Tag: Pulsar bike

  • ಬಿಎಂಟಿಸಿ ಬಸ್‍ಗೆ ಬೈಕ್ ಡಿಕ್ಕಿ: ಸ್ಥಳದಲ್ಲೇ ಮೂವರ ಸಾವು

    ಬಿಎಂಟಿಸಿ ಬಸ್‍ಗೆ ಬೈಕ್ ಡಿಕ್ಕಿ: ಸ್ಥಳದಲ್ಲೇ ಮೂವರ ಸಾವು

    – ಬೈಕ್ ಡಿಕ್ಕಿ ಹೊಡೆತಕ್ಕೆ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದ ಬಸ್

    ರಾಮನಗರ: ಬಿಎಂಟಿಸಿ ಬಸ್ ಹಾಗೂ ಬೈಕ್ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಬೈಕ್‍ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದು, ಬಸ್‍ಗೆ ಬೆಂಕಿ ಹೊತ್ತಿ ಉರಿದ ಘಟನೆ ಬೆಂಗಳೂರು ದಕ್ಷಿಣ ತಾಲೂಕಿನ ದೇವಗೆರೆ ಬಳಿ ನಡೆದಿದೆ.

    ಜಿಲ್ಲೆಯ ಹಾರೋಹಳ್ಳಿ ಹಾಗೂ ಬೆಂಗಳೂರಿನ ಮಡಿವಾಳ ಮೂಲದ ಬಸವರಾಜ್, ಪ್ರದೀಪ್ ಹಾಗೂ ಅವಿನಾಶ್ ಮೃತ ದುರ್ದೈವಿಗಳು. ಕಗ್ಗಲೀಪುರ ಹಾಗೂ ಕುಂಬಳಗೂಡು ಮಾರ್ಗ ಮಧ್ಯದ ದೇವಗೆರೆ ಸಮೀಪದಲ್ಲಿ ಅಪಘಾತ ನಡೆದಿದ್ದು, ಬಸ್‍ನಲ್ಲಿದ್ದ ಚಾಲಕ, ನಿರ್ವಾಹಕ ಹಾಗೂ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ಆಗಿದ್ದೇನು?:
    ಬಸವರಾಜ್, ಪ್ರದೀಪ್ ಹಾಗೂ ಅವಿನಾಶ್ ಪಲ್ಸರ್ ಬೈಕ್‍ನಲ್ಲಿ ಕಗ್ಗಲೀಪುರದಿಂದ ಕುಂಬಳಗೂಡು ಹೋಗುತ್ತಿದ್ದರು. ವೇಗವಾಗಿ ಚಲಿಸುತ್ತಿದ್ದ ಇವರು ಮುಂದಿದ್ದ ಲಾರಿಯನ್ನು ಹಿಂದಿಕ್ಕಲು ಮುಂದಾಗಿದ್ದಾರೆ. ಈ ವೇಳೆ ಕುಂಬಳಗೂಡುನಿಂದ ಬರುತ್ತಿದ್ದ ಬಸ್‍ಗೆ ಡಿಕ್ಕಿ ಹೊಡೆದಿದ್ದಾರೆ. ಪರಿಣಾಮ ಬೈಕ್ ಪೆಟ್ರೋಲ್ ಟ್ಯಾಂಕರ್ ಸ್ಫೋಟಗೊಂಡು ಬಸ್ ಎಂಜಿನ್‍ಗೂ ಬೆಂಕಿ ತಗುಲಿದೆ. ಇತ್ತ ಸವಾರರು ಮಾರುದ್ದ ಹಾರಿಬಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ.

    ಬಸ್ ಎಂಜಿನ್‍ನಲ್ಲಿ ಬೆಂಕಿ ಕಾಣಿಸಿಕೊಂಡ ತಕ್ಷಣವೇ ಎಚ್ಚೆತ್ತುಕೊಂಡ ಚಾಲಕ ಪ್ರಯಾಣಿಕರನ್ನು ಕೆಳಗೆ ಇಳಿಸಿ ಭಾರೀ ಅನಾಹುತ ತಪ್ಪಿಸಿದ್ದಾರೆ. ರಸ್ತೆ ಬದಿಯಲ್ಲಿ ನಿಂತಿದ್ದ ಬಸ್ ಸಂಪೂರ್ಣವಾಗಿ ಹೊತ್ತಿ ಉರಿದಿದೆ. ಈ ಕುರಿತು ಮಾಹಿತಿ ಸಿಗುತ್ತಿದ್ದಂತೆ ಸ್ಥಳಕ್ಕೆ ಬಂದ ಅಗ್ನಿಶಾಮಕ ದಳವು ಬೆಂಕಿಯನ್ನ ನಂದಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv