Tag: Punjab Team

  • ಮತ್ತೆ ಮೈದಾನಕ್ಕೆ ಸಿಕ್ಸರ್ ಕಿಂಗ್ ಯುವಿ – ಪಂಜಾಬ್ ತಂಡಕ್ಕಾಗಿ ಕಮ್‍ಬ್ಯಾಕ್?

    ಮತ್ತೆ ಮೈದಾನಕ್ಕೆ ಸಿಕ್ಸರ್ ಕಿಂಗ್ ಯುವಿ – ಪಂಜಾಬ್ ತಂಡಕ್ಕಾಗಿ ಕಮ್‍ಬ್ಯಾಕ್?

    ನವದೆಹಲಿ: ಕಳೆದ ವರ್ಷ ನಿವೃತ್ತಿ ಘೋಷಿಸಿದ ಭಾರತದ ಮಾಜಿ ಆಟಗಾರ ಯುವರಾಜ್ ಸಿಂಗ್ ಮತ್ತೆ ತಮ್ಮ ತವರು ತಂಡ ಪಂಜಾಬ್‍ಗಾಗಿ ಕಮ್‍ಬ್ಯಾಕ್ ಮಾಡುವ ಸಾಧ್ಯತೆಯಿದೆ.

    ಭಾರತ ತಂಡಕ್ಕಾಗಿ 17 ವರ್ಷಗಳ ಕಾಲ ಕ್ರಿಕೆಟ್ ಆಡಿದ ಯುವಿ, ಇಂಡಿಯಾ ಎರಡು ಐಸಿಸಿ ಟ್ರೋಫಿ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಆದರೆ 2019ರ ಜೂನ್ ತಿಂಗಳಿನಲ್ಲಿ ಯುವಿ ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ವಿದಾಯ ಹೇಳಿದ್ದರು. ಆದರೆ ಈಗ ಮತ್ತೆ ಪಂಜಾಬ್ ತಂಡದ ಪರವಾಗಿ ದೇಶೀಯ ಟಿ-20 ಪಂದ್ಯವಾಡಲು ಮರಳಿ ಮೈದಾನಕ್ಕೆ ಬರುತ್ತಾರೆ ಎಂದು ಹೇಳಲಾಗುತ್ತಿದೆ.

    ನಿವೃತ್ತಿ ನಂತರ ಯುವರಾಜ್ ಪಂಜಾಬ್ ಟಿ-20 ತಂಡಕ್ಕೆ ಮಾರ್ಗದರ್ಶಕರಾಗಿ ಕೆಲಸ ಮಾಡುತ್ತಿದ್ದರು. ಈಗ ಯುವರಾಜ್ ಸಿಂಗ್ ಅವರು ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ (ಪಿಸಿಎ)ಗೆ ಪತ್ರ ಬರೆದಿದ್ದು, ನಿವೃತ್ತಿಯಿಂದ ಹೊರಬಂದು ಪಂಜಾಬ್ ತಂಡಕ್ಕಾಗಿ ಟಿ-20 ಪಂದ್ಯಗಳನ್ನು ಆಡಲು ಉತ್ಸುಕನಾಗಿದ್ದೇನೆ ಎಂದು ಹೇಳಿಕೊಂಡಿದ್ದಾರೆ ಎಂದು ಮೂಲಗಳಿಂದ ಮಾಹಿತಿ ಲಭಿಸಿದೆ. ಪಿಸಿಎ ಅನುಮತಿ ನೀಡಿದರೆ ಅವರು ಪಂಜಾಬ್ ಪರ ಟಿ-20 ಪಂದ್ಯವನ್ನಾಡುವುದು ಪಕ್ಕಾ ಎಂದು ಹೇಳಲಾಗುತ್ತಿದೆ.

    ಯುವರಾಜ್ ಸಿಂಗ್ ಅವರು ತಮ್ಮ ತವರು ತಂಡವಾದ ಪಂಜಾಬ್‍ಗೆ ಮಾರ್ಗದರ್ಶಕರನಗಿ ಕೆಲಸ ಮಾಡುತ್ತಿದ್ದಾರೆ. ಕೊರೊನಾ ಕಾರಣದಿಂದ ಕೊಂಚ ಬ್ರೇಕ್ ತೆಗೆದುಕೊಂಡಿದ್ದ ಪಂಜಾಬ್ ಆಟಗಾರರು ಮುಂದಿನ ಆಕ್ಟೋಬರ್ ತಿಂಗಳಿಂದ ಅಭ್ಯಾಸವನ್ನು ಆರಂಭಿಸಲಿದ್ದಾರೆ. ಈ ಬಗ್ಗೆ ಈ ಹಿಂದೆ ಮಾತನಾಡಿದ್ದ ಪಿಸಿಎ ಸೆಕ್ರಟರಿ ಪುನೀತ್ ಬಾಲಿ, ನಾವು ಯುವರಾಜ್ ಅವರು ಆಡಬೇಕು ಎಂದು ಪತ್ರ ಬರೆದಿದ್ದೇವೆ. ಅವರು ಆಟಗಾರ ಮತ್ತು ಮಾರ್ಗದರ್ಶಕರಾಗಿ ನಮ್ಮ ತಂಡದಲ್ಲಿ ಇದ್ದರೆ ನಮಗೆ ಒಳ್ಳೆಯದು ಎಂದು ಹೇಳಿದ್ದರು.

    ಸದ್ಯ ನಿವೃತ್ತಿ ನಂತರ ಕಳೆದ ವರ್ಷ ಬಿಸಿಸಿಐನಿಂದ ಅನುಮತಿ ಪಡೆದುಕೊಂಡಿದ್ದ ಯುವರಾಜ್, ಗ್ಲೋಬಲ್ ಟಿ-20 ಲೀಗ್ ಕೆನಡಾ ಮತ್ತು ಟಿ-10 ಲೀಗ್ ಅಬುಧಾಬಿ ಎಂಬ ಎರಡು ವಿದೇಶಿ ಟೂರ್ನಿಯಲ್ಲಿ ಭಾಗವಹಿಸಿದ್ದರು. ಇವುಗಳ ನಂತರ ಅವರು ಮುಂದಿನ ಡಿಸೆಂಬರ್ 3ರಂದು ಆರಂಭವಾಗುವ ಬಿಗ್ ಬ್ಯಾಶ್ ಲೀಗ್‍ನಲ್ಲೂ ಭಾಗವಹಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಯುವರಾಜ್ ಪ್ರತಿಕ್ರಿಯೆ ನೀಡಿಲ್ಲ.

    2017ರಲ್ಲಿ ಭಾರತದ ಪರ ಕಡೆ ಪಂದ್ಯವನ್ನು ಆಡಿದ್ದ ಯುವಿ 2 ವರ್ಷದ ನಂತರ ಯಾವುದೇ ವಿದಾಯ ಪಂದ್ಯವನ್ನು ಆಡದೆ ನಿವೃತ್ತಿ ಘೋಷಿಸಿದ್ದರು. 17 ವರ್ಷಗಳ ಅಂತಾರಾಷ್ಟ್ರೀಯ ವೃತ್ತಿಜೀವನದಲ್ಲಿ ಯುವರಾಜ್ 40 ಟೆಸ್ಟ್, 304 ಏಕದಿನ ಮತ್ತು 58 ಟಿ-20 ಪಂದ್ಯಗಳನ್ನು ಆಡಿದ್ದಾರೆ. ಒಟ್ಟಾರೆಯಾಗಿ ಯುವಿ 231 ಟಿ-20 ಪಂದ್ಯಗಳನ್ನು ಆಡಿದ್ದು, ಈ ಪಂದ್ಯಗಳಲ್ಲಿ 25.69 ಸರಾಸರಿಯಲ್ಲಿ 4,857 ರನ್ ಗಳಿಸಿದ್ದಾರೆ.

  • ಐಪಿಎಲ್‍ನಲ್ಲಿ ಹೆಚ್ಚು ಇಂಡಿಯನ್ ಕೋಚ್‍ಗಳನ್ನು ನೋಡ ಬಯಸುತ್ತೇನೆ: ಅನಿಲ್ ಕುಂಬ್ಳೆ

    ಐಪಿಎಲ್‍ನಲ್ಲಿ ಹೆಚ್ಚು ಇಂಡಿಯನ್ ಕೋಚ್‍ಗಳನ್ನು ನೋಡ ಬಯಸುತ್ತೇನೆ: ಅನಿಲ್ ಕುಂಬ್ಳೆ

    – 40 ವರ್ಷದ ಗೇಲ್ ತಂಡದಲ್ಲಿ ಆಡುತ್ತಾರೆ

    ನವದೆಹಲಿ: ಐಪಿಎಲ್‍ನಲ್ಲಿ ಹೆಚ್ಚು ಭಾರತೀಯ ಮುಖ್ಯ ಕೋಚ್‍ಗಳನ್ನು ನೋಡಲು ನಾನು ಬಯಸುತ್ತೇನೆ ಎಂದು ಕಿಂಗ್ಸ್ ಇಲೆವೆನ್ ತಂಡದ ಮುಖ್ಯ ಕೋಚ್ ಕನ್ನಡಿಗ ಅನಿಲ್ ಕುಂಬ್ಳೆ ಅವರು ಹೇಳಿದ್ದಾರೆ.

    ಐಪಿಎಲ್-2020 ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಈಗಾಗಲೇ ಯುಎಇ ತಲುಪಿರುವ ಎಲ್ಲ ತಂಡಗಳು ಖಾಲಿ ಮೈದಾನದಲ್ಲಿ ಆಡಲು ಭರ್ಜರಿ ಸಿದ್ಧತೆ ನಡೆಸಿವೆ. ಅಂತಯೇ ಕಿಂಗ್ಸ್ ಇಲೆವೆನ್ ತಂಡ ಕೂಡ ಅನಿಲ್ ಕುಂಬ್ಳೆ ನೇತೃತ್ವದಲ್ಲಿ ತಾಲೀಮು ಮಾಡುತ್ತಿದೆ. ಈ ವೇಳೆ ಅನ್‍ಲೈನ್ ಸಂವಾದದಲ್ಲಿ ಮಾತನಾಡಿರುವ ಅನಿಲ್, 40 ವರ್ಷದ ಗೇಲ್ ತಂಡದಲ್ಲಿ ಆಡುತ್ತಾರೆ ಎಂದು ಹೇಳಿದ್ದಾರೆ.

    ಈ ಸಂವಾದ ಕಾರ್ಯಕ್ರಮದಲ್ಲಿ ಕೋಚ್‍ಗಳ ಬಗ್ಗೆ ಮಾತನಾಡಿರುವ ಅವರು, ನಾನು ಐಪಿಎಲ್‍ನಲ್ಲಿ ಹೆಚ್ಚು ಭಾರತೀಯ ಮುಖ್ಯ ಕೋಚ್‍ಗಳನ್ನು ನೋಡಲು ಬಯಸುತ್ತೇನೆ. ಆದರೆ ವಿಪರ್ಯಾಸ ಎಂಬಂತೆ ನಮ್ಮ ಐಪಿಎಲ್‍ನಲ್ಲಿ ಭಾರತೀಯರಿಗಿಂತ ವಿದೇಶಿಗರೇ ಮುಖ್ಯ ಕೋಚ್ ಆಗಿರುತ್ತಾರೆ. ಭಾರತೀಯರು ಕೋಚ್ ಆಗಿ ಕಾಣಿಸಿಕೊಳ್ಳುವುದು ಕಡಿಮೆ. ಮುಂದಿನ ದಿನಗಳಲ್ಲಿ ನಮ್ಮವರೇ ಹೆಚ್ಚು ಮುಖ್ಯ ಕೋಚ್‍ಗಳು ಆಗಿರುತ್ತಾರೆ ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದ್ದಾರೆ.

    ಇದೇ ವೇಳೆ 40 ವರ್ಷದ ಗೇಲ್ ತಂಡದಲ್ಲಿ ಆಡುತ್ತಾರಾ ಎಂಬ ಪ್ರಶ್ನೆಗೆ ಉತ್ತರಿಸಿರುವ ಕುಂಬ್ಳೆ, ಗೇಲ್ ತಂಡದಲ್ಲಿ ಇರುವುದು ಮುಖ್ಯವಾಗುತ್ತದೆ. ಏಕೆಂದರೆ ಗೇಲ್ ಕೇವಲ ಬ್ಯಾಟ್ಸ್ ಮ್ಯಾನ್ ಆಗಿ ಇರುವುದಿಲ್ಲ. ತಂಡದಲ್ಲಿ ಓರ್ವ ಮಾರ್ಗದರ್ಶಕನಾಗಿ, ಅನುಭವಿ ಆಟಗಾರನಾಗಿ ಇರುತ್ತಾರೆ. ಪಂದ್ಯದ ವೇಳೆ ಅವರ ಸಲಹೆಯನ್ನು ಸ್ವೀಕರಿಸಬೇಕಾಗುತ್ತದೆ. ಜೊತೆಗೆ ಟಾಪ್ ಆರ್ಡರ್ ನಲ್ಲಿ ಈಗಲೂ ದೊಡ್ಡ ಹೊಡೆತಗಳಿಗೆ ಗೇಲ್ ಹೆಸರುವಾಸಿ. ಹೀಗಾಗಿ ಅವರು ತಂಡದಲ್ಲಿ ಇರಬೇಕು ಎಂದು ತಿಳಿಸಿದ್ದಾರೆ.

    ನಮ್ಮ ತಂಡ ಎಲ್ಲ ವಿಭಾಗದಲ್ಲೂ ಬಹಳ ಬಲಿಷ್ಠವಾಗಿದೆ. ಯುವ ಆಟಗಾರರು ಇದ್ದಾರೆ. ಪ್ರತಿಭಾನ್ವಿತ ವಿದೇಶಿ ಆಟಗಾರರು ಇದ್ದಾರೆ ಎಂದು ಅನಿಲ್ ಕುಂಬ್ಳೆ ಹೇಳಿದ್ದಾರೆ. ಇದೇ ವೇಳೆ ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ವಿದಾಯ ಹೇಳಿದ ನಂತರ ಧೋನಿ ಐಪಿಎಲ್ ಆಡುತ್ತಿರುವ ಬಗ್ಗೆ ಮಾತನಾಡಿದ ಅವರು, ನನಗೆ ಧೋನಿ ಬಗ್ಗೆ ಚೆನ್ನಾಗಿ ಗೊತ್ತಿದೆ. ಆತ ಈ ಬಾರಿ ಐಪಿಎಲ್‍ನಲ್ಲಿ ಚೆನ್ನಾಗಿ ಆಡುತ್ತಾನೆ. ನಾನೂ ಕೂಡ ನಿವೃತ್ತಿ ಹೊಂದಿದ ಬಳಿಕ ಐಪಿಎಲ್ ಆಡಿದ್ದೇನೆ ಎಂದಿದ್ದಾರೆ.

    ಭಾರತೀಯರಲ್ಲದ ಮುಖ್ಯ ಕೋಚ್ ಹೊಂದಿರುವ ಐಪಿಎಲ್ ತಂಡಗಳು
    ರಿಕಿ ಪಾಂಟಿಂಗ್ (ದೆಹಲಿ ಕ್ಯಾಪಿಟಲ್ಸ್), ಬ್ರೆಂಡನ್ ಮೆಕಲಮ್ (ಕೆಕೆಆರ್), ಸ್ಟೀಫನ್ ಫ್ಲೆಮಿಂಗ್ (ಸಿಎಸ್‍ಕೆ), ಮಹೇಲಾ ಜಯವರ್ಧನೆ (ಮುಂಬೈ ಇಂಡಿಯನ್ಸ್), ಟ್ರೆವರ್ ಬೇಲಿಸ್ (ಸನ್‍ರೈಸರ್ಸ್), ಸೈಮನ್ ಕ್ಯಾಟಿಚ್ (ಆರ್.ಸಿ.ಬಿ) ಆಂಡ್ರ್ಯೂ ಮೆಕ್‍ಡೊನಾಲ್ಡ್ (ರಾಜಸ್ಥಾನ್ ರಾಯಲ್ಸ್). ಪಂಜಾಬ್ ತಂಡಕ್ಕೆ ಮಾತ್ರ ಭಾರತೀಯರಾದ ಅನಿಲ್ ಕುಂಬ್ಳೆ ಮುಖ್ಯ ಕೋಚ್ ಆಗಿದ್ದಾರೆ.