Tag: punjab

  • ಆರ್ಥಿಕ ಸಂಕಷ್ಟ – ಒಂದೇ ಫ್ಯಾನಿಗೆ ನೇಣು ಬಿಗಿದುಕೊಂಡ ಅಮ್ಮ, ಮಗ

    ಆರ್ಥಿಕ ಸಂಕಷ್ಟ – ಒಂದೇ ಫ್ಯಾನಿಗೆ ನೇಣು ಬಿಗಿದುಕೊಂಡ ಅಮ್ಮ, ಮಗ

    ಚಂಡೀಗಢ: ಲಾಕ್‍ಡೌನ್ ವೇಳೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಒಂದೇ ಫ್ಯಾನಿಗೆ ನೇಣು ಬಿಗಿದುಕೊಂಡು ಅಮ್ಮ ಮತ್ತು ಮಗ ಇಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಂಜಾಬ್‍ನ ಲುಧಿಯಾನದಲ್ಲಿ ನಡೆದಿದೆ.

    ಮೃತರನ್ನು ಕೃಷ್ಣದೇವಿ (65) ಮತ್ತು ಆಕೆಯ ಮಗ ಮನೀಶ್ ವರ್ಮಾ (35) ಎಂದು ಗುರುತಿಸಲಾಗಿದೆ. ಇಬ್ಬರೂ ದಾಬಾದ ಸದ್ಗುರ ನಗರದ ತಮ್ಮ ನಿವಾಸದಲ್ಲಿ ಒಂದೇ ಫ್ಯಾನಿಗೆ ನೇಣು ಹಾಕಿಕೊಂಡಿದ್ದಾರೆ. ಕೆಲವು ದಿನಗಳ ಹಿಂದೆ ಮೃತ ಮನೀಶ್ ಅವರ ಪತ್ನಿ ಅನಾರೋಗ್ಯದಿಂದ ಮೃತಪಟ್ಟಿದ್ದರು.

    ಮನೀಶ್‍ಗೆ ಮನೆ ಬಾಡಿಗೆ ಕೊಟ್ಟ ಮಾಲೀಕರು ಕಿಟಕಿ ತೆಗೆದು ನೋಡಿದಾಗ ವಿಚಾರ ಬೆಳಕಿಗೆ ಬಂದಿದೆ. ಮನೆಯಿಂದ ಯಾರೂ ಹೊರಗೆ ಬರುತ್ತಿಲ್ಲ. ಬಾಗಿಲೂ ತೆರೆದಿಲ್ಲ ಎಂಬ ಕಾರಣಕ್ಕೆ ಅನುಮಾನಗೊಂಡ ಮನೆಯ ಮಾಲೀಕ ಮನೆಯ ಕಿಟಕಿಯನ್ನು ತೆರೆದು ನೋಡಿದ್ದಾರೆ. ಈ ವೇಳೆ ಅಮ್ಮ ಮತ್ತು ಮಗ ಇಬ್ಬರು ಒಂದೇ ಫ್ಯಾನಿಗೆ ನೇಣು ಹಾಕಿಕೊಂಡಿರುವುದು ಕಂಡಿದೆ. ಆಗ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

    ಈ ವಿಚಾರದ ಬಗ್ಗೆ ಮಾತನಾಡಿರುವ ಪೊಲೀಸ್ ಅಧಿಕಾರಿ ಪವಿತರ್ ಸಿಂಗ್, ಆತ್ಯಹತ್ಯೆ ಮಾಡಿಕೊಂಡ ಜಾಗದಲ್ಲಿ ಯಾವುದೇ ಡೆತ್ ನೋಟ್ ಸಿಕ್ಕಿಲ್ಲ. ಮೃತ ಅಮ್ಮ-ಮಗ ಕಳೆದ ಎರಡು ವರ್ಷಗಳಿಂದ ಇದೇ ಮನೆಯಲ್ಲಿ ಬಾಡಿಗೆಗೆ ಇದ್ದರು ಎಂದು ತಿಳಿದು ಬಂದಿದೆ. ಮನೀಶ್ ಅವರ ಪತಿ ಇತ್ತೀಚೆಗೆ ಅನಾರೋಗ್ಯಕ್ಕೆ ತುತ್ತಾಗಿದ್ದರು. ನಂತರ ಅವರು ತಮ್ಮ ಪೋಷಕರ ಮನೆಗೆ ಹೋಗಿ ಅಲ್ಲೇ ತೀರಿಹೋಗಿದ್ದರು ಎಂದು ಮಾಹಿತಿ ನೀಡಿದ್ದಾರೆ.

    ಲಾಕ್‍ಡೌನ್ ವೇಳೆ ಕೆಲಸವನ್ನು ಕಳೆದುಕೊಂಡ ಮನೀಶ್ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ. ಜೊತೆಗೆ ಇತ್ತೀಚೆಗೆ ಹೆಂಡತಿ ಕೂಡ ಅನಾರೋಗ್ಯದ ಕಾರಣ ಸಾವನ್ನಪ್ಪಿದ್ದರಿಂದ ಮನೀಶ್ ಖಿನ್ನತೆಗೆ ಒಳಾಗಿದ್ದ ಎನ್ನಲಾಗಿದೆ. ಹೀಗಾಗಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

  • ರಾತ್ರಿ ವೇಳೆ ಹೆಂಡತಿ ಜೊತೆ ವಾಕ್ ಹೋದವ ಆಸ್ಪತ್ರೆಯಲ್ಲಿ ಶವವಾದ

    ರಾತ್ರಿ ವೇಳೆ ಹೆಂಡತಿ ಜೊತೆ ವಾಕ್ ಹೋದವ ಆಸ್ಪತ್ರೆಯಲ್ಲಿ ಶವವಾದ

    – ಬಿಯರ್ ಬಾಟಲ್, ಇಟ್ಟಿಗೆಯಿಂದು ಹೊಡೆದು ಕೊಂದ್ರು

    ಚಂಡೀಗಢ: ರಾತ್ರಿ ವೇಳೆ ಪತ್ನಿ ಹಾಗೂ ತಂದೆಯ ಜೊತೆ ಮನೆಯ ಹೊರಗೆ ವಾಕ್ ಹೋದವ ಹಲ್ಲೆಗೊಳಗಾಗಿ ಆಸ್ಪತ್ರೆಯಲ್ಲಿ ಶವವಾದ ಘಟನೆ ಪಂಜಾಬ್‍ನ ಪಾಟಿಯಾಲ ಜಿಲ್ಲೆಯಲ್ಲಿ ನಡೆದಿದೆ.

    ಸಾವನ್ನಪ್ಪಿದ ಯುವಕನನ್ನು ಬಿಹಾರ ಮೂಲದ ಮಿಥುನ್ ಪಾಟೀಲ್ ಎಂದು ಗುರುತಿಸಲಾಗಿದೆ. ಆರೋಪಿಗಳನ್ನು ಪಟಿಯಾಲ ಜಿಲ್ಲೆಯ ಶಂಕರ್‍ಪುರ ಗ್ರಾಮದ ಜಗಮೋಹನ್ ಸಿಂಗ್ ಮತ್ತು ಹರಿಯಾಣದ ಕುರುಕ್ಷೇತ್ರ ಜಿಲ್ಲೆಯ ಭೂಪಿಂದರ್ ಸಿಂಗ್ ಎಂದು ಗುರುತಿಸಲಾಗಿದೆ. ಆರೋಪಿಗಳು ಘಟನೆಯ ನಂತರ ಪರಾರಿಯಾಗಿದ್ದಾರೆ.

    ಘಟನೆ ನಡೆದಾಗ ಸ್ಥಳದಲ್ಲೇ ಇದ್ದ ಮಿಥುನ್ ತಂದೆ ಮಾತನಾಡಿ, ನಾನು, ನನ್ನ ಮಗ ಮತ್ತು ಆತನ ಪತ್ನಿ ಊಟದ ನಂತರ ಸುಮಾರು 12 ಗಂಟೆಗೆ, ಗುರುದ್ವಾರದ ರಸ್ತೆಯಲ್ಲಿ ವಾಕ್ ಮಾಡುತ್ತಿದ್ದೇವೆ. ಈ ವೇಳೆ ಅಲ್ಲಿಗೆ ಬಂದ ಇಬ್ಬರು, ಈ ಸಮಯದಲ್ಲಿ ಹುಡುಗಿಯ ಜೊತೆ ಇಲ್ಲಿ ಏನೂ ಮಾಡುತ್ತಿದ್ದೀರಾ ಎಂದು ಪ್ರಶ್ನೇ ಮಾಡಿದರು. ಆಗ ಮಿಥುನ್ ಆಕೆ ನನ್ನ ಪತ್ನಿ ಎಂದು ಹೇಳಿದ. ಆಗ ವಾಗ್ವಾದ ನಡೆದು ಓರ್ವ ಮಿಥುನ್‍ಗೆ ಬಾಟಲಿಯಲ್ಲಿ ಹೊಡೆದ ನಂತರ ಇಬ್ಬರು ಸೇರಿ ಕಲ್ಲು ಇಟ್ಟಿಗೆಯಿಂದ ಹಲ್ಲೆ ಮಾಡಿದರು ಎಂದು ಹೇಳಿದ್ದಾರೆ.

    ಪೊಲೀಸರು ಹೇಳುವ ಪ್ರಕಾರ, ಮಿಥುನ್ ತನ್ನ ತಂದೆ ಮತ್ತು ಪತ್ನಿಯ ಜೊತೆಗೆ ಪಾಟಿಯಾಲದ ಕಾರ್ಖಾನೆ ಪ್ರದೇಶದಲ್ಲಿ ವಾಸವಿದ್ದ ಎನ್ನಲಾಗಿದೆ. ಜೊತೆಗೆ ಆತನನ್ನು ಬಿಯರ್ ಬಾಟಲ್, ಇಟ್ಟಿಗೆ ಮತ್ತು ಕಲ್ಲುಗಳಿಂದ ಹಲ್ಲೆ ಮಾಡಲಾಗಿದೆ. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಮಿಥುನ್ ಅನ್ನು ಸರ್ಕಾರಿ ರಾಜೇಂದ್ರ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಆತ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾನೆ.

    ಈ ಸಂಬಂಧ ಗ್ರೇನ್ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ವಿಚಾರವಾಗಿ ಮಾತನಾಡಿರುವ ಇನ್ಸ್ ಸ್ಪೆಕ್ಟರ್ ಗುರ್ನಮ್ ಸಿಂಗ್, ಹಲ್ಲೆ ಮಾಡಿದ ವ್ಯಕ್ತಿಗಳನ್ನು ಪತ್ತೆ ಹಚ್ಚಲಾಗಿದೆ. ಆದರೆ ಅವರು ಘಟನೆಯ ನಂತರ ಪರಾರಿಯಾಗಿದ್ದು, ಅವರನ್ನು ಶೀಘ್ರದಲ್ಲೇ ಅರೆಸ್ಟ್ ಮಾಡುತ್ತೇವೆ ಎಂದು ಹೇಳಿದ್ದಾರೆ.

  • ಇಂಡೋ-ಚೀನಾ ಸಂಘರ್ಷ- ಹುತಾತ್ಮರಲ್ಲಿ ಬಿಹಾರ್ ರೆಜಿಮೆಂಟ್‍ನ ಯೋಧರೇ ಹೆಚ್ಚು

    ಇಂಡೋ-ಚೀನಾ ಸಂಘರ್ಷ- ಹುತಾತ್ಮರಲ್ಲಿ ಬಿಹಾರ್ ರೆಜಿಮೆಂಟ್‍ನ ಯೋಧರೇ ಹೆಚ್ಚು

    ನವದೆಹಲಿ: ಭಾರತ-ಚೀನಾದ ಸೈನಿಕರ ನಡುವೆ ಸೋಮವಾರ ರಾತ್ರಿ ಲಡಾಖ್‍ನ ಗಾಲ್ವಾನ್ ಕಣಿವೆಯಲ್ಲಿ ನಡೆದ ಹಿಂಸಾತ್ಮಕ ಘರ್ಷಣೆಯಲ್ಲಿ ನಮ್ಮ ಸೇನೆಯ 20 ಯೋಧರು ಹುತಾತ್ಮರಾಗಿದ್ದಾರೆ.

    ಈ ಯೋಧರಲ್ಲಿ ಗರಿಷ್ಠ 13 ಮಂದಿ ಬಿಹಾರದ ಎರಡು ವಿಭಿನ್ನ ರೆಜಿಮೆಂಟ್‍ಗಳಿಂದ ಬಂದವರಾಗಿದ್ದರು. ಹುತಾತ್ಮ ಕರ್ನಲ್ ಸಂತೋಷ್ ಬಾಬು ಅವರು ಕೂಡ ಬಿಹಾರ್ ರೆಜಿಮೆಂಟ್‍ನವರಾಗಿದ್ದಾರೆ. ಇದನ್ನೂ ಓದಿ: ನಮ್ಮ ತಾಳ್ಮೆಯನ್ನು ಕೆಣಕಬೇಡಿ -ವೈರಿ ಚೀನಾಗೆ ಮೋದಿ ಖಡಕ್ ಸಂದೇಶ

    ಯಾವ ರೆಜಿಮೆಂಟ್‍ನಿಂದ ಎಷ್ಟು ಹುತಾತ್ಮರು?
    16 ಬಿಹಾರ್ ರೆಜಿಮೆಂಟ್: 12 ಯೋಧರು
    3 ಪಂಜಾಬ್ ರೆಜಿಮೆಂಟ್: 3 ಯೋಧರು
    3 ಮಧ್ಯಮ ರೆಜಿಮೆಂಟ್: 2 ಯೋಧರು
    12 ಬಿಹಾರ್ ರೆಜಿಮೆಂಟ್: ಓರ್ವ ಯೋಧ
    81 ಮೌಂಟ್ ಬ್ರಿಗೇಡ್ ಸಿಗ್ನಲ್ ಕಂಪನಿ: ಓರ್ವ ಯೋಧ
    81 ಫೀಲ್ಡ್ ರೆಜಿಮೆಂಟ್: ಓರ್ವ ಯೋಧ ಇದನ್ನೂ ಓದಿ: ಗಾಲ್ವಾನ್ ಕಣಿವೆಯ ಸಾರ್ವಭೌಮತ್ವ ಯಾವಗಲೂ ನಮಗೆ ಸೇರಿದ್ದು- ಮತ್ತೆ ಕೆಣಕಿದ ಚೀನಾ

    16 ಬಿಹಾರ್ ರೆಜಿಮೆಂಟ್:
    > ಕರ್ನಲ್ ಬಿ. ಸಂತೋಷ್ ಬಾಬು – ತೆಲಂಗಾಣ (ಹೈದರಾಬಾದ್)
    > ಹವಾಲ್ದಾರ್ ಸುನಿಲ್ ಕುಮಾರ್- ಬಿಹಾರ (ಪಾಟ್ನಾ)
    > ಕಾನ್ಸ್‌ಟೇಬಲ್ ಕುಂದನ್ ಕುಮಾರ್ – ಬಿಹಾರ (ಸಹರ್ಸಾ)
    > ಕಾನ್ಸ್‌ಟೇಬಲ್ ಅಮನ್ ಕುಮಾರ್ – ಬಿಹಾರ (ಸಮಸ್ತಿಪುರ)
    > ದೀಪಕ್ ಕುಮಾರ್ – ಮಧ್ಯಪ್ರದೇಶ (ರೇವಾ)
    > ಕಾನ್ಸ್‌ಟೇಬಲ್ ಚಂದನ್ ಕುಮಾರ್ – ಬಿಹಾರ (ಭೋಜ್‍ಪುರ)
    > ಕಾನ್ಸ್‌ಟೇಬಲ್ ಗಣೇಶ ಕುಂಜಮ್ – ಪಶ್ಚಿಮ ಬಂಗಾಳ (ಸಿಂಗ್‍ಭೂಮ್)
    > ಕಾನ್ಸ್‌ಟೇಬಲ್ ಗಣೇಶ ರಾಮ್ – ಛತ್ತೀಸಗಢ (ಕಾಂಕರ್)
    > ಕಾನ್ಸ್‌ಟೇಬಲ್ ಕೆ.ಕೆ. ಓಜಾ – ಜಾರ್ಖಂಡ್ (ಸಾಹಿಬ್‍ಗಂಜ್)
    > ಕಾನ್ಸ್‌ಟೇಬಲ್ ರಾಜೇಶ್ ಒರಾನ್ – ಪಶ್ಚಿಮ ಬಂಗಾಳ (ಬಿರ್ಭುಮ್)
    > ಸಿಪಾಯಿ ಸಿ.ಕೆ.ಪ್ರಧಾನ್ – ಒಡಿಶಾ (ಕಂಧಮಾಲ್)
    > ನಾಯಬ್ ಸುಬೇದಾರ್ ನಂದುರಾಮ್ – ಒಡಿಶಾ (ಮಯೂರ್ಭಂಜ್)

    3 ಪಂಜಾಬ್ ರೆಜಿಮೆಂಟ್:
    > ಕಾನ್ಸ್‌ಟೇಬಲ್ ಗುರ್ತೇಜ್ ಸಿಂಗ್ – ಪಂಜಾಬ್ (ಮಾನ್ಸಾ)
    > ಸಿಪಾಯಿ ಅಂಕುಷ್ – ಹಿಮಾಚಲ ಪ್ರದೇಶ (ಹಮೀರ್‍ಪುರ)
    > ಕಾನ್ಸ್‌ಟೇಬಲ್ ಗುರ್ವಿಂದರ್ ಸಿಂಗ್ – ಪಂಜಾಬ್ (ಸಂಗ್ರೂರ್)

    3 ಮಧ್ಯಮ ರೆಜಿಮೆಂಟ್:
    > ನಾಯಬ್ ಸುಬೇದಾರ್ ಸತ್ನಮ್ ಸಿಂಗ್ – ಪಂಜಾಬ್ (ಗುರುದಾಸ್‍ಪುರ)
    > ನಾಯಬ್ ಸುಬೇದಾರ್ ಮಂದೀಪ್ ಸಿಂಗ್ – ಪಂಜಾಬ್ (ಪಟಿಯಾಲ)

    12 ಬಿಹಾರ ರೆಜಿಮೆಂಟ್:
    > ಕಾನ್ಸ್‌ಟೇಬಲ್ ಜೈಕಿಶೋರ್ ಸಿಂಗ್ – ಬಿಹಾರ (ವೈಶಾಲಿ)
    81 ಮೌಂಟ್ ಬ್ರಿಗೇಡ್ ಸಿಗ್ನಲ್ ಕಂಪನಿ:
    > ಹವಾಲ್ದಾರ್ ಬಿಪುಲ್ ರಾಯ್ – ಉತ್ತರ ಪ್ರದೇಶ (ಮೀರತ್)
    81 ಫೀಲ್ಡ್ ರೆಜಿಮೆಂಟ್:
    > ಹವಾಲ್ದಾರ್ ಕೆ.ಪಳನಿ – ತಮಿಳುನಾಡು (ಮಧುರೈ)

    ಕರ್ನಲ್ ಸಂತೋಷ್:
    ತೆಲಂಗಾಣದ ಸೂರ್ಯಪೇಟೆಯ ಹುತಾತ್ಮ ಕರ್ನಲ್ ಸಂತೋಷ್ ಬಾಬು ಅವರನ್ನು ಭಾರತದ ಗಡಿಯ ರಕ್ಷಣೆಗಾಗಿ 18 ತಿಂಗಳು ಲಡಾಖ್‍ನಲ್ಲಿ ನಿಯೋಜಿಸಲಾಗಿತ್ತು. ಅವರು ಕಮಾಂಡಿಂಗ್ ಅಧಿಕಾರಿಯಾಗಿದ್ದರು. ಮಗನ ನಿಧನದ ಸುದ್ದಿ ಕೇಳುತ್ತಿದ್ದಂತೆ ಸಂತೋಷ್ ಬಾಬು ಅವರ ತಾಯಿ, “ಒಬ್ಬನೇ ಮಗ ಕಳೆದುಹೋದ ಎನ್ನುವ ದುಃಖವಿದೆ. ಆದರೆ ಅವನು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ್ದಾನೆ ಎಂಬ ಹೆಮ್ಮೆ ಇದೆ” ಎಂದು ಮಂಗಳವಾರ ಹೇಳಿದ್ದರು.

    ಕುಂದನ್ ಓಜಾ:
    26 ವರ್ಷದ ಹುತಾತ್ಮ ಕುಂದನ್ ಓಜಾ ಅವರ ಪತ್ನಿ 17 ದಿನಗಳ ಹಿಂದೆಯಷ್ಟೇ ಮಗುವಿಗೆ ಜನ್ಮ ನೀಡಿದ್ದರು. ಆದರೆ ಕುಂದನ್ ಓಜಾ ಅವರ ಮಗಳ ಮುಖವನ್ನು ಸಹ ನೋಡಲಾಗಲಿಲ್ಲ. ಅವರ ತಂದೆ ರವಿಶಂಕರ್ ಓಜಾ ಕೃಷಿಕಯಾಗಿದ್ದಾರೆ. ಕುಂದನ್ ಅವರನ್ನು 2011ರಲ್ಲಿ ಬಿಹಾರ ರೆಜಿಮೆಂಟ್ ಕತಿಹಾರ್ ಗೆ ನಿಯೋಜಿಸಲಾಗಿತ್ತು. ಅವರು ಮೂರು ವರ್ಷಗಳ ಹಿಂದೆ ವಿವಾಹವಾಗಿದ್ದರು.

  • ಕೊರೊನಾ ಅಬ್ಬರ- ಪಂಜಾಬ್‍ನಲ್ಲಿ ವೀಕೆಂಡ್, ಸರ್ಕಾರಿ ರಜೆಯಂದು ಕಠಿಣ ಲಾಕ್‍ಡೌನ್ ಜಾರಿ

    ಕೊರೊನಾ ಅಬ್ಬರ- ಪಂಜಾಬ್‍ನಲ್ಲಿ ವೀಕೆಂಡ್, ಸರ್ಕಾರಿ ರಜೆಯಂದು ಕಠಿಣ ಲಾಕ್‍ಡೌನ್ ಜಾರಿ

    – ಜೂನ್ 17ಕ್ಕೆ ಸಿಎಂ ಬಿಎಸ್‍ವೈ ಜೊತೆ ಮೋದಿ ಸಭೆ

    ಚಂಡೀಗಢ್: ಪಂಜಾಬ್ ರಾಜ್ಯದಲ್ಲಿ ಕೊರೊನಾ ಕೇಸ್ ಜಾಸ್ತಿಯಾದ ಹಿನ್ನೆಲೆಯಲ್ಲಿ ವೀಕೆಂಡ್ ಮತ್ತು ಸರ್ಕಾರಿ ರಜಾ ದಿನಗಳಲ್ಲೂ ಕಠಿಣ ಲಾಕ್‍ಡೌನ್ ಜಾರಿಯಾಗಿದೆ.

    ಪಂಜಾಬ್ ಸರ್ಕಾರದ ಆದೇಶದ ಪ್ರಕಾರ, ವಾರದ ಶನಿವಾರ ಮತ್ತು ಭಾನುವಾರ ಲಾಕ್‍ಡೌನ್ ಇರಲಿದೆ. ಇದರ ಜೊತೆಗೆ ಸರ್ಕಾರಿ ರಜೆ ದಿನಗಳಲ್ಲೂ ಲಾಕ್‍ಡೌನ್ ಜಾರಿ ಮಾಡಲು ಸರ್ಕಾರ ನಿರ್ಧಾರ ಮಾಡಿದೆ. ಈ ದಿನಗಳಲ್ಲಿ ರಾಜ್ಯದಲ್ಲಿ ಯಾವುದೇ ಅಂಗಡಿಗಳು ತೆರೆಯುವುದಿಲ್ಲ ಹಾಗೂ ಸಾರಿಗೆ ಸಂಚಾರವೂ ಇರುವುದಿಲ್ಲ ಎಂದು ಅಲ್ಲಿನ ಸರ್ಕಾರ ತಿಳಿಸಿದೆ.

    ಪಂಜಾಬ್ ಸರ್ಕಾರ ಇಂದಿನಿಂದಲೇ ಪ್ರಯೋಗಿಕವಾಗಿ ಲಾಕ್‍ಡೌನ್ ಅನ್ನು ಜಾರಿ ಮಾಡಿದೆ. ಆದರೆ ಈಗಾಗಲೇ ಲಾಕ್‍ಡೌನ್ ಸಮಯದಲ್ಲಿ ನಮಗೆ ಬಹಳ ಲಾಸ್ ಆಗಿದೆ. ಈಗ ಮತ್ತೆ ಲಾಕ್‍ಡೌನ್ ಮಾಡಿದರೆ ನಮಗೆ ಬಹಳ ತೊಂದರೆಯಾಗುತ್ತದೆ ಎಂದು ಅಂಗಡಿ ವ್ಯಾಪಾರಿಗಳು ಹೇಳುತ್ತಿದ್ದಾರೆ. ಇದರ ಜೊತೆಗೆ ಸರ್ಕಾರ ದಿಢೀರ್ ಆಗಿ ಲಾಕ್‍ಡೌನ್ ಘೋಷಣೆ ಮಾಡಿದ್ದು, ಇ-ಪಾಸ್ ಇರುವವರು ಹಾಗೂ ಅಗತ್ಯ ಸೇವೆಗೆ ಹೊರಬರುವವರನ್ನು ಏನೂ ಮಾಡಬೇಕು ಎಂದು ಆಡಳಿತಾಧಿಕಾರಿಗಳು ತಲೆಕೆಡಿಸಿಕೊಂಡಿದ್ದಾರೆ.

    ಸದ್ಯ ಪಂಜಾಬ್‍ನಲ್ಲಿ ಒಟ್ಟು 2,986 ಕೊರೊನಾ ಪ್ರಕರಣಗಳು ದಾಖಲಾಗಿವೆ. ಇದರಲ್ಲಿ 2,282 ಜನರು ಈಗಾಗಲೇ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಈಗ ಪ್ರಸ್ತುತ ಪಂಜಾಬ್‍ನಲ್ಲಿ 641 ಕೊರೊನಾ ಸಕ್ರಿಯ ಪ್ರಕರಣಗಳು ಇವೆ. ಕೊರೊನಾ ಸೋಂಕಿನಿಂದ ಪಂಜಾಬ್‍ನಲ್ಲಿ ಸುಮಾರು 64 ಜನರು ಸಾವನ್ನಪ್ಪಿದ್ದಾರೆ. ಮುಂದಿನ ದಿನಗಳಲ್ಲಿ ಸೋಂಕು ಮತ್ತಷ್ಟು ಜಾಸ್ತಿಯಾಗುವ ಸಾಧ್ಯತೆ ಇದ್ದು, ಸರ್ಕಾರ ಮುಂಜಾಗ್ರತಾ ಕ್ರಮಗಳನ್ನು ತಗೆದುಕೊಳ್ಳುತ್ತಿದೆ.

    ಈಗಾಗಲೇ ಇಡೀ ದೇಶದಲ್ಲಿ ಜೂನ್ 31ರ ವರೆಗೂ ಲಾಕ್‍ಡೌನ್ ಇದ್ದರೂ ಕೆಲ ಸಡಿಲಿಕೆಗಳು ನೀಡಲಾಗಿದೆ. ಈ ಕಾರಣದಿಂದ ಕರ್ನಾಟಕವೂ ಸೇರಿದಂತೆ ಮಹಾರಾಷ್ಟ್ರ, ತಮಿಳುನಾಡು, ಕೇರಳ ಮತ್ತು ಜರ್ಖಾಂಡ್ ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಕಾರಣಕ್ಕಾಗಿ ಮೋದಿ ಮತ್ತೆ ಸಭೆ ನಡೆಸುತ್ತಿದ್ದು, ಮತ್ತೆ ಲಾಕ್‍ಡೌನ್ ಮಾಡುತ್ತಾರಾ ಎಂಬ ಪ್ರಶ್ನೆ ಮೂಡಿದೆ. ರಾಜ್ಯದಲ್ಲೂ ಸೋಂಕು ದಿನೇ ದಿನೇ ಹೆಚ್ಚಾಗುತ್ತಿದ್ದು, ಜೂನ್ 17ರಂದು ಪ್ರಧಾನಿ ಮೋದಿ ಸಿಎಂ ಯಡಿಯೂರಪ್ಪ ಅವರ ಜೊತೆ ಸಭೆ ನಡೆಸಲಿದ್ದಾರೆ.

  • ನನಗಿಂತ ಅತ್ತೆ, ಮಾವನ್ನೇ ಹೆಚ್ಚು ಇಷ್ಟಡುತ್ತಾನೆ ಎಂದು ಮಗನನ್ನೇ ಕೊಂದ್ಳು

    ನನಗಿಂತ ಅತ್ತೆ, ಮಾವನ್ನೇ ಹೆಚ್ಚು ಇಷ್ಟಡುತ್ತಾನೆ ಎಂದು ಮಗನನ್ನೇ ಕೊಂದ್ಳು

    – 6 ವರ್ಷದ ಮಗನಿಗೆ ಇರಿದು ಮನೆಯಿಂದ ಕೆಳಗೆ ಹಾರಿದ ತಾಯಿ

    ಚಂಡೀಗಢ: ನನಗಿಂತ ನಮ್ಮ ಅತ್ತೆ-ಮಾವನನ್ನೇ ಜಾಸ್ತಿ ಇಷ್ಟ ಪಡುತ್ತಾನೆ ಎಂಬ ಕ್ಷುಲ್ಲಕ ಕಾರಣಕ್ಕೆ ತಾಯಿಯೊಬ್ಬಳು ತನ್ನ ಮಗನನ್ನೇ ಇರಿದು ಕೊಲೆ ಮಾಡಿರುವ ಘಟನೆ ಪಂಜಾಬ್‍ನ ಜಲಂಧರ್ ನಗರದಲ್ಲಿ ನಡೆದಿದೆ.

    ಮಗನನ್ನೇ ಕೊಂದ ತಾಯಿಯನ್ನು 30 ವರ್ಷದ ಕುಲ್ವಿಂದರ್ ಕೌರ್ ಎಂದು ಗುರುತಿಸಲಾಗಿದೆ. ಈಕೆ ತನ್ನ ಆರು ವರ್ಷದ ಮಗು ಅರ್ಷ್‍ಪ್ರೀತ್‍ನನ್ನು ಅಡುಗೆ ಮನೆಯ ಚಾಕುವಿನಿಂದ ಎರಡು ಬಾರಿ ಇರಿದು ಕೊಲೆ ಮಾಡಿದ್ದಾಳೆ. ನಂತರ ಮನೆಯ ಮೇಲಿಂದ ಹಾರಿ ತಾನು ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನ ಮಾಡಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ.

    ಕೌರ್ ಪತಿ ಇಟಲಿಯಲ್ಲಿ ಕೆಲಸ ಮಾಡುತ್ತಿದ್ದು, ಆಕೆ ತನ್ನ ಅತ್ತೆ-ಮಾವ ಮತ್ತು ಮಗುವಿನೊಂದಿಗೆ ಜಲಂಧರ್ ನಗರದಲ್ಲಿ ವಾಸವಾಗಿದ್ದಳು. ಈ ವೇಳೆ ಅತ್ತೆ-ಮಾವನನ್ನು ಕಂಡರೆ ಕೌರ್ ಗೆ ಆಗುತ್ತಿರಲ್ಲಿ. ಆದರೆ ತಾತ-ಅಜ್ಜಿಯನ್ನು ಬಹಳ ಇಷ್ಟ ಪಡುತ್ತಿದ್ದ ಅರ್ಷ್‍ಪ್ರೀತ್ ಬಹಳ ಸಮಯ ತಾತ-ಅಜ್ಜಿಯ ಜೊತೆಯಲ್ಲೇ ಇರುತ್ತಿದ್ದ. ಇದನ್ನು ಕಂಡ ಕೌರ್ ನನ್ನ ಮಗನನ್ನು ಇವರು ನನ್ನಿಂದ ದೂರು ಮಾಡುತ್ತಿದ್ದಾರೆ ಎಂದು ಜಗಳವಾಡುತ್ತಿದ್ದಳು.

    ಕಳೆದ ಸೋಮವಾರ ಮನೆಯಲ್ಲಿ ಕುಳಿತು ಎಲ್ಲರೂ ಊಟ ಮಾಡುತ್ತಿದ್ದರು. ಈ ವೇಳೆ ಅರ್ಷ್‍ಪ್ರೀತ್ ಊಟ ಮುಗಿದ ನಂತರ ತಾತ-ಅಜ್ಜಿಯ ಬಳಿ ಹೋಗಿದ್ದಾನೆ. ಇದರಿಂದ ಕೋಪಗೊಂಡ ಕೌರ್ ಅವನನ್ನು ಎಳೆದುಕೊಂಡು ಆಕೆಯ ರೂಮಿಗೆ ಹೋಗಿದ್ದಾಳೆ. ಅಲ್ಲಿ ಅಡುಗೆ ಮನೆಯ ಚಾಕುವಿನಿಂದ ಅರ್ಷ್‍ಪ್ರೀತ್‍ಗೆ ಎರಡು ಬಾರಿ ಚುಚ್ಚಿದ್ದಾರೆ. ಈ ವೇಳೆ ಮನೆಯಲ್ಲಿ ಇದ್ದ ತಾತ-ಅಜ್ಜಿ ರೂಮಿಗೆ ಹೋಗಿದ್ದಾರೆ.

    ರೂಮಿಗೆ ಅತ್ತೆ-ಮಾವ ಬಂದ ತಕ್ಷಣ ಕೌರ್ ಮನೆಯ ಕಿಟಿಕಿಯಿಂದ ಕೆಳಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನ ಮಾಡಿದ್ದಾಳೆ. ಆದರೆ ಅವಳು ಪಾರಾಗಿದ್ದಾಳೆ. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೂಡ ಪಡೆಯುತ್ತಿದ್ದಾಳೆ. ಆದರೆ ರಕ್ತದ ಮಡುವಿನಲ್ಲಿ ಬಿದ್ದಿದ್ದ ಅರ್ಷ್‍ಪ್ರೀತ್ ಮಾತ್ರ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಮಾರ್ಗ ಮಧ್ಯೆದಲ್ಲೇ ಸಾವನ್ನಪ್ಪಿದ್ದಾನೆ. ಈಗ ಕೌರ್ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ.

  • ಗನ್ ತೋರಿಸಿ ಮಹಿಳೆಗೆ ಲೈಂಗಿಕ ಕಿರುಕುಳ ಕೊಟ್ಟ ಬಿಗ್‍ಬಾಸ್ ಸ್ಪರ್ಧಿ ತಂದೆ

    ಗನ್ ತೋರಿಸಿ ಮಹಿಳೆಗೆ ಲೈಂಗಿಕ ಕಿರುಕುಳ ಕೊಟ್ಟ ಬಿಗ್‍ಬಾಸ್ ಸ್ಪರ್ಧಿ ತಂದೆ

    ಛತ್ತೀಸ್‍ಗಢ್: ಹಿಂದಿ ಬಿಗ್‍ಬಾಸ್-13ರ ಸ್ಪರ್ಧಿ ಹಾಗೂ ಪಂಜಾಬಿ ನಟಿ ಶೆಹ್ನಾಜ್ ಗಿಲ್ ಅವರ ತಂದೆ ಗನ್ ತೋರಿಸಿ ನನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಮಹಿಳೆಯೊಬ್ಬರು ದೂರು ನೀಡಿದ್ದಾರೆ.

    ಗಿಲ್ ತಂದೆ ಸಂತೋಖ್ ಸಿಂಗ್ ಅವರ ವಿರುದ್ಧ ಪ್ರಕರಣ ದಾಖಲಾಗಿದೆ. ದೂರು ನೀಡಿದ ಮಹಿಳೆಯನ್ನು ಜಲಂಧರ್ ಎಂದು ಗುರುತಿಸಲಾಗಿದೆ. ಈಕೆ ಸಿಂಗ್ ನನ್ನನ್ನು ಮೇ 14ರಂದು ತನ್ನ ಗೆಳಯನನ್ನು ಭೇಟಿ ಮಾಡಲು ಅವರ ಮನಗೆ ಹೋದಾಗ ಕಾರಿನಲ್ಲಿ ಗನ್ ತೋರಿಸಿ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ.

    ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಜಲಂಧರ್ ಓರ್ವ ವ್ಯಕ್ತಿಯ ಜೊತೆ ಸಂಬಂಧ ಇಟ್ಟುಕೊಂಡಿದ್ದು, ಆತನನ್ನು ರಣಧೀರ್ ಸಿಂಗ್ ಎಂದು ಗುರುತಿಸಲಾಗಿದೆ. ರಣಧೀರ್ ಮತ್ತು ಜಲಂಧರ್ 12 ವರ್ಷದಿಂದ ಜೊತೆಗೆ ಇದ್ದು, ಈಗ ಯಾವುದೋ ವಿಚಾರಕ್ಕೆ ಜಗಳವಾಡಿಕೊಂಡು ದೂರವಾಗಿದ್ದರು ಹಾಗೂ ರಣಧೀರ್ ಅಜಿತ್ ನಗರದಲ್ಲಿ ಇರುವ ಸಂತೋಖ್ ಸಿಂಗ್ ಅವರ ಮನೆಯಲ್ಲಿ ಬಾಡಿಗೆಗೆ ಇದ್ದ ಎಂದು ಹೇಳಿದ್ದಾರೆ.

    ನಡೆದ ಘಟನೆಯ ಬಗ್ಗೆ ಮಾತನಾಡಿರುವ ಜಲಂಧರ್, ನಾನು ಮೇ 14ರಂದು ರಣಧೀರ್ ಸಿಂಗ್ ನನ್ನು ಭೇಟಿಯಾಗಲು ಆತನ ಮನೆಗೆ ಹೋಗಿದ್ದೆ. ಅಲ್ಲಿ ಆತ ಇರಲಿಲ್ಲ ಬದಲಿಗೆ ಅಲ್ಲಿ ಸಂತೋಖ್ ಸಿಂಗ್ ಇದ್ದರು. ಈ ವೇಳೆ ಅವರು ರಣಧೀರ್ ಸಿಂಗ್ ಅನ್ನು ಭೇಟಿ ಮಾಡಿಸುವುದಾಗಿ ಹೇಳಿದರು. ಆಗ ನಾನು ಅವರು ಅವರ ಕಾರಿನಲ್ಲೇ ರಣಧೀಪ್ ನನ್ನು ಹುಡುಕಿಕೊಂಡು ಹೋದೆವು ಎಂದು ಹೇಳಿದ್ದಾಳೆ.

    ಕಾರಿನಲ್ಲಿ ಹೋಗಬೇಕಾದರೆ ರೋಹಿ ಸೇತುವೆ ಬಳಿ ಬಂದಾಗ ಸಂತೋಖ್ ಯಾರು ಇಲ್ಲದ ಜಾಗದಲ್ಲಿ ಕಾರು ನಿಲ್ಲಿಸಿದರು. ನಂತರ ನನಗೆ ಗನ್ ತೋರಿಸಿ ಹೆದರಿಸಿ ಲೈಂಗಿಕ ಕಿರುಕುಳ ನೀಡಿದರು. ನಂತರ ಯಾರಿಗೂ ಹೇಳಬೇಡ, ಹೇಳಿದರೆ ನಿನ್ನನ್ನು ಕೊಲೆ ಮಾಡುವುದಾಗಿ ಬೆದರಿಸಿದರು. ಆದರೆ ನಾನು ನಂತರ ಅಲ್ಲಿಂದ ಬಂದು ಮೇ 15ರಂದು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದೇನೆ ಎಂದು ಮಾಹಿತಿ ನೀಡಿದ್ದಾಳೆ.

    ಆದರೆ ಮಹಿಳೆಯ ಈ ಆರೋಪವನ್ನು ಗಿಲ್ ಸಹೋದರ ತಳ್ಳಿ ಹಾಕಿದ್ದು, ನನ್ನ ಅಪ್ಪನಿಗೆ ಕೆಟ್ಟ ಹೆಸರು ತರಬೇಕು ಎಂದು ಮಹಿಳೆ ಈ ಆರೋಪ ಮಾಡುತ್ತಿದ್ದಾರೆ ಎಂದು ಹೇಳಿದ್ದಾನೆ. ಶೆಹ್ನಾಜ್ ಗಿಲ್ ಬಿಗ್‍ಬಾಸ್-13ರ ಸೆಕೆಂಡ್ ರನ್ನರ್ ಆಪ್ ಆಗಿದ್ದು, ಪಂಜಾಬಿಯಲ್ಲಿ ಹಲವಾರು ಸಿನಿಮಾಗಳಲ್ಲಿ ನಟಿಸಿ ಹೆಸರು ಮಾಡಿದ್ದಾರೆ. ಜೊತೆಗೆ ಅವರು ಒಳ್ಳೆಯ ಸಿಂಗರ್ ಆಗಿದ್ದು, ಹಾಡುಗಳನ್ನು ಹಾಡುತ್ತಾರೆ.

  • ರಸ್ತೆ ಬದಿಯಲ್ಲಿಯೇ ಗಂಡು ಮಗುವಿಗೆ ಜನ್ಮ ನೀಡಿದ ಮಹಿಳೆ

    ರಸ್ತೆ ಬದಿಯಲ್ಲಿಯೇ ಗಂಡು ಮಗುವಿಗೆ ಜನ್ಮ ನೀಡಿದ ಮಹಿಳೆ

    -ಮರದ ಕೆಳಗೆ ಬಾಣಂತಿ, ಮಗುವಿನ ಆರೈಕೆ

    ಹುಬ್ಬಳ್ಳಿ: ಮಹಿಳೆಯರಿಗೆ ಹೆರಿಗೆ ಅಂದರೇ ಅದು ಪುನರ್ಜನ್ಮವೇ ಸರಿ. ಇನ್ನೊಂದು ಜೀವಕ್ಕೆ ಜನ್ಮ ನೀಡುವ ತಾಯಿ ಅದೆಷ್ಟೋ ನೋವನ್ನು ಅನುಭವಿಸುತ್ತಾಳೆ. ಅಲ್ಲದೇ ತನ್ನ ಹೆರಿಗೆ ತವರು ಮನೆಯಲ್ಲಿಯೇ ಆಗಬೇಕು ಎಂಬುವಂತ ಬಯಕೆ ಪ್ರತಿಯೊಬ್ಬ ತಾಯಿಯಲ್ಲಿಯೂ ಇದ್ದೆ ಇರುತ್ತದೆ. ಆದರೆ ಹುಬ್ಬಳ್ಳಿಯಲ್ಲಿ ರಸ್ತೆ ಬದಿಯಲ್ಲಿಯೇ ತಾಯಿ ಮಗುವಿಗೆ ಜನ್ಮ ನೀಡಿದ್ದಾಳೆ.

    ಪಂಜಾಬ್ ಮೂಲದ ಮಹಿಳೆಯೊಬ್ಬರು ಲಾಕ್‍ಡೌನ್‍ನಿಂದ ಹುಬ್ಬಳ್ಳಿಯಲ್ಲೇ ಸಿಲುಕಿದ್ದು, ಆಸ್ಪತ್ರೆಗೂ ತೆರಳಲು ಸಾಧ್ಯವಾಗದೆ ರಸ್ತೆ ಬದಿಯಲ್ಲಿಯೇ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಪಂಜಾಬ್‍ನ ಫರೀದಕೋಟ್ ಮೂಲದ ಧರ್ಮಸಿಂಗ್ ಬಾಬುಸಿಂಗ್ ಎಂಬುವವರ ಕುಟುಂಬ ಆಯುರ್ವೇದ ಔಷಧ ಮಾರಾಟ ಮಾಡಲು ಸುಮಾರು ಆರು ತಿಂಗಳ ಹಿಂದೆಯಷ್ಟೇ ವಾಣಿಜ್ಯನಗರಿ ಹುಬ್ಬಳ್ಳಿಗೆ ಆಗಮಿಸಿತ್ತು. ಲಾಕ್‍ಡೌನ್ ಹಿನ್ನಲೆಯಲ್ಲಿ ಊರಿಗೆ ಹೋಗಲು ಸಾಧ್ಯವಾಗದೆ ಹುಬ್ಬಳ್ಳಿಯ ಗಬ್ಬೂರ ಹತ್ತಿರದ ಆರ್.ಟಿ.ಒ ಕಚೇರಿ ಹಿಂಭಾಗದ ರಸ್ತೆ ಬದಿಯಲ್ಲಿ ಆಶ್ರಯ ಪಡೆದುಕೊಂಡಿದ್ದರು.

    ಕುಟುಂಬದ ದಾನ್‍ಕೌರ್ ಹೆಸರಿನ ಮಹಿಳೆಗೆ ಬೆಳಗಿನ ಜಾವ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಸ್ಥಳೀಯರ ಸಹಾಯದಿಂದ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಸಂದರ್ಭದಲ್ಲಿ ಮಾರ್ಗ ಮಧ್ಯದಲ್ಲಿಯೇ ಹೆರಿಗೆಯಾಗಿದ್ದು, ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಬಳಿಕ ಕಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಲಾಗಿದ್ದು, ತಾಯಿ ಮಗು ಇಬ್ಬರು ಕೂಡ ಆರೋಗ್ಯವಾಗಿದ್ದಾರೆ.

    ಆಸ್ಪತ್ರೆಯಿಂದ ಬಿಡುಗಡೆಯಾಗಿರುವ ತಾಯಿ ಮತ್ತು ಮಗು ಈಗ ಉಳಿದುಕೊಳ್ಳಲು ಸೂರು ಇಲ್ಲದೇ ಮರದ ಕೆಳಗೆ ಆಶ್ರಯ ಪಡೆದಿದ್ದು, ದಾನಿಗಳ ನೆರವಿನಿಂದ ಜೀವನ ನಡೆಸುತ್ತಿದ್ದಾರೆ. ಇನ್ನೂ ಊರಿಗೆ ಹೋಗಲು ವಾಹನಕ್ಕೆ ಡಿಸೇಲ್ ಹಾಕಿಸುವಷ್ಟು ಹಣವಿಲ್ಲ. ಅಲ್ಲದೇ ಬಾಣಂತಿಯ ಹಾಗೂ ಮಗುವಿನ ಆರೈಕೆಗೂ ಏನು ಇಲ್ಲದಂತಾಗಿದ್ದು, ಸರ್ಕಾರ ಏನಾದರೂ ಸಹಾಯ ಮಾಡಿ ಪಂಜಾಬ್‍ಗೆ ತೆರಳಲು ಅವಕಾಶ ಕಲ್ಪಿಸಬೇಕು ಎಂದು ಧರ್ಮಸಿಂಗ್ ಕುಟುಂಬ ಮನವಿ ಮಾಡಿದೆ.

  • ಮೇ 31ರವರೆಗೂ ಲಾಕ್‍ಡೌನ್ ವಿಸ್ತರಿಸಿದ ಮಹಾರಾಷ್ಟ್ರ ಸರ್ಕಾರ

    ಮೇ 31ರವರೆಗೂ ಲಾಕ್‍ಡೌನ್ ವಿಸ್ತರಿಸಿದ ಮಹಾರಾಷ್ಟ್ರ ಸರ್ಕಾರ

    – ತಮಿಳುನಾಡು, ಪಂಜಾಬ್, ಪ.ಬಂಗಾಳದಿಂದಲೂ ಮಹತ್ವದ ನಿರ್ಧಾರ

    ಮುಂಬೈ: ಮಹಾರಾಷ್ಟ್ರ ರಾಜ್ಯದಲ್ಲಿ 30 ಸಾವಿರಕ್ಕೂ ಹೆಚ್ಚು ಜನರಿಗೆ ಕೊರೊನಾ ವೈರಸ್ ತಗುಲಿ ಆತಂಕ ಸೃಷ್ಟಿಸಿದ ಹಿನ್ನೆಲೆ ಮೇ 31ರ ಮಧ್ಯರಾತ್ರಿಯವರೆಗೂ ಲಾಕ್‍ಡೌನ್ ವಿಸ್ತರಿಸಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಸರ್ಕಾರವು ಆದೇಶ ಹೊರಡಿಸಿದೆ. ಇತ್ತ ತಮಿಳುನಾಡು, ಪಂಜಾಬ್ ಹಾಗೂ ಪಶ್ಚಿಮ ಬಂಗಾಳದಲ್ಲೂ ಲಾಕ್‍ಡೌನ್ ಅನ್ನು ಮೇ 31ರ ವರೆಗೆ ವಿಸ್ತರಿಸಲಾಗಿದೆ.

    ಮಹಾರಾಷ್ಟ್ರ ಸರ್ಕಾರವು ವಿಪತ್ತು ನಿರ್ವಹಣಾ ಕಾಯ್ದೆ 2005 ಮತ್ತು ಸಾಂಕ್ರಾಮಿಕ ರೋಗ ಕಾಯ್ದೆ 1898ರ ಅಡಿ ಮೇ 17ರ ವರೆಗೆ ರಾಜ್ಯಾದ್ಯಂತ ಲಾಕ್‍ಡೌನ್ ವಿಸ್ತರಿಸಿತ್ತು. ಈ ನಿರ್ಬಂಧವು ಇಂದು ಕೊನೆಗೊಳ್ಳುವ ಹಿನ್ನೆಲೆ ಹೊಸ ಆದೇಶವನ್ನು ಹೊರಡಿಸಲಾಗಿದೆ.

    “ಕೋವಿಡ್-19 ವೈರಸ್ ಹರಡುವ ಭೀತಿಯಿಂದ ಮಹಾರಾಷ್ಟ್ರಕ್ಕೆ ಆತಂಕ ಶುರುವಾಗಿದೆ. ಆದ್ದರಿಂದ ವೈರಸ್ ಹರಡುವುದನ್ನು ತಡೆಗಟ್ಟಲು ಕೆಲವು ತುರ್ತು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಈ ಮೂಲಕ ಮೇ 31ರ ಮಧ್ಯರಾತ್ರಿಯವರೆಗೆ ಲಾಕ್‍ಡೌನ್ ಅನ್ನು ವಿಸ್ತರಿಸಲಾಗಿದೆ” ಎಂದು ಮಹಾರಾಷ್ಟ್ರ ಮುಖ್ಯ ಕಾರ್ಯದರ್ಶಿ ಅಹೊಯ್ ಮೆಹ್ತಾ ಆದೇಶದಲ್ಲಿ ತಿಳಿಸಿದ್ದಾರೆ.

    ಗುರುವಾರ ನಡೆದ ಕ್ಯಾಬಿನೆಟ್ ಮಂತ್ರಿಗಳ ಉನ್ನತ ಮಟ್ಟದ ಸಭೆಯಲ್ಲಿ ಲಾಕ್‍ಡೌನ್ ಅನ್ನು ಇಡೀ ರಾಜ್ಯಕ್ಕೆ ವಿಸ್ತರಿಸುವ ಉದ್ದೇಶವನ್ನು ವ್ಯಕ್ತವಾಗಿತ್ತು. ಸಭೆಯಲ್ಲಿ ಉಪಮುಖ್ಯಮಂತ್ರಿ ಅಜಿತ್ ಪವಾರ್, ಜಲಸಂಪನ್ಮೂಲ ಸಚಿವ ಜಯಂತ್ ಪಾಟೀಲ್, ನಗರಾಭಿವೃದ್ಧಿ ಸಚಿವ ಏಕನಾಥ ಶಿಂಧೆ, ಕೈಗಾರಿಕಾ ಸಚಿವ ಸುಭಾಷ್ ದೇಸಾಯಿ, ಕಂದಾಯ ಸಚಿವ ಬಾಲಾಸಾಹೇಬ್ ಥೋರತ್ ಮತ್ತು ಲೋಕೋಪಯೋಗಿ ಸಚಿವ ಅಶೋಕ್ ಚವಾನ್ ಭಾಗವಹಿಸಿದ್ದರು. ಕ್ಯಾಬಿನೆಟ್ ನಿರ್ಧಾರದಂತೆ ಕೊರೊನಾ ಹಾಟ್‍ಸ್ಪಾಟ್‍ಗಳಷ್ಟೇ ಅಲ್ಲದೆ ರಾಜ್ಯಾದ್ಯಂತ ಲಾಕ್‍ಡೌನ್ ವಿಸ್ತರಿಸಲಾಗಿದೆ.

    ಕೋವಿಡ್-19ನಿಂದಾಗಿ ಮುಂಬೈ ಭಾರೀ ಪ್ರಮಾಣದಲ್ಲಿ ಹಾನಿಗೊಳಗಾಗಿದೆ. ಭಾನುವಾರ ಬೆಳಗ್ಗಿನ ಮಾಹಿತಿ ಪ್ರಕಾರ ಮಹಾರಾಷ್ಟ್ರದಲ್ಲಿ 30,706 ಜನರಿಗೆ ಸೋಂಕು ಪತ್ತೆಯಾಗಿದೆ. ಇತ್ತ ಪಂಜಾಬ್‍ನಲ್ಲಿ 1,900ಕ್ಕೂ ಹೆಚ್ಚು ಜನರಿಗೆ, ತಮಿಳುನಾಡಿನಲ್ಲಿ 10,500ಕ್ಕೂ ಹೆಚ್ಚು ಮಂದಿಗೆ ಕೋವಿಡ್-19 ದೃಢಪಟ್ಟಿದೆ. ಪಶ್ಚಿಮ ಬಂಗಾಳದಲ್ಲಿ 2,576 ಜನರಿಗೆ ಸೋಂಕು ತಗುಲಿದ್ದು, 232 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ.

  • ತಪ್ಪಿಸಿಕೊಂಡು ಹೋಗುವ ಭರದಲ್ಲಿ ಪೊಲೀಸ್ ಮೇಲೆಯೇ ಕಾರು ಹತ್ತಿಸಿದ ಯುವಕ

    ತಪ್ಪಿಸಿಕೊಂಡು ಹೋಗುವ ಭರದಲ್ಲಿ ಪೊಲೀಸ್ ಮೇಲೆಯೇ ಕಾರು ಹತ್ತಿಸಿದ ಯುವಕ

    – ಕಾರಿನ ಬ್ಯಾನೆಟ್ ಮೇಲೆ ಹಾರಿದ ಪೊಲೀಸ್
    – ಆರೋಪಿ ತಂದೆ-ಮಗನ ವಿರುದ್ಧ ಪ್ರಕರಣ ದಾಖಲು

    ಚಂಡೀಗಢ: ಪಾಸ್ ತೋರಿಸಿ ಎಂದು ನಿಲ್ಲಿಸಿದ ಪೊಲೀಸರಿಂದ ತಪ್ಪಿಸಿಕೊಂಡು ಹೋಗುವ ಭರದಲ್ಲಿ ಪೊಲೀಸ್ ಸಿಬ್ಬಂದಿ ಮೇಲೆ ಯುವಕ ಕಾರು ಹತ್ತಿಸಿದ್ದು, ಕಾರಿನ ಬ್ಯಾನೆಟ್ ಮೇಲೆ ಹಾರಿ ಸಿಬ್ಬಂದಿ ಪ್ರಾಣ ಉಳಿಸಿಕೊಂಡ ಘಟನೆ ಪಂಜಾಬ್‍ನಲ್ಲಿ ನಡೆದಿದೆ.

    20 ವರ್ಷದ ಯುವಕ ಅನ್ಮೊಲ್ ಕಾರು ಓಡಿಸಿಕೊಂಡು ತನ್ನ ತಂದೆ ಪರ್ಮಿಂಧರ್ ಕುಮಾರ್ ಜೊತೆಯಲ್ಲಿ ಬರುತ್ತಿದ್ದ. ಈ ವೇಳೆ ಜಲಂಧರ್ ಚೆಕ್‍ಪೋಸ್ಟ್ ಬಳಿಯ ಮಿಲ್ಕ್ ಬಾರ್ ಚೌಕ್‍ನಲ್ಲಿ ಕಾರನ್ನು ತಡೆದ ಪೊಲೀಸರು ಪಾಸ್ ತೋರಿಸುವಂತೆ ಕೇಳಿದಾಗ ಯುವಕ ವೇಗವಾಗಿ ಕಾರನ್ನು ಚಲಾಯಿಸಿಕೊಂಡು ಹೋಗಿದ್ದಾನೆ. ಅಲ್ಲದೇ ಅಲ್ಲೇ ನಿಂತಿದ್ದ ಎಎಸ್‍ಐ ಮುಲ್ಕ್ ರಾಜ್ ಮೇಲೆ ಕಾರು ಹತ್ತಿಸಿದ್ದಾನೆ. ಈ ವೇಳೆ ತಕ್ಷಣ ಎಚ್ಚೆತ್ತ ಎಎಸ್‍ಐ ಕಾರಿನ ಮೇಲೆ ಹಾರಿ ಬ್ಯಾನೆಟ್ ಹಿಡಿದುಕೊಂಡಿದ್ದಾರೆ. ಆಗ ಯುವಕ ಇನ್ನಷ್ಟು ವೇಗವಾಗಿ ಕಾರನ್ನು ಚಲಾಯಿಸಿಕೊಂಡು ಸ್ವಲ್ಪ ದೂರದವರೆಗೂ ಹಾಗೇ ಹೋಗಿ, ಬಳಿಕ ಕಾರು ನಿಲ್ಲಿಸಿದ್ದಾನೆ.

    ಲಾಕ್‍ಡೌನ್ ನಿಯಮ ಉಲ್ಲಂಘಿಸಿದ್ದಲ್ಲದೇ, ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ ಹಿನ್ನೆಲೆ ತಂದೆ-ಮಗ ಇಬ್ಬರ ಮೇಲೂ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಈ ದೃಶ್ಯವನ್ನು ಸ್ಥಳೀಯರು ವಿಡಿಯೋ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.

    ಈ ಬಗ್ಗೆ ತಿಳಿದ ಪಂಜಾಬ್ ಡಿಜಿಪಿ ಅವರು ಟ್ವೀಟ್ ಮಾಡಿ, ಈ ರೀತಿ ಕೃತ್ಯಗಳನ್ನು ಪಂಜಾಬ್ ಪೊಲೀಸ್ ಇಲಾಖೆ ಸಹಿಸುವುದಿಲ್ಲ. ಈಗಾಗಲೇ ಆರೋಪಿ ಮಗ ಹಾಗೂ ತಂದೆಯನ್ನು ಬಂಧಿಸಿ, ಇಬ್ಬರ ಮೇಲೂ ಕೊಲೆ ಯತ್ನ ಪ್ರಕರಣದ ಜೊತೆ ಇತರೆ ಪ್ರಕರಣಗಳು ದಾಖಲಾಗಿದೆ ಎಂದು ತಿಳಿಸಿದ್ದಾರೆ.

    ಆರೋಪಿ ಅನ್ಮೊಲ್ ಕಾಲೇಜು ವಿದ್ಯಾರ್ಥಿಯಾಗಿದ್ದು, ಪೊಲೀಸರಿಂದ ತಪ್ಪಿಸಿಕೊಂಡು ಹೋಗುವ ಭರದಲ್ಲಿ ಈ ತಪ್ಪು ಮಾಡಿದ್ದಾನೆ. ಆದರೆ ಎಎಸ್‍ಐ ಕಾರಿನ ಬ್ಯಾನೆಟ್ ಮೇಲೆ ಹಾರಿ ತಮ್ಮ ಜೀವ ಉಳಿಸಿಕೊಂಡಿದ್ದಾರೆ ಎಂದು ಇತರೆ ಪೊಲೀಸ್ ಸಿಬ್ಬಂದಿ ಹೇಳಿದ್ದಾರೆ.

  • ಪಂಜಾಬ್‍ನಲ್ಲಿ ಎರಡು ವಾರಗಳ ಕಾಲ ಲಾಕ್‍ಡೌನ್ ವಿಸ್ತರಣೆ

    ಪಂಜಾಬ್‍ನಲ್ಲಿ ಎರಡು ವಾರಗಳ ಕಾಲ ಲಾಕ್‍ಡೌನ್ ವಿಸ್ತರಣೆ

    – ಬೆಳಗ್ಗೆ 7ರಿಂದ 11ರ ವರೆಗೆ ಮಾತ್ರ ಸಂಚಾರಕ್ಕೆ ಅವಕಾಶ

    ಚಂಡೀಗಢ: ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡುವುದಕ್ಕೂ ಮುನ್ನವೇ ಪಂಜಾಬ್ ಸರ್ಕಾರ ಲಾಕ್‍ಡೌನ್ ವಿಸ್ತರಣೆ ಕುರಿತು ನಿರ್ಧಾರ ಕೈಗೊಂಡಿದೆ.

    ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಸುದ್ದಿಗೋಷ್ಠಿ ನಡೆಸಿ ಈ ಮಾಹಿತಿ ನೀಡಿದ್ದು, ಇನ್ನೂ ಎರಡು ವಾರಗಳ ಕಾಲ ಲಾಕ್‍ಡೌನ್ ವಿಸ್ತರಣೆ ಕುರಿತ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಲಾಕ್‍ಡೌನ್ ಕಟ್ಟುನಿಟ್ಟಾಗಿ ಜಾರಿಯಾಗಲಿದ್ದು, ಪ್ರತಿ ದಿನ ಬೆಳಗ್ಗೆ 7ರಿಂದ 11ರ ವರೆಗೆ ಮಾತ್ರ ಜನರ ಸಂಚಾರಕ್ಕೆ ಅವಕಾಶ ನೀಡಲಾಗಿದ್ದು, ಈ ಸಮಯದಲ್ಲಿ ಅಂಗಡಿಗಳಿಗೆ ಬಂದು ಅಗತ್ಯ ವಸ್ತುಗಳನ್ನು ಖರೀದಿಸಬಹುದಾಗಿದೆ. ಅಂಗಡಿಗಳು ಸಹ ಈ ಸಮಯದಲ್ಲಿ ಮಾತ್ರ ತೆರೆದಿರುತ್ತವೆ ಎಂದು ತಿಳಿಸಿದ್ದಾರೆ.

    ಲಾಕ್‍ಡೌನ್ ವಿಸ್ತರಣೆ ಕುರಿತು ಸಹ ನಿರ್ಧಾರ ಕೈಗೊಂಡಿದ್ದು, ಮೇ 3ರ ನಂತರವೂ ಎರಡು ವಾರಗಳ ಕಾಲ ಲಾಕ್‍ಡೌನ್ ಮುಂದುವರಿಸಲು ನಿರ್ಧರಿಸಲಾಗಿದೆ. ಕೊರೊನಾ ಹರಡುವಿಕೆ ನಿಯಂತ್ರಣಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಮರಿಂದರ್ ಸಿಂಗ್ ಮಾಹಿತಿ ನೀಡಿದ್ದಾರೆ.

    ಪಂಜಾಬ್‍ನಲ್ಲಿ ಇಂದು 9 ಹೊಸ ಪ್ರಕರಣಗಳು ಸೇರಿ ಈ ವರೆಗೆ ಒಟ್ಟು 322 ಪ್ರಕರಣಗಳು ಪತ್ತೆಯಾಗಿದ್ದು, ಇದರಲ್ಲಿ 71 ಜನ ಗುಣಮುಖರಾಗಿದ್ದಾರೆ. ಇಂದು ಒಬ್ಬರು ಮೃತಪಟ್ಟಿದ್ದು, ಒಟ್ಟು 19 ಜನ ಸಾವನ್ನಪ್ಪಿದ್ದಾರೆ.