Tag: punjab

  • ಪ್ರಧಾನಿ ಮೋದಿ ಪ್ರಯಾಣದ ಮಾಹಿತಿಯನ್ನು ಸಂರಕ್ಷಿಸಲು ಸುಪ್ರೀಂಕೋರ್ಟ್ ಸೂಚನೆ

    ಪ್ರಧಾನಿ ಮೋದಿ ಪ್ರಯಾಣದ ಮಾಹಿತಿಯನ್ನು ಸಂರಕ್ಷಿಸಲು ಸುಪ್ರೀಂಕೋರ್ಟ್ ಸೂಚನೆ

    – ಪ್ರಧಾನಿ ಭದ್ರತೆ ರಾಷ್ಟ್ರೀಯ ಭದ್ರತೆಯ ವಿಚಾರ
    – ಅಂತರಾಷ್ಟ್ರೀಯ ಮಟ್ಟದಲ್ಲಿ ಮುಜುಗರಕ್ಕೆ ಕಾರಣವಾದ ವಿಶೇಷ ಪ್ರಕರಣ

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಪಂಜಾಬ್ ಪ್ರಯಾಣ ಮಾಹಿತಿಯನ್ನು ಸಂರಕ್ಷಿಸಿಡುವಂತೆ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ರಿಜಿಸ್ಟರ್ ಜನರಲ್‍ಗೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ. ಮೋದಿ ಪ್ರಯಾಣದ ವೇಳೆಯಲ್ಲಾದ ಭದ್ರತಾ ವೈಫಲ್ಯ ವಿಚಾರಕ್ಕೆ ಸಂಬಂಧಿಸಿದಂತೆ ಸೂಕ್ತ ತನಿಖೆಗೆ ಆಗ್ರಹಿಸಿ ಲಾಯರ್ಸ್ ವಾಯ್ಸ್ ಅಸೊಶಿಯೇಶನ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ ರಮಣ ನೇತೃತ್ವದ ತ್ರಿ ಸದಸ್ಯ ಪೀಠ ಈ ಸೂಚನೆ ನೀಡಿದೆ.

    ಇಂದು ನಡೆದ ವಿಚಾರಣೆ ವೇಳೆ ಅರ್ಜಿದಾರರ ಪರ ವಾದ ಮಂಡಿಸಿದ ಮಣಿಂದರ್ ಸಿಂಗ್, ಎಸ್‍ಪಿಜಿ ನಿಯಮಗಳ ಪ್ರಕಾರ ಪಿಎಂ ಭದ್ರತೆ ನಿರಾಕರಿಸುವಂತಿಲ್ಲ, ಪ್ರಧಾನಿ ಭದ್ರತೆ ಎನ್ನುವುದು ಕೇಂದ್ರ ಅಥವಾ ರಾಜ್ಯದ ವಿಚಾರವಲ್ಲ, ಇದು ರಾಷ್ಟ್ರೀಯ ಭದ್ರತೆಯ ವಿಚಾರ ಇದು ಸಂಸದೀಯ ವ್ಯಾಪ್ತಿಗೆ ಬರಲಿದೆ. ಪಿಎಂ ಕಾನ್ವೆ ನಡು ದಾರಿಯಲ್ಲಿ ನಿಂತಿದ್ದು ರಾಜ್ಯವೊಂದರ ಕಾನೂನು ಸುವ್ಯವಸ್ಥೆಯ ಸಮಸ್ಯೆಯಲ್ಲ, ಇದು ಬಹುದೊಡ್ಡ ಭದ್ರತಾ ವೈಫಲ್ಯವಾಗಿದೆ. ಈ ವೈಫಲ್ಯವನ್ನು ವೃತ್ತಿಪರವಾಗಿ ತನಿಖೆ ನಡೆಸಬೇಕಾಗಿದೆ. ಹೀಗಾಗಿ ರಾಜ್ಯ ಸರ್ಕಾರದಿಂದ ಈ ತನಿಖೆ ಸಾಧ್ಯವಿಲ್ಲ ಅಲ್ಲದೇ ಇದನ್ನು ತನಿಖೆ ನಡೆಸಲು ರಾಜ್ಯಕ್ಕೆ ಯಾವುದೇ ವಿಶೇಷ ಅಧಿಕಾರವಿಲ್ಲ ಎಂದರು. ಇದನ್ನೂ ಓದಿ: ಚರಣ್‍ಜಿತ್ ಸಿಂಗ್ ಚನ್ನಿ ದಲಿತ ಎಂಬ ಕಾರಣಕ್ಕೆ ಬಿಜೆಪಿ ಟಾರ್ಗೆಟ್ ಮಾಡ್ತಿದೆ: ಅಶೋಕ್ ಗೆಹ್ಲೋಟ್

    ರಾಜ್ಯ ಸರ್ಕಾರ ಈಗಾಗಲೇ ಸಮಿತಿಯೊಂದನ್ನು ರಚಿಸಿದೆ. ಸರ್ಕಾರದಿಂದ ಸಮಿತಿಗೆ ನೇಮಕಗೊಂಡ ಸಮಿತಿಯ ಅಧ್ಯಕ್ಷರು ಈ ಹಿಂದೆ ಭಾರಿ ಸೇವಾ ಸಂಬಂಧಿತ ಹಗರಣದ ಭಾಗವಾಗಿದ್ದರು. ಈ ನ್ಯಾಯಾಧೀಶರ ನಡತೆಯ ಬಗ್ಗೆಯೂ ಪೊಲೀಸ್ ಅಧಿಕಾರಿಗಳು ತನಿಖೆ ನಡೆಸಿದ್ದರು. ಹೀಗಾಗಿ ಇವರಿಂದ ನಿಷ್ಪಕ್ಷಪಾತ ತನಿಖೆ ಸಾಧ್ಯವಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಅಲ್ಲದೇ ಈ ಸಮಿತಿಯ ತನಿಖೆ ಬದಲು ಪ್ರಕರಣವನ್ನು ಭಟಿಂಡಾ ಜಿಲ್ಲಾ ನ್ಯಾಯಾಧೀಶರು ಮತ್ತು ಎನ್‍ಐಎ ಅಧಿಕಾರಿಗಳು ಪರಿಶೀಲಿಸಬಹುದು ಮತ್ತು ಪ್ರಧಾನಿ ಪ್ರಯಾಣದ ಸಾಕ್ಷ್ಯಗಳನ್ನು ಎನ್‍ಐಎ ಸಂರಕ್ಷಿಸಿ ಇಡಬೇಕು ಎಂದು ಸಲಹೆ ನೀಡಿದರು. ಇದನ್ನೂ ಓದಿ: ಮೋದಿ ಮೇಲೆ ಅಲ್ಲ ಇದು ಪ್ರತಿಯೊಬ್ಬ ಭಾರತೀಯನ ಮೇಲೆ ನಡೆದ ದಾಳಿ: ಕಂಗನಾ

    ಮಣಿಂದರ್ ಸಿಂಗ್ ಬಳಿಕ ಕೇಂದ್ರ ಸರ್ಕಾರದ ಪರ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಅಂತರಾಷ್ಟ್ರೀಯ ಮಟ್ಟದಲ್ಲಿ ಮುಜುಗರಕ್ಕೆ ಕಾರಣವಾದ ವಿಶೇಷ ಪ್ರಕರಣವನ್ನು ವಿಚಾರಣೆಗೆ ಪರಿಗಣಿಸಿದಕ್ಕೆ ಸುಪ್ರೀಂಕೋರ್ಟ್ ಧನ್ಯವಾದ ಹೇಳಿದರು. ಪ್ರಧಾನ ಮಂತ್ರಿ ರಸ್ತೆ ಮಾರ್ಗವಾಗಿ ತೆರಳಲು ಸಂಬಂಧಿಸಿದ ರಾಜ್ಯದ ಡಿಜಿ ಅನುಮತಿ ನೀಡಬೇಕು. ಈ ಪ್ರಕರಣದಲ್ಲಿ ಡಿಜಿ ಅನುಮತಿ ನೀಡಿದ್ದಾರೆ, ಅನುಮತಿ ನೀಡದ ಬಳಿಕವಷ್ಟೆ ಪ್ರಧಾನಿ ರಸ್ತೆ ಮೂಲಕ ಹೊರಟಿದ್ದಾರೆ. ಇದನ್ನೂ ಓದಿ: ಪ್ರಧಾನಿಗೆ ಭದ್ರತಾ ವೈಫಲ್ಯ – ಸುಪ್ರೀಂ ಮೇಲ್ವಿಚಾರಣೆಯಲ್ಲಿ ತನಿಖೆಗೆ ಮನವಿ 

    ಪ್ರತಿಭಟನೆ ನಡೆಯುತ್ತಿದ್ದ ಪ್ರದೇಶದಲ್ಲಿ ಸ್ಥಳೀಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರತಿಭಟನಾಕಾರರ ಜೊತೆಗೆ ಚಹಾ ಹೀರುತ್ತಿದ್ದರು. ಭದ್ರತಾ ಸಮಸ್ಯೆ ಬಗ್ಗೆ ಪಿಎಂ ಸೆಕ್ಯುರಿಟಿ ಅಲರ್ಟ್ ವಾಹನಕ್ಕೆ ಕನಿಷ್ಠ ಮಾಹಿತಿಯನ್ನು ನೀಡಿಲ್ಲ. ಪಿಎಂ ಕಾನ್ವೆ ಪ್ಲೈವೋರ್ ಮೇಲಿದ್ದಾಗ ಪ್ರತಿಭಟನಾಕಾರರು ಹಿಂದೆ ದೊಡ್ಡ ಪ್ರಮಾಣದಲ್ಲಿ ಘೋಷಣೆ ಕೂಗುತ್ತಿದ್ದರು. ಪರಿಸ್ಥಿತಿ ಏನಾಗಬಹುದಿತ್ತು ಯೋಚಿಸಿ ಎಂದು ಆತಂಕ ವ್ಯಕ್ತಪಡಿಸಿದರು. ಇದಲ್ಲದೇ ಸಿಖ್ಸ್ ಫಾರ್ ಜಸ್ಟಿಸ್ ಸಂಘಟನೆಯ ಜನರು XYZ (ವಿವಾದಿತ ಪದಗಳನ್ನು ಬಳಸದೇ) ಕೆಲಸವನ್ನು ಮಾಡಲು ಕರೆ ನೀಡಿದ್ದರು. ಇದು ಗಡಿಯಾಚೆಗಿನ ಭಯೋತ್ಪಾದನೆಯ ಸಮಸ್ಯೆಯಾಗಿರಬಹುದು. ಆದ್ದರಿಂದ ಈ ಪ್ರಕರಣ ಜಿಲ್ಲಾ ನ್ಯಾಯಾಧೀಶರು ಮತ್ತು NIA ಅಧಿಕಾರಿಗಳ ಬಳಿ ಇರಲಿ ಎಂದು ಮನವಿ ಮಾಡಿದರು. ಇದನ್ನೂ ಓದಿ: ಮೋದಿ ಭದ್ರತಾ ಲೋಪಕ್ಕೆ ಪಂಜಾಬ್ ಪೊಲೀಸ್ ಇಲಾಖೆ ಕಾರಣ – ಕೇಂದ್ರ ಗೃಹ ಸಚಿವಾಲಯ

    ಬಳಿಕ ಪಂಜಾಬ್ ಸರ್ಕಾರದ ಪರ ವಾದ ಮಂಡಿಸಿದ ಅಡಿಷನಲ್ ಜನರಲ್, ಪಂಜಾಬ್ ಸರ್ಕಾರ ಈ ಪ್ರಕರಣವನ್ನು ಲಘುವಾಗಿ ಪರಿಗಣಿಸುತ್ತಿಲ್ಲ. ಜನವರಿ 5 ರಂದು ಘಟನೆ ಸಂಭವಿಸಿದಾಗ ಅದೇ ದಿನ ಸಮಿತಿಯನ್ನು ರಚಿಸಲಾಯಿತು. ನಿವೃತ್ತ ಹೈಕೋರ್ಟ್ ನ್ಯಾಯಾಧೀಶರನ್ನು ನೇಮಿಸಲಾಗಿದೆ, ನಿನ್ನೆ ಎಫ್‍ಐಆರ್ ಕೂಡ ದಾಖಲಿಸಿದ್ದೇವೆ. ಕೇಂದ್ರವು ಈ ವಿಷಯವನ್ನು ತನಿಖೆ ಮಾಡಲು ಸಮಿತಿಯನ್ನು ಸಹ ರಚಿಸಿದೆ. ಪ್ರಕರಣದ ತನಿಖೆಗೆ ಯಾವುದೇ ವ್ಯಕ್ತಿಯನ್ನು ನೇಮಿಸಬಹುದು ಒಂದು ವೇಳೆ ಲೋಪವಿದ್ದರೆ ತನಿಖೆಯ ಅಗತ್ಯವಿದೆ. ಮೋದಿ ನಮ್ಮ ಪ್ರಧಾನಿ ಎಂದು ಪಂಜಾಬ್ ಸಿಎಂ ಹೇಳಿದ್ದಾರೆ. ನಾವು ಪ್ರಕರಣವನ್ನು ರಾಜಕೀಯಗೊಳಿಸಿಲ್ಲ ಎಂದು ಸಮರ್ಥಿಸಿಕೊಂಡರು. ಇದನ್ನೂ ಓದಿ: ಭದ್ರತಾ ಲೋಪವಾಗಿಲ್ಲ, ಜನರಿಲ್ಲದೇ ಖಾಲಿ ಕುರ್ಚಿಗಳಿದ್ದ ಕಾರಣ ಪಿಎಂ ರ‍್ಯಾಲಿ ರದ್ದು: ಪಂಜಾಬ್‌ ಸಿಎಂ

    ವಾದ ಮಂಡನೆಯ ಬಳಿಕ ತುಷಾರ್ ಮೆಹ್ತಾರನ್ನು ಪ್ರಶ್ನಿಸಿದ ಸಿಜೆಐ ಎನ್‍ವಿ ರಮಣ, ನೀವೂ ಸ್ವತಂತ್ರ ತನಿಖೆಯನ್ನು ಬಯಸುತ್ತಿದ್ದಿರಾ ಎಂದು ಕೇಳಿದರು. ಇದಕ್ಕೆ ಉತ್ತರಿಸಿದ ತುಷಾರ್ ಮೆಹ್ತಾ, ದಾಖಲೆಗಳ ಸಂಗ್ರಹದೊಂದಿಗೆ ನಾಳೆ ನಮ್ಮ ವೈಯಕ್ತಿಕ ಕನಿಮ್ಮ ಮುಂದೆ ಇಡಲಿದ್ದೇವೆ. ಅದನ್ನು ಪರಿಶೀಲಿಸಿ ತಿರ್ಮಾನ ತೆಗೆದುಕೊಳ್ಳಿ ಎಂದು ಎಂದರು. ಇದನ್ನೂ ಓದಿ: ಭಾರೀ ಭದ್ರತಾ ಲೋಪ – ಪಂಜಾಬ್ ಫ್ಲೈ ಓವರ್‌ನಲ್ಲಿ 20 ನಿಮಿಷ ಸಿಲುಕಿದ ಮೋದಿ

    ಬಳಿಕ ಮಧ್ಯಂತರ ಆದೇಶ ನೀಡಿದ ನ್ಯಾ.ಎನ್.ವಿ ರಮಣ, ದೇಶದ ಪ್ರಧಾನಿಯ ಭದ್ರತೆಗೆ ಸಂಬಂಧಿಸಿದ ಸಮಸ್ಯೆಯ ದೃಷ್ಟಿಯಿಂದ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‍ನ ರಿಜಿಸ್ಟ್ರಾರ್ ಜನರಲ್ ಸಾಕ್ಷ್ಯಗಳನ್ನು (PM ಪ್ರಯಾಣ ದಾಖಲೆಗಳು) ಸುರಕ್ಷಿತವಾಗಿರಿಸಲು ಮತ್ತು ಸಂರಕ್ಷಿಸಲು ನಿರ್ದೇಶಿಸುವುದು ಸೂಕ್ತವೆಂದು ನಾವು ಭಾವಿಸುತ್ತೇವೆ. ತಕ್ಷಣವೇ ಪಂಜಾಬ್ ಪೊಲೀಸ್ ಅಧಿಕಾರಿಗಳು ಮತ್ತು ಎಸ್‍ಪಿಜಿ ಮತ್ತು ಇತರ ಕೇಂದ್ರ ಮತ್ತು ರಾಜ್ಯ ಏಜೆನ್ಸಿಗಳಿಗೆ ಸಹಕರಿಸಲು ಮತ್ತು ರಿಜಿಸ್ಟ್ರಾರ್ ಜನರಲ್‍ಗೆ ಅಗತ್ಯ ನೆರವು ನೀಡಲು ನಿರ್ದೇಶಿಸುತ್ತೇವೆ. ಎಲ್ಲಾ ದಾಖಲೆಗಳನ್ನು ಅವರ ಸುರಕ್ಷಿತ ಕಸ್ಟಡಿಯಲ್ಲಿ ಇರಿಸಿಕೊಳ್ಳಲು ನಾವು ರಿಜಿಸ್ಟ್ರಾರ್ ಜನರಲ್ ಅವರಿಗೆ ನಿರ್ದೇಶಿಸುತ್ತೇವೆ ಎಂದು ಮೌಕಿಕವಾಗಿ ಹೇಳಿದರು. ಅಲ್ಲದೇ ಸೋಮವಾರದವರೆಗೂ ಕೇಂದ್ರ ಮತ್ತು ರಾಜ್ಯದಿಂದ ರಚನೆಯಾದ ಸಮಿತಿಗಳು ತನಿಖೆ ನಡೆಸದಂತೆ ಸೂಚನೆ ನೀಡಿದರು. ಸೋಮವಾರಕ್ಕೆ ವಿಚಾರಣೆ ಮುಂದೂಡಿಕೆಯಾಗಿದ್ದು ಸೋಮವಾರ ಸುಪ್ರೀಂಕೋರ್ಟ್ ಮೇಲ್ವಿಚಾರಣೆಯಲ್ಲಿ ಸ್ವತಂತ್ರ ಸಮಿತಿ ರಚನೆ ಮಾಡುವ ಸಾಧ್ಯತೆಗಳಿದೆ.

  • ಮೋದಿಗೆ ಭದ್ರತಾ ಲೋಪ – ಪಂಜಾಬ್ ತನ್ನ ಭವಿಷ್ಯದ ಬಗ್ಗೆ ಚಿಂತಿಸಬೇಕಿದೆ: ಬೊಮ್ಮಾಯಿ

    ಮೋದಿಗೆ ಭದ್ರತಾ ಲೋಪ – ಪಂಜಾಬ್ ತನ್ನ ಭವಿಷ್ಯದ ಬಗ್ಗೆ ಚಿಂತಿಸಬೇಕಿದೆ: ಬೊಮ್ಮಾಯಿ

    ಬೆಂಗಳೂರು: ಪಂಜಾಬ್‍ಗೆ ಪ್ರಧಾನಿ ಮೋದಿಗೆ ಭೇಟಿ ನೀಡಿದ ವೇಳೆ ಭದ್ರತಾ ಲೋಪವೆಸಗಿದ ಪಂಜಾಬ್ ಸರ್ಕಾರದ ಬಗ್ಗೆ ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿ ಹಲವು ನಾಯಕರು ಕಿಡಿಕಾರಿದ್ದಾರೆ.

    ಈ ಬಗ್ಗೆ ಟ್ವಿಟ್ಟರ್‌ನಲ್ಲಿ ಟ್ವೀಟ್ ಮಾಡಿರುವ ಬಸವರಾಜ ಬೊಮ್ಮಾಯಿ, ಪ್ರಧಾನಿ ನರೇಂದ್ರ ಮೋದಿಜೀ ಅವರು ಇಂದು ಪಂಜಾಬ್ ರಾಜ್ಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಉಂಟಾಗಿರುವ ಭದ್ರತಾ ಲೋಪವನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇಂತಹ ಘಟನೆಗಳು ಯಾವುದೇ ಕಾರಣಕ್ಕೂ ನಡೆಯಬಾರದು. ಇದೇ ಸಂದರ್ಭದಲ್ಲಿ ಇದು ಒಂದು ಸಹಜ ಘಟನೆ ಎಂದು ಪಂಜಾಬ್ ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಛನ್ನಿ ಅವರು ನೀಡಿರುವ ಬೇಜವಾಬ್ದಾರಿ ಹೇಳಿಕೆಯನ್ನು ನಾನು ಬಲವಾಗಿ ಖಂಡಿಸುತ್ತೇನೆ. ಪಂಜಾಬ್ ತನ್ನ ಭವಿಷ್ಯದ ಬಗ್ಗೆ ಮುಂದೆ ಚಿಂತಿಸಬೇಕಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಜನರಿಲ್ಲದೇ ಖಾಲಿ ಕುರ್ಚಿಗಳಿದ್ದ ಕಾರಣ ಪಿಎಂ ರ‍್ಯಾಲಿ ರದ್ದು: ಕಾಂಗ್ರೆಸ್‌ ವ್ಯಂಗ್ಯ

    ಈ ಬಗ್ಗೆ  ಇಂಧನ ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನಿಲ್ ಕುಮಾರ್ ಕೂಡ ಟ್ವೀಟ್ ಮಾಡಿದ್ದು, ತುರ್ತು ಪರಿಸ್ಥಿತಿ ಹೇರಿ ಜನರ ಸ್ವಾತ್ಯಂತ್ರ ಕಸಿದುಕೊಂಡಿದ್ದ ಕಾಂಗ್ರೆಸ್ ಇಂದು ಪಂಜಾಬ್ ನಲ್ಲಿ ಪ್ರಧಾನಮಂತ್ರಿಗಳ ಭದ್ರತೆಯನ್ನೇ ಬುಡಮೇಲು ಮಾಡಲು ಪ್ರಯತ್ನಿಸಿದ ಘಟನೆಯನ್ನು ನಾನು ಸಂಪೂರ್ಣವಾಗಿ ಖಂಡಿಸುತ್ತೇನೆ. ಇಂತಹ ಬೆದರಿಕೆಗಳಿಗೆ ಎಂದಿಗೂ ಜಗ್ಗುವುದಿಲ್ಲ. ಕಾಂಗ್ರೆಸ್ ಇದಕ್ಕೆ ತಕ್ಕ ಬೆಲೆಯನ್ನು ಶೀಘ್ರದಲ್ಲೇ ಪಡೆಯಲಿದೆ ಎಂದು ವಿರೋಧ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ನಾನು ಜೀವಂತವಾಗಿ ಬಂದಿದ್ದೇನೆ, ನಿಮ್ಮ ಸಿಎಂಗೆ ಧನ್ಯವಾದ ಹೇಳಿ ಎಂದ ಮೋದಿ

    ಬಟಿಂಡಾದಲ್ಲಿ ಇಂದು ಆಯೋಜನೆಗೊಂಡಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ನರೇಂದ್ರ ಮೋದಿ ಪಂಜಾಬ್‍ಗೆ ಆಗಮಿಸಿದ್ದರು. ಮಧ್ಯಾಹ್ನ ಹುಸೇನಿವಾಲಾದಲ್ಲಿ ರಾಷ್ಟ್ರೀಯ ಹುತಾತ್ಮರ ಸ್ಮಾರಕ ಸ್ಥಳಕ್ಕೆ ತೆರಳಲು ಹೋಗುತ್ತಿದ್ದಾಗ ಭದ್ರತಾ ಲೋಪವಾಗಿದೆ. ಕಾರ್ಯಕ್ರಮಕ್ಕೆ ಕಾರಿನಲ್ಲಿ ಭದ್ರತಾ ಸಿಬ್ಬಂದಿ ಜೊತೆ ಫ್ಲೈಓವರ್‌ನಲ್ಲಿ ತೆರಳುತ್ತಿದ್ದಾಗ ರೈತರು ಪ್ರತಿಭಟನೆ ಮಾಡುತ್ತಿರುವುದು ಗೊತ್ತಾಗಿದೆ. ಭದ್ರತಾ ಲೋಪದಿಂದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಪಂಜಾಬ್‍ನ ಫ್ಲೈಓವರ್‌ನಲ್ಲಿ ಸುಮಾರು 20 ನಿಮಿಷಗಳ ಕಾಲ ಸಿಲುಕಿಕೊಂಡಿದ್ದರು. ಇದನ್ನೂ ಓದಿ: ಪಂಜಾಬ್ ಫ್ಲೈ ಓವರ್‌ನಲ್ಲಿ 20 ನಿಮಿಷ ಸಿಲುಕಿದ ಮೋದಿ – ಕಾರ್ಯಕ್ರಮ ರದ್ದು

  • ನಾನು ಜೀವಂತವಾಗಿ ಬಂದಿದ್ದೇನೆ, ನಿಮ್ಮ ಸಿಎಂಗೆ ಧನ್ಯವಾದ ಹೇಳಿ ಎಂದ ಮೋದಿ

    ನಾನು ಜೀವಂತವಾಗಿ ಬಂದಿದ್ದೇನೆ, ನಿಮ್ಮ ಸಿಎಂಗೆ ಧನ್ಯವಾದ ಹೇಳಿ ಎಂದ ಮೋದಿ

    ಚಂಡೀಗಢ: ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಲು ಪಂಜಾಬ್‍ಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಿದ್ದ ವೇಳೆ ಭಾರೀ ಭದ್ರತಾ ಲೋಪವಾಗಿದೆ.

    ಬಟಿಂಡಾದಲ್ಲಿ ಇಂದು ಆಯೋಜನೆಗೊಂಡಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ನರೇಂದ್ರ ಮೋದಿ ಪಂಜಾಬ್‍ಗೆ ಆಗಮಿಸಿದ್ದರು. ಮಧ್ಯಾಹ್ನ ಹುಸೇನಿವಾಲಾದಲ್ಲಿ ರಾಷ್ಟ್ರೀಯ ಹುತಾತ್ಮರ ಸ್ಮಾರಕ ಸ್ಥಳಕ್ಕೆ ತೆರಳಲು ಹೋಗುತ್ತಿದ್ದಾಗ ಭದ್ರತಾ ಲೋಪವಾಗಿದೆ. ಇದನ್ನೂ ಓದಿ: ಪಂಜಾಬ್ ಫ್ಲೈ ಓವರ್‌ನಲ್ಲಿ 20 ನಿಮಿಷ ಸಿಲುಕಿದ ಮೋದಿ – ಕಾರ್ಯಕ್ರಮ ರದ್ದು

    ಕಾರ್ಯಕ್ರಮಕ್ಕೆ ಕಾರಿನಲ್ಲಿ ಭದ್ರತಾ ಸಿಬ್ಬಂದಿ ಜೊತೆ ಫ್ಲೈ ಓವರ್‌ನಲ್ಲಿ ತೆರಳುತ್ತಿದ್ದಾಗ ರೈತರು ಪ್ರತಿಭಟನೆ ಮಾಡುತ್ತಿರುವುದು ಗೊತ್ತಾಗಿದೆ. ಭದ್ರತಾ ಲೋಪದಿಂದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಪಂಜಾಬ್‍ನ ಫ್ಲೈಓವರ್‌ನಲ್ಲಿ ಸುಮಾರು 20 ನಿಮಿಷಗಳ ಕಾಲ ಸಿಲುಕಿಕೊಂಡಿದ್ದರು. ಬಳಿಕ ಬಟಿಂಡಾಕ್ಕೆ ಮರಳಿದ್ದಾರೆ.

    ಘಟನೆಯ ಬಳಿಕ ಬಟಿಂಡಾ ವಿಮಾನ ನಿಲ್ದಾಣದ ಸಿಬ್ಬಂದಿ ಜೊತೆ ಮಾತನಾಡಿದ್ದ ಮೋದಿ, ನಾನು ಜೀವಂತವಾಗಿ ಬಂದಿದ್ದೇನೆ. ನಿಮ್ಮ ಮುಖ್ಯಮಂತ್ರಿಗಳಿಗೆ ಧನ್ಯವಾದ ಹೇಳಿ ಎಂದು ಪಂಜಾಬ್ ಸರ್ಕಾರಕ್ಕೆ ಮಾತಿನಲ್ಲೇ ಕುಟುಕಿದ್ದಾರೆ. ಇದನ್ನೂ ಓದಿ: ಕೋವಿಡ್-19 ಮುಂದಿನ ಎರಡು ವಾರ ನಿರ್ಣಾಯಕ – ಭಾರತಕ್ಕೆ WHO ತಜ್ಞರ ಎಚ್ಚರಿಕೆ

    ಬಟಿಂಡಾದಲ್ಲಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ತೆರಳಿದ ವೇಳೆ ಮೋದಿಯ ಬೆಂಗಾವಲು ವಾಹನಕ್ಕೆ ರೈತರು ತಡೆ ಹಾಕಿದ್ದರು. ಹಾಗಾಗಿ ಮೋದಿ ಸಂಚರಿಸುತ್ತಿದ್ದ ಕಾರು ಫಿರೋಜ್ ಪುರ ಫ್ಲೈಓವರ್ ನಲ್ಲಿ ಸಿಲುಕಿಕೊಂಡಿತ್ತು.

  • ಹುಟ್ಟೂರಿಗೆ ನೆರವಾದ ಸೋನು ಸೂದ್-1,000 ವಿದ್ಯಾರ್ಥಿನಿಯರಿಗೆ ಸೈಕಲ್ ವಿತರಣೆ

    ಹುಟ್ಟೂರಿಗೆ ನೆರವಾದ ಸೋನು ಸೂದ್-1,000 ವಿದ್ಯಾರ್ಥಿನಿಯರಿಗೆ ಸೈಕಲ್ ವಿತರಣೆ

    ಚಂಡೀಗಢ: ಕೊರೊನಾ ಸಂಕಷ್ಟದ ಕಾಲದಲ್ಲಿ ಅಭಿಮಾನಿಗಳ ಪಾಲಿಗೆ ರಿಯಲ್ ಹೀರೋ ಆಗಿರುವ ಸೋನು ಸೂದ್ ಅವರು ಹೆಣ್ಣು ಮಕ್ಕಳಿಗೆ ಸೈಕಲ್ ವಿತರಣೆ ನೀಡುವ, ಮೊಗಾ ಕಿ ಭೇಟಿ (ಮೊಗಾದ ಮಗಳು) ಹೆಸರಿನ ಆಂದೋಲನಕ್ಕೆ ಚಾಲನೆ ನೀಡಿದ್ದಾರೆ.

    ಸಹೋದರಿ ಮಾಳವಿಕಾ ಸೂದ್ ಜೊತೆ ಸೇರಿ ಸೋನು ಸೂದ್ ತಮ್ಮ ಹುಟ್ಟೂರಾದ ಪಂಜಾಬ್‍ನ ಮೊಗಾದಲ್ಲಿ, 1,000 ವಿದ್ಯಾರ್ಥಿನಿಯರು ಹಾಗೂ ಸಾಮಾಜಿಕ ಕಾರ್ಯಕರ್ತೆಯರಿಗೆ ಸೈಕಲ್‍ಗಳನ್ನು ನೀಡಿದ್ದಾರೆ. ಇದರಿಂದ ಸುಮಾರು 40-45 ಗ್ರಾಮದ ವಿದ್ಯಾರ್ಥಿನಿಯರಿಗೆ ಸಹಾಯ ಆಗಿದೆ. ಸೂದ್ ಚಾರಿಟಿ ಫೌಂಡೇಶನ್‍ನೊಂದಿಗೆ ಮಾಳವಿಕಾ ಸೂದ್ ಸಕ್ರಿಯವಾಗಿ ಕೆಲಸ ಮಾಡುತ್ತಿದ್ದಾರೆ. ಇದನ್ನೂ ಓದಿ: ಕತ್ರಿನಾ ಕೈಫ್ ವಜ್ರ ಖಚಿತ ಮಾಂಗಲ್ಯ ಸರದ ಬೆಲೆ ಎಷ್ಟು ಗೊತ್ತಾ?

    ಈ ಯೋಜನೆ ಕುರಿತಾಗಿ ಮಾತನಾಡಿದ ಸೋನು ಸೂದ್, ಮನೆಯಿಂದ ಶಾಲೆಗೆ ಹೋಗುವುದು ತುಂಬಾ ದೂರವಾಗಿದ್ದು, ವಿದ್ಯಾರ್ಥಿನಿಯರು ತೀವ್ರ ತೊಂದರೆಯಾಗುತ್ತಿತ್ತು. ಈ ಸಮಸ್ಯೆಯನ್ನು ಪರಿಹರಿಸಲು, ಸಹಾಯ ಮಾಡಲು 8ನೇ ತರಗತಿಯಿಂದ 12ನೇ ತರಗತಿವರೆಗಿನ ಅರ್ಹ ವಿದ್ಯಾರ್ಥಿನಿಯರಿಗೆ ಸೈಕಲ್‍ಗಳನ್ನು ಒದಗಿಸುವ ಗುರಿಯನ್ನು ನಾವು ಹೊಂದಿದ್ದೇವೆ. ನಮ್ಮ ಅಭಿಯಾನದಲ್ಲಿ ಈ ಸೈಕಲ್‍ಗಳನ್ನು ಸಾಮಾಜಿಕ ಕಾರ್ಯಕರ್ತರಿಗೂ ನೀಡುತ್ತೇವೆ ಎಂದಿದ್ದಾರೆ. ಇದನ್ನೂ ಓದಿ: ಸೋನು ಸೂದ್‌ರಿಂದ ರೈಫಲ್‌ ಗಿಫ್ಟ್‌ ಪಡೆದಿದ್ದ ಶೂಟರ್‌ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

    ಸೋನು ಸೂದ್ ಅವರು ಸಾಮಾಜಿಕ ಕೆಲಸಗಳು ಒಂದೆರಡಲ್ಲ. ಕೋವಿಡ್ ಮೊದಲನೆ ಅಲೆ ಕಾಣಿಸಿಕೊಂಡಾಗ ಸೋನು ಸಾಮಾಜಿಕ ಕೆಲಸ ಆರಂಭಿಸಿದ್ದರು. ಆ ಬಳಿಕ ಅವರು ಒಂದಾದ ಮೇಲೆ ಒಂದರಂತೆ ಜವಾಬ್ದಾರಿಗಳನ್ನು ತೆಗೆದುಕೊಳ್ಳುತ್ತ ನೊಂದವರ ಪಾಲಿನ ದೇವರಾಗಿದ್ದಾರೆ ಎಂದು ಹೇಳಿದರೆ ತಪ್ಪಾಗಲಾರದು.

  • ಪಂಜಾಬ್‌ನಲ್ಲಿ ನೈಟ್ ಕರ್ಫ್ಯೂ ಜೊತೆಗೆ ಶಾಲಾ-ಕಾಲೇಜು ಬಂದ್

    ಪಂಜಾಬ್‌ನಲ್ಲಿ ನೈಟ್ ಕರ್ಫ್ಯೂ ಜೊತೆಗೆ ಶಾಲಾ-ಕಾಲೇಜು ಬಂದ್

    ಚಂಡೀಗಢ: ಪಂಜಾಬ್‌ನಲ್ಲಿ ಕೊರೊನಾ ಹೆಚ್ಚುತ್ತಿದ್ದ ಹಿನ್ನೆಲೆ ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ ಪರಿಶೀಲನಾ ಸಭೆಯಲ್ಲಿ ಹೊಸ ಆದೇಶಗಳನ್ನು ಘೋಷಿಸಿದ್ದಾರೆ.

    ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ತೀವ್ರವಾಗಿ ಏರಿಕೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಶಾಲಾ-ಕಾಲೇಜುಗಳನ್ನು ಬಂದ್ ಮಾಡಲಾಗುವುದು ಮತ್ತು ಸಾರ್ವಜನಿಕ ಸಂಚಾರವನ್ನು ನಿರ್ಬಂಧಿಸಲು ರಾತ್ರಿ ಕರ್ಫ್ಯೂ ವಿಧಿಸಲಾಗುತ್ತದೆ.

    ಪಂಜಾಬ್‌ನಲ್ಲಿ ದಿನೇ ದಿನೇ ಕೊರೊನಾ ಸೋಂಕು ಹರಡುವಿಕೆ ವೇಗವಾಗಿ ಹೆಚ್ಚುತ್ತಿದೆ. ರಾಜ್ಯದಲ್ಲಿ ಡಿಸೆಂಬರ್ 28 ರಂದು 51 ಕೇಸ್‌ಗಳು ದಾಖಲಾಗಿದ್ದು, ನಿನ್ನೆ ಒಮ್ಮಿಂದೊಮ್ಮೆಲೆ 419 ಪ್ರಕರಣಗಳು ವರದಿಯಾಗಿದೆ. ಹರಡುವಿಕೆಯ ದರವು ಡಿಸೆಂಬರ್ 29ರಂದು ಶೇ.0.46ರಷ್ಟಿತ್ತು. ಆದರೆ ನಿನ್ನೆ ಶೇ.4.47ಕ್ಕೆ ಏರಿದ ಹಿನ್ನೆಲೆಯಿಂದಾಗಿ ಸರ್ಕಾರ ಹೊಸ ಆದೇಶವನ್ನು ಹೊರಡಿಸಿದೆ. ಇದನ್ನೂ ಓದಿ: ಒಂದೇ ದಿನದಲ್ಲಿ 100 ವೈದ್ಯರಿಗೆ ಕೋವಿಡ್ ಪಾಸಿಟಿವ್!

    ಹೊಸ ಆದೇಶದಲ್ಲಿ ಏನಿದೆ?
    ಶಾಲೆಗಳು, ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳು ಸೇರಿದಂತೆ ಎಲ್ಲಾ ಶಿಕ್ಷಣ ಸಂಸ್ಥೆಗಳು ನಡೆಸುತ್ತಿದ್ದ ಆಫ್‌ಲೈನ್ ತರಗತಿಗಳನ್ನು ನಿಲ್ಲಿಸಲಾಗುತ್ತದೆ ಮತ್ತು ಆನ್‌ಲೈನ್ ತರಗತಿಗಳು ಮುಂದುವರಿಸಲಾಗುತ್ತದೆ. ಆದರೆ ವೈದ್ಯಕೀಯ ಮತ್ತು ನರ್ಸಿಂಗ್ ಕಾಲೇಜುಗಳಿಗೆ ಎಂದಿನಂತೆ ಕಾರ್ಯನಿರ್ವಹಿಸಲು ಅನುಮತಿ ನೀಡಲಾಗಿದೆ.

    ಪ್ರತಿದಿನ ರಾತ್ರಿ 10 ಗಂಟೆಯಿಂದ ಬೆಳಗ್ಗೆ 5 ಗಂಟೆವರೆಗೆ ರಾತ್ರಿ ಕರ್ಫ್ಯೂ ಜಾರಿಯಲ್ಲಿರುತ್ತದೆ. ಬಾರ್‌ಗಳು, ಸಿನಿಮಾ ಹಾಲ್‌ಗಳು, ಮಲ್ಟಿಪ್ಲೆಕ್ಸ್, ಮಾಲ್, ರೆಸ್ಟೋರೆಂಟ್, ಮ್ಯೂಸಿಯಂ, ಮತ್ತು ಮೃಗಾಲಯಗಳು ಶೇ.5ಂ ರಷ್ಟು ಕಾರ್ಯನಿರ್ವಹಿಸಬಹುದು. ಎಲ್ಲಾ ಸಿಬ್ಬಂದಿ ಸದಸ್ಯರು ಸಂಪೂರ್ಣವಾಗಿ ಲಸಿಕೆ ಹಾಕಿದ್ದರೆ ಮಾತ್ರ ಅವರನ್ನು ಒಳಗೆ ಬಿಡಬೇಕು. ಈ ಹೊಸ ಆದೇಶಗಳು ಜನವರಿ 15 ರವರೆಗೆ ಮುಂದುವರಿಯುತ್ತದೆ ಎಂದು ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ ತಿಳಿಸಿದ್ದಾರೆ.

    ಕ್ರೀಡಾ ಸ್ಟೇಡಿಯಂಗಳು, ಈಜುಕೊಳಗಳು, ಮತ್ತು ಜಿಮ್‌ಗಳನ್ನು ಮುಚ್ಚಲಾಗುತ್ತದೆ. ಆದರೆ  ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ  ಕ್ರೀಡಾಪಟುಗಳಿಗೆ ತರಬೇತಿ ನೀಡಲು ಅವಕಾಶವಿದೆ. ಎರಡು ಲಸಿಕೆ ಪೂರ್ಣಗೊಂಡಿರುವ ಸಿಬ್ಬಂದಿಗೆ ಮಾತ್ರ ಸರ್ಕಾರಿ ಹಾಗೂ ಖಾಸಗಿ ಕಛೇರಿಗಳಿಗೆ ಭೇಟಿ ನೀಡಲು ಅವಕಾಶವಿದೆ. ರಾಜಕೀಯ ಸಭೆಗಳಿಗೆ ಸಂಬಂಧಿಸಿದಂತೆ ಯಾವುದೇ ನಿರ್ಬಂಧನೆ ಇಲ್ಲ ಎಂದು ಹೇಳಲಾಗಿದೆ.
    ಇದನ್ನೂ ಓದಿ: ದೆಹಲಿಯಲ್ಲಿ ವೀಕೆಂಡ್ ಕರ್ಫ್ಯೂ – ಶನಿವಾರ, ಭಾನುವಾರ ಕಂಪ್ಲೀಟ್‌ ಬಂದ್

  • ಕೊರೊನಾ ತಡೆಗಟ್ಟುವಲ್ಲಿ ಕೇಜ್ರಿವಾಲ್ ಸರ್ಕಾರ ವಿಫಲ: ಚರಣ್‌ಜಿತ್ ಸಿಂಗ್

    ಕೊರೊನಾ ತಡೆಗಟ್ಟುವಲ್ಲಿ ಕೇಜ್ರಿವಾಲ್ ಸರ್ಕಾರ ವಿಫಲ: ಚರಣ್‌ಜಿತ್ ಸಿಂಗ್

    ಚಂಡೀಗಢ: ಕೊರೊನಾ ಮೊದಲ ಮತ್ತು ಎರಡನೇ ಅಲೆಯನ್ನು ತಡೆಯುವಲ್ಲಿ ಅರವಿಂದ್ ಕೇಜ್ರಿವಾಲ್ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಪಂಜಾಬ್ ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನ್ನಿ ಹೇಳಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ಮೊದಲನೇ ಮತ್ತು ಎರಡನೇ ಅಲೆಯಲ್ಲಿ ರಾಷ್ಟ್ರ ರಾಜಧಾನಿಯಿಂದ ಹಲವಾರು ಸೋಂಕಿತರು ಚಿಕಿತ್ಸೆಗೆಂದು ಪಂಜಾಬ್‌ಗೆ ಬಂದಿದ್ದಾರೆ. ದೆಹಲಿಯಲ್ಲಿ ಸೋಂಕಿತರಿಗೆ ಸರಿಯಾದ ಚಿಕಿತ್ಸೆ ನೀಡುತ್ತಿಲ್ಲ ಎಂದು ದೂರಿದ ಅವರು, ನಗರದಂತಹ ರಾಜ್ಯವನ್ನು ನಡೆಸದ ವ್ಯಕ್ತಿ ಸಂಪೂರ್ಣ ರಾಜ್ಯವನ್ನು ಹೇಗೆ ನಡೆಸುತ್ತಾನೆ ಎಂದು ವ್ಯಂಗ್ಯವಾಡಿದರು.

    ಚುನಾವಣೆ ನಿಮಿತ್ತ ಕೇಜ್ರಿವಾಲ್ ಪಂಜಾಬ್‌ನಲ್ಲಿ ಪ್ರಚಾರ ಆರಂಭಿಸಿದ್ದು, ದೆಹಲಿ ಮಾದರಿಯಲ್ಲಿ ಪಂಜಾಬ್‌ನಲ್ಲೂ ಆರೋಗ್ಯ ಹಾಗೂ ಶಿಕ್ಷಣ ವ್ಯವಸ್ಥೆ ರೂಪಿಸುವುದಾಗಿ ಸುಳ್ಳು ಭರವಸೆಗಳನ್ನು ನೀಡುತ್ತಿದ್ದಾರೆ. ಆದರೆ ಇಂತಹ ನಾಟಕಗಳನ್ನು ಪಂಜಾಬ್ ಜನ ನಂಬುವುದಿಲ್ಲ ಎಂದರು. ಇದನ್ನೂ ಓದಿ: ದೇವಾಲಯದ ಪ್ರಸಾದ ಸೇವಿಸಿ 50ಕ್ಕೂ ಹೆಚ್ಚು ಜನ ಅಸ್ವಸ್ಥ

    ಇದೇ ವೇಳೆ ಕೊರೊನಾ ಮೂರನೇ ಅಲೆ ಬಗ್ಗೆ ಮಾತನಾಡಿದ ಅವರು, ಕೊರೊನಾ ಮತ್ತು ಓಮಿಕ್ರಾನ್ ಸಂಖ್ಯೆ ಇತ್ತೀಚೆಗೆ ಪುನಃ ಹೆಚ್ಚುತ್ತಿದೆ. ಕೊರೊನಾ 3ನೇ ಅಲೆಯನ್ನು ಎದುರಿಸಲು ನಮ್ಮ ಸರ್ಕಾರ ಸಿದ್ಧವಾಗಿದೆ ಎಂದು ಹೇಳಿದರು. ಇದನ್ನೂ ಓದಿ: 12 ಸಾವಿರ NGOಗಳ ವಿದೇಶಿ ದೇಣಿಗೆ ಸ್ವೀಕಾರ ಪರವಾನಿಗೆ ರದ್ದು

  • ಪೊಲೀಸರಿಲ್ಲದೇ ರಿಕ್ಷಾ ಚಾಲಕನು ರಾಜಕಾರಣಿಗಳ ಮಾತು ಕೇಳಲ್ಲ – ಸಿಧು ವಿರುದ್ಧ ಡಿಎಸ್‍ಪಿ ಕಿಡಿ

    ಪೊಲೀಸರಿಲ್ಲದೇ ರಿಕ್ಷಾ ಚಾಲಕನು ರಾಜಕಾರಣಿಗಳ ಮಾತು ಕೇಳಲ್ಲ – ಸಿಧು ವಿರುದ್ಧ ಡಿಎಸ್‍ಪಿ ಕಿಡಿ

    ಚಂಡೀಗಢ: ಪೊಲೀಸರು ಇಲ್ಲದೇ ರಿಕ್ಷಾ ಚಾಲಕನು ಸಹ ರಾಜಕಾರಣಿಗಳ ಮಾತನ್ನು ಕೇಳುವುದಿಲ್ಲ ಎಂದು ಹೇಳುವ ಮೂಲಕ ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ವಿರುದ್ಧ ಚಂಡೀಗಢ ಉಪ ಪೊಲೀಸ್ ವರಿಷ್ಠಾಧಿಕಾರಿ ದಿಲ್ಶರ್ ಚಾಂಡೇಲ್ ಕಿಡಿಕಾರಿದ್ದಾರೆ.

    ಕೆಲವು ದಿನಗಳ ಹಿಂದೆ ನವಜೋತ್ ಸಿಂಗ್ ಸಿಧು ಅವರು ಸಾರ್ವಜನಿಕ ರ್‍ಯಾಲಿ ವೇಳೆ ತಮ್ಮ ಪಕ್ಷದ ಕಾರ್ಯಕರ್ತರಿಗೆ ಪೊಲೀಸರ ಪ್ಯಾಂಟ್ ಒದ್ದೆ ಮಾಡುವಂತೆ ಹೇಳಿದ್ದರು. ಇದೀಗ ಈ ಹೇಳಿಕೆ ಕುರಿತಂತೆ ದಿಲ್ಶರ್ ಚಾಂಡೇಲ್ ಅವರು, ನಿಮ್ಮ ಮಾತಿನ ಮೇಲೆ ಹಿಡಿತವಿರಲಿ. ಹಿರಿಯ ನಾಯಕರೊಬ್ಬರು ತಮಗೆ ರಕ್ಷಣೆ ಒದಗಿಸುವ ಪೊಲೀಸ್ ಪಡೆಯನ್ನು ಅವಮಾನಿಸಿರುವುದು ತುಂಬಾ ನಾಚಿಕೆಗೇಡಿನ ಸಂಗತಿ. ಪೊಲೀಸರು ಇಲ್ಲದೇ ರಿಕ್ಷಾ ಚಾಲಕನು ಸಹ ರಾಜಕಾರಣಿಗಳ ಮಾತನ್ನು ಕೇಳುವುದಿಲ್ಲ ಹಾಗಾಗಿ ರಾಜಕಾರಣಿಗಳು ಪೊಲೀಸರನ್ನು ಗೇಲಿ ಮಾಡಬಾರದು ಎಂದು ಟಾಂಗ್ ನೀಡಿದ್ದಾರೆ. ಇದನ್ನೂ ಓದಿ: ಅಂಕಲ್ ಅಂದಿದ್ದೆ ತಪ್ಪಾಯ್ತು – ಯುವತಿಗೆ ಹಿಗ್ಗಾಮುಗ್ಗಾ ಥಳಿಸಿದ ಅಂಗಡಿ ಮಾಲೀಕ

    ಡಿಸೆಂಬರ್ 19 ರಂದು ಕಪುರ್ತಲಾ ಜಿಲ್ಲೆಯ ಸುಲ್ತಾನ್‍ಪುರ್ ಲೋಧಿಯಲ್ಲಿ ನಡೆದ ಪಕ್ಷದ ರ್‍ಯಾಲಿ ವೇಳೆ ಮಾತನಾಡಿದ ನವಜೋತ್ ಸಿಧು, ಕಾಂಗ್ರೆಸ್ ಶಾಸಕ ನವತೇಜ್ ಸಿಂಗ್ ಚೀಮಾ ಎಷ್ಟು ಶಕ್ತಿಶಾಲಿಯಾಗಿದ್ದರು ಎಂದರೆ ಪೊಲೀಸ್ ಅಧಿಕಾರಿಗಳ ಪ್ಯಾಂಟ್ ಒದ್ದೆ ಮಾಡಬಹುದಾದಷ್ಟು ಎಂದಿದ್ದರು. ಅಲ್ಲದೇ ತಮ್ಮ ಪಕ್ಷದ ಕಾರ್ಯಕರ್ತರಿಗೂ ಅದೇ ರೀತಿ ಇರಬೇಕು ಎಂದು ಹೇಳಿದ್ದರು. ಇದನ್ನೂ ಓದಿ: 29 ವರ್ಷದ ಬಳಿಕ ಪಾಕಿಸ್ತಾನದ ಜೈಲಿನಿಂದ ತಾಯಿನಾಡಿಗೆ ಕಾಲಿಟ್ಟ ಕುಲದೀಪ್ ಸಿಂಗ್

  • ಕೃಷಿ ಕಾಯ್ದೆಗಳ ವಿರುದ್ಧ ಹೋರಾಡಿದ್ದ ರೈತರು ಪಂಜಾಬ್‌ ಚುನಾವಣೆಯಲ್ಲಿ ಕಣಕ್ಕೆ

    ಕೃಷಿ ಕಾಯ್ದೆಗಳ ವಿರುದ್ಧ ಹೋರಾಡಿದ್ದ ರೈತರು ಪಂಜಾಬ್‌ ಚುನಾವಣೆಯಲ್ಲಿ ಕಣಕ್ಕೆ

    – ಪಂಜಾಬ್‍ನ 177 ಕ್ಷೇತ್ರದಲ್ಲೂ ಸ್ಫರ್ಧೆ
    – 32ರ ಪೈಕಿ 22 ಸಂಘಟನೆಗಳಿಂದ ರಂಗ ಘೋಷಣೆ

    ಚಂಡೀಗಢ: ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ಒಂದು ವರ್ಷಕ್ಕೂ ಅಧಿಕ ಅವಧಿ ಪ್ರತಿಭಟನೆ ನಡೆಸಿ ದೇಶದ ಗಮನ ಸೆಳೆದಿದ್ದ ರೈತ ಸಂಘಟನೆಗಳು ಮುಂಬರುವ ಪಂಜಾಬ್ ವಿಧಾನಸಭೆ ಚುನಾವಣೆ ಅಖಾಡಕ್ಕೆ ಧುಮುಕಲು ನಿರ್ಧರಿಸಿವೆ.

    ಹೋರಾಟದಲ್ಲಿ ಭಾಗಿಯಾಗಿದ್ದ ಪಂಜಾಬ್‍ನ 32 ರೈತ ಸಂಘಟನೆಗಳ ಪೈಕಿ 22 ಸಂಘಟನೆಗಳು ಒಗ್ಗೂಡಿ ಸಂಯುಕ್ತ ಸಮಾಜ್ ಮೋರ್ಜಾ (SSM) ಹೆಸರಿನಲ್ಲಿ 177 ಕ್ಷೇತ್ರಗಳಲ್ಲೂ ಸ್ಪರ್ಧೆ ಮಾಡುವುದಾಗಿ ನಿನ್ನೆ ಘೋಷಿಸಿದೆ. ಇದನ್ನೂ ಓದಿ: ಮತಾಂತರ ನಿಷೇಧ ಸರ್ಕಾರಿ ಪ್ರಾಯೋಜಿತ ಭಯೋತ್ಪಾದನಾ ಮಸೂದೆಯನ್ನು ಹಿಂಪಡೆಯಿರಿ: SDPI

    ಪ್ರತಿಭಟನೆಯಲ್ಲಿ ಮುಂಚೂಣಿಯಲ್ಲಿದ್ದ ರೈತ ನಾಯಕ ಬಲಬೀರ್ ಸಿಂಗ್ ರಾಜೇವಾಲ್ ಅವರು ಎಸ್‍ಎಸ್‍ಎಂ ನಾಯಕತ್ವ ವಹಿಸಿಕೊಳ್ಳಲಿದ್ದಾರೆ. ಅವರನ್ನೇ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಂಬಿಸುವ ಸಾಧ್ಯತೆ ಇದೆ. ಇದನ್ನೂ ಓದಿ: ಜ.3 ರಿಂದ 15 ರಿಂದ 18 ವರ್ಷದ ಮಕ್ಕಳಿಗೆ ಲಸಿಕೆ: ಮೋದಿ

    ನಿನ್ನೆ ಸಂಜೆ ನಡೆದ ಸುದ್ದಿಗೋಷ್ಠಿಯಲ್ಲಿ ಚುನಾವಣಾ ಸ್ಪರ್ಧೆ ಘೋಷಣೆ ಮಾಡಿದ ರೈತ ನಾಯಕ ಬಲದೇವ ಸಿಂಗ್, ಪಂಜಾಬ್‍ಗೆ ನಮ್ಮ ರಂಗ ಹೊಸ ದಿಕ್ಕು ತೋರಿಸಲಿದೆ. ಆದರೆ ನಮ್ಮದು ರಾಜಕೀಯ ಪಕ್ಷವಲ್ಲ. ರಂಗ ( ಮೋರ್ಚಾ) ಮಾತ್ರ ಎಂದು ಸ್ಪಷ್ಟಪಡಿಸಿದ್ದಾರೆ.

    ರಾಜೇವಾಲ್ ಮಾತನಾಡಿ, ರಾಜ್ಯದಲ್ಲಿ ರಾಜಕೀಯ ಬದಲಾವಣೆ ತರಲು ಈ ನಿರ್ಧಾರ ಕೈಗೊಂಡಿದ್ದೇವೆ. 177 ಕ್ಷೇತ್ರಗಳಲ್ಲೂ ಸ್ಪರ್ಧಿಸಲಿದ್ದಾರೆ. ಮೈತ್ರಿ ಮಾಡಿಕೊಳ್ಳುವುದರ ಕುರಿತಾಗಿ ಯಾವುದೇ ತೀರ್ಮಾನಿಸಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಕೃಷಿ ಕಾಯ್ದೆಗಳನ್ನು ಮತ್ತೆ ತರುವುದಿಲ್ಲ: ಕೇಂದ್ರ ಕೃಷಿ ಸಚಿವ ಸ್ಪಷ್ಟನೆ

  • ಮುಂದೆ ಜನರ ಸೇವೆ ಮಾಡ್ತೇನೆ – ರಾಜಕೀಯ ಸೇರುವ ಬಗ್ಗೆ ಭಜ್ಜಿ ಸುಳಿವು

    ಮುಂದೆ ಜನರ ಸೇವೆ ಮಾಡ್ತೇನೆ – ರಾಜಕೀಯ ಸೇರುವ ಬಗ್ಗೆ ಭಜ್ಜಿ ಸುಳಿವು

    ಚಂಡೀಗಢ: ಪಂಜಾಬ್ ವಿಧಾನಸಭಾ ಚುನಾವಣೆಗೆ ಈಗಾಗಲೇ ರಾಜಕೀಯ ಪಕ್ಷಗಳು ಕಸರತ್ತು ನಡೆಸುತ್ತಿತ್ತು. ಘಟಾನುಘಟಿ ನಾಯಕರು ಪಕ್ಷವನ್ನು ತೊರೆದು ಬೇರೆ ಪಕ್ಷವನ್ನು ಸೇರುವುದು ಸಾಮಾನ್ಯವಾಗಿದೆ. ಈ ಮಧ್ಯೆ ಶುಕ್ರವಾರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಹೇಳಿದ ಹರ್ಭಜನ್ ಸಿಂಗ್ ಸಹ ರಾಜಕೀಯ ಸೇರುವ ಒಲವು ವ್ಯಕ್ತಪಡಿಸಿದ್ದಾರೆ.

    ಯಾವ ಪಕ್ಷವನ್ನು ಸೇರುತ್ತೇನೆ ಎಂದು ಅಧಿಕೃತವಾಗಿ ಹೇಳದೇ ಇದ್ದರೂ ರಾಜಕೀಯದ ಮೂಲಕ ಜನರ ಸೇವೆ ಮಾಡಬಹುದು ಎಂದು ತಿಳಿಸಿದ್ದಾರೆ.

    ಹರ್ಭಜನ್ ಸಿಂಗ್ ಅವರು ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಬೆನ್ನಲ್ಲೇ ಅವರು ಪಂಜಾಬ್‌ನಲ್ಲಿ ಕಾಂಗ್ರೆಸ್ ಪಕ್ಷ ಸೇರುತ್ತಾರೆ ಎಂಬ ಉಹಾಪೋಹಗಳು ಎಲ್ಲೆಡೆ ಹರಡಿತ್ತು. ಈ ಕುರಿತು ಹರ್ಭಜನ್ ಸಿಂಗ್ ನನಗೆ ಎಲ್ಲಾ ಪಕ್ಷದ ರಾಜಕಾರಣಿಗಳು ಗೊತ್ತು. ನಾನು ಪಂಜಾಬ್‌ಗೆ, ರಾಜಕೀಯ ಅಥವಾ ಇನ್ನಾವುದೋ ರೀತಿಯಲ್ಲಿ ಸೇವೆ ಸಲ್ಲಿಸುತ್ತೇನೆ. ಆದರೇ ನಾನು ಇನ್ನೂ ಸರಿಯಾದ ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯಕ್ಕೆ ಟೀಂ ಇಂಡಿಯಾ ಸಜ್ಜು – ಡಿ.26ಕ್ಕೆ ಆರಂಭವಾಗುವುದರ ಮಹತ್ವವೇನು?

    ಹರ್ಭಜನ್ ಇತ್ತೀಚೆಗೆ ಪಂಜಾಬ್‌ನ ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ಅವರನ್ನು ಭೇಟಿಯಾದ ನಂತರ ಈ ರೀತಿಯ ಊಹಾಪೋಹಗಳು ಹುಟ್ಟಿಕೊಂಡಿದೆ.

    ಕೆಲ ದಿನಗಳ ಹಿಂದೆ ಬಿಜೆಪಿ ನಾಯಕರು ಭೇಟಿಯಾಗಿ ಪಕ್ಷ ಸೇರುವಂತೆ ಮನವಿ ಮಾಡಿದ್ದರು ಎಂಬ ಸುದ್ದಿಗೆ, ಇದೊಂದು ಸುಳ್ಳು ಸುದ್ದಿ ಎಂದು ಹೇಳಿ ತಳ್ಳಿಹಾಕಿದ್ದಾರೆ.

    ಈ ಕುರಿತು ಪ್ರಮಾಣಿಕವಾಗಿ ಹೇಳುವುದಾದರೆ ನನಗೆ ಏನಾಗಿದೆ ಎಂದು ತಿಳಿದಿಲ್ಲ. ನಾನು ಯಾವ ದಿಕ್ಕಿನಲ್ಲಿ ಹೋಗಲು ಬಯಸುತ್ತೇನೆ ಎಂಬುವುದನ್ನು ತಿಳಿಯಲು ನನಗೆ ಒಂದೆರಡು ದಿನಗಳು ಬೇಕಾಗುತ್ತದೆ. ನಾನು ಒಂದು ವೇಳೆ ರಾಜಕೀಯಕ್ಕೆ ಸೇರಿದರೆ ಯಾವ ರೀತಿಯಲ್ಲಿ ಜನರಿಗೆ ಸಹಾಯ ಮಾಡಬೇಕು ಎಂಬುವುದು ನನ್ನ ಯೋಚನೆಯ ಮುಖ್ಯ ಗುರಿಯಾಗಿದೆ ಹಾಗೂ ಇದರ ಬಗ್ಗೆ ನಾನು ಸರಿಯಾದ ಲೆಕ್ಕಾಚಾರ ಮಾಡಬೇಕಾಗಿದೆ ಎಂದು ಹರ್ಭಜನ್ ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಶ್ರೀಮಂತ ಬೇಡ, ಕಷ್ಟದಲ್ಲಿರುವವನ ಜೊತೆ ಡೇಟಿಂಗ್ ಮಾಡಲು ಇಷ್ಟ: ಹರ್ನಾಜ್ ಸಂಧು

  • ಲುಧಿಯಾನ ಕೋರ್ಟ್ ಸ್ಫೋಟ – ಡ್ರಗ್ ಕೇಸ್‌ನಲ್ಲಿ ವಜಾಗೊಂಡಿದ್ದ ಪೊಲೀಸ್ ಅಧಿಕಾರಿಯೇ ಬಾಂಬರ್

    ಚಂಡೀಗಢ: ಲುಧಿಯಾನ ಕೋರ್ಟ್ನಲ್ಲಿ ಈಚೆಗೆ ಸಂಭವಿಸಿದ ಸ್ಫೋಟದಲ್ಲಿ ಬಾಂಬ್ ಇಟ್ಟಿದ್ದ ಆರೋಪಿ ಒಬ್ಬ ಮಾಜಿ ಪೊಲೀಸ್ ಅಧಿಕಾರಿ ಎಂಬುದು ತನಿಖೆಯಿಂದ ತಿಳಿದುಬಂದಿದೆ.

    ಡಿಸೆಂಬರ್ 23 ಗುರುವಾರ ಲುಧಿಯಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ಶೌಚಾಲಯದಲ್ಲಿ ಸ್ಫೋಟ ಸಂಭವಿಸಿತ್ತು. ಘಟನೆಯಲ್ಲಿ ಬಾಂಬ್ ಇಟ್ಟಿದ್ದ ವ್ಯಕ್ತಿಯೇ ಮೃತಪಟ್ಟಿದ್ದು, ಐವರು ಗಾಯಗೊಂಡಿದ್ದರು.

    ಸ್ಫೋಟದಲ್ಲಿ ಮೃತನಾಗಿದ್ದ ವ್ಯಕ್ತಿ ಮಾಜಿ ಪೊಲೀಸ್ ಅಧಿಕಾರಿ ಗಗನ್‌ದೀಪ್ ಎಂದು ಗುರುತಿಸಲಾಗಿದೆ. ಈತ 2019ರಲ್ಲಿ ಡ್ರಗ್ಸ್ ಕೇಸ್‌ನಲ್ಲಿ ಅಧಿಕಾರದಿಂದ ವಜಾಗೊಂಡಿದ್ದ. ಇದನ್ನೂ ಓದಿ: ಪಂಜಾಬ್‍ನ ಲೂಧಿಯಾನ ನ್ಯಾಯಾಲಯದಲ್ಲಿ ಸ್ಫೋಟ – 2 ಸಾವು, 4 ಮಂದಿಗೆ ಗಾಯ

    Ludhiana

    ಗಗನ್‌ದೀಪ್ ನ್ಯಾಯಾಲಯದ ಆವರಣದಲ್ಲಿ ಸ್ಫೋಟಕ ಇಟ್ಟಿದ್ದ. ಈ ಘಟನೆಯ ಹಿಂದೆ ಪಾಕಿಸ್ತಾನ ಬೆಂಬಲಿತ ಖಲಿಸ್ತಾನ್ ಪರ ಸಂಘಟನೆಯ ಬಬ್ಬರ್ ಖಲ್ಸಾ ಕೈವಾಡವಿದೆ ಎಂದು ಪೊಲೀಸ್ ಮೂಲಗಳು ಶಂಕೆ ವ್ಯಕ್ತಪಡಿಸಿವೆ.

    ಗಗನ್‌ದೀಪ್, ಡಾಂಗಲ್ ಮೂಲಕ ಮೊಬೈಲಿನಲ್ಲಿ ಇಂಟರ್‌ನೆಟ್ ಬಳಸುತ್ತಿದ್ದ. ಆತನಿಗೆ ಬಾಂಬ್ ಸಕ್ರಿಯಗೊಳಿಸುವ ಬಗ್ಗೆ ಆನ್‌ಲೈನ್‌ನಲ್ಲಿ ಯಾರೋ ಮಾಹಿತಿ ನೀಡುತ್ತಿದ್ದರು. ಈ ವೇಳೆ ಸ್ಫೋಟ ಸಂಭವಿಸಿದ್ದು, ಮೊಬೈಲ್ ಅದರೊಂದಿಗೆ ಪುಡಿಯಾಗಿದೆ ಎಂದು ಪಂಜಾಬ್ ಪೊಲೀಸರು ಶಂಕಿಸಿದ್ದಾರೆ. ಇದನ್ನೂ ಓದಿ: ಪೊಲೀಸ್ ಅಧಿಕಾರಿ, ನಾಗರಿಕ ಹತ್ಯೆ ಪ್ರಕರಣ- ಭದ್ರತಾ ಪಡೆ ಕಾರ್ಯಾಚರಣೆಯಲ್ಲಿ 2 ಉಗ್ರರ ಹತ್ಯೆ, ಇನ್ನಿಬ್ಬರ ಬಂಧನ

    ಇಂಟರ್‌ನೆಟ್ ಪಡೆಯುತ್ತಿದ್ದ ಡಾಂಗಲ್‌ನ ಸಿಮ್ ಆಧಾರದ ಮೇಲೆ ಗಗನ್‌ದೀಪ್‌ನನ್ನು ಗುರುತಿಸಲಾಗಿದೆ. ನಂತರ ಆತನ ತೋಳಿನಲ್ಲಿದ್ದ ಹಚ್ಚೆ ನೋಡಿದ ಕುಟುಂಬದವರು ಮೃತದೇಹವನ್ನು ಗುರುತಿಸಿದ್ದಾರೆ.

    ಸ್ಫೋಟಕದಲ್ಲಿ ಕನಿಷ್ಟ 2 ಕೆಜಿ ಆರ್‌ಡಿಎಕ್ಸ್ ಬಳಸಲಾಗಿದೆ ಎಂದು ವಿಧಿವಿಜ್ಞಾನ ವರದಿ ಬಹಿರಂಗ ಪಡಿಸಿದೆ. ಸ್ಫೋಟದ ಸಮಯದಲ್ಲಿ ನೀರಿನ ಪೈಪ್ ಒಡೆದು ಹೋಗಿದ್ದರಿಂದ ಸ್ಫೋಟಕಗಳು ಕೊಚ್ಚಿ ಹೋಗಿವೆ.