Tag: punjab

  • ಪೊಲೀಸರಿಂದಲೇ 2 ಕೆ.ಜಿ.ಚಿನ್ನ ಸೇರಿ ಹಲವು ವಸ್ತುಗಳ ದರೋಡೆ

    ಪೊಲೀಸರಿಂದಲೇ 2 ಕೆ.ಜಿ.ಚಿನ್ನ ಸೇರಿ ಹಲವು ವಸ್ತುಗಳ ದರೋಡೆ

    ಚಂಡೀಗಢ: ಬಲವಂತವಾಗಿ ನಾಲ್ವರನ್ನು ಪೊಲೀಸ್ ಠಾಣೆಗೆ ಎಳೆದೊಯ್ದು ಪೊಲೀಸರೇ ಠಾಣೆಯಲ್ಲಿ ದರೋಡೆ ಮಾಡಿರುವ ಘಟನೆ ಪಂಜಾಬ್‍ನ ಅಮೃತಸರದಲ್ಲಿ ನಡೆದಿದೆ.

    ದುಬೈನಿಂದ ಹಿಂದಿರುಗಿದ ನಾಲ್ವರು ಸ್ನೇಹಿತರು ಅಮೃತಸರ ವಿಮಾನ ನಿಲ್ದಾಣದಿಂದ ಕಾರಿನಲ್ಲಿ ಮನೆಗೆ ಹೋಗುತ್ತಿದ್ದರು. ಈ ವೇಳೆ ಪೊಲೀಸರು ಎಸ್‍ಯುವಿ ಕಾರ್ ಅಡ್ಡಗಟ್ಟಿ, ನಾಲ್ವರನ್ನು ಬಲವಂತವಾಗಿ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. ನಂತರ ಅವರ ಬಳಿ ಇದ್ದ 2 ಕೆ.ಜಿ.ಚಿನ್ನ ಹಾಗೂ ಬೆಲೆಬಾಳುವ ವಸ್ತಗಳನ್ನು ಪೊಲೀಸರೇ ದರೋಡೆ ಮಾಡಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

    ಈ ನಾಲ್ವರು ಸ್ನೇಹಿತರು ರಾಜಸ್ಥಾನದ ನಾಗೌರ್ ನಿವಾಸಿಗಳಾಗಿದ್ದು, ಗುರುವಾರ ರಾತ್ರಿ ಅಮೃತಸರ ವಿಮಾನನಿಲ್ದಾಣದಲ್ಲಿ ಇಳಿದು ಮನೆಗೆ ಮರಳುತ್ತಿದ್ದರು. ಆಗ ಪಂಜಾಬ್‍ನ ಬಟಿಂಡಾ ಬಳಿ ಕಪ್ಪು ಎಸ್‍ಯುವಿ ಕಾರ್ ಇವರ ಕಾರನ್ನು ನಿಲ್ಲಿಸಿದೆ. ನಿಲ್ಲಿಸಿದ ಎಸ್‍ಯುವಿ ಕಾರಿನಿಂದ ಮೌರ್ ಮಂಡಿಯ ಸ್ಟೇಷನ್ ಹೌಸ್ ಆಫೀಸರ್ ಕೆ.ಸಿ.ಪರಶರ್ ಕೆಳಗಿಳಿದಿದ್ದಾನೆ. ಆಗ ನಾಲ್ವರು ಪ್ರಯಾಣಿಸುತ್ತಿದ್ದ ಕಾರ್ ಒಳಗಡೆ ಏನಿದೆ ಹುಡುಕಿ ಎಂದು ತನ್ನ ಸಹಚರರಿಗೆ ಹೇಳಿದ್ದಾನೆ. ಈ ವೇಳೆ ಕಾರಿನಲ್ಲಿ ಚಿನ್ನ ಹಾಗೂ ಬೆಲೆ ಬಾಳುವ ವಸ್ತುಗಳಿರುವುದು ಬೆಳಕಿಗೆ ಬಂದಿದೆ.

    ಕಾರಿನಲ್ಲಿದ್ದ ಮೊಹಮ್ಮದ್ ರಫೀಕ್, ಲಿಯಾಕತ್ ಶೆರಾನಿ, ಮೊಹಮ್ಮದ್ ಇಮ್ರಾನ್ ಹಾಗೂ ಮೊಹಮ್ಮದ್ ಯುನಸ್ ನಾಲ್ವರನ್ನೂ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. ನಂತರ ಅವರನ್ನು ಸೆಲ್‍ನಲ್ಲಿ ಬಂಧಿಸಿ, ನಾಲ್ಕು ಗಂಟೆಗಳ ನಂತರ ಅವರನ್ನು ಹೊರಗೆ ಬಿಟ್ಟಿದ್ದಾರೆ. ಆದರೆ ದುಬೈನಿಂದ ತಂದಿದ್ದ ಹಲವು ವಸ್ತುಗಳನ್ನು ಪೊಲೀಸರೇ ತೆಗೆದುಕೊಂಡು ಹೋಗಿದ್ದಾರೆ, ಇದರಲ್ಲಿ 2 ಕೆ.ಜಿ.ಚಿನ್ನವೂ ಸೇರಿದೆ ಎಂದು ಆರೋಪಿಸಲಾಗಿದೆ.

    ಆರೋಪಿಗಳ ವಿರುದ್ಧ ಅಪಹರಣ ಹಾಗೂ ಸುಲಿಗೆ ಪ್ರಕರಣ ದಾಖಲಿಸಲಾಗಿತ್ತು. ಸ್ಟೇಷನ್ ಹೌಸ್ ಆಫೀಸರ್ ಕೆ.ಸಿ.ಪರಶರ್, ಇವನ ಗನ್ ಮ್ಯಾನ್ ಹವಾಲ್ದಾರ್ ಅವತಾರ್ ಸಿಂಗ್ ಹಾಗೂ ಅನುಪ್ ಗ್ರೋವರ್‍ನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಆದರೆ ಚಿನ್ನ ಇನ್ನೂ ಸಿಕ್ಕಿಲ್ಲ, ವಶಪಡಿಸಿಕೊಳ್ಳಬೇಕಿದೆ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ನಾನಕ್ ಸಿಂಗ್ ತಿಳಿಸಿದ್ದಾರೆ.

  • 4 ವರ್ಷದ ಹೆಣ್ಣು ಮಗುವಿನ ಕಿಡ್ನಾಪ್‍ಗೆ ಯತ್ನ- ಸಿಸಿಟಿಯಲ್ಲಿ ದೃಶ್ಯ ಸೆರೆ

    4 ವರ್ಷದ ಹೆಣ್ಣು ಮಗುವಿನ ಕಿಡ್ನಾಪ್‍ಗೆ ಯತ್ನ- ಸಿಸಿಟಿಯಲ್ಲಿ ದೃಶ್ಯ ಸೆರೆ

    ಚಂಢೀಗಡ: ತಂದೆ-ತಾಯಿ ಜೊತೆ ಮಲಗಿದ್ದ ಪುಟ್ಟ ಕಂದಮ್ಮನನ್ನು ವ್ಯಕ್ತಿಯೊಬ್ಬ ಅಪಹರಣ ಮಾಡಲು ಯತ್ನಿಸಿದ ಘಟನೆ ಪಂಜಾಬಿನ ಲೂಧಿಯಾನದಲ್ಲಿ ನಡೆದಿದೆ.

    ವ್ಯಕ್ತಿ 4 ವರ್ಷದ ಹೆಣ್ಣು ಮಗುವನ್ನು ಕಿಡ್ನಾಪ್ ಮಾಡಲು ಯತ್ನಿಸಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಘಟನೆ ಸಂಬಂಧ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

    ವಿಡಿಯೋದಲ್ಲೇನಿದೆ..?
    ಕಳೆದ ರಾತ್ರಿ ಸೈಕಲ್ ಏರಿ ಬಂದ ವ್ಯಾಪಾರಿಯೊಬ್ಬ ಮನೆಯ ಹೊರಗಡೆ ತಂದೆ-ತಾಯಿ ಜೊತೆ ಮಂಚದಲ್ಲಿ ಮಲಗಿದ್ದ ಪುಟ್ಟ ಕಂದಮ್ಮನನ್ನು ಮೆಲ್ಲನೆ ಎತ್ತಿಕೊಂಡು ಸೈಕಲ್ ನಲ್ಲಿ ಮಲಗಿಸುತ್ತಾನೆ. ಈ ವೇಳೆ ಮಗುವಿನ ತಾಯಿ ಎಚ್ಚರಗೊಂಡು ಮಗುವನ್ನು ಆತನಿಂದ ಎಳೆದುಕೊಳ್ಳುತ್ತಾರೆ. ಇಷಾಗುವಾಗ ಮಗುವಿನ ತಂದೆಯೂ ಎಚ್ಚರಗೊಳ್ಳುತ್ತಾರೆ. ತಂದೆ ಎಚ್ಚರಗೊಂಡಂತೆಯೇ ವ್ಯಾಪಾರಿ ಸ್ಥಳದಿಂದ ಸೈಕಲ್ ಮೂಲಕ ಪರಾರಿಯಾಗಲು ಯತ್ನಿಸುತ್ತಾನೆ. ಈ ಸಂದರ್ಭದಲ್ಲಿ ಮಗುವಿನ ತಂದೆ ಕಳ್ಳನನ್ನು ಬೆನ್ನಟ್ಟುವುದನ್ನು ವಿಡಿಯೋದಲ್ಲಿ ಕಾಣಬಹುದು. ಮಗು ಕಳ್ಳತನ ಮಾಡಲು ಯತ್ನಿಸಿದ ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳೀಯರು ಸೇರಿ ಆರೋಪಿ ವ್ಯಾಪಾರಿಯನ್ನು ಹಿಡಿದು ಪೊಲೀಸರ ಕೈಗೆ ಒಪ್ಪಿಸಿದ್ದಾರೆ.

    ಸುಮಾರು 40 ವರ್ಷ ವಯಸ್ಸಿನ ಆರೋಪಿ ಮೊದಲು ಕುಟುಂಬ ಮಲಗಿದೆಯೋ ಇಲ್ಲವೋ ಎಂದು ಬಂದು ಪರಿಶೀಲಿಸಿ ಹೋಗಿದ್ದಾನೆ. ಸ್ವಲ್ಪ ಹೊತ್ತಿನ ನಂತರ ತನ್ನ ಸೈಕಲ್ ಸಮೇತ ಬಂದು ಮಗುವನ್ನು ಅಪಹರಿಸುವ ಪ್ಲಾನ್ ಮಾಡಿದ್ದಾನೆ. ಆರೋಪಿ ಮಗುವನ್ನು ಎತ್ತಿಕೊಳ್ಳುತ್ತಿದ್ದಂತೆಯೇ ಅದರ ತಾಯಿ ಎಚ್ಚರಗೊಂಡು ಕಿರುಚಾಡಿದ ಪರಿಣಾಮ ಸ್ಥಳೀಯರು ಆರೋಪಿಯನ್ನು ಹಿಡಿದಿದ್ದಾರೆ ಎಂದು ಹಿರಿಯ ಪೊಲೀಸ್ ಆದಿಕಾರಿ ರಮನ್ ದೀಪ್ ಸಿಂಗ್ ಅವರು ರಾಷ್ಟ್ರೀಯ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.

    ಆರೋಪಿ ಮಗುವನ್ನು ಯಾಕೆ ಕಿಡ್ನಾಪ್ ಮಾಡಲು ಯತ್ನಿಸಿದ್ದಾನೆ ಎಂಬುದರ ಬಗ್ಗೆ ಮಾಹಿತಿ ತಿಳಿದುಬಂದಿಲ್ಲ. ಆದರೆ ಸಿಸಿಟಿವಿ ದೃಶ್ಯವನ್ನಾಧರಿಸಿ ಮಗು ಕಳ್ಳತನ ಸಂಬಂಧ ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.

  • ಪಾಕಿನಿಂದ ಸಟ್ಲೇಜ್ ನದಿಗೆ ಹರಿದು ಬಂದ ಕ್ಯಾನ್ಸರ್‌ಕಾರಕ ನೀರು

    ಪಾಕಿನಿಂದ ಸಟ್ಲೇಜ್ ನದಿಗೆ ಹರಿದು ಬಂದ ಕ್ಯಾನ್ಸರ್‌ಕಾರಕ ನೀರು

    – 17ಕ್ಕೂ ಹೆಚ್ಚು ಗಡಿ ಗ್ರಾಮಗಳಲ್ಲಿ ಪ್ರವಾಹ ಪರಿಸ್ಥಿತಿ

    ಚಂಡೀಗಢ: ಪಾಕಿಸ್ತಾನ ಭಾರತದ ವಿರುದ್ಧ ಕತ್ತಿ ಮಸೆಯುತ್ತಲೇ ಬಂದಿರುವುದು ತಿಳಿದ ಸಂಗತಿ. ಯಾವಾಗಲೂ ಭಾರತದ ವಿರುದ್ಧ ಸಂಚು ಮಾಡುತ್ತಲೇ ಇರುವ ಪಾಕ್, ಈಗ ನೀರಿನ ಮೂಲಕ ಸೇಡು ತೀರಿಸಿಕೊಳ್ಳುತ್ತಿದೆಯಾ ಎನ್ನುವ ಅನುಮಾನಗಳು ಹುಟ್ಟುಕೊಂಡಿದೆ.

    ಹೌದು. ಪಾಕಿಸ್ತಾನದ ಭಾಗದಲ್ಲಿರುವ ಸಟ್ಲೇಜ್ ನದಿಯಿಂದ ಏಕಾಏಕಿ ಭಾರಿ ಪ್ರಮಾಣದಲ್ಲಿ ನೀರು ಹರಿಬಿಟ್ಟಿದ್ದ ಕಾರಣಕ್ಕೆ ಪಂಜಾಬ್ ಗಡಿ ಭಾಗದ ಗ್ರಾಮಗಳಲ್ಲಿ ಗುರುವಾರ ದಿಢೀರ್ ಪ್ರವಾಹ ಪರಿಸ್ಥಿತಿ ತಲೆದೋರಿದೆ.

    ಪಾಕಿಸ್ತಾನವು ತನ್ನ ಕೌಸರ್ ನಗರ ಸಮೀಪದಲ್ಲಿರುವ ಸಟ್ಲೇಜ್ ನದಿಯ ಕ್ರಸ್ಟ್ ಗೇಟ್‍ಗಳನ್ನು ತೆಗೆದಿದೆ. ಇದರಿಂದಾಗಿ ಪಂಜಾಬ್‍ನ ಫಿರೋಜ್‍ಪುರ ಜಿಲ್ಲೆಯ 17ಕ್ಕೂ ಹೆಚ್ಚು ಗಡಿ ಗ್ರಾಮಗಳು ಜಲಾವೃತವಾಗಿ ಪ್ರವಾಹ ಪರಿಸ್ಥಿತಿ ಎದುರಿಸುತ್ತಿವೆ. ಈ ಹಿನ್ನೆಲೆ ಪ್ರವಾಹದಲ್ಲಿ ಸಿಲುಕಿದ್ದ ಜನರನ್ನು ಸುರಕ್ಷಿತ ಜಾಗಗಳಿಗೆ ತಲುಪಿಸಲು ಭಾರತೀಯ ಸೇನೆ, ಎನ್‍ಡಿಆರ್‍ಎಫ್ ಸಿಬ್ಬಂದಿ ಜೊತೆಗೂಡಿ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ.

    ಈ ಬಗ್ಗೆ ಫಿರೋಜ್‍ಪುರ ಜಿಲ್ಲಾಧಿಕಾರಿ ಚಂದರ್ ಗೈಂದ್ ಮಾತನಾಡಿ, ಪಾಕಿಸ್ತಾನ ಸಟ್ಲೇಜ್ ನದಿ ನೀರು ಬಿಟ್ಟಿರುವುದರಿಂದ ಗಡಿಭಾಗದ ಫಿರೋಜ್‍ಪುರ 17ಕ್ಕೂ ಗ್ರಾಮಗಳು ಜಲಾವೃತಗೊಂಡಿದೆ. ಸಟ್ಲೇಜ್ ನದಿಯಿಂದ ಫಿರೋಜ್‍ಪುರ ಕಡೆ ಹರಿಬಿಡಲಾಗಿರುವ ನೀರಿನಲ್ಲಿ ಚರ್ಮೋದ್ಯಮ ತ್ಯಾಜ್ಯದ ಕಲುಷಿತ ನೀರು ಮಿಶ್ರಣವಾಗಿದೆ. ಈ ಮಿಶ್ರಿತ ನೀರಿನಲ್ಲಿ ಕ್ಯಾನ್ಸರ್‌ಕಾರಕ ರೋಗಾಣುಗಳಿವೆ ಎಂದು ಹೇಳಿದ್ದಾರೆ.

    ಪಾಕಿಸ್ತಾನದ ಕೌಸರ್ ಜಿಲ್ಲೆಯು ಚರ್ಮೋದ್ಯಮ ಘಟಕಗಳಿಗೆ ಹೆಸರುವಾಸಿಯಾಗಿದೆ. ಈ ಘಟಕಗಳ ಕಲುಷಿತ ನೀರನ್ನು ಕೂಡ ಸಟ್ಲೇಜ್ ನದಿಗೆ ಬಿಡಲಾಗಿದೆ. ಚರ್ಮೋದ್ಯಮ ಹಾನಿಕಾರದ ಕಲುಷಿತ ನೀರು ಕ್ಯಾನ್ಸರ್‌ಕಾರಕವಾಗಿದ್ದು, ಈ ನೀರನ್ನು ನದಿಗೆ ಬಿಟ್ಟಿರುವುದರಿಂದ ಜಲಚರಗಳಿಗೆ ಹಾಗೂ ನದಿ ಪಾತ್ರದ ಜನರಿಗೆ ಮಾರಕವಾಗಿ ಪರಿಣಮಿಸಲಿದೆ. ಈ ವಿಚಾರ ಗೊತ್ತಿದ್ದರೂ ಕೂಡ ಪಾಕಿಸ್ತಾನ ಕಲುಷಿತ ನೀರನ್ನು ನದಿಗೆ ಬಿಡುವುದನ್ನು ತಡೆಯದೆ, ಕ್ರಮ ತೆಗೆದುಕೊಳ್ಳದೆ ಸುಮ್ಮನಿದೆ.

    ಭಾರತ ಸರ್ಕಾರ ಜಮ್ಮು-ಕಾಶ್ಮೀರದ 370ನೇ ವಿಧಿ ರದ್ದು ಮಾಡಿ ಜಮ್ಮು-ಕಾಶ್ಮೀರವನ್ನು ಎರಡು ಕೇಂದ್ರಾಡಳಿತ ಪ್ರದೇಶವಾಗಿ ವಿಭಜಿಸಿದ ಕ್ರಮದ ವಿರುದ್ಧ ಪಾಕಿಸ್ತಾನ ರೊಚ್ಚಿಗೆದ್ದಿದೆ. ಹೀಗಾಗಿ ಉದ್ದೇಶಪೂರ್ವಕವಾಗಿಯೇ ಚರ್ಮೋದ್ಯಮ ಘಟಕಗಳ ಕಲುಷಿತ ನೀರನ್ನು ಸಟ್ಲೇಜ್ ನದಿಗೆ ಬಿಟ್ಟು, ನಂತರ ಕ್ರಸ್ಟ್ ಗೇಟ್ ತೆರೆದಿದೆ ಎಂಬ ಆರೋಪ ಕೂಡ ಪಾಕಿಸ್ತಾನದ ವಿರುದ್ಧ ಕೇಳಿಬರುತ್ತಿದೆ.

  • ಅಟ್ಟಾರಿ- ವಾಘಾ ಗಡಿಯಲ್ಲಿ ಯೋಧರಿಗೆ ರಾಕಿ ಕಟ್ಟಿ ಸಂಭ್ರಮಿಸಿದ ಮಹಿಳೆಯರು

    ಅಟ್ಟಾರಿ- ವಾಘಾ ಗಡಿಯಲ್ಲಿ ಯೋಧರಿಗೆ ರಾಕಿ ಕಟ್ಟಿ ಸಂಭ್ರಮಿಸಿದ ಮಹಿಳೆಯರು

    ಚಂಡೀಗಢ: ಈ ಬಾರಿ ಸ್ವಾತಂತ್ರ್ಯ ದಿನ ಹಾಗೂ ರಕ್ಷಾಬಂಧನ ಹಬ್ಬ ಒಟ್ಟಿಗೆ ಬಂದಿದೆ. ಹೀಗಾಗಿ ಅಟ್ಟಾರಿ- ವಾಘಾ ಗಡಿ ಪ್ರದೇಶದಲ್ಲಿ ಇಂದು ಬಿಎಸ್‍ಎಫ್ ಯೋಧರಿಗೆ ಮಹಿಳೆಯರು ರಾಕಿ ಕಟ್ಟುವ ಮೂಲಕ ರಕ್ಷಾ ಬಂಧನ್ ಹಬ್ಬವನ್ನು ಖುಷಿಯಿಂದ ಆಚರಿಸಿದ್ದಾರೆ.

    ಇಂದು ದೇಶದಲ್ಲಿ 73ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಹಾಗೆಯೇ ಇಂದು ರಕ್ಷಾಬಂಧನ ಹಬ್ಬ ಕೂಡ ಬಂದಿರುವುದು ವಿಶೇಷವಾಗಿದೆ. ಹೀಗಾಗಿ ದೇಶದ ವಿವಿಧ ಕಡೆಗಳಿಂದ ವಾಘಾ ಗಡಿಗೆ ಆಗಮಿಸಿದ್ದ ಮಹಿಳೆಯರು ಭದ್ರತಾ ಪಡೆ ಸಿಬ್ಬಂದಿಗೆ ರಾಕಿ ಕಟ್ಟುವ ಮೂಲಕ ರಕ್ಷಾ ಬಂಧನ ಹಬ್ಬದ ಶುಭಾಶಯ ಕೋರಿದರು.

    ಈ ವೇಳೆ ಪುಣೆಯಿಂದ ಬಂದಿದ್ದ ಮಹಿಳೆಯೊಬ್ಬರು ಮಾತನಾಡಿ, ಗಡಿ ಭಾಗದಲ್ಲಿ ರಕ್ಷಾ ಬಂಧನ ಆಚರಿಸುತ್ತಿರುವುದಕ್ಕೆ ತುಂಬಾ ಖುಷಿಯಾಗುತ್ತಿದೆ. ದೇಶಕ್ಕಾಗಿ ಹಗಲಿರುಳು ಶ್ರಮಪಟ್ಟು ಸೇವೆ ಸಲ್ಲಿಸುವ ಯೋಧರಿಗೆ ಧನ್ಯವಾದ ಎಂದು ಸಂತೋಷ ಹಂಚಿಕೊಂಡರು.

    ಅಷ್ಟೇ ಅಲ್ಲದೆ ಮಹಿಳೆಯರಿಂದ ರಾಕಿ ಕಟ್ಟಿಸಿಕೊಂಡ ಯೋಧರು ಕೂಡ ಪ್ರೀತಿಯಿಂದ ಸಿಹಿ ನೀಡಿ ಮಹಿಳೆಯರಿಗೆ ಶುಭಕೋರಿ ಸಂತಸಪಟ್ಟರು.

  • ಮತದಾನ ಜಾಗೃತಿ ಬ್ಯಾನರಿನಲ್ಲಿ ನಿರ್ಭಯಾ ಪ್ರಕರಣ ಅಪರಾಧಿ ಫೋಟೋ

    ಮತದಾನ ಜಾಗೃತಿ ಬ್ಯಾನರಿನಲ್ಲಿ ನಿರ್ಭಯಾ ಪ್ರಕರಣ ಅಪರಾಧಿ ಫೋಟೋ

    – ಚುನಾವಣಾ ಆಯೋಗ ಎಡವಟ್ಟಿಗೆ ವ್ಯಾಪಕ ಆಕ್ರೋಶ

    ಚಂಡೀಗಢ: ಮತದಾನ ಜಾಗೃತಿ ಬ್ಯಾನರ್ ನಲ್ಲಿ ನಿರ್ಭಯಾ ಅತ್ಯಾಚಾರ ಪ್ರಕರಣದ ಅಪರಾಧಿ ಫೋಟೋ ಹಾಕಿ ಪಂಜಾಬ್ ಚುನಾವಣಾ ಆಯೋಗವು ಎಡವಟ್ಟು ಮಾಡಿಕೊಂಡಿದೆ.

    ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಮತದಾನ ಜಾಗೃತಿ ಬ್ಯಾನರ್ ಗಳನ್ನು ಹೋಶಿಯಾರ್​ಪುರದ ಸರ್ಕಾರಿ ಕಚೇರಿಗಳ ಸಂಕೀರ್ಣದಲ್ಲಿ ಹಾಕಲಾಗಿತ್ತು. ಆದರೆ ಯಾರೊಬ್ಬರೂ ಇದನ್ನು ಗಮನಿಸಿರಲಿಲ್ಲ. ಚುನಾವಣೆ ಮುಗಿದು 2 ತಿಂಗಳು ಕಳೆದ ನಂತರ ಶುಕ್ರವಾರ ವ್ಯಕ್ತಿಯೊಬ್ಬರು ಚುನಾವಣಾ ಆಯೋಗದಿಂದ ಆಗಿರುವ ಎಡವಟ್ಟನ್ನು ಪತ್ತೆ ಹಚ್ಚಿದ್ದಾರೆ. ಈ ಮತದಾನ ಜಾಗೃತಿ ಬ್ಯಾನರ್ ನಲ್ಲಿ ನಿರ್ಭಯಾ ಅತ್ಯಾಚಾರ ಪ್ರಕರಣದ ಅಪರಾಧಿ ಮುಕೇಶ್​ ಸಿಂಗ್ ಫೋಟೋವನ್ನು ಮುದ್ರಿಸಲಾಗಿದೆ.

    ಚುನಾವಣಾ ಆಯೋಗ ಎಡವಟ್ಟನ್ನು ಜನಸಾಮಾನ್ಯರು ಗುರುತಿಸಿದ್ದು, ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಅಷ್ಟೇ ಅಲ್ಲದೆ ಈ ಬ್ಯಾನರ್ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದ್ದು, ಅಧಿಕಾರಿಗಳ ವಿರುದ್ಧ ನೆಟ್ಟಿಗರು ಕಿಡಿಕಾರಿದ್ದಾರೆ.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ಪಂಜಾಬ್ ಕ್ಯಾಬಿನೆಟ್ ಸಚಿವ ಶ್ಯಾಮ್ ಅರೋರ್ ಅವರು, ಗೊತ್ತಿಲ್ಲದೆ ಚುನಾವಣಾ ಆಯೋಗದ ಅಧಿಕಾರಿಗಳು ಫೋಟೋವನ್ನು ಹಾಕಿರಬಹುದು. ತಪ್ಪಾದ ಗುರುತಿನ ಪತ್ರವನ್ನು ಅಧಿಕಾರಿಗಳು ಬಳಸಿರಬಹುದು. ಈ ಸಂಬಂಧ ತನಿಖೆ ನಡೆಸಲಾಗುತ್ತದೆ ಎಂದು ತಿಳಿಸಿದ್ದಾರೆ.

    ಮುಖೇಶ್ ಸಿಂಗ್ 2012ರಲ್ಲಿ ನಡೆದ ನಿರ್ಭಯಾ ಗ್ಯಾಂಗ್ ರೇಪ್ ಪ್ರಕರಣದ ಅಪರಾಧಿ. ಮುಖೇಶ್ ಸಿಂಗ್, ನಾನು ಅಪರಾಧ ಎಸಗಿಲ್ಲ. ಕೇವಲ ಬಸ್ ಜಾಲನೆ ಮಾಡುತ್ತಿದ್ದೆ ಎಂದು ಕೋರ್ಟ್ ನಲ್ಲಿ ಹೇಳಿಕೆ ನೀಡಿದ್ದ. ಆತನನ್ನು ಸೇರಿದಂತೆ ಒಟ್ಟು 4 ಜನ ಅಪರಾಧಿಗಳಿಗೆ ದೆಹಲಿ ಕೋರ್ಟ್ ಗಲ್ಲು ಶಿಕ್ಷೆ ವಿಧಿಸಿತ್ತು. ಅಪರಾಧಿಗಳು ಈ ತೀರ್ಪನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಅರ್ಜಿ ಸಲ್ಲಿಸಿದ್ದರು. ಆದರೆ ಕೋರ್ಟ್ ಅರ್ಜಿಯನ್ನು ವಜಾಗೊಳಿಸಿತ್ತು.

  • ಪಂಜಾಬಿನಲ್ಲಿ ಕೈ ಬಂಡಾಯ – ಸಚಿವ ಸ್ಥಾನಕ್ಕೆ ಸಿಧು ರಾಜೀನಾಮೆ

    ಪಂಜಾಬಿನಲ್ಲಿ ಕೈ ಬಂಡಾಯ – ಸಚಿವ ಸ್ಥಾನಕ್ಕೆ ಸಿಧು ರಾಜೀನಾಮೆ

    ನವದೆಹಲಿ: ಪಂಜಾಬ್ ಸಚಿವ ನವಜೋತ್ ಸಿಂಗ್ ಸಿಧು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ತಮ್ಮ ರಾಜೀನಾಮೆ ಪತ್ರವನ್ನು ಮಾಜಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಸಲ್ಲಿಸಿದ್ದಾರೆ.

    ಸಿಧು ತಮ್ಮ ರಾಜೀನಾಮೆ ಪತ್ರವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ನನ್ನ ರಾಜೀನಾಮೆ ಪತ್ರವನ್ನು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ 2019 ರ ಜೂನ್ 10 ರಂದು ಸಲ್ಲಿಸಿದ್ದೇನೆ ಎಂದು ಬರೆದುಕೊಂಡಿದ್ದಾರೆ. ಈ ಪತ್ರವನ್ನು ಪಂಜಾಬ್ ಸಿಎಂ ಅಮರೀಂದರ್ ಸಿಂಗ್ ಅವರಿಗೂ ನೀಡಿದ್ದೇನೆ ಎಂದು ಹೇಳಿದ್ದಾರೆ.

    ಆರಂಭದಿಂದಲೂ ಸಿಧು ಮತ್ತು ಅಮರೀಂದರ್ ಸಿಂಗ್ ನಡುವೆ ಒಳ ಜಗಳಗಳು ಇದ್ದವು. ಜೂನ್ 6 ರಂದು ಅಮರೀಂದರ್ ಸಿಂಗ್ ತಮ್ಮ ಸಂಪುಟ ಪುನರ್ ರಚನೆ ಮಾಡಿದ್ದು, ಸ್ಥಳೀಯ ಆಡಳಿತ, ಪ್ರವಾಸೋದ್ಯಮ ಮತ್ತು ಸಾಂಸ್ಕೃತಿಕ ವ್ಯವಹಾರದಂತಹ ಪ್ರಮುಖ ಖಾತೆಗಳನ್ನು ಸಿಧು ಅವರಿಂದ ಹಿಂಪಡೆದು ವಿದ್ಯುತ್ ಮತ್ತು ಹೊಸ ಮತ್ತು ನವೀಕರಿಸಬಹುದಾದ ಇಂಧನ ಮೂಲಗಳ ಖಾತೆ ಅವರಿಗೆ ನೀಡಿದ್ದರು.

    ಇದಾದ ನಂತರ ಸರ್ಕಾರದ ಪ್ರಮುಖ ಕಾರ್ಯಕ್ರಮಗಳ ಅನುಷ್ಠಾನದ ವೇಗವನ್ನು ಹೆಚ್ಚಿಸುವ ಉದ್ದೇಶದಿಂದ ಜೂನ್ 8 ರಂದು ಮುಖ್ಯಮಂತ್ರಿ ರಚಿಸಿದ ಸಮಾಲೋಚನಾ ಗುಂಪುಗಳಿಂದ ಸಿಧು ಅವರು ಹೊರಗುಳಿದಾಗ ಅವರು ರಾಜೀನಾಮೆ ನೀಡಬಹುದು ಎಂದು ಹೇಳಲಾಗಿತ್ತು.

    ಈ ಹಿಂದೆ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಮತ್ತು ರಾಜ್ಯದ ಪಕ್ಷದ ನಾಯಕತ್ವದ ವಿರುದ್ಧ ಟೀಕೆ ಮಾಡಿದ್ದ ಸಿಧು ಅವರಿಂದ ಕಾಂಗ್ರೆಸ್ ಪಕ್ಷದ ಭವಿಷ್ಯವನ್ನು ಹಾಳಾಗುತ್ತಿದೆ ಎಂಬ ಆರೋಪಗಳು ಕೇಳಿ ಬಂದಿದ್ದವು. ನಂತರ ಅವರು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅಮೇಥಿಯಿಂದ ಲೋಕಸಭಾ ಚುನಾವಣೆಯಲ್ಲಿ ಸೋತರೆ ರಾಜಕೀಯ ತೊರೆಯುವುದಾಗಿ ಈ ಹಿಂದೆ ಪ್ರತಿಜ್ಞೆಯನ್ನು ಕೂಡ ಮಾಡಿದ್ದರು.

    ಕಳೆದ ಜೂನ್ 10 ರಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಅವರ ಸಹೋದರಿ ಪ್ರಿಯಾಂಕಾ ಗಾಂಧಿಯನ್ನು ನವದೆಹಲಿಯಲ್ಲಿ ಭೇಟಿಯಾಗಿ ರಾಜ್ಯದಲ್ಲಿ ಇರುವ ಪರಿಸ್ಥಿತಿಯ ಬಗ್ಗೆ ತಿಳಿಸಿದರು. ಆ ದಿನವೇ ರಾಜೀನಾಮೆ ಪತ್ರವನ್ನು ನೀಡಿದ್ದರು.

  • ಟಿಕ್‍ಟಾಕ್ ವಿಡಿಯೋಗಾಗಿ ಪ್ರಯಾಣಿಕರ ಪ್ರಾಣದ ಜತೆ ಆಟವಾಡಿದ ಬಸ್ ಚಾಲಕ ಸಸ್ಪೆಂಡ್

    ಟಿಕ್‍ಟಾಕ್ ವಿಡಿಯೋಗಾಗಿ ಪ್ರಯಾಣಿಕರ ಪ್ರಾಣದ ಜತೆ ಆಟವಾಡಿದ ಬಸ್ ಚಾಲಕ ಸಸ್ಪೆಂಡ್

    ಚಂಡೀಗಢ: ಬಸ್ ಚಾಲನೆ ಮಾಡುತ್ತಲೇ ಟಿಕ್‍ಟಾಕ್ ವಿಡಿಯೋ ಮಾಡಿಕೊಂಡಿದ್ದ ಚಾಲಕನನ್ನು ಕೆಲಸದಿಂದ ಅಮಾನತುಗೊಳಿಸಿದ ಘಟನೆ ಪಂಜಾಬ್‍ನಲ್ಲಿ ನಡೆದಿದೆ.

    ಅಮನ್ ಜೋತ್ ಬ್ರಾರ್ ಅಮಾನತುಗೊಂಡ ಚಾಲಕ. ಅಮನ್ ಜೋತ್ ಬ್ರಾರ್ ಪಂಜಾಬ್ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಜಲಂಧರ್ ನಿಂದ ದೆಹಲಿಗೆ ಜುಲೈ 7ರಂದು ತೆರಳುತ್ತಿದ್ದಾಗ ಟಿಕ್‍ಟಾಕ್ ವಿಡಿಯೋ ಹುಚ್ಚಿಗೆ ಬಿದ್ದು ಕೆಲಸ ಕಳೆದುಕೊಂಡಿದ್ದಾನೆ.

    ಆಗಿದ್ದೇನು?:
    ಚಾಲಕ ಅಮನ್ ಜೋತ್ ಬ್ರಾರ್ ಜಲಂಧರ್ ನಿಂದ ದೆಹಲಿಗೆ ಪ್ರಯಾಣಿಕರಿದ್ದ ಬಸ್ ಚಾಲನೆ ಮಾಡುತ್ತಿದ್ದ. ಈ ವೇಳೆ ನಿದ್ದೆ ಮಾಡದಂತೆ ಎಚ್ಚರವಹಿಸಲು ಪ್ಲೇಯರ್ ನಲ್ಲಿ ಹಾಡುಗಳನ್ನು ಹಾಕಿಕೊಂಡು ತಾನೂ ಹಾಡುತ್ತಾ ವೇಗವಾಗಿ ಬಸ್ ಚಾಲನೆ ಮಾಡುತ್ತಿದ್ದ. ಟಿಕ್‍ಟಾಕ್ ಸಾಮಾಜಿಕ ಜಾಲತಾಣದ ಬಗ್ಗೆ ನೆನಪಾಗಿ, ಬಸ್ ಚಾಲನೆ ಮಾಡುವ ದೃಶ್ಯವನ್ನು ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದಾನೆ. ಬಳಿಕ ಅದನ್ನು ಟಿಕ್‍ಟಾಕ್‍ನಲ್ಲಿ ಅಪ್ಲೋಡ್ ಮಾಡಿ ಜನಪ್ರಿಯತೆ ಗಿಟ್ಟಿಸಿಕೊಳ್ಳಲು ಮುಂದಾಗಿದ್ದ.

    ಅಮನ್ ಜೋತ್ ಬ್ರಾರ್ ವಿಡಿಯೋಗೆ ಅಷ್ಟಾಗಿ ಲೈಕ್, ಕಮೆಂಟ್ಸ್ ಸಿಕ್ಕಿಲ್ಲ. ಆದರೆ ದುರದೃಷ್ಟಕ್ಕೆ ವಿಡಿಯೋವನ್ನು ಪಂಜಾಬ್ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧಿಕಾರಿಗಳ ನೋಡಿದ್ದಾರೆ. ಪರಿಣಾಮ ಚಾಲಕನ ಮೇಲೆ ಕಿಡಿಕಾರಿದ ಅಧಿಕಾರಿಗಳು, ಬಸ್ ಚಾಲನೆ ಮಾಡುತ್ತಲೇ ಅಮನ್ ಜೋತ್ ಬ್ರಾರ್ ಟಿಕ್‍ಟಾಕ್ ವಿಡಿಯೋ ಮಾಡಿಕೊಂಡಿದ್ದಾನೆ. ಈ ಮೂಲಕ ಪ್ರಯಾಣಿಕರ ಪ್ರಾಣದ ಜೊತೆಗೆ ಆಟವಾಡಿದ್ದಾನೆ ಎಂದು ಆರೋಪಿಸಿ ಕೆಲಸದಿಂದ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ. ಅಷ್ಟೇ ಅಲ್ಲದೆ ಅಮನ್ ಜೋತ್ ಬ್ರಾರ್ ನನ್ನು ವಿಚಾರಣೆಗೆ ಒಳಪಡಿಸಬೇಕು ಎಂದು ಸೂಚನೆ ನೀಡಿದ್ದಾರೆ.

  • ಹಾಡಿನ ಸಾಹಿತ್ಯದಲ್ಲಿ ಮಹಿಳೆಯರಿಗೆ ಅಗೌರವ-ಸಂಕಷ್ಟದಲ್ಲಿ ಹನಿಸಿಂಗ್

    ಹಾಡಿನ ಸಾಹಿತ್ಯದಲ್ಲಿ ಮಹಿಳೆಯರಿಗೆ ಅಗೌರವ-ಸಂಕಷ್ಟದಲ್ಲಿ ಹನಿಸಿಂಗ್

    ಮುಂಬೈ: ರ‍್ಯಾಪರ್ ಹನಿಸಿಂಗ್ ವಿರುದ್ಧ ಪಂಜಾಬ್ ಮಹಿಳಾ ಆಯೋಗ ಕಾನೂನು ಕ್ರಮಕ್ಕೆ ಮುಂದಾಗಿದೆ. ಇತ್ತೀಚೆಗೆ ಹನಿಸಿಂಗ್ ರಚಿತ ‘ಮಖ್ನಾ’ ಹಾಡಿನ ಸಾಹಿತ್ಯ ಮಹಿಳೆಯರಿಗೆ ಅಗೌರವ ತೋರುತ್ತಿದೆ ಎಂದು ಆಯೋಗ ಆರೋಪಿಸಿದೆ.

    ಈ ಕುರಿತು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿರುವ ಪಂಜಾಬ್ ಮಹಿಳಾ ಆಯೋಗ ಕ್ರಿಮಿನಲ್ ಪ್ರಕರಣದಡಿ ಕೇಸ್ ದಾಖಲಿಸಿಕೊಳ್ಳಬೇಕೆಂದು ಪೊಲೀಸ್ ಮಹಾನಿರ್ದೇಶಕರಿಗೆ ಪತ್ರ ಬರೆದಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಮಹಿಳಾ ಆಯೋಗದ ಅಧ್ಯಕ್ಷೆ ಮನಿಶಾ ಗುಲಾಟಿ, ಹಾಡಿನ ಸಾಹಿತ್ಯ ಅಶ್ಲೀಲತೆಯಿಂದ ಕೂಡಿದೆ. ಈ ಸಂಬಂಧ ಕಾನೂನಿನ ಅಡಿಯಲ್ಲಿ ಪೊಲೀಸ್ ತನಿಖೆ ನಡೆಯಬೇಕಿದೆ. ಹನಿಸಿಂಗ್ ಜೊತೆ ಗಾಯಕಿ ನೇಹಾ ಕಕ್ಕರ್ ಹಾಡಿಗೆ ಧ್ವನಿ ನೀಡಿದ್ದಾರೆ ಎಂದು ತಿಳಿಸಿದ್ದಾರೆ.

    ಪೊಲೀಸರು ಜುಲೈ 12ರೊಳಗೆ ಈ ಕುರಿತ ವರದಿಯನ್ನು ನೀಡಬೇಕೆಂದು ಮಹಿಳಾ ಆಯೋಗ ಕೇಳಿದೆ. ಈ ಹಾಡು ಬ್ಯಾನ್ ಮಾಡಬೇಕು. ಈ ರೀತಿಯ ಹಾಡುಗಳು ಸ್ವಾಸ್ಥ ಸಮಾಜಕ್ಕೆ ಕಪ್ಪು ಚುಕ್ಕೆ ಮತ್ತು ಅವಮಾನಕರವಾಗಿದೆ. ಈ ಸಾಹಿತ್ಯ ಸಮಾಜದ ಮೇಲೆ ಕೆಟ್ಟ ಪರಿಣಾಮ ಬೀರಲಿದೆ ಎಂದು ಮನಿಶಾ ಗುಲಾಟಿ ಆತಂಕ ವ್ಯಕ್ತಪಡಿಸಿದ್ದಾರೆ.

    2013ರಲ್ಲಿ ಹನಿಸಿಂಗ್ ರಚಿತ ‘ಮೈಂ ಹೂಂ ಬಲತ್ಕಾರಿ’ (ನಾನೋರ್ವ ಅತ್ಯಾಚಾರಿ) ಹಾಡು ಭಾರೀ ವಿವಾದಕ್ಕೊಳಗಾಗಿತ್ತು. ಈ ಹಾಡಿನ ಕುರಿತು ವಿಚಾರಣೆ ನಡೆಸಿದ್ದ ಹರ್ಯಾಣ ಮತ್ತು ಪಂಜಾಬ್ ಹೈ ಕೋರ್ಟ್, ಹನಿಸಿಂಗ್ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಬೇಕೆಂದು ಪಂಜಾಬ್ ಸರ್ಕಾರಕ್ಕೆ ಆದೇಶಿಸಿತ್ತು.

    https://www.youtube.com/watch?v=kt4FDwUws28

  • 109 ಗಂಟೆಗಳ ಬಳಿಕ ಪಂಜಾಬ್‍ನ ಕೊಳವೆಬಾವಿಗೆ ಬಿದ್ದಿದ್ದ ಮಗುವಿನ ರಕ್ಷಣೆ- ಸಾವು

    109 ಗಂಟೆಗಳ ಬಳಿಕ ಪಂಜಾಬ್‍ನ ಕೊಳವೆಬಾವಿಗೆ ಬಿದ್ದಿದ್ದ ಮಗುವಿನ ರಕ್ಷಣೆ- ಸಾವು

    ಚಂಡೀಗಢ: 150 ಅಡಿ ಆಳದ ಕೊಳವೆಬಾವಿಗೆ ಬಿದ್ದ 2 ವರ್ಷದ ಬಾಲಕನನ್ನು ಸುಮಾರು 109 ಗಂಟೆಗಳ ಕಾಲ ಕಾರ್ಯಾಚರಣೆ ಮಾಡಿ ರಕ್ಷಿಸುವ ಪ್ರಯತ್ನ ನಡೆಸಿದರೂ ಆತ ಮೃತಪಟ್ಟ ಘಟನೆ ಇಂದು ನಡೆದಿದೆ.

    ಫಥೇವೀರ್ ಸಿಂಗ್ ಬಳಕೆ ಮಾಡದ ಕೊಳವೆ ಬಾವಿಗೆ ¸ಬಿದ್ದ ಬಾಲಕ. ಈತ ಸಂಗೂರ್ ಜಿಲ್ಲೆಯ ಭಗವಾನ್ ಪುರ ಗ್ರಾಮದಲ್ಲಿ ತಮ್ಮ ಮನೆಯ ಹತ್ತಿರವೇ ಗುರುವಾರ ಸಂಜೆ 4 ಗಂಟೆ ಸುಮಾರಿಗೆ ಆಟವಾಡುತ್ತಿದ್ದನು. ಈ ವೇಳೆ ಬಳಕೆ ಮಾಡದೇ ಇರುವ ಬೋರ್ ವೆಲ್ ಒಳಗೆ ಆಯತಪ್ಪಿ ಬಿದ್ದಿದ್ದಾನೆ.

    ಸರಿಸುಮಾರು 7 ಇಂಚು ಅಗಲವಿರುವ ಈ ಕೊಳವೆ ಬಾವಿಯನ್ನು ಬಟ್ಟೆಯಿಂದ ಮುಚ್ಚಲಾಗಿತ್ತು. ಇದನ್ನು ಗಮನಿಸದ ಬಾಲಕ ಆಟವಾಡುತ್ತಾ ಅದರ ಒಳಗಡೆ ಬಿದ್ದಿದ್ದಾನೆ. ಇದನ್ನು ಗಮನಿಸಿದ ತಾಯಿ ಬಾಲಕನನ್ನು ರಕ್ಷಿಸಲು ಮುಂದಾದ್ರೂ ವಿಫಲರಾದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಆ ಬಳಿಕ ಬಾಲಕನ ರಕ್ಷಣೆಗೆ ಕಾರ್ಯಾಚರಣೆ ನಡೆಸಲಾಗಿತ್ತು. ಸುಮಾರು 5 ದಿನಗಳಿಂದ ರಕ್ಷಣಾ ಕಾರ್ಯ ನಡೆದಿದ್ದು, ಇಂದು ಬಾಲಕನನ್ನು ಬೋರ್ ವೆಲ್ ಒಳಗಡೆಯಿಂದ ರಕ್ಷಿಸಲಾಯಿತು. ಕೂಡಲೇ ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಆತ ಅದಾಗಲೇ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.

    ಆ ರಾಜ್ಯದಲ್ಲಿ ಚಾಪರ್ ನಿಲುಗಡೆ ಮಾಡಲು ಸಾಧ್ಯವಿಲ್ಲವಾಯಿತು. ಹೀಗಾಗಿ ಬಾಲಕನನ್ನು ರಸ್ತೆ ಮಾರ್ಗವಾಗಿ 140 ಕೀ.ಮಿ ತೆರಳಿ ಆಸ್ಪತ್ರೆಗೆ ದಾಖಲಿಸಲಾಯಿತು. ಘಟನೆ ಸಂಬಂಧ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಟ್ವೀಟ್ ಮಾಡಿ, ಸಂತಾಪ ಸೂಚಿಸಿದ್ದಾರೆ. ದೇವರು ಆತನ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಬರೆದುಕೊಂಡಿದ್ದಾರೆ.

    ಕಳೆದ ರಾತ್ರಿ ಬಾಲಕನ ರಕ್ಷಣೆಗೆ ಕಾರ್ಯಾಚರಣೆ ನಡೆಯುತ್ತಿದ್ದಂತೆಯೇ ಸ್ಥಳೀಯರು ಸ್ಥಳದಲ್ಲೇ ಪ್ರತಿಭಟನೆ ನಡೆಸಿದರು. ಇದೇ ವೇಳೆ ಅಲ್ಲಿನ ಮುಖ್ಯಮಂತ್ರಿಗಳು ಕೂಡ ವಿರೋಧ ಪಕ್ಷಗಳು ಕಾರ್ಯಾಚರಣೆಯನ್ನು ತಡಮಾಡುತ್ತವೆ ಎಂದು ಆರೋಪಿಸಿದ್ದರು.

  • ದೆಹಲಿ ತಲುಪಿತು ಪಂಜಾಬ್ ಕೈ ಕಲಹ : ರಾಹುಲ್ ಭೇಟಿಯಾದ ಸಿಧು

    ದೆಹಲಿ ತಲುಪಿತು ಪಂಜಾಬ್ ಕೈ ಕಲಹ : ರಾಹುಲ್ ಭೇಟಿಯಾದ ಸಿಧು

    ನವದೆಹಲಿ: ಪಂಜಾಬ್‍ನ ಕ್ಯಾಬಿನೆಟ್ ಸಚಿವ ನವಜೋತ್ ಸಿಂಗ್ ಸಿಧು ಇಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಮುಖಂಡೆ ಪ್ರಿಯಾಂಕ ಗಾಂಧಿ ಅವರನ್ನು ಭೇಟಿಯಾಗಿ ಪಂಜಾಬ್ ಪರಿಸ್ಥಿತಿಯನ್ನು ವಿವರಿಸಿದ್ದಾರೆ.

    ದೆಹಲಿಗೆ ಶುಕ್ರವಾರವೇ ಬಂದಿರುವ ನವಜೋತ್ ಸಿಂಗ್ ಸಿಧು ಅವರು ಪಕ್ಷದ ನಾಯಕರನ್ನು ಭೇಟಿಯಾಗಿದ್ದಾರೆ. ಕೇರಳ ಪ್ರವಾಸ ಮುಗಿಸಿಕೊಂಡು ದೆಹಲಿಗೆ ಮರಳಿದ ರಾಹುಲ್ ಗಾಂಧಿ ಅವರನ್ನು ಇಂದು ಭೇಟಿಯಾಗಿದ್ದಾರೆ. ಈ ಸಂಬಂಧ ಟ್ವೀಟ್ ಕೂಡ ಮಾಡಿದ್ದಾರೆ.

    ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿ ಪತ್ರವೊಂದನ್ನು ನೀಡಿರುವೆ. ಈ ಮೂಲಕ ಪರಿಸ್ಥಿತಿಯನ್ನು ತಿಳಿಸಿರುವೆ ಎಂದು ಪ್ರಿಯಾಂಕ ಗಾಂಧಿ, ರಾಹುಲ್ ಗಾಂಧಿ ಹಾಗೂ ಪಕ್ಷದ ಮುಖಂಡ ಅಹ್ಮದ್ ಪಟೇಲ್ ಅವರೊಂದಿಗೆ ಇರುವ ಫೋಟೋವನ್ನು ಟ್ವೀಟ್ ಮಾಡಿದ್ದಾರೆ.

    ಲೋಕಸಭಾ ಚುನಾವಣೆಯ ಸಂದರ್ಭದಿಂದಲೂ ಪಂಜಾಬ್ ಸಿಎಂ, ಕ್ಯಾಪ್ಟನ್ ಅಮರಿಂದರ್ ಸಿಂಗ್ ವಿರುದ್ಧ ನವಜೋತ್ ಸಿಂಗ್ ಸಿಧು ಕಿಡಿಕಾರುತ್ತಾ ಬಂದಿದ್ದರು. ಈ ಇಬ್ಬರು ನಾಯಕ ನಡುನೆ ಶೀತಲ ಸಮರ ಮುಂದುವರಿದಿದೆ. ಇದರಿಂದಾಗಿ ಅಮರಿಂದರ್ ಸಿಂಗ್ ಅವರು, ಸಚಿವ ನವಜೋತ್ ಸಿಂಗ್ ಸಿಧು ಬಳಿಯಿದ್ದ ಪ್ರಮುಖ ಖಾತೆಯನ್ನು ಕಿತ್ತುಕೊಂಡು ಇಂಧನ ಖಾತೆ ನೀಡಿದ್ದಾರೆ. ಇದು ಈಗ ನವಜೋತ್ ಸಿಂಗ್ ಸಿಧು ಅವರ ಆಕ್ರೋಶಕ್ಕೆ ಕಾರಣವಾಗಿದೆ.