Tag: punjab

  • ಇಂದಿನಿಂದ ಯುಪಿ, ಪಂಜಾಬ್, ಸಿಕ್ಕಿಂನಲ್ಲಿ ಶಾಲೆಗಳು ಓಪನ್ – ಮಾರ್ಗಸೂಚಿಯಲ್ಲಿ ಏನಿದೆ?

    ಇಂದಿನಿಂದ ಯುಪಿ, ಪಂಜಾಬ್, ಸಿಕ್ಕಿಂನಲ್ಲಿ ಶಾಲೆಗಳು ಓಪನ್ – ಮಾರ್ಗಸೂಚಿಯಲ್ಲಿ ಏನಿದೆ?

    ನವದೆಹಲಿ: ಕೋವಿಡ್ 19 ಸಾಂಕ್ರಾಮಿಕ ರೋಗದಿಂದಾಗಿ ಮಾರ್ಚ್‍ನಿಂದ ಮುಚ್ಚಿರುವ ಶಾಲೆಗಳು ಹಂತ ಹಂತವಾಗಿ ತೆರೆಯಲ್ಪಡುತ್ತಿದೆ. ಅನ್‍ಲಾಕ್ 5.0 ಅಂಗವಾಗಿ 9 ರಿಂದ 12 ತರಗತಿವರೆಗಿನ ಶಾಲೆಗಳು ಉತ್ತರ ಪ್ರದೇಶ, ಪಂಜಾಬ್ ಮತ್ತು ಸಕ್ಕಿಂನಲ್ಲಿ ಸೋಮವಾರದಿಂದ ಪ್ರಾರಂಭವಾಗಿದೆ.

    ಶಾಲೆಗಳು ಪ್ರಾರಂಭವಾಗುವ ನಿಟ್ಟಿನಲ್ಲಿ ಉತ್ತರ ಪ್ರದೇಶ ಸರ್ಕಾರದ ಶಿಕ್ಷಣ ಇಲಾಖೆ ವಿದ್ಯಾರ್ಥಿಗಳ ಆರೋಗ್ಯ ಹಿತದೃಷ್ಟಿಯಿಂದ ಕಟ್ಟು ನಿಟ್ಟಿನ ಮಾರ್ಗಸೂಚಿಯನ್ನು ಹೊರಡಿಸಿದೆ. ಪ್ರತಿಯೊಬ್ಬರು ಇದನ್ನು ಅನುಸರಿಸುವಂತೆ ಸೂಚನೆ ನೀಡಲಾಗಿದೆ.

    ಉತ್ತರಪ್ರದೇಶದಲ್ಲಿ ಪ್ರಾರಂಭವಾಗುವ ಶಾಲೆಗಳು ಎರಡು ಪಾಳಿಯಲ್ಲಿ ತರಗತಿಗಳು ನಡೆಯಲಿದೆ. ಮೊದಲ ಪಾಳಿಯಲ್ಲಿ 9 ಮತ್ತು 10 ನೇ ತರಗತಿಯ ವಿದ್ಯಾರ್ಥಿಗಳಿರುತ್ತಾರೆ. ಎರಡನೇ ಪಾಳಿಯಲ್ಲಿ 11 ಮತ್ತು 12 ನೇ ತರಗತಿಯ ವಿದ್ಯಾರ್ಥಿಗಳಿಗೆ ತರಗತಿ ನಡೆಸಲಾಗುತ್ತದೆ.

    ಮೊದಲ ಪಾಳಿಯಲ್ಲಿ ಬೆಳಿಗ್ಗೆ 8:50 ರಿಂದ ಮಧ್ಯಾಹ್ನ 3:50ರವರೆಗೆ ನಡೆದರೆ ಎರಡನೇ ಪಾಳಿಯನ್ನು ಮಧ್ಯಾಹ್ನ 12:20 ರಿಂದ ಮಧ್ಯಾಹ್ನ 3:30ರವರೆಗೆ ನಡೆಸಲಾಗುತ್ತದೆ. ಸರ್ಕಾರದ ಆದೇಶದಂತೆ ಪ್ರತಿ ತರಗತಿಯಲ್ಲಿ 50 ವಿದ್ಯಾರ್ಥಿಗಳನ್ನು ಕೂರಿಸಿ ಪಾಠ ಮಾಡಲಾಗುವುದು ಮತ್ತು ಉಳಿದ ವಿದ್ಯಾರ್ಥಿಗಳಿಗೆ ಮರುದಿನ ತರಗತಿಯನ್ನು ನಡೆಸಲಾಗುತ್ತದೆ.

    ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಸಿಬ್ಬಂದಿ ಮಾಸ್ಕ್ ಧರಿಸುವುದು ಕಡ್ಡಾಯ. ತರಗತಿಗಳು ಪ್ರಾರಂಭವಾಗುವ ಮುನ್ನ ಶುಚಿತ್ವವನ್ನು ಕಾಪಾಡಿಕೊಳ್ಳಲು ಸೂಚನೆಯನ್ನು ನೀಡಲಾಗಿದೆ. ಶಾಲೆಗಳಲ್ಲಿ ಸ್ಯಾನಿಟೈಸರ್, ಹ್ಯಾಂಡ್ ವಾಶ್ ಇಡಬೇಕು ಮತ್ತು ಥರ್ಮಲ್ ಸ್ಕ್ರೀನಿಂಗ್ ಕಡ್ಡಾಯ ಮಾಡಲಾಗಿದೆ.

    ಸಿಬ್ಬಂದಿ ಅಥವಾ ವಿದ್ಯಾರ್ಥಿಯಲ್ಲಿ ಜ್ವರ ಅಥವಾ ಶೀತದ ಲಕ್ಷಣ ಕಾಣಿಸಿಕೊಂಡರೆ ಪ್ರಾಥಮಿಕ ಚಿಕಿತ್ಸೆ ನಂತರ ಅವರನ್ನು ಮನೆಗೆ ಕಳುಹಿಸಿಕೊಡಬೇಕು. ಶಾಲಾ ಬಸ್ಸುಗಳನ್ನು ಪ್ರತಿನಿತ್ಯ ಸ್ವಚ್ಛಗೊಳಿಸಬೇಕು ಮತ್ತು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

    ಪಂಜಾಬ್‍ನಲ್ಲಿ ಹೇಗೆ?
    ಸರ್ಕಾರದ ಆದೇಶದ ಪ್ರಕಾರ ಪ್ರತಿದಿನ ಮೂರು ಗಂಟೆಗಳ ಕಾಲ ಮಾತ್ರ ಶಾಲೆ ತೆರೆದಿರುತ್ತೆದೆ. ಕಂಟೈನ್ಮೆಂಟ್ ಜೋನ್‍ನಲ್ಲಿರುವ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ತರಗತಿಗೆ ಹಾಜರಾಗಲು ಅವಕಾಶ ಇರುವುದಿಲ್ಲ. ಓರ್ವ ವಿದ್ಯಾರ್ಥಿ ಮಾತ್ರ ಒಂದು ಬೆಂಚ್‍ನಲ್ಲಿ ಕುಳಿತು ಪಾಠ ಕೇಳಲು ಅವಕಾಶ ನೀಡಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

    ಸಿಕ್ಕಿಂನಲ್ಲಿ ಹೇಗೆ?
    ಸಿಕ್ಕಿಂನಲ್ಲಿ ಸೆಪ್ಟೆಂಬರ್ 21 ರಿಂದಲೇ ಹೆಚ್ಚಿನ ಶಾಲೆಗಳನ್ನು ತೆರೆಯಲಾಗಿದೆ. ಆದರೆ ಇಂದಿನಿಂದ ಎಲ್ಲಾ ಶಾಲೆಗಳನ್ನು ಶ್ರೇಣೀಕೃತ ರೀತಿಯಲ್ಲಿ ಪುನಃ ತೆರೆಯಲು ಸಿಕ್ಕಿಂ ಸರ್ಕಾರ ನಿರ್ಧರಿಸಿದೆ. ಜೊತೆಗೆ ಚಳಿಗಾಲದ ರಜೆ ಮತ್ತು ವಾರಾಂತ್ಯದ ರಜೆಯನ್ನು ರದ್ದುಗೊಳಿಸುವುದಾಗಿ ಸರ್ಕಾರ ಘೋಷಿಸಿದೆ.

    ಆನ್‍ಲೈನ್ ತರಗತಿಗಳು ಆಫ್‍ಲೈನ್ ತರಗತಿಗಳೊಂದಿಗೆ ಮುಂದುವರೆಯುತ್ತವೆ. ವಿದ್ಯಾರ್ಥಿಯನ್ನು ಶಾಲೆಗೆ ಬರುವಂತೆ ಒತ್ತಾಯಿಸುವಂತಿಲ್ಲ. ಪೋಷಕರು ತಮ್ಮ ಮಗುವನ್ನು ಶಾಲೆಗೆ ಕಳುಹಿಸಲು ಲಿಖಿತ ಒಪ್ಪಿಗೆಯನ್ನು ನೀಡಬೇಕಾಗುತ್ತದೆ.

  • ಕೊನೆಯ ಎಸೆತದಲ್ಲಿ ಪಂಜಾಬ್‍ಗೆ ರೋಚಕ ಜಯ

    ಕೊನೆಯ ಎಸೆತದಲ್ಲಿ ಪಂಜಾಬ್‍ಗೆ ರೋಚಕ ಜಯ

    – ಎಬಿಡಿ ಬ್ಯಾಟಿಂಗ್ ಕ್ರಮಾಂಕ ಬದಲಿಸಿದ್ದರಿಂದ ಸೋಲು?
    – ಪಂಜಾಬ್‍ಗೆ 8 ವಿಕೆಟ್‍ಗಳ ಜಯ

    ಶಾರ್ಜಾ: 2020ರ ಐಪಿಎಲ್ ಟೂರ್ನಿಯ ಮೊದಲ ಮುಖಾಮುಖಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಸೋಲಿಸಿದ್ದ ಕಿಂಗ್ಸ್ ಇಲೆವೆನ್ ಪಂಜಾಬ್ 2ನೇ ಪಂದ್ಯದಲ್ಲಿ ರೋಚಕ ಜಯ ಸಾಧಿಸಿದೆ.

    ಪಂಜಾಬ್ ಪರ ನಾಯಕ ಕೆಎಲ್ ರಾಹುಲ್ 61 ರನ್, ಗೇಲ್ 53 ಹಾಗೂ ಅಗರ್ವಾಲ್ ಅವರ 45 ರನ್ ಗಳ ಭರ್ಜರಿ ಆಟ ತಂಡಕ್ಕೆ ರೋಚಕ ಗೆಲುವು ತಂದುಕೊಟ್ಟಿತ್ತು. 20 ಓವರ್ ಗಳಲ್ಲಿ 2 ವಿಕೆಟ್ ಕಳೆದುಕೊಂಡ ಪಂಜಾಬ್ 177 ರನ್ ಗಳಿಸಿತು.

    ಶಾರ್ಜಾ ಕ್ರೀಡಾಗಂಣದಲ್ಲಿ 172 ಗಳ ಗುರಿಯನ್ನು ಬೆನ್ನಟ್ಟಿದ ಪಂಜಾಬ್ ತಂಡಕ್ಕೆ ನಾಯಕ ಕೆಎಲ್ ರಾಹುಲ್ ಹಾಗೂ ಮಯಾಂಕ್ ಅಗರ್ವಾಲ್ ಭರ್ಜರಿ ಆರಂಭವನ್ನೇ ನೀಡಿದರು. ಆರಂಭದಿಂದಲೇ ಹೊಡಿಬಡಿ ಆಟಕ್ಕೆ ಮುಂದಾದ ಈ ಜೋಡಿ ಪವರ್ ಪ್ಲೇ ಅಂತ್ಯಕ್ಕೆ 56 ರನ್ ಸಿಡಿಸಿತ್ತು. ಈ ಹಂತದಲ್ಲಿ ಉತ್ತಮವಾಗಿ ಆಡುತ್ತಿದ್ದ ಮಯಾಂಕ್ ಭಾರೀ ಹೊಡೆತಕ್ಕೆ ಮುಂದಾಗಿ ಚಹಲ್‍ಗೆ ವಿಕೆಟ್ ಒಪ್ಪಿಸಿದರು. 25 ಎಸೆತಗಳಲ್ಲಿ 4 ಬೌಂಡರಿ, 3 ಸಿಕ್ಸರ್ ಗಳೊಂದಿಗೆ 45 ರನ್ ಗಳಿಸಿದ ಮಯಾಂಕ್ ಅರ್ಧ ಶತಕದ ಅಂಚಿನಲ್ಲಿ ಔಟಾದರು.

     

    View this post on Instagram

     

    UNIVERSE BOSS for a reason ???????????????????? #Dream11IPL #RCBvKXIP

    A post shared by IPL (@iplt20) on

    ರಾಹುಲ್, ಗೇಲ್ ಬೊಂಬಾಟ್ ಆಟ: ಮಯಾಂಕ್ ಔಟಾಗುತ್ತಿದಂತೆ ಕ್ರಿಸ್‍ಗೆ ಬಂದ ಗೇಲ್ ಟೂರ್ನಿಯ ಮೊದಲ ಇನ್ನಿಂಗ್ಸ್ ನಲ್ಲೇ ಭರ್ಜರಿಯಾಗಿ ಬ್ಯಾಟ್ ಬೀಸಿದರು. ವಿಶೇಷ ಎಂದರೇ ಬರೋಬ್ಬರಿ 8 ವರ್ಷಗಳ ಬಳಿಕ ಗೇಲ್ ಒನ್‍ಡೌನ್ ಆಟಗಾರನಾಗಿ ಕಣಕ್ಕಿಳಿದಿದ್ದರು. ಈ ಹಿಂದೆ 2010 ಮತ್ತು 2012 ರಲ್ಲಿ 2 ಬಾರಿ ರಾಜಸ್ಥಾನ ರಾಯಲ್ಸ್ ವಿರುದ್ಧ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ನಡೆಸಿದ್ದರು. 45 ಎಸೆತದಲ್ಲಿ ಬೌಂಡರಿ, 5 ಸಿಕ್ಸರ್ ಸಿಡಿಸಿದ ಗೇಲ್ ಇನ್ನಿಂಗ್ಸ್ ನ ಕೊನೆಯ ಎಸೆತ ಬಾಕಿ ಇರುವ ಸಮಯದಲ್ಲಿ ರನೌಟ್ ಆದ್ರು. ಪಂದ್ಯದಲ್ಲಿ 36 ಎಸೆತಗಳಲ್ಲೇ ಗೇಲ್ ಅರ್ಧ ಶತಕ ಸಿಡಿಸಿ ವೃತ್ತಿ ಜೀವನದ 29ನೇ ಅರ್ಧಗಳಿಸಿ ಗಮನ ಸೆಳೆದರು.

    ಇತ್ತ ಪಂದ್ಯ ಆರಂಭದಿಂದಲೂ ನಾಯಕನ ಜವಾಬ್ದಾರಿಯುತ ಆಟವಾಡಿದ ಕೆಎಲ್ ರಾಹುಲ್ 49 ಎಸೆತಗಳಲ್ಲಿ ಬೌಂಡರಿ, 5 ಸಿಕ್ಸರ್ ನೆರವಿನಿಂದ 61 ರನ್ ಗಳಿಸಿ ಅಜೇಯರಾಗಿ ಉಳಿದರು.

    ಕೊನೆಯ ಓವರ್‍ನಲ್ಲಿ ಪಂಜಾಬ್ ಗೆಲುವಿಗೆ 2 ರನ್ ಬೇಕಿತ್ತು. ಚಹಲ್ ಎಸೆದ ಮೊದಲ ಎರಡು ಬಾಲ್‍ಗಳಲ್ಲಿ ಯಾವುದೇ ರನ್ ಬರದೇ ಇದ್ದರೆ ಮೂರನೇ ಎಸೆತದಲ್ಲಿ ಒಂದು ರನ್ ಬಂತು. 4ನೇ ಎಸೆತದಲ್ಲಿ ಯಾವುದೇ ರನ್ ಬರಲಿಲ್ಲ. 5ನೇ ಎಸೆತದಲ್ಲಿ ಗೇಲ್ ರನೌಟ್ ಆದರು. ಅಂತಿಮ ಎಸೆತದಲ್ಲಿ ಪಂಜಾಬ್ ಗೆಲುವಿಗೆ 1 ರನ್ ಗಳಿಸುವ ಅಗತ್ಯವಿತ್ತು. ಈ ವೇಳೆ ಕ್ರಿಸ್ ಬಂದ ನಿಕೊಲಸ್ ಪೂರನ್ ಸಿಕ್ಸರ್ ಸಿಡಿಸಿ ಗೆಲುವಿನ ಸಿಹಿ ನೀಡಿದರು.

    ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಬೆಂಗಳೂರು ತಂಡಕ್ಕೆ 5ನೇ ಓವರಿನಲ್ಲಿ ಹರ್ಷದೀಪ್ ಶೈನಿ ಮೊದಲ ಅಘಾತ ನೀಡಿದರು. ಟೂರ್ನಿಯಲ್ಲಿ ಸತತ ಅರ್ಧ ಶತಕ ಸಿಡಿಸಿ ಭರವಸೆ ಮೂಡಿಸಿದ್ದ ಪಡಿಕ್ಕಲ್ 12 ಎಸೆತಗಳಲ್ಲಿ 18 ರನ್ ಗಳಿಸಿದ್ದ ಸಂದರ್ಭದಲ್ಲಿ ವಿಕೆಟ್ ಒಪ್ಪಿಸಿದ್ದರು. ಪವರ್ ಪ್ಲೇ ಅಂತ್ಯಕ್ಕೆ ಆರ್ ಸಿಬಿ ತಂಡ ವಿಕೆಟ್ ಕಳೆದುಕೊಂಡು 57 ರನ್ ಗಳಿಸಿತ್ತು. ಈ ಹಂತದಲ್ಲಿ ದಾಳಿ ಗಳಿಸಿದ ಅಶ್ವಿನ್, 20 ರನ್ ಗಳಿಸಿದ್ದ ಫಿಂಚ್ ವಿಕೆಟ್ ಪಡೆದರು. 62 ರನ್ ಗಳಿಸುವ ವೇಳೆ ಆರ್ ಸಿಬಿ ತಂಡದ ಇಬ್ಬರು ಆರಂಭಿಕರು ಪೆವಿಲಿಯನ್‍ಗೆ ಸೇರಿದ್ದರು.

    ಫಿಂಚ್ ಔಟಾದ ಬಳಿಕ ಆರ್ ಸಿಬಿ ರನ್ ವೇಗಕ್ಕೆ ಕಡಿವಾಣ ಹಾಕಲು ಯಶಸ್ವಿಯಾಗಿದ ಪಂಜಾಬ್ ಬೌಲರ್ ಗಳು ಆ ಬಳಿಕ 5 ಓವರ್ ಗಳಲ್ಲಿ ಕೇವಲ 28 ರನ್ ಗಳನ್ನು ಮಾತ್ರ ನೀಡಿದರು. ಆರ್ ಸಿಬಿ ಬ್ಯಾಟಿಂಗ್ ಲೈನ್‍ಅಪ್‍ನಲ್ಲಿ ಬದಲಾವಣೆ ಮಾಡಿ ಸುಂದರ್ ಹಾಗೂ ದುಬೆಗೆ ಎಬಿ ಡಿವಿಲಿಯರ್ಸ್ ಗೂ ಮುನ್ನವೇ ಬ್ಯಾಟಿಂಗ್ ಮಾಡಲು ಅವಕಾಶ ನೀಡಲಾಗಿತ್ತು. ಉತ್ತಮ ಅವಕಾಶದಲ್ಲಿ ಮಿಂಚಲು ವಿಫಲರಾದ ಸುಂದರ್ 13 ರನ್ ಗಳಿಸಿ ಅಶ್ವಿನ್‍ಗೆ ವಿಕೆಟ್ ಒಪ್ಪಿಸಿದರೆ, 19 ಎಸೆತಗಳಲ್ಲಿ ದುಬೆ 23 ರನ್ ಗಳಿಸಿ ಔಟಾದರು. ಪಂದ್ಯದಲ್ಲಿ ದುಬೆ 2 ಸಿಕ್ಸರ್ ಸಿಡಿಸಿದರು. ಈ ವೇಳೆ 2020ರ ಐಪಿಎಲ್ ಟೂರ್ನಿಯಲ್ಲಿ 400 ಸಿಕ್ಸರ್ ಗಳು ಪೂರ್ಣಗೊಂಡಿದ್ದವು.

    6ನೇ ಕ್ರಮಾಂಕಲ್ಲಿ ಎಬಿಡಿ: 2014ರ ಬಳಿಕ ಎಬಿ ಡಿವಿಲಿಯರ್ಸ್ ಮೊದಲ ಬಾರಿಗೆ 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‍ಗೆ ಇಳಿದಿದ್ದರು. ಇನ್‍ಫಾರ್ಮ್ ನಲ್ಲಿದ್ದ ಆಟಗಾರರನ್ನು ಏಕೆ 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಕಳುಹಿಸಲಾಗಿತ್ತು ಎಂದು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನೆ ಕೇಳುತ್ತಿದ್ದಾರೆ. ಆರ್‍ಸಿಬಿ ಅಚ್ಚರಿಯ ಆಯ್ಕೆಗೆ ಪ್ರತಿಕ್ರಿಯೆ ನೀಡಿರುವ ಆಕಾಶ ಚೋಪ್ರಾ, ಲೆಗ್ ಸ್ಪಿನ್ನರ್ ಗಳಿಗೆ ಕೌಂಟರ್ ನೀಡಲು ಸುಂದರ್ ಅವರಿಗೆ ಪ್ರಮೋಷನ್ ನೀಡಲಾಗಿದೆ. ಆದರೆ ಅವರು ಬಹುಬೇಗ ಔಟಾಗುವ ಸಾಧ್ಯತೆ ಇದೆ ಎಂದು ಅಭಿಪ್ರಾಯಪಟ್ಟಿದ್ದರು.

    ಇತ್ತ ಎಬಿ ಡಿವಿಲಿಯರ್ಸ್ ಕ್ರಮಾಂಕದಲ್ಲಿ ಇಳಿದು 5 ಎಸೆತಗಳಲ್ಲಿ 2 ರನ್ ಗಳಿಸಿ ನಿರ್ಗಮಿಸಿದರು. ಇದರ ಬೆನ್ನಲ್ಲೇ 39 ಎಸೆತಗಳಲ್ಲಿ 3 ಬೌಂಡರಿ ಗಳೊಂದಿಗೆ 48 ರನ್ ಗಳಿಸಿದ್ದ ಕೊಹ್ಲಿ, ಶಮಿಗೆ ವಿಕೆಟ್ ಒಪ್ಪಿಸಿದ್ದರು. ಅಂತಿಮ ಹಂತದಲ್ಲಿ 12 ಎಸೆತಗಳನ್ನು ಎದುರಿಸಿದ ಉದಾನಾ ಮತ್ತು ಮೋರಿಸ್ 35 ರನ್ ಜೊತೆಯಾಟ ನೀಡಿದರು. ಅಂತಿಮ ಓವರಿನಲ್ಲಿ ಆರ್ ಸಿಬಿ ತಂಡ 23 ರನ್ ಗಳಿಸಿ, ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 171 ರನ್ ಪೇರಿಸಿತ್ತು.

    ಶಮಿ ದಾಖಲೆ: ಬೆಂಗಳೂರು ತಂಡದ ಸ್ಫೋಟಕ ಬ್ಯಾಟಿಂಗ್ ಜೋಡಿ ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್ ವಿಕೆಟ್ ಅನ್ನು ಪಡೆಯುವ ಮೂಲಕ ಮೊಹಮ್ಮದ್ ಶಮಿ ಅಪರೂಪದ ದಾಖಲೆ ಬರೆದರು. 2020ರ ಐಪಿಎಲ್‍ನ ಒಂದೇ ಪಂದ್ಯದಲ್ಲಿ ಇಬ್ಬರು ಆಟಗಾರರ ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. ಇದಕ್ಕೂ ಮುನ್ನ 2019ರಲ್ಲಿ ಹರ್ಭಜನ್, ಗೋಪಾಲ್, 2018 ರಲ್ಲಿ ರಾಣಾ, ಗೋಪಾಲ್, 2019 ಸಂದೀಪ್ ಶರ್ಮಾ, 2016 ರಲ್ಲಿ ಕೃನಾಲ್ ಪಾಂಡ್ಯ, 2014 ಮತ್ತು 2015 ರಲ್ಲಿ ನೆಹ್ರಾ ಈ ಸಾಧನೆ ಮಾಡಿದ್ದರು.

  • ಆಸ್ಪತ್ರೆಯಿಂದ ಗೇಲ್ ಡಿಸ್ಚಾರ್ಜ್ – ಆರ್‌ಸಿಬಿ ವಿರುದ್ಧದ ಪಂದ್ಯಕ್ಕೆ ಎಂಟ್ರಿ?

    ಆಸ್ಪತ್ರೆಯಿಂದ ಗೇಲ್ ಡಿಸ್ಚಾರ್ಜ್ – ಆರ್‌ಸಿಬಿ ವಿರುದ್ಧದ ಪಂದ್ಯಕ್ಕೆ ಎಂಟ್ರಿ?

    ಅಬುಧಾಬಿ: ಹೊಟ್ಟೆ ನೋವಿನ ಕಾರಣದಿಂದ ಆಸ್ಪತ್ರೆ ಸೇರಿದ್ದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ದೈತ್ಯ ಆಟಗಾರ ಕ್ರಿಸ್ ಗೇಲ್ ಅವರು ಇಂದು ಡಿಸ್ಚಾರ್ಜ್ ಆಗಿದ್ದಾರೆ.

    ಕಳೆದ ಮೂರು ದಿನದ ಹಿಂದೆ ಕ್ರಿಸ್ ಗೇಲ್ ಅವರಿಗೆ ಫುಡ್ ಪಾಯಿಸನ್ ಆಗಿತ್ತು. ಈ ಕಾರಣದಿಂದ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಹೊಟ್ಟೆನೋವಿನ ಕಾರಣದಿಂದ ಕ್ರಿಸ್ ಗೇಲ್ ಅವರು ಎರಡು ಪಂದ್ಯಗಳಿಂದ ಹೊರಗೆ ಉಳಿಸಿದ್ದರು. ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಸನ್‍ರೈಸರ್ಸ್ ಹೈದರಾಬಾದ್ ವಿರುದ್ಧ ಪಂದ್ಯಗಳಿಗೆ ಗೇಲ್ ಲಭ್ಯವಿರಲಿಲ್ಲ.

    ಆದರೆ ಇಂದು ಗೇಲ್ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಅಭ್ಯಾಸದ ವೇಳೆ ಮೈದಾನದಲ್ಲಿ ಕಾಣಿಸಿಕೊಂಡಿದ್ದಾರೆ. ಗೇಲ್ ಅನಾರೋಗ್ಯಕ್ಕೆ ತುತ್ತಾಗುವ ಮುನ್ನ ಮಾತನಾಡಿದ್ದ ತಂಡದ ಮುಖ್ಯ ಕೋಚ್ ಅನಿಲ್ ಕುಂಬ್ಳೆ ಅವರು, ಮುಂದಿನ ಸನ್‍ರೈಸರ್ಸ್ ಹೈದರಾಬಾದ್ ವಿರುದ್ಧ ಪಂದ್ಯದಲ್ಲಿ ಗೇಲ್ ಆಡಲಿದ್ದಾರೆ ಎಂದು ಹೇಳಿದ್ದರು. ಆದರೆ ನಂತರ ಅವರಿಗೆ ಹೊಟ್ಟೆನೋವು ಕಾಣಿಸಿಕೊಂಡು ಆಸ್ಪತ್ರೆ ಸೇರಿದ್ದರು.

    ಇಂದು ಡಿಸ್ಚಾರ್ಜ್ ಆಗಿರುವ ಗೇಲ್ ಅವರು ಮುಂದಿನ ಶುಕ್ರವಾರ ಶಾರ್ಜಾ ಮೈದಾನದಲ್ಲಿ ನಡೆಯಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಪಂದ್ಯದಲ್ಲಿ ಗೇಲ್ ಆಡಲಿದ್ದಾರೆ ಎಂದು ಹೇಳಲಾಗಿದೆ. ಆಸ್ಪತ್ರೆ ಸೇರದೆ ಇದ್ದಿದ್ದರೆ ಗೇಲ್ ಕಳೆದ ಎರಡು ಪಂದ್ಯಗಳಲ್ಲೇ ಪ್ಲೇಯಿಂಗ್ ಇಲೆವೆನ್‍ನಲ್ಲಿ ಆಡಬೇಕಿತ್ತು. ಹೀಗಾಗಿ ಶುಕ್ರವಾರ ನಡೆಯಲಿರುವ ಪಂದ್ಯದಲ್ಲಿ ಕ್ರಿಸ್ ಗೇಲ್ ಆಡಲಿದ್ದಾರೆ.

    ಈಗಾಗಲೇ ಪಂಜಾಬ್ ತಂಡ ಆಡಿರುವ ಏಳು ಪಂದ್ಯಗಳಲ್ಲಿ ಆರು ಪಂದ್ಯಗಳಲ್ಲಿ ಸೋತು ಒಂದು ಪಂದ್ಯ ಗೆದ್ದು ಕೇವಲ 2 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಮುಂದಿನ ಪಂದ್ಯದಲ್ಲಿ ಬಲಿಷ್ಠ ಆರ್‌ಸಿಬಿ ತಂಡವನ್ನು ರಾಹುಲ್ ಪಡೆ ಎದುರಿಸಲಿದೆ. ಬೆಂಗಳೂರು ತಂಡ ಬ್ಯಾಟಿಂಗ್ ಬೌಲಿಂಗ್ ಎಲ್ಲ ವಿಭಾಗದಲ್ಲೂ ಬ್ಯಾಲೆನ್ಸ್ ಆಗಿ ಕಾಣುತ್ತಿದ್ದು, ಈಗಾಗಲೇ ಆಡಿರುವ ಏಳು ಪಂದ್ಯದಲ್ಲಿ ಎರಡರಲ್ಲಿ ಸೋತು ಐದು ಪಂದ್ಯವನ್ನು ಗೆದ್ದುಕೊಂಡಿದೆ. ಈ ಮೂಲಕ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ.

  • ಸಾಮೂಹಿಕ ಅತ್ಯಾಚಾರ ಎಸಗಿ ಚಲಿಸುತ್ತಿದ್ದ ಕಾರಿನಿಂದ ಮಹಿಳೆಯನ್ನು ಎಸೆದ ಕಾಮುಕರು

    ಸಾಮೂಹಿಕ ಅತ್ಯಾಚಾರ ಎಸಗಿ ಚಲಿಸುತ್ತಿದ್ದ ಕಾರಿನಿಂದ ಮಹಿಳೆಯನ್ನು ಎಸೆದ ಕಾಮುಕರು

    – ಸಹೋದ್ಯೋಗಿಗೆ ಅಪಘಾತವಾಗಿದೆ ಎಂದು ಕರೆಸಿ ಕೃತ್ಯ
    – ತಾಯಿ, 10 ವರ್ಷದ ಮಗಳಿಗೆ ಗಂಭೀರ ಗಾಯ

    ಚಂಡೀಗಡ: ಮೂವರು ಕಾಮುಕರು ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಮಹಿಳೆ ಮಾತ್ರವಲ್ಲದೆ ಆಕೆಯ 10 ವರ್ಷದ ಮಗಳನ್ನೂ ಚಲಿಸುವ ಕಾರಿನಿಂದ ಎಸೆದು ಪರಾರಿಯಾಗಿರುವ ಆಘಾತಕಾರಿ ಘಟನೆ ನಡೆದಿದೆ.

    ಪಂಜಾಬ್‍ನ ಅಮೃತ್‍ಸರ ಜಿಲ್ಲೆಯಲ್ಲಿ ಘಟನೆ ನಡೆದಿದೆ. ಅಪರಿಚಿತ ವ್ಯಕ್ತಿ ಮಹಿಳೆಗೆ ಕರೆ ಮಾಡಿ ನಿಮ್ಮ ಸಹೋದ್ಯೋಗಿಗೆ ಅಪಘಾತವಾಗಿದೆ ಎಂದು ಹೇಳಿದ್ದಾನೆ. ಕರೆ ಸ್ವೀಕರಿಸಿದ ಬಳಿಕ ಮಹಿಳೆ ಗಾಬರಿಯಾಗಿದ್ದು, ಬಸ್ ಹತ್ತಿ ಅಮೃತಸರಕ್ಕೆ ತೆರಳಿದ್ದಾರೆ. ಅಮೃತಸರ ತಲುಪುತ್ತಿದ್ದಂತೆ ಕರೆ ಮಾಡಿದ ವ್ಯಕ್ತಿ ಮಹಿಳೆಯನ್ನು ಭೇಟಿಯಾಗಿದ್ದು, ನಂತರ ಮಹಿಳೆಗೆ ಮತ್ತು ಬರುವ ಔಷಧಿ ಬೆರೆಸಿದ ಜ್ಯೂಸ್ ನೀಡಿದ್ದಾನೆ. ತಕ್ಷಣವೇ ಮಹಿಳೆ ಪ್ರಜ್ಞಾಹೀನರಾಗಿದ್ದಾರೆ. ಈ ವೇಳೆ ಮಹಿಳೆ ಹಾಗೂ ಮಗಳನ್ನು ತಮ್ಮ ಕಾರಿನಲ್ಲಿಯೇ ಹೋಟೆಲ್‍ಗೆ ಹೊತ್ತೊಯಿದ್ದಾರೆ. ಕಾರಿನಲ್ಲಿ ಆಗಲೇ ಇಬ್ಬರು ಇದ್ದರು ಎಂದು ಮಹಿಳೆ ಆರೋಪಿಸಿದ್ದಾರೆ.

    ಹೋಟೆಲ್‍ಗೆ ಕರೆದೊಯ್ದು ಮೂವರು ಕಾಮುಕರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ನಂತರ ಅದೇ ಕಾರಿನಲ್ಲಿ ಕರೆದುಕೊಂಡು ಬಂದು ನಡು ರಸ್ತೆಯಲ್ಲಿ ಚಲಿಸುವ ಕಾರಿನಿಂದ ನನ್ನನ್ನು ಹಾಗೂ ಮಗಳನ್ನು ತಳ್ಳಿ ಪರಾರಿಯಾದರು. ಘಟನೆ ವೇಳೆ ನನಗೆ ಹಾಗೂ ಮಗಳಿಗೆ ಗಾಯಗಳಾಗಿವೆ. ನನ್ನ ತೋಳಿಗೆ ಪೆಟ್ಟು ಬಿದ್ದ ಕಾರಣ ತುಂಡಾಗಿದೆ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ.

    ಹೆದರಿಕೆಯಿಂದಾಗಿ ಘಟನೆ ಕುರಿತು ನಾನು ಆ ದಿನ ಯಾರಿಗೂ ಹೇಳಲಿಲ್ಲ. ನಂತರ ಧೈರ್ಯ ತಂದುಕೊಂಡು ಪೊಲೀಸರನ್ನು ಸಂಪರ್ಕಿಸಿ ದೂರು ದಾಖಲಿಸಿದೆ. ಅಪರಾಧಿಗಳಿಗೆ ಶಿಕ್ಷೆ ಆಗಲೇಬೇಕು ಎಂದು ಮಹಿಳೆ ಒತ್ತಾಯಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ದಾಖಲೆ ಸಂಗ್ರಹಿಸುತ್ತಿದ್ದು, ಅತ್ಯಾಚಾರ ನಡೆದ ಹೋಟೆಲ್ ಸಿಸಿಟಿವಿ ಕ್ಯಾಮೆರಾಗಳನ್ನು ಸಹ ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

  • ಕರ್ನಾಟಕ ಕ್ರಿಕೆಟ್ ಪ್ರೇಮಿಗಳಿಗೆ ಬಹಳ ಕಠಿಣ – ಇಂದಿನ ಪಂದ್ಯದ ಬಗ್ಗೆ ಕಿಚ್ಚ ಮಾತು

    ಕರ್ನಾಟಕ ಕ್ರಿಕೆಟ್ ಪ್ರೇಮಿಗಳಿಗೆ ಬಹಳ ಕಠಿಣ – ಇಂದಿನ ಪಂದ್ಯದ ಬಗ್ಗೆ ಕಿಚ್ಚ ಮಾತು

    ಬೆಂಗಳೂರು: ಲಾಕ್‍ಡೌನ್ ಬಳಿಕ ಶುರುವಾಗಿರುವ ಐಪಿಎಲ್ 2020 ದಿನದಿಂದ ದಿನಕ್ಕೆ ರೋಚಕತೆ ಹೆಚ್ಚಿಸುತ್ತಿದೆ. ಇದೀಗ 2020ರ ಐಪಿಎಲ್ ಆವೃತ್ತಿಯ ಇಂದಿನ ಪಂದ್ಯದಲ್ಲಿ ಬೆಂಗಳೂರು ರಾಯಲ್ ಚಾಲೆಂಜರ್ಸ್ ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಗಳ ನಡುವೆ ಪಂದ್ಯ ನಡೆಯಲಿದೆ. ಇದಕ್ಕಾಗಿ ಅಭಿಮಾನಿಗಳು ಕಾತುರದಿಂದ ಎದುರು ನೋಡುತ್ತಿದ್ದಾರೆ. ಇತ್ತ ಕಿಚ್ಚ ಸುದೀಪ್ ಕೂಡ ಇಂದು ನಡೆಯುವ ಪಂದ್ಯದ ಬಗ್ಗೆ ಟ್ವೀಟ್ ಮಾಡುವ ಮೂಲಕ ಮಾತನಾಡಿದ್ದಾರೆ.

    “ಇಂದಿನ ಪಂದ್ಯವು ಕರ್ನಾಟಕದ ಕ್ರಿಕೆಟ್ ಪ್ರಿಯರಿಗೆ ಬಹಳ ಕಠಿಣವಾಗಲಿದೆ. ಯಾಕೆಂದರೆ ಒಂದು ಕಡೆ ನಮ್ಮೂರಿನ ತಂಡ ಆರ್‌ಸಿಬಿ. ಎದುರಾಳಿಯಾಗಿ ಕಿಂಗ್ಸ್ ಇಲೆವೆನ್ ಪಂಜಾಬ್ (ಹೆಚ್ಚು ಕರ್ನಾಟಕದ ಆಟಗಾರರು) ಆಡುತ್ತಿದ್ದಾರೆ. ಆದ್ದರಿಂದ ನಾವು ಹಿಂದೆ ಕುಳಿತುಕೊಂಡು ಆಟವನ್ನು ನೋಡಿ ಎಂಜಾಯ್ ಮಾಡುವ ಸಮಯ ಅಷ್ಟೇ” ಎಂದು ನಟ ಸುದೀಪ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಕನ್ನಡಿಗರ ನಡ್ವೆ ಬಿಗ್‍ಫೈಟ್- ಇತ್ತಂಡಗಳ ಬಲಾಬಲ ಇಂತಿದೆ

    ಇಂದಿನ ಪಂದ್ಯದಲ್ಲಿ ಇಬ್ಬರು ಆಟಗಾರರ ಮೇಲೆ ಸುದೀಪ್ ಹೆಚ್ಚಿನ ಭರವಸೆ ಇಟ್ಟಿದ್ದಾರೆ. ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ಹಾಗೂ ಕಳೆದ ಪಂದ್ಯದಲ್ಲಿ ಶತಕ ಮಿಸ್ ಮಾಡಿಕೊಂಡ ಪಂಜಾಬ್ ಆಟಗಾರ ಕನ್ನಡಿಗ ಮಾಯಾಂಕ್ ಅಗರ್ವಾಲ್ ಮೇಲೆ ಸುದೀಪ್ ಭರವಸೆ ಇಟ್ಟುಕೊಂಡಿದ್ದಾರೆ. ಇದನ್ನೂ ಓದಿ: ಡೇವಿಡ್ ವಾರ್ನರ್ ದಾಖಲೆ ಮುರಿದ ರೋಹಿತ್ ಶರ್ಮಾ

    ಪಂಜಾಬ್ ತಂಡದಲ್ಲಿ ಕನ್ನಡಿಗರು ಪ್ರಮುಖ ಪಾತ್ರ ವಹಿಸಿದ್ದು, ಅನಿಲ್ ಕುಂಬ್ಳೆ ಅವರ ಮಾರ್ಗದರ್ಶನದಲ್ಲಿ ಕೆಎಲ್ ರಾಹುಲ್ ತಂಡವನ್ನು ಮುನ್ನಡೆಸುತ್ತಿದ್ದಾರೆ. ಆರಂಭಿಕರಾಗಿ ಮಯಾಂಕ್ ತಮ್ಮ ಸಾಮರ್ಥ್ಯವನ್ನು ಮೊದಲ ಪಂದ್ಯದಲ್ಲೇ ಸಾಬೀತು ಪಡಿಸಿದ್ದು, ಡೆಲ್ಲಿ ವಿರುದ್ಧ 60 ಎಸೆತಗಳಲ್ಲಿ 89 ರನ್ ಸಿಡಿಸಿ ಮಿಂಚಿದ್ದರು.

    ಇತ್ತ ಆರ್‌ಸಿಬಿ ಪರ ಕನ್ನಡಿಗ, ಯುವ ಆಟಗಾರ ದೇವದತ್ ಪಡಿಕ್ಕಲ್ ಎಲ್ಲರ ಗಮನ ಸೆಳೆದಿದ್ದು, ಡೆಬ್ಯು ಪಂದ್ಯದಲ್ಲೇ ಅರ್ಧ ಶತಕ ಸಿಡಿಸಿದ್ದರು. ಸದ್ಯ ಪಂಜಾಬ್ ವಿರುದ್ಧ ದೇವದತ್ ಪಡಿಕ್ಕಲ್ ಯಾವ ರೀತಿ ಬ್ಯಾಟ್ ಬೀಸಲಿದ್ದಾರೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ.

  • ರೈನಾ ಕುಟುಂಬದ ಮೇಲೆ ದಾಳಿ ಪ್ರಕರಣ – ಮೂವರು ದರೋಡೆಕೋರರ ಬಂಧನ

    ರೈನಾ ಕುಟುಂಬದ ಮೇಲೆ ದಾಳಿ ಪ್ರಕರಣ – ಮೂವರು ದರೋಡೆಕೋರರ ಬಂಧನ

    – ಮಾವ ಸಾವು, ಗಂಭೀರ ಸ್ಥಿತಿಯಲ್ಲೇ ಉಳಿದ ಸೋದರತ್ತೆ

    ಚಂಡೀಗಢ: ಭಾರತದ ಮಾಜಿ ಕ್ರಿಕೆಟ್ ಆಟಗಾರ ಸುರೇಶ್ ರೈನಾ ಅವರ ಸೋದರತ್ತೆ ಕುಟುಂಬದ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದ ಮೂವರು ದರೋಡೆಕೋರರನ್ನು ಪಂಜಾಬ್ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಕಳೆದ ಆಗಸ್ಟ್ 28ರ ರಾತ್ರಿ ರೈನಾ ಸೋದರತ್ತೆ ಕುಟುಂಬದ ಮೇಲೆ ತಂಡವೊಂದು ದಾಳಿ ಮಾಡಿತ್ತು. ಮನೆಯ ಮಹಡಿಯ ಮೇಲೆ ಮಲಗಿದ್ದ ಕುಟುಂಬದ ಎಲ್ಲರ ಮೇಲೂ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಲಾಗಿತ್ತು. ಈ ಘಟನೆಯಲ್ಲಿ ರೈನಾರ ಸೋದರ ಮಾವ ಸಾವನ್ನಪ್ಪಿದ್ದರು. ಅತ್ತೆಗೆ ಗಂಭೀರ ಗಾಯವಾಗಿ ಆಸ್ಪತ್ರೆ ಸೇರಿದ್ದರು. ಜೊತೆಗೆ ಅವರ ಮಕ್ಕಳಿಬ್ಬರು ಕೂಡ ಹಲ್ಲೆಗೊಳಗಾಗಿದ್ದರು.

    ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಜಾಬ್ ಪೊಲೀಸರು ಈಗ ಮೂವರನ್ನು ಬಂಧಿಸಿದ್ದಾರೆ. ಈ ವಿಚಾರವಾಗಿ ಮಾತನಾಡಿರುವ ಪಂಜಾಬಿನ ಡಿಜಿಪಿ ದಿನಕರ್ ಗುಪ್ತಾ, ಬಂಧಿತರು ಹೊರರಾಜ್ಯದವರಾಗಿದ್ದಾರೆ. ಇವರ ಗ್ಯಾಂಗಿನಲ್ಲಿ 11 ಮಂದಿ ಇದ್ದು ಎಲ್ಲರನ್ನು ಪತ್ತೆ ಮಾಡಲಾಗಿದೆ. ಆದರೆ ಸದ್ಯ ಮೂವರು ಸಿಕ್ಕಿದ್ದು, ಇನ್ನುಳಿದ ಆರೋಪಿಗಳು ಪರಾರಿಯಾಗಿದ್ದಾರೆ. ಅವರನ್ನು ಹುಡುಕಲು ನಮ್ಮ ಸಿಬ್ಬಂದಿ ಶೋಧಕಾರ್ಯ ಮಾಡುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

    ಬಂಧಿತರು ಪಠಾಣ್ ಕೋಟ್ ರೈಲ್ವೆ ನಿಲ್ದಾಣದಲ್ಲಿರುವ ಕೊಳೆಗೇರಿಯಲ್ಲಿ ವಾಸವಾಗಿದ್ದರು. ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಇವರನ್ನು ಬಂಧಿಸಲಾಗಿದೆ. ಆರೋಪಿಗಳು ಇದೇ ರೀತಿಯಲ್ಲಿ ಉತ್ತರ ಪ್ರದೇಶ, ಪಂಜಾಬ್ ಮತ್ತು ಜಮ್ಮು-ಕಾಶ್ಮೀರದಲ್ಲಿ ದರೋಡೆ ಮತ್ತು ಕೊಲೆ ಮಾಡಿದ್ದಾರೆ. ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದ ಇವರು ಶ್ರೀಮಂತರ ಮನೆ ನೋಡಿ ದರೋಡೆ ಮಾಡುತ್ತಿದ್ದರು. ತಡೆಯಲು ಬಂದವರನ್ನು ರಾಡುಗಳಿಂದ ಹೊಡೆದು ಕೊಲೆ ಮಾಡುತ್ತಿದ್ದರು ಎಂದು ಗುಪ್ತಾ ತಿಳಿಸಿದ್ದಾರೆ.

    ಘಟನೆ ನಡೆದ ಆ.28ರ ರಾತ್ರಿ ರೈನಾ ಅವರ ಕುಟುಂಬದ ಮೇಲೆ ಹಲ್ಲೆ ಮಾಡುವ ಮೊದಲು, ಬೇರೆ ಮನೆಯಲ್ಲಿ ದರೋಡೆ ಮಾಡಲು ಪ್ರಯತ್ನ ಮಾಡಿದ್ದಾರೆ. ಆದರೆ ಮೂರು ಮನೆಯಲ್ಲಿ ಪ್ರಯತ್ನಿಸಿದರೂ ಆಗಿಲ್ಲ. ಕೊನೆಗೆ ನಾಲ್ಕನೇಯದಾಗಿ ರೈನಾ ಅವರ ಸೋದರತ್ತೆ ಮನೆಗೆ ಬಂದಿದ್ದಾರೆ.

    ಮನೆಗೆ ಏಣಿ ಹಾಕಿ ಮೇಲೆ ಹೋಗಿದ್ದಾರೆ. ಮೊದಲಿಗೆ ಮಹಡಿ ಮೇಲೆ ಮಲಗಿದ್ದ ನಾಲ್ವರನ್ನು ರಾಡುಗಳಿಂದ ಹೊಡೆದು ಹಲ್ಲೆ ಮಾಡಿದ್ದಾರೆ. ನಂತರ ಮನೆಯೊಳಗೆ ನುಗ್ಗಿ ಮನೆಯಲಿದ್ದ ಒಡವೆ ಮತ್ತು ಹಣವನ್ನು ದೋಚಿಕೊಂಡು ಅಲ್ಲಿಂದ ಪರಾರಿಯಾಗಿದ್ದಾರೆ. ಬಳಿಕ ಪಠಾಣ್ ಕೋಟ್ ರೈಲ್ವೆ ನಿಲ್ದಾಣಕ್ಕೆ ಬಂದ ಕದ್ದ ಚಿನ್ನ ಮತ್ತು ಹಣವನ್ನು ಸಮನಾಗಿ ಹಂಚಿಕೊಂಡು, ಅದೇ ಕೊಳಗೇರಿಯಲ್ಲಿ ಬೇರೆ ಬೇರೆ ವಾಸ ಮಾಡಲು ಪ್ರರಂಭಿಸಿದ್ದಾರೆ. ಆದರೆ ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ನಮ್ಮ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬಂಧಿತರಿಂದ ಮಾರಕಾಸ್ತ್ರಗಳು ಮತ್ತು ಹಣವನ್ನು ವಶಕ್ಕೆ ಪಡೆಯಲಾಗಿದೆ ಎಂದು ಗುಪ್ತಾ ಹೇಳಿದ್ದಾರೆ.

    ಈ ವಿಚಾರವಾಗಿ ಅಂದು ಟ್ವೀಟ್ ಮಾಡಿದ್ದ ರೈನಾ, ಪಂಜಾಬ್‍ನಲ್ಲಿ ನನ್ನ ಕುಟುಂಬದವರಿಗೆ ಆಗಿರುವುದು ಭಯಾನಕತೆಯನ್ನು ಮೀರಿದೆ. ನನ್ನ ಸೋದರಮಾವನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ನನ್ನ ಸೋದರತ್ತೆ ಮತ್ತು ನನ್ನ ಸೋದರತ್ತೆಯ ಮಕ್ಕಳ ಮೇಲೂ ತೀವ್ರವಾಗಿ ಹಲ್ಲೆ ಮಾಡಲಾಗಿದೆ. ದುರಾದೃಷ್ಟವಶಾತ್ ನನ್ನ ಸೋದರತ್ತೆ ಮಗನೋರ್ವ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡಿ ಸಾವನ್ನಪ್ಪಿದ್ದಾರೆ. ನನ್ನ ಸೋದರತ್ತೆ ಸಾವು ಬದುಕಿನ ನಡುವೆ ಆಸ್ಪತ್ರೆಯಲ್ಲಿ ಹೋರಾಡುತ್ತಿದ್ದಾರೆ ಎಂದಿದ್ದರು.

    ಜೊತೆಗೆ ಇದೂವರೆಗೂ ಅಂದು ರಾತ್ರಿ ಏನಾಯಿತು ಮತ್ತು ಯಾರೂ ಮಾಡಿದರು ಎಂಬುದು ಏನೂ ಗೊತ್ತಿಲ್ಲ. ನಾನು ಪಂಜಾಬ್ ಪೊಲೀಸರಿಗೆ ಮನವಿ ಮಾಡುತ್ತೇನೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ನಾವು ಕೊನೆ ಪಕ್ಷ ಈ ಘೋರ ಕೃತ್ಯವನ್ನು ಯಾರು ಮಾಡಿದ್ದಾರೆ ಎಂದು ತಿಳಿದುಕೊಳ್ಳಲು ಬಯಸುತ್ತೇವೆ. ಆ ಅಪರಾಧಿಗಳು ಇನ್ನೊಂದು ಕೃತ್ಯ ಮಾಡಲು ನಾವು ಬಿಡಬಾರದು ಎಂದು ರೈನಾ ಟ್ವೀಟ್ ಮೂಲಕ ಕೇಳಿಕೊಂಡಿದ್ದರು.

  • 16ರ ಬಾಲಕಿ ಮೇಲೆ ಆ್ಯಸಿಡ್ ಹಾಕಿ, ಸಾಮೂಹಿಕ ಅತ್ಯಾಚಾರ- ವಿಡಿಯೋ ಮಾಡಿ ಬೆದರಿಕೆ

    16ರ ಬಾಲಕಿ ಮೇಲೆ ಆ್ಯಸಿಡ್ ಹಾಕಿ, ಸಾಮೂಹಿಕ ಅತ್ಯಾಚಾರ- ವಿಡಿಯೋ ಮಾಡಿ ಬೆದರಿಕೆ

    ಚಂಡೀಗಡ: ಮೂವರು ಯುವಕರು 16 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ವಿಡಿಯೋ ಮಾಡಿ, ನಂತರ ಬೆದರಿಕೆ ಹಾಕಿರುವ ಆಘಾತಕಾರಿ ಘಟನೆ ನಡೆದಿದೆ.

    ಭಾನುವಾರ ರಾತ್ರಿ ಪಂಜಾಬ್‍ನ ಲುಧಿಯಾನಾದಲ್ಲಿ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಬಾಲಕಿ ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದಾಗ ಪುಂಡರು ಅಡ್ಡಗಟ್ಟಿದ್ದಾರೆ. ಇದರಲ್ಲಿ ಇಬ್ಬರು ದ್ವಿಚಕ್ರ ವಾಹನದಲ್ಲಿ ತಮ್ಮೊಂದಿಗೆ ಬರುವಂತೆ ಒತ್ತಾಯಿಸಿದ್ದಾರೆ. ಆದರೆ ಬಾಲಕಿ ಬರಲು ಒಪ್ಪಿಲ್ಲ. ಈ ವೇಳೆ ಹಲ್ಲೆ ನಡೆಸಿ, ಆಕೆಯ ಮೇಲೆ ಆ್ಯಸಿಡ್ ಸುರಿದು ವಿಕೃತಿ ಮೆರೆದಿದ್ದಾರೆ.

    ನಂತರ ಬಾಲಕಿಯನ್ನು ನಿರ್ಜನ ಪ್ರದೇಶದಲ್ಲಿರುವ ರೂಮ್‍ಗೆ ಕರೆದೊಯ್ದು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಘಟನೆಯನ್ನು ತಮ್ಮ ಮೊಬೈಲ್‍ನಲ್ಲಿ ವಿಡಿಯೋ ಮಾಡಿಕೊಂಡಿದ್ದು, ಯಾರಿಗೂ ಹೇಳದಂತೆ ಬೆದರಿಕೆ ಹಾಕಿದ್ದಾರೆ. ಆರಂಭದಲ್ಲಿ ಕುಟುಂಬಸ್ಥರಿಗೆ ಈ ಕುರಿತು ತಿಳಿಸಲು ಬಾಲಕಿ ಹಿಂದೇಟು ಹಾಕಿದ್ದಾಳೆ. ಆದರೆ ಮಂಗಳವಾರ ರಾತ್ರಿ ತನ್ನ ತಾಯಿಗೆ ಘಟನೆ ಕುರಿತು ವಿವರಿಸಿದ್ದಾಳೆ. ಬಾಲಕಿ ಅವಸ್ಥೆಯನ್ನು ಅರಿತ ಕುಟುಂಬಸ್ಥರು ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ.

    ಡಿವಿಶನ್ ನಂ.3 ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದ್ದು, ಐಪಿಸಿ ಸೆಕ್ಷನ್ 376-ಡಿ(ಸಾಮೂಹಿಕ ಅತ್ಯಾಚಾರ) ಹಾಗೂ ಐಟಿ ಕಾಯ್ದೆಯಡಿ ಕೇಸ್ ದಾಖಲಿಸಲಾಗಿದೆ. ಆರೋಪಿಗಳು 14-16 ವರ್ಷದವರಾಗಿದ್ದಾರೆ ಎಂದು ನಂಬಲಾಗಿದೆ. ಈ ಕುರಿತು ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ. ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.

  • ಫೇಸ್‍ಬುಕ್‍ನಲ್ಲಿ ವಾಗ್ವಾದ – ಯುವಕನನ್ನು ಗುಂಡಿಕ್ಕಿ ಕೊಂದ ಮಾಜಿ ಸೈನಿಕ

    ಫೇಸ್‍ಬುಕ್‍ನಲ್ಲಿ ವಾಗ್ವಾದ – ಯುವಕನನ್ನು ಗುಂಡಿಕ್ಕಿ ಕೊಂದ ಮಾಜಿ ಸೈನಿಕ

    -ಕೊಲೆಯ ದೃಶ್ಯ ಮೊಬೈಲ್‍ನಲ್ಲಿ ಸೆರೆ

    ಚಂಡೀಗಢ: ಫೇಸ್‍ಬುಕ್‍ನಲ್ಲಿ ವಾಗ್ವಾದ ನಡೆದು ಮಾಜಿ ಸೈನಿಕನೋರ್ವ ಯುವಕನನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಪಂಜಾಬ್‍ನಲ್ಲಿ ನಡೆದಿದೆ.

    ಕೊಲೆಯಾದ ಯುವಕನನ್ನು 26 ವರ್ಷದ ಸುಖ್‍ಚೈನ್ ಸಿಂಗ್ ಎಂದು ಗುರುತಿಸಲಾಗಿದೆ. ಆರೋಪಿ ಜಸ್ಬೀರ್ ಸಿಂಗ್ ಯುವಕನನ್ನು ಕೊಲೆ ಮಾಡಿ ಎಸ್ಕೇಪ್ ಆಗಿದ್ದಾನೆ. ಸುಖ್‍ಚೈನ್ ಸಿಂಗ್ ತಂದೆ ಪರಮ್‍ಜಿತ್ ಸಿಂಗ್ ಅವರು ತಾರ್ನ್ ತರಣ್ ಜಿಲ್ಲೆಯ ಕಿಲ್ಲಾ ಕವಿ ಸಂತೋಖ್ ಸಿಂಗ್ ಗ್ರಾಮದಲ್ಲಿ ಮೆಡಿಕಲ್ ಅಂಗಡಿಯೊಂದನ್ನು ನಡೆಸುತ್ತಿದ್ದಾರೆ.

    ಈ ಅಂಗಡಿಯಲ್ಲಿ ಸುಖ್‍ಚೈನ್ ಕೂಡ ಕೆಲಸ ಮಾಡುತ್ತಿದ್ದು, ಇದರ ಜೊತೆಗೆ ಅಂಗಡಿ ಹೆಸರಿನಲ್ಲಿ ಒಂದು ಫೇಸ್‍ಬುಕ್ ಪೇಜ್ ನಡೆಸುತ್ತಿದ್ದ. ಈ ಫೇಸ್‍ಬುಕ್ ಪೇಜ್‍ನಲ್ಲಿ ಆರೋಪಿ ಜಸ್ಬೀರ್ ಸಿಂಗ್ ನೀವು ಅಂಗಡಿಯಲ್ಲಿ ಡ್ರಗ್ಸ್ ಮಾತ್ರೆಗಳನ್ನು ಮಾರಾಟ ಮಾಡುತ್ತೀರಾ ಎಂದು ಕಮೆಂಟ್ ಮಾಡಿದ್ದ. ಜೊತೆಗೆ ಕುಟುಂಬದ ಬಗ್ಗೆಯೂ ಕೆಟ್ಟದಾಗ ಮಾತನಾಡಿದ್ದ. ಈ ವಿಚಾರಕ್ಕೆ ಇಬ್ಬರ ನಡುವೆ ಜಗಳವಾಗಿದೆ.

    ಇದಾದ ನಂತರ ಸುಖ್‍ಚೈನ್ ಈ ರೀತಿ ಕಮೆಂಟ್ ಮಾಡಬೇಡ ಎಂದು ಜಸ್ಬೀರ್ ಸಿಂಗ್ ಹೇಳಿದ್ದಾನೆ. ಆದರೂ ಆತ ಮಾತನ್ನು ಕೇಳಿಲ್ಲ. ನಂತರ ಸುಖ್‍ಚೈನ್ ತನ್ನ ಮೊಬೈಲಿನಲ್ಲಿ ವಿಡಿಯೋ ಮಾಡುತ್ತಾ, ಜಸ್ಬೀರ್ ಜೊತೆ ಜಗಳ ಮಾಡಲು ಹೋಗಿದ್ದಾನೆ. ಈ ವೇಳೆ ಮನೆಯ ಚಾವಣಿ ಮೇಲೆ ಬಂದೂಕು ಹಿಡಿದು ನಿಂತ ಆರೋಪಿ ಶೂಟ್ ಮಾಡುತ್ತೇನೆ ಎಂದು ಹೇಳಿದ್ದಾನೆ. ಆಗ ಗುಂಡಿಕ್ಕು ಎಂದು ಮುಂದೆ ಹೋದಾಗ, ಆರೋಪಿ ಶೂಟ್ ಮಾಡಿದ್ದಾನೆ.

    ಈ ಬಗ್ಗೆ ಮಾಹಿತಿ ನೀಡಿರುವ ಪೊಲೀಸರು, ಸುಖ್‍ಚೈನ್ ಮಾಡಿರುವ ಮೊಬೈಲ್ ವಿಡಿಯೋದಲ್ಲಿ ಜಸ್ಬೀರ್ ಗನ್ ಅನ್ನು ಲೋಡ್ ಮಾಡಿ ಶೂಟ್ ಮಾಡಿರುವುದು ಸೆರೆಯಾಗಿದೆ. ಜಸ್ಬೀರ್ ಶೂಟ್ ಮಾಡಿದ ನಂತರ ಸುಖ್‍ಚೈನ್‍ನನ್ನು ಆಸ್ಪತ್ರೆಗೆ ಕರೆತಂದಿದ್ದು, ಆತ ಅಲ್ಲಿ ಮೃತಪಟ್ಟಿದ್ದಾನೆ ಎಂದು ಹೇಳಿದ್ದಾರೆ. ಘಟನೆಯ ನಂತರ ಆರೋಪಿ ಜಸ್ಬೀರ್ ಸಿಂಗ್ ಎಸ್ಕೇಪ್ ಆಗಿದ್ದು, ಆತನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

  • ವಿಷಕಾರಿ ಮದ್ಯ ಸೇವಿಸಿ ಪಂಜಾಬ್‍ನಲ್ಲಿ 86 ಮಂದಿ ಸಾವು – 13 ಮಂದಿ ಅಧಿಕಾರಿಗಳು ಅಮಾನತು

    ವಿಷಕಾರಿ ಮದ್ಯ ಸೇವಿಸಿ ಪಂಜಾಬ್‍ನಲ್ಲಿ 86 ಮಂದಿ ಸಾವು – 13 ಮಂದಿ ಅಧಿಕಾರಿಗಳು ಅಮಾನತು

    ಚಂಡೀಗಢ: ವಿಷಾಕಾರಿ ಮದ್ಯ ಸೇವನೆಯಿಂದ 86 ಜನ ಪಂಜಾಬ್‍ನಲ್ಲಿ ಮೃತಪಟ್ಟಿದ್ದು, 6 ಜನ ಪೊಲೀಸರು ಮತ್ತು 7 ಜನ ಅಬಕಾರಿ ಇಲಾಖೆ ಅಧಿಕಾರಿಗಳನ್ನು ರಾಜ್ಯ ಸರ್ಕಾರ ಅಮಾನತು ಮಾಡಿದೆ.

    ಈ ವಿಚಾರವಾಗಿ ಮಾತನಾಡಿರುವ ಶಿರೋಮಣಿ ಅಕಾಲಿ ದಳದ ಸುಖ್ಬೀರ್ ಸಿಂಗ್ ಬಾದಲ್, ಈ ಘಟನೆಗೆ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಮತ್ತು ಅವರ ಶಾಸಕರು ಕಾರಣ. ಕಾಂಗ್ರೆಸ್ ನಾಯಕರು ಕೂಡ ಅಕ್ರಮ ಮದ್ಯ ಮಾರಾಟದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿದ್ದಾರೆ. ಜೊತೆಗೆ ಈ ಘಟನೆಯ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

    ಈ ದುರಂತವು ಕಾಂಗ್ರೆಸ್ ಪಕ್ಷದ ಮಂತ್ರಿಗಳು ಮತ್ತು ಶಾಸಕರು ಸೇರಿದಂತೆ ಕಾಂಗ್ರೆಸ್ ಮುಖಂಡರು ರಾಜ್ಯದಲ್ಲಿ ಅತಿರೇಕದ ಅಕ್ರಮ ಮದ್ಯ ವ್ಯಾಪಾರವನ್ನು ಮುಕ್ತವಾಗಿ ನಡೆಸಲು ನೀಡಿದ ಪ್ರೋತ್ಸಾಹದ ಫಲವಾಗಿದೆ. ಇದು ಒಂದು ರೀತಿಯ ಕೊಲೆ. ಈ ಘಟನೆಯಲ್ಲಿ ಮಂತ್ರಿಗಳು ಮತ್ತು ಆಡಳಿತ ಪಕ್ಷದ ಶಾಸಕರು ಸೇರಿದಂತೆ ಎಲ್ಲ ತಪ್ಪಿತಸ್ಥರನ್ನು ಬಂಧಿಸಬೇಕು. ಮುಖ್ಯಮಂತ್ರಿ ಆದೇಶಿಸಿದ ಮ್ಯಾಜಿಸ್ಟೀರಿಯಲ್ ತನಿಖೆಯನ್ನು ರದ್ದುಪಡಿಸಬೇಕು. ಘಟನೆಯ ಬಗ್ಗೆ ಹೈಕೋರ್ಟ್ ನ್ಯಾಯಾಧೀಶರು ಸ್ವತಂತ್ರ ತನಿಖೆಗೆ ಮಾಡಬೇಕು ಎಂದು ಸುಖ್ಬೀರ್ ಸಿಂಗ್ ಹೇಳಿದ್ದಾರೆ.

    ಆದರೆ ಸುಖ್ಬೀರ್ ಸಿಂಗ್ ಅವರ ಆರೋಪವನ್ನು ತಳ್ಳಿ ಹಾಕಿರುವ ಮುಖ್ಯಮಂತ್ರಿ ಅಮರಿಂದರ್ ಸಿಂಗ್, ಈ ಘಟನೆಯಲ್ಲಿ ರಾಜಕೀಯ ಮಾಡುವುದು ಬೇಡ. ಈ ಪ್ರಕರಣದಲ್ಲಿ ಭಾಗಿಯಾಗಿರುವ ಎಲ್ಲರ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಈವರೆಗೆ ಘಟನೆಗೆ ಸಂಬಂಧಿಸಿದಂತೆ ಇಪ್ಪತ್ತೈದು ಜನರನ್ನು ಬಂಧಿಸಲಾಗಿದೆ. ಏಳು ಅಬಕಾರಿ ಮತ್ತು ಆರು ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ. ಈ ಹಿಂದೆ ಅಕಾಲಿ ದಳ ಮತ್ತು ಬಿಜೆಪಿ ಪಕ್ಷದ ಆಡಳಿತದಲ್ಲೂ ಇಂತಹ ಪ್ರಕರಣಗಳು ನಡೆದಿವೆ. ಗುರುದಾಸ್‍ಪುರ ಮತ್ತು ಬಟಾಲಾದಲ್ಲಿ 2012 ಮತ್ತು 2016 ರಲ್ಲಿ ಇದೇ ರೀತಿಯ ದುರಂತಗಳು ನಡೆದಿವೆ ಎಂದು ಹೇಳಿದ್ದಾರೆ.

    ಕಳೆದ ಬುಧವಾರ ಸಂಜೆಯಿಂದ ಪಂಜಾಬ್‍ನ ತಾರ್ನ್ ತರಣ್ ಜಿಲ್ಲೆಯಿಂದ 63 ಜನರು, ಅಮೃತಸರದಲ್ಲಿ 12 ಮತ್ತು 11 ಜನರು ಗುರುದಾಸ್‍ಪುರದ ಬಟಾಲಾದಲ್ಲಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬುಧವಾರ ಸಂಜೆ ಮೊದಲ ಸಾವಿನ ಪ್ರಕರಣ ಅಮೃತಸರದ ಮುಚಾಲ್ ಗ್ರಾಮದಲ್ಲಿ ವರದಿಯಾಗಿದೆ. ಶುಕ್ರವಾರ ರಾತ್ರಿಯ ವೇಳೆಗೆ 38 ಜನರು ಸಾವನ್ನಪ್ಪಿದ್ದರು. ಈ ಸಾವಿನ ಸಂಖ್ಯೆ ಶನಿವಾರ ರಾತ್ರಿಯ ವೇಳಗೆ ಮತ್ತೆ ಜಾಸ್ತಿಯಾಗಿ ಈಗ 86ಕ್ಕೆ ಬಂದು ನಿಂತಿದೆ. ಸಾವಿನ ಸಂಖ್ಯೆ ಮತ್ತಷ್ಟು ಜಾಸ್ತಿಯಾಗುವ ಸಂಭವವಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

    ಈ ವಿಚಾರದ ಬಗ್ಗೆ ಮಾತನಾಡಿರುವ ಪಂಜಾಬ್ ಪೊಲೀಸ್ ಮಹಾನಿರ್ದೇಶಕ ದಿನಾರ್ ಗುಪ್ತಾ, ಈ ಘಟನೆಗೆ ಸಂಬಂಧಿಸಿದಂತೆ ಆರೋಪಿಗಳನ್ನು ಬಂಧಿಸಲು ನಾವು ಹಲವಾರು ದಾಳಿಯನ್ನು ನಡೆಸಿದ್ದೇವೆ. ಶುಕ್ರವಾರವೇ ಎಂಟು ಮಂದಿಯನ್ನು ಬಂಧಿಸಿದ್ದೇವೆ. ಮೂರು ಜಿಲ್ಲೆಗಳಲ್ಲಿ 100ಕ್ಕೂ ಹೆಚ್ಚು ಕಡೆ ದಾಳಿ ಮಾಡಿ ಸುಮಾರು 17 ಮಂದಿ ಆರೋಪಿಗಳನ್ನು ಬಂಧಿಸಿದ್ದೇವೆ. ಈ ವೇಳೆ ಹಲವಾರು ಜಿಲ್ಲೆಯಲ್ಲಿ ನಡೆಯುತ್ತಿದ್ದ ಅಕ್ರಮ ಮದ್ಯ ಮಾರಾಟವನ್ನು ನಿಲ್ಲಿಸಿದ್ದೇವೆ. ಕರ್ತವ್ಯ ಲೋಪ ತೋರಿದ ನಮ್ಮ ಇಲಾಖೆಯ ಆರು ಮಂದಿ ಪೊಲೀಸರನ್ನು ಅಮಾನತು ಮಾಡಿದ್ದೇವೆ ಎಂದು ಹೇಳಿದ್ದಾರೆ.

  • ವಿದ್ಯಾರ್ಥಿನಿಯರಿಗೆ 50 ಸಾವಿರ ಫೋನ್‌ – ಶೀಘ್ರವೇ ಪಂಜಾಬ್‌ ಸರ್ಕಾರದಿಂದ ವಿತರಣೆ

    ವಿದ್ಯಾರ್ಥಿನಿಯರಿಗೆ 50 ಸಾವಿರ ಫೋನ್‌ – ಶೀಘ್ರವೇ ಪಂಜಾಬ್‌ ಸರ್ಕಾರದಿಂದ ವಿತರಣೆ

    ಚಂಡೀಗಡ: ಕ್ಯಾಪ್ಟನ್ ಅಮರಿಂದರ್ ಸಿಂಗ್ ನೇತೃತ್ವದ ಪಂಜಾಬ್‌ ಸರ್ಕಾರ ಶೀಘ್ರದಲ್ಲೇ 11 ಮತ್ತು 12ನೇ ತರಗತಿಯ ವಿದ್ಯಾರ್ಥಿನಿಯರಿಗೆ ಸ್ಮಾರ್ಟ್‌ಫೋನ್‌ ವಿತರಿಸಲಿದೆ.

    ಈಗಾಗಲೇ ಒಟ್ಟು 50 ಸಾವಿರ ಸ್ಮಾರ್ಟ್‌ಫೋನ್‌ಗಳು ಪಂಜಾಬಿಗೆ ಆಗಮಿಸಿದ್ದು, ಯಾರ ಬಳಿ ಫೋನ್‌ ಇಲ್ಲವೋ ಆ ವಿದ್ಯಾರ್ಥಿನಿಯರಿಗೆ ಈ ಫೋನ್‌ಗಳನ್ನು ನೀಡಲಾಗುವುದು. ಕೋವಿಡ್‌ 19 ಸಂಕಷ್ಟದ ಸಮಯದಲ್ಲಿ ಈ ಫೋನ್‌ಗಳು ಸಹಾಯವಾಗಲಿದೆ ಎಂದು ಸಿಎಂ ಅಮರಿಂದರ್ ಸಿಂಗ್ ತಿಳಿಸಿದ್ದಾರೆ.

    ಪಂಜಾಬ್‌ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್‌ ಯುವ ಜನತೆಗೆ ಸ್ಮಾರ್ಟ್‌ಫೋನ್‌ ನೀಡುವುದಾಗಿ ಭರವಸೆ ನೀಡಿತ್ತು. ಈಗ ಕೋವಿಡ್‌ ಸಂಕಷ್ಟದ ಸಮಯದಲ್ಲಿ ಈ ಭರವಸೆಯನ್ನು ಸರ್ಕಾರ ಈಡೇರಿಸುತ್ತಿದೆ.

    ಯುವ ಕಾಂಗ್ರೆಸ್‌ ಅಧ್ಯಕ್ಷ ಬ್ರಿಂದರ್ ಧಿಲ್ಲಾನ್ ಮತ್ತು ತಂಡದ ಜೊತೆ ಸಿಎಂ ವಿಡಿಯೋ ಸಂವಹನ ನಡೆಸಿದ್ದರು. ಸಂವಹದನಲ್ಲಿ ಧಿಲ್ಲಾನ್‌ ಅವರು ಯುವಜನತೆಗೆ ನೀಡಲಾಗಿದ್ದ ಉಚಿತ ಸ್ಮಾರ್ಟ್‌ಫೋನ್‌ ಭರವಸೆ ವಿಳಂಬವಾಗಿರುವುದನ್ನು ಪ್ರಸ್ತಾಪಿಸಿದ್ದರು. ಈ ವೇಳೆ ಅಮರಿಂದರ್‌ ಸಿಂಗ್‌ 50 ಸಾವಿರ ಸ್ಮಾರ್ಟ್‌ಫೋನ್‌ಗಳು ರಾಜ್ಯವನ್ನು ತಲುಪಿರುವ ವಿಚಾರವನ್ನು ತಿಳಿಸಿದ್ದಾರೆ.

    ಪಂಜಾಬ್‌ ಸರ್ಕಾರ ಲಾವಾ ಕಂಪನಿಯ ಫೋನ್‌ಗಳನ್ನು ವಿತರಿಸಲಿದೆ. ಜೂನ್‌ 29ರಂದು ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈ ಕಂಪನಿಯಲ್ಲಿ ಚೀನಾದ ಪಾತ್ರ ಏನು ಎಂಬುದನ್ನು ಪರಿಶೀಲಿಸುತ್ತಿದ್ದೇವೆ ಎಂದು ಹೇಳಿದ್ದರು.

    ಗಲ್ವಾನ್‌ ಘರ್ಷಣೆಯ ಬಳಿಕ ಮಾತನಾಡಿದ್ದ ಅಮರಿಂದರ್‌ ಸಿಂಗ್‌, ಹಲವು ಚೀನಾ ಕಂಪನಿಗಳು ಪಿಎಂ ಕೇರ್‌ ಫಂಡ್‌ಗೆ ಹಣವನ್ನು ನೀಡಿದೆ. ಈ ಹಣವನ್ನು ಅವುಗಳಿಗೆ ನೀಡಬೇಕು. ಚೀನಾದ ಹಣ ನಮಗೆ ಬೇಡ ಎಂದಿದ್ದರು.

    ಈ ವಿಚಾರದ ಬಗ್ಗೆ ಕಳೆದ ವಾರ ಪ್ರತಿಕ್ರಿಯಿಸಿದ್ದ ಪಂಜಾಬ್ ಹಣಕಾಸು ಸಚಿವ ಮನ್‌ಪ್ರೀತ್ ಸಿಂಗ್ ಬಾದಲ್, ಗಡಿಯಲ್ಲಿ ನಮ್ಮ ಸೈನಿಕರ ಮೇಲೆ ಪಿಎಲ್‌ಎ(ಪೀಪಲ್ಸ್‌ ಲಿಬರೇಷನ್‌ ಆರ್ಮಿ) ದಾಳಿ ಮಾಡುತ್ತಿರುವ ಸಂದರ್ಭದಲ್ಲಿ ಚೀನಾ ಕಂಪನಿಗಳಿಗೆ ಲಾಭ ಮಾಡುವ ಯಾವುದೇ ಆಲೋಚನೆ ನಮ್ಮ ಅಜೆಂಡಾದಲ್ಲಿ ಇಲ್ಲ ಎಂದು ಹೇಳಿದ್ದರು.

    2017ರ ಪ್ರಣಾಳಿಕೆಯಲ್ಲಿ ಪಟ್ಟಿ ಮಾಡಲಾದ 562ರ ಪೈಕಿ 435 ಭರವಸೆಗಳನ್ನು ಕಾಂಗ್ರೆಸ್‌ ಸರ್ಕಾರ ಈಡೇರಿಸಿದೆ. ಉಳಿದವುಗಳನ್ನು ಈ ವರ್ಷ ಜಾರಿಗೆ ತರಲು ಮುಂದಾಗುತ್ತೇವೆ ಎಂದು ಅಮರಿಂದರ್‌ ಸಿಂಗ್‌ ತಿಳಿಸಿದ್ದರು.