Tag: Punblic Tv

  • ಪತಿಯ ಸಹಾಯದಿಂದ ಮಾಜಿ ಪ್ರಿಯಕರನನ್ನು ಕೊಂದ ಪ್ರೇಯಸಿ

    ಪತಿಯ ಸಹಾಯದಿಂದ ಮಾಜಿ ಪ್ರಿಯಕರನನ್ನು ಕೊಂದ ಪ್ರೇಯಸಿ

    ಪಾಟ್ನಾ: ಪ್ರೇಯಸಿಯೊಬ್ಬಳು ತನ್ನ ಪತಿಯ ಜೊತೆ ಸೇರಿ ಮಾಜಿ ಪ್ರಿಯಕರನನ್ನು ಕೊಲೆ ಮಾಡಿದ ಘಟನೆ ಬಿಹಾರದ ಮುಂಗೇರ್ ನಲ್ಲಿ ನಡೆದಿದೆ.

    ಜೈ ಕರಣ್ ಕುಮಾರ್ ಕೊಲೆಯಾದ ಯುವಕ. 20 ದಿನಗಳ ಹಿಂದೆ ತೋಟದಲ್ಲಿ ಯುವಕನ ಶವ ಪತ್ತೆಯಾಗಿದ್ದು, ಟೇಟಿಯಾ ಬಂಬರ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಈ ಬಗ್ಗೆ ಅಕ್ಟೋಬರ್ 5ರಂದು ಜೈ ಕರಣ್ ತಂದೆ ಧರ್ಮೇಂದ್ರ ಕೊಲೆ ಮಾಡಿದ ದುಷ್ಕರ್ಮಿಗಳ ವಿರುದ್ಧ ದೂರು ದಾಖಲಿಸಿದ್ದರು.

    ದೂರು ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಲು ಶುರು ಮಾಡಿದ್ದರು. ಈ ಪ್ರಕರಣವನ್ನು ಶನಿವಾರ ಡಿಎಸ್‍ಪಿ ಪೋಲ್ಸ್ ಕುಮಾರ್ ಅವರು ಬಹಿರಂಗಗೊಳಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, ತನಿಖೆ ನಡೆಸಲು ವಿಶೇಷ ತಂಡವನ್ನು ರಚಿಸಲಾಗಿತ್ತು. ಮೃತ ವ್ಯಕ್ತಿಯ ಮೊಬೈಲ್ ಕಾಣೆಯಾಗಿದ್ದು, ಅದನ್ನು ಆರೋಪಿಗಳು ಬಳಸುತ್ತಿದ್ದರು. ಬಳಿಕ ತನಿಖೆ ನಡೆಸಿ ಜೈ ಕರಣ್ ಪ್ರೇಯಸಿ ರವೀನಾಳನ್ನು ಬಂಧಿಸಿದ್ದೆವು. ಬಂಧಿಸಿ ವಿಚಾರಣೆ ನಡೆಸಿದಾಗ ಆರೋಪಿ ಸತ್ಯ ಬಿಚ್ಚಿಟ್ಟಿದ್ದಾಳೆ ಎಂದು ಹೇಳಿದ್ದಾರೆ.

    ರವೀನಾ ಕಳೆದ ನಾಲ್ಕು ವರ್ಷಗಳಿಂದ ಜೈಕರಣ್‍ನನ್ನು ಪ್ರೀತಿಸುತ್ತಿದ್ದಳು. ಈ ನಡುವೆ ಆಕೆ ತನ್ನದೇ ಗ್ರಾಮದ ನಂದು ಪಾಸ್ವಾನ್‍ನನ್ನು ಪ್ರೀತಿಸಲು ಶುರು ಮಾಡಿದ್ದಳು. ಅಲ್ಲದೆ ಮೂರು ತಿಂಗಳ ಹಿಂದೆ ನಂದು ಜೊತೆ ರವೀನಾ ಗೌಪ್ಯವಾಗಿ ಮದುವೆ ಕೂಡ ಆಗಿದ್ದಳು. ಜೈ ಕರಣ್, ರವೀನಾ ಜೊತೆ ಯಾವಾಗಲೂ ಫೋನಿನಲ್ಲಿ ಮಾತನಾಡುತ್ತಿದ್ದನು. ಆತ ಫೋನ್ ಮಾಡುವುದು ರವೀನಾ ಹಾಗೂ ನಂದುಗೆ ಇಷ್ಟವಿರಲಿಲ್ಲ. ಹಾಗಾಗಿ ರವೀನಾ ಹಾಗೂ ನಂದು ತಮ್ಮ ಮೂವರು ಸ್ನೇಹಿತರ ಜೊತೆ ಸೇರಿ ಆತನ ಹತ್ಯೆಗೆ ಪ್ಲಾನ್ ಮಾಡಿದ್ದರು.

    ಅಕ್ಟೋಬರ್ 2ರಂದು ರವೀನಾ, ಜೈ ಕರಣ್‍ಗೆ ಫೋನ್ ಮಾಡಿ ಭೇಟಿಯಾಗುವಂತೆ ಹೇಳುತ್ತಾಳೆ. ಈ ವೇಳೆ ನಂದು ಹಾಗೂ ಆತನ ಸ್ನೇಹಿತರು ಜೈಕರಣ್‍ನನ್ನು ಹೊಡೆದು ಕೊಲೆ ಮಾಡಿದ್ದಾರೆ. ಕೊಲೆ ಮಾಡಿದ ಬಳಿಕ ಆತನ ಶವವನ್ನು ನದಿ ತೀರದಲ್ಲಿರುವ ಭತ್ತದ ಗದ್ದೆಯಲ್ಲಿ ಎಸೆದು ಹೋಗಿದ್ದರು. ಅಕ್ಟೋಬರ್ 5ರಂದು ಪೊಲೀಸರಿಗೆ ಈ ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ರವೀನಾ, ಆಕೆಯ ಪತಿ ನಂದು, ದಿಲ್‍ಖುಷ್ ಕುಮಾರ್, ಸೋನು ಕುಮಾರ್ ಹಾಗೂ ರವಿ ಕುಮಾರ್‍ನನ್ನು ಬಂಧಿಸಿದ್ದಾರೆ.

  • ಮುರಿದು ಬಿತ್ತು ನಟ ವಿಶಾಲ್ ಮದುವೆ?

    ಮುರಿದು ಬಿತ್ತು ನಟ ವಿಶಾಲ್ ಮದುವೆ?

    ಚೆನ್ನೈ: ತಮಿಳು ನಟ ವಿಶಾಲ್ ಹಾಗೂ ತೆಲುಗಿನ ‘ಅರ್ಜುನ್ ರೆಡ್ಡಿ’ ಖ್ಯಾತಿಯ ಅನಿಶಾ ಅಲ್ಲ ಮದುವೆ ಮುರಿದು ಬಿದ್ದಿದೆ ಎಂಬ ಸುದ್ದಿ ಸೌತ್ ಚಿತ್ರರಂಗದಲ್ಲಿ ಹರಿದಾಡುತ್ತಿದೆ.

    ವಿಶಾಲ್ ಹಾಗೂ ಅನಿಶಾ ಪರಸ್ಪರ ಪ್ರೀತಿಸಿ ಮನೆಯವರ ಒಪ್ಪಿಗೆ ಮೆರಿಗೆ ಮಾರ್ಚ್ ತಿಂಗಳಿನಲ್ಲಿ ಹೈದರಾಬಾದ್‍ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಅಲ್ಲದೆ ಅಗಸ್ಟ್ ತಿಂಗಳಿನಲ್ಲಿ ಚೆನ್ನೈನ ನದಿಗರ್ ಸಂಗಮ್‍ನಲ್ಲಿ ಮದುವೆ ಆಗಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಅಷ್ಟರಲ್ಲೇ ಇಬ್ಬರ ಮದುವೆ ಮುರಿದು ಬಿದ್ದಿದೆ ಎಂಬ ಸುದ್ದಿ ಹರಿದಾಡುತ್ತಿದೆ.

    ಈ ಹಿಂದೆ ವಿಶಾಲ್ ಹಾಗೂ ಅನಿಶಾ ಫೋಟೋ ಹಾಕುವುದರ ಮೂಲಕ ಪರಸ್ಪರ ಪ್ರೀತಿಸುತ್ತಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದರು. ಆದರ ಈಗ ಅನಿಶಾ ನಟ ವಿಶಾಲ್ ಜೊತೆಗಿರುವ ಫೋಟೋಗಳನ್ನು ಡಿಲೀಟ್ ಮಾಡಿದ್ದಾರೆ. ಇದನ್ನು ನೋಡಿದ ಅಭಿಮಾನಿಗಳು ಇವರ ಮದುವೆ ಕ್ಯಾನ್ಸಲ್ ಆಗಿದೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.

    ಈ ಮೊದಲು  ಅಂದರೆ ಜನವರಿ 16ರಂದು ವಿಶಾಲ್ ತಮ್ಮ ಟ್ವಿಟ್ಟರಿನಲ್ಲಿ, “ಹೌದು. ನಾನು ತುಂಬಾ ಖುಷಿಯಾಗಿದ್ದೇನೆ. ಈಕೆಯ ಹೆಸರು ಅನಿಶಾ ಅಲ್ಲ ಹಾಗೂ ಆಕೆ ನನಗೆ ಯೆಸ್ ಎಂದು ಹೇಳಿದ್ದಾರೆ. ಈಗ ಇದು ಖಚಿತವಾಗಿದೆ. ಇದು ನನ್ನ ಜೀವನದ ಅತ್ಯಂತ ದೊಡ್ಡ ಪರಿವರ್ತನೆ. ಶೀಘ್ರದಲ್ಲೇ ದಿನಾಂಕವನ್ನು ನಿಗದಿ ಪಡಿಸುತ್ತೇವೆ” ಎಂದು ಟ್ವೀಟ್ ಮಾಡಿ ಅಭಿಮಾನಿಗಳಿಗೆ ತಿಳಿಸಿದ್ದರು.

    ಅನಿಶಾ ಕೂಡ ತಮ್ಮ ಇನ್‍ಸ್ಟಾಗ್ರಾಂನಲ್ಲಿ ವಿಶಾಲ್ ಜೊತೆಯಿರುವ ಫೋಟೋವನ್ನು ಹಾಕಿ ಅದಕ್ಕೆ, “ಜೀವನದಲ್ಲಿ ಈಗ ಒಂದು ಹೊಸ ವಿಷಯ ಶುರುವಾಗುತ್ತಿದೆ. ನೀವು ನನಗೆ ಎಲ್ಲವನ್ನು ನೀಡಿದ್ದಕ್ಕೆ ಧನ್ಯವಾದಗಳು. ನನ್ನ ಬೆಳವಣಿಗೆ, ನನ್ನ ಕಲಿಕೆ, ನನ್ನ ಸ್ಫೂರ್ತಿ, ನನ್ನ ಸತ್ಯ, ನನ್ನ ನೋವು, ನನ್ನ ಶಕ್ತಿ ಎಲ್ಲದರಲ್ಲೂ ಭಾಗಿಯಾಗಿದ್ದೀರಿ. ಹಾಗಾಗಿ ನಾನು ಈ ಸ್ಥಾನದಲ್ಲಿದ್ದೇನೆ” ಎಂದು ಪೋಸ್ಟ್ ಮಾಡಿದ್ದರು.

    ಸದ್ಯ ಮದುವೆ ಕ್ಯಾನ್ಸಲ್ ಆಗಿರುವ ಬಗ್ಗೆ ವಿಶಾಲ್ ಆಗಲಿ, ಅನಿಶಾ ಆಗಲಿ ಯಾವುದೇ ಸ್ಪಷ್ಟನೆ ನೀಡಿಲ್ಲ.