Tag: publictv

  • ಮಂತ್ರಾಲಯ ಮಠದ ಹುಂಡಿಗೆ ಬಿತ್ತು ನಿಷೇಧಿತ ಲಕ್ಷಾಂತರ ರೂ.!

    ರಾಯಚೂರು: ಮಂತ್ರಾಲಯ ಶ್ರೀಗುರು ರಾಘವೇಂದ್ರ ಸ್ವಾಮಿ ಮಠದ ಕಾಣಿಕೆ ಹುಂಡಿಗಳಿಗೆ ಈಗಲೂ ಭಕ್ತರು ಲಕ್ಷಾಂತರ ರೂಪಾಯಿ ರದ್ದಾದ 500, 1000 ರೂ ಮುಖಬೆಲೆ ನೋಟುಗಳನ್ನೇ ಹಾಕುತ್ತಿದ್ದಾರೆ. ಜನವರಿ ಅಂತ್ಯಕ್ಕೆ ಎಣಿಸಲಾದ ಮಠದ ಹುಂಡಿಗಳ ಒಂದು ತಿಂಗಳ ಒಟ್ಟು ಕಾಣಿಕೆ 1 ಕೋಟಿ 49 ಲಕ್ಷ ರೂಪಾಯಿ ಇದ್ದು, ಇದರಲ್ಲಿ 4 ಲಕ್ಷ 28 ಸಾವಿರದ 500 ರೂಪಾಯಿ ರದ್ದಾದ ನೋಟುಗಳಿವೆ. 1000 ರೂ. ಮುಖಬೆಲೆಯ 157 ನೋಟು ಹಾಗೂ 500 ರೂ. ಮುಖಬೆಲೆಯ 543 ನೋಟುಗಳಿವೆ.

    ಕಳೆದ ವರ್ಷ ಡಿಸೆಂಬರ್ ನಲ್ಲಿ 14 ಲಕ್ಷ 74 ಸಾವಿರ ರೂಪಾಯಿ ರದ್ದಾದ ನೋಟುಗಳು ಪತ್ತೆಯಾಗಿದ್ದವು. ಹಳೆಯ ನೋಟುಗಳು ಕಳೆದ ತಿಂಗಳಿಗಿಂತ 10 ಲಕ್ಷ ರೂಪಾಯಷ್ಟು ಕಡಿಮೆಯಾದ್ರು, ನೋಟು ಬದಲಾವಣೆ ಮಠಕ್ಕೆ ತಲೆನೋವಾಗಿದೆ. ಚೆನೈನ ಆರ್ ಬಿ ಐ ಕಚೇರಿಗೆ ಮಠದ ಆಡಳಿತ ಮಂಡಳಿ ಪತ್ರ ಬರೆದಿದ್ದು, ಮಾಹಿತಿ ಬಂದ ಬಳಿಕ ಹಣ ಬದಲಾವಣೆ ಮಾಡಲಾಗುವುದು ಅಂತ ಮಠದ ವ್ಯವಸ್ಥಾಪಕ ಶ್ರೀನಿವಾಸರಾವ್ ತಿಳಿಸಿದ್ದಾರೆ.

    ಇನ್ನೂ ದೊಡ್ಡ ಮೊತ್ತದ ನೋಟುಗಳು ರದ್ದಾಗಿರುವುದು ಮಠದ ಆದಾಯದ ಮೇಲೆ ಇದುವರೆಗೆ ಯಾವುದೇ ಪರಿಣಾಮ ಬೀರಿಲ್ಲ. ಪ್ರತಿ ತಿಂಗಳು ಸರಾಸರಿ 1 ಕೋಟಿ 30 ಲಕ್ಷದಷ್ಟು ಕಾಣಿಕೆ ಸಂಗ್ರಹವಾಗುತ್ತಲೇ ಇದೆ. ನಗದು ಕಾಣಿಕೆ ಜೊತೆಗೆ ಜನವರಿ ತಿಂಗಳಲ್ಲಿ ಭಕ್ತರು 76 ಗ್ರಾಂ ಚಿನ್ನ. 650 ಗ್ರಾಂ.ಬೆಳ್ಳಿ ಹಾಗೂ 2764 ರೂ.ವಿದೇಶಿ ಕರೆನ್ಸಿಯನ್ನೂ ದೇಣಿಗೆಯಾಗಿ ನೀಡಿದ್ದಾರೆ.

  • ಫೆ.19ರಿಂದ ಬೆಂಗಳೂರು ಏರ್‍ಪೋರ್ಟ್ ಬಂದ್- ಟ್ಯಾಕ್ಸಿ, ಹೋಟೆಲ್ ಉದ್ಯಮದಾರರಿಗೆ ಬೀಳಲಿದೆ ಭಾರೀ ಹೊಡೆತ

    ಬೆಂಗಳೂರು: ಇಲ್ಲಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಫೆ. 19ರಿಂದ 2 ತಿಂಗಳ ಕಾಲ ತಾತ್ಕಾಲಿಕವಾಗಿ ಬಂದ್ ಆಗಲಿದೆ.

    ಬೆಳಗ್ಗೆ 10.30 ರಿಂದ ಸಂಜೆ 5ರವರೆಗೂ ಬಂದ್ ಆಗಲಿದ್ದು, ಇದರಿಂದ ವಿಮಾನ ನಿಲ್ದಾಣವನ್ನೇ ಅವಲಂಬಿಸಿ ಬದುಕು ಕಟ್ಟಿಕೊಂಡಿದ್ದ 4000 ಟ್ಯಾಕ್ಸಿಗಳಿಗೆ ಕೆಲಸ ಇಲ್ಲದಂತಾಗಲಿದೆ.

    ಹೋಟೆಲ್ ಉದ್ಯಮ, ವಾಣಿಜ್ಯ ಚಟುವಟಿಕೆಗಳಿಗೂ 2ತಿಂಗಳ ಕಾಲ ಏರ್‍ಪೋರ್ಟ್ ಬಂದ್ ಬಿಸಿ ತಟ್ಟಲಿದೆ. ನಷ್ಟದ ಭಯದಲ್ಲಿ ಬೆಂಗಳೂರು ಪ್ರವಾಸಿ ವಾಹನ ಮಾಲೀಕರು ಹೆಚ್‍ಎಎಲ್ ಏರ್‍ಪೋರ್ಟ್ ಬಳಸಿ ಎಂದು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.

    ನಂಬರ್ 1 ಸ್ಥಾನದಲ್ಲಿರುವ ನಗರವಾಗಿರುವ ಬೆಂಗಳೂರಿನಲ್ಲಿ ಇಮದು ನಮಗೆ ಆಲ್ಟರ್‍ನೇಟಿವ್ ವ್ಯವಸ್ಥೆನೇ ಇಲ್ಲ. ಇದರಂದಾಗಿ ಪ್ರವಾಸಿಗರನ್ನು ನಂಬಿಕೊಂಡು ಟ್ಯಾಕ್ಸಿ ಓಡಿಸುವವರಿಗೆ ಹಾಗೂ ಹೋಟೇಲ್ ಉದ್ಯಮ ನಡೆಸುವವರಿಗೆ ತುಂಬಾನೇ ತೊಂದರೆಯಗುತ್ತಿದೆ. 70 ದಿನಗಳ ಕಾಲ ಹೆಚು ಅಂದ್ರೆ 6 ಗಂಟೆ ವಿಮಾನ ಹಾರಾಟ ವ್ಯವಸ್ಥೆ ಇಲ್ಲ ಅಂದ್ರೆ ನಮ್ಮ ಪ್ರವಾಸೋದ್ಯಮ ಕ್ಷೇತ್ರಕ್ಕೆ ದೊಡ್ಡ ಕಂಟಕ ಎದುರಾಗುವುದರಲ್ಲಿ ಸಂಶಯವಿಲ್ಲ ಅಂತಾ ಟ್ಯಾಕ್ಸಿ ಮಾಲೀಕರ ಸಂಘದ ರಾಧಾಕೃಷ್ಣ ಹೊಳ್ಳ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ್ದಾರೆ.

    ವಿಮಾನ ನಿಲ್ದಾಣವನ್ನು ಮೇಲ್ದರ್ಜೆಗೇರಿಸುವ ಕಾರ್ಯ, ಮತ್ತು ರನ್ ವೇ ಕಾಮಗಾರಿ ನಡೆಯುವುದರಿಂದ ಫೆಬ್ರವರಿ 19ರಿಂದ ಬೆಳಗ್ಗೆ 10.30ರಿಂದ ಸಂಜೆ 5 ಗಂಟೆಯವರೆಗೆ ಹಗಲು ಸಮಯದಲ್ಲಿ ವಿಮಾನ ಆಗಮನ ಮತ್ತು ನಿರ್ಗಮನ ಸ್ಥಗಿತಗೊಳ್ಳಲಿದೆ ಎಂದು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್(ಬಿಐಎಎಲ್) ಪ್ರಕಟಣೆಯಲ್ಲಿ ತಿಳಿಸಿದೆ.

  • ಬೆಂಗಳೂರಿನಲ್ಲಿ ಇಂದಿನಿಂದ ಸಿನಿಮೋತ್ಸವ – 240ಕ್ಕೂ ಹೆಚ್ಚು ಚಿತ್ರಗಳ ಪ್ರದರ್ಶನ

    ಬೆಂಗಳೂರು: ನಗರದಲ್ಲಿ ಅಂತರಾಷ್ಟ್ರೀಯ ಚಿತ್ರೋತ್ಸವಕ್ಕೆ ಇಂದು ವಿದ್ಯುಕ್ತ ಚಾಲನೆ ಸಿಗಲಿದೆ. ಸಂಜೆ ಆರು ಗಂಟೆಗೆ ವಿಧಾನಸೌಧದ ಮುಂಭಾಗದಲ್ಲಿ ಉದ್ಘಾಟನೆಗೊಳ್ಳುವ ಈ ಕಾರ್ಯಕ್ರಮದಲ್ಲಿ ದೇಶವಿದೇಶಗಳ ಹಲವಾರು ಗಣ್ಯರು ಸಾಕ್ಷಿಯಾಗಲಿದ್ದಾರೆ.

    ಫೆಬ್ರವರಿ 3 ರಿಂದ ಫೆಬ್ರವರಿ 8ರ ವರೆಗೆ ಬೆಂಗಳೂರಿನ ಹಲವೆಡೆ ವಿವಿಧ ಸ್ಕ್ರೀನ್‍ಗಳಲ್ಲಿ ಚಿತ್ರ ಪ್ರದರ್ಶನಗೊಳ್ಳಲಿದೆ. ಬಂಗಾಲಿ ನಿರ್ದೇಶಕ ಬುದ್ಧದೇವ ದಾಸ್‍ಗುಪ್ತಾ, ಈಜಿಪ್ಟ್ ನ ಖ್ಯಾತ ನಿರ್ದೇಶಕಿ ಹಲಾ ಖಲೀಲ್, ನಟ ಪುನೀತ್ ರಾಜ್‍ಕುಮಾರ್ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.

    ಕನ್ನಡದ ನಟ ರಮೇಶ್ ಅರವಿಂದ್ ಹಾಗೂ ಬಹುಭಾಷಾ ನಟಿ ಸುಹಾಸಿನಿ ಕಾರ್ಯಕ್ರಮ ನಿರೂಪಿಸಲಿದ್ದಾರೆ. ಈ ಬಾರಿ 60 ದೇಶಗಳ ಒಟ್ಟೂ 240 ಚಿತ್ರಗಳು ವಿವಿಧ ವಿಭಾಗಗಳಲ್ಲಿ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿವೆ. ಕನ್ನಡದ 40 ಕ್ಕೂ ಹೆಚ್ಚು ಚಿತ್ರಗಳು ಪ್ರದರ್ಶನಗೊಳ್ಳಿವೆ. ಪ್ರಶಸ್ತಿ ಪ್ರದಾನ ಸಮಾರಂಭ ಫೆಬ್ರವರಿ 9ರಂದು ಸಂಜೆ ಮೈಸೂರು ಅರಮನೆ ಮುಂದೆ ಜರುಗಲಿದೆ.

  • ವಾಹನ ಹರಿದು ಯುವಕ ಸ್ಥಳದಲ್ಲೇ ಸಾವು

    ಬೆಂಗಳೂರು: ನಗರದ ಮಲ್ಲತ್ತಹಳ್ಳಿ ಬಳಿ ರಸ್ತೆ ಅಪಘಾತವಾಗಿದ್ದು, ಬೈಕ್ ಸವಾರ ಸ್ಥಳದಲ್ಲೆ ಮೃತಪಟ್ಟಿರುವ ಘಟನೆ ಬುಧವಾರ ತಡರಾತ್ರಿ ನೆಡೆದಿದೆ.

    26 ವರ್ಷದ ನವೀನ್ ಮೃತ ದುರ್ಧೈವಿ ಬೈಕ್ ಸವಾರನಾಗಿದ್ದು, ಇವರು ಕೆಂಗೇರಿ ಉಪನಗರದ ನಿವಾಸಿಯಾಗಿದ್ದಾರೆ.

    ಕಾಮಾಕ್ಷಿಪಾಳ್ಯದ ಕಡೆಯಿಂದ ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ನಿಯಂತ್ರಣ ತಪ್ಪಿದ ಬೈಕ್ ಪಕ್ಕದ ಡಿವೈಡರ್‍ಗೆ ಗುದ್ದಿದೆ. ಡಿಕ್ಕಿಯ ರಭಸಕ್ಕೆ ಸವಾರ ಮತ್ತೊಂದು ಬದಿಗೆ ಹಾರಿ ಬಿದಿದ್ದಾರೆ. ಇದೇ ಸಂದರ್ಭದಲ್ಲಿ ಬಂದ ಅಪರಿಚಿತ ವಾಹನವೊಂದು ನವೀನ್ ಮೇಲೆ ಹರಿದಿದೆ. ಪರಿಣಾಮ ನವೀನ್‍ಗೆ ಗಂಭೀರ ಗಾಯಗಳಾಗಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ.

    ಸದ್ಯ ಮೃತ ನವೀನ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಶವಗಾರಕ್ಕೆ ರವಾನೆ ಮಾಡಲಾಗಿದೆ.

    ಘಟನೆ ಸಂಬಂಧ ಕಾಮಾಕ್ಷಿಪಾಳ್ಯ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ದಿನಭವಿಷ್ಯ: 02-02-2017

    ಪಂಚಾಂಗ: ಶ್ರೀ ದುರ್ಮುಖಿನಾಮ ಸಂವತ್ಸರ,
    ಉತ್ತರಾಯಣ ಪುಣ್ಯಕಾಲ,
    ಶಿಶಿರ ಋತು, ಮಾಘ ಮಾಸ,
    ಶುಕ್ಲ ಪಕ್ಷ, ಷಷ್ಠಿ ತಿಥಿ,
    ಗುರುವಾರ, ರೇವತಿ ನಕ್ಷತ್ರ

    ಶುಭ ಘಳಿಗೆ: ಮಧ್ಯಾಹ್ನ 12:09 ರಿಂದ 1:03
    ಅಶುಭ ಘಳಿಗೆ: ಬೆಳಗ್ಗೆ 10:50 ರಿಂದ 11:34

    ರಾಹುಕಾಲ: ಮಧ್ಯಾಹ್ನ 2:04 ರಿಂದ 3:31
    ಗುಳಿಕಕಾಲ: ಬೆಳಗ್ಗೆ 9:43 ರಿಂದ 11:10
    ಯಮಗಂಡಕಾಲ: ಬೆಳಗ್ಗೆ 6:49 ರಿಂದ 8:16

    ಮೇಷ: ಸ್ನೇಹಿತರೊಂದಿಗೆ ಮನಃಸ್ತಾಪ, ಆರೋಗ್ಯದಲ್ಲಿ ಏರುಪೇರು, ನಿದ್ರಾಭಂಗ, ಸಾಲ ಬಾಧೆ, ಶತ್ರುಗಳ ಕಾಟ, ನೆರೆಹೊರೆಯವರಿಂದ ಕಿರಿಕಿರಿ, ಮನಸ್ಸಿನಲ್ಲಿ ಆತಂಕ ಸೃಷ್ಠಿ.

    ವೃಷಭ: ಉದ್ಯೋಗದಲ್ಲಿ ಒತ್ತಡ, ಇಲ್ಲ ಸಲ್ಲದ ಅಪವಾದ, ದೇವತಾ ಕಾರ್ಯಗಳಿಗಾಗಿ ಖರ್ಚು, ವಿಪರೀತ ವೆಚ್ಚ, ಮಕ್ಕಳ ಕುಟುಂಬದಲ್ಲಿ ಕಿರಿಕಿರಿ.

    ಮಿಥುನ: ವ್ಯಾಪಾರ ವ್ಯವಹಾರದಲ್ಲಿ ಲಾಭ, ಪ್ರಯಾಣದಲ್ಲಿ ಕಿರಿಕಿರಿ, ಸ್ಥಿರಾಸ್ತಿ-ವಾಹನದಿಂದ ಲಾಭ, ಮಾತೃವಿನಿಂದ ಧನಾಗಮನ.

    ಕಟಕ: ಉದ್ಯೋಗ ನಿಮಿತ್ತ ಪ್ರಯಾಣ, ದೇವತಾ ಕಾರ್ಯಗಳಿಗೆ ಮನಸ್ಸು, ಹಣಕಾಸು ಸಂಕಷ್ಟ, ಕುಟುಂಬದಲ್ಲಿ ಆತಂಕ, ಬೇಜವಾಬ್ದಾರಿಯಿಂದ ವಸ್ತು ಕಳೆದುಕೊಳ್ಳುವಿರಿ.

    ಸಿಂಹ: ಅನಿರೀಕ್ಷಿತ ಧನಾಗಮನ, ದಾಂಪತ್ಯದಲ್ಲಿ ವಿರಸ, ಬಂಧುಗಳ ವಿಚಾರದಲ್ಲಿ ಮನಃಸ್ತಾಪ, ಕುಟುಂಬಕ್ಕಾಗಿ ಖರ್ಚು, ದೇವತಾ ಕಾರ್ಯಗಳಿಗೆ ವೆಚ್ಚ.

    ಕನ್ಯಾ: ಸ್ವಯಂಕೃತ್ಯಗಳಿಂದ ತೊಂದರೆ, ಸಂಸಾರದಲ್ಲಿ ಕಲಹ, ಕೆಲಸ ಕಾರ್ಯಗಳಲ್ಲಿ ನಷ್ಟ, ಉದ್ಯೋಗ ಸ್ಥಳದಲ್ಲಿ ಶತ್ರುಕಾಟ, ನಿದ್ರಾಭಂಗ, ಕೆಲಸಗಳಲ್ಲಿ ಒತ್ತಡ.

    ತುಲಾ: ಸಂತಾನ ವಿಚಾರದಲ್ಲಿ ದಾಂಪತ್ಯದಲ್ಲಿ ವಿರಸ, ದೂರ ಪ್ರದೇಶದಲ್ಲಿ ಉದ್ಯೋಗ ಪ್ರಾಪ್ತಿ, ಭಾವನೆಗಳಿಗೆ ಧಕ್ಕೆ, ಜೀವನದಲ್ಲಿ ನಿರಾಸೆ ಜಿಗುಪ್ಸೆ.

    ವೃಶ್ಚಿಕ: ಆಕಸ್ಮಿಕ ಪ್ರಯಾಣ, ತಲೆನೋವು, ಆರೋಗ್ಯದಲ್ಲಿ ಏರುಪೇರು, ಮಾನಸಿಕ ಕಿರಿಕಿರಿ, ಸಾಲಗಾರರಿಂದ ಶತ್ರುಗಳಿಂದ ಮಾನಹಾನಿ.

    ಧನಸ್ಸು: ಸ್ಥಿರಾಸ್ತಿ ವಿಚಾರದಲ್ಲಿ ತಗಾದೆ, ಕೋರ್ಟ್ ಮೆಟ್ಟಿಲೇರುವ ಸಾಧ್ಯತೆ, ಮಕ್ಕಳ ಸಣ್ಣ ತಪ್ಪುಗಳಿಂದ ಕಲಹ, ದಾಂಪತ್ಯ ಜೀವನದಲ್ಲಿ ನೆಮ್ಮದಿಗೆ ಭಂಗ, ಉದ್ಯೋಗ ಬದಲಾವಣೆಯಿಂದ ಸಮಸ್ಯೆ.

    ಮಕರ: ಶತ್ರುಗಳೊಂದಿಗೆ ವಾಗ್ವಾದ, ಅಜೀರ್ಣ ಸಮಸ್ಯೆ, ನರ ದೌರ್ಬಲ್ಯ, ಚರ್ಮ ರೋಗ ಬಾಧೆ, ಮನಸ್ಸಿನಲ್ಲಿ ಆತಂಕ, ಮಾಟ ಮಂತ್ರದ ಭೀತಿ.

    ಕುಂಭ: ಮಕ್ಕಳು ಅನಗತ್ಯ ತಿರುಗಾಡುವರು, ಬಂಧುಗಳಿಂದ ಆರ್ಥಿಕ ನೆರವು, ವಾಹನ ಚಾಲನೆಯಲ್ಲಿ ಎಚ್ಚರಿಕೆ, ಪೆಟ್ಟು ಮಾಡಿಕೊಳ್ಳುವ ಸಾಧ್ಯತೆ.

    ಮೀನ: ಮಕ್ಕಳಾಗಮನದ ನಿರೀಕ್ಷೆ, ನೀವಾಡುವ ಮಾತಿನಿಂದ ಸಮಸ್ಯೆ, ಸ್ಥಿರಾಸ್ತಿ ತಗಾದೆ, ದಾಂಪತ್ಯದಲ್ಲಿ ವಿರಸ, ಅಧಿಕ ಚಿಂತೆಯಿಂದ ನಿದ್ರಾಭಂಗ, ಕನಸಿನಲ್ಲಿ ಸರ್ಪಗಳು ಕಾಣಿಸುವುದು.

  • ನರೇಗಾ ಯೋಜನೆಗೆ 48 ಸಾವಿರ ಕೋಟಿ: ಬಜೆಟ್‍ನಲ್ಲಿ ಕೃಷಿ ಕ್ಷೇತ್ರಕ್ಕೆ ಸಿಕ್ಕಿದ್ದು ಏನು?

    ನವದೆಹಲಿ: ದೇಶದ 133 ಕೋಟಿ ಜನ ಕಣ್ಣಲ್ಲಿ ಕಣ್ಣಿಟ್ಟು ಕಾಯುತ್ತಿದ್ದ ಕೇಂದ್ರ ಬಜೆಟ್ ಇದೀಗ ಮಂಡನೆಯಾಗಿದ್ದು, ನೋಟು ನಿಷೇಧ ಮಾಡಿದ ಬಳಿಕ ಕೇಂದ್ರ ಸರ್ಕಾರ ಇದೀಗ ಕೃಷಿ ವಲಯಕ್ಕೆ ಹೆಚ್ಚಿನ ಆದ್ಯತೆ ನೀಡಲು ತೀರ್ಮಾನಿಸಿದೆ.

    ಬಜೆಟ್‍ನಲ್ಲಿ ಸಿಕ್ಕಿದ್ದು ಏನು?

    * ಕೃಷಿ ವಲಯಕ್ಕೆ 35, 984 ಕೋಟಿ ರೂ. ಮೀಸಲು

    * ಮಹಾತ್ಮಾ ಗಾಂಧಿ ನರೇಗಾ ಯೋಜನೆಯಡಿ 10 ಲಕ್ಷ ಕಾಂಪೋಸ್ಟ್ ಗುಂಡಿಗಳ ನಿರ್ಮಾಣ

    * 2017 ಮಾರ್ಚ್ ಒಳಗೆ 14 ಕೋಟಿ ರೈತರು ಮಣ್ಣಿನ ಆರೋಗ್ಯ ಕಾರ್ಡ್ ಯೋಜನೆಯ ಫಲಾನುಭವಿಗಳಾಗಬೇಕು

    * ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಗೆ 19,000 ಕೋಟಿ ಮೀಸಲು

    * ಫಸಲ್ ಭೀಮಾ ಯೋಜನೆ 5 ಸಾವಿರದ 500 ಕೋಟಿ ರೂ. ಮೀಸಲು

    * ಪಶುಧನ್ ಸಂಜೀವನಿ, ನಕುಲ್ ಸ್ವಾಸ್ಥ್ಯ ಪತ್ರ, ಇ-ಪಶುಧನ್ ಹಾತ್ ಯೋಜನೆಗಳಿಗೆ 850 ಕೋಟಿ ರೂ. ಮೀಸಲು

    * ಹಾಲು ಉತ್ಪಾದನೆ ನಿಧಿಯಲ್ಲಿ ಗಣನೀಯ ಪ್ರಮಾಣದ ಹೆಚ್ಚಳವಾಗಿದ್ದು, ಅಂದ್ರೆ 2 ಸಾವಿರ ಕೋಟಿ ರೂ. ನಿಂದ 8 ಸಾವಿರ ಕೋಟಿ ರೂ. ಗೆ ಹೆಚ್ಚಳ

    * ನರೇಗಾ ಯೋಜನೆಗೆ 48 ಸಾವಿರ ಕೋಟಿ ರೂ. ಅನುದಾನ

    * ಸಣ್ಣ ನೀರಾವರಿಗೆ ನಬಾರ್ಡ್‍ನಿಂದ 5 ಸಾವಿರ ಕೋಟಿ ರೂ.

    ಗ್ರಾಮೀಣಾಭಿವೃದ್ಧಿಗೆ ಈ ಬಾರಿ ಬಜೆಟ್‍ನಲ್ಲಿ 87, 765 ಕೋಟಿ ರೂ. ಮೀಸಲು:

    * ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಕಾಯ್ದೆಯಡಿ 38,500 ಕೋಟಿ ರೂ. ಮೀಸಲು

    * ಗ್ರಾಮಪಂಚಾಯತ್ ಹಾಗೂ ಮುನ್ಸಿಪಾಲಿಟಿ ಅಭಿವೃದ್ಧಿಗೆ 2.87 ಲಕ್ಷ ರೂಟಿ ರೂ. ಅನುದಾನ

    * 2018ರೊಳಗೆ ಗ್ರಾಮೀಣ ಪ್ರದೇಶದಲ್ಲಿ ಶೇ. 100 ವಿದ್ಯುತ್ ಸಂಪರ್ಕ

    * 2019ರ ಅಂತ್ಯಕ್ಕೆ ಗ್ರಾಮಗಳಲ್ಲಿ 1 ಕೋಟಿ ಮನೆಗಳ ನಿರ್ಮಾಣ

    * 50 ಸಾವಿರ ಗ್ರಾಮ ಪಂಚಾಯ್ತಿಗಳ ಅಭಿವೃದ್ಧಿಗೆ ಮನ್ನಣೆ

    * ದೀನ್ ದಯಾಳ್ ಉಪಾಧ್ಯಾಯ ಯೋಜನೆಗೆ 4812 ರೂ.

  • ವಿದ್ಯಾರ್ಥಿಗಳ ಅಧ್ಯಯನಕ್ಕೆ ಮಹಿಳೆಯ ದೇಹದಾನ!

    ಬಳ್ಳಾರಿ: ಮನುಷ್ಯ ಇದ್ದಾಗ ರಕ್ತದಾನ ಮಾಡಬೇಕು ಸತ್ತಾಗ ದೇಹದಾನ ಮಾಡಬೇಕು ಅಂತಾರೆ. ದೇಶದ ಅದೆಷ್ಟೋ ವೈದ್ಯಕೀಯ ವಿದ್ಯಾರ್ಥಿಗಳಿಗೆ ದೇಹದ ಅಂಗಾಂಗಗಳಿಗೆ ಅಧ್ಯಯನ ಮಾಡೋಕೆ ಮೃತ ದೇಹಗಳೇ ಸಿಗುವುದಿಲ್ಲ. ಆದ್ರೆ ಬೈಲಹೊಂಗಲದ ರಾಮಣ್ಣನವರ ಪ್ರತಿಷ್ಠಾನ ಈ ಕೊರತೆಯನ್ನು ನಿಗಿಸುವಲ್ಲಿ ಮುಂದಾಗಿದೆ. ರಾಮಣ್ಣನವರ ಪ್ರತಿಷ್ಠಾನದ ಪರಿಶ್ರಮದಿಂದಾಗಿ ರಾಣೆಬೆನ್ನೂರಿನ ಲೀಲಾವತಿಯವರ ಮೃತದೇಹವನ್ನು ಬಳ್ಳಾರಿಯ ಆಯುರ್ವೇದಿಕ್ ಕಾಲೇಜಿಗೆ ದೇಹದಾನ ಮಾಡಿಸುವಲ್ಲಿ ಯಶ್ವಸಿಯಾಗಿದ್ದಾರೆ.

    ಹೃದಯಾಘಾತದಿಂದ ರಾಣೆಬೆನ್ನೂರಿನ 80 ವರ್ಷದ ಲೀಲಾವತಿಯವರು ಇತ್ತೀಚಿಗಷ್ಟೆ ಮೃತಪಟ್ಟಿದ್ದರು. ಅವರ ಪುತ್ರ ಸಹ ವೈದ್ಯರಾದ ಕಾರಣ ದೇಹದಾನದ ಮಹತ್ವದ ಬಗ್ಗೆ ಅರಿವಿದ್ದ ಲೀಲಾವತಿಯವರು ತಮ್ಮ ದೇಹವನ್ನು ದಾನ ಮಾಡಬೇಕೆಂದು ಜೀವಿತ ವೇಳೆಯಲ್ಲಿ ಪ್ರಮಾಣ ಮಾಡಿದ್ದರು. ಹೀಗಾಗಿ ಅವರ ಕುಟುಂಬದ ಸದಸ್ಯರು ಇದೀಗ ಲೀಲಾವತಿಯವರ ಮೃತದೇಹವನ್ನು ಸಂಸ್ಕಾರ ಮಾಡದೇ ವೈದ್ಯಕೀಯ ವಿದ್ಯಾರ್ಥಿಗಳ ಅಧ್ಯಯನಕ್ಕೆ ದಾನ ಮಾಡಿ ಎಲ್ಲರಿಗೂ ಮಾದರಿಯಾಗಿದ್ದಾರೆ.

    ಹೀಗಾಗಿ ಲೀಲಾವತಿಯವರ ದೇಹದಾನವನ್ನು ಪಡೆದ ಬಳ್ಳಾರಿಯ ತಾರಾನಾಥ ಆರ್ಯುವೇದ ಕಾಲೇಜಿನ ಆಡಳಿತ ಮಂಡಳಿ ಮತ್ತು ವಿದ್ಯಾರ್ಥಿಗಳು ಇದೀಗ ಅಂಗಾಗ ರಚನೆಯ ಅಧ್ಯಯನ ಮಾಡಲು ಲೀಲಾವತಿಯವರ ಮೃತದೇಹವನ್ನು ಬಳಸಿಕೊಳ್ಳಲು ಮುಂದಾಗಿದ್ದಾರೆ. ಮೃತದೇಹಗಳು ಸಿಗದಿದ್ದರೇ ಅಧ್ಯಯನ ತುಂಬಾ ಕಷ್ಟ ಅಂತಾರೆ ಆಯುರ್ವೇದಿಕ್ ಕಾಲೇಜಿನ ಪ್ರಾಧ್ಯಾಪಕ ಡಾ. ರಾಜಶೇಖರ್ ಗಾಣಿಗೇರ್ ಮತ್ತು ವಿದ್ಯಾರ್ಥಿಗಳು.

    ವೈದ್ಯಕೀಯ ವಿದ್ಯಾರ್ಥಿಗಳಿಗೆ ಅಂಗಾಗಗಳ ಅಧ್ಯಯನ ಮಾಡೋಕೆ ಮೃತದೇಹ ಬೇಕೆ ಬೇಕು. ಆದ್ರೆ ಮೆಡಿಕಲ್ ವಿದ್ಯಾರ್ಥಿಗಳಿಗೆ ಅಧ್ಯಯನ ಮಾಡೋಕೆ ಮೃತದೇಹ ಸಿಗೋದೇ ಅಪರೂಪ. ಹೀಗಾಗಿ ರಕ್ತದಾನ ಮಾಡಿದಂತೆ ದೇಹದಾನ ಮಾಡಲು ಜಾಗೃತಿ ಕಾರ್ಯಕ್ರಮಗಳು ನಡೆಸಲಾಗುತ್ತೆ. ಆದ್ರೆ ಬಹುತೇಕರು ಮೃತದೇಹಗಳಿಗೆ ಅಂತ್ಯಸಂಸ್ಕಾರ ಮಾಡುತ್ತಾರೆ. ಹೀಗಾಗಿ ದೇಹದಾನ ಮಾಡೋರು ತುಂಬಾ ಅಪರೂಪ. ಆದ್ರೆ ಬೈಲಹೊಂಗಲದ ಡಾಕ್ಟರ್ ಮಾಲತೇಶ ರಾಮಣ್ಣನವg ತಂದೆಯ ದೇಹವನ್ನು ದಾನ ಮಾಡುವ ಮೂಲಕ ದೇಹದಾನ ಜಾಗೃತಿ ಮೂಡಿಸುತ್ತಿದ್ದಾರೆ.

    ವೈದ್ಯಕೀಯ ವಿದ್ಯಾರ್ಥಿಗಳಿಗೆ ಅಂಗಾಂಗ ರಚನೆ ಕಲಿಕೆಗೆ ವರ್ಷಕ್ಕೊಂದು ಮೃತದೇಹ ಬೇಕೇ ಬೇಕು. ಅದೆಷ್ಟೋ ಕಾಲೇಜಿನಲ್ಲಿನ ವಿದ್ಯಾರ್ಥಿಗಳು ದೇಹದ ಅಂಗಾಂಗ ರಚನೆ ಬಗ್ಗೆ ಪ್ರಾಕ್ಟಿಕಲ್ಲಾಗಿ ಅಧ್ಯಯನ ಮಾಡದೆ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಹೀಗಾಗಿ ದೇಹ ಮಣ್ಣಲ್ಲಿ ಮಣ್ಣಾಗುವ ಬದಲು ಬೇರೊಬ್ಬರಿಗೆ ಸಹಾಯವಾಗಲು ದೇಹದಾನ ಮಾಡುವ ಮೂಲಕ ಸಹಕರಿಸಬೇಕು ಎಲ್ಲರೂ ಮುಂದಾಗಬೇಕಿದೆ.

  • ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿಂದು ಭಾರತ-ಇಂಗ್ಲೆಂಡ್ ಟಿ20 ಫೈನಲ್

    – ಭಾರತ ಗೆದ್ರೆ ಕೊಹ್ಲಿ ಟಿ-20ಗೂ ಸಾಮ್ರಾಟ್

    ಬೆಂಗಳೂರು: ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂದು ಇಂಡೋ-ಇಂಗ್ಲೆಂಡ್ ಟಿ-20 ಸರಣಿಯ ಅಂತಿಮ ಹಣಾಹಣಿ ನಡೆಯಲಿದೆ. 3 ಪಂದ್ಯಗಳ ಸರಣಿಯಲ್ಲಿ 1-1ರ ಸಮಬಲ ಸಾಧಿಸಿರೋದ್ರಿಂದ ಜಿದ್ದಾಜಿದ್ದಿನ ಹೋರಾಟ ನಡೆಯೋದಂತೂ ಸತ್ಯ.

    ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿ ಜಯಿಸಿದ ಕೊಹ್ಲಿ ಮೂರೂ ಪ್ರಕಾರದ ಪಂದ್ಯಗಳಿಗೆ ನಾಯಕರಾದ ಮೇಲೆ ಏಕದಿನ ಸರಣಿಯನ್ನೂ ಬಾಚಿಕೊಂಡು ಈಗ ಟಿ-20 ಮೇಲೂ ಕಣ್ಣಿಟ್ಟಿದ್ದಾರೆ. ಟೀಂ ಇಂಡಿಯಾ ಗೆದ್ರೆ ಆಂಗ್ಲರ ಭಾರತ ಪ್ರವಾಸ `ಹೋದ ಪುಟ್ಟಾ ಬಂದ ಪುಟ್ಟ’ ಎಂಬಂತಾಗುತ್ತೆ. ಇಂದು ಸಂಜೆ 7 ಗಂಟೆಗೆ ಪಂದ್ಯ ಆರಂಭವಾಗಲಿದೆ.

    ಆರ್‍ಸಿಬಿ ನಾಯಕರಾಗಿರೋ ಹಾಗೂ ಟಿ-20 ನಾಯಕರಾಗಿ ಆಯ್ಕೆಯಾದ ಬಳಿಕ ವಿರಾಟ್ ಕೊಹ್ಲಿಗೆ ಬೆಂಗಳೂರಿನಲ್ಲಿ ಇದೇ ಮೊದಲ ಪಂದ್ಯವಾಗಿದೆ. ಹೀಗಾಗಿ ನೆಚ್ಚಿನ ನಾಯಕನ ಆಟದ ಜೊತೆಗೆ ಟೀಂ ಇಂಡಿಯಾದ ಆಟವನ್ನು ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

  • ಭಾರತದಲ್ಲಿ ಹಣಕಾಸು ಬಜೆಟ್ ತಯಾರಾಗೋದು ಹೇಗೆ? ಇಲ್ಲಿದೆ ಪೂರ್ಣ ಮಾಹಿತಿ

    2017- 18ನೇ ಸಾಲಿನ ಬಜೆಟ್‍ನ್ನು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಬುಧವಾರ ಸಂಸತ್ತಿನಲ್ಲಿ ಮಂಡಿಸಲಿದ್ದಾರೆ. ಪ್ರತಿವರ್ಷಫೆಬ್ರವರಿ ಕೊನೆಯಲ್ಲಿ ಬಜೆಟ್ ಮಂಡನೆ ಆಗುತಿತ್ತು.  ಈ ಬಾರಿ  ಮುಂಚಿತವಾಗಿಯೇ ಬಜೆಟ್ ಮಂಡನೆಯಾಗುತ್ತಿದೆ. ಹೀಗಾಗಿ ಇಲ್ಲಿ ಹಣಕಾಸು ಬಜೆಟ್ ಸಿದ್ಧತೆ ಹೇಗೆ ನಡೆಯುತ್ತದೆ ಎಂಬುವುದರ ಬಗ್ಗೆ ಮಾಹಿತಿಯನ್ನು ನೀಡಲಾಗಿದೆ.

    5 ತಿಂಗಳಿನಿಂದ ಸಿದ್ಧತೆ: ಬಜೆಟ್ ಮಂಡನೆಗೆ 5 ತಿಂಗಳು ಇರುವಂತೆಯೇ ಸಿದ್ಧತೆಗಳು ಆರಂಭವಾಗುತ್ತದೆ. ಸೆಪ್ಟೆಂಬರ್‍ನಲ್ಲಿ ಹಣಕಾಸು ಸಚಿವಾಲಯ ಕೇಂದ್ರ ಸರ್ಕಾರದ ಸಚಿವಾಲಯಗಳಿಗೆ ಟಿಪ್ಪಣಿಯೊಂದನ್ನು ಕಳುಹಿಸಿ ಖರ್ಚು ವೆಚ್ಚಗಳ ವಿವರ ಪಡೆದುಕೊಳ್ಳುತ್ತದೆ. ಇದರೊಂದಿಗೆ ಮುಮದಿನ ವರ್ಷದ ಹಣಕಾಸು ಲೆಕ್ಕಾಚಾರದ ಅಂದಾಜನ್ನೂ ಪಡೆದುಕೊಳ್ಳುತ್ತದೆ.

    ನಿರಂತರ ಸಭೆ: ಅಕ್ಟೋಬರ್ ಮತ್ತು ನವೆಂಬರ್ ತಿಂಗಳಿನಲ್ಲಿ ಖರ್ಚುವೆಚ್ಚಗಳ ಕಾರ್ಯದರ್ಶಿ, ಕೆಲವು ಇಲಾಖೆಗಳ ಹಣಕಾಸು ಸಲಹೆಗಾರರ ಜತೆ ಸಭೆಗಳನ್ನು ನಡೆಸಿ ಇಲಾಖಾವಾರು ವೆಚ್ಚಗಳ ಪರಿಶೀಲನೆ ನಡೆಸಲಾಗುತ್ತದೆ. ಇದೇ ಸಂದರ್ಭದಲ್ಲಿ ಮುಂದಿನ ವರ್ಷದ ಪ್ರಸ್ತಾವನೆಯ ಕುರಿತಂತೆಯೂ ಚರ್ಚೆ ನಡೆಸಲಾಗುತ್ತದೆ. ಹೀಗೆ ಸಿಕ್ಕ ಖರ್ಚು ವೆಚ್ಚದ ವಿವರಗಳನ್ನು ಹಣಕಾಸು ಸಚಿವ ಅರುಣ್ ಜೇಟ್ಲಿ ನೇತೃತ್ವದ ತಂಡಕ್ಕೆ ಒಪ್ಪಿಸಲಾಗುತ್ತದೆ. ಬಳಿಕ ಆದಾಯ, ಹೊಸ ಪ್ರಸ್ತಾವನೆ, ಸುಂಕ ಏರಿಕೆಯ ಮೂಲಕ ಹೆಚ್ಚಿನ ನಿಧಿ ಸಂಗ್ರಹಣೆ, ಹಣದ ಕೊರತೆ ಮತ್ತು ಇನ್ನಿತರ ಅಂಕಿ ಸಂಖ್ಯೆಗಳ ಕುರಿತಂತೆ ತಂಡದ ಸದಸ್ಯರು ಚರ್ಚೆ ನಡೆಸುತ್ತಾರೆ. ಈ ಸಭೆಗೆ ಕೇಂದ್ರೀಯ ನೇರ ತೆರಿಗೆ ಮಂಡಳಿ ಮತ್ತು ಕೇಂದ್ರೀಯ ನೇರ ಅಬಕಾರಿ ತೆರಿಗೆ ಮಂಡಳಿ ಈ ಎರಡೂ ಸಂಸ್ಥೆಗಳನ್ನೂ ಸಭೆಗೆ ಕರೆಯಲಾತ್ತದೆ.

    ಆರ್ಥಿಕ ಸಮೀಕ್ಷೆ ಆರಂಭ: ಬಜೆಟ್‍ನ ಪ್ರಧಾನ ತಂಡ ಚರ್ಚೆ ನಡೆಸಿದ ವಿಷಯದ ಮೇಲೆ ಬಜೆಟ್ ಪ್ರಸ್ತಾವನೆಗಳ ಒಂದು ನೀಲ ನಕ್ಷೆಯನ್ನು ರೆಡಿ ಮಾಡಲಾಗುತ್ತದೆ. ಆದರೆ ಗೌಪ್ಯತೆ ಕಾಪಾಡುವ ನಿಟ್ಟಿನಲ್ಲಿ ಈ ನೀಲ ನಕ್ಷೆಯ ಪ್ರತಿಗಳನ್ನು ಹಿರಿಯ ಅಧಿಕಾರಿಗಳು ನಾಶಪಡಿಸುತ್ತಾರೆ. ಬಳಿಕ ನವೆಂಬರ್ ಅಂತ್ಯಕ್ಕಾಗುವಾಗ ಕೆಲ ಪ್ರಮುಖ ಸಿಬ್ಬಂದಿಗಳಿಗೆ ಮಾತ್ರ ಹಣಕಾಸು ಸಚಿವಾಲಯದ ಕಚೇರಿಯ ಒಳಗಡೆ ಪ್ರವೇಶಿಸಲು ಅವಕಾಶ ನೀಡಲಾಗುತ್ತದೆ. ಮಾತ್ರವಲ್ಲದೇ ಕಚೇರಿಯ ಸುತ್ತ ಗುಪ್ತಚರ ಸಂಸ್ಥೆಗೆ ಒಪ್ಪಿಸಲಾಗುತ್ತದೆ. ಈ ವೇಳೆ ಮುಖ್ಯ ಆರ್ಥಿಕ ಸಲಹೆಗಾರರ ಮೇಲುಸ್ತುವಾರಿಯಲ್ಲಿ ಸಮೀಕ್ಷೆಯ ಕಾರ್ಯವನ್ನು ನಡೆಸಲಾಗುತ್ತದೆ. ಈ ಮೂಲಕ ಬಜೆಟ್ ಪ್ರಕ್ರಿಯೆಗೆ ಅಧಿಕೃತ ಚಾಲನೆ ದೊರೆಯುತ್ತದೆ.

    ಅಂಕಿ ಅಂಶ ತಯಾರಿ: ಹಣಕಾಸು ಸಚಿವಾಲಯ, ನೀತಿ ಆಯೋಗ ಮತ್ತು ಇತರೆ ಸಚಿವಾಲಯಗಳ ಅಧಿಕಾರಿಗಳು ಸಭೆ ನಡೆಸಿ ಬಜೆಟ್ ಅಂಕಿ ಅಂಶಗಳನ್ನು ತಯಾರಿಸುತ್ತಾರೆ. ಖರ್ಚುಗಳನ್ನು ಆಧಾರಿಸಿ ಹಣಕಾಸು ಸಚಿವಾಲಯವು ಕೆಲವೊಂದು ಮಾರ್ಗಸೂಚಿಯನ್ನು ಪ್ರಕಟಿಸುತ್ತದೆ. ಇದಕ್ಕೆ ಅನುಗುಣವಾಗಿ ವಿವಿಧ ಸಚಿವಾಲಯಗಳು ಬೇಡಿಕೆಯನ್ನು ಸಲ್ಲಿಸುತ್ತವೆ. ಹಣಕಾಸು ಸಚಿವಾಲಯದ ಅಧೀನದಲ್ಲಿರುವ ಆರ್ಥಿಕ ವ್ಯವಹಾರಗಳ ಇಲಾಖೆಯ ಬಜೆಟ್ ವಿಭಾಗವು ಇದನ್ನು ಸಿದ್ಧಪಡಿಸುತ್ತದೆ.

    2017ರ ಬಜೆಟ್ ನ್ನು ತಯಾರಿಸಿದ ತಂಡದ ಜೊತೆ ಹಣಕಾಸು ಸಚಿವ ಅರುಣ್ ಜೇಟ್ಲಿ

    ಪ್ರಧಾನಿ ಎಂಟ್ರಿ: ಈ ಎಲ್ಲಾ ಪ್ರಕ್ರಿಯೆಗಳು ಮುಗಿದ ಬಳಿಕ ಪ್ರಧಾನಿ ಬಜೆಟ್‍ನಲ್ಲಿ ತಮ್ಮನ್ನೂ ತೊಡಗಿಸಿಕೊಳ್ಳುತ್ತಾರೆ. ಹಣಕಾಸು ಸ್ಥಿತಿಗತಿ, ಹೊಸ ಯೋಜನೆಗಳು, ಖರ್ಚುವೆಚ್ಚಗಳಿಗೆ ನೀಡಬೇಕಾದ ಆದ್ಯತೆ, ಹೆಚ್ಚುವರಿ ಆದಾಯ ಕ್ರಮಗಳು ಹೀಗೆ ಬಜೆಟ್‍ನ ರೂಪುರೇಷೆಗಳ ಕುರಿತಂತೆ ಹಣಕಾಸು ಸಚಿವಾಲಯದ ಜತೆ ಪ್ರಧಾನಿ ಚರ್ಚೆ ನಡೆಸುತ್ತಾರೆ. ಪ್ರಧಾನಿ ಮತ್ತು ಹಣಕಾಸು ಸಚಿವರ ಮಧ್ಯೆ ಬಜೆಟ್ ಕುರಿತಂತೆ ಹಲವು ಸುತ್ತಿನ ಮಾತುಕತೆಗಳು ನಡೆಯುತ್ತವೆ.

    ಕರಡು ಬಜೆಟ್ ಮುದ್ರಣ: ಇನ್ನು ಬಜೆಟ್‍ಗೆ ಕೆಲವೇ ವಾರಗಳು ಬಾಕಿಯಿರುವ ವೇಳೆಯಲ್ಲಿ ಕಡತಗಳನ್ನು ಸಂಗ್ರಹ ಮಾಡಲಾಗುತ್ತದೆ. ಇಲ್ಲಿಯವರೆಗೆ ಫೆಬ್ರವರಿ ತಿಂಗಳ ಮೊದಲ ವಾರದಲ್ಲಿ ವಿವಿಧ ಸಚಿವಾಲಯಗಳು ನೀಡಿದ ಅಂಕಿ-ಅಂಶಗಳನ್ನು ಆಧರಿಸಿ ರೂಪಿಸಿದ ಕರಡು ಬಜೆಟ್ ಪ್ರತಿಯನ್ನು ಹಣಕಾಸು ಸಚಿವಾಲಯದಲ್ಲಿರುವ ಮುದ್ರಣಾಲಯಕ್ಕೆ ಕಳುಹಿಸಲಾಗುತ್ತಿತ್ತು. ಆದ್ರೆ ಈ ಬಾರಿ ಫೆಬ್ರವರಿ ಮೊದಲ ವಾರದಲ್ಲೇ ಬಜೆಟ್ ಮಂಡನೆಯಾಗುವುದರಿಂದ ಜನವರಿ ತಿಂಗಳಲ್ಲೇ ಮುದ್ರಣಕ್ಕೆ ಕಳುಹಿಸಲಾಗಿತ್ತು.

    ಸಿಬ್ಬಂದಿಗೆ ಗೃಹಬಂಧನ!: ಬಜೆಟ್ ಪ್ರತಿ ಮುದ್ರಣಕ್ಕೆ ಕಳುಹಿಸುವ ಮೊದಲು ಹಲ್ವಾ ಕಾಯಿಸುವ ಸಂಪ್ರದಾಯವಿದೆ. ಹಣಕಾಸು ಸಚಿವರು ನಾರ್ತ್ ಬ್ಲಾಕ್‍ನಲ್ಲಿರುವ ಕಚೇರಿಯಲ್ಲಿ ದೊಡ್ಡ ಕಡಾಯಿಯಲ್ಲಿ ಹಲ್ವಾ ಕಾಯಿಸುತ್ತಾರೆ. ಕೆಲವು ತಿಂಗಳಿನಿಂದ ಬಜೆಟ್ ತಯಾರಿಸಿದ ಸಿಬ್ಬಂದಿ ಸಂಭ್ರಮದಿಂದ ಪಾಲ್ಗೊಳ್ಳುತ್ತಾರೆ. ಬಜೆಟ್ ಅಧಿವೇಶನಕ್ಕೆ ಅಂದಾಜು ಹತ್ತು ದಿನ ಮೊದಲು ಈ ಕಾರ್ಯಕ್ರಮ ನಡೆಯುತ್ತದೆ.

    ಬಜೆಟ್ ಮುದ್ರಣದ ವೇಳೆ ಮುದ್ರಣಾಲಯದಲ್ಲಿ ಕಾರ್ಯನಿರ್ವಹಿಸಿರುವ ಸಿಬ್ಬಂದಿಗೆ ಗೃಹ ಬಂಧನ ವಿಧಿಸಲಾಗುತ್ತದೆ. ಹಣಕಾಸು ಸಚಿವಾಲಯ ಅಧಿಕಾರಿಗಳು, ಹಣಕಾಸು ಮಸೂದೆ ಮತ್ತು ಕಾರ್ಯಸೂಚಿ ಮಸೂದೆಯನ್ನು ಸಿದ್ಧಪಡಿಸಿದ ಕಾನೂನು ಸಚಿವಾಲಯದ ಸಿಬ್ಬಂದಿಯ ಫೋನ್, ಇಮೇಲ್ ವ್ಯವಹಾರ ಬಂದ್ ಆಗುತ್ತದೆ. ಹಿರಿಯ ಅಧಿಕಾರಿಗಳಿಗೆ ಮಾತ್ರ ಮನೆಗೆ ತೆರಳು ಅನುಮತಿ ನೀಡಲಾಗುತ್ತದೆ. ಬಜೆಟ್ ಮಂಡನೆಯಾದ ಬಳಿಕವಷ್ಟೇ ಸಿಬ್ಬಂದಿ ಮನೆಗೆ ತೆರಳುತ್ತಾರೆ.

    ಬಜೆಟ್ ಮಂಡನೆ ಹೇಗೆ?: ಬಜೆಟ್‍ನ ದಿನದಂದು ಹಣಕಾಸು ಸಚಿವರು ಮೊದಲು ರಾಷ್ಟ್ರಪತಿ ಅವರನ್ನು ಭೇಟಿ ಮಾಡಿ ಬಜೆಟ್‍ಗೆ ಅವರಿಂದ ಸಹಿ ಪಡೆದುಕೊಳ್ಳುತ್ತಾರೆ. ಬಳಿಕ ಸಂಪುಟ ಸಭೆ ನಡೆಸಲಾಗುತ್ತದೆ. ಈ ವೇಳೆ ಹಣಕಾಸು ಸಚಿವರು ಬಜೆಟ್ ನಲ್ಲಿರುವ ಅಂಶಗಳ ಕುರಿತಂತೆ ಸಂಕ್ಷಿಪ್ತ ಮಾಹಿತಿ ನೀಡುತ್ತಾರೆ. ಆದರೆ, ತೆರಿಗೆ ಪ್ರಸ್ತಾವನೆಗಳ ಕುರಿತಂತೆ ಯಾವುದೇ ಮಾಹಿತಿಯನ್ನು ನೀಡುವುದಿಲ್ಲ. 11 ಗಂಟೆಗೆ ಬಜೆಟ್ ಮಂಡಿಸಲಾಗುತ್ತೆ. ಇದಕ್ಕೆ ಕೆಲವೇ ನಿಮಿಷಗಳಷ್ಟೇ ಬಾಕಿ ಇರುವಂತೆ ಪ್ರಧಾನಿ ಅವರು ಹಣಕಾಸು ಸಚಿವರನ್ನು ಲೋಕಸಭೆಗೆ ಕರೆತಂದು ಆಸನದಲ್ಲಿ ಕೂರಿಸುತ್ತಾರೆ. ಬಳಿಕ ಸ್ಪೀಕರ್ ಅವರಿಂದ ಅನುಮತಿ ಪಡೆದು ಹಣಕಾಸು ಸಚಿವರು ಬಜೆಟ್ ಪ್ರತಿಯನ್ನು ಓದಲು ಆರಂಭಿಸುತ್ತಾರೆ.

    ಈ ಬಾರಿ 1 ತಿಂಗಳು ಮೊದಲೇ ಯಾಕೆ?: ಇಲ್ಲಿಯವರೆಗೆ ಫೆಬ್ರವರಿ ಕೊನೆಯ ದಿನಾಂಕದಂದು ಬಜೆಟ್ ಮಂಡನೆಯಾಗುತಿತ್ತು. ಆದರೆ ಈ ಬಜೆಟ್‍ಗೆ ಮಾರ್ಚ್ 31ರೊಳಗೆ ಸಂಸತ್ತಿನ ಅನುಮೋದನೆ ಸಿಗುತ್ತಿರಲಿಲ್ಲ. ಹೀಗಾಗಿ ಅಲ್ಲಿಯವರೆಗೆ ಎರಡು ತಿಂಗಳ ಅವಧಿಗೆ ಲೇಖಾನುದಾನಕ್ಕೆ ಒಪ್ಪಿಗೆ ಪಡೆಯಬೇಕಿತ್ತು. ಇದಾದ ಬಳಿಕ ಅನುಮೋದನೆ ಪಡೆದು ಪೂರ್ಣ ಪ್ರಮಾಣದಲ್ಲಿ ಬಜೆಟ್ ಅನುಷ್ಠಾನ ಮಾಡುವ ವೇಳೆ ಮೂರು, ನಾಲ್ಕು ತಿಂಗಳು ಕಳೆದು ಹೋಗುತಿತ್ತು. ಈ ಲೇಖಾನುದಾನ ಪಡೆಯುವುದನ್ನು ತಪ್ಪಿಸಲು ಮತ್ತು ಏಪ್ರಿಲ್‍ನಿಂದ ಆರಂಭವಾಗುವ ಹಣಕಾಸು ವರ್ಷದಿಂದಲೇ ಬಜೆಟ್ ಅನುಷ್ಠಾನಗೊಳಿಸಲು ಕೇಂದ್ರ ಸರ್ಕಾರ ಈ ಬಾರಿ ಜನವರಿ 31ರಿಂದ ಬಜೆಟ್ ಅಧಿವೇಶನ ನಡೆಸಲು ಮುಂದಾಗಿದೆ. ಈ ವರ್ಷದಿಂದ ರೈಲ್ವೇ ಬಜೆಟ್ ಪ್ರತ್ಯೇಕವಾಗಿ ಮಂಡನೆಯಾಗುವುದಿಲ್ಲ. ಹಣಕಾಸು ಬಜೆಟ್ ನಲ್ಲೇ ರೈಲ್ವೇ ಬಜೆಟ್ ವಿಲೀನವಾಗಲಿದೆ. ಪ್ರತ್ಯೇಕ ರೈಲ್ವೆ ಬಜೆಟ್ ಮಂಡಿಸುವ 92 ವರ್ಷಗಳ ಪದ್ಧತಿ ಈ ಹಣಕಾಸು ವರ್ಷದಲ್ಲಿ ಕೊನೆಯಾಗಲಿದೆ.

  • ಹಾಸನ ತಲುಪಿದ ಮೃತ ಸಂದೀಪ್ ಪಾರ್ಥೀವ ಶರೀರ: ಇಂದು ಮಧ್ಯಾಹ್ನ ಅಂತ್ಯಕ್ರಿಯೆ

    ಹಾಸನ: ಜಮ್ಮುಕಾಶ್ಮೀರದಲ್ಲಿ ಹಿಮಕುಸಿತಕ್ಕೆ ಸಿಲುಕಿ ವೀರಮರಣವನ್ನಪ್ಪಿದ ಯೋಧ ಸಂದೀಪ್ ಪಾರ್ಥೀವ ಶರೀರ ಮಂಗಳವಾರ ತಡರಾತ್ರಿ ತವರು ಜಿಲ್ಲೆ ಹಾಸನಕ್ಕೆ ಆಗಮಿಸಿದೆ. ತಡರಾತ್ರಿ 2.30ಕ್ಕೆ ವಿಶೇಷ ಅಂಬುಲೆನ್ಸ್‍ನಲ್ಲಿ ಹಾಸನ ಜಿಲ್ಲಾಸ್ಪತ್ರೆಗೆ ಸೈನ್ಯದ ಅಧಿಕಾರಿಗಳ ತಂಡ ಸಂದೀಪ್ ಪಾರ್ಥೀವ ಶರೀರದೊಂದಿಗೆ ಆಗಮಿಸಿದರು.

    ಜಿಲ್ಲಾಡಳಿತದ ವತಿಯಿಂದ ಸಂದೀಪ್ ಪಾರ್ಥಿವ ಶರೀರವನ್ನು ಬರಮಾಡಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಸಂದೀಪ್ ಪೋಷಕರು, ಶಾಸಕ ಹೆಚ್ ಎಸ್ ಪ್ರಕಾಶ್, ಅಪರ ಜಿಲ್ಲಾಧಿಕಾರಿ ಹಾಗು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳು ಹಾಜರಿದ್ದರು.

    ರಾತ್ರಿ ಇಡೀ ಸಂದೀಪ್ ಪಾರ್ಥೀವ ಶರೀರವನ್ನು ಹಾಸನ ವೈದ್ಯಕೀಯ ಕಾಲೇಜಿನ ಶವಾಗಾರದಲ್ಲಿ ಇಡಲಾಗಿದ್ದು ಜಿಲ್ಲಾಧಿಕಾರಿ ಕಛೇರಿ ಬಳಿ ಇಂದು ಬೆಳಗ್ಗೆ 8 ಗಂಟೆಯಿಂದ ಸಾರ್ವಜನಿಕರ ದರ್ಶನಕ್ಕೆ ಅನುವು ಮಾಡಿಕೊಡಲಾಗುತ್ತದೆ. ಬೆಳಗ್ಗೆ 10 ಗಂಟೆಯ ನಂತರ ಪಾರ್ಥೀವ ಶರೀರ ಸ್ವಗ್ರಾಮ ದೇವಿಹಳ್ಳಿಗೆ ಮೆರವಣಿಗೆ ಮುಖಾಂತರ ತೆರಳಲಿದೆ. ನಂತರ ದೇವಾಂಗ ಸಂಪ್ರದಾಯದ ಪ್ರಕಾರ ಅಂತಿಮ ವಿಧಿವಿಧಾನ ನಡೆಸಲಾಗುತ್ತದೆ. ಮಧ್ಯಾಹ್ನದ ವೇಳೆಗೆ ಅಂತ್ಯಕ್ರಿಯೆ ಕಾರ್ಯ ಪೂರ್ಣಗೊಳ್ಳುವ ಸಾಧ್ಯತೆ ಇದೆ.

    ಯೋಧ ಸಂದೀಪ್ ಮೃತದೇಹ ಬೆಂಗಳೂರಿಗೆ ಬಂದಿಳಿದಾಗ ಸಚಿವ ಎ.ಮಂಜು ಕೂಡ ಜೊತೆಗೇ ಇದ್ದರು. ಮೃತ ಸಂದೀಪ್ ಕುಟುಂಬಕ್ಕೆ ರಾಜ್ಯ ಸರ್ಕಾರದ ವತಿಯಿಂದ 25 ಲಕ್ಷ ರೂ., ಒಂದು ಸೈಟ್ ನೀಡಲಾಗುವುದು ಅಂತಾ ಘೋಷಣೆ ಮಾಡಿದ್ರು.