Tag: punjab

  • ಪಂಜಾಬ್ ಕಾಂಗ್ರೆಸ್ ಸರ್ಕಾರಕ್ಕೆ ಶುರುವಾಯ್ತು-ಆಪ್ ಜೊತೆ ಕೈ ಜೋಡಿಸ್ತಾರಾ ಸಿಧು?

    ಪಂಜಾಬ್ ಕಾಂಗ್ರೆಸ್ ಸರ್ಕಾರಕ್ಕೆ ಶುರುವಾಯ್ತು-ಆಪ್ ಜೊತೆ ಕೈ ಜೋಡಿಸ್ತಾರಾ ಸಿಧು?

    ಚಂಡೀಗಢ: ಪಂಜಾಬ್‍ನಲ್ಲಿರುವ ಕಾಂಗ್ರೆಸ್ ಸರ್ಕಾರಕ್ಕೆ ಬಂಡಾಯದ ಬಿಸಿ ತಾಗಿದ್ದು, ಆಮ್ ಆದ್ಮಿ ಪಾರ್ಟಿ (ಆಪ್) ಜೊತೆ ಮಾಜಿ ಸಚಿವ ನವಜೋತ್ ಸಿಂಗ್ ಸಿಧು ಕೈ ಜೋಡಿಸ್ತಾರಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿವೆ. ಸಿಎಂ ಕ್ಯಾಪ್ಟನ್ ಅಮರಿಂದರ್ ಸಿಂಗ್ ಮೇಲೆ ಅಸಮಾಧಾನ ಹೊಂದಿರುವ ನವಜೋತ್ ಸಿಂಗ್ ಸಿಧು ಅವರನ್ನು ಸೆಳೆಯುವ ಪ್ರಯತ್ನವನ್ನು ಆಪ್ ನಾಯಕರು ಮಾಡುತ್ತಿದ್ದಾರೆ. ಬಹಿರಂಗವಾಗಿಯೇ ಸಿಧು ಅವರನ್ನು ಪಕ್ಷಕ್ಕೆ ಬರುವಂತೆ ಆಪ್ ನಾಯಕರು ಆಹ್ವಾನಿಸಿದ್ದಾರೆ.

    ಈ ಕುರಿತು ಮಾತನಾಡಿರುವ ಆಪ್ ಶಾಸಕ ಅಮನ್ ಅರೋಡಾ, ಸಿಎಂ ಅಮರಿಂದರ್ ಸಿಂಗ್ ಸರ್ಕಾರದ ನಾಲ್ವರು ಕಾಂಗ್ರೆಸ್ ಶಾಸಕರ ಮೇಲೆ ಭ್ರಷ್ಟಾಚಾರದ ಆರೋಪಗಳಿವೆ. ಸದ್ಯ ನಮಗೆ ಕಾಂಗ್ರೆಸ್ ನ 40 ಶಾಸಕರ ಬೆಂಬಲವಿದೆ. ಕಾಂಗ್ರೆಸ್ ಮತ್ತು ಆಪ್ (19) ಶಾಸಕರು ಸೇರಿದರೆ ಬಹುಮತ (59) ನಮ್ಮದಾಗತ್ತದೆ. ಹಾಗಾಗಿ ನವಜೋತ್ ಸಿಂಗ್ ಸಿಧು ಅವರಿಗೆ ಹೊಸ ಸರ್ಕಾರ ರಚಿಸಲು ಆಹ್ವಾನಿಸುತ್ತೇನೆ. ಈ ಸಂಬಂಧ ನಾವು ಕಾಂಗ್ರೆಸ್ ಶಾಸಕರೊಂದಿಗೆ ಮಾತನಾಡಿದ್ದೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಲೋಕಸಭಾ ಟಿಕೆಟ್ ನಿರಾಕರಿಸಿದ್ದಕ್ಕೆ ಸಿಧು ಪತ್ನಿ ಕಾಂಗ್ರೆಸ್‍ಗೆ ಗುಡ್ ಬೈ

    2017ರ ಫಲಿತಾಂಶ: 2017ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ 117 ಕ್ಷೇತ್ರಗಳ ಪೈಕಿ ಕಾಂಗ್ರೆಸ್ 77, ಶಿರೋಮಣಿ ಅಕಾಲಿ ದಳ 15 ಮತ್ತು ಆಪ್ 20, ಬಿಜೆಪಿ 3 ಮತ್ತು ಎಲ್‍ಐಪಿ 2ರಲ್ಲಿ ಗೆಲುವು ದಾಖಲಿಸಿತ್ತು. ಮ್ಯಾಜಿಕ್ ನಂಬರ್ ಸಹಿತ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಕಾಂಗ್ರೆಸ್, ಸರ್ಕಾರ ರಚನೆ ಮಾಡಿತ್ತು. ರಾಜ್ಯದಲ್ಲಿ ಉಪಚುನಾವಣೆ ನಡೆದ ಹಿನ್ನೆಲೆಯಲ್ಲಿ ಆಪ್ ಶಾಸಕರ ಸಂಖ್ಯೆ 20ರಿಂದ 19ಕ್ಕೆ ಇಳಿಕೆಯಾಗಿದೆ. ಸದ್ಯ ಕಾಂಗ್ರೆಸ್ ಸರ್ಕಾರ 80 ಶಾಸಕರ ಬಲವನ್ನು ಹೊಂದಿದೆ. ಇದನ್ನೂ ಓದಿ: ಪಂಜಾಬಿನಲ್ಲಿ ಕೈ ಬಂಡಾಯ – ಸಚಿವ ಸ್ಥಾನಕ್ಕೆ ಸಿಧು ರಾಜೀನಾಮೆ

    ಪಂಜಾಬ್ ನಲ್ಲಿ ಕಾಂಗ್ರೆಸ್ ಸರ್ಕಾರ ರಚನೆ ಆದಾಗನಿಂದಲೂ ಸಿಎಂ ಅಮರಿಂದರ್ ಸಿಂಗ್ ಮತ್ತು ನವಜೋತ್ ಸಿಂಗ್ ಸಿಧು ನಡುವೆ ಶೀತನ ಸಮರ ನಡೆದುಕೊಂಡು ಬಂದಿದೆ. ಸಿಎಂ ಮುನಿಸಿಕೊಂಡ ಸಿಧು ಹಲವು ಬಾರಿ ಬಹಿರಂಗವಾಗಿಯೇ ಅಸಮಾಧಾನ ಹೊರ ಹಾಕಿ, ಸಚಿವ ಸ್ಥಾನಕ್ಕೂ ರಾಜೀನಾಮೆ ನೀಡಿದ್ದಾರೆ. ಸದ್ಯ ಆಪ್ ನಾಯಕರ ಹೇಳಿಕೆ ಪಂಜಾಬ್ ರಾಜಕೀಯ ಅಂಗಳದಲ್ಲಿ ಸಂಚಲನ ಮೂಡಿಸಿದೆ. ಇದನ್ನೂ ಓದಿ: ಕ್ಯಾಪ್ಟನ್ ವಿರುದ್ಧ ಕಮೆಂಟ್, ಸಿಧುಗೆ ಅಸಮಾಧಾನ ಇದ್ರೆ ಸಚಿವ ಸ್ಥಾನ ಬಿಡಲಿ – ಪಂಜಾಬ್ ಸಚಿವ

  • ಬಾಲಕನಿಗೆ ನಾಯಿ ಕಚ್ಚಿದ್ದಕ್ಕೆ ಮಾಲೀಕನ ಮೇಲೆ ಬಿತ್ತು ಕೇಸ್

    ಬಾಲಕನಿಗೆ ನಾಯಿ ಕಚ್ಚಿದ್ದಕ್ಕೆ ಮಾಲೀಕನ ಮೇಲೆ ಬಿತ್ತು ಕೇಸ್

    ಚಂಡೀಗಢ: ನೆರೆ ಮನೆಯ ಬಾಲಕನಿಗೆ ನಾಯಿ ಕಚ್ಚಿದ್ದಕ್ಕೆ ಮಾಲೀಕನ ಮೇಲೆ ಪೊಲೀಸರು ಪ್ರಕರಣ ದಾಖಲಿಸಿರುವ ಘಟನೆ ಪಂಜಾಬ್‍ನಲ್ಲಿ ನಡೆದಿದೆ.

    ಚಂಡೀಗಢದ ಶಿವಾಲಿಕ್ ಅವೆನ್ಯೂ ಪ್ರದೇಶದ ನಿವಾಸಿ ಅಮರಿಂದರ್ ಸಿಂಗ್ ವಿರುದ್ಧ ಪ್ರಕರಣ ದಾಖಲಾಗಿದೆ. ಅಮರಿಂದರ್ ಪಕ್ಕದ ಮನೆಯ ಬಾಲಕನ ತಂದೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅಮರಿಂದರ್ ಸಾಕಿದ ಲಾಬ್ರಡರ್ ನಾಯಿ ನನ್ನ ಮಗ ರೆಹತ್‍ಪ್ರೀತ್(6)ಗೆ ಕಚ್ಚಿ ತೀವ್ರ ಗಾಯಗೊಳಿಸಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

    ಶನಿವಾರ ಮನೆಯ ಮುಂದೆ ನನ್ನ ಮಗ ರೆಹತ್‍ಪ್ರೀತ್ ಆಟವಾಡುತ್ತಿದ್ದನು. ಈ ವೇಳೆ ಅಮರಿಂದರ್ ತಾನು ಸಾಕಿದ್ದ 1 ಲಾಬ್ರಡರ್ ಹಾಗೂ 1 ಪಿಟ್‍ಬುಲ್ ನಾಯಿಯನ್ನು ಕರೆದುಕೊಂಡು ವಾಕಿಂಗ್ ಹೋಗುತ್ತಿದ್ದನು. ಆಗ ಏಕಾಏಕಿ ಲಾಬ್ರಡರ್ ನಾಯಿ ನನ್ನ ಮಗನ ಮೇಲೆ ದಾಳಿ ಮಾಡಿತು. ಆತನ ಕಾಲು ಹಾಗೂ ತೊಡೆಯ ಭಾಗಕ್ಕೆ ಕಚ್ಚಿ ಗಾಯಗೊಳಿಸಿತು ಎಂದು ಆರೋಪಿಸಿದ್ದಾರೆ.

    ತಕ್ಷಣ ಅಮರಿಂದರ್ ಕೂಡ ಮಗನ ರಕ್ಷಣೆಗೆ ಬಂದು ನಾಯಿಯನ್ನು ಎಳೆದುಕೊಂಡು ಹೋದ. ಬಳಿಕ ನಾನು ತಕ್ಷಣ ಮಗನನ್ನು ಆಸ್ಪತ್ರೆಗೆ ರವಾನಿಸಿ, ಚಿಕಿತ್ಸೆ ಕೊಡಿಸಿದೆ. ಅಮರಿಂದರ್ ನಿರ್ಲಕ್ಷ್ಯ ತೋರಿ, ನಾಯಿಯ ಚೈನ್ ಬಿಗಿಯಾಗಿ ಹಿಡಿದುಕೊಳ್ಳದೆ ವಾಕಿಂಗ್ ಬಂದಿದ್ದನು. ಆದ್ದರಿಂದ ನಾಯಿ ಆತನಿಂದ ಬಿಡಿಸಿಕೊಂಡು ಏಕಾಏಕಿ ಮಗನ ಮೇಲೆ ದಾಳಿ ಮಾಡಿತು ಎಂದು ಬಾಲಕನ ತಂದೆ ಆರೋಪಿಸಿದ್ದು, ಬುಧವಾರ ಅಮರಿಂದರ್ ವಿರುದ್ಧ ದೂರು ನೀಡಿದ್ದಾರೆ.

    ಈ ಸಂಬಂಧ ಪೊಲೀಸರು ಅಮರಿಂದರ್ ವಿರುದ್ಧ ಐಪಿಸಿ ಸೆಕ್ಷನ್ 323, 28 ಮತ್ತು 506 ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಈ ಕಾಯ್ದೆಗಳು ಪ್ರಾಣಿಗಳ ಬಗ್ಗೆ ನಿರ್ಲಕ್ಷ್ಯ ದೋರಣೆ ಮತ್ತು ಕ್ರಿಮಿನಲ್ ಬೆದರಿಕೆ ಆರೋಪಗಳಿಗೆ ಸಂಬಂಧಿಸಿದೆ.

  • ತನ್ನ ಮುಂದೆ ಕಣ್ಣೀರಿಟ್ಟ ವೃದ್ಧೆಯನ್ನು ಅಪ್ಪಿಕೊಂಡ ಪೊಲೀಸ್- ವಿಡಿಯೋ ವೈರಲ್

    ತನ್ನ ಮುಂದೆ ಕಣ್ಣೀರಿಟ್ಟ ವೃದ್ಧೆಯನ್ನು ಅಪ್ಪಿಕೊಂಡ ಪೊಲೀಸ್- ವಿಡಿಯೋ ವೈರಲ್

    ನವದೆಹಲಿ: ಸಾಮಾನ್ಯವಾಗಿ ಪೊಲೀಸರು ಅಂದ್ರೆ ಹೆದರಿಸಿ, ಬೆದರಿಸಿ ಸಾಕಷ್ಟು ಪ್ರಶ್ನೆಗಳನ್ನು ಕೇಳುವ ಮೂಲಕ ಕೆಲವೊಂದು ಮಾಹಿತಿಗಳನ್ನು ಕೆದಕುತ್ತಾರೆ. ಆದರೆ ಇಲ್ಲೊಬ್ಬರು ಪೊಲೀಸ್ ಪೇದೆ ತನ್ನ ಮುಂದೆ ಕಣ್ಣೀರಿಟ್ಟ ವೃದ್ಧೆಯನ್ನು ಅಪ್ಪಿಕೊಂಡು ಅವರ ದುಃಖದಲ್ಲಿ ತಾನೂ ಪಾಲುದಾರನಾಗಿದ್ದಾರೆ.

    ಪಂಜಾಬಿನ ಪೊಲೀಸ್ ಪೇದೆ ತನ್ನ ತಾಯಿಯಂತೆ ಆಲಂಗಿಸಿಕೊಂಡು ಅಮಾಧಾನ ಹೇಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖಥ್ ವೈರಲ್ ಆಗುತ್ತಿದೆ. 56 ಸೆಕೆಂಡ್ ಇರೋ ಈ ವಿಡಿಯೋವನ್ನು ಇಂಡಿಯನ್ ಪೊಲೀಸ್ ಫೌಂಡೇಶನ್ ಎಂಬ ಟ್ವಿಟ್ಟರ್ ಅಕೌಂಟಿನಿಂದ ಟ್ವೀಟ್ ಮಾಡಲಾಗಿದೆ. ಆ ಬಳಿಕ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಮಿಂಚಿನಂತೆ ಸಂಚರಿಸಿದೆ.

    ವಿಡಿಯೋದಲ್ಲೇನಿದೆ?
    ಮಗ ಮಲೇಷ್ಯಾದಲ್ಲಿ ಬಂಧಿತನಾಗಿರುವ ವಿಚಾರದ ಬಗ್ಗೆ ಮಾತನಾಡುವಾಗ ವೃದ್ಧೆ ತನ್ನ ಕಥೆಯನ್ನು ವಿವರಿಸುತ್ತಾ ಕಣ್ಣೀರು ಹಾಕಿದ್ದಾರೆ. ಈ ವೇಳೆ ಪೊಲೀಸ್ ಅಧಿಕಾರಿ ಆಕೆಯ ಕಣ್ಣೀರು ಒರೆಸಿದ್ದು ಮಾತ್ರವಲ್ಲದೇ ಕೂಡಲೇ ವೃದ್ಧೆಯನ್ನು ಅಪ್ಪಿಕೊಂಡು ಸಮಾಧಾನ ಹೇಳಿದ್ದಾರೆ. ಅಲ್ಲದೆ ನಿಮ್ಮ ಮಗ ಆದಷ್ಟು ಬೇಗ ನಿಮ್ಮ ಮಡಿಲು ಸೇರಲಿ ಎಂದು ದೇವರಲ್ಲಿ ಪ್ರಾರ್ಥಿಸುವುದಾಗಿ ತಿಳಿಸಿದ್ದಾರೆ.

    ಈ ಮೂಲಕ ಪೊಲೀಸ್ ಪೇದೆ ಇದೀಗ ಇತರರಿಗೆ ಮಾದರಿಯಾಗಿದ್ದಾರೆ. ಹಿರಿ ಜೀವದ ಕಷ್ಟವನ್ನು ಗಮನವಿಟ್ಟು ಕೇಳಿದ್ದಲ್ಲದೇ ಆಕೆಯ ಕಣ್ಣೀರು ಒರೆಸುವ ಮೂಲಕ ನಿಜಕ್ಕೂ ಇತರರಿಗೆ ಮಾದರಿಯಾಗಿದ್ದಾರೆ ಎಂದು ಇಂಡಿಯನ್ ಪೊಲೀಸ್ ಫೌಂಡೇಶನ್ ತಮ್ಮ ಟ್ವೀಟ್ ನಲ್ಲಿ ಬರೆದುಕೊಂಡಿದೆ.

    ಸದ್ಯ ಈ ವಿಡಿಯೋವನ್ನು ಸುಮಾರು 25 ಸಾವಿರಕ್ಕೂ ಅಧಿಕ ಬಾರಿ ವೀಕ್ಷಣೆಯಾಗಿದ್ದು, 2 ಸಾವಿರಕ್ಕೂ ಅಧಿಕ ಲೈಕ್ಸ್ ಬಂದಿದೆ. ಅಲ್ಲದೆ ನೆಟ್ಟಿಗರು ಪೊಲೀಸ್ ಕೆಲಸವನ್ನು ಶ್ಲಾಘಿಸಿದ್ದಾರೆ.

    https://twitter.com/IPF_ORG/status/1198257945558933506?ref_src=twsrc%5Etfw%7Ctwcamp%5Etweetembed%7Ctwterm%5E1198257945558933506&ref_url=https%3A%2F%2Fwww.indiatoday.in%2Ftrending-news%2Fstory%2Fpunjab-cop-comforts-elderly-woman-in-emotional-viral-video-internet-is-in-tears-1622619-2019-11-26

  • ಅಣ್ಣ ಓಡಿಹೋಗಿ ಮದ್ವೆಯಾಗಿದ್ದಕ್ಕೆ ತಮ್ಮನನ್ನು ಕಂಬಕ್ಕೆ ಕಟ್ಟಿ, ಸುಟ್ಟರು

    ಅಣ್ಣ ಓಡಿಹೋಗಿ ಮದ್ವೆಯಾಗಿದ್ದಕ್ಕೆ ತಮ್ಮನನ್ನು ಕಂಬಕ್ಕೆ ಕಟ್ಟಿ, ಸುಟ್ಟರು

    – ರೈಲ್ ಮಿಲ್‍ನಲ್ಲಿ ಸಜೀವ ದಹನ
    – ಮೂವರು ಆರೋಪಿಗಳು ಅರೆಸ್ಟ್

    ಚಂಡೀಗಢ: ಅಣ್ಣ ಯುವತಿಯೋರ್ವಳನ್ನು ಪ್ರೀತಿಸಿ ಓಡಿಹೋಗಿ ಮದುವೆಯಾದ ಸಿಟ್ಟಿಗೆ ತಮ್ಮನನ್ನು ಯುವತಿ ಕಡೆಯವರು ಕಂಬಕ್ಕೆ ಕಟ್ಟಿ, ಸಜೀವ ಸುಟ್ಟ ಅಮಾನವೀಯ ಘಟನೆ ಪಂಜಾಬ್‍ನಲ್ಲಿ ನಡೆದಿದೆ.

    ಶನಿವಾರ ಪಂಜಾಬ್‍ನ ಮಾನ್ಸಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಜಸ್ಪ್ರೀತ್ ಸಿಂಗ್(16) ಮೃತ ದುರ್ದೈವಿ. ಆರೋಪಿಗಳನ್ನು ಜಶನ್ ಸಿಂಗ್, ಗುರ್ಜಿತ್ ಸಿಂಗ್ ಹಾಗೂ ರಾಜು ಸಿಂಗ್ ಎಂದು ಗುರುತಿಸಲಾಗಿದೆ. ಜಸ್ಪ್ರೀತ್ ಅಣ್ಣ ಕುಲ್ವಿಂದರ್ ಸಿಂಗ್ ಹಾಗೂ ಆರೋಪಿ ಜಶನ್ ತಂಗಿ ರಾಜೋ ಕೌರ್ ಪ್ರೀತಿಸುತ್ತಿದ್ದರು. ಇಬ್ಬರೂ ಕೂಡ ದಲಿತ ಸಮುದಾಯದವರಾಗಿದ್ದರೂ ರಾಜೋ ಮನೆಯವರಿಗೆ ಕುಲ್ವಿಂದರ್ ಇಷ್ಟವಿರಲಿಲ್ಲ. ಹೀಗಾಗಿ ಎರಡು ವರ್ಷದ ಹಿಂದೆ ಕುಲ್ವಿಂದರ್ ಮತ್ತು ರಾಜೋ ಓಡಿ ಹೋಗಿ ಮದುವೆಯಾಗಿದ್ದರು. ಆದರೆ ಅವರಿಬ್ಬರನ್ನು ಗ್ರಾಮಕ್ಕೆ ಬರಲು ಮನೆಯವರು ಬಿಡುತ್ತಿರಲಿಲ್ಲ. ಇದನ್ನೂ ಓದಿ:ದಲಿತ ಯುವಕನನ್ನು ಪ್ರೀತಿಸಿದ ಮಗಳನ್ನು ಜೀವಂತ ಸುಟ್ಟ ತಾಯಿ

    ಅಲ್ಲದೆ ಈ ವಿಷಯಕ್ಕೆ ರಾಜೋ ಕುಟುಂಬ ಗ್ರಾಮದಲ್ಲಿ ತಲೆತಗ್ಗಿಸುವಂತಾಗಿತ್ತು. ಇದರ ನಡುವೆ ಜಸ್ಪ್ರೀತ್ ಪದೇ ಪದೇ ರಾಜೋ ಕುಟುಂಬಕ್ಕೆ ಇದೇ ವಿಚಾರಕ್ಕೆ ಹಿಯಾಳಿಸುತ್ತಿದ್ದನು. ಈ ಬಗ್ಗೆ ತಿಳಿದು ಬೇರೆ ಊರಿನಲ್ಲಿ ಪತ್ನಿ, ಮಗುವಿನೊಂದಿಗೆ ವಾಸಿಸುತ್ತಿದ್ದ ಜಶನ್ ಗ್ರಾಮಕ್ಕೆ ಮರುಳಿದ್ದನು. ಮೊದಲೇ ಅಣ್ಣ ಮರ್ಯಾದೆ ಹಾಳು ಮಾಡಿದ್ದಾನೆ, ಈಗ ತಮ್ಮ ಹೀಯಾಳಿಸುತ್ತಿದ್ದಾನೆ ಎಂದು ಜಶನ್ ಕೋಪಕೊಂಡಿದ್ದನು.

    ಇದೇ ಸಿಟ್ಟಲ್ಲಿ ಶನಿವಾರ ರಾತ್ರಿ ಜಸ್ಪ್ರೀತ್ ಒಬ್ಬನೇ ಸಿಕ್ಕಾಗ ಆತನನ್ನು ಜಶನ್ ಹಾಗೂ ಆತನ ಸ್ನೇಹಿತರು ಎಳೆದುಕೊಂಡು ಹೋಗಿದ್ದರು. ಮುಚ್ಚಿದ್ದ ರೈಸ್ ಮಿಲ್‍ನೊಳಗೆ ಜಸ್ಪ್ರೀತ್‍ನನ್ನು ಕರೆದೊಯ್ದು, ಕಂಬಕ್ಕೆ ಆತನನ್ನು ಕಟ್ಟಿ ಬೆಂಕಿ ಹಚ್ಚಿದ್ದರು. ಪರಿಣಾಮ ಜಸ್ಪ್ರೀತ್ ಸ್ಥಳದಲ್ಲೇ ಸಾವನ್ನಪ್ಪಿದ್ದನು. ಇದನ್ನೂ ಓದಿ:22 ವರ್ಷದ ಮಗಳಿಗೆ ವಿದ್ಯುತ್ ಶಾಕ್ ನೀಡಿ, ಕತ್ತು ಸೀಳಿದ ಪಾಪಿ ತಂದೆ

    ಇತ್ತ ಜಸ್ಪ್ರೀತ್ ಮನೆಗೆ ಬಾರದಿದ್ದಾಗ ಕುಟುಂಬಸ್ಥರು ಪೊಲೀಸರಿಗೆ ದೂರು ಕೊಟ್ಟಿದ್ದರು. ಜಸ್ಪ್ರೀತ್ ಹುಡುಕಾಟದಲ್ಲಿದ್ದ ಪೊಲೀಸರು ಭಾನುವಾರ ಆತನ ಮೃತದೇಹ ರೈಸ್ ಮಿಲ್‍ನಲ್ಲಿ ಪತ್ತೆಹಚ್ಚಿದ್ದಾರೆ.

    ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿಚಾರಣೆ ನಡೆಸಿದಾಗ ಆರೋಪಿಗಳು ಸಿಕ್ಕಿಬಿದ್ದಿದ್ದು, ಮೂವರನ್ನು ಪೊಲೀಸರು ಬಂಧಿಸಿ ಅವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

  • ಭಾರತ ವಿರೋಧಿ, ಪ್ರತ್ಯೇಕತಾವಾದದ ಆ್ಯಪ್ ತೆಗೆದು ಹಾಕಿದ ಗೂಗಲ್

    ಭಾರತ ವಿರೋಧಿ, ಪ್ರತ್ಯೇಕತಾವಾದದ ಆ್ಯಪ್ ತೆಗೆದು ಹಾಕಿದ ಗೂಗಲ್

    ನವದೆಹಲಿ: ಭಾರತ ವಿರೋಧಿ ಹಾಗೂ ಪ್ರತ್ಯೇಕತಾವಾದದ ಕುರಿತ ‘2020 ಸಿಖ್ ರೆಫೆರೆಂಡಮ್’ ಎಂಬ ಆ್ಯಪ್‍ನ್ನು ಗೂಗಲ್ ತನ್ನ ಪ್ಲೇ ಸ್ಟೋರ್ ನಿಂದ ತೆಗೆದು ಹಾಕಿದೆ.

    ಈ ದೇಶ ವಿರೋಧಿ ಹಾಗೂ ಪ್ರತ್ಯೇಕತಾ ವಾದದ ಕುರಿತ ಆ್ಯಪ್‍ನ್ನು ತೆಗೆದು ಹಾಕುವಂತೆ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಮನವಿ ಮಾಡಿದ್ದರು. ಸಿಎಂ ಮನವಿಯನ್ನು ಪರಿಗಣಿಸಿದ ಗೂಗಲ್ ತನ್ನ ಪ್ಲೇ ಸ್ಟೋರಿನಿಂದ 2020 ಸಿಖ್ ರೆಫೆರೆಂಡಮ್(2020 ಸಿಖ್ ಜನಾಭಿಪ್ರಾಯ ಸಂಗ್ರಹ) ಆ್ಯಪ್‍ನ್ನು ತೆಗೆದು ಹಾಕಿದೆ. ಈ ಕುರಿತು ಪಂಜಾಬ್‍ನ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

    ಭಾರತದ ಮೊಬೈಲ್ ಬಳಕೆದಾರರಿಗೆ ಈ ಆ್ಯಪ್ ಇನ್ನು ಮುಂದೆ ಲಭ್ಯವಿಲ್ಲ ಎಂದು ಮುಖ್ಯಮಂತ್ರಿ ಕಚೇರಿಯ ವಕ್ತಾರರು ತಿಳಿಸಿದ್ದಾರೆ.

    ಈ ಕುರಿತು ಗೂಗಲ್ ಗೆ ಮನವರಿಕೆ ಮಾಡುವಂತೆ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದರು. ICETEC ರಚಿಸಿರುವ ಈ ಆ್ಯಪ್ ಬಿಡುಗಡೆಯಿಂದ ಉಂಟಾಗಿರುವ ಬೆದರಿಕೆಯನ್ನು ನಿಭಾಯಿಸಲು ಕೇಂದ್ರದ ಭದ್ರತಾ ಸಂಸ್ಥೆಗಳೊಂದಿಗೆ ಸಮನ್ವಯ ಸಾಧಿಸುವಂತೆ ಪೊಲೀಸ್ ಮಹಾನಿರ್ದೇಶಕರಿಗೆ ಅಮರಿಂದರ್ ಸಿಂಗ್ ಆದೇಶಿಸಿದ್ದರು.

    ಈ ಆ್ಯಪ್ ಮೂಲಕ ಪಂಜಾಬ್ ಜನಾಭಿಪ್ರಾಯ 2020 ಖಲಿಸ್ತಾನ್ ಎಂಬ ಹೆಸರಲ್ಲಿ ಮತ ಸಂಗ್ರಹಿಸಲಾಗುತ್ತಿತ್ತು. ನೋಂದಾಯಿಸಿಕೊಳ್ಳುವಂತೆ ಆ್ಯಪ್ ಸಾರ್ವಜನಿಕರಿಗೆ ಸೂಚಿಸಿತ್ತು. ಅಲ್ಲದೆ ಎಸ್2ಖಲಿಸ್ತಾನ್ ಎಂಬ ವೆಬ್‍ಸೈಟನ್ನು ಸಹ ಇದೇ ಉದ್ದೇಶಕ್ಕಾಗಿ ಪ್ರಾರಂಭಿಸಲಾಗಿತ್ತು.

    ಗೂಗಲ್ ಪ್ಲೇ ಸ್ಟೋರಿನಿಂದ ಆ್ಯಪ್ ತೆಗೆದುಹಾಕಲು ಹಾಗೂ ಭಾರತದಲ್ಲಿ ವೆಬ್‍ಸೈಟ್ ಬಳಕೆಯನ್ನು ನಿರ್ಬಂಧಿಸಲು ಪಂಜಾಬ್‍ನ ತನಿಖಾ ದಳ ಹಾಗೂ ಸೈಬರ್ ಅಪರಾಧ ವಿಭಾಗವು ಪ್ರಯತ್ನ ನಡೆಸಿತ್ತು. ಈ ಹಿನ್ನೆಲೆ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 79(3)ಬಿ ಅಡಿಯಲ್ಲಿ ಗೂಗಲ್ ಪ್ಲೇ ಸ್ಟೋರಿನಿಂದ ಆ್ಯಪ್ ತೆಗೆದು ಹಾಕುವಂತೆ ನ.8ರಂದು ಗೂಗಲ್‍ಗೆ ಸೂಚಿಸಲಾಗಿತ್ತು ಎಂದು ಸರ್ಕಾರದ ವಕ್ತಾರರು ಮಾಹಿತಿ ನೀಡಿದ್ದಾರೆ.

  • ಕಂಬಕ್ಕೆ ಕಟ್ಟಿ ಥಳಿಸಿ, ನೀರು ಕೇಳಿದ್ದಕ್ಕೆ ಮೂತ್ರ ಕುಡಿಸಿದ್ರು- ವ್ಯಕ್ತಿ ಸಾವು

    ಕಂಬಕ್ಕೆ ಕಟ್ಟಿ ಥಳಿಸಿ, ನೀರು ಕೇಳಿದ್ದಕ್ಕೆ ಮೂತ್ರ ಕುಡಿಸಿದ್ರು- ವ್ಯಕ್ತಿ ಸಾವು

    ಚಂಡೀಗಢ: ತಮ್ಮೊಂದಿಗೆ ಗಲಾಟೆ ಮಾಡಿದ್ದಾನೆ ಎಂದು ಕಿಡಿಗೇಡಿಗಳು ದಲಿತ ವ್ಯಕ್ತಿಯೋರ್ವನನ್ನು ಕಂಬಕ್ಕೆ ಕಟ್ಟಿ ಥಳಿಸಿ, ಕುಡಿಯಲು ನೀರು ಕೇಳಿದಾಗ ಬಲವಂತವಾಗಿ ಮೂತ್ರ ಕುಡಿಸಿದ ಅಮಾನುಷ ಘಟನೆ ಪಂಜಾಬ್‍ನಲ್ಲಿ ನಡೆದಿದೆ. ತೀವ್ರ ಗಾಯಗೊಂಡ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಸಾವನ್ನಪ್ಪಿದ್ದಾನೆ.

    ನವೆಂಬರ್ 7ರಂದು ಪಂಜಾಬ್‍ನ ಸಂಗೂರ್‌ನಲ್ಲಿ ಈ ಘಟನೆ ನಡೆದಿತ್ತು. 37 ವರ್ಷದ ದಲಿತ ವ್ಯಕ್ತಿ ಮೇಲೆ ಗುಂಪೊಂದು ಅಮಾನುಷವಾಗಿ ಹಲ್ಲೆ ನಡೆಸಿತ್ತು. ಅಷ್ಟೇ ಅಲ್ಲದೆ ಆತನಿಗೆ ಒತ್ತಾಯಪೂರ್ವಕವಾಗಿ ಮೂತ್ರ ಕುಡಿಸಿ ದುಷ್ಕರ್ಮಿಗಳು ವಿಕೃತಿ ಮೆರೆದಿದ್ದರು. ಗಂಭೀರ ಗಾಯಗೊಂಡಿದ್ದ ಸಂತ್ರಸ್ತನಿಗೆ ಚಂಡೀಗಢದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಕಳೆದ 9 ದಿನಗಳಿಂದ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದ ದಲಿತ ಶನಿವಾರ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.

    ಚಂಗಲಿವಾಲಾ ಗ್ರಾಮದ ನಿವಾಸಿಯಾಗಿರುವ ಸಂತ್ರಸ್ತ ಹಾಗೂ ಗ್ರಾಮದ ರಿಂಕು, ಆತನ ಸ್ನೇಹಿತರೊಡನೆ ವಾಗ್ವಾದ ನಡೆದಿತ್ತು. ಈ ಗಲಾಟೆ ಗ್ರಾಮಸ್ಥರ ಮಧ್ಯಸ್ಥಿಕೆಯಿಂದ ಅಂತ್ಯಗೊಂಡಿತ್ತು. ಆದರೆ ಇದಾದ ಬಳಿಕ ಮಾತುಕತೆಗೆಂದು ರಿಂಕು ಸಂತ್ರಸ್ತನನ್ನು ತನ್ನ ಮನೆಗೆ ಕರೆಸಿಕೊಂಡಿದ್ದನು. ಈ ವೇಳೆ ಸಂತ್ರಸ್ತನ ಮೇಲೆ ನಾಲ್ವರು ಸೇರಿ ಹಲ್ಲೆ ನಡೆಸಿ, ಕಂಬಕ್ಕೆ ಕಟ್ಟಿದ್ದರು. ಆಗ ಬಾಯರಿಕೆಯಿಂದ ಸಂತ್ರಸ್ತ ನೀರು ಕೇಳಿದಾಗ ಬಲವಂತವಾಗಿ ಆತನಿಗೆ ರಿಂಕು ಮತ್ತು ಆತನೊಟ್ಟಿಗೆ ಇದ್ದವರು ಮೂತ್ರ ಕುಡಿಸಿದ್ದರು ಎಂದು ಪೊಲೀಸರು ಹೇಳಿದ್ದಾರೆ.

    ಈ ಘಟನೆಯಲ್ಲಿ ಭಾಗಿಯಾದ ಆರೋಪಿಗಳಾದ ರಿಂಕು, ಅಮರ್‍ಜೀತ್ ಸಿಂಗ್, ಲಕ್ಕಿ, ಬೀಟಾ ತಲೆಮರಿಸಿಕೊಂಡಿದ್ದು, ನಾಲ್ವರ ಮೇಲೂ ಸೆಕ್ಷನ್ 302 (ಕೊಲೆ) ಆರೋಪದ ಅಡಿ ಪ್ರಕರಣ ದಾಖಲಿಸಲಾಗಿದೆ. ಹಾಗೆಯೇ ರಾಜ್ಯದ ಪರಿಶಿಷ್ಟ ಜಾತಿ ಆಯೋಗ ಕೂಡ ಈ ಕುರಿತು ವಿವರ ಕೇಳಿದೆ ಎನ್ನಲಾಗಿದೆ.

  • ಲೋಕಸಭಾ ಟಿಕೆಟ್ ನಿರಾಕರಿಸಿದ್ದಕ್ಕೆ ಸಿಧು ಪತ್ನಿ ಕಾಂಗ್ರೆಸ್‍ಗೆ ಗುಡ್ ಬೈ

    ಲೋಕಸಭಾ ಟಿಕೆಟ್ ನಿರಾಕರಿಸಿದ್ದಕ್ಕೆ ಸಿಧು ಪತ್ನಿ ಕಾಂಗ್ರೆಸ್‍ಗೆ ಗುಡ್ ಬೈ

    ಚಂಡೀಗಢ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ನಿರಾಕರಿಸಿದ್ದಕ್ಕಾಗಿ ಕಾಂಗ್ರೆಸ್ ಮುಖಂಡ ನವಜೋತ್ ಸಿಂಗ್ ಸಿಧು ಪತ್ನಿ ನವಜೋತ್ ಕೌರ್ ಕಾಂಗ್ರೆಸ್ ತೊರೆದಿದ್ದಾರೆ.

    ಪೂರ್ವ ಅಮೃತಸರದ ಮಾಜಿ ಶಾಸಕಿ ಹಾಗೂ ಮಾಜಿ ಸಂಸದೀಯ ಪ್ರಧಾನ ಕಾರ್ಯದರ್ಶಿ ಕೌರ್ ಅವರಿಗೆ ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಚಂಡೀಗಢ ಲೋಕಸಭಾ ಕ್ಷೇತ್ರದ ಟಿಕೆಟ್ ನಿರಾಕರಿಸಲಾಗಿತ್ತು.

    ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಹಾಗೂ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಆಶಾ ಕುಮಾರಿ ಅವರಿಂದಾಗಿ ಚಂಡೀಗಢ ಲೋಕಸಭಾ ಕ್ಷೇತ್ರದಿಂದ ನನಗೆ ಟಿಕೆಟ್ ಸಿಗಲಿಲ್ಲ ಎಂದು ಕೌರ್ ಆರೋಪಿಸಿದ್ದರು. ಈ ಹೇಳಿಕೆಯನ್ನು ಸಿಧು ಸಹ ಸಮರ್ಥಿಸಿಕೊಂಡು ಅವರು ಎಂದೂ ಸುಳ್ಳು ಹೇಳುವುದಿಲ್ಲ. ನನ್ನ ಪತ್ನಿಗೆ ಶಕ್ತಿ ಹಾಗೂ ನೈತಿಕತೆ ಇದೆ, ಅವರು ಎಂದಿಗೂ ಸುಳ್ಳು ಹೇಳುವುದಿಲ್ಲ, ಇದೇ ನನ್ನ ಉತ್ತರ ಎಂದು ಈ ಹಿಂದೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದರು.

    ಈ ಕುರಿತು ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಪ್ರತಿಕ್ರಿಯಿಸಿ, ಅವರಿಗೆ ಅಮೃತಸರ ಅಥವಾ ಬಂಟಿಂಡಾ ಕ್ಷೇತ್ರದಿಂದ ಸ್ಪರ್ಧಿಸುವಂತೆ ಟಿಕೆಟ್ ನೀಡಲಾಗಿತ್ತು. ಆದರೆ ಅವರು ನಿರಾಕರಿಸಿದರು. ಚಂಡೀಗಢ ಲೋಕಸಭಾ ಕ್ಷೇತ್ರದ ಟಿಕೆಟ್ ಕೈ ತಪ್ಪುವಲ್ಲಿ ನನ್ನ ಪಾತ್ರವಿಲ್ಲ. ಕಾಂಗ್ರೆಸ್ ಹೈ ಕಮಾಂಡ್ ಟಿಕೆಟ್ ಹಂಚಿಕೆ ಮಾಡಿತ್ತು ಎಂದು ಸ್ಪಷ್ಟಪಡಿಸಿದ್ದರು.

    ಮುಖ್ಯಮಂತ್ರಿಯೊಂದಿಗಿನ ರಾಜಕೀಯ ಭಿನ್ನಾಭಿಪ್ರಾಯಗಳಿಂದ ಜುಲೈನಲ್ಲಿ ನವಜೋತ್ ಸಿಂಗ್ ಸಿಧು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದಾದ ಕೆಲವು ತಿಂಗಳುಗಳ ನಂತರ ಕೌರ್ ಕಾಂಗ್ರೆಸ್ ಪಕ್ಷಕ್ಕೆ ರಾಜಿನಾಮೆ ಸಲ್ಲಿಸಿದ್ದಾರೆ. ಕೌರ್ ಅವರು 2016ರಲ್ಲಿ ಬಿಜೆಪಿ ತೊರೆದ ನಂತರ ಕಾಂಗ್ರೆಸ್ ಸೇರ್ಪಡೆಗೊಂಡಿದ್ದರು.

  • ಸೂಕ್ತ ಜೋಡಿ ಹುಡುಕಿ ಕೊಡದ್ದಕ್ಕೆ ಮ್ಯಾಟ್ರಿಮೋನಿಯಲ್ ಸಂಸ್ಥೆಗೆ ಬಿತ್ತು ದಂಡ

    ಸೂಕ್ತ ಜೋಡಿ ಹುಡುಕಿ ಕೊಡದ್ದಕ್ಕೆ ಮ್ಯಾಟ್ರಿಮೋನಿಯಲ್ ಸಂಸ್ಥೆಗೆ ಬಿತ್ತು ದಂಡ

    ಚಂಡೀಗಢ: ನೀಡಿದ ಭರವಸೆಯನ್ನು ಈಡೇರಿಸದ್ದಕ್ಕೆ ಮ್ಯಾಟ್ರಿಮೋನಿಯಲ್ ಜಾಲತಾಣಕ್ಕೆ ಗ್ರಾಹಕರ ನ್ಯಾಯಾಲಯವು ದಂಡ ವಿಧಿಸಿದ್ದು, ಸಂತ್ರಸ್ತರಿಗೆ ಪರಿಹಾರ ನೀಡುವಂತೆ ಸೂಚಿಸಿದೆ.

    ಮೊಹಾಲಿಯ ಜಿಲ್ಲಾ ಗ್ರಾಹಕ ನ್ಯಾಯಾಲಯವು ಈ ಆದೇಶ ಹೊರಡಿಸಿದ್ದು, ಮ್ಯಾಟ್ರಿಮೋನಿ ಜಾಲತಾಣ ತನ್ನ ಭರವಸೆಯನ್ನು ಈಡೇರಿಸಿಲ್ಲ ಎಂದು ವೈದ್ಯೆ ಕೋರ್ಟ್ ಮೆಟ್ಟಿಲೇರಿದ್ದರು. ಪ್ರಕರಣ ಆಲಿಸಿದ ನ್ಯಾಯಾಲಯ ಈ ಆದೇಶ ಹೊರಡಿಸಿದೆ. ಸಂತ್ರಸ್ತರು ನೀಡಿದ ನೋಂದಣಿ ಶುಲ್ಕ 50 ಸಾವಿರ ರೂ.ಗೆ ಶೇ.9ರಷ್ಟು ಬಡ್ಡಿ ಸೇರಿಸಿ ನೀಡುವಂತೆ ತಿಳಿಸಿದೆ. ಅಲ್ಲದೆ 12 ಸಾವಿರ ರೂ. ಮಾನಸಿಕ ಕಿರುಕುಳ ಹಾಗೂ ದಾವೆ ವೆಚ್ಚವನ್ನು ನೀಡುವಂತೆ ಕೋರ್ಟ್ ತಿಳಿಸಿದೆ.

    ವರದಿಯ ಪ್ರಕಾರ ಸುರಿಂದರ್ ಪಾಲ್ ಸಿಂಗ್ ಚಹಲ್ ಅವರು 2017ರಲ್ಲಿ ತಮ್ಮ ಮಗಳಿಗೆ ವರನನ್ನು ಕೋರಿ ಪತ್ರಿಕೆಯಲ್ಲಿ ಜಾಹೀರಾತು ಪ್ರಕಟಿಸಿದ್ದರು. ನಂತರ ಮ್ಯಾಟ್ರಿಮೋನಿಯಲ್ ಸೈಟ್‍ನವರು ಚಹಲ್ ಅವರನ್ನು ಸಂಪರ್ಕಿಸಿ ಹರ್ಯಾಣ ನಾಗರಿಕ ವೈದ್ಯಕೀಯ ಸೇವೆಯಲ್ಲಿ ಕೆಲಸ ಮಾಡುತ್ತಿರುವ ಯುವತಿಗೆ ಜೋಡಿ ಹುಡುಕಿಕೊಡುವುದಾಗಿ ಭರವಸೆ ನೀಡಿದೆ.

    ಏಜೆನ್ಸಿಯ ಭರವಸೆಯಿಂದಾಗಿ ಸಂತ್ರಸ್ತೆ ವೈವಾಹಿಕ ಸೈಟ್‍ನಲ್ಲಿ ನೋಂದಾಯಿಸಲು ನಿರ್ಧರಿಸಿದ್ದಾರೆ. ನಂತರ ರಾಯಲ್ ಮೆಂಬರ್ ಶಿಪ್‍ಗಾಗಿ ನೀವು 50 ಸಾವಿರ ರೂ. ಪಾವತಿಸಬೇಕು ಎಂದು ಏಜೆನ್ಸಿ ಕೇಳಿದೆ. ಆ ಹಣವನ್ನೂ ಪಾವತಿಸಿ ನೋಂದಾಯಿಸಿಕೊಂಡಿದ್ದಾರೆ.

    ಯುವತಿಯು ಪಟ್ಟಿಯಲ್ಲಿ ಡಾಕ್ಟರ್ ಗೆ ಆದ್ಯತೆ ನೀಡಿದ್ದಾಳೆ. ಅಲ್ಲದೆ ಜಾಟ್ ಸಮುದಾಯದವರಾಗಿರಬೇಕು ಎಂದು ಸಹ ನೋಂದಣಿ ಸಂದರ್ಭದಲ್ಲಿ ಉಲ್ಲೇಖಿಸಿದ್ದಾಳೆ. ಒಂಬತ್ತು ತಿಂಗಳಲ್ಲಿ ಸೂಕ್ತ ಜೋಡಿಯನ್ನು ಹುಡುಕಿಕೊಡುವುದಾಗಿ ಕಂಪನಿ ಭರವಸೆ ನೀಡಿದೆ.

    ನಂತರ ಮ್ಯಾಟ್ರಿಮೋನಿಯಲ್ ಸೈಟ್‍ನಿಂದ 18 ಪ್ರೊಫೈಲ್‍ಗಳನ್ನು ಅಪ್‍ಲೋಡ್ ಮಾಡಿದ್ದಾರೆ. ಆದರೆ ಹುಡುಗಿಗೆ ಯಾವುದೇ ಹುಡುಗನ ಪ್ರೊಫೈಲ್ ಹೊಂದಿಕೆಯಾಗಿಲ್ಲ. ಏಜೆನ್ಸಿಯ ಅಸಮರ್ಥತೆಯಿಂದ ಬೇಸರಗೊಂಡ ಚಹಲ್ ಒಪ್ಪಂದವನ್ನು ಮುರಿದು ಬಡ್ಡಿಯೊಂದಿಗೆ ತನ್ನ 50 ಸಾವಿರ ರೂ. ನೋಂದಣಿ ಹಣವನ್ನು ಮರುಪಾವತಿ ಮಾಡುವಂತೆ ಒತ್ತಾಯಿಸಿದ್ದಾರೆ.

    ಆದರೆ ಏಜೆನ್ಸಿಯು ನಿಮ್ಮ ಅಗತ್ಯಕ್ಕನುಗುಣವಾಗಿ ಪ್ರೊಫೈಲ್ ಕಳುಹಿಸಲಾಗಿದೆ. ನಾವು ಹಣವನ್ನು ಮರುಪಾವತಿಸುವುದಿಲ್ಲ ಎಂದು ವಾದಿಸಿದೆ. ಹೊಂದಾಣಿಕೆ ಇರುವ ಪ್ರೊಫೈಲ್‍ಗಳನ್ನು ಮಾತ್ರ ನಾವು ಕಳುಹಿಸುತ್ತೇವೆ ಶೇ.100ರಷ್ಟು ಹೊಂದುವ ಪ್ರೊಫೈಲ್‍ಗಳು ಸಿಗುವುದಿಲ್ಲ ಎಂದು ಸಹ ಸಂಸ್ಥೆ ತಿಳಿಸಿದೆ.

    ನಂತರ ಚಹಲ್ ಅವರು ಗ್ರಾಹಕರ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಎರಡೂ ಕಡೆಯ ವಾದಗಳನ್ನು ಆಲಿಸಿದ ಗ್ರಾಹಕರ ನ್ಯಾಯಾಲಯ, ಇವೆಲ್ಲ ಅಸಂಬದ್ಧ ಪ್ರೊಫೈಲ್‍ಗಳು, ಇವು ದೂರುದಾರರಿಗೆ ವ್ಯರ್ಥ. ದೂರುದಾರರ ಅಮೂಲ್ಯ ಸಮಯವನ್ನು ವ್ಯರ್ಥ ಮಾಡಿರುವುದು ಮಾತ್ರವಲ್ಲದೆ, ಅವರಿಗೆ ತೀವ್ರ ಮಾನಸಿಕ ಹಾಗೂ ದೈಹಿಕ ಕಿರುಕುಳಕ್ಕೂ ಕಾರಣವಾಗಿದೆ. ಏಜೆನ್ಸಿಯು ತಮ್ಮ ವೃತ್ತಿಪರ ಸೇವೆಯಲ್ಲಿ ವಿಫಲವಾಗಿದೆ. ಹುಡುಗಿಗೆ ಸೂಕ್ತ ಜೋಡಿಯನ್ನು ಹುಡುಕಿಕೊಡದಿರುವುದರಿಂದ ಆಕೆಯ ಮದುವೆಯ ವಿಳಂಬಕ್ಕೆ ಕಾರಣವಾಗಿದೆ ಎಂದು ತರಾಟೆಗೆ ತೆಗೆದುಕೊಂಡಿದೆ.

    ನಂತರ ನ್ಯಾಯಾಲಯವು ಸೆಪ್ಟೆಂಬರ್ 26,2017ರಿಂದ ಬಡ್ಡಿ ಸಮೇತ ಗ್ರಾಹಕರ ಹಣವನ್ನು ಮರುಪಾವತಿಸುವಂತೆ ಮ್ಯಾಟ್ರಿಮೋನಿಯಲ್ ಸೈಟ್‍ಗೆ ನಿರ್ದೇಶಿಸಿದೆ. ಮಾನಸಿಕ ಕಿರುಕುಳ ನೀಡಿದ್ದಕ್ಕೆ 7 ಸಾವಿರ ರೂ., ದಾವೆ ವೆಚ್ಚವಾಗಿ 5 ಸಾವಿರ ರೂ. ಪರಿಹಾರ ನೀಡುವಂತೆಯೂ ಇದೇ ವೇಳೆ ಸೂಚಿಸಿದೆ.

  • ಪಂಜಾಬ್‍ನಲ್ಲಿ ಪಾಕ್‍ನ ಮತ್ತೊಂದು ಡ್ರೋನ್ ಹಾರಾಟ

    ಪಂಜಾಬ್‍ನಲ್ಲಿ ಪಾಕ್‍ನ ಮತ್ತೊಂದು ಡ್ರೋನ್ ಹಾರಾಟ

    ಚಂಡೀಗಢ: ಪಾಕಿಸ್ತಾನದ ಮತ್ತೊಂದು ಡ್ರೋನ್ ಪಂಜಾಬ್‍ನ ಫಿರೋಜ್‍ಪುರ ಜಿಲ್ಲೆಯ ಹುಸೇನಿವಾಲಾ ಗಡಿಯ ಮೂಲಕ ಭಾರತಕ್ಕೆ ಪ್ರವೇಶಿಸುತ್ತಿರುವುದನ್ನು ಸೋಮವಾರ ತಡರಾತ್ರಿ ಪತ್ತೆ ಹಚ್ಚಲಾಗಿದ್ದು, ಪೊಲೀಸರು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದಾರೆ.

    ಕೆಲವು ವಾರಗಳ ಹಿಂದೆ ರಾಜ್ಯದ ಟಾರ್ನ್ ತರಣ್ ಜಿಲ್ಲೆಯಲ್ಲಿ ಮಾನವರ ರಹಿತ ವೈಮಾನಿಕ ವಾಹನಗಳು ಕಾರ್ಯಾಚರಣೆ ನಡೆಸಿದ್ದವು. ಅಲ್ಲದೆ, ಹೆಚ್ಚಿನ ಸಂಖ್ಯೆಯ ಎಕೆ-47 ರೈಫಲ್‍ಗಳು, ಉಪಗ್ರಹ ಫೋನ್‍ಗಳು ಹಾಗೂ ಗ್ರನೇಡ್‍ಗಳು ಪತ್ತೆಯಾಗಿದ್ದ ಹಿನ್ನೆಲೆ ಈ ಬೆಳವಣಿಗೆ ಭಾರೀ ಮಹತ್ವವನ್ನು ಪಡೆದುಕೊಂಡಿದೆ.

    ಸೋಮವಾರ ರಾತ್ರಿ ಫೀರೋಜ್‍ಪುರ ಹುಸೇನಿವಾಲಾ ಪೋಸ್ಟ್‍ನಲ್ಲಿರುವ ಗಡಿ ಭದ್ರತಾ ಪಡೆ(ಬಿಎಸ್‍ಎಫ್) ಸಿಬ್ಬಂದಿ ಪಾಕಿಸ್ತಾನದ ಕಡೆಯಿಂದ ಭಾರತೀಯ ಭೂಪ್ರದೇಶಕ್ಕೆ ಪ್ರವೇಶಿಸುವ ಡ್ರೋನ್ ಅನ್ನು ಗುರುತಿಸಿದ್ದಾರೆ. ಈ ಕುರಿತು ಬಿಎಸ್‍ಎಫ್ ಪಂಜಾಬ್ ಪೊಲೀಸರಿಗೆ ಎಚ್ಚರಿಸಿದೆ. ಪೊಲೀಸರು ಶೋಧ ಕಾರ್ಯ ಪ್ರಾರಂಭಿಸಿದ್ದು, ತನಿಖೆ ನಡೆಸುತ್ತಿದ್ದಾರೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.

    ಮಧ್ಯರಾತ್ರಿಯ ಹೊತ್ತಿಗೆ ವೀಕ್ಷಣೆಯಿಂದ ಕಣ್ಮರೆಯಾಗುವ ಮೊದಲು ಡ್ರೋನ್ ಭಾರತದ ಭೂಪ್ರದೇಶಕ್ಕೆ ಆಗಮಿಸಿದ್ದು, ಗಡಿ ಹೊರ ಠಾಣೆಯ ಒಂದು ಕಿ.ಮೀ. ಹತ್ತಿರಕ್ಕೆ ಬಂದಿದೆ ಎಂದು ವರದಿಯಾಗಿದೆ.

    ಇದಕ್ಕೂ ಮುನ್ನ ಅಲ್ಲಿನ ಬಿಎಸ್‍ಎಫ್ ಸಿಬ್ಬಂದಿ ಪಾಕಿಸ್ತಾನದ ಡ್ರೋನ್‍ಗಳು ರಾತ್ರಿ 10ರಿಂದ 10.40ರ ನಡುವೆ ಅಂತರಾಷ್ಟ್ರೀಯ ಗಡಿ ಭಾಗದಲ್ಲಿ ನಾಲ್ಕು ಬಾರಿ ಅನುಮಾನಾಸ್ಪದವಾಗಿ ಹಾರುತ್ತಿರುವುದನ್ನು ನೋಡಿದ್ದರು.

    ಕಳೆದ ತಿಂಗಳು ಪಂಜಾಬ್ ಪೊಲೀಸರು ಪಾಕಿಸ್ತಾನದ ಡ್ರೋನ್‍ಗಳನ್ನು ಪತ್ತೆ ಹಚ್ಚಿದ್ದರು. ಈ ಡ್ರೋನ್ ಗಳು ಎಂಟು ಎಕರೆ ಪ್ರದೇಶದಲ್ಲಿ ಎಕೆ-47 ಬಂದೂಕುಗಳು, ಗ್ರೆನೇಡ್‍ಗಳು ಹಾಗೂ ಉಪಗ್ರಹ ಆಧಾರಿತ ಫೋನ್‍ಗಳನ್ನು ಕೆಳಗಡೆ ಉದುರಿಸಿತ್ತು. ಈ ಡ್ರೋನ್‍ಗಳು 5 ಕೆ.ಜಿ. ತೂಕವನ್ನು ಹೊತ್ತೊಯ್ಯುವ ಸಾಮಥ್ರ್ಯ ಹೊಂದಿದ್ದು, ಕಡಿಮೆ ಅಂತರದಲ್ಲಿ ಹಾಗೂ ಬಹಳ ವೇಗವಾಗಿ ಚಲಿಸುವ ಕಾರಣ ಸುಲಭವಾಗಿ ಈ ಡ್ರೋನ್‍ಗಳನ್ನು ಪತ್ತೆ ಹಚ್ಚಲು ಸಾಧ್ಯವಿಲ್ಲ.

  • ಅಪ್ರಾಪ್ತೆಯನ್ನು ಅಪಹರಿಸಿ, ಬಂಧಿಸಿಟ್ಟು 3 ದಿನಗಳ ಕಾಲ ಗ್ಯಾಂಗ್ ರೇಪ್

    ಅಪ್ರಾಪ್ತೆಯನ್ನು ಅಪಹರಿಸಿ, ಬಂಧಿಸಿಟ್ಟು 3 ದಿನಗಳ ಕಾಲ ಗ್ಯಾಂಗ್ ರೇಪ್

    ಚಂಡೀಗಢ: ಅಪ್ರಪ್ತ ಬಾಲಕಿಯೊಬ್ಬಳನ್ನು ಆಕೆಯ ಮನೆ ಮುಂದೆಯೇ ಅಪಹರಿಸಿದ 4 ಮಂದಿ ಯುವಕರು, ಆಕೆಯನ್ನು ಬಂಧಿಸಿಟ್ಟು, ಸತತ 3 ದಿನಗಳ ಕಾಲ ಸಾಮೂಹಿಕ ಅತ್ಯಾಚಾರ ಮಾಡಿದ ನಾಚಿಕೆಗೇಡಿ ಘಟನೆ ಪಂಜಾಬ್‍ನಲ್ಲಿ ನಡೆದಿದೆ.

    ಪಂಜಾಬ್‍ನ ಬರ್ನಾಲಾ ಜಿಲ್ಲೆಯ ಮೌರ್ ನಭಾ ಗ್ರಾಮದ 12 ವರ್ಷದ ಬಾಲಕಿಯನ್ನು ಅದೇ ಗ್ರಾಮದ 4 ಮಂದಿ ಯುವಕರು ಅಪಹರಿಸಿದ್ದರು. ಸೆ. 29ರಂದು ಬಾಲಕಿಯ ಮನೆಯ ಮುಂಭಾಗದಲ್ಲೇ ಆಕೆಯನ್ನು ಅಪಹರಿಸಿ, ಕೋಣೆಯೊಂದರಲ್ಲಿ ಬಂಧಿಸಿಟ್ಟಿದ್ದರು. ಅಲ್ಲದೆ ಸತತ ಮೂರು ದಿನಗಳ ಕಾಲ ಆಕೆಯ ಮೇಲೆ ಆರೋಪಿಗಳು ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ. ಬಾಲಕಿ ನಾಪತ್ತೆಯಾದ ಬಗ್ಗೆ ಬಾಲಕಿ ಪೋಷಕರು ಪೊಲೀಸರಿಗೆ ದೂರನ್ನು ಕೂಡ ನೀಡಿದ್ದರು. ಆದರೆ ಪೊಲೀಸರು ಈ ಬಗ್ಗೆ ನಿರ್ಲಕ್ಷ್ಯ ತೋರಿ, ಯಾವುದೇ ಕ್ರಮ ತೆಗೆದುಕೊಂಡಿರಲಿಲ್ಲ ಎಂದು ಪೋಷಕರು ಆರೋಪಿಸಿದ್ದಾರೆ.

    ಮೂರು ದಿನಗಳ ನಂತರ ದುಷ್ಟರಿಂದ ತಪ್ಪಿಸಿಕೊಂಡು ಬಂದ ಬಾಲಕಿ, ಕುಟುಂಬದವರ ಮುಂದೆ ನೋವು ತೋಡಿಕೊಂಡಿದ್ದಾಳೆ. ಹೀನಾಯ ಸ್ಥಿತಿಗೆ ತಲುಪಿದ್ದ ಬಾಲಕಿಯನ್ನು ಪೋಷಕರು ಮೊದಲು ಆಸ್ಪತ್ರೆಗೆ ಸೇರಿಸಿ, ಬಳಿಕ ಪೊಲೀಸರಿಗೆ ಈ ಬಗ್ಗೆ ದೂರು ನೀಡಿದ್ದಾರೆ.

    ನಾಲ್ವರು ಆರೋಪಿಗಳಲ್ಲಿ ಓರ್ವ ಆರೋಪಿಯನ್ನು ಮೌರ್ ನಭಾ ಗ್ರಾಮದ ನಿವಾಸಿ ಗುರ್‌ಪ್ರೀತ್‌ ಸಿಂಗ್ ಎಂದು ಬಾಲಕಿ ಗುರುತಿಸಿದ್ದು, ಇನ್ನುಳಿದವರ ಬಗ್ಗೆ ಮಾಹಿತಿ ಕಲೆ ಹಾಕಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ. ಅಲ್ಲದೇ ಈ ಬಗ್ಗೆ ತನಿಖೆ ಕೈಗೊಂಡಿದ್ದೇವೆ. ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸಲಾಗುತ್ತದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಭರವಸೆ ಕೊಟ್ಟಿದ್ದಾರೆ.