Tag: punjab

  • ಕೇವಲ 1 ರೂ. ಸಂಬಳ ತೆಗೆದುಕೊಳ್ಳುತ್ತೇನೆ: ಪಂಜಾಬ್‌ನ ಹೊಸ ಅಡ್ವೊಕೇಟ್ ಜನರಲ್

    ಕೇವಲ 1 ರೂ. ಸಂಬಳ ತೆಗೆದುಕೊಳ್ಳುತ್ತೇನೆ: ಪಂಜಾಬ್‌ನ ಹೊಸ ಅಡ್ವೊಕೇಟ್ ಜನರಲ್

    ಚಂಡೀಗಢ: ಪಂಜಾಬ್‌ನ ನೂತನ ಅಡ್ವೋಕೇಟ್ ಜನರಲ್ ಅನ್ಮೋಲ್ ರತ್ತನ್ ಸಿಧು ಸಂದರ್ಶನವೊಂದರಲ್ಲಿ, ನನ್ನ ಕೆಲಸಕ್ಕೆ ಕೇವಲ 1 ರೂ. ಸಂಬಳವನ್ನು ತೆಗೆದುಕೊಳ್ಳುತ್ತೇನೆ ಎಂದು ಹೇಳಿಕೆ ನೀಡಿದ್ದಾರೆ.

    ಸರ್ಕಾರದೊಂದಿಗೆ ಒಟ್ಟಾಗಿ ಕೆಲಸ ಮಾಡುವಾಗ ಸಂಪೂರ್ಣ ಪಾರದರ್ಶಕತೆಯೊಂದಿಗೆ ಕೆಲಸವನ್ನು ನಿರ್ವಹಿಸುವುದರೊಂದಿಗೆ ರಾಜ್ಯದ ವೆಚ್ಚಗಳಿಗೆ ಹೊರೆಯಾಗುವುದಿಲ್ಲ. ಇದಕ್ಕಾಗಿ ಕಾನೂನು ವೇತನವಾಗಿ ಕೇವಲ 1 ರೂ. ತೆಗೆದುಕೊಳ್ಳುತ್ತೇನೆ ಎಂದು ಹೇಳಿದ್ದಾರೆ.

    ರೈತ ಕುಟುಂಬದಲ್ಲಿ ಜನಿಸಿದ ಅನ್ಮೋಲ್ ರತ್ತನ್ ಸಿಧು ಹಳ್ಳಿಯ ಸರ್ಕಾರಿ ಶಾಲೆಗಳಲ್ಲಿ ಓದಿದವರು. ಬಳಿಕ ಚಂಡೀಗಢಕ್ಕೆ ಸ್ಥಳಾಂತರಗೊಂಡು ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಕಾನೂನು ವ್ಯಾಸಂಗ ಪೂರೈಸಿದರು. ಕಾಲೇಜು ಜೀವನದಲ್ಲಿ ಒಬ್ಬ ಕ್ರಿಯಾಶೀಲ, ಸಾಮಾಜಿಕ, ರಾಜಕೀಯ ವಿದ್ಯಾರ್ಥಿಯಾಗಿ ಉಳಿದಿದ್ದ ಸಿಧು ಪಂಜಾಬ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ಪರಿಷತ್ತಿನ ಅಧ್ಯಕ್ಷ ಹುದ್ದೆಯನ್ನು ಅಲಂಕರಿಸಿದ್ದರು. ಇದನ್ನೂ ಓದಿ: ಕುಶಾಲನಗರ-ಸಂಪಾಜೆ ಚತುಷ್ಪಥ ರಸ್ತೆ ನಿರ್ಮಾಣ ಇಲ್ಲ: ಪ್ರತಾಪ್ ಸಿಂಹ ಸ್ಪಷ್ಟನೆ

    1985ರಲ್ಲಿ ವಕೀಲ ವೃತ್ತಿಯನ್ನು ಪ್ರವೇಶಿಸಿ, 1993ರಲ್ಲಿ ಪಂಜಾಬ್‌ನ ಡೆಪ್ಯುಟಿ ಅಡ್ವೊಕೇಟ್ ಜನರಲ್ ಆಗಿ ಸೇರಿಕೊಂಡರು. 2007ರಲ್ಲಿ ಹಿರಿಯ ವಕೀಲರಾಗಿ ನೇಮಕಗೊಂಡ ಸಿಧು ಬಳಿಕ 2014ರ ವರೆಗೆ ಭಾರತದ ಸಹಾಯಕ ಸಾಲಿಸಿಟರ್ ಜನರಲ್ ಆಗಿ ಸೇವೆ ಸಲ್ಲಿಸಿದರು. ಇದನ್ನೂ ಓದಿ: ಪಠ್ಯಪುಸ್ತಕದಲ್ಲಿ ಪುನೀತ್ ಜೀವನ ಕಥನ

    ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ನಲ್ಲಿ ಸಿಬಿಐಗೆ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿಯೂ ಇದ್ದ ಸಿಧು, ಎಂಟು ಬಾರಿ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಬಾರ್ ಅಸೋಸಿಯೇಷನ್‌ನ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಭಾರತದ ಯಾವುದೇ ಹೈಕೋರ್ಟ್ನಲ್ಲಿ ಇಲ್ಲಿಯವರೆಗೆ ಇಷ್ಟೊಂದು ಬಾರಿ ಆಯ್ಕೆಯಾದವರೇ ಇಲ್ಲ.

    ಇದೀಗ ಪಂಜಾಬ್‌ನ ನೂತನ ಅಡ್ವೋಕೇಟ್ ಜನರಲ್ ಆಗಿ ಅನ್ಮೋಲ್ ರತ್ತನ್ ಸಿಧು ಶನಿವಾರ ಅಧಿಕಾರ ವಹಿಸಿಕೊಂಡಿದ್ದಾರೆ.

  • ಪಂಜಾಬ್‌ನಲ್ಲಿ  ಆಪ್ ಸರ್ಕಾರ ಸಂಪುಟ ರಚನೆ – 10 ಮಂದಿ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ

    ಪಂಜಾಬ್‌ನಲ್ಲಿ ಆಪ್ ಸರ್ಕಾರ ಸಂಪುಟ ರಚನೆ – 10 ಮಂದಿ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ

    ಚಂಡಿಗಢ: ಪಂಜಾಬ್ ಮುಖ್ಯಮಂತ್ರಿಯಾಗಿ ಭಗವಂತ್ ಮಾನ್ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಅವರ ಕ್ಯಾಬಿನೆಟ್ ಕೂಡಾ ರಚನೆಯಾಗಿದ್ದು, ಇಂದು ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ 10 ಮಂದಿ ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

    ದಿರ್ಬಾದಿಂದ ಎರಡನೇ ಬಾರಿಗೆ ಶಾಸಕರಾಗಿರುವ ವಿರೋಧ ಪಕ್ಷದ ಮಾಜಿ ನಾಯಕ ಹರ್ಪಾಲ್ ಸಿಂಗ್ ಚೀಮಾ ಪ್ರಮಾಣ ವಚನ ಸ್ವೀಕರಿಸುವುದರೊಂದಿಗೆ ಸಮಾರಂಭ ಪ್ರಾರಂಭವಾಯಿತು. ಬರ್ನಾಲಾದಿಂದ ಎರಡನೇ ಬಾರಿಗೆ ಗೆದ್ದ ಗುರ್ಮೀತ್ ಸಿಂಗ್ ಮೀತ್ ಹಯರ್ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು‌. ಇದನ್ನೂ ಓದಿ: ಸೋಮವಾರ ಬೆಳಗ್ಗೆ 9.30ಕ್ಕೆ ಮೃತದೇಹ ಮನೆಗೆ ಬರಲಿದೆ: ನವೀನ್ ತಂದೆ

    ಮಾಲೌಟ್‌ನಿಂದ ಆಯ್ಕೆಯಾಗಿದ್ದ ಡಾ ಬಲ್ಜಿತ್ ಕೌರ್, ಜಂಡಿಯಾಲಾದ ಶಾಸಕ ಹರ್ಭಜನ್ ಸಿಂಗ್ ಇಟಿಒ, ಮಾನ್ಸಾದಿಂದ ಚುನಾಯಿತರಾದ ಡಾ ವಿಜಯ್ ಸಿಂಗ್ಲಾ, ಭೋವಾದಿಂದ ಆಯ್ಕೆಯಾದ ಲಾಲ್ ಚಂದ್ ಕಟಾರು ಚಾಕ್, ಅಜ್ನಾಲಾ ಶಾಸಕ ಕುಲದೀಪ್ ಸಿಂಗ್ ಧಲಿವಾಲ್, ಪಟ್ಟಿ ಶಾಸಕ ಲಾಲ್ಜಿತ್ ಸಿಂಗ್ ಭುಲ್ಲಾರ್, ಬ್ರಾಮ್ ಶಂಕರ್ (ಜಿಂಪಾ), ಆನಂದಪುರ ಸಾಹಿಬ್‌ ಶಾಸಕ ಹೊಶಿಯಾರ್‌ಪುರ್ ಮತ್ತು ಹರ್ಜೋತ್ ಸಿಂಗ್ ಬೈನ್ಸ್ ಮೊದಲ ಬಾರಿ ಆಯ್ಕೆಯಾಗಿ ಸಚಿವರಾದ ಶಾಸಕರಾಗಿದ್ದಾರೆ. ಇದನ್ನೂ ಓದಿ: ಚೀನಾದಲ್ಲಿ 1ವರ್ಷದ ಬಳಿಕ ಒಂದೇ ದಿನ ಇಬ್ಬರು ಸೋಂಕಿಗೆ ಬಲಿ

    ಮಹಿಳೆ ಸೇರಿದಂತೆ ನಾಲ್ವರು ಜಾಟ್, ನಾಲ್ವರು ಎಸ್ಸಿಗಳು ಮತ್ತು ಇಬ್ಬರು ಹಿಂದೂಗಳು ಕ್ಯಾಬಿನೆಟ್ ನಲ್ಲಿ‌ ಒಳಗೊಂಡಿದ್ದಾರೆ. ಎಲ್ಲ ಶಾಸಕರಿಗೆ ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ಪ್ರಮಾಣ ವಚನ ಬೋಧಿಸಿದರು. ಇದನ್ನೂ ಓದಿ: ಬಾಂಗ್ಲಾದಲ್ಲಿ ಹಿಂದೂ ದೇಗುಲದ ಮೇಲೆ ದಾಳಿ

  • ಪರೀಕ್ಷಾ ಸಮಯದಲ್ಲೇ ಉಪಚುನಾವಣೆ ಯಾಕೆ – ಆಯೋಗದ ವಿರುದ್ಧ ಮಮತಾ ಕಿಡಿ

    ಪರೀಕ್ಷಾ ಸಮಯದಲ್ಲೇ ಉಪಚುನಾವಣೆ ಯಾಕೆ – ಆಯೋಗದ ವಿರುದ್ಧ ಮಮತಾ ಕಿಡಿ

    ಕೊಲ್ಕತ್ತಾ: ಪಂಚರಾಜ್ಯ ಚುನಾವಣೆಯಲ್ಲಿ ನಾಲ್ಕು ರಾಜ್ಯಗಳಲ್ಲಿ ಗೆಲುವು ಸಾಧಿಸಿರುವ ಬಿಜೆಪಿ ವಿರುದ್ಧ ಸತತವಾಗಿ ವಾಗ್ದಾಳಿ ನಡೆಸುತ್ತಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇದೀಗ ಚುನಾವಣಾ ಆಯೋಗವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

    ಪಶ್ಚಿಮ ಬಂಗಾಳದ 12ನೇ ತರಗತಿಯ ಬೋರ್ಡ್ ಪರೀಕ್ಷೆಗಳ ಸಮಯದಲ್ಲಿ ಅಸನ್ಸೋಲ್ ಲೋಕಸಭಾ ಕ್ಷೇತ್ರ ಹಾಗೂ ಬ್ಯಾಲಿಗುಂಗೆ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ನಿಗದಿಪಡಿಸಿರುವುದಕ್ಕಾಗಿ ಚುನಾವಣಾ ಆಯೋಗವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಕಾರಣದಿಂದಾಗಿ ಪರೀಕ್ಷೆಗಳನ್ನು ಮರುಹೊಂದಿಸಬೇಕಾಗಿದೆ ಎಂದು ಅವರು ಆಗ್ರಹಿಸಿದ್ದಾರೆ.

    ಚುನಾವಣಾ ಆಯೋಗವು ಬಿಜೆಪಿಯ ಆಜ್ಞೆಯಂತೆ ಕೆಲಸ ನಿರ್ವಹಿಸುತ್ತಿದೆ. ಹಾಗಾಗಿಯೇ ಅದು ಉಪಚುನಾವಣೆಯ ದಿನಾಂಕವನ್ನು ನಿಗದಿಪಡಿಸುವಾಗ ರಾಜ್ಯದ ಬೋರ್ಡ್ ಪರೀಕ್ಷೆಗಳನ್ನು ಪರಿಗಣಿಸಿಲ್ಲ. ಏ.2 ಮತ್ತು ಏ.26ರ ನಡುವೆ ನಡೆಯಬೇಕಿದ್ದ  12ನೇ ತರಗತಿಯ ಬೋರ್ಡ್ ಪರೀಕ್ಷೆಗಳು ನಡೆಯಲಿದ್ದು, ಏ.27ರಂದು ಪರೀಕ್ಷೆ ಕೊನೆಗೊಳ್ಳಲಿದೆ. ಈ ನಡುವೆ ಚುನಾವಣಾ ದಿನಾಂಕವನ್ನು ನಿಗದಿ ಮಾಡಿರುವುದು ಆಕ್ಷೇಪಾರ್ಹ ಎಂದು ಹೇಳಿದ್ದಾರೆ. ಇದನ್ನೂ ಓದಿ: ರೊಲ್ಸ್ ರಾಯಲ್ಸ್‌ಗಾಗಿ ಮತ್ತೊಂದು ವಿವಾದಕ್ಕೆ ಸಿಲುಕಿದ ವಿಜಯ್ ದಳಪತಿ

    ಇದಕ್ಕೆ ಪ್ರತಿಕ್ರಿಯಿಸಿರುವ ಚುನಾವಣಾ ಆಯೋಗವು, ಏ.12ರಂದು ಉಪಚುನಾವಣೆ ನಡೆಯುವ ಕಾರಣ ಏ.6ರಿಂದ 15ರ ವರೆಗೆ ಯಾವುದೇ ಪರೀಕ್ಷೆಗಳು ಇರುವುದಿಲ್ಲ. ಏ.16ರಂದು ಮತ ಏಣಿಕೆ ಕಾರ್ಯ ನಡೆಯಲಿದ್ದು, ಮೊದಲ ಭಾಷೆ ಏಪ್ರಿಲ್ 2 ರಂದು ಮತ್ತು 2ನೇ ಭಾಷೆ ಏಪ್ರಿಲ್ 4 ರಂದು ನಡೆಯಲಿದೆ. ಅಲ್ಲದೆ, ಉನ್ನತ ಶಿಕ್ಷಣದ ವೃತ್ತಿಪರ ಪರೀಕ್ಷೆಗಳು ಏಪ್ರಿಲ್ 5 ರಂದು ನಡೆಯಲಿದೆ. ಹಾಗಾಗಿ ಯಾವುದೇ ತೊಂದರೆಯಾಗುವುದಿಲ್ಲ ಎಂದು ಹೇಳಿದೆ.

    ಚುನಾವಣಾ ಆಯೋಗವು ಬಿಜೆಪಿಯ ಆಜ್ಞೆಯಂತೆ ಕೆಲಸ ಮಾಡುತ್ತಿಲ್ಲ. ಆದರೆ, ಯಾವುದೇ ಸ್ಥಾನಕ್ಕೆ ತೆರವಾದ 6 ತಿಂಗಳಲ್ಲಿ ಉಪಚುನಾವಣೆ ನಡೆಸಬೇಕಿರುವುದರಿಂದ ದಿನಾಂಕವನ್ನು ನಿಗದಿ ಮಾಡಲಾಗಿದೆ. ಕೇಂದ್ರ ಪಡೆಗಳು ಶೀಘ್ರದಲ್ಲೇ ಕೆಲಸ ಪ್ರಾರಂಭಿಸಲಿದ್ದು, ಅವರು ಶಾಲೆಗಳಲ್ಲಿ ಸ್ಥಾಪಿಸುವ ಮತಗಟ್ಟೆಗಳಲ್ಲೇ ಉಳಿಯಲಿದ್ದಾರೆ. ಈ ವೇಳೆ ಶಾಲೆಗಳಿಗೆ ಅಳವಡಿಸಲಾಗುವ ಸುರಕ್ಷಸತಾ ಸೌಲಭ್ಯವನ್ನು ಬೋರ್ಡ್ ಪರೀಕ್ಷೆಗೂ ಬಳಸಲಾಗುವುದು ಎಂದಿದ್ದಾರೆ.

    ಆದರೂ ಚುನಾವಣೆಯಿಂದ ವಿದ್ಯಾರ್ಥಿಗಳ ಪರೀಕ್ಷೆಗಳಿಗೆ ತೊಂದರೆಯಾಗಲಿದೆ ಎಂದು ಮಮತಾ ಬ್ಯಾನರ್ಜಿ ತಮ್ಮ ವಾದ ಮುಂದುವರಿಸಿದ್ದಾರೆ. ಪಂಜಾಬ್, ಉತ್ತರ ಪ್ರದೇಶ, ಗೋವಾ, ಮಣಿಪುರ ಮತ್ತು ಉತ್ತರಾಖಂಡದಲ್ಲಿ ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಗಳ ಜೊತೆಗೆ ಈ ಎರಡೂ ಕ್ಷೇತ್ರಗಳಿಗೂ ಚುನಾವಣೆ ನಡೆಸಬಹುದಿತ್ತು. ಆಗಲೇ ಚುನಾವಣೆ ನಡೆಸಿದ್ದರೆ ವಿದ್ಯಾರ್ಥಿಗಳು ಈ ಸಮಸ್ಯೆ ಎದುರಿಸಬೇಕಾಗುತ್ತಿರಲಿಲ್ಲ. ಹಾಗಾಗಿ ಮುಖ್ಯಕಾರ್ಯದರ್ಶಿಗಳು ಹಾಗೂ ಚುನಾವಣಾ ಆಯೋಗವು ಪರೀಕ್ಷೆಯನ್ನು ಗಮನದಲ್ಲಿಟ್ಟುಕೊಂಡು ಉಪಚುನಾವಣೆಯ ದಿನಾಂಕವನ್ನು ನಿಗದಿ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ರಾಯಚೂರಿನಲ್ಲಿ ಮದ್ಯ ಮಾರಾಟ ನಿಷೇಧ

    ಈ ನಡುವೆ ಪಶ್ಚಿಮ ಬಂಗಾಳ ಕೌನ್ಸಿಲ್ ಫಾರ್ ಹೈಯರ್ ಸೆಕೆಂಡರಿ ಎಜುಕೇಶನ್ ಸಂಸ್ಥೆಯು ತನ್ನ 12ನೇ ತರಗತಿಯ ಕೆಲವು ಪರೀಕ್ಷಾ ದಿನಾಂಕಗಳನ್ನು ಜೆಇಇ ಸಂಸ್ಥೆಯೊಂದಿಗೆ ಹೊಂದಿಕೆಯಾಗುವಂತೆ ಪರಿಷ್ಕರಿಸಿದೆ.

  • ಆಪ್‍ನಿಂದ `ಮಾಫಿಯಾ ಮುಕ್ತವಾಗಲಿದೆ ಪಂಜಾಬ್’: ಕಾಂಗ್ರೆಸ್ ಮುಖಭಂಗಕ್ಕೆ ಕಾರಣವಾಯ್ತು ಸಿಧು ಹೇಳಿಕೆ

    ಆಪ್‍ನಿಂದ `ಮಾಫಿಯಾ ಮುಕ್ತವಾಗಲಿದೆ ಪಂಜಾಬ್’: ಕಾಂಗ್ರೆಸ್ ಮುಖಭಂಗಕ್ಕೆ ಕಾರಣವಾಯ್ತು ಸಿಧು ಹೇಳಿಕೆ

    ನವದೆಹಲಿ: ಪಂಜಾಬ್‍ನಲ್ಲಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವ ನವಜೋತ್ ಸಿಂಗ್ ಸಿಧು ಅವರು ಆಮ್ ಆದ್ಮಿ ಪಕ್ಷವನ್ನು ಹಾಡಿ ಹೊಗಳಿದ್ದಾರೆ. ಪಂಜಾಬ್ ನೂತನ ಮುಖ್ಯಮಂತ್ರಿಯಾಗಿ ಬುಧವಾರ ಪ್ರಮಾಣ ವಚನ ಸ್ವೀಕರಿಸಿದ ಭಗವಂತ್ ಮಾನ್‍ಗೆ ಟ್ವೀಟ್ ಮಾಡಿ ಶುಭ ಕೋರಿದ್ದಾರೆ.

    ಮಾನ್ ಅವರು `ಮಾಫಿಯಾ ಮುಕ್ತ ಯುಗ ಆರಂಭಿಸಿದ್ದಾರೆ’ ಎಂಬ ಹೇಳಿಕೆ ನೀಡಿರುವುದು ಮತ್ತೊಮ್ಮೆ ಕಾಂಗ್ರೆಸ್ ಮುಖಭಂಗಕ್ಕೆ ಕಾರಣವಾಗಿದೆ. ತನ್ನ ಪಕ್ಷದ ಸೋಲಿನ ನಂತರ, ಆಪ್ ಅನ್ನು ಆಯ್ಕೆ ಮಾಡುವ ಅತ್ಯುತ್ತಮ ನಿರ್ಧಾರ ತೆಗೆದುಕೊಂಡಿದ್ದಕ್ಕಾಗಿ ಪಂಜಾಬ್‍ನ ಜನರನ್ನು ಅಭಿನಂದಿಸುತ್ತೇನೆ ಎಂದೂ ಅವರು ಶ್ಲಾಘಿಸಿದ್ದಾರೆ. ಭಗವಂತ್ ಮಾನ್ ಪಂಜಾಬ್‍ನ್ನು ಮಾಫಿಯಾ ಮುಕ್ತ ಮಾಡುತ್ತಾರೆ ಎಂಬ ನಿರೀಕ್ಷೆಯಿದೆ. ಜೊತೆಗೆ ಪಂಜಾಬ್ ಅನ್ನು ಪುನರುಜ್ಜೀವನ ಹಾದಿಯಲ್ಲಿ ಮುನ್ನಡೆಸಲಿದ್ದು, ಜನರ ನಿರ್ಧಾರ ಯಾವಾಗಲೂ ಉತ್ತಮವಾಗಿಯೇ ಇರುತ್ತದೆ ಎಂದು ಅವರು ಟ್ವೀಟ್‍ನಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಉಕ್ರೇನ್‌ ಮೇಯರ್‌ ಕಿಡ್ನಾಪ್ ಮಾಡಿದ ರಷ್ಯಾ ಸೇನೆ

    ಪಂಜಾಬ್‍ನಲ್ಲಿ ತಮ್ಮದೇ ಸರ್ಕಾರ ಇದ್ದರೂ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲು ಕಂಡಿತು. 2017ರ ಚುನಾವಣೆಯಲ್ಲಿ ರಾಜ್ಯದಲ್ಲಿ ಎರಡನೇ ಸ್ಥಾನದಲ್ಲಿದ್ದ ಎಎಪಿಗೆ ಕಾಂಗ್ರೆಸ್ ನಾಯಕರ ಒಳಜಗಳ, ಕಾಂಗ್ರೆಸ್ ಮೇಲಿನ ಜನರ ನಿರಾಸಕ್ತಿ, ದೆಹಲಿ ಮಾದರಿಯೆಡೆಗೆ ಜನರ ಆಕರ್ಷಣೆ ಮೊದಲಾದ ವಿಚಾರಗಳು ವರದಾನವಾಗಿ ಪರಿಣಮಿಸಿತು. ಇದನ್ನೂ ಓದಿ: ರಷ್ಯಾದ ಪಡೆಯಿಂದ ಕಿಡ್ನಾಪ್ ಆಗಿದ್ದ ಉಕ್ರೇನ್‍ ಮೇಯರ್ ಬಿಡುಗಡೆ

    ಸಿಧು ಅವರು ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರೊಂದಿಗೆ ಮುಖಾಮುಖಿಯಾಗಿದ್ದರು. ಅವರು ಡ್ರಗ್ ಮಾಫಿಯಾವನ್ನು ರಕ್ಷಿಸುತ್ತಿದ್ದಾರೆ. ಸೂಕ್ಷ್ಮವಾದ ಪ್ರಕರಣದಲ್ಲಿ ಆರೋಪಿತರಾದ ರಾಜಕೀಯ ಪ್ರತಿಸ್ಪರ್ಧಿಗಳ ಬಗ್ಗೆ ಮೃದು ಸ್ವಭಾವದಿಂದ ವರ್ತಿಸುತ್ತಿದ್ದು, ಕ್ರಮ ಕೈಗೊಳ್ಳುವಲ್ಲಿಯೂ ಹಿಂದೇಟು ಹಾಕುತ್ತಿದ್ದಾರೆ ಎಂದು ಕ್ಯಾಪ್ಟನ್ ವಿರುದ್ಧ ಆರೋಪಿಸಿದ್ದರು. ಈ ಒಳಜಗಳ ಅಮರೀಂದರ್ ರಾಜೀನಾಮೆಗೆ ಕಾರಣವಾಯಿತು. ನಂತರ ಕ್ಯಾಪ್ಟನ್ ಕಾಂಗ್ರೆಸ್ ತೊರೆದು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡರು. ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳ ಮುಂಚಿತವಾಗಿ ಚರಣ್‍ಜಿತ್ ಸಿಂಗ್ ಚನ್ನಿ ಅವರನ್ನು ಮುಖ್ಯಮಂತ್ರಿ ಮಾಡಲಾಯಿತು. ಅಮರೀಂದರ್ ಸಿಂಗ್ ಅವರ ಪದಚ್ಯುತಿಯ ನಂತರ ಮುಖ್ಯಮಂತ್ರಿ ಸ್ಥಾನ ಗಳಿಸುವಲ್ಲಿಯೂ ವಿಫಲರಾಗಿದ್ದ ಸಿಧು ಅವರು ತಮ್ಮದೇ ಪಕ್ಷದ ಮುಖ್ಯಮಂತ್ರಿಗಳ ವಿರುದ್ಧ ವಾಗ್ದಾಳಿ ಪ್ರಾರಂಭಿಸಿದ್ದರು.

    ಪಕ್ಷದ ಸೋಲಿನ ನಂತರ ಮಾಧ್ಯಮಗಳೊಂದಿಗೆ ನಡೆಸಿದ ಮೊದಲ ಸಂವಾದದಲ್ಲಿ, `ಆಮ್ ಆದ್ಮಿ ಪಕ್ಷವನ್ನು ಅಧಿಕಾರಕ್ಕೆ ತರುವ ಮೂಲಕ ಜನರು ಬದಲಾವಣೆ ಬಯಸಿದ್ದಾರೆ. ಅವರ ನಿರ್ಧಾರವನ್ನು ಸ್ವಾಗತಿಸುತ್ತೇನೆ. ಜನರ ನಿರ್ಧಾರ ದೇವರ ನಿರ್ಧಾರ. ಅದನ್ನು ವಿನಯದಿಂದ ಸ್ವಾಗತಿಸುತ್ತೇನೆ ಎಂದು ಸಿಧು ಹೇಳಿದ್ದರು.

    ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಪ್ರತಿಸ್ಪರ್ಧಿಯಾಗಿದ್ದ ಕಾಂಗ್ರೆಸ್ ಪಕ್ಷ ಎಎಪಿ ವಿರುದ್ಧ ಹೀನಾಯ ಸೋಲನುಭವಿಸಿತು. 117 ಕ್ಷೇತ್ರಗಳಲ್ಲಿ 98 ಸ್ಥಾನಗಳನ್ನು ಆಪ್ ಗೆದ್ದಿದ್ದು, ಕಾಂಗ್ರೆಸ್‍ಗೆ ತೀವ್ರ ಮುಖಭಂಗವಾಯಿತು.

  • ಚನ್ನಿ ಪ್ರಮಾಣ ವಚನ ಸಮಾರಂಭಕ್ಕೆ ನನ್ನನ್ನು ಆಹ್ವಾನಿಸಿರಲಿಲ್ಲ: ಎಎಪಿಗೆ ಧನ್ಯವಾದ ತಿಳಿಸಿದ ಮನಿಶ್‌ ತಿವಾರಿ

    ಚನ್ನಿ ಪ್ರಮಾಣ ವಚನ ಸಮಾರಂಭಕ್ಕೆ ನನ್ನನ್ನು ಆಹ್ವಾನಿಸಿರಲಿಲ್ಲ: ಎಎಪಿಗೆ ಧನ್ಯವಾದ ತಿಳಿಸಿದ ಮನಿಶ್‌ ತಿವಾರಿ

    ಚಂಡೀಗಢ: ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಆಹ್ವಾನಿಸಿದ್ದಕ್ಕೆ ಪಂಜಾಬ್‌ ನೂತನ ಮುಖ್ಯಮಂತ್ರಿ ಭಗವಂತ್‌ ಮಾನ್‌ ಅವರಿಗೆ ಕಾಂಗ್ರೆಸ್‌ ಸಂಸದ ಮನಿಶ್‌ ತಿವಾರಿ ಧನ್ಯವಾದ ತಿಳಿಸಿದ್ದಾರೆ. ಇದೇ ವೇಳೆ ಅಚ್ಚರಿದಾಯಕ ವಿಚಾರವೊಂದನ್ನು ಹಂಚಿಕೊಂಡಿದ್ದಾರೆ.

    ಕಳೆದ ವರ್ಷ ಸೆಪ್ಟೆಂಬರ್‌ ತಿಂಗಳಲ್ಲಿ ತಮ್ಮ ಪಕ್ಷದವರೇ ಆದ ಚರಣ್‌ಜಿತ್‌ ಸಿಂಗ್‌ ಅವರು ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ನನ್ನನ್ನು ಆಹ್ವಾನಿಸಿರಲಿಲ್ಲ ಎಂದು ಇದೇ ವೇಳೆ ನೆನಪಿಸಿಕೊಂಡಿದ್ದಾರೆ. ಇದನ್ನೂ ಓದಿ: ಉಡ್ತಾ ಪಂಜಾಬ್‌ ಅಲ್ಲ, ಪ್ರಗತಿಪರ ಪಂಜಾಬ್‌: ಭಗವಂತ್‌ ಮಾನ್‌

    ಈ ಕುರಿತು ಟ್ವೀಟ್‌ ಮಾಡಿರುವ ತಿವಾರಿ, ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಭಗವಂತ್ ಮಾನ್ ಅವರನ್ನು ನಾನು ಅಭಿನಂದಿಸುತ್ತೇನೆ. ಅವರ ಪ್ರಮಾಣ ವಚನಕ್ಕೆ ನನ್ನನ್ನು ಆಹ್ವಾನಿಸಿದ್ದಕ್ಕಾಗಿ ಧನ್ಯವಾದ ಅರ್ಪಿಸುತ್ತೇನೆ. ಚರಣ್‌ಜಿತ್‌ ಸಿಂಗ್‌ ಚನ್ನಿ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ನನ್ನನ್ನು ಆಹ್ವಾನಿಸದಿರುವುದು ವಿಪರ್ಯಾಸ ಎಂದು ತಿಳಿಸಿದ್ದಾರೆ. ಇದೇ ವೇಳೆ ಸಮಾರಂಭದ ಆಮಂತ್ರಣ ಪತ್ರವನ್ನೂ ಟ್ಟಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ.

    ಈಚೆಗೆ ನಡೆದ ಪಂಜಾಬ್‌ ವಿಧಾನಸಭಾ ಚುನಾವಣೆಯಲ್ಲಿ ಆಮ್‌ ಆದ್ಮಿ ಪಕ್ಷ 92 ಸ್ಥಾನಗಳಲ್ಲಿ ಭರ್ಜರಿ ಜಯ ಸಾಧಿಸಿತು. ಆದರೆ ಕಾಂಗ್ರೆಸ್‌ ಪಕ್ಷ ಕೇವಲ 18 ಸ್ಥಾನಗಳನ್ನು ಮಾತ್ರ ಜಯಿಸಲು ಶಕ್ತವಾಯಿತು. ಇದನ್ನೂ ಓದಿ: ಪಂಜಾಬ್‍ನಲ್ಲಿ ಇಂದು ಭಗವಂತ್ ಮಾನ್‍ಗೆ ಪಟ್ಟಾಭಿಷೇಕ

    ಎಎಪಿ ಸಂಚಾಲಕ ಅರವಿಂದ್ ಕೇಜ್ರಿವಾಲ್ ಸಮ್ಮುಖದಲ್ಲಿ ಭಗತ್ ಸಿಂಗ್ ಅವರ ಗ್ರಾಮವಾದ ಖಟ್ಕರ್ ಕಲಾನ್‌ನಲ್ಲಿ ಭಗವಂತ್ ಮಾನ್ ಅವರು ಪಂಜಾಬ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಆದರೆ ನಿರ್ಗಮಿತ ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ ಅವರನ್ನು ಆಹ್ವಾನಿಸಿರಲಿಲ್ಲ.

  • ಉಡ್ತಾ ಪಂಜಾಬ್‌ ಅಲ್ಲ, ಪ್ರಗತಿಪರ ಪಂಜಾಬ್‌: ಭಗವಂತ್‌ ಮಾನ್‌

    ಉಡ್ತಾ ಪಂಜಾಬ್‌ ಅಲ್ಲ, ಪ್ರಗತಿಪರ ಪಂಜಾಬ್‌: ಭಗವಂತ್‌ ಮಾನ್‌

    ಚಂಡೀಗಢ: ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರ ಗ್ರಾಮವಾದ ಖಟ್ಕರ್ ಕಲಾನ್‌ನಲ್ಲಿ ನಡೆದ ಸಮಾರಂಭದಲ್ಲಿ ಭಗವಂತ್ ಮಾನ್ ಅವರು ಪಂಜಾಬ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.

    ಸಮಾರಂಭದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಆಮ್ ಆದ್ಮಿ ಪಕ್ಷದ (AAP) ಇತರ ಹಿರಿಯ ನಾಯಕರು ಪಾಲ್ಗೊಂಡಿದ್ದರು. ಪಂಜಾಬ್‌ ಸಂಸ್ಕೃತಿ ಪ್ರತೀಕವಾಗಿ ಎಲ್ಲರೂ ಹಳದಿ ಪೇಟವನ್ನು ಧರಿಸಿ ಗಮನ ಸೆಳೆದರು. ಇದನ್ನೂ ಓದಿ: ಪಂಜಾಬ್‍ನಲ್ಲಿ ಇಂದು ಭಗವಂತ್ ಮಾನ್‍ಗೆ ಪಟ್ಟಾಭಿಷೇಕ

    ಈ ವೇಳೆ ಮಾತನಾಡಿದ ಭಗವಂತ್‌ ಮಾನ್‌, ರಾಜ್ಯದ ಇತಿಹಾಸದಲ್ಲಿ ಸುವರ್ಣ ಅಧ್ಯಯವೊಂದು ಪ್ರಾರಂಭವಾಗಿದೆ. ಇದು ಉಡ್ತಾ ಪಂಜಾಬ್‌ ಬದಲಿಗೆ ಪ್ರಗತಿಪರ ಪಂಜಾಬ್‌ ಆಗಲಿದೆ ಎಂದು ಅಭಿಪ್ರಾಯಪಟ್ಟರು. ʻಉಡ್ತಾ ಪಂಜಾಬ್‌ʼ ಎನ್ನುವ ಮೂಲಕ 2016ರಲ್ಲಿ ಪಂಜಾಬ್‌ನಲ್ಲಿ ವ್ಯಾಪಿಸಿದ್ದ ಡ್ರಗ್‌ ದಂಧೆ ಕುರಿತು ಉಲ್ಲೇಖಿಸಿದರು.

    ನಾನು ಇಂದು ಯಾರನ್ನೂ ತಿರಸ್ಕರಿಸಲು ಬಂದಿಲ್ಲ. ನಾನು ಪಂಜಾಬ್‌ನಲ್ಲಿ ಪ್ರತಿಯೊಬ್ಬರಿಗೂ ಮುಖ್ಯಮಂತ್ರಿಯಾಗಿದ್ದೇನೆ. ನಮ್ಮ ಪಕ್ಷಕ್ಕೆ ಮತ ಹಾಕದವರಿಗೂ ನಾನು ಮುಖ್ಯಮಂತ್ರಿ ಎಂದು ಆಶಯ ವ್ಯಕ್ತಪಡಿಸಿದರು. ಇದನ್ನೂ ಓದಿ: ಹೃದಯಸ್ಪರ್ಶಿ ಫೋಟೋ ಜೊತೆಗೆ ಭಗವಂತ ಮಾನ್‌ಗೆ ಶುಭಕೋರಿದ ಹರ್ಭಜನ್ ಸಿಂಗ್

    ಅಹಂಕಾರಕ್ಕೆ ಒಳಗಾಗಬೇಡಿ ಎಂದು ನಾನು ನಿಮ್ಮೆಲ್ಲರಲ್ಲಿ ಮನವಿ ಮಾಡುತ್ತೇನೆ. ನಮಗೆ ಮತ ಹಾಕದವರನ್ನೂ ನಾವು ಗೌರವಿಸಬೇಕು ಎಂದು ಪಕ್ಷದ ಶಾಸಕರಿಗೆ ಕರೆ ನೀಡಿದರು.

    ಪ್ರೀತಿ ನಮ್ಮ ಜನ್ಮಸಿದ್ಧ ಹಕ್ಕು. ನಮ್ಮ ತಾಯ್ನಾಡನ್ನು ನಾವು ಯಾಕೆ ಪ್ರೀತಿಸಬಾರದು? ಹಿಂದೆ ಅರಮನೆಗಳಲ್ಲಿ ಪ್ರಮಾಣ ವಚನ ಸಮಾರಂಭಗಳು ನಡೆಯುತ್ತಿದ್ದವು. ನನ್ನ ಹೃದಯದಲ್ಲಿ ಭಗತ್‌ಸಿಂಗ್‌ ಅವರಿಗೆ ವಿಶೇಷ ಸ್ಥಾನವಿದೆ ಎಂದು ತಿಳಿಸಿದರು. ಇದನ್ನೂ ಓದಿ: ಅಲ್ಲಿ ಝೆಲೆನ್ಸ್ಕಿ ಇಲ್ಲಿ ಮಾನ್ – ಒಂದೇ ಹಿನ್ನೆಲೆಯ ರಾಜಕಾರಣಿಗಳು ಟ್ವಿಟ್ಟರ್‌ನಲ್ಲಿ ಟ್ರೆಂಡ್

    48 ವರ್ಷ ವಯಸ್ಸಿನ ಭಗವಂತ್‌ ಮಾನ್‌ ಅವರು 1970ರ ನಂತರ ರಾಜ್ಯದ ಅತ್ಯಂತ ಕಿರಿಯ ಮುಖ್ಯಮಂತ್ರಿಯಾಗಿದ್ದಾರೆ. ಅವರು ಮಂಗಳವಾರ ಲೋಕಸಭೆ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

  • ಪಂಜಾಬ್ ಕಾಂಗ್ರೆಸ್‍ನ ಅಧ್ಯಕ್ಷ ಸ್ಥಾನಕ್ಕೆ ಸಿಧು ರಾಜೀನಾಮೆ

    ಪಂಜಾಬ್ ಕಾಂಗ್ರೆಸ್‍ನ ಅಧ್ಯಕ್ಷ ಸ್ಥಾನಕ್ಕೆ ಸಿಧು ರಾಜೀನಾಮೆ

    ಚಂಡೀಗಢ: ಪಂಜಾಬ್ ಕಾಂಗ್ರೆಸ್‍ನ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ ಎಂದು ಕಾಂಗ್ರೆಸ್ ಮುಖಂಡ ನವಜೋತ್ ಸಿಂಗ್ ಸಿಧು ಟ್ವೀಟ್‍ನಲ್ಲಿ ಪೋಸ್ಟ್ ಮಾಡಿದ್ದಾರೆ.

    ಪಂಚರಾಜ್ಯಗಳ ಸೋಲಿನ ಬಳಿಕ 5 ರಾಜ್ಯಗಳ ಕಾಂಗ್ರೆಸ್ ಅಧ್ಯಕ್ಷರನ್ನು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ವಜಾಗೊಳಿಸಿದ ಮರುದಿನ ಟ್ವಿಟ್ಟರ್‌ನಲ್ಲಿ ರಾಜೀನಾಮೆಯ ಪತ್ರವನ್ನು ಶೇರ್ ಮಾಡಿಕೊಂಡಿದ್ದಾರೆ.

    ಟ್ವೀಟ್‍ನಲ್ಲಿ ಏನಿದೆ?:
    ಕಾಂಗ್ರೆಸ್ ಅಧ್ಯಕ್ಷರ ಅಪೇಕ್ಷೆಯಂತೆ ನಾನು ನನ್ನ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ತಿಳಿಸಿ ಸೋನಿಯಾ ಗಾಂಧಿಗೆ ಬರೆದ ರಾಜೀನಾಮೆ ಪತ್ರವನ್ನು ಪೋಸ್ಟ್ ಮಾಡಿದ್ದಾರೆ.

    ನಿನ್ನೆ ಕಾಂಗ್ರೆಸ್‍ನ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೇವಾಲಾ ಟ್ವೀಟ್ ಮಾಡಿ, ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಸೇರಿದಂತೆ ಮಣಿಪುರ, ಗೋವಾ, ಉತ್ತರಾಖಂಡ ಹಾಗೂ ಉತ್ತರ ಪ್ರದೇಶದ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡುವಂತೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ತಿಳಿಸಿದ್ದಾರೆ. ಇದನ್ನೂ ಓದಿ: ಸಿಧು ಸೇರಿ 4 ರಾಜ್ಯದ ಕಾಂಗ್ರೆಸ್ ಅಧ್ಯಕ್ಷರನ್ನು ವಜಾಗೊಳಿಸಿದ ಸೋನಿಯಾ ಗಾಂಧಿ

    ಪಂಜಾಬ್‍ನಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಹೀನಾಯವಾಗಿ ಸೋಲು ಅನುಭವಿಸಿತು. ಪಂಜಾಬ್‍ನಲ್ಲಿ ಕಾಂಗ್ರೆಸ್ 18 ಸ್ಥಾನ ಗೆದ್ದರೆ, ಉತ್ತರಾಖಂಡದಲ್ಲಿ 19, ಗೋವಾದಲ್ಲಿ 11, ಮಣಿಪುರದಲ್ಲಿ 5 ಮತ್ತು ಉತ್ತರ ಪ್ರದೇಶದಲ್ಲಿ ಕೇವಲ 2 ಸ್ಥಾನ ಗೆದ್ದುಕೊಂಡು ಕಾಂಗ್ರೆಸ್ ಮುಖಭಂಗ ಅನುಭವಿಸಿತ್ತು. ಇದನ್ನೂ ಓದಿ: ರಷ್ಯಾದ ಆಕ್ರಮಣ ಪ್ರತಿಭಟಿಸಲು ಕಚ್ಚಾ ತೈಲ, ಅನಿಲ ಖರೀದಿಯನ್ನು ನಿಲ್ಲಿಸಬೇಕು: ಇಂಗ್ಲೆಂಡ್ ಪ್ರಧಾನಿ

  • ಪಂಜಾಬ್‍ನಲ್ಲಿ ಇಂದು ಭಗವಂತ್ ಮಾನ್‍ಗೆ ಪಟ್ಟಾಭಿಷೇಕ

    ಪಂಜಾಬ್‍ನಲ್ಲಿ ಇಂದು ಭಗವಂತ್ ಮಾನ್‍ಗೆ ಪಟ್ಟಾಭಿಷೇಕ

    ಚಂಡೀಗಢ: ಸಿಖ್ಖರ ನಾಡಿನಲ್ಲಿ ಇದೇ ಮೊದಲ ಬಾರಿ ಆಮ್ ಆದ್ಮಿ ಅಧಿಕಾರದ ಚುಕ್ಕಾಣಿ ಹಿಡಿಯುತ್ತಿದ್ದು, ಇಂದು ಸಿಎಂ ಆಗಿ ಭಗವಂತ್ ಮಾನ್ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

    ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಹುಟ್ಟೂರಾದ ಖಾಟ್ಕರ್ ಕಲಾನ್‍ನಲ್ಲಿ ಪ್ರಮಾಣ ವಚನ ಸಮಾರಂಭ ನಡೆಯಲಿದ್ದು, ಆಪ್ ನಾಯಕರಿಗೆ ಮಾತ್ರ ಆಹ್ವಾನ ನೀಡಲಾಗಿದೆ. ರಾಜಧಾನಿಯ ಹೊರಗೆ ಪ್ರಮಾಣ ವಚನ ನಡೀತಿರೋದು ವಿಶೇಷವಾಗಿದ್ದು, ಸಿಎಂ ಜೊತೆ 18 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. 3 ಲಕ್ಷ ಮಂದಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ. ಇದನ್ನೂ ಓದಿ: ಹೃದಯಸ್ಪರ್ಶಿ ಫೋಟೋ ಜೊತೆಗೆ ಭಗವಂತ ಮಾನ್‌ಗೆ ಶುಭಕೋರಿದ ಹರ್ಭಜನ್ ಸಿಂಗ್

    ಭಗವಂತ್ ಮಾನ್ ದುರಿ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದರು. ಇವರ ವಿರುದ್ಧ ಸ್ಪರ್ಧಿಸಿದ್ದ ಕಾಂಗ್ರೆಸ್‍ನ ದಲ್ವಿರ್ಸಿಂಗ್ ಗೋಲ್ಡಿ 24,306 ಮತಗಳಿಸಿದ್ದು, ಭಗವಂತ್ ಮಾನ್‍ಗೆ 82,023 ಮತಗಳನ್ನು ಗಳಿಸಿಸುವ ಮೂಲಕ ಭರ್ಜರಿ ಗೆಲುವು ಸಾಧಿಸಿದ್ದರು. ಅಧಿಕಾರ ವಹಿಸಿಕೊಂಡ ನಂತರ ಅವರ ಮೊದಲ ವ್ಯವಹಾರದ ಆದೇಶವೆಂದರೆ ಶಾಲೆಗಳು, ಆರೋಗ್ಯ, ಉದ್ಯಮ, ಕೃಷಿಯನ್ನು ಲಾಭದಾಯಕವಾಗಿಸುವುದಾಗಿದೆ ಎಂದು ಗೆಲುವಿನ ಬಳಿಕ ಘೋಷಿಸಿದ್ದರು. ಇದನ್ನೂ ಓದಿ: ಅಲ್ಲಿ ಝೆಲೆನ್ಸ್ಕಿ ಇಲ್ಲಿ ಮಾನ್ – ಒಂದೇ ಹಿನ್ನೆಲೆಯ ರಾಜಕಾರಣಿಗಳು ಟ್ವಿಟ್ಟರ್‌ನಲ್ಲಿ ಟ್ರೆಂಡ್

    ಜೊತೆಗೆ ಮಹಿಳೆಯರ ಸುರಕ್ಷತೆ ಮತ್ತು ಕ್ರೀಡಾ ಮೂಲಸೌಕರ್ಯಗಳನ್ನು ಸುಧಾರಿಸುವುದಾಗಿದೆ. ಅಲ್ಲದೆ ಒಂದು ತಿಂಗಳೊಳಗೆ ಪಂಜಾಬ್‍ನಲ್ಲಿ ಬದಲಾವಣೆಯನ್ನು ಕಾಣುತ್ತೀರಿ ಎಂದು ಭರವಸೆ ನೀಡಿದ್ದರು. ಆಮ್ ಆದ್ಮಿ ಪಕ್ಷವು ಪಂಜಾಬ್‍ನಲ್ಲಿ 117 ವಿಧಾನಸಭಾ ಸ್ಥಾನಗಳ ಪೈಕಿ 91 ರಲ್ಲಿ ಮುನ್ನಡೆ ಸಾಧಿಸುವ ಮೂಲಕ ಕ್ಲೀನ್ ಸ್ವೀಪ್ ಮಾಡಿತ್ತು.

    ಇತ್ತ ಗೋವಾದಲ್ಲಿ ಇಂದು ಶಾಸಕಾಂಗ ಸಭೆ ನಡೆಯಲಿದ್ದು, ಮುಂದಿನ ಸಿಎಂ ಆಯ್ಕೆ ನಡೆಯಲಿದೆ. ಹಾಲಿ ಸಿಎಂ ಪ್ರಮೋದ್ ಸಾವಂತ್ ಹಾಗೂ ಸಚಿವ ವಿಶ್ವಜಿತ್ ರಾಣೆ ರೇಸ್‍ನಲ್ಲಿದ್ದಾರೆ. ಇದನ್ನೂ ಓದಿ: ದೇಶದ ಭದ್ರತೆಗಾಗಿ ಕೇಂದ್ರ ಸರ್ಕಾರದೊಂದಿಗೆ ಕೆಲಸ ಮಾಡುತ್ತೇವೆ: ಕೇಜ್ರಿವಾಲ್‌

  • ಕಬಡ್ಡಿ ಪಂದ್ಯದ ವೇಳೆಯೇ ಅಂತರರಾಷ್ಟ್ರೀಯ ಆಟಗಾರನನ್ನು ಗುಂಡಿಕ್ಕಿ ಹತ್ಯೆ

    ಕಬಡ್ಡಿ ಪಂದ್ಯದ ವೇಳೆಯೇ ಅಂತರರಾಷ್ಟ್ರೀಯ ಆಟಗಾರನನ್ನು ಗುಂಡಿಕ್ಕಿ ಹತ್ಯೆ

    ಚಂಡೀಗಢ: ಕಬಡ್ಡಿ ಪಂದ್ಯದ ವೇಳೆಯೇ ಅಂತರರಾಷ್ಟ್ರೀಯ ಕಬಡ್ಡಿ ಆಟಗಾರ ಸಂದೀಪ್‌ ನಂಗಲ್‌ ಅವರಿಗೆ ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಜಲಂಧರ್‌ ಜಿಲ್ಲೆಯ ಮಾಲಿಯನ್‌ ಗ್ರಾಮದಲ್ಲಿ ನಡೆದಿದೆ.

    ಮಾಲಿಯನ್‌ ಗ್ರಾಮದಲ್ಲಿ ಕಬಡ್ಡಿ ಕಪ್‌ ಪಂದ್ಯ ಏರ್ಪಡಿಸಲಾಗಿತ್ತು. ಪಂದ್ಯದ ವೇಳೆಯೇ ಅಪರಿಚಿತ ದಾಳಿಕೋರರು ಸಂದೀಪ್‌ ನಂಗಲ್‌ ತಲೆ ಹಾಗೂ ಎದೆಯ ಭಾಗಕ್ಕೆ ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ.  ಇದನ್ನೂ ಓದಿ: ಐಪಿಎಲ್ 2022: ಅಗ್ರ ವಿದೇಶಿ ಆಟಗಾರರು ಲೀಗ್‍ನ ಮೊದಲ ವಾರದಲ್ಲಿ ಲಭ್ಯವಿರಲ್ಲ

    ಜಲಂಧರ್‌ ಡಿಎಸ್‌ಪಿ ಲಖ್ವಿಂದರ್‌ ಸಿಂಗ್‌ ಅವರು ಹತ್ಯೆ ವಿಚಾರವನ್ನು ದೃಢಪಡಿಸಿದ್ದಾರೆ. ಕಬಡ್ಡಿ ಆಟಗಾರನ ಮೇಲೆ ಸುಮಾರು 8ರಿಂದ 10 ಗುಂಡುಗಳನ್ನು ಹಾರಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

    ದೂರದಿಂದ ಸರಣಿ ಬುಲೆಟ್‌ಗಳು ಹಾರುತ್ತಿರುವ ಆತಂಕಕಾರಿ ಘಟನೆಯ ವೀಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ. ಪಂದ್ಯಾವಳಿಯಲ್ಲಿದ್ದ ಪ್ರೇಕ್ಷಕರು ಸ್ಥಳದಿಂದ ಓಡಿಹೋಗುತ್ತಿರುವ ದೃಶ್ಯ ವೀಡಿಯೋದಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ರಣಜಿ ಟ್ರೋಫಿ- ನೂತನ ದಾಖಲೆ ಸೃಷ್ಟಿಸಿದ ಜಾರ್ಖಂಡ್

    ಸಂದೀಪ್ ಒಂದು ದಶಕಕ್ಕೂ ಹೆಚ್ಚು ಕಾಲ ಕಬಡ್ಡಿ ಕ್ಷೇತ್ರದಲ್ಲಿ ಖ್ಯಾತಿ ಗಳಿಸಿದ್ದಾರೆ. ಕೆನಡಾ, ಯುಎಸ್ಎ, ಯುಕೆಗಳಲ್ಲಿ ಉತ್ತಮವಾಗಿ ಆಡಿದ್ದಾರೆ. ಸಂದೀಪ್‌ ಕಬಡ್ಡಿ ಫೆಡರೇಶನ್‌ ಅನ್ನು ನಿರ್ವಹಿಸುತ್ತಿದ್ದರು.

  • ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಲಿರುವ ಭಗವಂತ್ ಮಾನ್

    ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಲಿರುವ ಭಗವಂತ್ ಮಾನ್

    ಚಂಡೀಗಢ: ಪಂಜಾಬ್ ಮುಖ್ಯಮಂತ್ರಿ ಅಭ್ಯರ್ಥಿ ಭಗವಂತ್ ಮಾನ್ ತಮ್ಮ ಸಂಸತ್ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸುವುದಾಗಿ ಹೇಳಿದ್ದಾರೆ.

    ಭಗವಂತ್ ಮಾನ್ ಅವರು ರಾಜ್ಯದ ಸಂಗ್ರೂರ್ ಲೋಕಸಭಾ ಕ್ಷೇತ್ರದಿಂದ ಎರಡು ಬಾರಿ ಲೋಕಸಭಾ ಸಂಸದರಾಗಿದ್ದಾರೆ. ಸದ್ಯ ಈ ಕುರಿತಂತೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವ ಮೂಲಕ ಮಾಹಿತಿ ನೀಡಿರುವ ಅವರು, ಇಂದು ದೆಹಲಿಗೆ ತೆರಳಿ ಸಂಗ್ರೂರ್ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ಸಂಗ್ರೂರಿನ ಜನ ನನಗೆ ಇಷ್ಟು ವರ್ಷ ಪ್ರೀತಿ ಕೊಟ್ಟಿದ್ದಾರೆ. ಅವರಿಗೆ ಧನ್ಯವಾದಗಳು. ಈಗ ನನಗೆ ಇಡೀ ಪಂಜಾಬ್‍ಗೆ ಸೇವೆ ಸಲ್ಲಿಸುವ ಅವಕಾಶ ಸಿಕ್ಕಿದ್ದು, ಕೆಲವೇ ತಿಂಗಳಲ್ಲಿ ಲೋಕಸಭೆಯಲ್ಲಿ ಅವರ ಧ್ವನಿಯನ್ನು ಮತ್ತೆ ಕೇಳಲಾಗುವುದು ಎಂದು ನಾನು ಸಂಗ್ರೂರ್ ಜನರಿಗೆ ಭರವಸೆ ನೀಡುತ್ತೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಜಮ್ಮು, ಕಾಶ್ಮೀರ ಬಜೆಟ್ ಮಂಡಿಸಲಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್

    ಭಗವತ್ ಮಾನ್ ಅವರು ಮಾರ್ಚ್ 16ರಂದು ಮಧ್ಯಾಹ್ನ 12:30ಕ್ಕೆ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರ ಹುಟ್ಟೂರಿನಲ್ಲಿ ಪಂಜಾಬ್‍ನ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. 117 ಸದಸ್ಯ ಬಲದ ಪಂಜಾಬ್ ವಿಧಾನಸಭೆಯಲ್ಲಿ ಆಪ್ ಪಕ್ಷ 92 ಸ್ಥಾನಗಳನ್ನು ಗೆದ್ದಿತು. ಇದನ್ನೂ ಓದಿ: 122 ಮಾಜಿ ಸಂಸದರು, ಶಾಸಕರ ಭದ್ರತೆ ಹಿಂಪಡೆದ ಭಗವಂತ್ ಮಾನ್