Tag: publictv

  • ನಾಲ್ಕು ಕಾಲಿನ ಮಗುವಿನ ಆಪರೇಷನ್ ಸಕ್ಸಸ್ – ವೈದ್ಯಲೋಕದ ಅಚ್ಚರಿ ಮೆಟ್ಟಿನಿಂತ ನಾರಾಯಣ ಡಾಕ್ಟರ್ಸ್

    – ವೈದ್ಯರಿಗೆ ಹೆತ್ತವರ ಕೃತಜ್ಞತೆ

    ಬೆಂಗಳೂರು: ವೈದ್ಯಲೋಕಕ್ಕೆ ಅಚ್ಚರಿ ಎಂಬಂತೆ ಕಳೆದ ತಿಂಗಳ 21ರಂದು ರಾಯಚೂರಿನಲ್ಲಿ ಜನಿಸಿದ್ದ ನಾಲ್ಕು ಕಾಲಿನ ಮಗುವಿಗೆ ಯಶಸ್ವಿ ಶಸ್ತ್ರ ಚಿಕಿತ್ಸೆ ಮಾಡುವಲ್ಲಿ ಬೆಂಗಳೂರಿನ ನಾರಾಯಣ ಹೆಲ್ತ್‍ಸಿಟಿ ವೈದ್ಯರು ಯಶಸ್ವಿಯಾಗಿದ್ದಾರೆ. ರಾಯಚೂರಿನ ಪುಲದಿನ್ನಿ ಗ್ರಾಮದ ಲಲಿತಾ-ಚೆನ್ನಬಸಪ್ಪ ದಂಪತಿಗೆ ಈ ಮಗು ಜನಿಸಿದ್ದು ಕಳೆದ ತಿಂಗಳ 24 ರಂದು ನಾರಾಯಣ ಹೆಲ್ತ್‍ಸಿಟಿಗೆ ದಾಖಲಿಸಲಾಗಿತ್ತು.

    ಪ್ರಕರಣವನ್ನ ವೈದ್ಯರಾದ ಡಾ. ಜೋಸೆಪ್ ಹಾಗೂ ಡಾ. ಅಕ್ರೂನ್ ಡಿ ಕ್ರೂಸ್ ಸವಾಲಾಗಿ ಸ್ವೀಕರಿಸಿದ್ರು. ಹೊಟ್ಟೆ ಭಾಗದ ಮೇಲೆ ಬೆಳೆದಿದ್ದ ಹೆಚ್ಚುವರಿ 2 ಕಾಲನ್ನು ಶಸ್ತ್ರ ಚಿಕಿತ್ಸೆ ಮೂಲಕ ತೆಗೆದಿದ್ದು ಮಗು ಆರೋಗ್ಯವಾಗಿದೆ. ಶಸ್ತ್ರ ಚಿಕಿತ್ಸೆಯ ಮಗುವಿನ ಹೊಟ್ಟೆಯ ಮೇಲೆ ಸ್ವಲ್ಪ ಗಾಯದ ಕಲೆಯಿದ್ದು, ಸದ್ಯ ಮಗು ಐಸಿಯುವಿನಲ್ಲಿದೆ. ಸಂಪೂರ್ಣವಾಗಿ ಚೇತರಿಸಿಕೊಂಡ ನಂತರ ಪೋಷಕರಿಗೆ ನೀಡಲಾಗುವುದು ಅಂತ ಹಿರಿಯ ವೈದ್ಯ ಡಾ. ಸಂಜಯ್ ರಾವ್ ಹೇಳಿದ್ದಾರೆ.

    ಇನ್ನು, ಲಲಿತಾ-ಚನ್ನಬಸಪ್ಪ ದಂಪತಿ ಮೊಗದಲ್ಲಿ ಸಂತಸ ಮೂಡಿದ್ದು, ವೈದ್ಯರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಹುಟ್ಟುತ್ತಲೇ ನಾಲ್ಕು ಕಾಲುಗಳ ಹೊಂದಿ ವಿಚಿತ್ರವಾಗಿದ್ದ ಗಂಡು ಮಗು ಇನ್ನು ಮುಂದೆ ಎಲ್ಲರಂತೆ ಬದುಕಲಿದೆ.

  • ದಿನಭವಿಷ್ಯ: 05-02-2017

    ಪಂಚಾಂಗ: ಶ್ರೀ ದುರ್ಮುಖಿನಾಮ ಸಂವತ್ಸರ,
    ಉತ್ತರಾಯಣ ಪುಣ್ಯಕಾಲ,
    ಶಿಶಿರ ಋತು, ಮಾಘ ಮಾಸ,
    ಶುಕ್ಲ ಪಕ್ಷ, ನವಮಿ ತಿಥಿ,
    ಭಾನುವಾರ,ಕೃತ್ತಿಕಾ ನಕ್ಷತ್ರ

    ರಾಹುಕಾಲ: ಸಾಯಂಕಾಲ 4:58 ರಿಂದ 6:26
    ಗುಳಿಕಕಾಲ: ಮಧ್ಯಾಹ್ನ 3:31 ರಿಂದ 4:58
    ಯಮಗಂಡಕಾಲ: ಮಧ್ಯಾಹ್ನ 12:37 ರಿಂದ 2:04

    ಮೇಷ: ಆರ್ಥಿಕ ಸಂಕಷ್ಟಕ್ಕೆ ಸಿಲುಕುವಿರಿ, ವ್ಯವಹಾರದಲ್ಲಿ ನಂಬಿಕೆದ್ರೋಹ, ಹೊಗಳಿಕೆ ಮಾತಿಗೆ ಮರುಳಾಗದಿರಿ, ಮನಃಕ್ಲೇಷ, ಭೂಮಿಯಿಂದ ಅಧಿಕ ಲಾಭ, ಸಾಧಾರಣ ಪ್ರಗತಿ.

    ವೃಷಭ: ವಿಧೇಯತೆಯಿಂದ ಯಶಸ್ಸಿನ ಮೆಟ್ಟಿಲು, ಅನಾವಶ್ಯಕ ದ್ವೇಷ ಸಾಧಿಸುವುದು ಒಳ್ಳೆಯದಲ್ಲ, ಹಿರಿಯರ ಮಾತಿಗೆ ಗೌರವ ಕೊಡಿ, ಸ್ಥಿರಾಸ್ತಿ ಲಾಭ, ಅನಾವಶ್ಯಕ ಹಣವ್ಯಯ.

    ಮಿಥುನ: ಪುಣ್ಯ ಕ್ಷೇತ್ರ ದರ್ಶನ, ಮಾನಸಿಕ ನೆಮ್ಮದಿ, ಆರ್ಥಿಕ ಪರಿಸ್ಥಿತಿ ಚೇತರಿಕೆ, ನಿರುದ್ಯೋಗಿಗಳಿಗೆ ಉದ್ಯೋಗ, ಮಿತ್ರರಿಂದ ಸಹಾಯ, ಯೋಚಿಸಿ ನಿರ್ಧಾರ ಕೈಗೊಳ್ಳಿ.

    ಕಟಕ: ಬೇಡದ ವಿಚಾರಗಳಲ್ಲಿ ಆಸಕ್ತಿ, ಇತರರ ಮಾತಿಗೆ ಮರುಳಾಗದಿರಿ, ಧನ ಲಾಭ, ಮಾನಸಿಕ ಸ್ಥೈರ್ಯ ಕಳೆದುಕೊಳ್ಳುವಿರಿ, ಉದ್ಯೋಗದಲ್ಲಿ ಬಡ್ತಿ.

    ಸಿಂಹ: ಅಂದು ಕೊಂಡ ಕಾರ್ಯಗಳಲ್ಲಿ ಹಿನ್ನಡೆ, ಮಾಡುವ ಕಾರ್ಯದಲ್ಲಿ ಎಚ್ಚರ, ಶತ್ರು ಬಾಧೆ, ಸಣ್ಣ ಪುಟ್ಟ ವಿಷಯಗಳಿಂದ ಮನಃಸ್ತಾಪ, ಗೌರವಕ್ಕೆ ಧಕ್ಕೆ ಅಪಮಾನ.

    ಕನ್ಯಾ: ವಿದ್ಯಾಭ್ಯಾಸದಲ್ಲಿ ಪ್ರಗತಿ, ಅನಗತ್ಯ ಹಣ್ಯವ್ಯಯ, ವಾಗ್ವಾದಗಳಿಂದ ವೈರತ್ವ, ಆರೋಗ್ಯದಲ್ಲಿ ಏರುಪೇರು, ತಾಳ್ಮೆ ಅತ್ಯಗತ್ಯ, ಕಾರ್ಯ ಸಾಧನೆಗಾಗಿ ತಿರುಗಾಟ, ವಸ್ತ್ರ ವ್ಯಾಪಾರಿಗಳಿಗೆ ಲಾಭ, ವಾಹನ ಯೋಗ.

    ತುಲಾ: ಪರಿಶ್ರಮಕ್ಕೆ ತಕ್ಕ ವರಮಾನ, ಮಂಗಳ ಕಾರ್ಯಗಳಲ್ಲಿ ಭಾಗಿ, ಮುಖ್ಯ ಕೆಲಸ ಈಡೇರುವುದು, ಮನಸ್ಸಿಗೆ ನೆಮ್ಮದಿ, ಅಧಿಕ ಖರ್ಚು, ವೃತ್ತಿರಂಗದಲ್ಲಿ ಸ್ಥಾನಮಾನ, ಗೌರವ ಸನ್ಮಾನ ಪ್ರಾಪ್ತಿ.

    ವೃಶ್ಚಿಕ: ಪಾಲುದಾರಿಕೆಯಿಂದ ಲಾಭ, ಮನೆಯವರ ಅನಿಸಿಕೆಗೆ ಗಮನಕೊಡಿ, ಶಿಕ್ಷಕ ವರ್ಗದವರಿಗೆ ಹೆಚ್ಚಿನ ಕೆಲಸ, ಅನ್ಯರಲ್ಲಿ ವೈಮನಸ್ಸು, ಮಾನಸಿಕ ಒತ್ತಡ, ದುಃಖಕ್ಕೆ ಗುರಿಯಾಗುವಿರಿ.

    ಧನಸ್ಸು: ಮಿತ್ರರಲ್ಲಿ ವಿರೋಧ, ಸೌಜನ್ಯದ ವರ್ತನೆ ಅಗತ್ಯ, ವೈಯುಕ್ತಿ ವಿಚಾರಗಳಲ್ಲಿ ಗಮನಹರಿಸಿ, ದ್ವಿಚಕ್ರ ವಾಹನದಿಂದ ತೊಂದರೆ, ದೈವಾನುಗ್ರಹದಿಂದ ಶುಭ, ಆರ್ಥಿಕ ಪರಿಸ್ಥಿತಿ ಚೇತರಿಕೆ.

    ಮಕರ: ವೃತ್ತಿ ಜೀವನದಲ್ಲಿ ಬದಲಾವಣೆ, ಪಿತ್ರಾರ್ಜಿತ ಆಸ್ತಿ ಗಳಿಕೆ, ಶುಭ ವಾರ್ತೆ ಕೇಳುವಿರಿ, ಉನ್ನತ ಪದವಿ, ಮಹತ್ವದ ಕಾರ್ಯದಲ್ಲಿ ಪ್ರಗತಿ.

    ಕುಂಭ: ಮಾನಸಿಕ ಅಸ್ಥಿರತೆ, ಆಡುವ ಮಾತಿನಿಂದ ಅನರ್ಥ, ನರಗಳ ದೌರ್ಬಲ್ಯ, ಪುತ್ರರಿಂದ ಸಲಹೆ, ಮಾನಸಿಕ ವ್ಯಥೆ, ಆಹಾರ ಸೇವನೆಯಲ್ಲಿ ವ್ಯತ್ಯಾಸ, ಕಾರ್ಯದಲ್ಲಿ ನಿರ್ವಿಘ್ನ.

    ಮೀನ: ದೇವತಾ ಕಾರ್ಯಗಳಲ್ಲಿ ಒಲವು, ತಂಪು ಪಾನೀಯಗಳಿಂದ ಸಮಸ್ಯೆ, ನಂಬಿಕಸ್ಥರಿಂದ ಮೋಸ ಹೋಗುವಿರಿ, ವಾಹನ ಖರೀದಿ, ನಿಮ್ಮ ಹಣ ಅನ್ಯರ ಪಾಲಾಗುವ ಸಾಧ್ಯತೆ.

  • 15 ವರ್ಷದ ಬಾಲಕಿಯನ್ನು ಅಪಹರಿಸಿ, ಅತ್ಯಾಚಾರವೆಸಗಿ 70,000ಕ್ಕೆ ಮಾರಿಬಿಟ್ರು!

    ನವದೆಹಲಿ: ಛತ್ತೀಸ್‍ಗಢಕ್ಕೆ ಹೋಗಬೇಕಾಗಿದ್ದ 15 ವರ್ಷದ ಬಾಲಕಿ ರೈಲಿನಲ್ಲಿ ದೆಹಲಿಗೆ ಬಂದಿಳಿದಿದ್ದು, ಕಿಡಿಗೇಡಿಗಳು ಆಕೆಯನ್ನು ಅಪಹರಿಸಿ, ಅತ್ಯಾಚಾರವೆಸಗಿ ಬಳಿಕ ಮಾರಾಟ ಮಾಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರನ್ನು ಹುಮಾಯೂನ್ ಸಮಾಧಿ ಬಳಿ ಶುಕ್ರವಾರ ಬಂಧಿಸಿದ್ದಾರೆ.

    ನಡೆದಿದ್ದೇನು?: 15 ವರ್ಷದ ಬಾಲಕಿ ಚತ್ತೀಸ್ ಗಢದಲ್ಲಿರುವ ತಮ್ಮ ಸಂಬಂಧಿಕರ ಮನೆಗೆಂದು ಕಳೆದ ವರ್ಷ ಅಕ್ಟೋಬರ್ ತಿಂಗಳಿನಲ್ಲಿ ಹೊರಟಿದ್ದಳು. ಆದ್ರೆ ಆಕೆ ಆಕಸ್ಮಿಕವಾಗಿ ಬೇರೆ ರೈಲು ಹತ್ತಿದ್ದರಿಂದ ದೆಹಲಿಗೆ ಬಂದಿಳಿದಿದ್ದಾಳೆ. ಈ ವೇಳೆ ಬಾಲಕಿಗೆ ರೈಲ್ವೆ ನಿಲ್ದಾಣದಲ್ಲಿ ನೀರಿನ ಬಾಟಲಿಗಳನ್ನು ಮಾರುತ್ತಿದ್ದ ಅರ್ಮಾನ್ ಎಂಬಾತ ಪರಿಚಯವಾಗುತ್ತಾನೆ. ಬಳಿಕ ಪತ್ನಿ ಹಸೀನಾಳ ನೆರವಿನೊಂದಿಗೆ ಬಾಲಕಿಯನ್ನು ಅಪಹರಿಸಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದನು. ನಂತರ ಪಪ್ಪು ಯಾದವ್ ಎಂಬಾತನಿಗೆ ದಂಪತಿ 70,000 ರೂ.ಗೆ ಬಾಲಕಿಯನ್ನು ಮಾರಾಟ ಮಾಡಿದ್ದರು.

    ಬಾಲಕಿಯನ್ನು ಮದುವೆಯಾಗುವುದಾಗಿ ಹೇಳಿದ್ದ ಪಪ್ಪು ಜೊತೆ ಬಾಲಕಿ 2 ತಿಂಗಳವರೆಗೂ ಫರೀದಾಬಾದ್ ನ ಮನೆಯಲ್ಲಿ ದೈಹಿಕ ಹಾಗೂ ಮಾನಸಿಕ ಹಿಂಸೆಯೊಂದಿಗೆ ನೆಲೆಸಿದ್ದಳು. ಬಳಿಕ ಅಲ್ಲಿಂದ ಹೇಗೋ ತಪ್ಪಿಸಿಕೊಂಡು ಹಜ್ರತ್ ನಿಜಾಮುದ್ದೀನ್ ರೈಲು ನಿಲ್ದಾಣಕ್ಕೆ ಓಡಿ ಬಂದಿದ್ದ ಬಾಲಕಿಗೆ ಮತ್ತೆ ಹಸೀನಾ ಎದುರಾಗಿದ್ದಳು. ಈ ವೇಳೆ ಮತ್ತು ಬರುವ ಪಾನೀಯವನ್ನು ಬಾಲಕಿಗೆ ಕುಡಿಸಿದ ಹಸೀನಾ ಅವಳನ್ನು 22 ವರ್ಷದ ಮೊಹಮ್ಮದ್ ಅಫ್ರೋಜ್ ಎಂಬ ಯುವಕನಿಗೆ ಮಾರಾಟ ಮಾಡಿದ್ದಾಳೆ.

    ರೈಲ್ವೆ ನಿಲ್ದಾಣದಲ್ಲೇ ಅಫ್ರೋಜ್ ಬಾಲಕಿ ಮೇಲೆ ಅತ್ಯಾಚಾರವೆಸಗಿ ಹಸೀನಾಗೆ ಒಂದಷ್ಟು ಹಣವನ್ನು ನೀಡಿದ್ದನು. ಹೇಗೋ ಕಾಮುಕನ ಕೈಯಿಂದ ತಪ್ಪಿಸಿಕೊಂಡ ಬಾಲಕಿ ಪ್ರಯಾಣಿಕರ ನೆರವಿನಿಂದ ಬಾಲಕಿ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ.

    ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳಾದ ಪಪ್ಪು ಯಾದವ್ ಹಾಗೂ ಅಫ್ರೋಜ್ ನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಹಾಗೂ ತಲೆಮರೆಸಿಕೊಂಡಿರೋ ಪ್ರಮುಖ ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ. ಸದ್ಯ ಬಾಲಕಿಗೆ ಏಮ್ಸ್ ಆಸ್ಪತ್ರೆಯಲ್ಲಿ ಕೌನ್ಸಿಲಿಂಗ್ ನಡೆಯುತ್ತಿದೆ.

  • ಬೆಂಗ್ಳೂರಿಗೆ ಮಂಗ್ಳೂರು ಸಮುದ್ರದ ನೀರು- ಸರ್ಕಾರದಿಂದ ಸಿಹಿನೀರಿನ ಪ್ಲಾನ್

    ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿಗೆ ಈಗಾಗಲೇ ಕುಡಿಯುವ ನೀರಿಗೆ ಬರ ಬಂದಿದೆ. ಬೆಂಗಳೂರಿಗರ ನೀರಿನ ಸಮಸ್ಯೆ ನೀಗಿಸಲು ಸರ್ಕಾರ ನಾನಾ ಕಸರತ್ತು ನಡೆಸುತ್ತಿದೆ. ಈ ನಡುವೆ ಕರಾವಳಿಯ ಸಮುದ್ರದ ನೀರನ್ನೇ ಬೆಂಗಳೂರಿಗರಿಗೆ ಕುಡಿಯಲು ಸರಬರಾಜು ಮಾಡುವ ಪ್ಲಾನ್ ಫಿಕ್ಸ್ ಆಗಿದೆ. ಇದಕ್ಕಾಗಿ ಈಗಾಗಲೇ ಬಂದರು ನಗರಿ ಮಂಗಳೂರಿನಲ್ಲಿ ಪ್ಲಾನ್ ರೆಡಿಯಾಗ್ತಿದೆ.

    ಎತ್ತಿನಹೊಳೆ ಯೋಜನೆಗೆ ಕೈ ಹಾಕಿದಾಗಿನಿಂದಲೂ ಒಂದಲ್ಲ ಒಂದು ವಿವಾದಗಳು ಸರ್ಕಾರದ ಸುತ್ತಾ ಗಿರಕಿ ಹೊಡೆಯುತ್ತಿವೆ. ಕರಾವಳಿಯವರು ಕೊಡಲ್ಲ, ಕೋಲಾರ ಭಾಗದವರು ಬಿಡಲ್ಲ. ಇಂತಹ ಸಂದಿಗ್ಧ ಪರಿಸ್ಥಿತಿ ಇರುವಾಗ ಸರ್ಕಾರ ಹೊಸ ಪ್ಲಾನ್ ರೂಪಿಸಿದೆ. ಅದೇ ಸಮುದ್ರದ ನೀರನ್ನ ಸಿಹಿ ಮಾಡಿ ಹರಿಸುವ ಯೋಜನೆ.

    ಹೌದು. ಸೌದಿ ಅರೇಬಿಯಾ, ಕುವೈತ್ ಸೇರಿದಂತೆ ಪೆಟ್ರೋಲ್ ಉತ್ಪಾದಿಸುವ ಬಹುತೇಕ ರಾಷ್ಟ್ರಗಳು ಸಮುದ್ರದ ಉಪ್ಪು ನೀರನ್ನ ಸಿಹಿ ನೀರಾಗಿಸಿ ಬಳಕೆ ಮಾಡುತ್ತಿವೆ. ಮುಂಬೈ, ವಿಶಾಖಪಟ್ಟಣದಲ್ಲಿ ಯೋಜನೆ ರೆಡಿಯಾಗಿದೆ. ಚೆನ್ನೈನಲ್ಲಿ ಈಗಾಗಲೇ ಪ್ಲಾಂಟ್ ಶುರುವಾಗಿದೆ. ಇದೇ ಮಾದರಿಯಲ್ಲಿ ಮಂಗಳೂರಿನ ತಣ್ಣೀರುಬಾವಿ ಭಾಗದಲ್ಲಿ ಪ್ಲಾಂಟ್ ನಿರ್ಮಿಸಿ ಬೆಂಗಳೂರು, ಕೋಲಾರ ಭಾಗಕ್ಕೆ ನೀರು ಹರಿಸಲು ಸರ್ಕಾರ ಚಿಂತನೆ ನಡೆದಿದೆ. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಹೈದ್ರಾಬಾದ್‍ನ ಅಧಿಕಾರಿಗಳ ತಂಡವೂ ಭೇಟಿ ಕೊಟ್ಟು ಅಧ್ಯಯನ ನಡೆಸಿದೆ.

    ಈ ಅಧ್ಯಯನ ತಂಡದ ತಜ್ಞರ ಪ್ರಕಾರ, ಈ ಯೋಜನೆಯಡಿ 100 ಎಂಎಲ್‍ಡಿ ನೀರು ಉತ್ಪಾದಿಸಲು 600 ಕೋಟಿ ರೂ. ಖರ್ಚಾಗುತ್ತೆ. 18 ರಿಂದ 20 ಎಕರೆ ಭೂಮಿ ಬೇಕಾಗುತ್ತೆ. ಖುಷಿ ವಿಷಯ ಅಂದ್ರೆ ಮಂಗಳೂರಿನ ಎಂಆರ್‍ಪಿಎಲ್ ಮತ್ತು ಎಂಸಿಎಫ್ ಕೈಗಾರಿಕೆಗಳು ಈ ಯೋಜನೆಗೆ ಕೈ ಜೋಡಿಸಲಿವೆ.

  • ಜಯನಗರ ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿಯಿಂದಲೇ ಮಗು ಕಳ್ಳತನ..!

    ಬೆಂಗಳೂರು: ನಗರದಲ್ಲಿರೋ ವಾಣಿವಿಲಾಸ ಆಸ್ಪತ್ರೆಯಲ್ಲಿ ನವಜಾತ ಶಿಶುವನ್ನು ಅಪಹರಿಸಿರುವ ಘಟನೆಗಳು ನಡೆಯುತ್ತಿರೋ ಬೆನ್ನಲ್ಲೇ ಇದೀಗ ನಗರದಲ್ಲಿ ಮತ್ತೊಂದು ಸರ್ಕಾರಿ ಆಸ್ಪತ್ರೆಯಲ್ಲಿ ನವಜಾತ ಶಿಶುವನ್ನು ಅಪಹರಿಸಿದ ಪ್ರಕರಣ ಬೆಳಕಿಗೆ ಬಂದಿದೆ.

    ಹೌದು. ಹಾಸನ ಮೂಲದ ತ್ಯಾಗರಾಜ್ ಪತ್ನಿ ಸಹನಾ ಜನವರಿ 28 ರಂದು ಹೆರಿಗೆಗೆ ಜಯನಗರದ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸಹನಾ ಅವರು ಜನವರಿ 29 ರಂದು ಗಂಡು ಮತ್ತು ಹೆಣ್ಣು ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಹೆಣ್ಣು ಮಗುವಿಗೆ ಜಾಂಡಿಸ್ ಇದ್ದ ಕಾರಣ ಐಸಿಯುವಿನಲ್ಲಿ ಇಟ್ಟು ಪ್ರತಿ 2 ಘಂಟೆಗೆ ಒಮ್ಮೆ ಮಗುವಿಗೆ ತಾಯಿ ಹಾಲು ಕುಡಿಸಲು ಮಗುವನ್ನ ತಾಯಿಗೆ ನೀಡುತ್ತಿದ್ರು. ಶುಕ್ರವಾರ ಮಧ್ಯಾಹ್ನ 12 ಗಂಟೆಗೆ ಆ ಮುದ್ದು ಕಂದಮ್ಮನಿಗೆ ತಾಯಿಯಿಂದ ಹಾಲು ಕುಡಿಸಿ ಐಸಿಯುಗೆ ಕರೆದುಕೊಂಡು ಹೋಗುವ ಸಮಯದಲ್ಲಿ ಅಪಹರಣ ಮಾಡಿದ್ದಾರೆ.

    ಈ ಬಗ್ಗೆ ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವ ತಿಲಕ ನಗರ ಪೊಲೀಸರು ಆಸ್ಪತ್ರೆಯ ಸಿಸಿಟಿವಿ ದೃಶ್ಯಾವಳಿಗಳನ್ನ ಪರಿಶೀಲನೆ ನಡೆಸಿದ್ದಾರೆ. ಮೂವರು ದಾದಿಯರು ಮಗುವನ್ನ ಬೇರೆ ಯಾರಿಗೋ ಹಸ್ತಂತರಿಸುತ್ತಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅಲ್ಲದೇ ಆಸ್ಪತ್ರೆಯ ಮೂವರು ನರ್ಸ್‍ಗಳಾದ ತಿಪ್ಪಮ್ಮ, ರಾಧ, ನಳಿನಾಕ್ಷಿ ಎನ್ನುವವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

    ಇವರು ಕಳೆದ ಒಂದು ವರ್ಷದಿಂದ ಗುತ್ತಿಗೆ ಆಧಾರದಲ್ಲಿ ನರ್ಸ್‍ಗಳಾಗಿ ಕೆಲಸ ಮಾಡುತ್ತಿದ್ದು, ಹಣದ ಆಸೆಗೆ ನವಜಾತ ಶಿಶುವನ್ನ ಅಪಹರಿಸಿ ಬೇರೆಯವರಿಗೆ ಕೊಟ್ಟಿದ್ದಾರೆ ಎಂಬ ಅನುಮಾನವೂ ಹೆಚ್ಚಗಿದೆ. ಬೇಲಿನೇ ಎದ್ದು ಹೊಲ ಮೇಯ್ದಂತೆ ಜಯನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಅಲ್ಲಿನ ಸಿಬ್ಬಂದಿಯಿಂದಲೇ ನವಜಾತ ಶಿಶುವಿನ ಅಪಹರಣ ನಡೆದಿದೆ.

  • ಗದಗ: ಎರಡೂ ಕೈ ಕಳ್ಕೊಂಡ್ರೂ ಟ್ರ್ಯಾಕ್ಟರ್ ಓಡಿಸೋ ಗುರುಪಾದಪ್ಪ!

    ಗದಗ: ಎರಡೂ ಕೈ ಕಳ್ಕೊಂಡ್ರೂ ಟ್ರ್ಯಾಕ್ಟರ್ ಓಡಿಸೋ ಗುರುಪಾದಪ್ಪ!

    ಗದಗ: ಮನಸ್ಸಿದ್ದರೆ ಮಾರ್ಗ ಅನ್ನೋ ಮಾತನ್ನ ಹಲವರು ತೋರಿಸಿದ್ದಾರೆ. ಅವರ ಸಾಲಿಗೆ ಗದಗದ ಸೊರಟೂರ ಗ್ರಾಮದ ವ್ಯಕ್ತಿ ಕೂಡ ಸೇರ್ಪಡೆಯಾಗಿದ್ದಾರೆ. ಎರಡೂ ಕೈಗಳು ವಿದ್ಯುತ್ ಅವಘಡದಲ್ಲಿ ಸುಟ್ಟುಹೋಗಿದ್ದರೂ ಕೈ ಇದ್ದವರನ್ನೂ ಮೀರಿಸುವಂತೆ ಬದುಕು ಸಾಗಿಸುತ್ತಿದ್ದಾರೆ.

    ಗದಗ ತಾಲೂಕಿನ ಸೊರಟೂರ ಗ್ರಾಮದ ಗುರುಪಾದಪ್ಪ ದೊಡ್ಡಣ್ಣನವರ್‍ಗೆ 2011ರಲ್ಲಿ ಜಮೀನಲ್ಲಿ ಬೋರ್‍ವೆಲ್ ಸ್ಟಾರ್ಟ್ ಮಾಡುವಾಗ ವಿದ್ಯುತ್ ಅವಘಡವಾಗಿತ್ತು. ಇದರಿಂದ ಎರಡೂ ಕೈಗಳನ್ನು ಕತ್ತರಿಸಿ ಜೀವ ಉಳಿಸಬೇಕಾದ ಅನಿವಾರ್ಯತೆ ವೈದ್ಯರಿಗೆ ಎದುರಾಗಿತ್ತು. ವಿಧಿ ಇಲ್ಲದೇ ಬಲಗೈಯ್ಯನ್ನು ಮೊಣಕೈವರೆಗೂ ಎಡಗೈಯ್ಯನ್ನು ಭುಜದವರೆಗೂ ಕತ್ತರಿಸಲಾಗಿದೆ. ಆದ್ರೂ ದೊಡ್ಡಣ್ಣನವರ್ ಕೈ ಇಲ್ಲ ಅಂತಾ ಸುಮ್ಮನೆ ಕೂತಿಲ್ಲ. ಬದಲಾಗಿ ಟ್ರಾಕ್ಟರ್ ಓಡಿಸೋದನ್ನ ಕಲಿತು ಬಳಿಕ ಸಾಲ ಮಾಡಿ ಟ್ರ್ಯಾಕ್ಟರ್ ಖರೀದಿಸಿದ್ದಾರೆ. ಇದೇ ಟ್ರಾಕ್ಟರ್‍ನಿಂದ ಇಂದು ದುಡಿದು ಹೆಂಡತಿ ಹಾಗೂ ಮೂವರು ಮಕ್ಕಳನ್ನು ಸಾಕುತ್ತಿದ್ದಾರೆ.

    ಮೊಬೈಲ್ ಒಂದನ್ನು ಆಪ್‍ರೇಟ್ ಮಾಡೋದು ಬಿಟ್ರೆ ಇವರಿಗೆ ಉಳಿದ ಕೆಲಸ ಕಷ್ಟ. ಹೀಗಾಗಿ ಹೆಂಡತಿಯೇ ಇವರಿಗೆ ಆಧಾರವಾಗಿದ್ದಾರೆ. ಕೈ ಇಲ್ಲದಿದ್ದರೂ ಛಲದಂಕ ಮಲ್ಲನಂತೆ ಬಾಳುವ ಗುರುಪಾದಪ್ಪ ನಿಜಕ್ಕೂ ಇತರರಿಗೆ ಸ್ಫೂರ್ತಿ.

    https://www.youtube.com/watch?v=6JODXBHre74

  • ದಿನಭವಿಷ್ಯ: 04-02-2017

    ಪಂಚಾಂಗ: ಶ್ರೀ ದುರ್ಮುಖಿನಾಮ ಸಂವತ್ಸರ,
    ಉತ್ತರಾಯಣ ಪುಣ್ಯಕಾಲ,
    ಶಿಶಿರ ಋತು, ಮಾಘ ಮಾಸ,
    ಶುಕ್ಲ ಪಕ್ಷ, ಅಷ್ಠಮಿ ತಿಥಿ,
    ಶನಿವಾರ, ಭರಣಿ ನಕ್ಷತ್ರ ನಕ್ಷತ್ರ.

    ಶುಭ ಘಳಿಗೆ: ಮಧ್ಯಾಹ್ನ 12:41 ರಿಂದ 2:00
    ಅಶುಭ ಘಳಿಗೆ: ಬೆಳಗ್ಗೆ 9:54 ರಿಂದ 11:17

    ರಾಹುಕಾಲ: ಬೆಳಗ್ಗೆ 9:43 ರಿಂದ 11:10
    ಗುಳಿಕಕಾಲ: ಬೆಳಗ್ಗೆ 6:48 ರಿಂದ 8:16
    ಯಮಗಂಡಕಾಲ: ಮಧ್ಯಾಹ್ನ 2:04 ರಿಂದ 3:31

    ಮೇಷ: ಶುಭ ಕಾರ್ಯಕ್ಕೆ ಸುಸಮಯ, ಆರ್ಥಿಕ ಸಮಸ್ಯೆ ನಿವಾರಣೆ, ಸಂಗಾತಿಯೊಂದಿಗೆ ಪ್ರೀತಿ ವಿಶ್ವಾಸ.

    ವೃಷಭ; ಸ್ಥಿರಾಸ್ತಿ-ವಾಹನದಿಂದ ಲಾಭ, ಮೋಜು-ಮಸ್ತಿಗಾಗಿ ಹಣವ್ಯಯ, ಶೀತ ಸಂಬಂಧಿತ ಸಮಸ್ಯೆ, ಗುಪ್ತ ರೋಗಬಾಧೆ.

    ಮಿಥುನ: ಸ್ನೇಹಿತರೊಂದಿಗೆ ಪ್ರಯಾಣ ಬಯಸುವಿರಿ, ವಿದ್ಯಾಭ್ಯಾಸದಲ್ಲಿ ಪ್ರಗತಿ, ಓದಿನಲ್ಲಿ ಹೆಚ್ಚಿನ ಆಸಕ್ತಿ, ಮನಸ್ಸಿನಲ್ಲಿ ಆಸೆಗಳು ಹೆಚ್ಚಾಗುವುದು.

    ಕಟಕ: ಸ್ಥಿರಾಸ್ತಿಯಿಂದ ನಷ್ಟ, ವಾಹನಗಳಿಂದ ಅಧಿಕ ಖರ್ಚು, ಆರೋಗ್ಯದಲ್ಲಿ ಏರುಪೇರು, ಸಾಲ ಬಾಧೆಯಿಂದ ನಿದ್ರಾಭಂಗ.

    ಸಿಂಹ: ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಆಸಕ್ತಿ, ಜ್ಞಾಪಕ ಶಕ್ತಿ ವೃದ್ಧಿ, ಆಕಸ್ಮಿಕ ಸ್ನೇಹಿತರ ಭೇಟಿ, ಉದ್ಯೋಗದಲ್ಲಿ ಪ್ರಗತಿ, ಉತ್ತಮ ಸ್ಥಾನಮಾನ ಪ್ರಾಪ್ತಿ.

    ಕನ್ಯಾ: ಸಂಗಾತಿಯಿಂದ ಅನುಕೂಲ, ಸ್ಥಿರಾಸ್ತಿ-ವಾಹನ ಯೋಗ, ಪಾಲುದಾರಿಕೆ ವ್ಯವಹಾರಲ್ಲಿ ಲಾಭ, ವಿದೇಶದಲ್ಲಿ ಉದ್ಯೋಗಾವಕಾಶ, ಅಕ್ರಮ ಸಂಪಾದನೆಗೆ ಮನಸ್ಸು, ಮನಸ್ಸಿನಲ್ಲಿ ಕೆಟ್ಟಾಲೋಚನೆ.

    ತುಲಾ: ಸ್ವಂತ ಉದ್ಯಮದಲ್ಲಿ ಲಾಭ, ವ್ಯಾಪಾರ-ವ್ಯವಹಾರದಲ್ಲಿ ಅನುಕೂಲ, ಅದೃಷ್ಟದ ಶುಭ ದಿನ, ಆಕಸ್ಮಿಕ ಬೆಳವಣಿಗೆ.

    ವೃಶ್ಚಿಕ: ಸಂತಾನ ಯೋಗ ಸಾಧ್ಯತೆ, ವಿದ್ಯಾಭ್ಯಾಸಕ್ಕಾಗಿ ಮಕ್ಕಳು ದೂರವಾಗುವರು, ಆರ್ಥಿಕ ಸಮಸ್ಯೆ ನಿವಾರಣೆ, ಅಧಿಕ ಧನಾಗಮನ.

    ಧನಸ್ಸು: ಶುಭ ಕಾರ್ಯಗಳಿಗೆ ಅವಕಾಶ, ಸ್ಥಿರಾಸ್ತಿ-ವಾಹನ ಯೋಗ, ಸಾಲ ದೊರಕುವುದು, ಸ್ನೇಹ ಸಂಬಂಧ ವೃದ್ಧಿ.

    ಮಕರ: ಪ್ರೇಮ ವಿಚಾರದಲ್ಲಿ ಕಲಹ, ಮಕ್ಕಳಿಂದ ಸಮಸ್ಯೆ, ಶತ್ರುತ್ವ ಹೆಚ್ಚಾಗುವುದು, ಉದ್ಯೋಗದಲ್ಲಿ ಕಿರಿಕಿರಿ, ಉದ್ಯೋಗ ಬದಲಾವಣೆಗೆ ಚಿಂತನೆ.

    ಕುಂಭ: ಸ್ನೇಹಿತರಿಂದ ಅನುಕೂಲ, ಸಹೋದರನಿಂದ ಅದೃಷ್ಟ, ಪ್ರೇಮ ವಿಚಾರದಲ್ಲಿ ಯಶಸ್ಸು, ಮಕ್ಕಳಿಂದ ಅಧಿಕ ಸಹಾಯ.

    ಮೀನ: ಉದ್ಯೋಗ ಪ್ರಾಪ್ತಿ, ಮಾನಸಿಕ ನೆಮ್ಮದಿ, ಸ್ವಂತ ಉದ್ಯಮ-ವ್ಯಾಪಾರದಲ್ಲಿ ಲಾಭ, ಶಕ್ತಿ ದೇವತೆಗಳ ದರ್ಶನಕ್ಕೆ ಮನಸ್ಸು, ಬುದ್ಧಿವಂತಿಕೆಯಿಂದ ಸಮಸ್ಯೆ ನಿವಾರಣೆ.

  • ತಾಯಿಯ ಶವವನ್ನು ಹೊತ್ತು ಹಿಮದ ಮೇಲೆಯೇ 30 ಕಿ.ಮೀ ನಡೆದ ಭಾರತೀಯ ಯೋಧ!

    ನವದೆಹಲಿ: ಭಾರತೀಯ ಸೇನಾ ಯೋಧರೊಬ್ಬರು ದಟ್ಟವಾದ ಹಿಮದ ರಾಶಿಯನ್ನು ಲೆಕ್ಕಿಸದೆ 10 ಗಂಟೆಯಲ್ಲಿ ಸುಮಾರು 30 ಕಿ. ಮೀವರೆಗೂ ತಾಯಿಯ ಮೃತದೇಹವನ್ನು ಹೆಗಲ ಮೇಲೆ ಹೊತ್ತು ಸ್ವಗ್ರಾಮಕ್ಕೆ ತಂದಂತಹ ಮನಕಲಕುವ ಘಟನೆ ನಡೆದಿದೆ.

    ಏನಿದು ಘಟನೆ?: ಜಮ್ಮು ಕಾಶ್ಮೀರದ ಕುಪ್ವಾರಾ ಜಿಲ್ಲೆಯ ಕರ್ನಾ ತಹಸಿಲ್ ಪ್ರಾಂತ್ಯದ ಮೊಹಮದ್ ಅಬ್ಬಾಸ್ ಎಂಬ ಯೋಧ ಪಂಜಾಬಿನ ಪಠಣ್‍ಕೋಟ್‍ನಲ್ಲಿ ಸೇವಾ ನಿರತರಾಗಿದ್ದರು. ಜಮ್ಮು ಕಾಶ್ಮೀರದಲ್ಲಿ ಚಳಿ ಹೆಚ್ಚಿರುವ ಕಾರಣ ಕೆಲ ದಿನಗಳ ಹಿಂದೆಯಷ್ಟೇ ಅವರ ತಾಯಿಯನ್ನು ಪಠಾಣಕೋಟ್‍ಗೆ ಕರೆಸಿದ್ದರು. ಆದ್ರೆ ವಾರದ ಹಿಂದೆ ಅಬ್ಬಾಸ್ ಅವರ ತಾಯಿ ಹೃದಯಾಘಾತದಿಂದ ಮೃತಪಟ್ಟಿದ್ದರು. ಮರುದಿನ ಸೇನೆಯು ತಾಯಿಯ ಮೃತದೇಹವನ್ನು ಶ್ರೀನಗರಕ್ಕೆ ರವಾನಿಸಿದೆ. ಬಳಿಕ ಅಲ್ಲಿಂದ ಗಡಿಯಲ್ಲಿರುವ ಯೋಧನ ಸ್ವಗ್ರಾಮ ಕರ್ನಾ ತಲುಪಲು ದಟ್ಟವಾದ ಹಿಮದಿಂದಾಗಿ ಸಂಚಾರಕ್ಕೆ ಅಡಚಣೆಯಾಗಿದೆ. ಹೀಗಾಗಿ ಯೋಧ ಮತ್ತೆ ಸ್ಥಳೀಯ ಆಡಳಿತದ ಸಹಾಯವನ್ನು ಬಯಸಿದ್ದರು. ಆದ್ರೆ ಪರಿಸ್ಥಿತಿ ಕ್ಲಿಷ್ಟವಾಗಿದ್ದರಿಂದ ಸೇನೆಗೆ ಸಹಾಯ ಮಾಡಲು ಸಾಧ್ಯವಾಗಿಲ್ಲ. ಕುಪ್ವಾರಾದವರೆಗೆ ಹೇಗಾದ್ರೂ ಮಾಡಿ ಅಬ್ಬಾಸ್ ತಾಯಿಯ ದೇಹವನ್ನು ತಂದಿದ್ದರು. ಆದ್ರೆ ಅಲ್ಲಿಂದ ಅವರ ಸ್ವಗ್ರಾಮಕ್ಕೆ 30 ಕಿ.ಮಿ. ದೂರವಿದೆ. ಈ ಗ್ರಾಮವು ಎತ್ತರದಲ್ಲಿರುವುದರಿಂದ ಅಲ್ಲಿಗೆ ವಾಹನ ಸಂಚರಿಸುತ್ತಿಲ್ಲ. ಹೀಗಾಗಿ ಈ ಕೆಟ್ಟ ಪರಿಸ್ಥಿಯಲ್ಲೂ ತನ್ನ ಹಠ ಬಿಡೆದೆ ಕೊರೆಯುವ ಚಳಿಯಲ್ಲಿಯೂ ತಾಯಿ ದೇಹವನ್ನು ಹೆಗಲ ಮೇಲೆ ಹೊತ್ತು 10 ಗಂಟೆಯಲ್ಲಿ ಸುಮಾರು 30 ಕಿ.ಮಿ. ದೂರ ಸಾಗಿದ್ದಾರೆ.

    ಈ ಸಂದರ್ಭದಲ್ಲಿ ಕೆಲ ಸಂಬಂಧಿಕರು ಹಾಗೂ ಸ್ಥಳೀಯರು ಅಬ್ಬಾಸ್ ಸಹಾಯಕ್ಕೆ ಧಾವಿಸಿದ್ದಾರೆ. `ಸೇನೆಯವರು ಹೆಲಿಕಾಪ್ಟರ್ ಮೂಲಕ ಮೃತದೇಹವನ್ನು ತಲುಪಿಸಬಹುದಿತ್ತು. ಸೇನಾಧಿಕಾರಿಗಳು ಮಾನವೀಯತೆ ಮರೆತಿದ್ದಾರೆ’ ಅಂತಾ ಅಬ್ಬಾಸ್ ಸಂಬಂಧಿಯೊಬ್ಬರು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದ್ರೆ ಇವರ ಈ ಆರೋಪವನ್ನು ಸೇನೆ ತಳ್ಳಿಹಾಕಿದೆ.

    ಒಟ್ಟಿನಲ್ಲಿ ಕಠಿಣ ಪರಿಸ್ಥಿತಿಯಲ್ಲಿಯೂ ತನ್ನ ತಾಯಿಯ ಅಂತ್ಯಸಂಸ್ಕಾರ ವನ್ನು ಗುರುವಾರ ಸಂಜೆ ಸ್ವಗ್ರಾಮದಲ್ಲೇ ಅಬ್ಬಾಸ್ ನೆರವೇರಿಸಿದ್ದಾರೆ.

  • ಎಲ್ಲೇ ಶವ ಸಿಕ್ಕರೂ ತುಮಕೂರು ಜನ ಇವರಿಗೇ ಫೋನ್ ಮಾಡ್ತಾರೆ!

    ತುಮಕೂರು: ಎಲ್ಲಾದರೂ ಅನಾಥ ಶವ ಕಂಡುಬಂದರೆ, ಸಾರ್ವಜನಿಕರು ನೇರವಾಗಿ ಪೊಲೀಸರಿಗೆ ಫೋನ್ ಮಾಡ್ತಾರೆ. ಆದರೆ ತುಮಕೂರು ನಗರದಲ್ಲಿ ಇಂತಹ ವಿಷಯ ತಿಳಿದ ಕೂಡಲೇ ಪೊಲೀಸರು ಫೋನ್ ಮಾಡೋದು ಸುಹೇಲ್ ಪಾಷಾ ಅನ್ನೋ ವ್ಯಕ್ತಿಗೆ. ಯಾಕಂದ್ರೆ ಸುಹೇಲ್ ಸಹಾಯದಿಂದ ಅನಾಥ ಶವಗಳ ಸಂಸ್ಕಾರ ನಡೆಯುತ್ತದೆ.

    ಬರೀ ಶವ ಅಂದ್ರೆ ಸಾಕು ನಾವು ಹತ್ತಿರಕ್ಕೂ ಸುಳಿಯಲ್ಲ. ಆದರೆ ಕೊಳೆತು ನಾರುವ, ಕಣ್ಣಿಂದ ನೋಡಲೂ ಆಗದ ಶವಗಳ ಹತ್ತಿರಕ್ಕೆ ಹೋಗ್ತಾರೆ ನಮ್ಮ ಪಬ್ಲಿಕ್ ಹೀರೋ ಸುಹೇಲ್ ಪಾಷಾ. ಆತ್ಮಹತ್ಯೆ ಮಾಡಿಕೊಂಡ, ಬೆಂಕಿ ಹಚ್ಚಿಕೊಂಡ, ವಿಷ ಕುಡಿದ, ಕೊಲೆಯಾದ ಹೀಗೆ ಯಾವುದೇ ಶವಗಳಿದ್ದರೂ ಅವುಗಳನ್ನು ತಮ್ಮ ಆಂಬುಲೆನ್ಸ್‍ನಲ್ಲಿ ಜಿಲ್ಲಾಸ್ಪತ್ರೆಗೆ ತಂದು ಪೋಸ್ಟ್ ಮಾರ್ಟಮ್ ಮಾಡಲು ವೈದ್ಯರಿಗೆ ನೆರವಾಗುತ್ತಾರೆ. ಹಾಗಾಗಿ ಎಲ್ಲೇ ಅನಾಥ ಶವ ಸಿಕ್ಕರೂ ತುಮಕೂರಿನ ಜನ ಫೋನ್ ಮಾಡೋದು ಈ ಸುಹೇಲ್ ಪಾಷಾಗೆ. ಸದ್ಯ ತುಮಕೂರು ಜಿಲ್ಲೆಯ ಪೊಲೀಸರ ಪಾಲಿಗೆ ಸುಹೇಲ್ ಸ್ನೇಹಜೀವಿಯಾಗಿದ್ದಾರೆ.

    ಸುಹೇಲ್ ಪಾಷಾ ಈ ಕೆಲಸ ಮಾಡಲೂ ಒಂದು ಕಾರಣವಿದೆ. ತುಮಕೂರು ಜಿಲ್ಲಾಸ್ಪತ್ರೆಯಲ್ಲಿಯೇ ಸುಹೇಲ್ ತಂದೆ ಆಂಬುಲೆನ್ಸ್ ಚಾಲಕರಾಗಿದ್ದರು. ಆಗ ಶವಗಳ ಸಾಗಾಣೆಗೆ ಖಾಸಗಿ ಆಂಬುಲೆನ್ಸ್‍ಗಳ ಚಾಲಕರು ಮನಬಂದಂತೆ ಹಣ ಕೇಳುತ್ತಿದ್ದರಂತೆ. ಇದನ್ನು ನೋಡಿದ್ದ ಸುಹೇಲ್ ತಂದೆ, ಸಾಧ್ಯವಾದರೆ ನೀನೊಂದು ಆಂಬುಲೆನ್ಸ್ ಖರೀದಿಸಿ ಮೃತದೇಹಗಳ ಸಾಗಾಣಿಗೆ ಸಹಾಯ ಮಾಡು ಅಂತಾ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಸುಹೇಲ್ ಅನಾಥ ಶವಗಳಿಗೆ ಮುಕ್ತಿ ತೋರಿಸುತ್ತಿದ್ದಾರೆ.

    ಎಲ್ಲಾ ಪೊಲಿಸ್ ಠಾಣೆಗಳಲ್ಲಿ ಸುಹೇಲ್ ಪಾಷಾ ಅನ್ನೋರಾ ಸೇವೆ ಮತ್ತು ವಾಹನವನ್ನು ಅನೇಕ ಬಾರಿ ಉಪಯೋಗಿಸಿಕೊಂಡಿದ್ದೀವಿ. ನಿಜವಾಗಿಯೂ ಇದೊಂದು ಮಾದರಿ ಸೇವೆ ಅಂತಾ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ಮಂಜುನಾಥ್ ಹೇಳುತ್ತಾರೆ.

    ಸುಹೇಲ್ ಕಳೆದ 19 ವರ್ಷಗಳಿಂದ ಇದೇ ಕೆಲಸ ಮಾಡ್ತಿದ್ದಾರೆ. ಪೊಲೀಸ್ ಇಲಾಖೆಗೆ ಆಪತ್ಬಾಂಧವನಾಗಿ ದಿನದ 24 ಗಂಟೆಯೂ ಕೆಲಸ ಮಾಡೋ ಸುಹೇಲ್‍ಗೆ ನಮ್ಮದೊಂದು ಸಲಾಂ.

    https://www.youtube.com/watch?v=qYZ-nDK-OLY

  • ವಿಶ್ವನಾಥ್‍ಗೆ ಇರೋ ಮಾನ, ಮರ್ಯಾದೆಯನ್ನೆ ಹಂಚಿಕೊಳ್ಳೋಣ: ಪರಮೇಶ್ವರ್

    ಚಿಕ್ಕಮಗಳೂರು: ಜೆಡಿಎಸ್ ಮುಖಂಡ ಕಳಲೆ ಕೇಶವಮೂರ್ತಿ ಕಾಂಗ್ರೆಸ್ ಸೇರುವ ವಿಚಾರ ಹಾಗೂ ನಂಜನಗೂಡು ಟಿಕೆಟ್‍ಗೆ ಸಂಬಂಧಿಸಿದಂತೆ ಮಾಜಿ ಸಂಸದ ವಿಶ್ವನಾಥ್ ಹೇಳಿಕೆಗೆ ತೀಕ್ಷ್ಮವಾಗಿ ಪ್ರತಿಕ್ರಿಯಿಸಿದ ಪರಮೇಶ್ವರ್, ವಿಶ್ವನಾಥ್‍ಗೆ ಇರುವ ಮಾನ-ಮರ್ಯಾದೆ ಹಂಚಿಕೊಳ್ಳೋಣ ಅಂತಾ ಹೇಳಿದ್ದಾರೆ.

    ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು, ನಾನು ಸಿಎಂ ಆಗಬೇಕೆಂಬ ಆಪೇಕ್ಷೆ ಜನಾರ್ದನ ಪೂಜಾರಿಯವರದ್ದೇ ವಿನಾಃ ನನ್ನದಲ್ಲ. ಮಾಜಿ ಸಿಎಂ ಎಸ್.ಎಂ.ಕೃಷ್ಣ ರಾಜೀನಾಮೆ ಹಿಂಪಡೆಯುವಂತೆ ನಾನು ಮತ್ತು ಇಂಧನ ಸಚಿವ ಡಿಕೆ ಶಿವಕುಮಾರ್ ಮನವೊಲಿಸುವ ಪ್ರಯತ್ನ ನಡೆಸುತ್ತಿದ್ದು, ರಾಷ್ಟ್ರೀಯ ನಾಯಕರು ಕೂಡ ಮಾತುಕತೆ ನಡೆಸುತ್ತಿದ್ದಾರೆ ಎಂದರು.

    ಉಗಾಂಡ ಯುವತಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದ್ದು ಈಗಾಗಲೇ ಓರ್ವ ಆರೋಪಿಯನ್ನು ಬಂಧಿಸಲಾಗಿದೆ. ಆರೋಪ ಸಾಬೀತಾದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

    ಇದನ್ನೂ ಓದಿ: ಪರಮೇಶ್ವರ್‍ಗೆ ಮಾನ ಮರ್ಯಾದೆ ಇಲ್ವಾ: ವಿಶ್ವನಾಥ್ ಪ್ರಶ್ನೆ