತ್ತು.

  • ನನ್ನನ್ನು ತೆಗೆದು ಸಿಎಂ ಆಗಲು ಸಿಧು ಪ್ರಯತ್ನ: ಅಮರೀಂದರ್ ಸಿಂಗ್

    ನನ್ನನ್ನು ತೆಗೆದು ಸಿಎಂ ಆಗಲು ಸಿಧು ಪ್ರಯತ್ನ: ಅಮರೀಂದರ್ ಸಿಂಗ್

    ಚಂಢೀಗಢ: ಪಂಜಾಬ್ ಸಿಎಂ ಮತ್ತು ಸಚಿವ ನವಜೋತ್ ಸಿಂಗ್ ಸಿಧು ನಡುವೆ ಎಲ್ಲವೂ ಸರಿ ಇಲ್ಲ ಎಂಬುವುದು ಪದೇ ಪದೇ ಸಾಬೀತಾಗುತ್ತಿದೆ. ನನ್ನನ್ನು ಪಕ್ಕಕ್ಕೆ ಸರಿಸಿ ನವಜೋತ್ ಸಿಂಗ್ ಸಿಧು ಮುಖ್ಯಮಂತ್ರಿಯಾಗಲು ಪ್ರಯತ್ನಿಸುತ್ತಿದ್ದಾರೆ ಎಂದು ಪಂಜಾಬ್ ಸಿಎಂ ಕ್ಯಾಪ್ಟನ್ ಅಮರೀಂದರ್ ಸಿಂಗ್ ಗಂಭೀರ ಆರೋಪ ಮಾಡಿದ್ದಾರೆ.

    ಪಂಜಾಬಿನ 13 ಲೋಕಸಭಾ ಕ್ಷೇತ್ರಗಳಲ್ಲಿ ಇಂದು ಮತದಾನ ನಡೆಯುತ್ತಿದೆ. ಪಟಿಯಾಲಾದ ಮತಗಟ್ಟೆ 89ರಲ್ಲಿ ಮತದಾನ ಮಾಡಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ, ನವಜೋತ್ ಸಿಂಗ್ ಸಿಧು ಜೊತೆ ಯಾವುದೇ ವೈರತ್ವವಿಲ್ಲ. ಅವರೊಬ್ಬ ಮಹತ್ವಾಕಾಂಕ್ಷೆಯ ನಾಯಕರಾದ್ರೆ ತಪ್ಪೇನು? ಜನರು ಮಹತ್ವಾಕಾಂಕ್ಷೆಯಿಂದ ಬದುಕಬೇಕು ಎಂಬುವುದು ನನ್ನ ವಾದ. ಬಾಲ್ಯದಿಂದಲೂ ಸಿಧು ಅವರನ್ನ ನಾನು ಬಲ್ಲೆ. ನಮ್ಮಿಬ್ಬರ ಮಧ್ಯೆ ವೈಯಕ್ತಿಕ ವಿಚಾರಗಳಿಗೆ ಸಂಬಂಧಿಸಿದಂತೆ ಭಿನ್ನಾಭಿಪ್ರಾಯಗಳಿಲ್ಲ. ಬಹುಶಃ ನನ್ನನ್ನು ಬದಿಗೆ ತಂದು ಮುಖ್ಯಮಂತ್ರಿಯಾಗುವ ಆಸೆಯನ್ನು ಹೊಂದಿದ್ದಾರೆ ಎಂದು ತಿಳಿಸಿದರು.

    ಈ ಬಾರಿಯ ಲೋಕಸಭಾ ಚುನಾವಣೆ ಸಿಧು ತಮ್ಮ ಪತ್ನಿಗೆ ಟಿಕೆಟ್ ನೀಡಬೇಕೆಂದು ಪಕ್ಷದ ಮುಖಂಡರ ಮುಂದೆ ಮನವಿ ಮಾಡಿಕೊಂಡಿದ್ದರು. ಆದ್ರೆ ಪಕ್ಷ ನವಜೋತ್ ಕೌರ್ ಅವರಿಗೆ ಟಿಕೆಟ್ ನೀಡಿರಲಿಲ್ಲ. ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ನವಜೋತ್ ಕೌರ ಬಹಿರಂಗವಾಗಿಯೇ ಸಿಎಂ ವಿರುದ್ಧ ಅಸಮಾಧಾನ ಹೊರಹಾಕಿದ್ದರು. ಇತ್ತ ಸಿಧು ಸಹ ಪತ್ನಿಯ ಹೇಳಿಕೆಯನ್ನು ಸಮರ್ಥಿಸಿಕೊಂಡು ಸಿಎಂಗೆ ಪರೋಕ್ಷವಾಗಿ ಟಾಂಗ್ ನೀಡಿದ್ದರು. ಅಂದಿನಿಂದ ಇಬ್ಬರ ನಡುವೆ ಶೀತಲ ಸಮರ ನಡೆಯುತ್ತಿದೆ.

    13 ಲೋಕಸಭಾ ಕ್ಷೇತ್ರಗಳಲ್ಲಿ ಶಾಂತಿಯುತವಾಗಿ ಮತದಾನ ನಡೆಯುತ್ತಿದೆ. ಗಲಾಟೆಯಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದರ ಮಾಹಿತಿ ಲಭ್ಯವಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ಚುನಾವಣೆಯಲ್ಲಿ ಬಿಜೆಪಿ ಮತ್ತು ಅಕಾಲಿದಳ ನಾಯಕರು ಶಾಂತಿ ಕಾಪಾಡುವಂತೆ ಕಾರ್ಯಕರ್ತರಲ್ಲಿ ಮನವಿ ಮಾಡಿಕೊಂಡಿದ್ದಾರೆ.

  • ಕೊನೆಗೂ ಗೆಲುವಿನ ಖಾತೆ ತೆರೆದ ಆರ್‌ಸಿಬಿ – ಪಂಜಾಬ್ ವಿರುದ್ಧ 8 ವಿಕೆಟ್‍ಗಳ ಜಯ

    ಕೊನೆಗೂ ಗೆಲುವಿನ ಖಾತೆ ತೆರೆದ ಆರ್‌ಸಿಬಿ – ಪಂಜಾಬ್ ವಿರುದ್ಧ 8 ವಿಕೆಟ್‍ಗಳ ಜಯ

    ಮೋಹಾಲಿ: ಐಪಿಎಲ್ 2019ನೇ ಆವೃತ್ತಿಯಲ್ಲಿ ಸತತ ಆರು ಸೋಲುಗಳಿಗೆ ಗುರಿಯಾಗಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೊನೆಗೂ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಮೊದಲ ಗೆಲುವನ್ನು ದಾಖಲಿಸಿದೆ.

    ಟಾಸ್ ಗೆದ್ದ ಆರ್‌ಸಿಬಿ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತ್ತು. ಈ ಪಂದ್ಯದಲ್ಲಿ ಕ್ರಿಸ್ ಗೇಲ್ 99 ರನ್ ಸಿಡಿಸಿ ಆರ್‌ಸಿಬಿಗೆ 174 ರನ್‍ಗಳ ಗುರಿ ನೀಡಿತ್ತು. ಮೊದಲು ಬ್ಯಾಟಿಂಗ್ ಮಾಡಲು ಬಂದ ಪಾರ್ಥಿವ್ ಪಟೇಲ್ 19 ರನ್ ತೆಗೆದುಕೊಂಡು ಔಟ್ ಆದರು.

    ನಾಯಕ ವಿರಾಟ್ ಕೊಹ್ಲಿ 67 ರನ್ ಸಿಡಿಸಿ ಉತ್ತಮವಾಗಿ ಪ್ರದರ್ಶನ ನೀಡಿದರು. ಅಲ್ಲದೆ ಎಬಿಡಿ ವಿಲಿಯರ್ಸ್ ಕೂಡ 59 ರನ್ ಸಿಡಿಸುವ ಮೂಲಕ ಭರ್ಜರಿಯಾಗಿ ಬ್ಯಾಟಿಂಗ್ ಮಾಡಿದರು. ವಿರಾಟ್ ಹಾಗೂ ಎಬಿಡಿ ವಿಲಿಯರ್ಸ್ ಅರ್ಧಶತಕಗಳ ನೆರವಿನಿಂದ ಆರ್‌ಸಿಬಿ 8 ವಿಕೆಟ್ ಅಂತರದ ಭರ್ಜರಿ ಗೆಲುವನ್ನು ಸಾಧಿಸಿದೆ. ಈ ಪಂದ್ಯದಿಂದ ಆರ್‌ಸಿಬಿ ಅಂಕಪಟ್ಟಿಯಲ್ಲಿ ಖಾತೆ ತೆರೆದಿದೆ.

  • ಬೆಳಗಾವಿ ಯೋಧ ಪಂಚಭೂತಗಳಲ್ಲಿ ಲೀನ- ಅಂತಿಮ ಯಾತ್ರೆಗೆ ಹರಿದುಬಂದ ಜನ ಸಾಗರ

    ಬೆಳಗಾವಿ ಯೋಧ ಪಂಚಭೂತಗಳಲ್ಲಿ ಲೀನ- ಅಂತಿಮ ಯಾತ್ರೆಗೆ ಹರಿದುಬಂದ ಜನ ಸಾಗರ

    ಬೆಳಗಾವಿ: ಪಂಜಾಬ್‍ನಲ್ಲಿ ತರಬೇತಿ ಪಡೆಯುತ್ತಿದ್ದ ವೇಳೆ ಹಾರಿದ ಗುಂಡು ತಗುಲಿ ಹುತಾತ್ಮನಾಗಿದ್ದ ಕರ್ನಾಟಕದ ಬೆಳಗಾವಿ ಮೂಲದ ಯೋಧ ಪ್ರವೀಣ ಪಟ್ಟಣಕುಡೆ (32) ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು.

    ಯೋಧ ಪ್ರವೀಣ ಅವರು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಚಂದೂರ ಗ್ರಾಮದವರಾಗಿದ್ದು, ಸ್ವಗ್ರಾಮ ಚಂದೂರಿಗೆ ಇಂದು ಬೆಳಗ್ಗೆ ಪಾರ್ಥಿವ ಶರೀರ ಆಗಮಿಸಿತ್ತು. ಮನೆ ಮಗನನ್ನು ಕಳೆದುಕೊಂಡು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಗ್ರಾಮದ ಸಂಬಂಧಿಕರ ಜಮೀನಿನಲ್ಲಿ ಅಂತಿಮ ಕಾರ್ಯ ನಡೆದಿದ್ದು, ಯೋಧನ ಅಂತಿಮ ಯಾತ್ರೆಯಲ್ಲಿ ಸಾವಿರಾರು ಮಂದಿ ಭಾಗವಹಿಸಿ ದರ್ಶನ ಪಡೆದರು.

    71 ಆಮ್ರ್ಡ್ ರೆಜಿಮೆಂಟ್ ನಲ್ಲಿ ಸೇವೆ ಸಲ್ಲಿಸುತ್ತಿದ್ದ ಯೋಧ ಪ್ರವೀಣ್ ಅವರಿಗೆ ಮಾರ್ಚ್ 7 ರಂದು ಬುಲೆಟ್ ತಗುಲಿತ್ತು. ಪರಿಣಾಮ ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ 8ರ ತಡರಾತ್ರಿ ಚಿಕಿತ್ಸೆ ಫಲಕಾರಿಯಾದೇ ಹುತಾತ್ಮರಾಗಿದ್ದರು.

    ಅಂತ್ಯಕ್ರಿಯೇಯ ವೇಳೆ ಸಂಸದ ಪ್ರಕಾಶ ಹುಕ್ಕೇರಿ, ವಿಧಾನ ಪರಿಷತ್ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಸೇರಿದಂತೆ ಹಲವರು ಭಾಗಿಯಾಗಿದ್ದರು.

    ಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ತರಬೇತಿ ವೇಳೆ ಗುಂಡು ಹಾರಿ ಬೆಳಗಾವಿ ಯೋಧ ಹುತಾತ್ಮ!

    ತರಬೇತಿ ವೇಳೆ ಗುಂಡು ಹಾರಿ ಬೆಳಗಾವಿ ಯೋಧ ಹುತಾತ್ಮ!

    ಶ್ರೀನಗರ: ಪಂಜಾಬ್‍ನಲ್ಲಿ ತರಬೇತಿ ಪಡೆಯುತ್ತಿದ್ದ ವೇಳೆ ಹಾರಿದ ಗುಂಡು ತಗುಲಿ ಕರ್ನಾಟಕದ ಬೆಳಗಾವಿ ಮೂಲದ ಯೋಧ ಪ್ರವೀಣ ಪಟ್ಟಣಕುಡೆ (32) ಹುತಾತ್ಮರಾಗಿದ್ದಾರೆ.

    ಯೋಧ ಪ್ರವೀಣ ಅವರು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಚಂದೂರ ಗ್ರಾಮದವರಾಗಿದ್ದು, ನಾಳೆ ಸ್ವಗ್ರಾಮ ಚಂದೂರಿಗೆ ಪಾರ್ಥಿವ ಶರೀರ ಆಗಮಿಸಲಿದೆ ಎಂಬ ಮಾಹಿತಿ ಲಭಿಸಿದೆ. ಯೋಧ ಸಾವಿನ ಸುದ್ದಿ ಕೇಳುತ್ತಿದಂತೆ ಸ್ವಗ್ರಾಮ ನೀರವ ಮೌನ ಆವರಿಸಿದೆ.

    71 ಆಮ್ರ್ಡ್ ರೆಜಿಮೆಂಟ್ ನಲ್ಲಿ ಸೇವೆ ಸಲ್ಲಿಸುತ್ತಿದ್ದ ಯೋಧ ಪ್ರವೀಣ್ ಅವರಿಗೆ ಮಾರ್ಚ್ 7 ರಂದು ಬುಲೆಟ್ ತಗುಲಿತ್ತು. ಪರಿಣಾಮ ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ 8ರ ತಡರಾತ್ರಿ ಚಿಕಿತ್ಸೆ ಫಲಕಾರಿ ಆಗದೆ ಹುತಾತ್ಮರಾಗಿದ್ದಾರೆ ಎಂಬ ಮಾಹಿತಿ ಲಭಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪಾಕಿಸ್ತಾನಕ್ಕೆ ಕ್ಲೀನ್‍ಚಿಟ್ ಕೊಟ್ಟು ಮಾತುಕತೆಯಿಂದ ಸಮಸ್ಯೆ ಪರಿಹಾರ ಎಂದ ಸಿಧು

    ಪಾಕಿಸ್ತಾನಕ್ಕೆ ಕ್ಲೀನ್‍ಚಿಟ್ ಕೊಟ್ಟು ಮಾತುಕತೆಯಿಂದ ಸಮಸ್ಯೆ ಪರಿಹಾರ ಎಂದ ಸಿಧು

    ಚಂಡಿಗಢ: ಕಳೆದ ವರ್ಷವಷ್ಟೇ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅಧಿಕಾರ ಸ್ವೀಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಭಾರತೀಯ ದೇಶಾಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದ ಕಾಂಗ್ರೆಸ್ ಪಕ್ಷದ ನಾಯಕ ನವಜೋತ್ ಸಿಂಗ್ ಸಿಧು ಪುಲ್ವಾಮದಲ್ಲಿ ನಡೆದ ದಾಳಿಯ ಹಿನ್ನೆಲೆಯಲ್ಲಿ ಪಾಕಿಸ್ತಾನದ ಮೇಲೆ ಆರೋಪ ಮಾಡುವುದು ಸರಿಯಲ್ಲ ಎಂದಿದ್ದಾರೆ.

    ಪಂಜಾಬ್ ರಾಜ್ಯ ಸರ್ಕಾರ ಘಟನೆಗೆ ಕಾರಣವಾಗಿರುವ ಉಗ್ರ ಸಂಘಟನೆ ಹಾಗೂ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡುವಂತೆ ಆಗ್ರಹಿಸಿದ್ದರೂ ಕೂಡ ನವಜೋತ್ ಸಿಂಗ್ ಮಾತ್ರ ಭಿನ್ನ ರಾಗ ಪ್ರಕಟಿಸಿದ್ದಾರೆ.

    ಈ ಕುರಿತು ಖಾಸಗಿ ಮಾಧ್ಯಮವೊಂದಕ್ಕೆ ಹೇಳಿಕೆ ನೀಡಿರುವ ನವಜೋತ್ ಸಿಂಗ್, ದಾಳಿಯಲ್ಲಿ ನಡೆಸಿದವರಿಗೆ ಕಠಿಣ ಶಿಕ್ಷೆ ಆಗಬೇಕೆಂದು ಹೇಳಿದ್ದಾರೆ. ಆದರೆ ಯಾರೋ ಮಾಡಿದ ಕೃತ್ಯಕ್ಕೆ ಯಾವುದೇ ದೇಶದ ಮೇಲೆ ಆರೋಪ ಮಾಡುವುದು ಸರಿಯಲ್ಲ. ಇವುಗಳಿಗೆಲ್ಲ ಶಾಂತಿ ಮಾತುಕತೆ ಒಂದೇ ಪರಿಹಾರ ಎಂದು ಹೇಳುವ ಮೂಲಕ ಕೃತ್ಯದಲ್ಲಿ ಪಾಕಿಸ್ತಾನದ ಪಾತ್ರದ ಕುರಿತು ಪರೋಕ್ಷವಾಗಿ ಕ್ಲೀನ್‍ಚಿಟ್ ನೀಡಿದ್ದಾರೆ.

    ದಾಳಿಯ ಬಳಿಕವೂ ಶಾಂತಿ ಮಂತ್ರವೇ ಇದಕ್ಕೆ ಪರಿಹಾರ ಎಂದು ಪುನರ್ ಉಚ್ಚರಿಸಿದ ಸಿದ್ದು, ಯಾರು ಕೂಡ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುತ್ತಿಲ್ಲ. ಇದುವೇ ಇಂತಹ ಘಟನೆಗಳು ಮರುಕಳಿಸಲು ಕಾರಣವಾಗುತ್ತಿದೆ. 71 ವರ್ಷಗಳಿಂದಲೂ ಇದೇ ನಡೆಯುತ್ತಿದೆ. ಭಯೋತ್ಪಾಧನೆಯಿಂದ ಏನು ಸಾಧಿಸಲು ಆಗುವುದಿಲ್ಲ. ಇದಕ್ಕೆ ಶಾಂತಿ ಮಾತುಕತೆಯೇ ಪರಿಹಾರ ಎಂದು ಹೇಳುವ ಮೂಲಕ ಪಾಕ್ ಜೊತೆಗಿನ ಮಾತುಕತೆಯನ್ನು ಸಮರ್ಥಿಸಿಕೊಂಡಿದ್ದಾರೆ.

    ಇದೇ ವೇಳೆ ದಾಳಿಯ ಬಗ್ಗೆಯೂ ಖಂಡನೆ ಮಾಡಿರುವ ಸಿಧು, ಹೇಡಿಗಳ ಕೃತ್ಯ ಇದಾಗಿದೆ. ಇನ್ನು ಎಷ್ಟು ವರ್ಷ ಯೋಧರು ತಮ್ಮ ಪ್ರಾಣವನ್ನು ಆರ್ಪಿಸಬೇಕು. ಇಂತಹ ವಿಚಾರಗಳನ್ನು ವ್ಯಕ್ತಿಗತವಾಗಿ ತೆಗೆದುಕೊಳ್ಳುವುದರಿಂದ ಕೇವಲ ನಿಂದನೆ ಮಾಡಲು ಮಾತ್ರ ಎಂದಿದ್ದಾರೆ. ಸಿಧು ಅವರಿಂದ ಈ ಹೇಳಿಕೆ ಪ್ರಕಟವಾಗುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಈ ಹೇಳಿಕೆಗೆ ಭಾರೀ ವಿರೋಧ ವ್ಯಕ್ತವಾಗುತ್ತಿದೆ.

    ಸಿಧು ಹೇಳಿಕೆಗೆ ನಿಮ್ಮ ಅಭಿಪ್ರಾಯ ಏನು? ಕಮೆಂಟ್ ಮಾಡಿ ತಿಳಿಸಿ..

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ರೌಂಡಪ್ 2018- ಭಾರತ ಸಾಧಿಸಿದ್ದೇನು? ಏನೆಲ್ಲ ದುರಂತ ಸಂಭವಿಸಿದೆ? ಆರ್ಥಿಕ ವಲಯದಲ್ಲಿ ಏನಾಯ್ತು?

    ರೌಂಡಪ್ 2018- ಭಾರತ ಸಾಧಿಸಿದ್ದೇನು? ಏನೆಲ್ಲ ದುರಂತ ಸಂಭವಿಸಿದೆ? ಆರ್ಥಿಕ ವಲಯದಲ್ಲಿ ಏನಾಯ್ತು?

    ಇಸ್ರೋ ಈ ವರ್ಷ ವಿಶೇಷ ಸಾಧನೆ ನಿರ್ಮಿಸಿದ್ದರೆ, ರಾಜಕೀಯದಲ್ಲಿ ಈ ವರ್ಷ ಪ್ರಧಾನಿ ಮೋದಿಗೆ ಮಿಶ್ರಫಲ ಸಿಕ್ಕಿದೆ. ತೈಲ ದರ ಏರಿಕೆ, ಇಳಿಕೆ ಕಾಣುತ್ತಿದ್ದರೆ ವರ್ಷದ ಕೊನೆಗೆ ಆರ್‍ಬಿಐ ಮತ್ತು ಸರ್ಕಾರದ ನಡುವಿನ ಮುಸುಕಿನ ಗುದ್ದಾಟ ಹೆಚ್ಚು ಸದ್ದು ಮಾಡಿದೆ. ಹೀಗಾಗಿ ಇಲ್ಲಿ ಈ ವರ್ಷ ಹೆಚ್ಚು ಸುದ್ದಿಯಾದ ಟಾಪ್ ಘಟನೆಗಳ ಕಿರು ಮಾಹಿತಿಯನ್ನು ನೀಡಲಾಗಿದೆ.

    ಕೇರಳ ಜಲಪ್ರಳಯ:
    ಕೇರಳ, ಕರ್ನಾಟಕ ಹಾಗೂ ತಮಿಳುನಾಡಿನಲ್ಲಿ ಆಗಸ್ಟ್ ತಿಂಗಳ ಕಾಣಿಕೊಂಡ ಭಾರೀ ಮಳೆಯಿಂದಾಗಿ ಕೇರಳದ ಡ್ಯಾಂಗಳು ಅಪಾಯದ ಮಟ್ಟ ಮೀರಿದ್ದವು. ಅನಾಹುತ ತಪ್ಪಿಸುವ ಉದ್ದೇಶದಿಂದ ಆಗಸ್ಟ್ 9ರಂದು ಇಡುಕ್ಕಿ ಡ್ಯಾಂ ತೆರೆಯಲಾಗಿತ್ತು. 26 ವರ್ಷಗಳ ಇತಿಹಾಸದಲ್ಲಿ ಮೊದಲಬಾರಿಗೆ 54 ಡ್ಯಾಂಗಳನ್ನು ಒಟ್ಟಿಗೆ ತೆರೆಯಲಾಗಿತ್ತು. ಹೀಗಾಗಿ ಕೋಜಿಕೋಡು, ವಯನಾಡ್, ಪಲಕ್ಕಾಡ್, ಇಡುಕ್ಕಿ, ಮಲಪ್ಪುರಂ ಹಾಗೂ ಕೊಲ್ಲಂ ಜಿಲ್ಲೆಗಳ ಕೆಲವು ಪ್ರದೇಶಗಳು ಜಲಾವೃತವಾಗಿದ್ದವು. ಈ ಜಲಪ್ರಳಯದಿಂದಾಗಿ 483 ಜನ ಮೃತಪಟ್ಟಿದ್ದರೆ, 14 ಜನ ನಾಪತ್ತೆಯಾಗಿದ್ದಾರೆ. ಒಟ್ಟು 19,512 ಕೋಟಿ ರೂ. ಮೌಲ್ಯದ ಹಾನಿಯನ್ನು ಕೇರಳ ಅನುಭವಿಸಿದೆ ಎಂದು ಅಂದಾಜು ಮಾಡಲಾಗಿದೆ.

    ಪ್ರಧಾನಿ ನರೇಂದ್ರ ಮೋದಿ ಕೇರಳಕ್ಕೆ ಭೇಟಿ ನೀಡಿ, ವೈಮಾನಿಕ ವೀಕ್ಷಣೆ ನಡೆಸಿದ್ದರು. ಮಳೆ ಮತ್ತು ಪ್ರವಾಹ ಶಾಂತವಾದ ಬಳಿಕ ಜನರು ತಮ್ಮ ನಿವಾಸಕ್ಕೆ ತೆರಳಿದರು. ಆಗ ಮನೆಯಲ್ಲಿ ಹಾವು, ಮೊಸಳೆಗಳು ಪತ್ತೆಯಾಗಿ ಜನರನ್ನು ಆತಂಕಕ್ಕೆ ಗುರಿ ಮಾಡಿತ್ತು. ಈ ಮಹಾ ಜಲಪ್ರಳಯಕ್ಕೆ `ಸೋಮಾಲಿ ಜೆಟ್’ ಚಂಡಮಾರುತವೇ ಕಾರಣವೆಂದು ಹವಾಮಾನ ತಜ್ಞರು ಮಾಹಿತಿ ನೀಡಿದ್ದಾರೆ.

    ಪಂಜಾಬ್ ರೈಲು ದುರಂತ:
    ಅಮೃತಸರದ ಜೋದಾ ಪಾಟ್ಕರ್ ನಲ್ಲಿ ಅಕ್ಟೋಬರ್ 19ರಂದು ಈ ದುರ್ಘಟನೆ ನಡೆದಿತ್ತು. ವಿಜಯದಶಮಿಯ ನಿಮಿತ್ತ ನಡೆದಿದ್ದ ರಾವಣ ಸಂಹಾರದ ಕಾರ್ಯಕ್ರಮವನ್ನು ಸಾವಿರಾರು ಜನ ಹಳಿ ಮೇಲೆ ನಿಂತು ನೋಡುತ್ತಿದ್ದರು. ಈ ವೇಳೆ ರೈಲು ನುಗ್ಗಿದ ಪರಿಣಾಮ 61 ಮಂದಿ ಮೃತಪಟ್ಟಿದ್ದರೆ 70ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಇದೇ ದುರಂತದಲ್ಲಿ ರಾವಣನ ವೇಷಧಾರಿಯಾಗಿದ್ದ ದಲ್ಬೀರ್ ಸಿಂಗ್ (24) ರೈಲು ಹಳಿಯ ಮೇಲೆ ನಿಂತಿದ್ದ ಜನರನ್ನು ದೂಡಿ ತನ್ನ ಪ್ರಾಣ ತ್ಯಾಗ ಮಾಡಿ 8 ಜನರು ಜೀವವನ್ನು ಉಳಿಸಿದ್ದರು.

    ಏಕತಾ ಪ್ರತಿಮೆ:
    ದೇಶದ ಏಕತೆಗೆ ಶ್ರಮಿಸಿದ, ಉಕ್ಕಿನ ಮನುಷ್ಯ ಎಂದೇ ಖ್ಯಾತಿ ಪಡೆದ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 182 ಮೀಟರ್ ಉದ್ದದ ಉಕ್ಕಿನ ಪ್ರತಿಮೆ ಅಕ್ಟೋಬರ್ 31ರಂದು ಅನಾವರಣಗೊಂಡಿತು. ಈ ಮೂಲಕ ವಿಶ್ವದ ಅತಿ ಎತ್ತರದ ಪ್ರತಿಮೆ ಎಂಬ ಹೆಗ್ಗಳಿಕೆಗೆ ಪಟೇಲರ `ಏಕತಾ ಪ್ರತಿಮೆ’ ಪಾತ್ರವಾಗಿದೆ. ಈ ಪ್ರತಿಮೆ ಅಹಮದಾಬಾದ್ ನಿಂದ 200 ಕಿ.ಮೀ ದೂರದಲ್ಲಿರುವ ಸರ್ದಾರ್ ಸರೋವರ ಅಣೆಕಟ್ಟಿನ ಬಳಿ ನಿರ್ಮಾಣವಾಗಿದೆ. ನರ್ಮದಾ ಜಿಲ್ಲೆಯ ನರ್ಮದಾ ಡ್ಯಾಮ್‍ನಿಂದ 3.2 ಕಿ.ಮೀ ದೂರದಲ್ಲಿರುವ `ಸಾಧು ಬೆಟ್’ ದ್ವೀಪದಲ್ಲಿ ಯೋಜನಾ ಸ್ಥಳವಿದೆ. ಅಕ್ಟೋಬರ್ 31ರಂದು ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಜನ್ಮದಿನ. ಹೀಗಾಗಿ ಅದೇ ದಿನ ಪ್ರಧಾನಿ ನರೇಂದ್ರ ಮೋದಿ ಅವರು ಅನಾವರಣ ಮಾಡಿದ್ದಾರೆ.

    ಇಸ್ರೋ ಮೈಲಿಗಲ್ಲು:
    ಭಾರತದ ಇಂಟರ್ ನೆಟ್ ಕ್ಷೇತ್ರದಲ್ಲಿ ಕ್ರಾಂತಿ ಮಾಡಬಲ್ಲ 5,854 ಕೆ.ಜಿ. ತೂಕದ ಜಿಸ್ಯಾಟ್-11 ಹಾಗೂ ಮೂರು ಬಾರಿ ಏಕಕಾಲದಲ್ಲಿ 31 ಉಪಗ್ರಹಗಳ ಉಡಾವಣೆ ಮಾಡುವ ಮೂಲಕ 2018ರಲ್ಲಿ ಇಸ್ರೋ ಹೊಸ ಮೈಲುಗಲ್ಲುಗಳನ್ನು ನೆಟ್ಟಿದೆ. ಫ್ರೆಂಚ್ ಗಯಾನಾದಿಂದ ಏರಿಯಾನ್ 5 ರಾಕೆಟ್ ಮೂಲಕ ಭಾರೀ ತೂಕದ ಜಿಸ್ಯಾಟ್-11 ಉಪಗ್ರಹವನ್ನು ಡಿಸೆಂಬರ್ 5ರಂದು ಉಡಾವಣೆ ಮಾಡಲಾಗಿದೆ.

    ಮೂರು ಬಾರಿ ಪಿಎಸ್‍ಎಲ್‍ವಿ-ಸಿ ರಾಕೆಟ್‍ಗಳ ಮೂಲಕ ಏಕಕಾಲದಲ್ಲಿ 31 ಉಪಗ್ರಹಗಳನ್ನು ಕಕ್ಷೆಗೆ ತಲುಪಿಸುವ ಸಾಧನೆಯನ್ನು ಇಸ್ರೋ ಮಾಡಿದೆ. ಜನವರಿ 12ರಂದು 31 ಉಪಗ್ರಹ ಹೊತ್ತ ಪಿಎಸ್‍ಎಲ್‍ವಿ-ಸಿ 40 ರಾಕೆಟ್ ನಭಕ್ಕೆ ಚಿಮ್ಮಿತ್ತು. ಈ ಮೂಲಕ ಮೊದಲ ಉಡಾವಣೆಯಲ್ಲಿ ಇಸ್ರೋ ಯಶಸ್ವಿಯಾಗಿತ್ತು. ಇದರ ಬೆನ್ನಲ್ಲೆ ಜೂನ್ 23ರಂದು ಪಿಎಸ್‍ಎಲ್‍ವಿ-ಸಿ 38 ರಾಕೆಟ್ ಹಾಗೂ ನವೆಂಬರ್ 29ರಂದು 31 ಪಿಎಸ್‍ಎಲ್‍ವಿ-ಸಿ 43 ರಾಕೆಟ್‍ಗಳು 31 ಉಪಗ್ರಹ ಹೊತ್ತು ಬಾಹ್ಯಾಕಾಶಕ್ಕೆ ಹಾರಿ ಉಪಗ್ರಹಗಳನ್ನು ಕಕ್ಷೆಗೆ ತಲುಪಿಸಿದ್ದವು.

    ವಿಧಾನಸಭೆ ಚುನಾವಣೆ:
    ದೇಶದಲ್ಲಿ ಈ ಬಾರಿ 9 ರಾಜ್ಯಗಳ ವಿಧಾನಸಭಾ ಚುನಾವಣೆ ನಡೆದಿದ್ದು ಪ್ರಧಾನಿ ಮೋದಿ ಮತ್ತು ರಾಹುಲ್ ಗಾಂಧಿಗೆ ಮಿಶ್ರಫಲ ಸಿಕ್ಕಿದೆ. ಈಶಾನ್ಯ ರಾಜ್ಯಗಳಲ್ಲಿ ಬಿಜೆಪಿ ಜಯಗಳಿಸಿ ಕಾಂಗ್ರೆಸ್‍ಗೆ ಭಾರೀ ಶಾಕ್ ನೀಡುತ್ತ ಮುನ್ನುಗ್ಗಿತ್ತು. ಆದರೆ ಕರ್ನಾಟಕ ವಿಧಾನಸಭಾ ಚುನಾವಣೆ ಬಳಿಕ ಕಾಂಗ್ರೆಸ್‍ಗೆ ಲಕ್ಕಿ ಕೀ ಸಿಕ್ಕಿದ್ದರಿಂದ ವರ್ಷದ ಕೊನೆಯಲ್ಲಿ ನಡೆದ ಚುನಾವಣೆಗಳಲ್ಲಿ ಭರ್ಜರಿ ಜಯ ಸಾಧಿಸಿತ್ತು.

    ಈಶಾನ್ಯ ರಾಜ್ಯಗಳಾದ ತ್ರಿಪುರಾ, ಮೇಘಾಲಯ ಹಾಗೂ ನಾಗಾಲ್ಯಾಂಡ್ ವಿಧಾನಸಭಾ ಚುನಾವಣೆ ಫೆಬ್ರವರಿಯಲ್ಲಿ ನಡೆದವು. ಈ ವೇಳೆ ತ್ರಿಪುರಾದಲ್ಲಿ ಬಿಜೆಪಿ ಅಧಿಕಾರದ ಗದ್ದುಗೆ ಏರಿ, ನಾಗಾಲ್ಯಾಂಡ್‍ನಲ್ಲಿ ಎನ್‍ಡಿಪಿಪಿ ಜೊತೆಗೆ ಮೈತ್ರಿ ಸರ್ಕಾರ ರಚಿಸಿಕೊಂಡಿದೆ. ಮೇಘಾಲಯದಲ್ಲಿ ಎನ್‍ಡಿಪಿ ಹಾಗೂ ಯುಡಿಪಿ ಅಧಿಕಾರದ ಚುಕ್ಕಾಣಿ ಹಿಡಿದಿದೆ.

    ಕಾಂಗ್ರೆಸ್ ಲಕ್ ಆರಂಭವಾಗಿದ್ದು ಮೇ ತಿಂಗಳಿನಲ್ಲಿ ನಡೆದ ಕರ್ನಾಟಕ ವಿಧಾನಸಭಾ ಚುನಾವಣೆ ಮೂಲಕ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪ್ರಮಾಣವಚನ ಕಾರ್ಯಕ್ರಮದಲ್ಲಿ ರಾಷ್ಟ್ರದ ವಿವಿಧ ಪ್ರಾದೇಶಿಕ ಪಕ್ಷಗಳ ನಾಯಕರು ಭಾಗವಹಿಸಿ ಮಹಾಘಟ್‍ಬಂಧನ್ ಮುನ್ನುಡಿ ಬರೆದಿದ್ದರು. ಈ ವೇಳೆ ಬಿಜೆಪಿ ವಿರುದ್ಧ ಲೋಕಸಭಾ ಚುನಾವಣೆಯಲ್ಲಿ ರಣತಂತ್ರ ಹೆಣೆಯಲು ನಿರ್ಧಾರ ಕೈಗೊಂಡಿದ್ದರು. ಇದಾದ ಬಳಿಕ ಪಂಚರಾಜ್ಯ ಚುನಾವಣೆಯನ್ನು ಲೋಕಸಭಾ ಚುನಾವಣೆಯ ದಿಕ್ಸೂಚಿ ಎಂದಲೇ ಕರೆಯಲಾಗಿತ್ತು. ಈ ಚುನಾವಣೆಯಲ್ಲಿ ಕಾಂಗ್ರೆಸ್ ಛತ್ತೀಸಗಡ್, ಮಧ್ಯಪ್ರದೇಶ ಹಾಗೂ ರಾಜಸ್ಥಾನದಲ್ಲಿ ಕಾಂಗ್ರೆಸ್ ಅಧಿಕಾರದ ಗದ್ದುಗೆ ಏರಿತು. ಉಳಿದಂತೆ ತೆಲಂಗಾಣದಲ್ಲಿ ಟಿಆರ್ ಎಸ್ ಮತ್ತು ಮಿಜೋರಾಂನಲ್ಲಿ ಎಂಎನ್‍ಎಫ್ ಗೆದ್ದು ಬೀಗಿದವು. ಪಂಚರಾಜ್ಯ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿಗೆ ಭಾರೀ ಹಿನ್ನಡೆಯಾಗಿತ್ತು.

    ಬುರಾರಿ ಸಾಮೂಹಿಕ ಆತ್ಮಹತ್ಯೆ:
    ನವದೆಹಲಿಯ ಬುರಾರಿ ಮನೆಯೊಂದರಲ್ಲಿ ಒಂದೇ ಕುಟುಂಬದ 11 ಜನರು ಆತ್ಮಹತ್ಯೆಗೆ ಶರಣಾಗಿದ್ದರು. ಪ್ರಾರಂಭದಲ್ಲಿ ಮೂಢನಂಬಿಕೆಗೆ ಒಳಗಾಗಿ ಆತ್ಮಹತ್ಯೆ ಶರಣಾಗಿದ್ದಾರೆ ಎನ್ನಲಾಗಿತ್ತು. ಈ ಕುರಿತು ತನಿಖೆ ಆರಂಭಿಸಿದ್ದ ಪೊಲೀಸರು ಕೊಲೆ ಶಂಕೆ ವ್ಯಕ್ತಪಡಿಸಿದ್ದರು. ಇಂತಹದ್ದೇ ಘಟನೆ ರಾಂಚಿಯಲ್ಲಿ ನಡೆದಿದ್ದು, ವ್ಯಾಪಾರದಲ್ಲಿ ನಷ್ಟವಾ ಗಿದೆ ಎಂದು ಪತ್ರ ಪರೆದು ಇಟ್ಟಿದ್ದ ವ್ಯಕ್ತಿ ಸೇರಿದಂತೆ ಕುಟುಂಬ ಆರು ಜನರು ಆತ್ಮಹತ್ಯೆ ಶರಣಾಗಿದ್ದರು.

    ನಿಪಾ ವೈರಸ್:
    ಕೇರಳದಲ್ಲಿ ಮೇ ತಿಂಗಳು ಕಾಣಿಸಿಕೊಂಡ ನಿಪಾ ವೈರಸ್ 17 ಜನರನ್ನು ಬಲಿಪಡೆದಿತ್ತು. ಕೇರಳ ನೆರೆಯ ರಾಜ್ಯಗಳಿಗೂ ತಟ್ಟುತ್ತದೆ ಎನ್ನುವ ಆತಂಕ ಸೃಷ್ಟಿಸಲಾಗಿತ್ತು. ಈ ಕುರಿತು ಎಚ್ಚೆತ್ತುಕೊಂಡ ಆರೋಗ್ಯ ಇಲಾಖೆ ವೈರಸ್ ಪತ್ತೆ ಹಚ್ಚಿತ್ತು. ಆರಂಭದಲ್ಲಿ ಇದು ಬಾವಲಿಗಳಿಂದ ಹರಡುತ್ತದೆ ಎನ್ನಲಾಗಿತ್ತು. ಇದರಿಂದಾಗಿ ಅನೇಕ ಪ್ರದೇಶಗಳಲ್ಲಿ ಬಾವಲಿಗಳ ಮಾರಣಹೋಮವೇ ನಡೆಯಿತು. ಮೇ ಅಂತ್ಯದ ವೇಳೆ ನಿಪಾ ಪ್ರಕರಣಗಳು ನಿಯಂತ್ರಣಕ್ಕೆ ಬಂದವು. ನಿಪಾ ವೈರಸ್‍ಗೆ ಬಲಿಯಾದ ಕೇರಳ ನರ್ಸ್ ಲಿನಿ ಅವರು ಪತಿಗೆ ಬರೆದಿದ್ದ ಭಾವನಾತ್ಮಕ ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

    ಬೋಗಿಬೀಲ್ ಸೇತುವೆ ಉದ್ಘಾಟನೆ:
    ದೇಶದ ಅತ್ಯಂತ ಉದ್ದವಾದ ರಸ್ತೆ ಹಾಗೂ ರೈಲು ಸೇತುವೆಯನ್ನು ಪ್ರಧಾನಿ ನರೇಂದ್ರ ಮೋದಿ ಡಿಸೆಂಬರ್ 25ರಂದು ಉದ್ಘಾಟಿಸಿದರು. ಈ ಬೋಗಿಬೀಲ್ ಸೇತುವೆಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಶಂಕುಸ್ಥಾಪನೆ ನೆರವೇರಿಸಿದ್ದರೆ, ಅಟಲ್ ಬಿಹಾರಿ ವಾಜಪೇಯಿ ಅವರು ಕಾಮಗಾರಿಗೆ ಚಾಲನೆ ನೀಡಿದ್ದರು. ಅಸ್ಸಾಂನ ದಿಬ್ರೂಗಡದ ಬಳಿ ಬ್ರಹ್ಮಪುತ್ರ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಈ ಸೇತುವೆಯನ್ನು ಭಾರತೀಯ ರೈಲ್ವೇ ಇಲಾಖೆ ನಿರ್ಮಿಸಿದ್ದು, ಏಷ್ಯಾದ 2ನೇ ಅತ್ಯಂತ ಉದ್ದದ ಸೇತುವೆ ಎಂಬ ಹೆಗ್ಗಳಿಕೆಯನ್ನು ಪಡೆದಿದೆ. ಅಸ್ಸಾಂನ ದಿಬ್ರೂಗಡದಿಂದ ಅರುಣಾಚಲ ಪ್ರದೇಶದ ಪಾಸಿಘಾಟ್ ನಡುವೆ ಈ ಸೇತುವೆ ನಿರ್ಮಾಣವಾಗಿದ್ದು, ಒಟ್ಟು 4.94 ಕಿಮೀ ಉದ್ದವಿದೆ.

    ಆರ್ಥಿಕ ವಲಯಲ್ಲಿ ಏನಾಯಿತು?
    ಬ್ಯಾಂಕ್ ವಿಲೀನ:
    ರಾಷ್ಟ್ರೀಕೃತ ಬ್ಯಾಂಕ್‍ಗಳಾದ ವಿಜಯ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ ಹಾಗೂ ದೇನಾ ಬ್ಯಾಂಕ್‍ಗಳನ್ನು ವಿಲೀನಗೊಳಿಸಿ ದೇಶದ ಮೂರನೇ ದೊಡ್ಡ ಬ್ಯಾಂಕ್ ರಚಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಇದಕ್ಕೆ ಬ್ಯಾಂಕ್ ಒಕ್ಕೂಟವು ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿತ್ತು.

    ಆರ್‌ಬಿಐ- ಕೇಂದ್ರ ಜಟಾಪಟಿ:
    ಬಡ್ಡಿ ದರ ನಿಗದಿ, ಆರ್‌ಬಿಐ ಮೀಸಲು ನಿಧಿಯ ಬಳಕೆ, ಸ್ವಾಯತ್ತತೆ ಇತ್ಯಾದಿ ವಿಚಾರವಾಗಿ ಗವರ್ನರ್ ಉರ್ಜಿತ್ ಪಟೇಲ್ ಹಾಗೂ ಕೇಂದ್ರ ಸರ್ಕಾರದ ನಡುವೆ ಜಟಾಪಟಿ ನಡೆದಿತ್ತು. ಈ ಬೆಳವಣಿಗೆಯ ಬೆನ್ನಲ್ಲೇ ವೈಯಕ್ತಿಕ ಕಾರಣ ನೀಡಿ ಉರ್ಜಿತ್ ಪಟೇಲ್ ಆರ್‌ಬಿಐ ಗವರ್ನರ್ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಈ ಸ್ಥಾನಕ್ಕೆ ನಿವೃತ್ತ ಐಎಎಸ್ ಅಧಿಕಾರಿ ಶಕ್ತಿಕಾಂತ ದಾಸ್ ಅವರನ್ನು 24 ಗಂಟೆಗಳಲ್ಲಿ ಕೇಂದ್ರ ಸರ್ಕಾರ ನೇಮಿಸಿ ಆದೇಶ ಹೊರಡಿಸಿತ್ತು.

    ಜಿಡಿಪಿಯಲ್ಲಿ ಏರಿಕೆ:
    ಪ್ರತಿ ವರ್ಷದಂತೆ ವಿಶ್ವಸಂಸ್ಥೆಯ 22018ರ ಜುಲೈನಲ್ಲಿ ಪ್ರಕಟಿಸಿ ವರದಿಯ ಪ್ರಕಾರ, ಫ್ರಾನ್ಸ್ ಅನ್ನು ಹಿಂದಿಕ್ಕಿ ಭಾರತ 6ನೇ ಬೃಹತ್ ಆರ್ಥಿಕತೆ ದೇಶ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ವರದಿಯ ಪ್ರಕಾರ ಭಾರತದ ಜಿಡಿಪಿ ಮೌಲ್ಯವು 2.59 ಲಕ್ಷ ಕೋಟಿ ಡಾಲರ್ ಏರಿಕೆ ಕಂಡಿದೆ.

    ವಿದೇಶಕ್ಕೆ ಪರಾರಿಯಾದವರು:
    ವಜ್ರಾಭರಣ ವ್ಯಾಪಾರಿ ನೀರವ್ ಮೋದಿ ಹಾಗೂ ಚಿಕ್ಕಪ್ಪ ಮೆಹಲ್ ಚೋಕ್ಸಿ ಪಂಜಾಬ್ ನ್ಯಾಷನಲ್ ಬ್ಯಾಂಕ್‍ಗೆ 14,356 ಕೋಟಿ ರೂ. ವಂಚಿಸಿದ್ದ ಪ್ರಕರಣ 2018ರಲ್ಲಿ ದೇಶಕ್ಕೆ ಶಾಕ್ ಕೊಟ್ಟಿತ್ತು. ಈ ಇಬ್ಬರ ವಿರುದ್ಧ ಜಾರಿ ನಿರ್ದೇಶನಾಲಯವು (ಇಡಿ) ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡಿದೆ. ಆದರೂ ಭಾರತಕ್ಕೆ ಬಾರದೇ ವಿದೇಶದಲ್ಲಿ ತಲೆಮರೆಸಿಕೊಂಡಿದ್ದಾರೆ. ಇದರಿಂದಾಗಿ ನೀರವ್ ಒಡೆತನದ ದೇಶ ಹಾಗೂ ವಿದೇಶದಲ್ಲಿರುವ ಆಸ್ತಿಯನ್ನು ಇಡಿ ಅಧಿಕಾರಿಗಳು ಮುಟ್ಟುಗೋಲು ಹಾಕಿಕೊಂಡಿದ್ದಾರೆ.

    ಭಾತರದ ವಿವಿಧ ಬ್ಯಾಂಕ್‍ಗಳಿಗೆ ವಂಚಿಸಿ 2016ರಿಂದ ಮದ್ಯದ ದೊರೆ ವಿಜಯ್ ಮಲ್ಯ ವಿದೇಶದಲ್ಲಿ ತಲೆಮರೆಸಿಕೊಂಡಿದ್ದಾರೆ. ಭಾರತಕ್ಕೆ ಕರೆತಲು ಇಡಿ ಅಧಿಕಾರಿಗಳು ಸಾಹಸ ಪಡುತ್ತಿದ್ದಾರೆ. ವಿಜಯ್ ಮಲ್ಯ ಗಡಿಪಾರಿಗೆ ಲಂಡನ್ ವೆಸ್ಟ್ ಮಿನಿಸ್ಟರ್ ಕೋರ್ಟ್ ಅನುಮತಿ ನೀಡಿದೆ. ಇದಕ್ಕೂ ಮುನ್ನ ಎಚ್ಚೆತ್ತುಕೊಂಡಿದ್ದ ಮಲ್ಯ, ನಾನು ಪಡೆದ ಸಾಲದ ಸಂಪೂರ್ಣ ಹಣವನ್ನು ಪಾವತಿಸುತ್ತೇನೆ ಎಂದು ಟ್ವೀಟ್ ಮಾಡಿದ್ದರು. ನೀರವ್ ಮೋದಿ, ಮೆಹಲ್ ಚೋಕ್ಸಿ ಹಾಗೂ ವಿಜಯ್ ಮಲ್ಯ ಸೇರಿದಂತೆ ಒಟ್ಟು 58 ವಿತ್ತ ಅಪರಾಧಿಗಳನ್ನು ಗಡಿಪಾರು ಮಾಡುವಂತೆ ಕೇಂದ್ರವು, ಯುಎಇ, ಅಮೆರಿಕ, ಈಜಿಪ್ತ್, ಅಂಟಿಗುವಾ ಒಳಗೊಂಡಂತೆ ವಿವಿಧ ದೇಶಗಳಿಗೆ ಮನವಿ ಸಲ್ಲಿಸಿದೆ.

    ಹಾವು ಏಣಿಯಾಟವಾಡಿದ ತೈಲ ದರ:
    ಡಾಲರ್ ಮುಂದೆ ರೂಪಾಯಿ ಮೌಲ್ಯ ಭಾರೀ ಕುಸಿತ ಕಂಡಿತ್ತು. ಇದರ ಪರಿಣಾಮ ತೈಲ ಬೆಲೆಯ ಮೇಲು ಬೀರಿತು. ತೈಲ ಬೆಲೆ ಏರು ಪೇರು ಆಗಿದ್ದರಿಂದ ಆತಂಕ ಸೃಷ್ಟಿಯಾಗಿತ್ತು. ಬೆಂಗಳೂರಿನ ಜನರು ಜನವರಿಯಲ್ಲಿ 71.06 ರೂ. ನೀಡಿ ಪಡೆಯುತ್ತಿದ್ದ ಒಂದು ಲೀಟರ್ ಪೆಟ್ರೋಲ್ ದರ ಸೆಪ್ಟೆಂಬರ್ ನಲ್ಲಿ 85 ರೂ. ಜಂಪ್ ಆಗಿತ್ತು. ಈ ದರ ಡಿಸೆಂಬರ್ ವೇಳೆಗೆ 71 ರೂ. ಆಸುಪಾಸು ಬಂದು ಗ್ರಾಹಕರ ಹೊರೆಯನ್ನು ತಗ್ಗಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಅಂತ್ಯಕ್ರಿಯೆ ಮುಗಿದ 4 ದಿನಗಳ ನಂತ್ರ ಮನೆಗೆ ಬಂದ ಮೃತ ಮಹಿಳೆ!

    ಅಂತ್ಯಕ್ರಿಯೆ ಮುಗಿದ 4 ದಿನಗಳ ನಂತ್ರ ಮನೆಗೆ ಬಂದ ಮೃತ ಮಹಿಳೆ!

    ಛತ್ತೀಸ್‍ಗಢ್: ಕಾಣೆಯಾಗಿದ್ದ ಮಹಿಳೆಯ ಮೃತ ದೇಹ ಪತ್ತೆಯಾಗಿ ಕುಟುಂಬಸ್ಥರು ಅಂತ್ಯಕ್ರಿಯೆ ನಡೆಸಿದ 4 ದಿನಗಳ ಬಳಿಕ ಆಕೆ ಮನೆಗೆ ಬಂದಿರುವ ಘಟನೆ ಪಂಜಾಬ್‍ನ ಪಟಿಯಾಲಾದಲ್ಲಿ ನಡೆದಿದೆ.

    ಮಗಳ ಸಾವಿನಿಂದ ನೊಂದು ದುಃಖದಲ್ಲಿದ್ದ ಕುಟುಂಬಸ್ಥರು ಮಹಿಳೆಯನ್ನು ನೋಡಿದ ಕೂಡಲೇ ಅಚ್ಚರಿ ವ್ಯಕ್ತಪಡಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

    ನಡೆದಿದ್ದೇನು?
    26 ವರ್ಷದ ನೈನಾ ಚಮಕೌರ್ ಸಾಹೀಬ್ ಎಂಬಾತನನ್ನು ವಿವಾಹವಾಗಿದ್ದಳು. ಆದರೆ ಡಿಸೆಂಬರ್ 8ರಂದು ಮನೆಯಿಂದ ಬೇರೊಬ್ಬ ಪುರುಷನೊಂದಿಗೆ ನಾಪತ್ತೆಯಾಗಿದ್ದ ನೈನಾ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿರಲಿಲ್ಲ. ಡಿಸೆಂಬರ್ 11ರಂದು ಮಹಿಳೆಯೊಬ್ಬಳ ಶವ ಗ್ರಾಮದ ಪಕ್ಕ ಪತ್ತೆಯಾಗಿತ್ತು. ಡಿಸೆಂಬರ್ 14ರಂದು ಇದು ಮಗಳ ಶವ ಎಂದು ತಿಳಿದ ನೈನಾ ಕುಟುಂಬಸ್ಥರು ಅಂತ್ಯ ಸಂಸ್ಕಾರ ನೆರವೇರಿಸಿದ್ದರು. ಆದರೆ ನಾಲ್ಕು ದಿನಗಳ ಬಳಿಕ ನೈನಾ ತಾನು ಪರಾರಿಯಾಗಿದ್ದ ವ್ಯಕ್ತಿಯೊಂದಿಗೆ ಮನೆಗೆ ವಾಪಸ್ ಆಗಮಿಸಿದ್ದಾಳೆ.

    ಈಗ ಅಂತ್ಯ ಸಂಸ್ಕಾರ ನಡೆಸಿದ ಮಹಿಳೆಯ ಮೃತದೇಹ ಯಾರದ್ದು ಎನ್ನುವ ಪ್ರಶ್ನೆ ಎದ್ದಿದೆ. ನೈನಾ ಪತಿಯೂ ಕೂಡ ಪತ್ನಿ ಕಾಣೆಯಾದ ದಿನದಿಂದ ನಾಪತ್ತೆ ಆಗಿದ್ದ ಕಾರಣ ಪೊಲೀಸರು ಆತನೇ ಪತ್ನಿಯನ್ನು ಕೊಲೆ ಮಾಡಿದ್ದಾನೆ ಎಂದು ಶಂಕೆ ವ್ಯಕ್ತಪಡಿಸಿದ್ದರು. ಅಲ್ಲದೇ ಕುಟುಂಬಸ್ಥರು ಕೂಡ ಮೃತ ದೇಹ ನಮ್ಮದೇ ಎಂದು ತಿಳಿಸಿದ ಕಾರಣದಿಂದ ಪೊಲೀಸರು ಮೃತದೇಹವನ್ನು ನೀಡಿದ್ದರು.

    ಸದ್ಯ ಅನಾಮದೇಯ ಮೃತ ದೇಹದ ಮರಣೋತ್ತರ ಪರೀಕ್ಷೆ ನಡೆಸಿರುವ ಕಾರಣ ಡಿಎನ್‍ಎ ಮಾದರಿ ಲಭ್ಯವಿದ್ದು, ಈ ಮೂಲಕ ಹೆಚ್ಚಿನ ತನಿಖೆ ನಡೆಸುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ. ಒಂದೊಮ್ಮೆ ಕುಟುಂಬಸ್ಥರು ಮೃತ ದೇಹ ನಮ್ಮದಲ್ಲ ಎಂದು ಹೇಳಿದ್ದರೂ ನಿಯಮದ ಅನ್ವಯ ನಾವೇ ಅಂತ್ಯ ಸಂಸ್ಕಾರ ನಡೆಸುತ್ತಿದ್ದೇವು. ಮರಣೋತ್ತರ ಪರೀಕ್ಷೆ ಹಾಗೂ ಡಿಎನ್‍ಎ ವರದಿ ಹಾಗೂ ಮಹಿಳೆಯ ಬೆರಳಚ್ಚು ಮಾದರಿ ಲಭ್ಯವಿದ್ದು, ಈ ಮೂಲಕ ತನಿಖೆ ನಡೆಸುವುದಾಗಿ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮಗನ ಹುಟ್ಟುಹಬ್ಬಕ್ಕೆಂದು ಪಠಾಣ್‍ಕೋಟ್‍ನಿಂದ ಹೊರಟಿದ್ದ ಯೋಧ ಅನುಮಾನಾಸ್ಪದವಾಗಿ ಸಾವು

    ಮಗನ ಹುಟ್ಟುಹಬ್ಬಕ್ಕೆಂದು ಪಠಾಣ್‍ಕೋಟ್‍ನಿಂದ ಹೊರಟಿದ್ದ ಯೋಧ ಅನುಮಾನಾಸ್ಪದವಾಗಿ ಸಾವು

    ಕಾರವಾರ: ಮಗನ ಹುಟ್ಟುಹಬ್ಬಕ್ಕೆ ಸರ್‍ಪ್ರೈಸ್ ನೀಡಲೆಂದು ಪಂಜಾಬಿನ ಪಠಾಣ್‍ಕೋಟ್ ನಿಂದ ಹೊರಟಿದ್ದ ಯೋಧರೊಬ್ಬರು ಅನುಮಾನಸ್ಪದವಾಗಿ ರೈಲಿಗೆ ಬಿದ್ದು ಮೃತಪಟ್ಟಿದ್ದಾರೆ.

    ದುಮ್ಮಿಂಗ್ ಸಿದ್ದಿ (39) ಮೃತ ಯೋಧರಾಗಿದ್ದು, ಮೂಲತಃ ಕಾರವಾರ ತಾಲೂಕಿನ ಮಖೇರಿ ಗ್ರಾಮದ ನಿವಾಸಿಯಾಗಿದ್ದಾರೆ. ಕಳೆದ 15 ವರ್ಷದಿಂದ ದುಮ್ಮಿಂಗ್ ಬಳಿ ಕರ್ತವ್ಯ ನಿರ್ವಹಿಸುತ್ತಿದ್ದರು. ಅಲ್ಲದೇ ಗುರುವಾರ ಮಗನ ಹುಟ್ಟುಹಬ್ಬವನ್ನು ಆಚರಿಸುವ ಸಲುವಾಗಿ ರಜೆ ಹಾಕಿದ್ದರು. ಹೀಗಾಗಿ ಸ್ವಗ್ರಾಮಕ್ಕೆ ತೆರಳಲು ಸೋಮವಾರ ಪಂಜಾಬಿನ ಪಠಾಣ್‍ಕೋಟ್ ರೈಲ್ವೇ ನಿಲ್ದಾಣದಲ್ಲಿ ರೈಲನ್ನು ಏರಿದ್ದರು. ಆದರೆ ಅನುಮಾನಾಸ್ಪದವಾಗಿ ರೈಲಿನ ಕೆಳಭಾಗದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

    ದುಮ್ಮಿಂಗ್ ಸಿದ್ದಿ ಮೃತಪಟ್ಟಿರುವ ಮಾಹಿತಿಯನ್ನು ಸೇನಾ ಅಧಿಕಾರಿಗಳು ಕುಟುಂಬಸ್ಥರಿಗೆ ತಿಳಿಸಿದ್ದಾರೆ. ಅಲ್ಲದೇ ಬುಧವಾರ ಯೋಧನ ಪಾರ್ಥಿವ ಶರೀರವನ್ನು ಸ್ವಗ್ರಾಮಕ್ಕೆ ತರುವುದಾಗಿ ತಿಳಿಸಿದ್ದಾರೆ. ಆದರೆ ಯೋಧನ ಸಾವಿಗೆ ಯಾವುದೇ ನಿಖರ ಕಾರಣ ತಿಳಿದುಬಂದಿಲ್ಲ. ಮಾಹಿತಿಗಳ ಪ್ರಕಾರ ಯೋಧ ದುಮ್ಮಿಂಗ್ ಸಿದ್ದಿ 15 ವರ್ಷಗಳ ಕಾಲ ಸೇನೆಯಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತಿಯಾಗಿದ್ದರು. ಬಳಿಕ ದೇಶಕ್ಕೆ ಮತ್ತಷ್ಟು ಸೇವೆ ಸಲ್ಲಿಸುವ ಹಂಬಲದಿಂದ ಹೆಚ್ಚುವರಿಯಾಗಿ ಕರ್ತವ್ಯಕ್ಕೆ ಹಾಜರಾಗಿದ್ದರು.

    ಮಗನ ಹುಟ್ಟುಹಬ್ಬಕ್ಕೆ ಊರಿಗೆಲ್ಲ ಊಟ ಹಾಕಿಸಿ ಸಿದ್ಧತೆ ನಡೆಸಿದ್ದ ಕುಟುಂಬಕ್ಕೆ ಯೋಧನ ಸಾವು ಆಘಾತ ನೀಡಿದೆ. ಇದಲ್ಲದೇ ಇಡೀ ಕುಟುಂಬದ ಜವಾಬ್ದಾರಿ ಮೃತ ದುಮ್ಮಿಂಗ್ ಸಿದ್ದಿ ಮೇಲಿತ್ತು. ಅಲ್ಲದೇ ಹೊಸದಾಗಿ ಮನೆಕಟ್ಟಿಸಿದ್ದ ಮನೆಯನ್ನು ಇದೇ ತಿಂಗಳ ಕೊನೆಯಲ್ಲಿ ಗೃಹಪ್ರವೇಶಕ್ಕೆ ಸಿದ್ಧತೆ ನಡೆಸಿದ್ದರು ಎನ್ನುವ ಮಾಹಿತಿ ಲಭ್ಯವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • 408 ದಿನಗಳ ಬಳಿಕ ದೇಶಿಯ ಕ್ರಿಕೆಟಿಗೆ ಯುವಿ ಎಂಟ್ರಿ – ಮೊದ್ಲ ರನ್ನಿಗಾಗಿ 28 ಬಾಲ್ ಎದುರಿಸಿದ್ರು

    408 ದಿನಗಳ ಬಳಿಕ ದೇಶಿಯ ಕ್ರಿಕೆಟಿಗೆ ಯುವಿ ಎಂಟ್ರಿ – ಮೊದ್ಲ ರನ್ನಿಗಾಗಿ 28 ಬಾಲ್ ಎದುರಿಸಿದ್ರು

    ನವದೆಹಲಿ: 2019ರ ವಿಶ್ವಕಪ್ ಟೂರ್ನಿಯ ವೇಳೆಗೆ ಟೀಂ ಇಂಡಿಯಾ ತಂಡಕ್ಕೆ ಕಮ್‍ಬ್ಯಾಕ್ ಮಾಡುವ ಉದ್ದೇಶ ಹೊಂದಿರುವ ಯುವರಾಜ್ ಸಿಂಗ್ ಬರೋಬ್ಬರಿ 408 ದಿನಗಳ ಬಳಿಕ ಬ್ಯಾಟಿಂಗ್ ಗೆ ಇಳಿದಿದ್ದು, ಈ ವೇಳೆ ತಮ್ಮ ಮೊದಲ ರನ್ ಗಳಿಸಲು 28 ಎಸೆತಗಳನ್ನು ಎದುರಿಸಿದ್ದಾರೆ.

    ನವದೆಹಲಿಯ ಫಿರೋಜ್ ಕೊಟ್ಲಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರಣಜಿ ಪಂದ್ಯದಲ್ಲಿ ಪಂಜಾಬ್ ತಂಡದ ಪರ 5ನೇ ಕ್ರಮಾಂಕದಲ್ಲಿ ಆಡುತ್ತಿರುವ ಯುವರಾಜ್, ಫಾರ್ಮ್ ಕಂಡುಕೊಳ್ಳಲು ಪರದಾಟ ನಡೆಸಿದರು. ಈ ಹಂತದಲ್ಲಿ 29ನೇ ಎಸೆತದಲ್ಲಿ ಯುವಿ ಮೊದಲ ರನ್ ಗಳಿಸಿ ಖಾತೆ ತೆರೆದರು. ಬುಧವಾರ ದಿನದಾಟದ ಅಂತ್ಯದ ವೇಳೆಗೆ ಯುವಿ 47 ಎಸೆತಗಳಲ್ಲಿ 16 ರನ್ ಗಳಿಸಿ ಬ್ಯಾಟಿಂಗ್ ಕಾಯ್ದುಕೊಂಡರು.

    ಇತ್ತ ಡೆಲ್ಲಿ ತಂಡದ ಪರ ಆಡುತ್ತಿರುವ ಟೀಂ ಇಂಡಿಯಾ ಮತ್ತೋರ್ವ ಅನುಭವಿ ಆಟಗಾರ ಗೌತಮ್ ಗಂಭೀರ್ 1 ರನ್ ಗಳಿಸಿ ಔಟಾಗುವ ಮೂಲಕ ನಿರಾಸೆ ಮೂಡಿಸಿದರು. ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಡೆಲ್ಲಿ ತಂಡ, 107 ರನ್ ಗಳಿಗೆ ಆಲೌಟಾಯಿತು. ಇತ್ತ 2019 ರ ಐಪಿಎಲ್ ಆವೃತ್ತಿಯಿಂದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ 37 ವರ್ಷದ ಯುವಿರನ್ನು ಕೈಬಿಟ್ಟಿತ್ತು. ಇದಾದ ಬಳಿಕ ಪಂಜಾಬ್ ತಂಡದ ಯುವ ಆಟಗಾರ ಶುಬ್‍ಮನ್ ಗಿಲ್, ನ್ಯೂಜಿಲೆಂಡ್ ವಿರುದ್ಧದ ಟೀಂ ಇಂಡಿಯಾ ಎ ತಂಡಕ್ಕೆ ಆಯ್ಕೆಯಾದ ಕಾರಣ ಪಂಜಾಬ್ ತಂಡದಲ್ಲಿ ಸ್ಥಾನ ಪಡೆದಿದ್ದರು.

    2017ರ ಅಕ್ಟೋಬರಿನಲ್ಲಿ ಯುವರಾಜ್ ಸಿಂಗ್, ವಿದರ್ಭ ತಂಡದ ವಿರುದ್ಧ ನಡೆದ ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ ಪಂಜಾಬ್ ತಂಡದ ಪರ ಆಡಿದ್ದರು. ಅಂದು ತಂಡದ ನಾಯಕತ್ವ ವಹಿಸಿದ್ದ ಯುವರಾಜ್ ಸಿಂಗ್ ಎರಡು ಇನ್ನಿಂಗ್ಸ್ ಗಳಲ್ಲಿ ಕ್ರಮವಾಗಿ 20, 42 ರನ್ ಗಳಿಸಿದ್ದರು. ಇದೀಗ ಬಹುದಿನಗಳ ಬಳಿಕ ಯುವಿ ಮೈದಾನಕ್ಕೆ ಎಂಟ್ರಿ ಕೊಡುತ್ತಿದಂತೆ ಕ್ರೀಡಾಂಗಣದಲ್ಲಿ ನೆರೆದಿದ್ದ ಅಭಿಮಾನಿಗಳಿಂದ ಭರ್ಜರಿ ಸ್ವಾಗತ ಪಡೆದರು. ಯುವಿ ಪಂದ್ಯದಲ್ಲಿ ಆಡುತ್ತಾರೆಂಬ ಕಾರಣದಿಂದಲೇ ಶಾಲಾ ಕಾಲೇಜು ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಕ್ರೀಡಾಂಗಣದಲ್ಲಿ ನೆರೆದಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv