ಚಿಕ್ಕಮಗಳೂರು: ಸ್ಯಾಂಡಲ್‍ವುಡ್ ನಟ ಪುನೀತ್ ರಾಜ್ ಕುಮಾರ್ ಇಂದು ಚಿಕ್ಕಮಗಳೂರಿಗೆ ಭೇಟಿ ನೀಡಿದ್ದಾರೆ.
`ರಾಜಕುಮಾರ’ ಚಿತ್ರ 50 ದಿನ ಪೂರೈಸಿದ ಹಿನ್ನೆಲೆಯಲ್ಲಿ ನಟ ಪುನೀತ್ ರಾಜಕುಮಾರ್ ಹಾಗೂ ನಿರ್ದೇಶಕ ಸಂತೋಷ್ ಆನಂದ ರಾಮ್ ಚಿಕ್ಕಮಳೂರಿನ ಮಿಲನ ಚಿತ್ರಮಂದಿರಕ್ಕೆ ಚಿತ್ರದ ಪ್ರಮೋಷನ್‍ಗಾಗಿ ಭೇಟಿ ನೀಡಿದ್ರು. ಇದೇ ವೇಳೆ ಪುನೀತ್ ಚಿತ್ರದ ಟೈಟಲ್ ಹಾಡನ್ನ ಹಾಡಿ ಅಭಿಮಾನಿಗಳನ್ನ ರಂಜಿಸಿದ್ರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪುನೀತ್, `ನಾನು ಚಿಕ್ಕಮಗಳೂರಿಗೆ ಯಾವಾಗ್ಲೂ ಬರ್ತಿರ್ತೇನೆ. ಆದ್ರೆ ಈ ಭೇಟಿ ತುಂಬಾ ವಿಶೇಷವಾದದ್ದು. ಯಾಕಂದ್ರೆ ಅಪ್ಪು ಸಿನಿಮಾದ ಬಳಿಕ ಚಿತ್ರದ ಪ್ರಮೋಷನ್‍ಗಾಗಿ ಇದೇ ಮೊದಲು ಚಿಕ್ಕಮಗಳೂರಿಗೆ ಬರ್ತಿದ್ರೋದು ಅಂದ್ರು. ಇನ್ನು ಇಲ್ಲಿಂದ ಹಾಸನ ಹಾಗೂ ಮೈಸೂರಿಗೆ ತೆರಳುವುದಾಗಿ ಹೇಳಿದ್ರು.
ಪುನೀತ್ ಭೇಟಿ ನೀಡಿದ ವಿಷಯ ತಿಳಿಯುತ್ತಿದ್ದಂತೆಯೇ ತಮ್ಮ ನೆಚ್ಚಿನ ನಟನನ್ನ ನೋಡಲು ಚಿತ್ರಮಂದಿರದ ಹೊರಗೆ ಸಾವಿರಾರು ಅಭಿಮಾನಿಗಳು ಸೇರಿದ್ರು. ಪುನೀತ್ ಭಾಷಣದುದ್ದಕ್ಕೂ ಚಿಕ್ಕಮಗಳೂರು ಅಳಿಯನಿಗೆ ಜೈ ಅಂತಾ ಅಭಿಮಾನಿಗಳು ಘೋಷಣೆ ಕೂಗಿದ್ರು.
ಬೆಂಗಳೂರು: ಸೋಮವಾರ ವರನಟ ಡಾ.ರಾಜಕುಮಾರ್ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ರಾಜಕುಮಾರ ಚಿತ್ರತಂಡದಿಂದ ಅಭಿಮಾನಿಗಳಿಗೆ ವಿಶೇಷ ಆಫರ್ ನೀಡಲಾಗಿದೆ.
ಸೋಮವಾರ ರಾಜಕುಮಾರ ಸಿನಿಮಾ ನೋಡುವ ಪ್ರೇಕ್ಷಕರಿಗೆ ಪ್ರತಿ ಟಿಕೆಟ್ ಬೆಲೆಯಲ್ಲಿ ಅರ್ಧದಷ್ಟು ಹಣ ಕಡಿತಗೊಳಿಸಲಾಗುತ್ತದೆ. ರಾಜ್ಯದಲ್ಲೆಡೆ ರಾಜಕುಮಾರ ಚಿತ್ರ ಉತ್ತಮ ಪ್ರದರ್ಶನ ಕಾಣುತ್ತಿದ್ದು, ಡಾ.ರಾಜ್ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಅಭಿಮಾನಕ್ಕಾಗಿ ಚಿತ್ರತಂಡದಿಂದ ಈ ವಿಶೇಷ ರಿಯಾಯಿತಿ ನೀಡಲಾಗುತ್ತಿದೆ.
ಪುನೀತ್ ರಾಜ್‍ಕುಮಾರ್ ಅಭಿನಯದ ರಾಜಕುಮಾರ ಚಿತ್ರ ಮಾರ್ಚ್ 24ರಂದು ಬಿಡುಗಡೆಗೊಂಡು ಯಶಸ್ವಿ ಪ್ರದರ್ಶನ ಕಾಣುತ್ತಿದೆ.
`ಮಿಸ್ಟರ್ ಅಂಡ್ ಮಿಸಸ್ ರಾಮಚಾರಿ’ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದ ಸಂತೋಷ್ ಆನಂದ್ ರಾಮ್ ನಿರ್ದೇಶನ ಮಾಡಿರುವ ಈ ಚಿತ್ರಕ್ಕೆ ವಿ.ಹರಿಕೃಷ್ಣ ಸಂಗೀತ ನೀಡಿದ್ದಾರೆ. ಇದೇ ಮೊದಲ ಬಾರಿಗೆ ದಕ್ಷಿಣದ ಸುಂದರಿ ಪ್ರಿಯಾ ಆನಂದ್ ಕನ್ನಡ ಚಿತ್ರದಲ್ಲಿ ನಟಿಸಿದ್ದು, ಚೊಚ್ಚಲ ಚಿತ್ರದಲ್ಲೇ ಪುನೀತ್ ರಾಜ್ ಕುಮಾರ್ ಗೆ ನಾಯಕಿಯಾಗಿ ಕಾಣಿಸಿಕೊಡಿದ್ದಾರೆ.
ಪ್ರಕಾಶ್ ರೈ, ಅನಂತ್ ನಾಗ್, ಅಚ್ಯುತ್ ಕುಮಾರ್, ಸಾಧುಕೋಕಿಲಾ, ಚಿಕ್ಕಣ್ಣ, ರಂಗಾಯಣ ರಘು, ತಮಿಳು ನಟ ಶರತ್ ಕುಮಾರ್, ಮಾಸ್ತಿಗುಡಿ ಚಿತ್ರದ ಕ್ಲೈಮ್ಯಾಕ್ಸ್ ವೇಳೆ ಹೆಲಿಕಾಪ್ಟರ್ನಿಂದ ಹಾರಿ ತಿಪ್ಪಗೊಂಡನಹಳ್ಳಿ ಜಲಾಶಯದಲ್ಲಿ ಮುಳುಗಿ ಮೃತಪಟ್ಟಿದ್ದ ಅನಿಲ್ ಸೇರಿದಂತೆ ದೊಡ್ಡ ತಾರಾ ಬಳಗವೇ ಚಿತ್ರದಲ್ಲಿದೆ.
ಬೆಂಗಳೂರು: ದಾವಣಗೆರೆ ಮೂಲದ ಪುನೀತ್ ಅಭಿಮಾನಿಯಾದ ಪುಟ್ಟ ಬಾಲಕಿಯ ಕಿಡ್ನಿ ವೈಫಲ್ಯದ ಬಗ್ಗೆ ಪಬ್ಲಿಕ್ ಟಿವಿ ವರದಿ ಮಾಡಿತ್ತು. ಪಬ್ಲಿಕ್ ಟಿವಿ ವರದಿಯ ನಂತರ ಪುನೀತ್ ಅಭಿಮಾನಿಯನ್ನು ಭೇಟಿ ಮಾಡಿ ಕಿಡ್ನಿ ಹಾಕಿಸಿ ಚಿಕಿತ್ಸೆ ಕೊಡಿಸೋದಾಗಿ ಹೇಳಿದ್ರು. ಅದರಂತೆಯೆ ಈಗ ಪುಟ್ಟ ಬಾಲಕಿಯ ಶಸ್ತ್ರಚಿಕಿತ್ಸೆಗೆ ನೆರವಾಗಿದ್ದಾರೆ.
ದಾವಣಗೆರೆ ಮೂಲದ 12 ವರ್ಷದ ಬಾಲಕಿ ಪ್ರೀತಿ ಪವರ್‍ಸ್ಟರ್ ಪುನೀತ್ ರಾಜ್‍ಕುಮಾರ್ ಅವರ ಕಟ್ಟಾ ಅಭಿಮಾನಿ. ಈಕೆ ಆರನೇ ತರಗತಿ ಓದುತ್ತಿದ್ದು, ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದಳು. ಜೀವನದ ಮೇಲೆ ಆಸೆಯನ್ನೇ ತೊರೆದಿದ್ದ ಈಕೆಗೆ ಒಮ್ಮೆ ಪುನೀತ್‍ರನ್ನ ನೋಡಬೇಕು, ನಂತರ ನನ್ನ ಪ್ರಾಣ ಹೋದರೂ ಪರವಾಗಿಲ್ಲ ಎಂದಿದ್ದಳು. ಇದನ್ನ ಪುನೀತ್ ಹುಟ್ಟುಹಬ್ಬದಂದು ಪಬ್ಲಿಕ್ ಟಿವಿ ವರದಿ ಮಾಡಿತ್ತು. ವರದಿಗೆ ಸ್ಪಂದಿಸಿದ ಪುನೀತ್ ರಾಜ್‍ಕುಮಾರ್ ಬಾಲಕಿ ಭೇಟಿ ಮಾಡಿ ಚಿಕಿತ್ಸೆ ಕೊಡಿಸೋದಾಗಿ ಹೇಳಿದ್ರು. ಅದರಂತೆ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಬಾಲಕಿಗೆ ಚಿಕಿತ್ಸೆ ಕೊಡಿಸ್ತಿದ್ದಾರೆ.
ಎರಡೂ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಬಾಲಕಿಗೆ ಯಾರಾದ್ರೂ ಕಿಡ್ನಿ ದಾನ ಮಾಡಿದ್ರೆ ಬದುಕುವ ಭರವಸೆ ನೀಡಿದ್ರು ವೈದ್ಯರು. ಅದರಂತೆ ಬಾಲಕಿ ತಂದೆ ಕುಮಾರ್ ಮಗಳ ಭವಿಷ್ಯಕ್ಕಾಗಿ ಒಂದು ಕಿಡ್ನಿಗಳನ್ನು ದಾನ ಮಾಡ್ತಿದ್ದಾರೆ. ಮಣಿಪಾಲ್ ವೈದ್ಯರು ತಂದೆಯ ಕಿಡ್ನಿಯನ್ನು ಮಗಳಿಗೆ ಜೋಡಣೆ ಮಾಡಲು ಸಿದ್ಧರಿದ್ದು, ವೈದ್ಯಕೀಯ ಪರೀಕ್ಷೆಗಳನ್ನು ಮಾಡ್ತಿದ್ದಾರೆ.
ಅಭಿಮಾನಿಯ ಕಷ್ಟಕ್ಕೆ ಸ್ಪಂದಿಸಿರೋ ಪುನೀತ್, ಬಾಲಕಿಗೆ ಬದುಕು ನೀಡ್ತಿರೋದು ನಿಜಕ್ಕೂ ಶ್ಲಾಘನೀಯ.
ಬೆಂಗಳೂರು: ಕಳೆದ ವಾರವಷ್ಟೆ ಬಿಡುಗಡೆಯಾಗಿ ಕನ್ನಡ ಚಿತ್ರರಂಗದಲ್ಲೇ ಧೂಳೆಬ್ಬಿಸಿದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ `ರಾಜಕುಮಾರ’ ಚಿತ್ರವನ್ನು ವೀಕ್ಷಿಸಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕಣ್ಣೀರು ಹಾಕಿದ್ದಾರೆ.
ಇಂದು ಶಿವರಾಜ್ ಕುಮಾರ್ ತಮ್ಮ ಕುಟುಂಬದವರೊಂದಿಗೆ `ರಾಜಕುಮಾರ’ ಚಿತ್ರ ವೀಕ್ಷಿಸಿದ್ರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಶಿವಣ್ಣ, ಒಂದು ಸಿಂಪಲ್ ಸಿನೆಮಾ. ಇದನ್ನ ಅಪ್ಪಾಜಿ ಸಿನೆಮಾ ಅಂತಾನೂ ಹೇಳಕ್ಕಾಗಲ್ಲ. ಅಪ್ಪು ಸಿನೆಮಾ ಅಂತಾನೂ ಹೇಳಕ್ಕಾಗಲ್ಲ. ರಾಜ್‍ಕುಮಾರ್ ಅಂದ್ರೆ ಅಪ್ಪಾಜಿ ಒಬ್ರೆ ಅಲ್ಲ. ಪ್ರತಿಯೊಬ್ಬರ ಮನದಲ್ಲಿ ಕಿಂಗ್ ಪವರ್ ಇರುತ್ತೆ. ಮನಸ್ಸಲ್ಲಿ ಎಷ್ಟರ ಮಟ್ಟಿಗೆ ಪ್ರೀತಿ ಇರತ್ತೋ ಅದೇ ಒಬ್ಬನಲ್ಲಿರೋ ಕಿಂಗ್ ಪವರ್. ಪ್ರಜೆ ಯಾಕೆ ಒಬ್ಬನನ್ನು ಮಹರಾಜ ಮಾಡ್ತಾನೆ ಅಂದ್ರೆ ಎಲ್ಲರನ್ನ ಪ್ರೀತಿಸೋದಕ್ಕೆ. ಅಂತೆಯೇ ಪ್ರತಿಯೊಬ್ಬರ ಮನದಲ್ಲೂ ಒಬ್ಬ ರಾಜಕುಮಾರ್ ಇರ್ತಾನೆ. ಅಪ್ಪು ನನಗೆ ಸ್ಫೂರ್ತಿ. ಅಂತಹ ತಮ್ಮನನ್ನು ಪಡೆದಿರೋದು ಹೆಮ್ಮೆ ಅನ್ನಿಸುತ್ತೆ. ಇವತ್ತು ನಮ್ಮ ಅಪ್ಪಾಜಿ ತುಂಬಾ ನೆನಪಾಗ್ತಾರೆ. ಸಿನಿಮಾ ನೊಡಿದಾಗ ಅವರನ್ನ ತುಂಬಾ ಮಿಸ್ ಮಾಡ್ಕೋತೀವಿ ಅಂತ ಭಾವುಕರಾದ್ರು.
ಅಪ್ಪಾಜಿ ಇಲ್ಲದೆ ಇರೋದು ಎಷ್ಟು ನೋವು ಅನ್ನೋದು ಇವತ್ತು ಗೊತ್ತಾಗುತ್ತೆ ಅಂತಾ ಮರು ಮಾತಾಡದೇ ಇಟ್ಸ್ ಗ್ರೇಟ್ ಸಿನಿಮಾ ಅಂತ ಶಿವಣ್ಣ ಕಣ್ಣೀರು ಹಾಕಿದ್ರು.
ಬೆಂಗಳೂರು: ಸ್ಯಾಂಡಲ್‍ವುಡ್‍ನಲ್ಲಿ ಚಕ್ರವರ್ತಿ ಟ್ರೇಲರ್ ಹೊಸ ದಾಖಲೆ ಬರೆದಿದೆ. ರಿಲೀಸ್ ಆದ 24 ಗಂಟೆಯಲ್ಲಿ 9 ಲಕ್ಷ ವ್ಯೂ ಕಂಡ ಮೊದಲ ಟ್ರೇಲರ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಈ ಮೊದಲು ಕನ್ನಡದಲ್ಲಿ ರಾಜಕುಮಾರ ಚಿತ್ರದ ಅಪ್ಪು ಡ್ಯಾನ್ಸ್ ವಿಡಿಯೋ 24 ಗಂಟೆಯಲ್ಲಿ 7 ಲಕ್ಷ ವ್ಯೂ ಕಂಡಿತ್ತು. ಆದರೆ ಈಗ ಈ ದಾಖಲೆಯನ್ನು ಚಕ್ರವರ್ತಿ ಬ್ರೇಕ್ ಮಾಡಿದೆ. ಈಗ ಒಂದೂವರೆ ದಿನದಲ್ಲಿ 10 ಲಕ್ಷಕ್ಕೂ ಹೆಚ್ಚು ವ್ಯೂ ಕಂಡಿದೆ. ಇಲ್ಲಿಯವರೆಗೆ ಚೌಕ ಚಿತ್ರದ ಅಲ್ಲಾಡ್ಸು ಅಲ್ಲಾಡ್ಸು ಹಾಡು ಯೂಟ್ಯೂಬ್‍ನಲ್ಲಿ ಒಂದೇ ದಿನದಲ್ಲಿ ನಾಲ್ಕು ಲಕ್ಷ ವೀಕ್ಷಣೆಯಾಗಿ ಸದ್ದು ಮಾಡಿತ್ತು.
ಟ್ರೇಲರ್‍ನಲ್ಲಿ ಏನಿದೆ?: ಯುಗಾದಿ ಹಬ್ಬದಂದು 1ಚಕ್ರವರ್ತಿ’ ಚಿತ್ರದ ಟ್ರೇಲರ್ ಬಿಡುಗಡೆಗೊಂಡಿದ್ದು, ದರ್ಶನ್ ಅಭಿಮಾನಿಗಳಿಗೆ ರಸದೌತಣ ನೀಡಿದೆ. ಟ್ರೇಲರ್ ರಿಲೀಸ್ ಆದ ಕೇವಲ 2 ಗಂಟೆಯಲ್ಲಿ 2 ಲಕ್ಷ ಮಂದಿ ಹಬ್ಬದ ಸಂಭ್ರಮದ ಮಧ್ಯೆಯೂ ವೀಕ್ಷಿಸಿದ್ದಾರೆ. ಪ್ರತಿ ಸ್ಟಾರ್‍ಗಳ ಸಿನಿಮಾ ಟ್ರೇಲರ್ ಬಂದಾಗಲೂ ಹೀಗಾಗುತ್ತದೆ. ಆದ್ರೆ ಈ ಬಾರಿ ಚಕ್ರವರ್ತಿ ದಾಖಲೆ ನಿರ್ಮಿಸಿದೆ.
ಟ್ರೇಲರ್ ಬಗ್ಗೆ: ಮೊದಲೇಟಿಗೆ `ಟ್ರೆಲರ್‍ನಲ್ಲೇ ಇಷ್ಟೊಂದು ಸ್ಟನ್ನಿಂಗ್ ಸೀನ್ ಇವೆಯಲ್ಲ ಅಂತಾ ಅನಿಸೋದು ಸಹಜ. ಇಡೀ ಟ್ರೇಲರ್‍ನಲ್ಲಿ ಒಂದೇ ಒಂದು ಡೈಲಾಗ್ ಇಲ್ಲ. ಬರೀ ಚಿಕ್ಕ ಚಿಕ್ಕ ಶಾಟ್‍ಗಳು. ಎಡಿಟರ್ ಮಾತ್ರ ಸಿನಿಮಾದ ಗುಟ್ಟನ್ನು ಪೂರ್ತಿ ಬಿಟ್ಟು ಕೊಟ್ಟಿಲ್ಲ. ಮತ್ತು ಕತೆ ಏನೆನ್ನುವ ಸೂಚೆನೆಯನ್ನೂ ಕೊಟ್ಟಿದ್ದಾನೆ. ಅದನ್ನು ನೋಡುತ್ತಿದ್ದರೆ ಇಡೀ ಸಿನಿಮಾ ಸಿಕ್ಕಾ ಪಟ್ಟೆ ರಿಚ್ ಆಗಿ ಬಂದಿರುವುದಲ್ಲಿ ಅನುಮಾನನೇ ಇಲ್ಲ. ಯಾಕೆಂದರೆ ಪ್ರತಿಯೊಂದು ಶಾಟ್‍ನಲ್ಲಿ ಅದು ಕಾಣುತ್ತದೆ. ಒಂದು ನಿಮಿಷದಷ್ಟಿರುವ ಈ ಟ್ರೇಲರ್‍ನಲ್ಲಿ ದರ್ಶನ್ ಫುಲ್ ಮಿಂಚಿಂಗೋ ಮಿಂಚಿಂಗು.
ಢಿಫರೆಂಟ್ ಸ್ಟೈಲಿನಲ್ಲಿ ದರ್ಶನ್: ಮೂರು ಶೇಡ್‍ನ ಪಾತ್ರದಲ್ಲಿ ದರ್ಶನ್ ಕಾಣಿಸಿಕೊಂಡಿದ್ದಾರೆ ಎಂದು ಈಗಾಗಲೇ ಎಲ್ಲರಿಗೂ ಗೊತ್ತಿದೆ. ಮೂರು ಮೂರು ಗೆಟಪ್‍ನಲ್ಲಿ ದರ್ಶನ್ ಸ್ಟೈಲಿಶ್ ಲುಕ್ ಕೊಟ್ಟಿದ್ದಾರೆ. ಎಂಬತ್ತರ ದಶಕದ ಬೆಲ್ ಬಾಟಮ್ ಪ್ಯಾಂಟು, ದೊಡ್ಡ ಕೊರಳ ಪಟ್ಟಿಯ ಶರ್ಟ್ ತೊಟ್ಟು, ಮಚ್ಚು ಹಿಡಿದು ಮ್ಯಾಜಿಕ್ ಮಾಡುವುದನ್ನು ನೋಡುವುದೇ ಒಂದು ಹಬ್ಬ. ಅದಕ್ಕೆ ದರ್ಶನ್ ಸಂಪೂರ್ಣ ಜೀವ ತುಂಬಿದ್ದಾರೆ. ಒಟ್ಟಿನಲ್ಲಿ ಚಿತ್ರದಲ್ಲಿ ಫ್ಯಾನ್ಸ್‍ಗಳಿಗೆ ಫಿದಾ ಆಗುವಂತೆ ದರ್ಶನ್ ನಟಿಸಿದ್ದಾರೆ.
ಇಡೀ ಟ್ರೇಲರ್‍ನಲ್ಲಿ ಒಂದು ಕ್ಷಣವೂ ಕಣ್ಣು ಮುಚ್ಚುವಂತಹ ಶಾಟ್‍ಗಳಿಲ್ಲ. ಬಹುತೇಕ ವಿದೇಶದಲ್ಲಿ ಶೂಟಿಂಗ್ ಮಾಡಿರುವುದು ಚಿತ್ರಕ್ಕೆ ರಿಚ್‍ನೆಸ್ ತಂದು ಕೊಟ್ಟಿದೆ. ಹೆಲಿಕಾಪ್ಟರ್, ರೇಸಿಂಗ್ ಬೋಟ್, ಅಪ್ ಡೇಟೆಡ್ ಕಾರುಗಳು. ಹೀಗೆ ಎಲ್ಲವೂ ಕತೆಗೆ ಹೊಸತನ ನೀಡಿವೆ. ಬೋಟ್ ಚೇಸಿಂಗ್ ದೃಶ್ಯವೂ ಇದೆ. ಗನ್‍ಗಳಿಂದ ಬುಲೆಟ್ ಹಾರುವುದು, ಮಚ್ಚಿನಿಂದ ಕೊಚ್ಚುವುದು, ಖಡಕ್ ಫೈಟಿಂಗ್ ದ್ರಶ್ಯಗಳು ಥ್ರಿಲ್ ಕೊಡುತ್ತವೆ. ಕಡುಗಂದು ಬಣ್ಣದ ಹೇರ್ ಸ್ಟೈಲ್‍ನಲ್ಲಂತೂ ದರ್ಶನ್ ಮಾಡುವ ಮೋಡಿಗೆ ಅಭಿಮಾನಿಗಳು ಬೌಲ್ಡ್ ಆಗಿದ್ದಾರೆ. ಈ ಕಾರಣಕ್ಕಾಗಿ ಬುಧವಾರ ಚಕ್ರವರ್ತಿ ಟ್ರೇಲರ್ ಸಾಮಾಜಿಕ ಜಾಲತಾಣದಲ್ಲಿ ಫುಲ್ ಟ್ರೆಂಡಿಂಗ್ ಆಗಿತ್ತು.
ಯಾರಿಗೆ ಯಾವ ಪಾತ್ರ: ಬಹುತೇಕ ಎಲ್ಲಾ ಪಾತ್ರಗಳನ್ನು ಇದರಲ್ಲಿ ನೋಡಬಹುದು. ಅದರಲ್ಲೂ ಡೆಡ್ಲಿ ಆದಿತ್ಯಾ ಇಲ್ಲಿ ಖಡಕ್ ಪೊಲೀಸ್ ಆಫೀಸರ್ ಆಗಿ ಕಾಣಿಸಿದ್ದಾರೆ. ಭೂಗತ ದೊರೆಯನ್ನು ಬೇಟೆಯಾಡುವ ಇನ್ಸ್ ಪೆಕ್ಟರ್ ಪಾತ್ರದಲ್ಲಿ ಮಿಂಚಿದ್ದಾರೆ. ಈ ಹಿಂದೆ ಸ್ನೇಹಾನಾ-ಪ್ರೀತಿನಾ ಎನ್ನುವ ಚಿತ್ರದಲ್ಲಿ ಇವರಿಬ್ಬರೂ ನಟಿಸಿದ್ದರು. ಆ ಬಳಿಕ ದೊಡ್ಡ ಬಜೆಟ್ ಚಿತ್ರದಲ್ಲಿ ಕಾಣಿಸಿರುವುದು ಇದರಲ್ಲೇ. ಶರತ್ ಲೋಹಿತಾಶ್ವ ಮತ್ತೊಬ್ಬ ಪೊಲೀಸ್ ಅಧಿಕಾರಿಯಾಗಿದ್ದಾರೆ. ಕಳೆದೇ ಹೋಗಿದ್ದ ಶಿವಧ್ವಜ ಇಲ್ಲಿ ರಿಚ್ ಲುಕ್‍ನಲ್ಲಿ ಅಚ್ಚರಿ ಮೂಡಿಸುತ್ತಾರೆ. ದರ್ಶನ್ ಕುಚಿಕು ಗೆಳೆಯ ಸೃಜನ್ ಲೋಕೇಶ್ ಕೂಡ ಒಂದು ಪಾತ್ರ ಮಾಡಿದ್ದಾರೆ.
ಭೂಗತ ದೊರೆಯಾಗಿ ದರ್ಶನ್: ಕತೆಯ ಗುಟ್ಟನ್ನು ಬಿಚ್ಚಿಡುವ ಪಂಚಿಂಗ್ ಲೈನ್‍ಗಳು ಸಂಪೂರ್ಣ ಇಂಗ್ಲಿಷ್‍ಮಯ. ಕೆಲವರಿಗೆ ಅರ್ಥ ಆಗುವುದು ಕಷ್ಟ. ಒಟ್ಟು ಹೀಗೆ ಬರೋಬ್ಬರಿ ಹದಿನೆಂಟು ಲೈನ್‍ಗಳಿವೆ. ಒಂದೊಂದು ಸಾಲು ಒಂದೊಂದು ಕತೆಯನ್ನು ಹೇಳುತ್ತದೆ. ಮೊದಲ ನೋಟಕ್ಕೆ ಗೊತ್ತಾಗುವ ಸಂಗತಿ ಅಂದ್ರೆ, ಇದೊಂದು ಭೂಗತ ಲೋಕದ ಕತೆ ಎನ್ನುವುದು. ದರ್ಶನ್ ಇಲ್ಲಿ ಇಡೀ ವಿಶ್ವದ ಭೂಗತ ಲೋಕವನ್ನು ಆಳುವ ದೊರೆಯಾಗಿ ಕಾಣಿಸಿದ್ದಾರೆ. ಬುದ್ಧಿವಂತಿಕೆ ಮತ್ತು ಕ್ರೈಂ ಎರಡನ್ನೂ ಹೊಂದಿರುವ ಹೀರೊ ಆಗಿ ಕಾಣಿಸಿದ್ದಾರೆ. ನಾಯಕನಿಗೆ ಯಾವುದೇ ಕಾನೂನು ತಡೆಯುವುದಿಲ್ಲ ಎನ್ನುವ ಸಾಲು ಇನ್ನಷ್ಟು ಕುತೂಹಲ ಮೂಡಿಸುತ್ತದೆ.
ಈ ಚಿತ್ರವನ್ನು ಚಿಂತನ್ ನಿರ್ದೇಶಿಸಿದ್ದು, ಇದು ಅವರ ಮೊದಲ ಸಿನೆಮವಾಗಿದೆ. ಒಟ್ಟಿನಲ್ಲಿ ದರ್ಶನ್ ತುಂಬಾ ಇಷ್ಟ ಪಟ್ಟು ಮಾಡಿರುವ ಸಿನಿಮಾ ಇದು. ಈ ಹಿಂದಿನ ಜಗ್ಗುದಾದಾ ಗೆದ್ದರೂ ಅದರಲ್ಲಿ ದರ್ಶನ್ ಫ್ಯಾನ್ಸ್‍ಗೆ ಕಿಕ್ ಕೊಡುವ ಅಂಶಗಳು ಕಮ್ಮಿ ಇದ್ದವು. ಆದರೆ ಚಕ್ರವರ್ತಿ ಅಭಿಮಾನಿಗಳ ಆಸೆಯನ್ನು ಪೂರೈಸಲಿದೆ. ಟ್ರೇಲರ್ ನೋಡಿದರೆ ಅದು ಇನ್ನೂ ಪಕ್ಕಾ ಆಗುತ್ತದೆ. ಮುಂದಿನ ತಿಂಗಳು ಏಪ್ರಿಲ್ 14ಕ್ಕೆ ರಾಜ್ಯ ಮತ್ತು ವಿದೇಶಗಳಲ್ಲಿ ರಿಲೀಸ್ ಆಗುವ ತಯಾರಿ ನಡೆಸಿದೆ. ದರ್ಶನ್ ಅಭಿಮಾನಿಗಳು ಈ ಚಿತ್ರವನ್ನು ಹೇಗೆ ಸ್ವಾಗತಿಸಬೇಕೆನ್ನುವ ಉಮೇದಿನಲ್ಲಿದ್ದಾರೆ. ಚಕ್ರವರ್ತಿ ದರ್ಶನಕ್ಕೆ ಕಾಯುವುದೊಂದೆ ಇವರ ಸದ್ಯದ ಕೆಲಸ. ಏನೇ ಆಗಲಿ ಏಪ್ರಿಲ್‍ನಲ್ಲಿ ಬೆಳ್ಳಿತೆರೆ ಅಲಂಕರಿಸಲಿರುವ ಚಕ್ರವರ್ತಿ ಗೆದ್ದು ಬೀಗಲಿ. ಈಗಾಗಲೇ ಟ್ರೇಲರ್ ನಲ್ಲಿ ದಾಖಲೆ ಬರೆದಿರುವ ಈ ಚಿತ್ರ ಕಲೆಕ್ಷನ್ ನಲ್ಲೂ ದಾಖಲೆ ಬರೆಯಲಿ ಎಂದು ದರ್ಶನ್ ಅಭಿಮಾನಿಗಳು ಹಾರೈಸುತ್ತಿದ್ದಾರೆ.
ಬೆಂಗಳೂರು: ರಾಜ್ಯಾದ್ಯಂತ ಪವರ್ ಸ್ಟಾರ್ ಪುನಿತ್ ರಾಜ್‍ಕುಮಾರ್ ಅಭಿನಯದ `ರಾಜಕುಮಾರ’ ಸಿನಿಮಾದ ಹವಾ ಜೋರಾಗಿದೆ. ದಾವಣಗೆರೆ, ಬಳ್ಳಾರಿ ಶೀವಮೊಗ್ಗ ಸೇರಿದಂತೆ ಹಲವೆಡೆ ಮಧ್ಯರಾತ್ರಿಯೇ ಪ್ರದರ್ಶನ ಕಂಡಿದೆ. ದಾವಣಗೆರೆಯಲ್ಲಂತೂ ರಾಜಕುಮಾರನನ್ನು ನೋಡಲು ಸಾವಿರಾರು ಅಭಿಮಾನಿಗಳು ಮುಗಿಬಿದ್ದಿದ್ರು. ಗೀತಾಂಜಲಿ ಹಾಗೂ ಪುಷ್ಪಾಂಜಲಿ ಚಿತ್ರಮಂದಿರಗಳ ಬಳಿ ನೂರಾರು ಅಭಿಮಾನಿಗಳು ರಾತ್ರಿ 9 ಗಂಟೆಯಿಂದಲೇ ಟಿಕೆಟ್‍ಗಾಗಿ ಕ್ಯೂ ನಿಂತಿದ್ದರು. ಆದ್ರೆ, ಟಿಕೆಟ್ ಹಂಚಿಕೆ ತಡವಾದ ಕಾರಣ ಅಭಿಮಾನಿಗಳು ಟಿಕೆಟ್ ಕೌಂಟರ್‍ಗೆ ನುಗ್ಗಿ ದಾಂಧಲೆ ನಡೆಸಲು ಯತ್ನಿಸಿದ್ರು. ಈ ವೇಳೆ ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಹಾರ ಮಾಡಿದ್ರು.
ಕೊಪ್ಪಳದಲ್ಲಿ ಕೂಡ ಕಲ್ಲು ತೂರಾಟ ನಡೆದಿದೆ. ಗಂಗಾವತಿಯ ಪ್ರಶಾಂತ ಚಿತ್ರಮಂದಿರದಲ್ಲಿ ರಾತ್ರಿ 1 ಗಂಟೆಗೆ ಆರಂಭವಾಗಬೇಕಿದ್ದ ರಾಜಕುಮಾರ ಸಿನಿಮಾ ಶೋ ಬೆಳಗಿನ ಜಾವ 4ಕ್ಕೆ ಆರಂಭವಾಯ್ತು. ಇದ್ರಿಂದ ರೊಚ್ಚಿಗೆದ್ದ ಅಭಿಮಾನಿಗಳು ಚಿತ್ರಮಂದಿರದ ಮೇಲೆ ಕಲ್ಲುತೂರಾಟ ಮಾಡಿದ್ದಾರೆ. ಘಟನೆಯ ಚಿತ್ರ ಥಿಯೇಟರ್‍ನ ಗಾಜು ಪುಡಿಪುಡಿಯಾಗಿವೆ. ಇನ್ನು ಚಿತ್ರ ಮಂದಿರದ ಎದುರು ಅಭಿಮಾನಿಗಳು ಅಪ್ಪುಗೆ ಜೈಕಾರ ಹಾಕಿ ಹರ್ಷ ವ್ಯಕ್ತಪಡಿಸಿದರು.
ಬಳ್ಳಾರಿಯಲ್ಲಿ ಸಿನಿಮಾಗಳು ನಸುಕಿನ ಜಾವ ತರೆಕಾಣೋದು ಮಾಮೂಲು. ಆದ್ರೆ ಪುನೀತ್ ಅಭಿಮಾನಿಗಳ ಅಬ್ಬರಕ್ಕೆ ಮಣಿದ ಶಿವ ಮತ್ತು ಗಂಗಾ ಚಿತ್ರಮಂದಿರದ ಮಾಲೀಕರು ಮಧ್ಯರಾತ್ರಿ 12ಕ್ಕೆ ಚಿತ್ರ ಪ್ರದರ್ಶನ ಮಾಡಿದ್ರು. ಸಿನಿಮಾ ನೋಡಲು ಪುನೀತ್ ಅಭಿಮಾನಿಗಳು ಮುಗಿಬಿದ್ದಿದ್ರು. ಟಿಕೇಟ್‍ಗೆ ನೂಕುನುಗ್ಗಲು ಏರ್ಪಟ್ಟಿತ್ತು. ಚಿತ್ರಮಂದಿರದ ಎದುರು ಅಪ್ಪು ಅಭಿಮಾನಿಗಳು ಕುಣಿದು ಕುಪ್ಪಳಿಸಿದ್ರು. ಒಟ್ಟಿನಲ್ಲಿ ರಾಜಕುಮಾರ್ ಚಿತ್ರದ ಬಗ್ಗೆ ಬಳ್ಳಾರಿಯಲ್ಲಿ ಪಾಸೀಟವ್ ರೆಸ್ಪಾನ್ಸ್ ಕಂಡು ಬಂತು.
ತುಮಕೂರು, ಶಿವಮೊಗ್ಗ ಸೇರಿದಂತೆ ರಾಜ್ಯದ ಕೆಲವೆಡೆ ಗುರುವಾರ ರಾತ್ರಿನೇ `ರಾಜಕುಮಾರ’ನ ಮೊದಲ ಪ್ರದರ್ಶನ ನಡೆದಿದೆ. ಎರಡೂ ಕಡೆ ಅಭಿಮಾನಿಗಳ ಸಂಭ್ರಮ ಮುಗಿಲುಮುಟ್ಟಿತ್ತು.
ಬೆಂಗಳೂರಿನ ನರ್ತಕಿ ಚಿತ್ರಮಂದಿರಲ್ಲಿ ತಡ ರಾತ್ರಿ ಹಬ್ಬದ ವಾತವಾರಣ ನಿರ್ಮಾಣವಾಗಿತ್ತು. ಇಂದು ಸಿನಿಮಾ ನೋಡೋಕೆ ಬರೋ ವಿಕ್ಷಕರಿಗೆ ಅಖಿಲ ಕರ್ನಾಟಕ ಶಿವರಾಜ್‍ಕುಮಾರ್ ಅಭಿಮಾನಿಗಳ ಸಂಘದ ಮಂದಿ ಹಬ್ಬದ ಸಿಹಿ ಊಟ ಹಾಗು ಯುಗಾದಿಯ ಹೊಳಿಗೆ ಮತ್ತು ಬೇವು ಬೆಲ್ಲವನ್ನ ಹಂಚಲಿದ್ದಾರೆ. ರಾತ್ರಿಯೇ 20 ಅಡುಗೆ ಭಟ್ಟರನ್ನ ಕರೆಸಿ ಚಿತ್ರಮಂದಿರದ ಎದುರೇ 8 ಸಾವಿರ ಹೊಳಿಗೆಯನ್ನ ಮಾಡಿಸಿದ್ದಾರೆ.
ಬೆಂಗಳೂರು: ದಾವಣಗೆರೆಯ ಪುಟ್ಟ ಅಭಿಮಾನಿಯನ್ನು ಆಸೆಯನ್ನು ಪುನೀತ್ ರಾಜ್‍ಕುಮಾರ್ ಕಂಠೀರವ ಸ್ಟುಡಿಯೋದಲ್ಲಿ ಈಡೇರಿಸಿದ್ದಾರೆ.
ಮಾರ್ಚ್ 17ರಂದು ನಟ ಪುನೀತ್ ರಾಜ್ ಕುಮಾರ್ ಅವರ ಹುಟ್ಟುಹಬ್ಬವಿತ್ತು. ಈ ವೇಳೆ ತನ್ನ ಎರಡೂ ಕಿಡ್ನಿಗಳನ್ನು ಕಳೆದುಕೊಂಡಿರೋ ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಕಳಸಾಲ ಬಡಾವಣೆಯಲ್ಲಿ ವಾಸವಾಗಿರುವ ಪುಟ್ಟ ಬಾಲಕಿ ಪ್ರೀತಿ ನೆಚ್ಚಿನ ನಾಯಕನನ್ನು ನೋಡಬೇಕೆಂಬ ಹಂಬಲ ವ್ಯಕ್ತಪಡಿಸಿದ್ದಳು.
ಈ ಸುದ್ದಿಯನ್ನು ಪಬ್ಲಿಕ್ ಟಿವಿ ಪ್ರಸಾರ ಮಾಡುವುದರ ಜೊತೆ ಪುನೀತ್ ರಾಜ್‍ಕುಮಾರಿಗೂ ಈ ವಿಷಯವನ್ನ ಮುಟ್ಟಿಸಿತ್ತು. ಈ ವಿಚಾರಕ್ಕೆ ಸ್ಪಂದಿಸಿದ ಪುನೀತ್ ಇಂದು ಪ್ರೀತಿ ಕುಟುಂಬವನ್ನ ಭೇಟಿ ಮಾಡಿದ್ದಾರೆ. ಕಂಠೀರವ ಸ್ಟುಡಿಯೋಗೆ ಕರೆಸಿ ಪ್ರೀತಿ ಜೊತೆ ಮಾತನಾಡಿದ್ದಾರೆ.
ಖುಷಿಯಾಯ್ತು: ಹುಷಾರಾಗು, ಚೆನ್ನಾಗಿ ಓದು, ಕಿಡ್ನಿ ಬಗ್ಗೆ ಯೋಚನೆ ಮಾಡ್ಬೇಡ. ಹುಷಾರಾಗೋವಂಗೆ ಮಾಡ್ತೀನಿ ಅಂತಾ ಹೇಳಿದ್ರು. ಅವರನ್ನೂ ಬೇಟಿ ಮಾಡಿ ತುಂಬಾ ಖುಷಿಯಾಯ್ತು. ಅವರನ್ನು ಭೇಟಿ ಮಾಡಿ ಮಾತಾನಾಡಿಸ್ಬೇಕು ಅಂತಾ ತುಂಬಾ ದಿನಗಳಿಂದ ಆಸೆ ಇತ್ತು. ಈ ಆಸೆ ಇತ್ತು ನೆರವೇರಿತು. ಚಾಕಲೇಟ್ ಕೊಟ್ರು. ಭಯಪಡಬೇಡ ನಾವಿದ್ದೀವಿ ಎಂದು ಪುನಿಥ್ ರಾಜ್ ಕುಮಾರ್ ಹೇಳಿರೋದಾಗಿ ಬಾಲಕಿ ತಿಳಿಸಿದ್ದಾಳೆ.
ಪುನೀತ್‍ರನ್ನು ನೋಡ್ಬೇಕು: ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಕಳಸಾಲ ಬಡಾವಣೆಯಲ್ಲಿ ವಾಸವಾಗಿರುವ ಪುಟ್ಟ ಬಾಲಕಿ ಪ್ರೀತಿಗೆ ಎರಡು ಕಿಡ್ನಿ ಫೇಲ್ಯೂರ್ ಆಗಿದ್ದು, ಅಪ್ಪನ ಇಸ್ತ್ರಿ ವೃತ್ತಿಯೇ ಬದುಕಿಗೆ ಆಧಾರ. ಚಿಕಿತ್ಸೆ ಸಿಗದಿದ್ರೆ ಪ್ರೀತಿ ಹೆಚ್ಚು ದಿನ ಬದುಕೋದಿಲ್ಲ ಎಂಬಂತಾಗಿದೆ. ಒಮ್ಮೆ ತನ್ನ ನೆಚ್ಚಿನ ಹೀರೋ ಪುನೀತ್‍ರನ್ನ ನೋಡ್ಬೇಕು, ಅವರೊಂದಿಗೆ ಮಾತಾಡ್ಬೇಕು, ಕೈ ಕುಲುಕಿ ಥ್ಯಾಂಕ್ಸ್ ಹೇಳ್ಬೇಕು ಅನ್ನೋದು ಈ ಬಾಲಕಿ ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ಹೇಳಿದ್ದಳು.
– ರಾಜಕುಮಾರ ಚಿತ್ರತಂಡದಿಂದ ಸಾಂಗ್ ಟೀಸರ್ ಗಿಫ್ಟ್ – ದಾವಣಗೆರೆಯಲ್ಲಿ ಅಪ್ಪುಗಾಗಿ ಪುಟ್ಟ ಅಭಿಮಾನಿ ಕಣ್ಣೀರು
ಬೆಂಗಳೂರು/ದಾವಣಗೆರೆ : ಇವತ್ತು ಸ್ಯಾಂಡಲ್‍ವುಡ್‍ನ ರಾಜರತ್ನ ಪವರ್‍ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರ 42ನೇ ಜನ್ಮದಿನ. ರಾತ್ರಿಯಿಂದಲೇ ಬೆಂಗಳೂರಿನ ಸದಾಶಿವನಗರದಲ್ಲಿರುವ ಅಪ್ಪು ಮನೆಯ ಮುಂದೆ ಅಭಿಮಾನಿಗಳು ಜಮಾಯಿಸಿ ತಮ್ಮ ನೆಚ್ಚಿನ ನಟನಿಗೆ ಶುಭಾಶಯ ಕೋರಿದ್ದಾರೆ.
ದೊಡ್ಮನೆ ಹುಡುಗನ ಹುಟ್ಟುಹಬ್ಬದ ಖುಷಿಯಲ್ಲಿ ರಾಜಕುಮಾರ ಚಿತ್ರತಂಡ ಚಿತ್ರದ ಸಾಂಗ್ ಟೀಸರ್‍ವೊಂದನ್ನು ಅಭಿಮಾನಿಗಳಿಗೆ ಗಿಫ್ಟ್ ಆಗಿ ನೀಡಿದೆ.
ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಕಳಸಾಲ ಬಡಾವಣೆಯಲ್ಲಿ ವಾಸವಾಗಿರುವ ಪುಟ್ಟ ಬಾಲಕಿ ಪ್ರೀತಿಗೆ ಎರಡು ಕಿಡ್ನಿ ಫೇಲ್ಯೂರ್ ಆಗಿದೆ. ಅಪ್ಪನ ಇಸ್ತ್ರಿ ವೃತ್ತಿಯೇ ಬದುಕಿಗೆ ಆಧಾರ. ಚಿಕಿತ್ಸೆ ಸಿಗದಿದ್ರೆ ಪ್ರೀತಿ ಹೆಚ್ಚು ದಿನ ಬದುಕೋದಿಲ್ಲ ಎಂಬಂತಾಗಿದೆ. ಒಮ್ಮೆ ತನ್ನ ನೆಚ್ಚಿನ ಹೀರೋ ಪುನೀತ್‍ರನ್ನ ನೋಡ್ಬೇಕು, ಅವರೊಂದಿಗೆ ಮಾತಾಡ್ಬೇಕು, ಕೈ ಕುಲುಕಿ ಥ್ಯಾಂಕ್ಸ್ ಹೇಳ್ಬೇಕು ಅನ್ನೋದು ಈ ಬಾಲಕಿಯ ಆಸೆ.
ಬೆಂಗಳೂರು: ಆರೋಗ್ಯದಲ್ಲಿ ಏರುಪೇರಾಗಿದ್ದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಪಾರ್ವತಮ್ಮ ರಾಜ್ ಕುಮಾರ್ ಇಂದು ಡಿಸ್ಚಾರ್ಜ್ ಆಗಿದ್ದಾರೆ.
ಪಾರ್ವತಮ್ಮ ಅವರಿಗೆ ಶುಗರ್ ಲೆವೆಲ್ ಕಡಿಮೆ ಆಗಿತ್ತು. ಮಾತ್ರವಲ್ಲದೇ ಅವರಿಗೆ ಯೂರಿನ್ ಇನ್ಫೆಕ್ಷನ್ ಕೂಡ ಆಗಿತ್ತು. ಈಗ ಅವರ ಆರೋಗ್ಯ ಸುಧಾರಿಸಿದೆ. ಎಲ್ಲಾ ರೀತಿಯ ಟೆಸ್ಟ್ ಗಳನ್ನೂ ಮಾಡಲಾಗಿದೆ. ಮುಂದಿನ ವಾರ ಮತ್ತೆ ಜನರಲ್ ಚೆಕಪ್‍ಗೆ ಬರಲು ತಿಳಿಸಿದ್ದೇವೆ. ಸದ್ಯ ಅವರ ಆರೋಗ್ಯದಲ್ಲಿ ಯಾವುದೇ ಸಮಸ್ಯೆಯಿಲ್ಲ ಅಂತಾ ವೈದ್ಯರಾದ ಡಾ. ಸಂಜಯ್ ಕುಲಕರ್ಣಿ ಹೇಳಿದ್ದಾರೆ.
ಸಕ್ಕರೆ ಕಾಯಿಲೆ ಸಮಸ್ಯೆಯಿಂದ ಬಳಲುತ್ತಿರುವ ಪಾರ್ವತಮ್ಮ ರಾಜ್ ಕುಮಾರ್ ಅವರಿಗೆ ಮಂಗಳವಾರ ಮಧ್ಯರಾತ್ರಿ 12 ಗಂಟೆ ಸುಮಾರಿಗೆ ತಲೆ ಸುತ್ತು ಕಾಣಿಸಿಕೊಂಡಿದೆ. ಹೀಗಾಗಿ ಅವರನ್ನ ಪುತ್ರ ರಾಘವೇಂದ್ರ ರಾಜ್ ಕುಮಾರ್ ಹಾಗೂ ಮೊಮ್ಮಗ ಎಂಎಸ್ ರಾಮಯ್ಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದರು.
ಡಿಸ್ಚಾರ್ಜ್ ಸಂದರ್ಭದಲ್ಲಿ ಮಂಗಳಾ ರಾಘವೇಂದ್ರ ಮತ್ತು ಕುಟುಂಬದವರು ಜೊತೆಯಿದ್ದರು.
ಬೆಂಗಳೂರು: ಪಾರ್ವತಮ್ಮ ರಾಜ್‍ಕುಮಾರ್ ಆರೋಗ್ಯದಲ್ಲಿ ಚೇತರಿಕೆ ಕಂಡಿದ್ದು, ಜನರಲ್ ವಾರ್ಡ್‍ಗೆ ಶಿಫ್ಟ್ ಮಾಡಲಾಗಿದೆ.
ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವ ಪಾರ್ವತಮ್ಮ ಅವರಿಗೆ ಮಂಗಳವಾರ ರಾತ್ರಿ 12 ಗಂಟೆ ಸುಮಾರಿಗೆ ತಲೆಸುತ್ತು ಕಾಣಿಸಿಕೊಂಡಿತ್ತು. ಹೀಗಾಗಿ ಬೆಂಗಳೂರಿನ ಎಂ.ಎಸ್ ರಾಮಯ್ಯ ಆಸ್ಪತ್ರೆಯಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಪಾರ್ವತಮ್ಮ ರಾಜ್‍ಕುಮಾರ್ ಅವರನ್ನು ತುರ್ತು ನಿಗಾ ಘಟಕದಲ್ಲಿರಿಸಿ ಡಾ. ಸಂಜಯ್ ಕುಲಕರ್ಣಿ ಚಿಕಿತ್ಸೆ ನೀಡಿದ್ದರು. ಸದ್ಯ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದ ಹಿನ್ನೆಲೆಯಲ್ಲಿ ವಾರ್ಡ್‍ಗೆ ಶಿಫ್ಟ್ ಮಾಡಲಾಗಿದೆ.
ಶಿವಣ್ಣ, ರಾಘವೇಂದ್ರ ರಾಜ್‍ಕುಮಾರ್ ಹಾಗೂ ಪುನೀತ್ ರಾಜ್‍ಕುಮಾರ್ ತಾಯಿ ಜೊತೆ ಆಸ್ಪತ್ರೆಯಲ್ಲಿದ್ದಾರೆ. ಈ ವೇಳೆ ಮಾತನಾಡಿದ ಶಿವರಾಜ್‍ಕುಮಾರ್, ಅಮ್ಮನಿಗೆ ರಾತ್ರಿ ಸ್ವಲ್ಪ ಸುಸ್ತಾದ ಕಾರಣ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಈಗ ಚೆನ್ನಾಗಿದ್ದಾರೆ ಅಂದ್ರು.