Tag: Punjab Kings

  • IPL 2024: ಲಕ್ನೋ ಪಂಚ್‌ಗೆ ಪಂಜಾಬ್‌ ಪಂಚರ್‌ – ಸೂಪರ್‌ ಜೈಂಟ್ಸ್‌ಗೆ 21 ರನ್‌ಗಳ ಭರ್ಜರಿ ಜಯ

    IPL 2024: ಲಕ್ನೋ ಪಂಚ್‌ಗೆ ಪಂಜಾಬ್‌ ಪಂಚರ್‌ – ಸೂಪರ್‌ ಜೈಂಟ್ಸ್‌ಗೆ 21 ರನ್‌ಗಳ ಭರ್ಜರಿ ಜಯ

    ಲಕ್ನೋ: ಕ್ವಿಂಟನ್‌ ಡಿಕಾಕ್‌, ನಿಕೋಲಸ್‌ ಪೂರನ್‌ ಹಾಗೂ ಕೃನಾಲ್‌ ಪಾಂಡ್ಯ ಅವರ ಸಂಘಟಿತ ಬ್ಯಾಟಿಂಗ್‌ ಮತ್ತು ಬೌಲಿಂಗ್‌ ದಾಳಿ ನೆರವಿನಿಂದ ಲಕ್ನೋ ಸೂಪರ್‌ ಜೈಂಟ್ಸ್‌ ತಂಡವು ಪಂಜಾಬ್‌ ಕಿಂಗ್ಸ್‌ ವಿರುದ್ಧ 21 ರನ್‌ಗಳ ಗೆಲುವು ಸಾಧಿಸಿದೆ.

    ಲಕ್ನೋದ ಏಕನಾ ಕ್ರೀಡಾಂಗಣದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಲಕ್ನೋ ಸೂಪರ್‌ ಜೈಂಟ್ಸ್‌ ತಂಡವು 20 ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 199 ರನ್‌ ಕಲೆಹಾಕಿತ್ತು. 200 ರನ್‌ಗಳ ಬೃಹತ್‌ ಮೊತ್ತದ ಗುರಿ ಬೆನ್ನತ್ತಿದ ಪಂಜಾಬ್‌ ಕಿಂಗ್ಸ್‌ ನಿಗದಿತ ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 177 ರನ್‌ ಗಳಿಸಿ ಸೋಲೊಪ್ಪಿಕೊಂಡಿತು.

    ಬೃಹತ್‌ ಮೊತ್ತದ ಚೇಸಿಂಗ್‌ ಆರಂಭಿಸಿದ್ದ ಪಂಜಾಬ್‌ ತಂಡವು ಉತ್ತಮ ಆರಂಭ ಒಡೆದುಕೊಂಡಿತ್ತು. ಮೊದಲ ವಿಕೆಟ್‌ಗೆ ನಾಯಕ ಶಿಖರ್‌ ಧವನ್‌ ಮತ್ತು ಜಾನಿ ಬೈರ್‌ಸ್ಟೋವ್‌ ಜೋಡಿ 11.4 ಓವರ್‌ಗಳಲ್ಲಿ 102 ರನ್‌ಗಳ ಜೊತೆಯಾಟ ನೀಡಿತ್ತು. ಜಾನಿ ಬೈರ್‌ಸ್ಟೋವ್‌ 29 ಎಸೆತಗಳಲ್ಲಿ 42 ರನ್‌ (3 ಸಿಕ್ಸರ್‌, 3 ಬೌಂಡರಿ) ಗಳಿಸಿ ಔಟಾದರು. ಈ ಬೆನ್ನಲ್ಲೇ ಸ್ಫೋಟಕ ಪ್ರದರ್ಶನ ನೀಡಿದ ಪ್ರಭ್‌ಸಿಮ್ರಾನ್ ಸಿಂಗ್ 7 ಎಸೆತಗಳಲ್ಲಿ 19 ರನ್‌ ಗಳಿಸಿ ಔಟಾದರು. 70 ರನ್‌ (50 ಎಸೆತ, 7 ಬೌಂಡರಿ, 3 ಸಿಕ್ಸರ್‌) ಸಿಡಿಸಿದ್ದ ಶಿಖರ್‌ ಧವನ್‌ ಸಹ ಪೆವಿಲಿಯನ್‌ಗೆ ಮರಳುತ್ತಿದ್ದಂತೆ, ಆಲ್‌ರೌಂಡರ್‌ ಸ್ಯಾಮ್‌ ಕರ್ರನ್‌ ಡಕ್‌ಔಟ್‌ ಆದರು. ಇದರಿಂದ ಗೆಲುವು ಲಕ್ನೋ ತಂಡದತ್ತ ವಾಲಿತು.

    ಪಂಜಾಬ್‌ ಪರ ಜಿತೇಶ್‌ ಶರ್ಮಾ 6 ರನ್‌, ಲಿಯಾಮ್‌ ಲಿವಿಂಗ್‌ಸ್ಟೋನ್‌ 28 ರನ್‌, ಶಶಾಂಕ್‌ ಸಿಂಗ್‌ 9 ರನ್‌ ಗಳಿಸಿದರು. ಲಕ್ನೋ ಪರ ಮಯಾಂಕ್‌ ಯಾದವ್‌ 3 ವಿಕೆಟ್‌ ಕಿತ್ತರೆ, ಮೊಹ್ಸಿನ್‌ ಖಾನ್‌ 2 ವಿಕೆಟ್‌ ಪಡೆದರು. ಮೊದಲು ಬ್ಯಾಟಿಂಗ್‌ ಮಾಡಿದ ಲಕ್ನೋ ತಂಡ ಸ್ಪಿನ್‌ ಪಿಚ್‌ನಲ್ಲಿ ರನ್‌ ಹೊಳೆ ಹರಿಸಿತು. ಕ್ವಿಂಟನ್‌ ಡಿಕಾಕ್‌, ನಾಯಕ ನಿಕೋಲಸ್‌ ಪೂರನ್‌ ಹಾಗೂ ಕೃನಾಲ್‌ ಪಾಂಡ್ಯ ಅವರ ಸಂಘಟಿತ ಬ್ಯಾಟಿಂಗ್‌ ನೆರವಿನಿಂದ ಎದುರಾಳಿ ತಂಡಕ್ಕೆ 200 ರನ್‌ಗಳ ಗುರಿ ನೀಡುವಲ್ಲಿ ಯಶಸ್ವಿಯಾಯಿತು. ಒಂದೆಡೆ ವಿಕೆಟ್‌ ಕಳೆದುಕೊಂಡರೂ ರನ್‌ ಕಲೆಹಾಕುತ್ತಾ ಸಾಗಿದ ಲಕ್ನೋ ತಂಡ ಬೃಹತ್‌ ಮೊತ್ತವನ್ನೇ ಪೇರಿಸಿತು.

    ಲಕ್ನೋ ಪರ ಕ್ವಿಂಟನ್‌ ಡಿಕಾಕ್‌ 54 ರನ್‌ (38 ಎಸೆತ, 5 ಬೌಂಡರಿ, 2 ಸಿಕ್ಸರ್‌), ನಿಕೋಲಸ್‌ ಪೂರನ್‌ 42 ರನ್‌ (21 ಎಸೆತ, 3 ಬೌಂಡರಿ, 3 ಸಿಕ್ಸರ್‌), ಕೃನಾಲ್‌ ಪಾಂಡ್ಯ 43 ರನ್‌ 22 ಎಸೆತ, 4 ಬೌಂಡರಿ, 2 ಸಿಕ್ಸರ್‌), ಕೆ.ಎಲ್‌ ರಾಹುಲ್‌ 15 ರನ್‌, ದೇವದತ್‌ ಪಡಿಕಲ್‌ 9 ರನ್‌, ಮಾರ್ಕಸ್‌ ಸ್ಟೋಯ್ನಿಸ್‌ 19 ರನ್‌, ಆಯುಷ್‌ ಬದೋನಿ 8 ರನ್‌, ಮೋಹ್ಸಿನ್‌ ಖಾನ್‌ 2 ರನ್‌ ಗಳಿಸಿದ್ರೆ, ರವಿ ಬಿಷ್ಣೋಯಿ ಶೂನ್ಯ ಸುತ್ತಿದರು.

    ಪಂಜಾಬ್‌ ಕಿಂಗ್ಸ್‌ ಪರ ಆಲ್‌ರೌಂಡರ್‌ ಸ್ಯಾಮ್‌ ಕರ್ರನ್‌ 3 ವಿಕೆಟ್‌, ಅರ್ಷ್‌ದೀಪ್‌ ಸಿಂಗ್‌ 2 ವಿಕೆಟ್‌ ಹಾಗೂ ಕಗಿಸೋ ರಬಾಡ ಮತ್ತು ರಾಹುಲ್‌ ಚಹಾರ್‌ ತಲಾ ಒಂದೊಂದು ವಿಕೆಟ್‌ ಪಡೆದು ಮಿಂಚಿದರು.

  • ಕೊಹ್ಲಿ, ಕಾರ್ತಿಕ್‌, ಮಹಿಪಾಲ್‌ ಸ್ಫೋಟಕ ಆಟ – ಆರ್‌ಸಿಬಿಗೆ 4 ವಿಕೆಟ್‌ಗಳ ರೋಚಕ ಜಯ

    ಕೊಹ್ಲಿ, ಕಾರ್ತಿಕ್‌, ಮಹಿಪಾಲ್‌ ಸ್ಫೋಟಕ ಆಟ – ಆರ್‌ಸಿಬಿಗೆ 4 ವಿಕೆಟ್‌ಗಳ ರೋಚಕ ಜಯ

    ಬೆಂಗಳೂರು: ವಿರಾಟ್‌ ಕೊಹ್ಲಿ (Virat kohli) ಸ್ಫೋಟಕ ಅರ್ಧಶತಕ ಮತ್ತು ಕೊನೆಯಲ್ಲಿ ಕಾರ್ತಿಕ್‌ (Dinesh Karthik), ಮಹಿಪಾಲ್‌ (Mahipal Lomror) ಅವರ ಸಿಕ್ಸರ್‌ ಬೌಂಡರಿ ನೆರವಿನಿಂದ ಆರ್‌ಸಿಬಿ (RCB) ತವರಿನಲ್ಲಿ ಪಂಜಾಬ್‌ ಕಿಂಗ್ಸ್‌ (Punjab Kings) ವಿರುದ್ಧ 4 ವಿಕೆಟ್‌ಗಳ ರೋಚಕ ಜಯ ಸಾಧಿಸಿ ಟೂರ್ನಿಯಲ್ಲಿ ಮೊದಲ ಗೆಲುವು ದಾಖಲಿಸಿದೆ.

    ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ  ಗೆಲ್ಲಲು 177 ರನ್‌ಗಳ ಕಠಿಣ ಗುರಿಯನ್ನು ಪಡೆದ ಆರ್‌ಸಿಬಿ ಇನ್ನೂ 4 ಎಸೆತ ಬಾಕಿ ಇರುವಂತೆಯೇ 6 ವಿಕೆಟ್‌ ನಷ್ಟಕ್ಕೆ 178 ರನ್‌ ಹೊಡೆದು ಮೊದಲ ಜಯ ದಾಖಲಿಸಿತು.

    ಕೊನೆಯ 30 ಎಸೆತಗಳಲ್ಲಿ 59 ರನ್‌ ಬೇಕಿತ್ತು. 16ನೇ ಓವರ್‌ನಲ್ಲಿ 12 ರನ್‌ ಬಂದರೂ ಕೊಹ್ಲಿ 77 ರನ್‌(49 ಎಸೆತ, 11 ಬೌಂಡರಿ, 2 ಸಿಕ್ಸರ್‌) ಹೊಡೆದು ಔಟಾದ ಕಾರಣ ಪಂದ್ಯ ರೋಚಕ ತಿರುವು ಪಡೆದುಕೊಂಡಿತ್ತು. 16.2 ನೇ ಓವರ್‌ನಲ್ಲಿ ಅನುಜ್‌ ರಾವತ್‌ ಎಲ್‌ಬಿ ಔಟಾಗಿದ್ದರಿಂದ ಪಂದ್ಯ ಪಂಜಾಬ್‌ ಕಡೆಗೆ ವಾಲಿತ್ತು. ಇದನ್ನೂ ಓದಿ: ಭಾರತದಲ್ಲೇ ಐಪಿಎಲ್‌ – ಪೂರ್ಣ ವೇಳಾಪಟ್ಟಿ ಪ್ರಕಟ, ಯಾವ ದಿನ ಯಾವ ಮ್ಯಾಚ್‌?

    ಈ ವೇಳೆ ಜೊತೆಯಾದ ಕಾರ್ತಿಕ್‌ ಮತ್ತು ಇಂಪ್ಯಾಕ್ಟ್‌ ಪ್ಲೇಯರ್‌ ಮಹಿಪಾಲ್‌ ಮುರಿಯದ 7ನೇ ವಿಕೆಟಿಗೆ ಕೇವಲ 18 ಎಸೆತಗಳಲ್ಲಿ 48 ರನ್‌ ಜೊತೆಯಾಟವಾಡಿ ಆರ್‌ಸಿಬಿಗೆ ಗೆಲುವು ತಂದುಕೊಟ್ಟರು.  ವಿಕೆಟ್‌ ಪತನವಾಗುತ್ತಿದ್ದರೂ ಕ್ರೀಸ್‌ನಲ್ಲಿ ನಿಂತು ಸ್ಫೋಟಕ ಅರ್ಧಶತಕ ಸಿಡಿಸಿದ ಕೊಹ್ಲಿ ಅರ್ಹವಾಗಿಯೇ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನಾರದರು.

    17ನೇ ಓವರ್‌ನಲ್ಲಿ 11 ರನ್‌ ಬಂದರೆ 18ನೇ ಓವರ್‌ನಲ್ಲಿ 13 ರನ್‌ ಬಂತು. 19ನೇ ಓವರ್‌ನಲ್ಲಿ ಕಾರ್ತಿಕ್‌ ಬೌಂಡರಿ, ಸಿಕ್ಸ್‌ ಸಿಡಿಸಿದ ಪರಿಣಾಮ 13 ರನ್‌ ಬಂತು. ಕೊನೆಯ 6 ಎಸೆತದಲ್ಲಿ 10 ರನ್‌ ಬೇಕಿತ್ತು. ಅರ್ಶ್‌ದೀಪ್‌ ಸಿಂಗ್‌ ಎಸೆದ ಮೊದಲ ಎಸೆತವನ್ನು ಕಾರ್ತಿಕ್‌ ಸಿಕ್ಸರ್‌ಗೆ ಅಟ್ಟಿದರು. ಎರಡನೇ ಎಸೆತದಲ್ಲಿ ಬೌಂಡರಿಗೆ ಸಿಡಿಸಿ ತವರು ನೆಲದಲ್ಲಿ ಆರ್‌ಸಿಬಿಗೆ ಜಯ ತಂದುಕೊಟ್ಟರು.

    ಕಾರ್ತಿಕ್‌ ಔಟಾಗದೇ 28 ರನ್‌(10 ಎಸೆತ, 3 ಬೌಂಡರಿ, 2 ಸಿಕ್ಸರ್‌), ಮಹಿಪಾಲ್‌ ಔಟಾಗದೇ 17 ರನ್‌ (8 ಎಸೆತ, 2 ಬೌಂಡರಿ, 1 ಸಿಕ್ಸರ್‌) ರನ್‌ ಹೊಡೆದರು.

    ಆರ್‌ಸಿಬಿ ಆರಂಭದಲ್ಲೇ ವಿಕೆಟ್‌ ಕಳೆದುಕೊಂಡಿತು. ನಾಯಕ ಡುಪ್ಲೆಸಿಸ್‌ 3 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದರು. ಬೆನ್ನಲ್ಲೇ ಕ್ಯಾಮರೂನ್‌ ಗ್ರೀನ್‌ 3 ರನ್‌ ಗಳಿಸಿ ಔಟಾದರು. ನಂತರ ಬಂದ ರಜತ್‌ ಪಾಟಿದರ್‌ 18 ರನ್‌ ( 18 ಎಸೆತ, 1 ಬೌಂಡರಿ) ಹೊಡೆದು ಬೌಲ್ಡ್‌ ಆದರು. ಬೆನ್ನಲ್ಲೇ ಮ್ಯಕ್ಸ್‌ವೆಲ್‌ 3 ರನ್‌ ಗಳಿಸಿ ಹರ್‌ಪ್ರೀತ್‌ ಬ್ರಾರ್‌ಗೆ ಬೌಲ್ಡ್‌ ಆದರು.

    ಟಾಸ್‌ ಸೋತು ಮೊದಲ ಬ್ಯಾಟ್‌ ಮಾಡಿದ ಪಂಜಾಬ್‌ ಕಿಂಗ್ಸ್‌ಗೆ ನಾಯಕ ಶಿಖರ್‌ ಧವನ್‌ ಬಲ ತುಂಬಿ 45 ರನ್‌ (37 ಎಸೆತ, 4 ಬೌಂಡರಿ) ಹೊಡೆದು ಔಟಾದರು. ನಂತರ ಪ್ರಭಾಸಿಮ್ರಾನ್ ಸಿಂಗ್ 25 ರನ್‌, ಲಿವಿಂಗ್‌ ಸ್ಟೋನ್‌ 17 ರನ್‌, ಸ್ಯಾಮ್‌ ಕರ್ರನ್‌ 23 ರನ್‌ ರನ್‌ ಹೊಡೆದರು. ಕೊನೆಯಲ್ಲಿ ಶಶಾಂಕ್‌ ಸಿಂಗ್‌ 21 ರನ್‌ ( 8 ಎಸೆತ, 1 ಬೌಂಡರಿ, 2 ಸಿಕ್ಸರ್‌) ಜಿತೇಶ್‌ ಶರ್ಮಾ 27 ರನ್‌ (20 ಎಸೆತ, 1 ಬೌಂಡರಿ, 2 ಸಿಕ್ಸರ್‌) ಹೊಡೆದರು. ಅಂತಿಮವಾಗಿ ಪಂಜಾಬ್‌ ಕಿಂಗ್ಸ್‌ 20 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 176 ರನ್‌ ಗಳಿಸಿತು.

    ಸಿರಾಜ್‌ 2 ಮತ್ತು ಮ್ಯಾಕ್ಸ್‌ವೆಲ್‌ ತಲಾ ಎರಡು ವಿಕೆಟ್‌ ಪಡೆದರೆ ಯಶ್‌ ದಯಾಳ್‌, ಅಲ್ಜಾರಿ ಜೋಸೆಫ್‌ ತಲಾ ಒಂದೊಂದು ವಿಕೆಟ್‌ ಪಡೆದರು.

  • ಫಲಿಸದ ಪಂತ್‌ ಮ್ಯಾಜಿಕ್‌; ಕರ್ರನ್‌ ಅಮೋಘ ಅರ್ಧಶತಕ – ಪಂಜಾಬ್‌ ಕಿಂಗ್ಸ್‌ಗೆ 4 ವಿಕೆಟ್‌ ಜಯ

    ಫಲಿಸದ ಪಂತ್‌ ಮ್ಯಾಜಿಕ್‌; ಕರ್ರನ್‌ ಅಮೋಘ ಅರ್ಧಶತಕ – ಪಂಜಾಬ್‌ ಕಿಂಗ್ಸ್‌ಗೆ 4 ವಿಕೆಟ್‌ ಜಯ

    – ಲಿಯಾಮ್‌ ಲಿವಿಂಗ್‌ಸ್ಟೋನ್‌ ಬ್ಯಾಟಿಂಗ್‌ ಬಲ

    ಚಂಡೀಗಢ: ಸ್ಯಾಮ್‌ ಕರ್ರನ್‌ (Sam Curran) ಅಮೋಘ ಅರ್ಧಶತಕದ ಬ್ಯಾಟಿಂಗ್‌ ಹಾಗೂ ಸಂಘಟಿತ ಬೌಲಿಂಗ್‌ ಪ್ರದರ್ಶನದಿಂದ ಪಂಜಾಬ್‌ ಕಿಂಗ್ಸ್‌ ತಂಡವು ಡೆಲ್ಲಿ ಕ್ಯಾಪಿಟಲ್ಸ್‌ (Delhi Capitals) ವಿರುದ್ಧ 4 ವಿಕೆಟ್‌ಗಳ ಜಯ ಸಾಧಿಸಿದೆ.

    ಪಂಜಾಬ್‌ ಗೆಲುವಿಗೆ ಕೊನೇ ಓವರ್‌ನಲ್ಲಿ 6 ರನ್‌ಗಳ ಅಗತ್ಯವಿತ್ತು. ಆದ್ರೆ ಬೌಲಿಂಗ್‌ನಲ್ಲಿದ್ದ ಸುಮಿತ್ ಕುಮಾರ್ ಆರಂಭದಲ್ಲೇ 2 ವೈಡ್‌ ಎಸೆದರು. ಮೊದಲ ಎಸೆತದಲ್ಲಿ ಯಾವುದೇ ರನ್‌ ಬರಲಿಲ್ಲವಾದರೂ ಕ್ರೀಸ್‌ನಲ್ಲಿದ್ದ ಲಿಯಾಮ್‌ ಲಿವಿಂಗ್‌ಸ್ಟೋನ್‌ (Liam Livingstone) 2ನೇ ಎಸೆತದಲ್ಲಿ ಸಿಕ್ಸರ್‌ ಬಾರಿಸಿ ಗೆಲುವು ತಂದುಕೊಟ್ಟರು.

    ಪಂಜಾಬ್‌ನ ಮುಲ್ಲನ್ಪುರ್‌ನಲ್ಲಿರುವ ಮಹಾರಾಜ ಯಾದವೀಂದ್ರ ಸಿಂಗ್ ಕ್ರೀಡಾಂಗಣದಲ್ಲಿ ಟಾಸ್‌ ಗೆದ್ದು ಮೊದಲು ಫೀಲ್ಡಿಂಗ್‌ ಆಯ್ದುಕೊಂಡ ಪಂಜಾಬ್‌ ಕಿಂಗ್ಸ್‌ ಬ್ಯಾಟಿಂಗ್‌ ಮಾಡುವ ಅವಕಾಶವನ್ನು ಡೆಲ್ಲಿ ಕ್ಯಾಪಿಟಲ್ಸ್‌ಗೆ ಬಿಟ್ಟುಕೊಟ್ಟಿತು.

    ಮೊದಲು ಬ್ಯಾಟಿಂಗ್‌ ಮಾಡಿದ ರಿಷಭ್‌ ಪಂತ್‌ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್‌ ತಂಡ 20 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 174 ರನ್‌ ಗಳಿಸಿತ್ತು. 175 ರನ್‌ ಗಳ ಗುರಿ ಬೆನ್ನತ್ತಿದ್ದ ಪಂಜಾಬ್‌ ಕಿಂಗ್ಸ್‌ (Punjab Kings) 19.2 ಓವರ್‌ಗಳಲ್ಲೇ 6 ವಿಕೆಟ್‌ಗೆ 177 ರನ್‌ ಗಳಿಸಿ ಗೆಲುವು ಸಾಧಿಸಿತು.

    ಚೇಸಿಂಗ್‌ ಆರಂಭಿಸಿದ ಕಿಂಗ್ಸ್‌ ಪಂಜಾಬ್‌ ಉತ್ತಮ ಆರಂಭ ಪಡೆಯುವಲ್ಲಿ ವಿಫಲವಾಯಿತು. ಪವರ್‌ಪ್ಲೇನಲ್ಲೇ ಎರಡು ಪ್ರಮುಖ ವಿಕೆಟ್‌ ಕಳೆದುಕೊಂಡಿತು. ಆದ್ರೆ ಕ್ರೀಸ್‌ನಲ್ಲಿ ಭದ್ರವಾಗಿ ನೆಲೆಯೂರಿದ ಸ್ಯಾಮ್‌ ಕರ್ರನ್‌ 63 ರನ್‌ ಬಾರಿಸುವ ಮೂಲಕ ತಂಡಕ್ಕೆ ನೆರವಾದರು. ಕರ್ರನ್‌ ಜೊತೆಗೂಡಿದ ಲಿವಿಂಗ್‌ಸ್ಟೋನ್‌ ಸಹ ಇದಕ್ಕೆ ಸಾಥ್‌ ನೀಡಿದರು.

    ಕಿಂಗ್ಸ್‌ ಪಂಜಾಬ್‌ ಪರ ಸ್ಯಾಮ್‌ ಕರ್ರನ್‌ 63 ರನ್‌ (47 ಎಸೆತ, 6 ಬೌಂಡರಿ, 1 ಸಿಕ್ಸರ್‌), ಲಿವಿಂಗ್‌ಸ್ಟೋನ್‌ 38 ರನ್‌, ಶಿಖರ್‌ ಧವನ್‌ 22 ರನ್‌, ಜಾನಿ ಬೈರ್‌ಸ್ಟೋವ್‌ 9 ರನ್‌, ಪ್ರಭ್‌ಸಿಮ್ರನ್‌ ಸಿಂಗ್‌ 26 ರನ್‌, ಜಿತೇಶ್‌ ಶರ್ಮಾ 9 ರನ್‌, ಹರ್ಪ್ರೀರ್‌ ಬ್ರಾರ್‌ 2 ರನ್‌ ಗಳಿಸಿದರು.

    ಡೆಲ್ಲಿ ಪರ ಖಲೀಲ್‌ ಅಹ್ಮದ್‌, ಕುಲ್ದೀಪ್‌ ಯಾದವ್‌ 2 ವಿಕೆಟ್‌ ಕಿತ್ತರೆ, ಇಶಾಂತ್‌ ಶರ್ಮಾ ಒಂದು ವಿಕೆಟ್‌ ಕಿತ್ತರು.

    ಕೊನೇ ಓವರ್‌ನಲ್ಲಿ 25 ರನ್‌ ಚಚ್ಚಿದ ಅಭಿಷೇಕ್‌:
    ಮೊದಲು ಬ್ಯಾಟಿಂಗ್‌ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್‌ ಸ್ಫೋಟಕ ಆರಂಭದ ಹೊರತಾಗಿಯೂ ಅಗ್ರಕ ಕ್ರಮಾಂಕದ ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೀಡಾಯಿತು. 19 ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 149 ರನ್‌ ಗಳಿಸಿತ್ತು. ಡೆಲ್ಲಿ ತಂಡ 160 ರನ್‌ ತಲುಪುವುದೂ ಕಷ್ಟವಾಗಿತ್ತು. ಆದ್ರೆ ಇಂಪ್ಯಾಕ್ಟ್‌ ಪ್ಲೇಯರ್‌ ಆಗಿ ಕಣಕ್ಕಿಳಿದ ಪಶ್ಚಿಮ ಬಂಗಾಳದ ಅಭಿಷೇಕ್‌ ಪೋರೆಲ್‌ ಒಂದೇ ಓವರ್‌ನಲ್ಲಿ 25 ರನ್‌ ಚಚ್ಚಿದರು. ಇದರಿಂದ ತಂಡದ ಮೊತ್ತ 170 ರನ್‌ಗಳ ಗಡಿ ದಾಟಿತು.

    ಪಂತ್‌ ಕಂಬ್ಯಾಕ್‌ – ಅಭಿಮಾನಿಗಳಿಂದ ವೆಲ್‌ಕಮ್‌:
    ಕಾರು ಅಪಘಾತದಿಂದ ಗಂಭೀರವಾಗಿ ಗಾಯಗೊಂಡಿದ್ದ ಟೀಂ ಇಂಡಿಯಾ ಕ್ರಿಕೆಟಿಗ ರಿಷಭ್‌ ಪಂತ್‌ 14 ತಿಂಗಳ ಬಳಿಕ ಮತ್ತೆ ಕ್ರೀಸ್‌ಗಿಳಿದು ಬ್ಯಾಟಿಂಗ್‌ ಮಾಡಿದರು. ರಿಷಭ್‌ ಕ್ರೀಸ್‌ಗೆ ಬರುತ್ತಿದ್ದಂತೆ ಅಭಿಮಾನಿಗಳು ಎದ್ದು ನಿಂತು ಚಪ್ಪಾಳೆಯೊಂದಿಗೆ ಸ್ವಾಗತಿಸಿದರು.

    ಡೆಲ್ಲಿ ಪರ ಡೇವಿಡ್‌ ವಾರ್ನರ್‌ 29 ರನ್‌, ಮಿಚೆಲ್‌ ಮಾರ್ಷ್‌ 20 ರನ್‌, ಶಾಯಿ ಹೋಪ್‌ 33 ರನ್‌, ರಿಷಭ್‌ ಪಂತ್‌ 18 ರನ್‌, ರಿಕಿ ಭುಯಿ 3 ರನ್‌, ಟ್ರಿಸ್ಟಾನ್ ಸ್ಟಬ್ಸ್ 5 ರನ್‌, ಅಕ್ಷರ್‌ ಪಟೇಲ್‌ 21 ರನ್‌, ಸುಮಿತ್‌ ಕುಮಾರ್‌ 2 ರನ್‌, ಕುಲ್ದೀಪ್‌ 1 ರನ್‌ ಗಳಿಸಿದ್ರೆ, ಅಭಿಷೇಕ್‌ 10 ಎಸೆತಗಳಲ್ಲಿ 32 ರನ್‌ ಬಾರಿಸಿ ಕ್ರೀಸ್‌ನಲ್ಲಿ ಉಳಿದರು.

    ಪಂಜಾಬ್‌ ಪರ ಅರ್ಷ್‌ದೀಪ್‌ ಸಿಂಗ್‌, ಹರ್ಷಲ್‌ ಪಟೇಲ್‌ ತಲಾ 2 ವಿಕೆಟ್‌ ಕಿತ್ತರೆ, ಕಗಿಸೋ ರಬಾಡ, ಹರ್ಪ್ರೀತ್‌ ಬ್ರಾರ್‌, ರಾಹುಲ್‌ ಚಹಾರ್‌ ತಲಾ ಒಂದೊಂದು ವಿಕೆಟ್‌ ಪಡೆದರು.

  • KKR, SRH, LSG, PBKS ಫ್ರಾಂಚೈಸಿಗಳು ಉಳಿಸಿಕೊಂಡ ಹಾಗೂ ಬಿಡುಗಡೆ ಮಾಡಿದ ಆಟಗಾರರ ಪಟ್ಟಿ..

    KKR, SRH, LSG, PBKS ಫ್ರಾಂಚೈಸಿಗಳು ಉಳಿಸಿಕೊಂಡ ಹಾಗೂ ಬಿಡುಗಡೆ ಮಾಡಿದ ಆಟಗಾರರ ಪಟ್ಟಿ..

    ಮುಂಬೈ: 2024ರ ಐಪಿಎಲ್ ಹರಾಜು ಪ್ರಕ್ರಿಯೆಗೂ ಮುನ್ನ ಎಲ್ಲಾ ಫ್ರಾಂಚೈಸಿಗಳು ಉಳಿಸಿಕೊಂಡಿರುವ ಹಾಗೂ ಕೈ ಬಿಟ್ಟಿರುವ ಆಟಗಾರರ ಪಟ್ಟಿಯನ್ನು ಪ್ರಕಟಿಸಿವೆ. ಹಾಗೆಯೇ ಲಕ್ನೋ ಸೂಪರ್ ಜೈಂಟ್ಸ್, ಪಂಜಾಬ್ ಕಿಂಗ್ಸ್, ಕೋಲ್ಕತ್ತಾ ನೈಟ್ ರೈಡರ್ಸ್, ಸನ್‍ರೈಸರ್ಸ್ ಹೈದರಾಬಾದ್ ತಂಡಗಳು ಸಹ ತಮ್ಮ ಆಟಗಾರರ ಪಟ್ಟಿಯನ್ನು ಪ್ರಕಟಿಸಿವೆ.

    ಲಕ್ನೋ ಸೂಪರ್ ಜೈಂಟ್ಸ್
    ಕೆಎಲ್ ರಾಹುಲ್ (ನಾಯಕ), ಕ್ವಿಂಟನ್ ಡಿ ಕಾಕ್, ನಿಕೋಲಸ್ ಪೂರನ್, ಆಯುಷ್ ಬದೋನಿ, ಕೈಲ್ ಮೇಯರ್ಸ್, ಮಾರ್ಕಸ್ ಸ್ಟೊಯ್ನಿಸ್, ದೀಪಕ್ ಹೂಡಾ, ದೇವದತ್ ಪಡಿಕ್ಕಲ್ (ಆರ್‌ಆರ್ ತಂಡದಿಂದ ಟ್ರೇಡ್), ರವಿ ಬಿಷ್ಣೋಯ್, ನವೀನ್ ಉಲ್ ಹಕ್, ಕೃನಾಲ್ ಪಾಂಡ್ಯ, ಯುಧ್ವಿರ್ ಸಿಂಗ್, ಪ್ರೇರಕ್ ಮಂಕಡ್, ಯಶ್ ಠಾಕೂರ್, ಅಮಿತ್ ಮಿಶ್ರಾ, ಮಾರ್ಕ್ ವುಡ್, ಮಯಾಂಕ್ ಯಾದವ್, ಮೊಹ್ಸಿನ್ ಖಾನ್ ತಂಡಕ್ಕೆ ರಿಟೇನ್ ಆಗಿದ್ದಾರೆ.

    ಜಯದೇವ್ ಉನದ್ಕತ್, ಡೇನಿಯಲ್ ಸಾಮ್ಸ್, ಮನನ್ ವೋಹ್ರಾ, ಸ್ವಪ್ನಿಲ್ ಸಿಂಗ್, ಕರಣ್ ಶರ್ಮಾ, ಅರ್ಪಿತ್ ಗುಲೇರಿಯಾ, ಸೂಯಾರ್ಂಶ್ ಶೆಡ್ಗೆ, ಕರುಣ್ ನಾಯರ್ ಆಟಗಾರರನ್ನು ಕೈಬಿಡಲಾಗಿದೆ.

    ಸನ್ ರೈಸರ್ಸ್ ಹೈದರಾಬಾದ್
    ಅಬ್ದುಲ್ ಸಮದ್, ಐಡೆನ್ ಮಾಕ್ರ್ರಾಮ್, ರಾಹುಲ್ ತ್ರಿಪಾಠಿ, ಗ್ಲೆನ್ ಫಿಲಿಪ್ಸ್, ಮಯಾಂಕ್ ಅಗರ್ವಾಲ್, ಹೆನ್ರಿಚ್ ಕ್ಲಾಸೆನ್, ಅನ್ಮೋಲ್‍ಪ್ರೀತ್ ಸಿಂಗ್, ಉಪೇಂದ್ರ ಯಾದವ್, ನಿತೀಶ್ ಕುಮಾರ್ ರೆಡ್ಡಿ, ಅಭಿಷೇಕ್ ಶರ್ಮಾ, ಮಾರ್ಕೊ ಜಾನ್ಸೆನ್, ವಾಷಿಂಗ್ಟನ್ ಸುಂದರ್, ಸನ್ವಿರ್ ಸಿಂಗ್, ಭುವನೇಶ್ವರ್ ಕುಮಾರ್, ಫಜಲ್ಹಾಕ್ ಫರೂಕಿ, ಟಿ ನಟರಾಜನ್, ಉಮ್ರಾನ್ ಮಲಿಕ್, ಮಯಾಂಕ್ ಮಾಕರ್ಂಡೆ, ಶಹಬಾಜ್ ಅಹ್ಮದ್ (ಟ್ರೇಡಿಂಗ್) ತಂಡದಲ್ಲಿದ್ದಾರೆ.

    ಹ್ಯಾರಿ ಬ್ರೂಕ್, ಆದಿಲ್ ರಶೀದ್, ಅಕೇಲ್ ಹೊಸೈನ್, ಕಾರ್ತಿಕ್ ತ್ಯಾಗಿ, ವಿವ್ರಾಂತ್ ಶರ್ಮಾ, ಸಮರ್ಥ ವ್ಯಾಸ್ ಆಟಗಾರರಿಗೆ ತಂಡ ಕೊಕ್ ನೀಡಿದೆ.

    ಕೋಲ್ಕತ್ತಾ ನೈಟ್ ರೈಡರ್ಸ್
    ಮುಂಬರುವ ಐಪಿಎಲ್ ಹರಾಜಿನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಅತ್ಯುತ್ತಮ ಆಟಗಾರರನ್ನು ಆಯ್ಕೆ ಮಾಡಲು ಮುಂದಾಗಿದೆ. ಫ್ರಾಂಚೈಸಿಯು ಬರೋಬ್ಬರಿ 12 ಆಟಗಾರರನ್ನು ತಂಡದಿಂದ ಕೈಬಿಟ್ಟಿದೆ. ತಂಡವು ತನ್ನ ಹಳೆಯ ಆಟಗಾರರಾದ ರಸೆಲ್ ಹಾಗೂ ನರೈನ್ ಅವರನ್ನು ಉಳಿಸಿಕೊಂಡಿದೆ.

    ಗಾಯದ ಸಮಸ್ಯೆಯಿಂದಾಗಿ 2023ರ ಐಪಿಎಲ್‍ನಲ್ಲಿ ಹೊರಗುಳಿದಿದ್ದ ಶ್ರೇಯಸ್ ಅಯ್ಯರ್ ಈ ಬಾರಿಯ ಐಪಿಎಲ್‍ನಲ್ಲಿ ಆಡಲಿದ್ದಾರೆ. ಅತ್ಯುತ್ತಮ ಬ್ಯಾಟರ್ ರಿಂಕು ಸಿಂಗ್ ಅವರನ್ನು ಉಳಿಸಿಕೊಂಡಿದೆ. ಶಾರ್ದೂಲ್ ಠಾಕೂರ್ ಸೇರಿದಂತೆ ತಂಡದಿಂದ ಒಟ್ಟು 12 ಕ್ರಿಕೆಟಿಗರನ್ನು ಬಿಡುಗಡೆ ಮಾಡಿದೆ. ಶಕೀಬ್ ಅಲ್ ಹಸನ್, ಲಿಟ್ಟನ್ ದಾಸ್, ಆರ್ಯ ದೇಸಾಯಿ, ಡೇವಿಡ್ ವೈಸ್, ಶಾರ್ದೂಲ್ ಠಾಕೂರ್, ನಾರಾಯಣ್ ಜಗದೀಸನ್, ಮಂದೀಪ್ ಸಿಂಗ್, ಕುಲ್ವಂತ್ ಖೆಜ್ರೋಲಿಯಾ, ಲಾಕಿ ಫರ್ಗುಸನ್, ಉಮೇಶ್ ಯಾದವ್, ಟಿಮ್ ಸೌಥಿ, ಜಾನ್ಸನ್ ಚಾಲ್ರ್ಸ್ ಅವರನ್ನು ರಿಲೀಸ್ ಮಾಡಿದೆ.

    ಪಂಜಾಬ್ ಕಿಂಗ್ಸ್
    ಶಿಖರ್ ಧವನ್, ಜಿತೇಶ್ ಶರ್ಮಾ, ಜಾನಿ ಬೈರ್‍ಸ್ಟೋ, ಪ್ರಭಾಸಿಮ್ರಾನ್ ಸಿಂಗ್, ಲಿಯಾಮ್ ಲಿವಿಂಗ್‍ಸ್ಟನ್, ಮ್ಯಾಥ್ಯೂ ಶಾರ್ಟ್, ಹರ್‍ಪ್ರೀತ್ ಭಾಟಿಯಾ, ಅಥರ್ವ ಟೈಡೆ, ರಿಷಿ ಧವನ್, ಸ್ಯಾಮ್ ಕರನ್, ಸಿಕಂದರ್ ರಜಾ, ಶಿವಂ ಸಿಂಗ್, ಹರ್‍ಪ್ರೀತ್ ಬ್ರಾರ್, ಅರ್ಷದೀಪ್ ಸಿಂಗ್, ಕಗಿಸೊ ರಬಾಡಾ, ನಥನ್ ಎಲಿಸ್, ರಾಹುಲ್ ಚಹಾರ್, ಗುರ್ನೂರ್ ಬ್ರಾರ್, ವಿದ್ವತ್ ಕಾವೇರಪ್ಪ ತಂಡಕ್ಕೆ ರಿಟೇನ್ ಆಗಿದ್ದಾರೆ.

    ಶಾರುಖ್ ಖಾನ್, ರಾಜ್ ಬಾವಾ, ಬಲ್ತೇಜ್ ಧಂಡಾ, ಮೋಹಿತ್ ರಥಿ, ಭಾನುಕಾ ರಾಜಪಕ್ಸೆ ಅವರನ್ನು ತಂಡದಿಂದ ಕೈಬಿಡಲಾಗಿದೆ.

  • IPL 2023: ಸಂಜು ಸೈನ್ಯಕ್ಕೆ ಪ್ಲೇ ಆಫ್‌ ಕನಸು ಜೀವಂತ – ರಾಜಸ್ಥಾನ್‌ಗೆ 4 ವಿಕೆಟ್‌ಗಳ ರೋಚಕ ಜಯ

    IPL 2023: ಸಂಜು ಸೈನ್ಯಕ್ಕೆ ಪ್ಲೇ ಆಫ್‌ ಕನಸು ಜೀವಂತ – ರಾಜಸ್ಥಾನ್‌ಗೆ 4 ವಿಕೆಟ್‌ಗಳ ರೋಚಕ ಜಯ

    ಶಿಮ್ಲಾ: ಶಿಮ್ರಾನ್‌ ಹೆಟ್ಮೇಯರ್‌, ಯಶಸ್ವಿ ಜೈಸ್ವಾಲ್‌, ದೇವದತ್‌ ಪಡಿಕಲ್‌ ಸ್ಫೋಟಕ ಬ್ಯಾಟಿಂಗ್‌ ನೆರವಿನಿಂದ ರಾಜಸ್ಥಾನ್‌ ರಾಯಲ್ಸ್‌, ಪಂಜಾಬ್‌ ಕಿಂಗ್ಸ್‌ ವಿರುದ್ಧ 4 ವಿಕೆಟ್‌ಗಳ ರೋಚಕ ಜಯ ಸಾಧಿಸಿ ಪ್ಲೇ ಆಫ್‌ ಕನಸು ಜೀವಂತವಾಗಿಸಿಕೊಂಡಿದೆ. ಕೊನೆಯವರೆಗೂ ಹೋರಾಡಿದ ಪಂಜಾಬ್‌ ಕಿಂಗ್ಸ್‌ ಸೋಲಿನೊಂದಿಗೆ ವಿದಾಯ ಹೇಳಿದೆ.

    ಪಂಜಾಬ್‌ ವಿರುದ್ಧ ಗೆಲುವು ಸಾಧಿಸುವ ಮೂಲಕ 14 ಅಂಕ ಪಡೆದು +0.148 ರನ್‌ರೇಟ್‌ನೊಂದಿಗೆ 5ನೇ ಸ್ಥಾನಕ್ಕೆ ಜಿಗಿದಿದೆ. ಒಂದು ವೇಳೆ ಭಾನುವಾರದ ಪಂದ್ಯದಲ್ಲಿ ಆರ್‌ಸಿಬಿ ಹಾಗೂ ಮುಂಬೈ ತಂಡಗಳು ಸೋತರೇ ರಾಜಸ್ಥಾನ್‌ ರಾಯಲ್ಸ್‌ಗೆ ಪ್ಲೇ ಆಫ್‌ ತಲುಪುವ ಅವಕಾಶ ಸಿಗಲಿದೆ.

    ಹಿಮಾಚಲ ಪ್ರದೇಶದ ಧರ್ಮಶಾಲಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಕಿಂಗ್ಸ್‌ ಪಂಜಾಬ್‌ 20 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 187 ರನ್‌ ಗಳಿಸಿತ್ತು. ಬೃಹತ್‌ ಮೊತ್ತದ ಗುರಿ ಪಡೆದ ರಾಜಸ್ಥಾನ್‌ ರಾಯಲ್ಸ್‌ 19.4 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 189 ರನ್‌ ಗಳಿಸಿ ಗೆಲುವು ಸಾಧಿಸಿತು.

    ಕೊನೆಯ 4 ಓವರ್‌ಗಳಲ್ಲಿ ರಾಜಸ್ಥಾನ್‌ಗೆ 39 ರನ್‌ಗಳ ಅಗತ್ಯವಿತ್ತು. 17ನೇ ಓವರ್‌ನಲ್ಲಿ 6 ರನ್‌, 18ನೇ ಓವರ್‌ನಲ್ಲಿ 14 ರನ್‌ ಹಾಗೂ 19ನೇ ಓವರ್‌ನಲ್ಲಿ 11 ರನ್‌ ಸೇರ್ಪಡೆಯಾಯಿತು. ಈ ವೇಳೆ ಸ್ಫೋಟಕ ಆಟವಾಡುತ್ತಿದ್ದ ಶಿಮ್ರಾನ್‌ ಹೆಟ್ಮೇಯರ್‌ 28 ಎಸೆತಗಳಲ್ಲಿ ಭರ್ಜರಿ 46 ರನ್‌ (4 ಬೌಂಡರಿ, 3 ಸಿಕ್ಸ್‌) ಚಚ್ಚಿ ಔಟಾದರು. ಕೊನೆಯ 6 ಎಸೆತಗಳಲ್ಲಿ 9 ರನ್‌ ಬೇಕಿದ್ದಾಗ. ಮೊದಲ 3 ಎಸೆತಗಳಲ್ಲಿ 4 ರನ್‌ ಸೇರ್ಪಡೆಯಾಯಿತು. 4ನೇ ಎಸೆತದಲ್ಲಿ ಕ್ರೀಸ್‌ ತೆಗೆದುಕೊಂಡ ಧ್ರುವ್‌ ಜುರೆಲ್‌ ಸಿಕ್ಸ್‌ ಬಾರಿಸುವ ಮೂಲಕ ಜಯ ತಂದುಕೊಟ್ಟರು.

    ಚೇಸಿಂಗ್‌ ಆರಂಭಿಸಿದ ರಾಜಸ್ಥಾನ್ ರಾಯಲ್ಸ್‌ ಮೊದಲ ವಿಕೆಟ್‌ ಕಳೆದುಕೊಂಡರೂ 2 ವಿಕೆಟ್‌ಗೆ ಉತ್ತಮ ಆರಂಭ ಪಡೆಯಿತು. 2ನೇ ವಿಕೆಟ್‌ಗೆ ಜೊತೆಯಾದ ದೇವದತ್‌ ಪಡಿಕಲ್‌ ಹಾಗೂ ಯಶಸ್ವೀ ಜೈಸ್ವಾಲ್‌ ಭರ್ಜರಿ ಅರ್ಧ ಶತಕ ಸಿಡಿಸಿ ಔಟಾದರು.

    ಜೈಸ್ವಾಲ್‌ 36 ಎಸೆತಗಳಲ್ಲಿ 8 ಬೌಂಡರಿಗಳೊಂದಿಗೆ 50 ರನ್‌ ಗಳಿಸಿದರು. ಈ ಮೂಲಕ 14 ಲೀಗ್‌ ಪಂದ್ಯಗಳಲ್ಲಿ 600 ರನ್‌ ಪೂರೈಸಿದರು. ಪಡಿಕಲ್‌ 30 ಎಸೆತಗಳಲ್ಲಿ 51 ರನ್‌ (3 ಸಿಕ್ಸರ್‌, 5 ಬೌಂಡರಿ) ಚಚ್ಚಿದರು. ಕೊನೆಯ ಪಂದ್ಯದಲ್ಲೂ ನಾಯಕ ಸಂಜು ಸ್ಯಾಮ್ಸನ್‌ ಕೇವಲ 2 ರನ್‌ ಗಳಿಸಿ ನಿರಾಸೆ ಮೂಡಿಸಿದರು. ರಿಯಾನ್‌ ಪರಾಗ್‌ 12 ಎಸೆತಗಳಲ್ಲಿ 2 ಸಿಕ್ಸರ್‌, 1 ಬೌಂಡರಿಯೊಂದಿಗೆ 20 ರನ್‌ ಗಳಿಸುವ ಮೂಲಕ ತಂಡಕ್ಕೆ ಇನ್ನಷ್ಟು ರನ್‌ ಕೊಡುಗೆ ನೀಡಿದರು.

    ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಪಂಜಾಬ್‌ ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿದ ಸ್ಯಾಮ್‌ ಕರ್ರನ್‌, ಜಿತೇಶ್‌ ಶರ್ಮಾ ಹಾಗೂ ಶಾರೂಖ್‌ ಖಾನ್‌ ಬ್ಯಾಟಿಂಗ್‌ ನೆರವಿನಿಂದ 187 ರನ್‌ಗಳ ಬೃಹತ್‌ ಮೊತ್ತ ಪೇರಿಸಿತು.

    ಜಿತೇಶ್‌ ಶರ್ಮಾ 44 ರನ್‌ (28 ಎಸೆತ, 3 ಸಿಕ್ಸ್‌, 3 ಬೌಂಡರಿ) ಗಳಿಸಿದರೆ, ಶಾರೂಖ್‌ ಖಾನ್‌ 41 ರನ್‌ (23 ಎಸೆತ, 2 ಸಿಕ್ಸರ್‌, 4 ಬೌಂಡರಿ), ಸ್ಯಾಮ್‌ ಕರ್ರನ್‌ 49 ರನ್‌ (31 ಎಸೆತ, 4 ಬೌಂಡರಿ, 2 ಸಿಕ್ಸ್‌) ಗಳಿಸಿ ಅಜೇಯರಾಗುಳಿದರು. ನಾಯಕ ಶಿಖರ್‌ ಧವನ್‌ 17 ರನ್‌, ಅಥರ್ವ್‌ ಟೈಡೆ 19 ರನ್‌ ಕೊಡುಗೆ ನೀಡಿದರು.

    ರಾಜಸ್ಥಾನ್‌ ಪರ ನವದೀಪ್‌ ಸೈನಿ 4 ಓವರ್‌ಗಳಲ್ಲಿ 40 ರನ್‌ ನೀಡಿ 3 ವಿಕೆಟ್‌ ಕಿತ್ತರೆ, ಟ್ರೆಂಟ್‌ ಬೋಲ್ಟ್‌ ಹಾಗೂ ಆಡಂ ಜಂಪಾ ತಲಾ ಒಂದೊಂದು ವಿಕೆಟ್‌ ಪಡೆದು ಮಿಂಚಿದರು.

  • ರಸೆಲ್‌ 3 ಸಿಕ್ಸ್‌, ಕೊನೆಯ ಎಸೆತವನ್ನು ಬೌಂಡರಿಗಟ್ಟಿದ ರಿಂಕು – ಕೋಲ್ಕತ್ತಾಗೆ 5 ವಿಕೆಟ್‌ಗಳ ರೋಚಕ ಜಯ

    ರಸೆಲ್‌ 3 ಸಿಕ್ಸ್‌, ಕೊನೆಯ ಎಸೆತವನ್ನು ಬೌಂಡರಿಗಟ್ಟಿದ ರಿಂಕು – ಕೋಲ್ಕತ್ತಾಗೆ 5 ವಿಕೆಟ್‌ಗಳ ರೋಚಕ ಜಯ

    ಕೋಲ್ಕತ್ತಾ: ಕೊನೆಯಲ್ಲಿ ಆ್ಯಂಡ್ರೆ ರಸೆಲ್ (Andre Russell) ಮತ್ತು ರಿಂಕು ಸಿಂಗ್‌ (Rinku Singh ) ಅವರ ಸ್ಫೋಟಕ ಆಟದಿಂದ ಕೋಲ್ಕತ್ತಾ ನೈಟ್‌ ರೈಡರ್ಸ್‌ (Kolkata Knight Riders) ಪಂಜಾಬ್‌ ಕಿಂಗ್ಸ್‌ (Punjab Kings ) ವಿರುದ್ಧ 5 ವಿಕೆಟ್‌ಗಳ ರೋಚಕ ಜಯ ಸಾಧಿಸಿದೆ.

    180 ರನ್‌ಗಳ ಗುರಿಯನ್ನು ಪಡೆದ ಕೋಲ್ಕತ್ತಾ ಪರ ರಿಂಕು ಸಿಂಗ್‌ 20ನೇ ಓವರ್‌ನ ಕೊನೆಯ ಎಸೆತವನ್ನು ಬೌಂಡರಿಗೆ ಅಟ್ಟುವ ಮೂಲಕ ತಂಡಕ್ಕೆ ಗೆಲುವನ್ನು ತಂದುಕೊಟ್ಟರು.

    ಕೊನೆಯ 24 ಎಸೆತಗಳಲ್ಲಿಕೋಲ್ಕತ್ತಾ ಜಯಗಳಿಸಲು 54 ರನ್‌ಗಳ ಅಗತ್ಯವಿತ್ತು. 17ನೇ ಓವರ್‌ನಲ್ಲಿ 15 ರನ್‌ ಬಂದರೆ 18ನೇ ಓವರ್‌ನಲ್ಲಿ 10 ರನ್‌ ಬಂದಿತ್ತು. ಕೊನೆಯ 12 ಎಸೆತಗಳಲ್ಲಿ 26 ರನ್‌ ಬೇಕಿತ್ತು. ಸ್ಯಾಮ್‌ ಕರ್ರನ್‌ ಎಸೆದ 19ನೇ ಓವರ್‌ನಲ್ಲಿ ರಸೆಲ್‌ 3 ಸಿಕ್ಸ್‌ ಸಿಡಿಸಿದರು. ಈ ಓವರ್‌ನಲ್ಲಿ ಎರಡು ಸಿಂಗಲ್‌ ಸೇರಿ 20 ರನ್‌ ಬಂತು.

    ಕೊನೆಯ ಓವರನ್‌ಲ್ಲಿ 6 ರನ್‌ ಬೇಕಿತ್ತು. ಅರ್ಶದೀಪ್‌ ಎಸೆದ ಮೊದಲ ಎಸೆತದಲ್ಲಿ ಯಾವುದೇ ರನ್‌ ಬಂದಿರಲಿಲ್ಲ. ನಂತರದ ಎರಡು ಎಸೆತದಲ್ಲಿ ಸಿಂಗಲ್‌ ರನ್‌ ನಾಲ್ಕನೇ ಎಸೆತದಲ್ಲಿ 2 ರನ್‌ ಬಂತು. 5ನೇ ಎಸೆತ ಬ್ಯಾಟ್‌ ತಾಗದ ಬಾಲ್‌ ಕೀಪರ್‌ ಕೈಸೇರಿತು. ಈ ವೇಳೆ ರನ್‌ ಓಡಿದ ಪರಿಣಾಮ ರಸೆಲ್‌ ನಾನ್‌ಸ್ಟ್ರೈಕ್‌ನಲ್ಲಿ ರನೌಟ್‌ ಆದರು. ಕೊನೆಯ ಎಸೆತವನ್ನು ರಿಂಕು ಸಿಂಗ್‌ ಬೌಂಡರಿಗೆ ಅಟ್ಟಿದ ಪರಿಣಾಮ ಕೋಲ್ಕತ್ತಾ 5 ವಿಕೆಟ್‌ ನಷ್ಟಕ್ಕೆ 182 ರನ್‌ ಹೊಡೆಯುವ ಮೂಲಕ ಜಯಗಳಿಸಿತು. ಇದನ್ನೂ ಓದಿ: ಚುನಾವಣಾ ದಿನ ನಂದಿಗಿರಿಧಾಮ ಸಂಪೂರ್ಣ ಬಂದ್‌

    ರಸೆಲ್‌ 42 ರನ್‌(23 ಎಸೆತ, 3 ಬೌಂಡರಿ, 3 ಸಿಕ್ಸರ್‌) ಹೊಡೆದು ಔಟಾದರೆ ರಿಂಕು ಸಿಂಗ್‌ ಔಟಾಗದೇ 21 ರನ್‌(10 ಎಸೆತ, 2 ಬೌಂಡರಿ, 1 ಸಿಕ್ಸರ್‌) ಚಚ್ಚಿದರು. ಕೋಲ್ಕತ್ತಾ ಪರ ಜೇಸನ್‌ ರಾಯ್‌ 38 ರನ್‌(24 ಎಸೆತ, 8 ಬೌಂಡರಿ), ನಾಯಕ ನಿತೀಶ್‌ ರಾಣಾ 51 ರನ್‌(38 ಎಸೆತ, 6 ಬೌಂಡರಿ, 1 ಸಿಕ್ಸರ್) ಹೊಡೆದು ಔಟಾದರು.

    ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ ಪಂಜಾಬ್‌ ಕಿಂಗ್ಸ್‌ 53 ರನ್‌ ಗಳಿಸುವಷ್ಟರಲ್ಲೇ ಪ್ರಮುಖ ಮೂರು ವಿಕೆಟ್‌ ಕಳೆದುಕೊಂಡಿತ್ತು. ವಿಕೆಟ್‌ ಕಳೆದುಕೊಂಡಿದ್ದರೂ ನಾಯಕ ಶಿಖರ್‌ ಧವನ್‌ 57 ರನ್‌(47 ಎಸೆತ, 9 ಬೌಂಡರಿ, 1 ಸಿಕ್ಸರ್‌) ಹೊಡೆದು ತಂಡವನ್ನು ಮೇಲೆತ್ತಿದ್ದರು.

    ಲಿವಿಂಗ್‌ಸ್ಟೋನ್‌ 15 ರನ್‌, ಜಿತೇಶ್‌ ಶರ್ಮಾ 21 ರನ್‌, ರಿಶಿ ಧವನ್‌ 19 ರನ್‌ (11 ಎಸೆತ, 1 ಬೌಂಡರಿ, 1 ಸಿಕ್ಸರ್‌) ಹೊಡೆದು ಔಟದರು. ಕೊನೆಯಲ್ಲಿ ಶಾರೂಖ್‌ ಖಾನ್‌ ಔಟಾಗದೇ 21 ರನ್‌(8 ಎಸೆತ, 3 ಬೌಂಡರಿ, 1 ಸಿಕ್ಸರ್‌), ಹಪ್ರೀತ್‌ ಬ್ರಾರ್‌ ಔಟಾಗದೇ 17 ರನ್‌‌ (9 ಎಸೆತ, 2 ಬೌಂಡರಿ, 1 ಸಿಕ್ಸರ್) ಹೊಡೆದ ಕಾರಣ ಪಂಜಾಬ್‌ 7 ವಿಕೆಟ್‌ ನಷ್ಟಕ್ಕೆ 179 ರನ್‌ ಗಳಿಸಿತು.

  • ಪಂಜಾಬ್‌ ವಿರುದ್ಧ ಸೇಡು ತೀರಿಸಿಕೊಂಡ ಮುಂಬೈ – 6 ವಿಕೆಟ್‌ಗಳ ಭರ್ಜರಿ ಜಯ

    ಪಂಜಾಬ್‌ ವಿರುದ್ಧ ಸೇಡು ತೀರಿಸಿಕೊಂಡ ಮುಂಬೈ – 6 ವಿಕೆಟ್‌ಗಳ ಭರ್ಜರಿ ಜಯ

    ಮೊಹಾಲಿ: ಇಶಾನ್‌ ಕಿಶನ್‌ (Ishan Kishan) ಹಾಗೂ ಸೂರ್ಯಕುಮಾರ್‌ ಯಾದವ್‌ (Suryakumar Yadav) ಭರ್ಜರಿ ಅರ್ಧ ಶತಕಗಳ ಬ್ಯಾಟಿಂಗ್‌ ನೆರವಿನಿಂದ ಮುಂಬೈ ಇಂಡಿಯನ್ಸ್‌, ಕಿಂಗ್ಸ್‌ ಪಂಜಾಬ್‌ ತಂಡದ ವಿರುದ್ಧ 6 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ.

    ಗೆಲುವಿಗೆ 215 ರನ್‌ ಗುರಿ ಪಡೆದ ಮುಂಬೈ ಆಕ್ರಮಣ ಕಾರಿ ಬ್ಯಾಟಿಂಗ್‌ ನಿಂದ 18.5 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 216 ರನ್‌ ಗಳಿಸಿ ಭರ್ಜರಿ ಜಯ ಸಾಧಿಸಿದೆ. ಕಳೆದ ಪಂದ್ಯದಲ್ಲಿ ಮುಂಬೈ ತನ್ನ ತವರಿನಲ್ಲಿ ಅನುಭವಿಸಿದ ವಿರೋಚಿತ ಸೋಲಿಗೆ ಸೇಡುತೀರಿಸಿಕೊಂಡಿದ್ದು, ಪಾಯಿಂಟ್ಸ್‌ ಪಟ್ಟಿಯಲ್ಲಿ ಒಂದು ಸ್ಥಾನ ಮೇಲಕ್ಕೇರಿದೆ.

    ಚೇಸಿಂಗ್‌ ಆರಂಭಿಸಿದ ಮುಂಬೈ ಉತ್ತಮ ಆರಂಭ ಪಡೆಯುವಲ್ಲಿ ವಿಫಲವಾದರೂ, 2ನೇ ವಿಕೆಟ್‌ ಜೊತೆಯಾಟಕ್ಕೆ 6 ಓವರ್‌ಗಳಲ್ಲಿ 54 ರನ್‌ ಕಲೆಹಾಕಿತ್ತು. ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿದ ಸೂರ್ಯಕುಮಾರ್‌ ಯಾದವ್‌ (Suryakumar Yadav) ಹಾಗೂ ಇಶಾನ್ ‌ಕಿಶನ್‌ (Ishan Kishan) ಬ್ಯಾಟಿಂಗ್‌ ನೆರವಿನಿಂದ ಮುಂಬೈ ತಂಡ ಜಯ ಸಾಧಿಸುವಲ್ಲಿ ಯಶಸ್ವಿಯಾಯಿತು.

    ಪಂಜಾಬ್‌ ಬೌಲರ್‌ಗಳನ್ನು ಚೆಂಡಾಡಿದ ಈ ಜೋಡಿ ಕೇವಲ 55 ಎಸೆತಗಳಲ್ಲಿ ಬರೋಬ್ಬರಿ 116 ರನ್‌ ಸಿಡಿಸಿತ್ತು. ಕೊನೆಯಲ್ಲಿ ಕಣಕ್ಕಿಳಿದ ಟಿಮ್‌ ಡೇವಿಡ್‌ ಹಾಗೂ ತಿಲಕ್‌ ವರ್ಮಾ ಸ್ಫೋಟಕ ಬ್ಯಾಟಿಂಗ್‌ ತಂಡಕ್ಕೆ ಇನ್ನಷ್ಟು ನೆರವಾಯಿತು. ಮೊದಲ 10 ಓವರ್‌ಗಳಲ್ಲಿ 2 ವಿಕೆಟ್‌ ಕಳೆದುಕೊಂಡು 91 ರನ್‌ ಗಳಿಸಿದ್ದ ಮುಂಬೈಗೆ ಇನ್ನೂ 60 ಎಸೆತಗಳಲ್ಲಿ 124 ರನ್‌ಗಳ ಅಗತ್ಯವಿತ್ತು. ಆದರೆ ಮುಂಬೈ 18.5 ಓವರ್‌ಗಳಲ್ಲೇ 216 ರನ್‌ ಸಿಡಿಸಿ ಗೆದ್ದು ಬೀಗಿತು.

    ಮುಂಬೈ ಪರ ಇಶಾನ್‌ ಕಿಶನ್‌ 75 ರನ್‌ (41 ಎಸೆತ 4 ಸಿಕ್ಸರ್‌, 7 ಬೌಂಡರಿ), ಸೂರ್ಯಕುಮಾರ್‌ ಯಾದವ್‌ 66 ರನ್‌ (31 ಎಸೆತ, 8 ಬೌಂಡರಿ, 2 ಸಿಕ್ಸರ್‌), ಟಿಮ್‌ ಡೇವಿಡ್‌ 19 ರನ್‌ (10 ಎಸೆತ, 3 ಬೌಂಡರಿ), ತಿಲಕ್‌ ವರ್ಮಾ ಸ್ಫೋಟಕ 26 ರನ್‌ (10 ಎಸೆತ, 1 ಬೌಂಡರಿ, 3 ಸಿಕ್ಸರ್)‌ ಚಚ್ಚಿದರು.

    ಇದಕ್ಕೂ ಮುನ್ನ ಬ್ಯಾಟಿಂಗ್‌ ಮಾಡಿದ ಪಂಜಾಬ್‌ ಕಿಂಗ್ಸ್‌ ಸಹ ಉತ್ತಮ ಬ್ಯಾಟಿಂಗ್‌ ಪ್ರದರ್ಶನ ನೀಡಿತ್ತು. ಮೊದಲ 10 ಓವರ್‌ಗಳಲ್ಲಿ 2 ವಿಕೆಟ್‌ಗೆ 78 ರನ್‌ ಗಳಿಸಿತ್ತು. ಬಳಿಕ ಮುರಿಯದ 4ನೇ ವಿಕೆಟ್‌ಗೆ ಒಂದಾದ ಲಿಯಾಮ್‌ ಲಿವಿಂಸ್ಟೋನ್‌ (Liam Livingstone) ಹಾಗೂ ಜಿತೇಶ್‌ ಶರ್ಮಾ (Jitesh Sharma) 53 ಎಸೆತಗಳಲ್ಲಿ 119 ರನ್‌ ಸಿಡಿಸುವ ಮೂಲಕ ತಂಡದ ಮೊತ್ತ 200ರ ಗಡಿ ದಾಟಿಸುವಲ್ಲಿ ಯಶಸ್ವಿಯಾದರು.

    ಕಿಂಗ್ಸ್‌ ಪಂಜಾಬ್‌ ಪರ ಶಿಖರ್‌ ಧವನ್‌ 30 ರನ್‌, ಮ್ಯಾಥಿವ್‌ ಶಾರ್ಟ್‌ 27 ರನ್‌, ಲಿಯಾಮ್‌ ಲಿವಿಂಗ್ಸ್ಟನ್‌ ಭರ್ಜರಿ 82 ರನ್‌ (42 ಎಸೆತ, 7 ಬೌಂಡರಿ, 4 ಸಿಕ್ಸರ್‌), ಜಿತೇಶ್‌ ಶರ್ಮಾ 49 ರನ್‌ (27 ಎಸೆತ, 5 ಬೌಂಡರಿ, 2 ಸಿಕ್ಸರ್‌) ಚಚ್ಚಿದರು.

  • IPLನಲ್ಲಿ ನಂ.1 ಪಟ್ಟ ಕಳೆದುಕೊಳ್ಳದ RCB – ರನ್‌ ಹೊಳೆಯಲ್ಲಿ ತೇಲಾಡಿ 2ನೇ ಸ್ಥಾನಕ್ಕೇರಿದ ಲಕ್ನೋ

    IPLನಲ್ಲಿ ನಂ.1 ಪಟ್ಟ ಕಳೆದುಕೊಳ್ಳದ RCB – ರನ್‌ ಹೊಳೆಯಲ್ಲಿ ತೇಲಾಡಿ 2ನೇ ಸ್ಥಾನಕ್ಕೇರಿದ ಲಕ್ನೋ

    ಮೊಹಾಲಿ: ಇಲ್ಲಿನ ಐಎಸ್‌ ಬಿಂದ್ರಾ ಕ್ರೀಡಾಂಗಣದಲ್ಲಿ ಲಕ್ನೋ ಸೂಪರ್‌ ಜೈಂಟ್ಸ್‌ (Lucknow Super Giants) ಹಾಗೂ ಪಂಜಾಬ್‌ ಕಿಂಗ್ಸ್‌ (Punjab Kings) ನಡುವಿನ ರಣರೋಚಕ ಪಂದ್ಯದಲ್ಲಿ ಕೆ.ಎಲ್‌.ರಾಹುಲ್‌ (KL Rahul) ನಾಯಕತ್ವದ ಲಕ್ನೋ‌ ತಂಡ 56 ರನ್‌ಗಳ ಭರ್ಜರಿ ಜಯ ಸಾಧಿಸಿತು.

    ರನ್‌ ಹೊಳೆಯಲ್ಲಿ ತೇಲಾಡಿದ ಇತ್ತಂಡಗಳು ಕೊನೆಯವರೆಗೂ ಭರ್ಜರಿ ಬ್ಯಾಟಿಂಗ್‌ ನಡೆಸಿದವು. ಅಲ್ಲದೇ ಇದು ಐಪಿಎಲ್‌ನಲ್ಲಿ (IPL 2023) ಅತಿ ಹೆಚ್ಚು ರನ್‌ ದಾಖಲಾದ ಪಂದ್ಯ ಎನಿಸಿಕೊಂಡಿತು. ಆದ್ರೆ ಏಕೈಕ ತಂಡವಾಗಿ ಅತಿಹೆಚ್ಚು ರನ್‌ ಗಳಿಸಿ ನಂ.1 ಸ್ಥಾನದಲ್ಲಿರುವ ಆರ್‌ಸಿಬಿ ದಾಖಲೆ ಮುರಿಯುವಲ್ಲಿ ಲಕ್ನೋ ಸೂಪರ್‌ ಜೈಂಟ್ಸ್‌ ವಿಫಲವಾಯಿತು. ಇದನ್ನೂ ಓದಿ: ಸಿಕ್ಸರ್‌, ಬೌಂಡರಿಗಳ ಸುರಿಮಳೆ ಆಟಕ್ಕೆ ಪಂಜಾಬ್‌ ಪಂಚರ್‌, ಲಕ್ನೋಗೆ 56 ರನ್‌ಗಳ ಭರ್ಜರಿ ಜಯ

    2013ರ ಐಪಿಎಲ್‌ ಆವೃತ್ತಿಯಲ್ಲಿ ಪುಣೆ ವಾರಿಯರ್ಸ್‌ ವಿರುದ್ಧ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ತಂಡ 263 ರನ್‌ ಗಳಿಸಿತ್ತು. ಆದ್ರೆ ಎದುರಾಳಿ ಪುಣೆ ವಾರಿಯರ್ಸ್‌ 133 ರನ್‌ ಗಳಿಸಲಷ್ಟೇ ಸಾಧ್ಯವಾಗಿತ್ತು. ಈ ಪಂದ್ಯದಲ್ಲಿ ಆರ್‌ಸಿಬಿ 263 ರನ್‌ ಗಳಿಸಿದ್ದು ಈವರೆಗೆ ಯಾರೂ ಮುರಿಯದ ದಾಖಲೆಯಾಗಿದೆ. ಇದೀಗ ಲಕ್ನೋ ಸೂಪರ್‌ ಜೈಂಟ್ಸ್‌ ತಂಡ 257 ರನ್‌ ಗಳಿಸಿ 2ನೇ ಸ್ಥಾನಕ್ಕೇರಿದೆ. 7 ರನ್‌ಗಳ ಅಂತರದಲ್ಲಿ ನಂ1. ಪಟ್ಟದಿಂದ ತಪ್ಪಿಸಿಕೊಂಡಿದೆ. ವಿಶೇಷವೆಂದರೆ 3ನೇ ಸ್ಥಾನದಲ್ಲೂ ಆರ್‌ಸಿಬಿಯೇ (248 ರನ್‌ ಗಳಿಸಿ) ಇದ್ದು, 246 ರನ್‌ ಗಳಿಸಿದ್ದ ಚೆನ್ನೈ ಸೂಪರ್‌ ಕಿಂಗ್ಸ್‌ 4ನೇ ಸ್ಥಾನದಲ್ಲಿದೆ. ಇದನ್ನೂ ಓದಿ: ಕುಸ್ತಿಪಟುಗಳು ಬೀದಿಗಿಳಿದು ಪ್ರತಿಭಟನೆ ಮಾಡ್ತಿರೋದು ದೇಶದ ಘನತೆಗೆ ಧಕ್ಕೆ – ಪಿ.ಟಿ ಉಷಾ ಬೇಸರ

    ದಾಖಲೆ ಬರೆದ ಕಿಂಗ್ಸ್‌, ಜೈಂಟ್ಸ್‌: 2023ರ ಐಪಿಎಲ್‌ ಆವೃತ್ತಿಯಲ್ಲಿ ಕಿಂಗ್ಸ್‌ ಪಂಜಾಬ್‌ ಹಾಗೂ ಲಕ್ನೋ ಸೂಪರ್‌ ಜೈಂಟ್ಸ್‌ ನಡುವಿನ ಪಂದ್ಯ ಅತ್ಯಧಿಕ ರನ್‌ ಸಿಡಿಸಿದ ದಾಖಲೆ ಬರೆದಿದೆ. ಈ ಬಾರಿ ಚೆನ್ನೈ ಸೂಪರ್‌ ಕಿಂಗ್ಸ್‌ ಹಾಗೂ ಆರ್‌ಸಿಬಿ ನಡುವಿನ ಪಂದ್ಯದಲ್ಲಿ 240 ಎಸೆತಗಳಲ್ಲಿ 444 ರನ್‌ ದಾಖಲಾಗಿತ್ತು. ಆದ್ರೆ ನಿನ್ನೆ ಪಂದ್ಯದಲ್ಲಿ 239 ಎಸೆತಗಳಲ್ಲಿ ಬರೋಬ್ಬರಿ 458 ರನ್‌ ದಾಖಲಾಗಿದೆ. ಮೊದಲು ಬ್ಯಾಟಿಂಗ್‌ ಮಾಡಿದ ಲಕ್ನೋ 257 ರನ್‌ ಗಳಿಸಿದರೆ, ಚೇಸಿಂಗ್‌ನಲ್ಲಿ ಪಂಜಾಬ್‌ 19.5 ಓವರ್‌ಗಳಲ್ಲಿ 201 ರನ್‌ ಗಳಿಸುವ ಮೂಲಕ ಪೈಪೋಟಿ ನೀಡಿತು.

  • ಸಿಕ್ಸರ್‌, ಬೌಂಡರಿಗಳ ಸುರಿಮಳೆ ಆಟಕ್ಕೆ ಪಂಜಾಬ್‌ ಪಂಚರ್‌, ಲಕ್ನೋಗೆ 56 ರನ್‌ಗಳ ಭರ್ಜರಿ ಜಯ

    ಸಿಕ್ಸರ್‌, ಬೌಂಡರಿಗಳ ಸುರಿಮಳೆ ಆಟಕ್ಕೆ ಪಂಜಾಬ್‌ ಪಂಚರ್‌, ಲಕ್ನೋಗೆ 56 ರನ್‌ಗಳ ಭರ್ಜರಿ ಜಯ

    – ಐಪಿಎಲ್‌ನಲ್ಲಿ ದಾಖಲಾಯ್ತು ಎರಡನೇ ಅತ್ಯಧಿಕ ಮೊತ್ತ

    ಮೊಹಾಲಿ: ಸಿಕ್ಸರ್‌, ಬೌಂಡರಿಗಳ ಸುರಿಮಳೆ ಆಟದಲ್ಲಿ ಲಕ್ನೋ ಸೂಪರ್‌ ಜೈಂಟ್ಸ್‌ (Lucknow Super Giants) ಪಂಜಾಬ್‌ ಕಿಂಗ್ಸ್‌ (Punjab Kings) ವಿರುದ್ಧ 56 ರನ್‌ಗಳ ಭರ್ಜರಿ ಜಯ ಸಾಧಿಸಿದೆ.

    ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಲಕ್ನೋ 5 ವಿಕೆಟ್‌ ನಷ್ಟಕ್ಕೆ 257 ರನ್‌ ಹೊಡೆಯಿತು. ಭಾರೀ ಸವಾಲಿನ ಮೊತ್ತವನ್ನು ಬೆನ್ನಟ್ಟಿದ ಪಂಜಾಬ್‌ 19.5 ಓವರ್‌ಗಳಲ್ಲಿ 201 ರನ್‌ಗಳಿಗೆ ಆಲೌಟ್‌ ಆಯ್ತು

    ಪಂಜಾಬ್‌ ಆರಂಭದಲ್ಲೇ ತನ್ನ ಪ್ರಮುಖ ಎರಡು ವಿಕೆಟ್‌ ಕಳೆದುಕೊಂಡಿತ್ತು. ನಾಯಕ ಶಿಖರ್‌ ಧವನ್‌ 1 ರನ್‌ ಗಳಿಸಿ ಔಟಾದರೆ ಪ್ರಭಾಸಿಮ್ರಾನ್ ಸಿಂಗ್ 9 ರನ್‌ ಗಳಿಸಿ ಔಟಾದರು. ಆದರೆ ಅಥರ್ವ ತೈದೆ ಮತ್ತು ಸಿಕಂದರ್ ರಜಾ ಮೂರನೇ ವಿಕೆಟಿಗೆ 47 ಎಸೆತದಲ್ಲಿ 78 ರನ್‌ ಜೊತೆಯಾಟವಾಡಿದರು.

    ಅಥರ್ವ ತೈದೆ 66 ರನ್‌(36 ಎಸೆತ, 8 ಬೌಂಡರಿ, 2 ಸಿಕ್ಸರ್)‌, ಸಿಕಂದರ್‌ ರಾಜಾ 36 ರನ್‌(22 ಎಸೆತ, 4 ಬೌಂಡರಿ, 1 ಸಿಕ್ಸರ್‌) ಹೊಡೆದು ಔಟಾದರು. ಸ್ಯಾಮ್‌ ಕರ್ರನ್‌ 21 ರನ್‌(11 ಎಸೆತ, 2 ಬೌಂಡರಿ, 1 ಸಿಕ್ಸರ್‌), ಜಿತೇಶ್‌ ಶರ್ಮಾ 24 ರನ್‌( 10 ಎಸೆತ, 3 ಸಿಕ್ಸರ್‌) ಸಿಡಿಸಿ ಸ್ವಲ್ಪ ಪ್ರತಿರೋಧ ತೋರಿದರು. ಉಳಿದ ಆಟಗಾರರಿಂದ ನಿರೀಕ್ಷಿತ ಆಟ ಬಾರದ ಕಾರಣ ಪಂಜಾಬ್‌ 201 ರನ್‌ಗಳಿಗೆ ಆಲೌಟ್‌ ಆಯ್ತು. ಪಂಜಾಬ್‌ ಬ್ಯಾಟರ್‌ಗಳನ್ನು ನಿಯಂತ್ರಿಸಲು ಲಕ್ನೋ ಪರವಾಗಿ 8 ಮಂದಿ ಬೌಲ್‌ ಮಾಡಿದ್ದರು.

    ರನ್‌ ಸುರಿಮಳೆ:
    ಲಕ್ನೋ ತಂಡ ಆರಂಭದಿಂದಲೇ ಬ್ಯಾಟ್‌ ಬೀಸಲು ಆರಂಭಿಸಿತ್ತು. ಕೆಎಲ್‌ ರಾಹುಲ್‌ 12 ರನ್‌(9 ಎಸೆತ, 4 ಬೌಂಡರಿ, 1 ಸಿಕ್ಸರ್‌) ಹೊಡೆದು ಔಟಾದರು. ಕೈಲ್‌ ಮೇಯರ್ಸ್‌ ಮತ್ತು ಮಾರ್ಕಸ್ ಸ್ಟೊಯಿನಿಸ್ ಮೂರನೇ ವಿಕೆಟಿಗೆ 47 ಎಸೆತಗಳಲ್ಲಿ 89 ರನ್‌ ಜೊತೆಯಾಟವಾಡಿದರು. ನಾಲ್ಕನೇ ವಿಕೆಟಿಗೆ ಸ್ಟೊಯಿನಿಸ್ ಮತ್ತು ನಿಕೂಲಸ್‌ ಪೂರನ್‌ 30 ಎಸೆತಗಳಲ್ಲಿ 76 ರನ್‌ ಚಚ್ಚಿದರು.

    ಕೈಲ್‌ ಮೇಯರ್ಸ್‌ 54 ರನ್‌(24 ಎಸೆತ, 7 ಬೌಂಡರಿ, 4 ಸಿಕ್ಸರ್)‌ , ಆಯುಷ್ ಬದೋನಿ 43 ರನ್‌(24 ಎಸೆತ, 3 ಬೌಂಡರಿ, 3 ಸಿಕ್ಸರ್‌), ಸ್ಟೊಯಿನಿಸ್ 72 ರನ್‌(40 ಎಸೆತ, 6 ಬೌಂಡರಿ, 5 ಸಿಕ್ಸರ್‌), ನಿಕೂಲಸ್‌ ಪೂರನ್‌ 45 ರನ್‌(19 ಎಸೆತ, 7 ಬೌಂಡರಿ, 1 ಸಿಕ್ಸರ್)‌ ಹೊಡೆದು ಔಟಾದರು.

    ಲಕ್ನೋ ಬ್ಯಾಟರ್‌ಗಳನ್ನು ಕಟ್ಟಿ ಹಾಕಲು ಪಂಜಾಬ್‌ ತಂಡ 7 ಬೌಲರ್‌ಗಳನ್ನು ಬಳಸಿತ್ತು. ಅಷ್ಟೇ ಅಲ್ಲದೇ ಇತರ ರೂಪದಲ್ಲಿ 15 ರನ್‌(ಲೆಗ್‌ ಬೈ6, ನೋಬಾಲ್‌ 4, ವೈಡ್‌ 5) ನೀಡಿದ ಪರಿಣಾಮ ಲಕ್ನೋ 5 ವಿಕೆಟ್‌ ನಷ್ಟಕ್ಕೆ 257 ರನ್‌ ಹೊಡೆದಿತ್ತು.

    ಈ ಪಂದ್ಯದಲ್ಲಿ ಲಕ್ನೋ ಪರ 14 ಸಿಕ್ಸ್‌, 27 ಬೌಂಡರಿ ದಾಖಲಾದರೆ ಪಂಜಾಬ್‌ ಪರ 8 ಸಿಕ್ಸ್‌ 16 ಬೌಂಡರಿ ಸಿಡಿಯಲ್ಪಟ್ಟಿತ್ತು.

    ಎರಡನೇ ಅತ್ಯಧಿಕ ಮೊತ್ತ:
    ಲಕ್ನೋ ಇಂದು ಹೊಡೆದ 257 ರನ್‌ ಐಪಿಎಲ್‌ (IPL) ಇತಿಹಾಸದಲ್ಲಿ ತಂಡವೊಂದರ ಎರಡನೇ ಅತ್ಯಧಿಕ ಸ್ಕೋರ್‌ ಆಗಿದೆ. ಈ ಹಿಂದೆ 2013ರಲ್ಲಿ ಬೆಂಗಳೂರಿನಲ್ಲಿ ಪುಣೆ ವಾರಿಯರ್ಸ್‌ ವಿರುದ್ಧ ಆರ್‌ಸಿಬಿ 5 ವಿಕೆಟ್‌ ನಷ್ಟಕ್ಕೆ 263 ರನ್‌ ಹೊಡೆದಿತ್ತು. ಇದು ಈವರೆಗಿನ ತಂಡವೊಂದರ ಅತ್ಯಧಿಕ ಮೊತ್ತವಾಗಿದೆ.

    ಲಕ್ನೋ ತಂಡದ ರನ್‌ ಏರಿದ್ದು ಹೇಗೆ?
    50 ರನ್‌ – 20 ಎಸೆತ
    100 ರನ್‌ – 49 ಎಸೆತ
    150 ರನ್‌ – 77 ಎಸೆತ
    200 ರನ್‌ – 99 ಎಸೆತ
    250 ರನ್‌ – 116 ಎಸೆತ
    257 ರನ್‌ – 120 ಎಸೆತ

  • BCCIಗೆ ಲಕ್ಷ ಲಕ್ಷ ನಷ್ಟ – ಅರ್ಷ್‌ದೀಪ್‌ ಮುರಿದ 2 ಸ್ಟಂಪ್ಸ್‌ ಬೆಲೆ ಕೇಳಿದ್ರೆ ಶಾಕ್‌ ಆಗ್ತೀರಾ..

    BCCIಗೆ ಲಕ್ಷ ಲಕ್ಷ ನಷ್ಟ – ಅರ್ಷ್‌ದೀಪ್‌ ಮುರಿದ 2 ಸ್ಟಂಪ್ಸ್‌ ಬೆಲೆ ಕೇಳಿದ್ರೆ ಶಾಕ್‌ ಆಗ್ತೀರಾ..

    ಮುಂಬೈ: ಶನಿವಾರ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಮುಂಬೈ ಇಂಡಿಯನ್ಸ್‌ (Mumbai Indians)ಹಾಗೂ ಪಂಜಾಬ್‌ ಕಿಂಗ್ಸ್‌ (Punjab Kings) ನಡುವಿನ ಪಂದ್ಯವು ರೋಚಕತೆಯಿಂದ ಕೂಡಿತ್ತು. ಇತ್ತಂಡಗಳ ನಡುವೆ ಭರ್ಜರಿಯಾಗಿಯೇ ರನ್‌ ಹೊಳೆ ಹರಿದಿತ್ತು. ಫಾರ್ಮ್‌ ಕಳೆದುಕೊಂಡಿದ್ದ ಸೂರ್ಯಕುಮಾರ್‌ ಯಾದವ್‌ ಪಂಜಾಬ್‌ ಬೌಲರ್‌ಗಳನ್ನು ಬೆಂಡೆತ್ತಿ ಭರ್ಜರಿ ಅರ್ಧ ಶತಕ ಸಿಡಿಸಿದ್ದರು.

    ಕೊನೆಯ ಓವರ್‌ನಲ್ಲಿ ಮುಂಬೈಗೆ 16 ರನ್‌ ಗಳ ಅಗತ್ಯವಿದ್ದಾಗ ಯುವ ಎಡಗೈ ವೇಗಿ ಅರ್ಷ್‌ದೀಪ್‌ ಸಿಂಗ್‌ (Arshdeep Singh) ಎಸೆದ ಸತತ 2 ಯಾರ್ಕರ್‌ಗಳ ಮೂಲಕ ತಿಲಕ್ ವರ್ಮಾ ಮತ್ತು ನೆಹಾಲ್‌ ವಧೇರ ಅವರನ್ನ ಕ್ಲೀನ್‌ ಬೌಲ್ಡ್‌ ಮಾಡಿ ಮುಂಬೈಗೆ ಮರ್ಮಾಘಾತ ನೀಡಿದರು. ಅರ್ಷ್‌ದೀಪ್‌ ಎಸೆದ ಬೌಲಿಂಗ್‌ ವೇಗಕ್ಕೆ ಸತತವಾಗಿ 2‌ ಬಾರಿ ಸ್ಟಂಪ್‌ಗಳು ಮುರಿದು ಹೋಯಿತು. ಇದರಿಂದ ಬಿಸಿಸಿಐಗೆ ಭಾರೀ ನಷ್ಟವಾಗಿದೆ ಎಂದು ಅಂದಾಜು ಮಾಡಲಾಗಿದೆ. ಇದನ್ನೂ ಓದಿ: ಒಂದೇ ಓವರ್‌ನಲ್ಲಿ 31 ರನ್‌ ಕೊಟ್ಟ ಅರ್ಜುನ್‌ ತೆಂಡೂಲ್ಕರ್‌; ಹರ್ಷ ತಂದ ಅರ್ಷ್‌ದೀಪ್‌ – ಪಂಜಾಬ್‌ಗೆ 13 ರನ್‌ಗಳ ಜಯ

    ಪಂದ್ಯದಲ್ಲಿ 215 ರನ್‌ಗಳ ಗುರಿ ಬೆನ್ನತ್ತಿದ್ದ ಮುಂಬೈ ಇಂಡಿಯನ್ಸ್‌, ಸ್ಟಾರ್‌ ಬ್ಯಾಟರ್‌ಗಳಾದ ಕ್ಯಾಮರೂನ್‌ ಗ್ರೀನ್‌ (Cameron Green) ಮತ್ತು ಸೂರ್ಯಕುಮಾರ್‌ ಯಾದವ್‌ (Suryakumar Yadav) ಅವರ ಸ್ಪೋಟಕ ಅರ್ಧಶತಕಗಳ ಬಲದಿಂದ ಜಯದತ್ತ ದಾಪುಗಾಲಿಟ್ಟಿತ್ತು. ಆದ್ರೆ ಇನಿಂಗ್ಸ್‌ನ ಅಂತಿಮ ಓವರ್‌ನಲ್ಲಿ ಅರ್ಷ್‌ದೀಪ್‌ ಸಿಂಗ್‌ ಅವರ ಮಾರಕ ಯಾರ್ಕರ್‌ಗಳ ಎದುರು ಮುಂಬೈ ಇಂಡಿಯನ್ಸ್‌ ಲೆಕ್ಕಾಚಾರ ತಲೆಕೆಳಗಾದವು. ರೋಚಕ ಪಂದ್ಯದಲ್ಲಿ ಪಂಜಾಬ್‌ಗೆ 13 ರನ್‌ಗಳ ಜಯ ತಂದುಕೊಡುವಲ್ಲಿ ಅರ್ಷ್‌ದೀಪ್‌ ಸಿಂಗ್‌ ಯಶಸ್ವಿಯಾದರು. ಇದನ್ನೂ ಓದಿ: ಒಂದೇ ಓವರ್‌ನಲ್ಲಿ 31 ರನ್‌ – ಸಚಿನ್‌ ತೆಂಡೂಲ್ಕರ್‌ ಪುತ್ರನ ವಿರುದ್ಧ ಸಿಕ್ಕಾಪಟ್ಟೆ ಟ್ರೋಲ್‌

    LED ಸ್ಟಂಪ್ಸ್‌ನ ಬೆಲೆ ಎಷ್ಟು ಗೊತ್ತಾ?
    ಆಸ್ಟ್ರೇಲಿಯಾ ಮೂಲದ ಕ್ರೀಡಾ ಸರಕು ಉತ್ಪಾದನಾ ಸಂಸ್ಥೆ ತಯಾರಿಸುವ ಈ ಎಲ್‌ಇಡಿ ಸ್ಟಂಪ್ಸ್‌ ಮತ್ತು ಝಿಂಗ್‌ ಬೇಲ್ಸ್‌ ಸೆಟ್‌ನ ಬೆಲೆ 40 ರಿಂದ 50 ಸಾವಿರ ಡಾಲರ್‌. ಭಾರತೀಯ ರೂಪಾಯಿ ಮೌಲ್ಯಕ್ಕೆ ಇದನ್ನು ಪರಿವರ್ತಿಸಿದರೆ, 32 ರಿಂದ 41 ಲಕ್ಷ ರೂ. ಬೆಲೆ ಬಾಳುತ್ತದೆ. ಅರ್ಷ್‌ದೀಪ್‌ ಕ್ಯಾಮೆರಾ ಇರುವ ಮಧ್ಯದ ಸ್ಟಂಪ್‌ ಮುರಿದಿದ್ದು, ಈ ಸ್ಟಂಪ್ ಒಂದರ ಬೆಲೆಯೇ 24 ಲಕ್ಷ ರೂ. ಆಗಿದೆ ಎಂದು ಅಂದಾಜಿಸಲಾಗಿದೆ. 2 ಸ್ಟಂಪ್ಸ್‌ನಿಂದ ಒಟ್ಟಾರೆ 48 ಲಕ್ಷ ರೂ.ಗಳ ನಷ್ಟ ಬಿಸಿಸಿಗೆ ಎದುರಾಗಿದೆ. ಅಂದಹಾಗೆ ಈ ಬೆಲೆಗೆ ಎರಡು ಕಾರುಗಳನ್ನೇ ಖರೀದಿಸಬಹುದಿತ್ತು ಎಂದು ಹೇಳಲಾಗುತ್ತಿದೆ.